Aranyaka Parva: Chapter 253

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೫೩

ಬೇಟೆಯಾಡಲು ಹೋಗಿದ್ದ ಯುಧಿಷ್ಠಿರನು ಅಪಶಕುನಗಳನ್ನು ಕಂಡು ತಮ್ಮಂದಿರೊಡನೆ ವೇಗವಾಗಿ ಆಶ್ರಮಕ್ಕೆ ಮರಳಿದುದು (೧-೯). ಅಳುತ್ತಿರುವ ದಾತ್ರಾಯಿಕೆ ಬಾಲಕಿಯನ್ನು ಇಂದ್ರಸೇನನು ಪ್ರಶ್ನಿಸಿ ವಿಷಯವನ್ನು ತಿಳಿದುಕೊಂಡಿದುದು (೧೦-೨೧). ವೇಗದಲ್ಲಿ ಹೋಗಿ ಜಯದ್ರಥನ ಮೇಲೆ ಪಾಂಡವರು ಆಕ್ರಮಣ ಮಾಡಿದ್ದುದು (೨೨-೨೬).

03253001 ವೈಶಂಪಾಯನ ಉವಾಚ|

03253001a ತತೋ ದಿಶಃ ಸಂಪ್ರವಿಹೃತ್ಯ ಪಾರ್ಥಾ|

        ಮೃಗಾನ್ವರಾಹಾನ್ಮಹಿಷಾಂಶ್ಚ ಹತ್ವಾ|

03253001c ಧನುರ್ಧರಾಃ ಶ್ರೇಷ್ಠತಮಾಃ ಪೃಥಿವ್ಯಾಂ|

        ಪೃಥಕ್ಚರಂತಃ ಸಹಿತಾ ಬಭೂವುಃ||

ವೈಶಂಪಾಯನನು ಹೇಳಿದನು: “ಭೂಮಿಯಲ್ಲಿಯೇ ಶ್ರೇಷ್ಠತಮ ಧನುರ್ಧರ ಪಾರ್ಥರು ಎಲ್ಲ ದಿಕ್ಕುಗಳಲ್ಲಿಯೂ ಪ್ರತ್ಯೇಕವಾಗಿ ಹೋಗಿ, ಜಿಂಕೆ, ಹಂದಿ ಮತ್ತು ಕಾಡೆಮ್ಮೆಗಳನ್ನು ಕೊಂದು ಒಟ್ಟಿಗೆ ಸೇರಿದರು.

03253002a ತತೋ ಮೃಗವ್ಯಾಲಗಣಾನುಕೀರ್ಣಂ|

        ಮಹಾವನಂ ತದ್ವಿಹಗೋಪಘುಷ್ಟಂ|

03253002c ಭ್ರಾತೄಂಶ್ಚ ತಾನಭ್ಯವದದ್ಯುಧಿಷ್ಠಿರಃ|

        ಶ್ರುತ್ವಾ ಗಿರೋ ವ್ಯಾಹರತಾಂ ಮೃಗಾಣಾಂ||

ಆಗ ಮೃಗವ್ಯಾಲಗಣಗಳಿಂದ ತುಂಬಿದ್ದ, ಪಕ್ಷಿಗಳ ನಾದದಿಂದ ಗುಂಜಿಸುತ್ತಿದ್ದ ಆ ಮಹಾವನದಲ್ಲಿ ಸಂಚರಿಸುತ್ತಿದ್ದ ಜಿಂಕೆಗಳ ಕೂಗನ್ನು ಕೇಳಿ ಯುಧಿಷ್ಠಿರನು ತಮ್ಮಂದಿರಿಗೆ ಹೇಳಿದನು:

03253003a ಆದಿತ್ಯದೀಪ್ತಾಂ ದಿಶಮಭ್ಯುಪೇತ್ಯ|

        ಮೃಗದ್ವಿಜಾಃ ಕ್ರೂರಮಿಮೇ ವದಂತಿ|

03253003c ಆಯಾಸಮುಗ್ರಂ ಪ್ರತಿವೇದಯಂತೋ|

        ಮಹಾಹವಂ ಶತ್ರುಭಿರ್ವಾವಮಾನಂ||

“ಸೂರ್ಯನು ಬೆಳಗುತ್ತಿರುವ ದಿಕ್ಕನ್ನು ಎದುರಿಸಿ ಜಿಂಕೆ ಮತ್ತು ಪಕ್ಷಿಗಳು ಕ್ರೂರವಾಗಿ ಕೂಗುತ್ತಾ, ಉಗ್ರವಾದ ವೇದನೆಯಲ್ಲಿರುವಂತೆ, ಶತ್ರುಗಳ ಮಹಾ ಆಕ್ರಮಣವನ್ನು ಸೂಚಿಸಿ ಓಡುತ್ತಿವೆ.

03253004a ಕ್ಷಿಪ್ರಂ ನಿವರ್ತಧ್ವಮಲಂ ಮೃಗೈರ್ನೋ|

        ಮನೋ ಹಿ ಮೇ ದೂಯತಿ ದಹ್ಯತೇ ಚ|

03253004c ಬುದ್ಧಿಂ ಸಮಾಚ್ಚಾದ್ಯ ಚ ಮೇ ಸಮನ್ಯುರ್|

        ಉದ್ಧೂಯತೇ ಪ್ರಾಣಪತಿಃ ಶರೀರೇ||

ಶೀಘ್ರವಾಗಿ ಹಿಂದಿರುಗೋಣ! ಜಿಂಕೆಗಳನ್ನು ಬಿಟ್ಟುಬಿಡೋಣ. ನನ್ನ ಮನಸ್ಸು ಕೂಡ ಉರಿಯುತ್ತಿರುವ ಬೆಂಕಿಯಂತೆ ಸುಡುತ್ತಿದೆ. ಶರೀರದಲ್ಲಿರುವ ಪ್ರಾಣಪತಿಯು ಭುಗಿಲೆದ್ದು ನನ್ನ ಬುದ್ಧಿಯನ್ನು ಅದರಿಂದ ಸುಡುತ್ತಿದ್ದಾನೆ.

03253005a ಸರಃ ಸುಪರ್ಣೇನ ಹೃತೋರಗಂ ಯಥಾ|

        ರಾಷ್ಟ್ರಂ ಯಥಾರಾಜಕಮಾತ್ತಲಕ್ಷ್ಮಿ|

03253005c ಏವಂವಿಧಂ ಮೇ ಪ್ರತಿಭಾತಿ ಕಾಮ್ಯಕಂ|

        ಶೌಂಡೈರ್ಯಥಾ ಪೀತರಸಶ್ಚ ಕುಂಭಃ||

ಗರುಡನಿಂದ ಹಾವುಗಳನ್ನು ಅಪಹರಿಸಲ್ಪಟ್ಟ ಸರೋವರದಂತೆ, ರಾಜನನ್ನೂ ಲಕ್ಷ್ಮಿಯನ್ನೂ ಕಳೆದುಕೊಂಡ ರಾಷ್ಟ್ರದಂತೆ, ಅಥವಾ ಕುಡುಕರಿಂದ ಖಾಲಿಯಾದ ಮದ್ಯದ ಕೊಡದಂತೆ, ನನಗೆ ಕಾಮ್ಯಕವು ತೋರುತ್ತಿದೆ.”

03253006a ತೇ ಸೈಂಧವೈರತ್ಯನಿಲೌಘವೇಗೈರ್|

        ಮಹಾಜವೈರ್ವಾಜಿಭಿರುಹ್ಯಮಾನಾಃ|

03253006c ಯುಕ್ತೈರ್ಬೃಹದ್ಭಿಃ ಸುರಥೈರ್ನೃವೀರಾಸ್|

        ತದಾಶ್ರಮಾಯಾಭಿಮುಖಾ ಬಭೂವುಃ||

ಅವರು ಸೈಂಧವದೇಶದ ವೇಗಯುಕ್ತ ಕುದುರೆಗಳನ್ನು ಕಟ್ಟಿದ ರಥಗಳನ್ನೇರಿ ಗಾಳಿ ಅಥವಾ ಪ್ರವಾಹದ ವೇಗದಲ್ಲಿ ಆ ವೀರರು ಆಶ್ರಮಕ್ಕೆ ಮರಳಿದರು.

03253007a ತೇಷಾಂ ತು ಗೋಮಾಯುರನಲ್ಪಘೋಷೋ|

        ನಿವರ್ತತಾಂ ವಾಮಮುಪೇತ್ಯ ಪಾರ್ಶ್ವಂ|

03253007c ಪ್ರವ್ಯಾಹರತ್ತಂ ಪ್ರವಿಮೃಶ್ಯ ರಾಜಾ|

        ಪ್ರೋವಾಚ ಭೀಮಂ ಚ ಧನಂಜಯಂ ಚ||

ಅವರು ಬರುತ್ತಿದ್ದಂತೆ ಕೀಳು ಧ್ವನಿಯಲ್ಲಿ ಕೂಗುತ್ತಾ ಒಂದು ನರಿಯು ಅವರ ಎಡಗಡೆಯಿಂದ ಹಾದು ಹೋಯಿತು. ರಾಜನು ಅದರ ಕೂಗನ್ನು ಗುರುತಿಸಿ ಭೀಮ ಮತ್ತು ಧನಂಜಯರಿಗೆ ಹೇಳಿದನು:

03253008a ಯಥಾ ವದತ್ಯೇಷ ವಿಹೀನಯೋನಿಃ|

        ಶಾಲಾವೃಕೋ ವಾಮಮುಪೇತ್ಯ ಪಾರ್ಶ್ವಂ|

03253008c ಸುವ್ಯಕ್ತಮಸ್ಮಾನವಮನ್ಯ ಪಾಪೈಃ|

        ಕೃತೋಽಭಿಮರ್ದಃ ಕುರುಭಿಃ ಪ್ರಸಃಯ||

“ಇಲ್ಲಿ ನಮ್ಮ ಎಡಭಾಗದಲ್ಲಿ ಕಾಣಿಸಿಕೊಂಡ ಈ ಕೀಳು ಯೋನಿಯ ಪ್ರಾಣಿಯ ಕೂಗನ್ನು ಕೇಳಿದರೆ, ಪಾಪಿ ಕುರುಗಳು ನಮ್ಮನ್ನು ಅಪಮಾನಿಸಿ ಘೋರ ಆಕ್ರಮಣವನ್ನು ನಡೆಸಿದ್ದಾರೆ ಎನ್ನುವುದು ತುಂಬಾ ತಿಳಿಯಾಗಿದೆ.”

03253009a ಇತ್ಯೇವ ತೇ ತದ್ವನಮಾವಿಶಂತೋ|

        ಮಹತ್ಯರಣ್ಯೇ ಮೃಗಯಾಂ ಚರಿತ್ವಾ|

03253009c ಬಾಲಾಮಪಶ್ಯಂತ ತದಾ ರುದಂತೀಂ|

        ಧಾತ್ರೇಯಿಕಾಂ ಪ್ರೇಷ್ಯವಧೂಂ ಪ್ರಿಯಾಯಾಃ||

ಹೀಗೆ ಹೇಳಿ ಬೇಟೆಯಾಡತ್ತಿದ್ದ ಆ ಮಹಾವನವನ್ನು ದಾಟಿ ಅವರ ವನವನ್ನು ಪ್ರವೇಶಿಸಲು ಅಲ್ಲಿ ಅವರ ಪ್ರಿಯೆ ಕಾಂತೆಯ ಧಾತ್ರೋಯಿಕೆ, ಬಾಲಕಿಯು ಅಳುತ್ತಿರುವುದನ್ನು ನೋಡಿದರು.

03253010a ತಾಮಿಂದ್ರಸೇನಸ್ತ್ವರಿತೋಽಭಿಸೃತ್ಯ|

        ರಥಾದವಪ್ಲುತ್ಯ ತತೋಽಭ್ಯಧಾವತ್|

03253010c ಪ್ರೋವಾಚ ಚೈನಾಂ ವಚನಂ ನರೇಂದ್ರ|

        ಧಾತ್ರೇಯಿಕಾಮಾರ್ತತರಸ್ತದಾನೀಂ||

ನರೇಂದ್ರ! ಆಗ ಇಂದ್ರಸೇನನು ಅವಸರದಲ್ಲಿ ರಥದಿಂದ ಹಾರಿ ಅವಳ ಬಳಿ ಓಡಿಬಂದು, ಹಾಗೆ ಆರ್ತಳಾಗಿ ರೋದಿಸುತ್ತಿರುವ ಧಾತ್ರೋಯಿಕೆಗೆ ಈ ಮಾತುಗಳನ್ನು ಆಡಿದನು.

03253011a ಕಿಂ ರೋದಿಷಿ ತ್ವಂ ಪತಿತಾ ಧರಣ್ಯಾಂ|

        ಕಿಂ ತೇ ಮುಖಂ ಶುಷ್ಯತಿ ದೀನವರ್ಣಂ|

03253011c ಕಚ್ಚಿನ್ನ ಪಾಪೈಃ ಸುನೃಶಂಸಕೃದ್ಭಿಃ|

        ಪ್ರಮಾಥಿತಾ ದ್ರೌಪದೀ ರಾಜಪುತ್ರೀ||

03253011e ಅನಿಂದ್ಯರೂಪಾ ಸುವಿಶಾಲನೇತ್ರಾ|

        ಶರೀರತುಲ್ಯಾ ಕುರುಪುಂಗವಾನಾಂ||

“ನೆಲದ ಮೇಲೆ ಬಿದ್ದು ಏಕೆ ನೀನು ರೋದಿಸುತ್ತಿರುವೆ? ನಿನ್ನ ಮುಖವು ಏಕೆ ಹೀಗೆ ಬಾಡಿ ವಿವರ್ಣವಾಗಿದೆ? ಪಾಪಿ, ಕ್ರೂರಕರ್ಮಿಗಳು ಅನಿಂದ್ಯರೂಪಿಣಿ, ಸುವಿಶಾಲ ನೇತ್ರೆ, ಕುರುಪುಂಗವರ ಶರೀರವನ್ನು ಹೋಲುವ ರಾಜಪುತ್ರಿ ದ್ರೌಪದಿಗೆ ಬಲಾತ್ಕಾರ ಮಾಡಿಲ್ಲ ತಾನೇ?

03253012a ಯದ್ಯೇವ ದೇವೀ ಪೃಥಿವೀಂ ಪ್ರವಿಷ್ಟಾ|

        ದಿವಂ ಪ್ರಪನ್ನಾಪ್ಯಥ ವಾ ಸಮುದ್ರಂ|

03253012c ತಸ್ಯಾ ಗಮಿಷ್ಯಂತಿ ಪದಂ ಹಿ ಪಾರ್ಥಾಸ್|

        ತಥಾ ಹಿ ಸಂತಪ್ಯತಿ ಧರ್ಮರಾಜಃ||

ಆ ದೇವಿಯು ಭೂಮಿಯನ್ನು ಹೊಕ್ಕಿದ್ದರೂ, ಆಕಾಶಕ್ಕೆ ಹಾರಿದ್ದರೂ, ಸಮುದ್ರಕ್ಕೆ ಧುಮುಕಿದ್ದರೂ ಪಾರ್ಥರು ಅವಳ ಸುಳಿವನ್ನು ಹಿಡಿದು ಹೋಗುತ್ತಾರೆ. ಧರ್ಮರಾಜನು ಅಷ್ಟು ಸಂತಾಪಪಡುತ್ತಿದ್ದಾನೆ.

03253013a ಕೋ ಹೀದೃಶಾನಾಮರಿಮರ್ದನಾನಾಂ|

        ಕ್ಲೇಶಕ್ಷಮಾಣಾಮಪರಾಜಿತಾನಾಂ|

03253013c ಪ್ರಾಣೈಃ ಸಮಾಮಿಷ್ಟತಮಾಂ ಜಿಹೀರ್ಷೇದ್|

        ಅನುತ್ತಮಂ ರತ್ನಮಿವ ಪ್ರಮೂಢಃ||

03253013e ನ ಬುಧ್ಯತೇ ನಾಥವತೀಮಿಹಾದ್ಯ|

        ಬಹಿಶ್ಚರಂ ಹೃದಯಂ ಪಾಂಡವಾನಾಂ||

ಯಾವ ಮಹಾಮೂಢನು ಈ ರೀತಿ ಅರಿಮರ್ದನರ, ಕ್ಲೇಶವನ್ನು ಸಹಿಸುವವರ, ಅಪರಾಜಿತರ, ಪ್ರಾಣಕ್ಕೂ ಅಧಿಕಳಾಗಿರುವ, ಅವರ ಅನುತ್ತಮ ರತ್ನದಂತಿರುವವಳನ್ನು ಅಪಹರಿಸಲು ಬಯಸಿದ್ದಾನೆ? ಅವಳಿಗೆ ನಾಥರಿದ್ದಾರೆ ಎಂದು ಅವನಿಗೆ ತಿಳಿದಿಲ್ಲವೇ? ಅವಳು ಹೊರಗೆ ನಡೆಯುತ್ತಿರುವ ಪಾಂಡವರ ಹೃದಯ!

03253014a ಕಸ್ಯಾದ್ಯ ಕಾಯಂ ಪ್ರತಿಭಿದ್ಯ ಘೋರಾ|

        ಮಹೀಂ ಪ್ರವೇಕ್ಷ್ಯಂತಿ ಶಿತಾಃ ಶರಾಗ್ರ್ಯಾಃ|

03253014c ಮಾ ತ್ವಂ ಶುಚಸ್ತಾಂ ಪ್ರತಿ ಭೀರು ವಿದ್ಧಿ|

        ಯಥಾದ್ಯ ಕೃಷ್ಣಾ ಪುನರೇಷ್ಯತೀತಿ||

03253014e ನಿಹತ್ಯ ಸರ್ವಾನ್ದ್ವಿಷತಃ ಸಮಗ್ರಾನ್|

        ಪಾರ್ಥಾಃ ಸಮೇಷ್ಯಂತ್ಯಥ ಯಾಜ್ಞಸೇನ್ಯಾ||

ಇಂದು ಯಾರ ದೇಹವು ಇವರ ಹರಿತ ಬಾಣಗಳಿಂದ ಚುಚ್ಚಲ್ಪಟ್ಟು ಭೂಮಿಗೆ ಅಂಟುವುದಿದೆ? ಭೀರು! ಅವಳ ಕುರಿತು ಶೋಕಿಸಬೇಡ. ಇಂದೇ ಕೃಷ್ಣೆಯನ್ನು ಹಿಂದೆ ತರಲಾಗುತ್ತದೆ. ಪಾರ್ಥರು ತಮ್ಮ ವೈರಿಗಳನ್ನು ಸಂಪೂರ್ಣವಾಗಿ ಕೊಂದು ಯಾಜ್ಞಸೇನಿಯನ್ನು ಪಡೆದು ತರುತ್ತಾರೆ.”

03253015a ಅಥಾಬ್ರವೀಚ್ಚಾರುಮುಖಂ ಪ್ರಮೃಜ್ಯ|

        ಧಾತ್ರೇಯಿಕಾ ಸಾರಥಿಮಿಂದ್ರಸೇನಂ|

03253015c ಜಯದ್ರಥೇನಾಪಹೃತಾ ಪ್ರಮಥ್ಯ|

        ಪಂಚೇಂದ್ರಕಲ್ಪಾನ್ ಪರಿಭೂಯ ಕೃಷ್ಣಾ||

ಆಗ ಧಾತ್ರೋಯಿಕೆಯು ತನ್ನ ಸುಂದರ ಮುಖವನ್ನು ಒರೆಸಿಕೊಂಡು ಸಾರಥಿ ಇಂದ್ರಸೇನನಿಗೆ ಹೇಳಿದಳು: “ಜಯದ್ರಥನು ಐವರು ಇಂದ್ರರಂತಿರುವವರನ್ನು ಕಡೆಗಾಣಿಸಿ ಅವರ ಕೃಷ್ಣೆಯನ್ನು ಅಪಹರಿಸಿಕೊಂಡು ಹೋದ.

03253016a ತಿಷ್ಠಂತಿ ವರ್ತ್ಮಾನಿ ನವಾನ್ಯಮೂನಿ|

        ವೃಕ್ಷಾಶ್ಚ ನ ಮ್ಲಾಂತಿ ತಥೈವ ಭಗ್ನಾಃ|

03253016c ಆವರ್ತಯಧ್ವಂ ಹ್ಯನುಯಾತ ಶೀಘ್ರಂ|

        ನ ದೂರಯಾತೈವ ಹಿ ರಾಜಪುತ್ರೀ||

ಅವರ ಮಾರ್ಗದ ಗುರುತು ಇನ್ನೂ ಹೊಸದಾಗಿದೆ. ಮರಗಳು ತುಂಡಾಗಿದ್ದುದು ಮಾಸಿಹೋಗಿಲ್ಲ. ಶೀಘ್ರವಾಗಿ ತಿರುಗಿ ಹೋಗಿ. ರಾಜಪುತ್ರಿಯು ಬಹು ದೂರ ಹೋಗಿರಲಿಕ್ಕಿಲ್ಲ.

03253017a ಸನ್ನಹ್ಯಧ್ವಂ ಸರ್ವ ಏವೇಂದ್ರಕಲ್ಪಾ|

        ಮಹಾಂತಿ ಚಾರೂಣಿ ಚ ದಂಶನಾನಿ|

03253017c ಗೃಹ್ಣೀತ ಚಾಪಾನಿ ಮಹಾಧನಾನಿ|

        ಶರಾಂಶ್ಚ ಶೀಘ್ರಂ ಪದವೀಂ ವ್ರಜಧ್ವಂ||

ಇಂದ್ರಕಲ್ಪರಾಗಿರುವ ನೀವೆಲ್ಲರೂ ನಿಮ್ಮ ಬೆಲೆಬಾಳುವ ಭಾರೀ ಕವಚಗಳೊಂದಿಗೆ ಸನ್ನದ್ಧರಾಗಿರಿ. ನಿಮ್ಮ ಅತ್ಯಂತ ಬೆಲೆಬಾಳುವ ಚಾಪಗಳನ್ನು ಮತ್ತು ಬಾಣಗಳನ್ನು ಹಿಡಿಯಿರಿ. ಅತಿ ಶೀಘ್ರವೇ ದಾರಿಯನ್ನು ಹಿಡಿಯಿರಿ.

03253018a ಪುರಾ ಹಿ ನಿರ್ಭರ್ತ್ಸನದಂಡಮೋಹಿತಾ|

        ಪ್ರಮೂಢಚಿತ್ತಾ ವದನೇನ ಶುಷ್ಯತಾ|

03253018c ದದಾತಿ ಕಸ್ಮೈ ಚಿದನರ್ಹತೇ ತನುಂ|

        ವರಾಜ್ಯಪೂರ್ಣಾಮಿವ ಭಸ್ಮನಿ ಸ್ರುಚಂ||

ಕೋಲು ಮತ್ತು ಬೆದರಿಕೆಯಿಂದ ಅವಳು ಹುಚ್ಚಾಗಿ, ಕೆಂಪಾದ ಮುಖದಿಂದ ಬುದ್ಧಿಯನ್ನು ಕಳೆದುಕೊಂಡು, ತುಪ್ಪದಿಂದ ತುಂಬಿದ ಆಹುತಿಯ ಹುಟ್ಟನ್ನು ಹೇಗೋ ಹಾಗೆ ಆ ಅನರ್ಹನ ದೇಹವನ್ನು ಸುಟ್ಟು ಹಾಕುವ ಮೊದಲೇ ಹೋಗಿ!

03253019a ಪುರಾ ತುಷಾಗ್ನಾವಿವ ಹೂಯತೇ ಹವಿಃ|

        ಪುರಾ ಶ್ಮಶಾನೇ ಸ್ರಗಿವಾಪವಿಧ್ಯತೇ|

03253019c ಪುರಾ ಚ ಸೋಮೋಽಧ್ವರಗೋಽವಲಿಹ್ಯತೇ|

        ಶುನಾ ಯಥಾ ವಿಪ್ರಜನೇ ಪ್ರಮೋಹಿತೇ||

03253019e ಮಹತ್ಯರಣ್ಯೇ ಮೃಗಯಾಂ ಚರಿತ್ವಾ|

        ಪುರಾ ಶೃಗಾಲೋ ನಲಿನೀಂ ವಿಗಾಹತೇ||

ಉರಿಯುತ್ತಿರುವ ಬೆಂಕಿಯಲ್ಲಿ ಹವಿಸ್ಸನ್ನು ಸುರಿಯುವುದರ ಮೊದಲೇ, ಶ್ಮಶಾನದಲ್ಲಿ ಮಾಲೆಯನ್ನು ಹರಡುವುದರ ಮೊದಲೇ, ವಿಪ್ರಜನರು ನೋಡಿ ಆಶ್ಚರ್ಯಪಡುತ್ತಿದ್ದಂತೆಯೇ ನಾಯಿಯು ಅಧ್ವರದ ಹವನ ಕುಂಡದಲ್ಲಿರುವ ಸೋಮವನ್ನು ನೆಕ್ಕುವುದರ ಮೊದಲೇ, ಮಹಾರಣ್ಯದಲ್ಲಿ ಬೇಟೆಗೆಂದು ಹೋದಾಗ ನರಿಯು ತಾವರೆಯ ಕೊಳವನ್ನು ಆಕ್ರಮಣಮಾಡುವ ಮೊದಲೇ ಹೋಗಿ!

03253020a ಮಾ ವಃ ಪ್ರಿಯಾಯಾಃ ಸುನಸಂ ಸುಲೋಚನಂ|

        ಚಂದ್ರಪ್ರಭಾಚ್ಚಂ ವದನಂ ಪ್ರಸನ್ನಂ|

03253020c ಸ್ಪೃಶ್ಯಾಚ್ಚುಭಂ ಕಶ್ಚಿದಕೃತ್ಯಕಾರೀ|

        ಶ್ವಾ ವೈ ಪುರೋಡಾಶಮಿವೋಪಯುಂಕ್ಷೀತ್||

03253020e ಏತಾನಿ ವರ್ತ್ಮಾನ್ಯನುಯಾತ ಶೀಘ್ರಂ|

        ಮಾ ವಃ ಕಾಲಃ ಕ್ಷಿಪ್ರಮಿಹಾತ್ಯಗಾದ್ವೈ||

ಆ ನಿಮ್ಮ ಪ್ರಿಯೆಯ ಸುಂದರ ಮುಖ, ಸುಂದರ ಮೂಗು ಕಣ್ಣುಗಳು, ಈ ಮೊದಲು ಪ್ರಸನ್ನವಾಗಿದ್ದ, ಚಂದ್ರಪ್ರಭೆಯನ್ನು ಬೀರುತ್ತಿದ್ದ ಶುಭ ವದನವನ್ನು ಯಾವುದೋ ಕೆಲಸಕ್ಕೆ ಬಾರದವನು ನೈವೇದ್ಯಕ್ಕೆ ಇಟ್ಟಿರುವ ಭಕ್ಷ್ಯವನ್ನು ನಾಯಿಯು ಹೇಗೋ ಹಾಗೆ ಮುಟ್ಟುವ ಮೊದಲು ಈ ಮಾರ್ಗದ ಕುರುಹುಗಳನ್ನು ಹಿಡಿದು ಶೀಘ್ರವಾಗಿ, ಕಾಲವು ಕ್ಷಿಪ್ರವಾಗಿ ತಪ್ಪಿಹೋಗುವುದರ ಮೊದಲು, ಹೋಗಿ.”

03253021 ಯುಧಿಷ್ಠಿರ ಉವಾಚ|

03253021a ಭದ್ರೇ ತೂಷ್ಣೀಮಾಸ್ಸ್ವ ನಿಯಚ್ಚ ವಾಚಂ|

        ಮಾಸ್ಮತ್ಸಕಾಶೇ ಪರುಷಾಣ್ಯವೋಚಃ|

03253021c ರಾಜಾನೋ ವಾ ಯದಿ ವಾ ರಾಜಪುತ್ರಾ|

        ಬಲೇನ ಮತ್ತಾ ವಂಚನಾಂ ಪ್ರಾಪ್ನುವಂತಿ||

ಯುಧಿಷ್ಠಿರನು ಹೇಳಿದನು: “ಭದ್ರೇ! ಸುಮ್ಮನಾಗು ಮತ್ತು ನಾಲಿಗೆಯನ್ನು ಹಿಡಿತದಲ್ಲಿಟ್ಟುಕೋ! ನಮ್ಮೆದುರು ಕ್ರೂರವಾಗಿ ಆಡಬೇಡ! ಅವರು ರಾಜರಾಗಿರಲಿ ರಾಜಪುತ್ರರಾಗಿರಲಿ ಬಲದಿಂದ ಮತ್ತು ವಂಚನೆಯಿಂದ ಪಡೆಯುತ್ತಾರೆ.””

03253022 ವೈಶಂಪಾಯನ ಉವಾಚ|

03253022a ಏತಾವದುಕ್ತ್ವಾ ಪ್ರಯಯುರ್ಹಿ ಶೀಘ್ರಂ|

        ತಾನ್ಯೇವ ವರ್ತ್ಮಾನ್ಯನುವರ್ತಮಾನಾಃ|

03253022c ಮುಹುರ್ಮುಹುರ್ವ್ಯಾಲವದುಚ್ಚ್ವಸಂತೋ|

        ಜ್ಯಾಂ ವಿಕ್ಷಿಪಂತಶ್ಚ ಮಹಾಧನುರ್ಭ್ಯಃ||

ವೈಶಂಪಾಯನನು ಹೇಳಿದನು: “ಇಷ್ಟನ್ನು ಹೇಳಿ ಅವರು ಶೀಘ್ರವಾಗಿ ಅವರ ಕುರುಹುಗಳನ್ನೇ ಅನುಸರಿಸಿ, ಬೇಟೆಯ ಹುಲಿಯಂತೆ ಪುನಃ ಪುನಃ ಏದುಸಿರು ಬಿಡುತ್ತಾ, ಮಹಾಧನುಸ್ಸುಗಳ ಶಿಂಜಿನಿಯನ್ನು ಎಳೆಯುತ್ತಾ ಹೋದರು.

03253023a ತತೋಽಪಶ್ಯಂಸ್ತಸ್ಯ ಸೈನ್ಯಸ್ಯ ರೇಣುಂ|

        ಉದ್ಧೂತಂ ವೈ ವಾಜಿಖುರಪ್ರಣುನ್ನಂ|

03253023c ಪದಾತೀನಾಂ ಮಧ್ಯಗತಂ ಚ ಧೌಮ್ಯಂ|

        ವಿಕ್ರೋಶಂತಂ ಭೀಮಮಭಿದ್ರವೇತಿ||

ಕುದುರೆಗಳ ಖುರಗಳಿಂದ ಮೇಲೆದ್ದ ಸೈನ್ಯದ ಧೂಳನ್ನು ಪ್ರವೇಶಿಸುತ್ತಿದ್ದಂತೆ ಪದಾತಿಗಳ ಮಧ್ಯದಲ್ಲಿ ಹೋಗುತ್ತಿದ್ದ ಧೌಮ್ಯನು ಭೀಮಸೇನನಿಗೆ “ಆಕ್ರಮಣಮಾಡು!” ಎಂದು ಕೂಗಿದನು.

03253024a ತೇ ಸಾಂತ್ವ್ಯ ಧೌಮ್ಯಂ ಪರಿದೀನಸತ್ತ್ವಾಃ|

        ಸುಖಂ ಭವಾನೇತ್ವಿತಿ ರಾಜಪುತ್ರಾಃ|

03253024c ಶ್ಯೇನಾ ಯಥೈವಾಮಿಷಸಂಪ್ರಯುಕ್ತಾ|

        ಜವೇನ ತತ್ಸೈನ್ಯಮಥಾಭ್ಯಧಾವನ್||

ಸತ್ವವನ್ನು ಕಳೆದುಕೊಂಡಿದ್ದ ರಾಜಪುತ್ರರು “ಸುಖವಾಗಿರು!” ಎಂದು ಧೌಮ್ಯನಿಗೆ ಸಂತವಿಸಿ ಹೇಳಿ, ಹಸೀ ಮಾಂಸವನ್ನು ನೋಡಿದ ಗಿಡುಗದಂತೆ ವೇಗದಿಂದ ಆ ಸೇನೆಯ ಮೇಲೆ ಎರಗಿದರು.

03253025a ತೇಷಾಂ ಮಹೇಂದ್ರೋಪಮವಿಕ್ರಮಾಣಾಂ|

        ಸಂರಬ್ಧಾನಾಂ ಧರ್ಷಣಾದ್ಯಾಜ್ಞಸೇನ್ಯಾಃ|

03253025c ಕ್ರೋಧಃ ಪ್ರಜಜ್ವಾಲ ಜಯದ್ರಥಂ ಚ|

        ದೃಷ್ಟ್ವಾ ಪ್ರಿಯಾಂ ತಸ್ಯ ರಥೇ ಸ್ಥಿತಾಂ ಚ||

ಮಹೇಂದ್ರನ ಸಮನಾದ ವಿಕ್ರಮವುಳ್ಳ ಅವರು ಯಾಜ್ಞಸೇನಿಗೆ ಕೊಟ್ಟ ಅಪಾಯದಿಂದ ಸಿಟ್ಟಾಗಿ, ಜಯದ್ರಥನನ್ನೂ ಮತ್ತು ಅವನ ರಥದಲ್ಲಿ ನಿಂತಿದ್ದ ಪ್ರಿಯೆಯನ್ನು ನೋಡಿ ಕ್ರೋಧದಿಂದ ಉರಿದೆದ್ದರು.

03253026a ಪ್ರಚುಕ್ರುಶುಶ್ಚಾಪ್ಯಥ ಸಿಂಧುರಾಜಂ|

        ವೃಕೋದರಶ್ಚೈವ ಧನಂಜಯಶ್ಚ|

03253026c ಯಮೌ ಚ ರಾಜಾ ಚ ಮಹಾಧನುರ್ಧರಾಸ್|

        ತತೋ ದಿಶಃ ಸಮ್ಮುಮುಹುಃ ಪರೇಷಾಂ||

ವೃಕೋದರ, ಧನಂಜಯ, ಯಮಳರು, ರಾಜನೂ ಸೇರಿ ಆ ಮಹಾಧನುರ್ಧರರು ಸಿಂಧುರಾಜನನ್ನು ಕೂಗಿ ಗರ್ಜಿಸಿದಾಗ ಶತ್ರುಗಳೆಲ್ಲರೂ ಮೂರ್ಛಿತರಾದರು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ಪಾರ್ಥಾಗಮನೇ ತ್ರಿಪಂಚಾಶದಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ಪಾರ್ಥಾಗಮನದಲ್ಲಿ ಇನ್ನೂರಾಐವತ್ಮೂರನೆಯ ಅಧ್ಯಾಯವು.

Image result for indian motifs

Comments are closed.