Aranyaka Parva: Chapter 268

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೬೮

ಅಂಗದ ರಾಯಭಾರ, ಯುದ್ಧಾರಂಭ

ರಾಮನ ರಾಯಭಾರಿಯಾಗಿ ವಾಲಿಯ ಮಗ ಅಂಗದನು ರಾವಣನ ಆಸ್ಥಾನಕ್ಕೆ ಹೋಗಿ ರಾಮನ ಸಂದೇಶವನ್ನು ನೀಡಿ, ಅವನಿಂದ ತಪ್ಪಿಸಿಕೊಂಡು ಹಿಂದಿರುಗಿದುದು (೧-೨೨). ವಾನರ ಸೇನೆಯು ಲಂಕೆಯ ಪ್ರಾಕಾರಗಳನ್ನು ಒಡೆಯಲು, ರಾಕ್ಷಸರೊಡನೆ ಅವರ ಯುದ್ಧ (೨೩-೪೦).

03268001 ಮಾರ್ಕಂಡೇಯ ಉವಾಚ|

03268001a ಪ್ರಭೂತಾನ್ನೋದಕೇ ತಸ್ಮಿನ್ಬಹುಮೂಲಫಲೇ ವನೇ|

03268001c ಸೇನಾಂ ನಿವೇಶ್ಯ ಕಾಕುತ್ಸ್ಥೋ ವಿಧಿವತ್ಪರ್ಯರಕ್ಷತ||

ಮಾರ್ಕಂಡೇಯನು ಹೇಳಿದನು: “ಸಾಕಷ್ಟು ಆಹಾರ, ನೀರು, ಮತ್ತು ಬಹಳಷ್ಟು ಫಲಮೂಲಗಳಿರುವ ಆ ವನದಲ್ಲಿ ಸೇನೆಯನ್ನಿರಿಸಿ ಕಾಕುತ್ಸ್ಥನು ಅದನ್ನು ವಿಧಿವತ್ತಾಗಿ ಪರಿರಕ್ಷಿಸಿದನು.

03268002a ರಾವಣಶ್ಚ ವಿಧಿಂ ಚಕ್ರೇ ಲಂಕಾಯಾಂ ಶಾಸ್ತ್ರನಿರ್ಮಿತಂ|

03268002c ಪ್ರಕೃತ್ಯೈವ ದುರಾಧರ್ಷಾ ದೃಢಪ್ರಾಕಾರತೋರಣಾ||

03268003a ಅಗಾಧತೋಯಾಃ ಪರಿಖಾ ಮೀನನಕ್ರಸಮಾಕುಲಾಃ|

03268003c ಬಭೂವುಃ ಸಪ್ತ ದುರ್ಧರ್ಷಾಃ ಖಾದಿರೈಃ ಶಂಕುಭಿಶ್ಚಿತಾಃ||

ರಾವಣನೂ ಕೂಡ ಶಾಸ್ತ್ರನಿರ್ಮಿತವಾದ ಲಂಕೆಯನ್ನು ವಿಧಿವತ್ತಾಗಿ ಸುರಕ್ಷಿತವಾಗಿಸಿದನು. ಸ್ವಾಭಾವಿಕವಾಗಿಯೇ ಅದು ದೃಢ ಕೋಟೆ ಕೊತ್ತಳಗಳಿಂದ ದುರಾಧರ್ಷವಾಗಿತ್ತು. ಮೀನು ಮೊಸಳೆಗಳಿಂದ ಕೂಡಿದ್ದ ತುಂಬಾ ಆಳವಾಗಿರುವ ನೀರಿನಿಂದ ತುಂಬಿದ್ದ ಕಾಲುವೆಗಳಿದ್ದವು. ಹಾಗೆ ಏಳು ದುರ್ಧರ್ಷ ಕಾಲುವೆಗಳು ಖದಿರಗಳಿಂದ ಮಾಡಿದ ಶೂಲಗಳಿಂದ ರಕ್ಷಿಸಲ್ಪಟ್ಟಿದ್ದವು.

03268004a ಕರ್ಣಾಟ್ಟಯಂತ್ರದುರ್ಧರ್ಷಾ ಬಭೂವುಃ ಸಹುಡೋಪಲಾಃ|

03268004c ಸಾಶೀವಿಷಘಟಾಯೋಧಾಃ ಸಸರ್ಜರಸಪಾಂಸವಃ||

03268005a ಮುಸಲಾಲಾತನಾರಾಚತೋಮರಾಸಿಪರಶ್ವಧೈಃ|

03268005c ಅನ್ವಿತಾಶ್ಚ ಶತಘ್ನೀಭಿಃ ಸಮಧೂಚ್ಚಿಷ್ಟಮುದ್ಗರಾಃ||

ಎಸೆಯುವ ಯಂತ್ರಗಳಿಂದ, ಯೋಧರ ಮೇಲ್ಗಚ್ಚುಗಳಿಂದ, ಕಲ್ಲುಬಂಡೆಗಳಿಂದ, ಮತ್ತು ವಿಷಭರಿತ ಸರ್ಪಗಳು ತುಂಬಿದ ಕೊಡಗಳನ್ನು ಹೊತ್ತು ನಿಂತಿದ್ದ ಸೈನಿಕರಿಂದ, ಮುಸಲ, ಪಂಜು, ಉಕ್ಕಿನ ಈಟಿಗಳು, ತೋಮರಗಳು, ಖಡ್ಗಗಳು, ಕೊಡಲಿಗಳನ್ನು ಹಿಡಿದ ನೂರಾರು ಯೋಧರಿಂದ, ಮತ್ತು ಜೇನಿನ ಅಂಟಿನಲ್ಲಿ ಅದ್ದಿದ್ದ ಮುದ್ಗರಗಳಿಂದ ರಕ್ಷಿಸಲ್ಪಟ್ಟ ಆ ಕಾಲುವೆಗಳನ್ನು ದಾಟಲು ಅಸಾಧ್ಯವಾಗಿತ್ತು.

03268006a ಪುರದ್ವಾರೇಷು ಸರ್ವೇಷು ಗುಲ್ಮಾಃ ಸ್ಥಾವರಜಂಗಮಾಃ|

03268006c ಬಭೂವುಃ ಪತ್ತಿಬಹುಲಾಃ ಪ್ರಭೂತಗಜವಾಜಿನಃ||

ಪುರದ್ವಾರದಲ್ಲಿ ಎಲ್ಲೆಡೆಯಲ್ಲಿ ನಿಂತಿರುವ ಮತ್ತು ಚಲಿಸುತ್ತಿರುವ ಸೇನೆಗಳು, ಮತ್ತು ಹಲವಾರು ಪದಾತಿಗಳು, ಹೇರಳ ಗಜ ತುರಗಗಳಿದ್ದವು.

03268007a ಅಂಗದಸ್ತ್ವಥ ಲಂಕಾಯಾ ದ್ವಾರದೇಶಮುಪಾಗತಃ|

03268007c ವಿದಿತೋ ರಾಕ್ಷಸೇಂದ್ರಸ್ಯ ಪ್ರವಿವೇಶ ಗತವ್ಯಥಃ||

ಆಗ ಅಂಗದನು ಲಂಕೆಯ ದ್ವಾರ ಪ್ರದೇಶಕ್ಕೆ ಬರಲು ರಾಕ್ಷಸೇಂದ್ರನಿಗೆ ತಿಳಿಸಿ ಏನೂ ಚಿಂತೆಯಿಲ್ಲದೇ ಪ್ರವೇಶಿಸಿದನು.

03268008a ಮಧ್ಯೇ ರಾಕ್ಷಸಕೋಟೀನಾಂ ಬಹ್ವೀನಾಂ ಸುಮಹಾಬಲಃ|

03268008c ಶುಶುಭೇ ಮೇಘಮಾಲಾಭಿರಾದಿತ್ಯ ಇವ ಸಂವೃತಃ||

ಆ ರಾಕ್ಷಸ ಕೋಟಿಯ ಮಧ್ಯೆ ಆ ಸುಮಹಾಬಲನು ಮೇಘಮಾಲೆಗಳಿಂದ ಸುತ್ತುವರೆದ ಆದಿತ್ಯನಂತೆ ಶೋಭಿಸಿದನು.

03268009a ಸ ಸಮಾಸಾದ್ಯ ಪೌಲಸ್ತ್ಯಮಮಾತ್ಯೈರಭಿಸಂವೃತಂ|

03268009c ರಾಮಸಂದೇಶಮಾಮಂತ್ರ್ಯ ವಾಗ್ಮೀ ವಕ್ತುಂ ಪ್ರಚಕ್ರಮೇ||

ಅಮಾತ್ಯರಿಂದ ಸುತ್ತುವರೆಯಲ್ಪಟ್ಟಿದ್ದ ಪೌಲಸ್ತ್ಯನ ಬಳಿಹೋಗಿ ಆ ವಾಗ್ಮಿಯು ರಾಮನ ಸಂದೇಶವನ್ನು ಹೇಳಲು ಪ್ರಾರಂಭಿಸಿದನು.

03268010a ಆಹ ತ್ವಾಂ ರಾಘವೋ ರಾಜನ್ಕೋಸಲೇಂದ್ರೋ ಮಹಾಯಶಾಃ|

03268010c ಪ್ರಾಪ್ತಕಾಲಮಿದಂ ವಾಕ್ಯಂ ತದಾದತ್ಸ್ವ ಕುರುಷ್ವ ಚ||

“ರಾಜನ್! ಕೋಸಲೇಂದ್ರ ಮಹಾಯಶ ರಾಘವನು ಕಾಲಕ್ಕೆ ತಕ್ಕುದ್ದಾದ ಈ ಮಾತುಗಳನ್ನು ನಿನಗೆ ಕಳುಹಿಸಿದ್ದಾನೆ. ಅದನ್ನು ಆದರಿಸಿ ಅದರಂತೆ ಮಾಡು!

03268011a ಅಕೃತಾತ್ಮಾನಮಾಸಾದ್ಯ ರಾಜಾನಮನಯೇ ರತಂ|

03268011c ವಿನಶ್ಯಂತ್ಯನಯಾವಿಷ್ಟಾ ದೇಶಾಶ್ಚ ನಗರಾಣಿ ಚ||

ಅಕೃತಾತ್ಮನಾದ, ಅನ್ಯಾಯದಲ್ಲಿ ನಿರತನಾದ ರಾಜನನ್ನು ಪಡೆದು ದೇಶಗಳು ಮತ್ತು ನಗರಗಳು ಅವುಗಳಿಗೆ ಬಲಿಯಾಗಿ ನಾಶಹೊಂದುತ್ತವೆ.

03268012a ತ್ವಯೈಕೇನಾಪರಾದ್ಧಂ ಮೇ ಸೀತಾಮಾಹರತಾ ಬಲಾತ್|

03268012c ವಧಾಯಾನಪರಾದ್ಧಾನಾಮನ್ಯೇಷಾಂ ತದ್ಭವಿಷ್ಯತಿ||

ಸೀತೆಯನ್ನು ಬಲಾತ್ಕಾರವಾಗಿ ಅಪಹರಿಸಿದ ಅಪರಾಧವನ್ನು ನೀನೊಬ್ಬನೇ ಮಾಡಿದ್ದೀಯೆ. ಆದರೆ ಇದು ಅನಾಪರಾಧಿಗಳಾಗಿರುವ ಇತರರ ವಧೆಯಲ್ಲಿ ಕೊನೆಗೊಳ್ಳುತ್ತದೆ.

03268013a ಯೇ ತ್ವಯಾ ಬಲದರ್ಪಾಭ್ಯಾಮಾವಿಷ್ಟೇನ ವನೇಚರಾಃ|

03268013c ಋಷಯೋ ಹಿಂಸಿತಾಃ ಪೂರ್ವಂ ದೇವಾಶ್ಚಾಪ್ಯವಮಾನಿತಾಃ||

ಇದಕ್ಕೂ ಮೊದಲು ಬಲದರ್ಪಿತನಾದ ನೀನು ವನದಲ್ಲಿ ವಾಸಿಸುತ್ತಿರುವ ಋಷಿಗಳನ್ನು ಹಿಂಸಿಸಿದ್ದೀಯೆ ಮತ್ತು ದೇವತೆಗಳನ್ನೂ ಅಪಮಾನಿಸಿದ್ದೀಯೆ.

03268014a ರಾಜರ್ಷಯಶ್ಚ ನಿಹತಾ ರುದಂತ್ಯಶ್ಚಾಹೃತಾಃ ಸ್ತ್ರಿಯಃ|

03268014c ತದಿದಂ ಸಮನುಪ್ರಾಪ್ತಂ ಫಲಂ ತಸ್ಯಾನಯಸ್ಯ ತೇ||

ರಾಜರ್ಷಿಗಳನ್ನು ಕೊಂದು ರೋದಿಸುತ್ತಿರುವ ಸ್ತ್ರೀಯರನ್ನು ಅಪಹರಿಸಿದ್ದೀಯೆ. ಈಗ ನಿನ್ನ ಆ ಅನ್ಯಾಯಗಳ ಫಲವು ಪ್ರಾಪ್ತವಾಗುವ ಸಮಯವು ಬಂದಿದೆ.

03268015a ಹಂತಾಸ್ಮಿ ತ್ವಾಂ ಸಹಾಮಾತ್ಯಂ ಯುಧ್ಯಸ್ವ ಪುರುಷೋ ಭವ|

03268015c ಪಶ್ಯ ಮೇ ಧನುಷೋ ವೀರ್ಯಂ ಮಾನುಷಸ್ಯ ನಿಶಾಚರ||

ಅಮಾತ್ಯರೊಂದಿಗೆ ನಿನ್ನನ್ನು ಕೊಲ್ಲುತ್ತೇನೆ. ಯುದ್ಧಮಾಡಿ ಪುರುಷನಾಗು. ನಿಶಾಚರ! ಮನುಷ್ಯನಾದ ನನ್ನ ಧನುಸ್ಸಿನ ವೀರ್ಯವನ್ನು ನೋಡು.

03268016a ಮುಚ್ಯತಾಂ ಜಾನಕೀ ಸೀತಾ ನ ಮೇ ಮೋಕ್ಷ್ಯಸಿ ಕರ್ಹಿ ಚಿತ್|

03268016c ಅರಾಕ್ಷಸಮಿಮಂ ಲೋಕಂ ಕರ್ತಾಸ್ಮಿ ನಿಶಿತೈಃ ಶರೈಃ||

ಜಾನಕಿ ಸೀತೆಯನ್ನು ಬಿಡುಗಡೆ ಮಾಡು. ಒಂದುವೇಳೆ ಬಿಡುಗಡೆ ಮಾಡದಿದ್ದರೆ ನಿಶಿತ ಬಾಣಗಳಿಂದ ನಾನು ಲೋಕದಲ್ಲಿಯೇ ರಾಕ್ಷಸರಿಲ್ಲದಿರುವಂತೆ ಮಾಡುತ್ತೇನೆ.”

03268017a ಇತಿ ತಸ್ಯ ಬ್ರುವಾಣಸ್ಯ ದೂತಸ್ಯ ಪರುಷಂ ವಚಃ|

03268017c ಶ್ರುತ್ವಾ ನ ಮಮೃಷೇ ರಾಜಾ ರಾವಣಃ ಕ್ರೋಧಮೂರ್ಚಿತಃ||

ದೂತನು ಹೇಳಿದ ಈ ಪೌರುಷ ಮಾತುಗಳನ್ನು ಕೇಳಿ ರಾಜ ರಾವಣನು ತಡೆಯಲಾರದೇ ಕ್ರೋಧಮೂರ್ಛಿತನಾದನು.

03268018a ಇಂಗಿತಜ್ಞಾಸ್ತತೋ ಭರ್ತುಶ್ಚತ್ವಾರೋ ರಜನೀಚರಾಃ|

03268018c ಚತುರ್ಷ್ವಂಗೇಷು ಜಗೃಹುಃ ಶಾರ್ದೂಲಮಿವ ಪಕ್ಷಿಣಃ||

ಆಗ ಅವನ ಇಂಗಿತವನ್ನು ತಿಳಿದ ನಾಲ್ವರು ರಾಕ್ಷಸ ಸೇವಕರು ಅವನ ನಾಲ್ಕು ಅಂಗಗಳನ್ನು ಪಕ್ಷಿಗಳು ಹುಲಿಯನ್ನು ಹಿಡಿಯುವಂತೆ ಹಿಡಿದರು.

03268019a ತಾಂಸ್ತಥಾಂಗೇಷು ಸಂಸಕ್ತಾನಂಗದೋ ರಜನೀಚರಾನ್|

03268019c ಆದಾಯೈವ ಖಮುತ್ಪತ್ಯ ಪ್ರಾಸಾದತಲಮಾವಿಶತ್||

ಆಗ ಅಂಗದನು ಆ ರಾಕ್ಷಸರು ಅವನ ಅಂಗಗಳಿಗೆ ನೇತಾಡಿಕೊಂಡಿರುವಾಗಲೇ ಪ್ರಾಸಾದದ ಮೇಲೆ ಹಾರಿದನು.

03268020a ವೇಗೇನೋತ್ಪತತಸ್ತಸ್ಯ ಪೇತುಸ್ತೇ ರಜನೀಚರಾಃ|

03268020c ಭುವಿ ಸಂಭಿನ್ನಹೃದಯಾಃ ಪ್ರಹಾರಪರಿಪೀಡಿತಾಃ||

ಅವನು ಹಾರಿದ ರಭಸಕ್ಕೆ ರಾಕ್ಷಸರು ನೆಲದ ಮೇಲೆ, ಪೆಟ್ಟನ್ನು ಸಹಿಸಲಾರದೇ ಹೃದಯಗಳು ಒಡೆದು, ಬಿದ್ದರು.

03268021a ಸ ಮುಕ್ತೋ ಹರ್ಮ್ಯಶಿಖರಾತ್ತಸ್ಮಾತ್ಪುನರವಾಪತತ್|

03268021c ಲಂಘಯಿತ್ವಾ ಪುರೀಂ ಲಂಕಾಂ ಸ್ವಬಲಸ್ಯ ಸಮೀಪತಃ||

ಅರಮನೆಯ ಮೇಲಿಂದ ಪುನಃ ಕೆಳಕ್ಕೆ ಹಾರಿ, ಲಂಕೆಯನ್ನು ದಾಟಿ ತನ್ನ ಸೇನೆಯ ಸಮೀಪಕ್ಕೆ ಬಂದನು.

03268022a ಕೋಸಲೇಂದ್ರಮಥಾಭ್ಯೇತ್ಯ ಸರ್ವಮಾವೇದ್ಯ ಚಾಂಗದಃ|

03268022c ವಿಶಶ್ರಾಮ ಸ ತೇಜಸ್ವೀ ರಾಘವೇಣಾಭಿನಂದಿತಃ||

ಕೋಸಲೇಂದ್ರನಲ್ಲಿಗೆ ಹೋಗಿ ಅಂಗದನು ನಡೆದುದೆಲ್ಲವನ್ನೂ ನಿವೇದಿಸಿದನು. ರಾಘವನಿಂದ ಅಭಿನಂದಿತನಾದ ಆ ತೇಜಸ್ವಿಯು ವಿಶ್ರಾಂತಿಯನ್ನು ಪಡೆದನು.

03268023a ತತಃ ಸರ್ವಾಭಿಸಾರೇಣ ಹರೀಣಾಂ ವಾತರಂಹಸಾಂ|

03268023c ಭೇದಯಾಮಾಸ ಲಂಕಾಯಾಃ ಪ್ರಾಕಾರಂ ರಘುನಂದನಃ||

ಆಗ ರಘುನಂದನನು ಎಲ್ಲ ವಾಯುವೇಗದ ಕಪಿಗಳ ಆಕ್ರಮಣದೊಂದಿಗೆ ಲಂಕೆಯ ಪ್ರಾಕಾರಗಳನ್ನು ಒಡೆಸಿದನು.

03268024a ವಿಭೀಷಣರ್ಕ್ಷಾಧಿಪತೀ ಪುರಸ್ಕೃತ್ಯಾಥ ಲಕ್ಷ್ಮಣಃ|

03268024c ದಕ್ಷಿಣಂ ನಗರದ್ವಾರಮವಾಮೃದ್ನಾದ್ದುರಾಸದಂ||

ಲಕ್ಷ್ಮಣನು ವಿಭೀಷಣ ಮತ್ತು ಕರಡಿಗಳ ರಾಜನನ್ನು ಮುಂದಿಟ್ಟುಕೊಂಡು ದುರಾಸದವಾಗಿದ್ದ ದಕ್ಷಿಣನಗರದ್ವಾರವನ್ನು ಕಿತ್ತುರುಳಿಸಿದನು.

03268025a ಕರಭಾರುಣಗಾತ್ರಾಣಾಂ ಹರೀಣಾಂ ಯುದ್ಧಶಾಲಿನಾಂ|

03268025c ಕೋಟೀಶತಸಹಸ್ರೇಣ ಲಂಕಾಮಭ್ಯಪತತ್ತದಾ||

ಅವನು ನೂರುಸಾವಿರ ಕೋಟಿ ಯುದ್ಧಶಾಲಿಗಳಾಗಿದ್ದ, ಕುಂಕುಮದಷ್ಟು ಕೆಂಪಾಗಿದ್ದ ಕಪಿಗಳೊಡನೆ ಲಂಕೆಯ ಮೇಲೆ ಬಿದ್ದನು.

03268026a ಉತ್ಪತದ್ಭಿಃ ಪತದ್ಭಿಶ್ಚ ನಿಪತದ್ಭಿಶ್ಚ ವಾನರೈಃ|

03268026c ನಾದೃಶ್ಯತ ತದಾ ಸೂರ್ಯೋ ರಜಸಾ ನಾಶಿತಪ್ರಭಃ||

ಮೇಲೆ ಹಾರುತ್ತಿದ್ದ, ಕುಪ್ಪಳಿಸುತ್ತಿದ್ದ, ಕೆಳಗೆ ಬೀಳುತ್ತಿದ್ದ ವಾನರರಿಂದ ಸೂರ್ಯನೇ ಕಾಣುತ್ತಿರಲಿಲ್ಲ ಮತ್ತು ಮೇಲೆದ್ದ ಧೂಳಿನಿಂದಾಗಿ ಬೆಳಕೇ ಇಲ್ಲದಂತಾಯಿತು.

03268027a ಶಾಲಿಪ್ರಸೂನಸದೃಶೈಃ ಶಿರೀಷಕುಸುಮಪ್ರಭೈಃ|

03268027c ತರುಣಾದಿತ್ಯಸದೃಶೈಃ ಶರಗೌರೈಶ್ಚ ವಾನರೈಃ||

03268028a ಪ್ರಾಕಾರಂ ದದೃಶುಸ್ತೇ ತು ಸಮಂತಾತ್ಕಪಿಲೀಕೃತಂ|

03268028c ರಾಕ್ಷಸಾ ವಿಸ್ಮಿತಾ ರಾಜನ್ಸಸ್ತ್ರೀವೃದ್ಧಾಃ ಸಮಂತತಃ||

ರಾಜನ್! ಕೋಟೆಯ ಗೋಡೆಗಳು ಎಲ್ಲಕಡೆಯಿಂದಲೂ ಕಪಿಗಳಿಂದ - ಭತ್ತದ ಎಸಳುಗಳಂತಿದ್ದ, ಶಿರೀಷಕುಸುಮಗಳಂತಿದ್ದ, ಉದಯಕಾಲದ ಆದಿತ್ಯನಂತಿದ್ದ, ಬಿಳಿಯಹುಲ್ಲಿನಂತಿದ್ದ ಕಪಿಗಳಿಂದ ಎಲ್ಲಕಡೆಯಿಂದಲೂ ತುಂಬಿದ್ದ ಕೋಟೆಯು ಹಳದೀಬಣ್ಣವನ್ನು ತಳೆದಿದ್ದುದನ್ನು ನೋಡಿ ಎಲ್ಲೆಡೆಯೂ ಇದ್ದ ರಾಕ್ಷಸರು, ಸ್ತ್ರೀಯರು ಮತ್ತು ವೃದ್ಧರೂ ಸೇರಿ, ವಿಸ್ಮಿತರಾದರು.

03268029a ಬಿಭಿದುಸ್ತೇ ಮಣಿಸ್ತಂಭಾನ್ಕರ್ಣಾಟ್ಟಶಿಖರಾಣಿ ಚ|

03268029c ಭಗ್ನೋನ್ಮಥಿತವೇಗಾನಿ ಯಂತ್ರಾಣಿ ಚ ವಿಚಿಕ್ಷಿಪುಃ||

ಅವರು ಮಣಿಸ್ಥಂಭಗಳನ್ನು, ಕರ್ಣಾಟ್ಟಶಿಖರಗಳನ್ನು ಮುರಿದರು. ಯಂತ್ರಗಳನ್ನು ಮುರಿದು ಅವುಗಳ ವೇಗವನ್ನು ತೆಗೆದು ಧ್ವಂಸಮಾಡಿದರು.

03268030a ಪರಿಗೃಹ್ಯ ಶತಘ್ನೀಶ್ಚ ಸಚಕ್ರಾಃ ಸಹುಡೋಪಲಾಃ|

03268030c ಚಿಕ್ಷಿಪುರ್ಭುಜವೇಗೇನ ಲಂಕಾಮಧ್ಯೇ ಮಹಾಬಲಾಃ||

ಆ ಮಹಾಬಲರು ನೂರಾರು ಕಟುಕರನ್ನು, ಚಕ್ರಗಳನ್ನು, ಕಾಯುವ ಗೋಪುರಗಳನ್ನು, ಮತ್ತು ಬಂಡೆಗಳನ್ನು ತೆಗೆದು ಲಂಕೆಯ ಮಧ್ಯಕ್ಕೆ ಎಸೆದರು.

03268031a ಪ್ರಾಕಾರಸ್ಥಾಶ್ಚ ಯೇ ಕೇ ಚಿನ್ನಿಶಾಚರಗಣಾಸ್ತದಾ|

03268031c ಪ್ರದುದ್ರುವುಸ್ತೇ ಶತಶಃ ಕಪಿಭಿಃ ಸಮಭಿದ್ರುತಾಃ||

ಪ್ರಾಕಾರವನ್ನು ಕಾಯುತ್ತಿದ್ದ ನೂರಾರು ನಿಶಾಚರರು ಕಪಿಗಳ ಆಕ್ರಮಣಕ್ಕೊಳಗಾಗಿ ಓಡಿ ಹೋದರು.

03268032a ತತಸ್ತು ರಾಜವಚನಾದ್ರಾಕ್ಷಸಾಃ ಕಾಮರೂಪಿಣಃ|

03268032c ನಿರ್ಯಯುರ್ವಿಕೃತಾಕಾರಾಃ ಸಹಸ್ರಶತಸಂಘಶಃ||

03268033a ಶಸ್ತ್ರವರ್ಷಾಣಿ ವರ್ಷಂತೋ ದ್ರಾವಯಂತೋ ವನೌಕಸಃ|

03268033c ಪ್ರಾಕಾರಂ ಶೋಧಯಂತಸ್ತೇ ಪರಂ ವಿಕ್ರಮಮಾಸ್ಥಿತಾಃ||

ಆಗ ರಾಜನ ವಚನದಂತೆ ಕಾಮರೂಪಿಗಳಾದ, ವಿಕೃತಾಕಾರರಾದ ರಾಕ್ಷಸರು ನೂರುಸಾವಿರದ ಗುಂಪಿನಲ್ಲಿ ಹೊರಟು ಶಸ್ತ್ರಗಳ ಮಳೆಗರೆದು ಆ ಕಪಿಗಳನ್ನು ಓಡಿಸಿ, ಕೋಟೆಯನ್ನು ಬರಿದುಮಾಡುವಲ್ಲಿ ಪರಮ ವಿಕ್ರಮವನ್ನು ತೋರಿಸಿದರು.

03268034a ಸ ಮಾಷರಾಶಿಸದೃಶೈರ್ಬಭೂವ ಕ್ಷಣದಾಚರೈಃ|

03268034c ಕೃತೋ ನಿರ್ವಾನರೋ ಭೂಯಃ ಪ್ರಾಕಾರೋ ಭೀಮದರ್ಶನೈಃ||

ಕ್ಷಣಮಾತ್ರದಲ್ಲಿ ಅವರೆಕಾಳುಗಳ ರಾಶಿಯಂತೆ ತೋರುತ್ತಿದ್ದ, ನೋಡಲು ಭಯಂಕರರಾಗಿದ್ದ ಆ ರಾಕ್ಷಸರು ಪ್ರಾಕಾರವನ್ನು ನಿರ್ವಾನರವನ್ನಾಗಿ ಮಾಡಿದರು.

03268035a ಪೇತುಃ ಶೂಲವಿಭಿನ್ನಾಂಗಾ ಬಹವೋ ವಾನರರ್ಷಭಾಃ|

03268035c ಸ್ತಂಭತೋರಣಭಗ್ನಾಶ್ಚ ಪೇತುಸ್ತತ್ರ ನಿಶಾಚರಾಃ||

ಶೂಲಗಳಿಂದ ಅಂಗಗಳನ್ನು ಕಡಿದುಕೊಂಡು ಹಲವಾರು ವಾನರರ್ಷಭರು ಉರುಳಿದರು. ಹಾಗೆಯೇ ತೋರಣದ ಸ್ಥಂಭಗಳಿಂದ ತುಂಡಾಗಿ ರಾಕ್ಷಸರೂ ಕೆಳಗುರುಳಿದರು.

03268036a ಕೇಶಾಕೇಶ್ಯಭವದ್ಯುದ್ಧಂ ರಕ್ಷಸಾಂ ವಾನರೈಃ ಸಹ|

03268036c ನಖೈರ್ದಂತೈಶ್ಚ ವೀರಾಣಾಂ ಖಾದತಾಂ ವೈ ಪರಸ್ಪರಂ||

ಆ ರಾಕ್ಷಸ ವಾನರರೊಡನೆ ಕೇಶಾಕೇಶ ಯುದ್ಧವು ನಡೆಯಿತು. ವೀರರು ಪರಸ್ಪರರನ್ನು ಉಗುರು ಹಲ್ಲುಗಳಿಂದ ಕಿತ್ತು ತಿನ್ನುತ್ತಿದ್ದರು.

03268037a ನಿಷ್ಟನಂತೋ ಹ್ಯುಭಯತಸ್ತತ್ರ ವಾನರರಾಕ್ಷಸಾಃ|

03268037c ಹತಾ ನಿಪತಿತಾ ಭೂಮೌ ನ ಮುಂಚಂತಿ ಪರಸ್ಪರಂ||

ಎರಡೂ ಕಡೆಯವರು ಕೊನೆಯವರೆಗೂ ಹೊಡೆದಾಡುತ್ತಿದ್ದರು; ವಾನರ ರಾಕ್ಷಸರು ನೆಲಕ್ಕೆ ಬಿದ್ದು ಹತರಾದರೂ ಪರಸ್ಪರರ ಹಿಡಿತವನ್ನು ಬಿಟ್ಟಿರಲಿಲ್ಲ.

03268038a ರಾಮಸ್ತು ಶರಜಾಲಾನಿ ವವರ್ಷ ಜಲದೋ ಯಥಾ|:

03268038c ತಾನಿ ಲಂಕಾಂ ಸಮಾಸಾದ್ಯ ಜಘ್ನುಸ್ತಾನ್ರಜನೀಚರಾನ್||

ರಾಮನಾದರೋ ಲಂಕೆಯ ಮೇಲೆ ಮೋಡಗಳಂತೆ ಶರಜಾಲಗಳಿಂದ ಮಳೆಗರೆದನು. ಅದಕ್ಕೆ ಸಿಲುಕಿದ ರಾಕ್ಷಸರು ಮರಣಹೊಂದಿದರು.

03268039a ಸೌಮಿತ್ರಿರಪಿ ನಾರಾಚೈರ್ದೃಢಧನ್ವಾ ಜಿತಕ್ಲಮಃ|

03268039c ಆದಿಶ್ಯಾದಿಶ್ಯ ದುರ್ಗಸ್ಥಾನ್ಪಾತಯಾಮಾಸ ರಾಕ್ಷಸಾನ್||

ಜಿತಕ್ಲಮ ಸೌಮಿತ್ರಿಯೂ ಕೂಡ ತನ್ನ ದೃಢ ಧನುಸ್ಸಿನಿಂದ ಉಕ್ಕಿನ ಬಾಣಗಳನ್ನು ಕೋಟೆಯ ಮೇಲಿದ್ದ ರಾಕ್ಷಸರನ್ನು ಹೊಡೆದು ಕೆಳಗುರುಳಿಸಿದನು.

03268040a ತತಃ ಪ್ರತ್ಯವಹಾರೋಽಭೂತ್ಸೈನ್ಯಾನಾಂ ರಾಘವಾಜ್ಞಯಾ|

03268040c ಕೃತೇ ವಿಮರ್ದೇ ಲಂಕಾಯಾಂ ಲಬ್ಧಲಕ್ಷೋ ಜಯೋತ್ತರಃ||

ಆಗ ಗುರಿಯಿಟ್ಟು ಲಂಕೆಯನ್ನು ಮುರಿದು ವಿಜಯವನ್ನು ಗಳಿಸಿದ ನಂತರ ರಾಮನ ಆಜ್ಞೆಯಂತೆ ಸೇನೆಯು ಹಿಂದೆ ಸರಿಯಿತು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ಲಂಕಾಪ್ರವೇಶೇ ಅಷ್ಟಷಷ್ಟ್ಯಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ಲಂಕಾಪ್ರವೇಶದಲ್ಲಿ ಇನ್ನೂರಾಅರವತ್ತೆಂಟನೆಯ ಅಧ್ಯಾಯವು.

Related image

Kannada translation of Draupadiharana Parva, by Chapter:
  1. ಜಯದ್ರಥಾಗಮನ
  2. ಕೋಟಿಕಾಸ್ಯಪ್ರಶ್ನಃ
  3. ದ್ರೌಪದೀವಾಕ್ಯ
  4. ಜಯದ್ರಥದ್ರೌಪದೀಸಂವಾದ
  5. ದ್ರೌಪದೀಹರಣ
  6. ಪಾರ್ಥಾಗಮನ
  7. ದ್ರೌಪದೀವಾಕ್ಯ
  8. ಜಯದ್ರಥಪಲಾಯನ
  9. ಜಯದ್ರಥವಿಮೋಕ್ಷಣ
  10. ರಾಮೋಪಾಖ್ಯಾನ-ಯುಧಿಷ್ಠಿರಪ್ರಶ್ನಃ
  11. ರಾಮೋಪಾಖ್ಯಾನ-ರಾಮರಾವಣಯೋರ್ಜನ್ಮಕಥನ
  12. ರಾಮೋಪಾಖ್ಯಾನ-ರಾವಣಾದಿವರಪ್ರಾಪ್ತಿಃ
  13. ರಾಮೋಪಾಖ್ಯಾನ-ವಾನರಾದ್ಯುತ್ಪತ್ತಿಃ
  14. ರಾಮೋಪಾಖ್ಯಾನ-ರಾಮವನಾಭಿಗಮನ
  15. ರಾಮೋಪಾಖ್ಯಾನ-ಮಾರೀಚವಧ-ಸೀತಾಪಹರಣ
  16. ರಾಮೋಪಾಖ್ಯಾನ-ಕಬಂಧಹನನ
  17. ರಾಮೋಪಾಖ್ಯಾನ-ತ್ರಿಜಟಾಕೃತಸೀತಾಸಂವಾದಃ
  18. ರಾಮೋಪಾಖ್ಯಾನ-ಸೀತಾರಾವಣಸಂವಾದಃ
  19. ರಾಮೋಪಾಖ್ಯಾನ-ಹನುಮಪ್ರತ್ಯಾಗಮನ
  20. ರಾಮೋಪಾಖ್ಯಾನ-ಸೇತುಬಂಧನ
  21. ರಾಮೋಪಾಖ್ಯಾನ-ಲಂಕಾಪ್ರವೇಶ
  22. ರಾಮೋಪಾಖ್ಯಾನ-ರಾಮರಾವಣದ್ವಂದ್ವಯುದ್ಧಃ
  23. ರಾಮೋಪಾಖ್ಯಾನ-ಕುಂಭಕರ್ಣನಿರ್ಗಮನ
  24. ರಾಮೋಪಾಖ್ಯಾನ-ಕುಂಬಕರ್ಣಾದಿವಧಃ
  25. ರಾಮೋಪಾಖ್ಯಾನ-ಇಂದ್ರಜಿದ್ಯುದ್ಧಃ
  26. ರಾಮೋಪಾಖ್ಯಾನ-ಇಂದ್ರಜಿದ್ವಧಃ
  27. ರಾಮೋಪಾಖ್ಯಾನ-ರಾವಣವಧಃ
  28. ರಾಮೋಪಾಖ್ಯಾನ-ಶ್ರೀರಾಮಾಭಿಷೇಕ
  29. ರಾಮೋಪಾಖ್ಯಾನ-ಯುಧಿಷ್ಠಿರಾಶ್ವಾಸನ
  30. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೧
  31. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೨
  32. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೩
  33. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೪
  34. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೫
  35. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೬
  36. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೭

Comments are closed.