Aranyaka Parva: Chapter 282

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೮೨

ಆಶ್ರಮದಲ್ಲಿದ್ದ ದ್ಯುಮತ್ಸೇನನು ಸಾವಿತ್ರಿಗೆ ಯಮನು ಕರುಣಿಸಿದ ವರ ಪ್ರಭಾವದಿಂದ ಕಣ್ಣುಗಳನ್ನು ಪಡೆದುದು; ಮಗನನ್ನು ಹುಡುಕಿ ಸೋತುದು; ಆಶ್ರಮವಾಸಿಗಳು ಸಂತೈಸಿದುದು (೧-೨೦). ಸಾವಿತ್ರಿ-ಸತ್ಯವಾನರ ಆಗಮನ, ನಡೆದ ವಿಷಯಗಳನ್ನು ಸಾವಿತ್ರಿಯು ತಿಳಿಸಿದುದು; ಅವಳ ಪ್ರಶಂಸೆ (೨೧-೪೪).

03282001 ಮಾರ್ಕಂಡೇಯ ಉವಾಚ|

03282001a ಏತಸ್ಮಿನ್ನೇವ ಕಾಲೇ ತು ದ್ಯುಮತ್ಸೇನೋ ಮಹಾವನೇ|

03282001c ಲಬ್ಧಚಕ್ಷುಃ ಪ್ರಸನ್ನಾತ್ಮಾ ದೃಷ್ಟ್ಯಾ ಸರ್ವಂ ದದರ್ಶ ಹ||

ಮಾರ್ಕಂಡೇಯನು ಹೇಳಿದನು: “ಇದೇ ಸಮಯದಲ್ಲಿ ಮಹಾವನದಲ್ಲಿ ದ್ಯುಮತ್ಸೇನನು ತನ್ನ ಕಣ್ಣುಗಳನ್ನು ಪಡೆದು ಪ್ರಸನ್ನಾತ್ಮನಾದನು. ಕಣ್ಣುಗಳಿಂದ ಎಲ್ಲವನ್ನೂ ನೋಡಿದನು.

03282002a ಸ ಸರ್ವಾನಾಶ್ರಮಾಂಗತ್ವಾ ಶೈಬ್ಯಯಾ ಸಹ ಭಾರ್ಯಯಾ|

03282002c ಪುತ್ರಹೇತೋಃ ಪರಾಮಾರ್ತಿಂ ಜಗಾಮ ಮನುಜರ್ಷಭ||

ಮಗನ ಕಾರಣದಿಂದ ಆ ಪರಮಾರ್ತಿ ಮನುಜರ್ಷಭನು ತನ್ನ ಪತ್ನಿ ಶೈಬ್ಯೆಯೊಡನೆ ಎಲ್ಲ ಆಶ್ರಮಗಳಿಗೂ ಹೋದನು.

03282003a ತಾವಾಶ್ರಮಾನ್ನದೀಶ್ಚೈವ ವನಾನಿ ಚ ಸರಾಂಸಿ ಚ|

03282003c ತಾಂಸ್ತಾನ್ದೇಶಾನ್ವಿಚಿನ್ವಂತೌ ದಂಪತೀ ಪರಿಜಗ್ಮತುಃ||

ಆ ದಂಪತಿಗಳು ಆಶ್ರಮಗಳಲ್ಲಿ, ನದಿಗಳಲ್ಲಿ, ವನಗಳಲ್ಲಿ ಮತ್ತು ಸರೋವರಗಳಲ್ಲಿ ತಿರುಗಾಡಿ ಇವೆಲ್ಲ ಪ್ರದೇಶಗಳಲ್ಲಿಯೂ ಅವನನ್ನು ಹುಡುಕಿದರು.

03282004a ಶ್ರುತ್ವಾ ಶಬ್ದಂ ತು ಯತ್ಕಿಂ ಚಿದುನ್ಮುಖೌ ಸುತಶಮ್ಕಯಾ|

03282004c ಸಾವಿತ್ರೀಸಹಿತೋಽಭ್ಯೇತಿ ಸತ್ಯವಾನಿತ್ಯಧಾವತಾಂ||

ಯಾವ ಶಬ್ಧವನ್ನು ಕೇಳಿದರೂ ಅವರು ಮೇಲೆ ನೋಡಿ ಮಗನನ್ನು ನೆನಪಿಸಿಕೊಂಡು ಸಾವಿತ್ರಿಯೊಂದಿಗೆ ಸತ್ಯವಾನನು ಬರುತ್ತಿದ್ದಾನೆ ಎಂದು ಅಲ್ಲಿಗೆ ಓಡುತ್ತಿದ್ದರು.

03282005a ಭಿನ್ನೈಶ್ಚ ಪರುಷೈಃ ಪಾದೈಃ ಸವ್ರಣೈಃ ಶೋಣಿತೋಕ್ಷಿತೈಃ|

03282005c ಕುಶಕಂಟಕವಿದ್ಧಾಂಗಾವುನ್ಮತ್ತಾವಿವ ಧಾವತಃ||

ಹುಚ್ಚರಂತೆ ಅವರು ಸುತ್ತಾಡಿದರು; ದರ್ಬೆ ಹುಲ್ಲು ಮತ್ತು ಮುಳ್ಳುಗಳು ತಾಗಿ ಅವರ ದೇಹಗಳಲ್ಲಿ ಗೀರು ಬಿದ್ದಿದ್ದವು, ಅವರ ಕಾಲುಗಳು ಒಡೆದು, ಒರಟಾಗಿ, ಗಾಯಗೊಂಡು ರಕ್ತಸುರಿಸುತ್ತಿದ್ದವು.

03282006a ತತೋಽಭಿಸೃತ್ಯ ತೈರ್ವಿಪ್ರೈಃ ಸರ್ವೈರಾಶ್ರಮವಾಸಿಭಿಃ|

03282006c ಪರಿವಾರ್ಯ ಸಮಾಶ್ವಾಸ್ಯ ಸಮಾನೀತೌ ಸ್ವಮಾಶ್ರಮಂ||

ಆಶ್ರಮದಲ್ಲಿ ವಾಸಿಸುತ್ತಿದ್ದ ಎಲ್ಲ ವಿಪ್ರರೂ ಅಲ್ಲಿಗೆ ಬಂದು ಅವರನ್ನು ಸುತ್ತುವರೆದು ಸಂತವಿಸಿ ತಮ್ಮ ತಮ್ಮ ಆಶ್ರಮಗಳಿಗೆ ತೆರಳಿದರು.

03282007a ತತ್ರ ಭಾರ್ಯಾಸಹಾಯಃ ಸ ವೃತೋ ವೃದ್ಧೈಸ್ತಪೋಧನೈಃ|

03282007c ಆಶ್ವಾಸಿತೋ ವಿಚಿತ್ರಾರ್ಥೈಃ ಪೂರ್ವರಾಜ್ಞಾಂ ಕಥಾಶ್ರಯೈಃ||

ವೃದ್ಧ ತಪೋಧನರು ಪತ್ನಿಯ ಜೊತೆಯಿದ್ದ ಅವನ ಬಳಿ ಉಳಿದು ವಿಚಿತ್ರಾರ್ಥಗಳನ್ನು ಹೊಂದಿದ ಹಿಂದಿನ ರಾಜರುಗಳ ಕಥೆಗಳ ಮೂಲಕ ಸಮಾಧಾನಪಡಿಸಿದರು.

03282008a ತತಸ್ತೌ ಪುನರಾಶ್ವಸ್ತೌ ವೃದ್ಧೌ ಪುತ್ರದಿದೃಕ್ಷಯಾ|

03282008c ಬಾಲ್ಯೇ ವೃತ್ತಾನಿ ಪುತ್ರಸ್ಯ ಸ್ಮರಂತೌ ಭೃಶದುಃಖಿತೌ||

ಆಗ ಸ್ವಲ್ಪ ಸಮಾಧಾನಗೊಂಡಿದ್ದ ಆ ವೃದ್ಧರೀರ್ವರು ಮಗನನ್ನು ನೋಡುವ ಆಸೆಯಿಂದ ಮಗನ ಬಾಲ್ಯದಲ್ಲಿ ನಡೆದುದನ್ನು ಸ್ಮರಿಸಿಕೊಂಡು ಬಹು ದುಃಖಿತರಾದರು.

03282009a ಪುನರುಕ್ತ್ವಾ ಚ ಕರುಣಾಂ ವಾಚಂ ತೌ ಶೋಕಕರ್ಶಿತೌ|

03282009c ಹಾ ಪುತ್ರ ಹಾ ಸಾಧ್ವಿ ವಧೂಃ ಕ್ವಾಸಿ ಕ್ವಾಸೀತ್ಯರೋದತಾಂ||

ಶೋಕಕರ್ಶಿತರಾದ ಅವರು ಕರುಣಾಜನಕ ಮಾತುಗಳನ್ನೇ ಪುನಃ ಪುನಃ ಹೇಳುತ್ತಾ “ಹಾ ಮಗನೇ! ಹಾ ಸಾಧ್ವಿ ಸೊಸೆಯೇ! ಎಲ್ಲಿದ್ದೀರಿ? ಎಲ್ಲಿದ್ದೀರಿ?” ಎಂದು ರೋದಿಸಿದರು.

03282010 ಸುವರ್ಚಾ ಉವಾಚ|

03282010a ಯಥಾಸ್ಯ ಭಾರ್ಯಾ ಸಾವಿತ್ರೀ ತಪಸಾ ಚ ದಮೇನ ಚ|

03282010c ಆಚಾರೇಣ ಚ ಸಂಯುಕ್ತಾ ತಥಾ ಜೀವತಿ ಸತ್ಯವಾನ್||

ಸುವರ್ಚನು ಹೇಳಿದನು: “ತಪಸ್ಸಿನಲ್ಲಿ, ದಮದಲ್ಲಿ, ಆಚಾರದಲ್ಲಿ ಸಮ್ಯುಕ್ತಳಾಗಿರುವ ಸಾವಿತ್ರಿಯು ಯಾರ ಪತ್ನಿಯೋ ಆ ಸತ್ಯವಾನನು ಜೀವಂತನಾಗಿದ್ದಾನೆ.”

03282011 ಗೌತಮ ಉವಾಚ|

03282011a ವೇದಾಃ ಸಾಂಗಾ ಮಯಾಧೀತಾಸ್ತಪೋ ಮೇ ಸಂಚಿತಂ ಮಹತ್|

03282011c ಕೌಮಾರಂ ಬ್ರಹ್ಮಚರ್ಯಂ ಮೇ ಗುರವೋಽಗ್ನಿಶ್ಚ ತೋಷಿತಾಃ||

ಗೌತಮನು ಹೇಳಿದನು: “ನಾನು ವೇದಗಳನ್ನು ಸಾಂಗೋಪಾಂಗವಾಗಿ ತಿಳಿದಿದ್ದೇನೆ; ಬಹಳಷ್ಟು ತಪಸ್ಸನ್ನು ಸಂಗ್ರಹಿಸಿಕೊಂಡಿದ್ದೇನೆ, ಬಾಲಕನಾಗಿದ್ದಾಗ ಬ್ರಹ್ಮಚರ್ಯವನ್ನು ನಡೆಸಿದ್ದೆ ಹಾಗೂ ಗುರು ಮತ್ತು ಅಗ್ನಿಗಳನ್ನು ತೃಪ್ತಿಪಡಿಸಿದ್ದೇನೆ.

03282012a ಸಮಾಹಿತೇನ ಚೀರ್ಣಾನಿ ಸರ್ವಾಣ್ಯೇವ ವ್ರತಾನಿ ಮೇ|

03282012c ವಾಯುಭಕ್ಷೋಪವಾಸಶ್ಚ ಕುಶಲಾನಿ ಚ ಯಾನಿ ಮೇ||

03282013a ಅನೇನ ತಪಸಾ ವೇದ್ಮಿ ಸರ್ವಂ ಪರಿಚಿಕೀರ್ಷಿತಂ|

03282013c ಸತ್ಯಮೇತನ್ನಿಬೋಧ ತ್ವಂ ಧ್ರಿಯತೇ ಸತ್ಯವಾನಿತಿ||

ನಾನು ಏಕಾಗ್ರತೆಯಲ್ಲಿದ್ದುಕೊಂಡು ಎಲ್ಲ ವ್ರತಗಳನ್ನೂ ಮುಗಿಸಿದ್ದೇನೆ. ಗಾಳಿಯನ್ನು ಮಾತ್ರ ಸೇವಿಸಿ ಉಪವಾಸಮಾಡಿದ್ದೇನೆ ಮತ್ತು ಕುಶಲವನ್ನುಂಟುಮಾಡುವವುಗಳನ್ನು ಮಾಡಿದ್ದೇನೆ. ಈ ತಪಸ್ಸಿನಿಂದ ಏನು ಆಗಬೇಕೆಂದಿದೆಯೋ ಅವೆಲ್ಲವನ್ನು ತಿಳಿದಿದ್ದೇನೆ. ನನ್ನಿಂದ ಸತ್ಯವೇನೆಂದು ತಿಳಿ - ಸತ್ಯವಾನನು ಬದುಕಿದ್ದಾನೆ.”

03282014 ಶಿಷ್ಯ ಉವಾಚ|

03282014a ಉಪಾಧ್ಯಾಯಸ್ಯ ಮೇ ವಕ್ತ್ರಾದ್ಯಥಾ ವಾಕ್ಯಂ ವಿನಿಃಸೃತಂ|

03282014c ನೈತಜ್ಜಾತು ಭವೇನ್ಮಿಥ್ಯಾ ತಥಾ ಜೀವತಿ ಸತ್ಯವಾನ್||

ಶಿಷ್ಯನು ಹೇಳಿದನು: “ನನ್ನ ಉಪಾಧ್ಯಾಯನ ಬಾಯಿಯಿಂದ ಹೊರಟ ವಾಕ್ಯವು ಎಂದೂ ಸುಳ್ಳಾಗಿಲ್ಲ. ಆದುದರಿಂದ ಸತ್ಯವಾನನು ಜೀವಿತನಾಗಿರಲೇ ಬೇಕು.”

03282015 ಋಷಯ ಊಚುಃ|

03282015a ಯಥಾಸ್ಯ ಭಾರ್ಯಾ ಸಾವಿತ್ರೀ ಸರ್ವೈರೇವ ಸುಲಕ್ಷಣೈಃ|

03282015c ಅವೈಧವ್ಯಕರೈರ್ಯುಕ್ತಾ ತಥಾ ಜೀವತಿ ಸತ್ಯವಾನ್||

ಋಷಿಗಳು ಹೇಳಿದರು: “ಅವನ ಪತ್ನಿ ಸಾವಿತ್ರಿಯು ಅವೈಧವ್ಯವನ್ನು ಸೂಚಿಸುವ ಎಲ್ಲ ಸುಲಕ್ಷಣಗಳನ್ನೂ ಹೊಂದಿದ್ದಾಳೆ. ಆದುದರಿಂದ ಸತ್ಯವಾನನು ಬದುಕಿದ್ದಾನೆ.”

03282016 ಭಾರದ್ವಾಜ ಉವಾಚ|

03282016a ಯಥಾಸ್ಯ ಭಾರ್ಯಾ ಸಾವಿತ್ರೀ ತಪಸಾ ಚ ದಮೇನ ಚ|

03282016c ಆಚಾರೇಣ ಚ ಸಮ್ಯುಕ್ತಾ ತಥಾ ಜೀವತಿ ಸತ್ಯವಾನ್||

ಭಾರದ್ವಾಜನು ಹೇಳಿದನು: “ತಪಸ್ಸಿನಲ್ಲಿ, ದಮದಲ್ಲಿ, ಆಚಾರದಲ್ಲಿ ಸಮ್ಯುಕ್ತಳಾಗಿರುವ ಸಾವಿತ್ರಿಯು ಯಾರ ಪತ್ನಿಯೋ ಆ ಸತ್ಯವಾನನು ಜೀವಂತನಾಗಿದ್ದಾನೆ.”

03282017 ದಾಲ್ಭ್ಯ ಉವಾಚ|

03282017a ಯಥಾ ದೃಷ್ಟಿಃ ಪ್ರವೃತ್ತಾ ತೇ ಸಾವಿತ್ರ್ಯಾಶ್ಚ ಯಥಾ ವ್ರತಂ|

03282017c ಗತಾಹಾರಮಕೃತ್ವಾ ಚ ತಥಾ ಜೀವತಿ ಸತ್ಯವಾನ್||

ದಾಲ್ಭ್ಯನು ಹೇಳಿದನು: “ಹೇಗೆ ನಿನ್ನ ದೃಷ್ಟಿಯು ಹಿಂದಿರುಗಿತೋ, ಹೇಗೆ ಸಾವಿತ್ರಿಯು ಉಪವಾಸವಿದ್ದುಕೊಂಡು ವ್ರತವನ್ನು ಸಂಪೂರ್ಣಗೊಳಿಸಿದಳೋ ಹಾಗೆ ಸತ್ಯವಾನನೂ ಜೀವಿತನಾಗಿದ್ದಾನೆ.”

03282018 ಮಾಂಡವ್ಯ ಉವಾಚ|

03282018a ಯಥಾ ವದಂತಿ ಶಾಂತಾಯಾಂ ದಿಶಿ ವೈ ಮೃಗಪಕ್ಷಿಣಃ|

03282018c ಪಾರ್ಥಿವೀ ಚ ಪ್ರವೃತ್ತಿಸ್ತೇ ತಥಾ ಜೀವತಿ ಸತ್ಯವಾನ್||

ಮಾಂಡವ್ಯನು ಹೇಳಿದನು: “ದಿಕ್ಕುಗಳಲ್ಲಿ ಮೃಗಪಕ್ಷಿಗಳು ಶಾಂತರಾಗಿ ಕೂಗುತ್ತಿರುವವು; ನೀನೂ ಕೂಡ ರಾಜನಂತೆ ನಡೆದುಕೊಳ್ಳುತ್ತಿರುವೆ; ಹಾಗೆಯೇ ಸತ್ಯವಾನನೂ ಜೀವಿತನಾಗಿದ್ದಾನೆ.”

03282019 ಧೌಮ್ಯ ಉವಾಚ|

03282019a ಸರ್ವೈರ್ಗುಣೈರುಪೇತಸ್ತೇ ಯಥಾ ಪುತ್ರೋ ಜನಪ್ರಿಯಃ|

03282019c ದೀರ್ಘಾಯುರ್ಲಕ್ಷಣೋಪೇತಸ್ತಥಾ ಜೀವತಿ ಸತ್ಯವಾನ್||

ಧೌಮ್ಯನು ಹೇಳಿದನು: “ನಿನ್ನ ಪುತ್ರನು ಜನಪ್ರಿಯನೂ ಸರ್ವ ಗುಣೋಪೇತನೂ ದೀರ್ಘಾರ್ಯುಷ್ಯದ ಲಕ್ಷಣೋಪೇತನೂ ಆಗಿರುವುದರಿಂದ ಸತ್ಯವಾನನು ಜೀವಿತನಾಗಿದ್ದಾನೆ.””

03282020 ಮಾರ್ಕಂಡೇಯ ಉವಾಚ|

03282020a ಏವಮಾಶ್ವಾಸಿತಸ್ತೈಸ್ತು ಸತ್ಯವಾಗ್ಭಿಸ್ತಪಸ್ವಿಭಿಃ|

03282020c ತಾಂಸ್ತಾನ್ವಿಗಣಯನ್ನರ್ಥಾನವಸ್ಥಿತ ಇವಾಭವತ್||

ಮಾರ್ಕಂಡೇಯನು ಹೇಳಿದನು: “ಈ ರೀತಿ ಸತ್ಯವಾದಿ ತಪಸ್ವಿಗಳು ಅವನಿಗೆ ಆಶ್ವಾಸನೆ ನೀಡುತ್ತಿರಲು ಅವರ ಹೇಳಿಕೆಗಳ ಅರ್ಥವನ್ನು ಗಣನೆಗೆ ತೆಗೆದುಕೊಂಡು ರಾಜನು ಸುಮ್ಮನಾದನು.

03282021a ತತೋ ಮುಹೂರ್ತಾತ್ಸಾವಿತ್ರೀ ಭರ್ತ್ರಾ ಸತ್ಯವತಾ ಸಹ|

03282021c ಆಜಗಾಮಾಶ್ರಮಂ ರಾತ್ರೌ ಪ್ರಹೃಷ್ಟಾ ಪ್ರವಿವೇಶ ಹ||

ಆಗ ಸ್ವಲ್ಪ ಕ್ಷಣದಲ್ಲಿಯೇ ಸಾವಿತ್ರಿಯು ಪತಿ ಸತ್ಯವತನೊಂದಿಗೆ ಆಶ್ರಮಕ್ಕೆ ಬಂದು ಸಂತೋಷದಿಂದ ಪ್ರವೇಶಿಸಿದಳು.

03282022 ಬ್ರಾಹ್ಮಣಾ ಊಚುಃ|

03282022a ಪುತ್ರೇಣ ಸಂಗತಂ ತ್ವಾದ್ಯ ಚಕ್ಷುಷ್ಮಂತಂ ನಿರೀಕ್ಷ್ಯ ಚ|

03282022c ಸರ್ವೇ ವಯಂ ವೈ ಪೃಚ್ಚಾಮೋ ವೃದ್ಧಿಂ ತೇ ಪೃಥಿವೀಪತೇ||

ಬ್ರಾಹ್ಮಣರು ಹೇಳಿದರು: “ಪೃಥಿವೀಪತೇ! ಇಂದು ಪುತ್ರನನ್ನು ಸೇರಿದುದನ್ನು ಕಣ್ಣುಗಳನ್ನು ಪಡೆದುದನ್ನು ನೋಡಿ ನಾವೆಲ್ಲರೂ ನಿನ್ನ ವೃದ್ಧಿಯ ಕುರಿತು ಕೇಳುತ್ತಿದ್ದೇವೆ.

03282023a ಸಮಾಗಮೇನ ಪುತ್ರಸ್ಯ ಸಾವಿತ್ರ್ಯಾ ದರ್ಶನೇನ ಚ|

03282023c ಚಕ್ಷುಷಶ್ಚಾತ್ಮನೋ ಲಾಭಾತ್ತ್ರಿಭಿರ್ದಿಷ್ಟ್ಯಾ ವಿವರ್ಧಸೇ||

ಪುತ್ರನೊಂದಿಗೆ ಮಿಲನ, ಸಾವಿತ್ರಿಯ ದರ್ಶನ ಮತ್ತು ನಿನ್ನ ಕಣ್ಣುಗಳನ್ನು ಪಡೆದುದು ಈ ರೀತಿ ಮೂರು ವಿಧದ ಅದೃಷ್ಟವಂತನಾಗಿ ಲಾಭದಿಂದ ವರ್ಧಿಸುತ್ತಿದ್ದೀಯೆ.

03282024a ಸರ್ವೈರಸ್ಮಾಭಿರುಕ್ತಂ ಯತ್ತಥಾ ತನ್ನಾತ್ರ ಸಂಶಯಃ|

03282024c ಭೂಯೋ ಭೂಯಶ್ಚ ವೃದ್ಧಿಸ್ತೇ ಕ್ಷಿಪ್ರಮೇವ ಭವಿಷ್ಯತಿ||

ನಾವೆಲ್ಲರೂ ಹೇಳಿದುದು ಹಾಗೆಯೇ ನಡೆಯಿತು ಎನ್ನುವುದರಲ್ಲಿ ಸಂಶಯವಿಲ್ಲ. ನಿನ್ನ ಬೆಳವಣಿಗೆಯಾಗಲಿ ಎಂದು ನಾವು ಪುನಃ ಪುನಃ ಹರಸುತ್ತೇವೆ.””

03282025 ಮಾರ್ಕಂಡೇಯ ಉವಾಚ|

03282025a ತತೋಽಗ್ನಿಂ ತತ್ರ ಸಂಜ್ವಾಲ್ಯ ದ್ವಿಜಾಸ್ತೇ ಸರ್ವ ಏವ ಹಿ|

03282025c ಉಪಾಸಾಂ ಚಕ್ರಿರೇ ಪಾರ್ಥ ದ್ಯುಮತ್ಸೇನಂ ಮಹೀಪತಿಂ||

ಮಾರ್ಕಂಡೇಯನು ಹೇಳಿದನು: “ಪಾರ್ಥ! ಅನಂತರ ಅಲ್ಲಿ ಅಗ್ನಿಯನ್ನು ಉರಿಸಿ ಆ ಎಲ್ಲ ದ್ವಿಜರೂ ಮಹೀಪತಿ ದ್ಯುಮತ್ಸೇನನನ್ನು ಸುತ್ತುವರೆದು ಕುಳಿತುಕೊಂಡರು.

03282026a ಶೈಬ್ಯಾ ಚ ಸತ್ಯವಾಂಶ್ಚೈವ ಸಾವಿತ್ರೀ ಚೈಕತಃ ಸ್ಥಿತಾಃ|

03282026c ಸರ್ವೈಸ್ತೈರಭ್ಯನುಜ್ಞಾತಾ ವಿಶೋಕಾಃ ಸಮುಪಾವಿಶನ್||

ಶೈಬ್ಯಾ, ಸತ್ಯವಾನ್ ಮತ್ತು ಸಾವಿತ್ರಿಯರು ಅಲ್ಲಿಯೇ ನಿಂತುಕೊಂಡಿದ್ದರು. ಆಗ ಅವರಿಗೆ ಎಲ್ಲರೂ ಕುಳಿತುಕೊಳ್ಳಲು ಅನುಮತಿ ನೀಡಲು ಸಂತೋಷದಿಂದ ಜೊತೆಯಲ್ಲಿ ಕುಳಿತುಕೊಂಡರು.

03282027a ತತೋ ರಾಜ್ಞಾ ಸಹಾಸೀನಾಃ ಸರ್ವೇ ತೇ ವನವಾಸಿನಃ|

03282027c ಜಾತಕೌತೂಹಲಾಃ ಪಾರ್ಥ ಪಪ್ರಚ್ಚುರ್ನೃಪತೇಃ ಸುತಂ||

ಪಾರ್ಥ! ರಾಜನ ಜೊತೆಗೆ ಕುಳಿತಿದ್ದ ಆ ಎಲ್ಲ ವನವಾಸಿಗರೂ ಕುತೂಹಲರಾಗಿ ರಾಜಕುಮಾರನನ್ನು ಕೇಳಿದರು.

03282028a ಪ್ರಾಗೇವ ನಾಗತಂ ಕಸ್ಮಾತ್ಸಭಾರ್ಯೇಣ ತ್ವಯಾ ವಿಭೋ|

03282028c ವಿರಾತ್ರೇ ಚಾಗತಂ ಕಸ್ಮಾತ್ಕೋಽನುಬಂಧಶ್ಚ ತೇಽಭವತ್||

“ವಿಭೋ! ಪತ್ನಿಯೊಂದಿಗೆ ನೀನು ಇದಕ್ಕೂ ಮೊದಲು ಏಕೆ ಬರಲಿಲ್ಲ? ಈ ವಿರಾತ್ರಿಯಲ್ಲಿ ಏಕೆ ಬಂದಿರಿ? ನಿಮ್ಮನ್ನು ಏನು ತಡೆಹಿಡಿಯಿತು?

03282029a ಸಂತಾಪಿತಃ ಪಿತಾ ಮಾತಾ ವಯಂ ಚೈವ ನೃಪಾತ್ಮಜ|

03282029c ನಾಕಸ್ಮಾದಿತಿ ಜಾನೀಮಸ್ತತ್ಸರ್ವಂ ವಕ್ತುಮರ್ಹಸಿ||

ರಾಜಕುಮಾರ! ನಿನ್ನ ತಂದೆ-ತಾಯಂದಿರು ಹಾಗೆಯೇ ನಾವೂ ಚಿಂತಿತರಾಗಿದ್ದೆವು. ಇದು ಅಕಸ್ಮಾತ್ತಾಗಿ ಆಗಿರುವುದು ಎಂದು ನಾವೂ ಕೂಡ ತಿಳಿದಿದ್ದೇವೆ. ಎಲ್ಲವನ್ನೂ ಹೇಳಬೇಕು.”

03282030 ಸತ್ಯವಾನುವಾಚ|

03282030a ಪಿತ್ರಾಹಮಭ್ಯನುಜ್ಞಾತಃ ಸಾವಿತ್ರೀಸಹಿತೋ ಗತಃ|

03282030c ಅಥ ಮೇಽಭೂಚ್ಚಿರೋದುಃಖಂ ವನೇ ಕಾಷ್ಠಾನಿ ಭಿಂದತಃ||

ಸತ್ಯವಾನನು ಹೇಳಿದನು: “ನಾನು ತಂದೆ-ತಾಯಿಯರ ಅನುಮತಿಯನ್ನು ಪಡೆದು ಸಾವಿತ್ರಿಯೊಡನೆ ಹೋಗಿದ್ದೆ. ಅಲ್ಲಿ ಕಟ್ಟಿಗೆಯನ್ನು ಕಡಿಯುತ್ತಿದ್ದಾಗ ತಲೆನೋವು ಉಂಟಾಯಿತು.

03282031a ಸುಪ್ತಶ್ಚಾಹಂ ವೇದನಯಾ ಚಿರಮಿತ್ಯುಪಲಕ್ಷಯೇ|

03282031c ತಾವತ್ಕಾಲಂ ಚ ನ ಮಯಾ ಸುಪ್ತಪೂರ್ವಂ ಕದಾ ಚನ||

ವೇದನೆಯಿಂದ ತುಂಬಾ ಹೊತ್ತು ನಾನು ಮಲಗಿದ್ದೆ ಎಂದಿಷ್ಟೇ ನನಗೆ ತಿಳಿದಿದೆ. ಎಷ್ಟುಸಮಯದವರೆಗೆ ನಾನು ಮಲಗಿದ್ದೆನೋ ಅಷ್ಟು ಸಮಯ ನಾನು ಹಿಂದೆ ಎಂದೂ ಮಲಗಿರಲಿಲ್ಲ.

03282032a ಸರ್ವೇಷಾಮೇವ ಭವತಾಂ ಸಂತಾಪೋ ಮಾ ಭವೇದಿತಿ|

03282032c ಅತೋ ವಿರಾತ್ರಾಗಮನಂ ನಾನ್ಯದಸ್ತೀಹ ಕಾರಣಂ||

ನೀವೆಲ್ಲರೂ ಇಲ್ಲಿ ಸಂತಾಪಪಡಬಾರದು ಎಂದು ವಿರಾತ್ರಿಯಾದರೂ ಬಂದಿದ್ದೇನೆ. ಬೇರೆ ಏನೂ ಇದಕ್ಕೆ ಕಾರಣವಿಲ್ಲ.”

03282033 ಗೌತಮ ಉವಾಚ|

03282033a ಅಕಸ್ಮಾಚ್ಚಕ್ಷುಷಃ ಪ್ರಾಪ್ತಿರ್ದ್ಯುಮತ್ಸೇನಸ್ಯ ತೇ ಪಿತುಃ|

03282033c ನಾಸ್ಯ ತ್ವಂ ಕಾರಣಂ ವೇತ್ಥ ಸಾವಿತ್ರೀ ವಕ್ತುಮರ್ಹತಿ||

ಗೌತಮನು ಹೇಳಿದನು: “ನಿನ್ನ ಪಿತ ದ್ಯುಮತ್ಸೇನನ ಕಣ್ಣುಗಳು ಅಕಸ್ಮಾತ್ತಾಗಿ ಮರಳಿಬಂದವು. ಇದಕ್ಕೆ ಕಾರಣವು ನಿನಗೆ ತಿಳಿಯದಿದ್ದರೆ ಸಾವಿತ್ರಿಯು ಹೇಳಬೇಕು.

03282034a ಶ್ರೋತುಮಿಚ್ಚಾಮಿ ಸಾವಿತ್ರಿ ತ್ವಂ ಹಿ ವೇತ್ಥ ಪರಾವರಂ|

03282034c ತ್ವಾಂ ಹಿ ಜಾನಾಮಿ ಸಾವಿತ್ರಿ ಸಾವಿತ್ರೀಮಿವ ತೇಜಸಾ||

ಸಾವಿತ್ರಿ! ಪರಾವರವನ್ನು ತಿಳಿದಿರುವ ನಿನ್ನನ್ನು ಕೇಳಲು ಬಯಸುತ್ತೇನೆ. ಸಾವಿತ್ರಿ! ನೀನು ಸಾವಿತ್ರಿಯ ತೇಜಸ್ಸಿನವಳು ಎಂದು ತಿಳಿದಿದ್ದೇನೆ.

03282035a ತ್ವಮತ್ರ ಹೇತುಂ ಜಾನೀಷೇ ತಸ್ಮಾತ್ಸತ್ಯಂ ನಿರುಚ್ಯತಾಂ|

03282035c ರಹಸ್ಯಂ ಯದಿ ತೇ ನಾಸ್ತಿ ಕಿಂ ಚಿದತ್ರ ವದಸ್ವ ನಃ||

ಇವುಗಳ ಕಾರಣಗಳೆಲ್ಲವನ್ನೂ ನೀನು ತಿಳಿದಿರುವೆ. ಆದುದರಿಂದ ಸತ್ಯವು ಹೊರಬರಲಿ. ನಿನಗೆ ಇದರಲ್ಲಿ ರಹಸ್ಯವ್ಯಾವುದೂ ಇಲ್ಲದಿದ್ದರೆ ಹೇಳು.”

03282036 ಸಾವಿತ್ರ್ಯುವಾಚ|

03282036a ಏವಮೇತದ್ಯಥಾ ವೇತ್ಥ ಸಂಕಲ್ಪೋ ನಾನ್ಯಥಾ ಹಿ ವಃ|

03282036c ನ ಚ ಕಿಂ ಚಿದ್ರಹಸ್ಯಂ ಮೇ ಶ್ರೂಯತಾಂ ತಥ್ಯಮತ್ರ ಯತ್||

ಸಾವಿತ್ರಿಯು ಹೇಳಿದಳು: “ನಡೆದಿರುವುದು ಎಲ್ಲವೂ ನಿಮಗೆ ತಿಳಿದೇ ಇದೆ. ಸಂಕಲ್ಪವು ಅನ್ಯಥಾ ಇಲ್ಲ. ಇದರಲ್ಲಿ ನನಗೆ ಏನೂ ರಹಸ್ಯವಿಲ್ಲ. ಸತ್ಯವನ್ನು ಕೇಳಿ.

03282037a ಮೃತ್ಯುರ್ಮೇ ಭರ್ತುರಾಖ್ಯಾತೋ ನಾರದೇನ ಮಹಾತ್ಮನಾ|

03282037c ಸ ಚಾದ್ಯ ದಿವಸಃ ಪ್ರಾಪ್ತಸ್ತತೋ ನೈನಂ ಜಹಾಮ್ಯಹಂ||

ಮಹಾತ್ಮ ನಾರದನು ನನ್ನ ಪತಿಯ ಸಾವಿನ ಕುರಿತು ಹೇಳಿದ್ದನು. ಆದುದರಿಂದ ಇಂದಿನ ದಿವಸ ನಾನು ಅವನನ್ನು ಬಿಟ್ಟಿರಲಿಲ್ಲ.

03282038a ಸುಪ್ತಂ ಚೈನಂ ಯಮಃ ಸಾಕ್ಷಾದುಪಾಗಚ್ಚತ್ಸಕಿಂಕರಃ|

03282038c ಸ ಏನಮನಯದ್ಬದ್ಧ್ವಾ ದಿಶಂ ಪಿತೃನಿಷೇವಿತಾಂ||

ಅವನು ಮಲಗಿದಾಗ ಸಾಕ್ಷಾತ್ ಯಮನೇ ಕಿಂಕರರೊಂದಿಗೆ ಅಲ್ಲಿಗೆ ಬಂದನು. ಅವನು ಇವನನ್ನು ಬಂಧಿಸಿ ಪಿತೃಗಳು ವಾಸಿಸುವ ದಿಕ್ಕಿಗೆ ಕರೆದೊಯ್ದನು.

03282039a ಅಸ್ತೌಷಂ ತಮಹಂ ದೇವಂ ಸತ್ಯೇನ ವಚಸಾ ವಿಭುಂ|

03282039c ಪಂಚ ವೈ ತೇನ ಮೇ ದತ್ತಾ ವರಾಃ ಶೃಣುತ ತಾನ್ಮಮ||

ಆಗ ನಾನು ಆ ದೇವ ವಿಭುವಿಗೆ ಸತ್ಯ ವಚನಗಳಿಂದ ತೃಪ್ತಿಗೊಳಿಸಿದೆ ಮತ್ತು ಅವನು ನನಗೆ ಐದು ವರಗಳನ್ನು ಕೊಟ್ಟನು. ನನಗಿತ್ತ ಆ ವರಗಳನ್ನು ಕೇಳಿ.

03282040a ಚಕ್ಷುಷೀ ಚ ಸ್ವರಾಜ್ಯಂ ಚ ದ್ವೌ ವರೌ ಶ್ವಶುರಸ್ಯ ಮೇ|

03282040c ಲಬ್ಧಂ ಪಿತುಃ ಪುತ್ರಶತಂ ಪುತ್ರಾಣಾಮಾತ್ಮನಃ ಶತಂ||

ಕಣ್ಣುಗಳು ಮತ್ತು ಸ್ವರಾಜ್ಯ ಈ ಎರಡು ವರಗಳು ನನ್ನ ಮಾವನಿಗೆ. ನೂರು ಮಕ್ಕಳಾಗಬೇಕೆಂದು ನನ್ನ ತಂದೆಗೆ ಮತ್ತು ನೂರು ಮಕ್ಕಳು ನನಗೆ.

03282041a ಚತುರ್ವರ್ಷಶತಾಯುರ್ಮೇ ಭರ್ತಾ ಲಬ್ಧಶ್ಚ ಸತ್ಯವಾನ್|

03282041c ಭರ್ತುರ್ಹಿ ಜೀವಿತಾರ್ಥಂ ತು ಮಯಾ ಚೀರ್ಣಂ ಸ್ಥಿರಂ ವ್ರತಂ||

ನನ್ನ ಪತಿ ಸತ್ಯವಾನನಿಗೆ ನಾನೂರು ವರ್ಷಗಳ ಆಯಸ್ಸೂ ದೊರೆಯಿತು. ಪತಿಯ ಜೀವಕ್ಕಾಗಿಯೇ ನಾನು ಆ ಚೀರ್ಣಸ್ಥಿರ ವ್ರತವನ್ನು ಕೈಗೊಂಡಿದ್ದೆನು.

03282042a ಏತತ್ಸತ್ಯಂ ಮಯಾಖ್ಯಾತಂ ಕಾರಣಂ ವಿಸ್ತರೇಣ ವಃ|

03282042c ಯಥಾ ವೃತ್ತಂ ಸುಖೋದರ್ಕಮಿದಂ ದುಃಖಂ ಮಹನ್ಮಮ||

ಸತ್ಯವಾದ ಈ ಕಾರಣವನ್ನು ನಾನು ವಿಸ್ತಾರವಾಗಿ ಹೇಳಿದ್ದೇನೆ. ನಾನು ಅನುಭವಿಸುತ್ತಿದ್ದ ಈ ಮಹಾದುಃಖವು ಇಂದು ಸಂತೋಷವಾಗಿ ಪರಿಣಮಿಸಿತು.”

03282043 ಋಷಯ ಊಚುಃ|

03282043a ನಿಮಜ್ಜಮಾನಂ ವ್ಯಸನೈರಭಿದ್ರುತಂ|

         ಕುಲಂ ನರೇಂದ್ರಸ್ಯ ತಮೋಮಯೇ ಹ್ರದೇ|

03282043c ತ್ವಯಾ ಸುಶೀಲೇ ಧೃತಧರ್ಮಪುಣ್ಯಯಾ|

         ಸಮುದ್ಧೃತಂ ಸಾಧ್ವಿ ಪುನಃ ಕುಲೀನಯಾ||

ಋಷಿಗಳು ಹೇಳಿದರು: “ಈ ನರೇಂದ್ರನ ಕುಲವು ವ್ಯಸನಗಳಿಂದ ಘಾತಿಗೊಂಡು ಹೆಚ್ಚು ಹೆಚ್ಚು ಕತ್ತಲಿನಲ್ಲಿ ಮುಳುಗಿಕೊಂಡಿತ್ತು. ಸುಶೀಲೆಯೂ, ಧರ್ಮಪುಣ್ಯಗಳಲ್ಲಿ ಧೃತಳಾಗಿರುವ, ಸಾಧ್ವಿ, ಮತ್ತು ಉತ್ತಮ ಕುಲದಲ್ಲಿ ಜನಿಸಿದ ನಿನ್ನಿಂದ ಅದು ಮೇಲಕ್ಕೆತ್ತಲ್ಪಟ್ಟಿತು.””

03282044 ಮಾರ್ಕಂಡೇಯ ಉವಾಚ|

03282044a ತಥಾ ಪ್ರಶಸ್ಯ ಹ್ಯಭಿಪೂಜ್ಯ ಚೈವ ತೇ|

         ವರಸ್ತ್ರಿಯಂ ತಾಮೃಷಯಃ ಸಮಾಗತಾಃ|

03282044c ನರೇಂದ್ರಮಾಮಂತ್ರ್ಯ ಸಪುತ್ರಮಂಜಸಾ|

         ಶಿವೇನ ಜಗ್ಮುರ್ಮುದಿತಾಃ ಸ್ವಮಾಲಯಂ||

ಮಾರ್ಕಂಡೇಯನು ಹೇಳಿದನು: “ಈ ರೀತಿ ಆ ವರಸ್ತ್ರೀಯನ್ನು ಪ್ರಶಂಸಿಸಿ, ಗೌರವಿಸಿ ಅಲ್ಲಿ ಸೇರಿದ್ದ ಅ ಋಷಿಗಳು ನರೇಂದ್ರ ಮತ್ತು ಅವನ ಮಗನ ಅನುಮತಿಯನ್ನು ಪಡೆದು ತಮ್ಮ ತಮ್ಮ ಆಶ್ರಮಗಳಿಗೆ ಸಂತೋಷದಿಂದ ಹೊರಟು ಹೋದರು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ಪತಿವ್ರತಾಮಹಾತ್ಮ್ಯೇ ಸಾವಿತ್ರ್ಯುಪಾಖ್ಯಾನೇ ದ್ವೈಶೀತ್ಯಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ಪತಿವ್ರತಾಮಹಾತ್ಮ್ಯೆಯಲ್ಲಿ ಸಾವಿತ್ರ್ಯುಪಾಖ್ಯಾನದಲ್ಲಿ ಇನ್ನೂರಾಎಂಭತ್ತೆರಡನೆಯ ಅಧ್ಯಾಯವು.

Related image

Comments are closed.