ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ
Contents
Toggle೨೭೫
“ನಾನು ಇಂದು ನಾಯಿನೆಕ್ಕಿದ ಹವಿಸ್ಸನಂತಿರುವ ನಿನ್ನನ್ನು ಭೋಗಿಸಲಾರೆ” ಎಂದು ಹೇಳಿ ರಾಮನು ಸೀತೆಯನ್ನು ತ್ಯಜಿಸಿದ್ದುದು (೧-೧೩). ದುಃಖಿತಳಾದ ಸೀತೆಯು ಪತಿತಳಾಗಿದ್ದರೆ ತನ್ನ ಪ್ರಾಣವು ಹೋಗಲೆಂದು ಹೇಳಲು ವಾಯು, ಅಗ್ನಿ, ವರುಣ, ಬ್ರಹ್ಮ ಮತ್ತು ದಶರಥರು ಕಾಣಿಸಿಕೊಂಡು ಸೀತೆಯ ಪವಿತ್ರತೆಯನ್ನು ತಿಸಿದುದು (೧೪-೩೫). ರಾಮನು ಸೀತೆಯನ್ನು ಸೇರಿ ಪುಷ್ಪಕ ವಿಮಾನದಲ್ಲಿ ಅಯೋಧ್ಯೆಗೆ ಹೋಗಿ ಅಭಿಷಿಕ್ತನಾದುದು (೩೬-೬೯).
03275001a ಸ ಹತ್ವಾ ರಾವಣಂ ಕ್ಷುದ್ರಂ ರಾಕ್ಷಸೇಂದ್ರಂ ಸುರದ್ವಿಷಂ|
03275001c ಬಭೂವ ಹೃಷ್ಟಃ ಸಸುಹೃದ್ರಾಮಃ ಸೌಮಿತ್ರಿಣಾ ಸಹ||
ಮಾರ್ಕಂಡೇಯನು ಹೇಳಿದನು: “ಆ ಸುರದ್ವಿಷ, ರಾಕ್ಷಸೇಂದ್ರ ಕ್ಷುದ್ರ ರಾವಣನನ್ನು ಕೊಂದು ಸೌಮಿತ್ರಿಯ ಸಹಿತ ರಾಮನು ತುಂಬಾ ಸಂತೋಷಗೊಂಡನು.
03275002a ತತೋ ಹತೇ ದಶಗ್ರೀವೇ ದೇವಾಃ ಸರ್ಷಿಪುರೋಗಮಾಃ|
03275002c ಆಶೀರ್ಭಿರ್ಜಯಯುಕ್ತಾಭಿರಾನರ್ಚುಸ್ತಂ ಮಹಾಭುಜಂ||
ದಶಗ್ರೀವನು ಹತನಾಗಲು, ಋಷಿಗಳನ್ನು ಮುಂದಿಟ್ಟುಕೊಂಡು ದೇವತೆಗಳು ಆ ಮಹಾಭುಜನಿಗೆ ಆಶೀರ್ವಚನಗಳಿಂದ, ಜಯಯುಕ್ತಿಗಳಿಂದ ಅರ್ಚಿಸಿದರು.
03275003a ರಾಮಂ ಕಮಲಪತ್ರಾಕ್ಷಂ ತುಷ್ಟುವುಃ ಸರ್ವದೇವತಾಃ|
03275003c ಗಂಧರ್ವಾಃ ಪುಷ್ಪವರ್ಷೈಶ್ಚ ವಾಗ್ಭಿಶ್ಚ ತ್ರಿದಶಾಲಯಾಃ||
ಕಮಲಪತ್ರಾಕ್ಷ ರಾಮನನ್ನು ಎಲ್ಲ ದೇವತೆಗಳೂ ಹೊಗಳಿದರು. ಹಾಗೆಯೇ ಗಂಧರ್ವರು ಮತ್ತು ತ್ರಿದಶಾಲಯದವರು ಪುಷ್ಪವೃಷ್ಟಿಗಳಿಂದ ಮತ್ತು ವಾಚನಗಳಿಂದ ಹೊಗಳಿದರು.
03275004a ಪೂಜಯಿತ್ವಾ ಯಥಾ ರಾಮಂ ಪ್ರತಿಜಗ್ಮುರ್ಯಥಾಗತಂ|
03275004c ತನ್ಮಹೋತ್ಸವಸಂಕಾಶಮಾಸೀದಾಕಾಶಮಚ್ಯುತ||
ಹೀಗೆ ರಾಮನನ್ನು ಪೂಜಿಸಿ ಅವರು ಬಂದಂತೆ ಹೊರಟುಹೋದರು. ಅಚ್ಯುತ! ಆ ಆಕಾಶವು ಒಂದು ಮಹಾ ಉತ್ಸವದಂತೆ ತೋರುತ್ತಿತ್ತು.
03275005a ತತೋ ಹತ್ವಾ ದಶಗ್ರೀವಂ ಲಂಕಾಂ ರಾಮೋ ಮಹಾಯಶಾಃ|
03275005c ವಿಭೀಷಣಾಯ ಪ್ರದದೌ ಪ್ರಭುಃ ಪರಪುರಂಜಯಃ||
ಪರಪುರಂಜಯ! ದಶಗ್ರೀವನನ್ನು ಕೊಂದು ಮಹಾಯಶ ಪ್ರಭು ರಾಮನು ಲಂಕೆಯನ್ನು ವಿಭೀಷಣನಿಗಿತ್ತನು.
03275006a ತತಃ ಸೀತಾಂ ಪುರಸ್ಕೃತ್ಯ ವಿಭೀಷಣಪುರಸ್ಕೃತಾಂ|
03275006c ಅವಿಂಧ್ಯೋ ನಾಮ ಸುಪ್ರಜ್ಞೋ ವೃದ್ಧಾಮಾತ್ಯೋ ವಿನಿರ್ಯಯೌ||
03275007a ಉವಾಚ ಚ ಮಹಾತ್ಮಾನಂ ಕಾಕುತ್ಸ್ಥಂ ದೈನ್ಯಮಾಸ್ಥಿತಂ|
03275007c ಪ್ರತೀಚ್ಚ ದೇವೀಂ ಸದ್ವೃತ್ತಾಂಧ ಮಹಾತ್ಮಂ ಜಾನಕೀಮಿತಿ||
ಆಗ ಸೀತೆಯನ್ನು ಮುಂದಿರಿಸಿಕೊಂಡು, ವಿಭೀಷಣನನ್ನೂ ಮುಂದಿರಿಸಿಕೊಂಡು, ಅವಿಂಧ್ಯ ಎಂಬ ಹೆಸರಿನ ಸುಪ್ರಜ್ಞ, ವೃದ್ಧ ಅಮಾತ್ಯನು ಆಗಮಿಸಿ ದೀನನಾಗಿ ನಿಂತಿದ್ದ ಮಹಾತ್ಮ ಕಾಕುತ್ಸ್ಥನಿಗೆ “ಮಹಾತ್ಮ! ಸದಾಚಾರಿಯಾದ ಈ ದೇವಿ ಜಾನಕಿಯನ್ನು ಸ್ವೀಕರಿಸು” ಎಂದು ಹೇಳಿದನು.
03275008a ಏತಚ್ಚ್ರುತ್ವಾ ವಚಸ್ತಸ್ಮಾದವತೀರ್ಯ ರಥೋತ್ತಮಾತ್|
03275008c ಬಾಷ್ಪೇಣಾಪಿಹಿತಾಂ ಸೀತಾಂ ದದರ್ಶೇಕ್ಷ್ವಾಕುನಂದನಃ||
ಈ ಮಾತುಗಳನ್ನು ಕೇಳಿ ಇಕ್ಷ್ವಾಕುನಂದನನು ಉತ್ತಮ ರಥದಿಂದಿಳಿದು, ಕಣ್ಣೀರಿನಲ್ಲಿ ಅಡಗಿದ್ದ ಸೀತೆಯನ್ನು ನೋಡಿದನು.
03275009a ತಾಂ ದೃಷ್ಟ್ವಾ ಚಾರುಸರ್ವಾಂಗೀಂ ಯಾನಸ್ಥಾಂ ಶೋಕಕರ್ಶಿತಾಂ|
03275009c ಮಲೋಪಚಿತಸರ್ವಾಂಗೀಂ ಜಟಿಲಾಂ ಕೃಷ್ಣವಾಸಸಂ||
03275010a ಉವಾಚ ರಾಮೋ ವೈದೇಹೀಂ ಪರಾಮರ್ಶವಿಶಂಕಿತಃ|
03275010c ಗಚ್ಚ ವೈದೇಹಿ ಮುಕ್ತಾ ತ್ವಂ ಯತ್ಕಾರ್ಯಂ ತನ್ಮಯಾ ಕೃತಂ||
ಆ ಚಾರುಸರ್ವಾಂಗೀ, ಶೋಕಕರ್ಶಿತಳಾಗಿ ನಿಂತಿದ್ದ, ಸರ್ವಾಂಗಗಳಲ್ಲಿಯೂ ಕೊಳೆಯಿಂದ ಕೂಡಿದ್ದ, ಜಡೆ ಗಂಟುಕಟ್ಟಿ, ಕಪ್ಪುಬಣ್ಣದ ವಸ್ತ್ರವನ್ನುಟ್ಟಿದ್ದ ಅವಳನ್ನು ನೋಡಿ ರಾಮನು ವೈದೇಹಿಯು ಪರರಿಂದ ಸ್ಪರ್ಶಿತಳಾಗಿದ್ದಾಳೆಂದು ಶಂಕಿಸಿ ಹೇಳಿದನು: “ವೈದೇಹೀ! ಹೋಗು! ನೀನು ಮುಕ್ತಳಾಗಿದ್ದೀಯೆ! ನಾನು ಏನು ಮಾಡಬೇಕಾಗಿತ್ತೋ ಅದನ್ನು ಮಾಡಿದ್ದೇನೆ.
03275011a ಮಾಮಾಸಾದ್ಯ ಪತಿಂ ಭದ್ರೇ ನ ತ್ವಂ ರಾಕ್ಷಸವೇಶ್ಮನಿ|
03275011c ಜರಾಂ ವ್ರಜೇಥಾ ಇತಿ ಮೇ ನಿಹತೋಽಸೌ ನಿಶಾಚರಃ||
ಭದ್ರೇ! ನನ್ನನ್ನು ಪತಿಯನ್ನಾಗಿ ಪಡೆದ ನೀನು ರಾಕ್ಷಸನ ಮನೆಯಲ್ಲಿ ಮುದುಕಿಯಾಗಬಾರದು ಎಂದು ನಾನು ಆ ನಿಶಾಚರನನ್ನು ಕೊಂದೆ.
03275012a ಕಥಂ ಹ್ಯಸ್ಮದ್ವಿಧೋ ಜಾತು ಜಾನನ್ಧರ್ಮವಿನಿಶ್ಚಯಂ|
03275012c ಪರಹಸ್ತಗತಾಂ ನಾರೀಂ ಮುಹೂರ್ತಮಪಿ ಧಾರಯೇತ್||
ಧರ್ಮವಿನಿಶ್ಚಯವನ್ನು ತಿಳಿದಿರುವ ನನ್ನಂಥವನು ಹೇಗೆ ತಾನೇ, ಇನ್ನೊಬ್ಬನ ಕೈಗೆ ಹೋದ ನಾರಿಯನ್ನು ಮುಹೂರ್ತ ಸಮಯಕ್ಕಾದರೂ ಸ್ವೀಕರಿಸಿಯಾನು?
03275013a ಸುವೃತ್ತಾಮಸುವೃತ್ತಾಂ ವಾಪ್ಯಹಂ ತ್ವಾಮದ್ಯ ಮೈಥಿಲಿ|
03275013c ನೋತ್ಸಹೇ ಪರಿಭೋಗಾಯ ಶ್ವಾವಲೀಢಂ ಹವಿರ್ಯಥಾ||
ಮೈಥಿಲಿ! ನೀನು ಸುವೃತ್ತಳಾಗಿದ್ದೀಯೋ ಅಸುವೃತ್ತಳಾಗಿದ್ದೀಯೋ ನಾನು ಇಂದು ನಾಯಿನೆಕ್ಕಿದ ಹವಿಸ್ಸಿನಂತಿರುವ ನಿನ್ನನ್ನು ಭೋಗಿಸಲಾರೆ.”
03275014a ತತಃ ಸಾ ಸಹಸಾ ಬಾಲಾ ತಚ್ಚ್ರುತ್ವಾ ದಾರುಣಂ ವಚಃ|
03275014c ಪಪಾತ ದೇವೀ ವ್ಯಥಿತಾ ನಿಕೃತ್ತಾ ಕದಲೀ ಯಥಾ||
ಆಗ ಆ ದಾರುಣ ಮಾತನ್ನು ಕೇಳಿ ಆ ದೇವಿ ಬಾಲೆಯು ವ್ಯಥಿತಳಾಗಿ ತಕ್ಷಣವೇ ಕತ್ತರಿಸಿದ ಬಾಳೆಯಮರದಂತೆ ಕೆಳಗುರುಳಿ ಬಿದ್ದಳು.
03275015a ಯೋ ಹ್ಯಸ್ಯಾ ಹರ್ಷಸಂಭೂತೋ ಮುಖರಾಗಸ್ತದಾಭವತ್|
03275015c ಕ್ಷಣೇನ ಸ ಪುನರ್ಭ್ರಷ್ಟೋ ನಿಃಶ್ವಾಸಾದಿವ ದರ್ಪಣೇ||
ಹರ್ಷದಿಂದ ಹುಟ್ಟಿದ್ದ ಮುಖದಲ್ಲಿನ ಕೆಂಪು ಒಂದೇ ಕ್ಷಣದಲ್ಲಿ ಕನ್ನಡಿಯ ಮೇಲೆ ಊದಿದಾಗ ಆಗುವಂತೆ ಮುಸುಕಿ ನಷ್ಟವಾಯಿತು.
03275016a ತತಸ್ತೇ ಹರಯಃ ಸರ್ವೇ ತಚ್ಚ್ರುತ್ವಾ ರಾಮಭಾಷಿತಂ|
03275016c ಗತಾಸುಕಲ್ಪಾ ನಿಶ್ಚೇಷ್ಟಾ ಬಭೂವುಃ ಸಹಲಕ್ಷ್ಮಣಾಃ||
ರಾಮನಾಡಿದುದನ್ನು ಕೇಳಿದ ಎಲ್ಲ ಕಪಿಗಳೂ, ಲಕ್ಷ್ಮಣನೂ ಸೇರಿ, ಸ್ಥಬ್ಧರಾಗಿ ನಿಂತುಬಿಟ್ಟರು. ಸತ್ತವರಂತಾದರು.
03275017a ತತೋ ದೇವೋ ವಿಶುದ್ಧಾತ್ಮಾ ವಿಮಾನೇನ ಚತುರ್ಮುಖಃ|
03275017c ಪಿತಾಮಹೋ ಜಗತ್ಸ್ರಷ್ಟಾ ದರ್ಶಯಾಮಾಸ ರಾಘವಂ||
03275018a ಶಕ್ರಶ್ಚಾಗ್ನಿಶ್ಚ ವಾಯುಶ್ಚ ಯಮೋ ವರುಣ ಏವ ಚ|
03275018c ಯಕ್ಷಾಧಿಪಶ್ಚ ಭಗವಾಂಸ್ತಥಾ ಸಪ್ತರ್ಷಯೋಽಮಲಾಃ||
ಆಗ ದೇವ, ವಿಶುದ್ಧಾತ್ಮ, ಚತುರ್ಮುಖ, ಜಗತ್ವಷ್ಟಾ ಬ್ರಹ್ಮನು, ಹಾಗೆಯೇ, ಶಕ್ರ, ಅಗ್ನಿ, ವಾಯು, ಯಮ, ವರುಣ, ಭಗವಾನ್ ಯಕ್ಷಾಧಿಪತಿ, ಮತ್ತು ಅಮಲ ಸಪ್ತರ್ಷಿಗಳೂ ವಿಮಾನದಲ್ಲಿ ರಾಘವನಿಗೆ ಕಾಣಿಸಿಕೊಂಡರು.
03275019a ರಾಜಾ ದಶರಥಶ್ಚೈವ ದಿವ್ಯಭಾಸ್ವರಮೂರ್ತಿಮಾನ್|
03275019c ವಿಮಾನೇನ ಮಹಾರ್ಹೇಣ ಹಂಸಯುಕ್ತೇನ ಭಾಸ್ವತಾ||
ದಿವ್ಯವಾದ ಮೂರ್ತಿಯಂತೆ ಹೊಳೆಯುತ್ತಿದ್ದ ರಾಜಾ ದಶರಥನೂ ಕೂಡ ಹಂಸಗಳನ್ನು ಕಟ್ಟಿದ್ದ, ಮಹಾಬೆಲೆಯ, ಹೊಳೆಯುತ್ತಿದ್ದ, ವಿಮಾನದಲ್ಲಿ ಕಾಣಿಸಿಕೊಂಡನು.
03275020a ತತೋಽಂತರಿಕ್ಷಂ ತತ್ಸರ್ವಂ ದೇವಗಂಧರ್ವಸಂಕುಲಂ|
03275020c ಶುಶುಭೇ ತಾರಕಾಚಿತ್ರಂ ಶರದೀವ ನಭಸ್ತಲಂ||
ಆಗ ಅಂತರಿಕ್ಷವು ಆ ಎಲ್ಲ ದೇವಗಂಧರ್ವಸಂಕುಲಗಳಿಂದ ಕೂಡಿ ಶರದೃತುವಿನಲ್ಲಿ ತಾರೆಗಳಿಂದ ಕೂಡಿದ ನಭಸ್ಥಲದಂತೆ ಶೋಭಿಸಿತು.
03275021a ತತ ಉತ್ಥಾಯ ವೈದೇಹಿ ತೇಷಾಂ ಮಧ್ಯೇ ಯಶಸ್ವಿನೀ|
03275021c ಉವಾಚ ವಾಕ್ಯಂ ಕಲ್ಯಾಣೀ ರಾಮಂ ಪೃಥುಲವಕ್ಷಸಂ||
ಆಗ ಅವರ ಮಧ್ಯೆ ಯಶಸ್ವಿನೀ ಕಲ್ಯಾಣೀ ವೈದೇಹಿಯು ಎದ್ದು ವಿಶಾಲ ವಕ್ಷಸ ರಾಮನಿಗೆ ಈ ಮಾತುಗಳನ್ನಾಡಿದಳು.
03275022a ರಾಜಪುತ್ರ ನ ತೇ ಕೋಪಂ ಕರೋಮಿ ವಿದಿತಾ ಹಿ ಮೇ|
03275022c ಗತಿಃ ಸ್ತ್ರೀಣಾಂ ನರಾಣಾಂ ಚ ಶೃಣು ಚೇದಂ ವಚೋ ಮಮ||
“ರಾಜಪುತ್ರ! ನಾನು ನಿನ್ನ ಮೇಲೆ ಕೋಪಮಾಡುತ್ತಿಲ್ಲ! ಸ್ತ್ರೀ ಮತ್ತು ಪುರುಷರ ಗತಿಯು ನನಗೆ ತಿಳಿದೇಇದೆ. ನನ್ನ ಈ ಮಾತುಗಳನ್ನು ಕೇಳು.
03275023a ಅಂತಶ್ಚರತಿ ಭೂತಾನಾಂ ಮಾತರಿಶ್ವಾ ಸದಾಗತಿಃ|
03275023c ಸ ಮೇ ವಿಮುಂಚತು ಪ್ರಾಣಾನ್ಯದಿ ಪಾಪಂ ಚರಾಮ್ಯಹಂ||
ನಾನೇದರೂ ಪಾಪವನ್ನು ಮಾಡಿದ್ದರೆ ಇರುವವುಗಳ ಒಳಗೆ ಚರಿಸುತ್ತಿರುವ, ಸದಾ ಚಂಚಲವಾಗಿ ಚಲಿಸುತ್ತಲೇ ಇರುವ ಪ್ರಾಣವು ನನ್ನನ್ನು ಈಗಲೇ ತೊರೆಯಲಿ!
03275024a ಅಗ್ನಿರಾಪಸ್ತಥಾಕಾಶಂ ಪೃಥಿವೀ ವಾಯುರೇವ ಚ|
03275024c ವಿಮುಂಚಂತು ಮಮ ಪ್ರಾಣಾನ್ಯದಿ ಪಾಪಂ ಚರಾಮ್ಯಹಂ||
ನಾನೇದರೂ ಪಾಪವನ್ನು ಮಾಡಿದ್ದರೆ, ಅಗ್ನಿ, ಆಪ, ಆಕಾಶ, ಪೃಥ್ವಿ ಮತ್ತು ವಾಯುವೂ ಕೂಡ ನನ್ನ ಪ್ರಾಣವನ್ನು ತೊರೆಯಲಿ!”
03275025a ತತೋಽಂತರಿಕ್ಷೇ ವಾಗಾಸೀತ್ಸರ್ವಾ ವಿಶ್ರಾವಯನ್ದಿಶಃ|
03275025c ಪುಣ್ಯಾ ಸಂಹರ್ಷಣೀ ತೇಷಾಂ ವಾನರಾಣಾಂ ಮಹಾತ್ಮನಾಂ||
ಆಗ ಅಂತರಿಕ್ಷದಲ್ಲಿ ಎಲ್ಲ ದಿಕ್ಕುಗಳಲ್ಲಿಯೂ ಮೊಳಗುತ್ತಾ, ಪುಣ್ಯವೂ ಆ ಮಹಾತ್ಮ ವಾನರರಿಗೆ ಸಂಹರ್ಷವನ್ನುತರುವ ಒಂದು ವಾಣಿಯಾಯಿತು.
03275026 ವಾಯುರುವಾಚ|
03275026a ಭೋ ಭೋ ರಾಘವ ಸತ್ಯಂ ವೈ ವಾಯುರಸ್ಮಿ ಸದಾಗತಿಃ|
03275026c ಅಪಾಪಾ ಮೈಥಿಲೀ ರಾಜನ್ಸಂಗಚ್ಚ ಸಹ ಭಾರ್ಯಯಾ||
ವಾಯುವು ಹೇಳಿದನು: “ಭೋ ಭೋ ರಾಘವ! ಇದು ಸತ್ಯ! ನಾನು ಸದಾಗತಿಯಲ್ಲಿರುವ ವಾಯು! ಮೈಥಿಲಿಯು ಅಪಾಪೀ! ರಾಜನ್! ಭಾರ್ಯೆಯೊಂದಿಗೆ ಕೂಡು.”
03275027 ಅಗ್ನಿರುವಾಚ|
03275027a ಅಹಮಂತಃಶರೀರಸ್ಥೋ ಭೂತಾನಾಂ ರಘುನಂದನ|
03275027c ಸುಸೂಕ್ಷ್ಮಮಪಿ ಕಾಕುತ್ಸ್ಥ ಮೈಥಿಲೀ ನಾಪರಾಧ್ಯತಿ||
ಅಗ್ನಿಯು ಹೇಳಿದನು: “ರಘುನಂದನ! ಇರುವವುಗಳ ಶರೀರದೊಳಗಿರುವವನು ನಾನು! ಕಾಕುತ್ಸ್ಥ! ಮೈಥಿಲಿಯು ಅತಿ ಸೂಕ್ಷವಾದ ಅಪರಾಧವನ್ನೂ ಎಸಗಿಲ್ಲ!”
03275028 ವರುಣ ಉವಾಚ|
03275028a ರಸಾ ವೈ ಮತ್ಪ್ರಸೂತಾ ಹಿ ಭೂತದೇಹೇಷು ರಾಘವ|
03275028c ಅಹಂ ವೈ ತ್ವಾಂ ಪ್ರಬ್ರವೀಮಿ ಮೈಥಿಲೀ ಪ್ರತಿಗೃಹ್ಯತಾಂ||
ವರುಣನು ಹೇಳಿದನು: “ರಾಘವ! ಇರುವವುಗಳ ದೇಹಗಳಲ್ಲಿರುವ ರಸವು ನನ್ನಿಂದಲೇ ಬಂದಿರುವುದು. ನಾನು ನಿನಗೆ ಹೇಳುತ್ತಿದ್ದೇನೆ. ಮೈಥಿಲಿಯನ್ನು ಹಿಂದೆ ತೆಗೆದುಕೋ!”
03275029 ಬ್ರಹ್ಮೋವಾಚ|
03275029a ಪುತ್ರ ನೈತದಿಹಾಶ್ಚರ್ಯಂ ತ್ವಯಿ ರಾಜರ್ಷಿಧರ್ಮಿಣಿ|
03275029c ಸಾಧೋ ಸದ್ವೃತ್ತಮಾರ್ಗಸ್ಥೇ ಶೃಣು ಚೇದಂ ವಚೋ ಮಮ||
ಬ್ರಹ್ಮನು ಹೇಳಿದನು: “ಪುತ್ರ! ಸಾಧು! ರಾಜರ್ಷಿಯೂ ಧರ್ಮಿಣಿಯೂ, ಒಳ್ಳೆಯ ಮಾರ್ಗದಲ್ಲಿ ನಡೆಯುವವನೂ ಆದ ನಿನ್ನಿಂದ ಇದು ಆಶ್ಚರ್ಯವೇನಲ್ಲ! ಆದರೂ ನನ್ನ ಈ ಮಾತುಗಳನ್ನು ಕೇಳು.
03275030a ಶತ್ರುರೇಷ ತ್ವಯಾ ವೀರ ದೇವಗಂಧರ್ವಭೋಗಿನಾಂ|
03275030c ಯಕ್ಷಾಣಾಂ ದಾನವಾನಾಂ ಚ ಮಹರ್ಷೀಣಾಂ ಚ ಪಾತಿತಃ||
ವೀರ! ನೀನು ದೇವ, ಗಂಧರ್ವ, ನಾಗ, ಯಕ್ಷ, ದಾನವ ಮತ್ತು ಮಹರ್ಷಿಗಳ ಶತ್ರುವನ್ನು ಕೆಳಗುರುಳಿಸಿದ್ದೀಯೆ.
03275031a ಅವಧ್ಯಃ ಸರ್ವಭೂತಾನಾಂ ಮತ್ಪ್ರಸಾದಾತ್ಪುರಾಭವತ್|
03275031c ಕಸ್ಮಾಚ್ಚಿತ್ಕಾರಣಾತ್ಪಾಪಃ ಕಂ ಚಿತ್ಕಾಲಮುಪೇಕ್ಷಿತಃ||
ಹಿಂದೆ ನನ್ನ ಪ್ರಸಾದದಿಂದ ಸರ್ವಭೂತಗಳಿಗೂ ಅವಧ್ಯನಾಗಿರುವ ಈ ಪಾಪಕರ್ಮಿಯನ್ನು ಯಾವುದೋ ಕಾರಣದಿಂದ ಕೆಲ ಕಾಲ ಉಪೇಕ್ಷಿಸಿಯಾಗಿತ್ತು.
03275032a ವಧಾರ್ಥಮಾತ್ಮನಸ್ತೇನ ಹೃತಾ ಸೀತಾ ದುರಾತ್ಮನಾ|
03275032c ನಲಕೂಬರಶಾಪೇನ ರಕ್ಷಾ ಚಾಸ್ಯಾಃ ಕೃತಾ ಮಯಾ||
ಅನಂತರ ಆ ದುರಾತ್ಮನು ತನ್ನದೇ ವಧೆಗೆ ಕಾರಣಳಾದ ಸೀತೆಯನ್ನು ಅಪಹರಿಸಿದನು. ಅವಳನ್ನು ನಾನು ನಲಕೂಬರನ ಶಾಪದಿಂದ ರಕ್ಷಿಸಿದೆನು.
03275033a ಯದಿ ಹ್ಯಕಾಮಾಮಾಸೇವೇತ್ಸ್ತ್ರಿಯಮನ್ಯಾಮಪಿ ಧ್ರುವಂ|
03275033c ಶತಧಾಸ್ಯ ಫಲೇದ್ದೇಹ ಇತ್ಯುಕ್ತಃ ಸೋಽಭವತ್ಪುರಾ||
ಹಿಂದೆ ಅವನಿಗೆ ಹೇಳಲಾಗಿತ್ತು – ತನ್ನನ್ನು ಬಯಸದೇ ಇದ್ದ ಯಾವ ಸ್ತ್ರೀಯನ್ನು ಕಾಮಿಸಿದರೂ ಅವನ ದೇಹವು ನೂರು ತುಂಡಾಗುತ್ತದೆ.
03275034a ನಾತ್ರ ಶಂಕಾ ತ್ವಯಾ ಕಾರ್ಯಾ ಪ್ರತೀಚ್ಚೇಮಾಂ ಮಹಾದ್ಯುತೇ|
03275034c ಕೃತಂ ತ್ವಯಾ ಮಹತ್ಕಾರ್ಯಂ ದೇವಾನಾಮಮರಪ್ರಭ||
ಮಹಾದ್ಯುತೇ! ಇದರಲ್ಲಿ ಶಂಕೆಪಡಬೇಡ! ಇವಳನ್ನು ಸ್ವೀಕರಿಸುವ ಕಾರ್ಯಮಾಡು. ಅಮರಪ್ರಭನಾದ ನೀನು ದೇವತೆಗಳ ಮಹಾಕಾರ್ಯವನ್ನು ಎಸಗಿದ್ದೀಯೆ.”
03275035 ದಶರಥ ಉವಾಚ|
03275035a ಪ್ರೀತೋಽಸ್ಮಿ ವತ್ಸ ಭದ್ರಂ ತೇ ಪಿತಾ ದಶರಥೋಽಸ್ಮಿ ತೇ|
03275035c ಅನುಜಾನಾಮಿ ರಾಜ್ಯಂ ಚ ಪ್ರಶಾಧಿ ಪುರುಷೋತ್ತಮ||
ದಶರಥನು ಹೇಳಿದನು: “ಸಂತೋಷಗೊಂಡಿದ್ದೇನೆ. ವತ್ಸ! ನಿನಗೆ ಮಂಗಳವಾಗಲಿ! ನಾನು ನಿನ್ನ ತಂದೆ ದಶರಥ! ಪುರುಷೋತ್ತಮ! ಅನುಮತಿಯನ್ನು ನೀಡುತ್ತಿದ್ದೇನೆ. ರಾಜ್ಯವನ್ನಾಳು!”
03275036 ರಾಮ ಉವಾಚ|
03275036a ಅಭಿವಾದಯೇ ತ್ವಾಂ ರಾಜೇಂದ್ರ ಯದಿ ತ್ವಂ ಜನಕೋ ಮಮ|
03275036c ಗಮಿಷ್ಯಾಮಿ ಪುರೀಂ ರಮ್ಯಾಮಯೋಧ್ಯಾಂ ಶಾಸನಾತ್ತವ||
ರಾಮನು ಹೇಳಿದನು: “ರಾಜೇಂದ್ರ! ನನ್ನ ಜನಕನಾಗಿದ್ದರೆ ನಿನಗೆ ಅಭಿವಾದನೆಗಳು. ನಿನ್ನ ಶಾಸನದಂತೆ ನಾನು ರಮ್ಯ ಅಯೋಧ್ಯಾಪುರಿಗೆ ಹೋಗುತ್ತೇನೆ.””
03275037 ಮಾರ್ಕಂಡೇಯ ಉವಾಚ|
03275037a ತಮುವಾಚ ಪಿತಾ ಭೂಯಃ ಪ್ರಹೃಷ್ಟೋ ಮನುಜಾಧಿಪ|
03275037c ಗಚ್ಚಾಯೋಧ್ಯಾಂ ಪ್ರಶಾಧಿ ತ್ವಂ ರಾಮ ರಕ್ತಾಂತಲೋಚನ||
ಮಾರ್ಕಂಡೇಯನು ಹೇಳಿದನು: “ಮನುಜಾಧಿಪ! ಸಂತೋಷಗೊಂಡ ತಂದೆಯು ಅವನಿಗೆ ಹೇಳಿದನು: “ರಕ್ತಾಂತಲೋಚನ ರಾಮ! ಹೋಗಿ ಅಯೋಧ್ಯೆಯನ್ನು ಆಳು!”
03275038a ತತೋ ದೇವಾನ್ನಮಸ್ಕೃತ್ಯ ಸುಹೃದ್ಭಿರಭಿನಂದಿತಃ|
03275038c ಮಹೇಂದ್ರ ಇವ ಪೌಲೋಮ್ಯಾ ಭಾರ್ಯಯಾ ಸ ಸಮೇಯಿವಾನ್||
ಆಗ ದೇವತೆಗಳಿಗೆ ನಮಸ್ಕರಿಸಿ, ಸುಹೃದಯರಿಂದ ಅಭಿನಂದಿತನಾಗಿ ಪೌಲೋಮೆಯೊಂದಿಗೆ ಇಂದ್ರನು ಹೇಗೋ ಹಾಗೆ ಭಾರ್ಯೆಯನ್ನು ಕೂಡಿದನು.
03275039a ತತೋ ವರಂ ದದೌ ತಸ್ಮೈ ಅವಿಂಧ್ಯಾಯ ಪರಂತಪಃ|
03275039c ತ್ರಿಜಟಾಂ ಚಾರ್ಥಮಾನಾಭ್ಯಾಂ ಯೋಜಯಾಮಾಸ ರಾಕ್ಷಸೀಂ||
ಅನಂತರ ಪರಂತಪನು ಅವಿಂಧ್ಯನಿಗೆ ವರವನ್ನಿತ್ತನು ಮತ್ತು ರಾಕ್ಷಸೀ ತ್ರಿಜಟೆಗೆ ಸಂಪತ್ತು ಗೌರವಗಳನ್ನಿತ್ತನು.
03275040a ತಮುವಾಚ ತತೋ ಬ್ರಹ್ಮಾ ದೇವೈಃ ಶಕ್ರಮುಖೈರ್ವೃತಃ|
03275040c ಕೌಸಲ್ಯಾಮಾತರಿಷ್ಟಾಂಸ್ತೇ ವರಾನದ್ಯ ದದಾನಿ ಕಾನ್||
ಶಕ್ರಪ್ರಮುಖ ದೇವತೆಗಳಿಂದ ಆವೃತನಾದ ಬ್ರಹ್ಮನು ಹೇಳಿದನು: “ಕೌಸಲ್ಯೆಯ ಮಗನೇ! ನೀನು ಬಯಸುವ ಯಾವ ವರವನ್ನು ಇಂದು ನಾನು ನಿನಗೆ ಕೊಡಲಿ?”
03275041a ವವ್ರೇ ರಾಮಃ ಸ್ಥಿತಿಂ ಧರ್ಮೇ ಶತ್ರುಭಿಶ್ಚಾಪರಾಜಯಂ|
03275041c ರಾಕ್ಷಸೈರ್ನಿಹತಾನಾಂ ಚ ವಾನರಾಣಾಂ ಸಮುದ್ಭವಂ||
ರಾಮನು ಧರ್ಮದಲ್ಲಿ ನೆಲೆಯಾಗಿರುವಂತೆ, ಶತ್ರುಗಳ ಮೇಲೆ ಜಯ, ಮತ್ತು ರಾಕ್ಷಸರಿಂದ ಹತರಾದ ವಾನರರ ಪುನರ್ಜೀವವನ್ನು ವರಗಳಾಗಿ ವರಿಸಿದನು.
03275042a ತತಸ್ತೇ ಬ್ರಹ್ಮಣಾ ಪ್ರೋಕ್ತೇ ತಥೇತಿ ವಚನೇ ತದಾ|
03275042c ಸಮುತ್ತಸ್ಥುರ್ಮಹಾರಾಜ ವಾನರಾ ಲಬ್ಧಚೇತಸಃ||
ಹಾಗೆಯೇ ಆಗಲೆಂದು ಬ್ರಹ್ಮನು ಹೇಳಲು, ಮಹಾರಾಜ! ವಾನರರು ಚೇತನವನ್ನು ಪಡೆದು ಮೇಲೆದ್ದರು.
03275043a ಸೀತಾ ಚಾಪಿ ಮಹಾಭಾಗಾ ವರಂ ಹನುಮತೇ ದದೌ|
03275043c ರಾಮಕೀರ್ತ್ಯಾ ಸಮಂ ಪುತ್ರ ಜೀವಿತಂ ತೇ ಭವಿಷ್ಯತಿ||
ಮಹಾಭಾಗೆ ಸೀತೆಯೂ ಕೂಡ ಹನುಮತನಿಗೆ ವರವನ್ನಿತ್ತಳು: “ಮಗನೇ! ರಾಮನ ಕೀರ್ತಿಯಿರುವವರೆಗೆ ನೀನು ಜೀವಿಸಿರುತ್ತೀಯೆ!
03275044a ದಿವ್ಯಾಸ್ತ್ವಾಮುಪಭೋಗಾಶ್ಚ ಮತ್ಪ್ರಸಾದಕೃತಾಃ ಸದಾ|
03275044c ಉಪಸ್ಥಾಸ್ಯಂತಿ ಹನುಮನ್ನಿತಿ ಸ್ಮ ಹರಿಲೋಚನ||
ಹರಿಲೋಚನ ಹನುಮ! ನನ್ನ ಪ್ರಸಾದದಿಂದ ಸದಾ ದಿವ್ಯ ಉಪಭೋಗಗಳು ನಿನಗೆ ಕಾಯುತ್ತಿರುತ್ತವೆ!”
03275045a ತತಸ್ತೇ ಪ್ರೇಕ್ಷಮಾಣಾನಾಂ ತೇಷಾಮಕ್ಲಿಷ್ಟಕರ್ಮಣಾಂ|
03275045c ಅಂತರ್ಧಾನಂ ಯಯುರ್ದೇವಾಃ ಸರ್ವೇ ಶಕ್ರಪುರೋಗಮಾಃ||
ಆಗ ಅವರು ಆ ಅಕ್ಲಿಷ್ಟಕರ್ಮಿಗಳನ್ನು ನೋಡುತ್ತಿರಲು ಶಕ್ರನನ್ನು ಮುಂದಿಟ್ಟುಕೊಂಡು ಎಲ್ಲ ದೇವತೆಗಳೂ ಅಂತರ್ಧಾನರಾದರು.
03275046a ದೃಷ್ಟ್ವಾ ತು ರಾಮಂ ಜಾನಕ್ಯಾ ಸಮೇತಂ ಶಕ್ರಸಾರಥಿಃ|
03275046c ಉವಾಚ ಪರಮಪ್ರೀತಃ ಸುಹೃನ್ಮಧ್ಯ ಇದಂ ವಚಃ||
ಸುಹೃದಯರ ಮಧ್ಯೆ ಜಾನಕಿಯ ಜೊತೆಗಿದ್ದ ರಾಮನನ್ನು ನೋಡಿ ಪರಮಪ್ರೀತನಾದ ಶಕ್ರಸಾರಥಿಯು ಹೀಗೆ ಹೇಳಿದನು:
03275047a ದೇವಗಂಧರ್ವಯಕ್ಷಾಣಾಂ ಮಾನುಷಾಸುರಭೋಗಿನಾಂ|
03275047c ಅಪನೀತಂ ತ್ವಯಾ ದುಃಖಮಿದಂ ಸತ್ಯಪರಾಕ್ರಮ||
“ಸತ್ಯಪರಾಕ್ರಮಿ! ದೇವತೆಗಳ, ಗಂಧರ್ವರ, ಯಕ್ಷರ, ಮನುಷ್ಯರ, ಅಸುರರ ಮತ್ತು ನಾಗಗಳ ದುಃಖವನ್ನು ಇಂದು ನೀನು ಕಳೆದಿದ್ದೀಯೆ!
03275048a ಸದೇವಾಸುರಗಂಧರ್ವಾ ಯಕ್ಷರಾಕ್ಷಸಪನ್ನಗಾಃ|
03275048c ಕಥಯಿಷ್ಯಂತಿ ಲೋಕಾಸ್ತ್ವಾಂ ಯಾವದ್ಭೂಮಿರ್ಧರಿಷ್ಯತಿ||
ದೇವ, ಅಸುರ, ಗಂಧರ್ವ, ಯಕ್ಷ, ರಾಕ್ಷಸ, ಪನ್ನಗಳೊಂದಿಗೆ ಲೋಕಗಳು ಭೂಮಿಯಿರುವವರೆಗೆ ನಿನ್ನ ಕಥೆಯನ್ನು ಹೇಳುತ್ತಿರುತ್ತಾರೆ.”
03275049a ಇತ್ಯೇವಮುಕ್ತ್ವಾನುಜ್ಞಾಪ್ಯ ರಾಮಂ ಶಸ್ತ್ರಭೃತಾಂ ವರಂ|
03275049c ಸಂಪೂಜ್ಯಾಪಾಕ್ರಮತ್ತೇನ ರಥೇನಾದಿತ್ಯವರ್ಚಸಾ||
ಹೀಗೆ ಹೇಳಿ ಶಸ್ತ್ರಭೃತರಲ್ಲಿ ಶ್ರೇಷ್ಠ ರಾಮನಿಂದ ಆಜ್ಞೆಪಡೆದು ಸಂಪೂಜಿಸಿ ಆದಿತ್ಯವರ್ಚಸ ರಥದಲ್ಲಿ ಹೊರಟುಹೋದನು.
03275050a ತತಃ ಸೀತಾಂ ಪುರಸ್ಕೃತ್ಯ ರಾಮಃ ಸೌಮಿತ್ರಿಣಾ ಸಹ|
03275050c ಸುಗ್ರೀವಪ್ರಮುಖೈಶ್ಚೈವ ಸಹಿತಃ ಸರ್ವವಾನರೈಃ||
03275051a ವಿಧಾಯ ರಕ್ಷಾಂ ಲಂಕಾಯಾಂ ವಿಭೀಷಣಪುರಸ್ಕೃತಃ|
03275051c ಸಂತತಾರ ಪುನಸ್ತೇನ ಸೇತುನಾ ಮಕರಾಲಯಂ||
03275052a ಪುಷ್ಪಕೇಣ ವಿಮಾನೇನ ಖೇಚರೇಣ ವಿರಾಜತಾ|
03275052c ಕಾಮಗೇನ ಯಥಾ ಮುಖ್ಯೈರಮಾತ್ಯೈಃ ಸಂವೃತೋ ವಶೀ||
ಆಗ ರಾಮನು ಸೀತೆಯನ್ನು ಮುಂದಿರಿಸಿಕೊಂಡು ಸೌಮಿತ್ರಿಯೊಡನೆ ಸುಗ್ರೀವಪ್ರಮುಖರಿಂದೊಡಗೂಡಿದ ಸರ್ವ ವಾನರರೊಂದಿಗೆ ಲಂಕೆಯ ರಕ್ಷಣೆಯನ್ನು ಏರ್ಪಡಿಸಿ, ವಿಭೀಷಣನನ್ನು ಮುಂದಿಟ್ಟುಕೊಂಡು, ಸೇತುವಿನ ಮೂಲಕ, ಆಕಾಶದಲ್ಲಿ ಹೋಗುವ ಬೇಕಾದರಲ್ಲಿ ಹೋಗಬಲ್ಲ ವಿರಾಜಿಸುವ ಪುಷ್ಪಕವಿಮಾನದಲ್ಲಿ, ಅಮಾತ್ಯರಿಂದ ಸಂವೃತನಾದ ಮುಖ್ಯನಂತೆ, ಪುನಃ ಆ ಮಕರಾಲಯವನ್ನು ದಾಟಿದನು.
03275053a ತತಸ್ತೀರೇ ಸಮುದ್ರಸ್ಯ ಯತ್ರ ಶಿಶ್ಯೇ ಸ ಪಾರ್ಥಿವಃ|
03275053c ತತ್ರೈವೋವಾಸ ಧರ್ಮಾತ್ಮಾ ಸಹಿತಃ ಸರ್ವವಾನರೈಃ||
ಎಲ್ಲಿ ಪಾರ್ಥಿವನು ಉಳಿದಿದ್ದನೋ ಅದೇ ಸಮುದ್ರತೀರದಲ್ಲಿ ಧರ್ಮಾತ್ಮನು ಸರ್ವ ವಾನರರ ಸಹಿತ ಉಳಿದುಕೊಂಡನು.
03275054a ಅಥೈನಾನ್ರಾಘವಃ ಕಾಲೇ ಸಮಾನೀಯಾಭಿಪೂಜ್ಯ ಚ|
03275054c ವಿಸರ್ಜಯಾಮಾಸ ತದಾ ರತ್ನೈಃ ಸಂತೋಷ್ಯ ಸರ್ವಶಃ||
ಸರಿಯಾದ ಸಮಯದಲ್ಲಿ ರಾಘವನು ಅವರನ್ನು ಒಟ್ಟುಗೂಡಿಸಿ, ಗೌರವಿಸಿ ರತ್ನಗಳಿಂದ ಎಲ್ಲರನ್ನೂ ಸಂತೋಷಗೊಳಿಸಿ ಕಳುಹಿಸಿಕೊಟ್ಟನು.
03275055a ಗತೇಷು ವಾನರೇಂದ್ರೇಷು ಗೋಪುಚ್ಚರ್ಕ್ಷೇಷು ತೇಷು ಚ|
03275055c ಸುಗ್ರೀವಸಹಿತೋ ರಾಮಃ ಕಿಷ್ಕಿಂಧಾಂ ಪುನರಾಗಮತ್||
ಆ ವಾನರೇಂದ್ರರು, ಗೋಪುಚ್ಛರು ಮತ್ತು ಕರಡಿಗಳು ಹೋದನಂತರ, ರಾಮನು ಸುಗ್ರೀವನ ಸಹಿತ ಕಿಷ್ಕಿಂಧೆಗೆ ಮರಳಿ ಆಗಮಿಸಿದನು.
03275056a ವಿಭೀಷಣೇನಾನುಗತಃ ಸುಗ್ರೀವಸಹಿತಸ್ತದಾ|
03275056c ಪುಷ್ಪಕೇಣ ವಿಮಾನೇನ ವೈದೇಹ್ಯಾ ದರ್ಶಯನ್ವನಂ||
ಸುಗ್ರೀವನ ಸಹಿತ ವಿಭೀಷಣನು ಅನುಸರಿಸಿ ಬರುತ್ತಿರಲು ಪುಷ್ಪಕ ವಿಮಾನದಿಂದ ವೈದೇಹಿಗೆ ವನವನ್ನು ತೋರಿಸಿದನು.
03275057a ಕಿಷ್ಕಿಂಧಾಂ ತು ಸಮಾಸಾದ್ಯ ರಾಮಃ ಪ್ರಹರತಾಂ ವರಃ|
03275057c ಅಂಗದಂ ಕೃತಕರ್ಮಾಣಂ ಯೌವರಾಜ್ಯೇಽಭ್ಯಷೇಚಯತ್||
ಪ್ರಹರಿಗಳಲ್ಲಿ ಶ್ರೇಷ್ಠ ರಾಮನು ಕಿಷ್ಕಿಂಧೆಯನ್ನು ತಲುಪಿ ಕೃತಕರ್ಮಿಣಿ ಅಂಗದನನ್ನು ಯುವರಾಜನನ್ನಾಗಿ ಅಭಿಷೇಕಿಸಿದನು.
03275058a ತತಸ್ತೈರೇವ ಸಹಿತೋ ರಾಮಃ ಸೌಮಿತ್ರಿಣಾ ಸಹ|
03275058c ಯಥಾಗತೇನ ಮಾರ್ಗೇಣ ಪ್ರಯಯೌ ಸ್ವಪುರಂ ಪ್ರತಿ||
ಅವರ ಸಹಿತ ಮತ್ತು ಸೌಮಿತ್ರಿಯನ್ನು ಕೂಡಿಕೊಂಡು ರಾಮನು ಹೋದಮಾರ್ಗದಿಂದಲೇ ತನ್ನ ಪುರದ ಕಡೆ ಪ್ರಯಾಣಿಸಿದನು.
03275059a ಅಯೋಧ್ಯಾಂ ಸ ಸಮಾಸಾದ್ಯ ಪುರೀಂ ರಾಷ್ಟ್ರಪತಿಸ್ತತಃ|
03275059c ಭರತಾಯ ಹನೂಮಂತಂ ದೂತಂ ಪ್ರಸ್ಥಾಪಯತ್ತದಾ||
ಅಯೋಧ್ಯಾಪುರಿಯನ್ನು ತಲುಪಿ ರಾಷ್ಟ್ರಪತಿಯು ಭರತನಿಗೆ ದೂತನಾಗಿ ಹನೂಮಂತನನ್ನು ಕಳುಹಿಸಿದನು.
03275060a ಲಕ್ಷಯಿತ್ವೇಂಗಿತಂ ಸರ್ವಂ ಪ್ರಿಯಂ ತಸ್ಮೈ ನಿವೇದ್ಯ ಚ|
03275060c ವಾಯುಪುತ್ರೇ ಪುನಃ ಪ್ರಾಪ್ತೇ ನಂದಿಗ್ರಾಮಮುಪಾಗಮತ್||
ಎಲ್ಲ ಇಂಗಿತಗಳನ್ನೂ ಲಕ್ಷಿಸಿ ಅವನಿಗೆ ಪ್ರಿಯವಿಷಯವನ್ನು ತಿಳಿಸಿ ವಾಯುಪುತ್ರನು ಪುನಃ ಬರಲು ನಂದೀಗ್ರಾಮಕ್ಕೆ ಬಂದನು.
03275061a ಸ ತತ್ರ ಮಲದಿಗ್ಧಾಂಗಂ ಭರತಂ ಚೀರವಾಸಸಂ|
03275061c ಅಗ್ರತಃ ಪಾದುಕೇ ಕೃತ್ವಾ ದದರ್ಶಾಸೀನಮಾಸನೇ||
ಅವನು ಅಲ್ಲಿ ಮಲಿನಾಂಗನಾದ ಚೀರವಸ್ತ್ರಗಳನ್ನು ಧರಿಸಿ ಅಗ್ರಜನ ಪಾದುಕೆಗಳ ಎದುರು ಆಸನದಲ್ಲಿ ಕುಳಿತಿದ್ದ ಭರತನನ್ನು ಕಂಡನು.
03275062a ಸಮೇತ್ಯ ಭರತೇನಾಥ ಶತ್ರುಘ್ನೇನ ಚ ವೀರ್ಯವಾನ್|
03275062c ರಾಘವಃ ಸಹಸೌಮಿತ್ರಿರ್ಮುಮುದೇ ಭರತರ್ಷಭ||
ಭರತರ್ಷಭ! ಆಗ ಭರತ ಮತ್ತು ವೀರ್ಯವಾನ್ ಶತ್ರುಘ್ರನನ್ನು ಸೇರಿ ಸೌಮಿತ್ರಿಯೊಡನೆ ರಾಘವನು ಸಂತೋಷಗೊಂಡನು.
03275063a ತಥಾ ಭರತಶತ್ರುಘ್ನೌ ಸಮೇತೌ ಗುರುಣಾ ತದಾ|
03275063c ವೈದೇಹ್ಯಾ ದರ್ಶನೇನೋಭೌ ಪ್ರಹರ್ಷಂ ಸಮವಾಪತುಃ||
ಹಾಗೆಯೇ ಭರತ-ಶತ್ರುಘ್ನರೂ ಅವರಿಬ್ಬರನ್ನೂ ಗುರುಗಳ ಸಹಿತ ವೈದೇಹಿಯನ್ನೂ ಕಂಡು ಹರ್ಷಿತರಾದರು.
03275064a ತಸ್ಮೈ ತದ್ಭರತೋ ರಾಜ್ಯಮಾಗತಾಯಾಭಿಸತ್ಕೃತಂ|
03275064c ನ್ಯಾಸಂ ನಿರ್ಯಾತಯಾಮಾಸ ಯುಕ್ತಃ ಪರಮಯಾ ಮುದಾ||
ಆಗ ಭರತನು ಸತ್ಕೃತವಾದ ನ್ಯಾಸವಾಗಿಟ್ಟುಕೊಂಡಿದ್ದ ರಾಜ್ಯವನ್ನು ಪರಮ ಮುದದಿಂದ ಅವನಿಗೆ ಹಿಂದಿರುಗಿಸಿದನು.
03275065a ತತಸ್ತಂ ವೈಷ್ಣವೇ ಶೂರಂ ನಕ್ಷತ್ರೇಽಭಿಮತೇಽಹನಿ|
03275065c ವಸಿಷ್ಠೋ ವಾಮದೇವಶ್ಚ ಸಹಿತಾವಭ್ಯಷಿಂಚತಾಂ||
ಅನಂತರ ವೈಷ್ಣವ ನಕ್ಷತ್ರದ ಮಂಗಳ ಮುಹೂರ್ತದಲ್ಲಿ ವಸಿಷ್ಠ ವಾಮದೇವರು ಜೊತೆಗೂಡಿ ಆ ಶೂರನನ್ನು ಅಭಿಷೇಕಿಸಿದರು.
03275066a ಸೋಽಭಿಷಿಕ್ತಃ ಕಪಿಶ್ರೇಷ್ಠಂ ಸುಗ್ರೀವಂ ಸಸುಹೃಜ್ಜನಂ|
03275066c ವಿಭೀಷಣಂ ಚ ಪೌಲಸ್ತ್ಯಮನ್ವಜಾನಾದ್ಗೃಹಾನ್ಪ್ರತಿ||
03275067a ಅಭ್ಯರ್ಚ್ಯ ವಿವಿಧೈ ರತ್ನೈಃ ಪ್ರೀತಿಯುಕ್ತೌ ಮುದಾ ಯುತೌ|
03275067c ಸಮಾಧಾಯೇತಿಕರ್ತವ್ಯಂ ದುಃಖೇನ ವಿಸಸರ್ಜ ಹ||
ಅಭಿಷಿಕ್ತನಾದ ಅವನು ಸುಹೃಜ್ಜನರೊಂದಿಗೆ ಕಪಿಶ್ರೇಷ್ಠ ಸುಗ್ರೀವನನ್ನೂ ಪೌಲಸ್ತ್ಯ ವಿಭೀಷಣನನ್ನೂ ಅನ್ಯರನ್ನೂ ಮನೆಗಳ ಕಡೆ, ವಿವಿಧರತ್ನಗಳಿಂದ ಅಭ್ಯರ್ಚಿಸಿ, ಸಂತೋಷಗೊಳಿಸಿ, ತನ್ನ ಕರ್ತವ್ಯದ ಕುರಿತು ಯೋಚಿಸಿ ದುಃಖದಿಂದ ಕಳುಹಿಸಿಕೊಟ್ಟನು.
03275068a ಪುಷ್ಪಕಂ ಚ ವಿಮಾನಂ ತತ್ಪೂಜಯಿತ್ವಾ ಸ ರಾಘವಃ|
03275068c ಪ್ರಾದಾದ್ವೈಶ್ರವಣಾಯೈವ ಪ್ರೀತ್ಯಾ ಸ ರಘುನಂದನಃ||
ಪುಷ್ಪಕ ವಿಮಾನವನ್ನೂ ಕೂಡ ಪೂಜಿಸಿ ಪ್ರೀತಿಯಿಂದ ರಾಘವ ರಘುನಂದನನು ವೈಶ್ರವಣನಿಗೆ ನೀಡಿದನು.
03275069a ತತೋ ದೇವರ್ಷಿಸಹಿತಃ ಸರಿತಂ ಗೋಮತೀಮನು|
03275069c ದಶಾಶ್ವಮೇಧಾನಾಜಹ್ರೇ ಜಾರೂಥ್ಯಾನ್ಸ ನಿರರ್ಗಲಾನ್||
ಅನಂತರ ದೇವರ್ಷಿಗಳ ಸಹಿತ ಗೋಮತೀ ನದಿಯ ತೀರದಲ್ಲಿ ನಿರರ್ಗಲ ಮೂರು ರೀತಿಯ ದಕ್ಷಿಣೆಗಳನ್ನಿತ್ತು ಹತ್ತು ಅಶ್ವಮೇಧಯಾಗಗಳನ್ನು ನಡೆಸಿದನು.”
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ಶ್ರೀರಾಮಾಭಿಷೇಕೇ ಪಂಚಸಪ್ತತ್ಯಧಿಕದ್ವಿಶತತಮೋಽಧ್ಯಾಯ:|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ಶ್ರೀರಾಮಾಭಿಷೇಕದಲ್ಲಿ ಇನ್ನೂರಾಎಪ್ಪತ್ತೈದನೆಯ ಅಧ್ಯಾಯವು.

Kannada translation of Draupadiharana Parva, by Chapter:
- ಜಯದ್ರಥಾಗಮನ
- ಕೋಟಿಕಾಸ್ಯಪ್ರಶ್ನಃ
- ದ್ರೌಪದೀವಾಕ್ಯ
- ಜಯದ್ರಥದ್ರೌಪದೀಸಂವಾದ
- ದ್ರೌಪದೀಹರಣ
- ಪಾರ್ಥಾಗಮನ
- ದ್ರೌಪದೀವಾಕ್ಯ
- ಜಯದ್ರಥಪಲಾಯನ
- ಜಯದ್ರಥವಿಮೋಕ್ಷಣ
- ರಾಮೋಪಾಖ್ಯಾನ-ಯುಧಿಷ್ಠಿರಪ್ರಶ್ನಃ
- ರಾಮೋಪಾಖ್ಯಾನ-ರಾಮರಾವಣಯೋರ್ಜನ್ಮಕಥನ
- ರಾಮೋಪಾಖ್ಯಾನ-ರಾವಣಾದಿವರಪ್ರಾಪ್ತಿಃ
- ರಾಮೋಪಾಖ್ಯಾನ-ವಾನರಾದ್ಯುತ್ಪತ್ತಿಃ
- ರಾಮೋಪಾಖ್ಯಾನ-ರಾಮವನಾಭಿಗಮನ
- ರಾಮೋಪಾಖ್ಯಾನ-ಮಾರೀಚವಧ-ಸೀತಾಪಹರಣ
- ರಾಮೋಪಾಖ್ಯಾನ-ಕಬಂಧಹನನ
- ರಾಮೋಪಾಖ್ಯಾನ-ತ್ರಿಜಟಾಕೃತಸೀತಾಸಂವಾದಃ
- ರಾಮೋಪಾಖ್ಯಾನ-ಸೀತಾರಾವಣಸಂವಾದಃ
- ರಾಮೋಪಾಖ್ಯಾನ-ಹನುಮಪ್ರತ್ಯಾಗಮನ
- ರಾಮೋಪಾಖ್ಯಾನ-ಸೇತುಬಂಧನ
- ರಾಮೋಪಾಖ್ಯಾನ-ಲಂಕಾಪ್ರವೇಶ
- ರಾಮೋಪಾಖ್ಯಾನ-ರಾಮರಾವಣದ್ವಂದ್ವಯುದ್ಧಃ
- ರಾಮೋಪಾಖ್ಯಾನ-ಕುಂಭಕರ್ಣನಿರ್ಗಮನ
- ರಾಮೋಪಾಖ್ಯಾನ-ಕುಂಬಕರ್ಣಾದಿವಧಃ
- ರಾಮೋಪಾಖ್ಯಾನ-ಇಂದ್ರಜಿದ್ಯುದ್ಧಃ
- ರಾಮೋಪಾಖ್ಯಾನ-ಇಂದ್ರಜಿದ್ವಧಃ
- ರಾಮೋಪಾಖ್ಯಾನ-ರಾವಣವಧಃ
- ರಾಮೋಪಾಖ್ಯಾನ-ಶ್ರೀರಾಮಾಭಿಷೇಕ
- ರಾಮೋಪಾಖ್ಯಾನ-ಯುಧಿಷ್ಠಿರಾಶ್ವಾಸನ
- ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೧
- ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೨
- ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೩
- ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೪
- ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೫
- ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೬
- ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೭
