Karna Parva: Chapter 3

ಕರ್ಣ ಪರ್ವ

ಕರ್ಣನ ಮರಣ ವಾರ್ತೆಯನ್ನು ತಿಳಿದ ಧೃತರಾಷ್ಟ್ರನು ಮೂರ್ಛೆಹೊಂದಿದುದು; ಸಂಜಯ-ವಿದುರರು ಅವನನ್ನು ಪುನಃ ಚೇತರಿಸಿದುದು (೧-೧೦). ಧೃತರಾಷ್ಟ್ರನು ಸಂಜಯನನ್ನು ಪುನಃ ಪ್ರಶ್ನಿಸಿದುದು (೧೧-೧೪).

08003001 ವೈಶಂಪಾಯನ ಉವಾಚ|

08003001a ಏತಚ್ಚ್ರುತ್ವಾ ಮಹಾರಾಜ ಧೃತರಾಷ್ಟ್ರೋಽಮ್ಬಿಕಾಸುತಃ|

08003001c ಶೋಕಸ್ಯಾಂತಮಪಶ್ಯನ್ವೈ ಹತಂ ಮತ್ವಾ ಸುಯೋಧನಂ|

08003001e ವಿಹ್ವಲಃ ಪತಿತೋ ಭೂಮೌ ನಷ್ಟಚೇತಾ ಇವ ದ್ವಿಪಃ||

ವೈಶಂಪಾಯನನು ಹೇಳಿದನು: “ಮಹಾರಾಜ! ಇದನ್ನು ಕೇಳಿ ಅಂಬಿಕಾಸುತ ಧೃತರಾಷ್ಟ್ರನು ಶೋಕದ ಅಂತ್ಯವೇನೆನ್ನುವುದನ್ನೇ ಕಾಣದಾಗಿ, ಸುಯೋಧನನೇ ಹತನಾದನೆಂದು ತಿಳಿದು ವಿಹ್ವಲನಾಗಿ ಮೂರ್ಛೆಗೊಂಡ ಆನೆಯಂತೆ ನೆಲದ ಮೇಲೆ ಬಿದ್ದನು.

08003002a ತಸ್ಮಿನ್ನಿಪತಿತೇ ಭೂಮೌ ವಿಹ್ವಲೇ ರಾಜಸತ್ತಮೇ|

08003002c ಆರ್ತನಾದೋ ಮಹಾನಾಸೀತ್ ಸ್ತ್ರೀಣಾಂ ಭರತಸತ್ತಮ||

ಭರತಸತ್ತಮ! ವಿಹ್ವಲ ರಾಜಸತ್ತಮನು ಹಾಗೆ ನೆಲದ ಮೇಲೆ ಬೀಳಲು ಸ್ತ್ರೀಯರ ಮಹಾ ಆರ್ತನಾದವುಂಟಾಯಿತು.

08003003a ಸ ಶಬ್ದಃ ಪೃಥಿವೀಂ ಸರ್ವಾಂ ಪೂರಯಾಮಾಸ ಸರ್ವಶಃ|

08003003c ಶೋಕಾರ್ಣವೇ ಮಹಾಘೋರೇ ನಿಮಗ್ನಾ ಭರತಸ್ತ್ರಿಯಃ||

ಮಹಾಘೋರ ಶೋಕಾರ್ಣವದಲ್ಲಿ ಮುಳುಗುತ್ತಿದ್ದ ಆ ಭರತಸ್ತ್ರೀಯರ ಕೂಗು ಭೂಮಿಯ ಎಲ್ಲದಿಕ್ಕುಗಳನ್ನೂ ತುಂಬಿತು.

08003004a ರಾಜಾನಂ ಚ ಸಮಾಸಾದ್ಯ ಗಾಂದಾರೀ ಭರತರ್ಷಭ|

08003004c ನಿಃಸಂಜ್ಞಾ ಪತಿತಾ ಭೂಮೌ ಸರ್ವಾಣ್ಯಂತಃಪುರಾಣಿ ಚ||

ಭರತರ್ಷಭ! ರಾಜನ ಬಳಿಬಂದ ಗಾಂಧಾರಿಯೂ ಮತ್ತು ಅಂತಃಪುರದ ಸರ್ವ ಸ್ತ್ರೀಯರೂ ಮೂರ್ಛೆತಪ್ಪಿ ಭೂಮಿಯ ಮೇಲೆ ಬಿದ್ದರು.

08003005a ತತಸ್ತಾಃ ಸಂಜಯೋ ರಾಜನ್ಸಮಾಶ್ವಾಸಯದಾತುರಾಃ|

08003005c ಮುಹ್ಯಮಾನಾಃ ಸುಬಹುಶೋ ಮುಂಚಂತ್ಯೋ ಮುಹುರ್ಮುಹುಃ||

ರಾಜನ್! ಬಹಳವಾಗಿ ರೋದಿಸುತ್ತಾ ಪುನಃ ಪುನಃ ಮೂರ್ಛೆಹೋಗುತ್ತಿದ್ದ ಅವರನ್ನು ಸಂಜಯನು ಅನೇಕರೀತಿಯಲ್ಲಿ ಸಮಾಧಾನಗೊಳಿಸಲು ಪ್ರಯತ್ನಿಸಿದನು.

08003006c ಕದಲ್ಯ ಇವ ವಾತೇನ ಧೂಯಮಾನಾಃ ಸವಾರಿ ನೇತ್ರಜಂ|

08003006a ಸಮಾಶ್ವಸ್ತಾಃ ಸ್ತ್ರಿಯಸ್ತಾಸ್ತು ವೇಪಮಾನಾ ಮುಂತತಃ||

ಸಮಾಧಾನಗೊಳಿಸಲ್ಪಡುತ್ತಿದ್ದರೂ ಕಣ್ಣೀರು ತುಂಬಿದ ಆ ಸ್ತ್ರೀಯರು ಭಿರುಗಾಳಿಗೆ ಸಿಲುಕಿದ ಬಾಳೆಯ ಗಿಡಗಳಂತೆ ನಡುಗಿ ತೂರಾಡುತ್ತಿದ್ದರು.

08003007a ರಾಜಾನಂ ವಿದುರಶ್ಚಾಪಿ ಪ್ರಜ್ಞಾಚಕ್ಷುಷಮೀಶ್ವರಂ|

08003007c ಆಶ್ವಾಸಯಾಮಾಸ ತದಾ ಸಿಂಚಂಸ್ತೋಯೇನ ಕೌರವಂ||

ವಿದುರನೂ ಕೂಡ ನೀರನ್ನು ಸಿಂಪಡಿಸಿ ಪ್ರಜ್ಞಾಚಕ್ಷು ಈಶ್ವರ ರಾಜ ಕೌರವನನ್ನು ಸಮಾಧಾನಗೊಳಿಸತೊಡಗಿದನು.

08003008a ಸ ಲಬ್ಧ್ವಾ ಶನಕೈಃ ಸಂಜ್ಞಾಂ ತಾಶ್ಚ ದೃಷ್ಟ್ವಾ ಸ್ತ್ರಿಯೋ ನೃಪ|

08003008c ಉನ್ಮತ್ತ ಇವ ರಾಜಾ ಸ ಸ್ಥಿತಸ್ತೂಷ್ಣೀಂ ವಿಶಾಂ ಪತೇ||

ವಿಶಾಂಪತೇ! ಮೆಲ್ಲನೆ ಎಚ್ಚೆತ್ತು ಸ್ತ್ರೀಯರನ್ನು ಕೂಡ ಕಂಡ ರಾಜಾ ನೃಪನು ಉನ್ಮತ್ತನಾದವನಂತೆ ಸುಮ್ಮನಾಗಿಯೇ ಕುಳಿತಿದ್ದನು.

08003009a ತತೋ ಧ್ಯಾತ್ವಾ ಚಿರಂ ಕಾಲಂ ನಿಃಶ್ವಸಂಶ್ಚ ಪುನಃ ಪುನಃ|

08003009c ಸ್ವಾನ್ಪುತ್ರಾನ್ಗರ್ಹಯಾಮಾಸ ಬಹು ಮೇನೇ ಚ ಪಾಂಡವಾನ್||

ಅನಂತರ ತುಂಬಾ ಹೊತ್ತು ಯೋಚಿಸಿ ಪುನಃ ಪುನಃ ನಿಟ್ಟುಸಿರು ಬಿಡುತ್ತಾ ಅವನು ತನ್ನ ಮಕ್ಕಳನ್ನು ಬಹಳವಾಗಿ ನಿಂದಿಸಿದನು ಮತ್ತು ಪಾಂಡವರನ್ನು ಪ್ರಶಂಸಿಸಿದನು.

08003010a ಗರ್ಹಯಿತ್ವಾತ್ಮನೋ ಬುದ್ಧಿಂ ಶಕುನೇಃ ಸೌಬಲಸ್ಯ ಚ|

08003010c ಧ್ಯಾತ್ವಾ ಚ ಸುಚಿರಂ ಕಾಲಂ ವೇಪಮಾನೋ ಮುಹುರ್ಮುಹುಃ||

ತನ್ನ ಮತ್ತು ಶಕುನಿ ಸೌಬಲನ ಬುದ್ಧಿಗಳನ್ನು ನಿಂದಿಸುತ್ತಿದ್ದನು. ತುಂಬಾಹೊತ್ತು ಯೋಚಿಸುತ್ತಿದ್ದು ಪುನಃ ಪುನಃ ನಡುಗುತ್ತಿದ್ದನು.

08003011a ಸಂಸ್ತಭ್ಯ ಚ ಮನೋ ಭೂಯೋ ರಾಜಾ ಧೈರ್ಯಸಮನ್ವಿತಃ|

08003011c ಪುನರ್ಗಾವಲ್ಗಣಿಂ ಸೂತಂ ಪರ್ಯಪೃಚ್ಚತ ಸಂಜಯಂ||

ಪುನಃ ಧೈರ್ಯವನ್ನು ತಂದುಕೊಂಡು ಮನಸ್ಸನ್ನು ಸ್ಥಿರವಾಗಿರಿಸಿಕೊಂಡು ಮತ್ತೆ ಗಾವಲ್ಗಣಿ ಸೂತ ಸಂಜಯನನ್ನು ಪ್ರಶ್ನಿಸಿದನು:

08003012a ಯತ್ತ್ವಯಾ ಕಥಿತಂ ವಾಕ್ಯಂ ಶ್ರುತಂ ಸಂಜಯ ತನ್ಮಯಾ|

08003012c ಕಚ್ಚಿದ್ದುರ್ಯೋಧನಃ ಸೂತ ನ ಗತೋ ವೈ ಯಮಕ್ಷಯಂ|

08003012e ಬ್ರೂಹಿ ಸಂಜಯ ತತ್ತ್ವೇನ ಪುನರುಕ್ತಾಂ ಕಥಾಮಿಮಾಂ||

“ಸಂಜಯ! ನೀನು ಹೇಳಿದ ಮಾತುಗಳನ್ನು ನಾನು ಕೇಳಿಸಿಕೊಂಡೆನು. ಸೂತ! ದುರ್ಯೋಧನನು ಯಮಕ್ಷಯಕ್ಕೆ ಹೋಗಲಿಲ್ಲ ತಾನೇ? ಸಂಜಯ! ನೀನೀಗ ಹೇಳಿದ ವಿಷಯವನ್ನೇ ಪುನಃ ಯಥಾವತ್ತಾಗಿ ಹೇಳು!”

08003013a ಏವಮುಕ್ತೋಽಬ್ರವೀತ್ಸೂತೋ ರಾಜಾನಂ ಜನಮೇಜಯ|

08003013c ಹತೋ ವೈಕರ್ತನೋ ರಾಜನ್ಸಹ ಪುತ್ರೈರ್ಮಹಾರಥೈಃ|

08003013e ಭ್ರಾತೃಭಿಶ್ಚ ಮಹೇಷ್ವಾಸೈಃ ಸೂತಪುತ್ರೈಸ್ತನುತ್ಯಜೈಃ||

ಜನಮೇಜಯ! ಇದನ್ನು ಕೇಳಿದ ಸೂತನು ರಾಜನಿಗೆ ಹೇಳಿದನು: “ರಾಜನ್! ಮಹಾರಥ ಮಕ್ಕಳೊಂದಿಗೆ, ಮಹೇಷ್ವಾಸ ಸಹೋದರರೊಂದಿಗೆ ಸೂತಪುತ್ರ ವೈಕರ್ತನನು ಹತನಾಗಿ ದೇಹವನ್ನು ತ್ಯಜಿಸಿದನು.

08003014a ದುಃಶಾಸನಶ್ಚ ನಿಹತಃ ಪಾಂಡವೇನ ಯಶಸ್ವಿನಾ|

08003014c ಪೀತಂ ಚ ರುಧಿರಂ ಕೋಪಾದ್ಭೀಮಸೇನೇನ ಸಂಯುಗೇ||

ಯಶೋವಂತ ಪಾಂಡವ ಭೀಮಸೇನನು ಸಂಯುಗದಲ್ಲಿ ದುಃಶಾಸನನನ್ನೂ ಸಂಹರಿಸಿ ಕೋಪದಿಂದ ಅವನ ರಕ್ತವನ್ನೂ ಕುಡಿದನು.””

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಧೃತರಾಷ್ಟ್ರಶೋಕೇ ತೃತೀಯೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಧೃತರಾಷ್ಟ್ರಶೋಕ ಎನ್ನುವ ಮೂರನೇ ಅಧ್ಯಾಯವು.

Comments are closed.