Aranyaka Parva: Chapter 283

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೮೩

ಯಮನು ಸಾವಿತ್ರಿಗೆ ನೀಡಿದ ವರದಂತೆ ದ್ಯುಮತ್ಸೇನನು ರಾಜ್ಯವನ್ನು ಹಿಂದಿರುಗಿ ಪಡೆಯುವುದು (೧-೧೧). ಸಾವಿತ್ರ್ಯುಪಾಖ್ಯಾನವನ್ನು ಪೂರ್ಣಗೊಳಿಸಿ ಮಾರ್ಕಂಡೇಯನು ತೆರಳಿದುದು (೧೨-೧೬).

03283001 ಮಾರ್ಕಂಡೇಯ ಉವಾಚ|

03283001a ತಸ್ಯಾಂ ರಾತ್ರ್ಯಾಂ ವ್ಯತೀತಾಯಾಮುದಿತೇ ಸೂರ್ಯಮಂಡಲೇ|

03283001c ಕೃತಪೂರ್ವಾಹ್ಣಿಕಾಃ ಸರ್ವೇ ಸಮೇಯುಸ್ತೇ ತಪೋಧನಾಃ||

ಮಾರ್ಕಂಡೇಯನು ಹೇಳಿದನು: “ಆ ರಾತ್ರಿಯು ಕಳೆದು ಸೂರ್ಯನು ಮಂಡಲದಲ್ಲಿ ಉದಯಿಸಲು ಎಲ್ಲ ತಪೋಧನರೂ ಪುರ್ವಾಹ್ನೀಕಗಳನ್ನು ಮಾಡಿ ಪುನಃ ಸೇರಿದರು.

03283002a ತದೇವ ಸರ್ವಂ ಸಾವಿತ್ರ್ಯಾ ಮಹಾಭಾಗ್ಯಂ ಮಹರ್ಷಯಃ|

03283002c ದ್ಯುಮತ್ಸೇನಾಯ ನಾತೃಪ್ಯನ್ಕಥಯಂತಃ ಪುನಃ ಪುನಃ||

ಆ ಎಲ್ಲ ಮಹರ್ಷಿಗಳು ಸಾವಿತ್ರಿಯ ಮಹಾಭಾಗ್ಯದ ಕುರಿತು ದ್ಯುಮತ್ಸೇನನಿಗೆ ಪುನಃ ಪುನಃ ಹೇಳಿಯೂ ತೃಪ್ತರಾಗಲಿಲ್ಲ.

03283003a ತತಃ ಪ್ರಕೃತಯಃ ಸರ್ವಾಃ ಶಾಲ್ವೇಭ್ಯೋಽಭ್ಯಾಗತಾ ನೃಪ|

03283003c ಆಚಖ್ಯುರ್ನಿಹತಂ ಚೈವ ಸ್ವೇನಾಮಾತ್ಯೇನ ತಂ ನೃಪಂ||

ಆಗ ಶಾಲ್ವದ ಪ್ರಜೆಗಳೆಲ್ಲರೂ ನೃಪನ ಬಳಿಬಂದು ಆ ರಾಜನು ತನ್ನ ಅಮಾತ್ಯನಿಂದಲೇ ಕೊಲ್ಲಲ್ಪಟ್ಟಿದ್ದಾನೆ ಎಂದು ಹೇಳಿದರು.

03283004a ತಂ ಮಂತ್ರಿಣಾ ಹತಂ ಶ್ರುತ್ವಾ ಸಸಹಾಯಂ ಸಬಾಂಧವಂ|

03283004c ನ್ಯವೇದಯನ್ಯಥಾತತ್ತ್ವಂ ವಿದ್ರುತಂ ಚ ದ್ವಿಷದ್ಬಲಂ||

ಅದೇ ಮಂತ್ರಿಯಿಂದ ಅವನ ಸಹಾಯಕರೂ ಸಬಾಂಧವರೂ ಹತರಾದರು. ಹಾಗೆಯೇ ಅವನ ಸೇನೆಯೂ ಇದನ್ನು ತಿಳಿದು ಪಲಾಯನ ಮಾಡಿದೆಯೆಂದೂ ಹೇಳಿದರು.

03283005a ಐಕಮತ್ಯಂ ಚ ಸರ್ವಸ್ಯ ಜನಸ್ಯಾಥ ನೃಪಂ ಪ್ರತಿ|

03283005c ಸಚಕ್ಷುರ್ವಾಪ್ಯಚಕ್ಷುರ್ವಾ ಸ ನೋ ರಾಜಾ ಭವತ್ವಿತಿ||

“ಜನರೆಲ್ಲರೂ ಒಂದೇ ಮತದಿಂದ ಹಿಂದಿನ ನೃಪನನ್ನು ಬಯಸಿದ್ದಾರೆ. ಕಣ್ಣಿರಲಿ ಅಥವಾ ಕುರುಡನಾಗಿರಲಿ, ಅವನೇ ನಮ್ಮ ರಾಜನಾಗಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

03283006a ಅನೇನ ನಿಶ್ಚಯೇನೇಹ ವಯಂ ಪ್ರಸ್ಥಾಪಿತಾ ನೃಪ|

03283006c ಪ್ರಾಪ್ತಾನೀಮಾನಿ ಯಾನಾನಿ ಚತುರಂಗಂ ಚ ತೇ ಬಲಂ||

ರಾಜ! ಇದೇ ನಿಶ್ಚಯಮಾಡಿ ನಿನ್ನ ಚತುರಂಗ ಬಲವನ್ನು ರಥಗಳನ್ನು ತೆಗೆದುಕೊಡು ನಿನ್ನನ್ನು ಕರೆದೊಯ್ಯಲು ಇಲ್ಲಿಗೆ ಬಂದಿದ್ದೇವೆ.

03283007a ಪ್ರಯಾಹಿ ರಾಜನ್ಭದ್ರಂ ತೇ ಘುಷ್ಟಸ್ತೇ ನಗರೇ ಜಯಃ|

03283007c ಅಧ್ಯಾಸ್ಸ್ವ ಚಿರರಾತ್ರಾಯ ಪಿತೃಪೈತಾಮಹಂ ಪದಂ||

ರಾಜನ್! ಹೊರಡುವವನಾಗು. ನಿನಗೆ ಮಂಗಳವಾಗಲಿ. ನಿನ್ನ ನಗರದಲ್ಲಿ ಜಯಘೋಷವಾಗುತ್ತಿದೆ. ಇಂದಿನಿಂದ ನೀನು ನಿನ್ನ ಪಿತೃಪಿತಾಮಹರ ಪದವನ್ನು ಚಿರವಾಗಿ ಆಳು.”

03283008a ಚಕ್ಷುಷ್ಮಂತಂ ಚ ತಂ ದೃಷ್ಟ್ವಾ ರಾಜಾನಂ ವಪುಷಾನ್ವಿತಂ|

03283008c ಮೂರ್ಧಭಿಃ ಪತಿತಾಃ ಸರ್ವೇ ವಿಸ್ಮಯೋತ್ಫುಲ್ಲಲೋಚನಾಃ||

ಅವನಿಗೆ ದೃಷ್ಟಿ ಬಂದುದನ್ನು ಮತ್ತು ಆರೋಗ್ಯದಿಂದಿರುವುದನ್ನು ಕಂಡು ವಿಸ್ಮಿತರಾಗಿ ರಾಜನಿಗೆ ಎಲ್ಲರೂ ಬಿದ್ದು ನಮಸ್ಕರಿಸಿದರು.

03283009a ತತೋಽಭಿವಾದ್ಯ ತಾನ್ವೃದ್ಧಾನ್ದ್ವಿಜಾನಾಶ್ರಮವಾಸಿನಃ|

03283009c ತೈಶ್ಚಾಭಿಪೂಜಿತಃ ಸರ್ವೈಃ ಪ್ರಯಯೌ ನಗರಂ ಪ್ರತಿ||

ಆಗ ರಾಜನು ವೃದ್ಧರನ್ನೂ ವನಾಶ್ರಮವಾಸಿ ದ್ವಿಜರನ್ನೂ ಅಭಿವಂದಿಸಿ ಅವರೆಲ್ಲರನ್ನೂ ಪೂಜಿಸಿ ತನ್ನ ನಗರದ ಕಡೆ ಹೊರಟನು.

03283010a ಶೈಬ್ಯಾ ಚ ಸಹ ಸಾವಿತ್ರ್ಯಾ ಸ್ವಾಸ್ತೀರ್ಣೇನ ಸುವರ್ಚಸಾ|

03283010c ನರಯುಕ್ತೇನ ಯಾನೇನ ಪ್ರಯಯೌ ಸೇನಯಾ ವೃತಾ||

ಶೈಬ್ಯೆಯೂ ಕೂಡ ಸಾವಿತ್ರಿಯನ್ನೊಡಗೂಡಿ ಸುಂದರವಾಗಿ ಅಲಂಕೃತಗೊಂಡ, ಹಲವಾರು ಜನರು ಎತ್ತಿಕೊಂಡು ಹೋಗುತ್ತಿದ್ದ ಪಲ್ಲಕ್ಕಿಯಲ್ಲಿ ಕುಳಿತುಕೊಂಡು, ಸೇನೆಯಿಂದ ಸುತ್ತುವರೆದು, ಅಲ್ಲಿಂದ ಹೊರಟಳು.

03283011a ತತೋಽಭಿಷಿಷಿಚುಃ ಪ್ರೀತ್ಯಾ ದ್ಯುಮತ್ಸೇನಂ ಪುರೋಹಿತಾಃ|

03283011c ಪುತ್ರಂ ಚಾಸ್ಯ ಮಹಾತ್ಮಾನಂ ಯೌವರಾಜ್ಯೇಽಭ್ಯಷೇಚಯನ್||

ಅಲ್ಲಿ ಸಂತೋಷದಿಂದ ಪುರೋಹಿತರು ದ್ಯುಮತ್ಸೇನನನ್ನು ಅಭಿಷೇಕಿಸಿದರು ಮತ್ತು ಅವನ ಪುತ್ರ ಮಹಾತ್ಮನನ್ನು ಯುವರಾಜನನ್ನಾಗಿ ಅಭಿಷೇಕಿಸಿದರು.

03283012a ತತಃ ಕಾಲೇನ ಮಹತಾ ಸಾವಿತ್ರ್ಯಾಃ ಕೀರ್ತಿವರ್ಧನಂ|

03283012c ತದ್ವೈ ಪುತ್ರಶತಂ ಜಜ್ಞೇ ಶೂರಾಣಾಮನಿವರ್ತಿನಾಂ||

ಬಹಳ ಸಮಯದ ನಂತರ ಸಾವಿತ್ರಿಯು ಕೀರ್ತಿವರ್ಧಕರಾದ ರಣದಲ್ಲಿ ಹಿಂಜರಿಯದ ನೂರು ಶೂರ ಮಕ್ಕಳಿಗೆ ಜನ್ಮವಿತ್ತಳು.

03283013a ಭ್ರಾತೄಣಾಂ ಸೋದರಾಣಾಂ ಚ ತಥೈವಾಸ್ಯಾಭವಚ್ಚತಂ|

03283013c ಮದ್ರಾಧಿಪಸ್ಯಾಶ್ವಪತೇರ್ಮಾಲವ್ಯಾಂ ಸುಮಹಾಬಲಂ||

ಹಾಗೆಯೇ  ಮದ್ರಾಧಿಪ ಅಶ್ವಪತಿಯೂ ಕೂಡ ಮಾಲವಿಯಲ್ಲಿ ಅವಳಿಗೆ ತಕ್ಕುದಾದ ಸುಮಹಾಬಲ ಸೋದರ ಅಣ್ಣತಮ್ಮಂದಿರನ್ನು ಪಡೆದನು.

03283014a ಏವಮಾತ್ಮಾ ಪಿತಾ ಮಾತಾ ಶ್ವಶ್ರೂಃ ಶ್ವಶುರ ಏವ ಚ|

03283014c ಭರ್ತುಃ ಕುಲಂ ಚ ಸಾವಿತ್ರ್ಯಾ ಸರ್ವಂ ಕೃಚ್ಚ್ರಾತ್ಸಮುದ್ಧೃತಂ||

ಹೀಗೆ ಸಾವಿತ್ರಿಯು ತನ್ನ ತಂದೆತಾಯಿಯರನ್ನೂ, ಅತ್ತೆಮಾವರನ್ನೂ, ಪತಿಯ ಕುಲವನ್ನೂ ಎಲ್ಲರನ್ನೂ ಕಷ್ಟಗಳಿಂದ ಉದ್ಧರಿಸಿದಳು.

03283015a ತಥೈವೈಷಾಪಿ ಕಲ್ಯಾಣೀ ದ್ರೌಪದೀ ಶೀಲಸಮ್ಮತಾ|

03283015c ತಾರಯಿಷ್ಯತಿ ವಃ ಸರ್ವಾನ್ಸಾವಿತ್ರೀವ ಕುಲಾಂಗನಾ||

ಸಾವಿತ್ರಿಯಂತೆ ಕುಲಾಂಗನೆ ಕಲ್ಯಾಣಿ ಶೀಲಸಮ್ಮತಾ ದ್ರೌಪದಿಯೂ ಕೂಡ ನಿಮ್ಮೆಲ್ಲರನ್ನೂ ದಾಟಿಸುತ್ತಾಳೆ.””

03283016 ವೈಶಂಪಾಯನ ಉವಾಚ|

03283016a ಏವಂ ಸ ಪಾಂಡವಸ್ತೇನ ಅನುನೀತೋ ಮಹಾತ್ಮನಾ|

03283016c ವಿಶೋಕೋ ವಿಜ್ವರೋ ರಾಜನ್ಕಾಮ್ಯಕೇ ನ್ಯವಸತ್ತದಾ||

ವೈಶಂಪಾಯನನು ಹೇಳಿದನು: “ರಾಜನ್! ಹೀಗೆ ಆ ಮಹಾತ್ಮನಿಂದ ಬೀಳ್ಕೊಂಡು ಪಾಂಡವರು ವಿಶೋಕರೂ ವಿಜ್ವರರೂ ಆಗಿ ಕಾಮ್ಯಕದಲ್ಲಿ ವಾಸಿಸಿದರು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ಪತಿವ್ರತಾಮಹಾತ್ಮ್ಯೇ ಸಾವಿತ್ರ್ಯುಪಾಖ್ಯಾನೇ ತ್ರ್ಯಶೀತ್ಯಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ಪತಿವ್ರತಾಮಹಾತ್ಮ್ಯೆಯಲ್ಲಿ ಸಾವಿತ್ರ್ಯುಪಾಖ್ಯಾನದಲ್ಲಿ ಇನ್ನೂರಾಎಂಭತ್ಮೂರನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೨/೧೮, ಉಪಪರ್ವಗಳು-೪೨/೧೦೦, ಅಧ್ಯಾಯಗಳು-೫೮೦/೧೯೯೫, ಶ್ಲೋಕಗಳು-೧೯೪೦೯/೭೩೭೮೪

Related image

Comments are closed.