Karna Parva: Chapter 38

ಕರ್ಣ ಪರ್ವ

೩೮

ಕೃಪ-ಶಿಖಂಡಿಯರ ನಡುವೆ ಯುದ್ಧ (೧-೨೦). ಕೃಪನಿಂದ ಚಿತ್ರಕೇತುವಿನ ಮಗ ಸುಕೇತುವಿನ ವಧೆ (೨೧-೩೦). ಧೃಷ್ಟದ್ಯುಮ್ನ-ಕೃತವರ್ಮರ ಯುದ್ಧ; ಕೃತವರ್ಮನ ಪರಾಜಯ (೩೧-೪೨).

08038001 ಸಂಜಯ ಉವಾಚ|

08038001a ಕೃತವರ್ಮಾ ಕೃಪೋ ದ್ರೌಣಿಃ ಸೂತಪುತ್ರಶ್ಚ ಮಾರಿಷ|

08038001c ಉಲೂಕಃ ಸೌಬಲಶ್ಚೈವ ರಾಜಾ ಚ ಸಹ ಸೋದರೈಃ||

08038002a ಸೀದಮಾನಾಂ ಚಮೂಂ ದೃಷ್ಟ್ವಾ ಪಾಂಡುಪುತ್ರಭಯಾರ್ದಿತಾಂ|

08038002c ಸಮುಜ್ಜಿಹೀರ್ಷುರ್ವೇಗೇನ ಭಿನ್ನಾಂ ನಾವಮಿವಾರ್ಣವೇ||

ಸಂಜಯನು ಹೇಳಿದನು: “ಮಾರಿಷ! ಸಮುದ್ರದಲ್ಲಿ ಒಡೆದುಹೋದ ನೌಕೆಯಂತೆ ನಮ್ಮ ಸೈನ್ಯವು ಪಾಂಡುಪುತ್ರರ ಭಯದಿಂದ ಪೀಡಿತರಾಗಿ ನಾಶಗೊಳ್ಳುತ್ತಿರುವುದನ್ನು ನೋಡಿ ಕೃತವರ್ಮ, ಕೃಪ, ದ್ರೌಣಿ, ಸೂತಪುತ್ರ, ಉಲೂಕ, ಸೌಬಲ, ಸಹೋದರರೊಡನೆ ರಾಜಾ ದುರ್ಯೋಧನರು ಶೀಘ್ರವಾಗಿ ಮುಂದೆ ಹೋಗಿ ನಮ್ಮ ಸೈನ್ಯವನ್ನು ಉದ್ಧರಿಸಲು ಪ್ರಯತ್ನಿಸಿದರು.

08038003a ತತೋ ಯುದ್ಧಮತೀವಾಸೀನ್ಮುಹೂರ್ತಮಿವ ಭಾರತ|

08038003c ಭೀರೂಣಾಂ ತ್ರಾಸಜನನಂ ಶೂರಾಣಾಂ ಹರ್ಷವರ್ಧನಂ||

ಭಾರತ! ಆಗ ಮುಹೂರ್ತಕಾಲ ಹೇಡಿಗಳಿಗೆ ಭಯವನ್ನುಂಟುಮಾಡುವ ಮತ್ತು ಶೂರರ ಹರ್ಷವನ್ನು ಹೆಚ್ಚಿಸುವ ಅತೀವ ಯುದ್ಧವು ನಡೆಯಿತು.

08038004a ಕೃಪೇಣ ಶರವರ್ಷಾಣಿ ವಿಪ್ರಮುಕ್ತಾನಿ ಸಂಯುಗೇ|

08038004c ಸೃಂಜಯಾಃ ಶಾತಯಾಮಾಸುಃ ಶಲಭಾನಾಂ ವ್ರಜಾ ಇವ||

ಸಂಯುಗದಲ್ಲಿ ಕೃಪನು ಪ್ರಯೋಗಿಸಿದ ಶರವರ್ಷಗಳು ಮಿಡತೆಗಳ ಗುಂಪುಗಳೋಪಾದಿಯಲ್ಲಿ ಸೃಂಜಯರನ್ನು ಸಂಪೂರ್ಣವಾಗಿ ಮುಚ್ಚಿಬಿಟ್ಟಿತು.

08038005a ಶಿಖಂಡೀ ತು ತತಃ ಕ್ರುದ್ಧೋ ಗೌತಮಂ ತ್ವರಿತೋ ಯಯೌ|

08038005c ವವರ್ಷ ಶರವರ್ಷಾಣಿ ಸಮಂತಾದೇವ ಬ್ರಾಹ್ಮಣೇ||

ಆಗ ಕ್ರುದ್ಧ ಶಿಖಂಡಿಯು ತ್ವರೆಮಾಡಿ ಬಂದು ಬ್ರಾಹ್ಮಣ ಕೃಪನ ಸುತ್ತಲೂ ಶರವರ್ಷಗಳನ್ನು ಸುರಿಸಿದನು.

08038006a ಕೃಪಸ್ತು ಶರವರ್ಷಂ ತದ್ವಿನಿಹತ್ಯ ಮಹಾಸ್ತ್ರವಿತ್|

08038006c ಶಿಖಂಡಿನಂ ರಣೇ ಕ್ರುದ್ಧೋ ವಿವ್ಯಾಧ ದಶಭಿಃ ಶರೈಃ||

ಮಹಾಸ್ತ್ರವಿದು ಕೃಪನು ಆ ಶರವರ್ಷವನ್ನು ನಿರಸನಗೊಳಿಸಿ ಕ್ರುದ್ಧನಾಗಿ ಹತ್ತು ಶರಗಳಿಂದ ಶಿಖಂಡಿಯನ್ನು ಪ್ರಹರಿಸಿದನು.

08038007a ತತಃ ಶಿಖಂಡೀ ಕುಪೀತಃ ಶರೈಃ ಸಪ್ತಭಿರಾಹವೇ|

08038007c ಕೃಪಂ ವಿವ್ಯಾಧ ಸುಭೃಶಂ ಕಂಕಪತ್ರೈರಜಿಹ್ಮಗೈಃ||

ಆಗ ಕುಪಿತ ಶಿಖಂಡಿಯು ಯುದ್ಧದಲ್ಲಿ ಕಂಕಪತ್ರಗಳಿದ್ದ ಏಳು ಜಿಹ್ಮಗ ಶರಗಳಿಂದ ಕೃಪನನ್ನು ಹೊಡೆದನು.

08038008a ತತಃ ಕೃಪಃ ಶರೈಸ್ತೀಕ್ಷ್ಣೈಃ ಸೋಽತಿವಿದ್ಧೋ ಮಹಾರಥಃ|

08038008c ವ್ಯಶ್ವಸೂತರಥಂ ಚಕ್ರೇ ಪಾರ್ಷತಂ ತು ದ್ವಿಜೋತ್ತಮಃ||

ಆಗ ತೀಕ್ಷ್ಣ ಶರಗಳಿಂದ ಅತಿಯಾಗಿ ಗಾಯಗೊಂಡ ಮಹಾರಥ ದ್ವಿಜೋತ್ತಮ ಕೃಪನು ಪಾರ್ಷತ ಶಿಖಂಡಿಯನ್ನು ಅಶ್ವ-ಸೂತ-ರಥಗಳಿಂದ ವಿಹೀನನ್ನಾಗಿ ಮಾಡಿದನು.

08038009a ಹತಾಶ್ವಾತ್ತು ತತೋ ಯಾನಾದವಪ್ಲುತ್ಯ ಮಹಾರಥಃ|

08038009c ಚರ್ಮಖಡ್ಗೇ ಚ ಸಂಗೃಹ್ಯ ಸತ್ವರಂ ಬ್ರಾಹ್ಮಣಂ ಯಯೌ||

ಕುದುರೆಗಳು ವಧಿಸಲ್ಪಡಲು ಮಹಾರಥ ಶಿಖಂಡಿಯು ರಥದಿಂದ ಕೆಳಕ್ಕೆ ಧುಮುಕಿ ಬಲವತ್ತಾದ ಖಡ್ಗ ಗುರಾಣಿಗಳನ್ನು ಹಿಡಿದು ಬ್ರಾಹ್ಮಣ ಕೃಪನ ಬಳಿ ನುಗ್ಗಿದನು.

08038010a ತಮಾಪತಂತಂ ಸಹಸಾ ಶರೈಃ ಸನ್ನತಪರ್ವಭಿಃ|

08038010c ಚಾದಯಾಮಾಸ ಸಮರೇ ತದದ್ಭುತಮಿವಾಭವತ್||

ಸಮರದಲ್ಲಿ ಹಾಗೆ ನುಗ್ಗಿಬರುತ್ತಿದ್ದ ಶಿಖಂಡಿಯನ್ನು ಕೂಡಲೇ ಕೃಪನು ಸನ್ನತಪರ್ವ ಶರಗಳಿಂದ ಮುಚ್ಚಿಬಿಟ್ಟನು. ಅದೊಂದು ಅದ್ಭುತವಾಗಿತ್ತು.

08038011a ತತ್ರಾದ್ಭುತಮಪಶ್ಯಾಮ ಶಿಲಾನಾಂ ಪ್ಲವನಂ ಯಥಾ|

08038011c ನಿಶ್ಚೇಷ್ಟೋ ಯದ್ರಣೇ ರಾಜಂ ಶಿಖಂಡೀ ಸಮತಿಷ್ಠತ||

ರಾಜನ್! ಆಗ ರಣದಲ್ಲಿ ಶಿಖಂಡಿಯು ನಿಶ್ಚೇಷ್ಟನಾಗಿ ನಿಂತುಬಿಟ್ಟನು. ಕಲ್ಲುಗಳು ನೀರಿನಲ್ಲಿ ತೇಲಿದಂಥಹ ಆ ಅದ್ಭುತವನ್ನು ನಾವು ನೋಡಿದೆವು.

08038012a ಕೃಪೇಣ ಚಾದಿತಂ ದೃಷ್ಟ್ವಾ ನೃಪೋತ್ತಮ ಶಿಖಂಡಿನಂ|

08038012c ಪ್ರತ್ಯುದ್ಯಯೌ ಕೃಪಂ ತೂರ್ಣಂ ಧೃಷ್ಟದ್ಯುಮ್ನೋ ಮಹಾರಥಃ||

ನೃಪೋತ್ತಮ! ಕೃಪನಿಂದ ಶಿಖಂಡಿಯು ಮುಚ್ಚಿಹೋದುದನ್ನು ನೋಡಿ ಮಹಾರಥ ಧೃಷ್ಟದ್ಯುಮ್ನನು ಬೇಗನೇ ಕೃಪನಲ್ಲಿಗೆ ಆಗಮಿಸಿದನು.

08038013a ಧೃಷ್ಟದ್ಯುಮ್ನಂ ತತೋ ಯಾಂತಂ ಶಾರದ್ವತರಥಂ ಪ್ರತಿ|

08038013c ಪ್ರತಿಜಗ್ರಾಹ ವೇಗೇನ ಕೃತವರ್ಮಾ ಮಹಾರಥಃ||

ಶಾರದ್ವತನ ರಥದ ಬಳಿಬರುತ್ತಿದ್ದ ಧೃಷ್ಟದ್ಯುಮ್ನನನ್ನು ಮಹಾರಥ ಕೃತವರ್ಮನು ವೇಗದಿಂದ ಮುಂದೆಬಂದು ತಡೆದನು.

08038014a ಯುಧಿಷ್ಠಿರಮಥಾಯಾಂತಂ ಶಾರದ್ವತರಥಂ ಪ್ರತಿ|

08038014c ಸಪುತ್ರಂ ಸಹಸೇನಂ ಚ ದ್ರೋಣಪುತ್ರೋ ನ್ಯವಾರಯತ್||

ಆಗ ತನ್ನ ಮಗ ಮತ್ತು ಸೇನೆಗಳೊಂದಿಗೆ ಶಾರದ್ವತನ ರಥದ ಬಳಿಬರುತ್ತಿದ್ದ ಯುಧಿಷ್ಠಿರನನ್ನು ದ್ರೋಣಪುತ್ರನು ತಡೆದನು.

08038015a ನಕುಲಂ ಸಹದೇವಂ ಚ ತ್ವರಮಾಣೌ ಮಹಾರಥೌ|

08038015c ಪ್ರತಿಜಗ್ರಾಹ ತೇ ಪುತ್ರಃ ಶರವರ್ಷೇಣ ವಾರಯನ್||

ತ್ವರೆಮಾಡಿ ಬರುತ್ತಿದ್ದ ಮಹಾರಥ ನಕುಲ-ಸಹದೇವರನ್ನು ನಿನ್ನ ಪುತ್ರನು ಶರವರ್ಷಗಳಿಂದ ತಡೆದು ನಿಲ್ಲಿಸಿದನು.

08038016a ಭೀಮಸೇನಂ ಕರೂಷಾಂಶ್ಚ ಕೇಕಯಾನ್ಸಹಸೃಂಜಯಾನ್|

08038016c ಕರ್ಣೋ ವೈಕರ್ತನೋ ಯುದ್ಧೇ ವಾರಯಾಮಾಸ ಭಾರತ||

ಭಾರತ! ವೈಕರ್ತನ ಕರ್ಣನು ಯುದ್ಧದಲ್ಲಿ ಬೀಮಸೇನನನ್ನು ಕರುಷ-ಕೇಕಯ-ಸೃಂಜಯರೊಂದಿಗೆ ತಡೆದನು.

08038017a ಶಿಖಂಡಿನಸ್ತತೋ ಬಾಣಾನ್ಕೃಪಃ ಶಾರದ್ವತೋ ಯುಧಿ|

08038017c ಪ್ರಾಹಿಣೋತ್ತ್ವರಯಾ ಯುಕ್ತೋ ದಿಧಕ್ಷುರಿವ ಮಾರಿಷ||

ಮಾರಿಷ! ಆಗ ಯುದ್ಧದಲ್ಲಿ ಶಾರದ್ವತ ಕೃಪನು ಶಿಖಂಡಿಯನ್ನು ದಹಿಸಿಬಿಡುವನೋ ಎನ್ನುವಂತೆ ತ್ವರೆಮಾಡಿ ಬಾಣಗಳನ್ನು ಪ್ರಯೋಗಿಸುತ್ತಿದ್ದನು.

08038018a ತಾಂ ಶರಾನ್ಪ್ರೇಷಿತಾಂಸ್ತೇನ ಸಮಂತಾದ್ಧೇಮಭೂಷಣಾನ್|

08038018c ಚಿಚ್ಚೇದ ಖಡ್ಗಮಾವಿಧ್ಯ ಭ್ರಾಮಯಂಶ್ಚ ಪುನಃ ಪುನಃ||

ಎಲ್ಲಕಡೆಗಳಿಂದ ಕೃಪನು ಪ್ರಯೋಗಿಸುತ್ತಿದ್ದ ಹೇಮಭೂಷಿತ ಬಾಣಗಳನ್ನು ಶಿಖಂಡಿಯು ಕತ್ತಿಯನ್ನು ಪುನಃ ಪುನಃ ತಿರುಗಿಸುತ್ತಾ ಕತ್ತರಿಸಿ ಹಾಕುತ್ತಿದ್ದನು.

08038019a ಶತಚಂದ್ರಂ ತತಶ್ಚರ್ಮ ಗೌತಮಃ ಪಾರ್ಷತಸ್ಯ ಹ|

08038019c ವ್ಯಧಮತ್ಸಾಯಕೈಸ್ತೂರ್ಣಂ ತತ ಉಚ್ಚುಕ್ರುಶುರ್ಜನಾಃ||

ಆಗ ಗೌತಮನು ಪಾರ್ಷತನ ಶತಚಂದ್ರ ಗುರಾಣಿಯನ್ನು ಬೇಗನೇ ಸಾಯಕಗಳಿಂದ ಧ್ವಂಸಗೊಳಿಸಿದನು. ಆಗ ಅಲ್ಲಿದ್ದ ಜನರು ಗಟ್ಟಿಯಾಗಿ ಕೂಗಿಕೊಂಡರು.

08038020a ಸ ವಿಚರ್ಮಾ ಮಹಾರಾಜ ಖಡ್ಗಪಾಣಿರುಪಾದ್ರವತ್|

08038020c ಕೃಪಸ್ಯ ವಶಮಾಪನ್ನೋ ಮೃತ್ಯೋರಾಸ್ಯಮಿವಾತುರಃ||

ಮಹಾರಾಜ! ಗುರಾಣಿಯನ್ನು ಕಳೆದುಕೊಂಡು ರೋಗಿಯು ಮೃತ್ಯುಮುಖನಾಗುವಂತೆ ಕೃಪನ ವಶನಾಗಿದ್ದ ಶಿಖಂಡಿಯು ಖಡ್ಗಹಸ್ತನಾಗಿಯೇ ಅವನ ಕಡೆ ನುಗ್ಗಿ ಹೋದನು.

08038021a ಶಾರದ್ವತಶರೈರ್ಗ್ರಸ್ತಂ ಕ್ಲಿಶ್ಯಮಾನಂ ಮಹಾಬಲಂ|

08038021c ಚಿತ್ರಕೇತುಸುತೋ ರಾಜನ್ಸುಕೇತುಸ್ತ್ವರಿತೋ ಯಯೌ||

ರಾಜನ್! ಶಾರದ್ವತ ಶರಗಳಿಗೆ ಸಿಲುಕಿ ಸಂಕಟಪಡುತ್ತಿದ್ದ ಮಹಾಬಲ ಶಿಖಂಡಿಯನ್ನು ನೋಡಿ ಚಿತ್ರಕೇತುವಿನ ಮಗ ಸುಕೇತುವು ತ್ವರೆಮಾಡಿ ಅಲ್ಲಿಗೆ ಬಂದನು.

08038022a ವಿಕಿರನ್ಬ್ರಾಹ್ಮಣಂ ಯುದ್ಧೇ ಬಹುಭಿರ್ನಿಶಿತೈಃ ಶರೈಃ|

08038022c ಅಭ್ಯಾಪತದಮೇಯಾತ್ಮಾ ಗೌತಮಸ್ಯ ರಥಂ ಪ್ರತಿ||

ಅಮೇಯಾತ್ಮ ಸುಕೇತುವು ಯುದ್ಧದಲ್ಲಿ ಗೌತಮನ ರಥದ ಬಳಿ ಬಂದು ಅನೇಕ ನಿಶಿತ ಶರಗಳಿಂದ ಬ್ರಾಹ್ಮಣನ ಮೇಲೆ ಎರಗಿದನು.

08038023a ದೃಷ್ಟ್ವಾವಿಷಹ್ಯಂ ತಂ ಯುದ್ಧೇ ಬ್ರಾಹ್ಮಣಂ ಚರಿತವ್ರತಂ|

08038023c ಅಪಯಾತಸ್ತತಸ್ತೂರ್ಣಂ ಶಿಖಂಡೀ ರಾಜಸತ್ತಮ||

ರಾಜಸತ್ತಮ! ಚರಿತವ್ರತ ಬ್ರಾಹ್ಮಣ ಕೃಪನು ಸುಕೇತುವಿನೊಡನೆ ಯುದ್ಧದಲ್ಲಿ ನಿರತನಾಗಿರುವುದನ್ನು ನೋಡಿ ಶಿಖಂಡಿಯು ಬೇಗನೇ ಅಲ್ಲಿಂದ ಹೊರಟುಹೋದನು.

08038024a ಸುಕೇತುಸ್ತು ತತೋ ರಾಜನ್ಗೌತಮಂ ನವಭಿಃ ಶರೈಃ|

08038024c ವಿದ್ಧ್ವಾ ವಿವ್ಯಾಧ ಸಪ್ತತ್ಯಾ ಪುನಶ್ಚೈನಂ ತ್ರಿಭಿಃ ಶರೈಃ||

ರಾಜನ್! ಆಗ ಸುಕೇತುವಾದರೋ ಗೌತಮನನ್ನು ಒಂಭತ್ತು ಶರಗಳಿಂದ ಹೊಡೆದು ಎಪ್ಪತ್ಮೂರು ಬಾಣಗಳಿಂದ ಪುನಃ ಪ್ರಹರಿಸಿದನು.

08038025a ಅಥಾಸ್ಯ ಸಶರಂ ಚಾಪಂ ಪುನಶ್ಚಿಚ್ಚೇದ ಮಾರಿಷ|

08038025c ಸಾರಥಿಂ ಚ ಶರೇಣಾಸ್ಯ ಭೃಶಂ ಮರ್ಮಣ್ಯತಾಡಯತ್||

ಮಾರಿಷ! ಪುನಃ ಅವನು ಬಾಣಗಳಿಂದ ಯುಕ್ತವಾಗಿದ್ದ ಕೃಪನ ಧನುಸ್ಸನ್ನು ಕತ್ತರಿಸಿ, ಶರದಿಂದ ಸಾರಥಿಯ ಮರ್ಮಸ್ಥಳಗಳನ್ನು ಗಾಢವಾಗಿ ಪ್ರಹರಿಸಿದನು.

08038026a ಗೌತಮಸ್ತು ತತಃ ಕ್ರುದ್ಧೋ ಧನುರ್ಗೃಹ್ಯ ನವಂ ದೃಢಂ|

08038026c ಸುಕೇತುಂ ತ್ರಿಂಶತಾ ಬಾಣೈಃ ಸರ್ವಮರ್ಮಸ್ವತಾಡಯತ್||

ಆಗ ಕ್ರುದ್ಧ ಗೌತಮನಾದರೋ ದೃಢವಾದ ಹೊಸ ಧನುಸ್ಸನ್ನು ಹಿಡಿದು ಮೂವತ್ತು ಬಾಣಗಳಿಂದ ಸುಕೇತುವಿನ ಮರ್ಮಸ್ಥಾನಗಳಿಗೆ ಪ್ರಹರಿಸಿದನು.

08038027a ಸ ವಿಹ್ವಲಿತಸರ್ವಾಂಗಃ ಪ್ರಚಚಾಲ ರಥೋತ್ತಮೇ|

08038027c ಭೂಮಿಚಾಲೇ ಯಥಾ ವೃಕ್ಷಶ್ಚಲತ್ಯಾಕಂಪಿತೋ ಭೃಶಂ||

ಸುಕೇತುವು ಸರ್ವಾಂಗಗಳಲ್ಲಿ ವಿಹ್ವಲಿತನಾಗಿ ಭೂಕಂಪದ ಸಮಯದಲ್ಲಿ ವೃಕ್ಷಗಳು ಅಳ್ಳಾಡುವಂತೆ ತನ್ನ ಉತ್ತಮ ರಥದಲ್ಲಿ ತರತರನೆ ನಡುಗಿದನು.

08038028a ಚಲತಸ್ತಸ್ಯ ಕಾಯಾತ್ತು ಶಿರೋ ಜ್ವಲಿತಕುಂಡಲಂ|

08038028c ಸೋಷ್ಣೀಷಂ ಸಶಿರಸ್ತ್ರಾಣಂ ಕ್ಷುರಪ್ರೇಣಾನ್ವಪಾತಯತ್||

ಹೀಗೆ ನಡುಗುತ್ತಿದ್ದ ಅವನ ಕಾಯದಿಂದ ಪ್ರಜ್ವಲಿತ ಕುಂಡಲಗಳನ್ನುಳ್ಳ ಮತ್ತು ಕಿರೀಟದಿಂದ ಶೋಭಿಸುತ್ತಿದ್ದ ಶಿರವನ್ನು ಕೃಪನು ಕ್ಷುರಪ್ರದಿಂದ ಕೆಡವಿದನು.

08038029a ತಚ್ಚಿರಃ ಪ್ರಾಪತದ್ಭೂಮೌ ಶ್ಯೇನಾಹೃತಮಿವಾಮಿಷಂ|

08038029c ತತೋಽಸ್ಯ ಕಾಯೋ ವಸುಧಾಂ ಪಶ್ಚಾತ್ಪ್ರಾಪ ತದಾ ಚ್ಯುತಃ||

ಗಿಡುಗವು ಕೊಂಡೊಯ್ಯುತ್ತಿದ್ದ ಮಾಂಸದತುಂಡು ಕೆಳಕ್ಕೆ ಬೀಳುವಂತೆ ಶೀಘ್ರವಾಗಿ ಸುಕೇತುವಿನ ಶಿರವು ಭೂಮಿಯ ಮೇಲೆ ಬೀಳಲು, ಅವನ ಕಾಯವು ಕೆಳಗೆ ಬಿದ್ದಿತು.

08038030a ತಸ್ಮಿನ್ ಹತೇ ಮಹಾರಾಜ ತ್ರಸ್ತಾಸ್ತಸ್ಯ ಪದಾನುಗಾಃ|

08038030c ಗೌತಮಂ ಸಮರೇ ತ್ಯಕ್ತ್ವಾ ದುದ್ರುವುಸ್ತೇ ದಿಶೋ ದಶ||

ಮಹಾರಾಜ! ಸುಕೇತುವು ಹತನಾಗಲು ಅವನ ಪದಾನುಗರು ಭಯಗೊಂಡು ಗೌತಮನನ್ನು ಸಮರದಲ್ಲಿ ಬಿಟ್ಟು ಹತ್ತು ದಿಕ್ಕುಗಳಲ್ಲಿಯೂ ಓಡಿ ಹೋದರು.

08038031a ಧೃಷ್ಟದ್ಯುಮ್ನಂ ತು ಸಮರೇ ಸನ್ನಿವಾರ್ಯ ಮಹಾಬಲಃ|

08038031c ಕೃತವರ್ಮಾಬ್ರವೀದ್ಧೃಷ್ಟಸ್ತಿಷ್ಠ ತಿಷ್ಠೇತಿ ಪಾರ್ಷತಂ||

ಮಹಾಬಲ ಕೃತವರ್ಮನಾದರೋ ಸಮರದಲ್ಲಿ ಪಾರ್ಷತ ಧೃಷ್ಟದ್ಯುಮ್ನನನ್ನು ತಡೆದು “ನಿಲ್ಲು! ನಿಲ್ಲು!” ಎಂದು ಹೇಳಿದನು.

08038032a ತದಭೂತ್ತುಮುಲಂ ಯುದ್ಧಂ ವೃಷ್ಣಿಪಾರ್ಷತಯೋ ರಣೇ|

08038032c ಆಮಿಷಾರ್ಥೇ ಯಥಾ ಯುದ್ಧಂ ಶ್ಯೇನಯೋರ್ಗೃದ್ಧಯೋರ್ನೃಪ||

ನೃಪ! ಆಗ ಮಾಂಸದತುಂಡಿಗೆ ಎರಡು ಗಿಡುಗಗಳು ಕಾಳಗವಾಡುವಂತೆ ವೃಷ್ಣಿ-ಪಾರ್ಷತರ ನಡುವೆ ರಣದಲ್ಲಿ ತುಮುಲ ಯುದ್ಧವು ನಡೆಯಿತು.

08038033a ಧೃಷ್ಟದ್ಯುಮ್ನಸ್ತು ಸಮರೇ ಹಾರ್ದಿಕ್ಯಂ ನವಭಿಃ ಶರೈಃ|

08038033c ಆಜಘಾನೋರಸಿ ಕ್ರುದ್ಧಃ ಪೀಡಯನ್ ಹೃದಿಕಾತ್ಮಜಂ||

ಧೃಷ್ಟದ್ಯುಮ್ನನಾದರೋ ಸಮರದಲ್ಲಿ ಹಾರ್ದಿಕ್ಯನನ್ನು ಒಂಭತ್ತು ಶರಗಳಿಂದ ವಕ್ಷಃಸ್ಥಳದಲ್ಲಿ ಪ್ರಹರಿಸಿ ಕ್ರುದ್ಧನಾಗಿ ಹೃದಿಕಾತ್ಮಜನನ್ನು ಪೀಡಿಸಿದನು.

08038034a ಕೃತವರ್ಮಾ ತು ಸಮರೇ ಪಾರ್ಷತೇನ ದೃಢಾಹತಃ|

08038034c ಪಾರ್ಷತಂ ಸರಥಂ ಸಾಶ್ವಂ ಚಾದಯಾಮಾಸ ಸಾಯಕೈಃ||

ಕೃತವರ್ಮನಾದರೋ ಸಮರದಲ್ಲಿ ಪಾರ್ಷತನಿಂದ ದೃಢವಾಗಿ ಪ್ರಹರಿಸಲ್ಪಟ್ಟು ಸಾಯಕಗಳಿಂದ ಪಾರ್ಷತನನ್ನು ಅವನ ರಥ, ಕುದುರೆಗಳೊಂದಿಗೆ ಮುಚ್ಚಿಬಿಟ್ಟನು.

08038035a ಸರಥಶ್ಚಾದಿತೋ ರಾಜನ್ ಧೃಷ್ಟದ್ಯುಮ್ನೋ ನ ದೃಶ್ಯತೇ|

08038035c ಮೇಘೈರಿವ ಪರಿಚ್ಚನ್ನೋ ಭಾಸ್ಕರೋ ಜಲದಾಗಮೇ||

ರಾಜನ್! ರಥದೊಡನೆ ಮುಚ್ಚಿಹೋಗಿದ್ದ ಧೃಷ್ಟದ್ಯುಮ್ನನು ಮಳೆಗಾಲದ ಪ್ರಾರಂಭದಲ್ಲಿ ಮೇಘಗಳಿಂದ ಪರಿಚ್ಚನ್ನ ಭಾಸ್ಕರನಂತೆ ಕಾಣದಂತಾದನು.

08038036a ವಿಧೂಯ ತಂ ಬಾಣಗಣಂ ಶರೈಃ ಕನಕಭೂಷಣೈಃ|

08038036c ವ್ಯರೋಚತ ರಣೇ ರಾಜನ್ ಧೃಷ್ಟದ್ಯುಮ್ನಃ ಕೃತವ್ರಣಃ||

ರಾಜನ್! ಗಾಯಗೊಂಡಿದ್ದ ಧೃಷ್ಟದ್ಯುಮ್ನನು ಕನಕಭೂಷಣ ಶರಗಳಿಂದ ಕೃತವರ್ಮನ ಬಾಣಗಣಗಳನ್ನು ನಿರಸನಗೊಳಿಸಿ ಪುನಃ ಕಾಣಿಸಿಕೊಂಡನು.

08038037a ತತಸ್ತು ಪಾರ್ಷತಃ ಕ್ರುದ್ಧಃ ಶಸ್ತ್ರವೃಷ್ಟಿಂ ಸುದಾರುಣಾಂ|

08038037c ಕೃತವರ್ಮಾಣಮಾಸಾದ್ಯ ವ್ಯಸೃಜತ್ ಪೃತನಾಪತಿಃ||

ಆಗ ಸೇನಾನಾಯಕ ಧೃಷ್ಟದ್ಯುಮ್ನನು ಕ್ರುದ್ಧನಾಗಿ ಕೃತವರ್ಮನ ಬಳಿಸಾರಿ ಅವನ ಮೇಲೆ ದಾರುಣ ಶಸ್ತ್ರವೃಷ್ಟಿಯನ್ನು ಸುರಿಸಿದನು.

08038038a ತಾಮಾಪತಂತೀಂ ಸಹಸಾ ಶಸ್ತ್ರವೃಷ್ಟಿಂ ನಿರಂತರಾಂ|

08038038c ಶರೈರನೇಕಸಾಹಸ್ರೈರ್ಹಾರ್ದಿಕ್ಯೋ ವ್ಯಧಮದ್ಯುಧಿ||

ಯುದ್ಧದಲ್ಲಿ ತನ್ನ ಮೇಲೆ ನಿರಂತರವಾಗಿ ಬೀಳುತ್ತಿದ್ದ ಆ ಶಸ್ತ್ರವೃಷ್ಟಿಯನ್ನು ಹಾರ್ದಿಕ್ಯನು ಅನೇಕ ಸಹಸ್ರ ಶರಗಳಿಂದ ಕೂಡಲೇ ನಾಶಗೊಳಿಸಿದನು.

08038039a ದೃಷ್ಟ್ವಾ ತು ದಾರಿತಾಂ ಯುದ್ಧೇ ಶಸ್ತ್ರವೃಷ್ಟಿಂ ದುರುತ್ತರಾಂ|

08038039c ಕೃತವರ್ಮಾಣಮಭ್ಯೇತ್ಯ ವಾರಯಾಮಾಸ ಪಾರ್ಷತಃ||

ಯುದ್ಧದಲ್ಲಿ ಎದುರಿಸಲಸಾಧ್ಯ ಶಸ್ತ್ರವೃಷ್ಟಿಯನ್ನು ನಾಶಗೊಳಿಸಿದುದನ್ನು ಕಂಡು ಪಾರ್ಷತನು ಕೃತವರ್ಮನನ್ನು ಪ್ರಹರಿಸಿ ನಿಲ್ಲಿಸಿದನು.

08038040a ಸಾರಥಿಂ ಚಾಸ್ಯ ತರಸಾ ಪ್ರಾಹಿಣೋದ್ಯಮಸಾದನಂ|

08038040c ಭಲ್ಲೇನ ಶಿತಧಾರೇಣ ಸ ಹತಃ ಪ್ರಾಪತದ್ರಥಾತ್||

ಮತ್ತು ಕೂಡಲೇ ಅವನ ಸಾರಥಿಯನ್ನು ಯಮಸಾದನಕ್ಕೆ ಕಳುಹಿಸಿದನು. ತೀಕ್ಷ್ಣ ಭಲ್ಲದಿಂದ ಅವನು ಹತನಾಗಿ ರಥದಿಂದ ಕೆಳಕ್ಕೆ ಬಿದ್ದನು.

08038041a ಧೃಷ್ಟದ್ಯುಮ್ನಸ್ತು ಬಲವಾನ್ ಜಿತ್ವಾ ಶತ್ರುಂ ಮಹಾರಥಂ|

08038041c ಕೌರವಾನ್ಸಮರೇ ತೂರ್ಣಂ ವಾರಯಾಮಾಸ ಸಾಯಕೈಃ||

ಬಲವಾನ್ ಧೃಷ್ಟದ್ಯುಮ್ನನಾದರೋ ಮಹಾರಥ ಶತ್ರುವನ್ನು ಸಮರದಲ್ಲಿ ಗೆದ್ದು ಕೂಡಲೇ ಸಾಯಕಗಳಿಂದ ಕೌರವರನ್ನು ತಡೆದನು.

08038042a ತತಸ್ತೇ ತಾವಕಾ ಯೋಧಾ ಧೃಷ್ಟದ್ಯುಮ್ನಮುಪಾದ್ರವನ್|

08038042c ಸಿಂಹನಾದರವಂ ಕೃತ್ವಾ ತತೋ ಯುದ್ಧಮವರ್ತತ||

ಆಗ ನಿನ್ನ ಕಡೆಯ ಯೋಧರು ಸಿಂಹನಾದಗೈಯುತ್ತಾ ಧೃಷ್ಟದ್ಯುಮ್ನನನ್ನು ಆಕ್ರಮಿಸಿದರು. ಯುದ್ಧವು ಮುಂದುವರೆಯಿತು.”

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ಅಷ್ಠತ್ರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ಮೂವತ್ತೆಂಟನೇ ಅಧ್ಯಾಯವು.

Comments are closed.