Karna Parva: Chapter 7

ಕರ್ಣ ಪರ್ವ

ಹದಿನಾರನೇ ದಿನ ವ್ಯೂಹ ನಿರ್ಮಾಣ

ಸೇನೆಯನ್ನು ಮಕರ ವ್ಯೂಹದಲ್ಲಿ ರಚಿಸಿ ಕರ್ಣನು ಯುದ್ಧಕ್ಕೆ ಹೊರಟಿದುದು (೧-೨೧). ಯುಧಿಷ್ಠಿರನ ಮಾತಿನಂತೆ ಅರ್ಜುನನು ಪಾಂಡವ ಸೇನೆಯನ್ನು ಅರ್ಧಚಂದ್ರ ವ್ಯೂಹದಲ್ಲಿ ರಚಿಸಿದುದು (೨೨-೩೨). ಯುದ್ಧಾರಂಭ (೩೩-೪೨).

08007001 ಧೃತರಾಷ್ಟ್ರ ಉವಾಚ|

08007001a ಸೇನಾಪತ್ಯಂ ತು ಸಂಪ್ರಾಪ್ಯ ಕರ್ಣೋ ವೈಕರ್ತನಸ್ತದಾ|

08007001c ತಥೋಕ್ತಶ್ಚ ಸ್ವಯಂ ರಾಜ್ಞಾ ಸ್ನಿಗ್ಧಂ ಭ್ರಾತೃಸಮಂ ವಚಃ||

ಧೃತರಾಷ್ಟ್ರನು ಹೇಳಿದನು: “ಸೇನಾಪತ್ಯವನ್ನು ಪಡೆದು ಕರ್ಣ ವೈಕರ್ತನನು ಸ್ವಯಂ ರಾಜನೊಂದಿಗೆ ಸಹೋದರನಂತೆ ಸ್ನೇಹಪೂರ್ಣಕವಾಗಿ ಮಾತನಾಡಿದನು.

08007002a ಯೋಗಮಾಜ್ಞಾಪ್ಯ ಸೇನಾಯಾ ಆದಿತ್ಯೇಽಭ್ಯುದಿತೇ ತದಾ|

08007002c ಅಕರೋತ್ಕಿಂ ಮಹಾಪ್ರಾಜ್ಞಸ್ತನ್ಮಮಾಚಕ್ಷ್ವ ಸಂಜಯ||

ಮಹಾಪ್ರಾಜ್ಞ! ಸಂಜಯ! ಸೂರ್ಯನು ಉದಯಿಸಲು ಸೇನೆಗಳಿಗೆ ಸಜ್ಜಾಗುವಂತೆ ಆಜ್ಞಾಪಿಸಿ ಏನು ಮಾಡಿದನೆನ್ನುವುದನ್ನು ನನಗೆ ಹೇಳು!”

08007003 ಸಂಜಯ ಉವಾಚ|

08007003a ಕರ್ಣಸ್ಯ ಮತಮಾಜ್ಞಾಯ ಪುತ್ರಸ್ತೇ ಭರತರ್ಷಭ|

08007003c ಯೋಗಮಾಜ್ಞಾಪಯಾಮಾಸ ನಾಂದೀತೂರ್ಯಪುರಹ್ಸರಂ||

ಸಂಜಯನು ಹೇಳಿದನು: “ಭರತರ್ಷಭ! ಕರ್ಣನ ಅಭಿಪ್ರಾಯವನ್ನು ತಿಳಿದ ನಿನ್ನ ಮಗನು ಆನಂದದಾಯಕ ಮಂಗಳವಾದ್ಯಗಳೊಂದಿಗೆ ಸೇನೆಗಳಿಗೆ ಪ್ರಸ್ಥಾನಗೊಳ್ಳಲು ಆಜ್ಞಾಪಿಸಿದನು.

08007004a ಮಹತ್ಯಪರರಾತ್ರೇ ತು ತವ ಪುತ್ರಸ್ಯ ಮಾರಿಷ|

08007004c ಯೋಗೋ ಯೋಗೇತಿ ಸಹಸಾ ಪ್ರಾದುರಾಸೀನ್ಮಹಾಸ್ವನಃ||

ಮಾರಿಷ! ಒಮ್ಮೆಲೇ, ಇನ್ನೂ ಕತ್ತಲೆಯಾಗಿರುವಾಗಲೇ ನಿನ್ನ ಮಗನ ಸೇನೆಯಲ್ಲಿ “ಯುದ್ಧಕ್ಕೆ ಸಿದ್ಧರಾಗಿರಿ! ಮುಂದೆ ನಡೆಯಿರಿ!” ಇವೇ ಮುಂತಾದ ಮಹಾ ನಿನಾದಗಳು ಕೇಳತೊಡಗಿದವು.

08007005a ನಾಗಾನಾಂ ಕಲ್ಪಮಾನಾನಾಂ ರಥಾನಾಂ ಚ ವರೂಥಿನಾಂ|

08007005c ಸಂನಹ್ಯತಾಂ ಪದಾತೀನಾಂ ವಾಜಿನಾಂ ಚ ವಿಶಾಂ ಪತೇ||

08007006a ಕ್ರೋಶತಾಂ ಚಾಪಿ ಯೋಧಾನಾಂ ತ್ವರಿತಾನಾಂ ಪರಸ್ಪರಂ|

08007006c ಬಭೂವ ತುಮುಲಃ ಶಬ್ದೋ ದಿವಸ್ಪೃಕ್ಸುಮಹಾಂಸ್ತದಾ||

ವಿಶಾಂಪತೇ! ಯುದ್ಧಕ್ಕೆ ಸಜ್ಜಾಗುತ್ತಿದ್ದ ದೊಡ್ಡ ದೊಡ್ಡ ಸಲಗಗಳ, ಆವರಣಯುಕ್ತ ರಥಗಳ, ಕೆನೆಯುತ್ತಿದ್ದ ಕುದುರೆಗಳ, ಮತ್ತು ಪರಸ್ಪರರನ್ನು ಅವಸರಪಡಿಸುತ್ತಿದ್ದ ಪದಾತಿ ಯೋಧರ ಕೂಗುಗಳ ತುಮುಲ ಶಬ್ಧವು ಜೋರಾಗಿ ಆಕಾಶವನ್ನೂ ವ್ಯಾಪಿಸಿತು.

08007007a ತತಃ ಶ್ವೇತಪತಾಕೇನ ಬಾಲಾರ್ಕಾಕಾರವಾಜಿನಾ|

08007007c ಹೇಮಪೃಷ್ಠೇನ ಧನುಷಾ ಹಸ್ತಿಕಕ್ಷ್ಯೇಣ ಕೇತುನಾ||

08007008a ತೂಣೇನ ಶರಪೂರ್ಣೇನ ಸಾಂಗದೇನ ವರೂಥಿನಾ|

08007008c ಶತಘ್ನೀಕಿಂಕಿಣೀಶಕ್ತಿಶೂಲತೋಮರಧಾರಿಣಾ||

08007009a ಕಾರ್ಮುಕೇಣೋಪಪನ್ನೇನ ವಿಮಲಾದಿತ್ಯವರ್ಚಸಾ|

08007009c ರಥೇನಾತಿಪತಾಕೇನ ಸೂತಪುತ್ರೋ ವ್ಯದೃಶ್ಯತ||

ಆಗ ಶ್ವೇತಪತಾಕೆಯುಳ್ಳ, ಬಾಲಾರ್ಕನ ಬಣ್ಣದ ಕುದುರೆಗಳುಳ್ಳ, ಹೇಮಪೃಷ್ಠದ ಧನುಸ್ಸುಳ್ಳ, ಆನೆಯ ಹಗ್ಗದ ಚಿಹ್ನೆಯ ಕೇತುವುಳ್ಳ, ಬಾಣಗಳಿಂದ ತುಂಬಿಕೊಂಡಿದ್ದ ಭತ್ತಳಿಕೆಗಳು ಮತ್ತು ಅಂಗದಗಳುಳ್ಳ, ಶತಘ್ನೀ, ಕಿಂಕಿಣೀ, ಶೂಲ ಮತ್ತು ತೋರಣಗಳನ್ನು ಹೊರಿಸಿದ್ದ, ವಿಮಲ ಆದಿತ್ಯವರ್ಣದ ಕಾರ್ಮುಕವನ್ನು ಹೊತ್ತಿದ್ದ, ಎತ್ತರದಲ್ಲಿ ಹಾರಾಡುತ್ತಿದ್ದ ಪತಾಕೆಯುಳ್ಳ ರಥದಲ್ಲಿ ಸೂತಪುತ್ರನು ಕಾಣಿಸಿಕೊಂಡನು.

08007010a ಧಮಂತಂ ವಾರಿಜಂ ತಾತ ಹೇಮಜಾಲವಿಭೂಷಿತಂ|

08007010c ವಿಧುನ್ವಾನಂ ಮಹಚ್ಚಾಪಂ ಕಾರ್ತಸ್ವರವಿಭೂಷಿತಂ||

08007011a ದೃಷ್ಟ್ವಾ ಕರ್ಣಂ ಮಹೇಷ್ವಾಸಂ ರಥಸ್ಥಂ ರಥಿನಾಂ ವರಂ|

08007011c ಭಾನುಮಂತಮಿವೋದ್ಯಂತಂ ತಮೋ ಘ್ನಂತಂ ಸಹಸ್ರಶಃ||

08007012a ನ ಭೀಷ್ಮವ್ಯಸನಂ ಕೇ ಚಿನ್ನಾಪಿ ದ್ರೋಣಸ್ಯ ಮಾರಿಷ|

08007012c ನಾನ್ಯೇಷಾಂ ಪುರುಷವ್ಯಾಘ್ರ ಮೇನಿರೇ ತತ್ರ ಕೌರವಾಃ||

ಅಯ್ಯಾ! ಮಾರಿಷ! ಪುರುಷವ್ಯಾಘ್ರ! ಶಂಖವನ್ನು ಊದುತ್ತಾ ಹೇಮಜಾಲಗಳಿಂದ ವಿಭೂಷಿತ ರಥದಲ್ಲಿ ನಿಂತು, ಬಂಗಾರದಿಂದ ವಿಭೂಷಿತ ಮಹಾ ಚಾಪವನ್ನು ಟೇಂಕರಿಸುತ್ತಿದ್ದ, ಕತ್ತಲೆಯನ್ನು ಕಳೆಯಲು ಉದಯಿಸುತ್ತಿದ್ದ ಸೂರ್ಯನಂತಿದ್ದ ರಥಿಗಳಲ್ಲಿ ಶ್ರೇಷ್ಠ ಮಹೇಷ್ವಾಸ ಕರ್ಣನನ್ನು ನೋಡಿ ಅಲ್ಲಿದ್ದ ಸಹಸ್ರಾರು ಕೌರವರಲ್ಲಿ ಯಾರೂ ಭೀಷ್ಮ ಮತ್ತು ದ್ರೋಣ ಮತ್ತು ಇತರರ ಮರಣದ ಕುರಿತು ದುಃಖಿಸಲಿಲ್ಲ.

08007013a ತತಸ್ತು ತ್ವರಯನ್ಯೋಧಾಂ ಶಂಖಶಬ್ದೇನ ಮಾರಿಷ|

08007013c ಕರ್ಣೋ ನಿಷ್ಕಾಸಯಾಮಾಸ ಕೌರವಾಣಾಂ ವರೂಥಿನೀಂ||

ಮಾರಿಷ! ಶಂಖದ ಶಬ್ಧದೊಂದಿಗೆ ಯೋಧರನ್ನು ಅವಸರಪಡಿಸುತ್ತಾ ಕರ್ಣನು ಕೌರವರ ಸೇನೆಗಳನ್ನು ಹೊರಡಿಸಿದನು.

08007014a ವ್ಯೂಹಂ ವ್ಯೂಹ್ಯ ಮಹೇಷ್ವಾಸೋ ಮಾಕರಂ ಶತ್ರುತಾಪನಃ|

08007014c ಪ್ರತ್ಯುದ್ಯಯೌ ತದಾ ಕರ್ಣಃ ಪಾಂಡವಾನ್ವಿಜಿಗೀಷಯಾ||

ಆಗ ಪಾಂಡವರನ್ನು ಜಯಿಸಲು ಬಯಸಿದ ಶತ್ರುತಾಪನ ಮಹೇಷ್ವಾಸ ಕರ್ಣನು ಮಕರ ವ್ಯೂಹವನ್ನು ರಚಿಸಿ ಮುಂದುವರೆದನು.

08007015a ಮಕರಸ್ಯ ತು ತುಂಡೇ ವೈ ಕರ್ಣೋ ರಾಜನ್ವ್ಯವಸ್ಥಿತಃ|

08007015c ನೇತ್ರಾಭ್ಯಾಂ ಶಕುನಿಃ ಶೂರ ಉಲೂಕಶ್ಚ ಮಹಾರಥಃ||

ರಾಜನ್! ಮಕರದ ಬಾಯಿಯಲ್ಲಿ ಕರ್ಣನಿದ್ದನು. ನೇತ್ರಗಳೆರಡರಲ್ಲಿ ಶೂರ ಶಕುನಿ ಮತ್ತು ಮಹಾರಥ ಉಲೂಕರಿದ್ದರು.

08007016a ದ್ರೋಣಪುತ್ರಸ್ತು ಶಿರಸಿ ಗ್ರೀವಾಯಾಂ ಸರ್ವಸೋದರಾಃ|

08007016c ಮಧ್ಯೇ ದುರ್ಯೋಧನೋ ರಾಜಾ ಬಲೇನ ಮಹತಾ ವೃತಃ||

ಅದರ ಶಿರಸ್ಸಿನಲ್ಲಿ ದ್ರೋಣಪುತ್ರನೂ, ಕುತ್ತಿಗೆಯಲ್ಲಿ ಎಲ್ಲ ಸೋದರರೂ, ಮಧ್ಯದಲ್ಲಿ ಮಹಾ ಬಲದಿಂದ ಆವೃತನಾದ ರಾಜಾ ದುರ್ಯೋಧನನೂ ಇದ್ದರು.

08007017a ವಾಮೇ ಪಾದೇ ತು ರಾಜೇಂದ್ರ ಕೃತವರ್ಮಾ ವ್ಯವಸ್ಥಿತಃ|

08007017c ನಾರಾಯಣಬಲೈರ್ಯುಕ್ತೋ ಗೋಪಾಲೈರ್ಯುದ್ಧದುರ್ಮದಃ||

ರಾಜೇಂದ್ರ! ಅದರ ಎಡಭಾಗದಲ್ಲಿ ನಾರಾಯಣರ ಮತ್ತು ಗೋಪಾಲರ ಸೇನೆಗಳೊಂದಿಗೆ ಯುದ್ಧದುರ್ಮದ ಕೃತವರ್ಮನು ವ್ಯವಸ್ಥಿತನಾಗಿದ್ದನು.

08007018a ಪಾದೇ ತು ದಕ್ಷಿಣೇ ರಾಜನ್ಗೌತಮಃ ಸತ್ಯವಿಕ್ರಮಃ|

08007018c ತ್ರಿಗರ್ತೈಶ್ಚ ಮಹೇಷ್ವಾಸೈರ್ದಾಕ್ಷಿಣಾತ್ಯೈಶ್ಚ ಸಂವೃತಃ||

ರಾಜನ್! ಅದರ ಬಲಕಾಲಿನಲ್ಲಿ ಸತ್ಯವಿಕ್ರಮ ಗೌತಮನು ಮಹೇಷ್ವಾಸ ತ್ರಿಗರ್ತರು ಮತ್ತು ದಕ್ಷಿಣಾತ್ಯರಿಂದ ಸಂವೃತನಾಗಿ ನಿಂತಿದ್ದನು.

08007019a ಅನುಪಾದಸ್ತು ಯೋ ವಾಮಸ್ತತ್ರ ಶಲ್ಯೋ ವ್ಯವಸ್ಥಿತಃ|

08007019c ಮಹತ್ಯಾ ಸೇನಯಾ ಸಾರ್ಧಂ ಮದ್ರದೇಶಸಮುತ್ಥಯಾ||

ಎಡ ಹಿಮ್ಮಡಿಯ ಭಾಗದಲ್ಲಿ ಮದ್ರದೇಶದ ವಿಶಾಲ ಸೇನೆಯೊಂದಿಗೆ ಶಲ್ಯನು ವ್ಯವಸ್ಥಿತನಾಗಿದ್ದನು.

08007020a ದಕ್ಷಿಣೇ ತು ಮಹಾರಾಜ ಸುಷೇಣಃ ಸತ್ಯಸಂಗರಃ|

08007020c ವೃತೋ ರಥಸಹಸ್ರೈಶ್ಚ ದಂತಿನಾಂ ಚ ಶತೈಸ್ತಥಾ||

ಮಹಾರಾಜ! ಬಲಹಿಮ್ಮಡಿಯ ಭಾಗದಲ್ಲಿ ಸತ್ಯಸಂಗರ ಸುಷೇಣನು ಸಹಸ್ರಾರು ರಥಗಳಿಂದ ಮತ್ತು ನೂರಾರು ಆನೆಗಳಿಂದ ಪರಿವೃತನಾಗಿ ನಿಂತಿದ್ದನು.

08007021a ಪುಚ್ಚೇ ಆಸ್ತಾಂ ಮಹಾವೀರೌ ಭ್ರಾತರೌ ಪಾರ್ಥಿವೌ ತದಾ|

08007021c ಚಿತ್ರಸೇನಶ್ಚ ಚಿತ್ರಶ್ಚ ಮಹತ್ಯಾ ಸೇನಯಾ ವೃತೌ||

ಅದರ ಪುಚ್ಚಭಾಗದಲ್ಲಿ ಮಹಾವೀರ ಸಹೋದರ ರಾಜರು ಚಿತ್ರಸೇನ ಮತ್ತು ಚಿತ್ರರು ಮಹಾ ಸೇನೆಗಳಿಂದ ಆವೃತರಾಗಿ ನಿಂತಿದ್ದರು.

08007022a ತತಃ ಪ್ರಯಾತೇ ರಾಜೇಂದ್ರ ಕರ್ಣೇ ನರವರೋತ್ತಮೇ|

08007022c ಧನಂಜಯಂ ಅಭಿಪ್ರೇಕ್ಷ್ಯ ಧರ್ಮರಾಜೋಽಬ್ರವೀದಿದಂ||

ರಾಜೇಂದ್ರ! ಹಾಗೆ ನರವರೋತ್ತಮ ಕರ್ಣನು ಹೊರಡುತ್ತಿರಲು ಧರ್ಮರಾಜನು ಧನಂಜಯನನ್ನು ನೋಡಿ ಹೀಗೆ ಹೇಳಿದನು:

08007023a ಪಶ್ಯ ಪಾರ್ಥ ಮಹಾಸೇನಾಂ ಧಾರ್ತರಾಷ್ಟ್ರಸ್ಯ ಸಂಯುಗೇ|

08007023c ಕರ್ಣೇನ ನಿರ್ಮಿತಾಂ ವೀರ ಗುಪ್ತಾಂ ವೀರೈರ್ಮಹಾರಥೈಃ||

“ಪಾರ್ಥ! ವೀರ! ಕರ್ಣನಿಂದ ನಿರ್ಮಿತವಾದ ಮತ್ತು ಮಹಾರಥ ವೀರರಿಂದ ರಕ್ಷಿಸಲ್ಪಟ್ಟಿರುವ ಧಾರ್ತರಾಷ್ಟ್ರರ ಮಹಾಸೇನೆಯನ್ನು ರಣದಲ್ಲಿ ನೋಡು!

08007024a ಹತವೀರತಮಾ ಹ್ಯೇಷಾ ಧಾರ್ತರಾಷ್ಟ್ರೀ ಮಹಾಚಮೂಃ|

08007024c ಫಲ್ಗುಶೇಷಾ ಮಹಾಬಾಹೋ ತೃಣೈಸ್ತುಲ್ಯಾ ಮತಾ ಮಮ||

ಮಹಾಬಾಹೋ! ಅತಿವೀರರು ಹತರಾಗಿ ಉಳಿದಿರುವ ಧಾರ್ತರಾಷ್ಟ್ರರ ಈ ಮಹಾಸೇನೆಯು ನಿನಗೆ ತೃಣಸಮಾನವೆಂದು ನನಗನ್ನಿಸುತ್ತಿದೆ.

08007025a ಏಕೋ ಹ್ಯತ್ರ ಮಹೇಷ್ವಾಸಃ ಸೂತಪುತ್ರೋ ವ್ಯವಸ್ಥಿತಃ|

08007025c ಸದೇವಾಸುರಗಂದರ್ವೈಃ ಸಕಿಂನರಮಹೋರಗೈಃ|

08007025e ಚರಾಚರೈಸ್ತ್ರಿಭಿರ್ಲೋಕೈರ್ಯೋಽಜಯ್ಯೋ ರಥಿನಾಂ ವರಃ||

ಅವರಲ್ಲಿ ದೇವಾಸುರಗಂಧರ್ವರಿಗೂ, ಕಿನ್ನರಮಹೋರಗಗಳಿಂದಲೂ, ಮೂರುಲೋಕಗಳ ಚರಾಚರಗಳಿಂದಲೂ ಅಜಯ್ಯನಾಗಿರುವ ಮಹೇಷ್ವಾಸ, ರಥಿಗಳಲ್ಲಿ ಶ್ರೇಷ್ಠ, ಸೂತಪುತ್ರನು ವಿರಾಜಿಸುತ್ತಿದ್ದಾನೆ.

08007026a ತಂ ಹತ್ವಾದ್ಯ ಮಹಾಬಾಹೋ ವಿಜಯಸ್ತವ ಫಲ್ಗುನ|

08007026c ಉದ್ಧೃತಶ್ಚ ಭವೇಚ್ಚಲ್ಯೋ ಮಮ ದ್ವಾದಶವಾರ್ಷಿಕಃ|

08007026e ಏವಂ ಜ್ಞಾತ್ವಾ ಮಹಾಬಾಹೋ ವ್ಯೂಹಂ ವ್ಯೂಹ ಯಥೇಚ್ಚಸಿ||

ಮಹಾಬಾಹೋ! ಫಲ್ಗುನ! ಇಂದು ಅವನನ್ನು ಸಂಹರಿಸಿದರೆ ವಿಜಯವು ನಿನ್ನದಾಗುವುದು! ಮಹಾಬಾಹೋ! ಹನ್ನೆರಡು ವರ್ಷಗಳಿಂದಲೂ ನನ್ನಲ್ಲಿ ನಾಟಿರುವ ಈ ಮುಳ್ಳನ್ನು ನೀನು ಇಂದು ಕೀಳಬೇಕು. ಮಹಾಬಾಹೋ! ಇದನ್ನು ತಿಳಿದು ನಿನಗಿಷ್ಟವಾದ ರೀತಿಯಲ್ಲಿ ಸೇನೆಗಳ ವ್ಯೂಹವನ್ನು ರಚಿಸು!”

08007027a ಭ್ರಾತುಸ್ತದ್ವಚನಂ ಶ್ರುತ್ವಾ ಪಾಂಡವಃ ಶ್ವೇತವಾಹನಃ|

08007027c ಅರ್ಧಚಂದ್ರೇಣ ವ್ಯೂಹೇನ ಪ್ರತ್ಯವ್ಯೂಹತ ತಾಂ ಚಮೂಂ||

ಅಣ್ಣನ ಆ ಮಾತನ್ನು ಕೇಳಿ ಶ್ವೇತವಾಹನ ಪಾಂಡವನು ತನ್ನ ಸೇನೆಯನ್ನು ಕೌರವರಿಗೆ ಪ್ರತಿವ್ಯೂಹವಾಗಿ ಅರ್ಧಚಂದ್ರಾಕಾರದ ವ್ಯೂಹದಲ್ಲಿ ರಚಿಸಿದನು.

08007028a ವಾಮಪಾರ್ಶ್ವೇಽಭವದ್ರಾಜನ್ಭೀಮಸೇನೋ ವ್ಯವಸ್ಥಿತಃ|

08007028c ದಕ್ಷಿಣೇ ಚ ಮಹೇಷ್ವಾಸೋ ಧೃಷ್ಟದ್ಯುಮ್ನೋ ಮಹಾಬಲಃ||

ರಾಜನ್! ಅದರ ಎಡಭಾಗದಲ್ಲಿ ಭೀಮಸೇನನು ವ್ಯವಸ್ಥಿತನಾಗಿದ್ದನು. ಬಲಭಾಗದಲ್ಲಿ ಮಹಾಬಲ ಮಹೇಷ್ವಾಸ ಧೃಷ್ಟದ್ಯುಮ್ನನಿದ್ದನು.

08007029a ಮಧ್ಯೇ ವ್ಯೂಹಸ್ಯ ಸಾಕ್ಷಾತ್ತು ಪಾಂಡವಃ ಕೃಷ್ಣಸಾರಥಿಃ|

08007029c ನಕುಲಃ ಸಹದೇವಶ್ಚ ಧರ್ಮರಾಜಶ್ಚ ಪೃಷ್ಠತಃ||

ವ್ಯೂಹದ ಮಧ್ಯದಲ್ಲಿ ಕೃಷ್ಣಸಾರಥಿ ಸಾಕ್ಷಾತ್ ಪಾಂಡವನೂ, ಹಿಂದೆ ನಕುಲ ಸಹದೇವರೂ ಧರ್ಮರಾಜನೂ ಇದ್ದರು.

08007030a ಚಕ್ರರಕ್ಷೌ ತು ಪಾಂಚಾಲ್ಯೌ ಯುಧಾಮನ್ಯೂತ್ತಮೌಜಸೌ|

08007030c ನಾರ್ಜುನಂ ಜಹತುರ್ಯುದ್ಧೇ ಪಾಲ್ಯಮಾನೌ ಕಿರೀಟಿನಾ||

ಕಿರೀಟಿಯಿಂದ ಪಾಲಿಸಲ್ಪಡುತ್ತಿದ್ದ ಅರ್ಜುನನ ಚಕ್ರರಕ್ಷಕರಾಗಿದ್ದ ಪಾಂಚಾಲರಾಜಕುಮಾರ ಯುಧಾಮನ್ಯು ಮತ್ತು ಉತ್ತಮೌಜಸರು ಯುದ್ಧದಲ್ಲಿ ಅಜೇಯರಾಗಿದ್ದರು.

08007031a ಶೇಷಾ ನೃಪತಯೋ ವೀರಾಃ ಸ್ಥಿತಾ ವ್ಯೂಹಸ್ಯ ದಂಶಿತಾಃ|

08007031c ಯಥಾಭಾವಂ ಯಥೋತ್ಸಾಹಂ ಯಥಾಸತ್ತ್ವಂ ಚ ಭಾರತ||

ಭಾರತ! ಉಳಿದ ವೀರ ನೃಪತಿಯರು ಕವಚಧಾರಿಗಳಾಗಿ ವ್ಯೂಹದಲ್ಲಿ ತಮಗನಿಸಿದಂತೆ, ಉತ್ಸಾಹವಿದ್ದಂತೆ ಮತ್ತು ಸತ್ತ್ವವಿದ್ದಂತೆ ನಿಂತಿದ್ದರು.

08007032a ಏವಮೇತನ್ಮಹಾವ್ಯೂಹಂ ವ್ಯೂಹ್ಯ ಭಾರತ ಪಾಂಡವಾಃ|

08007032c ತಾವಕಾಶ್ಚ ಮಹೇಷ್ವಾಸಾ ಯುದ್ಧಾಯೈವ ಮನೋ ದಧುಃ||

ಭಾರತ! ಹೀಗೆ ಮಹಾವ್ಯೂಹವನ್ನು ರಚಿಸಿ ಪಾಂಡವರೂ ಮಹೇಷ್ವಾಸ ನಿನ್ನವರೂ ಯುದ್ಧದಲ್ಲಿಯೇ ಮನಸ್ಸನ್ನಿಟ್ಟರು.

08007033a ದೃಷ್ಟ್ವಾ ವ್ಯೂಢಾಂ ತವ ಚಮೂಂ ಸೂತಪುತ್ರೇಣ ಸಂಯುಗೇ|

08007033c ನಿಹತಾನ್ಪಾಂಡವಾನ್ಮೇನೇ ತವ ಪುತ್ರಃ ಸಹಾನ್ವಯಃ||

ಸಂಯುಗದಲ್ಲಿ ಸೂತಪುತ್ರನು ರಚಿಸಿದ್ದ ನಿನ್ನ ಸೇನೆಯ ವ್ಯೂಹವನ್ನು ನೋಡಿ ನಿನ್ನ ಪುತ್ರನು ಅನುಯಾಯಿಗಳೊಂದಿಗೆ ಪಾಂಡವರು ಹತರಾದರೆಂದೇ ಭಾವಿಸಿದನು.

08007034a ತಥೈವ ಪಾಂಡವೀಂ ಸೇನಾಂ ವ್ಯೂಢಾಂ ದೃಷ್ಟ್ವಾ ಯುಧಿಷ್ಠಿರಃ|

08007034c ಧಾರ್ತರಾಷ್ಟ್ರಾನ್ ಹತಾನ್ಮೇನೇಸಕರ್ಣಾನ್ವೈ ಜನಾಧಿಪ||

ಜನಾಧಿಪ! ಹಾಗೆಯೇ ಪಾಂಡವೀ ಸೇನೆಯ ವ್ಯೂಹವನ್ನು ನೋಡಿ ಯುಧಿಷ್ಠಿರನು ಕರ್ಣನೊಂದಿಗೆ ಧಾರ್ತರಾಷ್ಟ್ರರು ಹತರಾದರೆಂದೇ ಭಾವಿಸಿದನು.

08007035a ತತಃ ಶಂಖಾಶ್ಚ ಭೇರ್ಯಶ್ಚ ಪಣವಾನಕಗೋಮುಖಾಃ|

08007035c ಸಹಸೈವಾಭ್ಯಹನ್ಯಂತ ಸಶಬ್ಧಾಶ್ಚ ಸಮಂತತಃ||

ಆಗ ಒಮ್ಮೆಲೇ ಶಂಖ, ಭೇರಿ, ಪಣವ, ಅನಕ, ಗೋಮುಖಗಳನ್ನು ಜೋರಾಗಿ ಮೊಳಗಿಸಲು ಎಲ್ಲಕಡೆ ಶಬ್ಧವುಂಟಾಯಿತು.

08007036a ಸೇನಯೋರುಭಯೋ ರಾಜನ್ಪ್ರಾವಾದ್ಯಂತ ಮಹಾಸ್ವನಾಃ|

08007036c ಸಿಂಹನಾದಶ್ಚ ಸಂಜಜ್ಞೇ ಶೂರಾಣಾಂ ಜಯಗೃದ್ಧಿನಾಂ||

ರಾಜನ್! ಎರಡೂ ಸೇನೆಗಳಲ್ಲಿ ಜಯವನ್ನು ಬಯಸಿದ್ದ ಶೂರರ ಸಿಂಹನಾದಗಳ ಮಹಾಗರ್ಜನೆಯು ಕೇಳಿಬಂದಿತು.

08007037a ಹಯಹೇಷಿತಶಬ್ದಾಶ್ಚ ವಾರಣಾನಾಂ ಚ ಬೃಂಹಿತಂ|

08007037c ರಥನೇಮಿಸ್ವನಾಶ್ಚೋಗ್ರಾಃ ಸಂಬಭೂವುರ್ಜನಾಧಿಪ||

ಕುದುರೆಗಳ ಹೇಂಕಾರಗಳೂ, ಆನೆಗಳ ಘೀಂಕಾರವೂ, ರಥಗಾಲಿಗಳ ಉಗ್ರ ಶಬ್ಧಗಳೂ ಉದ್ಭವಿಸಿದವು.

08007038a ನ ದ್ರೋಣವ್ಯಸನಂ ಕಶ್ಚಿಜ್ಜಾನೀತೇ ಭರತರ್ಷಭ|

08007038c ದೃಷ್ಟ್ವಾ ಕರ್ಣಂ ಮಹೇಷ್ವಾಸಂ ಮುಖೇ ವ್ಯೂಹಸ್ಯ ದಂಶಿತಂ||

ಭರತರ್ಷಭ! ವ್ಯೂಹದ ಮುಖದಲ್ಲಿ ಕವಚಧಾರಿಯಾಗಿದ್ದ ಮಹೇಷ್ವಾಸ ಕರ್ಣನನ್ನು ನೋಡಿ ದ್ರೋಣನನ್ನು ಕಳೆದುಕೊಂಡಿದುದರ ವ್ಯಸನವು ಯಾರಿಗೂ ಇಲ್ಲದಂತಾಗಿ ತೋರುತ್ತಿತ್ತು.

08007039a ಉಭೇ ಸೇನೇ ಮಹಾಸತ್ತ್ವೇ ಪ್ರಹೃಷ್ಟನರಕುಂಜರೇ|

08007039c ಯೋದ್ಧುಕಾಮೇ ಸ್ಥಿತೇ ರಾಜನ್ ಹಂತುಮನ್ಯೋನ್ಯಮಂಜಸಾ||

ರಾಜನ್! ಎರಡೂ ಸೇನೆಗಳಲ್ಲಿ ಯುದ್ಧಮಾಡಲು ಬಯಸಿದ್ದ ಅನ್ಯೋನ್ಯರನ್ನು ಸಂಹರಿಸುವ ಛಲವುಳ್ಳ ಮಹಾಸತ್ತ್ವಯುತ ಪ್ರಹೃಷ್ಟ ನರ-ಕುಂಜರಗಳಿದ್ದವು.

08007040a ತತ್ರ ಯತ್ತೌ ಸುಸಂರಬ್ಧೌ ದೃಷ್ಟ್ವಾನ್ಯೋನ್ಯಂ ವ್ಯವಸ್ಥಿತೌ|

08007040c ಅನೀಕಮಧ್ಯೇ ರಾಜೇಂದ್ರ ರೇಜತುಃ ಕರ್ಣಪಾಂಡವೌ||

ರಾಜೇಂದ್ರ! ಹಾಗೆ ಸಂರಬ್ಧರಾಗಿ ಪ್ರಯತ್ನಪಟ್ಟು ಅನ್ಯೋನ್ಯರನ್ನು ನೋಡುತ್ತಾ ಸೇನೆಗಳ ಮಧ್ಯದಲ್ಲಿ ಕರ್ಣ-ಪಾಂಡವರು ರಾರಾಜಿಸುತ್ತಿದ್ದರು.

08007041a ನೃತ್ಯಮಾನೇ ತು ತೇ ಸೇನೇ ಸಮೇಯಾತಾಂ ಪರಸ್ಪರಂ|

08007041c ತಯೋಃ ಪಕ್ಷೈಃ ಪ್ರಪಕ್ಷೈಶ್ಚ ನಿರ್ಜಗ್ಮುರ್ವೈ ಯುಯುತ್ಸವಃ||

ಯುದ್ಧಮಾಡುವ ಉತ್ಸಾಹದಿಂದ ನೃತ್ಯಮಾಡುತ್ತಿರುವವೋ ಎನ್ನುವಂತೆ ಪರಸ್ಪರರ ಪಕ್ಷ ಪ್ರಪಕ್ಷಗಳಿಗೆ ತಾಗುತ್ತಾ ಆ ಸೇನೆಗಳೆರಡೂ ಮೇಲೆರಗಿದವು.

08007042a ತತಃ ಪ್ರವವೃತೇ ಯುದ್ಧಂ ನರವಾರಣವಾಜಿನಾಂ|

08007042c ರಥಿನಾಂ ಚ ಮಹಾರಾಜ ಅನ್ಯೋನ್ಯಂ ನಿಘ್ನತಾಂ ದೃಢಂ||

ಮಹಾರಾಜ! ಆಗ ಅನ್ಯೋನ್ಯರನ್ನು ಸಂಹರಿಸುವುದರಲ್ಲಿ ದೃಢರಾಗಿದ್ದ ನಾರ-ವಾರಣ-ವಾಜಿಗಳ ಮತ್ತು ರಥಿಗಳ ಯುದ್ಧವು ಪುನಃ ಪ್ರಾರಂಭವಾಯಿತು.”

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ವ್ಯೂಹನಿರ್ಮಾಣೇ ಸಪ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ವ್ಯೂಹನಿರ್ಮಾಣ ಎನ್ನುವ ಏಳನೇ ಅಧ್ಯಾಯವು.

Comments are closed.