Aranyaka Parva: Chapter 252

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೫೨

ದ್ರೌಪದಿಯು ಪಾಂಡವರ ಶೌರ್ಯವನ್ನು ಹೇಳಿಕೊಂಡು ಜಯದ್ರಥನನ್ನು ಎಚ್ಚರಿಸುವುದು (೧-೨೨). ಜಯದ್ರಥನು ಬಲಾತ್ಕಾರವಾಗಿ ಅವಳನ್ನು ಹಿಡಿಯಲು ಎಳೆಯಲ್ಪಡುತ್ತಾ ದ್ರೌಪದಿಯು ರಥವನ್ನೇರಿದುದು; ಧೌಮ್ಯನು ರಥದ ಹಿಂದೆ ಓಡಿ ಹೋದುದು (೨೩-೨೭).

03252001 ವೈಶಂಪಾಯನ ಉವಾಚ|

03252001a ಸರೋಷರಾಗೋಪಹತೇನ ವಲ್ಗುನಾ|

        ಸರಾಗನೇತ್ರೇಣ ನತೋನ್ನತಭ್ರುವಾ|

03252001c ಮುಖೇನ ವಿಸ್ಫೂರ್ಯ ಸುವೀರರಾಷ್ಟ್ರಪಂ|

        ತತೋಽಬ್ರವೀತ್ತಂ ದ್ರುಪದಾತ್ಮಜಾ ಪುನಃ||

ವೈಶಂಪಾಯನನು ಹೇಳಿದನು: “ಅವಳ ಸುಂದರ ಮುಖವು ಸಿಟ್ಟಿನಿಂದ ಕೆಂಪಾಗಲು, ಅವಳ ಕಣ್ಣುಗಳು ರಕ್ತದಂತೆ ಕೆಂಪಾಗಲು, ಹುಬ್ಬುಗಳು ಮೇಲೇರಿ ಗಂಟಿಕ್ಕಿರಲು ಆ ದ್ರುಪದಾತ್ಮಜೆಯು ಪುನಃ ಸುವೀರರಾಷ್ಟ್ರಪತಿಗೆ ಮುಖವನ್ನು ತಿರುವಿ ಹೇಳಿದಳು.

03252002a ಯಶಸ್ವಿನಸ್ತೀಕ್ಷ್ಣವಿಷಾನ್ಮಹಾರಥಾನ್|

        ಅಧಿಕ್ಷಿಪನ್ಮೂಢ ನ ಲಜ್ಜಸೇ ಕಥಂ|

03252002c ಮಹೇಂದ್ರಕಲ್ಪಾನ್ನಿರತಾನ್ಸ್ವಕರ್ಮಸು|

        ಸ್ಥಿತಾನ್ಸಮೂಹೇಷ್ವಪಿ ಯಕ್ಷರಕ್ಷಸಾಂ||

“ಮೂಢ! ಮಹೇಂದ್ರನಂತೆ ಸ್ವಕರ್ಮದಲ್ಲಿ ನಿರತರಾಗಿರುವ, ಯಕ್ಷ-ರಾಕ್ಷಸರನ್ನು ಯುದ್ಧದಲ್ಲಿ ಎದುರಿಸಿರುವ, ತೀಕ್ಷ್ಣವಿಷಸರ್ಪಗಳಂತಿರುವ ಯಶಸ್ವಿನಿ ಮಹಾರಥಿಗಳನ್ನು ಅಪಮಾನಿಸುತ್ತಿರುವೆ! ನಿನಗೆ ಏಕೆ ನಾಚಿಕೆಯಾಗುವುದಿಲ್ಲ?

03252003a ನ ಕಿಂ ಚಿದೀಡ್ಯಂ ಪ್ರವದಂತಿ ಪಾಪಂ|

        ವನೇಚರಂ ವಾ ಗೃಹಮೇಧಿನಂ ವಾ|

03252003c ತಪಸ್ವಿನಂ ಸಂಪರಿಪೂರ್ಣವಿದ್ಯಂ|

        ಭಷಂತಿ ಹೈವಂ ಶ್ವನರಾಃ ಸುವೀರ||

ಪರಿಪೂರ್ಣವಿದ್ಯೆಯನ್ನು ಹೊಂದಿರುವ, ಪ್ರಶಂಸೆಗೆ ಪಾತ್ರನಾದ ತಪಸ್ವಿಯ ಕುರಿತು ಗ್ರಹಸ್ಥನಾಗಲೀ ವನಚರಿಯಾಗಲೀ ಯಾರೂ ಕೆಟ್ಟ ಮಾತುಗಳನ್ನಾಡುವುದಿಲ್ಲ. ಸುವೀರ! ನೀನು ಮಾತನಾಡುತ್ತಿದ್ದೀಯೆ!

03252004a ಅಹಂ ತು ಮನ್ಯೇ ತವ ನಾಸ್ತಿ ಕಶ್ಚಿದ್|

        ಏತಾದೃಶೇ ಕ್ಷತ್ರಿಯಸನ್ನಿವೇಶೇ|

03252004c ಯಸ್ತ್ವಾದ್ಯ ಪಾತಾಲಮುಖೇ ಪತಂತಂ|

        ಪಾಣೌ ಗೃಹೀತ್ವಾ ಪ್ರತಿಸಂಹರೇತ||

ಇಲ್ಲಿರುವ ಕ್ಷತ್ರಿಯ ಸನ್ನಿವೇಶದಲ್ಲಿ ಇಂದು ಯಾರೂ ಪಾತಾಳಮುಖವಾಗಿ ಬೀಳುತ್ತಿರುವ ನಿನ್ನನ್ನು ಕೈಹಿಡಿದು ಮೇಲೆತ್ತುವವರು ಇಲ್ಲ ಎಂದು ನನಗನ್ನಿಸುತ್ತದೆ.

03252005a ನಾಗಂ ಪ್ರಭಿನ್ನಂ ಗಿರಿಕೂಟಕಲ್ಪಂ|

        ಉಪತ್ಯಕಾಂ ಹೈಮವತೀಂ ಚರಂತಂ|

03252005c ದಂಡೀವ ಯೂಥಾದಪಸೇಧಸೇ ತ್ವಂ|

        ಯೋ ಜೇತುಮಾಶಂಸಸಿ ಧರ್ಮರಾಜಂ||

ಧರ್ಮರಾಜನನ್ನು ನೀನು ಜಯಿಸುವ ಆಸೆಯನ್ನಿಟ್ಟುಕೊಂಡಿದ್ದರೆ, ಒಂದು ಕಡ್ಡಿಯನ್ನು ಹಿಡಿದು ಗಿರಿಕೂಟದಲ್ಲಿ ತನ್ನ ಹಿಂಡಿನಲ್ಲಿ ಕೊಬ್ಬೆದ್ದ ಹಿಮಾಲಯದ ಸಲಗವನ್ನು ಓಡಿಸಲು ಪ್ರಯತ್ನಿಸಿರುವವನಂತೆ ತೋರುತ್ತಿದ್ದೀಯೆ.

03252006a ಬಾಲ್ಯಾತ್ಪ್ರಸುಪ್ತಸ್ಯ ಮಹಾಬಲಸ್ಯ|

        ಸಿಂಹಸ್ಯ ಪಕ್ಷ್ಮಾಣಿ ಮುಖಾಲ್ಲುನಾಸಿ|

03252006c ಪದಾ ಸಮಾಹತ್ಯ ಪಲಾಯಮಾನಃ|

        ಕ್ರುದ್ಧಂ ಯದಾ ದ್ರಕ್ಷ್ಯಸಿ ಭೀಮಸೇನಂ||

ಮಲಗಿರುವ ಮಹಾಬಲಶಾಲಿ ಸಿಂಹವನ್ನು ಬಾಲತನದಿಂದ ಒದ್ದು, ಅದರ ಮುಖದ ಕಣ್ಣಿನ ಹುಬ್ಬಿನ ಕೂದಲನ್ನು ಕಿತ್ತು, ಅವಸರದಲ್ಲಿ ಪಲಾಯನ ಮಾಡುವಂತೆ ನೀನು ಸಿಟ್ಟಿಗೆದ್ದ ಭೀಮಸೇನನನ್ನು ನೋಡಿ ಮಾಡುವೆಯಂತೆ.

03252007a ಮಹಾಬಲಂ ಘೋರತರಂ ಪ್ರವೃದ್ಧಂ|

        ಜಾತಂ ಹರಿಂ ಪರ್ವತಕಂದರೇಷು|

03252007c ಪ್ರಸುಪ್ತಮುಗ್ರಂ ಪ್ರಪದೇನ ಹಂಸಿ|

        ಯಃ ಕ್ರುದ್ಧಮಾಸೇತ್ಸ್ಯಸಿ ಜಿಷ್ಣುಮುಗ್ರಂ||

ಮಹಾಬಲಶಾಲಿಯಾದ, ಘೋರತರವಾದ, ಪ್ರವೃದ್ಧವಾದ, ಹಳದೀ ಬಣ್ಣವನ್ನು ಹೊಂದಿದ್ದ, ಪರ್ವತಕಂದರದಲ್ಲಿ ಮಲಗಿದ್ದ ಉಗ್ರ ಸಿಂಹವನ್ನು ಪಾದದಲ್ಲಿ ಒದ್ದವನಂತೆ ನೀನು ಸಿಟ್ಟಿಗೆದ್ದ ಉಗ್ರ ಜಿಷ್ಣುವನ್ನು ಎದುರಿಸಬೇಕಾಗುತ್ತದೆ.

03252008a ಕೃಷ್ಣೋರಗೌ ತೀಕ್ಷ್ಣವಿಷೌ ದ್ವಿಜಿಹ್ವೌ|

        ಮತ್ತಃ ಪದಾಕ್ರಾಮಸಿ ಪುಚ್ಚದೇಶೇ|

03252008c ಯಃ ಪಾಂಡವಾಭ್ಯಾಂ ಪುರುಷೋತ್ತಮಾಭ್ಯಾಂ|

        ಜಘನ್ಯಜಾಭ್ಯಾಂ ಪ್ರಯುಯುತ್ಸಸೇ ತ್ವಂ||

ಎರಡು ಕೃಷ್ಣವರ್ಣದ, ತೀಕ್ಷ್ಣವಿಷದ ಹಾವುಗಳ ಬಾಲಗಳನ್ನು ಹುಚ್ಚನು ಮೆಟ್ಟುವಂತೆ ಆ ಕಿರಿಯ ಪಾಂಡವರೀರ್ವರು ಪುರುಷೋತ್ತಮರೊಡನೆ ನೀನು ಯುದ್ಧಮಾಡಬೇಕಾಗುತ್ತದೆ.

03252009a ಯಥಾ ಚ ವೇಣುಃ ಕದಲೀ ನಲೋ ವಾ|

        ಫಲಂತ್ಯಭಾವಾಯ ನ ಭೂತಯೇಽತ್ಮನಃ|

03252009c ತಥೈವ ಮಾಂ ತೈಃ ಪರಿರಕ್ಷ್ಯಮಾಣಾಂ|

        ಆದಾಸ್ಯಸೇ ಕರ್ಕಟಕೀವ ಗರ್ಭಂ|

ಹೇಗೆ ಬಿದಿರು, ಹುಲ್ಲು ಅಥವಾ ಬಾಳೆಗಳು ತಮ್ಮನ್ನು ಇಲ್ಲವಾಗಿಸುವುದಕ್ಕಾಗಿಯೇ ಫಲವನ್ನು ನೀಡುತ್ತವೆಯೋ, ಹೇಗೆ ಏಡಿಯು ಮರಿಹಾಕಿ ಸಾಯುತ್ತದೆಯೋ ಹಾಗೆಯೇ ನೀನು ಅವರಿಂದ ರಕ್ಷಿತಳಾದ ನನ್ನನ್ನು ಪಡೆಯಲು ಬಯಸುತ್ತಿರುವೆ.”

03252010 ಜಯದ್ರಥ ಉವಾಚ|

03252010a ಜಾನಾಮಿ ಕೃಷ್ಣೇ ವಿದಿತಂ ಮಮೈತದ್|

        ಯಥಾವಿಧಾಸ್ತೇ ನರದೇವಪುತ್ರಾಃ|

03252010c ನ ತ್ವೇವಮೇತೇನ ವಿಭೀಷಣೇನ|

        ಶಕ್ಯಾ ವಯಂ ತ್ರಾಸಯಿತುಂ ತ್ವಯಾದ್ಯ||

ಜಯದ್ರಥನು ಹೇಳಿದನು: “ಆ ನರದೇವಪುತ್ರರು ಹೇಗಿದ್ದಾರೆಂದು ನನಗೆ ಈಗಾಗಲೇ ತಿಳಿದಿದೆ ಕೃಷ್ಣೇ! ಆದರೆ ನೀನು ಇಂದು ಕೊಡುತ್ತಿರುವ ಬೆದರಿಕೆಯು ನಮ್ಮನ್ನು ಓಡಿಸಲು ಅಸಮರ್ಥವಾಗಿದೆ.

03252011a ವಯಂ ಪುನಃ ಸಪ್ತದಶೇಷು ಕೃಷ್ಣೇ|

        ಕುಲೇಷು ಸರ್ವೇಽನವಮೇಷು ಜಾತಾಃ|

03252011c ಷಡ್ಭ್ಯೋ ಗುಣೇಭ್ಯೋಽಭ್ಯಧಿಕಾ ವಿಹೀನಾನ್|

        ಮನ್ಯಾಮಹೇ ದ್ರೌಪದಿ ಪಾಂಡುಪುತ್ರಾನ್||

ಕೃಷ್ಣೇ! ನಾವು ಎಲ್ಲರೂ ಕೂಡ ಹದಿನೇಳು ಉಚ್ಛಕುಲಗಳಲ್ಲಿ ಜನಿಸಿದ್ದೇವೆ. ದ್ರೌಪದೀ! ಪಾಂಡುಪುತ್ರರಲ್ಲಿ ಕಡಿಮೆಯಾಗಿರುವ ಆ ಆರು ಗುಣಗಳು ನಮ್ಮಲ್ಲಿ ಅಧಿಕವಾಗಿವೆ ಎಂದು ನಾವು ಅಭಿಪ್ರಾಯಪಡುತ್ತೇವೆ.

03252012a ಸಾ ಕ್ಷಿಪ್ರಮಾತಿಷ್ಠ ಗಜಂ ರಥಂ ವಾ|

        ನ ವಾಕ್ಯಮಾತ್ರೇಣ ವಯಂ ಹಿ ಶಕ್ಯಾಃ|

03252012c ಆಶಂಸ ವಾ ತ್ವಂ ಕೃಪಣಂ ವದಂತೀ|

        ಸೌವೀರರಾಜಸ್ಯ ಪುನಃ ಪ್ರಸಾದಂ||

ಕ್ಷಿಪ್ರವಾಗಿ ರಥವನ್ನಾಗಲೀ ಆನೆಯನ್ನಾಗಲೀ ಏರು. ಕೇವಲ ಮಾತಿನಿಂದಲೇ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಅಥವಾ ದೀನಳಾಗಿ ಮಾತನಾಡು. ಈ ಸೌವೀರರಾಜನು ನಿನ್ನ ಮೇಲೆ ಕರುಣೆತೋರಿಸಿಯಾನು.”

03252013 ದ್ರೌಪದ್ಯುವಾಚ|

03252013a ಮಹಾಬಲಾ ಕಿಂ ತ್ವಿಹ ದುರ್ಬಲೇವ|

        ಸೌವೀರರಾಜಸ್ಯ ಮತಾಹಮಸ್ಮಿ|

03252013c ಯಾಹಂ ಪ್ರಮಾಥಾದಿಹ ಸಂಪ್ರತೀತಾ|

        ಸೌವೀರರಾಜಂ ಕೃಪಣಂ ವದೇಯಂ||

ದ್ರೌಪದಿಯು ಹೇಳಿದಳು: “ನಾನು ಮಹಾಬಲಶಾಲಿ! ಆದರೆ ಸೌವಿರರಾಜನು ಈಗ ನಾನು ದುರ್ಬಲಳೆಂದು ತಿಳಿದಿದ್ದಾನೆ. ಸಂಪ್ರತೀತಳಾದ ನಾನು ಹೆದರಿ ದುರ್ಬಲಳಂತೆ ದೀನಳಾಗಿ ಸವೀರರಾಜನಲ್ಲಿ ಬೇಡಿಕೊಳ್ಳಬೇಕಂತೆ!

03252014a ಯಸ್ಯಾ ಹಿ ಕೃಷ್ಣೌ ಪದವೀಂ ಚರೇತಾಂ|

        ಸಮಾಸ್ಥಿತಾವೇಕರಥೇ ಸಹಾಯೌ|

03252014c ಇಂದ್ರೋಽಪಿ ತಾಂ ನಾಪಹರೇತ್ಕಥಂ ಚಿನ್|

        ಮನುಷ್ಯಮಾತ್ರಃ ಕೃಪಣಃ ಕುತೋಽನ್ಯಃ||

ಇಬ್ಬರು ಕೃಷ್ಣರೂ ಒಟ್ಟಿಗೇ ಒಂದೇರಥದಲ್ಲಿ ಕುಳಿತು ನನ್ನ ಸುಳಿವನ್ನು ಅರಸಿಕೊಂಡು ಬರುತ್ತಾರೆ! ಇಂದ್ರನೂ ಕೂಡ ನನ್ನನ್ನು ಎಂದೂ ಅಪಹರಿಸಿಕೊಂಡು ಹೋಗಲು ಶಕ್ಯನಿಲ್ಲ. ಮನುಷ್ಯಮಾತ್ರನಾದ ಈ ಕೃಪಣನು ಹೇಗೆತಾನೇ ಇದನ್ನು ಮಾಡಿಯಾನು?

03252015a ಯದಾ ಕಿರೀಟೀ ಪರವೀರಘಾತೀ|

        ನಿಘ್ನನ್ರಥಸ್ಥೋ ದ್ವಿಷತಾಂ ಮನಾಂಸಿ|

03252015c ಮದಂತರೇ ತ್ವದ್ಧ್ವಜಿನೀಂ ಪ್ರವೇಷ್ಟಾ|

        ಕಕ್ಷಂ ದಹನ್ನಗ್ನಿರಿವೋಷ್ಣಗೇಷು||

ರಥದಲ್ಲಿ ನಿಂತು ವೈರಿಗಳ ಮನಸ್ಸನ್ನು ಒಡೆಯುವ, ಪರವೀರಘಾತಿ ಕಿರೀಟಿಯು ನಿನ್ನ ಸೇನೆಯ ಮೇಲೆರಗಿದಾಗ ಬೇಸಿಗೆಯಲ್ಲಿ ಒಣಗಿದ ವನವನ್ನು ಬೆಂಕಿಯು ಹೇಗೋ ಹಾಗೆ ಸುಟ್ಟುಹಾಕುತ್ತಾನೆ.

03252016a ಜನಾರ್ದನಸ್ಯಾನುಗಾ ವೃಷ್ಣಿವೀರಾ|

        ಮಹೇಷ್ವಾಸಾಃ ಕೇಕಯಾಶ್ಚಾಪಿ ಸರ್ವೇ|

03252016c ಏತೇ ಹಿ ಸರ್ವೇ ಮಮ ರಾಜಪುತ್ರಾಃ|

        ಪ್ರಹೃಷ್ಟರೂಪಾಃ ಪದವೀಂ ಚರೇಯುಃ||

ಜನಾರ್ದನನ ಅನುಯಾಯಿ ವಷ್ಣಿವೀರರು, ಮಹೇಷ್ವಾಸ ಕೇಕಯರೆಲ್ಲರೂ ಮತ್ತು ನನ್ನ ಎಲ್ಲ ರಾಜಪುತ್ರರೂ ಸಂತೋಷದಿಂದ ಒಂದುಗೂಡಿ ನನ್ನನ್ನು ಹಿಂಬಾಲಿಸಿ ಬರುತ್ತಾರೆ.

03252017a ಮೌರ್ವೀವಿಸೃಷ್ಟಾಃ ಸ್ತನಯಿತ್ನುಘೋಷಾ|

        ಗಾಂಡೀವಮುಕ್ತಾಸ್ತ್ವತಿವೇಗವಂತಃ|

03252017c ಹಸ್ತಂ ಸಮಾಹತ್ಯ ಧನಂಜಯಸ್ಯ|

        ಭೀಮಾಃ ಶಬ್ಧಂ ಘೋರತರಂ ನದಂತಿ||

ಧನಂಜಯನ ಕೈಯಲ್ಲಿರುವ ಗಾಂಡೀವದಿಂದ ಹೊರಟ ಗುಡುಗಿನಂತೆ ಗರ್ಜಿಸುವ, ವೇಗದಲ್ಲಿ ಭುಸುಗುಟ್ಟುವ ಬಾಣಗಳು ಭಯಂಕರವಾಗಿ ಶಬ್ಧಮಾಡಿ ಘೋರವಾಗಿ ನಿನಾದಿಸುತ್ತವೆ.

03252018a ಗಾಂಡೀವಮುಕ್ತಾಂಶ್ಚ ಮಹಾಶರೌಘಾನ್|

        ಪತಂಗಸಂಘಾನಿವ ಶೀಘ್ರವೇಗಾನ್|

03252018c ಸಶಂಖಘೋಷಃ ಸತಲತ್ರಘೋಷೋ|

        ಗಾಂಡೀವಧನ್ವಾ ಮುಹುರುದ್ವಮಂಶ್ಚ||

03252018e ಯದಾ ಶರಾನರ್ಪಯಿತಾ ತವೋರಸಿ|

        ತದಾ ಮನಸ್ತೇ ಕಿಮಿವಾಭವಿಷ್ಯತ್||

ಗಾಂಡೀವಧನ್ವಿಯು ಪುನಃ ಪುನಃ ಕೋಪದಿಂದ ಗಾಂಡೀವದಿಂದ ಮಹಾಶರಗಳನ್ನು ಬಿಟ್ಟು, ಚಿಟ್ಟೆಗಳ ಹಿಂಡುಗಳಂತೆ ಅವು ವೇಗವಾಗಿ ಹಾರಿಬಂದು, ಶಂಖದ ಘೋಷದೊಂದಿಗೆ, ಕೈಬಂಧಗಳ ಶಬ್ಧಗಳೊಂದಿಗೆ, ಆ ಶರಗಳು ನಿನ್ನ ಎದೆಗೆ ಹೊಡೆದಾಗ ಮನಸ್ಸಿನಲ್ಲಿ  ಏನು ನಡೆಯಬಹುದು?

03252019a ಗದಾಹಸ್ತಂ ಭೀಮಮಭಿದ್ರವಂತಂ|

        ಮಾದ್ರೀಪುತ್ರೌ ಸಂಪತಂತೌ ದಿಶಶ್ಚ|

03252019c ಅಮರ್ಷಜಂ ಕ್ರೋಧವಿಷಂ ವಮಂತೌ|

        ದೃಷ್ಟ್ವಾ ಚಿರಂ ತಾಪಮುಪೈಷ್ಯಸೇಽಧಮ||

ಗದೆಯನ್ನು ಹಿಡಿದು ಭೀಮನು ಸಿಟ್ಟಿನಿಂದ ಓಡಿಬರಲು, ಮಾದ್ರಿಯ ಮಕ್ಕಳು ಮಹಾಶಕ್ತಿಯ ಕ್ರೋಧವಿಷವನ್ನು ಕಾರುತ್ತಾ ಎಲ್ಲಕಡೆಯಿಂದಲೂ ಬಂದೆರಗಲು, ನೀನು ಬಹುಕಾಲದವರೆಗೆ ಅದನ್ನು ಅನುಭವಿಸುವೆ, ಅಧಮ!

03252020a ಯಥಾ ಚಾಹಂ ನಾತಿಚರೇ ಕಥಂ ಚಿತ್|

        ಪತೀನ್ಮಹಾರ್ಹಾನ್ಮನಸಾಪಿ ಜಾತು|

03252020c ತೇನಾದ್ಯ ಸತ್ಯೇನ ವಶೀಕೃತಂ ತ್ವಾಂ|

        ದ್ರಷ್ಟಾಸ್ಮಿ ಪಾರ್ಥೈಃ ಪರಿಕೃಷ್ಯಮಾಣಂ||

ಇದೂವರೆಗೆ ಎಂದೂ ನಾನು ನನ್ನ ಮಹಾತ್ಮ, ಗೌರವಾನ್ವಿತ ಪತಿಗಳನ್ನು ಮೀರಿನಡೆಯದೇ ಇದ್ದರೆ, ಅದೇ ಸತ್ಯದಿಂದ ನಾನು ಇಂದು ನೀನು ಪಾರ್ಥರಿಂದ ಬಂಧಿಯಾಗಿ ಎಳೆದಾಡಲ್ಪಡುವುದನ್ನು ನೋಡುತ್ತೇನೆ.

03252021a ನ ಸಂಭ್ರಮಂ ಗಂತುಮಹಂ ಹಿ ಶಕ್ಷ್ಯೇ|

        ತ್ವಯಾ ನೃಶಂಸೇನ ವಿಕೃಷ್ಯಮಾಣಾ|

03252021c ಸಮಾಗತಾಹಂ ಹಿ ಕುರುಪ್ರವೀರೈಃ|

        ಪುನರ್ವನಂ ಕಾಮ್ಯಕಮಾಗತಾ ಚ||

ನೀನು ಎಷ್ಟೇ ಕಷ್ಟಪಟ್ಟು ಕಾಡಿದರೂ ನನ್ನನ್ನು ಸಂಭ್ರಾಂತಳನ್ನಾಗಿ ಮಾಡಲಾರೆ. ಯಾಕೆಂದರೆ ನಾನು ಪುನಃ ಕುರುವೀರರನ್ನು ಸೇರಿ ಕಾಮ್ಯಕಕ್ಕೆ ಹಿಂದಿರುಗುತ್ತೇನೆ.””

03252022 ವೈಶಂಪಾಯನ ಉವಾಚ|

03252022a ಸಾ ತಾನನುಪ್ರೇಕ್ಷ್ಯ ವಿಶಾಲನೇತ್ರಾ|

        ಜಿಘೃಕ್ಷಮಾಣಾನವಭರ್ತ್ಸಯಂತೀ|

03252022c ಪ್ರೋವಾಚ ಮಾ ಮಾ ಸ್ಪೃಶತೇತಿ ಭೀತಾ|

        ಧೌಮ್ಯಂ ಪ್ರಚುಕ್ರೋಶ ಪುರೋಹಿತಂ ಸಾ||

ವೈಶಂಪಾಯನನು ಹೇಳಿದನು: “ಅವಳನ್ನು ಹಿಡಿಯಲು ಪ್ರಯತ್ನಿಸುತ್ತಿರುವ ಅವರನ್ನು ಕಣ್ಣುಗಳನ್ನು ಅಗಲುಮಾಡಿಕೊಂಡು ಕೋಪದಿಂದ ನೋಡಿ ಭೀತಳಾಗಿ ದ್ರೌಪದಿಯು “ನನ್ನನ್ನು ಮುಟ್ಟಬೇಡ! ಮುಟ್ಟಬೇಡ!” ಎಂದು ಕೂಗುತ್ತಾ ಪುರೋಹಿತ  ಧೌಮ್ಯನ ಸಹಾಯಕ್ಕೆ ಕೂಗಿದಳು.

03252023a ಜಗ್ರಾಹ ತಾಮುತ್ತರವಸ್ತ್ರದೇಶೇ|

        ಜಯದ್ರಥಸ್ತಂ ಸಮವಾಕ್ಷಿಪತ್ಸಾ|

03252023c ತಯಾ ಸಮಾಕ್ಷಿಪ್ತತನುಃ ಸ ಪಾಪಃ|

        ಪಪಾತ ಶಾಖೀವ ನಿಕೃತ್ತಮೂಲಃ||

ಜಯದ್ರಥನು ಅವಳ ಕೆಳವಸ್ತ್ರವನ್ನು ಹಿಡಿದನು. ಆದರೆ ತನ್ನ ಎಲ್ಲ ಶಕ್ತಿಯನ್ನೂ ಸೇರಿಸಿ ಅವಳು ಅವನನ್ನು ದೂರ ನೂಕಿದಳು. ಅವಳಿಂದ ನೂಕಲಟ್ಟ ಆ ಪಾಪಿಯು ಬೇರುಕಿತ್ತ ಮರದಂತೆ ಕೆಳಗೆ ಬಿದ್ದನು.

03252024a ಪ್ರಗೃಹ್ಯಮಾಣಾ ತು ಮಹಾಜವೇನ|

        ಮುಹುರ್ವಿನಿಃಶ್ವಸ್ಯ ಚ ರಾಜಪುತ್ರೀ|

03252024c ಸಾ ಕೃಷ್ಯಮಾಣಾ ರಥಮಾರುರೋಹ|

        ಧೌಮ್ಯಸ್ಯ ಪಾದಾವಭಿವಾದ್ಯ ಕೃಷ್ಣಾ||

ಮತ್ತೊಮ್ಮೆ ಮಹಾಜವೆಯಿಂದ ಹಿಡಿಯಲ್ಪಡಲು ರಾಜಪುತ್ರಿಯು ಪುನಃ ಪುನಃ ಉಸಿರನ್ನು ಕಳೆದುಕೊಂಡಳು. ಧೌಮ್ಯನ ಪಾದಗಳಿಗೆ ವಂದಿಸಿ ಕೃಷ್ಣೆಯು ಎಳೆಯಲ್ಪಡುತ್ತಾ ರಥವನ್ನೇರಿದಳು.

03252025 ಧೌಮ್ಯ ಉವಾಚ|

03252025a ನೇಯಂ ಶಕ್ಯಾ ತ್ವಯಾ ನೇತುಮವಿಜಿತ್ಯ ಮಹಾರಥಾನ್|

03252025c ಧರ್ಮಂ ಕ್ಷತ್ರಸ್ಯ ಪೌರಾಣಮವೇಕ್ಷಸ್ವ ಜಯದ್ರಥ||

ಧೌಮ್ಯನು ಹೇಳಿದನು: “ಜಯದ್ರಥ! ಮಹಾರಥಿಗಳನ್ನು ಗೆಲ್ಲದೆಯೇ ಇವಳನ್ನು ಎತ್ತಿಕೊಂಡು ಹೋಗಲಾರಿರಿ. ಪೌರಾಣಿಕ ಕ್ಷತ್ರಿಯನ ಧರ್ಮವನ್ನಾದರೂ ಗಮನಿಸು.

03252026a ಕ್ಷುದ್ರಂ ಕೃತ್ವಾ ಫಲಂ ಪಾಪಂ ಪ್ರಾಪ್ಸ್ಯಸಿ ತ್ವಮಸಂಶಯಂ|

03252026c ಆಸಾದ್ಯ ಪಾಂಡವಾನ್ವೀರಾನ್ಧರ್ಮರಾಜಪುರೋಗಮಾನ್||

ಈ ಕ್ಷುದ್ರ ಕಾರ್ಯವನ್ನೆಸಗಿ, ಧರ್ಮರಾಜನ ನಾಯಕತ್ವದಲ್ಲಿ ವೀರ ಪಾಂಡವರನ್ನು ಎದುರಿಸುವಾಗ, ನೀನು ಪಾಪವನ್ನು ಪಡೆಯುತ್ತೀಯೆ ಎನ್ನುವುದರಲ್ಲಿ ಸಂಶಯವಿಲ್ಲ.””

03252027 ವೈಶಂಪಾಯನ ಉವಾಚ|

03252027a ಇತ್ಯುಕ್ತ್ವಾ ಹ್ರಿಯಮಾಣಾಂ ತಾಂ ರಾಜಪುತ್ರೀಂ ಯಶಸ್ವಿನೀಂ|

03252027c ಅನ್ವಗಚ್ಚತ್ತದಾ ಧೌಮ್ಯಃ ಪದಾತಿಗಣಮಧ್ಯಗಃ||

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಅಪಹರಿಸಲ್ಪಟ್ಟು ಹೋಗುತ್ತಿರುವ ಆ ಯಶಸ್ವಿನೀ ರಾಜಪುತ್ರಿಯನ್ನು ಹಿಂಬಾಲಿಸಿ ಧೌಮ್ಯನು ಪದಾತಿಗಳ ಮಧ್ಯದಲ್ಲಿ ಹೋದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ದ್ರೌಪದೀಹರಣಪರ್ವಣಿ ದ್ವಿಪಂಚಾಶದಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ದ್ರೌಪದೀಹರಣಪರ್ವದಲ್ಲಿ ಇನ್ನೂರಾಐವತ್ತೆರಡನೆಯ ಅಧ್ಯಾಯವು.

Related image

Comments are closed.