Aranyaka Parva: Chapter 250

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೫೦

ದ್ರೌಪದಿಯು ತನ್ನ ಪರಿಚಯ ಹೇಳಿಕೊಂಡು, ಬೇಟೆಯಾಡಲು ಹೋದ ಪತಿ ಪಾಂಡವರು ಹಿಂದಿರುಗುವ ಸಮಯವಾಗಿದೆಯೆಂದೂ, ಅವರ ಆತಿಥ್ಯವನ್ನು ಸ್ವೀಕರಿಸಿ ಹೋಗಬೇಕೆಂದೂ ಹೇಳುವುದು (೧-೯).

 03250001 ವೈಶಂಪಾಯನ ಉವಾಚ|

03250001a ಅಥಾಬ್ರವೀದ್ದ್ರೌಪದೀ ರಾಜಪುತ್ರೀ|

        ಪೃಷ್ಟಾ ಶಿಬೀನಾಂ ಪ್ರವರೇಣ ತೇನ|

03250001c ಅವೇಕ್ಷ್ಯ ಮಂದಂ ಪ್ರವಿಮುಚ್ಯ ಶಾಖಾಂ|

        ಸಂಗೃಹ್ಣತೀ ಕೌಶಿಕಮುತ್ತರೀಯಂ||

ವೈಶಂಪಾಯನನು ಹೇಳಿದನು: “ಆಗ ರಾಜಪುತ್ರಿ ದ್ರೌಪದಿಯು ನಿಧಾನವಾಗಿ ಅವನನ್ನು ನೋಡುತ್ತಾ, ಶಾಖೆಯನ್ನು ಬಿಟ್ಟು, ತನ್ನ ಕೌಶಿಕದ ಉತ್ತರೀಯವನ್ನು ಒಟ್ಟುಮಾಡಿಕೊಂಡು ಆ ಶಿಬಿಗಳ ಪ್ರವರನು ಕೇಳಿದುದಕ್ಕೆ ಹೇಳಿದಳು.

03250002a ಬುದ್ಧ್ಯಾಭಿಜಾನಾಮಿ ನರೇಂದ್ರಪುತ್ರ|

        ನ ಮಾದೃಶೀ ತ್ವಾಮಭಿಭಾಷ್ಟುಮರ್ಹಾ|

03250002c ನ ತ್ವೇಹ ವಕ್ತಾಸ್ತಿ ತವೇಹ ವಾಕ್ಯಂ|

        ಅನ್ಯೋ ನರೋ ವಾಪ್ಯಥ ವಾಪಿ ನಾರೀ||

“ನರೇಂದ್ರಪುತ್ರ! ನನ್ನಂಥವಳು ಉತ್ತರಿಸಬಾರದೆಂದು ನಾನು ಬುದ್ಧಿಯಿಂದ ತಿಳಿದುಕೊಂಡಿದ್ದೇನೆ. ಆದರೆ ಇಲ್ಲಿ ನಿನ್ನ ಪ್ರಶ್ನೆಗಳಿಗೆ ಉತ್ತರಿಸುವ - ನರನಾಗಲೀ ನಾರಿಯಾಗಲೀ - ಬೇರೆ ಯಾರೂ ಇಲ್ಲ.

03250003a ಏಕಾ ಹ್ಯಹಂ ಸಂಪ್ರತಿ ತೇನ ವಾಚಂ|

        ದದಾನಿ ವೈ ಭದ್ರ ನಿಬೋಧ ಚೇದಂ|

03250003c ಅಹಂ ಹ್ಯರಣ್ಯೇ ಕಥಮೇಕಮೇಕಾ|

        ತ್ವಾಮಾಲಪೇಯಂ ನಿರತಾ ಸ್ವಧರ್ಮೇ||

ಭದ್ರ! ನಾನೊಬ್ಬಳೇ ಇಲ್ಲಿ ಇರುವುದರಿಂದ ನಾನೇ ನಿನಗೆ ಉತ್ತರವನ್ನು ಕೊಡುತ್ತಿದ್ದೇನೆ. ತಿಳಿದುಕೋ. ಅರಣ್ಯದಲ್ಲಿ ನಾನೊಬ್ಬಳೇ ಇರುವಾಗ, ಸ್ವಧರ್ಮದಲ್ಲಿ ನಿರತಳಾಗಿರುವ ನಾನು ನಿನ್ನೊಡನೆ ಹೇಗೆ ತಾನೇ ಸಂಭಾಷಿಸಲಿ?

03250004a ಜಾನಾಮಿ ಚ ತ್ವಾಂ ಸುರಥಸ್ಯ ಪುತ್ರಂ|

        ಯಂ ಕೋಟಿಕಾಶ್ಯೇತಿ ವಿದುರ್ಮನುಷ್ಯಾಃ|

03250004c ತಸ್ಮಾದಹಂ ಶೈಬ್ಯ ತಥೈವ ತುಭ್ಯಂ|

        ಆಖ್ಯಾಮಿ ಬಂಧೂನ್ಪ್ರತಿ ತನ್ನಿಬೋಧ||

ನೀನು ಸುರಥನ ಪುತ್ರನೆಂದೂ ಮತ್ತು ಜನರು ನಿನ್ನನ್ನು ಕೋಟಿಕಾಶ್ಯನೆಂದು ಕರೆಯುತ್ತಾರೆಂದೂ ನಾನು ಬಲ್ಲೆ. ಶೈಬ್ಯ! ಆದುದರಿಂದ ನಾನು ಹಾಗೆಯೇ ನನ್ನ ಬಂಧುಗಳ ಕುರಿತೂ ಹೇಳುತ್ತೇನೆ.

03250005a ಅಪತ್ಯಮಸ್ಮಿ ದ್ರುಪದಸ್ಯ ರಾಜ್ಞಃ|

        ಕೃಷ್ಣೇತಿ ಮಾಂ ಶೈಬ್ಯ ವಿದುರ್ಮನುಷ್ಯಾಃ|

03250005c ಸಾಹಂ ವೃಣೇ ಪಂಚ ಜನಾನ್ಪತಿತ್ವೇ|

        ಯೇ ಖಾಂಡವಪ್ರಸ್ಥಗತಾಃ ಶ್ರುತಾಸ್ತೇ||

ಶೈಬ್ಯ! ರಾಜ ದ್ರುಪದನ ಮಗಳು ನಾನು ಮತ್ತು ಕೃಷ್ಣೆಯೆಂದು ಜನರು ನನ್ನನ್ನು ತಿಳಿದಿದ್ದಾರೆ. ನಾನು ಐವರನ್ನು ಪತಿಗಳನ್ನಾಗಿ ವರಿಸಿದ್ದೇನೆ. ಅವರು ಖಾಂಡವಪ್ರಸ್ಥದವರು. ನೀನು ಕೇಳಿರಬಹುದು.

03250006a ಯುಧಿಷ್ಠಿರೋ ಭೀಮಸೇನಾರ್ಜುನೌ ಚ|

        ಮಾದ್ರ್ಯಾಶ್ಚ ಪುತ್ರೌ ಪುರುಷಪ್ರವೀರೌ|

03250006c ತೇ ಮಾಂ ನಿವೇಶ್ಯೇಹ ದಿಶಶ್ಚತಸ್ರೋ|

        ವಿಭಜ್ಯ ಪಾರ್ಥಾ ಮೃಗಯಾಂ ಪ್ರಯಾತಾಃ||

ಯುಧಿಷ್ಠಿರ, ಭೀಮಸೇನ, ಅರ್ಜುನ, ಮತ್ತು ಮಾದ್ರಿಯ ಪುರುಷಪ್ರವೀರರಾದ ಇಬ್ಬರು ಮಕ್ಕಳು. ಆ ಪಾರ್ಥರು ನನ್ನನ್ನು ಇಲ್ಲಿಯೇ ಇರಿಸಿ ನಾಲ್ಕು ದಿಕ್ಕುಗಳಲ್ಲಿ ವಿಭಜನೆಗೊಂಡು ಬೇಟೆಗೆಂದು ಹೋಗಿದ್ದಾರೆ.

03250007a ಪ್ರಾಚೀಂ ರಾಜಾ ದಕ್ಷಿಣಾಂ ಭೀಮಸೇನೋ|

        ಜಯಃ ಪ್ರತೀಚೀಂ ಯಮಜಾವುದೀಚೀಂ|

03250007c ಮನ್ಯೇ ತು ತೇಷಾಂ ರಥಸತ್ತಮಾನಾಂ|

        ಕಾಲೋಽಭಿತಃ ಪ್ರಾಪ್ತ ಇಹೋಪಯಾತುಂ||

ಉತ್ತರಕ್ಕೆ ರಾಜ, ದಕ್ಷಿಣಕ್ಕೆ ಭೀಮಸೇನ, ಪೂರ್ವಕ್ಕೆ ಜಯ ಮತ್ತು ಪಶ್ಚಿಮಕ್ಕೆ ಯಮಳರು ಹೋಗಿದ್ದಾರೆ. ಆ ರಥಸತ್ತಮರು ಹಿಂದಿರುಗಿ ಇಲ್ಲಿಗೆ ಬರುವ ಸಮಯವಾಯಿತೆಂದು ನನಗನ್ನಿಸುತ್ತದೆ.

03250008a ಸಮ್ಮಾನಿತಾ ಯಾಸ್ಯಥ ತೈರ್ಯಥೇಷ್ಟಂ|

        ವಿಮುಚ್ಯ ವಾಹಾನವಗಾಹಯಧ್ವಂ|

03250008c ಪ್ರಿಯಾತಿಥಿರ್ಧರ್ಮಸುತೋ ಮಹಾತ್ಮಾ|

        ಪ್ರೀತೋ ಭವಿಷ್ಯತ್ಯಭಿವೀಕ್ಷ್ಯ ಯುಷ್ಮಾನ್||

ಅವರು ನಿಮ್ಮನ್ನು ಸಮ್ಮಾನಿಸಿದ ನಂತರ ನಿಮಗಿಷ್ಟಬಂದಲ್ಲಿಗೆ ಹೋಗಿ. ವಾಹನಗಳನ್ನು ಬಿಚ್ಚಿ ಕೆಳಗಿಳಿಯಿರಿ. ಮಹಾತ್ಮ ಧರ್ಮಸುತನು ಅತಿಥಿಗಳನ್ನು ಬಯಸುತ್ತಾನೆ. ನಿಮ್ಮನ್ನು ಇಲ್ಲಿ ನೋಡಿ ಅವನು ಸಂತೋಷಪಡುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.”

03250009a ಏತಾವದುಕ್ತ್ವಾ ದ್ರುಪದಾತ್ಮಜಾ ಸಾ|

        ಶೈಬ್ಯಾತ್ಮಜಂ ಚಂದ್ರಮುಖೀ ಪ್ರತೀತಾ|

03250009c ವಿವೇಶ ತಾಂ ಪರ್ಣಕುಟೀಂ ಪ್ರಶಸ್ತಾಂ|

        ಸಂಚಿಂತ್ಯ ತೇಷಾಮತಿಥಿಸ್ವಧರ್ಮಂ||

ಈ ರೀತಿ ಶೈಭ್ಯಾತ್ಮಜನನ್ನು ನಂಬಿ ಚಂದ್ರಮುಖಿ ದ್ರುಪದಾತ್ಮಜೆಯು ಹೇಳಿದಳು. ಈ ಅತಿಥಿಗಳಿಗೆ ಸ್ವಧರ್ಮದಂತೆ ಸತ್ಕರಿಸುವ ಕುರಿತು ಯೋಚಿಸುತ್ತಾ ಅವಳು ಆ ಪುಣ್ಯ ಪರ್ಣಕುಟೀರವನ್ನು ಪ್ರವೇಶಿಸಿದಳು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ದ್ರೌಪದೀಹರಣಪರ್ವಣಿ ದ್ರೌಪದೀವಾಕ್ಯೇ ಪಂಚದಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ದ್ರೌಪದೀಹರಣಪರ್ವದಲ್ಲಿ ದ್ರೌಪದೀವಾಕ್ಯದಲ್ಲಿ ಇನ್ನೂರಾಐವತ್ತನೆಯ ಅಧ್ಯಾಯವು.

Related image

Comments are closed.