Aranyaka Parva: Chapter 248

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೪೮

ಕಾಮ್ಯಕವನದಲ್ಲಿರುವಾಗ ಒಂದುದಿನ ದ್ರೌಪದಿಯನ್ನು ಆಶ್ರಮದಲ್ಲಿರಿಸಿ ಬೇಟೆಯಾಡಲು ಪಾಂಡವರು ಹೋದುದು (೧-೫). ಅದೇ ಸಮಯದಲ್ಲಿ ವಿವಾಹಕ್ಕಾಗಿ ಬಹು ರಾಜರೊಂದಿಗೆ ಮತ್ತು ಸೇನೆಯೊಂದಿಗೆ ಶಾಲ್ವದ ಕಡೆ ಪ್ರಯಾಣಿಸುತ್ತಿದ್ದ ಜಯದ್ರಥನು ದ್ರೌಪದಿಯನ್ನು ನೋಡಿ, ಕಾಮಮೋಹಿತನಾಗಿ, ಅವಳ್ಯಾರೆಂದು ಕಂಡುಕೊಂಡು ಬಾ ಎಂದು ಮಿತ್ರ ಕೋಟಿಕಾಶ್ಯನನ್ನು ಕಳುಹಿಸಿದುದು (೬-೧೭).

03248001 ವೈಶಂಪಾಯನ ಉವಾಚ|

03248001a ತಸ್ಮಿನ್ಬಹುಮೃಗೇಽರಣ್ಯೇ ರಮಮಾಣಾ ಮಹಾರಥಾಃ|

03248001c ಕಾಮ್ಯಕೇ ಭರತಶ್ರೇಷ್ಠಾ ವಿಜಹ್ರುಸ್ತೇ ಯಥಾಮರಾಃ||

ವೈಶಂಪಾಯನನು ಹೇಳಿದನು: “ಮಹಾರಥಿ ಭರತಶ್ರೇಷ್ಠರು ಆ ಬಹುಮೃಗಗಳಿದ್ದ ಕಾಮ್ಯಕ ಅರಣ್ಯದಲ್ಲಿ ಅಮರರಂತೆ ವಿಹರಿಸುತ್ತಾ ರಮಿಸಿದರು.

03248002a ಪ್ರೇಕ್ಷಮಾಣಾ ಬಹುವಿಧಾನ್ವನೋದ್ದೇಶಾನ್ಸಮಂತತಃ|

03248002c ಯಥರ್ತುಕಾಲರಮ್ಯಾಶ್ಚ ವನರಾಜೀಃ ಸುಪುಷ್ಪಿತಾಃ||

ಅವರು ಋತುಕಾಲವನ್ನು ಸೂಚಿಸುವ ಸುಪುಷ್ಪಿತವಾಗಿದ್ದ ವನರಾಜಿಗಳನ್ನೂ, ಸುತ್ತಲೂ ಇದ್ದ ಬಹುವಿಧದ ವನಪ್ರದೇಶಗಳನ್ನು ನೋಡುತ್ತಿದ್ದರು.

03248003a ಪಾಂಡವಾ ಮೃಗಯಾಶೀಲಾಶ್ಚರಂತಸ್ತನ್ಮಹಾವನಂ|

03248003c ವಿಜಹ್ರುರಿಂದ್ರಪ್ರತಿಮಾಃ ಕಂ ಚಿತ್ಕಾಲಮರಿಂದಮಾಃ||

ಆ ಮಹಾವನದಲ್ಲಿ ಬೇಟೆಯಾಡುತ್ತಾ ಇಂದ್ರನ ಸರಿಸಮಾನರಂತೆ ಆ ಅರಿಂದಮ ಪಾಂಡವರು ಸ್ವಲ್ಪಸಮಯವನ್ನು ಕಳೆದರು.

03248004a ತತಸ್ತೇ ಯೌಗಪದ್ಯೇನ ಯಯುಃ ಸರ್ವೇ ಚತುರ್ದಿಶಂ|

03248004c ಮೃಗಯಾಂ ಪುರುಷವ್ಯಾಘ್ರಾ ಬ್ರಾಹ್ಮಣಾರ್ಥೇ ಪರಂತಪಾಃ||

03248005a ದ್ರೌಪದೀಮಾಶ್ರಮೇ ನ್ಯಸ್ಯ ತೃಣಬಿಂದೋರನುಜ್ಞಯಾ|

03248005c ಮಹರ್ಷೇರ್ದೀಪ್ತತಪಸೋ ಧೌಮ್ಯಸ್ಯ ಚ ಪುರೋಧಸಃ||

ಆಗ ಒಂದು ದಿನ ಯೋಗವೋ ಎಂಬಂತೆ ಬ್ರಾಹ್ಮಣರಿಗೋಸ್ಕರ ಬೇಟೆಯಾಡಲು ಆ ಪರಂತಪ ಪುರುಷವ್ಯಾಘ್ರರೆಲ್ಲರೂ, ದ್ರೌಪದಿಯನ್ನು ತೃಣಬಿಂದುವಿನ ಆಶ್ರಮದಲ್ಲಿರಿಸಿ, ಮಹರ್ಷಿ, ದೀಪ್ತತಪಸ್ವಿ, ಪುರೋಹಿತ ಧೌಮ್ಯನ ಅಪ್ಪಣೆಯನ್ನು ಪಡೆದು, ನಾಲ್ಕು ದಿಕ್ಕುಗಳಲ್ಲಿ ಹೋದರು.

03248006a ತತಸ್ತು ರಾಜಾ ಸಿಂಧೂನಾಂ ವಾರ್ದ್ಧಕ್ಷತ್ರಿರ್ಮಹಾಯಶಾಃ|

03248006c ವಿವಾಹಕಾಮಃ ಶಾಲ್ವೇಯಾನ್ಪ್ರಯಾತಃ ಸೋಽಭವತ್ತದಾ||

ಅದೇ ಸಮಯದಲ್ಲಿ ವೃದ್ಧಕ್ಷತ್ರನ ಮಗ ಮಹಾಯಶಸ್ವಿ ಸಿಂಧುರಾಜನು ವಿವಾಹಾರ್ಥವಾಗಿ ಶಾಲ್ವದ ಕಡೆ ಪ್ರಯಾಣಮಾಡುತ್ತಿದ್ದನು.

03248007a ಮಹತಾ ಪರಿಬರ್ಹೇಣ ರಾಜಯೋಗ್ಯೇನ ಸಂವೃತಃ|

03248007c ರಾಜಭಿರ್ಬಹುಭಿಃ ಸಾರ್ಧಮುಪಾಯಾತ್ಕಾಮ್ಯಕಂ ಚ ಸಃ||

ರಾಜನಿಗೆ ಯೋಗ್ಯವಾದಂತೆ ಅತಿದೊಡ್ಡ ಪರಿಚಾರಕ ಗಣಗಳಿಂದ ಸುತ್ತುವರೆಯಲ್ಪಟ್ಟು ಬಹಳ ರಾಜರುಗಳೊಂದಿಗೆ ಹೋಗುತ್ತಿದ್ದ ಅವನು ಕಾಮ್ಯಕವನ್ನು ತಲುಪಿದನು.

03248008a ತತ್ರಾಪಶ್ಯತ್ಪ್ರಿಯಾಂ ಭಾರ್ಯಾಂ ಪಾಂಡವಾನಾಂ ಯಶಸ್ವಿನೀಂ|

03248008c ತಿಷ್ಠಂತೀಮಾಶ್ರಮದ್ವಾರಿ ದ್ರೌಪದೀಂ ನಿರ್ಜನೇ ವನೇ||

ಅಲ್ಲಿ ಅವನು ಆ ನಿರ್ಜನ ವನದಲ್ಲಿ ಆಶ್ರಮದ್ವಾರದಲ್ಲಿ ನಿಂತಿದ್ದ ಪಾಂಡವರ ಪ್ರಿಯ ಭಾರ್ಯೆ ಯಶಸ್ವಿನಿ ದ್ರೌಪದಿಯನ್ನು ನೋಡಿದನು.

03248009a ವಿಭ್ರಾಜಮಾನಾಂ ವಪುಷಾ ಬಿಭ್ರತೀಂ ರೂಪಮುತ್ತಮಂ|

03248009c ಭ್ರಾಜಯಂತೀಂ ವನೋದ್ದೇಶಂ ನೀಲಾಭ್ರಮಿವ ವಿದ್ಯುತಂ||

03248010a ಅಪ್ಸರಾ ದೇವಕನ್ಯಾ ವಾ ಮಾಯಾ ವಾ ದೇವನಿರ್ಮಿತಾ|

03248010c ಇತಿ ಕೃತ್ವಾಂಜಲಿಂ ಸರ್ವೇ ದದೃಶುಸ್ತಾಮನಿಂದಿತಾಂ||

ಉತ್ತಮ ರೂಪದಿಂದ ಮತ್ತು ವಿಭ್ರಾಜಮಾನ ಶರೀರದಿಂದ ಬೆಳಗುತ್ತಿದ್ದ, ಕಪ್ಪುಮೋಡಗಳಿಂದ ಬಂದ ವಿದ್ಯುತ್ತಿನಂತೆ ವನೋದ್ದೇಶವನ್ನು ಬೆಳಗುತ್ತಿದ್ದ, ಅಪ್ಸರೆಯೋ, ದೇವಕನ್ಯೆಯೋ ಅಥವಾ ದೇವನಿರ್ಮಿತ ಮಾಯೆಯೋ ಎಂಬಂತಿದ್ದ, ಕೈಮುಗಿದು ನಿಂತಿದ್ದ ಆ ಅನಿಂದಿತೆಯನ್ನು ಎಲ್ಲರೂ ನೋಡಿದರು.

03248011a ತತಃ ಸ ರಾಜಾ ಸಿಂಧೂನಾಂ ವಾರ್ದ್ಧಕ್ಷತ್ರಿರ್ಜಯದ್ರಥಃ|

03248011c ವಿಸ್ಮಿತಸ್ತಾಮನಿಂದ್ಯಾಂಗೀಂ ದೃಷ್ಟ್ವಾಸೀದ್ಧೃಷ್ಟಮಾನಸಃ|

ಆಗ ವಾರ್ಧಕ್ಷತ್ರಿ ಸಿಂಧುರಾಜ ಜಯದ್ರಥನು ಆ ಅನವದ್ಯಾಂಗಿಯನ್ನು ನೋಡಿ ವಿಸ್ಮಿತನಾಗಿ ಸಂತೋಷಗೊಂಡನು.

03248012a ಸ ಕೋಟಿಕಾಶ್ಯಂ ರಾಜಾನಮಬ್ರವೀತ್ಕಾಮಮೋಹಿತಃ|

03248012c ಕಸ್ಯ ತ್ವೇಷಾನವದ್ಯಾಂಗೀ ಯದಿ ವಾಪಿ ನ ಮಾನುಷೀ||

ಕಾಮಮೋಹಿತನಾದ ಅವನು ಕೋಟಿಕಾಶ್ಯ ರಾಜನಿಗೆ ಹೇಳಿದನು: “ಮನುಷ್ಯಳೇ ಆಗಿದ್ದರೆ ಈ ಅನವದ್ಯಾಂಗಿಯು ಯಾರಾಗಿರಬಹುದು?

03248013a ವಿವಾಹಾರ್ಥೋ ನ ಮೇ ಕಶ್ಚಿದಿಮಾಂ ದೃಷ್ಟ್ವಾತಿಸುಂದರೀಂ|

03248013c ಏತಾಮೇವಾಹಮಾದಾಯ ಗಮಿಷ್ಯಾಮಿ ಸ್ವಮಾಲಯಂ||

ಈ ಅತಿಸುಂದರಿಯನ್ನು ನೋಡಿದ ನಂತರ ನನಗೆ ವಿವಾಹದಲ್ಲಿ ಅರ್ಥವಿಲ್ಲ. ಇವಳನ್ನೇ ಕರೆದುಕೊಂಡು ನನ್ನ ಮನೆಗೆ ಹಿಂದಿರುಗುತ್ತೇನೆ.

03248014a ಗಚ್ಚ ಜಾನೀಹಿ ಸೌಮ್ಯೈನಾಂ ಕಸ್ಯ ಕಾ ಚ ಕುತೋಽಪಿ ವಾ|

03248014c ಕಿಮರ್ಥಮಾಗತಾ ಸುಭ್ರೂರಿದಂ ಕಂಟಕಿತಂ ವನಂ||

ಸೌಮ್ಯ! ಹೋಗಿ ಇವಳು ಯಾರವಳು? ಯಾರು ಮತ್ತು ಎಲ್ಲಿಂದ ಬಂದಿದ್ದಾಳೆಂದು ತಿಳಿದುಕೋ. ಯಾವ ಕಾರಣಕ್ಕಾಗಿ ಈ ಸುಂದರ ಹುಬ್ಬಿನವಳು ಮುಳ್ಳಿನ ಈ ವನಕ್ಕೆ ಬಂದಿದ್ದಾಳೆ?

03248015a ಅಪಿ ನಾಮ ವರಾರೋಹಾ ಮಾಮೇಷಾ ಲೋಕಸುಂದರೀ|

03248015c ಭಜೇದದ್ಯಾಯತಾಪಾಂಗೀ ಸುದತೀ ತನುಮಧ್ಯಮಾ|

ಇಂದು ಈ ವರಾರೋಹೆ, ಲೋಕಸುಂದರಿ, ಆಯತಪಾಂಗೀ, ಸುಂದರ ಹಲ್ಲಿನ ತನುಮಧ್ಯಮೆಯು ನನ್ನ ಪ್ರೀತಿಯಲ್ಲಿ ಪಾಲ್ಗೊಳ್ಳುತ್ತಾಳೆಯೇ?

03248016a ಅಪ್ಯಹಂ ಕೃತಕಾಮಃ ಸ್ಯಾಮಿಮಾಂ ಪ್ರಾಪ್ಯ ವರಸ್ತ್ರಿಯಂ|

03248016c ಗಚ್ಚ ಜಾನೀಹಿ ಕೋ ನ್ವಸ್ಯಾ ನಾಥ ಇತ್ಯೇವ ಕೋಟಿಕ||

ಈ ವರಸ್ತ್ರೀಯನ್ನು ಪಡೆದು ಇಂದು ನಾನು ನನ್ನ ಕಾಮವನ್ನು ಪೂರೈಸಿಕೊಳ್ಳಬಹುದೇ? ಕೋಟಿಕ! ಇವಳ ರಕ್ಷಕರು ಯಾರು ಎನ್ನುವುದನ್ನೂ ಕೇಳಿಕೊಂಡು ಬಾ.”

03248017a ಸ ಕೋಟಿಕಾಶ್ಯಸ್ತಚ್ಚ್ರುತ್ವಾ ರಥಾತ್ಪ್ರಸ್ಕಂದ್ಯ ಕುಂಡಲೀ|

03248017c ಉಪೇತ್ಯ ಪಪ್ರಚ್ಚ ತದಾ ಕ್ರೋಷ್ಟಾ ವ್ಯಾಘ್ರವಧೂಮಿವ||

ಇದನ್ನು ಕೇಳಿದ ಕುಂಡಲಗಳನ್ನು ಧರಿಸಿದ್ದ ಕೋಟಿಕನು ರಥದಿಂದ ಹಾರಿ ನರಿಯು ವ್ಯಾಘ್ರದ ಬಳಿಸಾರುವಂತೆ ಅವಳ ಹತ್ತಿರ ಬಂದು ಕೇಳಿದನು.

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ದ್ರೌಪದೀಹರಣಪರ್ವಣಿ ಜಯದ್ರಥಾಗಮನೇ ಅಷ್ಟಚತ್ವಾರಿಂಶದಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ದ್ರೌಪದೀಹರಣಪರ್ವದಲ್ಲಿ ಜಯದ್ರಥಾಗಮನದಲ್ಲಿ ಇನ್ನೂರಾನಲ್ವತ್ತೆಂಟನೆಯ ಅಧ್ಯಾಯವು.

Related image

Comments are closed.