Aranyaka Parva: Chapter 251

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೫೧

ದ್ರೌಪದಿಯನ್ನು ಬಯಸಿದ ಜಯದ್ರಥನೇ ಮೊದಲಾದ ಆ ಏಳು ಮಂದಿ ರಾಜರು ಪಾಂಡವರ ಆಶ್ರಮವನ್ನು ಪ್ರವೇಶಿಸಿದುದು (೧-೮). ಪರಸ್ಪರರ ಕುಶಲವನ್ನು ಕೇಳಿದ ನಂತರ ದ್ರೌಪದಿಯು ಸ್ವಯಂ ಯುಧಿಷ್ಠಿರನು ಅವನಿಗೆ ಬೆಳಗಿನ ಊಟವನ್ನು ಕೊಡಿಸುತ್ತಾನೆಂದು ಹೇಳಲು, ಜಯದ್ರಥನು ಅವಳಿಗೆ “ನನ್ನ ರಥವನ್ನೇರಿ ಕೇವಲ ಸುಖವನ್ನೇ ಹೊಂದು” ಎಂದೂ “ಅರಣ್ಯವಾಸಿಗಳಾದ ಪಾಂಡವರನ್ನು ಅನುಮೋದಿಸುವುದು ನಿನಗೆ ತಕ್ಕುದಲ್ಲ” ಎಂದೂ, ಮತ್ತು ತನ್ನ ಭಾರ್ಯೆಯಾಗೆಂದೂ ಹೇಳುವುದು (೯-೧೯). ದ್ರೌಪದಿಯು ಸಿಟ್ಟಿಗೆದ್ದು ಹುಬ್ಬುಗಂಟಿಕ್ಕಿ, ದೂರ ಸರಿದು, ನಾಚಿಕೆಪಡೆಂದು ಹೇಳಿ ಗಂಡಂದಿರು ಬರುವವರೆಗೆ ಬಂದವರ ಚಿತ್ತವನ್ನು ಮೋಹಗೊಳಿಸಲು ಮಾತುಗಳನ್ನು ಪೋಣಿಸುವುದು (೨೦-೨೧).

03251001 ವೈಶಂಪಾಯನ ಉವಾಚ|

03251001a ಅಥಾಸೀನೇಷು ಸರ್ವೇಷು ತೇಷು ರಾಜಸು ಭಾರತ|

03251001c ಕೋಟಿಕಾಶ್ಯವಚಃ ಶ್ರುತ್ವಾ ಶೈಬ್ಯಂ ಸೌವೀರಕೋಽಬ್ರವೀತ್||

ವೈಶಂಪಾಯನನು ಹೇಳಿದನು: “ಭಾರತ! ಎಲ್ಲ ರಾಜರೂ ಕುಳಿತಲ್ಲಿಗೆ ಹೋಗಿ ಕೋಟಿಕಾಶ್ಯನು ಹೇಳಲು ಅವನ ಮಾತುಗಳನ್ನು ಕೇಳಿ ಸೌವೀರಕನು ಶೈಬ್ಯನಿಗೆ ಹೇಳಿದನು:

03251002a ಯದಾ ವಾಚಂ ವ್ಯಾಹರಂತ್ಯಾಮಸ್ಯಾಂ ಮೇ ರಮತೇ ಮನಃ|

03251002c ಸೀಮಂತಿನೀನಾಂ ಮುಖ್ಯಾಯಾಂ ವಿನಿವೃತ್ತಃ ಕಥಂ ಭವಾನ್||

“ಸೀಮಂತಿನಿಯರ ಮುಖ್ಯಳಾದ ಇವಳಲ್ಲಿ ನನ್ನ ಮನಸ್ಸು ರಮಿಸುತ್ತಿರಲು ನೀನು ಹೇಗೆ ತಾನೇ ಉತ್ತರಿಸಿದ ಅವಳನ್ನು ಬಿಟ್ಟು ಹಿಂದಿರುಗಿದೆ?

03251003a ಏತಾಂ ದೃಷ್ಟ್ವಾ ಸ್ತ್ರಿಯೋ ಮೇಽನ್ಯಾ ಯಥಾ ಶಾಖಾಮೃಗಸ್ತ್ರಿಯಃ|

03251003c ಪ್ರತಿಭಾಂತಿ ಮಹಾಬಾಹೋ ಸತ್ಯಮೇತದ್ಬ್ರವೀಮಿ ತೇ||

ಈ ಸ್ತ್ರೀಯನ್ನು ನೋಡಿದ ನಂತರ ನನಗೆ ಅನ್ಯ ಸ್ತ್ರೀಯರು ಮಂಗಗಳಂತೆ ತೋರುತ್ತಾರೆ. ಮಹಾಬಾಹೋ! ನಾನು ನಿನಗೆ ಸತ್ಯವನ್ನು ಹೇಳುತ್ತಿದ್ದೇನೆ.

03251004a ದರ್ಶನಾದೇವ ಹಿ ಮನಸ್ತಯಾ ಮೇಽಪಹೃತಂ ಭೃಶಂ|

03251004c ತಾಂ ಸಮಾಚಕ್ಷ್ವ ಕಲ್ಯಾಣೀಂ ಯದಿ ಸ್ಯಾಚ್ಚೈಬ್ಯ ಮಾನುಷೀ||

ಅವಳ ದರ್ಶನದಿಂದಲೇ ನನ್ನ ಮನಸ್ಸು ಅವಳಿಂದ ಅಪಹೃತವಾಗಿದೆ. ಶೈಬ್ಯ! ಅವಳನ್ನು ನೋಡಿದ ನೀನು ಆ ಕಲ್ಯಾಣಿಯು ಮನುಷ್ಯಳೋ ಎನ್ನುವುದನ್ನು ಹೇಳು.”

03251005 ಕೋಟಿಕಾಶ್ಯ ಉವಾಚ|

03251005a ಏಷಾ ವೈ ದ್ರೌಪದೀ ಕೃಷ್ಣಾ ರಾಜಪುತ್ರೀ ಯಶಸ್ವಿನೀ|

03251005c ಪಂಚಾನಾಂ ಪಾಂಡುಪುತ್ರಾಣಾಂ ಮಹಿಷೀ ಸಮ್ಮತಾ ಭೃಶಂ||

ಕೋಟಿಕಾಶ್ಯನು ಹೇಳಿದನು: “ಇವಳು ರಾಜಪುತ್ರಿ ದ್ರೌಪದಿ ಯಶಸ್ವಿನೀ ಕೃಷ್ಣೆ. ಒಟ್ಟಾಗಿ ಪಡೆದಿರುವ ಪಂಚ ಪಾಂಡವರ ಮಹಿಷಿ.

03251006a ಸರ್ವೇಷಾಂ ಚೈವ ಪಾರ್ಥಾನಾಂ ಪ್ರಿಯಾ ಬಹುಮತಾ ಸತೀ|

03251006c ತಯಾ ಸಮೇತ್ಯ ಸೌವೀರ ಸುವೀರಾನ್ಸುಸುಖೀ ವ್ರಜ||

ಆ ಸರ್ವ ಪಾರ್ಥರ ಬಹು ಪ್ರಿಯಳಾದ ಸತಿಯವಳು. ಸೌವೀರ! ಅವಳನ್ನು ನೀನು ನೋಡಿಯಾಯಿತು. ಈಗ ಸುಖಿಯಾಗಿ ಸುವೀರಕ್ಕೆ ಹೊರಡು.””

03251007 ವೈಶಂಪಾಯನ ಉವಾಚ|

03251007a ಏವಮುಕ್ತಃ ಪ್ರತ್ಯುವಾಚ ಪಶ್ಯಾಮೋ ದ್ರೌಪದೀಮಿತಿ|

03251007c ಪತಿಃ ಸೌವೀರಸಿಂಧೂನಾಂ ದುಷ್ಟಭಾವೋ ಜಯದ್ರಥಃ||

ವೈಶಂಪಾಯನನು ಹೇಳಿದನು: “ಇದನ್ನು ಕೇಳಿದ ಸೌವೀರ-ಸಿಂಧುಗಳ ರಾಜ ದುಷ್ಟಭಾವ ಜಯದ್ರಥನು “ದ್ರೌಪದಿಯನ್ನು ನೋಡೋಣ” ಎಂದು ಉತ್ತರಿಸಿದನು.

03251008a ಸ ಪ್ರವಿಶ್ಯಾಶ್ರಮಂ ಶೂನ್ಯಂ ಸಿಂಹಗೋಷ್ಠಂ ವೃಕೋ ಯಥಾ|

03251008c ಆತ್ಮನಾ ಸಪ್ತಮಃ ಕೃಷ್ಣಾಮಿದಂ ವಚನಮಬ್ರವೀತ್||

ಅವನು ಒಂದು ತೋಳವು ಸಿಂಹದ ಗುಹೆಯನ್ನು ಹೊಗುವಂತೆ ಏಳು ಜನರ ಜೊತೆ ಆ ಶೂನ್ಯ ಆಶ್ರಮವನ್ನು ಪ್ರವೇಶಿಸಿ ಕೃಷ್ಣೆಗೆ ಈ ಮಾತುಗಳನ್ನಾಡಿದನು:

03251009a ಕುಶಲಂ ತೇ ವರಾರೋಹೇ ಭರ್ತಾರಸ್ತೇಽಪ್ಯನಾಮಯಾಃ|

03251009c ಯೇಷಾಂ ಕುಶಲಕಾಮಾಸಿ ತೇಽಪಿ ಕಚ್ಚಿದನಾಮಯಾಃ||

“ವರಾರೋಹೇ! ನಿನಗೆ ಕುಶಲವಾಗಲಿ. ನಿನ್ನ ಪತಿಗಳು ಆರೋಗ್ಯದಿಂದಿರುವರೇ? ನೀನು ಕುಶಲದಿಂದಿರಬೇಕೆಂಬುವವರೂ ಕೂಡ ಅನಾಮಯರಾಗಿದ್ದಾರೆಯೇ?”

03251010 ದ್ರೌಪದ್ಯುವಾಚ|

03251010a ಕೌರವ್ಯಃ ಕುಶಲೀ ರಾಜಾ ಕುಂತೀಪುತ್ರೋ ಯುಧಿಷ್ಠಿರಃ|

03251010c ಅಹಂ ಚ ಭ್ರಾತರಶ್ಚಾಸ್ಯ ಯಾಂಶ್ಚಾನ್ಯಾನ್ಪರಿಪೃಚ್ಚಸಿ||

ದ್ರೌಪದಿಯು ಹೇಳಿದಳು: “ರಾಜ! ಕೌರವ್ಯ ಕುಂತೀಪುತ್ರ ಯುಧಿಷ್ಠಿರನು, ಅವನ ತಮ್ಮಂದಿರು, ನಾನೂ ಕೂಡ ಮತ್ತು ನೀನು ಕೇಳುವ ಇತರರೂ ಕುಶಲನಾಗಿದ್ದಾರೆ.

03251011a ಪಾದ್ಯಂ ಪ್ರತಿಗೃಹಾಣೇದಮಾಸನಂ ಚ ನೃಪಾತ್ಮಜ|

03251011c ಮೃಗಾನ್ಪಂಚಾಶತಂ ಚೈವ ಪ್ರಾತರಾಶಂ ದದಾನಿ ತೇ||

ನೃಪಾತ್ಮಜ! ಈ ಪಾದ್ಯವನ್ನು ಮತ್ತು ಆಸನವನ್ನು ಸ್ವೀಕರಿಸು. ಈ ಐದು ಜಿಂಕೆಗಳನ್ನು ನಿನಗೆ ಬೆಳಗಿನ ಊಟವನ್ನಾಗಿ ಕೊಡುತ್ತೇನೆ.

03251012a ಐಣೇಯಾನ್ಪೃಷತಾನ್ಯ್ಯ‌ಅಂಕೂನ್ ಹರಿಣಾಂ ಶರಭಾಂ ಶಶಾನ್|

03251012c ಋಶ್ಯಾನೃರೂಂ ಶಂಬರಾಂಶ್ಚ ಗವಯಾಂಶ್ಚ ಮೃಗಾನ್ಬಹೂನ್||

03251013a ವರಾಹಾನ್ಮಹಿಷಾಂಶ್ಚೈವ ಯಾಶ್ಚಾನ್ಯಾ ಮೃಗಜಾತಯಃ|

03251013c ಪ್ರದಾಸ್ಯತಿ ಸ್ವಯಂ ತುಭ್ಯಂ ಕುಂತೀಪುತ್ರೋ ಯುಧಿಷ್ಠಿರಃ||

ಸ್ವಯಂ ಕುಂತೀಪುತ್ರ ಯುಧಿಷ್ಠಿರನು ನಿನಗೆ ಕೃಷ್ಣಮೃಗ, ಚುಕ್ಕೆಗಳನ್ನುಳ್ಳ ಜಿಂಕೆ, ಶರಭ, ಕೋಳಿ, ಮೊಲ, ಬಿಳೀಕಾಲಿನ ಜಿಂಕೆ, ರುರು, ಸಂಬರ, ಹಸುಗಳು, ಬಹಳ ಜಿಂಕೆಗಳು, ವರಾಹ, ಕಾಡೆಮ್ಮೆ, ಮತ್ತು ಇತರ ಮೃಗಜಾತಿಗಳನ್ನು ಕೊಡುತ್ತಾನೆ.”

03251014 ಜಯದ್ರಥ ಉವಾಚ|

03251014a ಕುಶಲಂ ಪ್ರಾತರಾಶಸ್ಯ ಸರ್ವಾ ಮೇಽಪಚಿತಿಃ ಕೃತಾ|

03251014c ಏಹಿ ಮೇ ರಥಮಾರೋಹ ಸುಖಮಾಪ್ನುಹಿ ಕೇವಲಂ||

ಜಯದ್ರಥನು ಹೇಳಿದನು: “ಇದಾಗಲೇ ನೀನು ಬೆಳಗಿನ ಊಟದ ಎಲ್ಲ ಗೌರವವನ್ನೂ ನೀಡಿದ್ದೀಯೆ. ಬಾ. ನನ್ನ ರಥವನ್ನೇರಿ ಕೇವಲ ಸುಖವನ್ನೇ ಹೊಂದು.

03251015a ಗತಶ್ರೀಕಾಂಶ್ಚ್ಯುತಾನ್ರಾಜ್ಯಾತ್ಕೃಪಣಾನ್ಗತಚೇತಸಃ|

03251015c ಅರಣ್ಯವಾಸಿನಃ ಪಾರ್ಥಾನ್ನಾನುರೋದ್ಧುಂ ತ್ವಮರ್ಹಸಿ||

ಗತಚೇತಸರಾದ, ಕೃಪಣರಾದ, ಸಂಪತ್ತನ್ನು ಕಳೆದುಕೊಂಡ ಅರಣ್ಯವಾಸಿಗಳಾದ ಪಾರ್ಥರನ್ನು ಅನುಮೋದಿಸುವುದು ನಿನಗೆ ತಕ್ಕುದಲ್ಲ.

03251016a ನ ವೈ ಪ್ರಾಜ್ಞಾ ಗತಶ್ರೀಕಂ ಭರ್ತಾರಮುಪಯುಂಜತೇ|

03251016c ಯುಂಜಾನಮನುಯುಂಜೀತ ನ ಶ್ರಿಯಃ ಸಂಕ್ಷಯೇ ವಸೇತ್||

ಯಾವ ಪ್ರಾಜ್ಞ ಸ್ತ್ರೀಯೂ ಸಂಪತ್ತನ್ನು ಕಳೆದುಕೊಂಡವರನ್ನು ಗಂಡಂದಿರಾಗಿ ಸುಖಿಸುವುದಿಲ್ಲ. ಅವನು ಎತ್ತರಕ್ಕೆ ಹೋಗುವಾಗ ಎತ್ತರಕ್ಕೆ ಹೋಗಬೇಕು. ಮತ್ತು ಅವನ ಸಂಪತ್ತು ಕಡೆಮೆಯಾದಾಗ ಅವನೊಂದಿಗೆ ವಾಸಿಸಬಾರದು.

03251017a ಶ್ರಿಯಾ ವಿಹೀನಾ ರಾಜ್ಯಾಚ್ಚ ವಿನಷ್ಟಾಃ ಶಾಶ್ವತೀಃ ಸಮಾಃ|

03251017c ಅಲಂ ತೇ ಪಾಂಡುಪುತ್ರಾಣಾಂ ಭಕ್ತ್ಯಾ ಕ್ಲೇಶಮುಪಾಸಿತುಂ||

ಅವರು ಸಂಪತ್ತನ್ನು ಕಳೆದುಕೊಂಡಿದ್ದಾರೆ. ರಾಜ್ಯವನ್ನೂ ಕೂಡ ಶಾಶ್ವತವಾಗಿ ಕಳೆದುಕೊಂಡಿದ್ದಾರೆ. ಪಾಂಡುಪುತ್ರರ ಮೇಲಿನ ಪ್ರೇಮದಿಂದಾಗಿ ನೀನು ಕ್ಲೇಶವನ್ನು ಅನುಭವಿಸುತ್ತಿರುವೆಯಾ?

03251018a ಭಾರ್ಯಾ ಮೇ ಭವ ಸುಶ್ರೋಣಿ ತ್ಯಜೈನಾನ್ಸುಖಮಾಪ್ನುಹಿ|

03251018c ಅಖಿಲಾನ್ಸಿಂಧುಸೌವೀರಾನವಾಪ್ನುಹಿ ಮಯಾ ಸಹ||

ಸುಶ್ರೋಣೀ! ನನ್ನ ಭಾರ್ಯೆಯಾಗು. ಅವರನ್ನು ತ್ಯಜಿಸಿ ಸುಖವನ್ನು ಹೊಂದು. ನನ್ನೊಂದಿಗೆ ಅಖಿಲ ಸಿಂಧು ಸೌವೀರಗಳನ್ನು ಪಡೆಯುತ್ತೀಯೆ.”

03251019 ವೈಶಂಪಾಯನ ಉವಾಚ|

03251019a ಇತ್ಯುಕ್ತಾ ಸಿಂಧುರಾಜೇನ ವಾಕ್ಯಂ ಹೃದಯಕಂಪನಂ|

03251019c ಕೃಷ್ಣಾ ತಸ್ಮಾದಪಾಕ್ರಾಮದ್ದೇಶಾತ್ಸಭ್ರುಕುಟೀಮುಖೀ||

ವೈಶಂಪಾಯನನು ಹೇಳಿದನು: “ಹೃದಯವನ್ನು ಕಂಪಿಸುವ ಸಿಂಧುರಾಜನ ಈ ಮಾತುಗಳನ್ನು ಕೇಳಿ ಕೃಷ್ಣೆಯು ತನ್ನ ಹುಬ್ಬುಗಳನ್ನು ಗಂಟಿಕ್ಕಿ ದೂರ ಹೋದಳು.

03251020a ಅವಮತ್ಯಾಸ್ಯ ತದ್ವಾಕ್ಯಮಾಕ್ಷಿಪ್ಯ ಚ ಸುಮಧ್ಯಮಾ|

03251020c ಮೈವಮಿತ್ಯಬ್ರವೀತ್ಕೃಷ್ಣಾ ಲಜ್ಜಸ್ವೇತಿ ಚ ಸೈಂಧವಂ||

ಅಪಮಾನಿಸುವಂತೆ ಅವನ ಆ ಮಾತನ್ನು ಕಡೆಗಣಿಸಿ ಸುಮಧ್ಯಮೆಯು ಸೈಂಧವನಿಗೆ ಹೇಳಿದಳು: “ಹಾಗೆ ಮಾತನಾಡಬೇಡ! ನಾಚಿಕೆಪಡು!”

03251021a ಸಾ ಕಾಂಕ್ಷಮಾಣಾ ಭರ್ತೄಣಾಮುಪಯಾನಮನಿಂದಿತಾ|

03251021c ವಿಲೋಭಯಾಮಾಸ ಪರಂ ವಾಕ್ಯೈರ್ವಾಕ್ಯಾನಿ ಯುಂಜತೀ||

ಪತಿಯಂದಿರು ಈಗಲೇ ಬರಲಿ ಎಂದು ಬಯಸುತ್ತಾ ಆ ಅನಿಂದಿತೆಯು ಪರರನ್ನು ವಿಲೋಭಗೊಳಿಸಲು ಮಾತಲ್ಲಿ ಮಾತುಗಳನ್ನು ಪೋಣಿಸತೊಡಗಿದಳು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ದ್ರೌಪದೀಹರಣಪರ್ವಣಿ ಜಯದ್ರಥದ್ರೌಪದೀಸಂವಾದೇ ಏಕಪಂಚದಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ದ್ರೌಪದೀಹರಣಪರ್ವದಲ್ಲಿ ಜಯದ್ರಥದ್ರೌಪದೀಸಂವಾದದಲ್ಲಿ ಇನ್ನೂರಾಐವತ್ತೊಂದನೆಯ ಅಧ್ಯಾಯವು.

Image result for indian motifs lilies

Comments are closed.