Aranyaka Parva: Chapter 259

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೫೯

ರಾವಣಾದಿಗಳಿಗೆ ವರದಾನ

ಕುಬೇರನು ತನ್ನ ತಂದೆ ಪುಲಸ್ತ್ಯನಿಗೆ ನೀಡಿದ ಮೂವರು ರಾಕ್ಷಸ ದಾಸಿಯರಲ್ಲಿ ಐವರು ಮಕ್ಕಳು - ಪುಷ್ಪೋತ್ಕಟೆಯಲ್ಲಿ ರಾವಣ-ಕುಂಭಕರ್ಣರು, ಮಾಲಿನಿಯಲ್ಲಿ ವಿಭೀಷಣ, ಮತ್ತು ರಾಕಾಳಲ್ಲಿ ಖರ-ಶೂರ್ಪಣಕಿಯರು ಹುಟ್ಟಿದುದು  (೧-೮). ಕುಬೇರನ ವೈಭವನ್ನು ನೋಡಿ ಸ್ಪರ್ಧಾಭಾವನೆಯಿಂದ ಇವರೈವರು ಬ್ರಹ್ಮನನ್ನು ಮೆಚ್ಚಿಸಲು ಘೋರ ತಪವನ್ನಾಚರಿಸುವುದು (೯-೨೦). ಬ್ರಹ್ಮನು ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ವರವನ್ನಿತ್ತು ಅವರ ತಪಸ್ಸನ್ನು ತಡೆದುದು (೨೧-೩೧). ವರಮದದಿಂದ ರಾವಣನು ಕುಬೇರನನ್ನು ಲಂಕೆಯಿಂದ ಓಡಿಸಿ ಪುಷ್ಪಕ ವಿಮಾನವನ್ನು ಕಸಿದುಕೊಂಡು ಅವನಿಂದ ಶಾಪವನ್ನು ಪಡೆದುದು; ದೇವತೆಗಳಿಗೆ ಭಯವನ್ನುಂಟುಮಾಡಿದುದು (೩೨-೪೦).

03259001 ಮಾರ್ಕಂಡೇಯ ಉವಾಚ|

03259001a ಪುಲಸ್ತ್ಯಸ್ಯ ತು ಯಃ ಕ್ರೋಧಾದರ್ಧದೇಹೋಽಭವನ್ಮುನಿಃ|

03259001c ವಿಶ್ರವಾ ನಾಮ ಸಕ್ರೋಧಃ ಸ ವೈಶ್ರವಣಮೈಕ್ಷತ||

ಮಾರ್ಕಂಡೇಯನು ಹೇಳಿದನು: “ಪುಲಸ್ತ್ಯನ ಕ್ರೋಧದಿಂದ ಅವನ ಅರ್ಧದೇಹದಿಂದ ಜನಿಸಿದ ವಿಶ್ರವಾ ಎಂಬ ಹೆಸರಿನ ಮುನಿಯು ವೈಶ್ರವಣನ ಮೇಲೆ ಕ್ರೋಧಿತನಾದನು.

03259002a ಬುಬುಧೇ ತಂ ತು ಸಕ್ರೋಧಂ ಪಿತರಂ ರಾಕ್ಷಸೇಶ್ವರಃ|

03259002c ಕುಬೇರಸ್ತತ್ಪ್ರಸಾದಾರ್ಥಂ ಯತತೇ ಸ್ಮ ಸದಾ ನೃಪ||

ನೃಪ! ರಾಕ್ಷಸೇಶ್ವರ ಕುಬೇರನಾದರೋ ತನ್ನ ತಂದೆಯು ಕುಪಿತನಾಗಿದ್ದಾನೆಂದು ತಿಳಿದಿದ್ದನು ಮತ್ತು ಅವನನ್ನು ಪ್ರಸೀದಗೊಳಿಸಲು ಸದಾ ಪ್ರಯತ್ನಿಸುತ್ತಿದ್ದನು.

03259003a ಸ ರಾಜರಾಜೋ ಲಂಕಾಯಾಂ ನಿವಸನ್ನರವಾಹನಃ|

03259003c ರಾಕ್ಷಸೀಃ ಪ್ರದದೌ ತಿಸ್ರಃ ಪಿತುರ್ವೈ ಪರಿಚಾರಿಕಾಃ||

ಆ ರಾಜರಾಜ ನರವಾಹನನು ಲಂಕೆಯಲ್ಲಿ ವಾಸಿಸುವಾಗ ತನ್ನ ತಂದೆಗೆ ಮೂರು ರಾಕ್ಷಸಿಯರನ್ನು ದಾಸಿಯರನ್ನಾಗಿ ಕೊಟ್ಟನು.

03259004a ತಾಸ್ತದಾ ತಂ ಮಹಾತ್ಮಾನಂ ಸಂತೋಷಯಿತುಮುದ್ಯತಾಃ|

03259004c ಋಷಿಂ ಭರತಶಾರ್ದೂಲ ನೃತ್ತಗೀತವಿಶಾರದಾಃ||

ಭರತಶಾರ್ದೂಲ! ಆ ನೃತ್ಯಗೀತವಿಶಾರದರು ಮಹಾತ್ಮ ಋಷಿಯನ್ನು ಸಂತೋಷಪಡಿಸಲು ಉತ್ಸುಕರಾಗಿದ್ದರು. 

03259005a ಪುಷ್ಪೋತ್ಕಟಾ ಚ ರಾಕಾ ಚ ಮಾಲಿನೀ ಚ ವಿಶಾಂ ಪತೇ|

03259005c ಅನ್ಯೋನ್ಯಸ್ಪರ್ಧಯಾ ರಾಜನ್ ಶ್ರೇಯಸ್ಕಾಮಾಃ ಸುಮಧ್ಯಮಾಃ||

ವಿಶಾಂಪತೇ! ಪುಷ್ಪೋತ್ಕಟಾ, ರಾಕಾ ಮತ್ತು ಮಾಲಿನೀ ಎಂಬ ಆ ಮೂವರು ಸುಮಧ್ಯಮೆಯರು ಶ್ರೇಯಸ್ಸನ್ನು ಬಯಸಿ ಅನ್ಯೋನ್ಯರೊಡನೆ ಸ್ಪರ್ಧಿಸುತ್ತಿದ್ದರು.

03259006a ತಾಸಾಂ ಸ ಭಗವಾನ್ತುಷ್ಟೋ ಮಹಾತ್ಮಾ ಪ್ರದದೌ ವರಾನ್|

03259006c ಲೋಕಪಾಲೋಪಮಾನ್ಪುತ್ರಾನೇಕೈಕಸ್ಯಾ ಯಥೇಪ್ಸಿತಾನ್||

ಸಂತುಷ್ಟನಾದ ಆ ಮಹಾತ್ಮ ಭಗವಾನನು ಅವರಲ್ಲಿ ಪ್ರತಿಯೊಬ್ಬರಿಗೂ ಅವರು ಬಯಸಿದ ಲೋಕಪಾಲಸಮ ಪುತ್ರರನ್ನು ವರವಾಗಿ ನೀಡಿದನು.

03259007a ಪುಷ್ಪೋತ್ಕಟಾಯಾಂ ಜಜ್ಞಾತೇ ದ್ವೌ ಪುತ್ರೌ ರಾಕ್ಷಸೇಶ್ವರೌ|

03259007c ಕುಂಭಕರ್ಣದಶಗ್ರೀವೌ ಬಲೇನಾಪ್ರತಿಮೌ ಭುವಿ||

ಪುಷ್ಪೋತ್ಕಟೆಯಲ್ಲಿ ಭೂಮಿಯಲ್ಲೀ ಬಲದಲ್ಲಿ ಅಪ್ರತಿಮರಾದ ಕುಂಭಕರ್ಣ-ದಶಗ್ರೀವರೆಂಬ ಇಬ್ಬರು ರಾಕ್ಷಸೇಶ್ವರರು ಹುಟ್ಟಿದರು.

03259008a ಮಾಲಿನೀ ಜನಯಾಮಾಸ ಪುತ್ರಮೇಕಂ ವಿಭೀಷಣಂ|

03259008c ರಾಕಾಯಾಂ ಮಿಥುನಂ ಜಜ್ಞೇ ಖರಃ ಶೂರ್ಪಣಖಾ ತಥಾ||

ಮಾಲಿನಿಯಲ್ಲಿ ವಿಭೀಷಣನೆಂಬ ಓರ್ವ ಪುತ್ರನು ಜನಿಸಿದನು. ರಾಕಾಳಲ್ಲಿ ಇಬ್ಬರು ಅವಳಿಗಳು - ಖರ ಮತ್ತು ಶೂರ್ಪಣಖಿ ಹುಟ್ಟಿದರು.

03259009a ವಿಭೀಷಣಸ್ತು ರೂಪೇಣ ಸರ್ವೇಭ್ಯೋಽಭ್ಯಧಿಕೋಽಭವತ್|

03259009c ಸ ಬಭೂವ ಮಹಾಭಾಗೋ ಧರ್ಮಗೋಪ್ತಾ ಕ್ರಿಯಾರತಿಃ||

ವಿಭೀಷಣನಾದರೋ ರೂಪದಲ್ಲಿ ಇವರೆಲ್ಲರ ಅಧಿಕನಾಗಿದ್ದನು ಮತ್ತು ಆ ಮಹಾಭಾಗನು ಧರ್ಮಗೋಪ್ತನೂ ಕ್ರಿಯಾರತಿಯೂ ಆಗಿದ್ದನು.

03259010a ದಶಗ್ರೀವಸ್ತು ಸರ್ವೇಷಾಂ ಜ್ಯೇಷ್ಠೋ ರಾಕ್ಷಸಪುಂಗವಃ|

03259010c ಮಹೋತ್ಸಾಹೋ ಮಹಾವೀರ್ಯೋ ಮಹಾಸತ್ತ್ವಪರಾಕ್ರಮಃ||

ಅವರೆಲ್ಲರ ಜ್ಯೇಷ್ಠ ರಾಕ್ಷಸಪುಂಗವ ದಶಗ್ರೀವನಾದರೋ ಮಹೋತ್ಸಾಹನೂ, ಮಹಾವೀರ್ಯವಂತನೂ ಮತ್ತು ಮಹಾ ಸತ್ತ್ವಪರಾಕ್ರಮಿಯೂ ಆಗಿದ್ದನು.

03259011a ಕುಂಭಕರ್ಣೋ ಬಲೇನಾಸೀತ್ಸರ್ವೇಭ್ಯೋಽಭ್ಯಧಿಕಸ್ತದಾ|

03259011c ಮಾಯಾವೀ ರಣಶೌಂಡಶ್ಚ ರೌದ್ರಶ್ಚ ರಜನೀಚರಃ||

ಕುಂಭಕರ್ಣನು ಬಲದಲ್ಲಿ ಎಲ್ಲರಿಗಿಂತಲೂ ಅಧಿಕನಾಗಿದ್ದನು. ಆ ರಜನೀಚರನು ಮಾಯಾವಿಯೂ, ರಣಶೌಂಡನೂ ಮತ್ತು ರೌದ್ರನೂ ಆಗಿದ್ದನು.

03259012a ಖರೋ ಧನುಷಿ ವಿಕ್ರಾಂತೋ ಬ್ರಹ್ಮದ್ವಿತ್ಪಿಶಿತಾಶನಃ|

03259012c ಸಿದ್ಧವಿಘ್ನಕರೀ ಚಾಪಿ ರೌದ್ರಾ ಶೂರ್ಪಣಖಾ ತಥಾ||

ಖರನು ಧನುಸ್ಸಿನಲ್ಲಿ ವಿಕ್ರಾಂತನಾಗಿದ್ದನು ಮತ್ತು ಬ್ರಾಹ್ಮಣರ ಮಾಂಸವನ್ನು ಭಕ್ಷಿಸುತ್ತಿದ್ದನು. ಶೂರ್ಪಣಖಿಯು ರೌದ್ರಳಾಗಿದ್ದು ಸಿದ್ಧರಿಗೆ ವಿಘ್ನಗಳನ್ನುಂಟುಮಾಡುತ್ತಿದ್ದಳು.

03259013a ಸರ್ವೇ ವೇದವಿದಃ ಶೂರಾಃ ಸರ್ವೇ ಸುಚರಿತವ್ರತಾಃ|

03259013c ಊಷುಃ ಪಿತ್ರಾ ಸಹ ರತಾ ಗಂಧಮಾದನಪರ್ವತೇ||

ಅವರೆಲ್ಲರೂ ವೀದವಿದರೂ, ಶೂರರೂ ಆಗಿದ್ದು ಎಲ್ಲ ಸುಚರಿತವ್ರತರೂ ಆಗಿ ತಂದೆಯೊಂದಿಗೆ ಗಂಧಮಾದನ ಪರ್ವತದಲ್ಲಿ ಸಂತೋಷದಿಂದಿದ್ದರು.

03259014a ತತೋ ವೈಶ್ರವಣಂ ತತ್ರ ದದೃಶುರ್ನರವಾಹನಂ|

03259014c ಪಿತ್ರಾ ಸಾರ್ಧಂ ಸಮಾಸೀನಮೃದ್ಧ್ಯಾ ಪರಮಯಾ ಯುತಂ||

ಆಗ ಅಲ್ಲಿ ತಂದೆಯ ಬಳಿ ನರವಾಹನ ವೈಶ್ರವಣನು ಪರಮ ವೈಭವದೊಂದಿಗೆ ಕುಳಿತುದದನ್ನು ಅವರು ನೋಡಿದರು.

03259015a ಜಾತಸ್ಪರ್ಧಾಸ್ತತಸ್ತೇ ತು ತಪಸೇ ಧೃತನಿಶ್ಚಯಾಃ|

03259015c ಬ್ರಹ್ಮಾಣಂ ತೋಷಯಾಮಾಸುರ್ಘೋರೇಣ ತಪಸಾ ತದಾ||

ಆಗ ಅವರಲ್ಲಿ ಸ್ಪರ್ಧಾಭಾವನೆಯು ಹುಟ್ಟಲು ಆ ಧೃತನಿಶ್ಚಯಿಗಳು ಘೋರ ತಪಸ್ಸಿನಿಂದ ಬ್ರಹ್ಮನನ್ನು ತೃಪ್ತಿಪಡಿಸಿದರು.

03259016a ಅತಿಷ್ಠದೇಕಪಾದೇನ ಸಹಸ್ರಂ ಪರಿವತ್ಸರಾನ್|

03259016c ವಾಯುಭಕ್ಷೋ ದಶಗ್ರೀವಃ ಪಂಚಾಗ್ನಿಃ ಸುಸಮಾಹಿತಃ||

ದಶಗ್ರೀವನು ಸುಸಮಾಹಿತನಾಗಿ ಪಂಚಾಗ್ನಿಗಳ ಮಧ್ಯೆ ಒಂದೇ ಕಾಲಿನ ಮೇಲೆ ನಿಂತು ಸಹಸ್ರ ವರ್ಷಗಳ ಪರ್ಯಂತ ವಾಯುಭಕ್ಷನಾಗಿ ತಪಿಸಿದನು.

03259017a ಅಧಃಶಾಯೀ ಕುಂಭಕರ್ಣೋ ಯತಾಹಾರೋ ಯತವ್ರತಃ|

03259017c ವಿಭೀಷಣಃ ಶೀರ್ಣಪರ್ಣಮೇಕಮಭ್ಯವಹಾರಯತ್||

03259018a ಉಪವಾಸರತಿರ್ಧೀಮಾನ್ಸದಾ ಜಪ್ಯಪರಾಯಣಃ|

03259018c ತಮೇವ ಕಾಲಮಾತಿಷ್ಠತ್ತೀವ್ರಂ ತಪ ಉದಾರಧೀಃ||

ಕುಂಭಕರ್ಣನು ಯತಾಹಾರನೂ ಯತವ್ರತನೂ ಆಗಿ ನೆಲದ ಮೇಲೆ ಮಲಗಿಕೊಂಡನು ಮತ್ತು ಧೀಮಾನ್ ವಿಭೀಷಣನು ಒಂದೇ ಒಂದು ಒಣಗಿದ ಎಲೆಯನ್ನು ಆಹಾರವನ್ನಾಗಿಸಿಕೊಂಡು ಉಪವಾಸದಲ್ಲಿ ಮತ್ತು ಸದಾ ಜಪ-ಪಾರಾಯಣದಲ್ಲಿ ತೊಡಗಿಸಿಕೊಂಡನು. ಆ ಉದಾರ ಮನಸ್ವಿಯು ಬಹುಕಾಲದವರೆಗೆ ಅತೀವ ತೀವ್ರ ತಪಸ್ಸನ್ನಾಚರಿಸಿದನು.

03259019a ಖರಃ ಶೂರ್ಪಣಖಾ ಚೈವ ತೇಷಾಂ ವೈ ತಪ್ಯತಾಂ ತಪಃ|

03259019c ಪರಿಚರ್ಯಾಂ ಚ ರಕ್ಷಾಂ ಚ ಚಕ್ರತುರ್ಹೃಷ್ಟಮಾನಸೌ||

ಖರ ಮತ್ತು ಶೂರ್ಪಣಖಿಯರು ಸಂತೋಷದಿಂದ ತಪಸ್ಸನ್ನು ತಪಿಸುತ್ತಿರುವವರ ಪರಿಚಾರಕರಾಗಿ ಅವರನ್ನು ರಕ್ಷಣೆಮಾಡುತ್ತಿದ್ದರು.

03259020a ಪೂರ್ಣೇ ವರ್ಷಸಹಸ್ರೇ ತು ಶಿರಶ್ಚಿತ್ತ್ವಾ ದಶಾನನಃ|

03259020c ಜುಹೋತ್ಯಗ್ನೌ ದುರಾಧರ್ಷಸ್ತೇನಾತುಷ್ಯಜ್ಜಗತ್ಪ್ರಭುಃ||

ಸಹಸ್ರವರ್ಷಗಳು ಸಂಪೂರ್ಣವಾದ ನಂತರ ದಶಾನನನು ಶಿರವನ್ನು ಕತ್ತರಿಸಿ ಅಗ್ನಿಯಲ್ಲಿ ಆಹುತಿಯನ್ನಾಗಿತ್ತನು. ಅವನ ಈ ದುರಾಧರ್ಷಕೃತ್ಯದಿಂದ ಜಗತ್ಪ್ರಭುವು ಸಂತುಷ್ಟನಾದನು.

03259021a ತತೋ ಬ್ರಹ್ಮಾ ಸ್ವಯಂ ಗತ್ವಾ ತಪಸಸ್ತಾನ್ನ್ಯವಾರಯತ್|

03259021c ಪ್ರಲೋಭ್ಯ ವರದಾನೇನ ಸರ್ವಾನೇವ ಪೃಥಕ್ ಪೃಥಕ್||

ಆಗ ಸ್ವಯಂ ಬ್ರಹ್ಮನು ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ವರದಾನದ ಲೋಭವನ್ನಿತ್ತು ಅವರ ತಪಸ್ಸನ್ನು ತಡೆದನು.

03259022 ಬ್ರಹ್ಮೋವಾಚ|

03259022a ಪ್ರೀತೋಽಸ್ಮಿ ವೋ ನಿವರ್ತಧ್ವಂ ವರಾನ್ವೃಣುತ ಪುತ್ರಕಾಃ|

03259022c ಯದ್ಯದಿಷ್ಟಮೃತೇ ತ್ವೇಕಮಮರತ್ವಂ ತಥಾಸ್ತು ತತ್||

ಬ್ರಹ್ಮನು ಹೇಳಿದನು: “ಮಕ್ಕಳೇ! ಪ್ರೀತನಾಗಿದ್ದೇನೆ. ಈಗ ನಿಲ್ಲಿಸಿ ವರವನ್ನು ಕೇಳಿ. ಅಮರತ್ವವನ್ನು ಬಿಟ್ಟು ಬಯಸಿದುದು ಬೇರೆ ಏನೇ ಇರಲಿ, ಹಾಗೆಯೇ ಆಗುತ್ತದೆ.

03259023a ಯದ್ಯದಗ್ನೌ ಹುತಂ ಸರ್ವಂ ಶಿರಸ್ತೇ ಮಹದೀಪ್ಸಯಾ|

03259023c ತಥೈವ ತಾನಿ ತೇ ದೇಹೇ ಭವಿಷ್ಯಂತಿ ಯಥೇಪ್ಸಿತಂ||

ಮಹಾ ಆಸೆಗಳನ್ನಿತ್ತು ಅಗ್ನಿಯಲ್ಲಿ ಆಹುತಿಯನ್ನಾಗಿತ್ತ ನಿನ್ನ ಶಿರಗಳೆಲ್ಲವೂ ಮೊದಲಿನ ಹಾಗೆಯೇ ನಿನ್ನ ದೇಹವನ್ನು ಸೇರುತ್ತವೆ.

03259024a ವೈರೂಪ್ಯಂ ಚ ನ ತೇ ದೇಹೇ ಕಾಮರೂಪಧರಸ್ತಥಾ|

03259024c ಭವಿಷ್ಯಸಿ ರಣೇಽರೀಣಾಂ ವಿಜೇತಾಸಿ ನ ಸಂಶಯಃ||

ನಿನ್ನ ದೇಹಕ್ಕೆ ವೈರೂಪವೆನ್ನುವುದೇ ಇಲ್ಲದಿರಲಿ ಮತ್ತು ನೀನು ಬೇಕಾದ ರೂಪವನ್ನು ಧರಿಸಬಲ್ಲವನಾಗುವೆ. ರಣದಲ್ಲಿ ಅರಿಗಳಿಂದ ವಿಜಯಿಯಾಗುವೆ ಎನ್ನುವುದರಲ್ಲಿ ಸಂಶಯವೇ ಇಲ್ಲ.”

03259025 ರಾವಣ ಉವಾಚ|

03259025a ಗಂಧರ್ವದೇವಾಸುರತೋ ಯಕ್ಷರಾಕ್ಷಸತಸ್ತಥಾ|

03259025c ಸರ್ಪಕಿನ್ನ್ನರಭೂತೇಭ್ಯೋ ನ ಮೇ ಭೂಯಾತ್ಪರಾಭವಃ||

ರಾವಣನು ಹೇಳಿದನು: “ಗಂಧರ್ವ, ದೇವತೆ, ಅಸುರ, ಯಕ್ಷ, ರಾಕ್ಷಸ, ಸರ್ಪ, ಕಿನ್ನರ ಭೂತಗಳಿಂದ ನನಗೆ ಪರಾಭವವಾಗದಿರಲಿ.”

03259026 ಬ್ರಹ್ಮೋವಾಚ|

03259026a ಯ ಏತೇ ಕೀರ್ತಿತಾಃ ಸರ್ವೇ ನ ತೇಭ್ಯೋಽಸ್ತಿ ಭಯಂ ತವ|

03259026c ಋತೇ ಮನುಷ್ಯಾದ್ಭದ್ರಂ ತೇ ತಥಾ ತದ್ವಿಹಿತಂ ಮಯಾ||

ಬ್ರಹ್ಮನು ಹೇಳಿದನು: “ಮನುಷ್ಯನನ್ನು ಬಿಟ್ಟು ನೀನು ಕೇಳಿಕೊಂಡ ಈ ಎಲ್ಲರಿಂದ ನಿನಗೆ ಭಯವಿರುವುದಿಲ್ಲ. ಇದು ನನ್ನ ಆದೇಶ. ನಿನಗೆ ಮಂಗಳವಾಗಲಿ.””

03259027 ಮಾರ್ಕಂಡೇಯ ಉವಾಚ|

03259027a ಏವಮುಕ್ತೋ ದಶಗ್ರೀವಸ್ತುಷ್ಟಃ ಸಮಭವತ್ತದಾ|

03259027c ಅವಮೇನೇ ಹಿ ದುರ್ಬುದ್ಧಿರ್ಮನುಷ್ಯಾನ್ಪುರುಷಾದಕಃ||

ಮಾರ್ಕಂಡೇಯನು ಹೇಳಿದನು: “ಈ ಮಾತುಗಳಿಂದ ದಶಗ್ರೀವನು ಸಂತುಷ್ಟನಾದನು. ಏಕೆಂದರೆ ಅ ಪುರುಷಾದಕ ದುರ್ಬುದ್ಧಿಯು ಮನುಷ್ಯರನ್ನು ಕೀಳುಭಾವನೆಯಿಂದ ನೋಡುತ್ತಿದ್ದನು.

03259028a ಕುಂಭಕರ್ಣಮಥೋವಾಚ ತಥೈವ ಪ್ರಪಿತಾಮಹಃ|

03259028c ಸ ವವ್ರೇ ಮಹತೀಂ ನಿದ್ರಾಂ ತಮಸಾ ಗ್ರಸ್ತಚೇತನಃ||

ಹಾಗೆಯೇ ಪಿತಾಮಹನು ಕುಂಭಕರ್ಣನನ್ನು ಕೇಳಲು ಅವನ ಚೇತನವು ತಾಮಸದ ಹಿಡಿತದಲ್ಲಿರಲು ಅವನು ಮಹತ್ತರ ನಿದ್ದೆಯನ್ನು ವರವನ್ನಾಗಿ ಕೇಳಿದನು.

03259029a ತಥಾ ಭವಿಷ್ಯತೀತ್ಯುಕ್ತ್ವಾ ವಿಭೀಷಣಮುವಾಚ ಹ|

03259029c ವರಂ ವೃಣೀಷ್ವ ಪುತ್ರ ತ್ವಂ ಪ್ರೀತೋಽಸ್ಮೀತಿ ಪುನಃ ಪುನಃ||

ಹಾಗೆಯೇ ಆಗುತ್ತದೆಯೆಂದು ಹೇಳಿ ಅವನು ವಿಭೀಷಣನಿಗೆ “ಪುತ್ರ! ಪ್ರೀತನಾಗಿದ್ದೇನೆ. ವರವನ್ನು ಕೇಳಿಕೋ!” ಎಂದು ಪುನಃ ಪುನಃ ಹೇಳಿದನು.

03259030 ವಿಭೀಷಣ ಉವಾಚ|

03259030a ಪರಮಾಪದ್ಗತಸ್ಯಾಪಿ ನಾಧರ್ಮೇ ಮೇ ಮತಿರ್ಭವೇತ್|

03259030c ಅಶಿಕ್ಷಿತಂ ಚ ಭಗವನ್ಬ್ರಹ್ಮಾಸ್ತ್ರಂ ಪ್ರತಿಭಾತು ಮೇ||

ವಿಭೀಷಣನು ಹೇಳಿದನು: “ಪರಮ ಆಪತ್ತನ್ನು ಪಡೆದರೂ ನನ್ನ ಬುದ್ಧಿಯು ಅಧರ್ಮದಲ್ಲಿ ನಿಲ್ಲದಿರಲಿ. ಕಲಿಯದೇ ಇದ್ದರೂ ನನಗೆ ಭಗವನ್! ಬ್ರಹ್ಮಾಸ್ತ್ರವು ಹೊಳೆಯಲಿ.”

03259031 ಬ್ರಹ್ಮೋವಾಚ|

03259031a ಯಸ್ಮಾದ್ರಾಕ್ಷಸಯೋನೌ ತೇ ಜಾತಸ್ಯಾಮಿತ್ರಕರ್ಶನ|

03259031c ನಾಧರ್ಮೇ ರಮತೇ ಬುದ್ಧಿರಮರತ್ವಂ ದದಾಮಿ ತೇ||

ಬ್ರಹ್ಮನು ಹೇಳಿದನು: “ಅಮಿತ್ರಕರ್ಶನ! ರಾಕ್ಷಸಯೋನಿಯಲ್ಲಿ ಜನಿಸಿದ್ದರೂ ಕೂಡ ಎಲ್ಲಿಯವರೆಗೆ ನಿನ್ನ ಬುದ್ಧಿಯು ಅಧರ್ಮದಲ್ಲಿ ಆನಂದಿಸುವುದಿಲ್ಲವೋ ಅಲ್ಲಿಯವರೆಗೆ ನಿನಗೆ ಅಮರತ್ವವನ್ನು ನೀಡುತ್ತೇನೆ.””

03259032 ಮಾರ್ಕಂಡೇಯ ಉವಾಚ|

03259032a ರಾಕ್ಷಸಸ್ತು ವರಂ ಲಬ್ಧ್ವಾ ದಶಗ್ರೀವೋ ವಿಶಾಂ ಪತೇ|

03259032c ಲಂಕಾಯಾಶ್ಚ್ಯಾವಯಾಮಾಸ ಯುಧಿ ಜಿತ್ವಾ ಧನೇಶ್ವರಂ||

ಮಾರ್ಕಂಡೇಯನು ಹೇಳಿದನು: “ವಿಶಾಂಪತೇ! ವರವನ್ನು ಪಡೆದು ರಾಕ್ಷಸ ದಶಗ್ರೀವನಾದರೋ ಯುದ್ಧದಲ್ಲಿ ಧನೇಶ್ವರನನ್ನು ಜಯಿಸಿ ಅವನನ್ನು ಲಂಕೆಯಿಂದ ಹೊರಗೋಡಿಸಿದನು.

03259033a ಹಿತ್ವಾ ಸ ಭಗವಾಽಲ್ಲಂಕ್ಯಾಮಾವಿಶದ್ಗಂಧಮಾದನಂ|

03259033c ಗಂಧರ್ವಯಕ್ಷಾನುಗತೋ ರಕ್ಷಃಕಿಂಪುರುಷೈಃ ಸಹ||

ಆ ಭಗವಾನನು ಲಂಕೆಯನ್ನು ತೊರೆದು ಹಿಂಬಾಲಿಸಿದ ಗಂಧರ್ವ, ಯಕ್ಷ, ರಾಕ್ಷಸ ಕಿಂಪುರುಷರೊಂದಿಗೆ ಗಂಧಮಾದನವನ್ನು ಪ್ರವೇಶಿಸಿದನು.

03259034a ವಿಮಾನಂ ಪುಷ್ಪಕಂ ತಸ್ಯ ಜಹಾರಾಕ್ರಮ್ಯ ರಾವಣಃ|

03259034c ಶಶಾಪ ತಂ ವೈಶ್ರವಣೋ ನ ತ್ವಾಮೇತದ್ವಹಿಷ್ಯತಿ||

ಅಕ್ರಮವಾಗಿ ರಾವಣನು ಅವನ ಪುಷ್ಪಕ ವಿಮಾನವನ್ನು ಅಪಹರಿಸಿದನು ಮತ್ತು ಅದಕ್ಕೆ ವೈಶ್ರವಣನು ಅವನಿಗೆ ಶಪಿಸಿದನು: “ಇದನ್ನು ನೀನು ಏರಲಾರೆ!

03259035a ಯಸ್ತು ತ್ವಾಂ ಸಮರೇ ಹಂತಾ ತಮೇವೈತದ್ವಹಿಷ್ಯತಿ|

03259035c ಅವಮನ್ಯ ಗುರುಂ ಮಾಂ ಚ ಕ್ಷಿಪ್ರಂ ತ್ವಂ ನ ಭವಿಷ್ಯಸಿ||

ಸಮರದಲ್ಲಿ ಯಾರು ನಿನ್ನನ್ನು ಕೊಲ್ಲುತ್ತಾನೋ ಅವನು ಮಾತ್ರ ಇದನ್ನು ಏರಬಲ್ಲನು. ಹಿರಿಯವನಾಗಿದ್ದ ನನ್ನನ್ನು ಅಪಮಾನಿಸಿದಂತೆ ಕ್ಷಿಪ್ರವಾಗಿ ನಿನಗೂ ಹಾಗೆಯೇ ಆಗುತ್ತದೆ.”

03259036a ವಿಭೀಷಣಸ್ತು ಧರ್ಮಾತ್ಮಾ ಸತಾಂ ಧರ್ಮಮನುಸ್ಮರನ್|

03259036c ಅನ್ವಗಚ್ಚನ್ಮಹಾರಾಜ ಶ್ರಿಯಾ ಪರಮಯಾ ಯುತಃ||

ಮಹಾರಾಜ! ಧರ್ಮಾತ್ಮ ವಿಭೀಷಣನಾದರೋ ಪರಮ ತೇಜಸ್ಸಿನಿಂದೊಡಗೂಡಿ ಸತ್ಯವಂತರ ಧರ್ಮವನ್ನು ಮನಸ್ಸಿನಲ್ಲಿಟ್ಟುಕೊಂಡು ಅನುಸರಿಸಿದನು.

03259037a ತಸ್ಮೈ ಸ ಭಗವಾಂಸ್ತುಷ್ಟೋ ಭ್ರಾತಾ ಭ್ರಾತ್ರೇ ಧನೇಶ್ವರಃ|

03259037c ಸೇನಾಪತ್ಯಂ ದದೌ ಧೀಮಾನ್ಯಕ್ಷರಾಕ್ಷಸಸೇನಯೋಃ||

ಅಣ್ಣ ಭಗವಾನ್ ಧನೇಶ್ವರನು ಆ ಧೀಮಂತ ತಮ್ಮನಿಂದ ತುಷ್ಟನಾಗಿ ಅವನಿಗೆ ಯಕ್ಷರಾಕ್ಷಸ ಸೇನೆಗಳ ಸೇನಾಪತ್ಯವನ್ನು ಕೊಟ್ಟನು.

03259038a ರಾಕ್ಷಸಾಃ ಪುರುಷಾದಾಶ್ಚ ಪಿಶಾಚಾಶ್ಚ ಮಹಾಬಲಾಃ|

03259038c ಸರ್ವೇ ಸಮೇತ್ಯ ರಾಜಾನಮಭ್ಯಷಿಂಚದ್ದಶಾನನಂ||

ನರಭಕ್ಷಕ ರಾಕ್ಷಸರು ಮತ್ತು ಮಹಾಬಲಶಾಲಿ ಪಿಶಾಚರು ಎಲ್ಲರೂ ಸೇರಿ ದಶಾನನನನ್ನು ರಾಜನಾಗಿ ಅಭಿಷೇಕಿಸಿದರು.

03259039a ದಶಗ್ರೀವಸ್ತು ದೈತ್ಯಾನಾಂ ದೇವಾನಾಂ ಚ ಬಲೋತ್ಕಟಃ|

03259039c ಆಕ್ರಮ್ಯ ರತ್ನಾನ್ಯಹರತ್ಕಾಮರೂಪೀ ವಿಹಂಗಮಃ||

ಬಲೋತ್ಕಟನಾದ ಆ ಕಾಮರೂಪೀ ವಿಹಂಗಮ ದಶಗ್ರೀವನು ದೈತ್ಯ ಮತ್ತು ದೇವರಿಂದ ಅಕ್ರಮವಾಗಿ ರತ್ನಗಳನ್ನು ಅಪಹರಿಸಿದನು.

03259040a ರಾವಯಾಮಾಸ ಲೋಕಾನ್ಯತ್ತಸ್ಮಾದ್ರಾವಣ ಉಚ್ಯತೇ|

03259040c ದಶಗ್ರೀವಃ ಕಾಮಬಲೋ ದೇವಾನಾಂ ಭಯಮಾದಧತ್||

ಲೋಕಗಳನ್ನು ರೋದಿಸುವಂತೆ ಮಾಡಿದುದರಿಂದ ಅವನನ್ನು ರಾವಣನೆಂದು ಕರೆಯುತ್ತಾರೆ. ಕಾಮಬಲ ದಶಗ್ರೀವನು ದೇವತೆಗಳಿಗೆ ಭಯವನ್ನುಂಟುಮಾಡಿದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ರಾವಣಾದಿವರಪ್ರಾಪ್ತೌ ಏಕೋನಷಷ್ಟ್ಯಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ರಾವಣಾದಿವರಪ್ರಾಪ್ತಿಯಲ್ಲಿ ಇನ್ನೂರಾಐವತ್ತೊಂಭತ್ತನೆಯ ಅಧ್ಯಾಯವು.

Related image

Comments are closed.