Aranyaka Parva: Chapter 262

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೬೨

ಸೀತಾಪಹರಣ

ವಿಷಯವನ್ನು ತಿಳಿದ ಮಾರೀಚನು “ರಾಮನನ್ನು ಕಾಡುವುದನ್ನು ಬಿಟ್ಟು ಬಿಡು” ಎಂದು ರಾವಣನಿಗೆ ಹೇಳಿದುದು (೧-೭). ರಾವಣನು ಕುಪಿತನಾಗಿ ಕೊಲ್ಲುತ್ತೇನೆಂದು ಗದರಿಸಲು ಮಾರೀಚನು “ಮರಣವು ಅವಶ್ಯವಾಗಿರುವಾಗ ಶ್ರೇಷ್ಠನಾದವನಿಂದ ಮರಣಹೊಂದುವುದೇ ಲೇಸು” ಎಂದು ಅವನ ಉಪಾಯಕ್ಕೆ ಒಪ್ಪಿಕೊಳ್ಳುವುದು (೮-೧೪). ಮಾರೀಚನು ಜಿಂಕೆಯ ರೂಪವನ್ನು ಧರಿಸಿ ವೈದೇಹಿಗೆ ಕಾಣಿಸಿಕೊಂಡಾಗ ವಿಧಿಯಿಂದ ಪ್ರಚೋದಿತಳಾದ ಅವಳು ರಾಮನನ್ನು ಅದರ ಹಿಂದೆ ಕಳುಹಿಸುವುದು; ರಾಮನು ಅವನು ನಿಶಾಚರನೆಂದು ತಿಳಿದು ಮಾರೀಚನನ್ನು ಕೊಂದುದು; ಸಾಯುವಾಗ ಮಾರೀಚನು ರಾಮನ ಸ್ವರವನ್ನು ಮಾಡಿಕೊಂಡು “ಹಾ ಸೀತೇ!  ಲಕ್ಷ್ಮಣಾ!” ಎಂದು ಆರ್ತಸ್ವರದಲ್ಲಿ ಕೂಗಿದುದು; ಸೀತೆಯು ತನ್ನ ಕಾವಲಿನಲ್ಲಿದ್ದ ಲಕ್ಷ್ಮಣನನ್ನು ಶಂಕಿಸಿ ಕಠೋರವಾಗಿ ಮಾತನಾಡಿ ರಾಮನ ಸಹಾಯಕ್ಕೆಂದು ಒತ್ತಾಯಿಸಿ ಕಳುಹಿಸಿದುದು (೧೫-೨೯). ಅದೇ ಸಮಯದಲ್ಲಿ ರಾವಣನು ಯತಿವೇಷದಲ್ಲಿ ಸೀತೆಗೆ ಕಾಣಿಸಿಕೊಂಡು, ಪ್ರತಿಭಟಿಸುತ್ತಿದ್ದರೂ ಅವಳ ಕೇಶವನ್ನು ಹಿಡಿದೆಳೆದು ಆಕಾಶಕ್ಕೆ ಹಾರಿದುದು (೩೦-೪೧).

03262001 ಮಾರ್ಕಂಡೇಯ ಉವಾಚ|

03262001a ಮಾರೀಚಸ್ತ್ವಥ ಸಂಭ್ರಾಂತೋ ದೃಷ್ಟ್ವಾ ರಾವಣಮಾಗತಂ|

03262001c ಪೂಜಯಾಮಾಸ ಸತ್ಕಾರೈಃ ಫಲಮೂಲಾದಿಭಿಸ್ತಥಾ||

ಮಾರ್ಕಂಡೇಯನು ಹೇಳಿದನು: “ರಾವಣನು ಬಂದಿದುದನ್ನು ನೋಡಿ ಸಂಭ್ರಾಂತನಾದ ಮಾರೀಚನು ಅವನನ್ನು ಫಲ ಮೂಲಗಳಿಂದ ಸತ್ಕರಿಸಿ ಪೂಜಿಸಿದನು.

03262002a ವಿಶ್ರಾಂತಂ ಚೈನಮಾಸೀನಮನ್ವಾಸೀನಃ ಸ ರಾಕ್ಷಸಃ|

03262002c ಉವಾಚ ಪ್ರಶ್ರಿತಂ ವಾಕ್ಯಂ ವಾಕ್ಯಜ್ಞೋ ವಾಕ್ಯಕೋವಿದಂ||

ಕುಳಿತು ವಿಶ್ರಾಂತಿ ಪಡೆದ ಅತಿಥಿಯ ಬಳಿಯೇ ಕುಳಿತಿದ್ದ ಆ ರಾಕ್ಷಸನು ಒಬ್ಬ ಮಾತುಗಳನ್ನರಿತವನು ಇನ್ನೊಬ್ಬ ವಾಕ್ಯಕೋವಿದನಿಗೆ ಹೇಗೋ ಹಾಗೆ ಈ ಸಂಸ್ಕಾರಯುಕ್ತ ಮಾತುಗಳನ್ನಾಡಿದನು:

03262003a ನ ತೇ ಪ್ರಕೃತಿಮಾನ್ವರ್ಣಃ ಕಚ್ಚಿತ್ ಕ್ಷೇಮಂ ಪುರೇ ತವ|

03262003c ಕಚ್ಚಿತ್ಪ್ರಕೃತಯಃ ಸರ್ವಾ ಭಜಂತೇ ತ್ವಾಂ ಯಥಾ ಪುರಾ||

“ನಿನ್ನಲ್ಲಿ ಸ್ವಾಭಾವಿಕವಾದ ಬಣ್ಣವಿಲ್ಲ! ನಿನ್ನ ಪುರದಲ್ಲಿ ಕ್ಷೇಮ ತಾನೆ? ನಿನ್ನ ಪ್ರಜೆಗಳೆಲ್ಲರೂ ಮೊದಲಿನಂತೆಯೇ ನಿನ್ನನ್ನು ಪ್ರೀತಿಸುತ್ತಿದ್ದಾರೆಯೇ?

03262004a ಕಿಮಿಹಾಗಮನೇ ಚಾಪಿ ಕಾರ್ಯಂ ತೇ ರಾಕ್ಷಸೇಶ್ವರ|

03262004c ಕೃತಮಿತ್ಯೇವ ತದ್ವಿದ್ಧಿ ಯದ್ಯಪಿ ಸ್ಯಾತ್ಸುದುಷ್ಕರಂ||

ರಾಕ್ಷಸೇಶ್ವರ! ಯಾವ ಕೆಲಸವು ನಿನ್ನನ್ನು ಇಲ್ಲಿಗೆ ಕರೆತಂದಿದೆ? ಎಷ್ಟೇ ದುಷ್ಕರವಾಗಿದ್ದರೂ ಆ ಕಾರ್ಯವಾಯಿತೆಂದು ತಿಳಿ.”

03262005a ಶಶಂಸ ರಾವಣಸ್ತಸ್ಮೈ ತತ್ಸರ್ವಂ ರಾಮಚೇಷ್ಟಿತಂ|

03262005c ಮಾರೀಚಸ್ತ್ವಬ್ರವೀಚ್ಚ್ರುತ್ವಾ ಸಮಾಸೇನೈವ ರಾವಣಂ||

ರಾವಣನು ಅವನಿಗೆ ರಾಮನು ಮಾಡಿದ ಎಲ್ಲವನ್ನೂ ವಿವರಿಸಿದನು. ಅದನ್ನು ಕೇಳಿ ಮಾರೀಚನು ಸಂಕ್ಷಿಪ್ತವಾಗಿ ರಾವಣನಿಗೆ ಹೇಳಿದನು:

03262006a ಅಲಂ ತೇ ರಾಮಮಾಸಾದ್ಯ ವೀರ್ಯಜ್ಞೋ ಹ್ಯಸ್ಮಿ ತಸ್ಯ ವೈ|

03262006c ಬಾಣವೇಗಂ ಹಿ ಕಸ್ತಸ್ಯ ಶಕ್ತಃ ಸೋಢುಂ ಮಹಾತ್ಮನಃ||

“ರಾಮನನ್ನು ಕಾಡುವುದನ್ನು ಬಿಟ್ಟುಬಿಡು. ಯಾಕೆಂದರೆ ಅವನ ವೀರ್ಯವನ್ನು ನಾನು ತಿಳಿದಿದ್ದೇನೆ. ಆ ಮಹಾತ್ಮನ ಬಾಣಗಳ ವೇಗವನ್ನು ಯಾರುತಾನೇ ಸಹಿಸಲು ಸಾಧ್ಯ?

03262007a ಪ್ರವ್ರಜ್ಯಾಯಾಂ ಹಿ ಮೇ ಹೇತುಃ ಸ ಏವ ಪುರುಷರ್ಷಭಃ|

03262007c ವಿನಾಶಮುಖಮೇತತ್ತೇ ಕೇನಾಖ್ಯಾತಂ ದುರಾತ್ಮನಾ||

ಆ ಪುರುಷರ್ಷಭನೇ ನಾನು ಈ ರೀತಿ ತಾಪಸಿಯಾಗಲು ಕಾರಣ. ಯಾವ ದುರಾತ್ಮನು ತಾನೇ ನಿನಗೆ ವಿನಾಶದ ದಾರಿಯನ್ನು ಹೇಳಿಕೊಟ್ಟರು?”

03262008a ತಮುವಾಚಾಥ ಸಕ್ರೋಧೋ ರಾವಣಃ ಪರಿಭರ್ತ್ಸಯನ್|

03262008c ಅಕುರ್ವತೋಽಸ್ಮದ್ವಚನಂ ಸ್ಯಾನ್ಮೃತ್ಯುರಪಿ ತೇ ಧ್ರುವಂ||

ಅವನನ್ನು ಕೇಳಿದ ರಾವಣನು ಸಂಕೃದ್ಧನಾಗಿ ಕೂಗಿದನು: “ನನ್ನ ಮಾತುಗಳನ್ನು ನಡೆಸಿಕೊಡದಿದ್ದರೆ ನೀನು ಸಾಯುವುದು ಖಂಡಿತ!”

03262009a ಮಾರೀಚಶ್ಚಿಂತಯಾಮಾಸ ವಿಶಿಷ್ಟಾನ್ಮರಣಂ ವರಂ|

03262009c ಅವಶ್ಯಂ ಮರಣೇ ಪ್ರಾಪ್ತೇ ಕರಿಷ್ಯಾಮ್ಯಸ್ಯ ಯನ್ಮತಂ||

ಮಾರೀಚನು ಯೋಚಿಸಿದನು: “ಮರಣವು ಅವಶ್ಯವಾಗಿರುವಾಗ ಶ್ರೇಷ್ಠನಾದವನಿಂದ ಮರಣಹೊಂದುವುದೇ ಲೇಸು. ಇವನು ಹೇಳಿದಂತೆ ಮಾಡುತ್ತೇನೆ.”

03262010a ತತಸ್ತಂ ಪ್ರತ್ಯುವಾಚಾಥ ಮಾರೀಚೋ ರಾಕ್ಷಸೇಶ್ವರಂ|

03262010c ಕಿಂ ತೇ ಸಾಹ್ಯಂ ಮಯಾ ಕಾರ್ಯಂ ಕರಿಷ್ಯಾಮ್ಯವಶೋಽಪಿ ತತ್||

ಆಗ ಮಾರೀಚನು ರಾಕ್ಷಸೇಶ್ವರನಿಗೆ ಉತ್ತರಿಸಿದನು: “ನಾನು ನಿನಗೆ ಯಾವ ರೀತಿಯ ಸಹಾಯವನ್ನು ಮಾಡಲಿ? ನಾನು ಅವಶ್ಯವಾಗಿ ಮಾಡುತ್ತೇನೆ.”

03262011a ತಮಬ್ರವೀದ್ದಶಗ್ರೀವೋ ಗಚ್ಚ ಸೀತಾಂ ಪ್ರಲೋಭಯ|

03262011c ರತ್ನಶೃಂಗೋ ಮೃಗೋ ಭೂತ್ವಾ ರತ್ನಚಿತ್ರತನೂರುಹಃ||

ದಶಗ್ರೀವನು ಅವನಿಗೆ ಹೇಳಿದನು: “ಹೋಗು! ರತ್ನಚಿತ್ರಗಳ ದೇಹದ ರತ್ನದ ಕೋಡಿನ ಜಿಂಕೆಯಾಗಿ ಸೀತೆಯನ್ನು ಪ್ರಲೋಭಿಸು.

03262012a ಧ್ರುವಂ ಸೀತಾ ಸಮಾಲಕ್ಷ್ಯ ತ್ವಾಂ ರಾಮಂ ಚೋದಯಿಷ್ಯತಿ|

03262012c ಅಪಕ್ರಾಂತೇ ಚ ಕಾಕುತ್ಸ್ಥೇ ಸೀತಾ ವಶ್ಯಾ ಭವಿಷ್ಯತಿ||

ನಿನ್ನನ್ನು ನೋಡಿದ ಸೀತೆಯು ಖಂಡಿತವಾಗಿಯೂ ರಾಮನನ್ನು ಕಳುಹಿಸುತ್ತಾಳೆ. ಕಾಕುತ್ಸ್ಥನು ಹೋದನಂತರ ಸೀತೆಯು ನನ್ನ ವಶಳಾಗುತ್ತಾಳೆ.

03262013a ತಾಮಾದಾಯಾಪನೇಷ್ಯಾಮಿ ತತಃ ಸ ನ ಭವಿಷ್ಯತಿ|

03262013c ಭಾರ್ಯಾವಿಯೋಗಾದ್ದುರ್ಬುದ್ಧಿರೇತತ್ಸಾಹ್ಯಂ ಕುರುಷ್ವ ಮೇ||

ಅವಳನ್ನು ಎತ್ತಿಕೊಂಡು ಹೋಗುತ್ತೇನೆ. ಆಗ ಆ ದುರ್ಬುದ್ಧಿಯು ಭಾರ್ಯಾವಿಯೋಗದಿಂದ ಇಲ್ಲವಾಗುತ್ತಾನೆ. ಈ ಸಹಾಯವನ್ನು ನನಗೆ ಮಾಡಿಕೊಡು.”

03262014a ಇತ್ಯೇವಮುಕ್ತೋ ಮಾರೀಚಃ ಕೃತ್ವೋದಕಮಥಾತ್ಮನಃ|

03262014c ರಾವಣಂ ಪುರತೋ ಯಾಂತಮನ್ವಗಚ್ಚತ್ಸುದುಃಖಿತಃ||

ಇದನ್ನು ಕೇಳಿದ ಮಾರೀಚನು ತನ್ನ ಉದಕ ಕ್ರಿಯೆಗಳನ್ನು ಮಾಡಿಕೊಂಡು ಸುದುಃಖಿತನಾಗಿ ಮುಂದೆ ಸಾಗುತ್ತಿದ್ದ ರಾವಣನನ್ನು ಅನುಸರಿಸಿದನು.

03262015a ತತಸ್ತಸ್ಯಾಶ್ರಮಂ ಗತ್ವಾ ರಾಮಸ್ಯಾಕ್ಲಿಷ್ಟಕರ್ಮಣಃ|

03262015c ಚಕ್ರತುಸ್ತತ್ತಥಾ ಸರ್ವಮುಭೌ ಯತ್ಪೂರ್ವಮಂತ್ರಿತಂ||

ಅನಂತರ ಅವರೀರ್ವರೂ ಅಕ್ಷಿಷ್ಟಕರ್ಮಿ ರಾಮನ ಆಶ್ರಮಕ್ಕೆ ಹೋಗಿ ಮೊದಲೇ ಉಪಾಯಮಾಡಿಕೊಂಡಂತೆ ಎಲ್ಲವನ್ನು ನಡೆಸಿದರು.

03262016a ರಾವಣಸ್ತು ಯತಿರ್ಭೂತ್ವಾ ಮುಂಡಃ ಕುಂಡೀ ತ್ರಿದಂಡಧೃಕ್|

03262016c ಮೃಗಶ್ಚ ಭೂತ್ವಾ ಮಾರೀಚಸ್ತಂ ದೇಶಮುಪಜಗ್ಮತುಃ||

ರಾವಣನು ತಲೆಬೋಳಿಸಿಕೊಂಡ ಭಿಕ್ಷಾಪಾತ್ರೆ ಮತ್ತು ತ್ರಿಶೂಲಗಳನ್ನು ಹಿಡಿದ ಯತಿಯಾದನು ಮತ್ತು ಮಾರೀಚನು ಜಿಂಕೆಯಾಗಿ ಆ ಪ್ರದೇಶಕ್ಕೆ ಬಂದನು.

03262017a ದರ್ಶಯಾಮಾಸ ವೈದೇಹೀಂ ಮಾರೀಚೋ ಮೃಗರೂಪಧೃಕ್|

03262017c ಚೋದಯಾಮಾಸ ತಸ್ಯಾರ್ಥೇ ಸಾ ರಾಮಂ ವಿಧಿಚೋದಿತಾ||

ಮಾರೀಚನು ಜಿಂಕೆಯ ರೂಪವನ್ನು ಧರಿಸಿ ವೈದೇಹಿಗೆ ಕಾಣಿಸಿಕೊಂಡನು ಮತ್ತು ವಿಧಿಯಿಂದ ಪ್ರಚೋದಿತಳಾದ ಅವಳು ರಾಮನನ್ನು ಅದರ ಹಿಂದೆ ಕಳುಹಿಸಿದಳು.

03262018a ರಾಮಸ್ತಸ್ಯಾಃ ಪ್ರಿಯಂ ಕುರ್ವನ್ಧನುರಾದಾಯ ಸತ್ವರಃ|

03262018c ರಕ್ಷಾರ್ಥೇ ಲಕ್ಷ್ಮಣಂ ನ್ಯಸ್ಯ ಪ್ರಯಯೌ ಮೃಗಲಿಪ್ಸಯಾ||

ಅವಳಿಗೆ ಪ್ರಿಯವನ್ನುಂಟುಮಾಡಲು ರಾಮನು ತಕ್ಷಣವೇ ಧನುಸ್ಸನ್ನು ಹಿಡಿದು, ರಕ್ಷಣೆಗೆ ಲಕ್ಷ್ಮಣನನ್ನಿರಿಸಿ ಆ ಜಿಂಕೆಯನ್ನು ಹಿಡಿದು ತರಲು ಹೊರಟನು.

03262019a ಸ ಧನ್ವೀ ಬದ್ಧತೂಣೀರಃ ಖಡ್ಗಗೋಧಾಂಗುಲಿತ್ರವಾನ್|

03262019c ಅನ್ವಧಾವನ್ಮೃಗಂ ರಾಮೋ ರುದ್ರಸ್ತಾರಾಮೃಗಂ ಯಥಾ||

ಆ ಧನ್ವಿ ರಾಮನು ತೂಣೀರವನ್ನು ಕಟ್ಟಿ, ಖಡ್ಗ ಗೋಧಾಂಗುಲಿಗಳನ್ನು ಕಟ್ಟಿಕೊಂಡು ರುದ್ರನು ತಾರಾಮೃಗವನ್ನು ಅರಸಿದಂತೆ ಮೃಗವನ್ನು ಅಟ್ಟಿಕೊಂಡು ಹೋದನು.

03262020a ಸೋಽಂತರ್ಹಿತಃ ಪುನಸ್ತಸ್ಯ ದರ್ಶನಂ ರಾಕ್ಷಸೋ ವ್ರಜನ್|

03262020c ಚಕರ್ಷ ಮಹದಧ್ವಾನಂ ರಾಮಸ್ತಂ ಬುಬುಧೇ ತತಃ||

ಆ ರಾಕ್ಷಸನು ಒಮ್ಮೆ ಕಾಣಿಸಿಕೊಳ್ಳುತ್ತಿದ್ದನು. ಪುನಃ ಅದೃಶ್ಯನಾಗುತ್ತಿದ್ದನು. ಹೀಗೆ ಅವನು ರಾಮನನ್ನು ಬಹಳ ದೂರದವರೆಗೆ ಕೊಂಡೊಯ್ದನು.

03262021a ನಿಶಾಚರಂ ವಿದಿತ್ವಾ ತಂ ರಾಘವಃ ಪ್ರತಿಭಾನವಾನ್|

03262021c ಅಮೋಘಂ ಶರಮಾದಾಯ ಜಘಾನ ಮೃಗರೂಪಿಣಂ||

ಪ್ರತಿಭಾನ್ವಿತ ರಾಮನು ಅವನು ನಿಶಾಚರನೆಂದು ತಿಳಿದು ಅಮೋಘ ಶರವನ್ನು ತೆಗೆದು ಆ ಮೃಗರೂಪಿಯನ್ನು ಕೊಂದನು.

03262022a ಸ ರಾಮಬಾಣಾಭಿಹತಃ ಕೃತ್ವಾ ರಾಮಸ್ವರಂ ತದಾ|

03262022c ಹಾ ಸೀತೇ ಲಕ್ಷ್ಮಣೇತ್ಯೇವಂ ಚುಕ್ರೋಶಾರ್ತಸ್ವರೇಣ ಹ||

ರಾಮನ ಬಾಣದ ಹೊಡೆತವನ್ನು ತಿಂದ ಅವನು ರಾಮನ ಸ್ವರವನ್ನು ಮಾಡಿಕೊಂಡು “ಹಾ ಸೀತೇ!  ಲಕ್ಷ್ಮಣಾ!” ಎಂದು ಆರ್ತಸ್ವರದಲ್ಲಿ ಕೂಗಿದನು.

03262023a ಶುಶ್ರಾವ ತಸ್ಯ ವೈದೇಹೀ ತತಸ್ತಾಂ ಕರುಣಾಂ ಗಿರಂ|

03262023c ಸಾ ಪ್ರಾದ್ರವದ್ಯತಃ ಶಬ್ದಸ್ತಾಮುವಾಚಾಥ ಲಕ್ಷ್ಮಣಃ||

ಅವನ ಆ ಕರುಣಾಜನಕ ಸ್ವರವನ್ನು ಕೇಳಿದ ವೈದೇಹಿಯು ಶಬ್ಧವು ಬರುತ್ತಿರುವಲ್ಲಿಗೆ ಓಡಲು ಪ್ರಯತ್ನಿಸಿದಳು. ಆಗ ಲಕ್ಷ್ಮಣನು ಅವಳನ್ನು ತಡೆದನು:

03262024a ಅಲಂ ತೇ ಶಂಕಯಾ ಭೀರು ಕೋ ರಾಮಂ ವಿಷಹಿಷ್ಯತಿ|

03262024c ಮುಹೂರ್ತಾದ್ದ್ರಕ್ಷ್ಯಸೇ ರಾಮಮಾಗತಂ ತಂ ಶುಚಿಸ್ಮಿತೇ||

“ಭೀರು! ಈ ಭಯವನ್ನು ತೊರೆ! ಯಾರು ತಾನೇ ರಾಮನನ್ನು ಎದುರಿಸಿಯಾರು? ಶುಚಿಸ್ಮಿತೇ! ಸ್ವಲ್ಪ ಕಾಲ ಸೈರಿಸಿಕೋ! ರಾಮನು ಹಿಂದಿರುಗುವುದನ್ನು ಈಗಲೇ ನೋಡುತ್ತೀಯೆ!”

03262025a ಇತ್ಯುಕ್ತ್ವಾ ಸಾ ಪ್ರರುದತೀ ಪರ್ಯಶಂಕತ ದೇವರಂ|

03262025c ಹತಾ ವೈ ಸ್ತ್ರೀಸ್ವಭಾವೇನ ಶುದ್ಧಚಾರಿತ್ರಭೂಷಣಂ||

ಅವನ ಈ ಮಾತುಗಳಿಗೆ ಅವಳು ಸ್ತ್ರೀಸ್ವಭಾವದಿಂದ ಹತಳಾಗಿ, ಶುದ್ಧ ಚಾರಿತ್ರಭೂಷಣನಾಗಿದ್ದ ತನ್ನ ಬಾವನನ್ನು ಶಂಕಿಸಿದಳು.

03262026a ಸಾ ತಂ ಪರುಷಮಾರಬ್ಧಾ ವಕ್ತುಂ ಸಾಧ್ವೀ ಪತಿವ್ರತಾ|

03262026c ನೈಷ ಕಾಲೋ ಭವೇನ್ಮೂಢ ಯಂ ತ್ವಂ ಪ್ರಾರ್ಥಯಸೇ ಹೃದಾ||

ಆ ಸಾಧ್ವೀ ಪತಿವ್ರತೆಯು ಕ್ರೂರವಾದ ಈ ಮಾತುಗಳನ್ನಾಡಲು ಪ್ರಾರಂಭಿಸಿದಳು: “ಮೂಢ! ನಿನ್ನ ಹೃದಯದಲ್ಲಿ ಯಾವಾಗಲೂ ಇದ್ದುದನ್ನು ಬಯಸುವ ಕಾಲವು ಇದಲ್ಲ!

03262027a ಅಪ್ಯಹಂ ಶಸ್ತ್ರಮಾದಾಯ ಹನ್ಯಾಮಾತ್ಮಾನಮಾತ್ಮನಾ|

03262027c ಪತೇಯಂ ಗಿರಿಶೃಂಗಾದ್ವಾ ವಿಶೇಯಂ ವಾ ಹುತಾಶನಂ||

03262028a ರಾಮಂ ಭರ್ತಾರಮುತ್ಸೃಜ್ಯ ನ ತ್ವಹಂ ತ್ವಾಂ ಕಥಂ ಚನ|

03262028c ನಿಹೀನಮುಪತಿಷ್ಠೇಯಂ ಶಾರ್ದೂಲೀ ಕ್ರೋಷ್ಟುಕಂ ಯಥಾ||

ಇಂದು ನಾನು ಶಸ್ತ್ರವನ್ನು ತೆಗೆದುಕೊಂಡು ನನ್ನನ್ನು ನಾನೇ ಸಾಯಿಸಿಕೊಂಡೇನು ಅಥವಾ ಈ ಗಿರಿಶೃಂಗದ ಕೆಳಗಿ ಧುಮುಕಿಯೇನು ಅಥವಾ ಬೆಂಕಿಯನ್ನು ಪ್ರವೇಶಿಸಿಯೇನು. ಆದರೆ ಪತಿ ರಾಮನನ್ನು ಬಿಟ್ಟು ಶಾರ್ದೂಲಿಯು ನರಿಯನ್ನು ಹೇಗೋ ಹಾಗೆ ನಿನ್ನನ್ನು ಸೇರುವುದಿಲ್ಲ!”

03262029a ಏತಾದೃಶಂ ವಚಃ ಶ್ರುತ್ವಾ ಲಕ್ಷ್ಮಣಃ ಪ್ರಿಯರಾಘವಃ|

03262029c ಪಿಧಾಯ ಕರ್ಣೌ ಸದ್ವೃತ್ತಃ ಪ್ರಸ್ಥಿತೋ ಯೇನ ರಾಘವಃ|

03262029e ಸ ರಾಮಸ್ಯ ಪದಂ ಗೃಹ್ಯ ಪ್ರಸಸಾರ ಧನುರ್ಧರಃ||

ಈ ಘೋರ ಮಾತುಗಳನ್ನು ಕೇಳಿ, ರಾಘವನನ್ನು ಪ್ರೀತಿಸುತ್ತಿದ್ದ ಸತ್ಯವ್ರತ ಲಕ್ಷ್ಮಣನು ಕಿವಿಗಳನ್ನು ಮುಚ್ಚಿಕೊಂಡು ರಾಘವನಿದ್ದಲ್ಲಿಗೆ ಧನುಸ್ಸನ್ನು ಹಿಡಿದು ರಾಮನ ಮಾರ್ಗವನ್ನೇ ಹಿಡಿದು ಹೊರಟನು.

03262030a ಏತಸ್ಮಿನ್ನಂತರೇ ರಕ್ಷೋ ರಾವಣಃ ಪ್ರತ್ಯದೃಶ್ಯತ|

03262030c ಅಭವ್ಯೋ ಭವ್ಯರೂಪೇಣ ಭಸ್ಮಚ್ಚನ್ನ ಇವಾನಲಃ|

03262030e ಯತಿವೇಷಪ್ರತಿಚ್ಚನ್ನೋ ಜಿಹೀರ್ಷುಸ್ತಾಮನಿಂದಿತಾಂ||

ಇದರ ಅನಂತರ ರಾಕ್ಷಸ ರಾವಣನು ಭಸ್ಮದಿಂದ ಮುಚ್ಚಲ್ಪಟ್ಟ ಬೆಂಕಿಯಂತೆ ಸೌಮ್ಯರೂಪದಲ್ಲಿದ್ದರೂ ಸೌಮ್ಯನಾಗಿಲ್ಲದೇ, ಯತಿವೇಷದಲ್ಲಿ ಮರೆಮಾಡಿಕೊಂಡು ಆ ಅನಿಂದಿತೆಯನ್ನು ಅಪಹರಿಸುವ ಇಚ್ಛೆಯಿಂದ ಕಾಣಿಸಿಕೊಂಡನು.

03262031a ಸಾ ತಮಾಲಕ್ಷ್ಯ ಸಂಪ್ರಾಪ್ತಂ ಧರ್ಮಜ್ಞಾ ಜನಕಾತ್ಮಜಾ|

03262031c ನಿಮಂತ್ರಯಾಮಾಸ ತದಾ ಫಲಮೂಲಾಶನಾದಿಭಿಃ||

ಅವನು ಬಂದಿದುದನ್ನು ಕಂಡ ಆ ಧರ್ಮಜ್ಞೆ ಜನಕಾತ್ಮಜೆಯು ಫಲಮೂಲ ಆಹಾರಗಳಿಂದ ಅವನನ್ನು ಸ್ವಾಗತಿಸಿದಳು.

03262032a ಅವಮನ್ಯ ಸ ತತ್ಸರ್ವಂ ಸ್ವರೂಪಂ ಪ್ರತಿಪದ್ಯ ಚ|

03262032c ಸಾಂತ್ವಯಾಮಾಸ ವೈದೇಹೀಮಿತಿ ರಾಕ್ಷಸಪುಂಗವಃ||

ಅವೆಲ್ಲವನ್ನೂ ಕಡೆಗಾಣಿಸಿ ತನ್ನ ಸ್ವರೂಪವನ್ನು ತಳೆದು ಆ ರಾಕ್ಷಸಪುಂಗವನು ವೈದೇಹಿಯನ್ನು ಈ ರೀತಿ ಮರುಳುಗೊಳಿಸಲು ಪ್ರಾರಂಭಿಸಿದನು:

03262033a ಸೀತೇ ರಾಕ್ಷಸರಾಜೋಽಹಂ ರಾವಣೋ ನಾಮ ವಿಶ್ರುತಃ|

03262033c ಮಮ ಲಂಕಾ ಪುರೀ ನಾಮ್ನಾ ರಮ್ಯಾ ಪಾರೇ ಮಹೋದಧೇಃ||

“ಸೀತೆ! ನಾನು ರಾವಣನೆಂದು ವಿಶ್ರುತನಾದ ರಾಕ್ಷಸರಾಜ! ಸಾಗರದ ಆ ಕಡೆಯಲ್ಲಿ ಲಂಕಾ ಎಂಬ ಹೆಸರಿನ ನನ್ನ ರಮ್ಯ ನಗರವಿದೆ.

03262034a ತತ್ರ ತ್ವಂ ವರನಾರೀಷು ಶೋಭಿಷ್ಯಸಿ ಮಯಾ ಸಹ|

03262034c ಭಾರ್ಯಾ ಮೇ ಭವ ಸುಶ್ರೋಣಿ ತಾಪಸಂ ತ್ಯಜ ರಾಘವಂ||

ಅಲ್ಲಿ ನನ್ನ ವರನಾರಿಯರೊಂದಿಗೆ ನೀನು ನನ್ನೊಡನೆ ಶೋಭಿಸುತ್ತೀಯೆ. ಸುಶ್ರೋಣಿ! ನನ್ನ ಭಾರ್ಯೆಯಾಗು. ತಾಪಸ ರಾಘವನನ್ನು ತೊರೆ.”

03262035a ಏವಮಾದೀನಿ ವಾಕ್ಯಾನಿ ಶ್ರುತ್ವಾ ಸೀತಾಥ ಜಾನಕೀ|

03262035c ಪಿಧಾಯ ಕರ್ಣೌ ಸುಶ್ರೋಣೀ ಮೈವಮಿತ್ಯಬ್ರವೀದ್ವಚಃ||

ಈ ಮೊದಲಾದ ಮಾತುಗಳನ್ನು ಕೇಳಿ ಸುಶ್ರೋಣಿ ಜಾನಕೀ ಸೀತೆಯು ಕಿವಿಗಳನ್ನು ಮುಚ್ಚಿಕೊಂಡು ಈ ಮಾತುಗಳನ್ನಾಡಿದಳು:

03262036a ಪ್ರಪತೇದ್ದ್ಯೌಃ ಸನಕ್ಷತ್ರಾ ಪೃಥಿವೀ ಶಕಲೀಭವೇತ್|

03262036c ಶೈತ್ಯಮಗ್ನಿರಿಯಾನ್ನಾಹಂ ತ್ಯಜೇಯಂ ರಘುನಂದನಂ||

“ಸುಮ್ಮನಾಗು! ನಾನು ರಾಘವನನ್ನು ತೊರೆಯುವುದರೊಳಗೆ ನಕ್ಷತ್ರಗಳೊಂದಿಗೆ ಆಕಾಶವೇ ಕಳಚಿ ಬಿದ್ದೀತು! ಭೂಮಿಯು ಚೂರಾದೀತು! ಅಗ್ನಿಯು ತಣ್ಣಗಾದೀತು!

03262037a ಕಥಂ ಹಿ ಭಿನ್ನಕರಟಂ ಪದ್ಮಿನಂ ವನಗೋಚರಂ|

03262037c ಉಪಸ್ಥಾಯ ಮಹಾನಾಗಂ ಕರೇಣುಃ ಸೂಕರಂ ಸ್ಪೃಶೇತ್||

ಹೇಗೆ ತಾನೇ ಹೆಣ್ಣಾನೆಯೊಂದು ಕರಟವು ಒಡೆದು ಮದ ಸುರಿದು ವನದಲ್ಲಿ ಸಂಚರಿಸುತ್ತಿರುವ ಪದ್ಮಿ ಮಹಾ ಆನೆಯನ್ನು ಬಿಟ್ಟು ಹಂದಿಯನ್ನು ಮುಟ್ಟಿಯಾಳು?

03262038a ಕಥಂ ಹಿ ಪೀತ್ವಾ ಮಾಧ್ವೀಕಂ ಪೀತ್ವಾ ಚ ಮಧುಮಾಧವೀಂ|

03262038c ಲೋಭಂ ಸೌವೀರಕೇ ಕುರ್ಯಾನ್ನಾರೀ ಕಾ ಚಿದಿತಿ ಸ್ಮರೇ||

ಮಧುಮಾಧವೀ ಮದ್ಯವನ್ನು ಕುಡಿದ ನಾರಿಯು ಹೇಗೆತಾನೇ ಸೌಮೀರಕ್ಕೆ ಆಸೆಪಟ್ಟಾಳು?”

03262039a ಇತಿ ಸಾ ತಂ ಸಮಾಭಾಷ್ಯ ಪ್ರವಿವೇಶಾಶ್ರಮಂ ಪುನಃ|

03262039c ತಾಮನುದ್ರುತ್ಯ ಸುಶ್ರೋಣೀಂ ರಾವಣಃ ಪ್ರತ್ಯಷೇಧಯತ್||

ಹೀಗೆ ಹೇಳಿ ಅವಳು ಆಶ್ರಮವನ್ನು ಪುನಃ ಪ್ರವೇಶಿಸಿದಳು. ಆ ಸುಶ್ರೋಣಿಯನ್ನು ರಾವಣನು ಹಿಂಬಾಲಿಸಿ ತಡೆದನು.

03262040a ಭರ್ತ್ಸಯಿತ್ವಾ ತು ರೂಕ್ಷೇಣ ಸ್ವರೇಣ ಗತಚೇತನಾಂ|

03262040c ಮೂರ್ಧಜೇಷು ನಿಜಗ್ರಾಹ ಖಮುಪಾಚಕ್ರಮೇ ತತಃ||

ಕಠಿನ ಸ್ವರದಲ್ಲಿ ಅವಳನ್ನು ಬೈಯುತ್ತಾ, ಚೇತನವನ್ನೇ ಕಳೆದುಕೊಂಡ ಅವಳ ಕೂದಲನ್ನು ಹಿಡಿದು ಎಳೆದು ಆಕಾಶವನ್ನೇರಿದನು.

03262041a ತಾಂ ದದರ್ಶ ತದಾ ಗೃಧ್ರೋ ಜಟಾಯುರ್ಗಿರಿಗೋಚರಃ|

03262041c ರುದತೀಂ ರಾಮ ರಾಮೇತಿ ಹ್ರಿಯಮಾಣಾಂ ತಪಸ್ವಿನೀಂ||

ಆಗ ಗಿರಿಗೋಚರದಲ್ಲಿದ್ದ ಹದ್ದು ಜಟಾಯುವು “ರಾಮ! ರಾಮ!” ಎಂದು ಕೂಗುತ್ತಾ ರೋದಿಸುತ್ತಿರುವ ಆ ತಪಸ್ವಿನಿಯನ್ನು ನೋಡಿದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ಮಾರೀಚವಧೇ ಸೀತಾಪಹರಣೇ ದ್ವಿಷಷ್ಟ್ಯಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ಮಾರೀಚವಧೆ ಸೀತಾಪಹರಣದಲ್ಲಿ ಇನ್ನೂರಾಅರವತ್ತೆರಡನೆಯ ಅಧ್ಯಾಯವು.

Related image

Kannada translation of Draupadiharana Parva, by Chapter:
  1. ಜಯದ್ರಥಾಗಮನ
  2. ಕೋಟಿಕಾಸ್ಯಪ್ರಶ್ನಃ
  3. ದ್ರೌಪದೀವಾಕ್ಯ
  4. ಜಯದ್ರಥದ್ರೌಪದೀಸಂವಾದ
  5. ದ್ರೌಪದೀಹರಣ
  6. ಪಾರ್ಥಾಗಮನ
  7. ದ್ರೌಪದೀವಾಕ್ಯ
  8. ಜಯದ್ರಥಪಲಾಯನ
  9. ಜಯದ್ರಥವಿಮೋಕ್ಷಣ
  10. ರಾಮೋಪಾಖ್ಯಾನ-ಯುಧಿಷ್ಠಿರಪ್ರಶ್ನಃ
  11. ರಾಮೋಪಾಖ್ಯಾನ-ರಾಮರಾವಣಯೋರ್ಜನ್ಮಕಥನ
  12. ರಾಮೋಪಾಖ್ಯಾನ-ರಾವಣಾದಿವರಪ್ರಾಪ್ತಿಃ
  13. ರಾಮೋಪಾಖ್ಯಾನ-ವಾನರಾದ್ಯುತ್ಪತ್ತಿಃ
  14. ರಾಮೋಪಾಖ್ಯಾನ-ರಾಮವನಾಭಿಗಮನ
  15. ರಾಮೋಪಾಖ್ಯಾನ-ಮಾರೀಚವಧ-ಸೀತಾಪಹರಣ
  16. ರಾಮೋಪಾಖ್ಯಾನ-ಕಬಂಧಹನನ
  17. ರಾಮೋಪಾಖ್ಯಾನ-ತ್ರಿಜಟಾಕೃತಸೀತಾಸಂವಾದಃ
  18. ರಾಮೋಪಾಖ್ಯಾನ-ಸೀತಾರಾವಣಸಂವಾದಃ
  19. ರಾಮೋಪಾಖ್ಯಾನ-ಹನುಮಪ್ರತ್ಯಾಗಮನ
  20. ರಾಮೋಪಾಖ್ಯಾನ-ಸೇತುಬಂಧನ
  21. ರಾಮೋಪಾಖ್ಯಾನ-ಲಂಕಾಪ್ರವೇಶ
  22. ರಾಮೋಪಾಖ್ಯಾನ-ರಾಮರಾವಣದ್ವಂದ್ವಯುದ್ಧಃ
  23. ರಾಮೋಪಾಖ್ಯಾನ-ಕುಂಭಕರ್ಣನಿರ್ಗಮನ
  24. ರಾಮೋಪಾಖ್ಯಾನ-ಕುಂಬಕರ್ಣಾದಿವಧಃ
  25. ರಾಮೋಪಾಖ್ಯಾನ-ಇಂದ್ರಜಿದ್ಯುದ್ಧಃ
  26. ರಾಮೋಪಾಖ್ಯಾನ-ಇಂದ್ರಜಿದ್ವಧಃ
  27. ರಾಮೋಪಾಖ್ಯಾನ-ರಾವಣವಧಃ
  28. ರಾಮೋಪಾಖ್ಯಾನ-ಶ್ರೀರಾಮಾಭಿಷೇಕ
  29. ರಾಮೋಪಾಖ್ಯಾನ-ಯುಧಿಷ್ಠಿರಾಶ್ವಾಸನ
  30. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೧
  31. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೨
  32. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೩
  33. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೪
  34. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೫
  35. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೬
  36. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೭

Comments are closed.