Aranyaka Parva: Chapter 261

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೬೧

ರಾಮ, ಸೀತಾ, ಲಕ್ಷ್ಮಣರ ವನವಾಸ

ಮರುದಿನದ ಉತ್ತಮ ಮುಹೂರ್ತದಲ್ಲಿ ರಾಮನಿಗೆ ಪಟ್ಟಾಭಿಷೇಕ ಮಾಡಲು ದಶರಥನು ನಿರ್ಧರಿಸಿ, ರಾಜ್ಯದಲ್ಲಿ ಸಿದ್ಧತೆಗಳು ನಡೆಯುವುದು (೧-೧೫). ಮಂಥರೆಯಿಂದ ಪ್ರಚೋದಿತಳಾಗಿ ಕೈಕೇಯಿಯು ಹಿಂದೆ ಭರವಸೆ ನೀಡಿದ್ದ ವರಗಳಿಗೆ ದಶರಥನಿಂದ ರಾಮನಿಗೆ ಹದಿನಾಲ್ಕು ವರ್ಷಗಳ ವನವಾಸವನ್ನೂ, ಭರತನಿಗೆ ಪಟ್ಟಾಭಿಷೇಕವನ್ನೂ ಕೇಳಿದುದು (೧೬-೨೫). ರಾಮನು ತನ್ನನ್ನು ಅನುಸರಿಸಿ ಬಂದ ಪತ್ನಿ ಸೀತೆ ಮತ್ತು ತಮ್ಮ ಲಕ್ಷ್ಮಣನೊಡನೆ ವನವಾಸಕ್ಕೆ ತೆರಳಿದುದು; ಪುತ್ರಶೋಕದಿಂದ ದಶರಥನ ಮರಣ; ವಿಷಯವನ್ನು ತಿಳಿದ ಭರತನ ಕ್ರೋಧ; ಅಣ್ಣನನ್ನು ಕರೆತರಲು ಅವನಿದ್ದಲ್ಲಿಗೆ ಹೋಗುವುದು; ರಾಮನು ಒಪ್ಪದಿರಲು ನಂದೀಗ್ರಾಮದಲ್ಲಿ ತಪಸ್ವಿಯಾಗಿದ್ದು ರಾಮನ ಪರವಾಗಿ ರಾಜ್ಯಭಾರವನ್ನು ಮಾಡಿದುದು (೨೬-೩೮). ದಂಡಕಾರಣ್ಯದಲ್ಲಿ ಶೂರ್ಪಣಖಿಯ ಕಾರಣದಿಂದಾಗಿ ರಾಮನು ಖರನನ್ನೂ ಅವನ ಹದಿನಾಲ್ಕು ಸಾವಿರ ರಾಕ್ಷಸ ಸೇನೆಯನ್ನೂ ನಾಶಗೊಳಿಸಿದುದು; ವಿರೂಪಗೊಂಡ ಶೂರ್ಪಣಖಿಯು ರಾವಣನಲ್ಲಿಗೆ ಹೋಗಿ ವಿಷಯವನ್ನು ತಿಳಿಸಲು ಸೇಡನ್ನು ಯೋಚಿಸಿ ರಾವಣನು, ಹಿಂದೆ ತನ್ನ ಅಮಾತ್ಯನಾದ್ದ, ರಾಮನ ಭಯದಿಂದಲೇ ಜೀವಿಸುತ್ತಿದ್ದ ಮಾರೀಚನನ್ನು ಕಾಣಲು ಹೋದುದು (೩೯-೫೫).

03261001 ಯುಧಿಷ್ಠಿರ ಉವಾಚ|

03261001a ಉಕ್ತಂ ಭಗವತಾ ಜನ್ಮ ರಾಮಾದೀನಾಂ ಪೃಥಕ್ ಪೃಥಕ್|

03261001c ಪ್ರಸ್ಥಾನಕಾರಣಂ ಬ್ರಹ್ಮಂ ಶ್ರೋತುಮಿಚ್ಚಾಮಿ ಕಥ್ಯತಾಂ||

ಯುಧಿಷ್ಠಿರನು ಹೇಳಿದನು: “ನೀನು ಒಬ್ಬೊಬ್ಬರಾಗಿ ರಾಮಾದಿಗಳ ಜನ್ಮದ ಕುರಿತು ಹೇಳಿದೆ. ಬ್ರಹ್ಮ! ಅವನು ವನಕ್ಕೆ ಪ್ರಸ್ಥಾನಮಾಡಲು ಕಾರಣವೇನೆಂದು ಹೇಳುವುದನ್ನು ಕೇಳಬಯಸುತ್ತೇನೆ.

03261002a ಕಥಂ ದಾಶರಥೀ ವೀರೌ ಭ್ರಾತರೌ ರಾಮಲಕ್ಷ್ಮಣೌ|

03261002c ಪ್ರಸ್ಥಾಪಿತೌ ವನಂ ಬ್ರಹ್ಮ ಮೈಥಿಲೀ ಚ ಯಶಸ್ವಿನೀ||

ಬ್ರಹ್ಮನ್! ದಶರಥನ ಮಕ್ಕಳಾದ ವೀರ ಅಣ್ಣತಮ್ಮಂದಿರು ರಾಮ ಲಕ್ಷ್ಮಣರು ಮತ್ತು ಯಶಸ್ವಿನೀ ಮೈಥಿಲಿಯೂ ಯಾವ ಕಾರಣಕ್ಕಾಗಿ ಕಾಡಿಗೆ ಹೋದರು?”

03261003 ಮಾರ್ಕಂಡೇಯ ಉವಾಚ|

03261003a ಜಾತಪುತ್ರೋ ದಶರಥಃ ಪ್ರೀತಿಮಾನಭವನ್ನೃಪಃ|

03261003c ಕ್ರಿಯಾರತಿರ್ಧರ್ಮಪರಃ ಸತತಂ ವೃದ್ಧಸೇವಿತಾ||

ಮಾರ್ಕಂಡೇಯನು ಹೇಳಿದನು: “ಕ್ರಿಯಾರತಿ, ಧರ್ಮಪರ ಮತ್ತು ಸತತವೂ ವೃದ್ಧರ ಸೇವೆಯಲ್ಲಿ ನಿರತನಾಗಿದ್ದ ನೃಪ ದಶರಥನು ಪುತ್ರರು ಹುಟ್ಟಿದರೆಂದು ಸಂತೋಷಗೊಂಡನು.

03261004a ಕ್ರಮೇಣ ಚಾಸ್ಯ ತೇ ಪುತ್ರಾ ವ್ಯವರ್ಧಂತ ಮಹೌಜಸಃ|

03261004c ವೇದೇಷು ಸರಹಸ್ಯೇಷು ಧನುರ್ವೇದೇ ಚ ಪಾರಗಾಃ||

ಆ ಮಹೌಜಸ ಪುತ್ರರು ಕ್ರಮೇಣವಾಗಿ ಬೆಳೆದರು ಮತ್ತು ಅವುಗಳ ರಹಸ್ಯಗಳೊಂದಿಗೆ ವೇದಗಳ ಮತ್ತು ಧನುರ್ವೇದಗಳಲ್ಲಿ ಪಾರಂಗತರಾದರು.

03261005a ಚರಿತಬ್ರಹ್ಮಚರ್ಯಾಸ್ತೇ ಕೃತದಾರಾಶ್ಚ ಪಾರ್ಥಿವ|

03261005c ಯದಾ ತದಾ ದಶರಥಃ ಪ್ರೀತಿಮಾನಭವತ್ಸುಖೀ||

ಪಾರ್ಥಿವ! ಬ್ರಹ್ಮಚರ್ಯೆಯನ್ನು ಆಚರಿಸಿದ ಅವರು ವಿವಾಹಿತರಾದರು. ಹೀಗಾದಾಗ ದಶರಥನು ಪ್ರೀತಿವಂತನೂ ಸುಖಿಯೂ ಆದನು.

03261006a ಜ್ಯೇಷ್ಠೋ ರಾಮೋಽಭವತ್ತೇಷಾಂ ರಮಯಾಮಾಸ ಹಿ ಪ್ರಜಾಃ|

03261006c ಮನೋಹರತಯಾ ಧೀಮಾನ್ಪಿತುರ್ಹೃದಯತೋಷಣಃ||

ಹಿರಿಯವನು ರಾಮ; ಅವನು ಪ್ರಜೆಗಳನ್ನು ರಂಜಿಸುತ್ತಿದುದರಿಂದ ರಾಮನೆಂದಾದನು. ಆ ಧೀಮಂತನು ತನ್ನ ಮನೋಹರತ್ವದಿಂದ ತಂದೆಯ ಹೃದಯವನ್ನು ತೃಪ್ತಿಪಡಿಸಿದನು.

03261007a ತತಃ ಸ ರಾಜಾ ಮತಿಮಾನ್ಮತ್ವಾತ್ಮಾನಂ ವಯೋಽಧಿಕಂ|

03261007c ಮಂತ್ರಯಾಮಾಸ ಸಚಿವೈರ್ಧರ್ಮಜ್ಞೈಶ್ಚ ಪುರೋಹಿತೈಃ||

ತನಗೆ ವಯಸ್ಸಾಗಿದೆಯೆಂದು ತಿಳಿದು ಆ ಮತಿವಂತ ರಾಜನು ಸಚಿವರು, ಧರ್ಮಜ್ಞರು, ಮತ್ತು ಪುರೋಹಿತರೊಂದಿಗೆ ಮಂತ್ರಾಲೋಚನೆ ಮಾಡಿದನು.

03261008a ಅಭಿಷೇಕಾಯ ರಾಮಸ್ಯ ಯೌವರಾಜ್ಯೇನ ಭಾರತ|

03261008c ಪ್ರಾಪ್ತಕಾಲಂ ಚ ತೇ ಸರ್ವೇ ಮೇನಿರೇ ಮಂತ್ರಿಸತ್ತಮಾಃ||

ಭಾರತ! ಆ ಎಲ್ಲ ಮಂತ್ರಿಸತ್ತಮರೂ ರಾಮನ ಅಭಿಷೇಕದ ಕಾಲವು ಪ್ರಾಪ್ತವಾಗಿದೆ ಎಂದು ಅಭಿಪ್ರಾಯಪಟ್ಟರು.

03261009a ಲೋಹಿತಾಕ್ಷಂ ಮಹಾಬಾಹುಂ ಮತ್ತಮಾತಂಗಗಾಮಿನಂ|

03261009c ದೀರ್ಘಬಾಹುಂ ಮಹೋರಸ್ಕಂ ನೀಲಕುಂಚಿತಮೂರ್ಧಜಂ||

03261010a ದೀಪ್ಯಮಾನಂ ಶ್ರಿಯಾ ವೀರಂ ಶಕ್ರಾದನವಮಂ ಬಲೇ|

03261010c ಪಾರಗಂ ಸರ್ವಧರ್ಮಾಣಾಂ ಬೃಹಸ್ಪತಿಸಮಂ ಮತೌ||

ಆ ಲೋಹಿತಾಕ್ಷ, ಮಹಾಬಾಹು, ಮತ್ತಿನಲ್ಲಿದ್ದ ಆನೆಯ ನಡುಗೆಯ, ದೀರ್ಘಬಾಹು, ವಿಶಾಲ ಎದೆಯ, ಕಪ್ಪು ಗುಂಗುರು ಕೂದಲಿನ, ಶ್ರೀಯಿಂದ ಬೆಳಗುತ್ತಿದ್ದನು. ವೀರ್ಯ-ಬಲಗಳಲ್ಲಿ ಶಕ್ರನ ಸಮನನಾಗಿದ್ದು, ಮತಿಯಲ್ಲಿ ಬೃಹಸ್ಪತಿಯ ಸಮನಾಗಿದ್ದು, ಸರ್ವಧರ್ಮಗಳಲ್ಲಿ ಪಾರಂಗತನಾಗಿದ್ದನು.

03261011a ಸರ್ವಾನುರಕ್ತಪ್ರಕೃತಿಂ ಸರ್ವವಿದ್ಯಾವಿಶಾರದಂ|

03261011c ಜಿತೇಂದ್ರಿಯಮಮಿತ್ರಾಣಾಮಪಿ ದೃಷ್ಟಿಮನೋಹರಂ||

ಎಲ್ಲ ಪ್ರಜೆಗಳೂ ಅವನಲ್ಲಿ ಅನುರಕ್ತರಾಗಿದ್ದರು ಮತ್ತು ಅವನು ಸರ್ವ ವಿದ್ಯೆಗಳ ವಿಶಾರದನಾಗಿದ್ದನು. ಜಿತೇಂದ್ರಿಯನಾಗಿದ್ದ ಅವನು ಶತ್ರುಗಳಿಗೂ ಕೂಡ ನೋಡಲು ಮನೋಹರನಾಗಿದ್ದನು.

03261012a ನಿಯಂತಾರಮಸಾಧೂನಾಂ ಗೋಪ್ತಾರಂ ಧರ್ಮಚಾರಿಣಾಂ|

03261012c ಧೃತಿಮಂತಮನಾಧೃಷ್ಯಂ ಜೇತಾರಮಪರಾಜಿತಂ||

ಕೆಟ್ಟವರನ್ನು ನಿಯಂತ್ರಿಸುತ್ತಿದ್ದನು, ಧರ್ಮಚಾರಿಗಳನ್ನು ರಕ್ಷಿಸುತ್ತಿದ್ದನು, ಧೃತಿಮಂತನೂ ಅನಾಧೃಷನೂ ಆಗಿದ್ದನು ಮತ್ತು ಸೋಲನ್ನೆಂದೂ ಪಡೆಯದ ವಿಜಯಿಯಾಗಿದ್ದನು.

03261013a ಪುತ್ರಂ ರಾಜಾ ದಶರಥಃ ಕೌಸಲ್ಯಾನಂದವರ್ಧನಂ|

03261013c ಸಂದೃಶ್ಯ ಪರಮಾಂ ಪ್ರೀತಿಮಗಚ್ಚತ್ಕುರುನಂದನ||

ಕುರುನಂದನ! ಅಂಥಹ ಕೌಸಲ್ಯೆಯ ಆನಂದವನ್ನು ಹೆಚ್ಚಿಸುತ್ತಿದ್ದ ಆ ಪುತ್ರನನ್ನು ನೋಡಿ ರಾಜಾ ದಶರಥನು ಅತ್ಯಂತ ಸಂತೋಷಪಡುತ್ತಿದ್ದನು.

03261014a ಚಿಂತಯಂಶ್ಚ ಮಹಾತೇಜಾ ಗುಣಾನ್ರಾಮಸ್ಯ ವೀರ್ಯವಾನ್|

03261014c ಅಭ್ಯಭಾಷತ ಭದ್ರಂ ತೇ ಪ್ರೀಯಮಾಣಃ ಪುರೋಹಿತಂ||

ರಾಮನ ಗುಣಗಳ ಕುರಿತು ಯೋಚಿಸಿ ಆನಂದಿಸುತ್ತಾ ಆ ಮಹಾತೇಜಸ್ವಿ ವೀರ್ಯವಾನನು ಪುರೋಹಿತರಿಗೆ ಹೇಳಿದನು: “ನಿಮಗೆ ಮಂಗಳವಾಗಲಿ!

03261015a ಅದ್ಯ ಪುಷ್ಯೋ ನಿಶಿ ಬ್ರಹ್ಮನ್ಪುಣ್ಯಂ ಯೋಗಮುಪೈಷ್ಯತಿ|

03261015c ಸಂಭಾರಾಃ ಸಂಭ್ರಿಯಂತಾಂ ಮೇ ರಾಮಶ್ಚೋಪನಿಮಂತ್ರ್ಯತಾಂ||

ಈ ರಾತ್ರಿ ಪುಷ್ಯವು ಪುಣ್ಯಯೋಗದಲ್ಲಿದೆ. ಸಂಗ್ರಹಗಳನ್ನು ಒಂದುಗೂಡಿಸಿ ಮತ್ತು ರಾಮನನ್ನು ಆಮಂತ್ರಿಸಿ!”

03261016a ಇತಿ ತದ್ರಾಜವಚನಂ ಪ್ರತಿಶ್ರುತ್ಯಾಥ ಮಂಥರಾ|

03261016c ಕೈಕೇಯೀಮಭಿಗಮ್ಯೇದಂ ಕಾಲೇ ವಚನಮಬ್ರವೀತ್||

ರಾಜನ ಈ ಮಾತುಗಳನ್ನು ಕೇಳಿದ ಮಂಥರೆಯು ಅದೇ ಸಮಯದಲ್ಲಿ ಕೈಕೇಯಿಯ ಬಳಿಹೋಗಿ ಹೀಗೆಂದಳು:

03261017a ಅದ್ಯ ಕೈಕೇಯಿ ದೌರ್ಭಾಗ್ಯಂ ರಾಜ್ಞಾ ತೇ ಖ್ಯಾಪಿತಂ ಮಹತ್|

03261017c ಆಶೀವಿಷಸ್ತ್ವಾಂ ಸಂಕ್ರುದ್ಧಶ್ಚಂಡೋ ದಶತಿ ದುರ್ಭಗೇ||

“ಕೈಕೇಯೀ! ಇಂದು ರಾಜನು ನಿನಗೊಂದು ಮಹಾ ದೌರ್ಭಾಗ್ಯವನ್ನು ಘೋಷಿಸಿದ್ದಾನೆ. ದುರ್ಭಗೇ! ಅತೀ ಘೋರ ವಿಷಸರ್ಪವೊಂದು ಸಿಟ್ಟಿನಿಂದ ನಿನ್ನನ್ನು ಕಚ್ಚುತ್ತಿದೆ.

03261018a ಸುಭಗಾ ಖಲು ಕೌಸಲ್ಯಾ ಯಸ್ಯಾಃ ಪುತ್ರೋಽಭಿಷೇಕ್ಷ್ಯತೇ|

03261018c ಕುತೋ ಹಿ ತವ ಸೌಭಾಗ್ಯಂ ಯಸ್ಯಾಃ ಪುತ್ರೋ ನ ರಾಜ್ಯಭಾಕ್||

ಯಾರ ಮಗನ ಪಟ್ಟಾಭಿಷೇಕವಾಗಲಿದೆಯೋ ಆ ಕೌಸಲ್ಯೆಯೇ ಸುಭಗೆ! ಯಾರ ಮಗನಿಗೆ ರಾಜ್ಯದಲ್ಲಿ ಯಾವ ಭಾಗವೂ ಇಲ್ಲವೋ ಅಂತಹ ನೀನು ಹೇಗೆ ತಾನೆ ಸೌಭಾಗ್ಯೆಯಾಗಿರುವೆ?”

03261019a ಸಾ ತದ್ವಚನಮಾಜ್ಞಾಯ ಸರ್ವಾಭರಣಭೂಷಿತಾ|

03261019c ವೇದೀವಿಲಗ್ನಮಧ್ಯೇವ ಬಿಭ್ರತೀ ರೂಪಮುತ್ತಮಂ||

03261020a ವಿವಿಕ್ತೇ ಪತಿಮಾಸಾದ್ಯ ಹಸಂತೀವ ಶುಚಿಸ್ಮಿತಾ|

03261020c ಪ್ರಣಯಂ ವ್ಯಂಜಯಂತೀವ ಮಧುರಂ ವಾಕ್ಯಮಬ್ರವೀತ್||

ಆ ಮಾತುಗಳನ್ನು ಅರ್ಥಮಾಡಿಕೊಂಡ ವೇದಿಯಂತೆ ಸಣ್ಣ ಸೊಂಟದ ಆ ಶುಚಿಸ್ಮಿತೆಯು ಸರ್ವಾಭರಣಭೂಷಿತೆಯಾಗಿ ಉತ್ತಮ ರೂಪದಿಂದ ಬೆಳಗುತ್ತಾ ಏಕಾಂತದಲ್ಲಿ ಪತಿಯ ಬಳಿಸಾರಿ ನಗುತ್ತಾ ಪ್ರಣಯವನ್ನು ನಟಿಸುತ್ತಾ ಈ ಮಧುರ ವಾಕ್ಯಗಳನ್ನು ಹೇಳಿದಳು.

03261021a ಸತ್ಯಪ್ರತಿಜ್ಞ ಯನ್ಮೇ ತ್ವಂ ಕಾಮಮೇಕಂ ನಿಸೃಷ್ಟವಾನ್|

03261021c ಉಪಾಕುರುಷ್ವ ತದ್ರಾರಾಜನ್ತಸ್ಮಾನ್ಮುಚ್ಯಸ್ವ ಸಂಕಟಾತ್||

“ಸತ್ಯಪ್ರತಿಜ್ಞನಾದ ನೀನು ಒಮ್ಮೆ ನಾನು ಬಯಸಿದುದನ್ನು ಕೊಡುತ್ತೇನೆ ಎಂದು ಮಾತುಕೊಟ್ಟಿದ್ದೆ. ರಾಜನ್! ಈಗ ಅದನ್ನು ಮಾಡಿ ಆ ಸಂಕಟದಿಂದ ಬಿಡುಗಡೆ ಹೊಂದು.”

03261022 ರಾಜೋವಾಚ|

03261022a ವರಂ ದದಾನಿ ತೇ ಹಂತ ತದ್ಗೃಹಾಣ ಯದಿಚ್ಚಸಿ|

03261022c ಅವಧ್ಯೋ ವಧ್ಯತಾಂ ಕೋಽದ್ಯ ವಧ್ಯಃ ಕೋಽದ್ಯ ವಿಮುಚ್ಯತಾಂ||

03261023a ಧನಂ ದದಾನಿ ಕಸ್ಯಾದ್ಯ ಹ್ರಿಯತಾಂ ಕಸ್ಯ ವಾ ಪುನಃ|

03261023c ಬ್ರಾಹ್ಮಣಸ್ವಾದಿಹಾನ್ಯತ್ರ ಯತ್ಕಿಂ ಚಿದ್ವಿತ್ತಮಸ್ತಿ ಮೇ||

ರಾಜನು ಹೇಳಿದನು: “ಹೇಳು. ನಿನಗೆ ವರವನ್ನು ನೀಡುತ್ತೇನೆ. ನೀನು ಬಯಸಿದುದನ್ನು ಪಡೆಯುವೆ. ಯಾವ ಅವಧ್ಯನನ್ನು ವಧಿಸಬೇಕು? ಇಂದು ಯಾವ ವಧಿಸಲರ್ಹನಾದವನನ್ನು ಬಿಡುಗಡೆ ಮಾಡಬೇಕು? ಇಂದು ಯಾರಿಗೆ ಧನವನ್ನು ನೀಡುಬೇಕು? ಅಥವಾ ಯಾರಿಂದ ಅದನ್ನು ಕಸಿದುಕೊಳ್ಳಬೇಕು? ಬ್ರಾಹ್ಮಣರದ್ದನ್ನು ಬಿಟ್ಟು ಭೂಮಿಯಲ್ಲಿರುವ ಎಲ್ಲವೂ ನನ್ನದೇ ಸಂಪತ್ತು!””

03261024 ಮಾರ್ಕಂಡೇಯ ಉವಾಚ|

03261024a ಸಾ ತದ್ವಚನಮಾಜ್ಞಾಯ ಪರಿಗೃಹ್ಯ ನರಾಧಿಪಂ|

03261024c ಆತ್ಮನೋ ಬಲಮಾಜ್ಞಾಯ ತತ ಏನಮುವಾಚ ಹ||

ಮಾರ್ಕಂಡೇಯನು ಹೇಳಿದನು: “ಅವನ ಮಾತುಗಳನ್ನು ಕೇಳಿ ಅವಳು ನರಾಧಿಪನನ್ನು ಅಪ್ಪಿಕೊಂಡು, ತನ್ನ ಬಲವನ್ನು ಅರ್ಥಮಾಡಿಕೊಂಡು ಅವನಿಗೆ ಹೀಗೆ ಹೇಳಿದಳು:

03261025a ಆಭಿಷೇಚನಿಕಂ ಯತ್ತೇ ರಾಮಾರ್ಥಮುಪಕಲ್ಪಿತಂ|

03261025c ಭರತಸ್ತದವಾಪ್ನೋತು ವನಂ ಗಚ್ಚತು ರಾಘವಃ||

“ರಾಮನಿಗೆಂದು ಕಲ್ಪಿಸಿರುವ ಪಟ್ಟಾಭಿಷೇಕವನ್ನು ಭರತನಿಗೆ ದೊರೆಯುವಂತಾಗಲಿ. ರಾಘವನು ವನಕ್ಕೆ ಹೋಗಲಿ.”

03261026a ಸ ತದ್ರಾಜಾ ವಚಃ ಶ್ರುತ್ವಾ ವಿಪ್ರಿಯಂ ದಾರುಣೋದಯಂ|

03261026c ದುಃಖಾರ್ತೋ ಭರತಶ್ರೇಷ್ಠ ನ ಕಿಂ ಚಿದ್ವ್ಯಾಜಹಾರ ಹ||

ಭರತಶ್ರೇಷ್ಠ! ಈ ವಿಪ್ರಯ ದಾರುಣ ಮಾತನ್ನು ಕೇಳಿ ರಾಜನು ದುಃಖಾರ್ತನಾಗಿ ಏನನ್ನೂ ಉತ್ತರಿಸಲಿಲ್ಲ.

03261027a ತತಸ್ತಥೋಕ್ತಂ ಪಿತರಂ ರಾಮೋ ವಿಜ್ಞಾಯ ವೀರ್ಯವಾನ್|

03261027c ವನಂ ಪ್ರತಸ್ಥೇ ಧರ್ಮಾತ್ಮಾ ರಾಜಾ ಸತ್ಯೋ ಭವತ್ವಿತಿ||

ತನ್ನ ತಂದೆಯು ಮಾತುಕೊಟ್ಟಿದ್ದುದನ್ನು ತಿಳಿದ ವೀರ್ಯವಾನ್ ರಾಮನು ಧರ್ಮಾತ್ಮ ರಾಜನು ಸತ್ಯವಂತನಾಗಿರಲೆಂದು ವನಕ್ಕೆ ತೆರಳಿದನು.

03261028a ತಮನ್ವಗಚ್ಚಲ್ಲಕ್ಷ್ಮೀವಾನ್ಧನುಷ್ಮಾಽಲ್ಲಕ್ಷ್ಮಣಸ್ತದಾ|

03261028c ಸೀತಾ ಚ ಭಾರ್ಯಾ ಭದ್ರಂ ತೇ ವೈದೇಹೀ ಜನಕಾತ್ಮಜಾ||

ಶ್ರೀಮಂತ ಧನುಷ್ಮಾನ್ ಲಕ್ಷಣ ಮತ್ತು ಹಾಗೆಯೇ ಪತ್ನಿ ವೈದೇಹಿ ಜನಕಾತ್ಮಜೆ ಸೀತೆಯೂ ಕೂಡ ಅವನನ್ನು ಅನುಸರಿಸಿದರು.

03261029a ತತೋ ವನಂ ಗತೇ ರಾಮೇ ರಾಜಾ ದಶರಥಸ್ತದಾ|

03261029c ಸಮಯುಜ್ಯತ ದೇಹಸ್ಯ ಕಾಲಪರ್ಯಾಯಧರ್ಮಣಾ||

ರಾಮನು ವನಕ್ಕೆ ಹೋದನಂತರ ರಾಜಾ ದಶರಥನು ದೇಹದ ಕಾಲಪರ್ಯಾಯ ಧರ್ಮವನ್ನು ಅನುಸರಿಸಿದನು.

03261030a ರಾಮಂ ತು ಗತಮಾಜ್ಞಾಯ ರಾಜಾನಂ ಚ ತಥಾಗತಂ|

03261030c ಆನಾಯ್ಯ ಭರತಂ ದೇವೀ ಕೈಕೇಯೀ ವಾಕ್ಯಮಬ್ರವೀತ್||

ರಾಮನು ಹೋದುದನ್ನು ಮತ್ತು ರಾಜನೂ ಕೂಡ ತೀರಿಕೊಂಡಿದ್ದುದನ್ನು ತಿಳಿಸಿ ಭರತನನ್ನು ಕರೆಯಿಸಿ ದೇವೀ ಕೈಕೇಯಿಯು ಹೇಳಿದಳು:

03261031a ಗತೋ ದಶರಥಃ ಸ್ವರ್ಗಂ ವನಸ್ಥೌ ರಾಮಲಕ್ಷ್ಮಣೌ|

03261031c ಗೃಹಾಣ ರಾಜ್ಯಂ ವಿಪುಲಂ ಕ್ಷೇಮಂ ನಿಹತಕಂಟಕಂ||

“ದಶರಥನು ಸ್ವರ್ಗಸ್ಥನಾಗಿದ್ದಾನೆ ಮತ್ತು ರಾಮ ಲಕ್ಷ್ಮಣರು ವನದಲ್ಲಿದ್ದಾರೆ. ಸ್ಪರ್ಧಿಗಳಿಲ್ಲದೇ ಕ್ಷೇಮವಾದ ಈ ವಿಪುಲ ರಾಜ್ಯವನ್ನು ಸ್ವೀಕರಿಸು!”

03261032a ತಾಮುವಾಚ ಸ ಧರ್ಮಾತ್ಮಾ ನೃಶಂಸಂ ಬತ ತೇ ಕೃತಂ|

03261032c ಪತಿಂ ಹತ್ವಾ ಕುಲಂ ಚೇದಮುತ್ಸಾದ್ಯ ಧನಲುಬ್ಧಯಾ||

ಆ ಧರ್ಮಾತ್ಮನು ಅವಳಿಗೆ ಹೇಳಿದನು: “ನಿನಗೆ ಧಿಕ್ಕಾರ! ಧನದ ಆಸೆಯಿಂದ ನೀನು ಪತಿಯನ್ನು ಕೊಂದು ಕುಲವನ್ನೇ ಕಿತ್ತೊಗೆದು ಕ್ರೂರ ಕಾರ್ಯವನ್ನು ಮಾಡಿದ್ದೀಯೆ!

03261033a ಅಯಶಃ ಪಾತಯಿತ್ವಾ ಮೇ ಮೂರ್ಧ್ನಿ ತ್ವಂ ಕುಲಪಾಂಸನೇ|

03261033c ಸಕಾಮಾ ಭವ ಮೇ ಮಾತರಿತ್ಯುಕ್ತ್ವಾ ಪ್ರರುರೋದ ಹ||

ಕುಲಪಾಂಸನೀ! ಮಾತ! ನನ್ನ ತಲೆಯಮೇಲೆ ಅಪಕೀರ್ತಿಯನ್ನು ತಂದು ನಿನ್ನ ಆಸೆಯನ್ನು ತೀರಿಸಿಕೊಂಡೆ!” ಎಂದು ಹೇಳಿ ತುಂಬಾ ರೋದಿಸಿದನು.

03261034a ಸ ಚಾರಿತ್ರಂ ವಿಶೋಧ್ಯಾಥ ಸರ್ವಪ್ರಕೃತಿಸಮ್ನಿಧೌ|

03261034c ಅನ್ವಯಾದ್ಭ್ರಾತರಂ ರಾಮಂ ವಿನಿವರ್ತನಲಾಲಸಃ||

ಎಲ್ಲ ಪುರಜನರ ಸಾನ್ನಿಧ್ಯದಲ್ಲಿ ತನ್ನ ಚಾರಿತ್ರ್ಯವು ಶುದ್ಧವಾದುದೆಂದು ಪ್ರಕಟಿಸಿ, ಅವನನ್ನು ಹಿಂದೆ ಕರೆತರುವ ಆಸೆಯಿಂದ ತನ್ನ ಅಣ್ಣನ ಹಿಂದೆ ಹೊರಟನು.

03261035a ಕೌಸಲ್ಯಾಂ ಚ ಸುಮಿತ್ರಾಂ ಚ ಕೈಕೇಯೀಂ ಚ ಸುದುಃಖಿತಃ|

03261035c ಅಗ್ರೇ ಪ್ರಸ್ಥಾಪ್ಯ ಯಾನೈಃ ಸ ಶತ್ರುಘ್ನಸಹಿತೋ ಯಯೌ||

03261036a ವಸಿಷ್ಠವಾಮದೇವಾಭ್ಯಾಂ ವಿಪ್ರೈಶ್ಚಾನ್ಯೈಃ ಸಹಸ್ರಶಃ|

03261036c ಪೌರಜಾನಪದೈಃ ಸಾರ್ಧಂ ರಾಮಾನಯನಕಾಂಕ್ಷ್ಯಯಾ||

ರಾಮನನ್ನು ಹಿಂದೆ ಕರೆತರುವ ಆಸೆಯನ್ನಿಟ್ಟುಕೊಂಡು ಸುದುಃಖಿತನಾಗಿ ಕೌಸಲ್ಯೆ, ಸುಮಿತ್ರಾ, ಮತ್ತು ಕೈಕೇಯಿಯರನ್ನು ಯಾನಗಳಲ್ಲಿರಿಸಿಕೊಂಡು ಶತ್ರುಘ್ನನ ಸಹಿತ, ವಸಿಷ್ಠ-ವಾಮದೇವರು, ಸಹಸ್ರಾರು ವಿಪ್ರರು ಮತ್ತು ಪೌರ-ಜಾನಪದರೊಂದಿಗೆ ಹೊರಟನು.

03261037a ದದರ್ಶ ಚಿತ್ರಕೂಟಸ್ಥಂ ಸ ರಾಮಂ ಸಹಲಕ್ಷ್ಮಣಂ|

03261037c ತಾಪಸಾನಾಮಲಂಕಾರಂ ಧಾರಯಂತಂ ಧನುರ್ಧರಂ||

ಚಿತ್ರಕೂಟದಲ್ಲಿ ಲಕ್ಷ್ಮಣನೊಂದಿಗಿದ್ದ ತಾಪಸರ ಅಲಂಕಾರವನ್ನು ಧರಿಸಿದ್ದ ಧನುರ್ಧರ ರಾಮನನ್ನು ಕಂಡನು.

03261038a ವಿಸರ್ಜಿತಃ ಸ ರಾಮೇಣ ಪಿತುರ್ವಚನಕಾರಿಣಾ|

03261038c ನಂದಿಗ್ರಾಮೇಽಕರೋದ್ರಾಜ್ಯಂ ಪುರಸ್ಕೃತ್ಯಾಸ್ಯ ಪಾದುಕೇ||

ತಂದೆಯ ಮಾತನ್ನು ಕಾರಣವನ್ನಾಗಿಟ್ಟುಕೊಂಡ ರಾಮನಿಂದ ವಿಸರ್ಜಿಸಲ್ಪಟ್ಟು ಅವನು ಅವನ ಪಾದುಕೆಗಳನ್ನು ಮುಂದಿಟ್ಟುಕೊಂಡು ನಂದಿಗ್ರಾಮದಲ್ಲಿ ರಾಜ್ಯಭಾರವನ್ನು ಮಾಡಿದನು.

03261039a ರಾಮಸ್ತು ಪುನರಾಶಂಕ್ಯ ಪೌರಜಾನಪದಾಗಮಂ|

03261039c ಪ್ರವಿವೇಶ ಮಹಾರಣ್ಯಂ ಶರಭಂಗಾಶ್ರಮಂ ಪ್ರತಿ||

ಪೌರಜಾನಪದರು ಪುನಃ ಬರಬಹುದೆಂದು ಶಂಕಿಸಿ ರಾಮನು ಶರಭಂಗಾಶ್ರಮದ ಬಳಿಯಿರುವ ಮಹಾರಣ್ಯವನ್ನು ಪ್ರವೇಶಿಸಿದನು.

03261040a ಸತ್ಕೃತ್ಯ ಶರಭಂಗಂ ಸ ದಂಡಕಾರಣ್ಯಮಾಶ್ರಿತಃ|

03261040c ನದೀಂ ಗೋದಾವರೀಂ ರಮ್ಯಾಮಾಶ್ರಿತ್ಯ ನ್ಯವಸತ್ತದಾ||

ಶರಭಂಗನನ್ನು ಸತ್ಕರಿಸಿ ಅವನು ದಂಡಕಾರಣ್ಯವನ್ನು ಸೇರಿ, ಅಲ್ಲಿ ರಮ್ಯ ಗೋದಾವರೀ ನದೀ ತೀರದಲ್ಲಿ ನೆಲೆಮಾಡಿದನು.

03261041a ವಸತಸ್ತಸ್ಯ ರಾಮಸ್ಯ ತತಃ ಶೂರ್ಪಣಖಾಕೃತಂ|

03261041c ಖರೇಣಾಸೀನ್ಮಹದ್ವೈರಂ ಜನಸ್ಥಾನನಿವಾಸಿನಾ||

ರಾಮನು ಅಲ್ಲಿ ವಾಸಿಸುತ್ತಿರಲು ಶೂರ್ಪಣಖಿಯ ಮೂಲಕ ಜನಸ್ಥಾನದಲ್ಲಿ ವಾಸಿಸುತ್ತಿದ್ದ ಖರನೊಂದಿಗೆ ಮಹಾ ವೈರವುಂಟಾಯಿತು.

03261042a ರಕ್ಷಾರ್ಥಂ ತಾಪಸಾನಾಂ ಚ ರಾಘವೋ ಧರ್ಮವತ್ಸಲಃ|

03261042c ಚತುರ್ದಶ ಸಹಸ್ರಾಣಿ ಜಘಾನ ಭುವಿ ರಕ್ಷಸಾಂ||

ತಾಪಸರನ್ನು ರಕ್ಷಿಸಲೆಂದು ಧರ್ಮವತ್ಸಲ ರಾಘವನು ಭುವಿಯಲ್ಲಿದ್ದ ಹದಿನಾಲ್ಕು ಸಾವಿರ ರಾಕ್ಷಸರನ್ನು ಸಂಹರಿಸಿದನು.

03261043a ದೂಷಣಂ ಚ ಖರಂ ಚೈವ ನಿಹತ್ಯ ಸುಮಹಾಬಲೌ|

03261043c ಚಕ್ರೇ ಕ್ಷೇಮಂ ಪುನರ್ಧೀಮಾನ್ಧರ್ಮಾರಣ್ಯಂ ಸ ರಾಘವಃ||

ಮಹಾಬಲಶಾಲಿಗಳಾಗಿದ್ದ ದೂಷಣ ಮತ್ತು ಖರರನ್ನು ಕೂಡ ಸಂಹರಿಸಿ ಧೀಮಂತ ರಾಘವನು ಆ ಧರ್ಮಾರಣ್ಯಕ್ಕೆ ಕ್ಷೇಮವನ್ನು ಮರಳಿ ತಂದಿತ್ತನು.

03261044a ಹತೇಷು ತೇಷು ರಕ್ಷಃಸ್ಸು ತತಃ ಶೂರ್ಪಣಖಾ ಪುನಃ|

03261044c ಯಯೌ ನಿಕೃತ್ತನಾಸೋಷ್ಠೀ ಲಂಕಾಂ ಭ್ರಾತುರ್ನಿವೇಶನಂ||

ಆ ರಾಕ್ಷಸರು ಹತರಾಗಲು, ತುಂಡರಿಸಿದ ಮೂಗು ತುಟಿಗಳ ಶೂರ್ಪಣಖಿಯು ಪುನಃ ತನ್ನ ಅಣ್ಣನ ನಿವೇಶನ ಲಂಕೆಗೆ ಹೋದಳು.

03261045a ತತೋ ರಾವಣಮಭ್ಯೇತ್ಯ ರಾಕ್ಷಸೀ ದುಃಖಮೂರ್ಚಿತಾ|

03261045c ಪಪಾತ ಪಾದಯೋರ್ಭ್ರಾತುಃ ಸಂಶುಷ್ಕರುಧಿರಾನನಾ||

ಮುಖದ ಮೇಲೆಲ್ಲಾ ಒಣಗಿದ ರಕ್ತವುಳ್ಳ ಆ ರಾಕ್ಷಸಿಯು ದುಃಖಮೂರ್ಛಿತಳಾಗಿ ರಾವಣನ ಬಳಿ ಸಾರಿ ಅಣ್ಣನ ಪಾದಗಳ ಮೇಲೆ ಬಿದ್ದಳು.

03261046a ತಾಂ ತಥಾ ವಿಕೃತಾಂ ದೃಷ್ಟ್ವಾ ರಾವಣಃ ಕ್ರೋಧಮೂರ್ಚಿತಃ|

03261046c ಉತ್ಪಪಾತಾಸನಾತ್ಕ್ರುದ್ಧೋ ದಂತೈರ್ದಂತಾನುಪಸ್ಪೃಶನ್||

ಅವಳು ಹಾಗೆ ವಿಕೃತಳಾದುದನ್ನು ನೋಡಿದ ರಾವಣನು ಕ್ರೋಧಮೂರ್ಛಿತನಾಗಿ ಕ್ರೋಧದಿಂದ ಹಲ್ಲುಗಳನ್ನು ಕಡೆಯುತ್ತಾ ಆಸನದಿಂದ ಮೇಲೆ ಹಾರಿ ಎದ್ದನು.

03261047a ಸ್ವಾನಮಾತ್ಯಾನ್ವಿಸೃಜ್ಯಾಥ ವಿವಿಕ್ತೇ ತಾಮುವಾಚ ಸಃ|

03261047c ಕೇನಾಸ್ಯೇವಂ ಕೃತಾ ಭದ್ರೇ ಮಾಮಚಿಂತ್ಯಾವಮನ್ಯ ಚ||

ಆಸ್ಥಾನದಿಂದ ಅಮಾತ್ಯರನ್ನು ವಿಸರ್ಜಿಸಿ, ಏಕಾಂತದಲ್ಲಿ ಅವಳಿಗೆ ಹೇಳಿದನು: “ಭದ್ರೇ! ನನ್ನ ಕುರಿತು ಯೋಚಿಸದೇ ಇದ್ದ ನನ್ನನ್ನು ಅವಮಾನಿಸುವ ನನ್ನ ಕುರಿತು ಯೋಚಿಸದೇ ಇದ್ದ ಯಾರಿಂದ ನಿನಗೆ ಹೀಗಾಯಿತು?

03261048a ಕಃ ಶೂಲಂ ತೀಕ್ಷ್ಣಮಾಸಾದ್ಯ ಸರ್ವಗಾತ್ರೈರ್ನಿಷೇವತೇ|

03261048c ಕಃ ಶಿರಸ್ಯಗ್ನಿಮಾದಾಯ ವಿಶ್ವಸ್ತಃ ಸ್ವಪತೇ ಸುಖಂ||

ಯಾರು ತಾನೇ ತೀಕ್ಷ್ಣವಾದ ಶೂಲವನ್ನು ಹಿಡಿದು ದೇಹದ ಎಲ್ಲ ಭಾಗಗಳಲ್ಲಿ ಚುಚ್ಚಿಕೊಂಡಿದ್ದಾನೆ? ಯಾರು ತಾನೇ ತನ್ನ ತಲೆಯ ಹತ್ತಿರ ಬೆಂಕಿಯನ್ನು ಹಾಕಿ ವಿಶ್ವಾಸದಿಂದ ಸುಖನಿದ್ರೆಯನ್ನು ಮಾಡುತ್ತಿದ್ದಾನೆ?

03261049a ಆಶೀವಿಷಂ ಘೋರತರಂ ಪಾದೇನ ಸ್ಪೃಶತೀಹ ಕಃ|

03261049c ಸಿಂಹಂ ಕೇಸರಿಣಂ ಕಶ್ಚ ದಂಷ್ಟ್ರಾಸು ಸ್ಪೃಶ್ಯ ತಿಷ್ಠತಿ||

ಯಾರು ತಾನೇ ಅತೀವ ವಿಷದ ಘೋರತರ ಹಾವನ್ನು ಕಾಲಿನಿಂದ ಮುಟ್ಟಿದ್ದಾನೆ? ಯಾರುತಾನೆ ಕೇಸರಿ ಸಿಂಹದ ಕೋರೆದಾಡೆಗಳನ್ನು ಹಿಡಿದು ನಿಂತಿದ್ದಾನೆ?”

03261050a ಇತ್ಯೇವಂ ಬ್ರುವತಸ್ತಸ್ಯ ಸ್ರೋತೋಭ್ಯಸ್ತೇಜಸೋಽರ್ಚಿಷಃ|

03261050c ನಿಶ್ಚೇರುರ್ದಹ್ಯತೋ ರಾತ್ರೌ ವೃಕ್ಷಸ್ಯೇವ ಸ್ವರಂಧ್ರತಃ||

ಅವನು ಹೀಗೆ ಹೇಳುತ್ತಿರುವಾಗ ರಾತ್ರಿ ಹೊತ್ತು ಒಂದು ಪೊಳ್ಳು ಮರದ ಒಳಗಿನಿಂದ ಬರುವಂತೆ ಅವನ ದೇಹದ ಎಲ್ಲ ರಂಧ್ರಗಳಿಂದ ಬೆಂಕಿಯ ಜ್ವಾಲೆಗಳು ಹೊರಹೊಮ್ಮಿದವು.

03261051a ತಸ್ಯ ತತ್ಸರ್ವಮಾಚಖ್ಯೌ ಭಗಿನೀ ರಾಮವಿಕ್ರಮಂ|

03261051c ಖರದೂಷಣಸಂಯುಕ್ತಂ ರಾಕ್ಷಸಾನಾಂ ಪರಾಭವಂ||

ಆಗ ಅವನಿಗೆ ಅವನ ತಂಗಿಯು ರಾಮನ ಪರಾಕ್ರಮ, ಖರದೂಷಣರನ್ನೂ ಸೇರಿ ರಾಕ್ಷಸರ ಪರಾಭವ ಎಲ್ಲವನ್ನೂ ಹೇಳಿದಳು.

03261052a ಸ ನಿಶ್ಚಿತ್ಯ ತತಃ ಕೃತ್ಯಂ ಸ್ವಸಾರಮುಪಸಾಂತ್ವ್ಯ ಚ|

03261052c ಊರ್ಧ್ವಮಾಚಕ್ರಮೇ ರಾಜಾ ವಿಧಾಯ ನಗರೇ ವಿಧಿಂ||

ಏನು ಮಾಡಬೇಕೆಂದು ನಿರ್ಧರಿಸಿ ಅವನು ತನ್ನ ತಂಗಿಯನ್ನು ಸಮಾಧಾನಪಡಿಸಿದನು. ನಗರದಲ್ಲಿ ವ್ಯವಸ್ಥೆಯನ್ನು ವಿಧಿಸಿ ರಾಜನು ಆಕಾಶದಲ್ಲಿ ನಡೆದನು.

03261053a ತ್ರಿಕೂಟಂ ಸಮತಿಕ್ರಮ್ಯ ಕಾಲಪರ್ವತಮೇವ ಚ|

03261053c ದದರ್ಶ ಮಕರಾವಾಸಂ ಗಂಭೀರೋದಂ ಮಹೋದಧಿಂ||

ತ್ರಿಕೂಟವನ್ನೂ ಕಾಲ ಪರ್ವತವನ್ನೂ ದಾಟಿ ಅವನು ಮಕರಗಳು ವಾಸಿಸುತ್ತಿದ್ದ ಗಂಭೀರ ಮಹಾ ಸಾಗರವನ್ನು ನೋಡಿದನು.

03261054a ತಮತೀತ್ಯಾಥ ಗೋಕರ್ಣಮಭ್ಯಗಚ್ಚದ್ದಶಾನನಃ|

03261054c ದಯಿತಂ ಸ್ಥಾನಮವ್ಯಗ್ರಂ ಶೂಲಪಾಣೇರ್ಮಹಾತ್ಮನಃ||

ದಶಾನನನು ಅದನ್ನು ದಾಟಿ ಮಹಾತ್ಮ ಶೂಲಪಾಣಿಗೆ ಪ್ರಿಯವಾದ ಅವ್ಯಗ್ರ ಗೋಕರ್ಣ ಸ್ಥಾನಕ್ಕೆ ಬಂದನು.

03261055a ತತ್ರಾಭ್ಯಗಚ್ಚನ್ಮಾರೀಚಂ ಪೂರ್ವಾಮಾತ್ಯಂ ದಶಾನನಃ|

03261055c ಪುರಾ ರಾಮಭಯಾದೇವ ತಾಪಸ್ಯಂ ಸಮುಪಾಶ್ರಿತಂ||

ದಶಾನನನು ಹಿಂದೆ ತನ್ನ ಅಮಾತ್ಯನಾಗಿದ್ದ, ರಾಮನ ಭಯದಿಂದಲೇ ತಾಪಸಿಯಾಗಿ ಅಲ್ಲಿ ವಾಸಿಸುತ್ತಿದ್ದ ಮಾರೀಚನ ಬಳಿಬಂದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ರಾಮವನಾಭಿಗಮನೇ ಏಕಷಷ್ಟ್ಯಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ರಾಮವನಾಭಿಗಮನದಲ್ಲಿ ಇನ್ನೂರಾಅರವತ್ತೊಂದನೆಯ ಅಧ್ಯಾಯವು.

Related image

Kannada translation of Draupadiharana Parva, by Chapter:
  1. ಜಯದ್ರಥಾಗಮನ
  2. ಕೋಟಿಕಾಸ್ಯಪ್ರಶ್ನಃ
  3. ದ್ರೌಪದೀವಾಕ್ಯ
  4. ಜಯದ್ರಥದ್ರೌಪದೀಸಂವಾದ
  5. ದ್ರೌಪದೀಹರಣ
  6. ಪಾರ್ಥಾಗಮನ
  7. ದ್ರೌಪದೀವಾಕ್ಯ
  8. ಜಯದ್ರಥಪಲಾಯನ
  9. ಜಯದ್ರಥವಿಮೋಕ್ಷಣ
  10. ರಾಮೋಪಾಖ್ಯಾನ-ಯುಧಿಷ್ಠಿರಪ್ರಶ್ನಃ
  11. ರಾಮೋಪಾಖ್ಯಾನ-ರಾಮರಾವಣಯೋರ್ಜನ್ಮಕಥನ
  12. ರಾಮೋಪಾಖ್ಯಾನ-ರಾವಣಾದಿವರಪ್ರಾಪ್ತಿಃ
  13. ರಾಮೋಪಾಖ್ಯಾನ-ವಾನರಾದ್ಯುತ್ಪತ್ತಿಃ
  14. ರಾಮೋಪಾಖ್ಯಾನ-ರಾಮವನಾಭಿಗಮನ
  15. ರಾಮೋಪಾಖ್ಯಾನ-ಮಾರೀಚವಧ-ಸೀತಾಪಹರಣ
  16. ರಾಮೋಪಾಖ್ಯಾನ-ಕಬಂಧಹನನ
  17. ರಾಮೋಪಾಖ್ಯಾನ-ತ್ರಿಜಟಾಕೃತಸೀತಾಸಂವಾದಃ
  18. ರಾಮೋಪಾಖ್ಯಾನ-ಸೀತಾರಾವಣಸಂವಾದಃ
  19. ರಾಮೋಪಾಖ್ಯಾನ-ಹನುಮಪ್ರತ್ಯಾಗಮನ
  20. ರಾಮೋಪಾಖ್ಯಾನ-ಸೇತುಬಂಧನ
  21. ರಾಮೋಪಾಖ್ಯಾನ-ಲಂಕಾಪ್ರವೇಶ
  22. ರಾಮೋಪಾಖ್ಯಾನ-ರಾಮರಾವಣದ್ವಂದ್ವಯುದ್ಧಃ
  23. ರಾಮೋಪಾಖ್ಯಾನ-ಕುಂಭಕರ್ಣನಿರ್ಗಮನ
  24. ರಾಮೋಪಾಖ್ಯಾನ-ಕುಂಬಕರ್ಣಾದಿವಧಃ
  25. ರಾಮೋಪಾಖ್ಯಾನ-ಇಂದ್ರಜಿದ್ಯುದ್ಧಃ
  26. ರಾಮೋಪಾಖ್ಯಾನ-ಇಂದ್ರಜಿದ್ವಧಃ
  27. ರಾಮೋಪಾಖ್ಯಾನ-ರಾವಣವಧಃ
  28. ರಾಮೋಪಾಖ್ಯಾನ-ಶ್ರೀರಾಮಾಭಿಷೇಕ
  29. ರಾಮೋಪಾಖ್ಯಾನ-ಯುಧಿಷ್ಠಿರಾಶ್ವಾಸನ
  30. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೧
  31. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೨
  32. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೩
  33. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೪
  34. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೫
  35. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೬
  36. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೭

Comments are closed.