Aranyaka Parva: Chapter 279

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೭೯

ಸತ್ಯವಾನ್-ಸಾವಿತ್ರಿಯರ ವಿವಾಹ, ಸಾವಿತ್ರಿಯ ನಡತೆಯಿಂದ ಅತ್ತೆ-ಮಾವಂದಿರಿಗಾದ ಸಂತೋಷ

ರಾಜ್ಯವನ್ನು ಕಳೆದುಕೊಂಡು ಕುರುಡನಾಗಿ ವನದಲ್ಲಿ ವಾಸಿಸುತ್ತಿದ್ದ ರಾಜ ದ್ಯುಮತ್ಸೇನನ ಮಗ ಸತ್ಯವಾನನಿಗೆ ಅಶ್ವಪತಿಯು ಮಗಳನ್ನು ಕೊಟ್ಟು ವಿವಾಹ ನೆರವೇರಿಸಿದುದು (೧-೧೬). ಅತ್ತೆ-ಮಾವ ಮತ್ತು ಸತ್ಯವಾನ ಸೇವೆ ಮಾಡುತ್ತಾ, ಯಾವಾಗಲೂ ನಾರದನು ಹೇಳಿದ ಮಾತುಗಳ ಕುರಿತು ಚಿಂತಿಸುತ್ತಾ ಸಾವಿತ್ರಿಯು ಅರಣ್ಯದಲ್ಲಿ ವಾಸಿಸಿದುದು (೧೭-೨೩).

03279001 ಮಾರ್ಕಂಡೇಯ ಉವಾಚ|

03279001a ಅಥ ಕನ್ಯಾಪ್ರದಾನೇ ಸ ತಮೇವಾರ್ಥಂ ವಿಚಿಂತಯನ್|

03279001c ಸಮಾನಿನ್ಯೇ ಚ ತತ್ಸರ್ವಂ ಭಾಂಡಂ ವೈವಾಹಿಕಂ ನೃಪಃ||

ಮಾರ್ಕಂಡೇಯನು ಹೇಳಿದನು: “ಅನಂತರ ಕನ್ಯಾದಾನದ ಕುರಿತು ಯೋಚಿಸಿ ಆ ವಿವಾಹಕ್ಕೆ ಬೇಕಾಗುವ ಎಲ್ಲ ಸಲಕರಣೆಗಳನ್ನೂ ಒಟ್ಟುಗೂಡಿಸಿದನು.

03279002a ತತೋ ವೃದ್ಧಾನ್ದ್ವಿಜಾನ್ಸರ್ವಾನೃತ್ವಿಜಃ ಸಪುರೋಹಿತಾನ್|

03279002c ಸಮಾಹೂಯ ತಿಥೌ ಪುಣ್ಯೇ ಪ್ರಯಯೌ ಸಹ ಕನ್ಯಯಾ||

ಅನಂತರ ವೃದ್ಧರನ್ನೂ, ದ್ವಿಜರನ್ನೂ, ಪುರೋಹಿತರೊಂದಿಗೆ ಸರ್ವ ಋತ್ವಿಜರನ್ನೂ ಕರೆಯಿಸಿ ಕನ್ಯೆಯೊಡಗೂಡಿ ಪುಣ್ಯ ತಿಥಿಯಲ್ಲಿ ಹೊರಟನು.

03279003a ಮೇಧ್ಯಾರಣ್ಯಂ ಸ ಗತ್ವಾ ಚ ದ್ಯುಮತ್ಸೇನಾಶ್ರಮಂ ನೃಪಃ|

03279003c ಪದ್ಭ್ಯಾಮೇವ ದ್ವಿಜೈಃ ಸಾರ್ಧಂ ರಾಜರ್ಷಿಂ ತಮುಪಾಗಮತ್||

ದಟ್ಟ ಅರಣ್ಯಕ್ಕೆ ಹೋಗಿ ನೃಪನು ಕಾಲ್ನಡಿಗೆಯಲ್ಲಿಯೇ ದ್ವಿಜರೊಡಗೂಡಿ ರಾಜರ್ಷಿ ದ್ಯುಮತ್ಸೇನನ ಆಶ್ರಮಕ್ಕೆ ಬಂದನು.

03279004a ತತ್ರಾಪಶ್ಯನ್ಮಹಾಭಾಗಂ ಶಾಲವೃಕ್ಷಮುಪಾಶ್ರಿತಂ|

03279004c ಕೌಶ್ಯಾಂ ಬೃಸ್ಯಾಂ ಸಮಾಸೀನಂ ಚಕ್ಷುರ್ಹೀನಂ ನೃಪಂ ತದಾ||

ಅಲ್ಲಿ ಶಾಲವೃಕ್ಷದಡಿಯಲ್ಲಿ ಕುಶದ ಚಾಪೆಯಮೇಲೆ ಕುಳಿತಿದ್ದ ಕುರುಡ ಮಹಾಭಾಗ ನೃಪನನ್ನು ನೋಡಿದನು.

03279005a ಸ ರಾಜಾ ತಸ್ಯ ರಾಜರ್ಷೇಃ ಕೃತ್ವಾ ಪೂಜಾಂ ಯಥಾರ್ಹತಃ|

03279005c ವಾಚಾ ಸುನಿಯತೋ ಭೂತ್ವಾ ಚಕಾರಾತ್ಮನಿವೇದನಂ||

ರಾಜನು ಆ ರಾಜರ್ಷಿಗೆ ಯಥಾರ್ಹವಾಗಿ ಪೂಜಿಸಿ ಸುನಿಯತ ಮಾತುಗಳಿಂದ ತನ್ನ ಪರಿಚಯವನ್ನು ಹೇಳಿಕೊಂಡನು.

03279006a ತಸ್ಯಾರ್ಘ್ಯಮಾಸನಂ ಚೈವ ಗಾಂ ಚಾವೇದ್ಯ ಸ ಧರ್ಮವಿತ್|

03279006c ಕಿಮಾಗಮನಮಿತ್ಯೇವಂ ರಾಜಾ ರಾಜಾನಮಬ್ರವೀತ್||

ಅವನು ರಾಜನಿಗೆ ಅರ್ಘ್ಯ, ಆಸನ ಮತ್ತು ಗೋವುಗಳನ್ನು ಧರ್ಮದಂತೆ ನೀಡಿ ಬಂದಿರುವ ಕಾರಣದ ಕುರಿತು ಕೇಳಿದನು.

03279007a ತಸ್ಯ ಸರ್ವಮಭಿಪ್ರಾಯಮಿತಿಕರ್ತವ್ಯತಾಂ ಚ ತಾಂ|

03279007c ಸತ್ಯವಂತಂ ಸಮುದ್ದಿಶ್ಯ ಸರ್ವಮೇವ ನ್ಯವೇದಯತ್||

ತನ್ನ ಮತ್ತು ಎಲ್ಲರ ಅಭಿಪ್ರಾಯವನ್ನೂ, ಯಾವ ಕಾರ್ಯಕ್ಕಾಗಿ ಬಂದಿದ್ದೇನೆನ್ನುವುದನ್ನೂ, ಸತ್ಯವಾನನ ಕುರಿತು ಎಲ್ಲವನ್ನೂ ಅವನಿಗೆ ನಿವೇದಿಸಿದನು.

03279008 ಅಶ್ವಪತಿರುವಾಚ|

03279008a ಸಾವಿತ್ರೀ ನಾಮ ರಾಜರ್ಷೇ ಕನ್ಯೇಯಂ ಮಮ ಶೋಭನಾ|

03279008c ತಾಂ ಸ್ವಧರ್ಮೇಣ ಧರ್ಮಜ್ಞ ಸ್ನುಷಾರ್ಥೇ ತ್ವಂ ಗೃಹಾಣ ಮೇ||

ಅಶ್ವಪತಿಯು ಹೇಳಿದನು: “ರಾಜರ್ಷೇ! ಸಾವಿತ್ರಿ ಎಂಬ ಹೆಸರಿನ ನನ್ನ ಕನ್ಯೆ ಶೋಭನೆಯನ್ನು ಧರ್ಮಜ್ಞನಾದ ನೀನು ಸ್ವಧರ್ಮದಂತೆ ಸೊಸೆಯನ್ನಾಗಿ ಸ್ವೀಕರಿಸಬೇಕು.”

03279009 ದ್ಯುಮತ್ಸೇನ ಉವಾಚ|

03279009a ಚ್ಯುತಾಃ ಸ್ಮ ರಾಜ್ಯಾದ್ವನವಾಸಮಾಶ್ರಿತಾಶ್|

         ಚರಾಮ ಧರ್ಮಂ ನಿಯತಾಸ್ತಪಸ್ವಿನಃ|

03279009c ಕಥಂ ತ್ವನರ್ಹಾ ವನವಾಸಮಾಶ್ರಮೇ|

         ಸಹಿಷ್ಯತೇ ಕ್ಲೇಶಮಿಮಂ ಸುತಾ ತವ||

ದ್ಯುಮತ್ಸೇನನು ಹೇಳಿದನು: “ರಾಜ್ಯವನ್ನು ಕಳೆದುಕೊಂಡು ನಾವು ವನವಾಸದಲ್ಲಿದ್ದೇವೆ. ಧರ್ಮದಲ್ಲಿದ್ದುಕೊಂಡು ತಪಸ್ವಿಗಳಂತೆ ಇದ್ದೇವೆ. ನಿನ್ನ ಮಗಳಾದರೂ ಹೇಗೆ ತಾನೇ ಈ ವನವಾಸ ಮತ್ತು ಆಶ್ರಮದ ಕಷ್ಟಗಳನ್ನು ಸಹಿಸಿಕೊಂಡಾಳು ಮತ್ತು ಅರ್ಹಳಾಗಿದ್ದಾಳೆ?”

03279010  ಅಶ್ವಪತಿರುವಾಚ|

03279010a ಸುಖಂ ಚ ದುಃಖಂ ಚ ಭವಾಭವಾತ್ಮಕಂ|

         ಯದಾ ವಿಜಾನಾತಿ ಸುತಾಹಮೇವ ಚ|

03279010c ನ ಮದ್ವಿಧೇ ಯುಜ್ಯತಿ ವಾಕ್ಯಂ ಈದೃಶಂ|

         ವಿನಿಶ್ಚಯೇನಾಭಿಗತೋಽಸ್ಮಿ ತೇ ನೃಪ||

ಅಶ್ವಪತಿಯು ಹೇಳಿದನು: “ಸುಖ ಮತ್ತು ದುಃಖಗಳು ಬರುತ್ತವೆ ಮತ್ತು ಹೋಗುತ್ತವೆ. ಇವೆರಡನ್ನೂ ನಾನೂ ಮತ್ತು ನನ್ನ ಮಗಳೂ ತಿಳಿದಿದ್ದೇವೆ. ಆದುದರಿಂದ ಅಂಥಹ ಮಾತುಗಳನ್ನು ನನ್ನಂಥವನಲ್ಲಿ ಹೇಳಬೇಡ. ನೃಪ! ಎಲ್ಲವನ್ನೂ ತಿಳಿದು ನಿಶ್ಚಯಿಸಿಯೇ ನಾವು ಇಲ್ಲಿಗೆ ಬಂದಿದ್ದೇವೆ.

03279011a ಆಶಾಂ ನಾರ್ಹಸಿ ಮೇ ಹಂತುಂ ಸೌಹೃದಾದ್ಪ್ರಣಯೇನ ಚ|

03279011c ಅಭಿತಶ್ಚಾಗತಂ ಪ್ರೇಮ್ಣಾ ಪ್ರತ್ಯಾಖ್ಯಾತುಂ ನ ಮಾರ್ಹಸಿ||

ಸೌಹಾರ್ದತೆಯಿಂದ ಮತ್ತು ಗೆಳೆತನದಿಂದ ಇದರ ಕುರಿತು ಆಸೆಯನ್ನಿಟ್ಟುಕೊಂಡು ಕೇಳುತ್ತಿದ್ದೇನೆ. ನನ್ನನ್ನು ನಿರಾಶೆಗೊಳಿಸದಿರು. ಪ್ರೇಮದಿಂದ ನಿನ್ನ ಬಳಿ ಬಂದಿರುವ ನಮ್ಮನ್ನು ಹಿಂದೆ ಕಳುಹಿಸದಿರು.

03279012a ಅನುರೂಪೋ ಹಿ ಸಂಯೋಗೇ ತ್ವಂ ಮಮಾಹಂ ತವಾಪಿ ಚ|

03279012c ಸ್ನುಷಾಂ ಪ್ರತೀಚ್ಚ ಮೇ ಕನ್ಯಾಂ ಭಾರ್ಯಾಂ ಸತ್ಯವತಃ ಸುತಾಂ||

ಎಲ್ಲ ವಿಷಯಗಳಲ್ಲಿಯೂ ನೀನು ನನ್ನ ಹಾಗಿದ್ದೀಯೆ ಮತ್ತು ನಾನು ನಿನ್ನ ಹಾಗೆ ಇದ್ದೇನೆ. ಆದುದರಿಂದ ನನ್ನ ಮಗಳನ್ನು ನಿನ್ನ ಸೊಸೆಯಾಗಿ ಮತ್ತು ಸತ್ಯವಾನನಿಗೆ ಭಾರ್ಯೆಯಾಗಿ ಸ್ವೀಕರಿಸು.”

03279013 ದ್ಯುಮತ್ಸೇನ ಉವಾಚ|

03279013a ಪೂರ್ವಮೇವಾಭಿಲಷಿತಃ ಸಂಬಂಧೋ ಮೇ ತ್ವಯಾ ಸಹ|

03279013c ಭ್ರಷ್ಟರಾಜ್ಯಸ್ತ್ವಹಮಿತಿ ತತ ಏತದ್ವಿಚಾರಿತಂ||

ದ್ಯುಮತ್ಸೇನನು ಹೇಳಿದನು: “ಹಿಂದೆಯೇ ನಾನು ನಿನ್ನೊಂದಿಗೆ ಸಂಬಂಧವನ್ನು ಮಾಡಿಕೊಳ್ಳಲು ಬಯಸಿದ್ದೆ. ರಾಜ್ಯವನ್ನು ಕಳೆದನಂತರ ಅದರ ಕುರಿತ ಭರವಸೆಯನ್ನೇ ಕಳೆದುಕೊಂಡಿದ್ದೆ.

03279014a ಅಭಿಪ್ರಾಯಸ್ತ್ವಯಂ ಯೋ ಮೇ ಪೂರ್ವಮೇವಾಭಿಕಾಂಕ್ಷಿತಃ|

03279014c ಸ ನಿರ್ವರ್ತತು ಮೇಽದ್ಯೈವ ಕಾಂಕ್ಷಿತೋ ಹ್ಯಸಿ ಮೇಽತಿಥಿಃ||

ನನ್ನ ಆ ಹಳೆಯ ಬಯಕೆಯು ನಿನ್ನ ಅಭಿಪ್ರಾಯದ ಹಾಗೆ ಪೂರೈಸಿದೆಯೆಂದರೆ ಅದನ್ನು ನಾನು ತಡೆಹಿಡಿಯುವುದಿಲ್ಲ. ನಿನಗೆ ಆದರದ ಸ್ವಾಗತ ಮತ್ತು ನನ್ನ ಗೌರವಾನ್ವಿತ ಅತಿಥಿಯಾಗಿರು.””

03279015 ಮಾರ್ಕಂಡೇಯ ಉವಾಚ|

03279015a ತತಃ ಸರ್ವಾನ್ಸಮಾನೀಯ ದ್ವಿಜಾನಾಶ್ರಮವಾಸಿನಃ|

03279015c ಯಥಾವಿಧಿ ಸಮುದ್ವಾಹಂ ಕಾರಯಾಮಾಸತುರ್ನೃಪೌ||

ಮಾರ್ಕಂಡೇಯನು ಹೇಳಿದನು: “ಅನಂತರ ಆಶ್ರಮವಾಸಿ ಎಲ್ಲ ದ್ವಿಜರನ್ನೂ ಕರೆತರಿಸಿ ಯಥಾವಿಧಿಯಾಗಿ ಆ ನೃಪರೀರ್ವರು ವಿವಾಹಕಾರ್ಯವನ್ನು ನೆರವೇರಿಸಿದರು.

03279016a ದತ್ತ್ವಾ ತ್ವಶ್ವಪತಿಃ ಕನ್ಯಾಂ ಯಥಾರ್ಹಂ ಚ ಪರಿಚ್ಚದಂ|

03279016c ಯಯೌ ಸ್ವಮೇವ ಭವನಂ ಯುಕ್ತಃ ಪರಮಯಾ ಮುದಾ||

ಅಶ್ವಪತಿಯು ಯಥಾರ್ಹ ಉಡುಗೊರೆಗಳೊಂದಿಗೆ ಕನ್ಯೆಯನ್ನು ಕೊಟ್ಟು ಪರಮ ಸಂತೋಷಗೊಂಡು ತನ್ನ ಅರಮನೆಗೆ ತೆರಳಿದನು.

03279017a ಸತ್ಯವಾನಪಿ ಭಾರ್ಯಾಂ ತಾಂ ಲಬ್ಧ್ವಾ ಸರ್ವಗುಣಾನ್ವಿತಾಂ|

03279017c ಮುಮುದೇ ಸಾ ಚ ತಂ ಲಬ್ಧ್ವಾ ಭರ್ತಾರಂ ಮನಸೇಪ್ಸಿತಂ||

ಸತ್ಯವಾನನಾದರೋ ಸರ್ವಗುಣಾನ್ವಿತೆ ಪತ್ನಿಯನ್ನು ಪಡೆದು ಸಂತೋಷಪಟ್ಟನು ಮತ್ತು ಅವಳೂ ಕೂಡ ತನಗಿಷ್ಟನಾದ ಪತಿಯನ್ನು ಪಡೆದು ಸಂತೋಷಗೊಂಡಳು.

03279018a ಗತೇ ಪಿತರಿ ಸರ್ವಾಣಿ ಸಂನ್ಯಸ್ಯಾಭರಣಾನಿ ಸಾ|

03279018c ಜಗೃಹೇ ವಲ್ಕಲಾನ್ಯೇವ ವಸ್ತ್ರಂ ಕಾಷಾಯಮೇವ ಚ||

ತಂದೆಯು ಹೊರಟು ಹೋದ ನಂತರ ಅವಳು ಎಲ್ಲ ಆಭರಣಗಳನ್ನೂ ಎತ್ತಿಟ್ಟು, ವಲ್ಕಲ ಮತ್ತು ಕಾಷಾಯ ವಸ್ತ್ರಗಳನ್ನು ಧರಿಸಿದಳು.

03279019a ಪರಿಚಾರೈರ್ಗುಣೈಶ್ಚೈವ ಪ್ರಶ್ರಯೇಣ ದಮೇನ ಚ|

03279019c ಸರ್ವಕಾಮಕ್ರಿಯಾಭಿಶ್ಚ ಸರ್ವೇಷಾಂ ತುಷ್ಟಿಮಾವಹತ್||

ಸದ್ಗುಣಗಳಿಂದ, ಪರಿಶ್ರಮದಿಂದ ಮತ್ತು ತಾಳ್ಮೆಯಿಂದ ಎಲ್ಲರ ಇಷ್ಟಗಳನ್ನು ನೆರವೇರಿಸುತ್ತ ಸರ್ವರನ್ನೂ ಸಂತೃಪ್ತಗೊಳಿಸುತ್ತಿದ್ದಳು.

03279020a ಶ್ವಶ್ರೂಂ ಶರೀರಸತ್ಕಾರೈಃ ಸರ್ವೈರಾಚ್ಚಾದನಾದಿಭಿಃ|

03279020c ಶ್ವಶುರಂ ದೇವಕಾರ್ಯೈಶ್ಚ ವಾಚಃ ಸಂಯಮನೇನ ಚ||

ಅತ್ತೆಯ ದೇಹಸತ್ಕಾರಗಳನ್ನು ಮಾಡಿದಳು ಮತ್ತು ಎಲ್ಲರ ಬಟ್ಟೆಗಳನ್ನು ನೋಡಿಕೊಳ್ಳುತ್ತಿದ್ದಳು; ಮಾವನ ದೇವಕಾರ್ಯಗಳಲ್ಲಿ ಸಹಾಯ ಮಾಡುತ್ತಿದ್ದಳು ಮತ್ತು ಸಂಯಮದಿಂದ ಮಾತನಾಡಿಕೊಂಡು ಇದ್ದಳು.

03279021a ತಥೈವ ಪ್ರಿಯವಾದೇನ ನೈಪುಣೇನ ಶಮೇನ ಚ|

03279021c ರಹಶ್ಚೈವೋಪಚಾರೇಣ ಭರ್ತಾರಂ ಪರ್ಯತೋಷಯತ್||

ಪ್ರೀತಿಯುಕ್ತ ಮಾತುಗಳಿಂದ, ನೈಪುಣ್ಯತೆಯಿಂದ, ಶಮದಿಂದ, ಮತ್ತು ಏಕಾಂತದ ಉಪಚಾರಗಳಿಂದ ಪತಿಯನ್ನು ಸಂತೋಷಪಡಿಸಿದಳು.

03279022a ಏವಂ ತತ್ರಾಶ್ರಮೇ ತೇಷಾಂ ತದಾ ನಿವಸತಾಂ ಸತಾಂ|

03279022c ಕಾಲಸ್ತಪಸ್ಯತಾಂ ಕಶ್ಚಿದತಿಚಕ್ರಾಮ ಭಾರತ||

ಭಾರತ! ಹೀಗೆ ಆ ಆಶ್ರಮದಲ್ಲಿ ಅವಳು ಸತ್ಯ ಮತ್ತು ತಪಸ್ಸಿನೊಡನೆ ವಾಸಿಸಿದಳು. ಹೀಗೆಯೇ ಬಹಳ ಸಮಯವು ಕಳೆದುಹೋಯಿತು.

03279023a ಸಾವಿತ್ರ್ಯಾಸ್ತು ಶಯಾನಾಯಾಸ್ತಿಷ್ಠಂತ್ಯಾಶ್ಚ ದಿವಾನಿಶಂ|

03279023c ನಾರದೇನ ಯದುಕ್ತಂ ತದ್ವಾಕ್ಯಂ ಮನಸಿ ವರ್ತತೇ||

ಸಾವಿತ್ರಿಯಾದರೋ ಮಲಗಿರುವಾಗ ಮತ್ತು ಎದ್ದಿರುವಾಗ, ಹಗಲು ಮತ್ತು ರಾತ್ರಿ ಪ್ರತಿಕ್ಷಣದಲ್ಲಿಯೂ ನಾರದನು ಹೇಳಿದ ಮಾತನ್ನು ಮನಸ್ಸಿನಲ್ಲಿಯೇ ಚಿಂತಿಸುತ್ತಿದ್ದಳು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ಪತಿವ್ರತಾಮಹಾತ್ಮ್ಯೇ ಸಾವಿತ್ರ್ಯುಪಾಖ್ಯಾನೇ ಏಕೋನಶೀತ್ಯಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ಪತಿವ್ರತಾಮಹಾತ್ಮ್ಯೆಯಲ್ಲಿ ಸಾವಿತ್ರ್ಯುಪಾಖ್ಯಾನದಲ್ಲಿ ಇನ್ನೂರಾಎಪ್ಪತ್ತೊಂಭತ್ತನೆಯ ಅಧ್ಯಾಯವು.

Flowers: Daisies On White Background - Stock Photo I1744391 at ...

Kannada translation of Draupadiharana Parva, by Chapter:
  1. ಜಯದ್ರಥಾಗಮನ
  2. ಕೋಟಿಕಾಸ್ಯಪ್ರಶ್ನಃ
  3. ದ್ರೌಪದೀವಾಕ್ಯ
  4. ಜಯದ್ರಥದ್ರೌಪದೀಸಂವಾದ
  5. ದ್ರೌಪದೀಹರಣ
  6. ಪಾರ್ಥಾಗಮನ
  7. ದ್ರೌಪದೀವಾಕ್ಯ
  8. ಜಯದ್ರಥಪಲಾಯನ
  9. ಜಯದ್ರಥವಿಮೋಕ್ಷಣ
  10. ರಾಮೋಪಾಖ್ಯಾನ-ಯುಧಿಷ್ಠಿರಪ್ರಶ್ನಃ
  11. ರಾಮೋಪಾಖ್ಯಾನ-ರಾಮರಾವಣಯೋರ್ಜನ್ಮಕಥನ
  12. ರಾಮೋಪಾಖ್ಯಾನ-ರಾವಣಾದಿವರಪ್ರಾಪ್ತಿಃ
  13. ರಾಮೋಪಾಖ್ಯಾನ-ವಾನರಾದ್ಯುತ್ಪತ್ತಿಃ
  14. ರಾಮೋಪಾಖ್ಯಾನ-ರಾಮವನಾಭಿಗಮನ
  15. ರಾಮೋಪಾಖ್ಯಾನ-ಮಾರೀಚವಧ-ಸೀತಾಪಹರಣ
  16. ರಾಮೋಪಾಖ್ಯಾನ-ಕಬಂಧಹನನ
  17. ರಾಮೋಪಾಖ್ಯಾನ-ತ್ರಿಜಟಾಕೃತಸೀತಾಸಂವಾದಃ
  18. ರಾಮೋಪಾಖ್ಯಾನ-ಸೀತಾರಾವಣಸಂವಾದಃ
  19. ರಾಮೋಪಾಖ್ಯಾನ-ಹನುಮಪ್ರತ್ಯಾಗಮನ
  20. ರಾಮೋಪಾಖ್ಯಾನ-ಸೇತುಬಂಧನ
  21. ರಾಮೋಪಾಖ್ಯಾನ-ಲಂಕಾಪ್ರವೇಶ
  22. ರಾಮೋಪಾಖ್ಯಾನ-ರಾಮರಾವಣದ್ವಂದ್ವಯುದ್ಧಃ
  23. ರಾಮೋಪಾಖ್ಯಾನ-ಕುಂಭಕರ್ಣನಿರ್ಗಮನ
  24. ರಾಮೋಪಾಖ್ಯಾನ-ಕುಂಬಕರ್ಣಾದಿವಧಃ
  25. ರಾಮೋಪಾಖ್ಯಾನ-ಇಂದ್ರಜಿದ್ಯುದ್ಧಃ
  26. ರಾಮೋಪಾಖ್ಯಾನ-ಇಂದ್ರಜಿದ್ವಧಃ
  27. ರಾಮೋಪಾಖ್ಯಾನ-ರಾವಣವಧಃ
  28. ರಾಮೋಪಾಖ್ಯಾನ-ಶ್ರೀರಾಮಾಭಿಷೇಕ
  29. ರಾಮೋಪಾಖ್ಯಾನ-ಯುಧಿಷ್ಠಿರಾಶ್ವಾಸನ
  30. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೧
  31. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೨
  32. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೩
  33. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೪
  34. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೫
  35. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೬
  36. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೭

Comments are closed.