Karna Parva: Chapter 2

ಕರ್ಣ ಪರ್ವ

ದ್ರೋಣನು ಹತನಾದ ನಂತರ ಕೌರವಸೇನೆಯನ್ನು ಶೋಕವು ಆವರಿಸಿದ್ದುದು (೧-೫). ದುರ್ಯೋಧನನು ಹತಾಶಗೊಂಡ ಸೇನೆಯನ್ನು ಕರ್ಣನ ಯುದ್ಧಕೌಶಲ್ಯವನ್ನು ಹೊಗಳುತ್ತಾ ಹುರಿದುಂಬಿಸಲು ಪ್ರಯತ್ನಿಸಿದುದು (೬-೧೬). ಕರ್ಣನ ಪರಾಕ್ರಮ ಮತ್ತು ಮರಣದ ಸಂಕ್ಷಿಪ್ತ ವರದಿ (೧೭-೨೦).

08002001 ಸಂಜಯ ಉವಾಚ|

08002001a ಹತೇ ದ್ರೋಣೇ ಮಹೇಷ್ವಾಸೇ ತವ ಪುತ್ರಾ ಮಹಾರಥಾಃ|

08002001c ಬಭೂವುರಾಶ್ವಸ್ತಮುಖಾ ವಿಷಣ್ಣಾ ಗತಚೇತಸಃ||

ಸಂಜಯನು ಹೇಳಿದನು: “ಮಹೇಷ್ವಾಸ ದ್ರೋಣನು ಹತನಾಗಲು ನಿನ್ನ ಮಹಾರಥ ಪುತ್ರರು ಬಾಡಿದ ಮುಖವುಳ್ಳವರಾಗಿ ವಿಷಣ್ಣರಾಗಿ ಚೇತನವನ್ನೇ ಕಳೆದುಕೊಂಡರು.

08002002a ಅವಾಙ್ಮುಖಾಃ ಶಸ್ತ್ರಭೃತಃ ಸರ್ವ ಏವ ವಿಶಾಂ ಪತೇ|

08002002c ಅಪ್ರೇಕ್ಷಮಾಣಾಃ ಶೋಕಾರ್ತಾ ನಾಭ್ಯಭಾಷನ್ಪರಸ್ಪರಂ||

ವಿಶಾಂಪತೇ! ಶೋಕಾರ್ತರಾಗಿ ತಲೆ ತಗ್ಗಿಸಿಕೊಂಡಿದ್ದ ಆ ಎಲ್ಲ ಶಸ್ತ್ರಭೃತರೂ ಪರಸ್ಪರರನ್ನು ನೋಡುತ್ತಲೂ ಇರಲಿಲ್ಲ ಮತ್ತು ಪರಸ್ಪರರೊಂದಿಗೆ ಮಾತನಾಡುತ್ತಲೂ ಇರಲಿಲ್ಲ.

08002003a ತಾನ್ದೃಷ್ಟ್ವಾ ವ್ಯಥಿತಾಕಾರಾನ್ಸೈನ್ಯಾನಿ ತವ ಭಾರತ|

08002003c ಊರ್ಧ್ವಮೇವಾಭ್ಯವೇಕ್ಷಂತ ದುಃಖತ್ರಸ್ತಾನ್ಯನೇಕಶಃ||

ಭಾರತ! ಅವರನ್ನು ನೋಡಿ ನಿನ್ನ ಸೇನೆಗಳು ಕೂಡ ವ್ಯಥೆಗೊಂಡವು. ದುಃಖದಿಂದ ನಡುಗುತ್ತಾ ಮೇಲೆ ಆಕಾಶವನ್ನೇ ಮತ್ತೆ ಮತ್ತೆ ನೋಡುತ್ತಿದ್ದರು.

08002004a ಶಸ್ತ್ರಾಣ್ಯೇಷಾಂ ಚ ರಾಜೇಂದ್ರ ಶೋಣಿತಾಕ್ತಾನ್ಯಶೇಷತಃ|

08002004c ಪ್ರಾಭ್ರಶ್ಯಂತ ಕರಾಗ್ರೇಭ್ಯೋ ದೃಷ್ಟ್ವಾ ದ್ರೋಣಂ ನಿಪಾತಿತಂ||

ರಾಜೇಂದ್ರ! ದ್ರೋಣನು ಕೆಳಗುರುಳಿದುದನ್ನು ನೋಡಿ ರಕ್ತದಿಂದ ಸಂಪೂರ್ಣ ತೋಯ್ದು ಹೋಗಿದ್ದ ಶಸ್ತ್ರಗಳು ಸೈನಿಕರ ಕೈಗಳಿಂದ ಕೆಳಗಿ ಜಾರಿ ಬಿದ್ದವು.

08002005a ತಾನಿ ಬದ್ಧಾನ್ಯನಿಷ್ಟಾನಿ ಲಂಬಮಾನಾನಿ ಭಾರತ|

08002005c ಅದೃಶ್ಯಂತ ಮಹಾರಾಜ ನಕ್ಷತ್ರಾಣಿ ಯಥಾ ದಿವಿ||

ಭಾರತ! ಮಹಾರಾಜ! ಅವರು ಕಟ್ಟಿಕೊಂಡಿದ್ದ ಆಯುಧಗಳೂ ಅನಿಷ್ಟರೀತಿಯಲ್ಲಿ ಜೋಲಾಡುತ್ತಾ ಆಕಾಶದಲ್ಲಿರುವ ನಕ್ಷತ್ರಗಳಂತೆ ಕಾಣುತ್ತಿದ್ದವು.

08002006a ತಥಾರ್ತಂ ಸ್ತಿಮಿತಂ ದೃಷ್ಟ್ವಾ ಗತಸತ್ತ್ವಮಿವ ಸ್ಥಿತಂ|

08002006c ಸ್ವಂ ಬಲಂ ತನ್ಮಹಾರಾಜ ರಾಜಾ ದುರ್ಯೋಧನೋಽಬ್ರವೀತ್||

ಮಹಾರಾಜ! ಹೀಗೆ ಆರ್ತರಾಗಿ ಸತ್ತ್ವವನ್ನೇ ಕಳೆದುಕೊಂಡವರಂತೆ ಸ್ತಬ್ಧವಾಗಿ ನಿಂತಿರುವ ತನ್ನ ಸೇನೆಯನ್ನು ನೋಡಿ ರಾಜಾ ದುರ್ಯೋಧನನು ಅವರಿಗೆ ಹೇಳಿದನು:

08002007a ಭವತಾಂ ಬಾಹುವೀರ್ಯಂ ಹಿ ಸಮಾಶ್ರಿತ್ಯ ಮಯಾ ಯುಧಿ|

08002007c ಪಾಂಡವೇಯಾಃ ಸಮಾಹೂತಾ ಯುದ್ಧಂ ಚೇದಂ ಪ್ರವರ್ತಿತಂ||

“ಯುದ್ಧದಲ್ಲಿ ನಿಮ್ಮ ಬಾಹುವೀರ್ಯವನ್ನೇ ಆಶ್ರಯಿಸಿ ನಾನು ಪಾಂಡವರನ್ನು ಯುದ್ಧಕ್ಕೆ ಆಹ್ವಾನಿಸಿದ್ದೆನು. ಅದೇ ಯುದ್ಧವು ಈಗಲೂ ನಡೆಯುತ್ತಿದೆ.

08002008a ತದಿದಂ ನಿಹತೇ ದ್ರೋಣೇ ವಿಷಣ್ಣಮಿವ ಲಕ್ಷ್ಯತೇ|

08002008c ಯುಧ್ಯಮಾನಾಶ್ಚ ಸಮರೇ ಯೋಧಾ ವಧ್ಯಂತಿ ಸರ್ವತಃ||

ಈಗ ದ್ರೋಣನು ಹತನಾದುದರಿಂದ ನೀವು ವಿಷಣ್ಣರಾಗಿರುವಂತೆ ತೋರುತ್ತಿರುವಿರಿ. ಸಮರದಲ್ಲಿ ಯುದ್ಧಮಾಡುವಾಗ ಸಾಮಾನ್ಯವಾಗಿ ಯೋಧರು ವಧಿಸಲ್ಪಡುತ್ತಲೇ ಇರುತ್ತಾರೆ.

08002009a ಜಯೋ ವಾಪಿ ವಧೋ ವಾಪಿ ಯುಧ್ಯಮಾನಸ್ಯ ಸಂಯುಗೇ|

08002009c ಭವೇತ್ಕಿಮತ್ರ ಚಿತ್ರಂ ವೈ ಯುಧ್ಯಧ್ವಂ ಸರ್ವತೋಮುಖಾಃ||

ರಣದಲ್ಲಿ ಯುದ್ಧಮಾಡುವವನಿಗೆ ಜಯವಾಗಲೀ ವಧೆಯಾಗಲೀ ಆಗಿಯೇ ಆಗುತ್ತದೆ. ಅದರಲ್ಲಿ ವಿಚಿತ್ರವಾದುದೇನಿದೆ? ಎಲ್ಲಕಡೆಗಳಿಂದ ಶತ್ರುಗಳನ್ನು ಮುತ್ತಿ ಯುದ್ಧಮಾಡಿ!

08002010a ಪಶ್ಯಧ್ವಂ ಚ ಮಹಾತ್ಮಾನಂ ಕರ್ಣಂ ವೈಕರ್ತನಂ ಯುಧಿ|

08002010c ಪ್ರಚರಂತಂ ಮಹೇಷ್ವಾಸಂ ದಿವ್ಯೈರಸ್ತ್ರೈರ್ಮಹಾಬಲಂ||

ಯುದ್ಧದಲ್ಲಿ ದಿವ್ಯಾಸ್ತ್ರಗಳೊಂದಿಗೆ ಸಂಚರಿಸುತ್ತಿರುವ ಮಹೇಷ್ವಾಸ ಮಹಾಬಲ ಮಹಾತ್ಮ ವೈಕರ್ತನ ಕರ್ಣನನ್ನು ನೋಡಿ!

08002011a ಯಸ್ಯ ವೈ ಯುಧಿ ಸಂತ್ರಾಸಾತ್ಕುಂತೀಪುತ್ರೋ ಧನಂಜಯಃ|

08002011c ನಿವರ್ತತೇ ಸದಾಮರ್ಷಾತ್ಸಿಂಹಾತ್ ಕ್ಷುದ್ರಮೃಗೋ ಯಥಾ||

ಇವನಿಂದ ಯುದ್ಧದಲ್ಲಿ ಭಯಗೊಂಡ ಕುಂತೀಪುತ್ರ ಧನಂಜಯನು ಕ್ಷುದ್ರಮೃಗವೊಂದು ಸಿಂಹದಿಂದ ಹಿಂದೆಸರಿಯುವಂತೆ ಹಿಂದೆಸರಿಯುತ್ತಾನೆ.

08002012a ಯೇನ ನಾಗಾಯುತಪ್ರಾಣೋ ಭೀಮಸೇನೋ ಮಹಾಬಲಃ|

08002012c ಮಾನುಷೇಣೈವ ಯುದ್ಧೇನ ತಾಮವಸ್ಥಾಂ ಪ್ರವೇಶಿತಃ||

ಸಾವಿರ ಆನೆಗಳ ಬಲವಿರುವ ಮಹಾಬಲ ಭೀಮಸೇನನನ್ನು ಕೂಡ ಇವನು ಮಾನುಷ ಯುದ್ಧದಿಂದಲೇ ದುರವಸ್ಥೆಗೆ ಈಡುಮಾಡುವವನಿದ್ದಾನೆ.

08002013a ಯೇನ ದಿವ್ಯಾಸ್ತ್ರವಿಚ್ಚೂರೋ ಮಾಯಾವೀ ಸ ಘಟೋತ್ಕಚಃ|

08002013c ಅಮೋಘಯಾ ರಣೇ ಶಕ್ತ್ಯಾ ನಿಹತೋ ಭೈರವಂ ನದನ್||

08002014a ತಸ್ಯ ದುಷ್ಪಾರವೀರ್ಯಸ್ಯ ಸತ್ಯಸಂಧಸ್ಯ ಧೀಮತಃ|

08002014c ಬಾಹ್ವೋರ್ದ್ರವಿಣಮಕ್ಷಯ್ಯಮದ್ಯ ದ್ರಕ್ಷ್ಯಥ ಸಂಯುಗೇ||

ಮಾಯಾವೀ ಘಟೋತ್ಕಚನನ್ನು ರಣದಲ್ಲಿ ದಿವ್ಯಾಸ್ತ್ರ ಶಕ್ತಿಯಿಂದ ಸಂಹರಿಸಿ ಭೈರವವಾಗಿ ಕೂಗಿದ ಶೂರ ವೀರ ಸತ್ಯಸಂಧ ಧೀಮತ ಕರ್ಣನ ಬಾಹುಗಳ ಅಕ್ಷಯ್ಯ ಬಲವನ್ನು ಇಂದು ಯುದ್ಧದಲ್ಲಿ ನೋಡುವಿರಿ!

08002015a ದ್ರೋಣಪುತ್ರಸ್ಯ ವಿಕ್ರಾಂತಂ ರಾಧೇಯಸ್ಯೈವ ಚೋಭಯೋಃ|

08002015c ಪಾಂಡುಪಾಂಚಾಲಸೈನ್ಯೇಷು ದ್ರಕ್ಷ್ಯಥಾಪಿ ಮಹಾತ್ಮನೋಃ||

ಮಹಾತ್ಮರೇ! ಪಾಂಡು-ಪಾಂಚಾಲ ಸೇನೆಗಳ ಮೇಲೆ ದ್ರೋಣಪುತ್ರ ಮತ್ತು ರಾಧೇಯರಿಬ್ಬರೂ ತಮ್ಮ ವಿಕ್ರಾಂತವನ್ನು ಪ್ರಯೋಗಿಸುವುದನ್ನು ನೀವು ನೋಡಲಿರುವಿರಿ.

08002016a ಸರ್ವ ಏವ ಭವಂತಶ್ಚ ಶೂರಾಃ ಪ್ರಾಜ್ಞಾಃ ಕುಲೋದ್ಗತಾಃ|

08002016c ಶೀಲವಂತಃ ಕೃತಾಸ್ತ್ರಾಶ್ಚ ದ್ರಕ್ಷ್ಯಥಾದ್ಯ ಪರಸ್ಪರಂ||

ನೀವೆಲ್ಲರೂ ಶೂರರು, ಪ್ರಾಜ್ಞರು, ಉತ್ತಮ ಕುಲದಲ್ಲಿ ಉದ್ಭವಿಸಿದವರು. ಶೀಲವಂತರು ಮತ್ತು ಕೃತಾಸ್ತ್ರರು. ಪರಸ್ಪರರನ್ನು ರಕ್ಷಿಸಲು ಸಮರ್ಥರು.”

08002017a ಏವಮುಕ್ತೇ ಮಹಾರಾಜ ಕರ್ಣೋ ವೈಕರ್ತನೋ ನೃಪಃ|

08002017c ಸಿಂಹನಾದಂ ವಿನದ್ಯೋಚ್ಚೈಃ ಪ್ರಾಯುಧ್ಯತ ಮಹಾಬಲಃ||

ಮಹಾರಾಜ! ನೃಪನು ಹೀಗೆ ಹೇಳಲು ಮಹಾಬಲ ವೈಕರ್ತನ ಕರ್ಣನು ಜೋರಾಗಿ ಸಿಂಹನಾದಗೈದನು ಮತ್ತು ಯುದ್ಧವನ್ನು ಪ್ರಾರಂಭಿಸಿದನು.

08002018a ಸ ಸೃಂಜಯಾನಾಂ ಸರ್ವೇಷಾಂ ಪಾಂಚಾಲಾನಾಂ ಚ ಪಶ್ಯತಾಂ|

08002018c ಕೇಕಯಾನಾಂ ವಿದೇಹಾನಾಮಕರೋತ್ಕದನಂ ಮಹತ್||

ಎಲ್ಲರೂ ನೋಡುತ್ತಿದ್ದಂತೆಯೇ ಅವನು ಸೃಂಜಯ-ಪಾಂಚಾಲ-ಕೇಕಯರು ಮತ್ತು ವಿದೇಹದವರೊಂದಿಗೆ ಮಹಾ ಕದನವನ್ನು ನಡೆಸಿದನು.

08002019a ತಸ್ಯೇಷುಧಾರಾಃ ಶತಶಃ ಪ್ರಾದುರಾಸಂ ಶರಾಸನಾತ್|

08002019c ಅಗ್ರೇ ಪುಂಖೇ ಚ ಸಂಸಕ್ತಾ ಯಥಾ ಭ್ರಮರಪಂಕ್ತಯಃ||

ಅವನ ಧನುಸ್ಸಿನಿಂದ ಒಂದರ ಅಗ್ರಭಾಗವು ಇನ್ನೊಂದರ ಪುಂಖಗಳಿಗೆ ಅಂಟಿಕೊಂಡು ದುಂಬಿಗಳ ಸಾಲಿನಂತೆ ನೂರಾರು ಬಾಣಗಳು ಹೊರಬರುತ್ತಿದ್ದವು.

08002020a ಸ ಪೀಡಯಿತ್ವಾ ಪಾಂಚಾಲಾನ್ಪಾಂಡವಾಂಶ್ಚ ತರಸ್ವಿನಃ|

08002020c ಹತ್ವಾ ಸಹಸ್ರಶೋ ಯೋಧಾನರ್ಜುನೇನ ನಿಪಾತಿತಃ||

ಅವನು ಸಹಸ್ರಾರು ಯೋಧರನ್ನು ಸಂಹರಿಸಿ ತರಸ್ವಿಗಳಾಗಿದ್ದ ಪಾಂಚಾಲ-ಪಾಂಡವರನ್ನು ಬಹಳವಾಗಿ ಪೀಡಿಸಿ, ಅರ್ಜುನನಿಂದ ಹತನಾದನು.””

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಜಯವಾಕ್ಯೇ ದ್ವಿತೀಯೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಜಯವಾಕ್ಯ ಎನ್ನುವ ಎರಡನೇ ಅಧ್ಯಾಯವು.

Comments are closed.