Aranyaka Parva: Chapter 280

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೮೦

ನಾಲ್ಕನೆಯ ದಿನದಲ್ಲಿ ಸತ್ಯವಾನನು ಸಾಯುತ್ತಾನೆಂದು ಯೋಚಿಸಿದ ಸಾವಿತ್ರಿಯು ಹಗಲು ರಾತ್ರಿ ಒಂದೇ ಸ್ಥಳದಲ್ಲಿ ನಿಶ್ಚಲವಾಗಿ ನಿಲ್ಲುವ ಮೂರುರಾತ್ರಿಗಳ ವ್ರತವನ್ನು ಆಚರಿಸಿದುದು (೧-೯). ನಾಲ್ಕನೆಯ ದಿನ ಸತ್ಯವಾನನು ಹೆಗಲಮೇಲೆ ಕೊಡಲಿಯನ್ನು ಹಾಕಿಕೊಂಡು ಕಾಡಿಗೆ ಹೊರಡಲು ಸಾವಿತ್ರಿಯೂ ಅವನನ್ನು ಹಿಂಬಾಲಿಸಿ ನಡೆದುದು (೧೦-೩೩).

03280001 ಮಾರ್ಕಂಡೇಯ ಉವಾಚ|

03280001a ತತಃ ಕಾಲೇ ಬಹುತಿಥೇ ವ್ಯತಿಕ್ರಾಂತೇ ಕದಾ ಚನ|

03280001c ಪ್ರಾಪ್ತಃ ಸ ಕಾಲೋ ಮರ್ತವ್ಯಂ ಯತ್ರ ಸತ್ಯವತಾ ನೃಪ||

ಮಾರ್ಕಂಡೇಯನು ಹೇಳಿದನು: “ನೃಪ! ಹಾಗೆಯೇ ಬಹುದಿನಗಳು ಕಳೆದಂತೆ ಸತ್ಯವಾನನು ಸಾಯುವ ಕಾಲವು ಪ್ರಾಪ್ತವಾಯಿತು.

03280002a ಗಣಯಂತ್ಯಾಶ್ಚ ಸಾವಿತ್ರ್ಯಾ ದಿವಸೇ ದಿವಸೇ ಗತೇ|

03280002c ತದ್ವಾಕ್ಯಂ ನಾರದೇನೋಕ್ತಂ ವರ್ತತೇ ಹೃದಿ ನಿತ್ಯಶಃ||

ಸಾವಿತ್ರಿಯು ನಾರದನು ಹೇಳಿದ ಆ ವಾಕ್ಯವನ್ನು ನಿತ್ಯವೂ ಹೃದಯದಲ್ಲಿಟ್ಟುಕೊಂಡು ಕಳೆದುಹೋದ ದಿನ ದಿನವನ್ನೂ ಲೆಕ್ಕಮಾಡಿಕೊಂಡಿದ್ದಳು.

03280003a ಚತುರ್ಥೇಽಹನಿ ಮರ್ತವ್ಯಮಿತಿ ಸಂಚಿಂತ್ಯ ಭಾಮಿನೀ|

03280003c ವ್ರತಂ ತ್ರಿರಾತ್ರಮುದ್ದಿಶ್ಯ ದಿವಾರಾತ್ರಂ ಸ್ಥಿತಾಭವತ್||

ನಾಲ್ಕನೆಯ ದಿನದಲ್ಲಿ ಸಾಯುತ್ತಾನೆಂದು ಯೋಚಿಸಿದ ಭಾಮಿನಿಯು ಮೂರುರಾತ್ರಿಗಳ ವ್ರತವನ್ನು ಆಚರಿಸಿ ಹಗಲು ರಾತ್ರಿ ಒಂದೇ ಸ್ಥಳದಲ್ಲಿ ನಿಶ್ಚಲವಾಗಿ ನಿಂತಳು.

03280004a ತಂ ಶ್ರುತ್ವಾ ನಿಯಮಂ ದುಃಖಂ ವಧ್ವಾ ದುಃಖಾನ್ವಿತೋ ನೃಪಃ|

03280004c ಉತ್ಥಾಯ ವಾಕ್ಯಂ ಸಾವಿತ್ರೀಮಬ್ರವೀತ್ಪರಿಸಾಂತ್ವಯನ್||

ತನ್ನ ಸೊಸೆಯು ಈ ರೀತಿಯ ಕಠಿಣ ವ್ರತವನ್ನು ಕೈಗೊಂಡಿದ್ದಾಳೆಂದು ಕೇಳಿದ ನೃಪನು ದುಃಖಾನ್ವಿತನಾಗಿ ಮೇಲೆದ್ದು ಸಾವಿತ್ರಿಯನ್ನು ಪರಿಸಂತವಿಸುತ್ತಾ ಹೀಗೆಂದನು:

03280005a ಅತಿತೀವ್ರೋಽಯಮಾರಂಭಸ್ತ್ವಯಾರಬ್ಧೋ ನೃಪಾತ್ಮಜೇ|

03280005c ತಿಸೃಣಾಂ ವಸತೀನಾಂ ಹಿ ಸ್ಥಾನಂ ಪರಮದುಷ್ಕರಂ||

“ರಾಜಕುಮಾರಿ! ನೀನು ಕೈಗೊಂಡಿರುವ ಈ ವ್ರತವು ಅತಿ ತೀವ್ರವೂ ಕಠಿಣವೂ ಆಗಿದ್ದುದು. ಈ ರೀತಿ ಒಂದೇ ಸ್ಥಾನದಲ್ಲಿ ನಿಂತುಕೊಂಡಿರುವುದು ಪರಮದುಷ್ಕರ.”

03280006 ಸಾವಿತ್ರ್ಯುವಾಚ|

03280006a ನ ಕಾರ್ಯಸ್ತಾತ ಸಂತಾಪಃ ಪಾರಯಿಷ್ಯಾಮ್ಯಹಂ ವ್ರತಂ|

03280006c ವ್ಯವಸಾಯಕೃತಂ ಹೀದಂ ವ್ಯವಸಾಯಶ್ಚ ಕಾರಣಂ||

ಸಾವಿತ್ರಿಯು ಹೇಳಿದಳು: “ತಂದೇ! ಈ ಕಾರ್ಯದಿಂದಾಗಿ ಸಂತಾಪಹೊಂದದಿರಿ. ನಾನು ಈ ವ್ರತವನ್ನು ನೆರವೇರಿಸಬಲ್ಲೆ. ಗಟ್ಟಿಮನಸ್ಸೇ ಇದನ್ನು ಯಶಸ್ವಿಗೊಳಿಸಬಲ್ಲದು ಮತ್ತು ನಾನು ಆ ಗಟ್ಟಿಮನಸ್ಸಿನಿಂದಲೇ ಇದನ್ನು ಪ್ರಾರಂಭಿಸಿದ್ದೇನೆ.”

03280007 ದ್ಯುಮತ್ಸೇನ ಉವಾಚ|

03280007a ವ್ರತಂ ಭಿಂಧೀತಿ ವಕ್ತುಂ ತ್ವಾಂ ನಾಸ್ಮಿ ಶಕ್ತಃ ಕಥಂ ಚನ|

03280007c ಪಾರಯಸ್ವೇತಿ ವಚನಂ ಯುಕ್ತಮಸ್ಮದ್ವಿಧೋ ವದೇತ್||

ದ್ಯುಮತ್ಸೇನನು ಹೇಳಿದನು: “ವ್ರತವನ್ನು ಮುರಿ ಎಂದು ನಾನು ನಿನಗೆ ಹೇಳುವುದು ಹೇಗೆ ತಾನೇ ಸರಿಯಾಗುತ್ತದೆ? ನೀನು ಇದನ್ನು ಪೂರೈಸಬಲ್ಲೆ ಎಂದು ಮಾತ್ರ ನನ್ನ ಪರಿಸ್ಥಿತಿಯಲ್ಲಿರುವವನು ಬಯಸಬಲ್ಲ.””

03280008 ಮಾರ್ಕಂಡೇಯ ಉವಾಚ|

03280008a ಏವಮುಕ್ತ್ವಾ ದ್ಯುಮತ್ಸೇನೋ ವಿರರಾಮ ಮಹಾಮನಾಃ|

03280008c ತಿಷ್ಠಂತೀ ಚಾಪಿ ಸಾವಿತ್ರೀ ಕಾಷ್ಠಭೂತೇವ ಲಕ್ಷ್ಯತೇ||

ಮಾರ್ಕಂಡೇಯನು ಹೇಳಿದನು: “ಹೀಗೆ ಹೇಳಿ ಮಹಾಮನಸ್ವಿ ದ್ಯುಮತ್ಸೇನನು ನಿವೃತ್ತನಾದನು. ನಿಂತಿದ್ದ ಸಾವಿತ್ರಿಯಾದರೋ ಮರದ ಕೋಲಿನಂತೆ ಕಾಣುತ್ತಿದ್ದಳು.

03280009a ಶ್ವೋಭೂತೇ ಭರ್ತೃಮರಣೇ ಸಾವಿತ್ರ್ಯಾ ಭರತರ್ಷಭ|

03280009c ದುಃಖಾನ್ವಿತಾಯಾಸ್ತಿಷ್ಠಂತ್ಯಾಃ ಸಾ ರಾತ್ರಿರ್ವ್ಯತ್ಯವರ್ತತ||

ಭರತರ್ಷಭ! ನಾಳೆ ನನ್ನ ಗಂಡನು ಸಾಯುತ್ತಾನೆ ಎಂದು ದುಃಖಿಸುತ್ತಾ ಸಾವಿತ್ರಿಯು ರಾತ್ರಿಗಳು ಕಳೆದಂತೆ ಕೊನೆಯ ರಾತ್ರಿಯೂ ಮುಗಿಯುವವರೆಗೆ ನಿಂತುಕೊಂಡೇ ಇದ್ದಳು.

03280010a ಅದ್ಯ ತದ್ದಿವಸಂ ಚೇತಿ ಹುತ್ವಾ ದೀಪ್ತಂ ಹುತಾಶನಂ|

03280010c ಯುಗಮಾತ್ರೋದಿತೇ ಸೂರ್ಯೇ ಕೃತ್ವಾ ಪೌರ್ವಾಹ್ಣಿಕೀಃ ಕ್ರಿಯಾಃ||

ಆ ದಿವಸವಾದ ಅಂದೂ ಸೂರ್ಯೋದಯದೊಂದಿಗೆ ಪೌರ್ವಾಣಿಕೀ ಕ್ರಿಯೆಗಳನ್ನು ಪೂರೈಸಿ ಅಗ್ನಿಯನ್ನು ಉರಿಸಿ ಆಹುತಿಗಳನ್ನಿತ್ತಳು.

03280011a ತತಃ ಸರ್ವಾನ್ದ್ವಿಜಾನ್ವೃದ್ಧಾಂ ಶ್ವಶ್ರೂಂ ಶ್ವಶುರಮೇವ ಚ|

03280011c ಅಭಿವಾದ್ಯಾನುಪೂರ್ವ್ಯೇಣ ಪ್ರಾಂಜಲಿರ್ನಿಯತಾ ಸ್ಥಿತಾ||

ಅನಂತರ ಎಲ್ಲ ದ್ವಿಜರಿಗೂ, ವೃದ್ಧ ಅತ್ತೆ ಮಾವಂದಿರಿಗೂ ನಮಸ್ಕರಿಸಿ ಅಂಜಲೀಬದ್ಧಳಾಗಿ ಅವರ ಎದಿರು ನಿಯತಳಾಗಿ ನಿಂತುಕೊಂಡಳು.

03280012a ಅವೈಧವ್ಯಾಶಿಷಸ್ತೇ ತು ಸಾವಿತ್ರ್ಯರ್ಥಂ ಹಿತಾಃ ಶುಭಾಃ|

03280012c ಊಚುಸ್ತಪಸ್ವಿನಃ ಸರ್ವೇ ತಪೋವನನಿವಾಸಿನಃ||

ಹಿತಳೂ ಶುಭೆಯೂ ಆಗಿದ್ದ ಆ ಸಾವಿತ್ರಿಗೆ ಎಲ್ಲ ತಪೋವನ ನಿವಾಸಿ ತಪಸ್ವಿಗಳು ಅವೈಧವ್ಯದ ಜೀವನವನ್ನು ಆಶೀರ್ವಾದವಾಗಿ ಹೇಳಿದರು.

03280013a ಏವಮಸ್ತ್ವಿತಿ ಸಾವಿತ್ರೀ ಧ್ಯಾನಯೋಗಪರಾಯಣಾ|

03280013c ಮನಸಾ ತಾ ಗಿರಃ ಸರ್ವಾಃ ಪ್ರತ್ಯಗೃಹ್ಣಾತ್ತಪಸ್ವಿನಾಂ||

ಧ್ಯಾನಯೋಗಪರಾಯಣಳಾಗಿ ಸಾವಿತ್ರಿಯು ಹಾಗೆಯೇ ಅಗಲಿ ಎಂದು ಆ ತಪಸ್ವಿಗಳೆಲ್ಲರ ಮಾತುಗಳನ್ನೂ ಮನಸ್ಸಿನಲ್ಲಿಯೇ ಪುನರುಶ್ಚರಿಸಿದಳು.

03280014a ತಂ ಕಾಲಂ ಚ ಮುಹೂರ್ತಂ ಚ ಪ್ರತೀಕ್ಷಂತೀ ನೃಪಾತ್ಮಜಾ|

03280014c ಯಥೋಕ್ತಂ ನಾರದವಚಶ್ಚಿಂತಯಂತೀ ಸುದುಃಖಿತಾ||

ಆ ನೃಪಾತ್ಮಜೆಯು ದುಃಖಿತಳಾಗಿ ನಾರದನ ವಚನಗಳ ಕುರಿತು ಚಿಂತಿಸುತ್ತಾ ಹೇಳಿದ್ದ ಆ ಕಾಲ ಮುಹೂರ್ತಗಳಿಗೆ ಕಾಯುತ್ತಿದ್ದಳು.

03280015a ತತಸ್ತು ಶ್ವಶ್ರೂಶ್ವಶುರಾವೂಚತುಸ್ತಾಂ ನೃಪಾತ್ಮಜಾಂ|

03280015c ಏಕಾಂತಸ್ಥಮಿದಂ ವಾಕ್ಯಂ ಪ್ರೀತ್ಯಾ ಭರತಸತ್ತಮ||

ಭರತಸತ್ತಮ! ಅನಂತರ ಹೀಗೆ ಏಕಾಂತದಲ್ಲಿ ಕುಳಿತಿದ್ದ ನೃಪತಾತ್ಮಜೆಗೆ ಅತ್ತೆ ಮಾವಂದಿರು ಪ್ರೀತಿಯಿಂದ ಈ ಮಾತುಗಳನ್ನಾಡಿದರು.

03280016 ಶ್ವಶುರಾವೂಚತುಃ|

03280016a ವ್ರತೋ ಯಥೋಪದಿಷ್ಟೋಽಯಂ ಯಥಾವತ್ಪಾರಿತಸ್ತ್ವಯಾ|

03280016c ಆಹಾರಕಾಲಃ ಸಂಪ್ರಾಪ್ತಃ ಕ್ರಿಯತಾಂ ಯದನಂತರಂ||

ಮಾವನು ಹೇಳಿದನು: “ವ್ರತದ ಕಠಿಣ ನಿಯಮಗಳನ್ನು ಯಥಾವತ್ತಾಗಿ ಪಾಲಿಸಿ ಅದನ್ನು ಸಮಾಪ್ತಿಗೊಳಿಸಿದ್ದೀಯೆ. ಈಗ ನೀನು ಆಹಾರವನ್ನು ಸೇವಿಸುವ ಕಾಲ ಬಂದಿದೆ. ನಂತರದ್ದನ್ನು ಮಾಡುವಂಥವಳಾಗು.”

03280017 ಸಾವಿತ್ರ್ಯುವಾಚ|

03280017a ಅಸ್ತಂ ಗತೇ ಮಯಾದಿತ್ಯೇ ಭೋಕ್ತವ್ಯಂ ಕೃತಕಾಮಯಾ|

03280017c ಏಷ ಮೇ ಹೃದಿ ಸಂಕಲ್ಪಃ ಸಮಯಶ್ಚ ಕೃತೋ ಮಯಾ||

ಸಾವಿತ್ರಿಯು ಹೇಳಿದಳು: “ಸೂರ್ಯಾಸ್ತವಾದ ಮತ್ತು ನನ್ನ ಆಸೆಯು ಪೂರೈಸಿದ ನಂತರವೇ ನಾನು ಆಹಾರ ಸೇವಿಸುತ್ತೇನೆ ಎಂದು ಹೃದಯದಲ್ಲಿ ಸಂಕಲ್ಪಿಸಿಕೊಂಡಿದ್ದೇನೆ. ಅದರಂತೆಯೇ ನಡೆದುಕೊಳ್ಳುತ್ತೇನೆ.””

03280018 ಮಾರ್ಕಂಡೇಯ ಉವಾಚ|

03280018a ಏವಂ ಸಂಭಾಷಮಾಣಾಯಾಃ ಸಾವಿತ್ರ್ಯಾ ಭೋಜನಂ ಪ್ರತಿ|

03280018c ಸ್ಕಂಧೇ ಪರಶುಮಾದಾಯ ಸತ್ಯವಾನ್ಪ್ರಸ್ಥಿತೋ ವನಂ||

ಮಾರ್ಕಂಡೇಯನು ಹೇಳಿದನು: “ಭೋಜನದ ಕುರಿತು ಸಾವಿತ್ರಿಯು ಹೀಗೆ ಹೇಳುತ್ತಿರಲು ಸತ್ಯವಾನನು ಹೆಗಲಮೇಲೆ ಕೊಡಲಿಯನ್ನು ಹಾಕಿಕೊಂಡು ಕಾಡಿಗೆ ಹೊರಟನು.

03280019a ಸಾವಿತ್ರೀ ತ್ವಾಹ ಭರ್ತಾರಂ ನೈಕಸ್ತ್ವಂ ಗಂತುಮರ್ಹಸಿ|

03280019c ಸಹ ತ್ವಯಾಗಮಿಷ್ಯಾಮಿ ನ ಹಿ ತ್ವಾಂ ಹಾತುಮುತ್ಸಹೇ||

ಸಾವಿತ್ರಿಯು ಗಂಡನನ್ನು ತಡೆದು “ನೀನೊಬ್ಬನೇ ಹೋಗಬಾರದು. ನಾನೂ ಕೂಡ ನಿನ್ನೊಡನೆ ಬರುತ್ತೇನೆ. ನಿನ್ನನ್ನು ಒಬ್ಬನನ್ನೇ ಬಿಡಬಾರದು” ಎಂದಳು.

03280020 ಸತ್ಯವಾನುವಾಚ|

03280020a ವನಂ ನ ಗತಪೂರ್ವಂ ತೇ ದುಃಖಃ ಪಂಥಾಶ್ಚ ಭಾಮಿನಿ|

03280020c ವ್ರತೋಪವಾಸಕ್ಷಾಮಾ ಚ ಕಥಂ ಪದ್ಭ್ಯಾಂ ಗಮಿಷ್ಯಸಿ||

ಸತ್ಯವಾನನು ಹೇಳಿದನು: “ಭಾಮಿನೀ! ಈ ಮೊದಲು ನೀನು ಕಾಡಿಗೆ ಹೋಗಿಲ್ಲ ಮತ್ತು ಅಲ್ಲಿಯ ದಾರಿಯು ದುಃಖತರವಾದುದು. ಮೇಲಾಗಿ ವ್ರತೋಪವಾಸಗಳಿಂದ ನೀನು ಬಳಲಿದ್ದೀಯೆ. ಹೇಗೆ ಕಾಲ್ನಡುಗೆಯಲ್ಲಿ ಹೋಗಬಲ್ಲೆ?”

03280021 ಸಾವಿತ್ರ್ಯುವಾಚ|

03280021a ಉಪವಾಸಾನ್ನ ಮೇ ಗ್ಲಾನಿರ್ನಾಸ್ತಿ ಚಾಪಿ ಪರಿಶ್ರಮಃ|

03280021c ಗಮನೇ ಚ ಕೃತೋತ್ಸಾಹಾಂ ಪ್ರತಿಷೇದ್ಧುಂ ನ ಮಾರ್ಹಸಿ||

ಸಾವಿತ್ರಿಯು ಹೇಳಿದಳು: “ಈ ಉಪವಾಸದಿಂದ ನಾನು ಬಳಲಲಿಲ್ಲ ಮತ್ತು ಬಲಹೀನಳೂ ಆಗಿಲ್ಲ. ನಿನ್ನೊಡನೆ ಬರುತ್ತಿದ್ದೀನಲ್ಲ ಎಂಬ ಉತ್ಸಾಹವಿದೆ. ನನ್ನ ಈ ಬಯಕೆಯನ್ನು ನಿರಾಕರಿಸದಿರು.”

03280022 ಸತ್ಯವಾನುವಾಚ|

03280022a ಯದಿ ತೇ ಗಮನೋತ್ಸಾಹಃ ಕರಿಷ್ಯಾಮಿ ತವ ಪ್ರಿಯಂ|

03280022c ಮಮ ತ್ವಾಮಂತ್ರಯ ಗುರೂನ್ನ ಮಾಂ ದೋಷಃ ಸ್ಪೃಶೇದಯಂ||

ಸತ್ಯವಾನನು ಹೇಳಿದನು: “ಬರಲು ನಿನಗೆ ಅಷ್ಟೊಂದು ಉತ್ಸಾಹವಿದೆಯೆಂದಾದರೆ ನಿನಗಿಷ್ಟವಾದಂತೆ ಮಾಡುತ್ತೇನೆ. ನಾನು ನಿನ್ನನ್ನು ಬರಲು ಹೇಳಿಲ್ಲ. ಹಿರಿಯರ ಅಪ್ಪಣೆಯನ್ನು ಪಡೆದು ಬಾ.””

03280023 ಮಾರ್ಕಂಡೇಯ ಉವಾಚ|

03280023a ಸಾಭಿಗಮ್ಯಾಬ್ರವೀಚ್ಚ್ವಶ್ರೂಂ ಶ್ವಶುರಂ ಚ ಮಹಾವ್ರತಾ|

03280023c ಅಯಂ ಗಚ್ಚತಿ ಮೇ ಭರ್ತಾ ಫಲಾಹಾರೋ ಮಹಾವನಂ||

ಮಾರ್ಕಂಡೇಯನು ಹೇಳಿದನು: “ಆ ಮಹಾವ್ರತೆಯು ತನ್ನ ಅತ್ತೆ ಮಾವಂದಿರ ಬಳಿ ಹೋಗಿ “ನನ್ನ ಪತಿಯು ಹಣ್ಣುಗಳನ್ನು ತರಲು ಇದೋ ಮಹಾವನಕ್ಕೆ ಹೋಗುತ್ತಿದ್ದಾನೆ.

03280024a ಇಚ್ಚೇಯಮಭ್ಯನುಜ್ಞಾತುಮಾರ್ಯಯಾ ಶ್ವಶುರೇಣ ಚ|

03280024c ಅನೇನ ಸಹ ನಿರ್ಗಂತುಂ ನ ಹಿ ಮೇ ವಿರಹಃ ಕ್ಷಮಃ||

ತಾಯಿ ಮತ್ತು ಮಾವನು ಅನುಜ್ಞೆಯನ್ನಿತ್ತರೆ ಅವನ ಸಹಿತ ಹೋಗಲು ಇಚ್ಛಿಸುತ್ತೇನೆ. ಅವನ ವಿರಹವನ್ನು ಒಂದು ಕ್ಷಣವೂ ಸಹಿಸಲಾರೆ.

03280025a ಗುರ್ವಗ್ನಿಹೋತ್ರಾರ್ಥಕೃತೇ ಪ್ರಸ್ಥಿತಶ್ಚ ಸುತಸ್ತವ|

03280025c ನ ನಿವಾರ್ಯೋ ನಿವಾರ್ಯಃ ಸ್ಯಾದನ್ಯಥಾ ಪ್ರಸ್ಥಿತೋ ವನಂ||

ಗುರುಗಳ ಅಗ್ನಿಹೋತ್ರಕ್ಕಾಗಿ ಸಮಿತ್ತುಗಳನ್ನು ತರಲು ನಿಮ್ಮ ಮಗನು ಹೊರಟಿದ್ದಾನೆ. ಅವನು ಬೇರೆ ಯಾವುದೇ ಕಾರಣಕ್ಕಾಗಿ ಕಾಡಿಗೆ ಹೋಗುತ್ತಿದ್ದಾನೆಂದಾಗಿದ್ದರೆ ನಾನು ಅವನನ್ನು ತಡೆಯುತ್ತಿದ್ದೆ.

03280026a ಸಂವತ್ಸರಃ ಕಿಂ ಚಿದೂನೋ ನ ನಿಷ್ಕ್ರಾಂತಾಹಮಾಶ್ರಮಾತ್|

03280026c ವನಂ ಕುಸುಮಿತಂ ದ್ರಷ್ಟುಂ ಪರಂ ಕೌತೂಹಲಂ ಹಿ ಮೇ||

ಅಲ್ಲದೇ ಸುಮಾರು ಒಂದು ವರ್ಷವಾಗಲಿಕ್ಕೆ ಬಂದಿದೆ ನಾನು ಈ ಆಶ್ರಮದ ಹೊರಗೇ ಹೋಗಲಿಲ್ಲ. ವನಗಳಲ್ಲಿನ ಹೂವುಗಳನ್ನು ನೋಡುವ ಪರಮ ಕುತೂಹಲವು ನನಗುಂಟಾಗಿದೆ.”

03280027 ದ್ಯುಮತ್ಸೇನ ಉವಾಚ|

03280027a ಯತಃ ಪ್ರಭೃತಿ ಸಾವಿತ್ರೀ ಪಿತ್ರಾ ದತ್ತಾ ಸ್ನುಷಾ ಮಮ|

03280027c ನಾನಯಾಭ್ಯರ್ಥನಾಯುಕ್ತಮುಕ್ತಪೂರ್ವಂ ಸ್ಮರಾಮ್ಯಹಂ||

ದ್ಯುಮತ್ಸೇನನು ಹೇಳಿದನು: “ಸಾವಿತ್ರೀ! ನಿನ್ನ ತಂದೆಯು ನನಗೆ ಸೊಸೆಯಾಗಿ ಕೊಟ್ಟಾಗಿನಿಂದ ಇದೂವರೆಗೆ ನನ್ನಿಂದ ಏನನ್ನಾದರೂ ಕೇಳಿದ್ದುದು ಇಲ್ಲ. ನನಗೆ ನೆನಪಿದೆ.

03280028a ತದೇಷಾ ಲಭತಾಂ ಕಾಮಂ ಯಥಾಭಿಲಷಿತಂ ವಧೂಃ|

03280028c ಅಪ್ರಮಾದಶ್ಚ ಕರ್ತವ್ಯಃ ಪುತ್ರಿ ಸತ್ಯವತಃ ಪಥಿ||

ಆದುದರಿಂದ ವಧೂ! ನೀನು ಬಯಸಿದುದನ್ನು ಪಡೆ. ಪುತ್ರಿ! ಸತ್ಯವಾನನೊಂದಿಗೆ ದಾರಿಯಲ್ಲಿ ಎಚ್ಚರಿಕೆಯಿಂದ ಹೋಗು.””

03280029 ಮಾರ್ಕಂಡೇಯ ಉವಾಚ|

03280029a ಉಭಾಭ್ಯಾಮಭ್ಯನುಜ್ಞಾತಾ ಸಾ ಜಗಾಮ ಯಶಸ್ವಿನೀ|

03280029c ಸಹ ಭರ್ತ್ರಾ ಹಸಂತೀವ ಹೃದಯೇನ ವಿದೂಯತಾ||

ಮಾರ್ಕಂಡೇಯನು ಹೇಳಿದನು: “ಅವರಿಬ್ಬರಿಂದಲೂ ಅಪ್ಪಣೆಯನ್ನು ಪಡೆದು ಆ ಯಶಸ್ವಿನಿಯು ಗಂಡನೊಂದಿಗೆ ಹೊರಟಳು. ನೋಡಲು ಸಂತೋಷದಿಂದ ನಗುತ್ತಿರುವಂತೆ ಕಂಡುಬಂದರೂ ಅವಳು ಹೃದಯದಲ್ಲಿ ಬಹುದುಃಖಿತಳಾಗಿದ್ದಳು.

03280030a ಸಾ ವನಾನಿ ವಿಚಿತ್ರಾಣಿ ರಮಣೀಯಾನಿ ಸರ್ವಶಃ|

03280030c ಮಯೂರರವಘುಷ್ಟಾನಿ ದದರ್ಶ ವಿಪುಲೇಕ್ಷಣಾ||

ಆ ವಿಪುಲೇಕ್ಷಣೆಯು ಸಂತೋಷದಿಂದ ನಲಿಯುತ್ತಿದ್ದ ನವಿಲುಗಳಿಂದ ತುಂಬಿದ ಆ ವಿಚಿತ್ರ ಮತ್ತು ರಮಣೀಯ ವನಗಳನ್ನೆಲ್ಲ ನೋಡಿದಳು.

03280031a ನದೀಃ ಪುಣ್ಯವಹಾಶ್ಚೈವ ಪುಷ್ಪಿತಾಂಶ್ಚ ನಗೋತ್ತಮಾನ್|

03280031c ಸತ್ಯವಾನಾಹ ಪಶ್ಯೇತಿ ಸಾವಿತ್ರೀಂ ಮಧುರಾಕ್ಷರಂ||

ಹರಿಯುತ್ತಿದ್ದ ಪುಣ್ಯನದಿಗಳನ್ನು ಎತ್ತರ ಗಿರಿಗಳನ್ನೂ ಸತ್ಯವಾನನು ನೋಡು ನೋಡು ಎಂದು ಸಾವಿತ್ರಿಗೆ ಮಧುರಾಕ್ಷರಗಳಿಂದ ಹೇಳುತ್ತಿದ್ದನು.

03280032a ನಿರೀಕ್ಷಮಾಣಾ ಭರ್ತಾರಂ ಸರ್ವಾವಸ್ಥಮನಿಂದಿತಾ|

03280032c ಮೃತಮೇವ ಹಿ ತಂ ಮೇನೇ ಕಾಲೇ ಮುನಿವಚಃ ಸ್ಮರನ್||

ಆ ಅನಿಂದಿತೆಯು ಮುನಿಯ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ಮೃತ್ಯುವು ಬಂದಾಗ ತನಗೆ ತಿಳಿಯಬೇಕು ಎಂದು ಗಂಡನ ಸರ್ವಾವಸ್ಥೆಗಳನ್ನೂ ನಿರೀಕ್ಷಿಸುತ್ತಿದ್ದಳು.

03280033a ಅನುವರ್ತತೀ ತು ಭರ್ತಾರಂ ಜಗಾಮ ಮೃದುಗಾಮಿನೀ|

03280033c ದ್ವಿಧೇವ ಹೃದಯಂ ಕೃತ್ವಾ ತಂ ಚ ಕಾಲಮವೇಕ್ಷತೀ||

ಹೃದಯವನ್ನು ಎರಡು ಮಾಡಿಕೊಂಡು - ಒಂದನ್ನು ಅವನ ಮೇಲಿರಿಸಿ ಇನ್ನೊಂದರಿಂದ ಕಾಲವನ್ನು ಕಾಯುತ್ತಾ - ಮೆಲ್ಲನೆ ಗಂಡನನ್ನು ಅನುಸರಿಸಿ ನಡೆದಳು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ಪತಿವ್ರತಾಮಹಾತ್ಮ್ಯೇ ಸಾವಿತ್ರ್ಯುಪಾಖ್ಯಾನೇ ಅಶೀತ್ಯಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ಪತಿವ್ರತಾಮಹಾತ್ಮ್ಯೆಯಲ್ಲಿ ಸಾವಿತ್ರ್ಯುಪಾಖ್ಯಾನದಲ್ಲಿ ಇನ್ನೂರಾಎಂಭತ್ತನೆಯ ಅಧ್ಯಾಯವು.

Image result for indian motifs lilies

Kannada translation of Draupadiharana Parva, by Chapter:
  1. ಜಯದ್ರಥಾಗಮನ
  2. ಕೋಟಿಕಾಸ್ಯಪ್ರಶ್ನಃ
  3. ದ್ರೌಪದೀವಾಕ್ಯ
  4. ಜಯದ್ರಥದ್ರೌಪದೀಸಂವಾದ
  5. ದ್ರೌಪದೀಹರಣ
  6. ಪಾರ್ಥಾಗಮನ
  7. ದ್ರೌಪದೀವಾಕ್ಯ
  8. ಜಯದ್ರಥಪಲಾಯನ
  9. ಜಯದ್ರಥವಿಮೋಕ್ಷಣ
  10. ರಾಮೋಪಾಖ್ಯಾನ-ಯುಧಿಷ್ಠಿರಪ್ರಶ್ನಃ
  11. ರಾಮೋಪಾಖ್ಯಾನ-ರಾಮರಾವಣಯೋರ್ಜನ್ಮಕಥನ
  12. ರಾಮೋಪಾಖ್ಯಾನ-ರಾವಣಾದಿವರಪ್ರಾಪ್ತಿಃ
  13. ರಾಮೋಪಾಖ್ಯಾನ-ವಾನರಾದ್ಯುತ್ಪತ್ತಿಃ
  14. ರಾಮೋಪಾಖ್ಯಾನ-ರಾಮವನಾಭಿಗಮನ
  15. ರಾಮೋಪಾಖ್ಯಾನ-ಮಾರೀಚವಧ-ಸೀತಾಪಹರಣ
  16. ರಾಮೋಪಾಖ್ಯಾನ-ಕಬಂಧಹನನ
  17. ರಾಮೋಪಾಖ್ಯಾನ-ತ್ರಿಜಟಾಕೃತಸೀತಾಸಂವಾದಃ
  18. ರಾಮೋಪಾಖ್ಯಾನ-ಸೀತಾರಾವಣಸಂವಾದಃ
  19. ರಾಮೋಪಾಖ್ಯಾನ-ಹನುಮಪ್ರತ್ಯಾಗಮನ
  20. ರಾಮೋಪಾಖ್ಯಾನ-ಸೇತುಬಂಧನ
  21. ರಾಮೋಪಾಖ್ಯಾನ-ಲಂಕಾಪ್ರವೇಶ
  22. ರಾಮೋಪಾಖ್ಯಾನ-ರಾಮರಾವಣದ್ವಂದ್ವಯುದ್ಧಃ
  23. ರಾಮೋಪಾಖ್ಯಾನ-ಕುಂಭಕರ್ಣನಿರ್ಗಮನ
  24. ರಾಮೋಪಾಖ್ಯಾನ-ಕುಂಬಕರ್ಣಾದಿವಧಃ
  25. ರಾಮೋಪಾಖ್ಯಾನ-ಇಂದ್ರಜಿದ್ಯುದ್ಧಃ
  26. ರಾಮೋಪಾಖ್ಯಾನ-ಇಂದ್ರಜಿದ್ವಧಃ
  27. ರಾಮೋಪಾಖ್ಯಾನ-ರಾವಣವಧಃ
  28. ರಾಮೋಪಾಖ್ಯಾನ-ಶ್ರೀರಾಮಾಭಿಷೇಕ
  29. ರಾಮೋಪಾಖ್ಯಾನ-ಯುಧಿಷ್ಠಿರಾಶ್ವಾಸನ
  30. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೧
  31. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೨
  32. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೩
  33. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೪
  34. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೫
  35. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೬
  36. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೭

Comments are closed.