Aranyaka Parva: Chapter 270

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೭೦

ವಿಭೀಷಣನಿಂದ ರಾಕ್ಷಸ ಪ್ರಹಸ್ತ ಮತ್ತು ಹನುಮಂತನಿಂದ ರಾಕ್ಷಸ ಧೂಮ್ರಾಕ್ಷನ ವಧೆ (೧-೧೪). ಕುಂಭಕರ್ಣನನ್ನು ಎಬ್ಬಿಸಿ ಯುದ್ಧಕ್ಕೆ ಕಳುಹಿಸಿದುದು (೧೫-೨೯).

03270001 ಮಾರ್ಕಂಡೇಯ ಉವಾಚ|

03270001a ತತಃ ಪ್ರಹಸ್ತಃ ಸಹಸಾ ಸಮಭ್ಯೇತ್ಯ ವಿಭೀಷಣಂ|

03270001c ಗದಯಾ ತಾಡಯಾಮಾಸ ವಿನದ್ಯ ರಣಕರ್ಕಶಃ||

ಮಾರ್ಕಂಡೇಯನು ಹೇಳಿದನು: “ಆಗ ಪ್ರಹಸ್ತನು ಬೇಗನೆ ವಿಭೀಷಣನನ್ನು ಎದುರಿಸಿ ಕರ್ಕಶವಾದ ರಣನಾದವನ್ನು ಕೂಗಿ ಗದೆಯಿಂದ ಹೊಡೆದನು.

03270002a ಸ ತಯಾಭಿಹತೋ ಧೀಮಾನ್ಗದಯಾ ಭೀಮವೇಗಯಾ|

03270002c ನಾಕಂಪತ ಮಹಾಬಾಹುರ್ಹಿಮವಾನಿವ ಸುಸ್ಥಿರಃ||

ಆದರೆ ಧೀಮಂತ ಮಹಾಬಾಹುವು ಭೀಮವೇಗದಿಂದ ಬಂದ ಗದೆಯ ಹೊಡೆತಕ್ಕೂ ಕಂಪಿಸದೇ ಹಿಮವತ್ಪರ್ವತದಂತೆ ಸ್ಥಿರವಾಗಿದ್ದನು.

03270003a ತತಃ ಪ್ರಗೃಹ್ಯ ವಿಪುಲಾಂ ಶತಘಂಟಾಂ ವಿಭೀಷಣಃ|

03270003c ಅಭಿಮಂತ್ರ್ಯ ಮಹಾಶಕ್ತಿಂ ಚಿಕ್ಷೇಪಾಸ್ಯ ಶಿರಃ ಪ್ರತಿ||

ವಿಭೀಷಣನು ಶತಘಂಟಾ ಎಂಬ ವಿಪುಲ ಮಹಾಶಕ್ತಿಯನ್ನು ಹಿಡಿದು ಅಭಿಮಂತ್ರಿಸಿ ಅವನ ಶಿರದ ಕಡೆಗೆ ಎಸೆದನು.

03270004a ಪತಂತ್ಯಾ ಸ ತಯಾ ವೇಗಾದ್ರಾಕ್ಷಸೋಽಶನಿನಾದಯಾ|

03270004c ಹೃತೋತ್ತಮಾಂಗೋ ದದೃಶೇ ವಾತರುಗ್ಣ ಇವ ದ್ರುಮಃ||

ಆ ವೇಗವಾಗಿ ಬರುತ್ತಿರುವ ಮಿಂಚಿನಂತಿರುವ ಆಯುಧವು ರಾಕ್ಷಸನ ಶಿರವನ್ನು ಕತ್ತರಿಸಲು, ಭಿರುಗಾಳಿಗೆ ಸಿಲುಕಿದ ಮರವು ಬೀಳುವಂತೆ ಕೆಳಗುರುಳಿದುದು ಕಂಡಿತು.

03270005a ತಂ ದೃಷ್ಟ್ವಾ ನಿಹತಂ ಸಂಖ್ಯೇ ಪ್ರಹಸ್ತಂ ಕ್ಷಣದಾಚರಂ|

03270005c ಅಭಿದುದ್ರಾವ ಧೂಮ್ರಾಕ್ಷೋ ವೇಗೇನ ಮಹತಾ ಕಪೀನ್||

ಯುದ್ಧದಲ್ಲಿ ಪ್ರಹಸ್ತನು ಹತನಾದುದನ್ನು ನೋಡಿದ ಧೂಮ್ರಾಕ್ಷನು ಕಪಿಗಳನ್ನು ಮಹಾವೇಗದಿಂದ ಬಂದು ಆಕ್ರಮಣ ಮಾಡಿದನು.

03270006a ತಸ್ಯ ಮೇಘೋಪಮಂ ಸೈನ್ಯಮಾಪತದ್ಭೀಮದರ್ಶನಂ|

03270006c ದೃಷ್ಟ್ವೈವ ಸಹಸಾ ದೀರ್ಣಾ ರಣೇ ವಾನರಪುಂಗವಾಃ||

ನೋಡಲು ಭಯಂಕರವಾಗಿದ್ದ ಅವನ ಸೇನೆಯು ಮೋಡಗಳಂತೆ ಸೇನೆಯ ಮೇಲೆ ಬೀಳಲು, ಅದನ್ನು ಕಂಡ ವಾನರಪುಂಗವರು ತಕ್ಷಣವೇ ಚದುರಿಹೋದರು.

03270007a ತತಸ್ತಾನ್ಸಹಸಾ ದೀರ್ಣಾನ್ದೃಷ್ಟ್ವಾ ವಾನರಪುಂಗವಾನ್|

03270007c ನಿರ್ಯಾಯ ಕಪಿಶಾರ್ದೂಲೋ ಹನೂಮಾನ್ಪರ್ಯವಸ್ಥಿತಃ||

ಆ ವಾನರಪುಂಗವರು  ಹಾಗೆ ಶೀಘ್ರವಾಗಿ ಚದುರಿಹೋದುದನ್ನು ನೋಡಿ ಕಪಿಶಾರ್ದೂಲ ಹನೂಮಂತನು ಸ್ಥಿರವಾಗಿ ನಿಂತು ಹೋರಾಡಿದನು.

03270008a ತಂ ದೃಷ್ಟ್ವಾವಸ್ಥಿತಂ ಸಂಖ್ಯೇ ಹರಯಃ ಪವನಾತ್ಮಜಂ|

03270008c ವೇಗೇನ ಮಹತಾ ರಾಜನ್ಸಂನ್ಯವರ್ತಂತ ಸರ್ವಶಃ||

ರಾಜನ್! ರಣದಲ್ಲಿ ಸ್ಥಿತನಾಗಿದ್ದ ಪವನಾತ್ಮಜನನ್ನು ನೋಡಿ ಕಪಿಗಳು ಎಲ್ಲೆಡೆಯಿಂದ ಮಹಾವೇಗದಲ್ಲಿ ಬಂದು ಒಂದುಗೂಡಿದರು.

03270009a ತತಃ ಶಬ್ದೋ ಮಹಾನಾಸೀತ್ತುಮುಲೋ ಲೋಮಹರ್ಷಣ|

03270009c ರಾಮರಾವಣಸೈನ್ಯಾನಾಮನ್ಯೋನ್ಯಮಭಿಧಾವತಾಂ||

ಆಗ ಅನ್ಯೋನ್ಯರೊಂದಿಗೆ ಹೋರಾಡುತ್ತಿರುವ ರಾಮ ಮತ್ತು ರಾವಣರ ಸೇನೆಗಳಲ್ಲಿ ಮೈ ನವಿರೇಳಿಸುವ ಮಹಾ ಶಬ್ಧದ ತುಮುಲವುಂಟಾಯಿತು.

03270010a ತಸ್ಮಿನ್ಪ್ರವೃತ್ತೇ ಸಂಗ್ರಾಮೇ ಘೋರೇ ರುಧಿರಕರ್ದಮೇ|

03270010c ಧೂಮ್ರಾಕ್ಷಃ ಕಪಿಸೈನ್ಯಂ ತದ್ದ್ರಾವಯಾಮಾಸ ಪತ್ರಿಭಿಃ||

ರಕ್ತವನ್ನು ಸುರಿಸುವ ಆ ಘೋರ ಸಂಗ್ರಾಮವು ನಡೆಯುತ್ತಿರಲು, ಧೂಮ್ರಾಕ್ಷನು ಬಾಣಗಳಿಂದ ಕಪಿಸೇನೆಯನ್ನು ಪಲಾಯನವಾಗುವಂತೆ ಮಾಡಿದನು.

03270011a ತಂ ರಾಕ್ಷಸಮಹಾಮಾತ್ರಮಾಪತಂತಂ ಸಪತ್ನಜಿತ್|

03270011c ತರಸಾ ಪ್ರತಿಜಗ್ರಾಹ ಹನೂಮಾನ್ಪವನಾತ್ಮಜಃ||

ಶತ್ರುಗಳನ್ನು ಜಯಿಸುವ, ಪವನಾತ್ಮಜ ಹನೂಮಂತನು ಮುಂದುವರೆಯುತ್ತಿದ್ದ ಮಹಾಮಾತ್ರ ರಾಕ್ಷಸನನ್ನು ಬೇಗನೇ ಎದುರಿಸಿ ತಡೆದನು.

03270012a ತಯೋರ್ಯುದ್ಧಮಭೂದ್ಘೋರಂ ಹರಿರಾಕ್ಷಸವೀರಯೋಃ|

03270012c ಜಿಗೀಷತೋರ್ಯುಧಾನ್ಯೋನ್ಯಮಿಂದ್ರಪ್ರಹ್ಲಾದಯೋರಿವ||

ಆ ವಾನರ ರಾಕ್ಷಸರ ನಡುವೆ ಅನ್ಯೋನ್ಯರನ್ನು ಗೆಲ್ಲುವ ಇಂದ್ರ-ಪ್ರಹ್ಲಾದರ ನಡುವಿನಂತಿರುವ ಘೋರವಾದ ಯುದ್ಧವು ನಡೆಯಿತು.

03270013a ಗದಾಭಿಃ ಪರಿಘೈಶ್ಚೈವ ರಾಕ್ಷಸೋ ಜಘ್ನಿವಾನ್ಕಪಿಂ|

03270013c ಕಪಿಶ್ಚ ಜಘ್ನಿವಾನ್ರಕ್ಷಃ ಸಸ್ಕಂಧವಿಟಪೈರ್ದ್ರುಮೈಃ||

ರಾಕ್ಷಸನು ಕಪಿಯನ್ನು ಗದೆ ಮತ್ತು ಪರಿಘಗಳಿಂದ ಹೊಡೆಯಲು ಕಪಿಯು ರಾಕ್ಷಸನನ್ನು ಮರಗಳು, ಕೊಂಬೆಗಳು ಮತ್ತು ಇತರ ಎಲ್ಲವುಗಳಿಂದ ಹೊಡೆದನು.

03270014a ತತಸ್ತಮತಿಕಾಯೇನ ಸಾಶ್ವಂ ಸರಥಸಾರಥಿಂ|

03270014c ಧೂಮ್ರಾಕ್ಷಮವಧೀದ್ಧೀಮಾನ್ ಹನೂಮಾನ್ಮಾರುತಾತ್ಮಜಃ||

ಆಗ ಅತಿಕಾಯನಾದ ಮಾರುತಾತ್ಮಜ ಧೀಮಾನ್ ಹನೂಮಂತನು ಕುದುರೆಗಳು ಮತ್ತು ರಥಗಳ ಸಹಿತ ಧೂಮ್ರಾಕ್ಷನನ್ನು ವಧಿಸಿದನು.

03270015a ತತಸ್ತಂ ನಿಹತಂ ದೃಷ್ಟ್ವಾ ಧೂಮ್ರಾಕ್ಷಂ ರಾಕ್ಷಸೋತ್ತಮಂ|

03270015c ಹರಯೋ ಜಾತವಿಸ್ರಂಭಾ ಜಘ್ನುರಭ್ಯೇತ್ಯ ಸೈನಿಕಾನ್||

ಆಗ ರಾಕ್ಷಸೋತ್ತಮ ಧೂಮ್ರಾಕ್ಷನು ಹತನಾದುದನ್ನು ನೋಡಿ ವಾನರರ ಉತ್ಸಾಹವು ಮರಳಿ ಅವರು ಸೈನಿಕರನ್ನು ಸಂಹರಿಸಿದರು.

03270016a ತೇ ವಧ್ಯಮಾನಾ ಬಲಿಭಿರ್ಹರಿಭಿರ್ಜಿತಕಾಶಿಭಿಃ|

03270016c ರಾಕ್ಷಸಾ ಭಗ್ನಸಂಕಲ್ಪಾ ಲಂಕಾಮಭ್ಯಪತನ್ಭಯಾತ್||

ಜಯವನ್ನು ಪಡೆಯುತ್ತಿದ್ದ ಬಲಶಾಲಿ ಕಪಿಗಳಿಂದ ಹತರಾಗುತ್ತಿದ್ದ ಆ ರಾಕ್ಷಸರು ತಮ್ಮ ಸಂಕಲ್ಪಗಳನ್ನು ಕಡಿದುಕೊಂಡು ಭಯದಿಂದ ಲಂಕೆಗೆ ಮರಳಿದರು.

03270017a ತೇಽಭಿಪತ್ಯ ಪುರಂ ಭಗ್ನಾ ಹತಶೇಷಾ ನಿಶಾಚರಾಃ|

03270017c ಸರ್ವಂ ರಾಜ್ಞೇ ಯಥಾವೃತ್ತಂ ರಾವಣಾಯ ನ್ಯವೇದಯನ್||

ಭಗ್ನರಾದ, ಸಾಯದೇ ಉಳಿದ ನಿಶಾಚರರು ಪುರವನ್ನು ಸೇರಿ ಎಲ್ಲವನ್ನೂ ನಡೆದಹಾಗೆ ರಾಜ ರಾವಣನಿಗೆ ನಿವೇದಿಸಿದರು.

03270018a ಶ್ರುತ್ವಾ ತು ರಾವಣಸ್ತೇಭ್ಯಃ ಪ್ರಹಸ್ತಂ ನಿಹತಂ ಯುಧಿ|

03270018c ಧೂಮ್ರಾಕ್ಷಂ ಚ ಮಹೇಷ್ವಾಸಂ ಸಸೈನ್ಯಂ ವಾನರರ್ಷಭೈಃ||

03270019a ಸುದೀರ್ಘಮಿವ ನಿಃಶ್ವಸ್ಯ ಸಮುತ್ಪತ್ಯ ವರಾಸನಾತ್|

03270019c ಉವಾಚ ಕುಂಭಕರ್ಣಸ್ಯ ಕರ್ಮಕಾಲೋಽಯಮಾಗತಃ||

ಯುದ್ಧದಲ್ಲಿ ಪ್ರಹಸ್ತ ಮತ್ತು ಮಹೇಷ್ವಾಸ ಧೂಮ್ರಾಕ್ಷರು ಸೇನೆಯೊಂದಿಗೆ ವಾನರರಿಂದ ಹತರಾಗಿದ್ದುದನ್ನು ಕೇಳಿ ರಾವಣನು ಸುದೀರ್ಘ ನಿಟ್ಟುಸಿರನ್ನು ಬಿಟ್ಟು ವರಾಸನದಿಂದ ಎದ್ದು ಹೇಳಿದನು: “ಕುಂಭಕರ್ಣನು ಕಾರ್ಯವೆಸಗುವ ಕಾಲವು ಬಂದಿದೆ.”

03270020a ಇತ್ಯೇವಮುಕ್ತ್ವಾ ವಿವಿಧೈರ್ವಾದಿತ್ರೈಃ ಸುಮಹಾಸ್ವನೈಃ|

03270020c ಶಯಾನಮತಿನಿದ್ರಾಲುಂ ಕುಂಭಕರ್ಣಮಬೋಧಯತ್||

ಹೀಗೆ ಹೇಳಿ ಜೋರಾಗಿ ಶಬ್ಧಮಾಡುವ ವಿವಿಧ ಸಂಗೀತ ಸಲಕರಣೆಗಳಿಂದ ಮಲಗಿದ್ದ ನಿದ್ರಾಲು ಕುಂಭಕರ್ಣನನ್ನು ಎಬ್ಬಿಸಿದನು.

03270021a ಪ್ರಬೋಧ್ಯ ಮಹತಾ ಚೈನಂ ಯತ್ನೇನಾಗತಸಾಧ್ವಸಃ|

03270021c ಸ್ವಸ್ಥಮಾಸೀನಮವ್ಯಗ್ರಂ ವಿನಿದ್ರಂ ರಾಕ್ಷಸಾಧಿಪಃ|

03270021e ತತೋಽಬ್ರವೀದ್ದಶಗ್ರೀವಃ ಕುಂಭಕರ್ಣಂ ಮಹಾಬಲಂ||

ಮಹಾಯತ್ನದಿಂದ ಅವನನ್ನು ಎಚ್ಚರಿಸಲು, ನಿದ್ರೆಯನ್ನು ಕಳೆದು ಆಯಾಸವನ್ನು ಕಳೆದುಕೊಂಡ ರಾಕ್ಷಸಾಧಿಪನು ಸುಖವಾಗಿ ಕುಳಿತುಕೊಳ್ಳಲು ದಶಗ್ರೀವನು ಮಹಾಬಲಿ ಕುಂಭಕರ್ಣನಿಗೆ ಹೇಳಿದನು:

03270022a ಧನ್ಯೋಽಸಿ ಯಸ್ಯ ತೇ ನಿದ್ರಾ ಕುಂಭಕರ್ಣೇಯಮೀದೃಶೀ|

03270022c ಯ ಇಮಂ ದಾರುಣಂ ಕಾಲಂ ನ ಜಾನೀಷೇ ಮಹಾಭಯಂ||

“ಕುಂಭಕರ್ಣ! ಈ ರೀತಿ ನಿದ್ರೆಮಾಡಬಲ್ಲ ನೀನು ಧನ್ಯ! ಈ ದಾರುಣ ಕಾಲದ ಮಹಾಭಯವು ನಿನಗೆ ತಿಳಿದಿಲ್ಲ.

03270023a ಏಷ ತೀರ್ತ್ವಾರ್ಣವಂ ರಾಮಃ ಸೇತುನಾ ಹರಿಭಿಃ ಸಹ|

03270023c ಅವಮನ್ಯೇಹ ನಃ ಸರ್ವಾನ್ಕರೋತಿ ಕದನಂ ಮಹತ್||

ಈ ರಾಮನು ಕಪಿಗಳೊಂದಿಗೆ ಸೇತುವೆಯ ಮೂಲಕ ಸಾಗರವನ್ನು ದಾಟಿ ಬಂದು ನಮ್ಮೆಲ್ಲರನ್ನೂ ಅವಹೇಳಿಸಿ ಮಹಾ ಕದನವನ್ನು ಮಾಡುತ್ತಿದ್ದಾನೆ.

03270024a ಮಯಾ ಹ್ಯಪಹೃತಾ ಭಾರ್ಯಾ ಸೀತಾ ನಾಮಾಸ್ಯ ಜಾನಕೀ|

03270024c ತಾಂ ಮೋಕ್ಷಯಿಷುರಾಯಾತೋ ಬದ್ಧ್ವಾ ಸೇತುಂ ಮಹಾರ್ಣವೇ||

ನಾನು ಸೀತಾ ಎಂಬ ಹೆಸರಿನ ಅವನ ಭಾರ್ಯೆ ಮತ್ತು ಜನಕನ ಮಗಳನ್ನು ಅಪಹರಿಸಲು, ಅವಳನ್ನು ಬಿಡಿಸಲು ಅವನು ಸಾಗರಕ್ಕೆ ಸೇತುವೆಯನ್ನು ಕಟ್ಟಿದನು.

03270025a ತೇನ ಚೈವ ಪ್ರಹಸ್ತಾದಿರ್ಮಹಾನ್ನಃ ಸ್ವಜನೋ ಹತಃ|

03270025c ತಸ್ಯ ನಾನ್ಯೋ ನಿಹಂತಾಸ್ತಿ ತ್ವದೃತೇ ಶತ್ರುಕರ್ಶನ||

ಅವನಿಂದ ಪಹಸ್ತನೇ ಮೊದಲಾದ ಮಹಾ ಸ್ವಜನರು ಹತರಾಗಿದ್ದಾರೆ. ಶತ್ರುಕರ್ಶನ! ನೀನಲ್ಲದೇ ಬೇರೆ ಯಾರೂ ಅವನನ್ನು ಕೊಲ್ಲಲಾರರು!

03270026a ಸ ದಂಶಿತೋಽಭಿನಿರ್ಯಾಯ ತ್ವಮದ್ಯ ಬಲಿನಾಂ ವರ|

03270026c ರಾಮಾದೀನ್ ಸಮರೇ ಸರ್ವಾಂ ಜಹಿ ಶತ್ರೂನರಿಂದಮ||

ಅವನು ಕವಚವನು ಧರಿಸಿದ್ದಾನೆ. ಬಲಿಗಳಲ್ಲಿ ಶ್ರೇಷ್ಠನೇ! ಇಂದೇ ಹೊರಡು! ಅರಿಂದಮ! ರಾಮನೇ ಮೊದಲಾದ ಶತ್ರುಗಳೆಲ್ಲರನ್ನೂ ಸಮರದಲ್ಲಿ ಜಯಿಸು!

03270027a ದೂಷಣಾವರಜೌ ಚೈವ ವಜ್ರವೇಗಪ್ರಮಾಥಿನೌ|

03270027c ತೌ ತ್ವಾಂ ಬಲೇನ ಮಹತಾ ಸಹಿತಾವನುಯಾಸ್ಯತಃ||

ದೂಷಣನ ಇಬ್ಬರು ತಮ್ಮಂದಿರು - ವಜ್ರವೇಗ ಮತ್ತು ಪ್ರಮಥಿ – ತಮ್ಮ ಮಹಾಸೇನೆಗಳೊಂದಿಗೆ ನಿನ್ನನ್ನು ಅನುಸರಿಸುತ್ತಾರೆ.”

03270028a ಇತ್ಯುಕ್ತ್ವಾ ರಾಕ್ಷಸಪತಿಃ ಕುಂಭಕರ್ಣಂ ತರಸ್ವಿನಂ|

03270028c ಸಂದಿದೇಶೇತಿಕರ್ತವ್ಯೇ ವಜ್ರವೇಗಪ್ರಮಾಥಿನೌ||

ತರಸ್ವಿ ಕುಂಭಕರ್ಣನಿಗೆ ಹೀಗೆ ಹೇಳಿ ರಾಕ್ಷಸಪತಿಯು ವಜ್ರವೇಗ ಮತ್ತು ಪ್ರಮಥಿಗಳಿಗೆ ಮಾಡಬೇಕಾದುದರ ಕುರಿತು ಆಜ್ಞೆಯನ್ನಿತ್ತನು.

03270029a ತಥೇತ್ಯುಕ್ತ್ವಾ ತು ತೌ ವೀರೌ ರಾವಣಂ ದೂಷಣಾನುಜೌ|

03270029c ಕುಂಭಕರ್ಣಂ ಪುರಸ್ಕೃತ್ಯ ತೂರ್ಣಂ ನಿರ್ಯಯತುಃ ಪುರಾತ್||

ಆ ವೀರ ದೂಷಣಾನುಜರಿಬ್ಬರೂ ಹಾಗೇ ಆಗಲೆಂದು ರಾವಣನಿಗೆ ಹೇಳಿ ಕುಂಭಕರ್ಣನನ್ನು ಮುಂದಿಟ್ಟು ಸೇನೆಯೊಂದಿಗೆ ಪುರದಿಂದ ಹೊರಟರು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ಕುಂಭಕರ್ಣನಿರ್ಗಮನೇ ಸಪ್ತತ್ಯಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ಕುಂಭಕರ್ಣನಿರ್ಗಮನದಲ್ಲಿ ಇನ್ನೂರಾಎಪ್ಪತ್ತನೆಯ ಅಧ್ಯಾಯವು.

Related image

Kannada translation of Draupadiharana Parva, by Chapter:
  1. ಜಯದ್ರಥಾಗಮನ
  2. ಕೋಟಿಕಾಸ್ಯಪ್ರಶ್ನಃ
  3. ದ್ರೌಪದೀವಾಕ್ಯ
  4. ಜಯದ್ರಥದ್ರೌಪದೀಸಂವಾದ
  5. ದ್ರೌಪದೀಹರಣ
  6. ಪಾರ್ಥಾಗಮನ
  7. ದ್ರೌಪದೀವಾಕ್ಯ
  8. ಜಯದ್ರಥಪಲಾಯನ
  9. ಜಯದ್ರಥವಿಮೋಕ್ಷಣ
  10. ರಾಮೋಪಾಖ್ಯಾನ-ಯುಧಿಷ್ಠಿರಪ್ರಶ್ನಃ
  11. ರಾಮೋಪಾಖ್ಯಾನ-ರಾಮರಾವಣಯೋರ್ಜನ್ಮಕಥನ
  12. ರಾಮೋಪಾಖ್ಯಾನ-ರಾವಣಾದಿವರಪ್ರಾಪ್ತಿಃ
  13. ರಾಮೋಪಾಖ್ಯಾನ-ವಾನರಾದ್ಯುತ್ಪತ್ತಿಃ
  14. ರಾಮೋಪಾಖ್ಯಾನ-ರಾಮವನಾಭಿಗಮನ
  15. ರಾಮೋಪಾಖ್ಯಾನ-ಮಾರೀಚವಧ-ಸೀತಾಪಹರಣ
  16. ರಾಮೋಪಾಖ್ಯಾನ-ಕಬಂಧಹನನ
  17. ರಾಮೋಪಾಖ್ಯಾನ-ತ್ರಿಜಟಾಕೃತಸೀತಾಸಂವಾದಃ
  18. ರಾಮೋಪಾಖ್ಯಾನ-ಸೀತಾರಾವಣಸಂವಾದಃ
  19. ರಾಮೋಪಾಖ್ಯಾನ-ಹನುಮಪ್ರತ್ಯಾಗಮನ
  20. ರಾಮೋಪಾಖ್ಯಾನ-ಸೇತುಬಂಧನ
  21. ರಾಮೋಪಾಖ್ಯಾನ-ಲಂಕಾಪ್ರವೇಶ
  22. ರಾಮೋಪಾಖ್ಯಾನ-ರಾಮರಾವಣದ್ವಂದ್ವಯುದ್ಧಃ
  23. ರಾಮೋಪಾಖ್ಯಾನ-ಕುಂಭಕರ್ಣನಿರ್ಗಮನ
  24. ರಾಮೋಪಾಖ್ಯಾನ-ಕುಂಬಕರ್ಣಾದಿವಧಃ
  25. ರಾಮೋಪಾಖ್ಯಾನ-ಇಂದ್ರಜಿದ್ಯುದ್ಧಃ
  26. ರಾಮೋಪಾಖ್ಯಾನ-ಇಂದ್ರಜಿದ್ವಧಃ
  27. ರಾಮೋಪಾಖ್ಯಾನ-ರಾವಣವಧಃ
  28. ರಾಮೋಪಾಖ್ಯಾನ-ಶ್ರೀರಾಮಾಭಿಷೇಕ
  29. ರಾಮೋಪಾಖ್ಯಾನ-ಯುಧಿಷ್ಠಿರಾಶ್ವಾಸನ
  30. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೧
  31. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೨
  32. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೩
  33. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೪
  34. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೫
  35. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೬
  36. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೭

Comments are closed.