Aranyaka Parva: Chapter 278

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೭೮

ಸತ್ಯವಾನನನ್ನು ವಿವಾಹವಾಗಲು ಸಾವಿತ್ರಿಯ ದೃಢನಿಶ್ಚಯ

ಒಮ್ಮೆ ಅಶ್ವಪತಿಯು ನಾರದನ ಜೊತೆ ಸಭಾಮಧ್ಯದಲ್ಲಿ ಕುಳಿತು ಮಾತಿನಲ್ಲಿ ತೊಡಗಿರಲು ಸಾವಿತ್ರಿಯು ಹಿಂದಿರುಗಿದುದು; ಯಾರನ್ನು ವರಿಸಿದಳೆಂದು ಕೇಳಲು ಸತ್ಯವಾನನನ್ನು ಎಂದಾಗ ನಾರದನು “ಕ್ಷೀಣಾಯು ಸತ್ಯವಾನನು ಇಂದಿನಿಂದ ಒಂದು ವರ್ಷದಲ್ಲಿ ದೇಹತ್ಯಾಗ ಮಾಡುತ್ತಾನೆ” ಎಂದಾಗ ಎಷ್ಟು ಹೇಳಿದರೂ ಸತ್ಯವಾನನೇ ತನ್ನ ಪತಿಯಾಗುತ್ತಾನೆಂದು ಸಾವಿತ್ರಿಯು ನಿರ್ಧರಿಸಿದುದು (೧-೩೨).

03278001 ಮಾರ್ಕಂಡೇಯ ಉವಾಚ|

03278001a ಅಥ ಮದ್ರಾಧಿಪೋ ರಾಜಾ ನಾರದೇನ ಸಮಾಗತಃ|

03278001c ಉಪವಿಷ್ಟಃ ಸಭಾಮಧ್ಯೇ ಕಥಾಯೋಗೇನ ಭಾರತ||

ಮಾರ್ಕಂಡೇಯನು ಹೇಳಿದನು: “ಭಾರತ! ಆಗ ಒಮ್ಮೆ ಮದ್ರಾಧಿಪ ರಾಜನು ನಾರದನ ಜೊತೆಗೆ ಸಭಾಮಧ್ಯದಲ್ಲಿ ಕುಳಿದು ಮಾತಿನಲ್ಲಿ ತೊಡಗಿದ್ದನು.

03278002a ತತೋಽಭಿಗಮ್ಯ ತೀರ್ಥಾನಿ ಸರ್ವಾಣ್ಯೇವಾಶ್ರಮಾಂಸ್ತಥಾ|

03278002c ಆಜಗಾಮ ಪಿತುರ್ವೇಶ್ಮ ಸಾವಿತ್ರೀ ಸಹ ಮಂತ್ರಿಭಿಃ||

ಆಗ ಸರ್ವ ತೀರ್ಥ-ಆಶ್ರಮಗಳಿಗೆ ಹೋಗಿದ್ದ ಸಾವಿತ್ರಿಯು ಮಂತ್ರಿಗಳ ಸಹಿತ ತಂದೆಯ ಮನೆಗೆ ಹಿಂದಿರುಗಿದಳು.

03278003a ನಾರದೇನ ಸಹಾಸೀನಂ ದೃಷ್ಟ್ವಾ ಸಾ ಪಿತರಂ ಶುಭಾ|

03278003c ಉಭಯೋರೇವ ಶಿರಸಾ ಚಕ್ರೇ ಪಾದಾಭಿವಂದನಂ||

ನಾರದನೊಂದಿಗೆ ಕುಳಿತಿದ್ದ ತಂದೆಯನ್ನು ನೋಡಿ ಆ ಶುಭೆಯು ಇಬ್ಬರ ಪಾದಗಳಿಗೂ ಶಿರಬಾಗಿ ನಮಸ್ಕರಿಸಿದಳು.

03278004 ನಾರದ ಉವಾಚ|

03278004a ಕ್ವ ಗತಾಭೂತ್ಸುತೇಯಂ ತೇ ಕುತಶ್ಚೈವಾಗತಾ ನೃಪ|

03278004c ಕಿಮರ್ಥಂ ಯುವತೀಂ ಭರ್ತ್ರೇ ನ ಚೈನಾಂ ಸಂಪ್ರಯಚ್ಚಸಿ||

ನಾರದನು ಹೇಳಿದನು: “ನೃಪ! ನಿನ್ನ ಮಗಳು ಎಲ್ಲಿಗೆ ಹೋಗಿದ್ದಳು ಮತ್ತು ಎಲ್ಲಿಂದ ಬರುತ್ತಿದ್ದಾಳೆ? ಯಾವ ಕಾರಣದಿಂದ ನೀನು ಈ ಯುವತಿಯನ್ನು ಇದೂವರೆಗೂ ಯೋಗ್ಯ ವರನಿಗೆ ಕೊಟ್ಟಿಲ್ಲ?”

03278005 ಅಶ್ವಪತಿರುವಾಚ|

03278005a ಕಾರ್ಯೇಣ ಖಲ್ವನೇನೈವ ಪ್ರೇಷಿತಾದ್ಯೈವ ಚಾಗತಾ|

03278005c ತದಸ್ಯಾಃ ಶೃಣು ದೇವರ್ಷೇ ಭರ್ತಾರಂ ಯೋಽನಯಾ ವೃತಃ||

ಅಶ್ವಪತಿಯು ಹೇಳಿದನು: “ದೇವರ್ಷೇ! ಇದೇ ಕಾರ್ಯದ ಸಲುವಾಗಿ ನಾನು ಅವಳನ್ನು ಕಳುಹಿಸಿದ್ದೆ ಮತ್ತು ಅಲ್ಲಿಂದಲೇ ಬರುತ್ತಿದ್ದಾಳೆ. ಅವಳು ಯಾರನ್ನು ಪತಿಯನ್ನಾಗಿ ವರಿಸಿದ್ದಾಳೆ ಎನ್ನುವುದನ್ನು ಅವಳಿಂದಲೇ ಕೇಳೋಣ.””

03278006 ಮಾರ್ಕಂಡೇಯ ಉವಾಚ|

03278006a ಸಾ ಬ್ರೂಹಿ ವಿಸ್ತರೇಣೇತಿ ಪಿತ್ರಾ ಸಂಚೋದಿತಾ ಶುಭಾ|

03278006c ದೈವತಸ್ಯೇವ ವಚನಂ ಪ್ರತಿಗೃಹ್ಯೇದಮಬ್ರವೀತ್||

ಮಾರ್ಕಂಡೇಯನು ಹೇಳಿದನು: “ವಿಸ್ತಾರವಾಗಿ ಹೇಳು ಎಂದು ತಂದೆಯಿಂದ ಆಜ್ಞಾಪಿತಳಾದ ಆ ಶುಭೆಯು ಅವನ ಮಾತನ್ನು ದೇವನದೆಂದೇ ಸ್ವೀಕರಿಸಿ ಹೇಳಿದಳು:

03278007a ಆಸೀಚ್ಚಾಲ್ವೇಷು ಧರ್ಮಾತ್ಮಾ ಕ್ಷತ್ರಿಯಃ ಪೃಥಿವೀಪತಿಃ|

03278007c ದ್ಯುಮತ್ಸೇನ ಇತಿ ಖ್ಯಾತಃ ಪಶ್ಚಾದಂಧೋ ಬಭೂವ ಹ||

“ಶಾಲ್ವದಲ್ಲಿ ಧರ್ಮಾತ್ಮ ಕ್ಷತ್ರಿಯ ಪೃಥಿವೀಪತಿ ದ್ಯುಮತ್ಸೇನ ಎಂದು ಖ್ಯಾತನಾದ ರಾಜನಿದ್ದನು. ಆದರೆ ಅವನು ಅಂಧನಾದನು.

03278008a ವಿನಷ್ಟಚಕ್ಷುಷಸ್ತಸ್ಯ ಬಾಲಪುತ್ರಸ್ಯ ಧೀಮತಃ|

03278008c ಸಾಮೀಪ್ಯೇನ ಹೃತಂ ರಾಜ್ಯಂ ಚಿದ್ರೇಽಸ್ಮಿನ್ಪೂರ್ವವೈರಿಣಾ||

ಕಣ್ಣುಗಳನ್ನು ಕಳೆದು ಕೊಂಡ ಮತ್ತು ಮಗನು ಇನ್ನೂ ಬಾಲಕನಾಗಿದ್ದ ಆ ಧೀಮಂತನ ಮೇಲೆ ಹಿಂದಿನಿಂದಲೇ ವೈರತ್ವವನ್ನು ಹೊಂದಿದ್ದ ನೆರೆಯ ರಾಜನು ಆಕ್ರಮಣ ಮಾಡಿ ರಾಜ್ಯವನ್ನು ಅಪಹರಿಸಿದನು.

03278009a ಸ ಬಾಲವತ್ಸಯಾ ಸಾರ್ಧಂ ಭಾರ್ಯಯಾ ಪ್ರಸ್ಥಿತೋ ವನಂ|

03278009c ಮಹಾರಣ್ಯಗತಶ್ಚಾಪಿ ತಪಸ್ತೇಪೇ ಮಹಾವ್ರತಃ||

ಅವನು ಬಾಲಕ ಮಗ ಮತ್ತು ಪತ್ನಿಯೊಡನೆ ವನವನ್ನು ಸೇರಿದನು. ಮಹಾರಣ್ಯಕ್ಕೆ ಹೋಗಿ ಆ ಮಹಾವ್ರತನು ತಪಸ್ಸನ್ನು ತಪಿಸಿದನು.

03278010a ತಸ್ಯ ಪುತ್ರಃ ಪುರೇ ಜಾತಃ ಸಂವೃದ್ಧಶ್ಚ ತಪೋವನೇ|

03278010c ಸತ್ಯವಾನನುರೂಪೋ ಮೇ ಭರ್ತೇತಿ ಮನಸಾ ವೃತಃ||

ರಾಜಧಾನಿಯಲ್ಲಿ ಹುಟ್ಟಿದ ಅವನ ಮಗನು ತಪೋವನದಲ್ಲಿ ಬೆಳೆದನು. ಆ ಸತ್ಯವಾನನು ನನಗೆ ಅನುರೂಪ ಪತಿಯೆಂದು ಮನಸಾ ಆರಿಸಿಕೊಂಡಿದ್ದೇನೆ.”

03278011 ನಾರದ ಉವಾಚ|

03278011a ಅಹೋ ಬತ ಮಹತ್ಪಾಪಂ ಸಾವಿತ್ರ್ಯಾ ನೃಪತೇ ಕೃತಂ|

03278011c ಅಜಾನಂತ್ಯಾ ಯದನಯಾ ಗುಣವಾನ್ಸತ್ಯವಾನ್ವೃತಃ||

ನಾರದನು ಹೇಳಿದನು: “ಅಹೋ! ನೃಪತೇ! ಸಾವಿತ್ರಿಯಿಂದ ಮಹಾ ಪಾಪವೇ ನಡೆದುಹೋಯಿತು! ತಿಳಿಯದೇ ಗುಣವಂತನೆಂದು ಇವಳು ಸತ್ಯವಾನನನ್ನು ವರಿಸಿದ್ದಾಳೆ.

03278012a ಸತ್ಯಂ ವದತ್ಯಸ್ಯ ಪಿತಾ ಸತ್ಯಂ ಮಾತಾ ಪ್ರಭಾಷತೇ|

03278012c ತತೋಽಸ್ಯ ಬ್ರಾಹ್ಮಣಾಶ್ಚಕ್ರುರ್ನಾಮೈತತ್ಸತ್ಯವಾನಿತಿ||

ಅವನ ತಂದೆಯು ಸದಾ ಸತ್ಯವನ್ನು ನುಡಿಯುತ್ತಾನೆ. ತಾಯಿಯೂ ಸತ್ಯವನ್ನೇ ನುಡಿಯುತ್ತಾಳೆ. ಆದುದರಿಂದಲೇ ಅವನಿಗೆ ಸತ್ಯವಾನನೆಂದು ಬ್ರಾಹ್ಮಣರು ಹೆಸರನ್ನಿಟ್ಟಿದ್ದಾರೆ.

03278013a ಬಾಲಸ್ಯಾಶ್ವಾಃ ಪ್ರಿಯಾಶ್ಚಾಸ್ಯ ಕರೋತ್ಯಶ್ವಾಂಶ್ಚ ಮೃನ್ಮಯಾನ್|

03278013c ಚಿತ್ರೇಽಪಿ ಚ ಲಿಖತ್ಯಶ್ವಾಂಶ್ಚಿತ್ರಾಶ್ವ ಇತಿ ಚೋಚ್ಯತೇ||

ಬಾಲ್ಯದಲಿ ಅವನಿಗೆ ಕುದುರೆಗಳು ಅತಿ ಪ್ರಿಯವಾಗಿದ್ದವು ಮತ್ತು ಅವನು ಕುದುರೆಗಳ ಚಿತ್ರವನ್ನೂ ಬರೆಯುತ್ತಿದ್ದನು. ಅಶ್ವಗಳ ಚಿತ್ರವನ್ನು ಬರೆಯುತ್ತಿದ್ದುದರಿಂದ ಅವನನ್ನು ಚಿತ್ರಾಶ್ವ ಎಂದೂ ಕರೆಯುತ್ತಾರೆ.”

03278014 ರಾಜೋವಾಚ|

03278014a ಅಪೀದಾನೀಂ ಸ ತೇಜಸ್ವೀ ಬುದ್ಧಿಮಾನ್ವಾ ನೃಪಾತ್ಮಜಃ|

03278014c ಕ್ಷಮಾವಾನಪಿ ವಾ ಶೂರಃ ಸತ್ಯವಾನ್ಪಿತೃನಂದನಃ||

ರಾಜನು ಹೇಳಿದನು: “ಆ ನೃಪಾತ್ಮಜ ಪಿತೃನಂದನನು ತೇಜಸ್ವಿಯೂ, ಬುದ್ಧಿವಂತನೂ ಆಗಿದ್ದಾನೆಯೇ? ಸತ್ಯವಾನನು ಕ್ಷಮಾವಂತನೂ ಶೂರನೂ ಆಗಿದ್ದಾನೆಯೇ?”

03278015 ನಾರದ ಉವಾಚ|

03278015a ವಿವಸ್ವಾನಿವ ತೇಜಸ್ವೀ ಬೃಹಸ್ಪತಿಸಮೋ ಮತೌ|

03278015c ಮಹೇಂದ್ರ ಇವ ಶೂರಶ್ಚ ವಸುಧೇವ ಕ್ಷಮಾನ್ವಿತಃ||

ನಾರದನು ಹೇಳಿದನು: “ವಿವಸ್ವತನಂತೆ ತೇಜಸ್ವಿಯೂ ಮತಿಯಲ್ಲಿ ಬೃಹಸ್ಪತಿಯ ಸಮನೂ ಆಗಿದ್ದಾನೆ. ಮಹೇಂದ್ರನಂತೆ ಶೂರನೂ ವಸುಧೆಯಂತೆ ಕ್ಷಮಾನ್ವಿತನೂ ಹೌದು.”

03278016 ಅಶ್ವಪತಿರುವಾಚ|

03278016a ಅಪಿ ರಾಜಾತ್ಮಜೋ ದಾತಾ ಬ್ರಹ್ಮಣ್ಯೋ ವಾಪಿ ಸತ್ಯವಾನ್|

03278016c ರೂಪವಾನಪ್ಯುದಾರೋ ವಾಪ್ಯಥ ವಾ ಪ್ರಿಯದರ್ಶನಃ||

ಅಶ್ವಪತಿಯು ಹೇಳಿದನು: “ಆ ರಾಜಾತ್ಮಜ ಸತ್ಯವಾನನು ದಾನಿಯೂ ಬ್ರಾಹ್ಮಣರನ್ನು ಗೌರವಿಸುವವನೂ ಆಗಿದ್ದಾನೆಯೇ? ಉದಾರನಾದ ಅವನು ರೂಪವಂತನೂ, ನೋಡಲು ಸುಂದರನೂ ಆಗಿದ್ದಾನೆಯೇ?”

03278017 ನಾರದ ಉವಾಚ|

03278017a ಸಾಂಕೃತೇ ರಂತಿದೇವಸ್ಯ ಸ ಶಕ್ತ್ಯಾ ದಾನತಃ ಸಮಃ|

03278017c ಬ್ರಹ್ಮಣ್ಯಃ ಸತ್ಯವಾದೀ ಚ ಶಿಬಿರೌಶೀನರೋ ಯಥಾ||

ನಾರದನು ಹೇಳಿದನು: “ಸಾಂಕೃತಿ ರಂತಿದೇವನಂತೆ ಅವನು ತನ್ನ ಶಕ್ತಿಗೆ ತಕ್ಕಂತೆ ದಾನಗಳನ್ನು ನೀಡುತ್ತಾನೆ. ಶಿಬಿ ಔಷೀನರನಂತೆ ಬ್ರಾಹ್ಮಣರನ್ನು ಪೂಜಿಸುತ್ತಾನೆ ಮತ್ತು ಸತ್ಯವಾದಿಯಾಗಿದ್ದಾನೆ.

03278018a ಯಯಾತಿರಿವ ಚೋದಾರಃ ಸೋಮವತ್ಪ್ರಿಯದರ್ಶನಃ|

03278018c ರೂಪೇಣಾನ್ಯತಮೋಽಶ್ವಿಭ್ಯಾಂ ದ್ಯುಮತ್ಸೇನಸುತೋ ಬಲೀ||

ಯಯಾತಿಯಂತೆ ಉದಾರನಾಗಿದ್ದಾನೆ ಮತ್ತು ಚಂದ್ರನಂತೆ ನೋಡಲು ಸುಂದರನಾಗಿದ್ದಾನೆ. ದ್ಯುಮತ್ಸೇನನ ಬಲಶಾಲಿ ಮಗನು ರೂಪದಲ್ಲಿ ಇಬ್ಬರು ಅಶ್ವಿನಿಯರಂತಿದ್ದಾನೆ.

03278019a ಸ ದಾಂತಃ ಸ ಮೃದುಃ ಶೂರಃ ಸ ಸತ್ಯಃ ಸ ಜಿತೇಂದ್ರಿಯಃ|

03278019c ಸ ಮೈತ್ರಃ ಸೋಽನಸೂಯಶ್ಚ ಸ ಹ್ರೀಮಾನ್ಧೃತಿಮಾಂಶ್ಚ ಸಃ||

ಅವನು ತನ್ನ ಆಸೆಗಳನ್ನು ಹಿಡಿತದಲಿಟ್ಟುಕೊಂಡವನು, ಮೃದು, ಶೂರ, ಸತ್ಯವಂತ ಮತ್ತು ಜಿತೇಂದ್ರಿಯ. ಅವನು ಸ್ನೇಹಸ್ವಭಾವದವನು, ಅಸೂಯೆಯಿಲ್ಲದವನು, ಸ್ವಲ್ಪ ನಾಚಿಕೆ ಸ್ವಭಾವದವನು ಮತ್ತು ಧೃತಿವಂತನು.

03278020a ನಿತ್ಯಶಶ್ಚಾರ್ಜವಂ ತಸ್ಮಿನ್ಸ್ಥಿತಿಸ್ತಸ್ಯೈವ ಚ ಧ್ರುವಾ|

03278020c ಸಂಕ್ಷೇಪತಸ್ತಪೋವೃದ್ಧೈಃ ಶೀಲವೃದ್ಧೈಶ್ಚ ಕಥ್ಯತೇ||

ಅವನು ನಿತ್ಯವೂ ನೇರವಾಗಿ ನಡೆದುಕೊಳ್ಳುತ್ತಾನೆ ಮತ್ತು ಧೃವನಂತೆ ಸ್ಥಿರನಾಗಿರುತ್ತಾನೆ ಎಂದು ತಪೋವೃದ್ಧರೂ ಶೀಲವೃದ್ಧರೂ ಹೇಳುತ್ತಾರೆ.”

03278021 ಅಶ್ವಪತಿರುವಾಚ|

03278021a ಗುಣೈರುಪೇತಂ ಸರ್ವೈಸ್ತಂ ಭಗವನ್ಪ್ರಬ್ರವೀಷಿ ಮೇ|

03278021c ದೋಷಾನಪ್ಯಸ್ಯ ಮೇ ಬ್ರೂಹಿ ಯದಿ ಸಂತೀಹ ಕೇ ಚನ||

ಅಶ್ವಪತಿಯು ಹೇಳಿದನು: “ಭಗವನ್! ಅವನಲ್ಲಿರುವ ಎಲ್ಲ ಒಳ್ಳೆಯ ಗುಣಗಳ ಕುರಿತೇ ನೀನು ಹೇಳುತ್ತಿರುವೆ. ಅವನಲ್ಲಿ ಏನಾದರೂ ದೋಷವಿದ್ದರೆ ಅದರ ಕುರಿತೂ ಹೇಳು.”

03278022 ನಾರದ ಉವಾಚ|

03278022a ಏಕೋ ದೋಷೋಽಸ್ಯ ನಾನ್ಯೋಽಸ್ತಿ ಸೋಽದ್ಯ ಪ್ರಭೃತಿ ಸತ್ಯವಾನ್|

03278022c ಸಂವತ್ಸರೇಣ ಕ್ಷೀಣಾಯುರ್ದೇಹನ್ಯಾಸಂ ಕರಿಷ್ಯತಿ||

ನಾರದನು ಹೇಳಿದನು: “ಅವನಲ್ಲಿ ಒಂದೇ ಒಂದು ದೋಷವಿದೆ ಬೇರೆ ಏನೂ ಇಲ್ಲ. ಕ್ಷೀಣಾಯು ಸತ್ಯವಾನನು ಇಂದಿನಿಂದ ಒಂದು ವರ್ಷದಲ್ಲಿ ದೇಹತ್ಯಾಗ ಮಾಡುತ್ತಾನೆ.”

03278023 ರಾಜೋವಾಚ|

03278023a ಏಹಿ ಸಾವಿತ್ರಿ ಗಚ್ಚ ತ್ವಮನ್ಯಂ ವರಯ ಶೋಭನೇ|

03278023c ತಸ್ಯ ದೋಷೋ ಮಹಾನೇಕೋ ಗುಣಾನಾಕ್ರಮ್ಯ ತಿಷ್ಠತಿ||

ರಾಜನು ಹೇಳಿದನು: “ಇಲ್ಲಿ ಬಾ ಸಾವಿತ್ರಿ! ಶೋಭನೇ! ಹೋಗು! ಬೇರೆಯವನನ್ನು ವರಿಸು! ಅವನಲ್ಲಿರುವ ಈ ಮಹಾ ದೋಷವೊಂದೇ ಗುಣಗಳೆಲ್ಲವನ್ನೂ ಮೀರಿ ನಿಂತಿದೆ.

03278024a ಯಥಾ ಮೇ ಭಗವಾನಾಹ ನಾರದೋ ದೇವಸತ್ಕೃತಃ|

03278024c ಸಂವತ್ಸರೇಣ ಸೋಽಲ್ಪಾಯುರ್ದೇಹನ್ಯಾಸಂ ಕರಿಷ್ಯತಿ||

ದೇವಸತ್ಕೃತ ಭಗವಾನ್ ನಾರದನು ನನಗೆ ಹೇಳಿದಂತೆ ಒಂದು ವರ್ಷದಲ್ಲಿ ಆ ಅಲ್ಪಾಯುವು ದೇಹತ್ಯಾಗ ಮಾಡುತ್ತಾನೆ.”

03278025 ಸಾವಿತ್ರ್ಯುವಾಚ|

03278025a ಸಕೃದಂಶೋ ನಿಪತತಿ ಸಕೃತ್ಕನ್ಯಾ ಪ್ರದೀಯತೇ|

03278025c ಸಕೃದಾಹ ದದಾನೀತಿ ತ್ರೀಣ್ಯೇತಾನಿ ಸಕೃತ್ಸಕೃತ್||

ಸಾವಿತ್ರಿಯು ಹೇಳಿದಳು: “ಆಸ್ತಿಯನ್ನು ಒಂದೇ ಬಾರಿ ವಿಂಗಡಿಸುತ್ತಾರೆ, ಕನ್ಯೆಯನ್ನು ಒಂದೇ ಬಾರಿ ಕೊಡುತ್ತಾರೆ, ಒಂದೇ ಬಾರಿ ದಾನವನ್ನು ನೀಡಲಾಗುತ್ತದೆ. ಈ ಮೂರನ್ನೂ ಒಂದೊಂದು ಬಾರಿಯೇ ಮಾಡಲಾಗುತ್ತದೆ.

03278026a ದೀರ್ಘಾಯುರಥ ವಾಲ್ಪಾಯುಃ ಸಗುಣೋ ನಿರ್ಗುಣೋಽಪಿ ವಾ|

03278026c ಸಕೃದ್ವೃತೋ ಮಯಾ ಭರ್ತಾ ನ ದ್ವಿತೀಯಂ ವೃಣೋಮ್ಯಹಂ||

ದೀರ್ಘಾಯುವಾಗಿರಲಿ ಅಥವಾ ಅಲ್ಪಾಯುವಾಗಿರಲಿ, ಸುಗುಣನಾಗಿರಲಿ ಅಥವಾ ನಿರ್ಗುಣನಾಗಿರಲಿ, ನಾನು ಅವನನ್ನು ನನ್ನ ಪತಿಯನ್ನಾಗಿ ವರಿಸಿದ್ದೇನೆ. ಎರಡನೇ ಬಾರಿ ನಾನು ವರಿಸುವುದಿಲ್ಲ.

03278027a ಮನಸಾ ನಿಶ್ಚಯಂ ಕೃತ್ವಾ ತತೋ ವಾಚಾಭಿಧೀಯತೇ|

03278027c ಕ್ರಿಯತೇ ಕರ್ಮಣಾ ಪಶ್ಚಾತ್ಪ್ರಮಾಣಂ ಮೇ ಮನಸ್ತತಃ||

ಮನಸ್ಸಿನಲ್ಲಿ ನಿರ್ಧಾರಮಾಡಿ ನಂತರ ಮಾತಿನಲ್ಲಿ ಹೊರಬರುತ್ತದೆ, ಮತ್ತು ನಂತರವೇ ಆ ಕ್ರಿಯೆಯನ್ನು ಮಾಡಲಾಗುತ್ತದೆ. ಆ ಮನಸ್ಸಿಗೆ ನಾನೇ ಪ್ರಮಾಣ.”

03278028 ನಾರದ ಉವಾಚ|

03278028a ಸ್ಥಿರಾ ಬುದ್ಧಿರ್ನರಶ್ರೇಷ್ಠ ಸಾವಿತ್ರ್ಯಾ ದುಹಿತುಸ್ತವ|

03278028c ನೈಷಾ ಚಾಲಯಿತುಂ ಶಕ್ಯಾ ಧರ್ಮಾದಸ್ಮಾತ್ಕಥಂ ಚನ||

ನಾರದನು ಹೇಳಿದನು: “ನರಶ್ರೇಷ್ಠ! ನಿನ್ನ ಮಗಳ ಬುದ್ಧಿಯು ಸ್ಥಿರವಾಗಿದೆ. ಧರ್ಮದಲ್ಲಿ ನೆಲೆಗೊಂಡಿರುವ ಇವಳನ್ನು ಯಾರು ಏನು ಮಾಡಿದರೂ ಬದಲಾಯಿಸಲಿಕ್ಕಾಗುವುದಿಲ್ಲ.

03278029a ನಾನ್ಯಸ್ಮಿನ್ಪುರುಷೇ ಸಂತಿ ಯೇ ಸತ್ಯವತಿ ವೈ ಗುಣಾಃ|

03278029c ಪ್ರದಾನಮೇವ ತಸ್ಮಾನ್ಮೇ ರೋಚತೇ ದುಹಿತುಸ್ತವ||

ಸತ್ಯವಾನನ ಗುಣಗಳನ್ನು ಪಡೆದ ಅನ್ಯ ಪುರುಷರು ಯಾರೂ ಇಲ್ಲ. ಆದುದರಿಂದ ನಿನ್ನ ಮಗಳನ್ನು ಅವನಿಗೇ ಕೊಡುವುದು ಸರಿಯೆಂದು ನನಗನ್ನಿಸುತ್ತದೆ.”

03278030 ರಾಜೋವಾಚ|

03278030a ಅವಿಚಾರ್ಯಮೇತದುಕ್ತಂ ಹಿ ತಥ್ಯಂ ಭಗವತಾ ವಚಃ|

03278030c ಕರಿಷ್ಯಾಮ್ಯೇತದೇವಂ ಚ ಗುರುರ್ಹಿ ಭಗವಾನ್ಮಮ||

ರಾಜನು ಹೇಳಿದನು: “ಭಗವನ್! ನೀನು ಹೇಳುತ್ತಿರುವುದು ಸತ್ಯ ಮತ್ತು ಮಾಡಲೇಬೇಕಾಗಿದ್ದುದು. ಆದುದರಿಂದ ನೀನು ಹೇಳಿದಹಾಗೆಯೇ ಮಾಡುತ್ತೇನೆ. ನೀನು ನನ್ನ ಗುರು.”

03278031 ನಾರದ ಉವಾಚ|

03278031a ಅವಿಘ್ನಮಸ್ತು ಸಾವಿತ್ರ್ಯಾಃ ಪ್ರದಾನೇ ದುಹಿತುಸ್ತವ|

03278031c ಸಾಧಯಿಷ್ಯಾಮಹೇ ತಾವತ್ಸರ್ವೇಷಾಂ ಭದ್ರಮಸ್ತು ವಃ||

ನಾರದನು ಹೇಳಿದನು: “ನಿನ್ನ ಮಗಳು ಸಾವಿತ್ರಿಯ ವಿವಾಹವು ವಿಘ್ನವಿಲ್ಲದೇ ನಡೆಯುತ್ತದೆ. ನಾನು ಈಗ ಹೊರಡುತ್ತಿದ್ದೇನೆ. ಸರ್ವರಿಗೂ ಮಂಗಳವಾಗಲಿ.””

03278032 ಮಾರ್ಕಂಡೇಯ ಉವಾಚ|

03278032a ಏವಮುಕ್ತ್ವಾ ಖಮುತ್ಪತ್ಯ ನಾರದಸ್ತ್ರಿದಿವಂ ಗತಃ|

03278032c ರಾಜಾಪಿ ದುಹಿತುಃ ಸರ್ವಂ ವೈವಾಹಿಕಮಕಾರಯತ್||

ಮಾರ್ಕಂಡೇಯನು ಹೇಳಿದನು: “ಹೀಗೆ ಹೇಳಿ ನಾರದನು ಗಗನವನ್ನೇರಿ ತ್ರಿದಿವಕ್ಕೆ ತೆರಳಿದನು. ರಾಜನಾದರೋ ಮಗಳ ವೈವಾಹಿಕ ಕಾರ್ಯಗಳೆಲ್ಲವನ್ನೂ ನಡೆಸಿದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ಪತಿವ್ರತಾಮಹಾತ್ಮ್ಯೇ ಸಾವಿತ್ರ್ಯುಪಾಖ್ಯಾನೇ ಅಷ್ಟಸಪ್ತತ್ಯಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ಪತಿವ್ರತಾಮಹಾತ್ಮ್ಯೆಯಲ್ಲಿ ಸಾವಿತ್ರ್ಯುಪಾಖ್ಯಾನದಲ್ಲಿ ಇನ್ನೂರಾಎಪ್ಪತ್ತೆಂಟನೆಯ ಅಧ್ಯಾಯವು.

Related image

Kannada translation of Draupadiharana Parva, by Chapter:
  1. ಜಯದ್ರಥಾಗಮನ
  2. ಕೋಟಿಕಾಸ್ಯಪ್ರಶ್ನಃ
  3. ದ್ರೌಪದೀವಾಕ್ಯ
  4. ಜಯದ್ರಥದ್ರೌಪದೀಸಂವಾದ
  5. ದ್ರೌಪದೀಹರಣ
  6. ಪಾರ್ಥಾಗಮನ
  7. ದ್ರೌಪದೀವಾಕ್ಯ
  8. ಜಯದ್ರಥಪಲಾಯನ
  9. ಜಯದ್ರಥವಿಮೋಕ್ಷಣ
  10. ರಾಮೋಪಾಖ್ಯಾನ-ಯುಧಿಷ್ಠಿರಪ್ರಶ್ನಃ
  11. ರಾಮೋಪಾಖ್ಯಾನ-ರಾಮರಾವಣಯೋರ್ಜನ್ಮಕಥನ
  12. ರಾಮೋಪಾಖ್ಯಾನ-ರಾವಣಾದಿವರಪ್ರಾಪ್ತಿಃ
  13. ರಾಮೋಪಾಖ್ಯಾನ-ವಾನರಾದ್ಯುತ್ಪತ್ತಿಃ
  14. ರಾಮೋಪಾಖ್ಯಾನ-ರಾಮವನಾಭಿಗಮನ
  15. ರಾಮೋಪಾಖ್ಯಾನ-ಮಾರೀಚವಧ-ಸೀತಾಪಹರಣ
  16. ರಾಮೋಪಾಖ್ಯಾನ-ಕಬಂಧಹನನ
  17. ರಾಮೋಪಾಖ್ಯಾನ-ತ್ರಿಜಟಾಕೃತಸೀತಾಸಂವಾದಃ
  18. ರಾಮೋಪಾಖ್ಯಾನ-ಸೀತಾರಾವಣಸಂವಾದಃ
  19. ರಾಮೋಪಾಖ್ಯಾನ-ಹನುಮಪ್ರತ್ಯಾಗಮನ
  20. ರಾಮೋಪಾಖ್ಯಾನ-ಸೇತುಬಂಧನ
  21. ರಾಮೋಪಾಖ್ಯಾನ-ಲಂಕಾಪ್ರವೇಶ
  22. ರಾಮೋಪಾಖ್ಯಾನ-ರಾಮರಾವಣದ್ವಂದ್ವಯುದ್ಧಃ
  23. ರಾಮೋಪಾಖ್ಯಾನ-ಕುಂಭಕರ್ಣನಿರ್ಗಮನ
  24. ರಾಮೋಪಾಖ್ಯಾನ-ಕುಂಬಕರ್ಣಾದಿವಧಃ
  25. ರಾಮೋಪಾಖ್ಯಾನ-ಇಂದ್ರಜಿದ್ಯುದ್ಧಃ
  26. ರಾಮೋಪಾಖ್ಯಾನ-ಇಂದ್ರಜಿದ್ವಧಃ
  27. ರಾಮೋಪಾಖ್ಯಾನ-ರಾವಣವಧಃ
  28. ರಾಮೋಪಾಖ್ಯಾನ-ಶ್ರೀರಾಮಾಭಿಷೇಕ
  29. ರಾಮೋಪಾಖ್ಯಾನ-ಯುಧಿಷ್ಠಿರಾಶ್ವಾಸನ
  30. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೧
  31. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೨
  32. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೩
  33. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೪
  34. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೫
  35. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೬
  36. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೭

Comments are closed.