Aranyaka Parva: Chapter 277

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೭೭

ಪತಿವ್ರತಾ ಮಹಾತ್ಮ್ಯ

ರಾಜಾ ಅಶ್ವಪತಿಯು ಸಾವಿತ್ರಿಯ ವರದಿಂದ ಸಾವಿತ್ರಿಯನ್ನು ಮಗಳಾಗಿ ಪಡೆದುದು; ಸಾವಿತ್ರಿಯು ವರಾನ್ವೇಷಣೆಗೆ ಹೋದುದು

 “ಮಹಾಭಾಗೆ ಪತಿವ್ರತೆ ದ್ರೌಪದಿಯ ಹಾಗಿರುವ, ಇದಕ್ಕೂ ಮೊದಲು ನೀನು ನೋಡಿದ ಅಥವಾ ಕೇಳಿದ, ಸೀಮಂತಿನಿ ಯಾರಾದರೂ ಇದ್ದಾರೆಯೇ?” ಎಂದು ಯುಧಿಷ್ಠಿರನು ಕೇಳಲು ಮಾರ್ಕಂಡೇಯನು ಕುಲಸ್ತ್ರೀಯರ ಮಹಾಭಾಗ್ಯವೆಲ್ಲವನ್ನೂ ಹೊಂದಿದ್ದ ರಾಜಕನ್ಯೆ ಸಾವಿತ್ರಿಯ ಉಪಾಖ್ಯಾನವನ್ನು ಪ್ರಾರಂಭಿಸಿದ್ದುದು (೧-೪). ಮದ್ರದೇಶದ ರಾಜ ಅಶ್ವಪತಿಯು ಸಂತಾನಕ್ಕೆ ಸಾವಿತ್ರಿಯನ್ನು ಆರಾಧಿಸಿ ಪುತ್ರಿಯನ್ನು ಪಡೆದುದು; ಸಾವಿತ್ರಿಯೆಂದು ಕರೆದುದು (೫-೨೪). ತೇಜಸ್ಸಿನಿಂದ ಪ್ರಜ್ವಲಿಸುತ್ತಿದ್ದ ಸಾವಿತ್ರಿಗೆ ಹಿಂಜರಿದ ಯಾರೂ ಅವಳನ್ನು ವರಿಸದೇ ಇರಲು ಅಶ್ವಪತಿಯು ಮಗಳಿಗೆ ತಾನೇ ಪತಿಯನ್ನು ಹುಡುಕಿಕೊಂಡು ಬರಲು ಕಳುಹಿಸುವುದು (೨೫-೪೧).

03277001 ಯುಧಿಷ್ಠಿರ ಉವಾಚ|

03277001a ನಾತ್ಮಾನಮನುಶೋಚಾಮಿ ನೇಮಾನ್ಭ್ರಾತೄನ್ಮಹಾಮುನೇ|

03277001c ಹರಣಂ ಚಾಪಿ ರಾಜ್ಯಸ್ಯ ಯಥೇಮಾಂ ದ್ರುಪದಾತ್ಮಜಾಂ||

ಯುಧಿಷ್ಠಿರನು ಹೇಳಿದನು: “ಮಹಾಮುನೇ! ನಾನು ದ್ರುಪದಾತ್ಮಜೆಯ ಕುರಿತು ಎಷ್ಟು ಶೋಕಿಸುತ್ತಿದ್ದೇನೋ ಅಷ್ಟು ನನ್ನ ಕುರಿತಾಗಲೀ ಅಥವಾ ನನ್ನ ಈ ಭ್ರಾತೃಗಳ ಕುರಿತಾಗಲೀ ಅಥವಾ ಕಳೆದು ಹೋದ ರಾಜ್ಯದ ಕುರಿತಾಗಲೀ ಶೋಕಿಸುತ್ತಿಲ್ಲ.

03277002a ದ್ಯೂತೇ ದುರಾತ್ಮಭಿಃ ಕ್ಲಿಷ್ಟಾಃ ಕೃಷ್ಣಯಾ ತಾರಿತಾ ವಯಂ|

03277002c ಜಯದ್ರಥೇನ ಚ ಪುನರ್ವನಾದಪಹೃತಾ ಬಲಾತ್||

ದ್ಯೂತದಲ್ಲಿ ದುರಾತ್ಮರಿಂದ ಕಷ್ಟಕ್ಕೊಳಗಾದ ನಮ್ಮನ್ನು ಪಾರುಮಾಡಿದ ಕೃಷ್ಣೆಯನ್ನು ಪುನಃ ಜಯದ್ರಥನು ಬಲಾತ್ಕಾರವಾಗಿ ಅಪಹರಿಸಿದನು. 

03277003a ಅಸ್ತಿ ಸೀಮಂತಿನೀ ಕಾ ಚಿದ್ದೃಷ್ಟಪೂರ್ವಾಥ ವಾ ಶ್ರುತಾ|

03277003c ಪತಿವ್ರತಾ ಮಹಾಭಾಗಾ ಯಥೇಯಂ ದ್ರುಪದಾತ್ಮಜಾ||

ಮಹಾಭಾಗೆ ಪತಿವ್ರತೆ ದ್ರುಪದಾತ್ಮಜೆಯ ಹಾಗಿರುವ, ಇದಕ್ಕೂ ಮೊದಲು ನೀನು ನೋಡಿದ ಅಥವಾ ಕೇಳಿದ, ಸೀಮಂತಿನಿ ಯಾರಾದರೂ ಇದ್ದಾರೆಯೇ?”

03277004 ಮಾರ್ಕಂಡೇಯ ಉವಾಚ|

03277004a ಶೃಣು ರಾಜನ್ಕುಲಸ್ತ್ರೀಣಾಂ ಮಹಾಭಾಗ್ಯಂ ಯುಧಿಷ್ಠಿರ|

03277004c ಸರ್ವಮೇತದ್ಯಥಾ ಪ್ರಾಪ್ತಂ ಸಾವಿತ್ರ್ಯಾ ರಾಜಕನ್ಯಯಾ||

ಮಾರ್ಕಂಡೇಯನು ಹೇಳಿದನು: “ರಾಜನ್! ಯುಧಿಷ್ಠಿರ! ಕುಲಸ್ತ್ರೀಯರ ಮಹಾಭಾಗ್ಯವೆಲ್ಲವನ್ನೂ ಹೊಂದಿದ್ದ ರಾಜಕನ್ಯೆ ಸಾವಿತ್ರಿಯ ಕುರಿತು ಕೇಳು.

03277005a ಆಸೀನ್ಮದ್ರೇಷು ಧರ್ಮಾತ್ಮಾ ರಾಜಾ ಪರಮಧಾರ್ಮಿಕಃ|

03277005c ಬ್ರಹ್ಮಣ್ಯಶ್ಚ ಶರಣ್ಯಶ್ಚ ಸತ್ಯಸಂಧೋ ಜಿತೇಂದ್ರಿಯಃ||

ಮದ್ರದಲ್ಲಿ ಬ್ರಾಹ್ಮಣರ ಮತ್ತು ಶರಣರ ಸಾನ್ನಿಧ್ಯದಲ್ಲಿದ್ದ, ಧರ್ಮಾತ್ಮ, ಪರಮಧಾರ್ಮಿಕ, ಸತ್ಯಸಂಧ, ಜಿತೇಂದ್ರಿಯ ರಾಜನಿದ್ದನು.

03277006a ಯಜ್ವಾ ದಾನಪತಿರ್ದಕ್ಷಃ ಪೌರಜಾನಪದಪ್ರಿಯಃ|

03277006c ಪಾರ್ಥಿವೋಽಶ್ವಪತಿರ್ನಾಮ ಸರ್ವಭೂತಹಿತೇ ರತಃ||

ಯಜ್ಞಗಳನ್ನು ಮಾಡುತ್ತಿದ್ದ, ಮುಂದೆನಿಂತು ದಾನಗಳನ್ನು ನೀಡುತ್ತಿದ್ದ, ಪೌರರ ಮತ್ತು ಜಾನಪದರ ಪ್ರಿಯನಾಗಿದ್ದ, ಸರ್ವಭೂತಗಳ ಹಿತದಲ್ಲಿ ನಿರತನಾಗಿದ್ದ ಆ ರಾಜನ ಹೆಸರು ಅಶ್ವಪತಿ.

03277007a ಕ್ಷಮಾವಾನನಪತ್ಯಶ್ಚ ಸತ್ಯವಾಗ್ವಿಜಿತೇಂದ್ರಿಯಃ|

03277007c ಅತಿಕ್ರಾಂತೇನ ವಯಸಾ ಸಂತಾಪಮುಪಜಗ್ಮಿವಾನ್||

ಕ್ಷಮಾವಂತನೂ, ಸತ್ಯವನ್ನೇ ಮಾತನಾಡುವವನೂ, ಇಂದ್ರಿಯಗಳನ್ನು ಗೆದ್ದವನೂ ಆದ ಅವನಿಗೆ ಮಕ್ಕಳಿರಲಿಲ್ಲ. ವಯಸ್ಸನ್ನು ದಾಟಿದ್ದ ಅವನಿಗೆ ಇದು ಸಂತಾಪವನ್ನು ತಂದೊದಗಿಸಿತು.

03277008a ಅಪತ್ಯೋತ್ಪಾದನಾರ್ಥಂ ಸ ತೀವ್ರಂ ನಿಯಮಮಾಸ್ಥಿತಃ|

03277008c ಕಾಲೇ ಪರಿಮಿತಾಹಾರೋ ಬ್ರಹ್ಮಚಾರೀ ಜಿತೇಂದ್ರಿಯಃ||

ಮಕ್ಕಳನ್ನು ಹುಟ್ಟಿಸುವ ಸಲುವಾಗಿ ಅವನು ನಿರ್ಧಿಷ್ಠ ವೇಳೆಗಳಲ್ಲಿ ಅಲ್ಪವೇ ಆಹಾರವನ್ನು ಸೇವಿಸುತ್ತಾ, ಬ್ರಹ್ಮಚಾರಿ ಮತ್ತು ಜಿತೇಂದ್ರಿಯನಾಗಿದ್ದು ತೀವ್ರ ನಿಯಮಗಳಲ್ಲಿ ತೊಡಗಿದನು.

03277009a ಹುತ್ವಾ ಶತಸಹಸ್ರಂ ಸ ಸಾವಿತ್ರ್ಯಾ ರಾಜಸತ್ತಮ|

03277009c ಷಷ್ಠೇ ಷಷ್ಠೇ ತದಾ ಕಾಲೇ ಬಭೂವ ಮಿತಭೋಜನಃ||

ಆ ರಾಜಸತ್ತಮನು ಪ್ರತಿದಿನವೂ ಸಾವಿತ್ರಿಗೆ ನೂರುಸಾವಿರ ಆಹುತಿಗಳನ್ನು ನೀಡುತ್ತಿದ್ದನು ಮತ್ತು ದಿನದ ಆರನೆ ಒಂದು ಭಾಗದಲ್ಲಿ ಮಾತ್ರ ಅಲ್ಪ ಆಹಾರವನ್ನು ತೆಗೆದುಕೊಳ್ಳುತ್ತಿದ್ದನು.

03277010a ಏತೇನ ನಿಯಮೇನಾಸೀದ್ವರ್ಷಾಣ್ಯಷ್ಟಾದಶೈವ ತು|

03277010c ಪೂರ್ಣೇ ತ್ವಷ್ಟಾದಶೇ ವರ್ಷೇ ಸಾವಿತ್ರೀ ತುಷ್ಟಿಮಭ್ಯಗಾತ್|

03277010e ಸ್ವರೂಪಿಣೀ ತದಾ ರಾಜನ್ದರ್ಶಯಾಮಾಸ ತಂ ನೃಪಂ||

ಈ ರೀತಿ ನಿಯಮದಲ್ಲಿದ್ದುಕೊಂಡು ಹದಿನೆಂಟು ವರ್ಷಗಳು ಕಳೆದವು. ಹದಿನೆಂಟನೆಯ ವರ್ಷವು ಸಂಪೂರ್ಣವಾಗಲು ಸಾವಿತ್ರಿಯು ಅವನ ಮೇಲೆ ಸಂತುಷ್ಟಳಾಗಿದಳು. ರಾಜನ್! ಆಗ ಸ್ವರೂಪಿಣಿಯು ಆ ನೃಪನಿಗೆ ಕಾಣಿಸಿಕೊಂಡಳು.

03277011a ಅಗ್ನಿಹೋತ್ರಾತ್ಸಮುತ್ಥಾಯ ಹರ್ಷೇಣ ಮಹತಾನ್ವಿತಾ|

03277011c ಉವಾಚ ಚೈನಂ ವರದಾ ವಚನಂ ಪಾರ್ಥಿವಂ ತದಾ||

ಅಗ್ನಿಹೋತ್ರದಿಂದ ಎದ್ದುಬಂದು ಆ ಮಹತಾನ್ವಿತೆ ವರದೆಯು ಹರ್ಷದಿಂದ ರಾಜನಿಗೆ ಹೀಗೆ ಹೇಳಿದಳು:

03277012a ಬ್ರಹ್ಮಚರ್ಯೇಣ ಶುದ್ಧೇನ ದಮೇನ ನಿಯಮೇನ ಚ|

03277012c ಸರ್ವಾತ್ಮನಾ ಚ ಮದ್ಭಕ್ತ್ಯಾ ತುಷ್ಟಾಸ್ಮಿ ತವ ಪಾರ್ಥಿವ||

03277013a ವರಂ ವೃಣೀಷ್ವಾಶ್ವಪತೇ ಮದ್ರರಾಜ ಯಥೇಪ್ಸಿತಂ|

03277013c ನ ಪ್ರಮಾದಶ್ಚ ಧರ್ಮೇಷು ಕರ್ತವ್ಯಸ್ತೇ ಕಥಂ ಚನ||

“ರಾಜನ್! ನಿನ್ನ ಬ್ರಹ್ಮಚರ್ಯ, ಪರಿಶುದ್ಧತೆ, ದಮ, ನಿಯಮ ಮತ್ತು ಸರ್ವಾತ್ಮದಿಂದ ನನ್ನ ಮೇಲಿರಿಸುವ ಭಕ್ತಿಯಿಂದ ನಾನು ಸಂತುಷ್ಟಳಾಗಿದ್ದೇನೆ. ಮದ್ರರಾಜ ಅಶ್ವಪತೇ! ವರವನ್ನು ಕೇಳು. ಧರ್ಮ ಕರ್ತವ್ಯಗಳಲ್ಲಿ ಎಂದೂ ಪ್ರಮಾದಕ್ಕೊಳಗಾಗಬೇಡ.”

03277014 ಅಶ್ವಪತಿರುವಾಚ|

03277014a ಅಪತ್ಯಾರ್ಥಃ ಸಮಾರಂಭಃ ಕೃತೋ ಧರ್ಮೇಪ್ಸಯಾ ಮಯಾ|

03277014c ಪುತ್ರಾ ಮೇ ಬಹವೋ ದೇವಿ ಭವೇಯುಃ ಕುಲಭಾವನಾಃ||

ಅಶ್ವಪತಿಯು ಹೇಳಿದನು: “ದೇವಿ! ಮಕ್ಕಳು ಬೇಕೆಂಬ ಆಸೆಯಿಂದ ನಾನು ಈ ಧರ್ಮ ಸಮಾರಂಭದಲ್ಲಿ ತೊಡಗಿದ್ದೇನೆ. ನನ್ನ ಕುಲವನ್ನು ವೃದ್ಧಿಸುವ ಹಲವು ಪುತ್ರರನ್ನು ನನಗೆ ನೀಡು.

03277015a ತುಷ್ಟಾಸಿ ಯದಿ ಮೇ ದೇವಿ ಕಾಮಮೇತಂ ವೃಣೋಮ್ಯಹಂ|

03277015c ಸಂತಾನಂ ಹಿ ಪರೋ ಧರ್ಮ ಇತ್ಯಾಹುರ್ಮಾಂ ದ್ವಿಜಾತಯಃ||

ದೇವಿ! ನನ್ನಿಂದ ಸಂತೃಪ್ತಳಾಗಿದ್ದರೆ ನಾನು ಬಯಸಿದ ಈ ವರವನ್ನು ನೀಡು. ದ್ವಿಜರಿಗೆ ಸಂತಾನವೇ ಪರಮ ಧರ್ಮವೆಂದು ಹೇಳುತ್ತಾರೆ.”

03277016 ಸಾವಿತ್ರ್ಯುವಾಚ|

03277016a ಪೂರ್ವಮೇವ ಮಯಾ ರಾಜನ್ನಭಿಪ್ರಾಯಮಿಮಂ ತವ|

03277016c ಜ್ಞಾತ್ವಾ ಪುತ್ರಾರ್ಥಮುಕ್ತೋ ವೈ ತವ ಹೇತೋಃ ಪಿತಾಮಹಃ||

ಸಾವಿತ್ರಿಯು ಹೇಳಿದಳು: “ರಾಜನ್! ನಿನ್ನ ಈ ಅಭಿಪ್ರಾಯವನ್ನು ತಿಳಿದು ಹಿಂದೆಯೇ ನಿನಗೆ ಪುತ್ರರನ್ನು ನೀಡುವುದರ ಕುರಿತು ಪಿತಾಮಹನಲ್ಲಿ ಕೇಳಿಕೊಂಡಿದ್ದೆ.

03277017a ಪ್ರಸಾದಾಚ್ಚೈವ ತಸ್ಮಾತ್ತೇ ಸ್ವಯಂಭುವಿಹಿತಾದ್ಭುವಿ|

03277017c ಕನ್ಯಾ ತೇಜಸ್ವಿನೀ ಸೌಮ್ಯ ಕ್ಷಿಪ್ರಮೇವ ಭವಿಷ್ಯತಿ||

ಸ್ವಯಂಭುವು ವಿಹಿಸಿದಂತೆ ಅವನ ಪ್ರಸಾದದಿಂದ ನಿನಗೆ ಶೀಘ್ರದಲ್ಲಿಯೇ ಸೌಮ್ಯ ತೇಜಸ್ವಿನಿ ಕನ್ಯೆಯು ಜನಿಸುವಳು.

03277018a ಉತ್ತರಂ ಚ ನ ತೇ ಕಿಂ ಚಿದ್ವ್ಯಾಹರ್ತವ್ಯಂ ಕಥಂ ಚನ|

03277018c ಪಿತಾಮಹನಿಸರ್ಗೇಣ ತುಷ್ಟಾ ಹ್ಯೇತದ್ಬ್ರವೀಮಿ ತೇ||

ಇದರ ಕುರಿತು ಮರುಪ್ರಶ್ನೆಯನ್ನು ಕೇಳಬೇಡ ಅಥವಾ ವಾದಿಸ ಬೇಡ. ನಿನ್ನ ಮೇಲೆ ಸಂತುಷ್ಟಳಾಗಿ, ಪಿತಾಮಹನು ವಿಧಿಸಿದ್ದುದನ್ನು, ನಿನಗೆ ಹೇಳುತ್ತಿದ್ದೇನೆ.””

03277019 ಮಾರ್ಕಂಡೇಯ ಉವಾಚ|

03277019a ಸ ತಥೇತಿ ಪ್ರತಿಜ್ಞಾಯ ಸಾವಿತ್ರ್ಯಾ ವಚನಂ ನೃಪಃ|

03277019c ಪ್ರಸಾದಯಾಮಾಸ ಪುನಃ ಕ್ಷಿಪ್ರಮೇವಂ ಭವೇದಿತಿ||

ಮಾರ್ಕಂಡೇಯನು ಹೇಳಿದನು: “ಸಾವಿತ್ರಿಯ ವಚನಕ್ಕೆ ಹಾಗೆಯೇ ಆಗಲೆಂದು ಒಪ್ಪಿಕೊಂಡಾಗ, ಇದು ಶೀಘ್ರದಲ್ಲಿಯೇ ಆಗುತ್ತದೆಯೆಂದು ಅವಳು ಅನುಗ್ರಹಿಸಿದಳು.

03277020a ಅಂತರ್ಹಿತಾಯಾಂ ಸಾವಿತ್ರ್ಯಾಂ ಜಗಾಮ ಸ್ವಗೃಹಂ ನೃಪಃ|

03277020c ಸ್ವರಾಜ್ಯೇ ಚಾವಸತ್ಪ್ರೀತಃ ಪ್ರಜಾ ಧರ್ಮೇಣ ಪಾಲಯನ್||

ಸಾವಿತ್ರಿಯು ಅಂತರ್ಧಾನಗೊಳ್ಳಲು ರಾಜನು ತನ್ನ ಅರಮನೆಗೆ ಹಿಂದಿರುಗಿದನು. ಸ್ವರಾಜ್ಯದಲ್ಲಿ ವಾಸಿಸಿ ಪ್ರಜೆಗಳನ್ನು ಪ್ರೀತಿ-ಧರ್ಮಗಳಿಂದ ಪಾಲಿಸಿದನು.

03277021a ಕಸ್ಮಿಂಶ್ಚಿತ್ತು ಗತೇ ಕಾಲೇ ಸ ರಾಜಾ ನಿಯತವ್ರತಃ|

03277021c ಜ್ಯೇಷ್ಠಾಯಾಂ ಧರ್ಮಚಾರಿಣ್ಯಾಂ ಮಹಿಷ್ಯಾಂ ಗರ್ಭಮಾದಧೇ||

ಕೆಲವು ಸಮಯವು ಕಳೆಯಲು ನಿಯತವ್ರತ ರಾಜನು ಧರ್ಮಚಾರಿಣಿ ಹಿರಿಯ ರಾಣಿಗೆ ಗರ್ಭವನ್ನು ನೀಡಿದನು.

03277022a ರಾಜಪುತ್ರ್ಯಾಂ ತು ಗರ್ಭಃ ಸ ಮಾಲವ್ಯಾಂ ಭರತರ್ಷಭ|

03277022c ವ್ಯವರ್ಧತ ಯಥಾ ಶುಕ್ಲೇ ತಾರಾಪತಿರಿವಾಂಬರೇ||

ಭರತರ್ಷಭ! ರಾಜಪುತ್ರಿ ಆ ಮಾಲವಿಯಲ್ಲಿ ಗರ್ಭವು ಅಂಬರದಲ್ಲಿ ಶುಕ್ಲಪಕ್ಷದಲ್ಲಿ ತಾರಾಪತಿ ಚಂದ್ರನಂತೆ ವರ್ಧಿಸಿತು.

03277023a ಪ್ರಾಪ್ತೇ ಕಾಲೇ ತು ಸುಷುವೇ ಕನ್ಯಾಂ ರಾಜೀವಲೋಚನಾಂ|

03277023c ಕ್ರಿಯಾಶ್ಚ ತಸ್ಯಾ ಮುದಿತಶ್ಚಕ್ರೇ ಸ ನೃಪತಿಸ್ತದಾ||

ಕಾಲ ಪ್ರಾಪ್ತವಾಗಲು ಅವಳು ರಾಜೀವಲೋಚನೆ ಕನ್ಯೆಗೆ ಜನ್ಮವಿತ್ತಳು. ಆಗ ಆ ನೃಪತಿಯು ಸಂತೋಷದಿಂದ ಅವಳ ಎಲ್ಲ ಕ್ರಿಯೆಗಳನ್ನೂ ನೆರವೇರಿಸಿದನು.

03277024a ಸಾವಿತ್ರ್ಯಾ ಪ್ರೀತಯಾ ದತ್ತಾ ಸಾವಿತ್ರ್ಯಾ ಹುತಯಾ ಹ್ಯಪಿ|

03277024c ಸಾವಿತ್ರೀತ್ಯೇವ ನಾಮಾಸ್ಯಾಶ್ಚಕ್ರುರ್ವಿಪ್ರಾಸ್ತಥಾ ಪಿತಾ||

ಸಾವಿತ್ರಿಯ ಆಹುತಿಗಳಿಂದ ತೃಪ್ತಳಾಗಿ ಸಾವಿತ್ರಿಯಿಂದ ಪಡೆದ ಅವಳಿಗೆ ತಂದೆ ಮತ್ತು ವಿಪ್ರರು ಸಾವಿತ್ರಿ ಎಂದೇ ನಾಮಕರಣ ಮಾಡಿದರು.

03277025a ಸಾ ವಿಗ್ರಹವತೀವ ಶ್ರೀರ್ವ್ಯವರ್ಧತ ನೃಪಾತ್ಮಜಾ|

03277025c ಕಾಲೇನ ಚಾಪಿ ಸಾ ಕನ್ಯಾ ಯೌವನಸ್ಥಾ ಬಭೂವ ಹ||

ಆ ನೃಪಾತ್ಮಜೆಯು ಸಾಕ್ಷಾತ್ ಶ್ರೀಯೇ ಅವತರಿಸಿರುವಳೋ ಎನ್ನುವಂತೆ ಅತೀವ ಸುಂದರಿಯಾಗಿ ಬೆಳೆದಳು. ಸಮಯವು ಕಳೆದಂತೆ ಆ ಕನ್ಯೆಯು ಯೌವನಾವಸ್ಥೆಗೆ ಬಂದಳು.

03277026a ತಾಂ ಸುಮಧ್ಯಾಂ ಪೃಥುಶ್ರೋಣೀಂ ಪ್ರತಿಮಾಂ ಕಾಂಚನೀಮಿವ|

03277026c ಪ್ರಾಪ್ತೇಯಂ ದೇವಕನ್ಯೇತಿ ದೃಷ್ಟ್ವಾ ಸಮ್ಮೇನಿರೇ ಜನಾಃ||

ಆ ಸುಮಧ್ಯಮೆ, ಪೃಥುಶ್ರೋಣಿ, ಬಂಗಾರದ ಪುತ್ಥಳಿಯಂತಿದ್ದ ಅವಳನ್ನು ನೋಡಿ ಜನರು ದೇವಕನ್ಯೆಯೇ ತಮ್ಮ ನಡುವೆ ಬಂದಿದ್ದಾಳೋ ಎಂದು ಅಚ್ಚರಿ ಪಡುತ್ತಿದ್ದರು.

03277027a ತಾಂ ತು ಪದ್ಮಪಲಾಶಾಕ್ಷೀಂ ಜ್ವಲಂತೀಮಿವ ತೇಜಸಾ|

03277027c ನ ಕಶ್ಚಿದ್ವರಯಾಮಾಸ ತೇಜಸಾ ಪ್ರತಿವಾರಿತಃ||

ಆ ಪದ್ಮಪಲಾಶಾಕ್ಷಿಯಾದರೋ ತೇಜಸ್ಸಿನಿಂದ ಪ್ರಜ್ವಲಿಸುತ್ತಿರಲು ಅವಳ ತೇಜಸ್ಸಿಗೆ ಹಿಂಜರಿದ ಯಾರೂ ಅವಳನ್ನು ವರಿಸಲಿಲ್ಲ.

03277028a ಅಥೋಪೋಷ್ಯ ಶಿರಃಸ್ನಾತಾ ದೈವತಾನ್ಯಭಿಗಮ್ಯ ಸಾ|

03277028c ಹುತ್ವಾಗ್ನಿಂ ವಿಧಿವದ್ವಿಪ್ರಾನ್ವಾಚಯಾಮಾಸ ಪರ್ವಣಿ||

ಒಮ್ಮೆ ಉತ್ತಮ ದಿನದಂದು ಉಪವಾಸದಿಂದಿದ್ದು, ತಲೆಗೆ ಸ್ನಾನಮಾಡಿ ದೇವತೆಗಳನ್ನು ಪೂಜಿಸಿ ಅವಳು ವಿಧಿವತ್ತಾಗಿ ಬ್ರಾಹ್ಮಣರು ವಾಚಿಸುತ್ತಿರಲು ಅಗ್ನಿಯಲ್ಲಿ ಆಹುತಿಗಳನ್ನಿತ್ತಳು.

03277029a ತತಃ ಸುಮನಸಃ ಶೇಷಾಃ ಪ್ರತಿಗೃಹ್ಯ ಮಹಾತ್ಮನಃ|

03277029c ಪಿತುಃ ಸಕಾಶಮಗಮದ್ದೇವೀ ಶ್ರೀರಿವ ರೂಪಿಣೀ||

ಅನಂತರ ಸುಮನಸ್ಕಳಾಗಿ, ಉಳಿದ ಪ್ರಸಾದವನ್ನು ಹಿಡಿದು ಶ್ರೀಯಂತೆ ರೂಪವತಿಯಾದ ಆ ದೇವಿಯು ಮಹಾತ್ಮ ತಂದೆಯ ಬಳಿಗೆ ಹೋದಳು.

03277030a ಸಾಭಿವಾದ್ಯ ಪಿತುಃ ಪಾದೌ ಶೇಷಾಃ ಪೂರ್ವಂ ನಿವೇದ್ಯ ಚ|

03277030c ಕೃತಾಂಜಲಿರ್ವರಾರೋಹಾ ನೃಪತೇಃ ಪಾರ್ಶ್ವತಃ ಸ್ಥಿತಾ||

ಮೊದಲು ಪ್ರಸಾದವನ್ನು ಅವನಿಗಿತ್ತು ತಂದೆಯ ಪಾದಗಳಿಗೆ ನಮಸ್ಕರಿಸಿ, ಅಂಜಲೀಬದ್ಧಳಾಗಿ ಆ ವರಾರೋಹೆಯು ನೃಪತಿಯ ಪಕ್ಕದಲ್ಲಿ ನಿಂತುಕೊಂಡಳು.

03277031a ಯೌವನಸ್ಥಾಂ ತು ತಾಂ ದೃಷ್ಟ್ವಾ ಸ್ವಾಂ ಸುತಾಂ ದೇವರೂಪಿಣೀಂ|

03277031c ಅಯಾಚ್ಯಮಾನಾಂ ಚ ವರೈರ್ನೃಪತಿರ್ದುಃಖಿತೋಽಭವತ್||

ಯೌವನಾವಸ್ಥೆಯಲ್ಲಿರುವ ತನ್ನ ದೇವರೂಪಿಣಿ ಮಗಳನ್ನು ನೋಡಿ ನೃಪತಿಯು ಅವಳನ್ನು ಕೇಳಿಕೊಂಡು ಇದೂವರೆಗೆ ಯಾರೂ ವರರು ಬರಲಿಲ್ಲವಲ್ಲಾ ಎಂದು ದುಃಖಿಸಿದನು.

03277032 ರಾಜೋವಾಚ|

03277032a ಪುತ್ರಿ ಪ್ರದಾನಕಾಲಸ್ತೇ ನ ಚ ಕಶ್ಚಿದ್ವೃಣೋತಿ ಮಾಂ|

03277032c ಸ್ವಯಮನ್ವಿಚ್ಚ ಭರ್ತಾರಂ ಗುಣೈಃ ಸದೃಶಮಾತ್ಮನಃ||

ರಾಜನು ಹೇಳಿದನು: “ಪುತ್ರಿ! ನಿನ್ನನ್ನು ಕೊಡುವ ಕಾಲವು ಬಂದಿದೆ. ಆದರೆ ಇದೂವರೆಗೆ ಯಾರೂ ನಿನ್ನನ್ನು ಕೇಳಿಕೊಂಡು ಬಂದಿಲ್ಲ. ಗುಣದಲ್ಲಿ ನಿನ್ನಂತೆಯೇ ಇರುವ ಪತಿಯನ್ನು ನೀನೇ ಇಷ್ಟಪಟ್ಟು ಆರಿಸಿಕೋ.

03277033a ಪ್ರಾರ್ಥಿತಃ ಪುರುಷೋ ಯಶ್ಚ ಸ ನಿವೇದ್ಯಸ್ತ್ವಯಾ ಮಮ|

03277033c ವಿಮೃಶ್ಯಾಹಂ ಪ್ರದಾಸ್ಯಾಮಿ ವರಯ ತ್ವಂ ಯಥೇಪ್ಸಿತಂ||

ನೀನು ಬಯಸಿದ ಪುರುಷನ ಕುರಿತು ನನ್ನಲ್ಲಿ ಹೇಳು. ವಿಮರ್ಶಿಸಿ ನಾನು ನಿನಗಿಷ್ಟನಾದ ವರನಿಗೆ ನಿನ್ನನ್ನು ಕೊಡುತ್ತೇನೆ.

03277034a ಶ್ರುತಂ ಹಿ ಧರ್ಮಶಾಸ್ತ್ರೇ ಮೇ ಪಠ್ಯಮಾನಂ ದ್ವಿಜಾತಿಭಿಃ|

03277034c ತಥಾ ತ್ವಮಪಿ ಕಲ್ಯಾಣಿ ಗದತೋ ಮೇ ವಚಃ ಶೃಣು||

ಕಲ್ಯಾಣೀ! ಧರ್ಮಶಾಸ್ತ್ರಗಳನ್ನು ಓದಿ ತಿಳಿದ ದ್ವಿಜರಿಂದ ಕೇಳಿದುದನ್ನು ನಾನು ನಿನಗೆ ಹೇಳುತ್ತಿದ್ದೇನೆ. ನೀನೂ ಕೂಡ ನಾನು ಹೇಳುತ್ತಿರುವ ಈ ಮಾತನ್ನು ಕೇಳು.

03277035a ಅಪ್ರದಾತಾ ಪಿತಾ ವಾಚ್ಯೋ ವಾಚ್ಯಶ್ಚಾನುಪಯನ್ಪತಿಃ|

03277035c ಮೃತೇ ಭರ್ತರಿ ಪುತ್ರಶ್ಚ ವಾಚ್ಯೋ ಮಾತುರಾರಕ್ಷತಾ||

ವಯಸ್ಸಿಗೆ ಬಂದಿರುವ ಮಗಳನ್ನು ಕೊಡದೇ ಇರುವ ತಂದೆಯನ್ನು ನಿಂದಿಸಬೇಕು; ಮಕ್ಕಳನ್ನು ಪಡೆಯದ ಪತಿಯನ್ನು ನಿಂದಿಸಬೇಕು; ವಿಧವೆ ತಾಯಿಯನ್ನು ನೋಡಿಕೊಳ್ಳದ ಪುತ್ರನನ್ನು ನಿಂದಿಸಬೇಕು.

03277036a ಇದಂ ಮೇ ವಚನಂ ಶ್ರುತ್ವಾ ಭರ್ತುರಾನ್ವೇಷಣೇ ತ್ವರ|

03277036c ದೇವತಾನಾಂ ಯಥಾ ವಾಚ್ಯೋ ನ ಭವೇಯಂ ತಥಾ ಕುರು||

ನನ್ನ ಈ ಮಾತನ್ನು ಕೇಳಿ ಬೇಗನೇ ಪತಿಯನ್ನು ಹುಡುಕು. ನಾನು ದೇವತೆಗಳ ನಿಂದನೆಗೊಳಗಾಗದಂತೆ ಮಾಡು.””

03277037 ಮಾರ್ಕಂಡೇಯ ಉವಾಚ|

03277037a ಏವಮುಕ್ತ್ವಾ ದುಹಿತರಂ ತಥಾ ವೃದ್ಧಾಂಶ್ಚ ಮಂತ್ರಿಣಃ|

03277037c ವ್ಯಾದಿದೇಶಾನುಯಾತ್ರಂ ಚ ಗಮ್ಯತಾಮಿತ್ಯಚೋದಯತ್||

ಮಾರ್ಕಂಡೇಯನು ಹೇಳಿದನು: “ಮಗಳಿಗೆ ಈ ರೀತಿ ಹೇಳಿ ಅವನು ವೃದ್ಧ ಮಂತ್ರಿಗಳಿಗೆ ಪ್ರಯಾಣಕ್ಕೆ ಸಿದ್ಧತೆಯನ್ನು ಮಾಡಿಕೊಂಡು ಅವಳೊಂದಿಗೆ ಹೊರಡಲು ಆಜ್ಞಾಪಿಸಿದನು.

03277038a ಸಾಭಿವಾದ್ಯ ಪಿತುಃ ಪಾದೌ ವ್ರೀಡಿತೇವ ಮನಸ್ವಿನೀ|

03277038c ಪಿತುರ್ವಚನಮಾಜ್ಞಾಯ ನಿರ್ಜಗಾಮಾವಿಚಾರಿತಂ||

ನಾಚಿಕೊಂಡು ಆ ಮನಸ್ವಿನಿಯು ತಂದೆಯ ಪಾದಗಳಿಗೆ ವಂದಿಸಿ ಪಿತೃವಚನವನ್ನು ಆಜ್ಞೆಯೆಂದು ಸ್ವೀಕರಿಸಿ ತಕ್ಷಣವೇ ಹೊರಟಳು.

03277039a ಸಾ ಹೈಮಂ ರಥಮಾಸ್ಥಾಯ ಸ್ಥವಿರೈಃ ಸಚಿವೈರ್ವೃತಾ|

03277039c ತಪೋವನಾನಿ ರಮ್ಯಾಣಿ ರಾಜರ್ಷೀಣಾಂ ಜಗಾಮಹ||

ಬಂಗಾರದ ರಥದಲ್ಲಿ ಕುಳಿತು ಸಚಿವರಿಂದ ಸುತ್ತುವರೆದು ರಮ್ಯ ವನಗಳಲ್ಲಿ ರಾಜರ್ಷಿಗಳ ತಪೋವನಗಳಲ್ಲಿ ಸುತ್ತಿದಳು.

03277040a ಮಾನ್ಯಾನಾಂ ತತ್ರ ವೃದ್ಧಾನಾಂ ಕೃತ್ವಾ ಪಾದಾಭಿವಂದನಂ|

03277040c ವನಾನಿ ಕ್ರಮಶಸ್ತಾತ ಸರ್ವಾಣ್ಯೇವಾಭ್ಯಗಚ್ಚತ||

ಅಲ್ಲಿ ವೃದ್ಧರನ್ನು ಗೌರವಿಸಿ ಅವರ ಪಾದಗಳಿಗೆ ವಂದಿಸಿ ಕ್ರಮವಾಗಿ ಎಲ್ಲ ವನಗಳಿಗೆ ಹೋದಳು.

03277041a ಏವಂ ಸರ್ವೇಷು ತೀರ್ಥೇಷು ಧನೋತ್ಸರ್ಗಂ ನೃಪಾತ್ಮಜಾ|

03277041c ಕುರ್ವತೀ ದ್ವಿಜಮುಖ್ಯಾನಾಂ ತಂ ತಂ ದೇಶಂ ಜಗಾಮ ಹ||

ಹೀಗೆ ಸರ್ವ ತೀರ್ಥಗಳಲ್ಲಿ ಧನವನ್ನು ನೀಡುತ್ತಾ ಆ ನೃಪತಾತ್ಮಜೆಯು ದ್ವಿಜಮುಖ್ಯರಿರುವ ಬೇರೆ ಬೇರೆ ದೇಶಗಳಿಗೆ ಪ್ರಯಾಣ ಮಾಡಿದಳು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ಪತಿವ್ರತಾಮಹಾತ್ಮ್ಯೇ ಸಾವಿತ್ರ್ಯುಪಾಖ್ಯಾನೇ ಸಪ್ತಸಪ್ತತ್ಯಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ಪತಿವ್ರತಾಮಹಾತ್ಮ್ಯೆಯಲ್ಲಿ ಸಾವಿತ್ರ್ಯುಪಾಖ್ಯಾನದಲ್ಲಿ ಇನ್ನೂರಾಎಪ್ಪತ್ತೇಳನೆಯ ಅಧ್ಯಾಯವು.

Related image

Kannada translation of Draupadiharana Parva, by Chapter:
  1. ಜಯದ್ರಥಾಗಮನ
  2. ಕೋಟಿಕಾಸ್ಯಪ್ರಶ್ನಃ
  3. ದ್ರೌಪದೀವಾಕ್ಯ
  4. ಜಯದ್ರಥದ್ರೌಪದೀಸಂವಾದ
  5. ದ್ರೌಪದೀಹರಣ
  6. ಪಾರ್ಥಾಗಮನ
  7. ದ್ರೌಪದೀವಾಕ್ಯ
  8. ಜಯದ್ರಥಪಲಾಯನ
  9. ಜಯದ್ರಥವಿಮೋಕ್ಷಣ
  10. ರಾಮೋಪಾಖ್ಯಾನ-ಯುಧಿಷ್ಠಿರಪ್ರಶ್ನಃ
  11. ರಾಮೋಪಾಖ್ಯಾನ-ರಾಮರಾವಣಯೋರ್ಜನ್ಮಕಥನ
  12. ರಾಮೋಪಾಖ್ಯಾನ-ರಾವಣಾದಿವರಪ್ರಾಪ್ತಿಃ
  13. ರಾಮೋಪಾಖ್ಯಾನ-ವಾನರಾದ್ಯುತ್ಪತ್ತಿಃ
  14. ರಾಮೋಪಾಖ್ಯಾನ-ರಾಮವನಾಭಿಗಮನ
  15. ರಾಮೋಪಾಖ್ಯಾನ-ಮಾರೀಚವಧ-ಸೀತಾಪಹರಣ
  16. ರಾಮೋಪಾಖ್ಯಾನ-ಕಬಂಧಹನನ
  17. ರಾಮೋಪಾಖ್ಯಾನ-ತ್ರಿಜಟಾಕೃತಸೀತಾಸಂವಾದಃ
  18. ರಾಮೋಪಾಖ್ಯಾನ-ಸೀತಾರಾವಣಸಂವಾದಃ
  19. ರಾಮೋಪಾಖ್ಯಾನ-ಹನುಮಪ್ರತ್ಯಾಗಮನ
  20. ರಾಮೋಪಾಖ್ಯಾನ-ಸೇತುಬಂಧನ
  21. ರಾಮೋಪಾಖ್ಯಾನ-ಲಂಕಾಪ್ರವೇಶ
  22. ರಾಮೋಪಾಖ್ಯಾನ-ರಾಮರಾವಣದ್ವಂದ್ವಯುದ್ಧಃ
  23. ರಾಮೋಪಾಖ್ಯಾನ-ಕುಂಭಕರ್ಣನಿರ್ಗಮನ
  24. ರಾಮೋಪಾಖ್ಯಾನ-ಕುಂಬಕರ್ಣಾದಿವಧಃ
  25. ರಾಮೋಪಾಖ್ಯಾನ-ಇಂದ್ರಜಿದ್ಯುದ್ಧಃ
  26. ರಾಮೋಪಾಖ್ಯಾನ-ಇಂದ್ರಜಿದ್ವಧಃ
  27. ರಾಮೋಪಾಖ್ಯಾನ-ರಾವಣವಧಃ
  28. ರಾಮೋಪಾಖ್ಯಾನ-ಶ್ರೀರಾಮಾಭಿಷೇಕ
  29. ರಾಮೋಪಾಖ್ಯಾನ-ಯುಧಿಷ್ಠಿರಾಶ್ವಾಸನ
  30. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೧
  31. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೨
  32. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೩
  33. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೪
  34. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೫
  35. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೬
  36. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೭

Comments are closed.