Karna Parva: Chapter 61

ಕರ್ಣ ಪರ್ವ

೬೧

ದುಃಶಾಸನವಧೆ

ಭೀಮಸೇನನು ದುಃಶಾಸನನ ಎದೆಯನ್ನು ಸೀಳಿ ರಕ್ತವನ್ನು ಕುಡಿದು ಅವನನ್ನು ವಧಿಸಿದುದು (೧-೧೭).

Image result for hidimba vadha08061001 ಸಂಜಯ ಉವಾಚ|

08061001a ತತ್ರಾಕರೋದ್ದುಷ್ಕರಂ ರಾಜಪುತ್ರೋ

         ದುಃಶಾಸನಸ್ತುಮುಲೇ ಯುಧ್ಯಮಾನಃ|

08061001c ಚಿಚ್ಛೇದ ಭೀಮಸ್ಯ ಧನುಃ ಕ್ಷುರೇಣ

         ಷಡ್ಭಿಃ ಶರೈಃ ಸಾರಥಿಮಪ್ಯವಿಧ್ಯತ್||

ಸಂಜಯನು ಹೇಳಿದನು: “ತುಮುಲದಲ್ಲಿ ಯುದ್ಧಮಾಡುತ್ತಿದ್ದ ರಾಜಪುತ್ರ ದುಃಶಾಸನನು ದುಷ್ಕರವಾದುದನ್ನು ಮಾಡಿದನು. ಅವನು ಕ್ಷುರದಿಂದ ಭೀಮನ ಧನುಸ್ಸನ್ನು ತುಂಡರಿಸಿದನು ಮತ್ತು ಆರು ಶರಗಳಿಂದ ಸಾರಥಿಯನ್ನು ಕೆಳಗುರುಳಿಸಿದನು.

08061002a ತತೋಽಭಿನದ್ಬಹುಭಿಃ ಕ್ಷಿಪ್ರಮೇವ

         ವರೇಷುಭಿರ್ಭೀಮಸೇನಂ ಮಹಾತ್ಮಾ|

08061002c ಸ ವಿಕ್ಷರನ್ನಾಗ ಇವ ಪ್ರಭಿನ್ನೋ

         ಗದಾಮಸ್ಮೈ ತುಮುಲೇ ಪ್ರಾಹಿಣೋದ್ವೈ||

ಆಗ ಆ ಮಹಾತ್ಮನು ಕ್ಷಿಪ್ರವಾಗಿ ಅನೇಕ ಶ್ರೇಷ್ಠ ಬಾಣಗಳಿಂದ ಭೀಮಸೇನನನ್ನು ಹೊಡೆದನು. ಭೀಮನು ಗಾಯಗೊಂಡ ಮದ್ದಾನೆಯಂತೆ ತುಮುಲದಲ್ಲಿ ಉಕ್ಕಿನ ಗದೆಯನ್ನು ಎಸೆದನು.

08061003a ತಯಾಹರದ್ದಶ ಧನ್ವಂತರಾಣಿ

         ದುಃಶಾಸನಂ ಭೀಮಸೇನಃ ಪ್ರಸಹ್ಯ|

08061003c ತಯಾ ಹತಃ ಪತಿತೋ ವೇಪಮಾನೋ

         ದುಃಶಾಸನೋ ಗದಯಾ ವೇಗವತ್ಯಾ||

ಅದರಿಂದ ದುಃಶಾಸನನನ್ನು ಹತ್ತು ಧನುಸ್ಸುಗಳಷ್ಟು ಹಿಂದೆ ತಳ್ಳಿ ಭೀಮಸೇನನು ಜೋರಾಗಿ ನಕ್ಕನು. ವೇಗವುಳ್ಳ ಆ ಗದೆಯಿಂದ ಪ್ರಹೃತನಾದ ದುಃಶಾಸನನು ನಡುಗುತ್ತಾ ಕೆಳಗೆ ಬಿದ್ದನು.

08061004a ಹಯಾಃ ಸಸೂತಾಶ್ಚ ಹತಾ ನರೇಂದ್ರ

         ಚೂರ್ಣೀಕೃತಶ್ಚಾಸ್ಯ ರಥಃ ಪತಂತ್ಯಾ|

08061004c ವಿಧ್ವಸ್ತವರ್ಮಾಭರಣಾಂಬರಸ್ರಗ್

         ವಿಚೇಷ್ಟಮಾನೋ ಭೃಶವೇದನಾರ್ತಃ||

ನರೇಂದ್ರ! ಮೇಲೆಬಿದ್ದ ಗದೆಯು ಅವನ ಕುದುರೆಗಳನ್ನೂ, ಸಾರಥಿಯನ್ನೂ, ರಥವನ್ನೂ ನುಚ್ಚುನೂರಾಗಿಸಿತು. ಕವಚ ವಸ್ತ್ರಾಭರಣಗಳು ಚದುರಿಹೋಗಿದ್ದ ದುಃಶಾಸನನು ಅತ್ಯಂತ ವೇದನೆಯಿಂದ ಆರ್ತನಾಗಿ ಉರುಳತೊಡಗಿದನು.

08061005a ತತಃ ಸ್ಮೃತ್ವಾ ಭೀಮಸೇನಸ್ತರಸ್ವೀ

         ಸಾಪತ್ನಕಂ ಯತ್ಪ್ರಯುಕ್ತಂ ಸುತೈಸ್ತೇ|

08061005c ರಥಾದವಪ್ಲುತ್ಯ ಗತಃ ಸ ಭೂಮೌ

         ಯತ್ನೇನ ತಸ್ಮಿನ್ಪ್ರಣಿಧಾಯ ಚಕ್ಷುಃ||

ಆಗ ತರಸ್ವೀ ಭೀಮಸೇನನು ತನ್ನ ಪತ್ನಿಯ ಕುರಿತು ನಿನ್ನ ಮಗನು ಮಾಡಿದುದನ್ನು ಸ್ಮರಿಸಿಕೊಂಡು ರಥದಿಂದ ನೆಲಕ್ಕೆ ಹಾರಿ ಪ್ರಯತ್ನಪಟ್ಟು ಅವನ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿದನು.

08061006a ಅಸಿಂ ಸಮುದ್ಧೃತ್ಯ ಶಿತಂ ಸುಧಾರಂ

         ಕಂಟೇ ಸಮಾಕ್ರಮ್ಯ ಚ ವೇಪಮಾನಂ|

08061006c ಉತ್ಕೃತ್ಯ ವಕ್ಷಃ ಪತಿತಸ್ಯ ಭೂಮಾವ್

         ಅಥಾಪಿಬಚ್ಚೋಣಿತಮಸ್ಯ ಕೋಷ್ಣಂ|

08061006e ಆಸ್ವಾದ್ಯ ಚಾಸ್ವಾದ್ಯ ಚ ವೀಕ್ಷಮಾಣಃ

         ಕ್ರುದ್ಧೋಽತಿವೇಲಂ ಪ್ರಜಗಾದ ವಾಕ್ಯಂ|

ಹರಿತ ಶುದ್ಧ ಖಡ್ಗವನ್ನು ಮೇಲೆತ್ತಿ ಉರುಳಾಡುತ್ತಿದ್ದ ಅವನ ಕುತ್ತಿಗೆಯನ್ನು ಮೆಟ್ಟಿ ಕತ್ತರಿಸಿ ಭೂಮಿಯಮೇಲೆ ಬಿದ್ದವನ ಎದೆಯನ್ನು ಮೇಲೆತ್ತಿ ಸುರಿಯುತ್ತಿದ್ದ ಅವನ ರಕ್ತವನ್ನು ಕುಡಿದನು. ರಕ್ತದ ರುಚಿಯನ್ನು ಪುನಃ ಪುನಃ ಆಸ್ವಾದಿಸುತ್ತಾ ದುಃಶಾಸನನನ್ನೇ ನೋಡುತ್ತಾ ಪರಮ ಕ್ರುದ್ಧನಾಗಿ ಹೇಳಿದನು:

08061007a ಸ್ತನ್ಯಸ್ಯ ಮಾತುರ್ಮಧುಸರ್ಪಿಷೋ ವಾ

         ಮಾಧ್ವೀಕಪಾನಸ್ಯ ಚ ಸತ್ಕೃತಸ್ಯ|

08061007c ದಿವ್ಯಸ್ಯ ವಾ ತೋಯರಸಸ್ಯ ಪಾನಾತ್

         ಪಯೋದಧಿಭ್ಯಾಂ ಮಥಿತಾಚ್ಚ ಮುಖ್ಯಾತ್|

08061007e ಸರ್ವೇಭ್ಯ ಏವಾಭ್ಯಧಿಕೋ ರಸೋಽಯಂ

         ಮತೋ ಮಮಾದ್ಯಾಹಿತಲೋಹಿತಸ್ಯ||

“ತಾಯಿಯ ಮೊಲೆಹಾಲಿಗಿಂತಲೂ, ತುಪ್ಪ-ಜೇನುತುಪ್ಪಗಳ ಮಿಶ್ರಣಕ್ಕಿಂತಲೂ, ಚೆನ್ನಾಗಿ ಮಾಡಲ್ಪಟ್ಟ ದ್ರಾಕ್ಷಾರಸದ ಪಾನೀಯಕ್ಕಿಂತಲೂ, ದಿವ್ಯವಾದ ತೋಯರಸದ ಪಾನೀಯಕ್ಕಿಂತಲೂ, ಹಾಲು-ಮೊಸರನ್ನು ಕಡೆದು ಮಾಡಿದ ಮಜ್ಜಿಗೆಗಿಂತಲೂ ಮತ್ತು ಎಲ್ಲ ಪಾನೀಯಗಳಿಗಿಂತಲೂ ನನ್ನ ಶತ್ರುವಿನ ರಕ್ತವು ಅಧಿಕ ರುಚಿಯನ್ನು ಹೊಂದಿದೆಯೆಂದು ನನಗನ್ನಿಸುತ್ತಿದೆ!”

08061008a ಏವಂ ಬ್ರುವಾಣಂ ಪುನರಾದ್ರವಂತಂ

         ಆಸ್ವಾದ್ಯ ವಲ್ಗಂತಮತಿಪ್ರಹೃಷ್ಟಂ|

08061008c ಯೇ ಭೀಮಸೇನಂ ದದೃಶುಸ್ತದಾನೀಂ

         ಭಯೇನ ತೇಽಪಿ ವ್ಯಥಿತಾ ನಿಪೇತುಃ||

ಹೀಗೆ ಹೇಳುತ್ತಾ ರಕ್ತವನ್ನು ಕುಡಿತು ಅತಿಪ್ರಹೃಷ್ಟನಾಗಿ ಪುನಃ ಪುನಃ ಕೂಗಿ ಕುಣಿದು ಕುಪ್ಪಳಿಸುತ್ತಿದ್ದ ಆ ಭೀಮಸೇನನನ್ನು ನೋಡಿದವರೆಲ್ಲರೂ ವ್ಯಥಿತರಾಗಿ ಕುಸಿದುಬಿದ್ದರು.

08061009a ಯೇ ಚಾಪಿ ತತ್ರಾಪತಿತಾ ಮನುಷ್ಯಾಸ್

         ತೇಷಾಂ ಕರೇಭ್ಯಃ ಪತಿತಂ ಚ ಶಸ್ತ್ರಂ|

08061009c ಭಯಾಚ್ಚ ಸಂಚುಕ್ರುಶುರುಚ್ಚಕೈಸ್ತೇ

         ನಿಮೀಲಿತಾಕ್ಷಾ ದದೃಶುಶ್ಚ ತನ್ನ||

ಅಲ್ಲಿ ಭಯದಿಂದ ನಡುಗುತ್ತಿದ್ದ ಮನುಷ್ಯರ ಕೈಗಳಿಂದ ಶಸ್ತ್ರಗಳು ಕೆಳಗೆ ಬಿದ್ದವು. ಭಯದಿಂದ ವಿಕಾರಸ್ವರದಲ್ಲಿ ಸಹಾಯಕ್ಕೆಂದು ಕೂಗಿಕೊಳ್ಳುತ್ತಿದ್ದರು. ಕೆಲವರು ಅವನನ್ನು ನೋಡಲಿಕ್ಕಾಗದೇ ಕಣ್ಣುಗಳನ್ನೇ ಮುಚ್ಚಿಕೊಂಡರು.

08061010a ಯೇ ತತ್ರ ಭೀಮಂ ದದೃಶುಃ ಸಮಂತಾದ್

         ದೌಃಶಾಸನಂ ತದ್ರುಧಿರಂ ಪಿಬಂತಂ|

08061010c ಸರ್ವೇ ಪಲಾಯಂತ ಭಯಾಭಿಪನ್ನಾ

         ನಾಯಂ ಮನುಷ್ಯ ಇತಿ ಭಾಷಮಾಣಾಃ||

ದುಃಶಾಸನನ ರಕ್ತವನ್ನು ಕುಡಿಯುತ್ತಿದ್ದ ಭೀಮಸೇನನನ್ನು ಎಲ್ಲಕಡೆಗಳಿಂದ ನೋಡುತ್ತಿದ್ದವರು ಎಲ್ಲರೂ “ಇವನು ಮನುಷ್ಯನಲ್ಲ!” ಎಂದು ಮಾತನಾಡಿಕೊಳ್ಳುತ್ತಾ ಭಯಾರ್ದಿತರಾಗಿ ಪಲಾಯನಗೈದರು.

08061011a ಶೃಣ್ವತಾಂ ಲೋಕವೀರಾಣಾಮಿದಂ ವಚನಮಬ್ರವೀತ್|

08061011c ಏಷ ತೇ ರುಧಿರಂ ಕಂಟಾತ್ಪಿಬಾಮಿ ಪುರುಷಾಧಮ|

08061011e ಬ್ರೂಹೀದಾನೀಂ ಸುಸಂರಬ್ಧಃ ಪುನರ್ಗೌರಿತಿ ಗೌರಿತಿ||

ಲೋಕವೀರರಿಗೆ ಕೇಳುವಂತೆ ಭೀಮಸೇನನು ಈ ಮಾತನ್ನಾಡಿದನು: “ಪುರುಷಾಧಮ! ನಿನ್ನ ಈ ರಕ್ತವನ್ನು ಕಂಠದಿಂದ ಕುಡಿಯುತ್ತಿದ್ದೇನೆ. ಈಗ ಸಂರಬ್ಧನಾಗಿ “ಗೌಃ ಗೌಃ” ಎಂದು ಪುನಃ ಹೇಳು ನೋಡೋಣ!

08061012a ಪ್ರಮಾಣಕೋಟ್ಯಾಂ ಶಯನಂ ಕಾಲಕೂಟಸ್ಯ ಭೋಜನಂ|

08061012c ದಶನಂ ಚಾಹಿಭಿಃ ಕಷ್ಟಂ ದಾಹಂ ಚ ಜತುವೇಶ್ಮನಿ||

08061013a ದ್ಯೂತೇನ ರಾಜ್ಯಹರಣಮರಣ್ಯೇ ವಸತಿಶ್ಚ ಯಾ|

08061013c ಇಷ್ವಸ್ತ್ರಾಣಿ ಚ ಸಂಗ್ರಾಮೇಷ್ವಸುಖಾನಿ ಚ ವೇಶ್ಮನಿ||

08061014a ದುಃಖಾನ್ಯೇತಾನಿ ಜಾನೀಮೋ ನ ಸುಖಾನಿ ಕದಾ ಚನ|

08061014c ಧೃತರಾಷ್ಟ್ರಸ್ಯ ದೌರಾತ್ಮ್ಯಾತ್ಸಪುತ್ರಸ್ಯ ಸದಾ ವಯಂ||

ತನ್ನ ಮಕ್ಕಳೂಸೇರಿ ಧೃತರಾಷ್ಟ್ರನು ನಮ್ಮ ಮೇಲೆ ಸದಾ ಇಟ್ಟಿರುವ ದುರಾತ್ಮತೆಯಿಂದ ಪ್ರಮಾಣಕೋಟಿಯಲ್ಲಿ ಕಾಲಕೂಟವನ್ನು ಉಣಿಸಿ ಮಲಗಿಸಿ ಸರ್ಪಗಳಿಂದ ಕಚ್ಚಿಸಿ ಕಷ್ಟವನ್ನಿತ್ತುದುದು, ಜತುಗೃಹದಲ್ಲಿ ಸುಟ್ಟಿದ್ದುದು, ದ್ಯೂತದಲ್ಲಿ ರಾಜ್ಯವನ್ನು ಅಪಹರಿಸಿದುದು, ಅರಣ್ಯದಲ್ಲಿ ವಸತಿಮಾಡಿಸಿದುದು, ಸಂಗ್ರಾಮದಲ್ಲಿ ಬಾಣ-ಅಸ್ತ್ರಗಳನ್ನು ಪ್ರಯೋಗಿಸಿದುದು, ಅರಮನೆಯಲ್ಲಿ ಸುಖವಾಗಿರಲು ಅವಕಾಶಕೊಡದೇ ಇದ್ದುದು, ಈ ಇಲ್ಲ ದುಃಖವನ್ನೇ ತಿಳಿದಿದ್ದೇವೆಯೇ ಹೊರತು ಎಂದೂ ಸುಖವೇನೆಂಬುದನ್ನು ತಿಳಿಯಲಿಲ್ಲ!”

08061015a ಇತ್ಯುಕ್ತ್ವಾ ವಚನಂ ರಾಜಂ ಜಯಂ ಪ್ರಾಪ್ಯ ವೃಕೋದರಃ|

08061015c ಪುನರಾಹ ಮಹಾರಾಜ ಸ್ಮಯಂಸ್ತೌ ಕೇಶವಾರ್ಜುನೌ||

ರಾಜನ್! ಹೀಗೆ ಹೇಳಿ ವೃಕೋದರನು ಜಯವನ್ನು ಹೊಂದಿದನು. ಮಹಾರಾಜ! ಪುನಃ ನಗುತ್ತಾ ಕೇಶವಾರ್ಜುನರಿಗೆ ಹೇಳಿದನು:

08061016a ದುಃಶಾಸನೇ ಯದ್ರಣೇ ಸಂಶ್ರುತಂ ಮೇ

         ತದ್ವೈ ಸರ್ವಂ ಕೃತಮದ್ಯೇಹ ವೀರೌ|

08061016c ಅದ್ಯೈವ ದಾಸ್ಯಾಮ್ಯಪರಂ ದ್ವಿತೀಯಂ

         ದುರ್ಯೋಧನಂ ಯಜ್ಞಪಶುಂ ವಿಶಸ್ಯ|

08061016e ಶಿರೋ ಮೃದಿತ್ವಾ ಚ ಪದಾ ದುರಾತ್ಮನಃ

         ಶಾಂತಿಂ ಲಪ್ಸ್ಯೇ ಕೌರವಾಣಾಂ ಸಮಕ್ಷಂ||

“ವೀರರೇ! ದುಃಶಾಸನನ ಕುರಿತು ನಾನು ಏನೆಲ್ಲ ಪ್ರತಿಜ್ಞೆ ಮಾಡಿದ್ದೆನೋ ಅವೆಲ್ಲವನ್ನೂ ಇಂದು ರಣದಲ್ಲಿ ಮಾಡಿ ತೋರಿಸಿದ್ದೇನೆ! ಎರಡನೆಯ ಯಜ್ಞಪಶುವಾದ ದುರ್ಯೋಧನನನ್ನು ಕೂಡ ಇಲ್ಲಿಯೇ ಹಿಸುಕಿ ಬಲಿಕೊಡುತ್ತೇನೆ! ಕೌರವರ ಸಮಕ್ಷಮದಲ್ಲಿ ಆ ದುರಾತ್ಮನ ಶಿರವನ್ನು ತುಳಿದೇ ಶಾಂತಿಯನ್ನು ಪಡೆಯುತ್ತೇನೆ!”

08061017a ಏತಾವದುಕ್ತ್ವಾ ವಚನಂ ಪ್ರಹೃಷ್ಟೋ

         ನನಾದ ಚೋಚ್ಛೈ ರುಧಿರಾರ್ದ್ರಗಾತ್ರಃ|

08061017c ನನರ್ತ ಚೈವಾತಿಬಲೋ ಮಹಾತ್ಮಾ

         ವೃತ್ರಂ ನಿಹತ್ಯೇವ ಸಹಸ್ರನೇತ್ರಃ||

ಪ್ರಹೃಷ್ಟನಾಗಿ ಹೀಗೆ ಹೇಳಿ ರಕ್ತದಿಂದ ತೋಯ್ದುಹೋಗಿದ್ದ ಮಹಾತ್ಮ ಅತಿಬಲ ಭೀಮಸೇನನು ವೃತ್ರನನ್ನು ಸಂಹರಿಸಿದ ಸಹಸ್ರನೇತ್ರನಂತೆ ಜೋರಾಗಿ ಕೂಗಿ ನರ್ತಿಸಿದನು.”

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ದುಃಶಾಸನವಧೇ ಏಕಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ದುಃಶಾಸನವಧ ಎನ್ನುವ ಅರವತ್ತೊಂದನೇ ಅಧ್ಯಾಯವು.

Related image

Comments are closed.