Aranyaka Parva: Chapter 265

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೬೫

ರಾವಣ ಸೀತೆಯರ ಸಂವಾದ

ರಾವಣನು ಅಶೋಕವನಕ್ಕೆ ಬಂದು ಸೀತೆಯ ಮನವೊಲಿಸಲು ಪ್ರಯತ್ನಿಸುವುದು (೧-೧೬). ಆಗ ಸೀತೆಯು ಒಂದು ಹುಲ್ಲುಕಡ್ಡಿಯನ್ನು ಮಧ್ಯಮಾಡಿಕೊಂಡು ಅವನನ್ನು ಹೀಯಾಳಿಸಿ ತಿರಸ್ಕರಿಸಲು (೧೭-೨೫) ರಾವಣನು ಎಚ್ಚರಿಸಿ ಹೊರಟು ಹೋದುದು (೨೬-೩೦).

03265001 ಮಾರ್ಕಂಡೇಯ ಉವಾಚ|

03265001a ತತಸ್ತಾಂ ಭರ್ತೃಶೋಕಾರ್ತಾಂ ದೀನಾಂ ಮಲಿನವಾಸಸಂ|

03265001c ಮಣಿಶೇಷಾಭ್ಯಲಂಕಾರಾಂ ರುದತೀಂ ಚ ಪತಿವ್ರತಾಂ||

03265002a ರಾಕ್ಷಸೀಭಿರುಪಾಸ್ಯಂತೀಂ ಸಮಾಸೀನಾಂ ಶಿಲಾತಲೇ|

03265002c ರಾವಣಃ ಕಾಮಬಾಣಾರ್ತೋ ದದರ್ಶೋಪಸಸರ್ಪ ಚ||

ಮಾರ್ಕಂಡೇಯನು ಹೇಳಿದನು: “ಆಗ ಪತಿಗಾಗಿ ಶೋಕಪರಳಾಗಿದ್ದ ದೀನಳಾಗಿದ್ದ, ಮಲಿನ ವಸ್ತ್ರ, ಮತ್ತು ಉಳಿದ ಮಣಿ ಅಲಂಕಾರಗಳನ್ನು ತೊಟ್ಟಿದ್ದ, ಅಳುತ್ತಿದ್ದ, ರಾಕ್ಷಸಿಯರಿಂದ ಉಪಾಸನೆಗೊಳ್ಳುತ್ತಿದ್ದ, ಕಲ್ಲುಬಂಡೆಯ ಮೇಲೆ ಕುಳಿತುಕೊಂಡಿದ್ದ ಪತಿವ್ರತೆಯನ್ನು ನೋಡಲು ಕಾಮಬಾಣಾರ್ತ ರಾವಣನು ಹೊರಟನು.

03265003a ದೇವದಾನವಗಂಧರ್ವಯಕ್ಷಕಿಂಪುರುಷೈರ್ಯುಧಿ|

03265003c ಅಜಿತೋಽಶೋಕವನಿಕಾಂ ಯಯೌ ಕಂದರ್ಪಮೋಹಿತಃ||

ದೇವ, ದಾನವ, ಗಂಧರ್ವ, ಯಕ್ಷ, ಕಿಂಪುರುಷರಿಂದ ಯುದ್ಧದಲ್ಲಿ ಅಜೇಯನಾಗಿದ್ದ ಆ ಕಂದರ್ಪ ಮೋಹಿತನು ಅಶೋಕವನಕ್ಕೆ ಬಂದನು.

03265004a ದಿವ್ಯಾಂಬರಧರಃ ಶ್ರೀಮಾನ್ಸುಮೃಷ್ಟಮಣಿಕುಂಡಲಃ|

03265004c ವಿಚಿತ್ರಮಾಲ್ಯಮುಕುಟೋ ವಸಂತ ಇವ ಮೂರ್ತಿಮಾನ್||

ದಿವ್ಯಾಂಬರಗಳನ್ನು ಧರಿಸಿ, ಹೊಳೆಯುತ್ತಿರುವ ಮಣಿಕುಂಡಲಗಳನ್ನು ಧರಿಸಿ, ಬಣ್ಣಬಣ್ಣದ ಮಾಲೆ-ಮುಕುಟಗಳನ್ನು ಧರಿಸಿದ್ದ ಆ ಶ್ರೀಮಾನನು ವಸಂತನೇ ಮೂರ್ತಿಮತ್ತಾಗಿ ಬಂದಂತೆ ತೋರುತ್ತಿದ್ದನು.

03265005a ಸ ಕಲ್ಪವೃಕ್ಷಸದೃಶೋ ಯತ್ನಾದಪಿ ವಿಭೂಷಿತಃ|

03265005c ಶ್ಮಶಾನಚೈತ್ಯದ್ರುಮವದ್ಭೂಷಿತೋಽಪಿ ಭಯಂಕರಃ||

ಜಾಗ್ರತೆಯಿಂದ ಅಲಂಕರಿಸಿಕೊಂಡಿದ್ದ ಅವನು ಕಲ್ಪವೃಕ್ಷದಂತೆ ತೋರುತ್ತಿದ್ದನು. ಸುಂದರವಾಗಿ ಅಲಂಕರಿಸಿಕೊಂಡಿದ್ದರೂ ಅವನು ಶ್ಮಶಾನದಲ್ಲಿರುವ ಅಶ್ವತ್ಥವೃಕ್ಷದಂತೆ ಭಯಂಕರನಾಗಿ ತೋರುತ್ತಿದ್ದನು.

03265006a ಸ ತಸ್ಯಾಸ್ತನುಮಧ್ಯಾಯಾಃ ಸಮೀಪೇ ರಜನೀಚರಃ|

03265006c ದದೃಶೇ ರೋಹಿಣೀಮೇತ್ಯ ಶನೈಶ್ಚರ ಇವ ಗ್ರಹಃ||

ಆ ತನುಮಧ್ಯಮೆಯ ಸಮೀಪದಲ್ಲಿ ಆ ರಜನೀಚರನು ರೋಹಿಣಿಯ ಸಮೇತನಾದ ಶನೈಶ್ಚರ ಗ್ರಹದಂತೆ ಕಂಡುಬಂದನು.

03265007a ಸ ತಾಮಾಮಂತ್ರ್ಯ ಸುಶ್ರೋಣೀಂ ಪುಷ್ಪಕೇತುಶರಾಹತಃ|

03265007c ಇದಮಿತ್ಯಬ್ರವೀದ್ಬಾಲಾಂ ತ್ರಸ್ತಾಂ ರೌಹೀಮಿವಾಬಲಾಂ||

ಪುಷ್ಪಕೇತುವಿನ ಶರದಿಂದ ಹೊಡೆಯಲ್ಪಟ್ಟ ಅವನು ಆ ಹೆದರಿದ ಪಾರಿವಾಳದಂತೆ ನಡುಗುತ್ತಿರುವ ಬಾಲೆ ಸುಶ್ರೋಣಿಯನ್ನು ಕರೆದು ಹೀಗೆ ಹೇಳಿದನು:

03265008a ಸೀತೇ ಪರ್ಯಾಪ್ತಮೇತಾವತ್ಕೃತೋ ಭರ್ತುರನುಗ್ರಹಃ|

03265008c ಪ್ರಸಾದಂ ಕುರು ತನ್ವಂಗಿ ಕ್ರಿಯತಾಂ ಪರಿಕರ್ಮ ತೇ||

“ಸೀತೇ! ನೀನು ನಿನ್ನ ಪತಿಯಮೇಲೆ ಸಾಕಷ್ಟು ಅನುಗ್ರಹವನ್ನು ಈಗಾಗಲೇ ಮಾಡಿದ್ದೀಯೆ. ಈಗ ನನ್ನ ಮೇಲೆ ಕರುಣೆತೋರು. ತನ್ವಂಗೀ! ನಿನ್ನನ್ನು ಸಿಂಗರಿಸಲಾಗುತ್ತದೆ.

03265009a ಭಜಸ್ವ ಮಾಂ ವರಾರೋಹೇ ಮಹಾರ್ಹಾಭರಣಾಂಬರಾ|

03265009c ಭವ ಮೇ ಸರ್ವನಾರೀಣಾಮುತ್ತಮಾ ವರವರ್ಣಿನಿ||

ವರಾರೋಹೇ! ಮಹಾಬೆಲೆಯ ಆಭರಣ ವಸ್ತ್ರಗಳನ್ನು ಧರಿಸಿ ನನ್ನನ್ನು ಪ್ರೀತಿಸು. ವರವರ್ಣಿನೀ! ನನ್ನ ಎಲ್ಲ ನಾರಿಯರಲ್ಲಿ ಉತ್ತಮಳಾಗು.

03265010a ಸಂತಿ ಮೇ ದೇವಕನ್ಯಾಶ್ಚ ರಾಜರ್ಷೀಣಾಂ ತಥಾಂಗನಾಃ|

03265010c ಸಂತಿ ದಾನವಕನ್ಯಾಶ್ಚ ದೈತ್ಯಾನಾಂ ಚಾಪಿ ಯೋಷಿತಃ||

ನನ್ನಲ್ಲಿ ದೇವಕನ್ಯೆಯರಿದ್ದಾರೆ ಮತ್ತು ರಾಜರ್ಷಿಗಳ ಅಂಗನೆಯರೂ ಇದ್ದಾರೆ. ದಾನವಕನ್ಯೆಯರೂ, ದೈತ್ಯರ ಮಕ್ಕಳೂ ಇದ್ದಾರೆ.

03265011a ಚತುರ್ದಶ ಪಿಶಾಚಾನಾಂ ಕೋಟ್ಯೋ ಮೇ ವಚನೇ ಸ್ಥಿತಾಃ|

03265011c ದ್ವಿಸ್ತಾವತ್ಪುರುಷಾದಾನಾಂ ರಕ್ಷಸಾಂ ಭೀಮಕರ್ಮಣಾಂ||

ಹದಿನಾಲ್ಕು ಕೋಟಿ ಪಿಶಾಚಿಗಳು, ಮತ್ತು ಅದಕ್ಕೂ ಎರಡು ಪಟ್ಟು ಭೀಮಕರ್ಮಿ, ಮನುಷ್ಯರನ್ನು ತಿನ್ನುವ ರಾಕ್ಷಸರು ನನ್ನ ಮಾತಿಗೆ ನಿಂತಿದ್ದಾರೆ.

03265012a ತತೋ ಮೇ ತ್ರಿಗುಣಾ ಯಕ್ಷಾ ಯೇ ಮದ್ವಚನಕಾರಿಣಃ|

03265012c ಕೇ ಚಿದೇವ ಧನಾಧ್ಯಕ್ಷಂ ಭ್ರಾತರಂ ಮೇ ಸಮಾಶ್ರಿತಾಃ||

ಅದಕ್ಕೂ ಮೂರುಪಟ್ಟು ಯಕ್ಷರು ನನ್ನ ಮಾತಿನಂತೆ ಮಾಡುವವರಿದ್ದಾರೆ. ಅವರಲ್ಲಿ ಕೆಲವರು ನನ್ನ ಅಣ್ಣ ಧನಾಧ್ಯಕ್ಷನ ಆಶ್ರಯದಲ್ಲಿದ್ದಾರೆ.

03265013a ಗಂಧರ್ವಾಪ್ಸರಸೋ ಭದ್ರೇ ಮಾಮಾಪಾನಗತಂ ಸದಾ|

03265013c ಉಪತಿಷ್ಠಂತಿ ವಾಮೋರು ಯಥೈವ ಭ್ರಾತರಂ ಮಮ||

ಭದ್ರೇ! ವಾಮೋರು! ನಾನು ಪಾನೀಯಕ್ಕೆಂದು ಹೋದಾಗ ಗಂಧರ್ವರೂ ಅಪ್ಸರೆಯರೂ ಸದಾ ಅಣ್ಣನನ್ನು ಹೇಗೋ ಹಾಗೆ ನನ್ನನ್ನೂ ಕಾಯುತ್ತಿರುತ್ತಾರೆ.

03265014a ಪುತ್ರೋಽಹಮಪಿ ವಿಪ್ರರ್ಷೇಃ ಸಾಕ್ಷಾದ್ವಿಶ್ರವಸೋ ಮುನೇಃ|

03265014c ಪಂಚಮೋ ಲೋಕಪಾಲಾನಾಮಿತಿ ಮೇ ಪ್ರಥಿತಂ ಯಶಃ||

ನಾನು ಮುನಿ ವಿಪ್ರರ್ಷಿ ಸಾಕ್ಷಾದ್ ವಿಶ್ರವಸುವಿನ ಮಗನೂ ಕೂಡ ಹೌದು. ನಾನು ಐದನೆಯ ಲೋಕಪಾಲನೆಂದೂ ಪ್ರತಿಥನಾಗಿ ಯಶಸ್ವಿಯಾಗಿದ್ದೇನೆ.

03265015a ದಿವ್ಯಾನಿ ಭಕ್ಷ್ಯಭೋಜ್ಯಾನಿ ಪಾನಾನಿ ವಿವಿಧಾನಿ ಚ|

03265015c ಯಥೈವ ತ್ರಿದಶೇಶಸ್ಯ ತಥೈವ ಮಮ ಭಾಮಿನಿ||

ಭಾಮಿನಿ! ತ್ರಿದಶೇಶನ ಕಡೆ ಇದ್ದಂತೆ ನನ್ನಲ್ಲಿಯೂ ದಿವ್ಯ ಭಕ್ಷ-ಭೋಜ್ಯಗಳು ಮತ್ತು ವಿವಿಧ ಪಾನೀಯಗಳಿವೆ.

03265016a ಕ್ಷೀಯತಾಂ ದುಷ್ಕೃತಂ ಕರ್ಮ ವನವಾಸಕೃತಂ ತವ|

03265016c ಭಾರ್ಯಾ ಮೇ ಭವ ಸುಶ್ರೋಣಿ ಯಥಾ ಮಂಡೋದರೀ ತಥಾ||

ವನವಾಸದಲ್ಲಿನ ನಿನ್ನ ದುಷ್ಕೃತ ಕರ್ಮಗಳು ಕ್ಷೀಣಿಸಲಿ. ಸುಶ್ರೋಣಿ! ಮಂಡೋದರಿಯಂತೆ ನನ್ನ ಭಾರ್ಯೆಯಾಗು.”

03265017a ಇತ್ಯುಕ್ತಾ ತೇನ ವೈದೇಹೀ ಪರಿವೃತ್ಯ ಶುಭಾನನಾ|

03265017c ತೃಣಮಂತರತಃ ಕೃತ್ವಾ ತಮುವಾಚ ನಿಶಾಚರಂ||

03265018a ಅಶಿವೇನಾತಿವಾಮೋರೂರಜಸ್ರಂ ನೇತ್ರವಾರಿಣಾ|

03265018c ಸ್ತನಾವಪತಿತೌ ಬಾಲಾ ಸಹಿತಾವಭಿವರ್ಷತೀ|

03265018e ಉವಾಚ ವಾಕ್ಯಂ ತಂ ಕ್ಷುದ್ರಂ ವೈದೇಹೀ ಪತಿದೇವತಾ||

ಅವನು ಈ ಮಾತುಗಳನ್ನಾಡಲು ಆ ಶುಭಾನನೆಯು ಒಂದು ಹುಲ್ಲುಕಡ್ಡಿಯನ್ನು ಮಧ್ಯಮಾಡಿಕೊಂಡು ಆ ನಿಶಾಚರನಿಗೆ ಹೇಳಿದಳು. ಪತಿಯನ್ನೇ ದೇವತೆಯೆಂದು ತಿಳಿದಿದ್ದ ವೈದೇಹಿಯು ತನ್ನ ಸುಂದರ ತೊಡೆಗಳನ್ನು ಸ್ತನಗಳ ಮೇಲಿಂದ ಬೀಳುತ್ತಿರುವ ಕಣ್ಣೀರಿನಿಂದ ತೋಯಿಸುತ್ತಾ ಆ ಕ್ಷುದ್ರನಿಗೆ ಈ ಮಾತುಗಳನ್ನಾಡಿದಳು. 

03265019a ಅಸಕೃದ್ವದತೋ ವಾಕ್ಯಂ ಈದೃಶಂ ರಾಕ್ಷಸೇಶ್ವರ|

03265019c ವಿಷಾದಯುಕ್ತಮೇತತ್ತೇ ಮಯಾ ಶ್ರುತಮಭಾಗ್ಯಯಾ||

“ರಾಕ್ಷಸೇಶ್ವರ! ಅಭಾಗ್ಯೆಯಾದ ನಾನು ಈ ತರಹದ ವಿಶಾದಯುಕ್ತ ನಿರಾಶೆಯ ಮಾತುಗಳನ್ನು ಕೇಳಿದ್ದೇನೆ.

03265020a ತದ್ಭದ್ರಸುಖ ಭದ್ರಂ ತೇ ಮಾನಸಂ ವಿನಿವರ್ತ್ಯತಾಂ|

03265020c ಪರದಾರಾಸ್ಮ್ಯಲಭ್ಯಾ ಚ ಸತತಂ ಚ ಪತಿವ್ರತಾ||

ಇಷ್ಟೊಂದು ಸುಖಪಡುತ್ತಿರುವ ನಿನಗೆ ಮಂಗಳವಾಗಲಿ. ಈ ಆಸೆಯನ್ನು ನಿನ್ನ ಮನಸ್ಸಿನಿಂದ ತೆಗೆದುಹಾಕು. ಪತಿವ್ರತೆಯಾದ ನಾನು ಇನ್ನೊಬ್ಬನ ಪತ್ನಿ. ನಿನಗೆ ದೊರೆಯದವಳು.

03265021a ನ ಚೈವೋಪಯಿಕೀ ಭಾರ್ಯಾ ಮಾನುಷೀ ಕೃಪಣಾ ತವ|

03265021c ವಿವಶಾಂ ಧರ್ಷಯಿತ್ವಾ ಚ ಕಾಂ ತ್ವಂ ಪ್ರೀತಿಮವಾಪ್ಸ್ಯಸಿ||

ಕೃಪಣ ಮಾನುಷಿಯಾದ ನಾನು ನಿನ್ನ ಪತ್ನಿಯಾಗಲು ತಕ್ಕವಳಲ್ಲ. ವಿವಶಳಾಗಿರುವವಳನ್ನು ಬಲಾತ್ಕರಿಸಿ ನೀನು ಯಾವ ಪ್ರೀತಿಯನ್ನು ಪಡೆಯುತ್ತೀಯೇ?

03265022a ಪ್ರಜಾಪತಿಸಮೋ ವಿಪ್ರೋ ಬ್ರಹ್ಮಯೋನಿಃ ಪಿತಾ ತವ|

03265022c ನ ಚ ಪಾಲಯಸೇ ಧರ್ಮಂ ಲೋಕಪಾಲಸಮಃ ಕಥಂ||

ನಿನ್ನ ತಂದೆಯು ಬ್ರಹ್ಮಯೋನಿಯಲ್ಲಿ ಜನಿಸಿ ಪ್ರಜಾಪತಿಯ ಸಮನಾದ ವಿಪ್ರನು. ಲೋಕಪಾಲಕನ ಸಮನಾದ ನೀನೇ ಹೇಗೆ ಧರ್ಮವನ್ನು ಪಾಲಿಸುವುದಿಲ್ಲ?

03265023a ಭ್ರಾತರಂ ರಾಜರಾಜಾನಂ ಮಹೇಶ್ವರಸಖಂ ಪ್ರಭುಂ|

03265023c ಧನೇಶ್ವರಂ ವ್ಯಪದಿಶನ್ಕಥಂ ತ್ವಿಹ ನ ಲಜ್ಜಸೇ||

ನಿನ್ನ ಅಣ್ಣ ರಾಜರಾಜ ಮಹೇಶ್ವರ ಸಖ ಪ್ರಭೂ ಧನೇಶ್ವರನ ಹೆಸರನ್ನು ತೆಗೆದುಕೊಳ್ಳಲು ನಿನಗೆ ನಾಚಿಕೆಯಾಗುವುದಿಲ್ಲವೇ?”

03265024a ಇತ್ಯುಕ್ತ್ವಾ ಪ್ರಾರುದತ್ಸೀತಾ ಕಂಪಯಂತೀ ಪಯೋಧರೌ|

03265024c ಶಿರೋಧರಾಂ ಚ ತನ್ವಂಗೀ ಮುಖಂ ಪ್ರಚ್ಚಾದ್ಯ ವಾಸಸಾ||

ಹೀಗೆ ಹೇಳಿ ಮೊಲೆಗಳು ಕಂಪಿಸುತ್ತಿರಲು ಅವಳು ಅಳತೊಡಗಿದಳು ಮತ್ತು ಆ ತನ್ವಂಗಿಯು ತನ್ನ ತಲೆಯನ್ನು ತಗ್ಗಿಸಿ ಮುಖವನ್ನು ಸೆರಗಿನಿಂದ ಮುಚ್ಚಿಕೊಂಡಳು.

03265025a ತಸ್ಯಾ ರುದತ್ಯಾ ಭಾಮಿನ್ಯಾ ದೀರ್ಘಾ ವೇಣೀ ಸುಸಮ್ಯತಾ|

03265025c ದದೃಶೇ ಸ್ವಸಿತಾ ಸ್ನಿಗ್ಧಾ ಕಾಲೀ ವ್ಯಾಲೀವ ಮೂರ್ಧನಿ||

ಅಳುತ್ತಿರುವ ಆ ಭಾಮಿನಿಯ ತಲೆಯ ದೀರ್ಘವಾದ ಚೆನ್ನಾಗಿ ಹೆಣೆದ, ಉದ್ದವಾದ ಕಪ್ಪು ಜಡೆಯು ಹಾವಿನಂತೆ ತೋರಿತು.

03265026a ತಚ್ಚ್ರುತ್ವಾ ರಾವಣೋ ವಾಕ್ಯಂ ಸೀತಯೋಕ್ತಂ ಸುನಿಷ್ಠುರಂ|

03265026c ಪ್ರತ್ಯಾಖ್ಯಾತೋಽಪಿ ದುರ್ಮೇಧಾಃ ಪುನರೇವಾಬ್ರವೀದ್ವಚಃ||

ಸೀತೆಯು ಹೇಳಿದ ತುಂಬಾ ನಿಷ್ಟುರವಾದ ಆ ಮಾತುಗಳನ್ನು ಕೇಳಿ ರಾವಣನು ತಿರಸ್ಕರಿಸಲ್ಪಟ್ಟರೂ ದುರ್ಬುದ್ಧಿಯಿಂದ ಪುನಃ ಹೀಗೆ ಹೇಳಿದನು:

03265027a ಕಾಮಮಂಗಾನಿ ಮೇ ಸೀತೇ ದುನೋತು ಮಕರಧ್ವಜಃ|

03265027c ನ ತ್ವಾಮಕಾಮಾಂ ಸುಶ್ರೋಣೀಂ ಸಮೇಷ್ಯೇ ಚಾರುಹಾಸಿನೀಂ||

“ಸೀತೆ! ಸುಶ್ರೋಣೀ! ಚಾರುಹಾಸಿನೀ! ಮಕರಧ್ವಜನು ನನ್ನ ಕಾಮವನ್ನು ಅಂಗಗಳನ್ನು ಸುಟ್ಟರೂ ಬಯಸದಿರುವ ನಿನ್ನನ್ನು ಕೂಡುವುದಿಲ್ಲ.

03265028a ಕಿಂ ನು ಶಕ್ಯಂ ಮಯಾ ಕರ್ತುಂ ಯತ್ತ್ವಮದ್ಯಾಪಿ ಮಾನುಷಂ|

03265028c ಆಹಾರಭೂತಮಸ್ಮಾಕಂ ರಾಮಮೇವಾನುರುಧ್ಯಸೇ||

ಇನ್ನೂ ನೀನು ನಮ್ಮ ಆಹಾರಭೂತನಾದ ಮಾನುಷ ರಾಮನನ್ನೇ ಬಯಸುತ್ತೀಯೆ ಎಂದರೆ ನಾನು ಏನು ಮಾಡಬಲ್ಲೆ?”

03265029a ಇತ್ಯುಕ್ತ್ವಾ ತಾಮನಿಂದ್ಯಾಂಗೀಂ ಸ ರಾಕ್ಷಸಗಣೇಶ್ವರಃ|

03265029c ತತ್ರೈವಾಂತರ್ಹಿತೋ ಭೂತ್ವಾ ಜಗಾಮಾಭಿಮತಾಂ ದಿಶಂ||

ಅನವದ್ಯಾಂಗಿಗೆ ಹೀಗೆ ಹೇಳಿ ಆ ರಾಕ್ಷಸಗಣೇಶ್ವರನು ಅಲ್ಲಿಯೇ ಅಂತರ್ಧಾನನಾಗಿ ತನಗಿಷ್ಟವಾದ ದಿಕ್ಕಿನಲ್ಲಿ ಹೊರಟು ಹೋದನು.

03265030a ರಾಕ್ಷಸೀಭಿಃ ಪರಿವೃತಾ ವೈದೇಹೀ ಶೋಕಕರ್ಶಿತಾ|

03265030c ಸೇವ್ಯಮಾನಾ ತ್ರಿಜಟಯಾ ತತ್ರೈವ ನ್ಯವಸತ್ತದಾ||

ಶೋಕಕರ್ಶಿತಳಾದ ರಾಕ್ಷಸಿಯರಿಂದ ಪರಿವೃತಳಾದ ವೈದೇಹಿಯು ತ್ರಿಜಟೆಯಿಂದ ಸೇವಿಸಲ್ಪಟ್ಟು ಅಲ್ಲಿಯೇ ಇದ್ದಳು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ಸೀತಾರಾವಣಸಂವಾದೇ ಪಂಚಷಷ್ಟ್ಯಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ಸೀತಾರಾವಣಸಂವಾದದಲ್ಲಿ ಇನ್ನೂರಾಅರವತ್ತೈದನೆಯ ಅಧ್ಯಾಯವು.

Related image

Kannada translation of Draupadiharana Parva, by Chapter:
  1. ಜಯದ್ರಥಾಗಮನ
  2. ಕೋಟಿಕಾಸ್ಯಪ್ರಶ್ನಃ
  3. ದ್ರೌಪದೀವಾಕ್ಯ
  4. ಜಯದ್ರಥದ್ರೌಪದೀಸಂವಾದ
  5. ದ್ರೌಪದೀಹರಣ
  6. ಪಾರ್ಥಾಗಮನ
  7. ದ್ರೌಪದೀವಾಕ್ಯ
  8. ಜಯದ್ರಥಪಲಾಯನ
  9. ಜಯದ್ರಥವಿಮೋಕ್ಷಣ
  10. ರಾಮೋಪಾಖ್ಯಾನ-ಯುಧಿಷ್ಠಿರಪ್ರಶ್ನಃ
  11. ರಾಮೋಪಾಖ್ಯಾನ-ರಾಮರಾವಣಯೋರ್ಜನ್ಮಕಥನ
  12. ರಾಮೋಪಾಖ್ಯಾನ-ರಾವಣಾದಿವರಪ್ರಾಪ್ತಿಃ
  13. ರಾಮೋಪಾಖ್ಯಾನ-ವಾನರಾದ್ಯುತ್ಪತ್ತಿಃ
  14. ರಾಮೋಪಾಖ್ಯಾನ-ರಾಮವನಾಭಿಗಮನ
  15. ರಾಮೋಪಾಖ್ಯಾನ-ಮಾರೀಚವಧ-ಸೀತಾಪಹರಣ
  16. ರಾಮೋಪಾಖ್ಯಾನ-ಕಬಂಧಹನನ
  17. ರಾಮೋಪಾಖ್ಯಾನ-ತ್ರಿಜಟಾಕೃತಸೀತಾಸಂವಾದಃ
  18. ರಾಮೋಪಾಖ್ಯಾನ-ಸೀತಾರಾವಣಸಂವಾದಃ
  19. ರಾಮೋಪಾಖ್ಯಾನ-ಹನುಮಪ್ರತ್ಯಾಗಮನ
  20. ರಾಮೋಪಾಖ್ಯಾನ-ಸೇತುಬಂಧನ
  21. ರಾಮೋಪಾಖ್ಯಾನ-ಲಂಕಾಪ್ರವೇಶ
  22. ರಾಮೋಪಾಖ್ಯಾನ-ರಾಮರಾವಣದ್ವಂದ್ವಯುದ್ಧಃ
  23. ರಾಮೋಪಾಖ್ಯಾನ-ಕುಂಭಕರ್ಣನಿರ್ಗಮನ
  24. ರಾಮೋಪಾಖ್ಯಾನ-ಕುಂಬಕರ್ಣಾದಿವಧಃ
  25. ರಾಮೋಪಾಖ್ಯಾನ-ಇಂದ್ರಜಿದ್ಯುದ್ಧಃ
  26. ರಾಮೋಪಾಖ್ಯಾನ-ಇಂದ್ರಜಿದ್ವಧಃ
  27. ರಾಮೋಪಾಖ್ಯಾನ-ರಾವಣವಧಃ
  28. ರಾಮೋಪಾಖ್ಯಾನ-ಶ್ರೀರಾಮಾಭಿಷೇಕ
  29. ರಾಮೋಪಾಖ್ಯಾನ-ಯುಧಿಷ್ಠಿರಾಶ್ವಾಸನ
  30. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೧
  31. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೨
  32. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೩
  33. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೪
  34. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೫
  35. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೬
  36. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೭

Comments are closed.