ಕರ್ಣ ಪರ್ವ
Contents
Toggle೨೪
ತ್ರಿಪುರವಧೋಪಾಖ್ಯಾನ
ದುರ್ಯೋಧನನು ಶಲ್ಯನಿಗೆ ತ್ರಿಪುರವಧೋಪಾಖ್ಯಾನವನ್ನು ಹೇಳಲು ಪ್ರಾರಂಭಿಸಿದುದು (೧-೩). ದೈತ್ಯ ತಾರಕನ ಮೂರು ಮಕ್ಕಳು – ತಾರಾಕ್ಷ, ಕಮಲಾಕ್ಷ ಮತ್ತು ವಿದ್ಯುನ್ಮಾಲೀ – ಇವರ ತಪಸ್ಸು, ಬ್ರಹ್ಮನಿಂದ ವರ (೪-೧೨). ಮಯನಿಂದ ತ್ರಿಪುರ ನಿರ್ಮಾಣ ಮತ್ತು ದೈತ್ಯರ ರಾಜ್ಯಭಾರ (೧೩-೨೨). ತಾರಕಾಕ್ಷನ ಮಗ ಹರಿಯು ಬ್ರಹ್ಮನಿಂದ ವರವನ್ನು ಪಡೆದು ಮೃತರನ್ನು ಜೀವಿಸಬಲ್ಲ ಒಂದು ಬಾವಿಯನ್ನು ತ್ರಿಪುರದಲ್ಲಿ ನಿರ್ಮಿಸಿದುದು (೨೩-೨೭). ದೈತ್ಯರು ಲೋಭ-ಮೋಹಗಳಿಗೊಳಗಾಗಿ ಎಲ್ಲೆಡೆ ತೊಂದರೆಯನ್ನುಂಟುಮಾಡಲು ದೇವತೆಗಳು ಬ್ರಹ್ಮನಲ್ಲಿ ಮೊರೆಯಿಟ್ಟಿದುದು (೨೮-೩೨). ಬ್ರಹ್ಮನ ಸೂಚನೆಯಂತೆ ದೇವತೆಗಳು ಶಿವನ ಶರಣು ಹೋಗಿ ಅವನನ್ನು ಸ್ತುತಿಸಿದುದು (೩೩-೫೧). “ಸುರಶತ್ರುಗಳಾದ ಆ ದೈತ್ಯರನ್ನು ನಾನೊಬ್ಬನೇ ಸಂಹರಿಸಲು ಶಕ್ಯನಿಲ್ಲ….ನನ್ನ ತೇಜೋಬಲದ ಅರ್ಧದಿಂದ ಅವರನ್ನು ಸಂಹರಿಸಿ!” ಎಂದು ಶಿವನು ಹೇಳಿದುದು (೫೨-೬೦). “ನಿನ್ನ ಅರ್ಧತೇಜಸ್ಸನ್ನೂ ಧರಿಸಲು ನಾವು ಶಕ್ಯರಿಲ್ಲ, ನೀನೇ ನಮ್ಮೆಲ್ಲರ ಬಲಗಳಿಂದ ಶತ್ರುಗಳನ್ನು ಸಂಹರಿಸು!” ಎಂದು ದೇವತೆಗಳು ಕೇಳಿಕೊಳ್ಳಲು ಶಿವನು ಒಪ್ಪಿ, ಬಲದಲ್ಲಿ ವೃದ್ಧಿಯಾಗಿ ಮಹಾದೇವನೆನಿಸಿಕೊಂಡಿದುದು (೬೧-೬೩). ದೇವತೆಗಳು ಶಿವನಿಗೆ ಯುದ್ಧರಥ ಮತ್ತು ಆಯುಧಗಳನ್ನು ಕಲ್ಪಿಸಿದುದು (೬೪-೯೨). “ನಿಮ್ಮಲ್ಲಿ ನನಗಿಂಥಲೂ ಶ್ರೇಷ್ಠನಾದವನನ್ನು ಸಾರಥಿಯನ್ನಾಗಿ ಮಾಡಿ!” ಎಂದು ಶಿವನು ದೇವತೆಗಳಿಗೆ ಹೇಳಲು, ಅವರು ಬ್ರಹ್ಮನನ್ನು ಸಾರಥಿಯಾಗಲು ಒಪ್ಪಿಸಿದುದು (೯೩-೧೦೮). ಮಹೇಶ್ವರನು ಕ್ರೋಧದಿಂದ ತ್ರಿಪುರವನ್ನು ಸುಟ್ಟುಹಾಕಿದುದು (೧೦೯-೧೨೩). ಬ್ರಹ್ಮನು ಶಿವನಿಗೆ ಹೇಗೋ ಹಾಗೆ ನೀನೂ ಕೂಡ ಕರ್ಣನಿಗೆ ಸಾರಥಿಯಾಗು ಎಂದು ದುರ್ಯೋಧನನು ಶಲ್ಯನಲ್ಲಿ ಕೇಳಿಕೊಳ್ಳುವುದು (೧೨೪-೧೨೮). ಜಮದಗ್ನಿಯ ಮಗ ರಾಮನು ಆಯುಧಗಳಿಗಾಗಿ ಶಿವನ ಕುರತು ತಪಸ್ಸನ್ನಾಚರಿಸುವುದು; ಶಿವನು ನೀನು ಪವಿತ್ರನಾದ ನಂತರ ಆಯುಧಗಳನ್ನು ಪಡೆಯುವೆಯೆಂದ ಹೇಳಿದುದು (೧೨೯-೧೪೧). ದೈತ್ಯರ ಬಾಧೆಯನ್ನು ತಾಳದೆ ದೇವತೆಗಳು ಪರಮೇಶ್ವರನನ್ನು ಮೊರೆಹೊಗಲು, ಅವನು ದೈತ್ಯರನ್ನು ಸೋಲಿಸಲು ರಾಮನಿಗೆ ಹೇಳುವುದು (೧೪೨-೧೪೬). “ಅಸ್ತ್ರವನ್ನೇ ತಿಳಿಯದಿರುವ ನಾನು ದೈತ್ಯರೊಡನೆ ಹೇಗೆ ಹೋರಾಡಲಿ?” ಎಂದು ರಾಮನು ಕೇಳಲು ಶಿವನು “ನನ್ನ ಅನುಧ್ಯಾನದಿಂದ ನೀನು ದಾನವರನ್ನು ಗೆಲ್ಲುತ್ತೀಯೆ!” ಎಂದು ಹರಸಿ ಕಳುಹಿಸಿದುದು (೧೪೭-೧೪೯). ರಾಮನು ತನ್ನ ಸ್ಪರ್ಷಸಮಾನ ಪ್ರಹಾರಗಳಿಂದಲೇ ದಾನವರನ್ನು ಸಂಹರಿಸಿದುದು (೧೫೦-೧೫೨). ಶಿವನು ಆಗ “ಶಸ್ತ್ರಗಳ ನಿಪಾತಗಳಿಂದ ನಿನ್ನ ಶರೀರದಲ್ಲಿ ಆಗಿರುವ ಗಾಯಗಳಿಂದ ಮನುಷ್ಯಸಂಬಧವಾದ ನಿನ್ನ ಕರ್ಮಗಳೆಲ್ಲವೂ ಕಳೆದುಹೋದವು! ಪವಿತ್ರನಾಗಿದ್ದೀಯೆ!” ಎಂದು ಹೇಳಿ ರಾಮನಿಗೆ ದಿವ್ಯಾಸ್ತ್ರಗಳನ್ನಿತ್ತುದು (೧೫೩-೧೫೮). ಕರ್ಣನಲ್ಲಿ ಸ್ವಲ್ಪವಾದರೂ ದೋಷಗಳಿದ್ದಿದ್ದರೆ ಪರಶರಾಮನು ಅವನಿಗೆ ಅಸ್ತ್ರವಿದ್ಯೆಯನ್ನು ನೀಡುತ್ತಿರಲಿಲ್ಲ ಎಂದು ದುರ್ಯೋಧನನು ಶಲ್ಯನಿಗೆ ಹೇಳಿದುದು (೧೫೯-೧೬೧).
08024001 ದುರ್ಯೋಧನ ಉವಾಚ|
08024001a ಭೂಯ ಏವ ತು ಮದ್ರೇಶ ಯತ್ತೇ ವಕ್ಷ್ಯಾಮಿ ತಚ್ಚೃಣು|
08024001c ಯಥಾ ಪುರಾ ವೃತ್ತಮಿದಂ ಯುದ್ಧೇ ದೇವಾಸುರೇ ವಿಭೋ||
ದುರ್ಯೋಧನನು ಹೇಳಿದನು: “ಮದ್ರೇಶ! ವಿಭೋ! ಹಿಂದೆ ದೇವಾಸುರ ಯುದ್ಧದಲ್ಲಿ ನಡೆದುದನ್ನು ಯಥಾವತ್ತಾಗಿ ಹೇಳುತ್ತೇನೆ ಕೇಳು!
08024002a ಯದುಕ್ತವಾನ್ಪಿತುರ್ಮಹ್ಯಂ ಮಾರ್ಕಂಡೇಯೋ ಮಹಾನೃಷಿಃ|
08024002c ತದಶೇಷೇಣ ಬ್ರುವತೋ ಮಮ ರಾಜರ್ಷಿಸತ್ತಮ|
08024002e ತ್ವಂ ನಿಬೋಧ ನ ಚಾಪ್ಯತ್ರ ಕರ್ತವ್ಯಾ ತೇ ವಿಚಾರಣಾ||
ಮಹಾನ್ ಋಷಿ ಮಾರ್ಕಂಡೇಯನು ನನ್ನ ತಂದೆಗೆ ಹೇಗೆ ಹೇಳಿದ್ದನೋ ಅದನ್ನು ಸಂಪೂರ್ಣವಾಗಿ ಹಾಗೆಯೇ ಹೇಳುತ್ತೇನೆ. ರಾಜರ್ಷಿಸತ್ತಮ! ಇದನ್ನು ಹಾಗೆಯೇ ಕೇಳು. ವಿಚಾರಮಾಡಬೇಡ!
08024003a ದೇವಾನಾಮಸುರಾಣಾಂ ಚ ಮಹಾನಾಸೀತ್ಸಮಾಗಮಃ|
08024003c ಬಭೂವ ಪ್ರಥಮೋ ರಾಜನ್ಸಂಗ್ರಾಮಸ್ತಾರಕಾಮಯಃ|
08024003e ನಿರ್ಜಿತಾಶ್ಚ ತದಾ ದೈತ್ಯಾ ದೈವತೈರಿತಿ ನಃ ಶ್ರುತಂ||
ರಾಜನ್! ದೇವತೆಗಳ ಅಸುರರ ಮಹಾ ಸಮಾಗಮವಾಗಿತ್ತು. ಪ್ರಥಮವಾಗಿ ತಾರಕಾಮಯ ಸಂಗ್ರಾಮವು ನಡೆಯಿತು. ದೇವತೆಗಳಿಂದ ದೈತ್ಯರು ಸೋತರೆಂದು ನಾವು ಕೇಳಿದ್ದೇವೆ.
08024004a ನಿರ್ಜಿತೇಷು ಚ ದೈತ್ಯೇಷು ತಾರಕಸ್ಯ ಸುತಾಸ್ತ್ರಯಃ|
08024004c ತಾರಾಕ್ಷಃ ಕಮಲಾಕ್ಷಶ್ಚ ವಿದ್ಯುನ್ಮಾಲೀ ಚ ಪಾರ್ಥಿವ||
08024005a ತಪ ಉಗ್ರಂ ಸಮಾಸ್ಥಾಯ ನಿಯಮೇ ಪರಮೇ ಸ್ಥಿತಾಃ|
08024005c ತಪಸಾ ಕರ್ಶಯಾಮಾಸುರ್ದೇಹಾನ್ಸ್ವಾಂ ಶತ್ರುತಾಪನ||
ಪಾರ್ಥಿವ! ಶತ್ರುತಾಪನ! ದೈತ್ಯರು ಸೋಲಲು ತಾರಕನ ಮೂವರು ಮಕ್ಕಳು – ತಾರಾಕ್ಷ, ಕಮಲಾಕ್ಷ ಮತ್ತು ವಿದ್ಯುನ್ಮಾಲೀ- ಇವರು ಉಗ್ರ ತಪಸ್ಸನ್ನು ಕೈಗೊಂಡು ಪರಮ ನಿಯಮಗಳನ್ನು ಪಾಲಿಸುತ್ತಾ ತಮ್ಮ ದೇಹಗಳನ್ನು ತಪಸ್ಸಿನಿಂದ ಕೃಶಗೊಳಿಸತೊಡಗಿದರು.
08024006a ದಮೇನ ತಪಸಾ ಚೈವ ನಿಯಮೇನ ಚ ಪಾರ್ಥಿವ|
08024006c ತೇಷಾಂ ಪಿತಾಮಹಃ ಪ್ರೀತೋ ವರದಃ ಪ್ರದದೌ ವರಾನ್||
ಪಾರ್ಥಿವ! ಅವರ ದಮ, ತಪಸ್ಸು, ನಿಯಮಗಳಿಂದ ವರದ ಪಿತಾಮಹನು ಪ್ರೀತನಾಗಿ ಅವರಿಗೆ ವರಗಳನ್ನಿತ್ತನು.
08024007a ಅವಧ್ಯತ್ವಂ ಚ ತೇ ರಾಜನ್ಸರ್ವಭೂತೇಷು ಸರ್ವದಾ|
08024007c ಸಹಿತಾ ವರಯಾಮಾಸುಃ ಸರ್ವಲೋಕಪಿತಾಮಹಂ||
ರಾಜನ್! ಅವರು ಒಟ್ಟಿಗೇ ಸರ್ವಲೋಕಪಿತಾಮಹನಲ್ಲಿ ಸರ್ವಭೂತಗಳಿಂದ ಸರ್ವದಾ ಅವಧ್ಯತ್ವವನ್ನು ವರವನ್ನಾಗಿ ಕೇಳಿದರು.
08024008a ತಾನಬ್ರವೀತ್ತದಾ ದೇವೋ ಲೋಕಾನಾಂ ಪ್ರಭುರೀಶ್ವರಃ|
08024008c ನಾಸ್ತಿ ಸರ್ವಾಮರತ್ವಂ ಹಿ ನಿವರ್ತಧ್ವಮತೋಽಸುರಾಃ|
08024008e ವರಮನ್ಯಂ ವೃಣೀಧ್ವಂ ವೈ ಯಾದೃಶಂ ಸಂಪ್ರರೋಚತೇ||
ಅವರಿಗೆ ದೇವ ಲೋಕಗಳ ಪ್ರಭು ಈಶ್ವರನು ಹೇಳಿದನು: “ಅಮರತ್ವವು ಎಲ್ಲರಿಗೂ ಇಲ್ಲ. ಆದುದರಿಂದ ಅಸುರರೇ. ಅದನ್ನು ಹಿಂದೆ ತೆಗೆದುಕೊಳ್ಳಿ. ನಿಮಗೆ ಇಷ್ಟವಾದ, ಇದಕ್ಕೆ ಸಮನಾದ ಬೇರೆ ವರವನ್ನು ಬೇಡಿಕೊಳ್ಳಿ.”
08024009a ತತಸ್ತೇ ಸಹಿತಾ ರಾಜನ್ಸಂಪ್ರಧಾರ್ಯಾಸಕೃದ್ಬಹು|
08024009c ಸರ್ವಲೋಕೇಶ್ವರಂ ವಾಕ್ಯಂ ಪ್ರಣಮ್ಯೈನಮಥಾಬ್ರುವನ್||
ರಾಜನ್! ಅನಂತರ ಅವರು ಒಟ್ಟಿಗೇ ಬಹಳ ಸಮಾಲೋಚನೆಮಾಡಿ ಸರ್ವಲೋಕೇಶ್ವರನಿಗೆ ಈ ಪ್ರೀತಿಯ ಮಾತುಗಳನ್ನಾಡಿದರು:
08024010a ಅಸ್ಮಾಕಂ ತ್ವಂ ವರಂ ದೇವ ಪ್ರಯಚ್ಚೇಮಂ ಪಿತಾಮಹ|
08024010c ವಯಂ ಪುರಾಣಿ ತ್ರೀಣ್ಯೇವ ಸಮಾಸ್ಥಾಯ ಮಹೀಮಿಮಾಂ|
08024010e ವಿಚರಿಷ್ಯಾಮ ಲೋಕೇಽಸ್ಮಿಂಸ್ತ್ವತ್ಪ್ರಸಾದಪುರಸ್ಕೃತಾಃ||
“ದೇವ! ಪಿತಾಮಹ! ನಾವು ನಿನ್ನಿಂದ ಈ ವರವನ್ನು ಕೇಳಿಕೊಳ್ಳುತ್ತಿದ್ದೇವೆ. ನಾವು ಮೂರು ಪುರಗಳನ್ನು ನಿರ್ಮಿಸಿ ಅವುಗಳಲ್ಲಿದ್ದುಕೊಂಡು ಈ ಮಹಿ-ಲೋಕಗಳನ್ನು ನಿನ್ನ ಪ್ರಸಾದದಿಂದ ಸುತ್ತುವರೆಯುತ್ತೇವೆ.
08024011a ತತೋ ವರ್ಷಸಹಸ್ರೇ ತು ಸಮೇಷ್ಯಾಮಃ ಪರಸ್ಪರಂ|
08024011c ಏಕೀಭಾವಂ ಗಮಿಷ್ಯಂತಿ ಪುರಾಣ್ಯೇತಾನಿ ಚಾನಘ||
ಒಂದು ಸಾವಿರ ವರ್ಷಗಳು ಕಳೆದನಂತರ ನಾವು ಪರಸ್ಪರರನ್ನು ಒಟ್ಟಾಗಿ ಸೇರುತ್ತೇವೆ. ಅನಘ! ನಮ್ಮ ತ್ರಿಪುರಗಳೂ ಏಕೀಭಾವವನ್ನು ಹೊಂದುತ್ತವೆ.
08024012a ಸಮಾಗತಾನಿ ಚೈತಾನಿ ಯೋ ಹನ್ಯಾದ್ಭಗವಂಸ್ತದಾ|
08024012c ಏಕೇಷುಣಾ ದೇವವರಃ ಸ ನೋ ಮೃತ್ಯುರ್ಭವಿಷ್ಯತಿ|
08024012e ಏವಮಸ್ತ್ವಿತಿ ತಾನ್ದೇವಃ ಪ್ರತ್ಯುಕ್ತ್ವಾ ಪ್ರಾವಿಶದ್ದಿವಂ||
ಭಗವನ್! ಅವುಗಳು ಒಂದಾದಾಗ ಒಂದೇ ಬಾಣದಿಂದ ದೇವವರನು ಹೊಡೆದರೆ ಅದೇ ನಮಗೆ ಮೃತ್ಯುವಾಗುತ್ತದೆ.” ಅವರಿಗೆ ಹಾಗೆಯೇ ಆಗಲೆಂದು ಹೇಳಿ ದೇವನು ಸ್ವರ್ಗಕ್ಕೆ ಹೊರಟುಹೋದನು.
08024013a ತೇ ತು ಲಬ್ಧವರಾಃ ಪ್ರೀತಾಃ ಸಂಪ್ರಧಾರ್ಯ ಪರಸ್ಪರಂ|
08024013c ಪುರತ್ರಯವಿಸೃಷ್ಟ್ಯರ್ಥಂ ಮಯಂ ವವ್ರುರ್ಮಹಾಸುರಂ|
08024013e ವಿಶ್ವಕರ್ಮಾಣಮಜರಂ ದೈತ್ಯದಾನವಪೂಜಿತಂ||
ವರಗಳನ್ನು ಪಡೆದು ಪ್ರೀತರಾದ ಅವರು ಪರಸ್ಪರರಲ್ಲಿ ಸಮಾಲೋಚಿಸಿ ಮೂರು ಪುರಗಳನ್ನು ಸೃಷ್ಟಿಸಲೋಸುಗ ಅಜರ, ದೈತ್ಯದಾನವ ಪೂಜಿತ ವಿಶ್ವಕರ್ಮ ಮಹಾಸುರ ಮಯನನ್ನು ಆಮಂತ್ರಿಸಿದರು.
08024014a ತತೋ ಮಯಃ ಸ್ವತಪಸಾ ಚಕ್ರೇ ಧೀಮಾನ್ಪುರಾಣಿ ಹ|
08024014c ತ್ರೀಣಿ ಕಾಂಚನಂ ಏಕಂ ತು ರೌಪ್ಯಂ ಕಾರ್ಷ್ಣಾಯಸಂ ತಥಾ||
ಆಗ ಧೀಮಾನ್ ಮಯನು ತನ್ನದೇ ತಪಸ್ಸಿನಿಂದ ಮೂರು ಪುರಗಳನ್ನು – ಒಂದು ಕಾಂಚನ ಪುರ, ಇನ್ನೊಂದು ಬೆಳ್ಳಿಯ ಪುರ ಮತ್ತು ಇನ್ನೊಂದು ಕಬ್ಬಿಣದ ಪುರವನ್ನು ರಚಿಸಿದನು.
08024015a ಕಾಂಚನಂ ದಿವಿ ತತ್ರಾಸೀದಂತರಿಕ್ಷೇ ಚ ರಾಜತಂ|
08024015c ಆಯಸಂ ಚಾಭವದ್ಭೂಮೌ ಚಕ್ರಸ್ಥಂ ಪೃಥಿವೀಪತೇ||
ಪೃಥಿವೀಪತೇ! ಕಾಂಚನ ಪುರವು ದಿವಿಯಲ್ಲಿ, ಬೆಳ್ಳಿಯದು ಅಂತರಿಕ್ಷದಲ್ಲಿ ಮತ್ತು ಕಬ್ಬಿಣದು ಸುತ್ತುತ್ತಿರುವ ಚಕ್ರದ ಮಧ್ಯದಲ್ಲಿ ಭೂಮಿಯಮೇಲಿದ್ದಿತು.
08024016a ಏಕೈಕಂ ಯೋಜನಶತಂ ವಿಸ್ತಾರಾಯಾಮಸಮ್ಮಿತಂ|
08024016c ಗೃಹಾಟ್ಟಾಟ್ಟಾಲಕಯುತಂ ಬೃಹತ್ಪ್ರಾಕಾರತೋರಣಂ||
ಒಂದೊಂದು ಪುರಗಳೂ ವಿಸ್ತಾರ ಆಯಾಮಗಳಲ್ಲಿ ನೂರು ನೂರು ಯೋಜನಗಳಷ್ಟಿದ್ದವು. ಹಲವಾರು ಉಪ್ಪರಿಗೆಗಳುಳ್ಳ ಮನೆಗಳಿಂದಲೂ, ಬೃಹದಾಕಾರದ ಪ್ರಾಕಾರಗಳಿಂದಲೂ ತೋರಣಗಳಿಂದವೂ ಕೂಡಿದ್ದವು.
08024017a ಗುಣಪ್ರಸವಸಂಬಾಧಮಸಂಬಾಧಮನಾಮಯಂ|
08024017c ಪ್ರಾಸಾದೈರ್ವಿವಿಧೈಶ್ಚೈವ ದ್ವಾರೈಶ್ಚಾಪ್ಯುಪಶೋಭಿತಂ||
ವಿವಿದ ಕಟ್ಟಡಗಳಿಂದಲೂ ದ್ವಾರಗಳಿಂದಲೂ ಉಪಶೋಭಿತ ಆ ಪುರಗಳಲ್ಲಿ ವಿಶಾಲ ರಾಜಮಾರ್ಗಗಳಿಂದಾಗಿ ಇಕ್ಕಟ್ಟಾಗಿರಲಿಲ್ಲ.
08024018a ಪುರೇಷು ಚಾಭವನ್ರಾಜನ್ರಾಜಾನೋ ವೈ ಪೃಥಕ್ ಪೃಥಕ್|
08024018c ಕಾಂಚನಂ ತಾರಕಾಕ್ಷಸ್ಯ ಚಿತ್ರಮಾಸೀನ್ಮಹಾತ್ಮನಃ|
08024018e ರಾಜತಂ ಕಮಲಾಕ್ಷಸ್ಯ ವಿದ್ಯುನ್ಮಾಲಿನ ಆಯಸಂ||
ರಾಜನ್! ಆ ಪುರಗಳಲ್ಲಿ ಬೇರೆ ಬೇರೆ ರಾಜರಿದ್ದರು. ವಿಚಿತ್ರ ಕಾಂಚನಪುರಕ್ಕೆ ಮಹಾತ್ಮ ತಾರಕಾಕ್ಷನು ರಾಜನಾಗಿದ್ದನು, ಬೆಳ್ಳಿಯ ಪುರಕ್ಕೆ ಕಮಲಾಕ್ಷ ಮತ್ತು ಉಕ್ಕಿನ ಪುರಕ್ಕೆ ವಿದ್ಯುನ್ಮಾಲಿಯು ರಾಜರಾಗಿದ್ದರು.
08024019a ತ್ರಯಸ್ತೇ ದೈತ್ಯರಾಜಾನಸ್ತ್ರೀಽಲ್ಲೋಕಾನಾಶು ತೇಜಸಾ|
08024019c ಆಕ್ರಮ್ಯ ತಸ್ಥುರ್ವರ್ಷಾಣಾಂ ಪೂಗಾನ್ನಾಮ ಪ್ರಜಾಪತಿಃ||
ಆ ಮೂವರು ದೈತ್ಯ ರಾಜರೂ ತಮ್ಮ ಅಸ್ತ್ರತೇಜಸ್ಸಿನಿಂದ ಮೂರು ಲೋಕಗಳನ್ನೂ ಆಕ್ರಮಣಿಸಿ ಅಧಿಕಾರವನ್ನು ಸ್ಥಾಪಿಸಿ ಪ್ರಜಾಪತಿಯೇ ಯಾರೆನ್ನುವಂತೆ ಇದ್ದರು.
08024020a ತೇಷಾಂ ದಾನವಮುಖ್ಯಾನಾಂ ಪ್ರಯುತಾನ್ಯರ್ಬುದಾನಿ ಚ|
08024020c ಕೋಟ್ಯಶ್ಚಾಪ್ರತಿವೀರಾಣಾಂ ಸಮಾಜಗ್ಮುಸ್ತತಸ್ತತಃ|
08024020e ಮಹದೈಶ್ವರ್ಯಮಿಚ್ಚಂತಸ್ತ್ರಿಪುರಂ ದುರ್ಗಮಾಶ್ರಿತಾಃ||
ಮಹದೈಶ್ವರ್ಯವನ್ನು ಮತ್ತು ಸುರಕ್ಷಿತ ಆಶ್ರಯವನ್ನು ಬಯಸಿದ ಕೋಟಿಗಟ್ಟಲೆ ದಾನವರು ಆ ದಾನವಮುಖ್ಯರ ಬಳಿ ಬಂದು ಸೇರಿಕೊಂಡರು.
08024021a ಸರ್ವೇಷಾಂ ಚ ಪುನಸ್ತೇಷಾಂ ಸರ್ವಯೋಗವಹೋ ಮಯಃ|
08024021c ತಮಾಶ್ರಿತ್ಯ ಹಿ ತೇ ಸರ್ವೇ ಅವರ್ತಂತಾಕುತೋಭಯಾಃ||
ಅವರೆಲ್ಲರಿಗೂ ಪುನಃ ಮಯನು ಸರ್ವವಸ್ತುಗಳನ್ನೂ ಒದಗಿಸಿಕೊಟ್ಟನು. ಅವನನ್ನು ಆಶ್ರಯಿಸಿ ಸರ್ವರೂ ನಿರ್ಭಯರಾಗಿದ್ದರು.
08024022a ಯೋ ಹಿ ಯಂ ಮನಸಾ ಕಾಮಂ ದಧ್ಯೌ ತ್ರಿಪುರಸಂಶ್ರಯಃ|
08024022c ತಸ್ಮೈ ಕಾಮಂ ಮಯಸ್ತಂ ತಂ ವಿದಧೇ ಮಾಯಯಾ ತದಾ||
ತ್ರಿಪುರಗಳಲ್ಲಿ ಆಶ್ರಯಪಡೆದಿದ್ದವರಲ್ಲಿ ಯಾರು ಏನನ್ನು ಮನಸ್ಸಿನಲ್ಲಿ ಬಯಸಿದರೂ ಅವೆಲ್ಲ ಕಾಮನೆಗಳನ್ನೂ ಮಯನು ತನ್ನ ಮಾಯೆಯಿಂದ ಕೊಡುತ್ತಿದ್ದನು.
08024023a ತಾರಕಾಕ್ಷಸುತಶ್ಚಾಸೀದ್ಧರಿರ್ನಾಮ ಮಹಾಬಲಃ|
08024023c ತಪಸ್ತೇಪೇ ಪರಮಕಂ ಯೇನಾತುಷ್ಯತ್ಪಿತಾಮಹಃ||
ತಾರಕಾಕ್ಷನಿಗೆ ಹರಿ ಎಂಬ ಹೆಸರಿನ ಮಹಾಬಲ ಮಗನಿದ್ದನು. ಅವನು ಪರಮ ತಪಸ್ಸನ್ನು ತಪಿಸಿ ಪಿತಾಮಹನನ್ನು ತೃಪ್ತಿಗೊಳಿಸಿದನು.
08024024a ಸ ತುಷ್ಟಮವೃಣೋದ್ದೇವಂ ವಾಪೀ ಭವತು ನಃ ಪುರೇ|
08024024c ಶಸ್ತ್ರೈರ್ವಿನಿಹತಾ ಯತ್ರ ಕ್ಷಿಪ್ತಾಃ ಸ್ಯುರ್ಬಲವತ್ತರಾಃ||
ಅವನು ತುಷ್ಟನಾದ ದೇವನಲ್ಲಿ ಈ ವರವನ್ನು ಕೇಳಿದನು: “ಶಸ್ತ್ರಗಳಿಂದ ಹತರಾದವನ್ನು ಎಲ್ಲಿ ಹಾಕಿದರೆ ಅವರು ಪುನಃ ಇನ್ನೂ ಹೆಚ್ಚಿನ ಬಲವುಳ್ಳವರಾಗಿ ಬದುಕುವರೋ ಅಂಥಹ ಒಂದು ಬಾವಿಯು ನಮ್ಮ ಪುರದಲ್ಲಿ ಇರಲಿ!”
08024025a ಸ ತು ಲಬ್ಧ್ವಾ ವರಂ ವೀರಸ್ತಾರಕಾಕ್ಷಸುತೋ ಹರಿಃ|
08024025c ಸಸೃಜೇ ತತ್ರ ವಾಪೀಂ ತಾಂ ಮೃತಾನಾಂ ಜೀವನೀಂ ಪ್ರಭೋ||
ಪ್ರಭೋ! ಆ ವರವನ್ನು ಪಡೆದ ತಾರಕಾಸುತ ವೀರ ಹರಿಯು ಮೃತರನ್ನು ಜೀವಿತಗೊಳಿಸಬಲ್ಲ ಬಾವಿಯೊಂದನ್ನು ತನ್ನ ಪುರದಲ್ಲಿ ನಿರ್ಮಿಸಿದನು.
08024026a ಯೇನ ರೂಪೇಣ ದೈತ್ಯಸ್ತು ಯೇನ ವೇಷೇಣ ಚೈವ ಹ|
08024026c ಮೃತಸ್ತಸ್ಯಾಂ ಪರಿಕ್ಷಿಪ್ತಸ್ತಾದೃಶೇನೈವ ಜಜ್ಞಿವಾನ್||
ಯಾವ ರೂಪದಲ್ಲಿಯೇ ಅಥವಾ ಯಾವ ವೇಷದಲ್ಲಿಯೇ ಸತ್ತಿರಲಿ ಮೃತನಾದವನನ್ನು ಆ ಬಾವಿಯಲ್ಲಿ ಹಾಕಿದೊಡನೆಯೇ ಅವನು ಅದೇ ರೂಪದಲ್ಲಿ ಬದುಕಿ ಬರುತ್ತಿದ್ದನು.
08024027a ತಾಂ ಪ್ರಾಪ್ಯ ತ್ರೈಪುರಸ್ಥಾಸ್ತು ಸರ್ವಾಽಲ್ಲೋಕಾನ್ಬಬಾಧಿರೇ|
08024027c ಮಹತಾ ತಪಸಾ ಸಿದ್ಧಾಃ ಸುರಾಣಾಂ ಭಯವರ್ಧನಾಃ|
08024027e ನ ತೇಷಾಮಭವದ್ರಾಜನ್ ಕ್ಷಯೋ ಯುದ್ಧೇ ಕಥಂ ಚನ||
ಆ ಬಾವಿಯನ್ನು ಪಡೆದ ತ್ರಿಪುರವಾಸಿಗಳು ಸರ್ವಲೋಕಗಳನ್ನೂ ಬಾಧಿಸಿದರು. ಮಹಾತಪಸ್ಸುಗಳಿಂದ ಸಿದ್ಧಿಗಳನ್ನು ಪಡೆದ ಅವರು ಸುರರ ಭಯವನ್ನು ಹೆಚ್ಚಿಸಿದರು. ರಾಜನ್! ಯುದ್ಧದಲ್ಲಿ ಎಂದೂ ಅವರ ವಿನಾಶವಾಗುತ್ತಿರಲಿಲ್ಲ.
08024028a ತತಸ್ತೇ ಲೋಭಮೋಹಾಭ್ಯಾಮಭಿಭೂತಾ ವಿಚೇತಸಃ|
08024028c ನಿರ್ಹ್ರೀಕಾಃ ಸಂಸ್ಥಿತಿಂ ಸರ್ವೇ ಸ್ಥಾಪಿತಾಂ ಸಮಲೂಲುಪನ್||
ಆಗ ಅವರು ಲೋಭ-ಮೋಹಗಳಿಗೊಳಗಾಗಿ ಬುದ್ಧಿಕಳೆದುಕೊಂಡರು. ನಿರ್ಲಜ್ಜರಾಗಿ ಎಲ್ಲೆಡೆಯೂ ಅನೇಕ ಪ್ರಕಾರದ ತೊಂದರೆಗಳನ್ನು ನೀಡತೊಡಗಿದರು.
08024029a ವಿದ್ರಾವ್ಯ ಸಗಣಾನ್ದೇವಾಂಸ್ತತ್ರ ತತ್ರ ತದಾ ತದಾ|
08024029c ವಿಚೇರುಃ ಸ್ವೇನ ಕಾಮೇನ ವರದಾನೇನ ದರ್ಪಿತಾಃ||
ವರದಾನದಿಂದ ದರ್ಪಿತರಾದ ಅವರು ಅಲ್ಲಲ್ಲಿದ್ದ ದೇವತೆಗಳನ್ನು, ಅವರ ಗಣಗಳೊಂದಿಗೆ ಓಡಿಸಿ ತಮ್ಮ ಮನಸ್ಸಿಗೆ ಬಂದಂತೆ ಸಂಚರಿಸುತ್ತಿದ್ದರು.
08024030a ದೇವಾರಣ್ಯಾನಿ ಸರ್ವಾಣಿ ಪ್ರಿಯಾಣಿ ಚ ದಿವೌಕಸಾಂ|
08024030c ಋಷೀಣಾಮಾಶ್ರಮಾನ್ಪುಣ್ಯಾನ್ಯೂಪಾಂ ಜನಪದಾಂಸ್ತಥಾ|
08024030e ವ್ಯನಾಶಯಂತ ಮರ್ಯಾದಾ ದಾನವಾ ದುಷ್ಟಚಾರಿಣಃ||
ಮರ್ಯಾದೆಗಳನ್ನು ಕಳೆದುಕೊಂಡ ದುಷ್ಟಚಾರೀ ದಾನವರು ದಿವೌಕಸರಿಗೆ ಪ್ರಿಯವಾದ ದೇವಾರಣ್ಯಗಳೆಲ್ಲವನ್ನೂ, ಪುಣ್ಯ ಋಷ್ಯಾಶ್ರಮಗಳನ್ನೂ, ಸುಂದರ ಜನಪದಗಳನ್ನೂ ನಾಶಗೊಳಿಸಿದರು.
08024031a ತೇ ದೇವಾಃ ಸಹಿತಾಃ ಸರ್ವೇ ಪಿತಾಮಹಮರಿಂದಮ|
08024031c ಅಭಿಜಗ್ಮುಸ್ತದಾಖ್ಯಾತುಂ ವಿಪ್ರಕಾರಂ ಸುರೇತರೈಃ||
ಅರಿಂದಮ! ಆ ದೇವತೆಗಳೆಲ್ಲರೂ ಒಟ್ಟಾಗಿ ಸುರೇತರರು ಮಾಡಿದ ಅತ್ಯಾಚಾರಗಳ ಕುರಿತು ಹೇಳಲು ಪಿತಾಮಹನಲ್ಲಿಗೆ ಹೋದರು.
08024032a ತೇ ತತ್ತ್ವಂ ಸರ್ವಮಾಖ್ಯಾಯ ಶಿರಸಾಭಿಪ್ರಣಮ್ಯ ಚ|
08024032c ವಧೋಪಾಯಮಪೃಚ್ಚಂತ ಭಗವಂತಂ ಪಿತಾಮಹಂ||
ಭಗವಂತ ಪಿತಾಮಹನಿಗೆ ಶಿರಸಾ ವಂದಿಸಿ ಎಲ್ಲವನ್ನೂ ತಿಳಿಸಿ, ಅವರ ವಧೆಯ ಉಪಾಯವನ್ನು ಕೇಳಿದರು.
08024033a ಶ್ರುತ್ವಾ ತದ್ಭಗವಾನ್ದೇವೋ ದೇವಾನಿದಮುವಾಚ ಹ|
08024033c ಅಸುರಾಶ್ಚ ದುರಾತ್ಮಾನಸ್ತೇ ಚಾಪಿ ವಿಬುಧದ್ವಿಷಃ|
08024033e ಅಪರಾಧ್ಯಂತಿ ಸತತಂ ಯೇ ಯುಷ್ಮಾನ್ಪೀಡಯಂತ್ಯುತ||
ಅದನ್ನು ಕೇಳಿದ ಭಗವಾನ್ ದೇವನು ದೇವತೆಗಳಿಗೆ ಹೇಳಿದನು: “ಆ ದುರಾತ್ಮ ಅಸುರರು ಬ್ರಹ್ಮದ್ವೇಷಿಗಳು ಕೂಡ. ನಿಮ್ಮನ್ನು ಪೀಡಿಸುವ ಅವರು ಸತತವೂ ಅಪರಾಧಗಳನ್ನೆಸಗುತ್ತಿದ್ದಾರೆ.
08024034a ಅಹಂ ಹಿ ತುಲ್ಯಃ ಸರ್ವೇಷಾಂ ಭೂತಾನಾಂ ನಾತ್ರ ಸಂಶಯಃ|
08024034c ಅಧಾರ್ಮಿಕಾಸ್ತು ಹಂತವ್ಯಾ ಇತ್ಯಹಂ ಪ್ರಬ್ರವೀಮಿ ವಃ||
ನನಗೆ ಸರ್ವಭೂತಗಳೂ ಸಮ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ಅಧರ್ಮಿಗಳನ್ನು ಸಂಹರಿಸಬೇಕು ಎಂದು ನಾನು ಹೇಳಿಕೊಳ್ಳುತ್ತಾ ಬಂದಿದ್ದೇನೆ.
08024035a ತೇ ಯೂಯಂ ಸ್ಥಾಣುಮೀಶಾನಂ ಜಿಷ್ಣುಮಕ್ಲಿಷ್ಟಕಾರಿಣಂ|
08024035c ಯೋದ್ಧಾರಂ ವೃಣುತಾದಿತ್ಯಾಃ ಸ ತಾನ್ ಹಂತಾ ಸುರೇತರಾನ್||
ಆದಿತ್ಯರೇ! ಸ್ಥಾಣು ಜಿಷ್ಣು ಅಕ್ಲಿಷ್ಟಕರ್ಮಿ ಈಶಾನನನ್ನು ನಿಮ್ಮ ಯೋಧನನ್ನಾಗಿ ಆರಿಸಿಕೊಳ್ಳಿ. ಅವನು ಆ ಸುರೇತರರನ್ನು ಸಂಹರಿಸುತ್ತಾನೆ.”
08024036a ಇತಿ ತಸ್ಯ ವಚಃ ಶ್ರುತ್ವಾ ದೇವಾಃ ಶಕ್ರಪುರೋಗಮಾಃ|
08024036c ಬ್ರಹ್ಮಾಣಮಗ್ರತಃ ಕೃತ್ವಾ ವೃಷಾಂಕಂ ಶರಣಂ ಯಯುಃ||
ಅವನ ಈ ಮಾತನ್ನು ಕೇಳಿ ಶಕ್ರನ ನಾಯಕತ್ವದಲ್ಲಿದ್ದ ದೇವತೆಗಳು ಬ್ರಹ್ಮನನ್ನು ಮುಂದೆಮಾಡಿಕೊಂಡು ವೃಷಾಂಕನ ಶರಣು ಹೋದರು.
08024037a ತಪಃ ಪರಂ ಸಮಾತಸ್ಥುರ್ಗೃಣಂತೋ ಬ್ರಹ್ಮ ಶಾಶ್ವತಂ|
08024037c ಋಷಿಭಿಃ ಸಹ ಧರ್ಮಜ್ಞಾ ಭವಂ ಸರ್ವಾತ್ಮನಾ ಗತಾಃ||
ಆ ಧರ್ಮಜ್ಞರು ಋಷಿಗಳೊಂದಿಗೆ ಪರಮ ತಪಸ್ಸನ್ನಾಚರಿಸಿ ಆ ಬ್ರಹ್ಮ, ಶಾಶ್ವತ, ಸರ್ವಾತ್ಮ ಭವನಿಗೆ ಶರಣು ಹೋದರು.
08024038a ತುಷ್ಟುವುರ್ವಾಗ್ಭಿರರ್ಥ್ಯಾಭಿರ್ಭಯೇಷ್ವಭಯಕೃತ್ತಮಂ|
08024038c ಸರ್ವಾತ್ಮಾನಂ ಮಹಾತ್ಮಾನಂ ಯೇನಾಪ್ತಂ ಸರ್ವಮಾತ್ಮನಾ||
08024039a ತಪೋವಿಶೇಷೈರ್ಬಹುಭಿರ್ಯೋಗಂ ಯೋ ವೇದ ಚಾತ್ಮನಃ|
08024039c ಯಃ ಸಾಂಖ್ಯಮಾತ್ಮನೋ ವೇದ ಯಸ್ಯ ಚಾತ್ಮಾ ವಶೇ ಸದಾ||
08024040a ತೇ ತಂ ದದೃಶುರೀಶಾನಂ ತೇಜೋರಾಶಿಮುಮಾಪತಿಂ|
08024040c ಅನನ್ಯಸದೃಶಂ ಲೋಕೇ ವ್ರತವಂತಮಕಲ್ಮಷಂ||
ಸ್ತುತಿ-ಪೂಜೆಗಳಿಗೆ ಸಂತುಷ್ಟನಾಗುವ, ಮಹಾ ಭಯದಲ್ಲಿಯೂ ಅಭಯಪ್ರದನಾಗಿರುವ, ಸರ್ವಾತ್ಮ, ಮಹಾತ್ಮ, ಸರ್ವದಲ್ಲಿಯೂ ತನ್ನನ್ನು ವ್ಯಾಪಿಸಿಕೊಂಡಿರುವ, ಅನೇಕ ವಿಶೇಷ ತಪಸ್ಸುಗಳಿಂದ ಯೋಗಯುಕ್ತನಾಗಿರುವ, ಅತ್ಮನನ್ನು ತಿಳಿದುಕೊಂಡಿರುವ, ಸಾಂಖ್ಯವನ್ನು ತಿಳಿದುಕೊಂಡಿರುವ, ತನ್ನ ಆತ್ಮವನ್ನು ವಶದಲ್ಲಿಟ್ಟುಕೊಂಡಿರುವ, ತೇಜೋರಾಶಿಯಾದ, ಲೋಕದಲ್ಲಿ ಅನನ್ಯಸದೃಶನಾದ, ವ್ರತವಂತನಾದ, ಅಕಲ್ಮಷನಾದ, ಆ ಈಶಾನ ಉಮಾಪತಿಯನ್ನು ಅವರು ನೋಡಿದರು.
08024041a ಏಕಂ ಚ ಭಗವಂತಂ ತೇ ನಾನಾರೂಪಮಕಲ್ಪಯನ್|
08024041c ಆತ್ಮನಃ ಪ್ರತಿರೂಪಾಣಿ ರೂಪಾಣ್ಯಥ ಮಹಾತ್ಮನಿ|
08024041e ಪರಸ್ಪರಸ್ಯ ಚಾಪಶ್ಯನ್ಸರ್ವೇ ಪರಮವಿಸ್ಮಿತಾಃ||
ಆ ಒಬ್ಬನೇ ಭಗವಂತನನ್ನು ಅವರು ನಾನಾರೂಪಗಳಲ್ಲಿ ಕಲ್ಪಿಸಿಕೊಂಡರು. ಆ ಮಹಾತ್ಮರು ತಮ್ಮ ತಮ್ಮಲ್ಲಿಯೇ ಅವನ ಪ್ರತಿಬಿಂಬರೂಪಗಳನ್ನು ಕಂಡರು ಮತ್ತು ಪರಸ್ವರರಲ್ಲಿಯೂ ಅವನನ್ನು ಕಂಡು ಎಲ್ಲರೂ ಪರಮ ವಿಸ್ಮಿತರಾದರು.
08024042a ಸರ್ವಭೂತಮಯಂ ಚೇಶಂ ತಮಜಂ ಜಗತಃ ಪತಿಂ|
08024042c ದೇವಾ ಬ್ರಹ್ಮರ್ಷಯಶ್ಚೈವ ಶಿರೋಭಿರ್ಧರಣೀಂ ಗತಾಃ||
ದೇವತೆಗಳು ಮತ್ತು ಬ್ರಹ್ಮರ್ಷಿಗಳು ಆ ಸರ್ವಭೂತಮಯ ಈಶ ಅಜ ಜಗತ್ಪತಿಯನ್ನು ನೋಡಿ ಶಿರಗಳನ್ನು ಭೂಮಿಯಮೇಲಿಟ್ಟು ನಮಸ್ಕರಿಸಿದರು.
08024043a ತಾನ್ಸ್ವಸ್ತಿವಾಕ್ಯೇನಾಭ್ಯರ್ಚ್ಯ ಸಮುತ್ಥಾಪ್ಯ ಚ ಶಂಕರಃ|
08024043c ಬ್ರೂತ ಬ್ರೂತೇತಿ ಭಗವಾನ್ಸ್ಮಯಮಾನೋಽಭ್ಯಭಾಷತ||
ಸ್ವಸ್ತಿವಾಕ್ಯಗಳಿಂದ ಅವರನ್ನು ಮೇಲೆಬ್ಬಿಸಿ ಭಗವಾನ್ ಶಂಕರನು ನಸುನಗುತ್ತಾ “ಹೇಳಿ! ಹೇಳಿ!” ಎಂದು ನುಡಿದನು.
08024044a ತ್ರ್ಯಂಬಕೇಣಾಭ್ಯನುಜ್ಞಾತಾಸ್ತತಸ್ತೇಽಸ್ವಸ್ಥಚೇತಸಃ|
08024044c ನಮೋ ನಮಸ್ತೇಽಸ್ತು ವಿಭೋ ತತ ಇತ್ಯಬ್ರುವನ್ಭವಂ||
ತ್ರ್ಯಂಬಕನಿಂದ ಅಪ್ಪಣೆಪಡೆದ ಆ ಅಸ್ವಸ್ಥಚೇತಸರು “ನಮೋ ನಮಸ್ತೇಸ್ತು!” ಎಂದು ಭವನಿಗೆ ಹೇಳಿದರು.
08024045a ನಮೋ ದೇವಾತಿದೇವಾಯ ಧನ್ವಿನೇ ಚಾತಿಮನ್ಯವೇ|
08024045c ಪ್ರಜಾಪತಿಮಖಘ್ನಾಯ ಪ್ರಜಾಪತಿಭಿರೀಡ್ಯಸೇ||
“ದೇವಾತಿದೇವನಿಗೆ, ಧನ್ವಿಗೆ, ಅತಿಮನ್ಯುವಿಗೆ, ಪ್ರಜಾಪತಿ ಯಜ್ಞನಾಶನಿಗೆ, ಪ್ರಜಾಪತಿಯಿಂದಲೂ ಸ್ತುತಿಸಲ್ಪಡುವವನಿಗೆ ನಮಸ್ಕಾರ!
08024046a ನಮಃ ಸ್ತುತಾಯ ಸ್ತುತ್ಯಾಯ ಸ್ತೂಯಮಾನಾಯ ಮೃತ್ಯವೇ|
08024046c ವಿಲೋಹಿತಾಯ ರುದ್ರಾಯ ನೀಲಗ್ರೀವಾಯ ಶೂಲಿನೇ||
08024047a ಅಮೋಘಾಯ ಮೃಗಾಕ್ಷಾಯ ಪ್ರವರಾಯುಧಯೋಧಿನೇ|
08024047c ದುರ್ವಾರಣಾಯ ಶುಕ್ರಾಯ ಬ್ರಹ್ಮಣೇ ಬ್ರಹ್ಮಚಾರಿಣೇ||
08024048a ಈಶಾನಾಯಾಪ್ರಮೇಯಾಯ ನಿಯಂತ್ರೇ ಚರ್ಮವಾಸಸೇ|
08024048c ತಪೋನಿತ್ಯಾಯ ಪಿಂಗಾಯ ವ್ರತಿನೇ ಕೃತ್ತಿವಾಸಸೇ||
08024049a ಕುಮಾರಪಿತ್ರೇ ತ್ರ್ಯಕ್ಷಾಯ ಪ್ರವರಾಯುಧಧಾರಿಣೇ|
08024049c ಪ್ರಪನ್ನಾರ್ತಿವಿನಾಶಾಯ ಬ್ರಹ್ಮದ್ವಿಟ್ಸಂಘಘಾತಿನೇ||
ಸ್ತುತ, ಸ್ತುತ್ಯ, ಸ್ತೂಯಮಾನ, ಮೃತ್ಯು, ವಿಲೋಹಿತ, ರುದ್ರ, ನೀಲಗ್ರೀವ, ಶೂಲಿ, ಅಮೋಘ, ಮೃಗಾಕ್ಷ, ಪ್ರವರಾಯುಧಯೋಧಿನಿ, ದುರ್ವಾರ್ಣ, ಶುಕ್ರ, ಬ್ರಹ್ಮ, ಬ್ರಹ್ಮಚಾರಿಣಿ, ಈಶಾನ, ಅಪ್ರಮೇಯ, ನಿಯಂತ್ರಿ, ಚರ್ಮವಾಸಸ, ತಪೋನಿತ್ಯ, ಪಿಂಗ, ವ್ರತಿ, ಕೃತ್ತಿವಾಸಸ, ಕುಮಾರಪಿತು, ತ್ರ್ಯಕ್ಷ, ಪ್ರವರಾಯುಧಧಾರಿಣಿ, ಪ್ರಪನ್ನರ ದುಃಖವನ್ನು ವಿನಾಶಗೊಳಿಸುವವ, ಬ್ರಹ್ಮದ್ವೇಷಿಗಳ ಸಮೂಹ ವಿಧ್ವಂಸಕ - ನಿನಗೆ ನಮಸ್ಕಾರ.
08024050a ವನಸ್ಪತೀನಾಂ ಪತಯೇ ನರಾಣಾಂ ಪತಯೇ ನಮಃ|
08024050c ಗವಾಂ ಚ ಪತಯೇ ನಿತ್ಯಂ ಯಜ್ಞಾನಾಂ ಪತಯೇ ನಮಃ||
ವನಸ್ಪತಿಗಳ ಪತಿ ಮತ್ತು ನರರ ಪತಿಗೆ ನಮಸ್ಕಾರ. ಗೋಪತಿಗೆ, ನಿತ್ಯನಿಗೆ, ಯಜ್ಞಪತಿಗೆ ನಮಸ್ಕಾರ.
08024051a ನಮೋಽಸ್ತು ತೇ ಸಸೈನ್ಯಾಯ ತ್ರ್ಯಂಬಕಾಯೋಗ್ರತೇಜಸೇ|
08024051c ಮನೋವಾಕ್ಕರ್ಮಭಿರ್ದೇವ ತ್ವಾಂ ಪ್ರಪನ್ನಾನ್ಭಜಸ್ವ ನಃ||
ಸೇನಾಸಹಿತನಾದ ನಿನಗೆ ನಮಸ್ಕಾರ! ಉಗ್ರತೇಜಸ್ವಿ, ತ್ರ್ಯಂಬಕನಿಗೆ ನಮಸ್ಕಾರ! ಮನಸ್ಸು, ಮಾತು ಮತ್ತು ಕರ್ಮಗಳಿಂದ ನಿನ್ನನ್ನು ಭಜಿಸುವ ನಮ್ಮನ್ನು ಕಾಪಾಡು!”
08024052a ತತಃ ಪ್ರಸನ್ನೋ ಭಗವಾನ್ಸ್ವಾಗತೇನಾಭಿನಂದ್ಯ ತಾನ್|
08024052c ಪ್ರೋವಾಚ ವ್ಯೇತು ವಸ್ತ್ರಾಸೋ ಬ್ರೂತ ಕಿಂ ಕರವಾಣಿ ವಃ||
ಆಗ ಪ್ರಸನ್ನನಾದ ಭಗವಾನನು ಅವರನ್ನು ಸ್ವಾಗತದೊಂದಿಗೆ ಅಭಿನಂದಿಸಿ “ನಿಮ್ಮ ಭಯವನ್ನು ದೂರಮಾಡಲು ನಾನೇನು ಮಾಡಬೇಕೆಂದು ಹೇಳಿ!” ಎಂದು ಕೇಳಿದನು.
08024053a ಪಿತೃದೇವರ್ಷಿಸಂಘೇಭ್ಯೋ ವರೇ ದತ್ತೇ ಮಹಾತ್ಮನಾ|
08024053c ಸತ್ಕೃತ್ಯ ಶಂಕರಂ ಪ್ರಾಹ ಬ್ರಹ್ಮಾ ಲೋಕಹಿತಂ ವಚಃ||
ಆ ಮಹಾತ್ಮನು ಪಿತೃ-ದೇವ ಸಂಘಗಳಿಗೆ ವರವನ್ನು ನೀಡಲು, ಬ್ರಹ್ಮನು ಶಂಕರನನ್ನು ಸತ್ಕರಿಸಿ ಲೋಕಹಿತವಾದ ಈ ಮಾತನ್ನಾಡಿದನು:
08024054a ತವಾತಿಸರ್ಗಾದ್ದೇವೇಶ ಪ್ರಾಜಾಪತ್ಯಮಿದಂ ಪದಂ|
08024054c ಮಯಾಧಿತಿಷ್ಠತಾ ದತ್ತೋ ದಾನವೇಭ್ಯೋ ಮಹಾನ್ವರಃ||
“ದೇವೇಶ! ನಿನ್ನ ಆದೇಶದಂತೆ ಈ ಪ್ರಜಾಪತಿ ಪದವನ್ನು ವಹಿಸಿಕೊಂಡಿರುವ ನಾನು ದಾನವರಿಗೆ ಮಹಾ ವರವನ್ನು ನೀಡಿದೆನು.
08024055a ತಾನತಿಕ್ರಾಂತಮರ್ಯಾದಾನ್ನಾನ್ಯಃ ಸಂಹರ್ತುಮರ್ಹತಿ|
08024055c ತ್ವಾಮೃತೇ ಭೂತಭವ್ಯೇಶ ತ್ವಂ ಹ್ಯೇಷಾಂ ಪ್ರತ್ಯರಿರ್ವಧೇ||
ಮರ್ಯಾದೆಗಳನ್ನು ಅತಿಕ್ರಮಿಸಿರುವ ಅವರನ್ನು ಸಂಹರಿಸಬೇಕಾಗಿದೆ. ಭೂತಭವ್ಯೇಶ! ನಿನ್ನನ್ನು ಬಿಟ್ಟು ಬೇರೆ ಯಾರೂ ಅವರನ್ನು ಕೊಲ್ಲಲಾರರು. ಆದುದರಿಂದ ನೀನೇ ಅವರ ಶತ್ರುವಾಗಿ ಅವರನ್ನು ವಧಿಸು!
08024056a ಸ ತ್ವಂ ದೇವ ಪ್ರಪನ್ನಾನಾಂ ಯಾಚತಾಂ ಚ ದಿವೌಕಸಾಂ|
08024056c ಕುರು ಪ್ರಸಾದಂ ದೇವೇಶ ದಾನವಾಂ ಜಹಿ ಶೂಲಭೃತ್||
ದೇವ! ಶರಣುಬಂದು ಬೇಡುತ್ತಿರುವ ದಿವೌಕಸರಿಗೆ ನೀನು ಕೃಪೆತೋರಿಸು! ದೇವೇಶ! ಶೂಲಧಾರೀ! ದಾನವರನ್ನು ಸಂಹರಿಸು!”
08024057 ಶ್ರೀಭಗವಾನುವಾಚ|
08024057a ಹಂತವ್ಯಾಃ ಶತ್ರವಃ ಸರ್ವೇ ಯುಷ್ಮಾಕಮಿತಿ ಮೇ ಮತಿಃ|
08024057c ನ ತ್ವೇಕೋಽಹಂ ವಧೇ ತೇಷಾಂ ಸಮರ್ಥೋ ವೈ ಸುರದ್ವಿಷಾಂ||
ಶ್ರೀ ಭಗವಾನನು ಹೇಳಿದನು: “ನಿಮ್ಮ ಶತ್ರುಗಳೆಲ್ಲರನ್ನೂ ಸಂಹರಿಸಬೇಕೆಂಬುದೇ ನನ್ನ ಅಭಿಪ್ರಾಯ. ಆದರೆ ಸುರಶತ್ರುಗಳಾದ ಅವರನ್ನು ನಾನೊಬ್ಬನೇ ವಧಿಸಲು ಸಮರ್ಥನಿಲ್ಲ.
08024058a ತೇ ಯೂಯಂ ಸಹಿತಾಃ ಸರ್ವೇ ಮದೀಯೇನಾಸ್ತ್ರತೇಜಸಾ|
08024058c ಜಯಧ್ವಂ ಯುಧಿ ತಾಂ ಶತ್ರೂನ್ಸಂಘಾತೋ ಹಿ ಮಹಾಬಲಃ||
ನೀವೆಲ್ಲರೂ ಒಟ್ಟಾಗಿ ನನ್ನ ಅಸ್ತ್ರತೇಜಸ್ಸಿನಿಂದ ಯುದ್ಧದಲ್ಲಿ ಆ ಶತ್ರುಗಳನ್ನು ಜಯಿಸಿ. ಏಕೆಂದರೆ ಒಗ್ಗಟ್ಟಿನಲ್ಲಿಯೇ ಮಹಾಬಲವಿದೆ.”
08024059 ದೇವಾ ಊಚುಃ|
08024059a ಅಸ್ಮತ್ತೇಜೋಬಲಂ ಯಾವತ್ತಾವದ್ದ್ವಿಗುಣಂ ಏವ ಚ|
08024059c ತೇಷಾಮಿತಿ ಹ ಮನ್ಯಾಮೋ ದೃಷ್ಟತೇಜೋಬಲಾ ಹಿ ತೇ||
ದೇವತೆಗಳು ಹೇಳಿದರು: “ನಮ್ಮ ತೇಜೋಬಲಕ್ಕಿಂತಲೂ ಎರಡು ಪಟ್ಟು ಅವರದ್ದು ಎಂದು ನಮಗೂ ಅನ್ನಿಸುತ್ತಿದೆ. ಏಕೆಂದರೆ ಅವರ ತೇಜೋಬಲವನ್ನು ನಾವು ನೋಡಿದ್ದೇವೆ.”
08024060 ಭಗವಾನುವಾಚ|
08024060a ವಧ್ಯಾಸ್ತೇ ಸರ್ವತಃ ಪಾಪಾ ಯೇ ಯುಷ್ಮಾಸ್ವಪರಾಧಿನಃ|
08024060c ಮಮ ತೇಜೋಬಲಾರ್ಧೇನ ಸರ್ವಾಂಸ್ತಾನ್ಘ್ನತ ಶಾತ್ರವಾನ್||
ಭಗವಾನನು ಹೇಳಿದನು: “ನಿಮ್ಮಮೇಲೆ ಅಪರಾಧಗಳನ್ನೆಸಗಿರುವ ಆ ಪಾಪಿಗಳು ಸರ್ವತಾ ವಧ್ಯರು. ನನ್ನ ತೇಜೋಬಲದ ಅರ್ಧದಿಂದ ಆ ಎಲ್ಲ ಶತ್ರುಗಳನ್ನೂ ಸಂಹರಿಸಿರಿ!”
08024061 ದೇವಾ ಊಚುಃ|
08024061a ಬಿಭರ್ತುಂ ತೇಜಸೋಽರ್ಧಂ ತೇ ನ ಶಕ್ಷ್ಯಾಮೋ ಮಹೇಶ್ವರ|
08024061c ಸರ್ವೇಷಾಂ ನೋ ಬಲಾರ್ಧೇನ ತ್ವಮೇವ ಜಹಿ ಶಾತ್ರವಾನ್||
ದೇವತೆಗಳು ಹೇಳಿದರು: “ಮಹೇಶ್ವರ! ನಿನ್ನ ಅರ್ಧತೇಜಸ್ಸನ್ನೂ ಧರಿಸಲು ನಾವು ಶಕ್ಯರಿಲ್ಲ. ಆದುದರಿಂದ ನೀನೇ ನಮ್ಮೆಲ್ಲರ ಬಲದಿಂದ ಶತ್ರುಗಳನ್ನು ಸಂಹರಿಸು!””
08024062 ದುರ್ಯೋಧನ ಉವಾಚ|
08024062a ತತಸ್ತಥೇತಿ ದೇವೇಶಸ್ತೈರುಕ್ತೋ ರಾಜಸತ್ತಮ|
08024062c ಅರ್ಧಮಾದಾಯ ಸರ್ವೇಭ್ಯಸ್ತೇಜಸಾಭ್ಯಧಿಕೋಽಭವತ್||
ದುರ್ಯೋಧನನು ಹೇಳಿದನು: “ರಾಜಸತ್ತಮ! ಹಾಗೆಯೇ ಆಗಲೆಂದು ಹೇಳಿ ದೇವೇಶನು ಅವರೆಲ್ಲರ ತೇಜಸ್ಸಿನ ಅರ್ಧವನ್ನು ಪಡೆದು ತೇಜಸ್ಸಿನಲ್ಲಿ ಅಧಿಕನಾದನು.
08024063a ಸ ತು ದೇವೋ ಬಲೇನಾಸೀತ್ಸರ್ವೇಭ್ಯೋ ಬಲವತ್ತರಃ|
08024063c ಮಹಾದೇವ ಇತಿ ಖ್ಯಾತಸ್ತದಾಪ್ರಭೃತಿ ಶಂಕರಃ||
ಆಗ ಆ ದೇವನು ಬಲದಲ್ಲಿ ಎಲ್ಲರಿಗಿಂತ ಹೆಚ್ಚು ಬಲವಂತನಾದನು. ಅಂದಿನಿಂದ ಶಂಕರನು ಮಹಾದೇವ ಎಂದು ಖ್ಯಾತನಾದನು.
08024064a ತತೋಽಬ್ರವೀನ್ಮಹಾದೇವೋ ಧನುರ್ಬಾಣಧರಸ್ತ್ವಹಂ|
08024064c ಹನಿಷ್ಯಾಮಿ ರಥೇನಾಜೌ ತಾನ್ರಿಪೂನ್ವೈ ದಿವೌಕಸಃ||
ಆಗ ಮಹಾದೇವನು ಹೇಳಿದನು: “ದಿವೌಕಸರೇ! ಧನುರ್ಬಾಣಗಳನ್ನು ಹಿಡಿದು ರಥವನ್ನೇರಿ ಆ ರಿಪುಗಳನ್ನು ಸಂಹರಿಸುತ್ತೇನೆ.
08024065a ತೇ ಯೂಯಂ ಮೇ ರಥಂ ಚೈವ ಧನುರ್ಬಾಣಂ ತಥೈವ ಚ|
08024065c ಪಶ್ಯಧ್ವಂ ಯಾವದದ್ಯೈತಾನ್ಪಾತಯಾಮಿ ಮಹೀತಲೇ||
ಯಾವುದರಿಂದ ನಾನು ಆ ದೈತ್ಯರನ್ನು ಮಹೀತಲಕ್ಕೆ ಬೀಳಿಸಬಲ್ಲೆನೋ ಅಂತಹ ರಥವನ್ನೂ, ಧನುರ್ಬಾಣಗಳನ್ನೂ ಹುಡುಕಿರಿ!”
08024066 ದೇವಾ ಊಚುಃ|
08024066a ಮೂರ್ತಿಸರ್ವಸ್ವಮಾದಾಯ ತ್ರೈಲೋಕ್ಯಸ್ಯ ತತಸ್ತತಃ|
08024066c ರಥಂ ತೇ ಕಲ್ಪಯಿಷ್ಯಾಮ ದೇವೇಶ್ವರ ಮಹೌಜಸಂ||
ದೇವತೆಗಳು ಹೇಳಿದರು: “ದೇವೇಶ್ವರ! ತ್ರೈಲೋಕ್ಯಗಳಲ್ಲಿ ಅಲ್ಲಲ್ಲಿರುವ ಮೂರ್ತಿಗಳೆಲ್ಲವನ್ನೂ ಒಂದುಗೂಡಿಸಿ ನಿನಗೋಸ್ಕರ ಈ ಮಹೌಜಸ ರಥವನ್ನು ನಿರ್ಮಿಸಿದ್ದೇವೆ.
08024067a ತಥೈವ ಬುದ್ಧ್ಯಾ ವಿಹಿತಂ ವಿಶ್ವಕರ್ಮಕೃತಂ ಶುಭಂ|
08024067c ತತೋ ವಿಬುಧಶಾರ್ದೂಲಾಸ್ತಂ ರಥಂ ಸಮಕಲ್ಪಯನ್||
ಈ ಶುಭ ರಥವು ವಿಶ್ವಕರ್ಮನ ಬುದ್ಧಿಯಿಂದ ರಚಿಸಲ್ಪಟ್ಟಿದೆ.” ಹೀಗೆ ವಿಬುಧಶಾರ್ದೂಲರು ಆ ರಥವನ್ನು ನಿರ್ಮಿಸಿದರು.
08024068a ವಂದುರಂ ಪೃಥಿವೀಂ ದೇವೀಂ ವಿಶಾಲಪುರಮಾಲಿನೀಂ|
08024068c ಸಪರ್ವತವನದ್ವೀಪಾಂ ಚಕ್ರುರ್ಭೂತಧರಾಂ ತದಾ||
ವಿಶಾಲ ಪುರಮಾಲೆಗಳಿಂದ ಅಲಂಕೃತ, ಪರ್ವತ-ವನ-ದ್ವೀಪಸಂಪನ್ನಳಾದ ಸರ್ವಭೂತಗಳನ್ನು ಧರಿಸಿದ್ದ ಪೃಥ್ವೀ ದೇವಿಯನ್ನೇ ಅವರು ರಥವನ್ನಾಗಿ ಕಲ್ಪಿಸಿಕೊಟ್ಟರು.
08024069a ಮಂದರಂ ಪರ್ವತಂ ಚಾಕ್ಷಂ ಜಂಘಾಸ್ತಸ್ಯ ಮಹಾನದೀಃ|
08024069c ದಿಶಶ್ಚ ಪ್ರದಿಶಶ್ಚೈವ ಪರಿವಾರಂ ರಥಸ್ಯ ಹಿ||
ಮಂದರ ಪರ್ವತವು ಅದರ ಅಚ್ಚುಮರವಾಗಿತ್ತು. ಮಹಾನದಿಯು ಅದರ ತಳಭಾಗವಾಗಿತ್ತು. ದಿಕ್ಕುಗಳು ಮತ್ತು ಉಪದಿಕ್ಕುಗಳು ಆ ರಥದ ಪರಿವಾರಗಳಾಗಿದ್ದವು.
08024070a ಅನುಕರ್ಷಾನ್ ಗ್ರಹಾನ್ದೀಪ್ತಾನ್ವರೂಥಂ ಚಾಪಿ ತಾರಕಾಃ|
08024070c ಧರ್ಮಾರ್ಥಕಾಮಸಂಯುಕ್ತಂ ತ್ರಿವೇಣುಂ ಚಾಪಿ ಬಂದುರಂ|
08024070e ಓಷಧೀರ್ವಿವಿಧಾಸ್ತತ್ರ ನಾನಾಪುಷ್ಪಫಲೋದ್ಗಮಾಃ||
ಬೆಳಗುತ್ತಿದ್ದ ಗ್ರಹಗಳು ಅನುಕರ್ಷಗಳಾಗಿದ್ದವು. ನಕ್ಷತ್ರಗಳು ವರೂಥವಾಗಿದ್ದವು. ಧರ್ಮ-ಅರ್ಥ-ಕಾಮಗಳು ಒಂದಾಗಿ ತ್ರಿವೇಣಿಗಳಾಗಿ ಬಂಧಿಸಲ್ಪಟ್ಟಿದ್ದವು. ವಿವಿಧ ಔಷಧಿಗಳು ಮತ್ತು ನಾನಾ ಪುಷ್ಪ-ಫಲಗಳು ಉದ್ಗಮಗಳಾಗಿದ್ದವು.
08024071a ಸೂರ್ಯಾಚಂದ್ರಮಸೌ ಕೃತ್ವಾ ಚಕ್ರೇ ರಥವರೋತ್ತಮೇ|
08024071c ಪಕ್ಷೌ ಪೂರ್ವಾಪರೌ ತತ್ರ ಕೃತೇ ರಾತ್ರ್ಯಹನೀ ಶುಭೇ||
ಸೂರ್ಯ-ಚಂದ್ರರು ಆ ಉತ್ತಮ ರಥದ ಚಕ್ರಗಳಾಗಿದ್ದವು. ಶುಭ ರಾತ್ರಿ ಮತ್ತು ಹಗಲುಗಳು ಅದರ ಪೂರ್ವ ಮತ್ತು ಪಶ್ಚಿಮ ಪಕ್ಷಗಳಾಗಿದ್ದವು.
08024072a ದಶ ನಾಗಪತೀನೀಷಾಂ ಧೃತರಾಷ್ಟ್ರಮುಖಾನ್ದೃಢಾಂ|
08024072c ದ್ಯಾಮ್ಯುಗಂ ಯುಗಚರ್ಮಾಣಿ ಸಂವರ್ತಕಬಲಾಹಕಾನ್||
ಧೃತರಾಷ್ಟ್ರನೇ ಮೊದಲಾದ ಹತ್ತು ನಾಗಪತಿಗಳು ಅದರ ದೃಢ ಈಷಾದಂಡಗಳಾಗಿದ್ದವು. ಎರಡು ಯುಗಗಳು ಮತ್ತು ಸಂವರ್ತಕ ಬಲಾಹಕಗಳು ರಥಚರ್ಮಗಳಾಗಿದ್ದವು.
08024073a ಶಮ್ಯಾಂ ಧೃತಿಂ ಚ ಮೇಧಾಂ ಚ ಸ್ಥಿತಿಂ ಸನ್ನತಿಮೇವ ಚ|
08024073c ಗ್ರಹನಕ್ಷತ್ರತಾರಾಭಿಶ್ಚರ್ಮ ಚಿತ್ರಂ ನಭಸ್ತಲಂ||
ಸಂಧ್ಯಾ, ಧೃತಿ, ಮೇಧಾ, ಸ್ಥಿತಿ, ಸನ್ನತಿ, ಗ್ರಹ-ನಕ್ಷತ್ರ-ತಾರೆಗಳಿಂದ ಚಿತ್ರಿತ ಆಕಾಶವನ್ನೇ ರಥಕ್ಕೆ ಚರ್ಮದ ಹೊದಿಕೆಯನ್ನಾಗಿ ಹೊದಿಸಿದ್ದರು.
08024074a ಸುರಾಂಬುಪ್ರೇತವಿತ್ತಾನಾಂ ಪತೀಽಲ್ಲೋಕೇಶ್ವರಾನ್ ಹಯಾನ್|
08024074c ಸಿನೀವಾಲೀಮನುಮತಿಂ ಕುಹೂಂ ರಾಕಾಂ ಚ ಸುವ್ರತಾಂ|
08024074e ಯೋಕ್ತ್ರಾಣಿ ಚಕ್ರುರ್ವಾಹಾನಾಂ ರೋಹಕಾಂಶ್ಚಾಪಿ ಕಂಟಕಂ||
ಸುರರು, ನೀರು, ಪ್ರೇತ ಮತ್ತು ವಿತ್ತಗಳ ಒಡೆಯರಾದ ಇಂದ್ರ, ವರುಣ, ಯಮ ಮತ್ತು ಕುಬೇರ – ಈ ಲೋಕೇಶ್ವರರನ್ನು ಕುದುರೆಗಳನ್ನಾಗಿ ಕಟ್ಟಲಾಗಿತ್ತು. ಸಿನೀವಾಲೀ, ಅನುಮತಿ, ಕುಹೂ ಮತ್ತು ಸುವ್ರತ ರಾಕಾರನ್ನು ಕುದುರೆಗಳ ಕಡಿವಾಣಗಳನ್ನಾಗಿಯೂ ರೋಹಕರನ್ನು (ದೊಡ್ಡ ದೇವತೆಗಳನ್ನು) ಕಡಿವಾಣಗಳಲ್ಲಿರುವ ಮುಳ್ಳುಗಳನ್ನಾಗಿ ಕಲ್ಪಿಸಿದರು.
08024075a ಕರ್ಮ ಸತ್ಯಂ ತಪೋಽರ್ಥಶ್ಚ ವಿಹಿತಾಸ್ತತ್ರ ರಶ್ಮಯಃ|
08024075c ಅಧಿಷ್ಠಾನಮ್ಮನಸ್ತ್ವಾಸೀತ್ಪರಿರಥ್ಯಂ ಸರಸ್ವತೀ||
ಕರ್ಮ, ಸತ್ಯ, ತಪಸ್ಸು ಮತ್ತು ಅರ್ಥಗಳು ಕಡಿವಾಣಗಳಲ್ಲಿದ್ದವು. ಮನಸ್ಸು ಅದರ ಅಧಿಷ್ಠಾನವಾಗಿತ್ತು ಮತ್ತು ಸರಸ್ವತಿಯು ರಥದ ದಾರಿಯಾಗಿ ಪರಿಣಮಿಸಿತು.
08024076a ನಾನಾವರ್ಣಾಶ್ಚ ಚಿತ್ರಾಶ್ಚ ಪತಾಕಾಃ ಪವನೇರಿತಾಃ|
08024076c ವಿದ್ಯುದಿಂದ್ರಧನುರ್ನದ್ಧಂ ರಥಂ ದೀಪ್ತಂ ವ್ಯದೀಪಯತ್||
ನಾನಾವರ್ಣಗಳ ಚಿತ್ರ-ವಿಚಿತ್ರ ಪತಾಕೆಗಳು ಗಾಳಿಯಲ್ಲಿ ಪರಪರನೆ ಹಾರಾಡುತ್ತಿದ್ದವು. ಮಿಂಚು ಮತ್ತು ಕಾಮನಬಿಲ್ಲುಗಳು ರಥವನ್ನು ಬೆಳಗಿಸಿದವು.
08024077a ಏವಂ ತಸ್ಮಿನ್ಮಹಾರಾಜ ಕಲ್ಪಿತೇ ರಥಸತ್ತಮೇ|
08024077c ದೇವೈರ್ಮನುಜಶಾರ್ದೂಲ ದ್ವಿಷತಾಮಭಿಮರ್ದನೇ|
08024078a ಸ್ವಾನ್ಯಾಯುಧಾನಿ ಮುಖ್ಯಾನಿ ನ್ಯದಧಾಚ್ಚಂಕರೋ ರಥೇ|
ಮಹಾರಾಜ! ಮನುಜಶಾರ್ದೂಲ! ಹೀಗೆ ಶತ್ರುಗಳನ್ನು ಸಂಹರಿಸಲು ದೇವತೆಗಳು ಉತ್ತಮ ರಥವನ್ನು ಸಿದ್ಧಗೊಳಿಸಲು ಶಂಕರನು ಆ ರಥದಲ್ಲಿ ತನ್ನ ಮುಖ್ಯ ಆಯುಧಗಳನ್ನು ಇರಿಸಿದನು.
08024078c ರಥಯಷ್ಟಿಂ ವಿಯತ್ಕೃಷ್ಟಾಂ ಸ್ಥಾಪಯಾಮಾಸ ಗೋವೃಷಂ||
08024079a ಬ್ರಹ್ಮದಂಡಃ ಕಾಲದಂಡೋ ರುದ್ರದಂಡಸ್ತಥಾ ಜ್ವರಃ|
08024079c ಪರಿಸ್ಕಂದಾ ರಥಸ್ಯಾಸ್ಯ ಸರ್ವತೋದಿಶಮುದ್ಯತಾಃ||
ಆಕಾಶವನ್ನೇ ರಥಯಷ್ಟಿಯನ್ನಾಗಿಸಿ ಅದರಲ್ಲಿ ನಂದಿಯನ್ನು ಸ್ಥಾಪಿಸಿದನು. ಬ್ರಹ್ಮದಂಡ, ಕಾಲದಂಡ, ರುದ್ರದಂಡ ಮತ್ತು ಜ್ವರಗಳು ಆ ರಥದ ಪಾರ್ಶ್ವರಕ್ಷಕರಾಗಿ ಆಯುಧಗಳನ್ನು ಮೇಲೆತ್ತಿ ನಿಂತವು.
08024080a ಅಥರ್ವಾಂಗಿರಸಾವಾಸ್ತಾಂ ಚಕ್ರರಕ್ಷೌ ಮಹಾತ್ಮನಃ|
08024080c ಋಗ್ವೇದಃ ಸಾಮವೇದಶ್ಚ ಪುರಾಣಂ ಚ ಪುರಹ್ಸರಾಃ||
ಆ ಮಹಾತ್ಮನ ಚಕ್ರರಕ್ಷಕರಾಗಿ ಅಥರ್ವ ಮತ್ತು ಆಂಗಿರಸರಿದ್ದರು. ಋಗ್ವೇದ, ಸಾಮವೇದ ಮತ್ತು ಪುರಾಣಗಳು ಮುಂದೆಹೋಗುವ ಯೋಧರಾಗಿದ್ದವು.
08024081a ಇತಿಹಾಸಯಜುರ್ವೇದೌ ಪೃಷ್ಠರಕ್ಷೌ ಬಭೂವತುಃ|
08024081c ದಿವ್ಯಾ ವಾಚಶ್ಚ ವಿದ್ಯಾಶ್ಚ ಪರಿಪಾರ್ಶ್ವಚರಾಃ ಕೃತಾಃ||
ಇತಿಹಾಸ ಯಜುರ್ವೇದಗಳು ರಥದ ಹಿಂಬಾಗದ ರಕ್ಷಕರಾಗಿದ್ದರು. ದಿವ್ಯವಾಣಿ ಮತ್ತು ವಿದ್ಯೆಗಳು ರಥದ ಪರಿಪಾರ್ಶ್ವಚರರಾಗಿದ್ದರು.
08024082a ತೋತ್ತ್ರಾದಯಶ್ಚ ರಾಜೇಂದ್ರ ವಷಟ್ಕಾರಸ್ತಥೈವ ಚ|
08024082c ಓಂಕಾರಶ್ಚ ಮುಖೇ ರಾಜನ್ನತಿಶೋಭಾಕರೋಽಭವತ್||
ರಾಜನ್! ರಾಜೇಂದ್ರ! ಸ್ತೋತ್ರ, ಕವಚ, ವಷಟ್ಕಾರ, ಓಂಕಾರಗಳು ರಥದ ಮುಖಭಾಗದಲ್ಲಿದ್ದು ಶೋಭಾಯಮಾನಗೊಳಿಸಿದವು.
08024083a ವಿಚಿತ್ರಂ ಋತುಭಿಃ ಷಡ್ಭಿಃ ಕೃತ್ವಾ ಸಂವತ್ಸರಂ ಧನುಃ|
08024083c ತಸ್ಮಾನೄಣಾಂ ಕಾಲರಾತ್ರಿರ್ಜ್ಯಾ ಕೃತಾ ಧನುಷೋಽಜರಾ||
ಆರು ಋತುಗಳ ಸಂವತ್ಸರದಿಂದ ವಿಚಿತ್ರ ಧನುಸ್ಸನ್ನು ಮಾಡಿಕೊಂಡು ಆ ಅಜರನು ಮನುಷ್ಯರ ಕಾಲರಾತ್ರಿಯನ್ನು ಧನುಸ್ಸಿನ ಶಿಂಜಿನಿಯನ್ನಾಗಿ ಮಾಡಿಕೊಂಡನು.
08024084a ಇಷುಶ್ಚಾಪ್ಯಭವದ್ವಿಷ್ಣುರ್ಜ್ವಲನಃ ಸೋಮ ಏವ ಚ|
08024084c ಅಗ್ನೀಷೋಮೌ ಜಗತ್ಕೃತ್ಸ್ನಂ ವೈಷ್ಣವಂ ಚೋಚ್ಯತೇ ಜಗತ್||
ವಿಷ್ಣು, ಅಗ್ನಿ ಮತ್ತು ಸೋಮರು ಬಾಣಗಳಾದರು. ಅಗ್ನಿ-ಸೋಮರಿಂದಲೇ ಇಡೀ ಜಗತ್ತಿದೆಯೆಂದೂ, ಜಗತ್ತು ವೈಷ್ಣವವೆಂದೂ ಹೇಳುತ್ತಾರೆ.
08024085a ವಿಷ್ಣುಶ್ಚಾತ್ಮಾ ಭಗವತೋ ಭವಸ್ಯಾಮಿತತೇಜಸಃ|
08024085c ತಸ್ಮಾದ್ಧನುರ್ಜ್ಯಾಸಂಸ್ಪರ್ಶಂ ನ ವಿಷೇಹುರ್ಹರಸ್ಯ ತೇ||
ಅಮಿತತೇಜಸ್ವಿ ಭಗವಂತ ವಿಷ್ಣುವೇ ಭವನ ಆತ್ಮಸ್ವರೂಪನು. ಆದುದರಿಂದ ಅವರು ಹರನ ಧನುಸ್ಸು-ಮೌರ್ವಿಗಳ ಸ್ಪರ್ಷವನ್ನೂ ಸಹಿಸಿಕೊಳ್ಳಲಾರದಾಗಿದ್ದರು.
08024086a ತಸ್ಮಿಂ ಶರೇ ತಿಗ್ಮಮನ್ಯುರ್ಮುಮೋಚಾವಿಷಹಂ ಪ್ರಭುಃ|
08024086c ಭೃಗ್ವಂಗಿರೋಮನ್ಯುಭವಂ ಕ್ರೋಧಾಗ್ನಿಮತಿದುಃಸಹಂ||
ಆ ಶರದಲ್ಲಿ ಪ್ರಭುವು ತನ್ನ ಸುತೀಕ್ಷ್ಣ ಕೋಪವನ್ನು ಭೃಗು-ಅಂಗಿರಸರ ಕೋಪದಿಂದ ಹುಟ್ಟಿದ ಅತಿದುಃಸ್ಸಹ ಕ್ರೋಧಾಗ್ನಿಯನ್ನೂ ಸಂಸ್ಥಾಪಿಸಿದನು.
08024087a ಸ ನೀಲಲೋಹಿತೋ ಧೂಮ್ರಃ ಕೃತ್ತಿವಾಸಾ ಭಯಂಕರಃ|
08024087c ಆದಿತ್ಯಾಯುತಸಂಕಾಶಸ್ತೇಜೋಜ್ವಾಲಾವೃತೋ ಜ್ವಲನ್||
ಆ ನೀಲಲೋಹಿತ, ಧೂಮ್ರ, ಕೃತ್ತಿವಾಸಾ, ಭಯಂಕರನು ಸಹಸ್ರ ಆದಿತ್ಯರ ತೇಜೋಜ್ವಲಗಳಿಂದ ಆವೃತನಾಗಿ ಪ್ರಜ್ವಲಿಸಿದನು.
08024088a ದುಶ್ಚ್ಯಾವಶ್ಚ್ಯಾವನೋ ಜೇತಾ ಹಂತಾ ಬ್ರಹ್ಮದ್ವಿಷಾಂ ಹರಃ|
08024088c ನಿತ್ಯಂ ತ್ರಾತಾ ಚ ಹಂತಾ ಚ ಧರ್ಮಾಧರ್ಮಾಶ್ರಿತಾಂ ಜನಾನ್||
ಅಳ್ಳಾಡಿಸುವುದಕ್ಕೆ ಅಸಾಧ್ಯವಾಗಿರುವವರನ್ನೂ ಅಳ್ಳಾಡಿಸಿಬಿಡುವ, ಬ್ರಹ್ಮದ್ವೇಷಿಗಳನ್ನು ಜಯಿಸಿ ಸಂಹರಿಸುವ ಹರನು ಅಧರ್ಮಾಶ್ರಿತ ಜನರನ್ನು ಸಂಹರಿಸಿ ನಿತ್ಯವೂ ಧರ್ಮವನ್ನು ರಕ್ಷಿಸುತ್ತಾನೆ.
08024089a ಪ್ರಮಾಥಿಭಿರ್ಘೋರರೂಪೈರ್ಭೀಮೋದಗ್ರೈರ್ಗಣೈರ್ವೃತಃ|
08024089c ವಿಭಾತಿ ಭಗವಾನ್ ಸ್ಥಾಣುಸ್ತೈರೇವಾತ್ಮಗುಣೈರ್ವೃತಃ||
ಘೋರರೂಪೀ ಭಯಂಕರ ಉಗ್ರ ಪ್ರಮಾಥಿಗಣಗಳಿಂದ ಆವೃತನಾಗಿ ಅವರ ಆತ್ಮಗುಣಗಳಿಂದ ಆವೃತನಾಗಿ ಭಗವಾನ್ ಸ್ಥಾಣುವು ಪ್ರಕಾಶಿಸಿದನು.
08024090a ತಸ್ಯಾಂಗಾನಿ ಸಮಾಶ್ರಿತ್ಯ ಸ್ಥಿತಂ ವಿಶ್ವಮಿದಂ ಜಗತ್|
08024090c ಜಂಗಮಾಜಂಗಮಂ ರಾಜಂ ಶುಶುಭೇಽದ್ಭುತದರ್ಶನಂ||
ರಾಜನ್! ಈ ವಿಶ್ವ-ಜಗತ್ತೆಲ್ಲವೂ, ಜಂಗಮಾಜಂಗಮಗಳೆಲ್ಲವೂ ಆ ಅದ್ಭುತದರ್ಶನನ ಅಂಗಗಳನ್ನು ಸಮಾಶ್ರಯಿಸಿ ಶೋಭಿಸಿದವು.
08024091a ದೃಷ್ಟ್ವಾ ತು ತಂ ರಥಂ ದಿವ್ಯಂ ಕವಚೀ ಸ ಶರಾಸನೀ|
08024091c ಬಾಣಮಾದತ್ತ ತಂ ದಿವ್ಯಂ ಸೋಮವಿಷ್ಣ್ವಗ್ನಿಸಂಭವಂ||
ಆ ದಿವ್ಯರಥವನ್ನು ನೋಡಿ ಕವಚ-ಧನುಸ್ಸುಗಳನ್ನು ಹಿಡಿದಿದ್ದ ಶಿವನು ಸೋಮ-ವಿಷ್ಣು-ಅಗ್ನಿಸಂಭವ ಬಾಣವನ್ನು ತೆಗೆದುಕೊಂಡನು.
08024092a ತಸ್ಯ ವಾಜಾಂಸ್ತತೋ ದೇವಾಃ ಕಲ್ಪಯಾಂ ಚಕ್ರಿರೇ ವಿಭೋಃ|
08024092c ಪುಣ್ಯಗಂದವಹಂ ರಾಜಂ ಶ್ವಸನಂ ರಾಜಸತ್ತಮ||
ರಾಜನ್! ರಾಜಸತ್ತಮ! ಆಗ ವಿಭು ದೇವತೆಗಳು ವಾಯುವನ್ನು ಪುಣ್ಯಗಂಧಯುಕ್ತ ಗಾಳಿಯನ್ನು ಬೀಸಲು ನಿಯುಕ್ತಗೊಳಿಸಿದರು.
08024093a ತಮಾಸ್ಥಾಯ ಮಹಾದೇವಸ್ತ್ರಾಸಯನ್ದೈವತಾನ್ಯಪಿ|
08024093c ಆರುರೋಹ ತದಾ ಯತ್ತಃ ಕಂಪಯನ್ನಿವ ರೋದಸೀ||
ಆಗ ಮಹಾದೇವನು ದೇವತೆಗಳನ್ನೂ ಭಯಗೊಳಿಸುತ್ತಾ ಭೂಮಿಯನ್ನು ನಡುಗಿಸುತ್ತಾ ರಥವನ್ನೇರಿದನು.
08024094a ಸ ಶೋಭಮಾನೋ ವರದಃ ಖಡ್ಗೀ ಬಾಣೀ ಶರಾಸನೀ|
08024094c ಹಸನ್ನಿವಾಬ್ರವೀದ್ದೇವೋ ಸಾರಥಿಃ ಕೋ ಭವಿಷ್ಯತಿ||
ಖಡ್ಗ, ಬಾಣ, ಧನುಸ್ಸುಗಳನ್ನು ಧರಿಸಿ ಶೋಭಾಯಮಾನನಾಗಿದ್ದ ಆ ವರದನು ನಸುನಗುತ್ತಾ ಸಾರಥಿಯು ಯಾರಾಗುತ್ತಾನೆ ಎಂದು ದೇವತೆಗಳನ್ನು ಕೇಳಿದನು.
08024095a ತಂ ಅಬ್ರುವನ್ದೇವಗಣಾ ಯಂ ಭವಾನ್ಸನ್ನಿಯೋಕ್ಷ್ಯತೇ|
08024095c ಸ ಭವಿಷ್ಯತಿ ದೇವೇಶ ಸಾರಥಿಸ್ತೇ ನ ಸಂಶಯಃ||
ದೇವಗಣಗಳು ಅವನಿಗೆ ಹೇಳಿದರು: “ದೇವೇಶ! ಯಾರನ್ನು ನೀನು ನಿಯೋಜಿಸುತ್ತೀಯೋ ಅವನೇ ನಿನಗೆ ಸಾರಥಿಯಾಗುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.”
08024096a ತಾನಬ್ರವೀತ್ಪುಪುನರ್ದೇವೋ ಮತ್ತಃ ಶ್ರೇಷ್ಠತರೋ ಹಿ ಯಃ|
08024096c ತಂ ಸಾರಥಿಂ ಕುರುಧ್ವಂ ಮೇ ಸ್ವಯಂ ಸಂಚಿಂತ್ಯ ಮಾಚಿರಂ||
ದೇವನು ಅವರಿಗೆ ಪುನಃ ಹೇಳಿದನು: “ನಿಮ್ಮಲ್ಲಿ ನನಗಿಂತಲೂ ಶ್ರೇಷ್ಠತರನಾದವನನ್ನು ನನ್ನ ಸಾರಥಿಯನ್ನಾಗಿ ಮಾಡಿ. ತಡಮಾಡಬೇಡಿ!”
08024097a ಏತಚ್ಚ್ರುತ್ವಾ ತತೋ ದೇವಾ ವಾಕ್ಯಮುಕ್ತಂ ಮಹಾತ್ಮನಾ|
08024097c ಗತ್ವಾ ಪಿತಾಮಹಂ ದೇವಂ ಪ್ರಸಾದ್ಯೈವಂ ವಚೋಽಬ್ರುವನ್||
ಮಹಾತ್ಮನಾದ ಅವನ ಆ ಮಾತನ್ನು ಕೇಳಿ ದೇವತೆಗಳು ಪಿತಾಮಹನಲ್ಲಿಗೆ ಹೋಗಿ ದೇವನನ್ನು ಸ್ತುತಿಸಿ ಅವನಿಗೆ ಹೇಳಿದರು:
08024098a ದೇವ ತ್ವಯೇದಂ ಕಥಿತಂ ತ್ರಿದಶಾರಿನಿಬರ್ಹಣಂ|
08024098c ತಥಾ ಚ ಕೃತಮಸ್ಮಾಭಿಃ ಪ್ರಸನ್ನೋ ವೃಷಭಧ್ವಜಃ||
“ದೇವ! ತ್ರಿದಶರ ಶತ್ರುಗಳನ್ನು ನಾಶಗೊಳಿಸಲು ನೀನು ಹೇಳಿದಂತೆಯೇ ನಾವು ಮಾಡಿದ್ದೇವೆ. ವೃಷಭದ್ವಜನು ನಮ್ಮ ಮೇಲೆ ಪ್ರಸನ್ನನಾಗಿದ್ದಾನೆ.
08024099a ರಥಶ್ಚ ವಿಹಿತೋಽಸ್ಮಾಭಿರ್ವಿಚಿತ್ರಾಯುಧಸಂವೃತಃ|
08024099c ಸಾರಥಿಂ ತು ನ ಜಾನೀಮಃ ಕಃ ಸ್ಯಾತ್ತಸ್ಮಿನ್ರಥೋತ್ತಮೇ||
ವಿಚಿತ್ರ ಆಯುಧಗಳಿಂದ ಕೂಡಿರುವ ರಥವನ್ನೂ ನಾವು ಸಜ್ಜುಗೊಳಿಸಿದ್ದೇವೆ. ಆದರೆ ಆ ಉತ್ತಮ ರಥದಲ್ಲಿ ಸಾರಥಿಯು ಯಾರಾಗಬಲ್ಲರೆಂದು ನಮಗೆ ತಿಳಿದಿಲ್ಲ.
08024100a ತಸ್ಮಾದ್ವಿಧೀಯತಾಂ ಕಶ್ಚಿತ್ಸಾರಥಿರ್ದೇವಸತ್ತಮ|
08024100c ಸಫಲಾಂ ತಾಂ ಗಿರಂ ದೇವ ಕರ್ತುಮರ್ಹಸಿ ನೋ ವಿಭೋ||
ಆದುದರಿಂದ ದೇವಸತ್ತಮ! ಯಾರಾದರೂ ಸಾರಥಿಯನ್ನು ನಿಯೋಜಿಸಬೇಕು. ವಿಭೋ! ದೇವ! ನಮಗೆ ನೀನು ನೀಡಿದ ವಚನವನ್ನು ಸಫಲಗೊಳಿಸಿಕೊಡಬೇಕು!
08024101a ಏವಮಸ್ಮಾಸು ಹಿ ಪುರಾ ಭಗವನ್ನುಕ್ತವಾನಸಿ|
08024101c ಹಿತಂ ಕರ್ತಾಸ್ಮಿ ಭವತಾಮಿತಿ ತತ್ಕರ್ತುಮರ್ಹಸಿ||
ಭಗವನ್! “ನಿಮಗೆ ಹಿತವಾದುದನ್ನು ಮಾಡುತ್ತೇನೆ!” ಎಂದು ನೀನು ನಮಗೆ ಹಿಂದೆ ಹೇಳಿದ್ದೆ. ಅದನ್ನು ನೀನು ಮಾಡಿಕೊಡಬೇಕು!
08024102a ಸ ದೇವ ಯುಕ್ತೋ ರಥಸತ್ತಮೋ ನೋ
ದುರಾವರೋ ದ್ರಾವಣಃ ಶಾತ್ರವಾಣಾಂ|
08024102c ಪಿನಾಕಪಾಣಿರ್ವಿಹಿತೋಽತ್ರ ಯೋದ್ಧಾ
ವಿಭೀಷಯನ್ದಾನವಾನುದ್ಯತೋಽಸೌ||
ನಮ್ಮ ಶತ್ರುಗಳನ್ನು ಪಲಾಯನಗೊಳಿಸಬಲ್ಲ, ಶತ್ರುಗಳಿಗೆ ದುರ್ಗಮವಾದ ಆ ಉತ್ತಮ ರಥದಲ್ಲಿ ಕುಳಿತು ಯೋದ್ಧಾ ಪಿನಾಕಪಾಣಿಯು ದಾನವರನ್ನು ಭಯಗೊಳಿಸುತ್ತಾ ಯುದ್ಧೋನ್ನತನಾಗಿದ್ದಾನೆ.
08024103a ತಥೈವ ವೇದಾಶ್ಚತುರೋ ಹಯಾಗ್ರ್ಯಾ
ಧರಾ ಸಶೈಲಾ ಚ ರಥೋ ಮಹಾತ್ಮನ್|
08024103c ನಕ್ಷತ್ರವಂಶೋಽನುಗತೋ ವರೂಥೇ
ಯಸ್ಮಿನ್ಯೋದ್ಧಾ ಸಾರಥಿನಾಭಿರಕ್ಷ್ಯಃ||
ಮಹಾತ್ಮನ್! ಸಶೈಲ ಧರಣಿಯೇ ರಥವಾಗಿದೆ. ನಾಲ್ಕು ವೇದಗಳು ಕುದುರೆಗಳಾಗಿವೆ. ಸಾರಥಿಯಿಂದ ರಕ್ಷಿತನಾದ ಯೋಧನಿರುವ ಆ ರಥಕ್ಕೆ ನಕ್ಷತ್ರವಂಶಗಳೇ ವರೂಥಗಳಾಗಿ ಹಿಂಬಾಲಿಸುತ್ತವೆ.
08024104a ತತ್ರ ಸಾರಥಿರೇಷ್ಟವ್ಯಃ ಸರ್ವೈರೇತೈರ್ವಿಶೇಷವಾನ್|
08024104c ತತ್ಪ್ರತಿಷ್ಠೋ ರಥೋ ದೇವ ಹಯಾ ಯೋದ್ಧಾ ತಥೈವ ಚ|
08024104e ಕವಚಾನಿ ಚ ಶಸ್ತ್ರಾಣಿ ಕಾರ್ಮುಕಂ ಚ ಪಿತಾಮಹ||
ದೇವ! ಪಿತಾಮಹ! ಇತರರಿಗಿಂತಲೂ ಸರ್ವಶ್ರೇಷ್ಠನಾದ ಸಾರಥಿಯು ಆ ಪ್ರತಿಷ್ಠ ರಥಕ್ಕೆ, ಕುದುರೆಗಳಿಗೆ, ಯೋದ್ಧನಿಗೆ, ಕವಚ, ಶಸ್ತ್ರಗಳು ಮತ್ತು ಕಾರ್ಮುಕಗಳಿಗೆ ಬೇಕಾಗಿದೆ.
08024105a ತ್ವಾಂ ಋತೇ ಸಾರಥಿಂ ತತ್ರ ನಾನ್ಯಂ ಪಶ್ಯಾಮಹೇ ವಯಂ|
08024105c ತ್ವಂ ಹಿ ಸರ್ವೈರ್ಗುಣೈರ್ಯುಕ್ತೋ ದೇವತಾಭ್ಯೋಽಧಿಕಃ ಪ್ರಭೋ|
08024105e ಸಾರಥ್ಯೇ ತೂರ್ಣಮಾರೋಹ ಸಂಯಚ್ಚ ಪರಮಾನ್ ಹಯಾನ್||
ನಿನ್ನನ್ನು ಬಿಟ್ಟು ಬೇರೆ ಯಾವ ಸಾರಥಿಯೂ ನಮಗೆ ಕಾಣುವುದಿಲ್ಲ. ಪ್ರಭೋ! ಸರ್ವಗುಣಯುಕ್ತನಾದ ನೀನೇ ದೇವತೆಗಳಿಗೂ ಅಧಿಕನಾಗಿರುವೆ. ಬೇಗನೆ ಸಾರಥ್ಯವನ್ನು ವಹಿಸಿಕೊಂಡು ಆ ಉತ್ತಮ ಕುದುರೆಗಳನ್ನು ನಿಯಂತ್ರಿಸು.”
08024106a ಇತಿ ತೇ ಶಿರಸಾ ನತ್ವಾ ತ್ರಿಲೋಕೇಶಂ ಪಿತಾಮಹಂ|
08024106c ದೇವಾಃ ಪ್ರಸಾದಯಾಮಾಸುಃ ಸಾರಥ್ಯಾಯೇತಿ ನಃ ಶ್ರುತಂ||
ಹೀಗೆ ತ್ರಿಲೋಕೇಶ ಪಿತಾಮಹನಿಗೆ ಶಿರಬಾಗಿ ನಮಸ್ಕರಿಸಿ ದೇವತೆಗಳು ಸಾರಥಿಯಾಗಲು ಅವನನ್ನು ಒಪ್ಪಿಸಿದರು.
08024107 ಬ್ರಹ್ಮೋವಾಚ|
08024107a ನಾತ್ರ ಕಿಂ ಚಿನ್ಮೃಷಾ ವಾಕ್ಯಂ ಯದುಕ್ತಂ ವೋ ದಿವೌಕಸಃ|
08024107c ಸಂಯಚ್ಚಾಮಿ ಹಯಾನೇಷ ಯುಧ್ಯತೋ ವೈ ಕಪರ್ದಿನಃ||
ಬ್ರಹ್ಮನು ಹೇಳಿದನು: “ದಿವೌಕಸರೇ! ನೀವು ಹೇಳಿದ ಮಾತಿನಲ್ಲಿ ಸ್ವಲ್ಪವೂ ಸುಳ್ಳಿಲ್ಲ! ಕಪರ್ದಿನಿಯು ಯುದ್ಧಮಾಡುವಾಗ ನಾನು ಕುದುರೆಗಳನ್ನು ನಿಯಂತ್ರಿಸುತ್ತೇನೆ.”
08024108a ತತಃ ಸ ಭಗವಾನ್ದೇವೋ ಲೋಕಸ್ರಷ್ಟಾ ಪಿತಾಮಹಃ|
08024108c ಸಾರಥ್ಯೇ ಕಲ್ಪಿತೋ ದೇವೈರೀಶಾನಸ್ಯ ಮಹಾತ್ಮನಃ||
ಆಗ ಲೋಕಸ್ರಷ್ಟಾ ಭಗವಾನ್ ದೇವ ಪಿತಾಮಹನು ದೇವತೆಗಳಿಂದ ಮಹಾತ್ಮ ಈಶಾನನ ಸಾರಥಿಯಾಗಿ ಕಲ್ಪಿತನಾದನು.
08024109a ತಸ್ಮಿನ್ನಾರೋಹತಿ ಕ್ಷಿಪ್ರಂ ಸ್ಯಂದನಂ ಲೋಕಪೂಜಿತೇ|
08024109c ಶಿರೋಭಿರಗಮಂಸ್ತೂರ್ಣಂ ತೇ ಹಯಾ ವಾತರಂಹಸಃ||
ಆ ಲೋಕಪೂಜಿತ ರಥದಲ್ಲಿ ಅವನು ಬೇಗನೇ ಹತ್ತಿ ಕುಳಿತುಕೊಳ್ಳಲು ವಾಯುವಿನ ವೇಗಯುಕ್ತ ಕುದುರೆಗಳು ಕೂಡಲೇ ಮುಗ್ಗರಿಸಿದವು.
08024110a ಮಹೇಶ್ವರೇ ತ್ವಾರುಹತಿ ಜಾನುಭ್ಯಾಮಗಮನ್ಮಹೀಂ|
08024111a ಅಭೀಶೂನ್ ಹಿ ತ್ರಿಲೋಕೇಶಃ ಸಂಗೃಹ್ಯ ಪ್ರಪಿತಾಮಹಃ|
08024111c ತಾನಶ್ವಾಂಶ್ಚೋದಯಾಮಾಸ ಮನೋಮಾರುತರಂಹಸಃ||
ಮಹಿಯನ್ನು ಕಾಲುಗುರಿನಿಂದ ಮೆಟ್ಟಿ ಮಹೇಶ್ವರನು ಮೇಲೇರಲು ತ್ರಿಲೋಕೇಶ ಪ್ರಪಿತಾಮಹನು ಕಡಿವಾಣಗಳನ್ನು ಹಿಡಿದುಕೊಂಡು ಆ ಮನೋಮಾರುತಹಂಸಗಳಂತೆ ಓಡುವ ಕುದುರೆಗಳನ್ನು ಪ್ರಚೋದಿಸಿದನು.
08024112a ತತೋಽಧಿರೂಢೇ ವರದೇ ಪ್ರಯಾತೇ ಚಾಸುರಾನ್ಪ್ರತಿ|
08024112c ಸಾಧು ಸಾಧ್ವಿತಿ ವಿಶ್ವೇಶಃ ಸ್ಮಯಮಾನೋಽಭ್ಯಭಾಷತ||
ಆ ವರದನು ರಥಾಧಿರೂಢನಾಗಿ ಅಸುರರ ಕಡೆ ಹೊರಡಲು ವಿಶ್ವೇಶನು ನಸುನಗುತ್ತಾ “ಸಾಧು! ಸಾಧು!” ಎಂದು ಹೊಗಳಿದನು.
08024113a ಯಾಹಿ ದೇವ ಯತೋ ದೈತ್ಯಾಶ್ಚೋದಯಾಶ್ವಾನತಂದ್ರಿತಃ|
08024113c ಪಶ್ಯ ಬಾಹ್ವೋರ್ಬಲಂ ಮೇಽದ್ಯ ನಿಘ್ನತಃ ಶಾತ್ರವಾನ್ರಣೇ||
“ದೇವ! ಸಾವಧಾನವಾಗಿ ಕುದುರೆಗಳನ್ನು ದೈತ್ಯರಿರುವಲ್ಲಿಗೆ ಕೊಂಡೊಯ್ಯಿ. ರಣದಲ್ಲಿ ಶತ್ರುಗಳನ್ನು ಸಂಹರಿಸುವ ನನ್ನ ಬಾಹುಬಲವನ್ನು ಇಂದು ನೋಡು!”
08024114a ತತಸ್ತಾಂಶ್ಚೋದಯಾಮಾಸ ವಾಯುವೇಗಸಮಾಂ ಜವೇ|
08024114c ಯೇನ ತತ್ತ್ರಿಪುರಂ ರಾಜನ್ದೈತ್ಯದಾನವರಕ್ಷಿತಂ||
ರಾಜನ್! ಆಗ ಅವನು ವೇಗದಲ್ಲಿ ವಾಯುವೇಗಸಮನಾದ ಆ ಅಶ್ವಗಳನ್ನು ದೈತ್ಯದಾನವರಿಂದ ರಕ್ಷಿತ ತ್ರಿಪುರದ ಕಡೆಗೆ ನಡೆಸಿದನು.
08024115a ಅಥಾಧಿಜ್ಯಂ ಧನುಃ ಕೃತ್ವಾ ಶರ್ವಃ ಸಂಧಾಯ ತಂ ಶರಂ|
08024115c ಯುಕ್ತ್ವಾ ಪಾಶುಪತಾಸ್ತ್ರೇಣ ತ್ರಿಪುರಂ ಸಮಚಿಂತಯತ್||
ಕೂಡಲೆ ಶರ್ವನು ಧನುಸ್ಸಿಗೆ ಹೆದೆಯನ್ನೇರಿಸಿ ಆ ಶರವನ್ನು ಹೂಡಿ ಪಾಶುಪತಾಸ್ತ್ರವನ್ನು ಅನುಸಂಧಾನಮಾಡಿ ತ್ರಿಪುರವನ್ನು ನೆನೆಸಿಕೊಂಡನು.
08024116a ತಸ್ಮಿನ್ ಸ್ಥಿತೇ ತದಾ ರಾಜನ್ ಕ್ರುದ್ಧೇ ವಿಧೃತಕಾರ್ಮುಕೇ|
08024116c ಪುರಾಣಿ ತಾನಿ ಕಾಲೇನ ಜಗ್ಮುರೇಕತ್ವತಾಂ ತದಾ||
ರಾಜನ್! ಹಾಗೆ ಧನುಸ್ಸನ್ನು ಎಳೆದು ಕ್ರುದ್ಧನಾಗಿ ಅವನು ನಿಂತಿರಲು ಕಾಲಾಂತರದಲ್ಲಿ ಆ ಪುರಗಳು ಒಂದೇ ಸಾಲಿನಲ್ಲಿ ಬಂದವು.
08024117a ಏಕೀಭಾವಂ ಗತೇ ಚೈವ ತ್ರಿಪುರೇ ಸಮುಪಾಗತೇ|
08024117c ಬಭೂವ ತುಮುಲೋ ಹರ್ಷೋ ದೈವತಾನಾಂ ಮಹಾತ್ಮನಾಂ||
ತ್ರಿಪುರಗಳು ಒಂದೇ ಸಾಲಿನಲ್ಲಿ ಬಂದು ಸೇರಲು ಮಹಾತ್ಮ ದೇವತೆಗಳಲ್ಲಿ ತುಮುಲ ಹರ್ಷೋದ್ಗಾರವಾಯಿತು.
08024118a ತತೋ ದೇವಗಣಾಃ ಸರ್ವೇ ಸಿದ್ಧಾಶ್ಚ ಪರಮರ್ಷಯಃ|
08024118c ಜಯೇತಿ ವಾಚೋ ಮುಮುಚುಃ ಸಂಸ್ತುವಂತೋ ಮುದಾನ್ವಿತಾಃ||
ಆಗ ದೇವಗಣಗಳೆಲ್ಲವೂ, ಸಿದ್ಧ-ಪರಮ ಋಷಿಗಳೂ ಮುದಾನ್ವಿತರಾಗಿ “ಜಯ! ಜಯ!” ಎಂದು ಉದ್ಗರಿಸಿದರು.
08024119a ತತೋಽಗ್ರತಃ ಪ್ರಾದುರಭೂತ್ತ್ರಿಪುರಂ ಜಘ್ನುಷೋಽಸುರಾನ್|
08024119c ಅನಿರ್ದೇಶ್ಯೋಗ್ರವಪುಷೋ ದೇವಸ್ಯಾಸಹ್ಯತೇಜಸಃ||
ಆಗ ಅಸುರರನ್ನು ಸಂಹರಿಸುತ್ತಿದ್ದ ಅವರ್ಣನೀಯ, ಉಗ್ರರೂಪೀ, ಸಹಿಸಲಸಾಧ್ಯ ತೇಜಸ್ಸಿನಿಂದ ಕೂಡಿದ್ದ ದೇವನ ಎದುರಿಗೆ ತ್ರಿಪುರಗಳು ಒಟ್ಟಿಗೇ ಪ್ರಕಟವಾದವು.
08024120a ಸ ತದ್ವಿಕೃಷ್ಯ ಭಗವಾನ್ದಿವ್ಯಂ ಲೋಕೇಶ್ವರೋ ಧನುಃ|
08024120c ತ್ರೈಲೋಕ್ಯಸಾರಂ ತಮಿಷುಂ ಮುಮೋಚ ತ್ರಿಪುರಂ ಪ್ರತಿ|
08024120e ತತ್ಸಾಸುರಗಣಂ ದಗ್ಧ್ವಾ ಪ್ರಾಕ್ಷಿಪತ್ಪಶ್ಚಿಮಾರ್ಣವೇ||
ಭಗವಾನ್ ಲೋಕೇಶ್ವರನು ಆ ಧನುಸ್ಸನ್ನು ಸೆಳೆದು ತ್ರೈಲೋಕ್ಯಸಾರವಾಗಿದ್ದ ಆ ಬಾಣವನ್ನು ತ್ರಿಪುರದ ಕಡೆ ಪ್ರಯೋಗಿಸಿದನು. ಅದು ಅಲ್ಲಿರುವ ಅಸುರಗಣಗಳೊಂದಿಗೆ ತ್ರಿಪುರಗಳನ್ನು ಸುಟ್ಟು ಪಶ್ಚಿಪಸಮುದ್ರದಲ್ಲಿ ಹಾಕಿಬಿಟ್ಟಿತು.
08024121a ಏವಂ ತತ್ತ್ರಿಪುರಂ ದಗ್ಧಂ ದಾನವಾಶ್ಚಾಪ್ಯಶೇಷತಃ|
08024121c ಮಹೇಶ್ವರೇಣ ಕ್ರುದ್ಧೇನ ತ್ರೈಲೋಕ್ಯಸ್ಯ ಹಿತೈಷಿಣಾ||
ಹೀಗೆ ದಾನವರ್ಯಾರನ್ನೂ ಉಳಿಸದೇ ತ್ರೈಲೋಕ್ಯದ ಹಿತೈಷಿಣಿಯಾದ ಮಹೇಶ್ವರನು ಕ್ರೋಧದಿಂದ ಆ ತ್ರಿಪುರಗಳನ್ನು ಸುಟ್ಟುಹಾಕಿದನು.
08024122a ಸ ಚಾತ್ಮಕ್ರೋಧಜೋ ವಹ್ನಿರ್ಹಾಹೇತ್ಯುಕ್ತ್ವಾ ನಿವಾರಿತಃ|
08024122c ಮಾ ಕಾರ್ಷೀರ್ಭಸ್ಮಸಾಲ್ಲೋಕಾನಿತಿ ತ್ರ್ಯಕ್ಷೋಽಬ್ರವೀಚ್ಚ ತಂ||
ಆತ್ಮಕ್ರೋಧದಿಂದ ಹುಟ್ಟಿದ ಅಗ್ನಿಯನ್ನೂ ಅವನು ಹಾಹಾ ಎಂದು ಪ್ರಶಮನಗೊಳಿಸಿ, ಅದಕ್ಕೆ “ಲೋಕಗಳನ್ನೆಲ್ಲ ಭಸ್ಮೀಕೃತವನ್ನಾಗಿಸಬೇಡ!” ಎಂದನು.
08024123a ತತಃ ಪ್ರಕೃತಿಮಾಪನ್ನಾ ದೇವಾ ಲೋಕಾಸ್ತಥರ್ಷಯಃ|
08024123c ತುಷ್ಟುವುರ್ವಾಗ್ಭಿರರ್ಥ್ಯಾಭಿಃ ಸ್ಥಾಣುಮಪ್ರತಿಮೌಜಸಂ||
ಆಗ ಪ್ರಕೃತಿಯನ್ನೂ ಸೇರಿ ದೇವತೆಗಳೂ, ಮೂರು ಲೋಕಗಳೂ, ಋಷಿಗಳೂ ಸಂತೋಷಗೊಂಡು ಅಮಿತ ತೇಜಸ್ವಿ ಸ್ಥಾಣುವನ್ನು ಸ್ತುತಿಗಳಿಂದ ಸ್ತೋತ್ರಮಾಡಿದರು.
08024124a ತೇಽನುಜ್ಞಾತಾ ಭಗವತಾ ಜಗ್ಮುಃ ಸರ್ವೇ ಯಥಾಗತಂ|
08024124c ಕೃತಕಾಮಾಃ ಪ್ರಸನ್ನೇನ ಪ್ರಜಾಪತಿಮುಖಾಃ ಸುರಾಃ||
ಭಗವಂತನ ಅನುಜ್ಞೆಯನ್ನು ಪಡೆದು ಪ್ರಜಾಪತಿಯ ನಾಯಕತ್ವದಲ್ಲಿದ್ದ ಸುರರು ಎಲ್ಲರೂ ಬಯಸಿದುದು ಆಯಿತೆಂದು ಪ್ರಸನ್ನರಾಗಿ ಎಲ್ಲಿಂದ ಬಂದಿದ್ದರೋ ಅಲ್ಲಿಗೆ ತೆರಳಿದರು.
08024125a ಯಥೈವ ಭಗವಾನ್ಬ್ರಹ್ಮಾ ಲೋಕಧಾತಾ ಪಿತಾಮಹಃ|
08024125c ಸಮ್ಯಚ್ಚ ತ್ವಂ ಹಯಾನಸ್ಯ ರಾಧೇಯಸ್ಯ ಮಹಾತ್ಮನಃ||
ಲೋಕಧಾತಾ ಪಿತಾಮಹ ಭಗವಾನ್ ಬ್ರಹ್ಮನು ಹೇಗೋ ಹಾಗೆ ನೀನು ಮಹಾತ್ಮ ರಾಧೇಯನ ಕುದುರೆಗಳನ್ನು ನಡೆಸು.
08024126a ತ್ವಂ ಹಿ ಕೃಷ್ಣಾಚ್ಚ ಕರ್ಣಾಚ್ಚ ಫಲ್ಗುನಾಚ್ಚ ವಿಶೇಷತಃ|
08024126c ವಿಶಿಷ್ಟೋ ರಾಜಶಾರ್ದೂಲ ನಾಸ್ತಿ ತತ್ರ ವಿಚಾರಣಾ||
ರಾಜಶಾರ್ದೂಲ! ಏಕೆಂದರೆ ನೀನು ಕೃಷ್ಣನಿಗೂ ಕರ್ಣನಿಗೂ ವಿಶೇಷವಾಗಿ ಫಲ್ಗುನನಿಗೂ ವಿಶಿಷ್ಟನಾದವನು. ಅದರಲ್ಲಿ ವಿಚಾರಮಾಡುವಂಥದೇನೂ ಇಲ್ಲ.
08024127a ಯುದ್ಧೇ ಹ್ಯಯಂ ರುದ್ರಕಲ್ಪಸ್ತ್ವಂ ಚ ಬ್ರಹ್ಮಸಮೋಽನಘ|
08024127c ತಸ್ಮಾಚ್ಚಕ್ತೌ ಯುವಾಂ ಜೇತುಂ ಮಚ್ಚತ್ರೂಂಸ್ತಾವಿವಾಸುರಾನ್||
ಯುದ್ಧದಲ್ಲಿ ಈ ಕರ್ಣನು ರುದ್ರಕಲ್ಪನು. ಅನಘ! ನೀನು ಬ್ರಹ್ಮನಿಗೆ ಸಮನಾಗಿರುವೆ. ಅವರಿಬ್ಬರೂ ಹೇಗೆ ಅಸುರರನ್ನು ಗೆದ್ದರೋ ಹಾಗೆ ನೀವಿಬ್ಬರೂ ನನ್ನ ಶತ್ರುಗಳನ್ನು ಗೆಲ್ಲಲು ಶಕ್ಯರಾಗಿರುವಿರಿ.
08024128a ಯಥಾ ಶಲ್ಯಾದ್ಯ ಕರ್ಣೋಽಯಂ ಶ್ವೇತಾಶ್ವಂ ಕೃಷ್ಣಸಾರಥಿಂ|
08024128c ಪ್ರಮಥ್ಯ ಹನ್ಯಾತ್ಕೌಂತೇಯಂ ತಥಾ ಶೀಘ್ರಂ ವಿಧೀಯತಾಂ|
08024128e ತ್ವಯಿ ಕರ್ಣಶ್ಚ ರಾಜ್ಯಂ ಚ ವಯಂ ಚೈವ ಪ್ರತಿಷ್ಠಿತಾಃ||
ಶಲ್ಯ! ಇಂದು ಈ ಕರ್ಣನು ಹೇಗೆ ಕೃಷ್ಣನು ಸಾರಥಿಯಾಗಿರುವ ಶ್ವೇತಾಶ್ವ ಕೌಂತೇಯನನ್ನು ಸದೆಬಡಿದು ಕೊಲ್ಲುವನೋ ಹಾಗೆ ನೀನೂ ಕೂಡ ಶೀಘ್ರವಾಗಿ ಕಾರ್ಯವನ್ನು ಕೈಗೊಳ್ಳಬೇಕಾಗಿದೆ. ರಾಜ್ಯ ಮತ್ತು ನಾವೆಲ್ಲರೂ ನೀನು ಮತ್ತು ಕರ್ಣರನ್ನೇ ಅವಲಂಬಿಸಿದ್ದೇವೆ.
08024129a ಇಮಂ ಚಾಪ್ಯಪರಂ ಭೂಯ ಇತಿಹಾಸಂ ನಿಬೋಧ ಮೇ|
08024129c ಪಿತುರ್ಮಮ ಸಕಾಶೇ ಯಂ ಬ್ರಾಹ್ಮಣಃ ಪ್ರಾಹ ಧರ್ಮವಿತ್||
ನನ್ನ ತಂದೆಯಲ್ಲಿ ಧರ್ಮವಿದು ಬ್ರಾಹ್ಮಣನೋರ್ವನು ಹೇಳಿದ ಇನ್ನೊಂದು ಇತಿಹಾಸವಿದೆ ಅದನ್ನು ಕೇಳು.
08024130a ಶ್ರುತ್ವಾ ಚೈತದ್ವಚಶ್ಚಿತ್ರಂ ಹೇತುಕಾರ್ಯಾರ್ಥಸಂಹಿತಂ|
08024130c ಕುರು ಶಲ್ಯ ವಿನಿಶ್ಚಿತ್ಯ ಮಾ ಭೂದತ್ರ ವಿಚಾರಣಾ||
ಶಲ್ಯ! ಕಾರ್ಯ-ಕಾರಣ-ಪ್ರಯೋಜನಗಳಿಂದ ಕೂಡಿದ ಈ ವಿಚಿತ್ರ ವಚನವನ್ನು ಕೇಳಿ ನಿಶ್ಚಯಮಾಡು. ಪುನಃ ಪುನಃ ಯೋಚಿಸಬೇಡ.
08024131a ಭಾರ್ಗವಾಣಾಂ ಕುಲೇ ಜಾತೋ ಜಮದಗ್ನಿರ್ಮಹಾತಪಾಃ|
08024131c ತಸ್ಯ ರಾಮೇತಿ ವಿಖ್ಯಾತಃ ಪುತ್ರಸ್ತೇಜೋಗುಣಾನ್ವಿತಃ||
ಭಾರ್ಗವರ ಕುಲದಲ್ಲಿ ಮಹಾತಪಸ್ವಿ ಜಮದಗ್ನಿಯು ಜನಿಸಿದನು. ಅವನ ತೇಜೋಗುಣಾನ್ವಿತ ಮಗನು ರಾಮನೆಂದು ವಿಖ್ಯಾತನಾದನು.
08024132a ಸ ತೀವ್ರಂ ತಪ ಆಸ್ಥಾಯ ಪ್ರಸಾದಯಿತವಾನ್ಭವಂ|
08024132c ಅಸ್ತ್ರಹೇತೋಃ ಪ್ರಸನ್ನಾತ್ಮಾ ನಿಯತಃ ಸಂಯತೇಂದ್ರಿಯಃ||
ಅಸ್ತ್ರಗಳಿಗೋಸ್ಕರವಾಗಿ ಅವನು ಪ್ರಸನ್ನಾತ್ಮನಾಗಿ, ನಿಯತಾತ್ಮನಾಗಿ ಮತ್ತು ಇಂದ್ರಿಯಗಳನ್ನು ಸಂಯಮದಲ್ಲಿರಿಸಿಕೊಂಡು ತೀವ್ರ ತಪಸ್ಸನ್ನಾಚರಿಸಿ ಭವನನ್ನು ತೃಪ್ತಿಗೊಳಿಸಿದನು.
08024133a ತಸ್ಯ ತುಷ್ಟೋ ಮಹಾದೇವೋ ಭಕ್ತ್ಯಾ ಚ ಪ್ರಶಮೇನ ಚ|
08024133c ಹೃದ್ಗತಂ ಚಾಸ್ಯ ವಿಜ್ಞಾಯ ದರ್ಶಯಾಮಾಸ ಶಂಕರಃ||
ಅವನ ಭಕ್ತಿ ಮತ್ತು ಸಂಯಮಗಳಿಗೆ ಮೆಚ್ಚಿದ ಮಹಾದೇವ ಶಂಕರನು ಅವನ ಹೃದಯದಲ್ಲಿರುವುದನ್ನು ತಿಳಿದು ಪ್ರತ್ಯಕ್ಷನಾದನು.
08024134 ಈಶ್ವರ ಉವಾಚ|
08024134a ರಾಮ ತುಷ್ಟೋಽಸ್ಮಿ ಭದ್ರಂ ತೇ ವಿದಿತಂ ಮೇ ತವೇಪ್ಸಿತಂ|
08024134c ಕುರುಷ್ವ ಪೂತಮಾತ್ಮಾನಂ ಸರ್ವಮೇತದವಾಪ್ಸ್ಯಸಿ||
ಈಶ್ವರನು ಹೇಳಿದನು: “ರಾಮ! ಸಂತುಷ್ಟನಾಗಿದ್ದೇನೆ. ನಿನಗೆ ಮಂಗಳವಾಗಲಿ! ನೀನು ಬಯಸಿರುವುದು ನನಗೆ ತಿಳಿದಿದೆ. ನಿನ್ನನ್ನು ಪರಿಶುದ್ಧಗೊಳಿಸಿಕೋ! ಬಯಸಿದುದೆಲ್ಲವನ್ನೂ ಪಡೆದುಕೊಳ್ಳುವೆ!
08024135a ದಾಸ್ಯಾಮಿ ತೇ ತದಾಸ್ತ್ರಾಣಿ ಯದಾ ಪೂತೋ ಭವಿಷ್ಯಸಿ|
08024135c ಅಪಾತ್ರಮಸಮರ್ಥಂ ಚ ದಹಂತ್ಯಸ್ತ್ರಾಣಿ ಭಾರ್ಗವ||
ಭಾರ್ಗವ! ನೀನು ಪವಿತ್ರನಾದಾಗ ನಾನು ನಿನಗೆ ಆ ಅಸ್ತ್ರಗಳನ್ನು ನೀಡುತ್ತೇನೆ. ಅಸ್ತ್ರಗಳು ಅಪಾತ್ರನನ್ನು ಮತ್ತು ಅಸಮರ್ಥನನ್ನು ಸುಟ್ಟುಬಿಡುತ್ತವೆ.”
08024136a ಇತ್ಯುಕ್ತೋ ಜಾಮದಗ್ನ್ಯಸ್ತು ದೇವದೇವೇನ ಶೂಲಿನಾ|
08024136c ಪ್ರತ್ಯುವಾಚ ಮಹಾತ್ಮಾನಂ ಶಿರಸಾವನತಃ ಪ್ರಭುಂ||
ದೇವದೇವ ಶೂಲಿಯು ಹೀಗೆ ಹೇಳಲು ಜಾಮದಗ್ನಿ ರಾಮನು ಮಹಾತ್ಮ ಪ್ರಭುವಿಗೆ ಶಿರಸಾವಹಿಸಿ ಪ್ರತ್ಯುತ್ತರಿಸಿದನು:
08024137a ಯದಾ ಜಾನಾಸಿ ದೇವೇಶ ಪಾತ್ರಂ ಮಾಮಸ್ತ್ರಧಾರಣೇ|
08024137c ತದಾ ಶುಶ್ರೂಷತೇಽಸ್ತ್ರಾಣಿ ಭವಾನ್ಮೇ ದಾತುಮರ್ಹತಿ||
“ದೇವೇಶ! ನಾನು ಅಸ್ತ್ರಧಾರಣೆಗೆ ಪಾತ್ರನೆಂದು ನಿನಗೆ ಎಂದು ಅನಿಸುತ್ತದೆಯೋ ಆಗಲೇ ನೀನು ನಿನ್ನ ಶುಶ್ರೂಷಣೆಯಲ್ಲಿ ನಿರತನಾದ ನನಗೆ ದಯಪಾಲಿಸಬೇಕು!””
08024138 ದುರ್ಯೋಧನ ಉವಾಚ|
08024138a ತತಃ ಸ ತಪಸಾ ಚೈವ ದಮೇನ ನಿಯಮೇನ ಚ|
08024138c ಪೂಜೋಪಹಾರಬಲಿಭಿರ್ಹೋಮಮಂತ್ರಪುರಸ್ಕೃತೈಃ||
08024139a ಆರಾಧಯಿತವಾಂ ಶರ್ವಂ ಬಹೂನ್ವರ್ಷಗಣಾಂಸ್ತದಾ|
08024139c ಪ್ರಸನ್ನಶ್ಚ ಮಹಾದೇವೋ ಭಾರ್ಗವಸ್ಯ ಮಹಾತ್ಮನಃ||
ದುರ್ಯೋಧನನು ಹೇಳಿದನು: “ಆಗ ಅವನು ತಪಸ್ಸು, ದಮ, ನಿಯಮ, ಪೂಜನ, ಉಪಾಹಾರ, ಬಲಿ, ಹೋಮ, ಮತ್ತು ಮಂತ್ರಾದಿಗಳಿಂದ ಶರ್ವನನ್ನು ಅನೇಕ ವರ್ಷಗಳವರೆಗೆ ಆರಾಧಿಸಿದನು. ಮಹಾತ್ಮ ಭಾರ್ಗವನ ಮೇಲೆ ಮಹಾದೇವನು ಪ್ರಸನ್ನನಾದನು.
08024140a ಅಬ್ರವೀತ್ತಸ್ಯ ಬಹುಶೋ ಗುಣಾನ್ದೇವ್ಯಾಃ ಸಮೀಪತಃ|
08024140c ಭಕ್ತಿಮಾನೇಷ ಸತತಂ ಮಯಿ ರಾಮೋ ದೃಢವ್ರತಃ||
ಶಂಕರನು ದೇವಿಯ ಸಮೀಪದಲ್ಲಿಯೇ “ದೃಢವ್ರತನಾದ ಈ ರಾಮನಿಗೆ ನನ್ನಲ್ಲಿ ಸತತ ಭಕ್ತಿಯಿದೆ!” ಎಂದು ರಾಮನ ಅನೇಕ ಗುಣಗಳನ್ನು ವರ್ಣಿಸಿದನು.
08024141a ಏವಂ ತಸ್ಯ ಗುಣಾನ್ಪ್ರೀತೋ ಬಹುಶೋಽಕಥಯತ್ಪ್ರಭುಃ|
08024141c ದೇವತಾನಾಂ ಪಿತೄಣಾಂ ಚ ಸಮಕ್ಷಮರಿಸೂದನಃ||
ಈ ರೀತಿಯ ಅವನ ಗುಣಗಳನ್ನು ಸಂತೋಷಗೊಂಡ ಅರಿಸೂದನ ಪ್ರಭುವು ಅನೇಕ ಬಾರಿ ದೇವತೆಗಳು ಮತ್ತು ಪಿತೃಗಳ ಸಮಕ್ಷಮದಲ್ಲಿ ಹೇಳಿದನು.
08024142a ಏತಸ್ಮಿನ್ನೇವ ಕಾಲೇ ತು ದೈತ್ಯಾ ಆಸನ್ಮಹಾಬಲಾಃ|
08024142c ತೈಸ್ತದಾ ದರ್ಪಮೋಹಾಂದೈರಬಾಧ್ಯಂತ ದಿವೌಕಸಃ||
ಇದೇ ಸಮಯದಲ್ಲಿ ದೈತ್ಯರು ಮಹಾಬಲಶಾಲಿಗಳಾದರು. ಅವರು ದರ್ಪಮೋಹಗಳಿಂದ ದಿವೌಕಸರನ್ನು ಬಾಧಿಸುತ್ತಿದ್ದರು.
08024143a ತತಃ ಸಂಭೂಯ ವಿಬುಧಾಸ್ತಾನ್ ಹಂತುಂ ಕೃತನಿಶ್ಚಯಾಃ|
08024143c ಚಕ್ರುಃ ಶತ್ರುವಧೇ ಯತ್ನಂ ನ ಶೇಕುರ್ಜೇತುಮೇವ ತೇ||
ಆಗ ದೇವತೆಗಳೆಲ್ಲರೂ ಒಟ್ಟಾಗಿ ಅವರನ್ನು ಸಂಹರಿಸಲು ನಿಶ್ಚಯಿಸಿ ಶತ್ರುವಧೆಗಾಗಿ ಬಹಳ ಪ್ರಯತ್ನನಡೆಸಿದರು. ಆದರೆ ಅವರನ್ನು ಗೆಲ್ಲರು ಸಾಧ್ಯವಾಗಲಿಲ್ಲ.
08024144a ಅಭಿಗಮ್ಯ ತತೋ ದೇವಾ ಮಹೇಶ್ವರಮಥಾಬ್ರುವನ್|
08024144c ಪ್ರಸಾದಯಂತಸ್ತಂ ಭಕ್ತ್ಯಾ ಜಹಿ ಶತ್ರುಗಣಾನಿತಿ||
ಆಗ ದೇವತೆಗಳು ಮಹೇಶ್ವರನಲ್ಲಿಗೆ ಹೋಗಿ ಅವನನ್ನು ಭಕ್ತಿಯಿಂದ ಪ್ರಸನ್ನಗೊಳಿಸಿ ಶತ್ರುಗಣಗಳನ್ನು ಸಂಹರಿಸೆಂದು ಕೇಳಿಕೊಂಡರು.
08024145a ಪ್ರತಿಜ್ಞಾಯ ತತೋ ದೇವೋ ದೇವತಾನಾಂ ರಿಪುಕ್ಷಯಂ|
08024145c ರಾಮಂ ಭಾರ್ಗವಮಾಹೂಯ ಸೋಽಭ್ಯಭಾಷತ ಶಂಕರಃ||
ಶತ್ರುಗಳ ಕ್ಷಯವಾಗುವುದೆಂದು ದೇವತೆಗಳಿಗೆ ಪ್ರತಿಜ್ಞೆಮಾಡಿ ದೇವ ಶಂಕರನು ಭಾರ್ಗವ ರಾಮನನ್ನು ಕರೆದು ಹೀಗೆ ಹೇಳಿದನು:
08024146a ರಿಪೂನ್ಭಾರ್ಗವ ದೇವಾನಾಂ ಜಹಿ ಸರ್ವಾನ್ಸಮಾಗತಾನ್|
08024146c ಲೋಕಾನಾಂ ಹಿತಕಾಮಾರ್ಥಂ ಮತ್ಪ್ರೀತ್ಯರ್ಥಂ ತಥೈವ ಚ||
“ಭಾರ್ಗವ! ಒಂದಾಗಿರುವ ದೇವತೆಗಳ ರಿಪುಗಳೆಲ್ಲರನ್ನೂ ಸಂಹರಿಸು! ಲೋಕಗಳ ಕಾಮಾರ್ಥಹಿತಕ್ಕಾಗಿ ಮತ್ತು ನನ್ನ ಪ್ರೀತಿಗಾಗಿ ಈ ಕೆಲಸವನ್ನು ಮಾಡು!”
08024147 ರಾಮ ಉವಾಚ|
08024147a ಅಕೃತಾಸ್ತ್ರಸ್ಯ ದೇವೇಶ ಕಾ ಶಕ್ತಿರ್ಮೇ ಮಹೇಶ್ವರ|
08024147c ನಿಹಂತುಂ ದಾನವಾನ್ಸರ್ವಾನ್ಕೃತಾಸ್ತ್ರಾನ್ಯುದ್ಧದುರ್ಮದಾನ್||
ರಾಮನು ಹೇಳಿದನು: “ದೇವೇಶ! ಮಹೇಶ್ವರ! ಅಸ್ತ್ರವಿದ್ಯೆಯನ್ನೇ ತಿಳಿಯದಿರುವ ನನಗೆ ಕೃತಾಸ್ತ್ರರೂ ಯುದ್ಧದುರ್ಮದರೂ ಆದ ದಾನವರೆಲ್ಲರನ್ನೂ ಸಂಹರಿಸಲು ಹೇಗೆ ಸಾಧ್ಯ?”
08024148 ಈಶ್ವರ ಉವಾಚ|
08024148a ಗಚ್ಚ ತ್ವಂ ಮದನುಧ್ಯಾನಾನ್ನಿಹನಿಷ್ಯಸಿ ದಾನವಾನ್|
08024148c ವಿಜಿತ್ಯ ಚ ರಿಪೂನ್ಸರ್ವಾನ್ಗುಣಾನ್ಪ್ರಾಪ್ಸ್ಯಸಿ ಪುಷ್ಕಲಾನ್||
ಈಶ್ವರನು ಹೇಳಿದನು: “ಹೋಗು! ನನ್ನ ಅನುಧ್ಯಾನದಿಂದ ನೀನು ದಾನವರನ್ನು ಸಂಹರಿಸುತ್ತೀಯೆ. ಆ ರಿಪುಗಳೆಲ್ಲರನ್ನೂ ಜಯಿಸಿ ಪುಷ್ಕಲ ಗುಣಗಳನ್ನೂ ಪಡೆಯುವೆ!””
08024149 ದುರ್ಯೋಧನ ಉವಾಚ|
08024149a ಏತಚ್ಚ್ರುತ್ವಾ ಚ ವಚನಂ ಪ್ರತಿಗೃಹ್ಯ ಚ ಸರ್ವಶಃ|
08024149c ರಾಮಃ ಕೃತಸ್ವಸ್ತ್ಯಯನಃ ಪ್ರಯಯೌ ದಾನವಾನ್ಪ್ರತಿ||
ದುರ್ಯೋಧನನು ಹೇಳಿದನು: “ಅವನ ಈ ಮಾತನ್ನು ಕೇಳಿ ಎಲ್ಲವನ್ನೂ ಸ್ವೀಕರಿಸಿ ರಾಮನು ಸ್ವಸ್ತಿವಾಚನಗಳನ್ನು ಮಾಡಿಸಿಕೊಂಡು ದಾನವರಿದ್ದಲ್ಲಿಗೆ ಹೋದನು.
08024150a ಅವಧೀದ್ದೇವಶತ್ರೂಂಸ್ತಾನ್ಮದದರ್ಪಬಲಾನ್ವಿತಾನ್|
08024150c ವಜ್ರಾಶನಿಸಮಸ್ಪರ್ಶೈಃ ಪ್ರಹಾರೈರೇವ ಭಾರ್ಗವಃ||
ಭಾರ್ಗವನು ಮದದರ್ಪಬಲಾನ್ವಿತ ದೇವಶತ್ರುಗಳನ್ನು ವಜ್ರಾಯುಧ ಸ್ಪರ್ಷಕ್ಕೆ ಸಮಾನ ಪ್ರಹಾರಗಳಿಂದಲೇ ವಧಿಸಿದನು.
08024151a ಸ ದಾನವೈಃ ಕ್ಷತತನುರ್ಜಾಮದಗ್ನ್ಯೋ ದ್ವಿಜೋತ್ತಮಃ|
08024151c ಸಂಸ್ಪೃಷ್ಟಃ ಸ್ಥಾಣುನಾ ಸದ್ಯೋ ನಿರ್ವ್ರಣಃ ಸಮಜಾಯತ||
ದ್ವಿಜೋತ್ತಮ ಜಾಮದಗ್ನನ ದೇಹವನ್ನು ದಾನವರು ಗಾಯಗೊಳಿಸಿದ್ದರು. ಸ್ಥಾಣುವು ಅವನನ್ನು ಸ್ಪರ್ಶಿಸಿದ ಮಾತ್ರದಿಂದ ಅವನು ಗಾಯಗಳಿಲ್ಲದವನಾದನು.
08024152a ಪ್ರೀತಶ್ಚ ಭಗವಾನ್ದೇವಃ ಕರ್ಮಣಾ ತೇನ ತಸ್ಯ ವೈ|
08024152c ವರಾನ್ಪ್ರಾದಾದ್ಬ್ರಹ್ಮವಿದೇ ಭಾರ್ಗವಾಯ ಮಹಾತ್ಮನೇ||
ಅವನ ಕರ್ಮಗಳಿಂದ ಪ್ರೀತನಾದ ಭಗವಾನನು ಆ ಮಹಾತ್ಮ ಬ್ರಹ್ಮವಿದು ಭಾರ್ಗವನಿಗೆ ವರಗಳನ್ನಿತ್ತನು.
08024153a ಉಕ್ತಶ್ಚ ದೇವದೇವೇನ ಪ್ರೀತಿಯುಕ್ತೇನ ಶೂಲಿನಾ|
08024153c ನಿಪಾತಾತ್ತವ ಶಸ್ತ್ರಾಣಾಂ ಶರೀರೇ ಯಾಭವದ್ರುಜಾ||
08024154a ತಯಾ ತೇ ಮಾನುಷಂ ಕರ್ಮ ವ್ಯಪೋಢಂ ಭೃಗುನಂದನ|
08024154c ಗೃಹಾಣಾಸ್ತ್ರಾಣಿ ದಿವ್ಯಾನಿ ಮತ್ಸಕಾಶಾದ್ಯಥೇಪ್ಸಿತಂ||
ಪ್ರೀತಿಯುಕ್ತ ದೇವದೇವ ಶೂಲಿಯು ಹೇಳಿದನು: “ಭೃಗುನಂದನ! ಶಸ್ತ್ರಗಳ ನಿಪಾತಗಳಿಂದ ನಿನ್ನ ಶರೀರದಲ್ಲಿ ಆಗಿರುವ ಗಾಯಗಳಿಂದ ಮನುಷ್ಯಸಂಬಧವಾದ ನಿನ್ನ ಕರ್ಮಗಳೆಲ್ಲವೂ ಕಳೆದುಹೋದವು (ನೀನೀಗ ಪೂತನಾಗಿ ದೇವಸದೃಶನಾಗಿರುವೆ!). ನಿನ್ನ ಇಚ್ಛೆಯಂತೆಯೇ ನನ್ನಿಂದ ದಿವ್ಯಾಸ್ತ್ರಗಳನ್ನು ಸ್ವೀಕರಿಸು!”
08024155a ತತೋಽಸ್ತ್ರಾಣಿ ಸಮಸ್ತಾನಿ ವರಾಂಶ್ಚ ಮನಸೇಪ್ಸಿತಾನ್|
08024155c ಲಬ್ಧ್ವಾ ಬಹುವಿಧಾನ್ರಾಮಃ ಪ್ರಣಮ್ಯ ಶಿರಸಾ ಶಿವಂ||
08024156a ಅನುಜ್ಞಾಂ ಪ್ರಾಪ್ಯ ದೇವೇಶಾಚ್ಜಗಾಮ ಸ ಮಹಾತಪಾಃ|
ಆಗ ಮನಸ್ಸಿನಲ್ಲಿ ಬಯಸಿದ ಬಹುವಿಧದ ಅಸ್ತ್ರಗಳನ್ನೂ ವರಗಳನ್ನೂ ಪಡೆದ ಆ ಮಹಾತಪಸ್ವಿ ರಾಮನು ಶಿವನಿಗೆ ಶಿರಸಾ ಪ್ರಣಾಮಮಾಡಿ ದೇವೇಶನ ಅನುಜ್ಞೆಯನ್ನು ಪಡೆದು ಹೊರಟುಹೋದನು.
08024156c ಏವಮೇತತ್ಪುರಾವೃತ್ತಂ ತದಾ ಕಥಿತವಾನೃಷಿಃ||
08024157a ಭಾರ್ಗವೋಽಪ್ಯದದಾತ್ಸರ್ವಂ ಧನುರ್ವೇದಂ ಮಹಾತ್ಮನೇ|
08024157c ಕರ್ಣಾಯ ಪುರುಷವ್ಯಾಘ್ರ ಸುಪ್ರೀತೇನಾಂತರಾತ್ಮನಾ||
ಆಗ ಋಷಿಯು ಹೇಳಿದ್ದಂತೆ ಇದು ಹಿಂದೆ ನಡೆದ ವಿಷಯ. ಪುರುಷವ್ಯಾಘ್ರ! ಭಾರ್ಗವನು ಸರ್ವ ಧನುರ್ವೇದವನ್ನು ಮಹಾತ್ಮ ಕರ್ಣನ ಮೇಲೆ ಸುಪ್ರೀತನಾಗಿ ಅಂತರಾತ್ಮದಿಂದ ಅವನಿಗೆ ದಯಪಾಲಿಸಿದನು.
08024158a ವೃಜಿನಂ ಹಿ ಭವೇತ್ಕಿಂ ಚಿದ್ಯದಿ ಕರ್ಣಸ್ಯ ಪಾರ್ಥಿವ|
08024158c ನಾಸ್ಮೈ ಹ್ಯಸ್ತ್ರಾಣಿ ದಿವ್ಯಾನಿ ಪ್ರಾದಾಸ್ಯದ್ಭೃಗುನಂದನಃ||
ಪಾರ್ಥಿವ! ಕರ್ಣನಲ್ಲಿ ಸ್ವಲ್ಪವಾದರೂ ದೋಷಗಳಿದ್ದಿದ್ದರೆ ಭೃಗುನಂದನನು ಅವನಿಗೆ ಅ ದಿವ್ಯಾಸ್ತ್ರಗಳನ್ನು ದಯಪಾಲಿಸುತ್ತಿರಲಿಲ್ಲ.
08024159a ನಾಪಿ ಸೂತಕುಲೇ ಜಾತಂ ಕರ್ಣಂ ಮನ್ಯೇ ಕಥಂ ಚನ|
08024159c ದೇವಪುತ್ರಮಹಂ ಮನ್ಯೇ ಕ್ಷತ್ರಿಯಾಣಾಂ ಕುಲೋದ್ಭವಂ||
ಕರ್ಣನು ಸೂತಕುಲದಲ್ಲಿ ಹುಟ್ಟಿದವನೆಂದು ನಾನು ಎಂದೂ ಭಾವಿಸುವುದಿಲ್ಲ. ಅವನು ಕ್ಷತ್ರಿಯ ಕುಲದಲ್ಲಿ ಜನಿಸಿದ ದೇವಪುತ್ರನೆಂದೇ ತಿಳಿಯುತ್ತೇನೆ.
08024160a ಸಕುಂಡಲಂ ಸಕವಚಂ ದೀರ್ಘಬಾಹುಂ ಮಹಾರಥಂ|
08024160c ಕಥಮಾದಿತ್ಯಸದೃಶಂ ಮೃಗೀ ವ್ಯಾಘ್ರಂ ಜನಿಷ್ಯತಿ||
ಕುಂಡಲ, ಕವಚಗಳಿಂದ ಹುಟ್ಟಿದ ಆದಿತ್ಯಸದೃಶನಾದ ಈ ದೀರ್ಘಬಾಹು ಮಹಾರಥ ವ್ಯಾಘ್ರದಂತಿರುವವನು ಜಿಂಕೆಯಲ್ಲಿ ಹೇಗೆ ಹುಟ್ಟಿಯಾನು?
08024161a ಪಶ್ಯ ಹ್ಯಸ್ಯ ಭುಜೌ ಪೀನೌ ನಾಗರಾಜಕರೋಪಮೌ|
08024161c ವಕ್ಷಃ ಪಶ್ಯ ವಿಶಾಲಂ ಚ ಸರ್ವಶತ್ರುನಿಬರ್ಹಣಂ||
ಅವನ ಭುಜಗಳನ್ನು ನೋಡು. ಗಜರಾಜನ ಸೊಂಡಿಲಿನಂತೆ ದಪ್ಪವಾಗಿವೆ! ಸರ್ವಶತ್ರುಗಳನ್ನೂ ಸಂಹರಿಸಬಲ್ಲ ಅವನ ವಿಶಾಲ ವಕ್ಷಃಸ್ಥಳವನ್ನು ನೋಡು!”
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ತ್ರಿಪುರವಧೋಪಾಖ್ಯಾನೇ ಚತುರ್ವಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ತ್ರಿಪುರವಧೋಪಾಖ್ಯಾನ ಎನ್ನುವ ಇಪ್ಪತ್ನಾಲ್ಕನೇ ಅಧ್ಯಾಯವು.
Kannada Translation of Karna Parva, by Chapter:
- ಧೃತರಾಷ್ಟ್ರಸಂಜಯಸಂವಾದ
- ಸಂಜಯವಾಕ್ಯ
- ಧೃತರಾಷ್ಟ್ರಶೋಕ
- ಸಂಜಯವಾಕ್ಯ
- ಧೃತರಾಷ್ಟ್ರಪ್ರಶ್ನೆ
- ಕರ್ಣಾಭಿಷೇಕ
- ವ್ಯೂಹನಿರ್ಮಾಣ
- ಕ್ಷೇಮಧೂರ್ತಿವಧ
- ವಿಂದಾನುವಿಂದವಧ
- ಚಿತ್ರವಧ
- ಅಶ್ವತ್ಥಾಮಭೀಮಸೇನಯೋರ್ಯುದ್ಧ
- ಅಶ್ವತ್ಥಾಮಪರಾಜಯ
- ದಂಡವಧ
- ಸಂಕುಲಯುದ್ಧ
- ಪಾಂಡ್ಯವಧ
- ಸಂಕುಲಯುದ್ಧ
- ಕರ್ಣಯುದ್ಧ
- ಸಂಕುಲಯುದ್ಧ
- ಸಂಕುಲಯುದ್ಧ
- ಸಂಕುಲಯುದ್ಧ
- ಪ್ರಥಮಯುದ್ಧದಿವಸಾವಹಾರ
- ಕರ್ಣದುರ್ಯೋಧನಸಂವಾದ
- ಶಲ್ಯಸಾರಥ್ಯ
- ತ್ರಿಪುರವಧೋಪಾಖ್ಯಾನ
- ಶಲ್ಯಸಾರಥ್ಯಸ್ವೀಕಾರ
- ಕರ್ಣಶಲ್ಯಸಂವಾದ
- ಕರ್ಣಮದ್ರಾಧಿಪಸಂವಾದ
- ಕರ್ಣಶಲ್ಯಸಂವಾದೇ ಹಂಸಕಾಕೀಯೋಪಾಖ್ಯಾನ
- ಕರ್ಣಶಲ್ಯಸಂವಾದ
- ಕರ್ಣಶಲ್ಯಸಂವಾದ
- ಕರ್ಣಶಲ್ಯಸಂವಾದ
- ಸಂಕುಲಯುದ್ಧ
- ಸಂಕುಲಯುದ್ಧ
- ಕರ್ಣಾಪಯಾನ
- ಸಂಕುಲಯುದ್ಧ
- ಸಂಕುಲಯುದ್ಧ
- ಸಂಕುಲಯುದ್ಧ
- ಸಂಕುಲಯುದ್ಧ
- ಪಾರ್ಥಾಪಯಾನ
- ಸಂಕುಲಯುದ್ಧ
- ಅಶ್ವತ್ಥಾಮಪ್ರತಿಜ್ಞೆ
- ದ್ರೌಣ್ಯಪಯಾನ
- ಕೃಷ್ಣಾರ್ಜುನಸಂವಾದ
- ಸಂಕುಲಯುದ್ಧ
- ಧರ್ಮರಾಜಶೋಧನ
- ಯುಧಿಷ್ಠಿರವಾಕ್ಯ
- ಅರ್ಜುನವಾಕ್ಯ
- ಯುಧಿಷ್ಠಿರಕ್ರೋಧವಾಕ್ಯ
- ಯುಧಿಷ್ಠಿರಸಮಾಶ್ವಾಸನ
- ಕರ್ಣಾರ್ಜುನಸಂವಾದ
- ಶ್ರೀಕೃಷ್ಣವಾಕ್ಯ
- ಅರ್ಜುನವಾಕ್ಯ
- ಸಂಕುಲದ್ವಂದ್ವಯುದ್ಧ
- ಭೀಮಸೇನವಿಶೋಕಸಂವಾದ
- ಶಕುನಿಪರಾಜಯ
- ಸಂಕುಲಯುದ್ಧ
- ಸಂಕುಲಯುದ್ಧ
- ಸಂಕುಲಯುದ್ಧ
- ಸಂಕುಲಯುದ್ಧ
- ದುಃಶಾಸನಭೀಮಸೇನಯುದ್ಧ
- ದುಃಶಾಸನವಧ
- ವೃಷಸೇನವಧ
- ಕರ್ಣಾರ್ಜುನಸಮಾಗಮೇ ದ್ವೈರಥ
- ಅಶ್ವತ್ಥಾಮವಾಕ್ಯ
- ಕರ್ಣಾರ್ಜುನದ್ವೈರಥ
- ಕರ್ಣರಥಚಕ್ರಗ್ರಸನ
- ಕರ್ಣವಧ
- ರಣಭೂಮಿವರ್ಣನ
- ಯುಧಿಷ್ಠಿರಹರ್ಷ
