Karna Parva: Chapter 16

ಕರ್ಣ ಪರ್ವ

೧೬

ಕರ್ಣಯುದ್ಧ

ಕರ್ಣನು ಪಾಂಡವಸೇನೆಯನ್ನು ಧ್ವಂಸಗೊಳಿಸಿದುದು (೧-೩೮).

08016001 ಧೃತರಾಷ್ಟ್ರ ಉವಾಚ|

08016001a ಪಾಂಡ್ಯೇ ಹತೇ ಕಿಮಕರೋದರ್ಜುನೋ ಯುಧಿ ಸಂಜಯ|

08016001c ಏಕವೀರೇಣ ಕರ್ಣೇನ ದ್ರಾವಿತೇಷು ಪರೇಷು ಚ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಯುದ್ಧದಲ್ಲಿ ಪಾಂಡ್ಯನು ಹತನಾಗಲು ಏಕವೀರ ಕರ್ಣನಿಂದ ಶತ್ರುಗಳು ಓಡಿಹೋಗುತ್ತಿರಲು ಅರ್ಜುನನು ಏನು ಮಾಡಿದನು?

08016002a ಸಮಾಪ್ತವಿದ್ಯೋ ಬಲವಾನ್ಯುಕ್ತೋ ವೀರಶ್ಚ ಪಾಂಡವಃ|

08016002c ಸರ್ವಭೂತೇಷ್ವನುಜ್ಞಾತಃ ಶಂಕರೇಣ ಮಹಾತ್ಮನಾ||

ಪಾಂಡವ ಅರ್ಜುನನು ವಿದ್ಯಾಸಂಪನ್ನನು, ಬಲವಾನನು, ಮತ್ತು ವೀರನು. ಮಹಾತ್ಮ ಶಂಕರನಿಂದಲೇ ಸರ್ವಭೂತಗಳಿಗೂ ಅಜೇಯನೆಂದು ಹೇಳಿಸಿಕೊಂಡಿರುವನು.

08016003a ತಸ್ಮಾನ್ಮಹದ್ಭಯಂ ತೀವ್ರಮಮಿತ್ರಘ್ನಾದ್ಧನಂಜಯಾತ್|

08016003c ಸ ಯತ್ತತ್ರಾಕರೋತ್ಪಾರ್ಥಸ್ತನ್ಮಮಾಚಕ್ಷ್ವ ಸಂಜಯ||

ಆದುದರಿಂದಲೇ ಅಮಿತ್ರಘ್ನ ಧನಂಜಯನಿಂದಲೇ ನನಗೆ ತೀವ್ರವಾದ ಮಹಾಭಯವಾಗುತ್ತದೆ. ಆ ಪಾರ್ಥನು ಯಾವ ಪ್ರಯತ್ನವನ್ನು ಮಾಡಿದನೆಂದು ನನಗೆ ಹೇಳು ಸಂಜಯ!”

08016004 ಸಂಜಯ ಉವಾಚ|

08016004a ಹತೇ ಪಾಂಡ್ಯೇಽರ್ಜುನಂ ಕೃಷ್ಣಸ್ತ್ವರನ್ನಾಹ ವಚೋ ಹಿತಂ|

08016004c ಪಶ್ಯಾತಿಮಾನ್ಯಂ ರಾಜಾನಮಪಯಾತಾಂಶ್ಚ ಪಾಂಡವಾನ್||

ಸಂಜಯನು ಹೇಳಿದನು: “ಅತಿಮಾನ್ಯ ಪಾಂಡ್ಯರಾಜನು ಕೆಳಗುರುಳಿಸಲ್ಪಡಲು ಕೃಷ್ಣನು ಅರ್ಜುನನಿಗೆ ಪಾಂಡವರಿಗೆ ಹಿತಕರವಾಗುವ ಈ ಮಾತುಗಳನ್ನಾಡಿದನು:

08016005a ಅಶ್ವತ್ಥಾಮ್ನಶ್ಚ ಸಂಕಲ್ಪಾದ್ಧತಾಃ ಕರ್ಣೇನ ಸೃಂಜಯಾಃ|

08016005c ತಥಾಶ್ವನರನಾಗಾನಾಂ ಕೃತಂ ಚ ಕದನಂ ಮಹತ್||

“ಅಶ್ವತ್ಥಾಮನ ಸಂಕಲ್ಪದಂತೆ ಕರ್ಣನು ಸೃಂಜಯರನ್ನು ಸಂಹರಿಸಿ ಅಶ್ವ-ನರ-ಗಜಗಳ ಮಹಾ ಕದನವನ್ನೇ ಎಸಗಿದ್ದಾನೆ.”

08016005e ಇತ್ಯಾಚಷ್ಟ ಸುದುರ್ಧರ್ಷೋ ವಾಸುದೇವಃ ಕಿರೀಟಿನೇ||

08016006a ಏತಚ್ಚ್ರುತ್ವಾ ಚ ದೃಷ್ಟ್ವಾ ಚ ಭ್ರಾತುರ್ಘೋರಂ ಮಹದ್ಭಯಂ|

08016006c ವಾಹಯಾಶ್ವಾನ್ ಹೃಷೀಕೇಶ ಕ್ಷಿಪ್ರಮಿತ್ಯಾಹ ಪಾಂಡವಃ||

ದುರ್ಧರ್ಷ ವಾಸುದೇವನು ಕಿರೀಟಿಗೆ ಇದನ್ನು ಹೇಳಲು, ಅದನ್ನು ಕೇಳಿದ ಮತ್ತು ನೋಡಿದ ಪಾಂಡವನು ಅಣ್ಣನಿಗೊದಗಿದ ಮಹಾ ಘೋರ ಭಯದಿಂದಾಗಿ “ಹೃಷೀಕೇಶ! ಕುದುರೆಗಳನ್ನು ಮುಂದೆ ನಡೆಸು!” ಎಂದನು.

08016007a ತತಃ ಪ್ರಾಯಾದ್ಧೃಷೀಕೇಶೋ ರಥೇನಾಪ್ರತಿಯೋಧಿನಾ|

08016007c ದಾರುಣಶ್ಚ ಪುನಸ್ತತ್ರ ಪ್ರಾದುರಾಸೀತ್ಸಮಾಗಮಃ||

ಆಗ ಹೃಷೀಕೇಶನು ಅಪ್ರತಿಯೋಧೀ ರಥವನ್ನು ಮುಂದುವರೆಸಿದನು. ಪುನಃ ಅಲ್ಲಿ ದಾರುಣ ಸಂಗ್ರಾಮವು ಪ್ರಾರಂಭವಾಯಿತು.

08016008a ತತಃ ಪ್ರವವೃತೇ ಭೂಯಃ ಸಂಗ್ರಾಮೋ ರಾಜಸತ್ತಮ|

08016008c ಕರ್ಣಸ್ಯ ಪಾಂಡವಾನಾಂ ಚ ಯಮರಾಷ್ಟ್ರವಿವರ್ಧನಃ||

ರಾಜಸತ್ತಮ! ಆಗ ಪುನಃ ಯಮರಾಷ್ಟ್ರವಿವರ್ಧನ ಸಂಗ್ರಾಮವು ಕರ್ಣ ಮತ್ತು ಪಾಂಡವರ ನಡುವೆ ಪ್ರಾರಂಭವಾಯಿತು.

08016009a ಧನೂಂಷಿ ಬಾಣಾನ್ಪರಿಘಾನಸಿತೋಮರಪಟ್ಟಿಶಾನ್|

08016009c ಮುಸಲಾನಿ ಭುಶುಂಡೀಶ್ಚ ಶಕ್ತಿ‌ಋಷ್ಟಿಪರಶ್ವಧಾನ್||

08016010a ಗದಾಃ ಪ್ರಾಸಾನಸೀನ್ಕುಂತಾನ್ಭಿಂಡಿಪಾಲಾನ್ಮಹಾಂಕುಶಾನ್|

08016010c ಪ್ರಗೃಹ್ಯ ಕ್ಷಿಪ್ರಮಾಪೇತುಃ ಪರಸ್ಪರಜಿಗೀಷಯಾ||

ಪರಸ್ಪರರನ್ನು ಸಂಹರಿಸಲು ಬಯಸಿದ ಅವರು ಧನುಸ್ಸು, ಬಾಣ, ಪರಿಘ, ಖಡ್ಗ, ತೋಮರ, ಪಟ್ಟಿಶ, ಮುಸಲ, ಭುಶುಂಡೀ, ಶಕ್ತಿ, ಋಷ್ಟಿ, ಪರಶು, ಗದ, ಪ್ರಾಸ, ಕುಂತ, ಭಿಂಡಿಪಾಲ ಮತ್ತು ಮಹಾ ಅಂಕುಶಗಳನ್ನು ಹಿಡಿದು ಎಸೆಯುತ್ತಿದ್ದರು.

08016011a ಬಾಣಜ್ಯಾತಲಶಬ್ದೇನ ದ್ಯಾಂ ದಿಶಃ ಪ್ರದಿಶೋ ವಿಯತ್|

08016011c ಪೃಥಿವೀಂ ನೇಮಿಘೋಷೇಣ ನಾದಯಂತೋಽಭ್ಯಯುಃ ಪರಾನ್||

ಬಾಣ-ಶಿಂಜಿನಿ-ಧನುಸ್ಸುಗಳ ಶಬ್ಧದಿಂದ ಆಕಾಶ-ದಿಕ್ಕು-ಉಪದಿಕ್ಕುಗಳನ್ನು ಮೊಳಗಿಸುತ್ತಾ, ರಥಚಕ್ರಗಳ ಘೋಷದಿಂದ ಭೂಮಿಯನ್ನು ಮೊಳಗಿಸುತ್ತಾ, ಸಿಂಹನಾದಗೈಯುತ್ತಾ ಅವರು ಶತ್ರುಗಳ ಮೇಲೆ ಆಕ್ರಮಣಿಸಿದರು.

08016012a ತೇನ ಶಬ್ದೇನ ಮಹತಾ ಸಂಹೃಷ್ಟಾಶ್ಚಕ್ರುರಾಹವಂ|

08016012c ವೀರಾ ವೀರೈರ್ಮಹಾಘೋರಂ ಕಲಹಾಂತಂ ತಿತೀರ್ಷವಃ||

ಆ ಮಹಾಘೋರ ಕಲಹದ ಕೊನೆಗಾಣಬೇಕೆಂಬ ಇಚ್ಛೆಯಿಂದ ವೀರರು ಆ ಮಹಾಶಬ್ಧದಿಂದ ಸಂಪ್ರಹೃಷ್ಟರಾಗಿ ವೀರತನದಿಂದ ಸಂಗ್ರಾಮವನ್ನು ನಡೆಸಿದರು.

08016013a ಜ್ಯಾತಲತ್ರಧನುಃಶಬ್ದಾಃ ಕುಂಜರಾಣಾಂ ಚ ಬೃಂಹಿತಂ|

08016013c ತಾಡಿತಾನಾಂ ಚ ಪತತಾಂ ನಿನಾದಃ ಸುಮಹಾನಭೂತ್||

ಧನುಸ್ಸಿನ ಟೇಂಕಾರಗಳು, ಆನೆಗಳ ಘೀಳುಗಳು, ಹೊಡೆಯುವವರ ಮತ್ತು ಬೀಳುವವರ ನಿನಾದವು ಅತಿಯಾಗಿತ್ತು.

08016014a ಬಾಣಶಬ್ಧಾಂಶ್ಚ ವಿವಿಧಾಂ ಶೂರಾಣಾಮಭಿಗರ್ಜತಾಂ|

08016014c ಶ್ರುತ್ವಾ ಶಬ್ಧಂ ಭೃಶಂ ತ್ರೇಸುರ್ಜಘ್ನುರ್ಮಮ್ಲುಶ್ಚ ಭಾರತ||

ಭಾರತ! ಬಾಣಗಳ ಶಬ್ಧಗಳು ಮತ್ತು ಶೂರರ ವಿವಿಧ ಗರ್ಜನೆಗಳ ಶಬ್ಧಗಳನ್ನು ಕೇಳಿ ಕೆಲವರು ನಡುಗಿ ಅಸುನೀಗಿದರು ಮತ್ತು ಕೆಲವರು ಮೂರ್ಛೆ ಹೋದರು.

08016015a ತೇಷಾಂ ನಾನದ್ಯತಾಂ ಚೈವ ಶಸ್ತ್ರವೃಷ್ಟಿಂ ಚ ಮುಂಚತಾಂ|

08016015c ಬಹೂಆಧಿರಥಿಃ ಕರ್ಣಃ ಪ್ರಮಮಾಥ ರಣೇಷುಭಿಃ||

ರಣದಲ್ಲಿ ಹಾಗೆ ಸಿಂಹನಾದಗೈಯುತ್ತಾ ಶಸ್ತ್ರವೃಷ್ಟಿಯನ್ನು ಸುರಿಸುತ್ತಿದ್ದ ಅನೇಕ ಸೈನಿಕರನ್ನು ಆಧಿರಥಿ ಕರ್ಣನು ಬಾಣಗಳಿಂದ ಸದೆಬಡಿದನು.

08016016a ಪಂಚ ಪಾಂಚಾಲವೀರಾಣಾಂ ರಥಾನ್ದಶ ಚ ಪಂಚ ಚ|

08016016c ಸಾಶ್ವಸೂತಧ್ವಜಾನ್ಕರ್ಣಃ ಶರೈರ್ನಿನ್ಯೇ ಯಮಕ್ಷಯಂ||

ಕರ್ಣನು ಶರಗಳಿಂದ ಅಶ್ವ-ಸೂತ-ಧ್ವಜಗಳೊಂದಿಗೆ ಪಾಂಚಾಲ ವೀರರ ಐದು, ನಂತರ ಹತ್ತು ಮತ್ತು ಐದು ರಥಗಳನ್ನು ಯಮಕ್ಷಯಕ್ಕೆ ಕಳುಹಿಸಿದನು.

08016017a ಯೋಧಮುಖ್ಯಾ ಮಹಾವೀರ್ಯಾಃ ಪಾಂಡೂನಾಂ ಕರ್ಣಮಾಹವೇ|

08016017c ಶೀಘ್ರಾಸ್ತ್ರಾ ದಿವಮಾವೃತ್ಯ ಪರಿವವ್ರುಃ ಸಮಂತತಃ||

ಮಹಾವೀರ್ಯ ಪಾಂಡವ ಯೋಧಮುಖ್ಯರು ರಣದಲ್ಲಿ ಶೀಘ್ರವಾಗಿ ಅಸ್ತ್ರಗಳಿಂದ ಆಕಾಶವನ್ನು ಮುಚ್ಚುತ್ತಾ ಕರ್ಣನನ್ನು ಎಲ್ಲಕಡೆಗಳಿಂದ ಸುತ್ತುವರೆದರು.

08016018a ತತಃ ಕರ್ಣೋ ದ್ವಿಷತ್ಸೇನಾಂ ಶರವರ್ಷೈರ್ವಿಲೋಡಯನ್|

08016018c ವಿಜಗಾಹೇಽಮ್ಡಡಜಾಪೂರ್ಣಾಂ ಪದ್ಮಿನೀಮಿವ ಯೂಥಪಃ||

ಆಗ ಕರ್ಣನು ಶರವರ್ಷಗಳಿಂದ ಅಲ್ಲೋಲಕಲ್ಲೋಲಗೊಳಿಸುತ್ತಾ ಕಮಲ-ಪಕ್ಷಿಗಳಿಂದ ಕೂಡಿದ ಸರೋವರವನ್ನು ಸಲಗವು ಹೇಗೋ ಹಾಗೆ ಶತ್ರುಸೇನೆಯನ್ನು ಹೊಕ್ಕನು.

08016019a ದ್ವಿಷನ್ಮಧ್ಯಮವಸ್ಕಂದ್ಯ ರಾಧೇಯೋ ಧನುರುತ್ತಮಂ|

08016019c ವಿಧುನ್ವಾನಃ ಶಿತೈರ್ಬಾಣೈಃ ಶಿರಾಂಸ್ಯುನ್ಮಥ್ಯ ಪಾತಯತ್||

ಶತ್ರುಸೇನೆಯ ಮಧ್ಯಹೋಗಿ ರಾಧೇಯನು ಉತ್ತಮ ಧನುಸ್ಸನ್ನು ಟೇಂಕರಿಸುತ್ತಾ ನಿಶಿತ ಬಾಣಗಳಿಂದ ಶಿರಗಳನ್ನು ಕತ್ತರಿಸುತ್ತಾ ಬೀಳಿಸುತ್ತಿದ್ದನು.

08016020a ಚರ್ಮವರ್ಮಾಣಿ ಸಂಚಿಂದ್ಯ ನಿರ್ವಾಪಮಿವ ದೇಹಿನಾಂ|

08016020c ವಿಷೇಹುರ್ನಾಸ್ಯ ಸಂಪರ್ಕಂ ದ್ವಿತೀಯಸ್ಯ ಪತತ್ರಿಣಃ||

ಉಸಿರಿಲ್ಲದ ಶರೀರಗಳಿಂದಲೋ ಎನ್ನುವಂತೆ ಸೈನಿಕರ ಕವಚ-ಗುರಾಣಿಗಳನ್ನು ತುಂಡರಿಸುವ ಕರ್ಣನ ಎರಡನೆಯ ಬಾಣವನ್ನು ಯಾರಿಗೂ ಸಹಿಸಿಕೊಳ್ಳಲಾಗುತ್ತಿರಲಿಲ್ಲ.

08016021a ವರ್ಮದೇಹಾಸುಮಥನೈರ್ಧನುಷಃ ಪ್ರಚ್ಯುತೈಃ ಶರೈಃ|

08016021c ಮೌರ್ವ್ಯಾ ತಲತ್ರೈರ್ನ್ಯವಧೀತ್ಕಶಯಾ ವಾಜಿನೋ ಯಥಾ||

ಚಾವಟಿಯಿಂದ ಕುದುರೆಯನ್ನು ಹೊಡೆಯುವ ಹಾಗೆ ಅವನು ಧನುಸ್ಸಿನ ಶಿಂಜನಿಯಿಂದ ಪ್ರಯೋಗಿಸಿದ ಶರಗಳಿಂದ ಕವಚಗಳೊಂದಿಗೆ ಶರೀರಗಳನ್ನು ಮಥಿಸಿ ಸಂಹರಿಸಿದನು.

08016022a ಪಾಂಡುಸೃಂಜಯಪಾಂಚಾಲಾಂ ಶರಗೋಚರಮಾನಯತ್|

08016022c ಮಮರ್ದ ಕರ್ಣಸ್ತರಸಾ ಸಿಂಹೋ ಮೃಗಗಣಾನಿವ||

ಸಿಂಹವು ಮೃಗಗಣಗಳನ್ನು ಕೂಡಲೇ ಕೊಲ್ಲುವಂತೆ ಕರ್ಣನು ತನ್ನ ಶರಕ್ಕೆ ಗೋಚರರಾದ ಪಾಂಡು-ಸೃಂಜಯ-ಪಾಂಚಾಲರನ್ನು ಸಂಹರಿಸಿದನು.

08016023a ತತಃ ಪಾಂಚಾಲಪುತ್ರಾಶ್ಚ ದ್ರೌಪದೇಯಾಶ್ಚ ಮಾರಿಷ|

08016023c ಯಮೌ ಚ ಯುಯುಧಾನಶ್ಚ ಸಹಿತಾಃ ಕರ್ಣಮಭ್ಯಯುಃ||

ಮಾರಿಷ! ಆಗ ಪಾಂಚಾಲಪುತ್ರರು, ದ್ರೌಪದೇಯರು, ನಕುಲ-ಸಹದೇವರು ಮತ್ತು ಯುಯುಧಾನ ಸಾತ್ಯಕಿಯರು ಒಟ್ಟಿಗೇ ಕರ್ಣನನ್ನು ಆಕ್ರಮಣಿಸಿದರು.

08016024a ವ್ಯಾಯಚ್ಚಮಾನಾಃ ಸುಭೃಶಂ ಕುರುಪಾಂಡವಸೃಂಜಯಾಃ|

08016024c ಪ್ರಿಯಾನಸೂನ್ರಣೇ ತ್ಯಕ್ತ್ವಾ ಯೋಧಾ ಜಗ್ಮುಃ ಪರಸ್ಪರಂ||

ಪರಿಶ್ರಮದಿಂದ ಹೋರಾಡುತ್ತಿದ್ದ ಕುರು-ಪಾಂಡವ-ಸೃಂಜಯ ಯೋಧರು ರಣದಲ್ಲಿ ತಮ್ಮ ಪ್ರಿಯ ಜೀವಗಳ ಮೇಲಿನ ಆಸೆಯನ್ನೂ ತೊರೆದು ಪರಸ್ಪರರ ಮೇಲೆ ಎರಗಿದರು.

08016025a ಸುಸಂನದ್ಧಾಃ ಕವಚಿನಃ ಸಶಿರಸ್ತ್ರಾಣಭೂಷಣಾಃ|

08016025c ಗದಾಭಿರ್ಮುಸಲೈಶ್ಚಾನ್ಯೇ ಪರಿಘೈಶ್ಚ ಮಹಾರಥಾಃ||

08016026a ಸಮಭ್ಯಧಾವಂತ ಭೃಶಂ ದೇವಾ ದಂಡೈರಿವೋದ್ಯತೈಃ|

08016026c ನದಂತಶ್ಚಾಹ್ವಯಂತಶ್ಚ ಪ್ರವಲ್ಗಂತಶ್ಚ ಮಾರಿಷ||

ಮಾರಿಷ! ಸುಸನ್ನದ್ಧ ಕವಚಧಾರೀ ಶಿರಸ್ತ್ರಾಣ-ಭೂಷಣಧಾರೀ ಮಹಾರಥರು ಗರ್ಜಿಸುತ್ತಾ, ಕರೆಯುತ್ತಾ ಮತ್ತು ಕುಪ್ಪಳಿಸುತ್ತಾ ಕಾಲದಂಡಗಳಂಥಹ ಗದೆ-ಮುಸಲ-ಪರಿಘ ಮತ್ತು ಅನ್ಯ ಆಯುಧಗಳನ್ನು ಮೇಲೆತ್ತಿ ಆಕ್ರಮಣಿಸುತ್ತಿದ್ದರು.

08016027a ತತೋ ನಿಜಘ್ನುರನ್ಯೋನ್ಯಂ ಪೇತುಶ್ಚಾಹವತಾಡಿತಾಃ|

08016027c ವಮಂತೋ ರುಧಿರಂ ಗಾತ್ರೈರ್ವಿಮಸ್ತಿಷ್ಕೇಕ್ಷಣಾ ಯುಧಿ||

ಆಗ ಅನ್ಯೋನ್ಯರನ್ನು ಹೊಡೆದು ಕೆಳಗುರುಳಿಸಲು ಅವರು ಶರೀರರಿಂದ ರಕ್ತವನ್ನು ಕಾರುತ್ತಾ ಮೆದುಳು ಕಣ್ಣುಗಳನ್ನು ಕಳೆದುಕೊಂಡು ಯುದ್ಧದಲ್ಲಿ ಬೀಳುತ್ತಿದ್ದರು.

08016028a ದಂತಪೂರ್ಣೈಃ ಸರುಧಿರೈರ್ವಕ್ತ್ರೈರ್ದಾಡಿಮಸಂನಿಭೈಃ|

08016028c ಜೀವಂತ ಇವ ಚಾಪ್ಯೇತೇ ತಸ್ಥುಃ ಶಸ್ತ್ರೋಪಬೃಂಹಿತಾಃ||

ಶಸ್ತ್ರಗಳಿಂದ ಎಲ್ಲಾಕಡೆ ಚುಚ್ಚಲ್ಪಟ್ಟ ಕೆಲವರು ಜೀವವಿಲ್ಲದಿದ್ದರೂ ರಕ್ತದಿಂದ ತೋಯ್ದು ದಾಳಿಂಬೇಹಣ್ಣಿನಂತಹ ಹಲ್ಲುಗಳಿಂದ ಹೊಳೆಯುತ್ತಾ ಜೀವಂತವಿದ್ದಾರೋ ಎನ್ನುವಂತೆ ನಿಂತಿದ್ದರು.

08016029a ಪರಸ್ಪರಂ ಚಾಪ್ಯಪರೇ ಪಟ್ಟಿಶೈರಸಿಭಿಸ್ತಥಾ|

08016029c ಶಕ್ತಿಭಿರ್ಭಿಂಡಿಪಾಲೈಶ್ಚ ನಖರಪ್ರಾಸತೋಮರೈಃ||

08016030a ತತಕ್ಷುಶ್ಚಿಚ್ಚಿದುಶ್ಚಾನ್ಯೇ ಬಿಭಿದುಶ್ಚಿಕ್ಷಿಪುಸ್ತಥಾ|

08016030c ಸಂಚಕರ್ತುಶ್ಚ ಜಘ್ನುಶ್ಚ ಕ್ರುದ್ಧಾ ನಿರ್ಬಿಭಿದುಶ್ಚ ಹ||

ಕ್ರುದ್ಧ ಯೋಧರು ಪರಸ್ಪರರನ್ನು ಪಟ್ಟಿಶ, ಖಡ್ಗ, ಶಕ್ತಿ, ಭಿಂಡಿಪಾಲ, ನಖರ, ಪ್ರಾಸ ಮತ್ತು ತೋಮರಗಳಿಂದ ಕತ್ತರಿಸುತ್ತಿದ್ದರು, ದೂರಕ್ಕೆಸೆಯುತ್ತಿದ್ದರು, ತುಂಡು ತುಂಡು ಮಾಡುತ್ತಿದ್ದರು ಹಾಗೂ ಸಂಹರಿಸುತ್ತಿದ್ದರು.

08016031a ಪೇತುರನ್ಯೋನ್ಯನಿಹತಾ ವ್ಯಸವೋ ರುಧಿರೋಕ್ಷಿತಾಃ|

08016031c ಕ್ಷರಂತಃ ಸ್ವರಸಂ ರಕ್ತಂ ಪ್ರಕೃತಾಶ್ಚಂದನಾ ಇವ||

ಚಂದನವೃಕ್ಷವು ಕತ್ತರಿಸಿದಾಗ ಕೆಂಪುಬಣ್ಣದ ರಸವನ್ನು ಸುರಿಸುವಂತೆ ಅನ್ಯೋನ್ಯರಿಂದ ಕಡಿಯಲ್ಪಟ್ಟವರು ರಕ್ತವನ್ನು ಸುರಿಸುತ್ತಾ ಕೆಳಗುರುಳುತ್ತಿದ್ದರು.

08016032a ರಥೈ ರಥಾ ವಿನಿಹತಾ ಹಸ್ತಿನಶ್ಚಾಪಿ ಹಸ್ತಿಭಿಃ|

08016032c ನರಾ ನರವರೈಃ ಪೇತುರಶ್ವಾಶ್ಚಾಶ್ವೈಃ ಸಹಸ್ರಶಃ||

ಸಹಸ್ರಾರು ಸಂಖ್ಯೆಗಳಲ್ಲಿ ರಥಗಳು ರಥಗಳಿಂದಲೂ, ಆನೆಗಳು ಆನೆಗಳಿಂದಲೂ, ಮನುಷ್ಯರು ನರಶ್ರೇಷ್ಠರಿಂದಲೂ, ಕುದುರೆಗಳು ಕುದುರೆಗಳೂ ಹತಗೊಂಡು ಕೆಳಗುರುಳಿತ್ತಿದ್ದವು.

08016033a ಧ್ವಜಾಃ ಶಿರಾಂಸಿ ಚ್ಚತ್ರಾಣಿ ದ್ವಿಪಹಸ್ತಾ ನೃಣಾಂ ಭುಜಾಃ|

08016033c ಕ್ಷುರೈರ್ಭಲ್ಲಾರ್ಧಚಂದ್ರೈಶ್ಚ ಚಿನ್ನಾಃ ಶಸ್ತ್ರಾಣಿ ತತ್ಯಜುಃ||

ಧ್ವಜಗಳು, ಶಿರಸ್ಸುಗಳು, ಛತ್ರಗಳು, ಆನೆಯ ಸೊಂಡಿಲುಗಳು, ಮನುಷ್ಯರ ಭುಜಗಳು, ಕ್ಷುರ-ಭಲ್ಲ-ಅರ್ಧಚಂದ್ರ ಶಸ್ತ್ರಗಳು ತುಂಡಾಗಿ ಬಿದ್ದಿದ್ದವು.

08016034a ನರಾಂಶ್ಚ ನಾಗಾಂಶ್ಚ ರಥಾನ್ ಹಯಾನ್ಮಮೃದುರಾಹವೇ|

08016034c ಅಶ್ವಾರೋಹೈರ್ಹತಾಃ ಶೂರಾಶ್ಚಿನ್ನಹಸ್ತಾಶ್ಚ ದಂತಿನಃ||

ಯುದ್ಧದಲ್ಲಿ ನರರು, ಆನೆಗಳು, ರಥಗಳು, ಕುದುರೆಗಳು ಸದೆಬಡಿಯುತ್ತಿದ್ದವು. ಸಹಸ್ರಾರು ಆನೆಗಳು ಶೂರರು ಅಶ್ವಾರೋಹಿಗಳಿಂದ ತಮ್ಮ ಕೈ-ಸೊಂಡಿಲುಗಳನ್ನು ಕಳೆದುಕೊಂಡರು.

08016035a ಸಪತಾಕಾ ಧ್ವಜಾಃ ಪೇತುರ್ವಿಶೀರ್ಣಾ ಇವ ಪರ್ವತಾಃ|

08016035c ಪತ್ತಿಭಿಶ್ಚ ಸಮಾಪ್ಲುತ್ಯ ದ್ವಿರದಾಃ ಸ್ಯಂದನಾಸ್ತಥಾ||

ಸೀಳಿಹೋದ ಪರ್ವತಗಳಂತೆ ಪತಾಕೆ-ಧ್ವಜಗಳ ಸಹಿತವಾಗಿ ಪದಾತಿಗಳು, ಅನೆಗಳು ಮತ್ತು ರಥಗಳು ಕೆಳಗುರುಳಿದವು.

08016036a ಪ್ರಹತಾ ಹನ್ಯಮಾನಾಶ್ಚ ಪತಿತಾಶ್ಚೈವ ಸರ್ವಶಃ|

08016036c ಅಶ್ವಾರೋಹಾಃ ಸಮಾಸಾದ್ಯ ತ್ವರಿತಾಃ ಪತ್ತಿಭಿರ್ಹತಾಃ|

08016036e ಸಾದಿಭಿಃ ಪತ್ತಿಸಂಘಾಶ್ಚ ನಿಹತಾ ಯುಧಿ ಶೇರತೇ||

ಪ್ರಹರಿಸಿ ಸಂಹರಿಸುವವರು ಕೂಡ ಎಲ್ಲ ಕಡೆ ಬೀಳುತ್ತಿದ್ದರು. ಅಶ್ವಾರೋಹಿಗಳು ತ್ವರೆಮಾಡಿ ಪದಾತಿಗಳನ್ನು ಸಂಹರಿಸುತ್ತಿದ್ದರು. ಪದಾತಿ ಸಂಘಗಳೂ ಅಶ್ವಾರೋಹಿಗಳನ್ನು ಕೊಂದು ರಣದಲ್ಲಿ ಮಲಗಿಸುತ್ತಿದ್ದರು.

08016037a ಮೃದಿತಾನೀವ ಪದ್ಮಾನಿ ಪ್ರಮ್ಲಾನಾ ಇವ ಚ ಸ್ರಜಃ|

08016037c ಹತಾನಾಂ ವದನಾನ್ಯಾಸನ್ಗಾತ್ರಾಣಿ ಚ ಮಹಾಮತೇ||

ಮಹಾಮತೇ! ಹತರಾಗಿ ಕೆಳಗೆ ಬಿದ್ದಿರುವ ಯೋಧರ ಮುಖಗಳೂ ದೇಹಗಳೂ ಹೊಸಕಿದ ಕಮಲಗಳಂತೆ ಮತ್ತು ಬಾಡಿಹೋದ ಹಾರಗಳಂತೆ ಕಾಣುತ್ತಿದ್ದವು.

08016038a ರೂಪಾಣ್ಯತ್ಯರ್ಥಕಾಂಯಾನಿ ದ್ವಿರದಾಶ್ವನೃಣಾಂ ನೃಪ|

08016038c ಸಮುನ್ನಾನೀವ ವಸ್ತ್ರಾಣಿ ಪ್ರಾಪುರ್ದುರ್ದರ್ಶತಾಂ ಪರಂ||

ನೃಪ! ಆನೆ, ಕುದುರೆ ಮತ್ತು ಮನುಷ್ಯರ ಅತ್ಯಂತ ಸುಂದರ ರೂಪಗಳು ಆ ಸಮಯದಲ್ಲಿ ಕೆಸರಿನಲ್ಲಿ ಬಿದ್ದ ವಸ್ತ್ರಗಳಂತೆ ಕಣ್ಣಿಂದ ನೋಡಲಾರದಷ್ಟು ವಿಕಾರವಾಗಿದ್ದವು.”

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ಷೋಡಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ಹದಿನಾರನೇ ಅಧ್ಯಾಯವು.

Comments are closed.