Aranyaka Parva: Chapter 267

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೬೭

ಕಪಿಸೇನೆ, ಸೇತುಬಂಧ, ವಿಭೀಷಣ ಸಖ್ಯ

ರಾಮನು ಸುಗ್ರೀವ ಮತ್ತು ಇತರ ಕಪೀಂದ್ರರ ಸೇನೆಗಳೊಡನೆ ಸಮುದ್ರ ತೀರಕ್ಕೆ ಬಂದುದು (೧-೨೨). ಸಮುದ್ರ ರಾಜನ ಸಲಹೆಯಂತೆ ದೇವಶಿಲ್ಪಿ ವಿಶ್ವಕರ್ಮನ ಮಗ ವಾನರ ನಲನಿಂದ ಸಾಗರಕ್ಕೆ ಸೇತುವೆಯು ನಿರ್ಮಾಣವಾದುದು (೨೩-೪೫). ಅಲ್ಲಿಯೇ ವಿಭೀಷಣನೊಂದಿಗೆ ರಾಮನು ಸಖ್ಯವನ್ನು ಬೆಳೆಸಿದುದು (೪೬-೫೪).

03267001 ಮಾರ್ಕಂಡೇಯ ಉವಾಚ|

03267001a ತತಸ್ತತ್ರೈವ ರಾಮಸ್ಯ ಸಮಾಸೀನಸ್ಯ ತೈಃ ಸಹ|

03267001c ಸಮಾಜಗ್ಮುಃ ಕಪಿಶ್ರೇಷ್ಠಾಃ ಸುಗ್ರೀವವಚನಾತ್ತದಾ||

ಮಾರ್ಕಂಡೇಯನು ಹೇಳಿದನು: “ಆಗ ಅಲ್ಲಿ ರಾಮನು ಅವರೊಂದಿಗೆ ಕುಳಿತುಕೊಂಡಿರಲು, ಸುಗ್ರೀವನ ವಚನದಂತೆ ಕಪಿಶ್ರೇಷ್ಠರು ಬಂದು ಸೇರಿದರು.

03267002a ವೃತಃ ಕೋಟಿಸಹಸ್ರೇಣ ವಾನರಾಣಾಂ ತರಸ್ವಿನಾಂ|

03267002c ಶ್ವಶುರೋ ವಾಲಿನಃ ಶ್ರೀಮಾನ್ಸುಷೇಣೋ ರಾಮಮಭ್ಯಯಾತ್||

ವಾಲಿಯ ಮಾವ ಶ್ರೀಮಾನ್ ಸುಷೇಣನು ಕೋಟಿಸಹಸ್ರ ತರಸ್ವಿ ವಾನರರನ್ನೊಡಗೂಡಿ ರಾಮನಲ್ಲಿಗೆ ಬಂದನು.

03267003a ಕೋಟೀಶತವೃತೌ ಚಾಪಿ ಗಜೋ ಗವಯ ಏವ ಚ|

03267003c ವಾನರೇಂದ್ರೌ ಮಹಾವೀರ್ಯೌ ಪೃಥಕ್ಪೃಥಗದೃಶ್ಯತಾಂ||

ಮಹಾವೀರರಾದ ವಾನರೇಂದ್ರರಿಬ್ಬರು ಗಜ ಮತ್ತು ಗವಯ ಪ್ರತಿಯೊಬ್ಬರೂ ನೂರು ಕೋಟಿ ಕಪಿಗಳೊಂದಿಗೆ ಬಂದರು.

03267004a ಷಷ್ಟಿಕೋಟಿಸಹಸ್ರಾಣಿ ಪ್ರಕರ್ಷನ್ಪ್ರತ್ಯದೃಶ್ಯತ|

03267004c ಗೋಲಾಂಗೂಲೋ ಮಹಾರಾಜ ಗವಾಕ್ಷೋ ಭೀಮದರ್ಶನಃ||

ಮಹಾರಾಜ! ಭೀಮದರ್ಶನ ಗೋಲಾಂಗುಲ ಗವಾಕ್ಷನು ಆರು ಕೋಟಿ ಸಾವಿರ ಕಪಿಗಳನ್ನು ಕರೆದುಕೊಂಡು ಕಾಣಿಸಿಕೊಂಡನು.

03267005a ಗಂಧಮಾದನವಾಸೀ ತು ಪ್ರಥಿತೋ ಗಂಧಮಾದನಃ|

03267005c ಕೋಟೀಸಹಸ್ರಮುಗ್ರಾಣಾಂ ಹರೀಣಾಂ ಸಮಕರ್ಷತ||

ಗಂಧಮಾದನದಲ್ಲಿ ವಾಸಿಸುವ ಪ್ರಸಿದ್ಧ ಗಂಧಮಾದನನು ಕೋಟಿಸಹಸ್ರ ಉಗ್ರ ಕಪಿಗಳನ್ನು ಕರೆತಂದನು.

03267006a ಪನಸೋ ನಾಮ ಮೇಧಾವೀ ವಾನರಃ ಸುಮಹಾಬಲಃ|

03267006c ಕೋಟೀರ್ದಶ ದ್ವಾದಶ ಚ ತ್ರಿಂಶತ್ಪಂಚ ಪ್ರಕರ್ಷತಿ||

ಪನಸ ಎಂಬ ಹೆಸರಿನ ಮೇಧಾವೀ ಸುಮಹಾಬಲ ವಾನರನು ಹತ್ತು, ಹನ್ನೆರಡು ಮತ್ತು ಮೂವತ್ತೈದು ಕೋಟಿ ವಾನರರನ್ನು ಕರೆತಂದನು.

03267007a ಶ್ರೀಮಾನ್ದಧಿಮುಖೋ ನಾಮ ಹರಿವೃದ್ಧೋಽಪಿ ವೀರ್ಯವಾನ್|

03267007c ಪ್ರಚಕರ್ಷ ಮಹತ್ಸೈನ್ಯಂ ಹರೀಣಾಂ ಭೀಮತೇಜಸಾಂ||

ದಧಿಮುಖ ಎಂಬ ಹೆಸರಿನ ಶ್ರೀಮಾನ್, ವೀರ್ಯವಾನ್ ಕಪಿವೃದ್ಧನೂ ಕೂಡ ಭೀಮ ತೇಜಸ್ಸಿನ ಕಪಿಗಳ ಮಹಾಸೇನೆಯನ್ನು ತಂದನು.

03267008a ಕೃಷ್ಣಾನಾಂ ಮುಖಪುಂಡ್ರಾಣಾಮೃಕ್ಷಾಣಾಂ ಭೀಮಕರ್ಮಣಾಂ|

03267008c ಕೋಟೀಶತಸಹಸ್ರೇಣ ಜಾಂಬವಾನ್ಪ್ರತ್ಯದೃಶ್ಯತ||

ಜಾಂಬವಂತನು ನೂರುಕೋಟಿಸಾವಿರ ಭೀಮಕರ್ಮಿಗಳಾದ ಕಪ್ಪು ಮತ್ತು ಬಿಳೀ ಮುಖಗಳ ಕರಡಿಗಳೊಂದಿಗೆ ಕಾಣಿಸಿಕೊಂಡನು.

03267009a ಏತೇ ಚಾನ್ಯೇ ಚ ಬಹವೋ ಹರಿಯೂಥಪಯೂಥಪಾಃ|

03267009c ಅಸಂಖ್ಯೇಯಾ ಮಹಾರಾಜ ಸಮೀಯೂ ರಾಮಕಾರಣಾತ್||

ಮಹಾರಾಜ! ಇವು ಮತ್ತು ಇನ್ನೂ ಇತರ ಬಹಳ ಕಪಿನಾಯಕರು ಅಸಂಖ್ಯ ಸೇನೆಗಳೊಂದಿಗೆ ರಾಮನ ಕಾರಣಕ್ಕೆ ಸೇರಿದರು.

03267010a ಶಿರೀಷಕುಸುಮಾಭಾನಾಂ ಸಿಂಹಾನಾಮಿವ ನರ್ದತಾಂ|

03267010c ಶ್ರೂಯತೇ ತುಮುಲಃ ಶಬ್ದಸ್ತತ್ರ ತತ್ರ ಪ್ರಧಾವತಾಂ||

ಶಿರೀಷಕುಸುಮದಂತಿದ್ದ ಅವರು ಸಿಂಹನಾದ ಮಾಡುತ್ತಾ ಅಲ್ಲಿಂದಲ್ಲಿಗೆ ಓಡುತ್ತಿದ್ದಾಗ ತುಮುಲ ಶಬ್ಧವು ಕೇಳಿಬಂದಿತು.

03267011a ಗಿರಿಕೂಟನಿಭಾಃ ಕೇ ಚಿತ್ಕೇ ಚಿನ್ಮಹಿಷಸನ್ನಿಭಾಃ|

03267011c ಶರದಭ್ರಪ್ರತೀಕಾಶಾಃ ಪಿಷ್ಟಹಿಂಗುಲಕಾನನಾಃ||

ಕೆಲವರು ಗಿರಿಶಿಖರಗಳಂತಿದ್ದರೆ ಕೆಲವರು ಗಾತ್ರದಲ್ಲಿ ಎಮ್ಮೆಗಳಂತಿದ್ದರು, ಮಳೆಗಾಲದ ಮೋಡಗಳಿಂತಿದ್ದರು, ಮತ್ತು ತೇಯ್ದ ಕುಂಕುಮದ ಬಣ್ಣದ ಮುಖವುಳ್ಳವರಾಗಿದ್ದರು.

03267012a ಉತ್ಪತಂತಃ ಪತಂತಶ್ಚ ಪ್ಲವಮಾನಾಶ್ಚ ವಾನರಾಃ|

03267012c ಉದ್ಧುನ್ವಂತೋಽಪರೇ ರೇಣೂನ್ಸಮಾಜಗ್ಮುಃ ಸಮಂತತಃ||

ಕುಪ್ಪಳಿಸುತ್ತಿದ್ದ, ಕೆಳಗೆ ಬೀಳುತ್ತಿದ್ದ, ಹಾರುತ್ತಿದ್ದ ವಾನರರು ಧೂಳೆಬ್ಬಿಸಿ ಎಲ್ಲ ಕಡೆಗಳಿಂದಲೂ ಬಂದು ಸೇರಿದರು.

03267013a ಸ ವಾನರಮಹಾಲೋಕಃ ಪೂರ್ಣಸಾಗರಸಮ್ನಿಭಃ|

03267013c ನಿವೇಶಮಕರೋತ್ತತ್ರ ಸುಗ್ರೀವಾನುಮತೇ ತದಾ||

ನೆರೆಬಂದ ಸಾಗರದಂತಿದ್ದ ಆ ವಾನರ ಮಹಾಲೋಕವು ಸುಗ್ರೀವನ ಅನುಮತಿಯಂತೆ ಅಲ್ಲಿಯೇ ಬೀಡುಬಿಟ್ಟಿತು.

03267014a ತತಸ್ತೇಷು ಹರೀಂದ್ರೇಷು ಸಮಾವೃತ್ತೇಷು ಸರ್ವಶಃ|

03267014c ತಿಥೌ ಪ್ರಶಸ್ತೇ ನಕ್ಷತ್ರೇ ಮುಹೂರ್ತೇ ಚಾಭಿಪೂಜಿತೇ||

03267015a ತೇನ ವ್ಯೂಢೇನ ಸೈನ್ಯೇನ ಲೋಕಾನುದ್ವರ್ತಯನ್ನಿವ|

03267015c ಪ್ರಯಯೌ ರಾಘವಃ ಶ್ರೀಮಾನ್ಸುಗ್ರೀವಸಹಿತಸ್ತದಾ||

ಆಗ ಪ್ರಶಸ್ತ ದಿನ ನಕ್ಷತ್ರದ ಮಂಗಳ ಮುಹೂರ್ತದಲ್ಲಿ ಶ್ರೀಮಾನ್ ರಾಘವನು ಸುಗ್ರೀವನೊಂದಿಗೆ, ಲೋಕಗಳನ್ನೇ ಚಿಂದಿಮಾಡುವಂತೆ ವ್ಯೂಹಗಳಲ್ಲಿ ರಚಿತಗೊಂಡಿರುವ ಅಲ್ಲಿ ಸೇರಿರುವ ಎಲ್ಲ ಕಪೀಂದ್ರರ ಸೇನೆಗಳೊಂದಿಗೆ ಹೊರಟನು.

03267016a ಮುಖಮಾಸೀತ್ತು ಸೈನ್ಯಸ್ಯ ಹನೂಮಾನ್ಮಾರುತಾತ್ಮಜಃ|

03267016c ಜಘನಂ ಪಾಲಯಾಮಾಸ ಸೌಮಿತ್ರಿರಕುತೋಭಯಃ||

ಆ ಸೇನೆಯ ಮುಂದೆ ಮಾರುತಾತ್ಮಜ ಹನೂಮಂತನಿದ್ದನು; ಸ್ವಲ್ಪವೂ ಭಯವಿಲ್ಲದ ಸೌಮಿತ್ರಿಯು ಅದರ ಹಿಂಬಾಗವನ್ನು ರಕ್ಷಿಸುತ್ತಿದ್ದನು.

03267017a ಬದ್ಧಗೋಧಾಂಗುಲಿತ್ರಾಣೌ ರಾಘವೌ ತತ್ರ ರೇಜತುಃ|

03267017c ವೃತೌ ಹರಿಮಹಾಮಾತ್ರೈಶ್ಚಂದ್ರಸೂರ್ಯೌ ಗ್ರಹೈರಿವ||

ಗೋಧಾಂಗುಲಿಗಳನ್ನು ಕಟ್ಟಿದ ಆ ರಾಘವರಿಬ್ಬರೂ ಮಹಾಮಾತ್ರರಾದ ಕಪಿಗಳ ಮಧ್ಯದಲ್ಲಿ ಗ್ರಹಗಳ ಮಧ್ಯೆ ಚಂದ್ರ-ಸೂರ್ಯರಂತೆ ಶೋಭಿಸಿದರು.

03267018a ಪ್ರಬಭೌ ಹರಿಸೈನ್ಯಂ ತಚ್ಚಾಲತಾಲಶಿಲಾಯುಧಂ|

03267018c ಸುಮಹಚ್ಚಾಲಿಭವನಂ ಯಥಾ ಸೂರ್ಯೋದಯಂ ಪ್ರತಿ||

ಶಾಲ, ತಾಲ, ಶಿಲಾಯುಧಗಳನ್ನು ಹಿಡಿದು ಹೋಗುತ್ತಿರುವ ಆ ಕಪಿಸೇನೆಯು ಸೂರ್ಯೋದಯದಲ್ಲಿ ವಿಸ್ತಾರವಾದ ಭತ್ತದ ಗದ್ದೆಯಂತೆ ತೋರುತ್ತಿತ್ತು.

03267019a ನಲನೀಲಾಂಗದಕ್ರಾಥಮೈಂದದ್ವಿವಿದಪಾಲಿತಾ|

03267019c ಯಯೌ ಸುಮಹತೀ ಸೇನಾ ರಾಘವಸ್ಯಾರ್ಥಸಿದ್ಧಯೇ||

ಅನಲ, ನೀಲ, ಅಂಗದ, ಕ್ರಾಥ, ಮೈಂದ, ದ್ವಿವಿದರಿಂದ ಪಾಲಿತ ಆ ಅತಿದೊಡ್ಡ ಸೇನೆಯು ರಾಘವನ ಕಾರ್ಯಸಿದ್ಧಿಗಾಗಿ ಹೊರಟಿತು.

03267020a ವಿಧಿವತ್ಸುಪ್ರಶಸ್ತೇಷು ಬಹುಮೂಲಫಲೇಷು ಚ|

03267020c ಪ್ರಭೂತಮಧುಮಾಂಸೇಷು ವಾರಿಮತ್ಸು ಶಿವೇಷು ಚ||

03267021a ನಿವಸಂತೀ ನಿರಾಬಾಧಾ ತಥೈವ ಗಿರಿಸಾನುಷು|

03267021c ಉಪಾಯಾದ್ಧರಿಸೇನಾ ಸಾ ಕ್ಷಾರೋದಮಥ ಸಾಗರಂ||

ಬಹುಮೂಲಫಲಗಳನ್ನುಳ್ಳ, ಮಧುಮಾಂಸಗಳು ಹೇರಳವಾಗಿದ್ದ, ಶುದ್ಧ ನೀರಿದ್ದ ಸುಂದರ ಪ್ರದೇಶಗಳನ್ನು ದಾಟಿ, ಅಲ್ಲಲ್ಲಿ ಗಿರಿಕಂದರಗಳಲ್ಲಿ ನಿರಾಬಾಧರಾಗಿ ಬೀಡುಬಿಡುತ್ತಾ, ಆ ಕಪಿಸೇನೆಯು ಉಪಾಯದಂತೆ ಉಪ್ಪಿನನೀರಿನ ಸಾಗರದಂಚಿಗೆ ಬಂದಿತು.

03267022a ದ್ವಿತೀಯಸಾಗರನಿಭಂ ತದ್ಬಲಂ ಬಹುಲಧ್ವಜಂ|

03267022c ವೇಲಾವನಂ ಸಮಾಸಾದ್ಯ ನಿವಾಸಮಕರೋತ್ತದಾ||

ಎರಡನೆಯ ಸಾಗರವೋ ಎಂಬಂತಿದ್ದ ಆ ಬಹುಧ್ವಜಗಳ ಬಲವು ತೀರದಲ್ಲಿದ್ದ ವನದಲ್ಲಿ ಬೀಡುಬಿಟ್ಟಿತು.

03267023a ತತೋ ದಾಶರಥಿಃ ಶ್ರೀಮಾನ್ಸುಗ್ರೀವಂ ಪ್ರತ್ಯಭಾಷತ|

03267023c ಮಧ್ಯೇ ವಾನರಮುಖ್ಯಾನಾಂ ಪ್ರಾಪ್ತಕಾಲಮಿದಂ ವಚಃ||

ಅನಂತರ ಶ್ರೀಮಾನ್ ದಾಶರಥಿಯು ಮಾನರಮುಖ್ಯರ ಮಧ್ಯದಲ್ಲಿ ಸುಗ್ರೀವನಿಗೆ ಕಾಲಕ್ಕೆ ತಕ್ಕಂತಹ ಈ ಮಾತುಗಳನ್ನಾಡಿದನು.

03267024a ಉಪಾಯಃ ಕೋ ನು ಭವತಾಂ ಮತಃ ಸಾಗರಲಂಘನೇ|

03267024c ಇಯಂ ಚ ಮಹತೀ ಸೇನಾ ಸಾಗರಶ್ಚಾಪಿ ದುಸ್ತರಃ||

“ಈ ಸಾಗರವನ್ನು ಲಂಘಿಸುವ ಏನಾದರೂ ಉಪಾಯವು ನಿಮ್ಮಲ್ಲಿ ಇದೆಯೇ? ಈ ಸೇನೆಯಾದರೋ ಅತೀ ದೊಡ್ಡದು. ಸಾಗರವೂ ಕೂಡ ದುಸ್ತರವಾಗಿದೆ.”

03267025a ತತ್ರಾನ್ಯೇ ವ್ಯಾಹರಂತಿ ಸ್ಮ ವಾನರಾಃ ಪಟುಮಾನಿನಃ|

03267025c ಸಮರ್ಥಾ ಲಂಘನೇ ಸಿಂಧೋರ್ನ ತು ಕೃತ್ಸ್ನಸ್ಯ ವಾನರಾಃ||

ಅಲ್ಲಿ ತೀವ್ರಬುದ್ಧಿಯ ಕೆಲವು ವಾನರರು ಹೇಳಿದರು: “ವಾನರರು ಈ ಸಾಗರದ ವಿಸ್ತಿರ್ಣವನ್ನು ಲಂಘಿಸಲು ಅಸಮರ್ಥರು.”

03267026a ಕೇ ಚಿನ್ನೌಭಿರ್ವ್ಯವಸ್ಯಂತಿ ಕೇಚೀಚ್ಚ ವಿವಿಧೈಃ ಪ್ಲವೈಃ|

03267026c ನೇತಿ ರಾಮಶ್ಚ ತಾನ್ಸರ್ವಾನ್ಸಾಂತ್ವಯನ್ಪ್ರತ್ಯಭಾಷತ||

ಕೆಲವರು ದೋಣಿಗಳ ಕುರಿತು ಯೋಚಿಸಿದರೆ ಕೆಲವರು ವಿವಿಧ ರೀತಿಯ ಹಾರುವಿಕೆಯು ಬಗ್ಗೆ ಸೂಚಿಸಿದರು. ರಾಮನು ಆ ಎಲ್ಲರನ್ನೂ ಸಂತವಿಸಿ “ಅಲ್ಲ” ಎಂದು ಉತ್ತರಿಸಿದನು.

03267027a ಶತಯೋಜನವಿಸ್ತಾರಂ ನ ಶಕ್ತಾಃ ಸರ್ವವಾನರಾಃ|

03267027c ಕ್ರಾಂತುಂ ತೋಯನಿಧಿಂ ವೀರಾ ನೈಷಾ ವೋ ನೈಷ್ಠಿಕೀ ಮತಿಃ||

“ವೀರರೇ! ಎಲ್ಲ ವಾನರರೂ ನೂರುಯೋಜನ ವಿಸ್ತೀರ್ಣವನ್ನು ದಾಟಲು ಶಕ್ತರಿಲ್ಲ. ಇದು ನಿಮ್ಮ ಅಂತಿಮ ನಿರ್ಧಾರವಲ್ಲ.

03267028a ನಾವೋ ನ ಸಂತಿ ಸೇನಾಯಾ ಬಹ್ವ್ಯಸ್ತಾರಯಿತುಂ ತಥಾ|

03267028c ವಣಿಜಾಮುಪಘಾತಂ ಚ ಕಥಮಸ್ಮದ್ವಿಧಶ್ಚರೇತ್||

ಈ ಮಹಾಸೇನೆಯನ್ನು ದಾಟಿಸಲು ಬೇಕಾಗುವಷ್ಟು ದೋಣಿಗಳಿಲ್ಲ. ಅಲ್ಲದೇ ನಮ್ಮಂಥವರು ಏಕೆ ವಣಿಜರಿಗೆ ಉಪಘಾತವೆಸಗಬೇಕು?

03267029a ವಿಸ್ತೀರ್ಣಂ ಚೈವ ನಃ ಸೈನ್ಯಂ ಹನ್ಯಾಚ್ಚಿದ್ರೇಷು ವೈ ಪರಃ|

03267029c ಪ್ಲವೋಡುಪಪ್ರತಾರಶ್ಚ ನೈವಾತ್ರ ಮಮ ರೋಚತೇ||

ವಿಸ್ತೀರ್ಣವಾದ ಈ ಸೇನೆಯು ಭಾಗವಾದರೆ ಶತ್ರುವು ಆಕ್ರಮಣ ಮಾಡಬಲ್ಲನು. ಹಾರಿಹೋಗುವುದರಿಂದಾಗಲೀ ಅಥವಾ ತೆಪ್ಪಗಳ ಮೇಲೆ ಹೋಗಿ ಇದನ್ನು ದಾಟಲಾರೆವು ಎಂದು ನನಗನ್ನಿಸುತ್ತದೆ.

03267030a ಅಹಂ ತ್ವಿಮಂ ಜಲನಿಧಿಂ ಸಮಾರಪ್ಸ್ಯಾಮ್ಯುಪಾಯತಃ|

03267030c ಪ್ರತಿಶೇಷ್ಯಾಮ್ಯುಪವಸನ್ದರ್ಶಯಿಷ್ಯತಿ ಮಾಂ ತತಃ||

ನಾನು ಈ ಜಲನಿಧಿಯನ್ನು ಬಾಣಗಳಿಂದ ಹೊಡೆದು ನೀರನ್ನು ಹಿಂದೆಸರಿಸುತ್ತೇನೆ. ಆಗ ಕೆಳಗೆ ವಾಸಿಸುವವನು ನನಗೆ ಕಾಣಿಸಿಕೊಳ್ಳುತ್ತಾನೆ.

03267031a ನ ಚೇದ್ದರ್ಶಯಿತಾ ಮಾರ್ಗಂ ಧಕ್ಷ್ಯಾಮ್ಯೇನಮಹಂ ತತಃ|

03267031c ಮಹಾಸ್ತ್ರೈರಪ್ರತಿಹತೈರತ್ಯಗ್ನಿಪವನೋಜ್ಜ್ವಲೈಃ||

ಒಂದುವೇಳೆ ಅವನು ನನಗೆ ಮಾರ್ಗವನ್ನು ತೋರಿಸದೇ ಇದ್ದರೆ, ಅಗ್ನಿ-ವಾಯುಗಳನ್ನು ಕಾರುವ ಮಹಾಸ್ತ್ರಗಳಿಂದ ಇದನ್ನು ಸುಡುತ್ತೇನೆ.”

03267032a ಇತ್ಯುಕ್ತ್ವಾ ಸಹಸೌಮಿತ್ರಿರುಪಸ್ಪೃಶ್ಯಾಥ ರಾಘವಃ|

03267032c ಪ್ರತಿಶಿಶ್ಯೇ ಜಲನಿಧಿಂ ವಿಧಿವತ್ಕುಶಸಂಸ್ತರೇ||

ಹೀಗೆ ಹೇಳಿ ರಾಘವನು ಸೌಮಿತ್ರಿಯೊಡನೆ ವಿಧಿವತ್ತಾಗಿ ನೀರನ್ನು ಮುಟ್ಟಿ, ಕುಶವನ್ನು ಹರಡಿ, ಜಲನಿಧಿಯನ್ನು ಹಿಂದೆ ಸರಿಸಿದನು.

03267033a ಸಾಗರಸ್ತು ತತಃ ಸ್ವಪ್ನೇ ದರ್ಶಯಾಮಾಸ ರಾಘವಂ|

03267033c ದೇವೋ ನದನದೀಭರ್ತಾ ಶ್ರೀಮಾನ್ಯಾದೋಗಣೈರ್ವೃತಃ||

ಆಗ ನದನದಿಗಳ ಪತಿ, ದೇವ, ಶ್ರೀಮಾನ್ ಸಗರನಾದರೋ ನೀರಿನ ಗಣಗಳಿಂದ ಆವೃತನಾಗಿ ರಾಘವನ ಸ್ವಪ್ನದಲ್ಲಿ ಕಾಣಿಸಿಕೊಂಡನು.

03267034a ಕೌಸಲ್ಯಾಮಾತರಿತ್ಯೇವಮಾಭಾಷ್ಯ ಮಧುರಂ ವಚಃ|

03267034c ಇದಮಿತ್ಯಾಹ ರತ್ನಾನಾಮಾಕರೈಃ ಶತಶೋ ವೃತಃ||

“ಕೌಸಲ್ಯೆಯ ಮಗನೇ” ಎಂದು ಕರೆದು ಮಧುರ ಮಾತಿನಲ್ಲಿ ನೂರಾರು ರತ್ನಾಕರರೊಂದಿಗೆ ಆವೃತನಾದ ಅವನು ಹೀಗೆ ಹೇಳಿದನು:

03267035a ಬ್ರೂಹಿ ಕಿಂ ತೇ ಕರೋಮ್ಯತ್ರ ಸಾಹಾಯ್ಯಂ ಪುರುಷರ್ಷಭ|

03267035c ಇಕ್ಷ್ವಾಕುರಸ್ಮಿ ತೇ ಜ್ಞಾತಿರಿತಿ ರಾಮಸ್ತಮಬ್ರವೀತ್||

“ಪುರುಷರ್ಷಭ! ನಿನಗೆ ನಾನು ಹೇಗೆ ಸಹಾಯ ಮಾಡಲಿ ಹೇಳು.” ರಾಮನು ಉತ್ತರಿಸಿದನು: “ನಾನು ಇಕ್ಷ್ವಾಕು, ನಿನ್ನ ಕುಲದವನು.

03267036a ಮಾರ್ಗಮಿಚ್ಚಾಮಿ ಸೈನ್ಯಸ್ಯ ದತ್ತಂ ನದನದೀಪತೇ|

03267036c ಯೇನ ಗತ್ವಾ ದಶಗ್ರೀವಂ ಹನ್ಯಾಂ ಪೌಲಸ್ತ್ಯಪಾಂಸನಂ||

ನದನದೀಪತೇ! ನನ್ನ ಸೈನ್ಯಕ್ಕೆ ಮಾರ್ಗವನ್ನು ಮಾಡಿಕೊಡಬೇಕೆಂದು ಬಯಸುತ್ತೇನೆ. ಹೀಗೆ ಹೋಗಿ ನಾನು ಪೌಲಸ್ತ್ಯರ ಪಾಪಿ ದಶಗ್ರೀವನನ್ನು ಸಂಹರಿಸಬಲ್ಲೆ.

03267037a ಯದ್ಯೇವಂ ಯಾಚತೋ ಮಾರ್ಗಂ ನ ಪ್ರದಾಸ್ಯತಿ ಮೇ ಭವಾನ್|

03267037c ಶರೈಸ್ತ್ವಾಂ ಶೋಷಯಿಷ್ಯಾಮಿ ದಿವ್ಯಾಸ್ತ್ರಪ್ರತಿಮಂತ್ರಿತೈಃ||

ಒಂದುವೇಳೆ ಯಾಚಿಸಿದ ಮಾರ್ಗವನ್ನು ನೀನು ನನಗೆ ನೀಡದಿದ್ದರೆ, ಪ್ರತಿಮಂತ್ರಿಸಿದ ದ್ವಿವ್ಯಾಸ್ತ್ರ ಬಾಣಗಳಿಂದ ನಿನ್ನನ್ನು ಒಣಗಿಸುತ್ತೇನೆ.”

03267038a ಇತ್ಯೇವಂ ಬ್ರುವತಃ ಶ್ರುತ್ವಾ ರಾಮಸ್ಯ ವರುಣಾಲಯಃ|

03267038c ಉವಾಚ ವ್ಯಥಿತೋ ವಾಕ್ಯಮಿತಿ ಬದ್ಧಾಂಜಲಿಃ ಸ್ಥಿತಃ||

ಹೀಗೆ ಹೇಳುತ್ತಿರುವ ರಾಮನನ್ನು ಕೇಳಿದ ವರುಣಾಲಯನು  ವ್ಯಥಿತನಾಗಿ, ಕೈಮುಗಿದು ನಿಂತು ಈ ಮಾತುಗಳನ್ನಾಡಿದನು:

03267039a ನೇಚ್ಚಾಮಿ ಪ್ರತಿಘಾತಂ ತೇ ನಾಸ್ಮಿ ವಿಘ್ನಕರಸ್ತವ|

03267039c ಶೃಣು ಚೇದಂ ವಚೋ ರಾಮ ಶ್ರುತ್ವಾ ಕರ್ತವ್ಯಮಾಚರ||

“ನಾನು ನಿನ್ನನ್ನು ತಡೆಯಲು ಬಯಸುವುದಿಲ್ಲ. ನಿನಗೆ ವಿಘ್ನವನ್ನುಂಟುಮಾಡುವುದಿಲ್ಲ. ರಾಮ! ನಾನು ಹೇಳುವ ಈ ಮಾತುಗಳನ್ನು ಕೇಳಿ ಮಾಡಬೇಕಾದುದನ್ನು ಮಾಡು.

03267040a ಯದಿ ದಾಸ್ಯಾಮಿ ತೇ ಮಾರ್ಗಂ ಸೈನ್ಯಸ್ಯ ವ್ರಜತೋಽಜ್ಞಯಾ|

03267040c ಅನ್ಯೇಽಪ್ಯಾಜ್ಞಾಪಯಿಷ್ಯಂತಿ ಮಾಮೇವಂ ಧನುಷೋ ಬಲಾತ್||

ಒಂದುವೇಳೆ ಮುಂದೆ ಸಾಗಲು ಕಾದಿರುವ ನಿನ್ನ ಸೇನೆಗೆ ನಿನ್ನ ಆಜ್ಞೆಯಂತೆ ದಾರಿಯನ್ನು ಕೊಟ್ಟರೆ ಅನ್ಯರೂ ಕೂಡ ಧನುಸ್ಸಿನ ಬಲದಿಂದ ನನಗೆ ಆಜ್ಞಾಪಿಸುತ್ತಾರೆ.

03267041a ಅಸ್ತಿ ತ್ವತ್ರ ನಲೋ ನಾಮ ವಾನರಃ ಶಿಲ್ಪಿಸಮ್ಮತಃ|

03267041c ತ್ವಷ್ಟುರ್ದೇವಸ್ಯ ತನಯೋ ಬಲವಾನ್ವಿಶ್ವಕರ್ಮಣಃ||

ನಿನ್ನಲ್ಲಿ ಶಿಲ್ಪಿಗಳಿಂದ ಗೌರವಿಸಲ್ಪಟ್ಟ, ದೇವಶಿಲ್ಪಿ ಬಲವಾನ್ ವಿಶ್ವಕರ್ಮನ ಮಗ ನಲ ಎಂಬ ಹೆಸರಿನ ವಾನರನಿದ್ದಾನೆ.

03267042a ಸ ಯತ್ಕಾಷ್ಠಂ ತೃಣಂ ವಾಪಿ ಶಿಲಾಂ ವಾ ಕ್ಷೇಪ್ಸ್ಯತೇ ಮಯಿ|

03267042c ಸರ್ವಂ ತದ್ಧಾರಯಿಷ್ಯಾಮಿ ಸ ತೇ ಸೇತುರ್ಭವಿಷ್ಯತಿ||

ಅವನು ಕಡ್ಡಿಯನ್ನಾಗಲೀ, ಹುಲ್ಲನ್ನಾಗಲೀ ಅಥವಾ ಕಲ್ಲನ್ನಾಗಲೀ ನನ್ನಲ್ಲಿ ಎಸೆದರೆ ಅವೆಲ್ಲವನ್ನೂ ನಾನು ತೇಲಿಸುತ್ತೇನೆ. ಅದು ನಿನಗೆ ಸೇತುವೆಯಾಗುತ್ತದೆ.”

03267043a ಇತ್ಯುಕ್ತ್ವಾಂತರ್ಹಿತೇ ತಸ್ಮಿನ್ರಾಮೋ ನಲಮುವಾಚ ಹ|

03267043c ಕುರು ಸೇತುಂ ಸಮುದ್ರೇ ತ್ವಂ ಶಕ್ತೋ ಹ್ಯಸಿ ಮತೋ ಮಮ||

ಹೀಗೆ ಹೇಳಿ ಅವನು ಅಂತರ್ಧಾನನಾಗಲು ರಾಮನು ನಲನಿಗೆ ಹೇಳಿದನು: “ಸಮುದ್ರದಲ್ಲಿ ಸೇತುವೆಯನ್ನು ಕಟ್ಟು. ನೀನು ಇದರಲ್ಲಿ ಶಕ್ತ ಎಂದು ನನ್ನ ಮತ.”

03267044a ತೇನೋಪಾಯೇನ ಕಾಕುತ್ಸ್ಥಃ ಸೇತುಬಂಧಮಕಾರಯತ್|

03267044c ದಶಯೋಜನವಿಸ್ತಾರಮಾಯತಂ ಶತಯೋಜನಂ||

ಈ ಉಪಾಯದಿಂದ ಕಾಕುತ್ಸ್ಥನು ಹತ್ತು ಯೋಜನೆ ಅಗಲದ ನೂರು ಯೋಜನೆ ಉದ್ದದ ಸೇತುವೆಯನ್ನು ಕಟ್ಟಿಸಿದನು.

03267045a ನಲಸೇತುರಿತಿ ಖ್ಯಾತೋ ಯೋಽದ್ಯಾಪಿ ಪ್ರಥಿತೋ ಭುವಿ|

03267045c ರಾಮಸ್ಯಾಜ್ಞಾಂ ಪುರಸ್ಕೃತ್ಯ ಧಾರ್ಯತೇ ಗಿರಿಸನ್ನಿಭಃ||

ನಲಸೇತುವೆಂದು ಕರೆಯಲ್ಪಡುವ ಅದು ರಾಮನ ಆಜ್ಞೆಯಂತೆ ಗಿರಿಯಂತೆ ಈಗಲೂ ನಿಂತಿದ್ದು, ಭುವಿಯಲ್ಲಿ ಪ್ರಸಿದ್ಧವಾಗಿದೆ.

03267046a ತತ್ರಸ್ಥಂ ಸ ತು ಧರ್ಮಾತ್ಮಾ ಸಮಾಗಚ್ಚದ್ವಿಭೀಷಣಃ|

03267046c ಭ್ರಾತಾ ವೈ ರಾಕ್ಷಸೇಂದ್ರಸ್ಯ ಚತುರ್ಭಿಃ ಸಚಿವೈಃ ಸಹ||

ಅಲ್ಲಿಯೇ ರಾಕ್ಷಸೇಂದ್ರನ ತಮ್ಮ ಧರ್ಮಾತ್ಮ ವಿಭೀಷಣನು ತನ್ನ ನಾಲ್ವರು ಸಚಿವರೊಂದಿಗೆ ಬಂದು ಸೇರಿದನು.

03267047a ಪ್ರತಿಜಗ್ರಾಹ ರಾಮಸ್ತಂ ಸ್ವಾಗತೇನ ಮಹಾಮನಾಃ|

03267047c ಸುಗ್ರೀವಸ್ಯ ತು ಶಮ್ಕಾಭೂತ್ಪ್ರಣಿಧಿಃ ಸ್ಯಾದಿತಿ ಸ್ಮ ಹ||

ಮಹಾಮನಸ್ವಿ ರಾಮನು ಅವನನ್ನು ಸ್ವಾಗತಿಸಿ ಸ್ವೀಕರಿಸಿದನು. ಅವನು ಗೂಢಚರನಿರಬಹುದೆಂದು ಸುಗ್ರೀವನು ಶಂಕಿಸಿದನು.

03267048a ರಾಘವಸ್ತಸ್ಯ ಚೇಷ್ಟಾಭಿಃ ಸಮ್ಯಕ್ಚ ಚರಿತೇಂಗಿತೈಃ|

03267048c ಯದಾ ತತ್ತ್ವೇನ ತುಷ್ಟೋಽಭೂತ್ತತ ಏನಮಪೂಜಯತ್||

ರಾಘವನಾದರೋ ಅವನ ಚೇಷ್ಟೆ, ಚರಿತ ಮತ್ತು ಇಂಗಿತಗಳನ್ನು  ಚೆನ್ನಾಗಿ ಪರೀಕ್ಷಿಸಿ ತೃಪ್ತನಾಗಿ ಅವನನ್ನು ಸತ್ಕರಿಸಿದನು.

03267049a ಸರ್ವರಾಕ್ಷಸರಾಜ್ಯೇ ಚಾಪ್ಯಭ್ಯಷಿಂಚದ್ವಿಭೀಷಣಂ|

03267049c ಚಕ್ರೇ ಚ ಮಂತ್ರಾನುಚರಂ ಸುಹೃದಂ ಲಕ್ಷ್ಮಣಸ್ಯ ಚ||

ವಿಭೀಷಣನನ್ನು ಸರ್ವ ರಾಕ್ಷಸರ ರಾಜನನ್ನಾಗಿ ಅಭಿಷೇಕಿಸಿ ಅವನನ್ನು ಲಕ್ಷ್ಮಣನ ಮಂತ್ರಿ, ಅನುಚರ ಮತ್ತು ಸ್ನೇಹಿತನನ್ನಾಗಿ ಮಾಡಿದನು.

03267050a ವಿಭೀಷಣಮತೇ ಚೈವ ಸೋಽತ್ಯಕ್ರಾಮನ್ಮಹಾರ್ಣವಂ|

03267050c ಸಸೈನ್ಯಃ ಸೇತುನಾ ತೇನ ಮಾಸೇನೈವ ನರಾಧಿಪ||

ನರಾಧಿಪ! ವಿಭೀಷಣನ ಸಲಹೆಯಂತಲೂ ಅವನು ಸೇತುವೆಯ ಮೂಲಕ ಒಂದು ತಿಂಗಳ ಅವಧಿಯಲ್ಲಿ ಸೈನ್ಯದೊಂದಿಗೆ ಆ ಮಹಾರ್ಣವವನ್ನು ದಾಟಿದನು.

03267051a ತತೋ ಗತ್ವಾ ಸಮಾಸಾದ್ಯ ಲಂಕೋದ್ಯಾನಾನ್ಯನೇಕಶಃ|

03267051c ಭೇದಯಾಮಾಸ ಕಪಿಭಿರ್ಮಹಾಂತಿ ಚ ಬಹೂನಿ ಚ||

ಅಲ್ಲಿ ಹೋಗಿ ಒಂದಾಗಿ ಬಹುಸಂಖ್ಯೆಗಳಲ್ಲಿದ್ದ ಕಪಿಗಳ ಮೂಲಕ ವಿಸ್ತಾರವಾಗಿದ್ದ ಲಂಕೆಯ ಅನೇಕ  ಉದ್ಯಾನಗಳನ್ನು ಧ್ವಂಸಮಾಡಿಸಿದನು.

03267052a ತತ್ರಾಸ್ತಾಂ ರಾವಣಾಮಾತ್ಯೌ ರಾಕ್ಷಸೌ ಶುಕಸಾರಣೌ|

03267052c ಚಾರೌ ವಾನರರೂಪೇಣ ತೌ ಜಗ್ರಾಹ ವಿಭೀಷಣಃ||

ಅಲ್ಲಿ ವಾನರರೂಪದಲ್ಲಿದ್ದ ರಾವಣನ ಇಬ್ಬರು ಚಾರ ರಾಕ್ಷಸ ಶುಕ ಮತ್ತು ಸಾರಣರನ್ನು ವಿಭೀಷಣನು ಹಿಡಿದನು.

03267053a ಪ್ರತಿಪನ್ನೌ ಯದಾ ರೂಪಂ ರಾಕ್ಷಸಂ ತೌ ನಿಶಾಚರೌ|

03267053c ದರ್ಶಯಿತ್ವಾ ತತಃ ಸೈನ್ಯಂ ರಾಮಃ ಪಶ್ಚಾದವಾಸೃಜತ್||

ಆ ನಿಶಾಚರರು ತಮ್ಮ ರಾಕ್ಷಸರೂಪವನ್ನು ತಳೆದಾಗ ರಾಮನು ಅವರನ್ನು ತನ್ನ ಸೇನೆಗೆ ತೋರಿಸಿ, ನಂತರ ಬಿಡುಗಡೆಮಾಡಿದನು.

03267054a ನಿವೇಶ್ಯೋಪವನೇ ಸೈನ್ಯಂ ತಚ್ಚೂರಃ ಪ್ರಾಜ್ಞವಾನರಂ|

03267054c ಪ್ರೇಷಯಾಮಾಸ ದೌತ್ಯೇನ ರಾವಣಸ್ಯ ತತೋಽಂಗದಂ||

ಉಪವನದಲ್ಲಿ ಸೇನೆಯನ್ನು ಬೀಡುಬಿಟ್ಟು ಆ ಶೂರನು ಪ್ರಾಜ್ಞ ವಾನರ ಅಂಗದನನ್ನು ತನ್ನ ದೂತನಾಗಿ ರಾವಣನಲ್ಲಿಗೆ ಕಳುಹಿಸಿದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ಸೇತುಬಂಧನೇ ಸಪ್ತಷಷ್ಟ್ಯಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ಸೇತುಬಂಧನದಲ್ಲಿ ಇನ್ನೂರಾಅರವತ್ತೇಳನೆಯ ಅಧ್ಯಾಯವು.

Related image

Kannada translation of Draupadiharana Parva, by Chapter:
  1. ಜಯದ್ರಥಾಗಮನ
  2. ಕೋಟಿಕಾಸ್ಯಪ್ರಶ್ನಃ
  3. ದ್ರೌಪದೀವಾಕ್ಯ
  4. ಜಯದ್ರಥದ್ರೌಪದೀಸಂವಾದ
  5. ದ್ರೌಪದೀಹರಣ
  6. ಪಾರ್ಥಾಗಮನ
  7. ದ್ರೌಪದೀವಾಕ್ಯ
  8. ಜಯದ್ರಥಪಲಾಯನ
  9. ಜಯದ್ರಥವಿಮೋಕ್ಷಣ
  10. ರಾಮೋಪಾಖ್ಯಾನ-ಯುಧಿಷ್ಠಿರಪ್ರಶ್ನಃ
  11. ರಾಮೋಪಾಖ್ಯಾನ-ರಾಮರಾವಣಯೋರ್ಜನ್ಮಕಥನ
  12. ರಾಮೋಪಾಖ್ಯಾನ-ರಾವಣಾದಿವರಪ್ರಾಪ್ತಿಃ
  13. ರಾಮೋಪಾಖ್ಯಾನ-ವಾನರಾದ್ಯುತ್ಪತ್ತಿಃ
  14. ರಾಮೋಪಾಖ್ಯಾನ-ರಾಮವನಾಭಿಗಮನ
  15. ರಾಮೋಪಾಖ್ಯಾನ-ಮಾರೀಚವಧ-ಸೀತಾಪಹರಣ
  16. ರಾಮೋಪಾಖ್ಯಾನ-ಕಬಂಧಹನನ
  17. ರಾಮೋಪಾಖ್ಯಾನ-ತ್ರಿಜಟಾಕೃತಸೀತಾಸಂವಾದಃ
  18. ರಾಮೋಪಾಖ್ಯಾನ-ಸೀತಾರಾವಣಸಂವಾದಃ
  19. ರಾಮೋಪಾಖ್ಯಾನ-ಹನುಮಪ್ರತ್ಯಾಗಮನ
  20. ರಾಮೋಪಾಖ್ಯಾನ-ಸೇತುಬಂಧನ
  21. ರಾಮೋಪಾಖ್ಯಾನ-ಲಂಕಾಪ್ರವೇಶ
  22. ರಾಮೋಪಾಖ್ಯಾನ-ರಾಮರಾವಣದ್ವಂದ್ವಯುದ್ಧಃ
  23. ರಾಮೋಪಾಖ್ಯಾನ-ಕುಂಭಕರ್ಣನಿರ್ಗಮನ
  24. ರಾಮೋಪಾಖ್ಯಾನ-ಕುಂಬಕರ್ಣಾದಿವಧಃ
  25. ರಾಮೋಪಾಖ್ಯಾನ-ಇಂದ್ರಜಿದ್ಯುದ್ಧಃ
  26. ರಾಮೋಪಾಖ್ಯಾನ-ಇಂದ್ರಜಿದ್ವಧಃ
  27. ರಾಮೋಪಾಖ್ಯಾನ-ರಾವಣವಧಃ
  28. ರಾಮೋಪಾಖ್ಯಾನ-ಶ್ರೀರಾಮಾಭಿಷೇಕ
  29. ರಾಮೋಪಾಖ್ಯಾನ-ಯುಧಿಷ್ಠಿರಾಶ್ವಾಸನ
  30. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೧
  31. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೨
  32. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೩
  33. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೪
  34. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೫
  35. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೬
  36. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೭

Comments are closed.