Aranyaka Parva: Chapter 273

ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ

೨೭೩

ಇಂದ್ರಜಿತು ಸಂಹಾರ

ಇಂದ್ರಜಿತುವಿನ ಶರಜಾಲದಲ್ಲಿ ಬದ್ಧರಾಗಿದ್ದ ರಾಮ ಲಕ್ಷ್ಮಣರನ್ನು ವಿಭೀಷಣನು ಪ್ರಜ್ಞಾಸ್ತ್ರವನ್ನು ಬಳಸಿ ಎಬ್ಬಿಸಿ, ಕುಬೇರನು ಕಳುಹಿಸಿದ ನೀರನ್ನು ಕಣ್ಣಿಗೆ ಹಚ್ಚಿಕೊಳ್ಳಲು ಕೊಟ್ಟು ವೀರರಿಗೆ ಅಂತರ್ಹಿತವಾದುದು ಕಾಣುವಂತೆ ಮಾಡಿದುದು (೧-೧೪). ಲಕ್ಷ್ಮಣನು ಮೂರು ಬಾಣಗಳಿಂದ ಇಂದ್ರಜಿತುವನ್ನು ಸಂಹರಿಸಿದ್ದುದು (೧೫-೨೪). ಪುತ್ರವಧೆಯಿಂದ ದುಃಖಿತನಾದ ರಾವಣನು ಕೋಪದಿಂದ ಸೀತೆಯನ್ನು ಕೊಲ್ಲಲು ಮುಂದಾದಾಗ ಅವಿಂಧ್ಯನು ಅವನನ್ನು ತಡೆದುದು (೨೫-೩೩).

03273001 ಮಾರ್ಕಂಡೇಯ ಉವಾಚ|

03273001a ತಾವುಭೌ ಪತಿತೌ ದೃಷ್ಟ್ವಾ ಭ್ರಾತರಾವಮಿತೌಜಸೌ|

03273001c ಬಬಂಧ ರಾವಣಿರ್ಭೂಯಃ ಶರೈದೋರ್ಗತ್ತವರೈಸ್ತದಾ||

ಮಾರ್ಕಂಡೇಯನು ಹೇಳಿದನು: “ಆ ಅಮಿತತೇಜಸ್ವಿ ಸಹೋದರರಿಬ್ಬರೂ ಕೆಳಗೆ ಬಿದ್ದುದನ್ನು ನೋಡಿ ರಾವಣಿಯು ವರಗಳಿಂದ ಪಡೆದ ಶರಗಳಿಂದ ಅವರನ್ನು ಬಂಧಿಸಿದನು.

03273002a ತೌ ವೀರೌ ಶರಜಾಲೇನ ಬದ್ಧಾವಿಂದ್ರಜಿತಾ ರಣೇ|

03273002c ರೇಜತುಃ ಪುರುಷವ್ಯಾಘ್ರೌ ಶಕುಂತಾವಿವ ಪಂಜರೇ||

ರಣದಲ್ಲಿ ಇಂದ್ರಜಿತುವಿನಿಂದ ಶರಜಾಲದಲ್ಲಿ ಬದ್ಧರಾಗಿದ್ದ ಆ ಪುರುಷವ್ಯಾಘ್ರರು ಪಂಜರದಲ್ಲಿದ್ದ ಎರಡು ಪಕ್ಷಿಗಳಂತೆ ಕಂಡುಬಂದರು.

03273003a ತೌ ದೃಷ್ಟ್ವಾ ಪತಿತೌ ಭೂಮೌ ಶತಶಃ ಸಾಯಕೈಶ್ಚಿತೌ|

03273003c ಸುಗ್ರೀವಃ ಕಪಿಭಿಃ ಸಾರ್ಧಂ ಪರಿವಾರ್ಯ ತತಃ ಸ್ಥಿತಃ||

03273004a ಸುಷೇಣಮೈಂದದ್ವಿವಿದೈಃ ಕುಮುದೇನಾಂಗದೇನ ಚ|

03273004c ಹನೂಮನ್ನೀಲತಾರೈಶ್ಚ ನಲೇನ ಚ ಕಪೀಶ್ವರಃ||

ಅವರಿಬ್ಬರೂ ನೂರಾರು ಬಾಣಗಳಿಂದ ಚುಚ್ಚಲ್ಪಟ್ಟು ನೆಲದ ಮೇಲೆ ಬಿದ್ದಿರುವುದನ್ನು ನೋಡಿ ಸುಗ್ರೀವನು ಸುಷೇಣ, ಮೈಂದ, ದ್ವಿವಿದ, ಕುಮುದ, ಅಂಗದ, ಹನೂಮಾನ್, ನೀಲ, ತಾರ ಮತ್ತು ಕಪೀಶ್ವರ ನಲ ಮೊದಲಾದ ಕಪಿಗಳೊಂದಿಗೆ ಅವರನ್ನು ಸುತ್ತುವರೆದು ನಿಂತುಕೊಂಡನು.

03273005a ತತಸ್ತಂ ದೇಶಮಾಗಮ್ಯ ಕೃತಕರ್ಮಾ ವಿಭೀಷಣಃ|

03273005c ಬೋಧಯಾಮಾಸ ತೌ ವೀರೌ ಪ್ರಜ್ಞಾಸ್ತ್ರೇಣ ಪ್ರಬೋಧಿತೌ||

ಆಗ ಕೃತಕರ್ಮಿ ವಿಭೀಷಣನು ಆ ಪ್ರದೇಶಕ್ಕೆ ಬಂದನು ಮತ್ತು ಆ ವೀರರಿಬ್ಬರನ್ನೂ ಪ್ರಜ್ಞಾಸ್ತ್ರವನ್ನು ಪ್ರಯೋಗಿಸಿ ಎಬ್ಬಿಸಿದನು.

03273006a ವಿಶಲ್ಯೌ ಚಾಪಿ ಸುಗ್ರೀವಃ ಕ್ಷಣೇನೋಭೌ ಚಕಾರ ತೌ|

03273006c ವಿಶಲ್ಯಯಾ ಮಹೌಷಧ್ಯಾ ದಿವ್ಯಮಂತ್ರಪ್ರಯುಕ್ತಯಾ||

ಸುಗ್ರೀವನು ಕ್ಷಣದಲ್ಲಿಯೇ ಅವರಿಂದ ಬಾಣಗಳನ್ನು ಕಿತ್ತೊಗೆದು ಮುಳ್ಳುಗಳಿಂದ ಮುಕ್ತಿನೀಡುವ ದಿವ್ಯಮಂತ್ರದ ಮಹಾ ಔಷಧಿಯನ್ನು ಲೇಪಿಸಿದನು.

03273007a ತೌ ಲಬ್ಧಸಂಜ್ಞೌ ನೃವರೌ ವಿಶಲ್ಯಾವುದತಿಷ್ಠತಾಂ|

03273007c ಗತತಂದ್ರೀಕ್ಲಮೌ ಚಾಸ್ತಾಂ ಕ್ಷಣೇನೋಭೌ ಮಹಾರಥೌ||

ಎಚ್ಚೆತ್ತ ಆ ನರವರರು ಬಾಣಗಳ ರಹಿತರಾಗಿ ಮೇಲೆದ್ದರು. ಆ ಮಹಾರಥಿಗಳು ಕ್ಷಣದಲ್ಲಿಯೇ ಯುದ್ಧದ ಆಯಾಸವನ್ನು ಕಳೆದುಕೊಂಡರು.

03273008a ತತೋ ವಿಭೀಷಣಃ ಪಾರ್ಥ ರಾಮಮಿಕ್ಷ್ವಾಕುನಂದನಂ|

03273008c ಉವಾಚ ವಿಜ್ವರಂ ದೃಷ್ಟ್ವಾ ಕೃತಾಂಜಲಿರಿದಂ ವಚಃ||

ಪಾರ್ಥ! ಆಗ ವಿಭೀಷಣನು ಇಕ್ಷ್ವಾಕುನಂದನ ರಾಮನು ವಿಜ್ವರನಾದುದನ್ನು ನೋಡಿ ಕೈಮುಗಿದು ಈ ಮಾತುಗಳನ್ನಾಡಿದನು:

03273009a ಅಯಮಂಭೋ ಗೃಹೀತ್ವಾ ತು ರಾಜರಾಜಸ್ಯ ಶಾಸನಾತ್|

03273009c ಗುಹ್ಯಕೋಽಭ್ಯಾಗತಃ ಶ್ವೇತಾತ್ತ್ವತ್ಸಕಾಶಮರಿಂದಮ||

“ಅರಿಂದಮ! ಈ ಗುಹ್ಯಕನು ರಾಜರಾಜನ ಶಾಸನದಂತೆ ಶ್ವೇತಾದ್ರಿಯಿಂದ ಈ ನೀರನ್ನು ಹಿಡಿದು ಬಂದಿದ್ದಾನೆ.

03273010a ಇದಮಂಭಃ ಕುಬೇರಸ್ತೇ ಮಹಾರಾಜಃ ಪ್ರಯಚ್ಚತಿ|

03273010c ಅಂತರ್ಹಿತಾನಾಂ ಭೂತಾನಾಂ ದರ್ಶನಾರ್ಥಂ ಪರಂತಪ||

ಪರಂತಪ! ಮಹಾರಾಜ ಕುಬೇರನು ಈ ನೀರನ್ನು ಅಂತರ್ಧಾನರಾದವರ ದರ್ಶನಕ್ಕಾಗಿ ಕಳುಹಿಸಿಕೊಟ್ಟಿದ್ದಾನೆ.

03273011a ಅನೇನ ಸ್ಪೃಷ್ಟನಯನೋ ಭೂತಾನ್ಯಂತರ್ಹಿತಾನ್ಯುತ|

03273011c ಭವಾನ್ದ್ರಕ್ಷ್ಯತಿ ಯಸ್ಮೈ ಚ ಭವಾನೇತತ್ಪ್ರದಾಸ್ಯತಿ||

ಇದನ್ನು ಕಣ್ಣಿಗೆ ಮುಟ್ಟಿಸಿಕೊಂಡರೆ ಅಂತರ್ಹಿತಭೂತಗಳು ನಿನಗೆ ಮತ್ತು ಇದನ್ನು ನೀನು ಕೊಟ್ಟವರಿಗೆ ಕಾಣಿಸಿಕೊಳ್ಳುತ್ತವೆ.”

03273012a ತಥೇತಿ ರಾಮಸ್ತದ್ವಾರಿ ಪ್ರತಿಗೃಹ್ಯಾಯಾಥ ಸತ್ಕೃತಂ|

03273012c ಚಕಾರ ನೇತ್ರಯೋಃ ಶೌಚಂ ಲಕ್ಷ್ಮಣಶ್ಚ ಮಹಾಮನಾಃ||

03273013a ಸುಗ್ರೀವಜಾಂಬವಂತೌ ಚ ಹನೂಮಾನಂಗದಸ್ತಥಾ|

03273013c ಮೈಂದದ್ವಿವಿದನೀಲಾಶ್ಚ ಪ್ರಾಯಃ ಪ್ಲವಗಸತ್ತಮಾಃ||

ಹಾಗೆಯೇ ಆಗಲೆಂದು ರಾಮನು ಆ ಸತ್ಕೃತ ನೀರನ್ನು ಸ್ವೀಕರಿಸಿ ಕಣ್ಣುಗಳನ್ನು ತೊಳೆದುಕೊಳ್ಳಲು ಹಾಗೆಯೇ ಮಹಾಮನಸ್ವಿ ಲಕ್ಷ್ಮಣನೂ, ಸುಗ್ರೀವ-ಜಾಂಬವಂತರೂ, ಹನೂಮಂತ-ಅಂಗದರೂ, ಮೈಂದ, ದ್ವಿವಿದ, ನೀಲರೂ ಮತ್ತು ಹೆಚ್ಚಾಗಿ ಎಲ್ಲ ವಾನರಸತ್ತಮರೂ ಮಾಡಿದರು.

03273014a ತಥಾ ಸಮಭವಚ್ಚಾಪಿ ಯದುವಾಚ ವಿಭೀಷಣಃ|

03273014c ಕ್ಷಣೇನಾತೀಂದ್ರಿಯಾಣ್ಯೇಷಾಂ ಚಕ್ಷೂಂಷ್ಯಾಸನ್ಯುಧಿಷ್ಠಿರ||

ಯುಧಿಷ್ಠಿರ! ಆಗ ವಿಭೀಷಣನು ಹೇಳಿದಂತೆಯೇ ನಡೆಯಿತು. ಕ್ಷಣದಲ್ಲಿಯೇ ಅವರ ಕಣ್ಣುಗಳು ಅತೀಂದ್ರಿಯಗಳಾದವು.

03273015a ಇಂದ್ರಜಿತ್ಕೃತಕರ್ಮಾ ತು ಪಿತ್ರೇ ಕರ್ಮ ತದಾತ್ಮನಃ|

03273015c ನಿವೇದ್ಯ ಪುನರಾಗಚ್ಚತ್ತ್ವರಯಾಜಿಶಿರಃ ಪ್ರತಿ||

ಕೃತಕರ್ಮಿ ಇಂದ್ರಜಿತುವು ಮಾಡಿಮುಗಿಸಿದ ತನ್ನ ಕೆಲಸವನ್ನು ತಂದೆಗೆ ತಿಳಿಸಿ ತ್ವರೆಯಿಂದ ರಣರಂಗದ ಕಡೆ ಪುನಃ ಧಾವಿಸಿದನು.

03273016a ತಮಾಪತಂತಂ ಸಂಕ್ರುದ್ಧಂ ಪುನರೇವ ಯುಯುತ್ಸಯಾ|

03273016c ಅಭಿದುದ್ರಾವ ಸೌಮಿತ್ರಿರ್ವಿಭೀಷಣಮತೇ ಸ್ಥಿತಃ||

ಯುದ್ಧಮಾಡಲು ಪುನಃ ಬಂದಿದ್ದ ಸಂಕೃದ್ಧನಾಗಿದ್ದ ಆ ಶತ್ರುವನ್ನು ವಿಭೀಷಣನ ಸಲಹೆಯಂತೆ ಸೌಮಿತ್ರಿಯು ಎದುರಿಸಿದನು.

03273017a ಅಕೃತಾಹ್ನಿಕಮೇವೈನಂ ಜಿಘಾಂಸುರ್ಜಿತಕಾಶಿನಂ|

03273017c ಶರೈರ್ಜಘಾನ ಸಂಕ್ರುದ್ಧಃ ಕೃತಸಂಜ್ಞೋಽಥ ಲಕ್ಷ್ಮಣಃ||

ಈಗ ಎಚ್ಚರಗೊಂಡ ಲಕ್ಷ್ಮಣನು ಜಯದಿಂದ ಸೊಕ್ಕಿದ್ದ ಶತ್ರುವನ್ನು ಅವನು ಆಹ್ನೀಕವನ್ನು ಮಾಡುವುದರೊಳಗೇ ಕೊಲ್ಲಲು ಬಯಸಿ ಕುಪಿತನಾಗಿ ಶರಗಳಿಂದ ಹೊಡೆದನು.

03273018a ತಯೋಃ ಸಮಭವದ್ಯುದ್ಧಂ ತದಾನ್ಯೋನ್ಯಂ ಜಿಗೀಷತೋಃ|

03273018c ಅತೀವ ಚಿತ್ರಮಾಶ್ಚರ್ಯಂ ಶಕ್ರಪ್ರಹ್ಲಾದಯೋರಿವ||

ಆಗ ಅನ್ಯೋನ್ಯರನ್ನು ಜಯಿಸಲು ಬಯಸಿದ ಅವರೀರ್ವರ ನಡುವೆ, ಶಕ್ರ-ಪ್ರಹ್ಲಾದರ ನಡುವೆ ನಡೆದಂತಹ ಅತೀವವಾದ, ವಿಚಿತ್ರವೂ ಆಶ್ಚರ್ಯವೂ ಆದ ಯುದ್ಧವು ನಡೆಯಿತು.

03273019a ಅವಿಧ್ಯದಿಂದ್ರಜಿತ್ತೀಕ್ಷ್ಣೈಃ ಸೌಮಿತ್ರಿಂ ಮರ್ಮಭೇದಿಭಿಃ|

03273019c ಸೌಮಿತ್ರಿಶ್ಚಾನಲಸ್ಪರ್ಶೈರವಿಧ್ಯದ್ರಾವಣಿಂ ಶರೈಃ||

ಇಂದ್ರಜಿತುವು ಸೌಮಿತ್ರಿಯನ್ನು ತೀಕ್ಷ್ಣವಾದ ಮರ್ಮಭೇದಿ ಶರಗಳಿಂದ ಚುಚ್ಚಲು ಸೌಮಿತ್ರಿಯು ಮುಟ್ಟಲು ಬೆಂಕಿಯಂತಿರುವ ಶರಗಳಿಂದ ರಾವಣಿಯನ್ನು ಹೊಡೆದನು.

03273020a ಸೌಮಿತ್ರಿಶರಸಂಸ್ಪರ್ಶಾದ್ರಾವಣಿಃ ಕ್ರೋಧಮೂರ್ಚಿತಃ|

03273020c ಅಸೃಜಲ್ಲಕ್ಷ್ಮಣಾಯಾಷ್ಟೌ ಶರಾನಾಶೀವಿಷೋಪಮಾನ್||

ಸೌಮಿತ್ರಿಯ ಬಾಣಗಳು ತಾಗಿ ಕ್ರೋಧಮೂರ್ಛಿತನಾದ ರಾವಣಿಯು ಲಕ್ಷ್ಮಣನ ಮೇಲೆ ವಿಷಪೂರಿತ ಸರ್ಪಗಳಂತಿರುವ ಬಾಣಗಳನ್ನು ಪ್ರಯೋಗಿಸಿದನು.

03273021a ತಸ್ಯಾಸೂನ್ಪಾವಕಸ್ಪರ್ಶೈಃ ಸೌಮಿತ್ರಿಃ ಪತ್ರಿಭಿಸ್ತ್ರಿಭಿಃ|

03273021c ಯಥಾ ನಿರಹರದ್ವೀರಸ್ತನ್ಮೇ ನಿಗದತಃ ಶೃಣು||

ಸೌಮಿತ್ರಿಯು ಹೇಗೆ ಪುಕ್ಕಗಳಿರುವ, ಮುಟ್ಟಲು ಬೆಂಕಿಯಂತಿರುವ ಮೂರು ಬಾಣಗಳಿಂದ ಆ ವೀರನನ್ನು ಕೊಂದನೆಂದು ನಾನು ಹೇಳುವುದನ್ನು ಕೇಳು.

03273022a ಏಕೇನಾಸ್ಯ ಧನುಷ್ಮಂತಂ ಬಾಹುಂ ದೇಹಾದಪಾತಯತ್|

03273022c ದ್ವಿತೀಯೇನ ಸನಾರಾಚಂ ಭುಜಂ ಭೂಮೌ ನ್ಯಪಾತಯತ್||

ಒಂದರಿಂದ ಧನುಸ್ಸನ್ನು ಹಿಡಿದಿದ್ದ ಬಾಹುವನ್ನು ದೇಹದಿಂದ ಬೀಳಿಸಿದನು. ಎರಡನೆಯದರಿಂದ ಉಕ್ಕಿನ ಬಾಣಗಳನ್ನು ಹಿಡಿದಿದ್ದ ಭುಜವನ್ನು ಧರೆಗೆ ಬೀಳಿಸಿದನು.

03273023a ತೃತೀಯೇನ ತು ಬಾಣೇನ ಪೃಥುಧಾರೇಣ ಭಾಸ್ವತಾ|

03273023c ಜಹಾರ ಸುನಸಂ ಚಾರು ಶಿರೋ ಭ್ರಾಜಿಷ್ಣುಕುಂಡಲಂ||

ಹೊಳೆಯುತ್ತಿರುವ, ಅಗಲ ಮೊನೆಯಿರಿವ ಮೂರನೆಯ ಬಾಣದಿಂದ ಅವನ ಸುಂದರಮೂಗಿನ, ಸುಂದರವಾಗಿದ್ದ ಕುಂಡಲಗಳಿಂದ ಹೊಳೆಯುತ್ತಿದ್ದ ಶಿರವನ್ನು ಕತ್ತರಿಸಿದನು.

03273024a ವಿನಿಕೃತ್ತಭುಜಸ್ಕಂಧಂ ಕಬಂಧಂ ಭೀಮದರ್ಶನಂ|

03273024c ತಂ ಹತ್ವಾ ಸೂತಮಪ್ಯಸ್ತ್ರೈರ್ಜಘಾನ ಬಲಿನಾಂ ವರಃ||

ಭುಜ ಮತ್ತು ತೋಳುಗಳನ್ನು ಕತ್ತರಿಸಲ್ಪಟ್ಟ ಅವನ ದೇಹವು ಭೀಕರವಾಗಿ ಕಂಡಿತು. ಅವನನ್ನು ಕೊಂದನಂತರ ಆ ಬಲಿಗಳಲ್ಲಿ ಶ್ರೇಷ್ಠನು ಅವನ ಸಾರಥಿಯನ್ನೂ ಕೊಂದನು.

03273025a ಲಂಕಾಂ ಪ್ರವೇಶಯಾಮಾಸುರ್ವಾಜಿನಸ್ತಂ ರಥಂ ತದಾ|

03273025c ದದರ್ಶ ರಾವಣಸ್ತಂ ಚ ರಥಂ ಪುತ್ರವಿನಾಕೃತಂ||

ಕುದುರೆಗಳು ರಥವನ್ನು ಲಂಕೆಗೆ ಕೊಂಡೊಯ್ಯಲು ರಾವಣನು ಪುತ್ರನಿಂದ ಬರಿದಾಗಿದ್ದ ಆ ರಥವನ್ನು ನೋಡಿದನು.

03273026a ಸ ಪುತ್ರಂ ನಿಹತಂ ದೃಷ್ಟ್ವಾ ತ್ರಾಸಾತ್ಸಂಭ್ರಾಂತಲೋಚನಃ|

03273026c ರಾವಣಃ ಶೋಕಮೋಹಾರ್ತೋ ವೈದೇಹೀಂ ಹಂತುಮುದ್ಯತಃ||

ಪುತ್ರನು ಹತನಾದುದನ್ನು ನೋಡಿದಾಗ ಅವನ ಕಣ್ಣುಗಳು ಭಯದಿಂದ ಓಲಾಡಿದವು. ಶೋಕಮೋಹಾರ್ತನಾದ ರಾವಣನು ವೈದೇಹಿಯನ್ನು ಕೊಲ್ಲಲು ಮುಂದುವರೆದನು.

03273027a ಅಶೋಕವನಿಕಾಸ್ಥಾಂ ತಾಂ ರಾಮದರ್ಶನಲಾಲಸಾಂ|

03273027c ಖಡ್ಗಮಾದಾಯ ದುಷ್ಟಾತ್ಮಾ ಜವೇನಾಭಿಪಪಾತ ಹ||

ಅಶೋಕವನದಲ್ಲಿ ರಾಮನ ದರ್ಶನಕ್ಕಾಗಿ ಕಾತರಿಸಿ ನಿಂತಿದ್ದ ಅವಳ ಬಳಿಗೆ ದುಷ್ಟಾತ್ಮನು ಖಡ್ಗವನ್ನು ಹಿಡಿದು ಓಡಿಬಂದನು.

03273028a ತಂ ದೃಷ್ಟ್ವಾ ತಸ್ಯ ದುರ್ಬುದ್ಧೇರವಿಂಧ್ಯಃ ಪಾಪನಿಶ್ಚಯಂ|

03273028c ಶಮಯಾಮಾಸ ಸಂಕ್ರುದ್ಧಂ ಶ್ರೂಯತಾಂ ಯೇನ ಹೇತುನಾ||

ಆ ದುರ್ಬುದ್ಧಿಯ ಪಾಪನಿಶ್ಚಯವನ್ನು ಕಂಡ ಅವಿಂಧ್ಯನು ಆ ಸಂಕೃದ್ಧನನ್ನು ಯಾವ ಕಾರಣವನ್ನು ಹೇಳಿ ತಣ್ಣಗಾಗಿಸಿದನು ಎನ್ನುವುದನ್ನು ಕೇಳಬೇಕು.

03273029a ಮಹಾರಾಜ್ಯೇ ಸ್ಥಿತೋ ದೀಪ್ತೇ ನ ಸ್ತ್ರಿಯಂ ಹಂತುಮರ್ಹಸಿ|

03273029c ಹತೈವೈಷಾ ಯದಾ ಸ್ತ್ರೀ ಚ ಬಂಧನಸ್ಥಾ ಚ ತೇ ಗೃಹೇ||

03273030a ನ ಚೈಷಾ ದೇಹಭೇದೇನ ಹತಾ ಸ್ಯಾದಿತಿ ಮೇ ಮತಿಃ|

“ಮಹಾರಾಜನಾಗಿ ಬೆಳಗುವ ಸ್ಥಿತಿಯಲ್ಲಿರುವವನು ಸ್ತ್ರೀಯನ್ನು ಕೊಲ್ಲಬಾರದು. ನಿನ್ನ ಗೃಹದಲ್ಲಿ ಬಂಧಿಯಾಗಿರುವ ಸ್ತ್ರೀಯು ಹತಳಾದಂತೆ. ದೇಹದಿಂದ ಬೇರೆಯಾಗಿರದಿದ್ದರೂ ಹತಳಾದಂತೆ ಎಂದು ನನ್ನ ಮತ.

03273030c ಜಹಿ ಭರ್ತಾರಮೇವಾಸ್ಯಾ ಹತೇ ತಸ್ಮಿನ್ ಹತಾ ಭವೇತ್||

03273031a ನ ಹಿ ತೇ ವಿಕ್ರಮೇ ತುಲ್ಯಃ ಸಾಕ್ಷಾದಪಿ ಶತಕ್ರತುಃ|

03273031c ಅಸಕೃದ್ಧಿ ತ್ವಯಾ ಸೇಂದ್ರಾಸ್ತ್ರಾಸಿತಾಸ್ತ್ರಿದಶಾ ಯುಧಿ||

ಇವಳ ಗಂಡನನ್ನು ಕೊಲ್ಲು. ಅದರಿಂದ ಇವಳು ಹತಳಾಗುತ್ತಾಳೆ. ಸಾಕ್ಷಾತ್ ಶತಕ್ರತುವೂ ಕೂಡ ವಿಕ್ರಮದಲ್ಲಿ ನಿನ್ನ ಸಮನಲ್ಲ. ನೀನು ಯುದ್ಧದಲ್ಲಿ ಅನೇಕ ಬಾರಿ ಇಂದ್ರನನ್ನೂ ತ್ರಿದಶರನ್ನೂ ಭಯಪಡಿಸಿದ್ದೀಯೆ.”

03273032a ಏವಂ ಬಹುವಿಧೈರ್ವಾಕ್ಯೈರವಿಂಧ್ಯೋ ರಾವಣಂ ತದಾ|

03273032c ಕ್ರುದ್ಧಂ ಸಂಶಮಯಾಮಾಸ ಜಗೃಹೇ ಚ ಸ ತದ್ವಚಃ||

ಈ ರೀತಿ ಬಹುವಿಧದ ವಾಕ್ಯಗಳಿಂದ ಅವಿಂಧ್ಯನು ಕೃದ್ಧನಾದ ರಾವಣನನ್ನು ಸಂತಯಿಸಲು ಅವನ ವಚನವನ್ನು ಸ್ವೀಕರಿಸಿದನು.

03273033a ನಿರ್ಯಾಣೇ ಸ ಮತಿಂ ಕೃತ್ವಾ ನಿಧಾಯಾಸಿಂ ಕ್ಷಪಾಚರಃ|

03273033c ಆಜ್ಞಾಪಯಾಮಾಸ ತದಾ ರಥೋ ಮೇ ಕಲ್ಪ್ಯತಾಮಿತಿ||

ಆ ನಿಶಾಚರನು ತಾನೇ ಹೊರಡಲು ನಿಶ್ಚಯಿಸಿದನು. ಖಡ್ಗವನ್ನು ಹಿಡಿದು “ನನ್ನ ರಥವನ್ನು ಸಿದ್ಧಪಡಿಸಿ!” ಎಂದು ಅಜ್ಞಾಪಿಸಿದನು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ಇಂದ್ರಜಿದ್ವಧೇ ತ್ರಿಸಪ್ತತ್ಯಧಿಕದ್ವಿಶತತಮೋಽಧ್ಯಾಯ:|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ಇಂದ್ರಜಿತು ವಧೆಯಲ್ಲಿ ಇನ್ನೂರಾಎಪ್ಪತ್ಮೂರನೆಯ ಅಧ್ಯಾಯವು.

Two Isolated Bright Orange Asian Lily Flowers on White — Stock ...

Kannada translation of Draupadiharana Parva, by Chapter:
  1. ಜಯದ್ರಥಾಗಮನ
  2. ಕೋಟಿಕಾಸ್ಯಪ್ರಶ್ನಃ
  3. ದ್ರೌಪದೀವಾಕ್ಯ
  4. ಜಯದ್ರಥದ್ರೌಪದೀಸಂವಾದ
  5. ದ್ರೌಪದೀಹರಣ
  6. ಪಾರ್ಥಾಗಮನ
  7. ದ್ರೌಪದೀವಾಕ್ಯ
  8. ಜಯದ್ರಥಪಲಾಯನ
  9. ಜಯದ್ರಥವಿಮೋಕ್ಷಣ
  10. ರಾಮೋಪಾಖ್ಯಾನ-ಯುಧಿಷ್ಠಿರಪ್ರಶ್ನಃ
  11. ರಾಮೋಪಾಖ್ಯಾನ-ರಾಮರಾವಣಯೋರ್ಜನ್ಮಕಥನ
  12. ರಾಮೋಪಾಖ್ಯಾನ-ರಾವಣಾದಿವರಪ್ರಾಪ್ತಿಃ
  13. ರಾಮೋಪಾಖ್ಯಾನ-ವಾನರಾದ್ಯುತ್ಪತ್ತಿಃ
  14. ರಾಮೋಪಾಖ್ಯಾನ-ರಾಮವನಾಭಿಗಮನ
  15. ರಾಮೋಪಾಖ್ಯಾನ-ಮಾರೀಚವಧ-ಸೀತಾಪಹರಣ
  16. ರಾಮೋಪಾಖ್ಯಾನ-ಕಬಂಧಹನನ
  17. ರಾಮೋಪಾಖ್ಯಾನ-ತ್ರಿಜಟಾಕೃತಸೀತಾಸಂವಾದಃ
  18. ರಾಮೋಪಾಖ್ಯಾನ-ಸೀತಾರಾವಣಸಂವಾದಃ
  19. ರಾಮೋಪಾಖ್ಯಾನ-ಹನುಮಪ್ರತ್ಯಾಗಮನ
  20. ರಾಮೋಪಾಖ್ಯಾನ-ಸೇತುಬಂಧನ
  21. ರಾಮೋಪಾಖ್ಯಾನ-ಲಂಕಾಪ್ರವೇಶ
  22. ರಾಮೋಪಾಖ್ಯಾನ-ರಾಮರಾವಣದ್ವಂದ್ವಯುದ್ಧಃ
  23. ರಾಮೋಪಾಖ್ಯಾನ-ಕುಂಭಕರ್ಣನಿರ್ಗಮನ
  24. ರಾಮೋಪಾಖ್ಯಾನ-ಕುಂಬಕರ್ಣಾದಿವಧಃ
  25. ರಾಮೋಪಾಖ್ಯಾನ-ಇಂದ್ರಜಿದ್ಯುದ್ಧಃ
  26. ರಾಮೋಪಾಖ್ಯಾನ-ಇಂದ್ರಜಿದ್ವಧಃ
  27. ರಾಮೋಪಾಖ್ಯಾನ-ರಾವಣವಧಃ
  28. ರಾಮೋಪಾಖ್ಯಾನ-ಶ್ರೀರಾಮಾಭಿಷೇಕ
  29. ರಾಮೋಪಾಖ್ಯಾನ-ಯುಧಿಷ್ಠಿರಾಶ್ವಾಸನ
  30. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೧
  31. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೨
  32. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೩
  33. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೪
  34. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೫
  35. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೬
  36. ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೭

Comments are closed.