ಉತ್ತರ
Contents
Toggleವ್ಯಾಸ ಮಹಾಭಾರತದಲ್ಲಿ ಉತ್ತರನು ರಾಜಾ ವಿರಾಟನ ಮಗನು. ಅವನಿಗೆ ಭೂಮಿಂಜಯ ಎನ್ನುವ ಹೆಸರೂ ಇದೆ. ಅಭಿಮನ್ಯುವಿನ ಪತ್ನಿ ಉತ್ತರೆಯ ಸಹೋದರ. ಪಾಂಡವರ ಅಜ್ಞಾತವಾಸದ ಕೊನೆಯಲ್ಲಿ ಕೌರವರು ನಡೆಸಿದ ಉತ್ತರ ಗೋಗ್ರಹಣ ಪ್ರಸಂಗದಲ್ಲಿ ಉತ್ತರನು ಬೃಹನ್ನಡೆ ಅರ್ಜುನನ ಸಾರಥ್ಯದಲ್ಲಿ ಕುರುಸೇನೆಯೊಡನೆ ಯುದ್ಧಕ್ಕೆ ಹೋದವನು. ಆದರೆ ಕೌರವ ಸೇನೆಯನ್ನು ನೋಡಿ ಭಯದಿಂದ ಪಲಯಾನಮಾಡುತ್ತಿದ್ದಾಗ ಅರ್ಜುನನಿಂದ ಹಿಂದೆ ಕರೆತಲ್ಪಟ್ಟು ಅರ್ಜುನನ ಸಾರಥಿಯಾದವನು. ಮಹಾಭಾರತ ಯುದ್ಧದ ಮೊದಲನೆಯ ದಿನದಲ್ಲಿಯೇ ಶಲ್ಯನೊಂದಿಗಿನ ಯುದ್ಧದಲ್ಲಿ ಹತನಾದವನು.
ಉತ್ತರನ ಪಾತ್ರವು ಸ್ವಲ್ಪ ಹಾಸ್ಯಾಸ್ಪದವಾಗಿಯೇ ಇದೆ. ಹೆಂಗಸರ ಮುಂದೆ ತನ್ನ ಪರಾಕ್ರಮದ ಬಗ್ಗೆ ಕೊಚ್ಚಿಕೊಂಡ ಅವನು ಕುರುಸೇನೆಯನ್ನು ದೂರದಿಂದಲೇ ನೋಡಿ ಪಲಾಯನ ಮಾಡಿದವನು. ಅರ್ಜುನನು ಅವನನ್ನು ಬೆನ್ನಟ್ಟಿಹೋಗಿ ಬಲಾತ್ಕಾರವಾಗಿ ಹಿಡಿದು ತಂದು ರಥದ ಮೇಲೆ ಕುಳಿಸುತ್ತಾನೆ. ಇನ್ನೂ ಬಾಲಕನಾಗಿದ್ದ ಅವನು ಯುದ್ಧದ ಮೊದಲನೆಯ ದಿನದಲ್ಲಿಯೇ ಹತನಾದನು.
ಉತ್ತರನ ಪಾತ್ರವು ನಮಗೆ ಭೂಮಿಂಜಯನೆಂಬ ಹೆಸರಿನ ಮತ್ಸ್ಯರಾಜನ ಮಾನವಂತ ಮಗ ಎಂದು ಮೊಟ್ಟಮೊದಲು ವಿರಾಟ ಪರ್ವದ ಅಧ್ಯಾಯ ೩೩ರಲ್ಲಿ ದೊರೆಯುತ್ತದೆ. ಮತ್ಸ್ಯರಾಜನು ತನ್ನ ಹಸುಗಳನ್ನು ಬಿಡಿಸಿಕೊಳ್ಳುವುದಕ್ಕಾಗಿ ತ್ರಿಗರ್ತರಾಜನೆಡೆಗೆ ಹೋಗಿರಲು, ಇತ್ತ ದುರ್ಯೋಧನನು ಮಂತ್ರಿಗಳೊಡನೆ ವಿರಾಟನ ಮೇಲೆ ಧಾಳಿಮಾಡಿದನು. ಭೀಷ್ಮ, ದ್ರೋಣ, ಕರ್ಣ, ಕೃಪ, ಅಶ್ವತ್ಥಾಮ, ಸೌಬಲ, ದುಃಶಾಸನ, ವಿವಿಂಶತಿ, ವಿಕರ್ಣ, ಚಿತ್ರಸೇನ, ದುರ್ಮುಖ, ದುಃಸಹ, ಮತ್ತು ಇತರ ಮಹಾರಥರು ಎಲ್ಲರೂ ಮತ್ಸ್ಯದ ಮೇಲೆ ಎರಗಿ, ವಿರಾಟರಾಜನ ತುರುಹಟ್ಟಿಗಳನ್ನು ತ್ವರಿತವಾಗಿ ಆಕ್ರಮಿಸಿ, ಗೋಧನವನ್ನು ಬಲಾತ್ಕಾರವಾಗಿ ವಶಪಡಿಸಿಕೊಂಡರು. ಆ ಕುರುಗಳು ದೊಡ್ದ ರಥಸಮೂಹದೊಡನೆ ಸುತ್ತಲೂ ಮುತ್ತಿ ಅರವತ್ತು ಸಾವಿರ ಗೋವುಗಳನ್ನು ಹಿಡಿದುಕೊಂಡರು. ಭಯಂಕರ ಹೊಡೆದಾಟದಲ್ಲಿ ಆ ಮಹಾರಥರಿಂದ ಪೆಟ್ಟು ತಿಂದ ಗೋಪಾಲರ ಬೊಬ್ಬೆ ತುರುಹಟ್ಟಿಗಳಲ್ಲಿ ಜೋರಾಯಿತು. ಆಗ ಹೆದರಿದ ಗೋಮುಖ್ಯಸ್ಥನು ಬೇಗ ರಥವನ್ನೇರಿ, ಆರ್ತನಂತೆ ಹುಯ್ಯಲಿಡುತ್ತಾ ನಗರಕ್ಕೆ ಹೋದನು. ಅವನು ರಾಜನ ಪುರವನ್ನು ಹೊಕ್ಕು, ಅರಮನೆಗೆ ಹೋಗಿ, ಬಳಿಕ ರಥದಿಂದ ಬೇಗ ಇಳಿದು, ನಡೆದುದೆಲ್ಲವನ್ನೂ ಹೇಳಲು ಒಳಹೊಕ್ಕನು. ಭೂಮಿಂಜಯನೆಂಬ ಹೆಸರಿನ ಮತ್ಸ್ಯರಾಜನ ಮಾನವಂತ ಮಗನನ್ನು ಕಂಡು ಅವನಿಗೆ ನಾಡಿನ ಗೋವುಗಳ ಸೂರೆಯ ಕುರಿತು ಎಲ್ಲವನ್ನೂ ತಿಳಿಸಿದನು:
“ಕುರುಗಳು ನಿನ್ನ ಅರವತ್ತು ಸಾವಿರ ಗೋವುಗಳನ್ನು ಹಿಡಿದೊಯ್ಯುತ್ತಿದ್ದಾರೆ. ರಾಷ್ಟ್ರವರ್ಧಕ ಆ ಗೋಧನವನ್ನು ಗೆದ್ದು ತರಲು ಎದ್ದೇಳು! ರಾಜಪುತ್ರ! ರಾಜ್ಯದ ಹಿತಾಕಾಂಕ್ಷಿಯಾಗಿ ನೀನು ಸ್ವತಃ ಬೇಗ ಹೊರಡು. ದೊರೆ ಮತ್ಸ್ಯನು ನಿನ್ನನ್ನಿಲ್ಲಿ ಶೂನ್ಯನಗರಕ್ಕೆ ರಕ್ಷಕನನ್ನಾಗಿ ಮಾಡಿದ್ದಾನೆ. ಆ ರಾಜನು ಸಭೆಯ ನಡುವೆ ನನ್ನ ಮಗ ನನಗೆ ಅನುರೂಪನಾದವನು. ಶೂರ, ಕುಲೋದ್ಧಾರಕ, ಬಾಣಗಳಲ್ಲಿಯೂ ಅಸ್ತ್ರಗಳಲ್ಲಿಯೂ ನಿಪುಣನಾದ ಯೋಧ. ನನ್ನ ಮಗ ಯಾವಾಗಲೂ ವೀರ ಎಂದು ನಿನ್ನನ್ನು ಹೊಗಳುತ್ತಿರುತ್ತಾನೆ. ದೊರೆಯ ಆ ಮಾತು ಸತ್ಯವೇ ಆಗಲಿ. ಕುರುಗಳನ್ನು ಗೆದ್ದು ಗೋವುಗಳನ್ನು ಮರಳಿಸು. ನಿನ್ನ ಭಯಂಕರ ಶರತೇಜಸ್ಸಿನಿಂದ ಅವರ ಸೈನ್ಯವನ್ನು ಸುಟ್ಟುಹಾಕು! ಬಿಲ್ಲಿನಿಂದ ಬಿಟ್ಟ, ಚಿನ್ನದ ಗರಿಯುಳ್ಳ, ಗೆಣ್ಣನ್ನು ನೇರ ಮಾಡಿದ ಬಾಣಗಳಿಂದ ಶತ್ರುಸೈನ್ಯಗಳನ್ನು ಗಜೇಂದ್ರನಂತೆ ಭೇದಿಸು. ಎರಡು ತುಡಿಗಟ್ಟುಗಳೇ ಉಪಧಾನವಾಗಿರುವ, ಹೆದೆಯೆಂಬ ತಂತಿಯನ್ನೂ, ಚಾಪವೆಂಬ ದಂಡವನ್ನೂ, ಬಾಣಗಳೆಂಬ ವರ್ಣಗಳನ್ನೂ ಉಳ್ಳ ಮಹಾನಾದವನ್ನುಂಟುಮಾಡುವ ನಿನ್ನ ಧನುಸ್ಸೆಂಬ ವೀಣೆಯನ್ನು ವೈರಿಗಳ ನಡುವೆ ಮಿಡಿಸು. ಪ್ರಭೂ! ಬೆಳ್ಳಿಯಂತಹ ನಿನ್ನ ಬಿಳಿಯ ಕುದುರೆಗಳನ್ನು ರಥಕ್ಕೆ ಹೂಡು. ಅದರ ಮೇಲೆ ನಿನ್ನ ಚಿನ್ನದ ಸಿಂಹಧ್ವಜವನ್ನು ಹಾರಿಸು. ನಿನ್ನ ದೃಢ ಬಾಹುಗಳಿಂದ ಬಿಟ್ಟ ಚಿನ್ನದ ಗರಿಗಳುಳ್ಳ, ಹೊಳೆಯುವ ಮೊನೆಗಳನ್ನುಳ್ಳ, ರಾಜರ ಆಯುಷ್ಯವನ್ನು ಮುಗಿಸುವ ಬಾಣಗಳು ಸೂರ್ಯನನ್ನು ಮುಚ್ಚಲಿ. ಇಂದ್ರನು ರಾಕ್ಷಸರನ್ನು ಗೆದ್ದಂತೆ ಕುರುಗಳನ್ನೆಲ್ಲ ಯುದ್ಧದಲ್ಲಿ ಗೆದ್ದು ಮಹಾಯಶವನ್ನು ಪಡೆದು ಮತ್ತೆ ಈ ಪುರವನ್ನು ಪ್ರವೇಶಿಸು. ಮತ್ಸ್ಯರಾಜ ಪುತ್ರನಾದ ನೀನೇ ಈಗ ರಾಷ್ಟ್ರಕ್ಕೆ ಪರಮಗತಿ. ದೇಶವಾಸಿಗಳೆಲ್ಲ ಇಂದು ಗತಿಯುಳ್ಳವರಾಗಲಿ.”
ಉತ್ತರ ಪೌರುಷ
ಅಂತಃಪುರದಲ್ಲಿ ಹೆಂಗಸರ ನಡುವೆ ಅವನು ಹೀಗೆ ಹೇಳಲು, ಭೂಮಿಂಜಯನು ಧೈರ್ಯಕೊಡುವ ಆ ಮಾತನ್ನು ಹೊಗಳುತ್ತಾ, ಈ ಮಾತುಗಳನ್ನಾಡಿದನು.
ಅದ್ಯಾಹಮನುಗಚ್ಛೇಯಂ ದೃಢಧನ್ವಾ ಗವಾಂ ಪದಂ|
ಯದಿ ಮೇ ಸಾರಥಿಃ ಕಶ್ಚಿದ್ಭವೇದಶ್ವೇಷು ಕೋವಿದಃ||
ತಮೇವ ನಾಧಿಗಚ್ಛಾಮಿ ಯೋ ಮೇ ಯಂತಾ ಭವೇನ್ನರಃ|
ಪಶ್ಯಧ್ವಂ ಸಾರಥಿಂ ಕ್ಷಿಪ್ರಂ ಮಮ ಯುಕ್ತಂ ಪ್ರಯಾಸ್ಯತಃ||
ಅಷ್ಟಾವಿಂಶತಿರಾತ್ರಂ ವಾ ಮಾಸಂ ವಾ ನೂನಮಂತತಃ|
ಯತ್ತದಾಸೀನ್ಮಹದ್ಯುದ್ಧಂ ತತ್ರ ಮೇ ಸಾರಥಿರ್ಹತಃ||
ಸ ಲಭೇಯಂ ಯದಿ ತ್ವನ್ಯಂ ಹಯಯಾನವಿದಂ ನರಂ|
ತ್ವರಾವಾನದ್ಯ ಯಾತ್ವಾಹಂ ಸಮುಚ್ಛ್ರಿತಮಹಾಧ್ವಜಂ||
ವಿಗಾಹ್ಯ ತತ್ಪರಾನೀಕಂ ಗಜವಾಜಿರಥಾಕುಲಂ|
ಶಸ್ತ್ರಪ್ರತಾಪನಿರ್ವೀರ್ಯಾನ್ಕುರೂಂ ಜಿತ್ವಾನಯೇ ಪಶೂನ್||
ದುರ್ಯೋಧನಂ ಶಾಂತನವಂ ಕರ್ಣಂ ವೈಕರ್ತನಂ ಕೃಪಂ|
ದ್ರೋಣಂ ಚ ಸಹ ಪುತ್ರೇಣ ಮಹೇಷ್ವಾಸಾನ್ಸಮಾಗತಾನ್||
ವಿತ್ರಾಸಯಿತ್ವಾ ಸಂಗ್ರಾಮೇ ದಾನವಾನಿವ ವಜ್ರಭೃತ್|
ಅನೇನೈವ ಮುಹೂರ್ತೇನ ಪುನಃ ಪ್ರತ್ಯಾನಯೇ ಪಶೂನ್||
ಶೂನ್ಯಮಾಸಾದ್ಯ ಕುರವಃ ಪ್ರಯಾಂತ್ಯಾದಾಯ ಗೋಧನಂ|
ಕಿಂ ನು ಶಕ್ಯಂ ಮಯಾ ಕರ್ತುಂ ಯದಹಂ ತತ್ರ ನಾಭವಂ||
ಪಶ್ಯೇಯುರದ್ಯ ಮೇ ವೀರ್ಯಂ ಕುರವಸ್ತೇ ಸಮಾಗತಾಃ|
ಕಿಂ ನು ಪಾರ್ಥೋಽರ್ಜುನಃ ಸಾಕ್ಷಾದಯಮಸ್ಮಾನ್ಪ್ರಬಾಧತೇ||
“ಅಶ್ವಕೋವಿದ ಯಾರಾದರೂ ನನಗೆ ಸಾರಥಿಯಾಗುವುದಾದರೆ ದೃಢಧನುರ್ಧರನಾದ ನಾನು ಈ ದಿನವೇ ಹಸುಗಳ ಜಾಡನ್ನು ಅನುಸರಿಸುತ್ತೇನೆ. ನನಗೆ ಸಾರಥಿಯಾಗುವ ವ್ಯಕ್ತಿಯನ್ನೇ ನಾನು ಅರಿಯೆನಲ್ಲ! ಆದ್ದರಿಂದ ಹೊರಟಿರುವ ನನಗೆ ತಕ್ಕ ಸಾರಥಿಯನ್ನು ಬೇಗ ಹುಡುಕಿ! ಇಪ್ಪತ್ತೆಂಟು ರಾತ್ರಿಯೋ ಒಂದು ತಿಂಗಳೋ ನಡೆದ ಮಹಾ ಯುದ್ಧದಲ್ಲಿ ನನ್ನ ಸಾರಥಿ ಹತನಾದುದು ನಿಶ್ಚಯವಷ್ಟೇ! ರಥವನ್ನು ನಡೆಸಬಲ್ಲ ಮತ್ತೊಬ್ಬ ವ್ಯಕ್ತಿಯು ಸಿಕ್ಕರೆ, ನಾನಿಂದು ಮಹಾಧ್ವಜವನ್ನೇರಿಸಿ, ಶೀಘ್ರವಾಗಿ ಹೋಗಿ, ಆನೆ, ಕುದುರೆ ರಥಗಳಿಂದ ಕಿಕ್ಕಿರಿದ ಆ ಶತ್ರುಸೈನ್ಯವನ್ನು ಹೊಕ್ಕು, ಶಸ್ತ್ರ-ಪ್ರತಾಪಗಳಲ್ಲಿ ನಿರ್ವೀರ್ಯ ಕುರುಗಳನ್ನು ಗೆದ್ದು ಹಸುಗಳನ್ನು ಬಿಡಿಸಿ ತರುತ್ತೇನೆ. ಅಲ್ಲಿ ಸೇರಿರುವ ದುರ್ಯೋಧನ, ಭೀಷ್ಮ, ಸೂರ್ಯಪುತ್ರ ಕರ್ಣ, ಕೃಪ, ಪುತ್ರಸಹಿತ ದ್ರೋಣ – ಈ ಎಲ್ಲ ದೊಡ್ಡ ಬಿಲ್ಗಾರರನ್ನೂ ಯುದ್ಧದಲ್ಲಿ ಇಂದ್ರನು ರಾಕ್ಷಸರನ್ನು ಹೆದರಿಸಿದಂತೆ ಹೆದರಿಸಿ, ಈ ಗಳಿಗೆಯಲ್ಲಿ ಹಸುಗಳನ್ನು ಮರಳಿ ತರುತ್ತೇನೆ. ಯಾರೂ ಇಲ್ಲದಿರುವುದನ್ನು ಕಂಡು ಕುರುಗಳು ನಮ್ಮ ಗೋಧನವನ್ನು ಹಿಡಿದುಕೊಂಡು ಹೋಗುತ್ತಿದ್ದಾರೆ. ಅಲ್ಲಿಲ್ಲದಿರುವಾಗ ನಾನು ಏನು ತಾನೆ ಮಾಡುವುದು ಸಾಧ್ಯ? ನಮ್ಮನ್ನು ಬಾಧಿಸುತ್ತಿರುವ ಇವನು ಸಾಕ್ಷಾತ್ ಕುಂತೀಪುತ್ರ ಅರ್ಜುನನೇನು? ಎಂದು ನೆರೆದಿರುವ ಕೌರವರು ಮಾತನಾಡಿಕೊಳ್ಳುತ್ತಾ ನನ್ನ ಪರಾಕ್ರಮವನ್ನಿಂದು ಕಾಣುವರು.”
ಅರ್ಜುನನು ಉತ್ತರನ ಸಾರಥಿಯಾದುದು
ಸ್ತ್ರೀಯರ ನಡುವೆ ಮತ್ತೆ ಮತ್ತೆ ಆಡುತ್ತಿದ್ದ ಅವನ ಆ ಮಾತನ್ನೂ ಅವನು ಅರ್ಜುನನ ಹೆಸರನ್ನೆತ್ತಿದುದನ್ನೂ ದ್ರೌಪದಿಯು ಸೈರಿಸದಾದಳು. ಬಳಿಕ ಆ ಬಡಪಾಯಿಯು ಸ್ತ್ರೀಮಧ್ಯದಿಂದ ಎದ್ದು ಬಂದು, ಲಜ್ಜೆಯಿಂದೆಂಬಂತೆ ಮೆಲ್ಲಗೆ ಈ ಮಾತುಗಳನ್ನಾಡಿದಳು:
“ದೊಡ್ಡ ಆನೆಯಂತಿರುವವನೂ, ಸುಂದರನೂ ಆದ ಬೃಹನ್ನಡೆ ಎಂಬ ಈ ಯುವಕನು ಪಾರ್ಥನ ಪ್ರಸಿದ್ಧ ಸಾರಥಿಯಾಗಿದ್ದನು. ವೀರ! ಆ ಮಹಾತ್ಮನ ಶಿಷ್ಯನೂ ಧನುರ್ವಿದ್ಯೆಯಲ್ಲಿ ಯಾರಿಗೂ ಕಡಿಮೆಯಿಲ್ಲದವನೂ ಆದ ಇವನನ್ನು ಹಿಂದೆ ನಾನು ಪಾಂಡವರೊಡನಿದ್ದಾಗ ನೋಡಿದ್ದೆ. ಆ ದೊಡ್ಡ ಖಾಂಡವವನವನ್ನು ದಾವಾಗ್ನಿಯು ಸುಟ್ಟು ಹಾಕಿದಾಗ ಅರ್ಜನನ ಶ್ರೇಷ್ಠ ಕುದುರೆಗಳನ್ನು ಹಿಡಿದಿದ್ದವನು ಇವನೇ! ಈ ಸಾರಥಿಯೊಡನೆಯೇ ಪಾರ್ಥನು ಖಾಂಡವಪ್ರಸ್ಥದಲ್ಲಿ ಎಲ್ಲ ಜೀವಿಗಳನ್ನೂ ಸಂಪೂರ್ಣವಾಗಿ ಗೆದ್ದನು. ಇವನಿಗೆ ಸದೃಶನಾದ ಸಾರಥಿಯಿಲ್ಲ. ವೀರ! ನಿನ್ನ ಈ ಕುಮಾರಿ ಸುಂದರಿ ತಂಗಿಯ ಮಾತನ್ನು ಅವನು ನಿಸ್ಸಂದೇಹವಾಗಿ ನಡೆಸಿಕೊಳ್ಳುತ್ತಾನೆ. ಅವನು ನಿನಗೆ ಸಾರಥಿಯಾದರೆ ನೀನು ಎಲ್ಲ ಕೌರವರನ್ನೂ ನಿಸ್ಸಂಶಯವಾಗಿ ಗೆದ್ದು ಗೋವುಗಳನ್ನು ಖಂಡಿತವಾಗಿಯೂ ಮರಳಿ ಪಡೆದು ಹಿಂದಿರುಗುವೆ.”
ಸೈರಂಧ್ರಿಯು ಹೀಗೆ ಹೇಳಲು ಅವನು ಸೋದರಿಗೆ ನುಡಿದನು:
“ಸುಂದರಿ! ನೀನು ಹೋಗು! ಆ ಬೃಹನ್ನಡೆಯನ್ನು ಕರೆದು ತಾ!” ಸೋದರನಿಂದ ಕಳುಹಿಸಲ್ಪಟ್ಟ ಅವಳು ಆ ಮಹಾಬಾಹು ಅರ್ಜುನನು ವೇಷಮರೆಸಿಕೊಂಡು ವಾಸಿಸುತ್ತಿದ್ದ ನರ್ತನಗೃಹಕ್ಕೆ ಶೀಘ್ರವಾಗಿ ಹೋದಳು. ತನ್ನ ಸಖಿ ಆ ವಿಶಾಲಾಕ್ಷಿ ರಾಜಪುತ್ರಿಯನ್ನು ಕಂಡು ಅವಳ ಮಿತ್ರ ಅರ್ಜುನನು ನಗುತ್ತ “ಬಂದುದೇಕೆ?”
ರಾಜಪುತ್ರಿಯು ಆ ನರಶ್ರೇಷ್ಠನನ್ನು ಸಮೀಪಿಸಿ ವಿನಯವನ್ನು ತೋರುತ್ತಾ ಸಖಿಯರ ನಡುವೆ ಈ ಮಾತನ್ನಾಡಿದಳು:
“ಬೃಹನ್ನಡೇ! ನಮ್ಮ ನಾಡಿನ ಗೋವುಗಳನ್ನು ಕುರುಗಳು ಒಯ್ಯುತ್ತಿದ್ದಾರೆ. ಅವರನ್ನು ಗೆಲ್ಲಲು ನನ್ನ ಸೋದರನು ಧನುರ್ಧರನಾಗಿ ಹೋಗುವನು. ಅವನ ರಥದ ಸಾರಥಿಯು ಯುದ್ಧದಲ್ಲಿ ಸ್ವಲ್ಪ ಹಿಂದೆ ಹತನಾದನು. ಅವನಿಗೆ ಸಮನಾದ ಇವನ ಸಾರಥ್ಯವನ್ನು ಮಾಡುವ ಸೂತನು ಬೇರೆಯಿಲ್ಲ. ಸಾರಥಿಗಾಗಿ ಪ್ರಯತ್ನಿಸುತ್ತಿರುವ ಅವನಿಗೆ, ಅಶ್ವಜ್ಞಾನದಲ್ಲಿ ನಿನಗಿರುವ ಕೌಶಲವನ್ನು ಸೈರಂಧ್ರಿಯು ತಿಳಿಸಿದಳು. ನನ್ನ ಸೋದರನ ಸಾರಥ್ಯವನ್ನು ಚೆನ್ನಾಗಿ ಮಾಡು. ನಮ್ಮ ಗೋವುಗಳನ್ನು ಕುರುಗಳು ಇಷ್ಟರಲ್ಲಿ ಬಹುದೂರ ಅಟ್ಟಿಕೊಂಡು ಹೋಗಿರುತ್ತಾರೆ. ವಿಶ್ವಾಸದಿಂದ ನಾನು ನಿಯೋಜಿಸಿ ಹೇಳುತ್ತಿರುವ ಮಾತನ್ನು ನೀನು ನಡೆಸಿಕೊಡದಿದ್ದರೆ ನಾನು ಪ್ರಾಣತ್ಯಾಗ ಮಾಡುತ್ತೇನೆ.”
ಆ ಸುಂದರ ಗೆಳತಿಯು ಹೀಗೆ ಹೇಳಲು ಶತ್ರುನಾಶಕ ಅರ್ಜುನನು ಅಮಿತ ಶಕ್ತಿಶಾಲಿ ರಾಜಪುತ್ರನ ಬಳಿ ಹೋದನು. ಒಡೆದ ಗಂಡಸ್ಥಲವುಳ್ಳ ಆನೆಯಂತೆ ವೇಗವಾಗಿ ಹೋಗುತ್ತಿದ್ದ ಅವನನ್ನು ಹೆಣ್ಣಾನೆಯನ್ನು ಅನುಸರಿಸುವ ಮರಿಯಂತೆ ಆ ವಿಶಾಲಾಕ್ಷಿಯು ಅನುಸರಿಸಿದಳು. ಅವನನ್ನು ದೂರದಿಂದಲೇ ನೋಡಿ ರಾಜಪುತ್ರನು ಹೇಳಿದನು:
ತ್ವಯಾ ಸಾರಥಿನಾ ಪಾರ್ಥಃ ಖಾಂಡವೇಽಗ್ನಿಮತರ್ಪಯತ್||
ಪೃಥಿವೀಮಜಯತ್ಕೃತ್ಸ್ನಾಂ ಕುಂತೀಪುತ್ರೋ ಧನಂಜಯಃ|
ಸೈರಂಧ್ರೀ ತ್ವಾಂ ಸಮಾಚಷ್ಟ ಸಾ ಹಿ ಜಾನಾತಿ ಪಾಂಡವಾನ್||
ಸಮ್ಯಚ್ಛ ಮಾಮಕಾನಶ್ವಾಂಸ್ತಥೈವ ತ್ವಂ ಬೃಹನ್ನಡೇ|
ಕುರುಭಿರ್ಯೋತ್ಸ್ಯಮಾನಸ್ಯ ಗೋಧನಾನಿ ಪರೀಪ್ಸತಃ||
ಅರ್ಜುನಸ್ಯ ಕಿಲಾಸೀಸ್ತ್ವಂ ಸಾರಥಿರ್ದಯಿತಃ ಪುರಾ|
ತ್ವಯಾಜಯತ್ಸಹಾಯೇನ ಪೃಥಿವೀಂ ಪಾಂಡವರ್ಷಭಃ||
“ನಿನ್ನನ್ನು ಸಾರಥಿಯನ್ನಾಗಿ ಮಾಡಿಕೊಂಡು ಪಾರ್ಥನು ಖಾಂಡವದಲ್ಲಿ ಅಗ್ನಿಯನ್ನು ತೃಪ್ತಿಪಡಿಸಿದನು. ಅಲ್ಲದೇ ಕುಂತೀಪುತ್ರ ಧನಂಜಯನು ಪೃಥ್ವಿಯನ್ನು ಸಂಪೂರ್ಣವಾಗಿ ಜಯಿಸಿದನು ಎಂದು ಸೈರಂಧ್ರಿಯು ನಿನ್ನ ಕುರಿತು ಹೇಳಿದ್ದಾಳೆ. ಅವಳಿಗೆ ಪಾಂಡವರು ಗೊತ್ತು. ಆದ್ದರಿಂದ ಬೃಹನ್ನಡೇ! ಗೋಧನವನ್ನು ಮತ್ತೆ ತರಲು ಕುರುಗಳೊಡನೆ ಹೋರಾಡುವ ನನ್ನ ಕುದುರೆಗಳನ್ನು ನೀನು ಹಿಂದೆನಂತೆಯೇ ನಡೆಸು. ಹಿಂದೆ ನೀನು ಅರ್ಜುನನ ಪ್ರಿಯ ಸಾರಥಿಯಾಗಿದ್ದೆಯಷ್ಟೆ! ನಿನ್ನ ಸಹಾಯದಿಂದ ಆ ಪಾಂಡವಶ್ರೇಷ್ಠನು ಲೋಕವನ್ನು ಜಯಿಸಿದನು.”
ಉತ್ತರನು ಹೀಗೆ ಹೇಳಲು ಬೃಹನ್ನಡೆಯು ರಾಜಪುತ್ರನಿಗೆ ಮರುನುಡಿದಳು:
“ಯುದ್ಧರಂಗದಲ್ಲಿ ಸಾರಥ್ಯಮಾಡಲು ನನಗಾವ ಶಕ್ತಿಯಿದೆ? ಗೀತವೋ ನೃತ್ಯವೋ ವಾದ್ಯವೋ ಮತ್ತಾವುದೋ ಆದರೆ ನಾನು ನಿರ್ವಹಿಸಬಲ್ಲೆ. ನನಗೆ ಸಾರಥ್ಯವೆಲ್ಲಿಯದು? ನಿನಗೆ ಮಂಗಳವಾಗಲಿ.”
ಉತ್ತರನು ಹೇಳಿದನು:
ಬೃಹನ್ನಡೇ ಗಾಯನೋ ವಾ ನರ್ತನೋ ವಾ ಪುನರ್ಭವ|
ಕ್ಷಿಪ್ರಂ ಮೇ ರಥಮಾಸ್ಥಾಯ ನಿಗೃಹ್ಣೀಷ್ವ ಹಯೋತ್ತಮಾನ್||
“ಬೃಹನ್ನಡೇ! ಮತ್ತೆ ನೀನು ಗಾಯಕನೋ ನರ್ತಕನೋ ಆಗುವೆಯಂತೆ. ಸದ್ಯಕ್ಕೆ ಈಗ ಬೇಗ ನನ್ನ ರಥವನ್ನೇರಿ ಉತ್ತಮಾಶ್ವಗಳನ್ನು ನಿಯಂತ್ರಿಸು.””
ಆ ಪಾಂಡವನು ಎಲ್ಲವನ್ನೂ ಅರಿತಿದ್ದರೂ ಉತ್ತರೆಯ ಮುಂದೆ ವಿನೋದದಿಂದ ನಡೆದುಕೊಂಡನು. ಅವನು ಕವಚವನ್ನು ಮಗುಚಿ ಮೈಗೆ ತೊಟ್ಟುಕೊಂಡನು. ಅದನ್ನು ನೋಡಿ ಅಲ್ಲಿದ್ದ ಬೊಗಸೆಗಣ್ಣಿನ ಕುಮಾರಿಯರು ನಕ್ಕುಬಿಟ್ಟರು. ಆಗ ಅವನು ಗೊಂದಲಗೊಂಡಿದ್ದುದನ್ನು ಕಂಡು ಸ್ವತಃ ಉತ್ತರನು ಬೆಲೆಬಾಳುವ ಕವಚವನ್ನು ಬೃಹನ್ನಡೆಗೆ ತೊಡಿಸಿದನು. ಅವನು ಸ್ವತಃ ಸೂರ್ಯಪ್ರಭೆಯುಳ್ಳ ಶ್ರೇಷ್ಠ ಕವಚವನ್ನು ಧರಿಸಿ, ಸಿಂಹಧ್ವಜವನ್ನೇರಿಸಿ, ಬೃಹನ್ನಡೆಯನ್ನು ಸಾರಥ್ಯದಲ್ಲಿ ತೊಡಗಿಸಿದನು. ಆ ವೀರನು ಬೃಹನ್ನಡೆಯನ್ನು ಸಾರಥಿಯನ್ನಾಗಿ ಮಾಡಿಕೊಂಡು ಅನರ್ಘ್ಯ ಬಿಲ್ಲುಗಳನ್ನೂ, ಹೊಳೆಹೊಳೆಯುವ ಬಹು ಬಾಣಗಳನ್ನೂ ತೆಗೆದುಕೊಂಡು ಹೊರಟನು. ಅಗ ಉತ್ತರೆಯೂ ಸಖೀ ಕನ್ಯೆಯರೂ ಅವನಿಗೆ ಹೇಳಿದರು:
“ಬೃಹನ್ನಡೇ! ಯುದ್ಧಕ್ಕೆ ಬಂದಿರುವ ಭೀಷ್ಮ-ದ್ರೋಣ ಪ್ರಮುಖ ಕುರುಗಳನ್ನು ಗೆದ್ದು, ನಮ್ಮ ಗೊಂಬೆಗಳಿಗಾಗಿ ಸುಂದರ ಸೂಕ್ಷ್ಮ ಬಣ್ಣಬಣ್ಣದ ವಿವಿಧ ವಸ್ತ್ರಗಳನ್ನು ತೆಗೆದುಕೊಂಡು ಬಾ.”
ಬಳಿಕ, ಪಾಂಡುಪುತ್ರ ಪಾರ್ಥನು ನಗುತ್ತ ಹಾಗೆ ನುಡಿಯುತ್ತಿರುವ ಕನ್ಯೆಯರ ಗುಂಪಿಗೆ ಮೇಘ ದುಂದುಭಿ ಧ್ವನಿಯಿಂದ ಮರುನುಡಿದನು:
“ಈ ಉತ್ತರನು ಯುದ್ಧದಲ್ಲಿ ಮಹಾರಥರನ್ನು ಗೆದ್ದರೆ ನಾನು ಆ ದಿವ್ಯ ಸುಂದರ ವಸ್ತ್ರಗಳನ್ನು ತರುತ್ತೇನೆ.”
ಹೀಗೆ ನುಡಿದು ಶೂರ ಅರ್ಜುನನು ನಾನಾಧ್ವಜ ಪತಾಕೆಗಳಿಂದ ಕೂಡಿದ ಕುರುಸೇನೆಗೆ ಅಭಿಮುಖವಾಗಿ ಕುದುರೆಗಳನ್ನು ಪ್ರಚೋದಿಸಿದನು. ಆ ವಿರಾಟಪುತ್ರ ಭೂಮಿಂಜಯನು ರಾಜಧಾನಿಯಿಂದ ಹೊರಟು, “ಕೌರವರು ಹೋಗಿರುವ ಕಡೆ ನಡೆ!” ಎಂದು ಸೂತನಿಗೆ ಹೇಳಿ ಈ ಮಾತನ್ನಾಡದನು:
ಸಮವೇತಾನ್ಕುರೂನ್ಯಾವಜ್ಜಿಗೀಷೂನವಜಿತ್ಯ ವೈ|
ಗಾಶ್ಚೈಷಾಂ ಕ್ಷಿಪ್ರಮಾದಾಯ ಪುನರಾಯಾಮಿ ಸ್ವಂ ಪುರಂ||
“ಜಯಾಕಾಂಕ್ಷೆಯಿಂದ ನೆರೆದಿರುವ ಕೌರವರನ್ನು ಗೆದ್ದು ಗೋವುಗಳನ್ನು ತೆಗೆದುಕೊಂಡು ಬೇಗನೆ ಪಟ್ಟಣಕ್ಕೆ ಹಿಂದಿರುಗುತ್ತೇನೆ.”
ಉತ್ತರನ ಪಲಾಯನ
ಬಳಿಕ ಅರ್ಜುನನು ಆ ಉತ್ತಮ ಕುದುರೆಗಳನ್ನು ಪ್ರಚೋದಿಸಿದನು. ಕಾಂಚನಮಾಲೆಗಳನ್ನು ಧರಿಸಿದ್ದ ವಾಯುವೇಗದ ಕುದುರೆಗಳು ಆ ನರಶ್ರೇಷ್ಠನಿಂದ ಪ್ರಚೋದಿತಗೊಂಡು ಆಕಾಶವನ್ನು ತೀಡುತ್ತಾ ಅವರನ್ನು ಹೊತ್ತೊಯ್ದವು. ಅನಂತರ ಶತ್ರುನಾಶಕ ಉತ್ತರ-ಧನಂಜಯರು ಸ್ವಲ್ಪ ದೂರ ಹೋಗಿ ಬಲಶಾಲಿ ಕುರುಸೇನೆಯನ್ನು ಕಂಡರು. ಆಮೇಲೆ, ಶ್ಮಶಾನಾಭಿಮುಖವಾಗಿ ಸಾಗಿ ಕುರುಗಳನ್ನು ಸಮೀಪಿಸಿದರು. ಸಾಗರ ಘೋಷವುಳ್ಳ ಅವರ ಆ ಮಹಾಸೇನೆಯು ಆಕಾಶದಲ್ಲಿ ಚಲಿಸುವ ವೃಕ್ಷಸಮೃದ್ಧ ವನದಂತೆ ಶೋಭಿಸುತ್ತಿತ್ತು. ನರಶ್ರೇಷ್ಠ! ಅದರ ಚಲನೆಯಿಂದುಂಟಾದ ನೆಲದ ಧೂಳು ಪ್ರಾಣಿಗಳ ಕಣ್ಣನ್ನು ಕುರುಡು ಮಾಡಿ ಮೇಲೆದ್ದು ಆಕಾಶವನ್ನು ಮುಟ್ಟುವಂತೆ ಕಂಡಿತು. ಆನೆ, ಕುದುರೆ ಮತ್ತು ರಥಗಳಿಂದ ತುಂಬಿದ, ಕರ್ಣ, ದುರ್ಯೋಧನ, ಕೃಪ, ಭೀಷ್ಮರಿಂದಲೂ, ಪುತ್ರಸಹಿತನಾಗಿದ್ದ ಮಹಾಧನುರ್ಧರ ಧೀಮಂತ ದ್ರೋಣನಿಂದಲೂ ರಕ್ಷಿತವಾದ ಆ ಮಹಾಸೈನ್ಯವನ್ನು ಕಂಡು ಉತ್ತರನು ರೋಮಾಂಚಿತನೂ ಭಯೋದ್ವಿಗ್ನನೂ ಆಗಿ ಪಾರ್ಥನಿಗೆ ಹೇಳಿದನು:
ನೋತ್ಸಹೇ ಕುರುಭಿರ್ಯೋದ್ಧುಂ ರೋಮಹರ್ಷಂ ಹಿ ಪಶ್ಯ ಮೇ|
ಬಹುಪ್ರವೀರಮತ್ಯುಗ್ರಂ ದೇವೈರಪಿ ದುರಾಸದಂ|
ಪ್ರತಿಯೋದ್ಧುಂ ನ ಶಕ್ಷ್ಯಾಮಿ ಕುರುಸೈನ್ಯಮನಂತಕಂ||
ನಾಶಂಸೇ ಭಾರತೀಂ ಸೇನಾಂ ಪ್ರವೇಷ್ಟುಂ ಭೀಮಕಾರ್ಮುಕಾಂ|
ರಥನಾಗಾಶ್ವಕಲಿಲಾಂ ಪತ್ತಿಧ್ವಜಸಮಾಕುಲಾಂ|
ದೃಷ್ಟ್ವೈವ ಹಿ ಪರಾನಾಜಾವಾತ್ಮಾ ಪ್ರವ್ಯಥತೀವ ಮೇ||
ಯತ್ರ ದ್ರೋಣಶ್ಚ ಭೀಷ್ಮಶ್ಚ ಕೃಪಃ ಕರ್ಣೋ ವಿವಿಂಶತಿಃ|
ಅಶ್ವತ್ಥಾಮಾ ವಿಕರ್ಣಶ್ಚ ಸೋಮದತ್ತೋಽಥ ಬಾಹ್ಲಿಕಃ||
ದುರ್ಯೋಧನಸ್ತಥಾ ವೀರೋ ರಾಜಾ ಚ ರಥಿನಾಂ ವರಃ|
ದ್ಯುತಿಮಂತೋ ಮಹೇಷ್ವಾಸಾಃ ಸರ್ವೇ ಯುದ್ಧವಿಶಾರದಾಃ||
ದೃಷ್ಟ್ವೈವ ಹಿ ಕುರೂನೇತಾನ್ವ್ಯೂಢಾನೀಕಾನ್ಪ್ರಪ್ರಹಾರಿಣಃ|
ಹೃಷಿತಾನಿ ಚ ರೋಮಾಣಿ ಕಶ್ಮಲಂ ಚಾಗತಂ ಮಮ||
“ಕುರುಗಳೊಡನೆ ನಾನು ಕಾದಲಾರೆ! ನನ್ನ ಶರೀರದ ರೋಮಾಂಚನವನ್ನು ನೋಡು. ಬಹುವೀರರಿಂದ ಕೂಡಿದ, ದೇವತೆಗಳಿಗೂ ಎದುರಿಸಲಾಗದ ಈ ಅತ್ಯುಗ್ರ ಅನಂತ ಕುರುಸೇನೆಯೊಂದಿಗೆ ನಾನು ಹೋರಾಡಲಾರೆ! ಭಯಂಕರ ಬಿಲ್ಲುಗಳನ್ನು ಹಿಡಿದ, ಆನೆ, ಕುದುರೆ ಮತ್ತು ರಥಗಳಿಂದ ತುಂಬಿದ, ಪದಾತಿ ಮತ್ತು ಧ್ವಜಗಳಿಂದ ಕೂಡಿದ ಭಾರತಸೇನೆಯನ್ನು ನಾನು ಪ್ರವೇಶಿಸಲಾರೆ. ಯುದ್ಧರಂಗದಲ್ಲಿ ವೈರಿಗಳನ್ನು ನೋಡಿಯೇ ನನ್ನ ಜೀವ ನಡುಗುತ್ತಿದೆ. ಅಲ್ಲಿರುವ ದ್ರೋಣ, ಭೀಷ್ಮ, ಕೃಪ, ಕರ್ಣ, ವಿವಿಂಶತಿ, ಅಶ್ವತ್ಥಾಮ, ವಿಕರ್ಣ, ಸೋಮದತ್ತ, ಬಾಹ್ಲೀಕ, ರಥಿಕಶ್ರೇಷ್ಠ ವೀರರಾಜ ದುರ್ಯೋಧನ - ಈ ಎಲ್ಲರೂ ಹೊಳೆಯುವ ಮಹಾಧನುರ್ಧರರು ಮತ್ತು ಯುದ್ಧ ವಿಶಾರದರು. ಯುದ್ಧಸನ್ನದ್ಧರಾದ ಈ ಕುರುಯೋಧರನ್ನು ನೋಡಿಯೇ ನನಗೆ ರೋಮಾಂಚನವಾಗಿದೆ. ನನಗೆ ಮೂರ್ಛೆ ಬಂದಂತೆ ಆಗುತ್ತಿದೆ.”
ಆ ಹೇಡಿ ಮಂದಬುದ್ಧಿ ಉತ್ತರನು ಧೃಷ್ಟ ಧೈರ್ಯಶಾಲಿ ಸವ್ಯಸಾಚಿಯ ಎದಿರು ಮೂರ್ಖತನದಿಂದ ಪ್ರಲಾಪಿಸತೊಡಗಿದನು.
ತ್ರಿಗರ್ತಾನ್ಮೇ ಪಿತಾ ಯಾತಃ ಶೂನ್ಯೇ ಸಂಪ್ರಣಿಧಾಯ ಮಾಂ|
ಸರ್ವಾಂ ಸೇನಾಮುಪಾದಾಯ ನ ಮೇ ಸಂತೀಹ ಸೈನಿಕಾಃ||
ಸೋಽಹಮೇಕೋ ಬಹೂನ್ಬಾಲಃ ಕೃತಾಸ್ತ್ರಾನಕೃತಶ್ರಮಃ|
ಪ್ರತಿಯೋದ್ಧುಂ ನ ಶಕ್ಷ್ಯಾಮಿ ನಿವರ್ತಸ್ವ ಬೃಹನ್ನಡೇ||
“ನನ್ನ ತಂದೆಯು ಸೇನೆಯನ್ನು ತೆಗೆದುಕೊಂಡು ಶೂನ್ಯ ನಗರದಲ್ಲಿ ನನ್ನನ್ನಿರಿಸಿ ತ್ರಿಗರ್ತರನ್ನು ಎದುರಿಸಲು ಹೊರಟುಹೋದನು. ನನಗಿಲ್ಲಿ ಸೈನಿಕರಿಲ್ಲ. ಬೃಹನ್ನಡೇ! ಏಕಾಂಗಿಯೂ ಅಸ್ತ್ರಪರಿಶ್ರಮವಿಲ್ಲದ ಬಾಲಕನೂ ಆದ ನಾನು ಅಸ್ತ್ರವಿಶಾರದ ಬಹುಯೋಧರೊಡನೆ ಕಾದಲಾರೆ. ಆದ್ದರಿಂದ ರಥವನ್ನು ಹಿಂದಿರುಗಿಸು.”
ಅರ್ಜುನನು ಹೇಳಿದನು:
“ಭಯದಿಂದ ದೀನರೂಪಿಯಾಗಿ ಶತ್ರುಗಳ ಹರ್ಷವನ್ನು ಹೆಚ್ಚಿಸುತ್ತಿರುವೆ. ರಣರಂಗದಲ್ಲಿ ಶತ್ರುಗಳು ಇನ್ನೂ ಏನನ್ನೂ ಮಾಡಿಯೇ ಇಲ್ಲ. ನನ್ನನ್ನು ಕೌರವರೆಡೆಗೆ ಕರೆದುಕೊಂಡು ಹೋಗು ಎಂದು ನನಗೆ ಹೇಳಿದವನು ನೀನೆ. ಅಸಂಖ್ಯ ಧ್ವಜಗಳಿರುವಡೆಗೆ ನಾನು ನಿನ್ನನ್ನು ಒಯ್ಯುವೆನು. ಮಹಾಬಾಹೋ! ಮಾಂಸಕ್ಕಾಗಿ ಬಾಯಿಬಿಡುವ ಹದ್ದುಗಳಾಗಿ ಭೂಮಿಯಲ್ಲಿ ನಿಂತು ಯುದ್ಧಮಾಡುತ್ತಿರುವ ಪಾಪಿಷ್ಟ ಕೌರವರ ನಡುವೆ ನಿನ್ನನ್ನು ಒಯ್ಯುವೆನು. ಹಾಗೆ ಸ್ತ್ರೀಯರ ಮುಂದೆ ಪ್ರತಿಜ್ಞೆಮಾಡಿ ಪುರುಷರ ಮುಂದೆ ಪೌರುಷವನ್ನು ಕೊಚ್ಚಿಕೊಂಡು ಹೊರಟುಬಂದು ಈಗ ನೀನು ಏಕೆ ಯುದ್ಧಮಾಡಬಯಸದಿರುವೆ? ವೀರ! ಆ ಗೋವುಗಳನ್ನು ಗೆಲ್ಲದೇ ನೀನು ಮನೆಗೆ ಮರಳಿದರೆ ಸ್ತ್ರೀಯರೂ ಪುರುಷರೂ ಒಟ್ಟುಗೂಡಿ ನಿನ್ನನ್ನು ಅಪಹಾಸ್ಯಮಾಡುತ್ತಾರೆ. ಸಾರಥ್ಯಕಾರ್ಯದಲ್ಲಿ ಸೈರಂಧ್ರಿಯಿಂದ ಹೊಗಳಿಸಿಕೊಂಡ ಈ ನಾನು ಕೂಡ ಗೋವುಗಳನ್ನು ಗೆದ್ದುಕೊಳ್ಳದೆ ಪುರಕ್ಕೆ ಹಿಂದಿರುಗಲಾರೆ. ಸೈರಂಧ್ರಿಯ ಸ್ತುತಿಯಿಂದ ಮತ್ತು ನಿನ್ನ ಆ ಮಾತಿನಿಂದ ಪ್ರೇರಿತನಾಗಿರುವ ನಾನು ಎಲ್ಲ ಕುರುಗಳೊಡನೆ ಹೇಗೆ ಹೋರಾಡದಿರಲಿ? ನೀನು ಸ್ಥಿರನಾಗು.”
ಉತ್ತರನು ಹೇಳಿದನು:
ಕಾಮಂ ಹರಂತು ಮತ್ಸ್ಯಾನಾಂ ಭೂಯಾಂಸಂ ಕುರವೋ ಧನಂ|
ಪ್ರಹಸಂತು ಚ ಮಾಂ ನಾರ್ಯೋ ನರಾ ವಾಪಿ ಬೃಹನ್ನಡೇ||
“ಬೃಹನ್ನಡೇ! ಬೇಕಾದರೆ ಕುರುಗಳು ಮತ್ಸ್ಯರ ವಿಪುಲ ಧನವನ್ನು ಒಯ್ಯಲಿ. ನನ್ನನ್ನು ಕುರಿತು ಸ್ತ್ರೀಯರು ಅಥವಾ ಪುರುಷರು ನಗಲಿ.”
ಭೀತನೂ ಮಂದಾತ್ಮನೂ ಆದ ಅ ಕುಂಡಲಧಾರಿಯು ಹೀಗೆ ಹೇಳಿ, ಮಾನವನ್ನು ತೊರೆದು, ಬಾಣಸಹಿತ ಬಿಲ್ಲನ್ನು ಬಿಸುಟು, ರಥದಿಂದ ಧುಮುಕಿ ಓಡತೊಡಗಿದನು. ಆಗ ಬ್ರಹನ್ನಡೆಯು ಹೇಳಿದಳು:
“ಪಲಾಯನವು ಕ್ಷತ್ರಿಯನ ಧರ್ಮವೆಂದು ಹಿಂದಿನವರು ವಿಧಿಸಿಲ್ಲ. ಯುದ್ಧದಲ್ಲಿ ಮರಣಹೊಂದುವುದು ನಿನಗೆ ಶ್ರೇಯಸ್ಕರ; ಭೀತಿಯಿಂದ ಪಲಾಯನಮಾಡುವುದಲ್ಲ!””
ಕೌಂತೇಯ ಧನಂಜಯನು ಹೀಗೆ ನುಡಿದು ತನ್ನ ನೀಳ ಜಡೆಯೂ ಕೆಂಪುವಸ್ತ್ರಗಳೂ ಹಾರಾಡುತ್ತಿರಲು, ಉತ್ತಮ ರಥದಿಂದ ನೆಗೆದು ಓಡಿಹೋಗುತ್ತಿದ್ದ ಆ ರಾಜಕುಮಾರನನ್ನು ಬೆನ್ನಟ್ಟಿದನು. ಧನಂಜಯನು ಓಡಿಹೋಗುತ್ತಿದ್ದ ಉತ್ತರನನ್ನು ಬೆನ್ನುಹತ್ತಿ ನೂರು ಹೆಜ್ಜೆ ಹೋಗಿ ಅವನ ಜುಟ್ಟನ್ನು ಹಿಡಿದುಕೊಂಡನು. ಅರ್ಜುನನು ಹಿಡಿದ ಉತ್ತರನು ಆಗ ಆರ್ತನಂತೆ ದೀನನಾಗಿ ಬಹುವಾಗಿ ಪ್ರಲಾಪಿಸತೊಡಗಿದನು.
ಶಾತಕುಂಭಸ್ಯ ಶುದ್ಧಸ್ಯ ಶತಂ ನಿಷ್ಕಾನ್ದದಾಮಿ ತೇ|
ಮಣೀನಷ್ಟೌ ಚ ವೈಡೂರ್ಯಾನ್ ಹೇಮಬದ್ಧಾನ್ಮಹಾಪ್ರಭಾನ್||
ಹೇಮದಂಡಪ್ರತಿಚ್ಛನ್ನಂ ರಥಂ ಯುಕ್ತಂ ಚ ಸುವ್ರಜೈಃ|
ಮತ್ತಾಂಶ್ಚ ದಶ ಮಾತಂಗಾನ್ಮುಂಚ ಮಾಂ ತ್ವಂ ಬೃಹನ್ನಡೇ||
“ಶುದ್ಧ ಚಿನ್ನದ ನೂರು ನಾಣ್ಯಗಳನ್ನೂ, ಸುವರ್ಣಖಚಿತ ಮಹಾಪ್ರಕಾಶದ ಎಂಟು ವೈಢೂರ್ಯ ಮಣಿಗಳನ್ನೂ, ಚಿನ್ನದ ದಂಡವುಳ್ಳ ವೇಗದ ಕುದುರೆಗಳನ್ನು ಹೂಡಿದ ರಥವನ್ನೂ, ಹತ್ತು ಮದಗಜಗಳನ್ನೂ ನಿನಗೆ ಕೊಡುತ್ತೇನೆ. ನನ್ನನ್ನು ಬಿಟ್ಟುಬಿಡು ಬೃಹನ್ನಡೇ!”
ಇವೇ ಮುಂತಾದ ಮಾತುಗಳನ್ನು ಎಚ್ಚರತಪ್ಪಿ ಆಡುತ್ತಿದ್ದ ಆ ಉತ್ತರನನ್ನು ಆ ಪುರುಷಶ್ರೇಷ್ಠನು ನಗುತ್ತಾ ರಥದ ಬಳಿಗೆ ತಂದನು. ಬಳಿಕ ಪಾರ್ಥನು ಭಯಾರ್ತನೂ ಪ್ರಜ್ಞಾಹೀನನೂ ಆದ ಉತ್ತರನಿಗೆ ಹೀಗೆಂದನು:
“ಶತ್ರುನಾಶಕ! ಶತ್ರುಗಳೊಡನೆ ನೀನು ಕಾದಲಾರೆಯಾದರೆ ಬಾ. ನನ್ನ ಕುದುರೆಗಳನ್ನು ನಡೆಸು. ಶತ್ರುಗಳೊಡನೆ ನಾನು ಹೋರಾಡುತ್ತೇನೆ. ನನ್ನ ಬಾಹುಬಲದ ರಕ್ಷಣೆಯನ್ನು ಪಡೆದು ಅತ್ಯಂತ ಅದಮ್ಯವೂ ಘೋರವೂ ಮಹಾರಥಿ ವೀರರಿಂದ ರಕ್ಷಿತವೂ ಆದ ಈ ರಥಸೇನೆಯೊಳಗೆ ನುಗ್ಗು! ಹೆದರಬೇಡ! ನೀನು ಕ್ಷತ್ರಿಯನಾಗಿರುವೆ. ನಾನು ಕುರುಗಳೊಡನೆ ಯುದ್ಧಮಾಡಿ ನಿನ್ನ ಹಸುಗಳನ್ನು ಗೆದ್ದುಕೊಡುವೆನು. ಈ ಅಜೇಯ ಅಸಾಧ್ಯ ರಥಸೈನ್ಯವನ್ನು ಹೊಕ್ಕು ನಾನು ಕುರುಗಳೊಡನೆ ಕಾದುತ್ತೇನೆ. ನೀನು ನನಗೆ ಸಾರಥಿಯಾಗು!”
ಆ ಅಪರಾಜಿತ ಯೋಧಶ್ರೇಷ್ಠ ಕುಂತೀಪುತ್ರ ಅರ್ಜುನನು ವಿರಾಟಪುತ್ರ ಉತ್ತರನಿಗೆ ಹೀಗೆ ನುಡಿಯುತ್ತ ಅವನನ್ನು ಮುಹೂರ್ತಕಾಲದಲ್ಲಿ ಸಮಾಧಾನಪಡಿಸಿ ಭಯಪೀಡಿತನಾಗಿ, ಯುದ್ಧದ ಆಸೆಯಿಲ್ಲದೇ ಪರದಾಡುತ್ತಿದ್ದ ಅವನನ್ನು ಎತ್ತಿ ರಥದಲ್ಲೇರಿಸಿದನು.
ಉತ್ತರನಿಗೆ ಪಾಂಡವರ ಆಯುಧ ದರ್ಶನ
ಅರ್ಜುನು ಉತ್ತರನನ್ನು ರಥದ ಮೇಲೆ ಕುಳ್ಳಿರಿಸಿಕೊಂಡು ಬನ್ನೀಮರವನ್ನು ತಲುಪಿ ಉತ್ತರನು ಸುಕುಮಾರನೆಂದೂ ಯುದ್ಧದಲ್ಲಿ ಬಹಳ ಕೋವಿದನಲ್ಲವೆಂದೂ ಅರಿತು ಆ ವಿರಾಟಪುತ್ರನಿಗೆ ನುಡಿದನು:
“ಉತ್ತರ! ನನ್ನ ಆದೇಶದಂತೆ ನೀನು ಬಿಲ್ಲುಗಳನ್ನು ಬೇಗ ಮರದಿಂದ ತೆಗೆದು ಕೊಂಡು ಬಾ. ನಿನ್ನ ಈ ಬಿಲ್ಲುಗಳು ನನ್ನ ಬಲವನ್ನು ತಡೆದುಕೊಳ್ಳಲು ಶಕ್ತವಾಗಿಲ್ಲ. ಇವು ಶತ್ರುಗಳನ್ನು ಗೆಲ್ಲುವಾಗ ಮಹಾಭಾರವನ್ನು ಹೊರಲಾಗಲಿ ಆನೆಯನ್ನು ಕೊಲ್ಲಲಾಗಲೀ ನನ್ನ ತೋಳುಬೀಸನ್ನಾಗಲೀ ತಾಳಿಕೊಳ್ಳಲು ಸಮರ್ಥವಲ್ಲ. ಆದ್ದರಿಂದ ದಟ್ಟ ಎಲೆಗಳಿರುವ ಈ ಬನ್ನಿಮರವನ್ನು ಹತ್ತು. ಇದರಲ್ಲಿ ಶೂರ ಪಾಂಡುಪುತ್ರರ - ಯುಧಿಷ್ಠಿರ, ಭೀಮ, ಅರ್ಜುನ ಮತ್ತು ಯಮಳರ - ಬಿಲ್ಲು, ಬಾಣ, ಬಾವುಟ ಹಾಗೂ ದಿವ್ಯ ಕವಚಗಳನ್ನು ಅಡಗಿಸಿಡಲಾಗಿದೆ. ಅಲ್ಲಿ ಮಹಾಸತ್ವವುಳ್ಳ, ಒಂದೇ ಆದರೂ ಲಕ್ಷಬಿಲ್ಲುಗಳಿಗೆ ಸಮನಾದ, ರಾಷ್ಟ್ರವರ್ಧನಕರವಾದ ಪಾರ್ಥನ ಗಾಂಡೀವಧನುವಿದೆ. ಅದು ಒತ್ತಡವನ್ನು ಚೆನ್ನಾಗಿ ತಡೆದುಕೊಳ್ಳಬಲ್ಲದು. ತಾಳೆ ಮರದಂತೆ ದೊಡ್ಡದು. ಎಲ್ಲ ಆಯುಧಗಳಿಗಿಂತಲೂ ಬೃಹತ್ತಾದದು, ಶತ್ರುಗಳಿಗೆ ಬಾಧೆಯುಂಟು ಮಾಡುವಂಥದು. ಸುವರ್ಣಖಚಿತ, ದಿವ್ಯ, ನುಣುಪಾದ, ವಿಸ್ತಾರವಾದ, ಗಂಟಿಲ್ಲದ, ದೊಡ್ಡ ಭಾರವನ್ನು ಸಹಿಸಿಕೊಳ್ಳುವಂಥ, ವೈರಿಗಳಿಗೆ ಭಯಂಕರವಾದ, ನೋಡುವುದಕ್ಕೆ ಸುಂದರವಾದ ಅದರಂತೆಯೇ ಉಳಿದವರ ಎಲ್ಲ ಬಿಲ್ಲುಗಳೂ ಬಲ ಮತ್ತು ದೃಢತೆಯನ್ನುಳ್ಳವು.”
ಉತ್ತರನು ಹೇಳಿದನು:
ಅಸ್ಮಿನ್ವೃಕ್ಷೇ ಕಿಲೋದ್ಬದ್ಧಂ ಶರೀರಮಿತಿ ನಃ ಶ್ರುತಂ|
ತದಹಂ ರಾಜಪುತ್ರಃ ಸನ್ಸ್ಪೃಶೇಯಂ ಪಾಣಿನಾ ಕಥಂ||
ನೈವಂವಿಧಂ ಮಯಾ ಯುಕ್ತಮಾಲಬ್ಧುಂ ಕ್ಷತ್ರಯೋನಿನಾ|
ಮಹತಾ ರಾಜಪುತ್ರೇಣ ಮಂತ್ರಯಜ್ಞವಿದಾ ಸತಾ||
ಸ್ಪೃಷ್ಟವಂತಂ ಶರೀರಂ ಮಾಂ ಶವವಾಹಮಿವಾಶುಚಿಂ|
ಕಥಂ ವಾ ವ್ಯವಹಾರ್ಯಂ ವೈ ಕುರ್ವೀಥಾಸ್ತ್ವಂ ಬೃಹನ್ನಡೇ||
“ಈ ಮರಕ್ಕೆ ಒಂದು ಮೃತಶರೀರವನ್ನು ಕಟ್ಟಲಾಗಿದೆಯೆಂದು ಕೇಳಿದ್ದೇನೆ. ಆದ್ದರಿಂದ ರಾಜಪುತ್ರನಾದ ನಾನು ಅದನ್ನೆಂತು ಕೈಯಿಂದ ಮುಟ್ಟಲಿ? ಕ್ಷತ್ರಿಯನಾಗಿ ಹುಟ್ಟಿದ, ಮಹಾರಾಜಪುತ್ರ, ಮಂತ್ರಯಜ್ಞವಿದ, ಸತ್ಪುರುಷನಾದ ನಾನು ಹೀಗೆ ಶವವನ್ನು ಮುಟ್ಟುವುದು ಸರಿಯಲ್ಲ. ಬೃಹನ್ನಡೇ! ಮೃತಶರೀರವನ್ನು ನಾನು ಮುಟ್ಟಿದರೆ ಶವವಾಹಕನಂತೆ ಅಶುಚಿಯಾದ ನನ್ನೊಡನೆ ಹೇಗೆ ತಾನೆ ನೀನು ವ್ಯವಹರಿಸೀಯೆ?”
ಬೃಹನ್ನಡೆಯು ಹೇಳಿದಳು:
“ರಾಜೇಂದ್ರ! ವ್ಯವಹರಿಸಲು ಯೋಗ್ಯನೂ ಆಗುವೆ; ಶುಚಿಯಾಗಿಯೂ ಉಳಿಯುವೆ. ಹೆದರಬೇಡ! ಇವು ಬಿಲ್ಲುಗಳು. ಇಲ್ಲಿ ಮೃತಶರೀರವಿಲ್ಲ. ರಾಜಪುತ್ರ! ಮತ್ಸ್ಯರಾಜನ ಉತ್ತರಾಧಿಕಾರಿಯೂ ಉನ್ನತ ಕುಲದಲ್ಲಿ ಹುಟ್ಟಿದ ದೃಢಮನಸ್ಕನೂ ಆದ ನಿನ್ನಿಂದ ನಾನು ನಿಂದ್ಯವಾದ ಈ ಕಾರ್ಯವನ್ನೇಕೆ ಮಾಡಿಸಲಿ?”
ಪಾರ್ಥನು ಹೀಗೆ ಹೇಳಲು ಕುಂಡಲಧಾರಿ ಆ ವಿರಾಟಪುತ್ರನು ರಥದಿಂದಿಳಿದು ವಿವಶನಾಗಿ ಶಮೀವೃಕ್ಷವನ್ನು ಹತ್ತಿದನು. ಶತ್ರುನಾಶಕ ಧನಂಜಯನು ರಥದಲ್ಲಿ ಕುಳಿತು “ಆ ಕಟ್ಟನ್ನು ಬೇಗ ಬಿಚ್ಚು!” ಎಂದು ಆಜ್ಞಾಪಿಸಿದನು. ಉತ್ತರನು ಅಂತೆಯೇ ಅವುಗಳ ಕಟ್ಟುಗಳನ್ನು ಸುತ್ತಲೂ ಬಿಚ್ಚಿ, ಅಲ್ಲಿ ಬೇರೆ ನಾಲ್ಕು ಬಿಲ್ಲುಗಳೊಡನೆ ಇದ್ದ ಗಾಂಡೀವವನ್ನು ನೋಡಿದನು. ಕಟ್ಟನ್ನು ಕಳಚುತ್ತಿರಲು, ಸೂರ್ಯತೇಜಸ್ಸುಗಳನ್ನುಳ್ಳ ಆ ಬಿಲ್ಲುಗಳ ದಿವ್ಯಪ್ರಭೆ ಗ್ರಹಗಳ ಉದಯಕಾಲದ ಪ್ರಭೆಯಂತೆ ಹೊಮ್ಮಿತು. ವಿಜೃಂಭಿಸುವ ಸರ್ಪಗಳ ರೂಪದಂತಹ ಅವುಗಳ ರೂಪವನ್ನು ಕಂಡ ಅವನು ಕ್ಷಣಮಾತ್ರದಲ್ಲಿ ರೋಮಾಂಚನಗೊಂಡು ಭಯೋದ್ವಿಗ್ನನಾದನು. ಹೊಳೆಹೊಳೆಯುತ್ತಿದ್ದ ಆ ದೊಡ್ಡ ಬಿಲ್ಲುಗಳನ್ನು ಉತ್ತರನು ಮುಟ್ಟಿ ಪ್ರತಿಯೊಂದನ್ನೂ ವರ್ಣಿಸುತ್ತಾ “ಇದು ಯಾರದ್ದು? ಇದು ಯಾರದ್ದು” ಎಂದು ಕೇಳಲು ಬೃಹನ್ನಡೆಯು ಪಾಂಡವರ ಪ್ರತಿಯೊಂದು ಆಯುಧವನ್ನೂ ಯಾರದ್ದೆಂದು ಉತ್ತರನಿಗೆ ಪರಿಚಯಿಸಿದಳು.
ಅನಂತರ ಅರ್ಜುನನು ವೇಷಮರೆಸಿಕೊಂಡು ಅಜ್ಞಾತವಾಸ ಮಾಡುತ್ತಿದ್ದ ತನ್ನ, ಸಹೋದರರ ಮತ್ತು ದ್ರೌಪದಿಯ ಕುರುಹನ್ನು ಉತ್ತರನಿಗೆ ಹೇಳುತ್ತಾನೆ. ಅದನ್ನು ನಂಬದೇ ಕೇಳಿದ ಉತ್ತರನಿಗೆ ಬೃಹನ್ನಡೆಯು ಅರ್ಜುನನಿಗಿರುವ ಹತ್ತು ಹೆಸರುಗಳನ್ನೂ ಅವುಗಳ ಅರ್ಥದೊಂದಿಗೆ ವಿವರಿಸಿದನು. ಬಳಿಕ ಆ ವಿರಾಟಪುತ್ರನು ಪಾರ್ಥನನ್ನು ಸಮೀಪಿಸಿ ಅಭಿವಾದನ ಮಾಡಿ ಹೇಳಿದನು:
ಅಹಂ ಭೂಮಿಂಜಯೋ ನಾಮ ನಾಂನಾಹಮಪಿ ಚೋತ್ತರಃ||
ದಿಷ್ಟ್ಯಾ ತ್ವಾಂ ಪಾರ್ಥ ಪಶ್ಯಾಮಿ ಸ್ವಾಗತಂ ತೇ ಧನಂಜಯ|
ಲೋಹಿತಾಕ್ಷ ಮಹಾಬಾಹೋ ನಾಗರಾಜಕರೋಪಮ|
ಯದಜ್ಞಾನಾದವೋಚಂ ತ್ವಾಂ ಕ್ಷಂತುಮರ್ಹಸಿ ತನ್ಮಮ||
ಯತಸ್ತ್ವಯಾ ಕೃತಂ ಪೂರ್ವಂ ವಿಚಿತ್ರಂ ಕರ್ಮ ದುಷ್ಕರಂ|
ಅತೋ ಭಯಂ ವ್ಯತೀತಂ ಮೇ ಪ್ರೀತಿಶ್ಚ ಪರಮಾ ತ್ವಯಿ||
ಆಸ್ಥಾಯ ವಿಪುಲಂ ವೀರ ರಥಂ ಸಾರಥಿನಾ ಮಯಾ|
ಕತಮಂ ಯಾಸ್ಯಸೇಽನೀಕಮುಕ್ತೋ ಯಾಸ್ಯಾಮ್ಯಹಂ ತ್ವಯಾ||
“ನಾನು ಭೂಮಿಂಜಯ. ಉತ್ತರನೆಂಬ ಹೆಸರೂ ನನಗುಂಟು. ಪಾರ್ಥ! ಅದೃಷ್ಟವಶಾತ್ ನಾನು ನಿನ್ನನ್ನು ನೋಡುತ್ತಿದ್ದೇನೆ. ಧನಂಜಯ! ನಿನಗೆ ಸ್ವಾಗತ! ಕೆಂಪು ಕಣ್ಣುಳ್ಳವನೇ! ಗಜರಾಜನ ಸೊಂಡಿಲಿನಂಥ ಮಹಾಬಾಹುಗಳುಳ್ಳವನೇ! ಅಜ್ಞಾನದಿಂದ ನಾನು ನಿನ್ನ ಬಗ್ಗೆ ನುಡಿದುದನ್ನು ಕ್ಷಮಿಸು. ನೀನು ಹಿಂದೆ ಅದ್ಭುತವೂ ದುಷ್ಕರವೂ ಆದ ಕಾರ್ಯಗಳನ್ನು ಮಾಡಿದ್ದವನಾದ್ದರಿಂದ ನನ್ನ ಹೆದರಿಕೆ ಕಳೆಯಿತು. ನಿನ್ನಲ್ಲಿ ನನಗೆ ಪರಮ ಪ್ರೀತಿಯುಂಟಾಗಿದೆ. ವೀರ! ನಾನು ಸಾರಥಿಯಾಗಿರುವ ಈ ದೊಡ್ಡ ರಥದಲ್ಲಿ ಕುಳಿತು ನೀನು ಯಾವ ಸೈನ್ಯದತ್ತ ಹೋಗಬಯಸಿ ಹೇಳುತ್ತೀಯೋ ಅಲ್ಲಿಗೆ ನಿನ್ನನ್ನು ಒಯ್ಯುತ್ತೇನೆ.”
ಅರ್ಜುನನು ಹೇಳಿದನು:
“ಪುರುಷಶ್ರೇಷ್ಠ! ನಿನ್ನ ವಿಷಯದಲ್ಲಿ ಸಂತುಷ್ಟನಾಗಿದ್ದೇನೆ. ನಿನಗಿನ್ನು ಭಯವಿಲ್ಲ. ಯುದ್ಧವಿಶಾರದನೇ! ರಣದಲ್ಲಿ ನಿನ್ನ ವೈರಿಗಳನ್ನು ಓಡಿಸಿಬಿಡುತ್ತೇನೆ. ಸ್ವಸ್ಥನಾಗಿರು. ನಾನು ಈ ಯುದ್ಧದಲ್ಲಿ ಬಯಂಕರವೂ ಮಹತ್ತೂ ಆದುದನ್ನು ಸಾಧಿಸುತ್ತಾ ಶತ್ರುಗಳೊಡನೆ ಹೋರಾಡುವುದನ್ನು ನೋಡು. ಈ ಎಲ್ಲ ಬತ್ತಳಿಕೆಗಳನ್ನೂ ನನ್ನ ರಥಕ್ಕೆ ಬೇಗ ಬಿಗಿ. ಈ ಸುವರ್ಣಖಚಿತ ಕತ್ತಿಯನ್ನು ತೆಗೆದುಕೋ. ನಾನು ಕುರುಗಳೊಡನೆ ಹೋರಾಡುತ್ತೇನೆ. ನಿನ್ನ ಗೋವುಗಳನ್ನು ಗೆದ್ದು ಕೊಡುತ್ತೇನೆ. ನಿನ್ನ ನಗರವು ಈ ರಥದ ಮಧ್ಯಭಾಗದಲ್ಲಿ ಇದೆಯೋ ಎಂಬಂತೆ ನನ್ನಿಂದ ರಕ್ಷಿತವಾಗಿದೆ. ನನ್ನ ಸಂಕಲ್ಪವೇ ನಗರದ ದಾರಿಗಳು ಮತ್ತು ಓಣಿಗಳು. ಬಾಹುಗಳೇ ಕೋಟೆ ಮತ್ತು ಹೆಬ್ಬಾಗಿಲುಗಳು. ರಥದ ಮೂರು ದಂಡಗಳೇ ಮೂರುಬಗೆಯ ಸೇನೆಗಳು. ಬತ್ತಳಿಕೆಯೇ ರಕ್ಷಣಸಾಮಗ್ರಿ. ನನ್ನ ಈ ಧ್ವಜವೇ ನಗರದ ಧ್ವಜಸಮೂಹ. ಈ ನನ್ನ ಬಿಲ್ಲಿನ ಹೆದೆಯೇ ನಗರ ರಕ್ಷಣೆಯ ಫಿರಂಗಿ. ಶತ್ರುನಾಶಕ ಕೋಪವೇ ದೃಢಚಿತ್ತ ಕಾರ್ಯ. ರಥಚಕ್ರದ ಶಬ್ಧವೇ ನಗರದ ದುಂದುಭಿಗಳು. ಗಾಂಡೀವ ಧನುವನ್ನುಳ್ಳ ನಾನು ಕುಳಿತಿರುವ ಈ ರಥವು ಯುದ್ಧದಲ್ಲಿ ಶತ್ರುಸೇನೆಗೆ ಅಜೇಯವಾದುದು. ನಿನ್ನ ಹೆದರಿಕೆಯು ತೊಲಗಲಿ.”
ಬಿಭೇಮಿ ನಾಹಮೇತೇಷಾಂ ಜಾನಾಮಿ ತ್ವಾಂ ಸ್ಥಿರಂ ಯುಧಿ|
ಕೇಶವೇನಾಪಿ ಸಂಗ್ರಾಮೇ ಸಾಕ್ಷಾದಿಂದ್ರೇಣ ವಾ ಸಮಂ||
ಇದಂ ತು ಚಿಂತಯನ್ನೇವ ಪರಿಮುಹ್ಯಾಮಿ ಕೇವಲಂ|
ನಿಶ್ಚಯಂ ಚಾಪಿ ದುರ್ಮೇಧಾ ನ ಗಚ್ಛಾಮಿ ಕಥಂ ಚನ||
ಏವಂ ವೀರಾಂಗರೂಪಸ್ಯ ಲಕ್ಷಣೈರುಚಿತಸ್ಯ ಚ|
ಕೇನ ಕರ್ಮವಿಪಾಕೇನ ಕ್ಲೀಬತ್ವಮಿದಮಾಗತಂ||
ಮನ್ಯೇ ತ್ವಾಂ ಕ್ಲೀಬವೇಷೇಣ ಚರಂತಂ ಶೂಲಪಾಣಿನಂ|
ಗಂಧರ್ವರಾಜಪ್ರತಿಮಂ ದೇವಂ ವಾಪಿ ಶತಕ್ರತುಂ||
“ಇವರಿಗೆ ನಾನು ಇನ್ನು ಹೆದರುವುದಿಲ್ಲ. ಯುದ್ಧದಲ್ಲಿ ನೀನು ಸ್ಥಿರನೆಂಬುವುದನ್ನು ನಾನು ಬಲ್ಲೆ. ಸಂಗ್ರಾಮದಲ್ಲಿ ನೀನು ಸಾಕ್ಷಾತ್ ಕೇಶವನಿಗೆ ಅಥವಾ ಇಂದ್ರನಿಗೆ ಸಮಾನನೆಂದೂ ಬಲ್ಲೆ. ಆದರೆ ಇದನ್ನು ಆಲೋಚಿಸುತ್ತ ನಾನು ಸಂಪೂರ್ಣ ದಿಗ್ಭ್ರಾಂತನಾಗುತ್ತಿದ್ದೇನೆ. ಮಂದ ಬುದ್ಧಿಯವನಾದ ನಾನು ಯಾವುದೇ ನಿರ್ಧಾರಕ್ಕೆ ಬರಲಾರದವನಾಗಿದ್ದೇನೆ. ಇಂಥಹ ವೀರಾಂಗಗಳಿಂದ ಕೂಡಿದ ರೂಪವುಳ್ಳ ಮತ್ತು ಸುಲಕ್ಷಣಗಳಿಂದ ಶ್ಲಾಘ್ಯನಾದ ನಿನಗೆ ಯಾವ ಕರ್ಮವಿಪಾಕದಿಂದ ಈ ನಪುಂಸಕತ್ವವು ಉಂಟಾಯಿತು? ನಪುಂಸಕ ವೇಶದಲ್ಲಿ ಸಂಚರಿಸುವ ಶೂಲಪಾಣಿಯೆಂದು, ಗಂಧರ್ವರಾಜಸಮಾನನೆಂದು ಅಥವಾ ದೇವೇಂದ್ರನೆಂದು ನಿನ್ನನ್ನು ತಿಳಿಯುತ್ತೇನೆ.”
ಅರ್ಜುನನು ಹೇಳಿದನು:
“ಇದೋ ನಾನು ನಿನಗೆ ಹೇಳುತ್ತಿರುವುದು ಸತ್ಯ. ಅಣ್ಣನ ಆಜ್ಞೆಯಂತೆ ಈ ಬ್ರಹ್ಮಚರ್ಯವ್ರತವನ್ನು ಒಂದು ವರ್ಷಕಾಲ ಆಚರಿಸುತ್ತಿದ್ದೇನೆ. ಮಹಾಬಾಹೋ! ನಾನು ನಪುಂಸಕನಲ್ಲ. ಪರಾಧೀನನಾಗಿ, ಧರ್ಮಯುಕ್ತನಾಗಿ ವ್ರತವನ್ನು ಮುಗಿಸಿ ದಡಮುಟ್ಟಿದ ರಾಜಪುತ್ರನೆಂದು ನೀನು ನನ್ನನ್ನು ತಿಳಿ.”
ಉತ್ತರನು ಅರ್ಜುನನ ಸಾರಥಿಯಾದುದು
ಉತ್ತರನು ಹೇಳಿದನು:
ಪರಮೋಽನುಗ್ರಹೋ ಮೇಽದ್ಯ ಯತ್ಪ್ರತರ್ಕೋ ನ ಮೇ ವೃಥಾ|
ನ ಹೀದೃಶಾಃ ಕ್ಲೀಬರೂಪಾ ಭವಂತೀಹ ನರೋತ್ತಮಾಃ||
ಸಹಾಯವಾನಸ್ಮಿ ರಣೇ ಯುಧ್ಯೇಯಮಮರೈರಪಿ|
ಸಾಧ್ವಸಂ ತತ್ಪ್ರನಷ್ಟಂ ಮೇ ಕಿಂ ಕರೋಮಿ ಬ್ರವೀಹಿ ಮೇ||
ಅಹಂ ತೇ ಸಂಗ್ರಹೀಷ್ಯಾಮಿ ಹಯಾಂ ಶತ್ರುರಥಾರುಜಃ|
ಶಿಕ್ಷಿತೋ ಹ್ಯಸ್ಮಿ ಸಾರಥ್ಯೇ ತೀರ್ಥತಃ ಪುರುಷರ್ಷಭ||
ದಾರುಕೋ ವಾಸುದೇವಸ್ಯ ಯಥಾ ಶಕ್ರಸ್ಯ ಮಾತಲಿಃ|
ತಥಾ ಮಾಂ ವಿದ್ಧಿ ಸಾರಥ್ಯೇ ಶಿಕ್ಷಿತಂ ನರಪುಂಗವ||
ಯಸ್ಯ ಯಾತೇ ನ ಪಶ್ಯಂತಿ ಭೂಮೌ ಪ್ರಾಪ್ತಂ ಪದಂ ಪದಂ|
ದಕ್ಷಿಣಂ ಯೋ ಧುರಂ ಯುಕ್ತಃ ಸುಗ್ರೀವಸದೃಶೋ ಹಯಃ||
ಯೋಽಯಂ ಧುರಂ ಧುರ್ಯವರೋ ವಾಮಂ ವಹತಿ ಶೋಭನಃ|
ತಂ ಮನ್ಯೇ ಮೇಘಪುಷ್ಪಸ್ಯ ಜವೇನ ಸದೃಶಂ ಹಯಂ||
ಯೋಽಯಂ ಕಾಂಚನಸನ್ನಾಹಃ ಪಾರ್ಷ್ಣಿಂ ವಹತಿ ಶೋಭನಃ|
ವಾಮಂ ಸೈನ್ಯಸ್ಯ ಮನ್ಯೇ ತಂ ಜವೇನ ಬಲವತ್ತರಂ||
ಯೋಽಯಂ ವಹತಿ ತೇ ಪಾರ್ಷ್ಣಿಂ ದಕ್ಷಿಣಾಮಂಚಿತೋದ್ಯತಃ|
ಬಲಾಹಕಾದಪಿ ಮತಃ ಸ ಜವೇ ವೀರ್ಯವತ್ತರಃ||
ತ್ವಾಮೇವಾಯಂ ರಥೋ ವೋಢುಂ ಸಂಗ್ರಾಮೇಽರ್ಹತಿ ಧನ್ವಿನಂ|
ತ್ವಂ ಚೇಮಂ ರಥಮಾಸ್ಥಾಯ ಯೋದ್ಧುಮರ್ಹೋ ಮತೋ ಮಮ||
“ನನಗೆ ನೀನಿಂದು ಪರಮಾನುಗ್ರವನ್ನುಂಟುಮಾಡಿರುವೆ. ನನ್ನ ತರ್ಕ ವ್ಯರ್ಥವಾಗಲಿಲ್ಲ. ಇಂತಹ ನರೋತ್ತಮರು ಲೋಕದಲ್ಲಿ ನಪುಂಸಕರೂಪದಲ್ಲಿರುವುದಿಲ್ಲ. ಯುದ್ಧದಲ್ಲಿ ನನಗೆ ನೀನು ಸಹಾಯಮಾಡುತ್ತೀಯೆ. ಈಗ ನಾನು ದೇವತೆಗಳೊಡನೆ ಕೂಡ ಹೋರಾಡಬಲ್ಲೆ. ಆ ನನ್ನ ಹೆದರಿಕೆಯು ಅಳಿದುಹೋಯಿತು. ಮುಂದೆ ಏನು ಮಾಡಲಿ? ನನಗೆ ಹೇಳು. ಶತ್ರುರಥಗಳನ್ನು ಮುರಿಯಬಲ್ಲ ನಿನ್ನ ಕುದುರೆಗಳನ್ನು ನಾನು ಹಿಡಿದುಕೊಳ್ಳುತ್ತೇನೆ. ಪುರುಷಶ್ರೇಷ್ಠ! ಸಾರಥ್ಯದಲ್ಲಿ ನಾನು ಆಚಾರ್ಯನಿಂದ ಶಿಕ್ಷಣ ಪಡೆದಿದ್ದೇನೆ. ನರಶ್ರೇಷ್ಠ! ಸಾರಥ್ಯದಲ್ಲಿ ವಾಸುದೇವನಿಗೆ ದಾರುಕನು ಹೇಗೋ ಇಂದ್ರನಿಗೆ ಮಾತಲಿಯು ಹೇಗೋ ಹಾಗೆ ನಾನು ನಿನಗೆ ಸುಶಿಕ್ಷಿತ ಸಾರಥಿ ಎಂದು ತಿಳಿದುಕೋ. ಬಲಗಡೆಯಲ್ಲಿ ನೊಗಕ್ಕೆ ಕಟ್ಟಿದ ಕುದುರೆ ಸುಗ್ರೀವದಂತಿದೆ. ಅದು ಚಲಿಸುವಾಗ ಹೆಜ್ಜೆಗಳು ಭೂಮಿಯನ್ನು ಸೋಕಿದ್ದು ಕಾಣುವುದಿಲ್ಲ. ರಥದ ಎಡಗಡೆಯ ನೊಗಕ್ಕೆ ಕಟ್ಟಿದ ಸುಂದರವೂ ಕುದುರೆಗಳಲ್ಲಿ ಶ್ರೇಷ್ಠವೂ ಆದ ಇನ್ನೊಂದು ಕುದುರೆ ವೇಗದಲ್ಲಿ ಮೇಘಪುಷ್ಪಕ್ಕೆ ಸಮಾನವಾಗಿದೆಯೆಂದು ಭಾವಿಸುತ್ತೇನೆ. ಸುಂದರ ಚಿನ್ನದ ಕವಚವನ್ನುಳ್ಳ, ಹಿಂಬಾಗದಲ್ಲಿ ಎಡಗಡೆಯಿರುವ ವೇಗದಲ್ಲಿ ಬಲವತ್ತರವಾದ ಈ ಮತ್ತೊಂದು ಕುದುರೆಯನ್ನು ಸೈನ್ಯ ಎಂದು ತಿಳಿಯುತ್ತೇನೆ. ಹಿಂಬಾಗದಲ್ಲಿ ಬಲಗಡೆಯಿರುವ ಈ ಕುದುರೆ ವೇಗದಲ್ಲಿ ಬಲಾಹಕಕ್ಕಿಂತ ಬಲವತ್ತರವಾದುದೆಂದು ನನ್ನ ಅಭಿಪ್ರಾಯ. ಯುದ್ಧದಲ್ಲಿ ಧನುರ್ಧರನಾದ ನಿನ್ನನ್ನೇ ಹೊರಲು ಈ ರಥ ತಕ್ಕುದಾಗಿದೆ. ನೀನು ಕೂಡ ಈ ರಥದಲ್ಲಿ ಕುಳಿತು ಯುದ್ಧಮಾಡಲು ತಕ್ಕವನೆಂದು ನನ್ನ ಅಭಿಪ್ರಾಯ.”
ಬಳಿಕ ಧನಂಜಯನು ಎಲ್ಲ ಆಯುಧಗಳನ್ನೂ ತೆಗೆದುಕೊಂಡು, ಉತ್ತರನನ್ನು ಸಾರಥಿಯನ್ನಾಗಿ ಮಾಡಿಕೊಂಡು, ಶಮೀವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ ಹೊರಟನು. ಆ ರಥದಿಂದ ಮಹಾರಥನು ಸಿಂಹಧ್ವಜವನ್ನು ತೆಗೆದು ಶಮೀವೃಕ್ಷದ ಬುಡದಲ್ಲಿರಿಸಿ ಆ ಉತ್ತರ ಸಾರಥಿಯು ಹೊರಟನು. ಅವನು ಸಿಂಹದಂತೆ ಬಾಲವುಳ್ಳ, ವಾನರನ ಚಿಹ್ನೆಯ ತನ್ನ ಕಾಂಚನ ಧ್ವಜವನ್ನು – ವಿಶ್ವಕರ್ಮನಿಂದ ನಿರ್ಮಿತವಾದ ದೈವಮಾಯೆಯನ್ನು – ಆ ರಥಕ್ಕೆ ಕಟ್ಟಿ ಅಗ್ನಿಯ ಕೃಪೆಯನ್ನು ಮನಸ್ಸಿನಲ್ಲಿ ನೆನೆದನು. ಅಗ್ನಿಯು ಅವನ ಬಯಕೆಯನ್ನು ಅರಿತು ಧ್ವಜದಲ್ಲಿ ನೆಲೆಸುವಂತೆ ಭೂತಗಳನ್ನು ಪ್ರೇರಿಸಿದನು. ಆ ಮಹಾರಥ ಬೀಭತ್ಸು, ಶ್ವೇತವಾಹನ ಕುಂತೀಪುತ್ರನು ಪತಾಕೆ ಮತ್ತು ಎತ್ತರ ಪೀಠದಿಂದ ಕೂಡಿದ ಸುಂದರ ರಥದಲ್ಲಿ ಕುಳಿತನು. ಆಮೇಲೆ ಆ ಕಪಿವರಧ್ವಜನು ಖಡ್ಗವನ್ನು ಸೊಂಟಕ್ಕೆ ಬಿಗಿದು, ಕವಚವನ್ನು ಧರಿಸಿ, ಬಿಲ್ಲನ್ನು ಹಿಡಿದು ಉತ್ತರ ದಿಕ್ಕಿಗೆ ಹೊರಟನು. ಆ ಶತ್ರುನಾಶಕ ಬಲಶಾಲಿಯು ಭಾರಿ ಶಬ್ಧಮಾಡುವ, ಶತ್ರುಗಳಿಗೆ ರೋಮಾಂಚನವನ್ನುಂಟುಮಾಡುವ ಮಹಾಶಂಖವನ್ನು ಬಲವನ್ನೆಲ್ಲ ಬಿಟ್ಟು ಊದಿದನು. ಅನಂತರ ಆ ವೇಗಗಾಮಿ ಕುದುರೆಗಳು ನೆಲಕ್ಕೆ ಮೊಣಕಾಲೂರಿದವು. ಉತ್ತರನೂ ಹೆದರಿ ರಥದಲ್ಲಿ ಕುಳಿತುಬಿಟ್ಟನು. ಕುಂತೀಪುತ್ರ ಅರ್ಜುನನು ಕುದುರೆಗಳನ್ನು ಎಬ್ಬಿಸಿ ನಿಲ್ಲಿಸಿ ಕಡಿವಾಣಗಳನ್ನು ಎಳೆದು ಉತ್ತರನನ್ನು ತಬ್ಬಿಕೊಂಡು ಹೀಗೆ ಸಮಾಧಾನಗೊಳಿಸಿದನು:
“ಶ್ರೇಷ್ಠ ರಾಜಪುತ್ರ! ಹೆದರಬೇಡ! ಶತ್ರುನಾಶಕ! ನೀನು ಕ್ಷತ್ರಿಯ. ಪುರುಷಶ್ರೇಷ್ಠ! ವೈರಿಗಳ ನಡುವೆ ನೀನು ಹೇಗೆ ಎದೆಗುಂದುವೆ? ಶಂಖಗಳ ಶಬ್ಧವನ್ನೂ, ಭೇರಿಗಳ ಶಬ್ಧವನ್ನೂ, ಸೇನಾವ್ಯೂಹಗಳ ನಡುವೆ ನಿಂತ ಆನೆಗಳ ಗರ್ಜನೆಯನ್ನೂ ನೀನೂ ಬೇಕಾದಷ್ಟು ಕೇಳಿದ್ದೀಯೆ. ಅಂತಹ ನೀನು ಇಲ್ಲಿ ಹೆದರಿದ ಸಾಮಾನ್ಯ ಮನುಷ್ಯನಂತೆ ಹೇಗೆ ಈ ಶಂಖದ ಶಬ್ಧದಿಂದ ಭೀತಿಗೊಂಡು ವಿಷಣ್ಣನಾಗಿರುವೆ?”
ಉತ್ತರನು ಹೇಳಿದನು:
ಶ್ರುತಾ ಮೇ ಶಂಖಶಬ್ದಾಶ್ಚ ಭೇರೀಶಬ್ದಾಶ್ಚ ಪುಷ್ಕಲಾಃ|
ಕುಂಜರಾಣಾಂ ಚ ನಿನದಾ ವ್ಯೂಢಾನೀಕೇಷು ತಿಷ್ಠತಾಂ||
ನೈವಂವಿಧಃ ಶಂಖಶಬ್ದಃ ಪುರಾ ಜಾತು ಮಯಾ ಶ್ರುತಃ|
ಧ್ವಜಸ್ಯ ಚಾಪಿ ರೂಪಂ ಮೇ ದೃಷ್ಟಪೂರ್ವಂ ನ ಹೀದೃಶಂ|
ಧನುಷಶ್ಚೈವ ನಿರ್ಘೋಷಃ ಶ್ರುತಪೂರ್ವೋ ನ ಮೇ ಕ್ವ ಚಿತ್||
ಅಸ್ಯ ಶಂಖಸ್ಯ ಶಬ್ದೇನ ಧನುಷೋ ನಿಸ್ವನೇನ ಚ|
ರಥಸ್ಯ ಚ ನಿನಾದೇನ ಮನೋ ಮುಹ್ಯತಿ ಮೇ ಭೃಶಂ||
ವ್ಯಾಕುಲಾಶ್ಚ ದಿಶಃ ಸರ್ವಾ ಹೃದಯಂ ವ್ಯಥತೀವ ಮೇ|
ಧ್ವಜೇನ ಪಿಹಿತಾಃ ಸರ್ವಾ ದಿಶೋ ನ ಪ್ರತಿಭಾಂತಿ ಮೇ|
ಗಾಂಡೀವಸ್ಯ ಚ ಶಬ್ದೇನ ಕರ್ಣೌ ಮೇ ಬಧಿರೀಕೃತೌ||
“ಶಂಖಗಳ ಶಬ್ಧವನ್ನೂ ಭೇರಿಗಳ ಶಬ್ಧವನ್ನೂ ಸೇನಾವ್ಯೂಹಗಳ ಮಧ್ಯೆ ನಿಂತಿರುವ ಆನೆಗಳ ಗರ್ಜನೆಯನ್ನೂ ನಾನು ಬೇಕಾದಷ್ಟು ಕೇಳಿದ್ದೇನೆ. ಆದರೆ ಇಂತಹ ಶಂಖಶಬ್ಧವನ್ನು ಹಿಂದೆ ನಾನೆಂದೂ ಕೇಳಿರಲಿಲ್ಲ. ಇಂತಹ ಧ್ವಜರೂಪವನ್ನು ಹಿಂದೆಂದೂ ನಾನು ಕಂಡಿಲ್ಲ. ಇಂತಹ ಬಿಲ್ಲಿನ ಘೋಷವನ್ನು ಹಿಂದೆ ನಾನು ಎಲ್ಲಿಯೂ ಕೇಳಿಲ್ಲ. ಈ ಶಂಖದ ಶಬ್ಧದಿಂದಲೂ ಬಿಲ್ಲಿನ ಧ್ವನಿಯಿಂದಲೂ ರಥದ ಘೋಷದಿಂದಲೂ ನನ್ನ ಮನಸ್ಸು ಬಹಳ ದಿಗ್ಭ್ರಮೆಗೊಳ್ಳುತ್ತಿದೆ. ನನ್ನ ಪಾಲಿಗೆ ದಿಕ್ಕುಗಳೆಲ್ಲ ಗೊಂದಲಗೊಂಡಿವೆ; ನನ್ನ ಹೃದಯ ವ್ಯಥೆಗೊಂಡಿದೆ; ಬಾವುಟದಿಂದ ಮುಚ್ಚಿಹೋಗಿ ದಿಕ್ಕುಗಳೆಲ್ಲ ನನಗೆ ಕಾಣುತ್ತಿಲ್ಲ. ಗಾಂಡೀವದ ಶಬ್ಧದಿಂದ ನನ್ನ ಕಿವಿಗಳು ಕಿವುಡಾಗಿವೆ.”
ಅರ್ಜುನನು ಹೇಳಿದನು:
“ನೀನು ರಥವನ್ನು ಒಂದುಕಡೆ ನಿಲ್ಲಿಸಿಕೊಂಡು ಪಾದಗಳನ್ನು ಊರಿಕೊಂಡು ನಿಂತು ಕಡಿವಾಣಗಳನ್ನು ಬಲವಾಗಿ ಹಿಡಿದುಕೋ. ನಾನು ಮತ್ತೆ ಶಂಖವನ್ನೂದುತ್ತೇನೆ.”
ಆ ಶಂಖದ ಶಬ್ಧದಿಂದಲೂ ರಥಚಕ್ರದ ಧ್ವನಿಯಿಂದಲೂ ಗಾಂಡೀವದ ಘೋಷದಿಂದಲೂ ಭೂಮಿಯು ನಡುಗಿತು. ಅನಂತರ ಅರ್ಜುನನು ಕುರುಸೇನೆಯಲ್ಲಿ ದುರ್ಯೋಧನನನ್ನು ಕಾಣದೇ, ಅವನು ಗೋವುಗಳನ್ನು ಕರೆದುಕೊಂಡು ಹಸ್ತಿನಾವತಿಗೆ ಹಿಂದಿರುಗಿ ಹೋಗುತ್ತಿರುವುದನ್ನು ನೋಡಿ ಅವನ ಮೇಲೆ ಧಾಳಿಮಾಡಿ ಗೋವುಗಳನ್ನು ವಿರಾಟನಗರಿಯ ಕಡೆ ಹಿಂದಿರುಗುವಂತೆ ಮಾಡಿದನು. ಅರ್ಜುನನು ಉತ್ತರನಿಗೆ ಕುರುಸೇನೆಯಲ್ಲಿರುವ ಷಡ್ರಥರಾದ ಕೃಪ, ದ್ರೋಣ, ಅಶ್ವತ್ಥಾಮ, ದುರ್ಯೋಧನ, ಕರ್ಣ ಮತ್ತು ಭೀಷ್ಮರ ಪರಿಚಯ ಮಾಡಿಕೊಡುತ್ತಾನೆ. ಯುದ್ಧದ ಕೊನೆಯಲ್ಲ ಅರ್ಜುನನು ಸಮ್ಮೋಹನಾಸ್ತ್ರವನ್ನು ಪ್ರಯೋಗಿಸಿ, ಶಂಖವನ್ನೂದಿ, ಸರ್ವ ಸೇನೆಗಳನ್ನೂ ಮೂರ್ಛೆಗೊಳಿಸಿದನು. ಮೂರ್ಛಿತರಾದ ಮಹಾರಥರ ವಸ್ತ್ರಗಳನ್ನು ತೆಗೆದುಕೊಂಡು ರಥವನ್ನೇರಿ ರಣದಿಂದಾಚೆಗೆ ಅರ್ಜುನ-ಉತ್ತರರು ಹೋದರು. ಬಳಿಕ ಉತ್ತರನು ಅರ್ಜುನನ ಮಾತಿನಂತೆ “ನನ್ನ ವಿಜಯವನ್ನು ಸಾರಿ!” ಎಂದು ಶೀಘ್ರವಾಗಿ ದೂತರಿಗೆ ಅಪ್ಪಣೆ ಮಾಡಿದನು.
ಉತ್ತರನ ಪುರಪ್ರವೇಶ
ಆಗ ಜನರು ಮಂಗಳಕರ ಗಂಧಗಳನ್ನೂ ಬಗೆಬಗೆಯು ಮಾಲೆಗಳನ್ನೂ ಎರಚುತ್ತಿರಲು ಉತ್ತರನು ಹರ್ಷಚಿತ್ತನಾಗಿ ಸಲೀಲವಾಗಿ ನಗರಕ್ಕೆ ಬಂದನು. ಹೆಂಗಸರಿಂದಲೂ, ಪಟ್ಟಣಿಗರಿಂದಲೂ, ಹಳ್ಳಿಗರಿಂದಲೂ ಹಾಗೆ ಸನ್ಮಾನಿತನಾದ ಅವನು ಅರಮನೆಯ ಬಾಗಿಲಿಗೆ ಬಂದು ತಂದೆಗೆ ಹೇಳಿ ಕಳುಹಿಸಿದನು. ಆಗ ದ್ವಾರಪಾಲಕನು ಒಳಗೆ ಹೋಗಿ ವಿರಾಟನಿಗೆ ಹೀಗೆಂದನು: “ನಿನ್ನ ಮಗ ಉತ್ತರನು ಬೃಹನ್ನಡೆಯೊಡಗೂಡಿ ಬಾಗಿಲಲ್ಲಿ ನಿಂತಿದ್ದಾನೆ.”
ಆಗ ಹರ್ಷಿತ ಮತ್ಸ್ಯರಾಜನು ದ್ವಾರಪಾಲಕನಿಗೆ ಹೀಗೆ ಹೇಳಿದನು: “ಇಬ್ಬರನ್ನೂ ಬೇಗ ಕರೆದು ತಾ. ಅವರನ್ನು ನೋಡಲು ನಾನು ಕಾತರನಾಗಿದ್ದೇನೆ.” ಆಗ ದ್ವಾರಪಾಲಕನ ಕಿವಿಯಲ್ಲಿ ಕುರುರಾಜ ಯುಧಿಷ್ಠಿರನು ಪಿಸುಗುಟ್ಟಿದನು:
“ಉತ್ತರನೊಬ್ಬನೇ ಒಳಬರಲಿ. ಬೃಹನ್ನಡೆಯನ್ನು ಒಳಗೆ ಬಿಡಬೇಡ. ಮಹಾಬಾಹೋ! ಬೃಹನ್ನಡೆಯು ಕೈಗೊಂಡಿರುವ ಪ್ರತಿಜ್ಞೆಯಿದು. ಯುದ್ಧವಲ್ಲದೇ ಬೇರೆ ಸಂದರ್ಭದಲ್ಲಿ ನನ್ನ ಶರೀರದಲ್ಲಿ ಗಾಯವನ್ನುಂಟುಮಾಡುವವನು ಅಥವಾ ರಕ್ತ ಬರಿಸುವವನು ಖಂಡಿತ ಬದುಕಲಾರ. ನೆತ್ತರುಗೂಡಿದ ನನ್ನನ್ನು ನೋಡಿದ ಮಾತ್ರಕ್ಕೆ ತಾಳ್ಮೆಗೆಟ್ಟು ಬಹಳ ಕೋಪಗೊಂಡು ವಿರಾಟನನ್ನು ಅವನ ಮಂತ್ರಿಗಳು ಸೇನೆ ಹಾಗೂ ವಾಹನಸಮೇತ ಕೊಂದುಬಿಡುವನು.”
ಅನಂತರ ರಾಜನ ಹಿರಿಯ ಮಗ ಉತ್ತರನು ಪ್ರವೇಶಿಸಿ ತಂದೆಯ ಪಾದಗಳಿಗೆ ಅಬಿವಂದಿಸಿ, ರಕ್ತದಿಂದ ತೊಯ್ದ, ಉದ್ವಿಗ್ನಚಿತ್ತ, ದೋಷರಹಿತ, ಆಸ್ಥಾನದ ಒಂದು ಕೊನೆಯಲ್ಲಿ ಸೈರಂಧ್ರಿಯೊಡನೆ ನೆಲದ ಮೇಲೆ ಕುಳಿತ ದರ್ಮರಾಜನನ್ನು ನೋಡಿದನು. ಆಗ ಉತ್ತರನು ಅವಸರದಿಂದ “ರಾಜನ್! ಇವನನ್ನು ಹೊಡೆದವರು ಯಾರು? ಈ ಪಾಪವನ್ನಾರು ಮಾಡಿದರು?” ಎಂದು ತಂದೆಯನ್ನು ಕೇಳಿದನು.
ವಿರಾಟನು ಹೇಳಿದನು:
“ಈ ದುಷ್ಟನನ್ನು ನಾನೇ ಹೊಡೆದೆನು. ಇವನಿಗೆ ಇಷ್ಟೇ ಸಾಲದು. ಶೂರನಾದ ನಿನ್ನನ್ನು ನಾನು ಹೊಗಳುತ್ತಿರುವಾಗ ಇವನು ನಪುಂಸಕನನ್ನು ಹೊಗಳುತ್ತಾನೆ.”
ಉತ್ತರನು ಹೇಳಿದನು:
ಅಕಾರ್ಯಂ ತೇ ಕೃತಂ ರಾಜನ್ ಕ್ಷಿಪ್ರಮೇವ ಪ್ರಸಾದ್ಯತಾಂ|
ಮಾ ತ್ವಾ ಬ್ರಹ್ಮವಿಷಂ ಘೋರಂ ಸಮೂಲಮಪಿ ನಿರ್ದಹೇತ್||
“ರಾಜನ್! ನೀನು ಅಕಾರ್ಯವನ್ನು ಮಾಡಿದೆ. ಬೇಗ ಇವನು ಪ್ರಸನ್ನನಾಗುವಂತೆ ಮಾಡು. ಬ್ರಾಹ್ಮಣನ ಘೋರ ವಿಷ ನಿನ್ನನ್ನು ಬುಡಸಹಿತ ಸುಟ್ಟು ಹಾಕದಿರಲಿ!”
ರಾಷ್ಟ್ರವರ್ಧನ ವಿರಾಟನು ಮಗನ ಮಾತನ್ನು ಕೇಳಿ ಬೂದಿ ಮುಸುಕಿದ ಬೆಂಕಿಯಂತಿದ್ದ ಯುಧಿಷ್ಠಿರನ ಕ್ಷಮೆಯನ್ನು ಬೇಡಿದನು. ಕ್ಷಮೆಕೇಳುತ್ತಿದ್ದ ರಾಜನಿಗೆ ಯುಧಿಷ್ಠಿರನು ಮರುನುಡಿದನು:
“ರಾಜನ್! ಈ ಮೊದಲೇ ಇದನ್ನು ಕ್ಷಮಿಸಿಬಿಟ್ಟಿದ್ದೇನೆ. ನನಗೇನೂ ಕೋಪವಿಲ್ಲ. ಮಹಾರಾಜ! ನನ್ನ ಮೂಗಿನಿಂದ ಸುರಿದ ರಕ್ತವು ನೆಲಕ್ಕೆ ಬಿದ್ದಿದ್ದರೆ ನೀನು ದೇಶಸಹಿತ ಖಂಡಿತ ನಾಶವಾಗುತ್ತಿದ್ದೆ. ರಾಜನ್! ದೋಷವಿಲ್ಲದವನನ್ನು ಹೊಡೆದುದಕ್ಕಾಗಿ ನಿನ್ನನ್ನು ನಾನು ನಿಂದಿಸುವುದಿಲ್ಲ. ಬಲಶಾಲಿಗಳಿಗೆ ಬೇಗ ಕ್ರೌರ್ಯವುಂಟಾಗುತ್ತದೆ.”
ರಕ್ತ ಸುರಿಯುವುದು ನಿಂತಾಗ ಬೃಹನ್ನಡೆಯು ಪ್ರವೇಶಿಸಿ ವಿರಾಟನಿಗೂ ಕಂಕನಿಗೂ ನಮಸ್ಕರಿಸಿ ನಿಂತುಕೊಂಡಳು. ಅರ್ಜುನನು ಕೇಳಿಸಿಕೊಳ್ಳವಂತೆಯೇ ಯುಧಿಷ್ಠಿರನ ಕ್ಷಮೆ ಬೇಡಿದ ಮತ್ಸ್ಯರಾಜನು ಯುದ್ಧರಂಗದಿಂದ ಬಂದ ಉತ್ತರನನ್ನು ಹೊಗಳಿದನು.
“ಸುದೇಷ್ಣೆಯ ಆನಂದವನ್ನು ಹೆಚ್ಚಿಸುವವನೇ! ನಿನ್ನಿಂದ ನಾನು ಉತ್ತರಾಧಿಕಾರಿಯುಳ್ಳವನಾದೆ. ನಿನ್ನಂತಹ ಮಗನು ನನಗೆ ಹಿಂದೆ ಇರಲಿಲ್ಲ, ಮುಂದೆ ಇರುವುದಿಲ್ಲ. ಮಗೂ! ಸಾವಿರ ಹೆಜ್ಜೆ ನಡೆದರೂ ಒಂದು ಹೆಜ್ಜೆಯನ್ನೂ ತಪ್ಪದ ಆ ಕರ್ಣನನ್ನು ನೀನು ಹೇಗೆ ಎದುರಿಸಿದೆ? ಮಗೂ! ಇಡೀ ಮಾನವಲೋಕದಲ್ಲಿ ಸಮಾನರಿಲ್ಲದ, ಸಮುದ್ರದಂತೆ ಅಚಲನಾದ, ಕಾಲಾಗ್ನಿಯಂತೆ ಸಹಿಸಲಾಗದ ಆ ಭೀಷ್ಮನನ್ನು ನೀನು ಹೇಗೆ ಎದುರಿಸಿದೆ? ಮಗೂ! ವೃಷ್ಣಿವೀರರ, ಪಾಂಡವರ ಮತ್ತು ಎಲ್ಲ ಕ್ಷತ್ರಿಯರ ಆಚಾರ್ಯನೂ ಸರ್ವಶಸ್ತ್ರಧಾರಿಗಳಲ್ಲಿ ಶ್ರೇಷ್ಠನೂ ಆದ ಆ ಬ್ರಾಹ್ಮಣ ದ್ರೋಣನನ್ನು ನೀನು ಹೇಗೆ ಎದುರಿಸಿದೆ? ಆಚಾರ್ಯಪುತ್ರನೂ, ಸರ್ವ ಶಸ್ತ್ರಧಾರಿಗಳಲ್ಲಿ ಶೂರನೂ, ಅಶ್ವತ್ಥಾಮನೆಂದು ಹೆಸರಾಂತವನೂ ಆದ ಅವನನ್ನು ಹೇಗೆ ಎದುರಿಸಿದೆ? ಮಗೂ! ಯುದ್ಧದಲ್ಲಿ ಯಾರನ್ನು ನೋಡಿದರೆ ಎಲ್ಲರೂ ತಮ್ಮದೆಲ್ಲವನ್ನೂ ಕಳೆದುಕೊಂಡ ವರ್ತಕರಂತೆ ಕುಗ್ಗಿಹೋಗುತ್ತಾರೋ ಆ ಕೃಪನನ್ನು ಹೇಗೆ ಎದುರಿಸಿದೆ? ಮಗೂ! ತನ್ನ ಮಹಾಬಾಣಗಳಿಂದ ಪರ್ವತವನ್ನು ಭೇದಿಸುವ ರಾಜಪುತ್ರ ಆ ದುರ್ಯೋಧನನನ್ನು ನೀನು ಹೇಗೆ ಎದುರಿಸಿದೆ?”
ಉತ್ತರನು ಹೇಳಿದನು:
ನ ಮಯಾ ನಿರ್ಜಿತಾ ಗಾವೋ ನ ಮಯಾ ನಿರ್ಜಿತಾಃ ಪರೇ|
ಕೃತಂ ತು ಕರ್ಮ ತತ್ಸರ್ವಂ ದೇವಪುತ್ರೇಣ ಕೇನ ಚಿತ್||
ಸ ಹಿ ಭೀತಂ ದ್ರವಂತಂ ಮಾಂ ದೇವಪುತ್ರೋ ನ್ಯವಾರಯತ್|
ಸ ಚಾತಿಷ್ಠದ್ರಥೋಪಸ್ಥೇ ವಜ್ರಹಸ್ತನಿಭೋ ಯುವಾ||
ತೇನ ತಾ ನಿರ್ಜಿತಾ ಗಾವಸ್ತೇನ ತೇ ಕುರವೋ ಜಿತಾಃ|
ತಸ್ಯ ತತ್ಕರ್ಮ ವೀರಸ್ಯ ನ ಮಯಾ ತಾತ ತತ್ಕೃತಂ||
ಸ ಹಿ ಶಾರದ್ವತಂ ದ್ರೋಣಂ ದ್ರೋಣಪುತ್ರಂ ಚ ವೀರ್ಯವಾನ್|
ಸೂತಪುತ್ರಂ ಚ ಭೀಷ್ಮಂ ಚ ಚಕಾರ ವಿಮುಖಾಂ ಶರೈಃ||
ದುರ್ಯೋಧನಂ ಚ ಸಮರೇ ಸನಾಗಮಿವ ಯೂಥಪಂ|
ಪ್ರಭಗ್ನಮಬ್ರವೀದ್ಭೀತಂ ರಾಜಪುತ್ರಂ ಮಹಾಬಲಂ||
ನ ಹಾಸ್ತಿನಪುರೇ ತ್ರಾಣಂ ತವ ಪಶ್ಯಾಮಿ ಕಿಂ ಚನ|
ವ್ಯಾಯಾಮೇನ ಪರೀಪ್ಸಸ್ವ ಜೀವಿತಂ ಕೌರವಾತ್ಮಜ||
ನ ಮೋಕ್ಷ್ಯಸೇ ಪಲಾಯಂಸ್ತ್ವಂ ರಾಜನ್ಯುದ್ಧೇ ಮನಃ ಕುರು|
ಪೃಥಿವೀಂ ಭೋಕ್ಷ್ಯಸೇ ಜಿತ್ವಾ ಹತೋ ವಾ ಸ್ವರ್ಗಮಾಪ್ಸ್ಯಸಿ||
ಸ ನಿವೃತ್ತೋ ನರವ್ಯಾಘ್ರೋ ಮುಂಚನ್ವಜ್ರನಿಭಾಂ ಶರಾನ್|
ಸಚಿವೈಃ ಸಂವೃತೋ ರಾಜಾ ರಥೇ ನಾಗ ಇವ ಶ್ವಸನ್||
ತತ್ರ ಮೇ ರೋಮಹರ್ಷೋಽಭೂದೂರುಸ್ತಂಭಶ್ಚ ಮಾರಿಷ|
ಯದಭ್ರಘನಸಂಕಾಶಮನೀಕಂ ವ್ಯಧಮಚ್ಚರೈಃ||
ತತ್ಪ್ರಣುದ್ಯ ರಥಾನೀಕಂ ಸಿಂಹಸಂಹನನೋ ಯುವಾ|
ಕುರೂಂಸ್ತಾನ್ಪ್ರಹಸನ್ರಾಜನ್ವಾಸಾಂಸ್ಯಪಹರದ್ಬಲೀ||
ಏಕೇನ ತೇನ ವೀರೇಣ ಷಡ್ರಥಾಃ ಪರಿವಾರಿತಾಃ|
ಶಾರ್ದೂಲೇನೇವ ಮತ್ತೇನ ಮೃಗಾಸ್ತೃಣಚರಾ ವನೇ||
“ನಾನು ಹಸುಗಳನ್ನು ಗೆಲ್ಲಲಿಲ್ಲ. ಶತ್ರುಗಳನ್ನು ನಾನು ಸೋಲಿಸಲಿಲ್ಲ. ಆ ಕಾರ್ಯವನ್ನೆಲ್ಲ ಯಾವನೋ ಒಬ್ಬ ದೇವಪುತ್ರನು ಮಾಡಿದನು. ದೇವೇಂದ್ರ ಸಮಾನನಾದ ಆ ತರುಣ ದೇವಪುತ್ರನು ಹೆದರಿ ಓಡಿಹೋಗುತ್ತಿದ್ದ ನನ್ನನ್ನು ತಡೆದು ರಥದಲ್ಲಿ ಕುಳಿತನು. ಅವನು ಆ ಹಸುಗಳನ್ನು ಗೆದ್ದು ಆ ಕೌರವರನ್ನು ಸೋಲಿಸಿದನು. ತಂದೇ! ಅದು ಆ ವೀರನ ಕಾರ್ಯ. ನಾನು ಅದನ್ನು ಮಾಡಲಿಲ್ಲ. ಬಾಣಗಳಿಂದ ಕೃಪ, ದ್ರೋಣ, ಪರಾಕ್ರಮಶಾಲಿ ಅಶ್ವತ್ಥಾಮ, ಕರ್ಣ, ಭೀಷ್ಮರನ್ನು ಅವನು ಮುಖ ತಿರುಗಿಸುವಂತೆ ಮಾಡಿದನು. ಆನೆಗಳೊಳಗೂಡಿದ ಸಲಗದಂತೆ ಯುದ್ಧದಲ್ಲಿ ಭೀತನೂ ಭಗ್ನನೂ ಆಗಿದ್ದ ಮಹಾಬಲಶಾಲಿ ರಾಜಪುತ್ರ ದುರ್ಯೋಧನನಿಗೆ ಅವನು ಹೇಳಿದನು: “ಕೌರವಾತ್ಮಜ! ನಿನಗೆ ಹಸ್ತಿನಾಪುರದಲ್ಲಿ ಏನೇನೂ ರಕ್ಷಣೆಯಿರುವಂತೆ ನನಗೆ ತೋರುವುದಿಲ್ಲ. ಆದ್ದರಿಂದ ಹೋರಾಟದಿಂದ ಪ್ರಾಣವನ್ನು ರಕ್ಷಿಸಿಕೋ. ರಾಜನ್! ನೀನು ಪಲಾಯನ ಮಾಡಿ ತಪ್ಪಿಸಿಕೊಳ್ಳಲಾರೆ. ಯುದ್ಧಕ್ಕೆ ಮನಸ್ಸು ಮಾಡು. ಗೆದ್ದರೆ ಭೂಮಿಯನ್ನು ಆಳುತ್ತೀಯೆ. ಸತ್ತರೆ ಸ್ವರ್ಗವನ್ನು ಪಡೆಯುತ್ತೀಯೆ.” ನರಶ್ರೇಷ್ಠ ಆ ರಾಜನು ಆಗ ವಜ್ರಸದೃಶ ಬಾಣಗಳನ್ನು ಬಿಡುತ್ತ ಸರ್ಪದಂತೆ ಬುಸುಗುಟ್ಟುತ್ತ ಸಚಿವರೊಡಗೂಡಿ ರಥದಲ್ಲಿ ಹಿಂದಿರುಗಿದನು. ಅಪ್ಪಾ! ಆಗ ನನಗೆ ರೋಮಾಂಚನವುಂಟಾಯಿತು. ನನ್ನ ತೊಡೆಗಳು ಮರಗಟ್ಟಿದವು. ಏಕೆಂದರೆ ಆ ದೇವಪುತ್ರನು ಆ ದಟ್ಟ ಸೇನೆಯನ್ನು ಬಾಣಗಳಿಂದ ಭೇದಿಸಿದನು. ರಾಜನ್! ಸಿಂಹದಂತಹ ಶರೀರವುಳ್ಳ ಆ ಬಲಶಾಲಿ ಯುವಕನು ರಥಸಮೂಹವನ್ನು ಚದುರಿಸಿ, ನಗುನಗುತ್ತಲೇ ಕೌರವರ ವಸ್ತ್ರಗಳನ್ನು ತೆಗೆದುಕೊಂಡನು. ಕಾಡಿನಲ್ಲಿ ಹುಲ್ಲುತಿನ್ನುವ ಜಿಂಕೆಗಳನ್ನು ಮದಿಸಿದ ಒಂದೇ ಹುಲಿಯು ಆಕ್ರಮಿಸುವಂತೆ ಒಂಟಿಯಾಗಿಯೇ ಆ ವೀರನು ಷಡ್ರಥರನ್ನು ಮುತ್ತಿದನು.”
ವಿರಾಟನು ಹೇಳಿದನು:
“ಯುದ್ಧದಲ್ಲಿ ಕೌರವರು ಹಿಡಿದಿದ್ದ ನನ್ನ ಗೋಧನವನ್ನು ಗೆದ್ದು ತಂದ ಆ ವೀರ ಮಹಾಬಾಹು ಮಹಾಯಶಸ್ವಿ ದೇವಪುತ್ರನೆಲ್ಲಿ? ಹಸುಗಳನ್ನೂ ನಿನ್ನನ್ನೂ ರಕ್ಷಿಸಿದ ಆ ಮಹಾಬಲಶಾಲಿ ದೇವಪುತ್ರನನ್ನು ನೋಡಲು ಮತ್ತು ಗೌರವಿಸಲು ಬಯಸುತ್ತೇನೆ.”
ಉತ್ತರನು ಹೇಳಿದನು:
ಅಂತರ್ಧಾನಂ ಗತಸ್ತಾತ ದೇವಪುತ್ರಃ ಪ್ರತಾಪವಾನ್|
ಸ ತು ಶ್ವೋ ವಾ ಪರಶ್ವೋ ವಾ ಮನ್ಯೇ ಪ್ರಾದುರ್ಭವಿಷ್ಯತಿ||
“ತಂದೇ! ಆ ಪ್ರತಾಪಶಾಲೀ ದೇವಪುತ್ರನು ಅದೃಶ್ಯನಾಗಿಬಿಟ್ಟನು. ಆದರೆ ನಾಳೆಯೋ ಅಥವಾ ನಾಡಿದ್ದೋ ಅವನು ಕಾಣಿಸಿಕೊಳ್ಳುತ್ತಾನೆಂದು ನಾನು ಭಾವಿಸುತ್ತೇನೆ.”
ಹೀಗೆ ವರ್ಣಿಸುತ್ತಿರಲು ವೇಷಮರೆಸಿಕೊಂಡು ಅಲ್ಲಿ ವಾಸಿಸುತ್ತಿರುವ ಆ ಪಾಂಡುಪುತ್ರ ಕುಂತೀಸುತ ಅರ್ಜುನನನ್ನು ವಿರಾಟನು ಗುರುತಿಸಲೇ ಇಲ್ಲ.
ಉತ್ತರ ವಧೆ
ಮಹಾಭಾರತ ಯುದ್ಧದ ಮೊದಲನೇ ದಿನ ಉತ್ತರ-ಶಲ್ಯರ ಯುದ್ಧದಲ್ಲಿ ಉತ್ತರನ ವಧೆಯ ಕುರಿತು ಭೀಷ್ಮಪರ್ವದ ಅಧ್ಯಾಯ ೪೫ರಲ್ಲಿ (ಶ್ಲೋಕ ೩೫-೪೨) ಬರುತ್ತದೆ.
ಪ್ರಗೃಹೀತಾಗ್ರಹಸ್ತೇನ ವೈರಾಟಿರಪಿ ದಂತಿನಾ|
ಅಭ್ಯದ್ರವತ ರಾಜಾನಂ ಮದ್ರಾಧಿಪತಿಮುತ್ತರಃ||
ತಸ್ಯ ವಾರಣರಾಜಸ್ಯ ಜವೇನಾಪತತೋ ರಥೀ|
ಶಲ್ಯೋ ನಿವಾರಯಾಮಾಸ ವೇಗಮಪ್ರತಿಮಂ ರಣೇ||
ತಸ್ಯ ಕ್ರುದ್ಧಃ ಸ ನಾಗೇಂದ್ರೋ ಬೃಹತಃ ಸಾಧುವಾಹಿನಃ|
ಪದಾ ಯುಗಮಧಿಷ್ಠಾಯ ಜಘಾನ ಚತುರೋ ಹಯಾನ್||
ಸ ಹತಾಶ್ವೇ ರಥೇ ತಿಷ್ಠನ್ಮದ್ರಾಧಿಪತಿರಾಯಸೀಂ|
ಉತ್ತರಾಂತಕರೀಂ ಶಕ್ತಿಂ ಚಿಕ್ಷೇಪ ಭುಜಗೋಪಮಾಂ||
ತಯಾ ಭಿನ್ನತನುತ್ರಾಣಃ ಪ್ರವಿಶ್ಯ ವಿಪುಲಂ ತಮಃ|
ಸ ಪಪಾತ ಗಜಸ್ಕಂಧಾತ್ಪ್ರಮುಕ್ತಾಂಕುಶತೋಮರಃ||
ಸಮಾದಾಯ ಚ ಶಲ್ಯೋಽಸಿಮವಪ್ಲುತ್ಯ ರಥೋತ್ತಮಾತ್|
ವಾರಣೇಂದ್ರಸ್ಯ ವಿಕ್ರಮ್ಯ ಚಿಚ್ಛೇದಾಥ ಮಹಾಕರಂ||
ಭಿನ್ನಮರ್ಮಾ ಶರವ್ರಾತೈಶ್ಚಿನ್ನಹಸ್ತಃ ಸ ವಾರಣಃ|
ಭೀಮಮಾರ್ತಸ್ವರಂ ಕೃತ್ವಾ ಪಪಾತ ಚ ಮಮಾರ ಚ||
ಸೊಂಡಿಲನ್ನು ಮೇಲೆತ್ತಿ ಹಿಡಿದ ಆನೆಯ ಮೇಲೆ ವೈರಾಟಿ ಉತ್ತರನು ರಾಜ ಮದ್ರಾಧಿಪತಿಯ ಕಡೆ ಧಾವಿಸಿದನು. ವೇಗದಿಂದ ಮೇಲೆ ಬೀಳುತ್ತಿದ್ದ ಆ ವಾರಣರಾಜನ ಅಪ್ರತಿಮ ವೇಗವನ್ನು ರಣದಲ್ಲಿ ರಥೀ ಶಲ್ಯನು ತಡೆದನು. ಬಹು ಕ್ರುದ್ಧವಾದ ಆ ಗಜೇಂದ್ರವು ಒಂದು ಕಾಲನ್ನು ಅವನ ರಥದ ನೊಗದ ಮೇಲಿಟ್ಟು ರಥವನ್ನು ಎಳೆಯುತ್ತಿದ್ದ ನಾಲ್ಕೂ ಕುದುರೆಗಳನ್ನು ಏಕಕಾಲದಲ್ಲಿ ಸಂಹರಿಸಿತು. ಕುದುರೆಗಳು ಹತವಾಗಿದ್ದ ಅದೇ ರಥದಲ್ಲಿ ನಿಂತು ಮದ್ರಾಧಿಪನು ಉತ್ತರನ ಮೃತ್ಯುರೂಪವಾಗಿದ್ದ ಭುಜಗೋಪಮ ಲೋಹದ ಶಕ್ತಿಯನ್ನು ಎಸೆದನು. ಅದು ಅವನ ತನು-ತ್ರಾಣಗಳನ್ನು ಭೇದಿಸಲು ಅವನು ವಿಪುಲ ತಮವನ್ನು ಪ್ರವೇಶಿಸಿ, ಅಂಕುಶ ತೋಮರಗಳು ಕಳಚಿ ಬೀಳಲು ಆನೆಯ ಮೇಲಿಂದ ಕೆಳಗೆ ಬಿದ್ದು ಮರಣಹೊಂದಿದನು.
ಅನಂತರ ಶಲ್ಯನು ಖಡ್ಗವೊಂದನ್ನು ಹಿಡಿದು ಆ ಉತ್ತಮ ರಥದಿಂದ ಕೆಳಗೆ ಹಾರಿ ಆ ವಾರಣೇಂದ್ರದ ಮಹಾ ಸೊಂಡಿಲನ್ನು ವಿಕ್ರಮದಿಂದ ಕತ್ತರಿಸಿದನು. ಶರವ್ರಾತದಿಂದ ಮರ್ಮಗಳಲ್ಲಿ ಪೆಟ್ಟುತಿಂದು, ಸೊಂಡಿಲು ತುಂಡಾಗಿದ್ದ ಆ ಆನೆಯು ಭಯಂಕರ ಆರ್ತಸ್ವರವನ್ನು ಕೂಗಿ ಬಿದ್ದು ಅಸುನೀಗಿತು. ಇದನ್ನು ಮಾಡಿ ಮಹಾರಥ ಮದ್ರರಾಜನು ತಕ್ಷಣವೇ ಕೃತವರ್ಮನ ಹೊಳೆಯುವ ರಥವನ್ನು ಏರಿದನು.

