Karna Parva: Chapter 59

ಕರ್ಣ ಪರ್ವ

೫೯

ಅರ್ಜುನ-ಭೀಮಸೇನರ ಧಾಳಿಯಿಂದ ಪೀಡಿತಗೊಂಡ ಕೌರವ ಸೇನೆಯನ್ನು ನೋಡಿ ಕರ್ಣನು ಪುನಃ ಪಾಂಚಾಲರನ್ನು ಆಕ್ರಮಣಿಸಿದುದು (೧-೪೫).

08059001 ಸಂಜಯ ಉವಾಚ|

08059001a ತಂ ತು ಯಾಂತಂ ಮಹಾವೇಗೈರಶ್ವೈಃ ಕಪಿವರಧ್ವಜಂ|

08059001c ಯುದ್ಧಾಯಾಭ್ಯದ್ರವನ್ವೀರಾಃ ಕುರೂಣಾಂ ನವತೀ ರಥಾಃ|

08059001e ಪರಿವವ್ರುರ್ನರವ್ಯಾಘ್ರಾ ನರವ್ಯಾಘ್ರಂ ರಣೇಽರ್ಜುನಂ||

ಸಂಜಯನು ಹೇಳಿದನು: “ಮಹಾವೇಗದ ಅಶ್ವಗಳೊಡನೆ ಬರುತ್ತಿದ್ದ ಆ ಕಪಿವರಧ್ವಜನನ್ನು ತೊಂಭತ್ತು ವೀರ ಕುರುಗಳು ಯುದ್ಧಮಾಡುತ್ತಾ ಅಕ್ರಮಣಿಸಿದರು. ರಣದಲ್ಲಿ ಆ ನರವ್ಯಾಘ್ರರು ನರವ್ಯಾಘ್ರ ಅರ್ಜುನನನ್ನು ಸುತ್ತುವರೆದರು.

08059002a ಕೃಷ್ಣಃ ಶ್ವೇತಾನ್ಮಹಾವೇಗಾನಶ್ವಾನ್ಕನಕಭೂಷಣಾನ್|

08059002c ಮುಕ್ತಾಜಾಲಪ್ರತಿಚ್ಚನ್ನಾನ್ ಪ್ರೈಷೀತ್ಕರ್ಣರಥಂ ಪ್ರತಿ||

ಕೃಷ್ಣನು ಮಹಾವೇಗಯುಕ್ತವಾದ ಕನಕಭೂಷಣಗಳಿಂದ ಅಲಂಕೃತವಾದ, ಮುತ್ತಿನ ಬಲೆಗಳಿಂದ ಆಚ್ಛಾದಿತಗೊಂದಿದ್ದ ಶ್ವೇತ ಕುದುರೆಗಳನ್ನು ಕರ್ಣನ ರಥದ ಕಡೆ ಕೊಂಡೊಯ್ದನು.

08059003a ತತಃ ಕರ್ಣರಥಂ ಯಾಂತಮರೀನ್ ಘ್ನಂತಂ ಧನಂಜಯಂ|

08059003c ಬಾಣವರ್ಷೈರಭಿಘ್ನಂತಃ ಸಂಶಪ್ತಕರಥಾ ಯಯುಃ||

ಆಗ ಶತ್ರುಗಳನ್ನು ಸಂಹರಿಸುತ್ತಾ ಕರ್ಣನ ರಥದ ಕಡೆ ಹೋಗುತ್ತಿದ್ದ ಧನಂಜಯನನ್ನು ಸಂಶಪ್ತಕ ರಥಯೋಧರು ಬಾಣವೃಷ್ಟಿಗಳನ್ನು ಸುರಿಸುತ್ತಾ ಆಕ್ರಮಣಿಸಿದರು.

08059004a ತ್ವರಮಾಣಾಂಸ್ತು ತಾನ್ಸರ್ವಾನ್ಸಸೂತೇಷ್ವಸನಧ್ವಜಾನ್|

08059004c ಜಘಾನ ನವತಿಂ ವೀರಾನರ್ಜುನೋ ನಿಶಿತೈಃ ಶರೈಃ||

ಅರ್ಜುನನಾದರೋ ನಿಶಿತ ಶರಗಳಿಂದ ಆ ತೊಂಭತ್ತು ಮಂದಿ ವೀರರೆಲ್ಲರನ್ನೂ ಸಾರಥಿ-ಧನುಸ್ಸು-ಧ್ವಜಗಳೊಂದಿಗೆ ಸಂಹರಿಸಿದನು.

08059005a ತೇಽಪತಂತ ಹತಾ ಬಾಣೈರ್ನಾನಾರೂಪೈಃ ಕಿರೀಟಿನಾ|

08059005c ಸವಿಮಾನಾ ಯಥಾ ಸಿದ್ಧಾಃ ಸ್ವರ್ಗಾತ್ಪುಣ್ಯಕ್ಷಯೇ ತಥಾ||

ಕಿರೀಟಿಯ ನಾನಾರೂಪಗಳ ಬಾಣಗಳಿಂದ ಹತರಾದ ಅವರು ಪುಣ್ಯವು ಕ್ಷಯವಾಗಿ ಸಿದ್ಧರು ವಿಮಾನಗಳೊಂದಿಗೆ ಸ್ವರ್ಗದಿಂದ ಹೇಗೋ ಹಾಗೆ ಕೆಳಗುರುಳಿದರು.

08059006a ತತಃ ಸರಥನಾಗಾಶ್ವಾಃ ಕುರವಃ ಕುರುಸತ್ತಮ|

08059006c ನಿರ್ಭಯಾ ಭರತಶ್ರೇಷ್ಠಮಭ್ಯವರ್ತಂತ ಫಲ್ಗುನಂ||

ಕುರುಸತ್ತಮ! ಆಗ ಕುರುಗಳು ರಥ-ಆನೆ-ಅಶ್ವಗಳೊಡನೆ ನಿರ್ಭಯರಾಗಿ ಭರತಶ್ರೇಷ್ಠ ಫಲ್ಗುನನನ್ನು ಆಕ್ರಮಣಿಸಿದರು.

08059007a ತದಾಯಸ್ತಮಮುಕ್ತಾಸ್ತ್ರಮುದೀರ್ಣವರವಾರಣಂ|

08059007c ಪುತ್ರಾಣಾಂ ತೇ ಮಹತ್ಸೈನ್ಯಂ ಸಮರೌತ್ಸೀದ್ಧನಂಜಯಃ||

ಆಗ ಧನಂಜಯನು ಅಸ್ತ್ರವನ್ನು ಪ್ರಯೋಗಿಸಿ ಆ ಶ್ರೇಷ್ಠ ಆನೆಗಳಿಂದ ಕೂಡಿದ್ದ ನಿನ್ನ ಪುತ್ರರ ಮಹಾಸೇನೆಯನ್ನು ಸಮರದಲ್ಲಿ ಸಂಹರಿಸಿದನು.

08059008a ಶಕ್ತ್ಯೃಷ್ಟಿತೋಮರಪ್ರಾಸೈರ್ಗದಾನಿಸ್ತ್ರಿಂಶಸಾಯಕೈಃ|

08059008c ಪ್ರಾಚ್ಚಾದಯನ್ಮಹೇಷ್ವಾಸಾಃ ಕುರವಃ ಕುರುನಂದನಂ||

ಮಹೇಷ್ವಾಸ ಕುರುಗಳು ಕುರುನಂದನನನ್ನು ಶಕ್ತಿ-ಋಷ್ಟಿ-ತೋಮರ-ಪ್ರಾಸ-ಗದೆ-ಖಡ್ಗ-ಸಾಯಕಗಳಿಂದ ಮುಚ್ಚಿಬಿಟ್ಟರು.

08059009a ತಾಂ ಕುರೂಣಾಂ ಪ್ರವಿತತಾಂ ಶಸ್ತ್ರವೃಷ್ಟಿಂ ಸಮುದ್ಯತಾಂ|

08059009c ವ್ಯಧಮತ್ಪಾಂಡವೋ ಬಾಣೈಸ್ತಮಃ ಸೂರ್ಯ ಇವಾಂಶುಭಿಃ||

ಸೂರ್ಯನು ಕಿರಣಗಳಿಂದ ಕತ್ತಲೆಯನ್ನು ಹೇಗೋ ಹಾಗೆ ಪಾಂಡವನು ಎಲ್ಲಕಡೆಗಳಿಂದ ಬೀಳುತ್ತಿದ್ದ ಕುರುಗಳ ಆ ಶರವೃಷ್ಟಿಯನ್ನು ಬಾಣಗಳಿಂದ ನಾಶಗೊಳಿಸಿದನು.

08059010a ತತೋ ಮ್ಲೇಚ್ಛಾಃ ಸ್ಥಿತೈರ್ಮತ್ತೈಸ್ತ್ರಯೋದಶಶತೈರ್ಗಜೈಃ|

08059010c ಪಾರ್ಶ್ವತೋಽಭ್ಯಹನನ್ಪಾರ್ಥಂ ತವ ಪುತ್ರಸ್ಯ ಶಾಸನಾತ್|

ಆಗ ನಿನ್ನ ಮಗನ ಶಾಸನದಂತೆ ಮ್ಲೇಚ್ಛರು ಹದಿನೂರು ನೂರು ಆನೆಗಳೊಡನೆ ಪಾರ್ಥನನ್ನು ಎರಡೂ ಕಡೆಗಳಿಂದ ಆಕ್ರಮಣಿಸತೊಡಗಿದರು.

08059011a ಕರ್ಣಿನಾಲೀಕನಾರಾಚೈಸ್ತೋಮರೈಃ ಪ್ರಾಸಶಕ್ತಿಭಿಃ|

08059011c ಕಂಪನೈರ್ಭಿಂಡಿಪಾಲೈಶ್ಚ ರಥಸ್ಥಂ ಪಾರ್ಥಮಾರ್ದಯನ್||

ಅವರು ಕರ್ಣಿ-ನಾಲೀಕ-ನಾರಾಚ-ತೋಮರ-ಪ್ರಾಸ-ಶಕ್ತಿ-ಕಂಪನ-ಭಿಂಡಿಪಾಲಗಳಿಂದ ರಥಸ್ಥನಾಗಿದ್ದ ಪಾರ್ಥನನ್ನು ಪ್ರಹರಿಸಿದರು.

08059012a ತಾಮಸ್ತ್ರವೃಷ್ಟಿಂ ಪ್ರಹಿತಾಂ ದ್ವಿಪಸ್ಥೈರ್ಯವನೈಃ ಸ್ಮಯನ್|

08059012c ಚಿಚ್ಛೇದ ನಿಶಿತೈರ್ಭಲ್ಲೈರರ್ಧಚಂದ್ರೈಶ್ಚ ಫಲ್ಗುನಃ||

ಆನೆಗಳ ಸವಾರಿಮಾಡಿದ್ದ ಯವನರಿಂದ ಪ್ರಯೋಗಿಸಲ್ಪಟ್ಟ ಆ ಅಸ್ತ್ರವೃಷ್ಟಿಯನ್ನು ಫಲ್ಗುನನು ನಗುತ್ತಾ ನಿಶಿತ ಅರ್ಧಚಂದ್ರ ಭಲ್ಲಗಳಿಂದ ಕತ್ತರಿಸಿದನು.

08059013a ಅಥ ತಾನ್ದ್ವಿರದಾನ್ಸರ್ವಾನ್ನಾನಾಲಿಂಗೈರ್ಮಹಾಶರೈಃ|

08059013c ಸಪತಾಕಾನ್ಸಹಾರೋಹಾನ್ಗಿರೀನ್ವಜ್ರೈರಿವಾಭಿನತ್||

ಆಗ ಅರ್ಜುನನು ಆ ಆನೆಗಳೆಲ್ಲವನ್ನೂ ಪತಾಕೆ-ಆರೋಹಿಗಳೊಂದಿಗೆ ವಜ್ರದಿಂದ ಗಿರಿಗಳನ್ನು ಹೇಗೋ ಹಾಗೆ ನಾನಾ ಚಿಹ್ನೆಯ ಮಹಾಶರಗಳಿಂದ ಹೊಡೆದು ಕೆಳಗುರುಳಿಸಿದನು.

08059014a ತೇ ಹೇಮಪುಂಖೈರಿಷುಭಿರಾಚಿತಾ ಹೇಮಮಾಲಿನಃ|

08059014c ಹತಾಃ ಪೇತುರ್ಮಹಾನಾಗಾಃ ಸಾಗ್ನಿಜ್ವಾಲಾ ಇವಾದ್ರಯಃ||

ಹೇಮಮಾಲೆಗಳನ್ನು ಧರಿಸಿದ್ದ ಆ ಮಹಾ ಆನೆಗಳು ಹೇಮಪುಂಖಗಳಿದ್ದ ಬಾಣಗಳಿಂದ ಹೊಡೆಯಲ್ಪಟ್ಟು ಹತರಾಗಿ ಅಗ್ನಿಜ್ವಾಲೆಯಿಂದ ಕೂಡಿದ ಪರ್ವತಗಳಂತೆ ಕೆಳಕ್ಕೆ ಬಿದ್ದವು.

08059015a ತತೋ ಗಾಂಡೀವನಿರ್ಘೋಷೋ ಮಹಾನಾಸೀದ್ವಿಶಾಂ ಪತೇ|

08059015c ಸ್ತನತಾಂ ಕೂಜತಾಂ ಚೈವ ಮನುಷ್ಯಗಜವಾಜಿನಾಂ||

ವಿಶಾಂಪತೇ! ಆಗ ಗಾಂಡೀವ ನಿರ್ಘೋಷವೂ, ಮನುಷ್ಯ-ಆನೆ-ಕುದುರೆಗಳ ಆರ್ತನಾದಗಳೂ, ಚೀತ್ಕಾರಗಳೂ ಜೋರಾಗಿ ಕೇಳಿಬಂದವು.

08059016a ಕುಂಜರಾಶ್ಚ ಹತಾ ರಾಜನ್ಪ್ರಾದ್ರವಂಸ್ತೇ ಸಮಂತತಃ|

08059016c ಅಶ್ವಾಶ್ಚ ಪರ್ಯಧಾವಂತ ಹತಾರೋಹಾ ದಿಶೋ ದಶ||

ರಾಜನ್! ಹತಗೊಂಡ ಆನೆಗಳು ಮತ್ತು ಆರೋಹಿಗಳು ಹತರಾದ ಕುದುರೆಗಳು ಹತ್ತೂ ದಿಕ್ಕುಗಳಲ್ಲಿ ಓಡತೊಡಗಿದವು.

08059017a ರಥಾ ಹೀನಾ ಮಹಾರಾಜ ರಥಿಭಿರ್ವಾಜಿಭಿಸ್ತಥಾ|

08059017c ಗಂದರ್ವನಗರಾಕಾರಾ ದೃಶ್ಯಂತೇ ಸ್ಮ ಸಹಸ್ರಶಃ||

ಮಹಾರಾಜ! ರಥಿಗಳಿಂದಲೂ ಕುದುರೆಗಳಿಂದಲೂ ವಿಹೀನವಾಗಿದ್ದ ಗಂಧರ್ವನಗರಾಕಾರದ ಸಹಸ್ರಾರು ರಥಗಳು ಅಲ್ಲಿ ಕಾಣುತ್ತಿದ್ದವು.

08059018a ಅಶ್ವಾರೋಹಾ ಮಹಾರಾಜ ಧಾವಮಾನಾಸ್ತತಸ್ತತಃ|

08059018c ತತ್ರ ತತ್ರೈವ ದೃಶ್ಯಂತೇ ಪತಿತಾಃ ಪಾರ್ಥಸಾಯಕೈಃ||

ಮಹಾರಾಜ! ಅಶ್ವಾರೋಹಿಗಳು ಅಲ್ಲಿಂದಲ್ಲಿಗೆ ಓಡುತ್ತಿರುವಾಗ ಪಾರ್ಥನ ಸಾಯಕಗಳಿಂದ ಹೊಡೆಯಲ್ಪಟ್ಟು ಅಲ್ಲಲ್ಲಿಯೇ ಬೀಳುತ್ತಿರುವುದನ್ನು ನಾವು ನೋಡಿದೆವು.

08059019a ತಸ್ಮಿನ್ ಕ್ಷಣೇ ಪಾಂಡವಸ್ಯ ಬಾಹ್ವೋರ್ಬಲಮದೃಶ್ಯತ|

08059019c ಯತ್ಸಾದಿನೋ ವಾರಣಾಂಶ್ಚ ರಥಾಂಶ್ಚೈಕೋಽಜಯದ್ಯುಧಿ||

ಆ ಕ್ಷಣದಲ್ಲಿ ಅಶ್ವಾರೋಹಿಗಳನ್ನೂ, ಆನೆಗಳನ್ನೂ, ರಥಗಳನ್ನೂ ಯುದ್ಧದಲ್ಲಿ ಏಕಾಕಿಯಾಗಿ ಸೋಲಿಸಿದ - ಪಾಂಡವನ ಬಾಹುಗಳ ಬಲವು ಕಂಡುಬಂದಿತು.

08059020a ತತಸ್ತ್ರ್ಯಂಗೇಣ ಮಹತಾ ಬಲೇನ ಭರತರ್ಷಭ|

08059020c ದೃಷ್ಟ್ವಾ ಪರಿವೃತಂ ರಾಜನ್ಭೀಮಸೇನಃ ಕಿರೀಟಿನಂ||

08059021a ಹತಾವಶೇಷಾನುತ್ಸೃಜ್ಯ ತ್ವದೀಯಾನ್ಕತಿ ಚಿದ್ರಥಾನ್|

08059021c ಜವೇನಾಭ್ಯದ್ರವದ್ರಾಜನ್ಧನಂಜಯರಥಂ ಪ್ರತಿ||

ಭರತರ್ಷಭ! ರಾಜನ್! ಗಜಾಶ್ವಸೈನಿಕರ ಮಹಾ ಅಂಗ ಸೇನೆಯಿಂದ ಪರಿವೃತನಾದ ಕಿರೀಟಿಯನ್ನು ನೋಡಿ ಭೀಮಸೇನನು ಅಳಿದುಳಿದಿದ್ದ ನಿನ್ನವರ ಕೆಲವು ರಥಗಳನ್ನು ಬಿಟ್ಟು ವೇಗದಿಂದ ಧನಂಜಯನ ರಥದ ಕಡೆ ಧಾವಿಸಿದನು.

08059022a ತತಸ್ತತ್ಪ್ರಾದ್ರವತ್ಸೈನ್ಯಂ ಹತಭೂಯಿಷ್ಠಮಾತುರಂ|

08059022c ದೃಷ್ಟ್ವಾ ಯದರ್ಜುನಂ ಭೀಮೋ ಜಗಾಮ ಭ್ರಾತರಂ ಪ್ರತಿ||

ಅರ್ಜುನನನ್ನು ಆಕ್ರಮಣಿಸಿದ್ದ ಸೇನೆಯಲ್ಲಿ ಅಳಿದುಳಿದವರು ಆತುರಗೊಂಡು ಓಡಿ ಹೋದುದನ್ನು ನೋಡಿ ಭೀಮನು ತಮ್ಮನ ಬಳಿ ಧಾವಿಸಿದನು.

08059023a ಹತಾವಶಿಷ್ಟಾಂಸ್ತುರಗಾನರ್ಜುನೇನ ಮಹಾಜವಾನ್|

08059023c ಭೀಮೋ ವ್ಯಧಮದಭ್ರಾಂತೋ ಗದಾಪಾಣಿರ್ಮಹಾಹವೇ||

ಮಹಾಹವದಲ್ಲಿ ಅರ್ಜುನನಿಂದ ಅಳಿದುಳಿದ ಕುದುರೆಗಳನ್ನು ಗದಾಪಾಣಿ ಭೀಮನು ಭ್ರಾಂತಿಗೊಳ್ಳದೇ ಸಂಹರಿಸಿದನು.

08059024a ಕಾಲರಾತ್ರಿಮಿವಾತ್ಯುಗ್ರಾಂ ನರನಾಗಾಶ್ವಭೋಜನಾಂ|

08059024c ಪ್ರಾಕಾರಾಟ್ಟಪುರದ್ವಾರದಾರಣೀಮತಿದಾರುಣಾಂ||

08059025a ತತೋ ಗದಾಂ ನೃನಾಗಾಶ್ವೇಷ್ವಾಶು ಭೀಮೋ ವ್ಯವಾಸೃಜತ್|

08059025c ಸಾ ಜಘಾನ ಬಹೂನಶ್ವಾನಶ್ವಾರೋಹಾಂಶ್ಚ ಮಾರಿಷ||

ಮಾರಿಷ! ಕಾಲರಾತ್ರಿಯಂತೆ ಉಗ್ರವಾಗಿದ್ದ, ಮನುಷ್ಯ-ಆನೆ-ಕುದುರೆಗಳೇ ಭೋಜನವಾಗಿದ್ದ, ಪ್ರಾಕಾರಗಳನ್ನೂ, ಉಪ್ಪರಿಗೆ ಮನೆಗಳನ್ನೂ, ಪುರದ್ವಾರಗಳನ್ನೂ ಭೇದಿಸಲು ಸಮರ್ಥವಾದ ದಾರುಣ ಗದೆಯನ್ನು ಭೀಮನು ಮನುಷ್ಯ-ಆನೆ-ಕುದುರೆಗಳ ಮೇಲೆ ಪ್ರಯೋಗಿಸಲು ಅದು ಅನೇಕ ಕುದುರೆಗಳನ್ನೂ ಅಶ್ವಾರೋಹಿಗಳನ್ನೂ ಸಂಹರಿಸಿತು.

08059026a ಕಾಂಸ್ಯಾಯಸತನುತ್ರಾಂಸ್ತಾನ್ನರಾನಶ್ವಾಂಶ್ಚ ಪಾಂಡವಃ|

08059026c ಪೋಥಯಾಮಾಸ ಗದಯಾ ಸಶಬ್ದಂ ತೇಽಪತನ್ ಹತಾಃ||

ಪಾಂಡವ ಭೀಮಸೇನನು ಕಬ್ಬಿಣದಿಂದ ಮಾಡಲ್ಪಟ್ಟ ಕವಚಗಳಿದ್ದ ಪದಾತಿಗಳನ್ನೂ ಮತ್ತು ಕುದುರೆಗಳನ್ನೂ ಗದೆಯಿಂದ ಸದೆಬಡಿಯಲು ಅವುಗಳು ಆರ್ತನಾದಗೈಯುತ್ತಾ ಹತಗೊಂಡು ಕೆಳಕ್ಕುರುಳಿದವು.

08059027a ಹತ್ವಾ ತು ತದ್ಗಜಾನೀಕಂ ಭೀಮಸೇನೋ ಮಹಾಬಲಃ|

08059027c ಪುನಃ ಸ್ವರಥಮಾಸ್ಥಾಯ ಪೃಷ್ಠತೋಽರ್ಜುನಮನ್ವಗಾತ್||

ಆ ಗಜಸೇನೆಯನ್ನು ಸಂಹರಿಸಿ ಮಹಾಬಲ ಭೀಮಸೇನನು ಪುನಃ ತನ್ನ ರಥದಲ್ಲಿ ಕುಳಿತು ಅರ್ಜುನನ ಹಿಂದೆ ಹೋದನು.

08059028a ಹತಂ ಪರಾಙ್ಮುಖಪ್ರಾಯಂ ನಿರುತ್ಸಾಹಂ ಪರಂ ಬಲಂ|

08059028c ವ್ಯಾಲಂಬತ ಮಹಾರಾಜ ಪ್ರಾಯಶಃ ಶಸ್ತ್ರವೇಷ್ಟಿತಂ||

ಮಹಾರಾಜ! ಶಸ್ತ್ರಗಳಿಂದ ಪ್ರಹರಿಸಲ್ಪಟ್ಟ ನಿನ್ನ ಸೇನೆಯು ಪ್ರಾಯಶಃ ನಿರುತ್ಸಾಹಗೊಂಡು ಜಡವಾಗಿ ಪರಾಙ್ಮುಖವಾಗುತ್ತಿತ್ತು.

08059029a ವಿಲಂಬಮಾನಂ ತತ್ಸೈನ್ಯಮಪ್ರಗಲ್ಭಮವಸ್ಥಿತಂ|

08059029c ದೃಷ್ಟ್ವಾ ಪ್ರಾಚ್ಛಾದಯದ್ಬಾಣೈರರ್ಜುನಃ ಪ್ರಾಣತಾಪನೈಃ||

ಜಡವಾಗಿ ಉದ್ಯೋಗಶೂನ್ಯವಾಗಿದ್ದ ಆ ಸೇನೆಯನ್ನು ನೋಡಿ ಅರ್ಜುನನು ಪ್ರಾಣಗಳನ್ನು ಸುಡುವ ಬಾಣಗಳಿಂದ ಮುಚ್ಚಿಬಿಟ್ಟನು.

08059030a ತತಃ ಕುರೂಣಾಮಭವದಾರ್ತನಾದೋ ಮಹಾಮೃಧೇ|

08059030c ರಥಾಶ್ವನಾಗಾಸುಹರೈರ್ವಧ್ಯತಾಮರ್ಜುನೇಷುಭಿಃ||

ಆಗ ಮಹಾರಣದಲ್ಲಿ ಅರ್ಜುನನ ಬಾಣಗಳಿಂದ ವಧಿಸಲ್ಪಡುತ್ತಿದ್ದ ಕುರುಗಳ ರಥ-ಕುದುರೆ-ಆನೆಗಳಲ್ಲಿ ಆರ್ತನಾದವುಂಟಾಯಿತು. 

08059031a ಹಾಹಾಕೃತಂ ಭೃಶಂ ತಸ್ಥೌ ಲೀಯಮಾನಂ ಪರಸ್ಪರಂ|

08059031c ಅಲಾತಚಕ್ರವತ್ಸೈನ್ಯಂ ತದಾಭ್ರಮತ ತಾವಕಂ||

ತುಂಬಾ ಹಾಹಾಕಾರ ಮಾಡುತ್ತಾ ಪರಸ್ಪರರನ್ನು ಆಲಂಗಿಸಿಕೊಂಡು ನಿನ್ನ ಆ ಸೇನೆಯು ನಿಂತಿತ್ತು ಮತ್ತು ಚಕ್ರದಂತೆ ಸುತ್ತಲೂ ತಿರುಗುತ್ತಿತ್ತು.

08059032a ಆದೀಪ್ತಂ ತವ ತತ್ಸೈನ್ಯಂ ಶರೈಶ್ಚಿನ್ನತನುಚ್ಚದಂ|

08059032c ಆಸೀತ್ಸ್ವಶೋಣಿತಕ್ಲಿನ್ನಂ ಫುಲ್ಲಾಶೋಕವನಂ ಯಥಾ||

ಬಾಣಗಳಿಂದ ಛಿನ್ನವಾದ ಕವಚಗಳಿಂದ ನಿನ್ನ ಆ ಸೇನೆಯು ಹತ್ತಿಕೊಂಡು ಉರಿಯುತ್ತಿರುವಂತೆ ಮತ್ತು ತಮ್ಮದೇ ರಕ್ತದಿಂದ ತೋಯ್ದು ಹೋಗಿ ಹೂಬಿಟ್ಟ ಅಶೋಕ ವನದಂತೆ ಕಾಣುತ್ತಿತ್ತು.

08059033a ತದ್ದೃಷ್ಟ್ವಾ ಕುರವಸ್ತತ್ರ ವಿಕ್ರಾಂತಂ ಸವ್ಯಸಾಚಿನಃ|

08059033c ನಿರಾಶಾಃ ಸಮಪದ್ಯಂತ ಸರ್ವೇ ಕರ್ಣಸ್ಯ ಜೀವಿತೇ||

ಅಲ್ಲಿ ಸವ್ಯಸಾಚಿಯ ಆ ವಿಕ್ರಮವನ್ನು ನೋಡಿ ಕುರುಗಳು ಎಲ್ಲರೂ ಕರ್ಣನು ಜೀವಿಸಿರುವ ವಿಷಯದಲ್ಲಿ ನಿರಾಶೆಗೊಂಡರು.

08059034a ಅವಿಷಹ್ಯಂ ತು ಪಾರ್ಥಸ್ಯ ಶರಸಂಪಾತಮಾಹವೇ|

08059034c ಮತ್ವಾ ನ್ಯವರ್ತನ್ಕುರವೋ ಜಿತಾ ಗಾಂಡೀವಧನ್ವನಾ||

ಪಾರ್ಥನ ಶರಸಂಘಾತವನ್ನು ಸಹಿಸಲಸಾಧ್ಯವೆಂದು ತಿಳಿದು ಗಾಂಡೀವಧನ್ವಿಯಿಂದ ಪರಾಜಿತರಾದ ಕುರುಗಳು ಹಿಮ್ಮೆಟ್ಟಿದರು.

08059035a ತೇ ಹಿತ್ವಾ ಸಮರೇ ಪಾರ್ಥಂ ವಧ್ಯಮಾನಾಶ್ಚ ಸಾಯಕೈಃ|

08059035c ಪ್ರದುದ್ರುವುರ್ದಿಶೋ ಭೀತಾಶ್ಚುಕ್ರುಶುಶ್ಚಾಪಿ ಸೂತಜಂ||

ಅವರು ಸಾಯಕಗಳಿಂದ ವಧಿಸುತ್ತಿದ್ದ ಪಾರ್ಥನನ್ನು ಸಮರದಲ್ಲಿ ಬಿಟ್ಟು ಭೀತರಾಗಿ ಸೂತಜನನ್ನು ಕೂಗಿ ಕರೆಯುತ್ತಾ ದಿಕ್ಕಾಪಾಲಾಗಿ ಓಡಿ ಹೋದರು.

08059036a ಅಭ್ಯದ್ರವತ ತಾನ್ಪಾರ್ಥಃ ಕಿರಂ ಶರಶತಾನ್ಬಹೂನ್|

08059036c ಹರ್ಷಯನ್ಪಾಂಡವಾನ್ಯೋಧಾನ್ಭೀಮಸೇನಪುರೋಗಮಾನ್||

ಪಾರ್ಥನು ಅನೇಕ ನೂರು ಬಾಣಗಳನ್ನು ಎರಚುತ್ತಾ ಅವರನ್ನು ಆಕ್ರಮಣಿಸಿ ಭೀಮಸೇನನೇ ಮೊದಲಾದ ಪಾಂಡವ ಯೋಧರನ್ನು ಹರ್ಷಗೊಳಿಸಿದನು.

08059037a ಪುತ್ರಾಸ್ತು ತೇ ಮಹಾರಾಜ ಜಗ್ಮುಃ ಕರ್ಣರಥಂ ಪ್ರತಿ|

08059037c ಅಗಾಧೇ ಮಜ್ಜತಾಂ ತೇಷಾಂ ದ್ವೀಪಃ ಕರ್ಣೋಽಭವತ್ತದಾ||

ಮಹಾರಾಜ! ನಿನ್ನ ಪುತ್ರರಾದರೋ ಕರ್ಣನ ರಥದ ಕಡೆ ಹೋದರು. ಅಗಾಧ ಸಾಗರದಲ್ಲಿ ಮುಳುಗುತ್ತಿದ್ದ ಅವರಿಗೆ ಕರ್ಣನು ದ್ವೀಪಪ್ರಾಯನಾಗಿದ್ದನು.

08059038a ಕುರವೋ ಹಿ ಮಹಾರಾಜ ನಿರ್ವಿಷಾಃ ಪನ್ನಗಾ ಇವ|

08059038c ಕರ್ಣಮೇವೋಪಲೀಯಂತ ಭಯಾದ್ಗಾಂಡೀವಧನ್ವನಃ||

ಮಹಾರಾಜ! ಗಾಂಡಿವಧನ್ವಿಯ ಭಯದಿಂದ ವಿಷರಹಿತ ಸರ್ಪಗಳಂತೆ ಕುರುಗಳು ಕರ್ಣನನ್ನೇ ಆಶ್ರಯಿಸಿ ನಿಂತಿದ್ದರು.

08059039a ಯಥಾ ಸರ್ವಾಣಿ ಭೂತಾನಿ ಮೃತ್ಯೋರ್ಭೀತಾನಿ ಭಾರತ|

08059039c ಧರ್ಮಮೇವೋಪಲೀಯಂತೇ ಕರ್ಮವಂತಿ ಹಿ ಯಾನಿ ಚ||

08059040a ತಥಾ ಕರ್ಣಂ ಮಹೇಷ್ವಾಸಂ ಪುತ್ರಾಸ್ತವ ನರಾಧಿಪ|

08059040c ಉಪಾಲೀಯಂತ ಸಂತ್ರಾಸಾತ್ಪಾಂಡವಸ್ಯ ಮಹಾತ್ಮನಃ||

ಭಾರತ! ನರಾಧಿಪ! ಸರ್ವಭೂತಗಳೂ ಮೃತ್ಯುವಿನ ಭಯದಿಂದ ಧರ್ಮವನ್ನೇ ಅವಲಂಬಿಸಿ ಕರ್ಮಗಳನ್ನು ಮಾಡುವಂತೆ ನಿನ್ನ ಪುತ್ರರು ಮಹಾತ್ಮ ಪಾಂಡವನಿಗೆ ಹೆದರಿ ಮಹೇಷ್ವಾಸ ಕರ್ಣನನ್ನೇ ಅವಲಂಬಿಸಿದ್ದರು.

08059041a ತಾಂ ಶೋಣಿತಪರಿಕ್ಲಿನ್ನಾನ್ವಿಷಮಸ್ಥಾಂ ಶರಾತುರಾನ್|

08059041c ಮಾ ಭೈಷ್ಟೇತ್ಯಬ್ರವೀತ್ಕರ್ಣೋ ಹ್ಯಭಿತೋ ಮಾಮಿತೇತಿ ಚ||

ರಕ್ತದಿಂದ ತೋಯ್ದುಹೋಗಿದ್ದ ಶರಗಳ ಭಯದಿಂದ ನಡುಗುತ್ತಿದ್ದ ಅವರನ್ನು ಕರ್ಣನು “ಹೆದರಬೇಡಿರಿ! ನನ್ನ ಬಳಿ ಬನ್ನಿ!” ಎಂದು ಕೂಗಿ ಕರೆಯುತ್ತಿದ್ದನು.

08059042a ಸಂಭಗ್ನಂ ಹಿ ಬಲಂ ದೃಷ್ಟ್ವಾ ಬಲಾತ್ಪಾರ್ಥೇನ ತಾವಕಂ|

08059042c ಧನುರ್ವಿಸ್ಫಾರಯನ್ಕರ್ಣಸ್ತಸ್ಥೌ ಶತ್ರುಜಿಘಾಂಸಯಾ|

08059042e ಪಾಂಚಾಲಾನ್ಪುನರಾಧಾವತ್ಪಶ್ಯತಃ ಸವ್ಯಸಾಚಿನಃ||

ಪಾರ್ಥನಿಂದ ನಿನ್ನ ಸೇನೆಯು ಭಗ್ನವಾದುದನ್ನು ನೋಡಿ ಕರ್ಣನು ಶತ್ರುಗಳನ್ನು ಸಂಹರಿಸಲು ಬಯಸಿ ಧನುಸ್ಸನ್ನು ಟೇಂಕರಿಸಿ ಸವ್ಯಸಾಚಿಯು ನೋಡುತ್ತಿದ್ದಂತೆಯೇ ಪುನಃ ಪಾಂಚಾಲರನ್ನು ಆಕ್ರಮಣಿಸಿದನು.

08059043a ತತಃ ಕ್ಷಣೇನ ಕ್ಷಿತಿಪಾಃ ಕ್ಷತಜಪ್ರತಿಮೇಕ್ಷಣಾಃ|

08059043c ಕರ್ಣಂ ವವರ್ಷುರ್ಬಾಣೌಘೈರ್ಯಥಾ ಮೇಘಾ ಮಹೀಧರಂ||

ಆಗ ಕ್ಷಣದಲ್ಲಿಯೇ ಗಾಯಗೊಂಡ ಪಾಂಚಾಲ ರಾಜರು ಮೇಘಗಳು ಪರ್ವತದ ಮೇಲೆ ಹೇಗೋ ಹಾಗೆ ಕರ್ಣನ ಮೇಲೆ ಬಾಣಗಳನ್ನು ಸುರಿಸಿದರು.

08059044a ತತಃ ಶರಸಹಸ್ರಾಣಿ ಕರ್ಣಮುಕ್ತಾನಿ ಮಾರಿಷ|

08059044c ವ್ಯಯೋಜಯಂತ ಪಾಂಚಾಲಾನ್ಪ್ರಾಣೈಃ ಪ್ರಾಣಭೃತಾಂ ವರ||

ಮಾರಿಷ! ಪ್ರಾಣಭೃತರಲ್ಲಿ ಶ್ರೇಷ್ಠ! ಆಗ ಕರ್ಣನಿಂದ ಹೊರಟ ಸಹಸ್ರಾರು ಬಾಣಗಳು ಪಾಂಚಾಲರಿಂದ ಪ್ರಾಣಗಳನ್ನು ಪ್ರತ್ಯೇಕಿಸಿದವು.

08059045a ತತೋ ರಣೋ ಮಹಾನಾಸೀತ್ಪಾಂಚಾಲಾನಾಂ ವಿಶಾಂ ಪತೇ|

08059045c ವಧ್ಯತಾಂ ಸೂತಪುತ್ರೇಣ ಮಿತ್ರಾರ್ಥೇಽಮಿತ್ರಘಾತಿನಾಂ||

ವಿಶಾಂಪತೇ! ಆಗ ಮಿತ್ರನಿಗಾಗಿ ಶತ್ರುಘಾತಿ ಪಾಂಚಾಲರನ್ನು ವಧಿಸುತ್ತಿದ್ದ ಸೂತಪುತ್ರನಿಂದಾಗಿ ರಣದಲ್ಲಿ ಮಹಾ ಹಾಹಾಕಾರವುಂಟಾಯಿತು.”

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ಏಕೋನಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ಐವತ್ತೊಂಭತ್ತನೇ ಅಧ್ಯಾಯವು.

Related image

Comments are closed.