Karna Parva: Chapter 67

ಕರ್ಣ ಪರ್ವ

೬೭

ಕರ್ಣವಧೆ

ಕೃಷ್ಣನು ಕರ್ಣನನ್ನು ಅವನ ಹಿಂದಿನ ಅಧರ್ಮ ಅಪರಾಧಗಳನ್ನು ನೆನಪಿಸಿಕೊಟ್ಟು ನಿಂದಿಸಿದುದು (೧-೫). ಅರ್ಜುನನಿಂದ ಕರ್ಣವಧೆ (೬-೨೬). ಕುರುಸೇನೆಯು ಪಲಾಯನಗೈದುದು (೨೭-೩೭).

08067001 ಸಂಜಯ ಉವಾಚ|

08067001a ಅಥಾಬ್ರವೀದ್ವಾಸುದೇವೋ ರಥಸ್ಥೋ

         ರಾಧೇಯ ದಿಷ್ಟ್ಯಾ ಸ್ಮರಸೀಹ ಧರ್ಮಂ|

08067001c ಪ್ರಾಯೇಣ ನೀಚಾ ವ್ಯಸನೇಷು ಮಗ್ನಾ

         ನಿಂದಂತಿ ದೈವಂ ಕುಕೃತಂ ನ ತತ್ತತ್||

ಸಂಜಯನು ಹೇಳಿದನು: “ಆಗ ರಥಸ್ಥನಾದ ವಾಸುದೇವನು ಹೇಳಿದನು: “ರಾಧೇಯ! ಅದೃಷ್ಟವಶಾತ್ ಈಗ ನೀನು ಧರ್ಮವನ್ನು ನೆನಪಿಸಿಕೊಳ್ಳುತ್ತಿರುವೆ. ಕಷ್ಟದಲ್ಲಿ ಮುಳುಗಿದ ನೀಚರು ಸಾಮಾನ್ಯವಾಗಿ ತಾವು ಮಾಡಿದ ಕೆಟ್ಟ ಕೆಲಸಗಳನ್ನಲ್ಲದೇ ಕೇವಲ ದೈವವನ್ನೇ ನಿಂದಿಸುತ್ತಾರೆ.

08067002a ಯದ್ದ್ರೌಪದೀಂ ಏಕವಸ್ತ್ರಾಂ ಸಭಾಯಾಂ

         ಆನಾಯ್ಯ ತ್ವಂ ಚೈವ ಸುಯೋಧನಶ್ಚ|

08067002c ದುಃಶಾಸನಃ ಶಕುನಿಃ ಸೌಬಲಶ್ಚ

         ನ ತೇ ಕರ್ಣ ಪ್ರತ್ಯಭಾತ್ತತ್ರ ಧರ್ಮಃ||

ಕರ್ಣ! ಯಾವಾಗ ನೀನು, ಸುಯೋಧನ, ದುಃಶಾಸನ ಮತ್ತು ಸೌಬಲ ಶಕುನಿಯರು ಎಕವಸ್ತ್ರಳಾಗಿದ್ದ ದ್ರೌಪದಿಯನ್ನು ಸಭೆಗೆ ಎಳೆದು ತರಿಸಿದಾಗ ನಿನಗೆ ಅಲ್ಲಿ ಧರ್ಮದ ವಿಚಾರವೇ ಹೊಳೆದಿರಲಿಲ್ಲ!

08067003a ಯದಾ ಸಭಾಯಾಂ ಕೌಂತೇಯಮನಕ್ಷಜ್ಞಂ ಯುಧಿಷ್ಠಿರಂ|

08067003c ಅಕ್ಷಜ್ಞಃ ಶಕುನಿರ್ಜೇತಾ ತದಾ ಧರ್ಮಃ ಕ್ವ ತೇ ಗತಃ||

ಅಕ್ಷವಿದ್ಯೆಯನ್ನು ತಿಳಿದಿರದ ಕೌಂತೇಯ ಯುಧಿಷ್ಠಿರನನ್ನು ಸಭೆಯಲ್ಲಿ ಅಕ್ಷಜ್ಞ ಶಕುನಿಯು ಗೆದ್ದಾಗ ನಿನ್ನ ಧರ್ಮವು ಎಲ್ಲಿ ಹೋಗಿತ್ತು?

08067004a ಯದಾ ರಜಸ್ವಲಾಂ ಕೃಷ್ಣಾಂ ದುಃಶಾಸನವಶೇ ಸ್ಥಿತಾಂ|

08067004c ಸಭಾಯಾಂ ಪ್ರಾಹಸಃ ಕರ್ಣ ಕ್ವ ತೇ ಧರ್ಮಸ್ತದಾ ಗತಃ||

ಕರ್ಣ! ದುಃಶಾಸನನ ವಶದಲ್ಲಿದ್ದ ರಜಸ್ವಲೆ ಕೃಷ್ಣೆಯನ್ನು ಸಭೆಯಲ್ಲಿ ಅಪಹಾಸ್ಯಮಾಡುವಾಗ ನಿನ್ನ ಧರ್ಮವು ಎಲ್ಲಿ ಹೋಗಿತ್ತು?

08067005a ರಾಜ್ಯಲುಬ್ಧಃ ಪುನಃ ಕರ್ಣ ಸಮಾಹ್ವಯಸಿ ಪಾಂಡವಂ|

08067005c ಗಾಂಧಾರರಾಜಮಾಶ್ರಿತ್ಯ ಕ್ವ ತೇ ಧರ್ಮಸ್ತದಾ ಗತಃ||

ಕರ್ಣ! ಪುನಃ ಪಾಂಡವನನ್ನು ಕರೆಯಿಸಿ ಗಾಂಧಾರರಾಜನನ್ನು ಅವಲಂಬಿಸಿ ರಾಜ್ಯವನ್ನು ಕಸಿದುಕೊಳ್ಳುವಾಗ ನಿನ್ನ ಧರ್ಮವು ಎಲ್ಲಿ ಹೋಗಿತ್ತು?”

08067006a ಏವಮುಕ್ತೇ ತು ರಾಧೇಯೇ ವಾಸುದೇವೇನ ಪಾಂಡವಂ|

08067006c ಮನ್ಯುರಭ್ಯಾವಿಶತ್ತೀವ್ರಃ ಸ್ಮೃತ್ವಾ ತತ್ತದ್ಧನಂಜಯಂ||

ಕರ್ಣನಿಗೆ ವಾಸುದೇವನು ಹೀಗೆ ಹೇಳುತ್ತಿರಲು ಅವುಗಳನ್ನು ಸ್ಮರಿಸಿಕೊಂಡ ಪಾಂಡವ ಧನಂಜಯನನ್ನು ತೀವ್ರವಾದ ಕೋಪವು ಆವರಿಸಿತು.

08067007a ತಸ್ಯ ಕ್ರೋಧೇನ ಸರ್ವೇಭ್ಯಃ ಸ್ರೋತೋಭ್ಯಸ್ತೇಜಸೋಽರ್ಚಿಷಃ|

08067007c ಪ್ರಾದುರಾಸನ್ಮಹಾರಾಜ ತದದ್ಭುತಮಿವಾಭವತ್||

ಮಹಾರಾಜ! ಕ್ರೋಧದಿಂದ ಅವನ ರಂಧ್ರ ರಂಧ್ರಗಳಲ್ಲಿ ಅಗ್ನಿಯ ಜ್ವಾಲೆಗಳು ಹೊರಹೊಮ್ಮಿ ಅದೊಂದು ಅದ್ಭುತವೆನಿಸಿತು.

08067008a ತಂ ಸಮೀಕ್ಷ್ಯ ತತಃ ಕರ್ಣೋ ಬ್ರಹ್ಮಾಸ್ತ್ರೇಣ ಧನಂಜಯಂ|

08067008c ಅಭ್ಯವರ್ಷತ್ಪುನರ್ಯತ್ನಮಾಕರೋದ್ರಥಸರ್ಜನೇ|

ಅದನ್ನು ನೋಡಿ ಕರ್ಣನು ಬ್ರಹ್ಮಾಸ್ತ್ರದಿಂದ ಧನಂಜಯನ ಮೇಲೆ ಬಾಣಗಳ ಮಳೆಯನ್ನು ಸುರಿಸಿ ಪುನಃ ರಥವನ್ನು ಮೇಲೆತ್ತುವ ಪ್ರಯತ್ನವನ್ನು ಮಾಡಿದನು.

08067008e ತದಸ್ತ್ರಮಸ್ತ್ರೇಣಾವಾರ್ಯ ಪ್ರಜಹಾರಾಸ್ಯ ಪಾಂಡವಃ||

08067009a ತತೋಽನ್ಯದಸ್ತ್ರಂ ಕೌಂತೇಯೋ ದಯಿತಂ ಜಾತವೇದಸಃ|

08067009c ಮುಮೋಚ ಕರ್ಣಮುದ್ದಿಶ್ಯ ತತ್ಪ್ರಜಜ್ವಾಲ ವೈ ಭೃಶಂ||

ಅ ಅಸ್ತ್ರವನ್ನು ಕೌಂತೇಯನು ಅಸ್ತ್ರದಿಂದಲೇ ನಿರಸನಗೊಳಿಸಿದನು. ಅನಂತರ ಪಾರ್ಥನು ಜಾತವೇದಸನಿಗೆ ಪ್ರಿಯವಾದ ಇನ್ನೊಂದು ಅಸ್ತ್ರವನ್ನು ಕರ್ಣನ ಮೇಲೆ ಗುರಿಯಿಟ್ಟು ಪ್ರಯೋಗಿಸಿದನು. ಅದು ಬಹಳವಾಗಿ ಪ್ರಜ್ವಲಿಸುತ್ತಿತ್ತು.

08067010a ವಾರುಣೇನ ತತಃ ಕರ್ಣಃ ಶಮಯಾಮಾಸ ಪಾವಕಂ|

08067010c ಜೀಮೂತೈಶ್ಚ ದಿಶಃ ಸರ್ವಾಶ್ಚಕ್ರೇ ತಿಮಿರದುರ್ದಿನಾಃ||

ಆಗ ಕರ್ಣನು ಆ ಅಗ್ನಿಯನ್ನು ವಾರುಣಾಸ್ತ್ರದಿಂದ ಶಮನಗೊಳಿಸಿದನು. ಮತ್ತು ಮೋಡಗಳಿಂದ ಎಲ್ಲ ದಿಕ್ಕುಗಳನ್ನೂ ತುಂಬಿಸಿ ಹಗಲನ್ನೇ ಕತ್ತಲೆಯನ್ನಾಗಿಸಿದನು.

08067011a ಪಾಂಡವೇಯಸ್ತ್ವಸಂಭ್ರಾಂತೋ ವಾಯವ್ಯಾಸ್ತ್ರೇಣ ವೀರ್ಯವಾನ್|

08067011c ಅಪೋವಾಹ ತದಾಭ್ರಾಣಿ ರಾಧೇಯಸ್ಯ ಪ್ರಪಶ್ಯತಃ||

ವೀರ್ಯವಾನ್ ಪಾಂಡವೇಯನು ಸ್ವಲ್ಪವೂ ಗಾಬರಿಗೊಳ್ಳದೇ ವಾಯವ್ಯಾಸ್ತ್ರದಿಂದ ರಾಧೇಯನು ನೋಡುತ್ತಿದ್ದಂತೆಯೇ ಆ ಮೋಡಗಳನ್ನು ನಿರಸನಗೊಳಿಸಿದನು.

08067012a ತಂ ಹಸ್ತಿಕಕ್ಷ್ಯಾಪ್ರವರಂ ಚ ಬಾಣೈಃ

         ಸುವರ್ಣಮುಕ್ತಾಮಣಿವಜ್ರಮೃಷ್ಟಂ|

08067012c ಕಾಲಪ್ರಯತ್ನೋತ್ತಮಶಿಲ್ಪಿಯತ್ನೈಃ

         ಕೃತಂ ಸುರೂಪಂ ವಿತಮಸ್ಕಮುಚ್ಚೈಃ||

08067013a ಊರ್ಜಸ್ಕರಂ ತವ ಸೈನ್ಯಸ್ಯ ನಿತ್ಯಂ

         ಅಮಿತ್ರವಿತ್ರಾಸನಮೀಡ್ಯರೂಪಂ|

08067013c ವಿಖ್ಯಾತಮಾದಿತ್ಯಸಮಸ್ಯ ಲೋಕೇ

         ತ್ವಿಷಾ ಸಮಂ ಪಾವಕಭಾನುಚಂದ್ರೈಃ||

08067014a ತತಃ ಕ್ಷುರೇಣಾಧಿರಥೇಃ ಕಿರೀಟೀ

         ಸುವರ್ಣಪುಂಖೇನ ಶಿತೇನ ಯತ್ತಃ|

08067014c ಶ್ರಿಯಾ ಜ್ವಲಂತಂ ಧ್ವಜಮುನ್ಮಮಾಥ

         ಮಹಾರಥಸ್ಯಾಧಿರಥೇರ್ಮಹಾತ್ಮಾ||

ಅನಂತರ ಕಿರೀಟಿಯು ಸುವರ್ಣಪುಂಖಗಳುಳ್ಳ ನಿಶಿತ ಕ್ಷುರದಿಂದ ಪ್ರಯತ್ನಮಾಡಿ ಮಹಾತ್ಮ ಆಧಿರಥಿಯ ಮಹಾರಥದ ಮೇಲೆ ಹಾರಾಡುತ್ತಿದ್ದ ಆನೆಯ ಹಗ್ಗದ ಚಿಹ್ನೆಯನ್ನು ಹೊಂದಿದ್ದ, ಸುವರ್ಣ-ಮುತ್ತು-ವಜ್ರಗಳಿಂದ ಸಮಲಂಕೃತವಾಗಿದ್ದ, ಉತ್ತಮ ಶಿಲ್ಪಿಗಳಿಂದ ನಿರ್ಮಿಸಲ್ಪಟ್ಟಿದ್ದ, ಸೂರ್ಯನಂತೆ ವಿಶ್ವವಿಖ್ಯಾತವಾಗಿದ್ದ, ನಿನ್ನ ಸೈನ್ಯದ ವಿಜಯಕ್ಕೆ ಆಧಾರಸ್ತಂಭವೆಂತಿದ್ದ, ಶತ್ರುಗಳಿಗೆ ಭಯವನ್ನುಂಟುಮಾಡುತ್ತಿದ್ದ, ಸರ್ವರ ಸ್ತುತಿಗೂ ಪಾತ್ರವಾಗಿದ್ದ, ಕಾಂತಿಯಲ್ಲಿ ಸೂರ್ಯಾಗ್ನಿಗಳಿಗೆ ಸಮಾನವಾಗಿದ್ದ ಧ್ವಜವನ್ನು ಪ್ರಹರಿಸಿ ಕೆಡವಿದನು.

08067015a ಯಶಶ್ಚ ಧರ್ಮಶ್ಚ ಜಯಶ್ಚ ಮಾರಿಷ

         ಪ್ರಿಯಾಣಿ ಸರ್ವಾಣಿ ಚ ತೇನ ಕೇತುನಾ|

08067015c ತದಾ ಕುರೂಣಾಂ ಹೃದಯಾನಿ ಚಾಪತನ್

         ಬಭೂವ ಹಾಹೇತಿ ಚ ನಿಸ್ವನೋ ಮಹಾನ್||

ಮಾರಿಷ! ಆ ಧ್ವಜದ ಜೊತೆಯಲ್ಲಿಯೇ ಕೌರವರ ಯಶಸ್ಸು, ಧರ್ಮ, ಜಯ, ಮತ್ತು ಸರ್ವರ ಸಂತೋಷವೂ, ಹಾಗೆಯೇ ಕುರುಗಳ ಹೃದಯವೂ ಕೆಳಗೆ ಬಿದ್ದಿತು! ನಿಟ್ಟುಸಿರಿನ ಮಹಾ ಹಾಹಾಕಾರವುಂಟಾಯಿತು.

08067016a ಅಥ ತ್ವರನ್ಕರ್ಣವಧಾಯ ಪಾಂಡವೋ

         ಮಹೇಂದ್ರವಜ್ರಾನಲದಂಡಸಂನಿಭಂ|

08067016c ಆದತ್ತ ಪಾರ್ಥೋಽಂಜಲಿಕಂ ನಿಷಂಗಾತ್

         ಸಹಸ್ರರಶ್ಮೇರಿವ ರಶ್ಮಿಮುತ್ತಮಂ|

ಕರ್ಣನ ವಧೆಯನ್ನು ತ್ವರೆಗೊಳಿಸಲು ಕೂಡಲೇ ಪಾಂಡವ ಪಾರ್ಥನು ಮಹೇಂದ್ರನ ವಜ್ರ, ಅಗ್ನಿದಂಡ ಮತ್ತು ಸೂರ್ಯನ ಶ್ರೇಷ್ಠ ಕಿರಣಗಳಿಗೆ ಸಮನಾದ ಅಂಜಲಿಕವನ್ನು ಕೈಗೆತ್ತಿಕೊಂಡನು.

08067017a ಮರ್ಮಚ್ಛಿದಂ ಶೋಣಿತಮಾಂಸದಿಗ್ಧಂ

         ವೈಶ್ವಾನರಾರ್ಕಪ್ರತಿಮಂ ಮಹಾರ್ಹಂ|

08067017c ನರಾಶ್ವನಾಗಾಸುಹರಂ ತ್ರ್ಯರತ್ನಿಂ

         ಷಡ್ವಾಜಮಂಜೋಗತಿಮುಗ್ರವೇಗಂ||

08067018a ಸಹಸ್ರನೇತ್ರಾಶನಿತುಲ್ಯತೇಜಸಂ

         ಸಮಾನಕ್ರವ್ಯಾದಮಿವಾತಿದುಃಸಹಂ|

08067018c ಪಿನಾಕನಾರಾಯಣಚಕ್ರಸಂನಿಭಂ

         ಭಯಂಕರಂ ಪ್ರಾಣಭೃತಾಂ ವಿನಾಶನಂ||

08067019a ಯುಕ್ತ್ವಾ ಮಹಾಸ್ತ್ರೇಣ ಪರೇಣ ಮಂತ್ರವಿದ್

         ವಿಕೃಷ್ಯ ಗಾಂಡೀವಮುವಾಚ ಸಸ್ವನಂ|

ಮರ್ಮಗಳನ್ನು ಕತ್ತರಿಸುವ, ರಕ್ತಮಾಂಸಗಳಿಂದ ಲೇಪಿತವಾಗಿದ್ದ, ಸೂರ್ಯಾಗ್ನಿಸದೃಶವಾಗಿದ್ದ, ಬಹುಮೂಲ್ಯವಾಗಿದ್ದ, ನರ-ಅಶ್ವ-ಗಜಗಳನ್ನು ಸಂಹರಿಸಬಲ್ಲ, ಮೂರುಮೊಳ ಉದ್ದದ, ಆರು ರೆಕ್ಕೆಗಳುಳ್ಳ, ಉಗ್ರವೇಗದ, ಸಹಸ್ರನೇತ್ರನ ವಜ್ರಾಯುಧಕ್ಕೆ ಸಮಾನ ತೇಜಸ್ಸುಳ್ಳ, ಬಾಯಿತೆರೆದ ಅಂತಕನಂತೆ ಸಹಿಸಲಸಾಧ್ಯವಾದ, ಶಿವನ ಪಿನಾಕಕ್ಕೂ, ನಾರಾಯಣನ ಚಕ್ರಕ್ಕೂ ಸಮನಾಗಿದ್ದ, ಭಯಂಕರವಾಗಿದ್ದ, ಪ್ರಾಣಭೃತರ ವಿನಾಶಕಾರಿಯಾಗಿದ್ದ, ಆ ಬಾಣವನ್ನು ಮಹಾಸ್ತ್ರದಿಂದ ಅಭಿಮಂತ್ರಿಸಿ ಗಾಂಡೀವಕ್ಕೆ ಹೂಡಿ ಟೇಂಕಾರದೊಂದಿಗೆ ಕೂಗಿ ಹೇಳಿದನು:

08067019c ಅಯಂ ಮಹಾಸ್ತ್ರೋಽಪ್ರತಿಮೋ ಧೃತಃ ಶರಃ

         ಶರೀರಭಿಚ್ಚಾಸುಹರಶ್ಚ ದುರ್ಹೃದಃ||

08067020a ತಪೋಽಸ್ತಿ ತಪ್ತಂ ಗುರವಶ್ಚ ತೋಷಿತಾ

         ಮಯಾ ಯದಿಷ್ಟಂ ಸುಹೃದಾಂ ತಥಾ ಶ್ರುತಂ|

08067020c ಅನೇನ ಸತ್ಯೇನ ನಿಹಂತ್ವಯಂ ಶರಃ

         ಸುದಂಶಿತಃ ಕರ್ಣಮರಿಂ ಮಮಾಜಿತಃ||

“ನಾನು ತಪಸ್ಸನ್ನು ತಪಿಸಿದ್ದರೆ, ಗುರುಗಳನ್ನು ತೃಪ್ತಿಗೊಳಿಸಿದ್ದರೆ, ಯಜ್ಞಯಾಗಾದಿಗಳನ್ನು ಮಾಡಿದ್ದರೆ, ಸುಹೃದಯರನ್ನು ಕೇಳಿದ್ದಿದ್ದರೆ, ಈ ಸತ್ಯಗಳಿಂದ ಸುವಿಹಿತವಾಗಿ ಸಂಧಾನಗೊಂಡಿರುವ, ಶತ್ರುಗಳ ಶರೀರವನ್ನೂ ಪ್ರಾಣವನ್ನೂ ಹರಣಮಾಡಬಲ್ಲ ಈ ಅಪ್ರತಿಮ, ಧೃತ, ಮಹಾಸ್ತ್ರದಿಂದ ಅಭಿಮಂತ್ರಿತ ಈ ಶರವು ನನ್ನ ಪ್ರಬಲಶತ್ರು ಕರ್ಣನನ್ನು ಸಂಹರಿಸಲಿ!”

08067021a ಇತ್ಯೂಚಿವಾಂಸ್ತಂ ಸ ಮುಮೋಚ ಬಾಣಂ

         ಧನಂಜಯಃ ಕರ್ಣವಧಾಯ ಘೋರಂ|

08067021c ಕೃತ್ಯಾಮಥರ್ವಾಂಗಿರಸೀಮಿವೋಗ್ರಾಂ

         ದೀಪ್ತಾಮಸಹ್ಯಾಂ ಯುಧಿ ಮೃತ್ಯುನಾಪಿ||

ಹೀಗೆ ಹೇಳಿ ಧನಂಜಯನು ಕರ್ಣನ ವಧೆಗೆಂದು ಅಥರ್ವಾಂಗೀರಸ ಮಂತ್ರದಿಂದ ಮಾಡಿದ ಕೃತ್ಯವು ಹೇಗೆ ಉಗ್ರವೂ, ಪ್ರದೀಪ್ತವೂ, ಮೃತ್ಯುವಿಗೂ ಯುದ್ಧದ್ದಲ್ಲಿ ಎದುರಿಸಲಸಾಧ್ಯವಾಗಿರುತ್ತದೆಯೋ ಹಾಗಿದ್ದ ಆ ಘೋರ ಬಾಣವನ್ನು ಪ್ರಯೋಗಿಸಿದನು.

08067022a ಬ್ರುವನ್ಕಿರೀಟೀ ತಮತಿಪ್ರಹೃಷ್ಟೋ

         ಅಯಂ ಶರೋ ಮೇ ವಿಜಯಾವಹೋಽಸ್ತು|

08067022c ಜಿಘಾಂಸುರರ್ಕೇಂದುಸಮಪ್ರಭಾವಃ

         ಕರ್ಣಂ ಸಮಾಪ್ತಿಂ ನಯತಾಂ ಯಮಾಯ||

ಅದರಿಂದ ಪರಮ ಹೃಷ್ಟನಾದ ಕಿರೀಟಿಯು ಪುನಃ ಹೇಳಿದನು: “ಈ ಶರವು ನನಗೆ ವಿಜಯದಾಯಕವಾಗಲಿ! ಚಂದ್ರಾದಿತ್ಯರ ಪ್ರಭೆಗೆ ಸಮಾನವಾಗಿರುವ ಇದು ಕರ್ಣನನ್ನು ಸಂಹರಿಸಿ, ಸಮಾಪ್ತಿಗೊಳಿಸಿ, ಯಮನಲ್ಲಿಗೆ ಕಳುಹಿಸಲಿ!”

08067023a ತೇನೇಷುವರ್ಯೇಣ ಕಿರೀಟಮಾಲೀ

         ಪ್ರಹೃಷ್ಟರೂಪೋ ವಿಜಯಾವಹೇನ|

08067023c ಜಿಘಾಂಸುರರ್ಕೇಂದುಸಮಪ್ರಭೇಣ

         ಚಕ್ರೇ ವಿಷಕ್ತಂ ರಿಪುಮಾತತಾಯೀ||

ಯುದ್ಧದಲ್ಲಿ ವಿಜಯವನ್ನು ತರಬಲ್ಲ ಆ ಶ್ರೇಷ್ಠಬಾಣದಿಂದ ಪ್ರಹೃಷ್ಟನಾಗಿ ಕಾಣುತ್ತಿದ್ದ ಕಿರೀಟಮಾಲಿಯು ತನ್ನ ರಿಪು ಆತಯಾಯಿಯನ್ನು ಸಂಹರಿಸಲು ಚಂದ್ರಾದಿತ್ಯಸಮ ಪ್ರಭೆಯುಳ್ಳ ಆ ಶರವನ್ನು ಪ್ರಯೋಗಿಸಿದನು.

08067024a ತದುದ್ಯತಾದಿತ್ಯಸಮಾನವರ್ಚಸಂ

         ಶರನ್ನಭೋಮಧ್ಯಗಭಾಸ್ಕರೋಪಮಂ|

08067024c ವರಾಂಗಮುರ್ವ್ಯಾಂ ಅಪತಚ್ಚಮೂಪತೇರ್

         ದಿವಾಕರೋಽಸ್ತಾದಿವ ರಕ್ತಮಂಡಲಃ||

ಉದಯಿಸುವ ಸೂರ್ಯನ ಸಮಾನ ವರ್ಚಸ್ಸುಳ್ಳ ಮತ್ತು ನಭೋಮಧ್ಯದಲ್ಲಿದ್ದ ಭಾಸ್ಕರನಂತಿರುವ ಆ ಬಾಣವು ಕೆಂಪಾದ ಅಸ್ತಾಚಲದಿಂದ ದಿವಾಕರನು ಕೆಳಗೆ ಬೀಳುತ್ತಿರುವನೋ ಎಂಬಂತೆ ಕರ್ಣನ ಶಿರಸ್ಸನ್ನು ಸೇನೆಯ ಅಗ್ರಭಾಗದಲ್ಲಿ ಕೆಡವಿತು.

08067025a ತದಸ್ಯ ದೇಹೀ ಸತತಂ ಸುಖೋದಿತಂ

         ಸ್ವರೂಪಮತ್ಯರ್ಥಮುದಾರಕರ್ಮಣಃ|

08067025c ಪರೇಣ ಕೃಚ್ಚ್ರೇಣ ಶರೀರಮಾತ್ಯಜದ್

         ಗೃಹಂ ಮಹರ್ದ್ಧೀವ ಸಸಂಗಮೀಶ್ವರಃ||

ಉದಾರಕರ್ಮಿ ಕರ್ಣನ ಶಿರಸ್ಸು ಐಶ್ವರ್ಯವಂತನು ಸಂಪತ್ತಿನಿಂದ ಮತ್ತು ಪ್ರಿಯಜನರಿಂದ ತುಂಬಿರುವ ಮನೆಯನ್ನು ಬಹಳ ಕಷ್ಟದಿಂದ ಬಿಟ್ಟುಹೋಗುವಂತೆ ಬಹಳ ಕಷ್ಟದಿಂದ ಆ ಈಶ್ವರನ ಸತತವೂ ಸುಖವನ್ನೇ ಅನುಭವಿಸಿದ್ದ ಆ ಅತ್ಯಂತ ಸುಂದರ ದೇಹಸಂಗವನ್ನು ತೊರೆದು ಹೋಯಿತು.

08067026a ಶರೈರ್ವಿಭುಗ್ನಂ ವ್ಯಸು ತದ್ವಿವರ್ಮಣಃ

         ಪಪಾತ ಕರ್ಣಸ್ಯ ಶರೀರಮುಚ್ಚ್ರಿತಂ|

08067026c ಸ್ರವದ್ವ್ರಣಂ ಗೈರಿಕತೋಯವಿಸ್ರವಂ

         ಗಿರೇರ್ಯಥಾ ವಜ್ರಹತಂ ಶಿರಸ್ತಥಾ||

ವಜ್ರದಿಂದ ಹತವಾದ ಗಿರಿಯಂತೆ ಶರದಿಂದ ಶಿರವು ಕತ್ತರಿಸಲ್ಪಡಲು ಪ್ರಾಣವನ್ನು ತೊರೆದ ಕರ್ಣನ ಎತ್ತರ ಶರೀರವು ಗೈರಿಕಾದಿ ಧಾತುಗಳಿಂದ ಕೂಡಿದ ಕೆಂಪುನೀರನ್ನು ಸುರಿಸುವ ಪರ್ವತದಂತೆ ರಕ್ತವನ್ನು ಸುರಿಸುತ್ತಾ ಭೂಮಿಯ ಮೇಲೆ ಬಿದ್ದಿತು.

08067027a ದೇಹಾತ್ತು ಕರ್ಣಸ್ಯ ನಿಪಾತಿತಸ್ಯ

         ತೇಜೋ ದೀಪ್ತಂ ಖಂ ವಿಗಾಹ್ಯಾಚಿರೇಣ|

08067027c ತದದ್ಭುತಂ ಸರ್ವಮನುಷ್ಯಯೋಧಾಃ

         ಪಶ್ಯಂತಿ ರಾಜನ್ನಿಹತೇ ಸ್ಮ ಕರ್ಣೇ||

ಕರ್ಣನ ದೇಹವು ಕೆಳಗೆ ಬೀಳುತ್ತಲೇ ಅವನ ದೇಹದಿಂದ ಬೆಳಗುತ್ತಿರುವ ತೇಜಸ್ಸೊಂದು ಹೊರಹೊರಟು ಆಕಾಶದಲ್ಲಿ ಸೂರ್ಯಮಂಡಲದಲ್ಲಿ ಲೀನವಾಯಿತು. ರಾಜನ್! ಕರ್ಣನು ಹತನಾದಾಗ ನಡೆದ ಆ ಅದ್ಭುತವನ್ನು ಸರ್ವ ಮನುಷ್ಯಯೋಧರೂ ನೋಡಿದರು.

08067028a ತಂ ಸೋಮಕಾಃ ಪ್ರೇಕ್ಷ್ಯ ಹತಂ ಶಯಾನಂ

         ಪ್ರೀತಾ ನಾದಂ ಸಹ ಸೈನ್ಯೈರಕುರ್ವನ್|

08067028c ತೂರ್ಯಾಣಿ ಚಾಜಘ್ನುರತೀವ ಹೃಷ್ಟಾ

         ವಾಸಾಂಸಿ ಚೈವಾದುಧುವುರ್ಭುಜಾಂಶ್ಚ|

08067028e ಬಲಾನ್ವಿತಾಶ್ಚಾಪ್ಯಪರೇ ಹ್ಯನೃತ್ಯನ್ನ್

         ಅನ್ಯೋನ್ಯಮಾಶ್ಲಿಷ್ಯ ನದಂತ ಊಚುಃ||

ಹತನಾಗಿ ಮಲಗಿರುವ ಅವನನ್ನು ನೋಡಿ ಪ್ರೀತರಾದ ಸೋಮಕರು ಸೇನೆಗಳೊಂದಿಗೆ ನಿನಾದಿಸಿದರು. ಅತೀವ ಹೃಷ್ಟರಾಗಿ ತೂರ್ಯಗಳನ್ನು ಮೊಳಗಿಸಿದರು ಮತ್ತು ಭುಜಗಳನ್ನು ಮೇಲೆತ್ತಿ ಉತ್ತರೀಯಗಳನ್ನು ಹಾರಿಸಿದರು. ಇತರ ಬಲಾನ್ವಿತರು ಅನ್ಯೋನ್ಯರನ್ನು ಆಲಂಗಿಸಿ, ಕುಣಿದಾಡಿ, ಗರ್ಜಿಸುತ್ತಾ ಒಬ್ಬರಿಗೊಬ್ಬರು ಹೀಗೆ ಮಾತನಾಡಿಕೊಂಡರು:

08067029a ದೃಷ್ಟ್ವಾ ತು ಕರ್ಣಂ ಭುವಿ ನಿಷ್ಟನಂತಂ

         ಹತಂ ರಥಾತ್ಸಾಯಕೇನಾವಭಿನ್ನಂ|

08067029c ಮಹಾನಿಲೇನಾಗ್ನಿಮಿವಾಪವಿದ್ಧಂ

         ಯಜ್ಞಾವಸಾನೇ ಶಯನೇ ನಿಶಾಂತೇ||

“ಸಾಯಕದಿಂದ ಕತ್ತರಿಸಲ್ಪಟ್ಟು ರಥದಿಂದ ಕೆಳಕ್ಕೆ ಬಿದ್ದಿರುವ ಅವನು ಚಂಡಮಾರುತದಿಂದ ಭಗ್ನವಾಗಿ ಕೆಳಗೆ ಬಿದ್ದ ಪರ್ವತ ಶಿಖರದಂತೆಯೂ, ಯಜ್ಞಾವಸಾನದ ಅಗ್ನಿಯಂತೆಯೂ, ಮುಳುಗಿರುವ ಸೂರ್ಯನಂತೆಯೂ ಕಾಣುತ್ತಿದ್ದಾನೆ!

08067030a ಶರೈರಾಚಿತಸರ್ವಾಂಗಃ ಶೋಣಿತೌಘಪರಿಪ್ಲುತಃ|

08067030c ವಿಭಾತಿ ದೇಹಃ ಕರ್ಣಸ್ಯ ಸ್ವರಶ್ಮಿಭಿರಿವಾಂಶುಮಾನ್||

ಸರ್ವಾಂಗಗಳಲ್ಲಿಯೂ ಶರಗಳಿಂದ ಚುಚ್ಚಲ್ಪಟ್ಟು ಸುರಿಯುತ್ತಿರುವ ರಕ್ತದಿಂದ ಲೇಪಿತನಾಗಿರುವ ಕರ್ಣನ ದೇಹವು ತನ್ನದೇ ರಶ್ಮಿಗಳಿಂದ ಬೆಳಗುವ ಸೂರ್ಯನಂತೆ ಬೆಳಗುತ್ತಿದೆ!

08067031a ಪ್ರತಾಪ್ಯ ಸೇನಾಮಾಮಿತ್ರೀಂ ದೀಪ್ತೈಃ ಶರಗಭಸ್ತಿಭಿಃ|

08067031c ಬಲಿನಾರ್ಜುನಕಾಲೇನ ನೀತೋಽಸ್ತಂ ಕರ್ಣಭಾಸ್ಕರಃ||

ಉರಿಯುತ್ತಿರುವ ಶರಗಳೆಂಬ ಕಿರಣಗಳಿಂದ ಸೇನೆಗಳನ್ನು ತೀವ್ರವಾಗಿ ಉರಿಸಿ ಬಲಶಾಲಿ ಅರ್ಜುನನೆಂಬ ಸಮಯದಿಂದ ಕರ್ಣನೆಂಬ ಭಾಸ್ಕರನು ಅಸ್ತಗೊಂಡಿದ್ದಾನೆ!

08067032a ಅಸ್ತಂ ಗಚ್ಚನ್ಯಥಾದಿತ್ಯಃ ಪ್ರಭಾಮಾದಾಯ ಗಚ್ಚತಿ|

08067032c ಏವಂ ಜೀವಿತಮಾದಾಯ ಕರ್ಣಸ್ಯೇಷುರ್ಜಗಾಮ ಹ||

ಅಸ್ತನಾಗುತ್ತಿರುವ ಸೂರ್ಯನು ಹೇಗೆ ತನ್ನ ಪ್ರಭೆಗಳನ್ನೂ ತೆಗೆದುಕೊಂಡು ಹೋಗುತ್ತಾನೋ ಹಾಗೆ ಈ ಶರವು ಕರ್ಣನ ಜೀವವನ್ನೂ ತೆಗೆದುಕೊಂಡು ಹೋಯಿತು!

08067033a ಅಪರಾಹ್ಣೇ ಪರಾಹ್ಣಸ್ಯ ಸೂತಪುತ್ರಸ್ಯ ಮಾರಿಷ|

08067033c ಚಿನ್ನಮಂಜಲಿಕೇನಾಜೌ ಸೋತ್ಸೇಧಮಪತಚ್ಚಿರಃ||

ಮಾರಿಷ! ಸೂತಪುತ್ರನ ಮರಣವು ದಿವಸದ ಕಡೆಯ ಭಾಗದಲ್ಲಾಯಿತು. ಅಂಜಲಿಕ ಬಾಣದಿಂದ ಕತ್ತರಿಸಲ್ಪಟ್ಟು ಶಿರಸ್ಸು ದೇಹದಿಂದ ಕೆಳಗೆ ಬಿದ್ದಿತು.

08067034a ಉಪರ್ಯುಪರಿ ಸೈನ್ಯಾನಾಂ ತಸ್ಯ ಶತ್ರೋಸ್ತದಂಜಸಾ|

08067034c ಶಿರಃ ಕರ್ಣಸ್ಯ ಸೋತ್ಸೇಧಮಿಷುಃ ಸೋಽಪಾಹರದ್ದ್ರುತಂ||

ಅದು ಸೇನೆಯ ಮೇಲ್ಭಾಗದಲ್ಲಿಯೇ ಹೋಗುತ್ತಾ ಎತ್ತರವಾದ ಶಿರಸ್ಸನ್ನು ಬಹಳ ಬೇಗ ಅಪಹರಿಸಿಬಿಟ್ಟಿತು!””

08067035 ಸಂಜಯ ಉವಾಚ|

08067035a ಕರ್ಣಂ ತು ಶೂರಂ ಪತಿತಂ ಪೃಥಿವ್ಯಾಂ

         ಶರಾಚಿತಂ ಶೋಣಿತದಿಗ್ಧಗಾತ್ರಂ|

08067035c ದೃಷ್ಟ್ವಾ ಶಯಾನಂ ಭುವಿ ಮದ್ರರಾಜಶ್

         ಚಿನ್ನಧ್ವಜೇನಾಪಯಯೌ ರಥೇನ||

ಸಂಜಯನು ಹೇಳಿದನು: “ಬಾಣಗಳಿಂದ ಚುಚ್ಚಲ್ಪಟ್ಟು ರಕ್ತದಿಂದ ತೋಯ್ದುಹೋಗಿ ಭೂಮಿಯ ಮೇಲೆ ಬಿದ್ದಿದ್ದ ಶೂರ ಕರ್ಣನನ್ನು ನೋಡಿ ಮದ್ರರಾಜನು ಧ್ವಜವಿಹೀನ ರಥದಿಂದ ಹೊರಬಂದು ಹೊರಟು ಹೋದನು.

08067036a ಕರ್ಣೇ ಹತೇ ಕುರವಃ ಪ್ರಾದ್ರವಂತ

         ಭಯಾರ್ದಿತಾ ಗಾಢವಿದ್ಧಾಶ್ಚ ಸಂಖ್ಯೇ|

08067036c ಅವೇಕ್ಷಮಾಣಾ ಮುಹುರರ್ಜುನಸ್ಯ

         ಧ್ವಜಂ ಮಹಾಂತಂ ವಪುಷಾ ಜ್ವಲಂತಂ||

ಕರ್ಣನು ಹತನಾಗಲು ಬಾಣಗಳಿಂದ ಗಾಢವಾಗಿ ಗಾಯಗೊಂಡಿದ್ದ ಕೌರವ ಸೇನೆಯು ರಣದಲ್ಲಿ ತೇಜಸ್ಸಿನಿಂದ ಬೆಳಗುತ್ತಿದ್ದ ಅರ್ಜುನನ ಮಹಾಧ್ವಜವನ್ನು ತಿರುಗಿ ತಿರುಗಿ ನೋಡುತ್ತಾ ಪಲಾಯನಮಾಡಿತು.

08067037a ಸಹಸ್ರನೇತ್ರಪ್ರತಿಮಾನಕರ್ಮಣಃ

         ಸಹಸ್ರಪತ್ರಪ್ರತಿಮಾನನಂ ಶುಭಂ|

08067037c ಸಹಸ್ರರಶ್ಮಿರ್ದಿನಸಂಕ್ಷಯೇ ಯಥಾ

         ತಥಾಪತತ್ತಸ್ಯ ಶಿರೋ ವಸುಂಧರಾಂ||

ಸಹಸ್ರನೇತ್ರನ ಕರ್ಮಗಳಿಗೆ ಸಮಾನ ಕರ್ಮಗಳನ್ನು ಮಾಡಿದ್ದ ಕರ್ಣನ ಸಹಸ್ರದಳ ಕಮಲಕ್ಕೆ ಸಮಾನ ಶುಭ ಮುಖವು ದಿನವು ಕಳೆದಾಗ ಮುಳುಗುವ ಸಹಸ್ರರಶ್ಮಿ ಸೂರ್ಯನು ಪಶ್ಚಿಮ ಪರ್ವತದಲ್ಲಿ ಬೀಳುವಂತೆ ಭೂಮಿಯ ಮೇಲೆ ಬಿದ್ದಿತು.”

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಕರ್ಣವಧೇ ಸಪ್ತಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಕರ್ಣವಧ ಎನ್ನುವ ಅರವತ್ತೇಳನೇ ಅಧ್ಯಾಯವು.

Related image

Comments are closed.