Karna Parva: Chapter 10

ಕರ್ಣ ಪರ್ವ

೧೦

ಚಿತ್ರಸೇನ-ಚಿತ್ರರ ವಧೆ

ಶ್ರುತಸೇನನು ಅಭಿಸಾರರ ರಾಜ ಚಿತ್ರಸೇನನನ್ನು ವಧಿಸಿದುದು (೧-೧೬). ಪ್ರತಿವಿಂದ್ಯನಿಂದ ಚಿತ್ರನ ವಧೆ (೧೭-೩೬).

08010001 ಸಂಜಯ ಉವಾಚ|

08010001a ಶ್ರುತಕರ್ಮಾ ಮಹಾರಾಜ ಚಿತ್ರಸೇನಂ ಮಹೀಪತಿಂ|

08010001c ಆಜಘ್ನೇ ಸಮರೇ ಕ್ರುದ್ಧಃ ಪಂಚಾಶದ್ಭಿಃ ಶಿಲೀಮುಖೈಃ||

ಸಂಜಯನು ಹೇಳಿದನು: “ಮಹಾರಾಜ! ಸಮರದಲ್ಲಿ ಶ್ರುತಕರ್ಮನು ಕ್ರುದ್ಧನಾಗಿ ಮಹೀಪತಿ ಚಿತ್ರಸೇನನನ್ನು ಐವತ್ತು ಶಿಲೀಮುಖ ಶರಗಳಿಂದ ಗಾಯಗೊಳಿಸಿದನು.

08010002a ಅಭಿಸಾರಸ್ತು ತಂ ರಾಜಾ ನವಭಿರ್ನಿಶಿತೈಃ ಶರೈಃ|

08010002c ಶ್ರುತಕರ್ಮಾಣಮಾಹತ್ಯ ಸೂತಂ ವಿವ್ಯಾಧ ಪಂಚಭಿಃ||

ರಾಜಾ ಅಭಿಸಾರ ಚಿತ್ರಸೇನನು ಒಂಭತ್ತು ನಿಶಿತ ಶರಗಳಿಂದ ಶ್ರುತಕರ್ಮನನ್ನು ಹೊಡೆದು ಐದರಿಂದ ಸೂತನನ್ನು ಹೊಡೆದನು.

08010003a ಶ್ರುತಕರ್ಮಾ ತತಃ ಕ್ರುದ್ಧಶ್ಚಿತ್ರಸೇನಂ ಚಮೂಮುಖೇ|

08010003c ನಾರಾಚೇನ ಸುತೀಕ್ಷ್ಣೇನ ಮರ್ಮದೇಶೇ ಸಮರ್ದಯತ್||

ಆಗ ಕ್ರುದ್ಧ ಶ್ರುತಕರ್ಮನು ಸೇನಾಮುಖದಲ್ಲಿ ಚಿತ್ರಸೇನನನ್ನು ತೀಕ್ಷ್ಣ ಶರದಿಂದ ಮರ್ಮದೇಶದಲ್ಲಿ ಹೊಡೆದನು.

08010004a ಏತಸ್ಮಿನ್ನಂತರೇ ಚೈನಂ ಶ್ರುತಕೀರ್ತಿರ್ಮಹಾಯಶಾಃ|

08010004c ನವತ್ಯಾ ಜಗತೀಪಾಲಂ ಚಾದಯಾಮಾಸ ಪತ್ರಿಭಿಃ||

ಆ ಮಧ್ಯದಲ್ಲಿಯೇ ಮಹಾಯಶಸ್ವಿ ಶ್ರುತಕೀರ್ತಿಯು ತೊಂಭತ್ತು ಪತ್ರಿಗಳಿಂದ ಜಗತೀಪಾಲ ಚಿತ್ರಸೇನನನ್ನು ಪ್ರಹರಿಸಿದನು.

08010005a ಪ್ರತಿಲಬ್ಯ ತತಃ ಸಂಜ್ಞಾಂ ಚಿತ್ರಸೇನೋ ಮಹಾರಥಃ|

08010005c ಧನುಶ್ಚಿಚ್ಚೇದ ಭಲ್ಲೇನ ತಂ ಚ ವಿವ್ಯಾಧ ಸಪ್ತಭಿಃ||

ಆಗ ಸಂಜ್ಞೆಗಳನ್ನು ಪಡೆದ ಮಹಾರಥ ಚಿತ್ರಸೇನನು ಭಲ್ಲದಿಂದ ಶ್ರುತಕೀರ್ತಿಯ ಧನುಸ್ಸನ್ನು ತುಂಡರಿಸಿ ಏಳು ಶರಗಳಿಂದ ಅವನನ್ನು ಹೊಡೆದನು.

08010006a ಸೋಽನ್ಯತ್ಕಾರ್ಮುಕಮಾದಾಯ ವೇಗಘ್ನಂ ರುಕ್ಮಭೂಷಣಂ|

08010006c ಚಿತ್ರರೂಪತರಂ ಚಕ್ರೇ ಚಿತ್ರಸೇನಂ ಶರೋರ್ಮಿಭಿಃ||

ಶ್ರುತಕೀರ್ತಿಯು ವೇಗವನ್ನು ನಾಶಮಾಡುವ ರುಕ್ಮಭೂಷಣ ಚಿತ್ರರೂಪತರ ಅನ್ಯ ಧನುಸ್ಸನ್ನು ತೆಗೆದುಕೊಂಡು ಅಲೆಗಳ ರೂಪದಲ್ಲಿ ಬಾಣಗಳಿಂದ ಚಿತ್ರಸೇನನನ್ನು ಆಕ್ರಮಣಿಸಿದನು.

08010007a ಸ ಶರೈಶ್ಚಿತ್ರಿತೋ ರಾಜಂಶ್ಚಿತ್ರಮಾಲ್ಯಧರೋ ಯುವಾ|

08010007c ಯುವೇವ ಸಮಶೋಭತ್ಸ ಗೋಷ್ಠೀಮಧ್ಯೇ ಸ್ವಲಂಕೃತಃ||

ರಾಜನ್! ಶರಗಳಿಂದ ಚಿತ್ರಿತನಾದ ಚಿತ್ರಮಾಲ್ಯಧರ ಯುವಕ ಚಿತ್ರಸೇನನು ಗೋಷ್ಠಿಮಧ್ಯದಲ್ಲಿ ಸ್ವಲಂಕೃತ ಯುವಕನಂತೆ ಶೋಭಿಸಿದನು.

08010008a ಶ್ರುತಕರ್ಮಾಣಂ ಅಥ ವೈ ನಾರಾಚೇನ ಸ್ತನಾಂತರೇ|

08010008c ಬಿಭೇದ ಸಮರೇ ಕ್ರುದ್ಧಸ್ತಿಷ್ಠ ತಿಷ್ಠೇತಿ ಚಾಬ್ರವೀತ್||

ಕೂಡಲೇ ಅವನು ನಾರಾಚಗಳಿಂದ ಶ್ರುತಕರ್ಮನ ಸ್ತನಾಂತರದಲ್ಲಿ ಹೊಡೆದು ಸಮರದಲ್ಲಿ ಕ್ರುದ್ಧನಾಗಿ ನಿಲ್ಲು ನಿಲ್ಲೆಂದು ಹೇಳಿದನು.

08010009a ಶ್ರುತಕರ್ಮಾಪಿ ಸಮರೇ ನಾರಾಚೇನ ಸಮರ್ದಿತಃ|

08010009c ಸುಸ್ರಾವ ರುಧಿರಂ ಭೂರಿ ಗೈರಿಕಾಂಭ ಇವಾಚಲಃ||

ಸಮರದಲ್ಲಿ ನಾರಾಚಗಳಿಂದ ಗಾಯಗೊಂಡ ಶ್ರುತಕರ್ಮನಾದರೋ ಧಾತುಗಳನ್ನು ಸುರಿಸುವ ಗಿರಿಯಂತೆ ಬಹಳವಾಗಿ ರಕ್ತವನ್ನು ಸುರಿಸಿದನು.

08010010a ತತಃ ಸ ರುಧಿರಾಕ್ತಾಂಗೋ ರುಧಿರೇಣ ಕೃತಚ್ಚವಿಃ|

08010010c ರರಾಜ ಸಮರೇ ರಾಜನ್ಸಪುಷ್ಪ ಇವ ಕಿಂಶುಕ||

ರಾಜನ್! ರುಧಿರಕ್ತಾಂಗನಾದ ದೇಹವೆಲ್ಲಾ ರಕ್ತದಿಂದ ಲೇಪಿತಗೊಂಡಿರಲು ಶ್ರುತಕರ್ಮನು ಸಮರದಲ್ಲಿ ಹೂಬಿಟ್ಟ ಕಿಂಶುಕದಂತೆ ರಾಜಿಸಿದನು.

08010011a ಶ್ರುತಕರ್ಮಾ ತತೋ ರಾಜಂ ಶತ್ರೂಣಾಂ ಸಮಭಿದ್ರುತಃ|

08010011c ಶತ್ರುಸಂವರಣಂ ಕೃತ್ವಾ ದ್ವಿಧಾ ಚಿಚ್ಚೇದ ಕಾರ್ಮುಕಂ||

ರಾಜನ್! ಆಗ ಶತ್ರುಗಳನ್ನು ತಡೆಯುವ ಶ್ರುತಕರ್ಮನು ಸತ್ರುಸಂವರಣವನ್ನು ಮಾಡಿ ಅವನ ಕಾರ್ಮುಕವನ್ನು ಎರಡಾಗಿ ತುಂಡರಿಸಿದನು.

08010012a ಅಥೈನಂ ಚಿನ್ನಧನ್ವಾನಂ ನಾರಾಚಾನಾಂ ತ್ರಿಭಿಃ ಶತೈಃ|

08010012c ವಿವ್ಯಾಧ ಭರತಶ್ರೇಷ್ಠ ಶ್ರುತಕರ್ಮಾ ಮಹಾಯಶಾಃ||

ಕೂಡಲೇ ಭರತಶ್ರೇಷ್ಠ ಮಹಾಯಶಸ್ವಿ ಶ್ರುತಕರ್ಮನು ಧನುಸ್ಸು ತುಂಡಾದ ಚಿತ್ರಸೇನನನ್ನು ಮುನ್ನೂರು ನಾರಾಚಗಳಿಂದ ಪ್ರಹರಿಸಿದನು.

08010013a ತತೋಽಪರೇಣ ಭಲ್ಲೇನ ಭೃಶಂ ತೀಕ್ಷ್ಣೇನ ಸತ್ವರಃ|

08010013c ಜಹಾರ ಸಶಿರಸ್ತ್ರಾಣಂ ಶಿರಸ್ತಸ್ಯ ಮಹಾತ್ಮನಃ||

ಆಗ ಆ ಮಹಾತ್ಮ ಸತ್ವರನು ತೀಕ್ಷ್ಣ ಭಲ್ಲದಿಂದ ಶಿರಸ್ತ್ರಾಣದೊಂದಿಗೆ ಅವನ ಶಿರಸ್ಸನ್ನು ತುಂಡರಿಸಿದನು.

08010014a ತಚ್ಚಿರೋ ನ್ಯಪತದ್ಭೂಮೌ ಸುಮಹಚ್ಚಿತ್ರವರ್ಮಣಃ|

08010014c ಯದೃಚ್ಚಯಾ ಯಥಾ ಚಂದ್ರಶ್ಚ್ಯುತಃ ಸ್ವರ್ಗಾನ್ಮಹೀತಲೇ||

ದೈವೇಚ್ಛೆಯಿಂದ ಚಂದ್ರನು ಸ್ವರ್ಗದಿಂದ ಚ್ಯುತನಾಗಿ ಮಹೀತಲದಲ್ಲಿ ಬೀಳುವಂತೆ ಕಾಂತಿಯುಕ್ತ ಚಿತ್ರಸೇನನ ಶಿರಸ್ಸು ಭೂಮಿಯ ಮೇಲೆ ಬಿದ್ದಿತು.

08010015a ರಾಜಾನಂ ನಿಹತಂ ದೃಷ್ಟ್ವಾ ಅಭಿಸಾರಂ ಚ ಮಾರಿಷ|

08010015c ಅಭ್ಯದ್ರವಂತ ವೇಗೇನ ಚಿತ್ರಸೇನಸ್ಯ ಸೈನಿಕಾಃ||

ಮಾರಿಷ! ರಾಜಾ ಅಭಿಸಾರನು ಹತನಾದುದನ್ನು ಕಂಡು ಚಿತ್ರಸೇನನ ಸೈನಿಕರು ವೇಗದಿಂದ ಆಕ್ರಮಣಿಸಿದರು.

08010016a ತತಃ ಕ್ರುದ್ಧೋ ಮಹೇಷ್ವಾಸಸ್ತತ್ಸೈನ್ಯಂ ಪ್ರಾದ್ರವಚ್ಚರೈಃ|

08010016c ಅಂತಕಾಲೇ ಯಥಾ ಕ್ರುದ್ಧಃ ಸರ್ವಭೂತಾನಿ ಪ್ರೇತರಾಟ್|

08010016e ದ್ರಾವಯನ್ನಿಷುಭಿಸ್ತೂರ್ಣಂ ಶ್ರುತಕರ್ಮಾ ವ್ಯರೋಚತ||

ಅಗ ಕ್ರುದ್ಧ ಮಹೇಷ್ವಾಸ ಶ್ರುತಕರ್ಮನು ಅಂತಕಾಲದಲ್ಲಿ ಕ್ರುದ್ಧ ಪ್ರೇತರಾಜನು ಸರ್ವಭೂತಗಳನ್ನು ಹೇಗೋ ಹಾಗೆ ಬಾಣಗಳಿಂದ ತಕ್ಷಣವೇ ಆ ಸೇನೆಯನ್ನು ಓಡಿಸಿ ವಿರಾಜಿಸಿದನು.

08010017a ಪ್ರತಿವಿಂದ್ಯಸ್ತತಶ್ಚಿತ್ರಂ ಭಿತ್ತ್ವಾ ಪಂಚಭಿರಾಶುಗೈಃ|

08010017c ಸಾರಥಿಂ ತ್ರಿಭಿರಾನರ್ಚ್ಚದ್ಧ್ವಜಂ ಏಕೇಷುಣಾ ತತಃ||

ಅನಂತರ ಪ್ರತಿವಿಂದ್ಯನು ಚಿತ್ರನನ್ನು ಐದು ಆಶುಗಗಳಿಂದ ಭೇದಿಸಿ, ಮೂರರಿಂದ ಸಾರಥಿಯನ್ನು ಮತ್ತು ಒಂದು ಬಾಣದಿಂದ ಧ್ವಜವನ್ನು ಪ್ರಹರಿಸಿದನು.

08010018a ತಂ ಚಿತ್ರೋ ನವಭಿರ್ಭಲ್ಲೈರ್ಬಾಹ್ವೋರುರಸಿ ಚಾರ್ದಯತ್|

08010018c ಸ್ವರ್ಣಪುಂಖೈಃ ಶಿಲಾಧೌತೈಃ ಕಂಕಬರ್ಹಿಣವಾಜಿತೈಃ||

ಚಿತ್ರನು ಅವನ ಬಾಹು ಮತ್ತು ಎದೆಗಳಿಗೆ ಸ್ವರ್ಣಪುಂಖಗಳುಳ್ಳ, ಶಿಲಾಧೌತ, ಹದ್ದು-ನವಿಲುಗಳ ಗರಿಗಳುಳ್ಳ ಒಂಭತ್ತು ಭಲ್ಲಗಳಿಂದ ಹೊಡೆದನು.

08010019a ಪ್ರತಿವಿಂದ್ಯೋ ಧನುಸ್ತಸ್ಯ ಚಿತ್ತ್ವಾ ಭಾರತ ಸಾಯಕೈಃ|

08010019c ಪಂಚಭಿರ್ನಿಶಿತೈರ್ಬಾಣೈರಥೈನಂ ಸಂಪ್ರಜಘ್ನಿವಾನ್||

ಭಾರತ! ಪ್ರತಿವಿಂದ್ಯನು ಸಾಯಕಗಳಿಂದ ಅವನ ಧನುಸ್ಸನ್ನು ತುಂಡರಿಸಿ ಐದು ನಿಶಿತ ಬಾಣಗಳಿಂದ ಚಿತ್ರನನ್ನು ಗಾಯಗೊಳಿಸಿದನು.

08010020a ತತಃ ಶಕ್ತಿಂ ಮಹಾರಾಜ ಹೇಮದಂಡಾಂ ದುರಾಸದಾಂ|

08010020c ಪ್ರಾಹಿಣೋತ್ತವ ಪುತ್ರಾಯ ಘೋರಾಮಗ್ನಿಶಿಖಾಮಿವ||

ಆಗ ಮಹಾರಾಜ! ಚಿತ್ರನು ಹೇಮದಂಡದ ದುರಾಸದ ಅಗ್ನಿಶಿಖೆಯಂತೆ ಘೋರವಾಗಿದ್ದ ಶಕ್ತಿಯನ್ನು ನಿನ್ನ ಮಗನ ಮೇಲೆ ಪ್ರಹರಿಸಿದನು.

08010021a ತಾಮಾಪತಂತೀಂ ಸಹಸಾ ಶಕ್ತಿಮುಲ್ಕಾಮಿವಾಂಬರಾತ್|

08010021c ದ್ವಿಧಾ ಚಿಚ್ಚೇದ ಸಮರೇ ಪ್ರತಿವಿಂದ್ಯೋ ಹಸನ್ನಿವ||

ಆಕಾಶದಿಂದ ಉಲ್ಕೆಯಂತೆ ತನ್ನ ಮೇಲೆ ಬೀಳುತ್ತಿದ್ದ ಆ ಶಕ್ತಿಯನ್ನು ಕೂಡಲೇ ಸಮರದಲ್ಲಿ ನಸುನಗುತ್ತಿರುವನೋ ಎನ್ನುವಂತಿದ್ದ ಪ್ರತಿವಿಂದ್ಯನು ಎರಡಾಗಿ ತುಂಡರಿಸಿದನು.

08010022a ಸಾ ಪಪಾತ ತದಾ ಚಿನ್ನಾ ಪ್ರತಿವಿಂದ್ಯಶರೈಃ ಶಿತೈಃ|

08010022c ಯುಗಾಂತೇ ಸರ್ವಭೂತಾನಿ ತ್ರಾಸಯಂತೀ ಯಥಾಶನಿಃ||

ಪ್ರತಿವಿಂದ್ಯನ ನಿಶಿತ ಶರಗಳಿಂದ ತುಂಡಾದ ಆ ಶಕ್ತಿಯು ಯುಗಾಂತದಲ್ಲಿ ಸರ್ವಭೂತಗಳನ್ನು ಭಯಗೊಳಿಸುವ ಮಿಂಚಿನಂತೆ ಕೆಳಗೆ ಬಿದ್ದಿತು.

08010023a ಶಕ್ತಿಂ ತಾಂ ಪ್ರಹತಾಂ ದೃಷ್ಟ್ವಾ ಚಿತ್ರೋ ಗೃಹ್ಯ ಮಹಾಗದಾಂ|

08010023c ಪ್ರತಿವಿಂದ್ಯಾಯ ಚಿಕ್ಷೇಪ ರುಕ್ಮಜಾಲವಿಭೂಷಿತಾಂ||

ಆ ಶಕ್ತಿಯು ನಾಶವಾದುದನ್ನು ನೋಡಿ ಚಿತ್ರನು ರುಕ್ಮಜಾಲವಿಭೂಷಿತ ಮಹಾಗದೆಯನ್ನು ಹಿಡಿದು ಪ್ರತಿವಿಂದ್ಯನ ಮೇಲೆ ಎಸೆದನು.

08010024a ಸಾ ಜಘಾನ ಹಯಾಂಸ್ತಸ್ಯ ಸಾರಥಿಂ ಚ ಮಹಾರಣೇ||

08010024c ರಥಂ ಪ್ರಮೃದ್ಯ ವೇಗೇನ ಧರಣೀಮನ್ವಪದ್ಯತ||

ಮಹಾರಣದಲ್ಲಿ ಅದು ಅವನ ಕುದುರೆಗಳನ್ನು ಮತ್ತು ಸಾರಥಿಯನ್ನು ಸಂಹರಿಸಿ ವೇಗದಿಂದ ರಥವನ್ನು ತಳ್ಳಿ ಧರಣಿಯ ಮೇಲೆ ಉರುಳಿಸಿತು.

08010025a ಏತಸ್ಮಿನ್ನೇವ ಕಾಲೇ ತು ರಥಾದಾಪ್ಲುತ್ಯ ಭಾರತ|

08010025c ಶಕ್ತಿಂ ಚಿಕ್ಷೇಪ ಚಿತ್ರಾಯ ಸ್ವರ್ಣಘಂಟಾಂ ಅಲಂಕೃತಾಂ||

ಭಾರತ! ಅದೇಸಮಯದಲ್ಲಿ ಪ್ರತಿವಿಂದ್ಯನು ರಥದಿಂದ ಹಾರಿ, ಸ್ವರ್ಣಘಂಟೆಗಳಿಂದ ಅಲಂಕೃತ ಶಕ್ತಿಯನ್ನು ಚಿತ್ರನ ಮೇಲೆ ಎಸೆದನು.

08010026a ತಾಮಾಪತಂತೀಂ ಜಗ್ರಾಹ ಚಿತ್ರೋ ರಾಜನ್ಮಹಾಮನಾಃ|

08010026c ತತಸ್ತಾಮೇವ ಚಿಕ್ಷೇಪ ಪ್ರತಿವಿಂದ್ಯಾಯ ಭಾರತ||

ರಾಜನ್! ಭಾರತ! ಮೇಲಿಂದ ಬೀಳುತ್ತಿದ್ದ ಅದನ್ನು ಮಹಾಮನಸ್ವಿ ಚಿತ್ರನು ಹಿಡಿದನು ಮತ್ತು ಅದನ್ನೇ ಪ್ರತಿವಿಂದ್ಯನ ಮೇಲೆ ಎಸೆದನು.

08010027a ಸಮಾಸಾದ್ಯ ರಣೇ ಶೂರಂ ಪ್ರತಿವಿಂದ್ಯಂ ಮಹಾಪ್ರಭಾ|

08010027c ನಿರ್ಭಿದ್ಯ ದಕ್ಷಿಣಂ ಬಾಹುಂ ನಿಪಪಾತ ಮಹೀತಲೇ|

08010027e ಪತಿತಾಭಾಸಯಚ್ಚೈವ ತಂ ದೇಶಮಶನಿರ್ಯಥಾ||

ಮಹಾಪ್ರಭೆಯುಳ್ಳ ಅದು ರಣದಲ್ಲಿ ಶೂರ ಪ್ರತಿವಿಂದ್ಯನ ಬಲತೋಳನ್ನು ಭೇದಿಸಿ ನೆಲದಮೇಲೆ ಬಿದ್ದಿತು. ಅದು ಬಿದ್ದ ಪ್ರದೇಶವು ಮಿಂಚಿನೋಪಾದಿಯಲ್ಲಿ ಪ್ರಕಾಶಮಾನಗೊಂಡಿತು.

08010028a ಪ್ರತಿವಿಂದ್ಯಸ್ತತೋ ರಾಜಂಸ್ತೋಮರಂ ಹೇಮಭೂಷಿತಂ|

08010028c ಪ್ರೇಷಯಾಮಾಸ ಸಂಕ್ರುದ್ಧಶ್ಚಿತ್ರಸ್ಯ ವಧಕಾಮ್ಯಯಾ||

ರಾಜನ್! ಆಗ ಸಂಕ್ರುದ್ಧನಾಗಿ ಪ್ರತಿವಿಂದ್ಯನು ಚಿತ್ರನ ವಧೆಯನ್ನು ಬಯಸಿ ಹೇಮಭೂಷಿತ ತೋಮರವನ್ನು ಪ್ರಯೋಗಿಸಿದನು.

08010029a ಸ ತಸ್ಯ ದೇವಾವರಣಂ ಭಿತ್ತ್ವಾ ಹೃದಯಮೇವ ಚ|

08010029c ಜಗಾಮ ಧರಣೀಂ ತೂರ್ಣಂ ಮಹೋರಗ ಇವಾಶಯಂ||

ಅದು ಅವನ ಕವಚವನ್ನೂ ಹೃದಯವನ್ನೂ ಭೇದಿಸಿ ಕೂಡಲೇ ಮಹಾಸರ್ಪವು ಬಿಲವನ್ನು ಹೇಗೋ ಹಾಗೆ ಧರಣಿಯನ್ನು ಹೊಕ್ಕಿತು.

08010030a ಸ ಪಪಾತ ತದಾ ರಾಜಂಸ್ತೋಮರೇಣ ಸಮಾಹತಃ|

08010030c ಪ್ರಸಾರ್ಯ ವಿಪುಲೌ ಬಾಹೂ ಪೀನೌ ಪರಿಘಸನ್ನಿಭೌ||

ರಾಜನ್! ತೋಮರದಿಂದ ಪ್ರಹೃತನಾದ ಚಿತ್ರನು ಪರಿಘೋಪಮ ದಪ್ಪ ತೋಳುಗಳನ್ನು ಹರಡಿ ಬಿದ್ದನು.

08010031a ಚಿತ್ರಂ ಸಂಪ್ರೇಕ್ಷ್ಯ ನಿಹತಂ ತಾವಕಾ ರಣಶೋಭಿನಃ|

08010031c ಅಭ್ಯದ್ರವಂತ ವೇಗೇನ ಪ್ರತಿವಿಂದ್ಯಂ ಸಮಂತತಃ||

ಚಿತ್ರನು ಹತನಾದುದನ್ನು ನೋಡಿ ನಿನ್ನಕಡೆಯ ರಣಶೋಭಿಗಳು ವೇಗದಿಂದ ಪ್ರತಿವಿಂದ್ಯನನ್ನು ಸುತ್ತುವರೆದು ಆಕ್ರಮಣಿಸಿದರು.

08010032a ಸೃಜಂತೋ ವಿವಿಧಾನ್ಬಾಣಾಂ ಶತಘ್ನೀಶ್ಚ ಸಕಿಂಕಿಣೀಃ|

08010032c ತ ಏನಂ ಚಾದಯಾಮಾಸುಃ ಸೂರ್ಯಮಭ್ರಗಣಾ ಇವ||

ಕಿಂಕಿಣೀಗಂಟೆಗಳುಳ್ಳ ಶತಘ್ನಿಗಳನ್ನೂ ವಿವಿಧ ಬಾಣಗಳನ್ನು ಪ್ರಯೋಗಿಸಿ ಸೂರ್ಯನನ್ನು ಮೋಡಗಳು ಮುಸುಕುವಂತೆ ಅವರು ಪ್ರತಿವಿಂದ್ಯನನ್ನು ಮುಸುಕಿದರು.

08010033a ತಾನಪಾಸ್ಯ ಮಹಾಬಾಹುಃ ಶರಜಾಲೇನ ಸಂಯುಗೇ|

08010033c ವ್ಯದ್ರಾವಯತ್ತವ ಚಮೂಂ ವಜ್ರಹಸ್ತ ಇವಾಸುರೀಂ||

ಸಂಯುಗದಲ್ಲಿ ಮಹಾಬಾಹು ಪ್ರತಿವಿಂದ್ಯನು ವಜ್ರಹಸ್ತನು ಅಸುರೀ ಸೇನೆಯನ್ನು ಹೇಗೋ ಹಾಗೆ ಶರಜಾಲಗಳಿಂದ ನಿನ್ನ ಸೇನೆಯನ್ನು ಪ್ರಹರಿಸಿ ಓಡಿಸಿದನು.

08010034a ತೇ ವಧ್ಯಮಾನಾಃ ಸಮರೇ ತಾವಕಾಃ ಪಾಂಡವೈರ್ನೃಪ|

08010034c ವಿಪ್ರಕೀರ್ಯಂತ ಸಹಸಾ ವಾತನುನ್ನಾ ಘನಾ ಇವ||

ನೃಪ! ಸಮರದಲ್ಲಿ ಪಾಂಡವರಿಂದ ವಧಿಸಲ್ಪಡುತ್ತಿರುವ ನಿನ್ನಕಡೆಯವರು ಕೂಡಲೇ ಭಿರುಗಾಳಿಯಿಂದ ಚದುರಿಹೋಗುವ ಮೋಡಗಳಂತೆ ಚದುರಿಹೋದರು.

08010035a ವಿಪ್ರದ್ರುತೇ ಬಲೇ ತಸ್ಮಿನ್ವಧ್ಯಮಾನೇ ಸಮಂತತಃ|

08010035c ದ್ರೌಣಿರೇಕೋಽಭ್ಯಯಾತ್ತೂರ್ಣಂ ಭೀಮಸೇನಂ ಮಹಾಬಲಂ||

ವಧಿಸಲ್ಪಡುತ್ತಿರುವ ಸೇನೆಯು ಎಲ್ಲಕಡೆ ಪಲಾಯನಮಾಡುತ್ತಿರಲು ದ್ರೌಣಿಯೊಬ್ಬನೇ ಶೀಘ್ರವಾಗಿ ಮಹಾಬಲ ಭೀಮಸೇನನನ್ನು ಆಕ್ರಮಣಿಸಿದನು.

08010036a ತತಃ ಸಮಾಗಮೋ ಘೋರೋ ಬಭೂವ ಸಹಸಾ ತಯೋಃ|

08010036c ಯಥಾ ದೇವಾಸುರೇ ಯುದ್ಧೇ ವೃತ್ರವಾಸವಯೋರಭೂತ್||

ಆಗ ಒಮ್ಮಿಂದೊಮ್ಮೆಲೇ ದೇವಾಸುರ ಯುದ್ಧದಲ್ಲಿ ವೃತ್ರ-ವಾಸವರ ನಡುವೆ ಹೇಗೋ ಹಾಗೆ ಅವರಿಬ್ಬರ ನಡುವೆ ಘೋರ ಯುದ್ಧವು ನಡೆಯಿತು.”

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಚಿತ್ರವಧೇ ದಶಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಚಿತ್ರವಧ ಎನ್ನುವ ಹತ್ತನೇ ಅಧ್ಯಾಯವು.

Comments are closed.