Karna Parva: Chapter 36

ಕರ್ಣ ಪರ್ವ

೩೬

ಯುದ್ಧವರ್ಣನೆ (೧-೪೦).

08036001 ಸಂಜಯ ಉವಾಚ|

08036001a ಕ್ಷತ್ರಿಯಾಸ್ತೇ ಮಹಾರಾಜ ಪರಸ್ಪರವಧೈಷಿಣಃ|

08036001c ಅನ್ಯೋನ್ಯಂ ಸಮರೇ ಜಘ್ನುಃ ಕೃತವೈರಾಃ ಪರಸ್ಪರಂ||

ಸಂಜಯನು ಹೇಳಿದನು: “ಮಹಾರಾಜ! ಪರಸ್ಪರರನ್ನು ವಧಿಸಲು ಬಯಸಿದ ಆ ಕ್ಷತ್ರಿಯರು ಸಮರದಲ್ಲಿ ಪರಸ್ಪರರನ್ನು ದ್ವೇಷಿಸುತ್ತಾ ಅನ್ಯೋನ್ಯರನ್ನು ಸಂಹರಿಸತೊಡಗಿದರು.

08036002a ರಥೌಘಾಶ್ಚ ಹಯೌಘಾಶ್ಚ ನರೌಘಾಶ್ಚ ಸಮಂತತಃ|

08036002c ಗಜೌಘಾಶ್ಚ ಮಹಾರಾಜ ಸಂಸಕ್ತಾಃ ಸ್ಮ ಪರಸ್ಪರಂ||

ಮಹಾರಾಜ! ಎಲ್ಲೆಡೆಯಲ್ಲಿಯೂ ರಥಸಮೂಹಗಳು, ಅಶ್ವಸಮೂಹಗಳು, ಪದಾತಿಸಮೂಹಗಳು ಮತ್ತು ಗಜಸಮೂಹಗಳು ಪರಸ್ಪರರೊಂದಿಗೆ ಕಾದಾಡುತ್ತಿದ್ದವು.

08036003a ಗದಾನಾಂ ಪರಿಘಾಣಾಂ ಚ ಕಣಪಾನಾಂ ಚ ಸರ್ಪತಾಂ|

08036003c ಪ್ರಾಸಾನಾಂ ಭಿಂಡಿಪಾಲಾನಾಂ ಭುಶುಂಡೀನಾಂ ಚ ಸರ್ವಶಃ||

08036004a ಸಂಪಾತಂ ಚಾನ್ವಪಶ್ಯಾಮ ಸಂಗ್ರಾಮೇ ಭೃಶದಾರುಣೇ|

08036004c ಶಲಭಾ ಇವ ಸಂಪೇತುಃ ಸಮಂತಾಚ್ಚರವೃಷ್ಟಯಃ||

ಅತ್ಯಂತ ದಾರುಣವಾಗಿದ್ದ ಆ ಸಂಗ್ರಾಮದಲ್ಲಿ ನಾವು ಗದೆಗಳು, ಪರಿಘಗಳು, ಕಣಪಗಳು, ಪ್ರಾಸ, ಭಿಂಡಿಪಾಲ, ಭುಶುಂಡಿಗಳು ಎಲ್ಲಕಡೆ ಬೀಳುತ್ತಿರುವುದನ್ನು ಕಂಡೆವು. ಮಿಡತೆಗಳೋಪಾದಿಯಲ್ಲಿ ಎಲ್ಲಕಡೆ ಶರವೃಷ್ಟಿಗಳಾಗುತ್ತಿದ್ದವು.

08036005a ನಾಗಾ ನಾಗಾನ್ಸಮಾಸಾದ್ಯ ವ್ಯಧಮಂತ ಪರಸ್ಪರಂ|

08036005c ಹಯಾ ಹಯಾಂಶ್ಚ ಸಮರೇ ರಥಿನೋ ರಥಿನಸ್ತಥಾ|

08036005e ಪತ್ತಯಃ ಪತ್ತಿಸಂಘೈಶ್ಚ ಹಯಸಂಘೈರ್ಹಯಾಸ್ತಥಾ||

ಸಮರದಲ್ಲಿ ಆನೆಗಳು ಆನೆಗಳನ್ನು, ಕುದುರೆಗಳು ಕುದುರೆಗಳನ್ನು, ರಥಿಗಳು ರಥಿಗಳನ್ನು, ಪದಾತಿಗಳು ಪದಾತಿಸಂಘಗಳನ್ನು, ಕುದುರೆಗಳು ಅಶ್ವಸಂಘಗಳನ್ನು ಎದುರಿಸಿ ಪರಸ್ಪರರನ್ನು ವಧಿಸುತ್ತಿದ್ದವು.

08036006a ಪತ್ತಯೋ ರಥಮಾತಂಗಾನ್ರಥಾ ಹಸ್ತ್ಯಶ್ವಮೇವ ಚ|

08036006c ನಾಗಾಶ್ಚ ಸಮರೇ ತ್ರ್ಯಂಗಂ ಮಮೃದುಃ ಶೀಘ್ರಗಾ ನೃಪ||

ನೃಪ! ಸಮರದಲ್ಲಿ ಪದಾತಿಗಳು ಆನೆ-ರಥಗಳನ್ನೂ, ಶೀಘ್ರವಾಗಿ ಚಲಿಸುತ್ತಿದ್ದ ಆನೆಗಳು ಆನೆ-ರಥ-ಕುದುರೆಗಳನ್ನೂ ಮರ್ದನಮಾಡುತ್ತಿದ್ದವು.

08036007a ಪತತಾಂ ತತ್ರ ಶೂರಾಣಾಂ ಕ್ರೋಶತಾಂ ಚ ಪರಸ್ಪರಂ|

08036007c ಘೋರಮಾಯೋಧನಂ ಜಜ್ಞೇ ಪಶೂನಾಂ ವೈಶಸಂ ಯಥಾ||

ಶೂರರು ಬೀಳುತ್ತಿರುವುದರಿಂದ ಮತ್ತು ಪರಸ್ಪರರನ್ನು ಕೂಗಿ ಕರೆಯುವುದರಿಂದ ಆ ರಣಾಂಗಣವು ಪಶುಗಳ ವಧ್ಯಸ್ಥಾನದಂತೆ ಬಹುಘೋರವಾಗಿ ಕಾಣುತ್ತಿತ್ತು.

08036008a ರುಧಿರೇಣ ಸಮಾಸ್ತೀರ್ಣಾ ಭಾತಿ ಭಾರತ ಮೇದಿನೀ|

08036008c ಶಕ್ರಗೋಪಗಣಾಕೀರ್ಣಾ ಪ್ರಾವೃಷೀವ ಯಥಾ ಧರಾ||

ಭಾರತ! ರಕ್ತದಿಂದ ವ್ಯಾಪ್ತವಾಗಿದ್ದ ಆ ರಣಭೂಮಿಯು ವರ್ಷಾಕಾಲದ ಕೆಂಪುಬಣ್ಣದ ಶಕ್ರಗೋಪಗಣಗಳಿಂದ ವ್ಯಾಪ್ತ ಭೂಮಿಯಂತೆ ಹೊಳೆಯುತ್ತಿತ್ತು.

08036009a ಯಥಾ ವಾ ವಾಸಸೀ ಶುಕ್ಲೇ ಮಹಾರಜನರಂಜಿತೇ|

08036009c ಬಿಭೃಯಾದ್ಯುವತಿಃ ಶ್ಯಾಮಾ ತದ್ವದಾಸೀದ್ವಸುಂಧರಾ|

08036009e ಮಾಂಸಶೋಣಿತಚಿತ್ರೇವ ಶಾತಕೌಂಭಮಯೀವ ಚ||

ಶ್ಯಾಮಲವರ್ಣದ ಯುವತಿಯೊಬ್ಬಳು ಕುಂಕುಮದ ಹೂವಿನ ಬಣ್ಣದಿಂದ ರಂಜಿತವಾದ ಬಿಳಿಯ ವಸ್ತ್ರವನ್ನುಟ್ಟಿರುವಂತೆ ರಣರಂಗವು ಪ್ರಕಾಶಿಸುತ್ತಿತ್ತು. ಮಾಂಸ-ರಕ್ತಗಳಿಂದ ಚಿತ್ರಿತವಾದ ಸುವರ್ಣಕುಂಭದಂತೆ ತೋರುತ್ತಿತ್ತು.

08036010a ಛಿನ್ನಾನಾಂ ಚೋತ್ತಮಾಂಗಾನಾಂ ಬಾಹೂನಾಂ ಚೋರುಭಿಃ ಸಹ|

08036010c ಕುಂಡಲಾನಾಂ ಪ್ರವಿದ್ಧಾನಾಂ ಭೂಷಣಾನಾಂ ಚ ಭಾರತ||

08036011a ನಿಷ್ಕಾಣಾಮಧಿಸೂತ್ರಾಣಾಂ ಶರೀರಾಣಾಂ ಚ ಧನ್ವಿನಾಂ|

08036011c ವರ್ಮಣಾಂ ಸಪತಾಕಾನಾಂ ಸಂಘಾಸ್ತತ್ರಾಪತನ್ಭುವಿ||

ಭಾರತ! ಆ ರಣಭೂಮಿಯಲ್ಲಿ ಒಡೆದುಹೋಗಿದ್ದ ಶಿರಸ್ಸುಗಳೂ, ತೊಡೆಗಳೂ, ಬಾಹುಗಳೂ, ಕುಂಡಲಗಳೂ, ಅಂಗದ-ಕೇಯೂರಗಳು, ಒಡವೆ-ವಸ್ತ್ರಗಳೂ, ಹಾರಗಳೂ, ಧನ್ವಿಗಳ ಶರೀರಗಳೂ, ಕವಚಗಳೂ, ಪತಾಕೆಗಳೂ ರಾಶಿ ರಾಶಿಯಾಗಿ ಬಿದ್ದಿದ್ದವು.

08036012a ಗಜಾನ್ಗಜಾಃ ಸಮಾಸಾದ್ಯ ವಿಷಾಣಾಗ್ರೈರದಾರಯನ್|

08036012c ವಿಷಾಣಾಭಿಹತಾಸ್ತೇ ಚ ಭ್ರಾಜಂತೇ ದ್ವಿರದಾ ಯಥಾ||

08036013a ರುಧಿರೇಣಾವಸಿಕ್ತಾಂಗಾ ಗೈರಿಕಪ್ರಸ್ರವಾ ಇವ|

08036013c ಯಥಾ ಭ್ರಾಜಂತಿ ಸ್ಯಂದಂತಃ ಪರ್ವತಾ ಧಾತುಮಂಡಿತಾಃ||

ಆನೆಗಳು ಆನೆಗಳನ್ನು ಆಕ್ರಮಣಿಸಿ ದಂತದ ತುದಿಗಳಿಂದ ಇರಿಯುತ್ತಿದ್ದವು. ದಂತಗಳ ಆಘಾತಕ್ಕೊಳಗಾಗಿ ಆನೆಗಳ ಅಂಗಾಂಗಗಳಿಂದ ರಕ್ತವು ಸೋರಿ ತೋಯಿಸುತ್ತಿರಲು ಅವುಗಳು ಗೈರಿಕಾದ ಧಾತುಗಳಿಂದ ಕೂಡಿದ ಚಿಲುಮೆಗಳನ್ನುಳ್ಳ ಪರ್ವತಗಳಂತೆ ತೋರುತ್ತಿದ್ದವು.

08036014a ತೋಮರಾನ್ಗಜಿಭಿರ್ಮುಕ್ತಾನ್ಪ್ರತೀಪಾನಾಸ್ಥಿತಾನ್ಬಹೂನ್|

08036014c ಹಸ್ತೈರ್ವಿಚೇರುಸ್ತೇ ನಾಗಾ ಬಭಂಜುಶ್ಚಾಪರೇ ತಥಾ||

ಮಾವಟಿಗರಿಂದ ಪ್ರಹರಿಸಲ್ಪಟ್ಟ ತೋಮರಗಳನ್ನು ಅನೇಕ ಆನೆಗಳು ಸೊಂಡಿಲುಗಳಲ್ಲಿ ಹಿಡಿದು ಅತ್ತಿತ್ತ ಸಂಚರಿಸುತ್ತಿದ್ದವು. ಇನ್ನು ಇತರ ಆನೆಗಳು ಅವುಗಳನ್ನು ಮುರಿದುಹಾಕುತ್ತಿದ್ದವು.

08036015a ನಾರಾಚೈಶ್ಚಿನ್ನವರ್ಮಾಣೋ ಭ್ರಾಜಂತೇ ಸ್ಮ ಗಜೋತ್ತಮಾಃ|

08036015c ಹಿಮಾಗಮೇ ಮಹಾರಾಜ ವ್ಯಭ್ರಾ ಇವ ಮಹೀಧರಾಃ||

ಮಹಾರಾಜ! ನಾರಾಚಗಳಿಂದ ಕವಚಗಳನ್ನು ಕಳೆದುಕೊಂಡಿದ್ದ ಉತ್ತಮ ಆನೆಗಳು ಹೇಮಂತ‌ಋತುವಿನಲ್ಲಿ ಮೋಡಗಳಿಲ್ಲದ ಪರ್ವತಗಳಂತೆ ಪ್ರಕಾಶಿಸುತ್ತಿದ್ದವು.

08036016a ಶರೈಃ ಕನಕಪುಂಖೈಸ್ತು ಚಿತಾ ರೇಜುರ್ಗಜೋತ್ತಮಾಃ|

08036016c ಉಲ್ಕಾಭಿಃ ಸಂಪ್ರದೀಪ್ತಾಗ್ರಾಃ ಪರ್ವತಾ ಇವ ಮಾರಿಷ||

ಮಾರಿಷ! ಕನಕಪುಂಖಗಳುಳ್ಳ ಶರಗಳಿಂದ ಚುಚ್ಚಲ್ಪಟ್ಟ ಉತ್ತಮ ಆನೆಗಳು ಕೊಳ್ಳಿಗಳ ಬೆಂಕಿಯಿಂದ ಪ್ರದೀಪ್ತ ಪರ್ವತಗಳಂತೆ ತೋರುತ್ತಿದ್ದವು.

08036017a ಕೇ ಚಿದಭ್ಯಾಹತಾ ನಾಗಾ ನಾಗೈರ್ನಗನಿಭಾ ಭುವಿ|

08036017c ನಿಪೇತುಃ ಸಮರೇ ತಸ್ಮಿನ್ಪಕ್ಷವಂತ ಇವಾದ್ರಯಃ||

ಇನ್ನು ಕೆಲವು ಆನೆಗಳು ಶತ್ರುಪಕ್ಷದ ಆನೆಗಳಿಂದ ಗಾಯಗೊಂಡು ರೆಕ್ಕೆಗಳುಳ್ಳ ಪರ್ವತಗಳಂತೆ ರಣರಂಗದಲ್ಲಿ ಬಿದ್ದಿದ್ದವು.

08036018a ಅಪರೇ ಪ್ರಾದ್ರವನ್ನಾಗಾಃ ಶಲ್ಯಾರ್ತಾ ವ್ರಣಪೀಡಿತಾಃ|

08036018c ಪ್ರತಿಮಾನೈಶ್ಚ ಕುಂಭೈಶ್ಚ ಪೇತುರುರ್ವ್ಯಾಂ ಮಹಾಹವೇ||

ಇತರ ಆನೆಗಳು ಶರಪ್ರಹಾರಗಳಿಂದ ಆರ್ತರಾಗಿ, ಗಾಯಗಳಿಂದ ಪೀಡಿತರಾಗಿ ಓಡಿಹೋಗಿ ದಂತಮಧ್ಯವನ್ನೂ ಕುಂಬಸ್ಥಳಗಳನ್ನೂ ಒರೆಗೊಟ್ಟು ಭೂಮಿಯ ಮೇಲೆ ಬೀಳುತ್ತಿದ್ದವು.

08036019a ನಿಷೇದುಃ ಸಿಂಹವಚ್ಚಾನ್ಯೇ ನದಂತೋ ಭೈರವಾನ್ರವಾನ್|

08036019c ಮಮ್ಲುಶ್ಚ ಬಹವೋ ರಾಜಂಶ್ಚುಕೂಜುಶ್ಚಾಪರೇ ತಥಾ||

ರಾಜನ್! ಇನ್ನೂ ಇತರ ಆನೆಗಳು ಸಿಂಹಗಳಂತೆ ಗರ್ಜಿಸುತ್ತಾ ಭೈರವವಾಗಿ ಕೂಗುತ್ತಿದ್ದವು. ಅನೇಕ ಆನೆಗಳು ಅಲ್ಲಲ್ಲಿ ಓಡಿ ಸುತ್ತುವರೆಯುತ್ತಿದ್ದವು. ಇತರ ಆನೆಗಳು ನರಳುತ್ತಿದ್ದವು.

08036020a ಹಯಾಶ್ಚ ನಿಹತಾ ಬಾಣೈಃ ಸ್ವರ್ಣಭಾಂಡಪರಿಚ್ಚದಾಃ|

08036020c ನಿಷೇದುಶ್ಚೈವ ಮಮ್ಲುಶ್ಚ ಬಭ್ರಮುಶ್ಚ ದಿಶೋ ದಶ||

ಸ್ವರ್ಣಾಭರಣಗಳಿಂದ ವಿಭೂಷಿತವಾಗಿದ್ದ ಕುದುರೆಗಳು ಬಾಣಗಳಿಂದ ವಧಿಸಲ್ಪಟ್ಟು ಬೀಳುತ್ತಿದ್ದವು. ಕೆಲವು ಹತ್ತು ದಿಕ್ಕುಗಳಲ್ಲಿಯೂ ಮಂಕಾಗಿ ತಿರುಗುತ್ತಿದ್ದವು.

08036021a ಅಪರೇ ಕೃಷ್ಯಮಾಣಾಶ್ಚ ವಿವೇಷ್ಟಂತೋ ಮಹೀತಲೇ|

08036021c ಭಾವಾನ್ಬಹುವಿಧಾಂಶ್ಚಕ್ರುಸ್ತಾಡಿತಾಃ ಶರತೋಮರೈಃ||

ಇತರ ಕುದುರೆಗಳು ನೆಲದಮೇಲೆ ಹೊರಳಾಡುತ್ತಾ ಕುಂದಿಹೋಗುತ್ತಿದ್ದವು. ಕೆಲವು ಶರ-ತೋಮರಗಳಿಂದ ಹೊಡೆಯಲ್ಪಟ್ಟು ಬಹುವಿಧದ ಭಾವಗಳೊಂದಿಗೆ ಸುತ್ತಾಡುತ್ತಿದ್ದವು.

08036022a ನರಾಸ್ತು ನಿಹತಾ ಭೂಮೌ ಕೂಜಂತಸ್ತತ್ರ ಮಾರಿಷ|

08036022c ದೃಷ್ಟ್ವಾ ಚ ಬಾಂದವಾನನ್ಯೇ ಪಿತೄನನ್ಯೇ ಪಿತಾಮಹಾನ್||

ಮಾರಿಷ! ಹತರಾಗಿ ನೆಲದ ಮೇಲೆ ಬಿದ್ದಿದ್ದ ಮನುಷ್ಯರು ಅನ್ಯ ಬಾಂಧವರನ್ನೋ ತಂದೆಯನ್ನೋ ಅಜ್ಜನನ್ನೋ ನೋಡಿ ಕೂಗಿ ಕರೆಯುತ್ತಿದ್ದರು.

08036023a ಧಾವಮಾನಾನ್ಪರಾಂಶ್ಚೈವ ದೃಷ್ಟ್ವಾನ್ಯೇ ತತ್ರ ಭಾರತ|

08036023c ಗೋತ್ರನಾಮಾನಿ ಖ್ಯಾತಾನಿ ಶಶಂಸುರಿತರೇತರಂ||

ಭಾರತ! ಓಡಿಹೋಗುತ್ತಿರುವ ಶತ್ರುಗಳನ್ನೂ ಇತರರನ್ನೂ ನೋಡಿದವರು ಪರಸ್ಪರರ ಗೋತ್ರ-ನಾಮಧೇಯಗಳನ್ನು ಹೇಳಿಕೊಳ್ಳುತ್ತಿದ್ದರು.

08036024a ತೇಷಾಂ ಛಿನ್ನಾ ಮಹಾರಾಜ ಭುಜಾಃ ಕನಕಭೂಷಣಾಃ|

08036024c ಉದ್ವೇಷ್ಟಂತೇ ವಿವೇಷ್ಟಂತೇ ಪತಂತೇ ಚೋತ್ಪತಂತಿ ಚ||

ಮಹಾರಾಜ! ಕತ್ತರಿಸಲ್ಪಟ್ಟ ಕನಕಭೂಷಣ ಭುಜಗಳು ಅಲ್ಲಲ್ಲಿಯೇ ಸುತ್ತಿಕೊಳ್ಳುತ್ತಿದ್ದವು. ಕುಣಿಯುತ್ತಿದ್ದವು. ಹಾರುತ್ತಿದ್ದವು ಮತ್ತು ಪುನಃ ಕೆಳಕ್ಕೆ ಬೀಳುತ್ತಿದ್ದವು.

08036025a ನಿಪತಂತಿ ತಥಾ ಭೂಮೌ ಸ್ಫುರಂತಿ ಚ ಸಹಸ್ರಶಃ|

08036025c ವೇಗಾಂಶ್ಚಾನ್ಯೇ ರಣೇ ಚಕ್ರುಃ ಸ್ಫುರಂತ ಇವ ಪನ್ನಗಾಃ||

ನಡುಗುತ್ತಿದ್ದ ಸಹಸ್ರಾರು ತೋಳುಗಳು ಆ ರಣಾಂಗಣದಲ್ಲಿ ತುಂಬಿಹೋಗಿದ್ದವು. ಕೆಲವು ಭುಜಗಳು ಐದು ಹೆಡೆಗಳ ಸರ್ಪಗಳಂತೆ ಮಹಾವೇಗದಿಂದ ಮುಂದೆ ಹೋಗುತ್ತಿದ್ದವು.

08036026a ತೇ ಭುಜಾ ಭೋಗಿಭೋಗಾಭಾಶ್ಚಂದನಾಕ್ತಾ ವಿಶಾಂ ಪತೇ|

08036026c ಲೋಹಿತಾರ್ದ್ರಾ ಭೃಶಂ ರೇಜುಸ್ತಪನೀಯಧ್ವಜಾ ಇವ||

ವಿಶಾಂಪತೇ! ಸರ್ಪ ಶರೀರಗಳಂತಿದ್ದ ಚಂದನ ಚರ್ಚಿತ ರಕ್ತದಿಂದ ನೆನೆದುಹೋಗಿದ್ದ ತೋಳುಗಳು ಸುವರ್ಣಮಯ ಧ್ವಜಗಳಂತೆ ಕಾಣುತ್ತಿದ್ದವು.

08036027a ವರ್ತಮಾನೇ ತಥಾ ಘೋರೇ ಸಂಕುಲೇ ಸರ್ವತೋದಿಶಂ|

08036027c ಅವಿಜ್ಞಾತಾಃ ಸ್ಮ ಯುಧ್ಯಂತೇ ವಿನಿಘ್ನಂತಃ ಪರಸ್ಪರಂ||

ಎಲ್ಲ ದಿಕ್ಕುಗಳಲ್ಲಿ ಈ ರೀತಿ ಘೋರ ಸಂಕುಲ ಯುದ್ಧವು ನಡೆಯುತ್ತಿರಲು ಯಾರು ಯಾರೆಂದು ತಿಳಿಯಲಾರದೇ ನಮ್ಮವರು ಪರಸ್ಪರರನ್ನೇ ಕೊಲ್ಲುತ್ತಿದ್ದರು.

08036028a ಭೌಮೇನ ರಜಸಾ ಕೀರ್ಣೇ ಶಸ್ತ್ರಸಂಪಾತಸಂಕುಲೇ|

08036028c ನೈವ ಸ್ವೇ ನ ಪರೇ ರಾಜನ್ವ್ಯಜ್ಞಾಯಂತ ತಮೋವೃತೇ||

ರಾಜನ್! ಶಸ್ತ್ರಗಳು ಬೀಳುತ್ತಿದ್ದ ಆ ಸಂಕುಲಯುದ್ಧದಿಂದ ರಣಭೂಮಿಯ ಮೇಲೆದ್ದ ಧೂಳಿನಿಂದಾಗಿ ಕತ್ತಲೆಯು ಆವರಿಸಲು ನಮ್ಮವರ್ಯಾರು ಶತ್ರುಗಳ್ಯಾರು ಎನ್ನುವುದು ತಿಳಿಯುತ್ತಲೇ ಇರಲಿಲ್ಲ.

08036029a ತಥಾ ತದಭವದ್ಯುದ್ಧಂ ಘೋರರೂಪಂ ಭಯಾನಕಂ|

08036029c ಶೋಣಿತೋದಾ ಮಹಾನದ್ಯಃ ಪ್ರಸಸ್ರುಸ್ತತ್ರ ಚಾಸಕೃತ್||

ಘೋರರೂಪೀ ಭಯಾನಕ ಆ ಯುದ್ಧವು ಹಾಗೆ ನಡೆಯುತ್ತಿರಲು ರಕ್ತವೇ ನೀರಾಗಿ ಹರಿಯುತ್ತಿದ್ದ ಮಹಾನದಿಗಳು ಹುಟ್ಟಿ ಹರಿಯತೊಡಗಿದವು.

08036030a ಶೀರ್ಷಪಾಷಾಣಸಂಚನ್ನಾಃ ಕೇಶಶೈವಲಶಾದ್ವಲಾಃ|

08036030c ಅಸ್ಥಿಸಂಘಾತಸಂಕೀರ್ಣಾ ಧನುಃಶರವರೋತ್ತಮಾಃ||

ತಲೆಗಳೇ ಕಲ್ಲುಬಂಡೆಗಳಾಗಿದ್ದವು. ತಲೆಗೂದಲುಗಳೇ ಪಾಚೀ ಹುಲ್ಲುಗಳಾಗಿದ್ದವು. ಎಲುಬುಗಳೇ ಮೀನಿನಂತಿದ್ದವು. ಮತ್ತು ಧನುಸ್ಸು-ಬಾಣಗಳೇ ಅದರ ಉತ್ತಮ ದೋಣಿಗಳಂತಿದ್ದವು.

08036031a ಮಾಂಸಕರ್ದಮಪಂಕಾಶ್ಚ ಶೋಣಿತೌಘಾಃ ಸುದಾರುಣಾಃ|

08036031c ನದೀಃ ಪ್ರವರ್ತಯಾಮಾಸುರ್ಯಮರಾಷ್ಟ್ರವಿವರ್ಧನೀಃ||

ಯಮರಾಷ್ಟ್ರವನ್ನು ವರ್ಧಿಸುವ ಆ ನದಿಗಳು ಸುದಾರುಣವಾದ ರಕ್ತವೇ ನೀರಾಗಿ ಮಾಂಸ-ಮಜ್ಜೆಗಳೇ ಕೆಸರಾಗಿ ಹರಿಯುತ್ತಿದ್ದವು.

08036032a ತಾ ನದ್ಯೋ ಘೋರರೂಪಾಶ್ಚ ನಯಂತ್ಯೋ ಯಮಸಾದನಂ|

08036032c ಅವಗಾಢಾ ಮಜ್ಜಯಂತ್ಯಃ ಕ್ಷತ್ರಸ್ಯಾಜನಯನ್ಭಯಂ||

ಯಮಸಾದನಕ್ಕೆ ಕೊಂಡೊಯ್ಯುತ್ತಿದ್ದ ಆ ಘೋರರೂಪೀ ನದಿಗಳು ಅದರಲ್ಲಿ ಬಿದ್ದವರನ್ನು ಮುಳುಗಿಸಿಬಿಡುತ್ತಿದ್ದವು ಮತ್ತು ಕ್ಷತ್ರಿಯರಲ್ಲಿ ಭಯವನ್ನುಂಟುಮಾಡುತ್ತಿದ್ದವು.

08036033a ಕ್ರವ್ಯಾದಾನಾಂ ನರವ್ಯಾಘ್ರ ನರ್ದತಾಂ ತತ್ರ ತತ್ರ ಹ|

08036033c ಘೋರಮಾಯೋಧನಂ ಜಜ್ಞೇ ಪ್ರೇತರಾಜಪುರೋಪಮಂ||

ನರವ್ಯಾಘ್ರ! ಅಲ್ಲಲ್ಲಿ ಮಾಂಸಾಶೀ ಪ್ರಾಣಿಗಳ ಕೂಗುವಿಕೆಯಿಂದ ಪ್ರೇತರಾಜನ ಪಟ್ಟಣಕ್ಕೆ ಸಮಾನವಾಗಿದ್ದು ಘೋರವಾಗಿ ಕಾಣುತ್ತಿತ್ತು.

08036034a ಉತ್ಥಿತಾನ್ಯಗಣೇಯಾನಿ ಕಬಂದಾನಿ ಸಮಂತತಃ|

08036034c ನೃತ್ಯಂತಿ ವೈ ಭೂತಗಣಾಃ ಸಂತೃಪ್ತಾ ಮಾಂಸಶೋಣಿತೈಃ||

ಸುತ್ತಲೂ ಅಗಣಿತ ಮುಂಡಗಳು ಮೇಲೆದ್ದು ಕುಣಿಯುತ್ತಿದ್ದವು. ಅವುಗಳೊಂದಿಗೆ ಮಾಂಸ-ರಕ್ತಗಳಿಂದ ಸಂತೃಪ್ತರಾದ ಭೂತಗಣಗಳೂ ಕುಣಿಯುತ್ತಿದ್ದವು.

08036035a ಪೀತ್ವಾ ಚ ಶೋಣಿತಂ ತತ್ರ ವಸಾಂ ಪೀತ್ವಾ ಚ ಭಾರತ|

08036035c ಮೇದೋಮಜ್ಜಾವಸಾತೃಪ್ತಾಸ್ತೃಪ್ತಾ ಮಾಂಸಸ್ಯ ಚೈವ ಹಿ|

08036035e ಧಾವಮಾನಾಶ್ಚ ದೃಶ್ಯಂತೇ ಕಾಕಗೃಧ್ರಬಲಾಸ್ತಥಾ||

ಭಾರತ! ರಕ್ತವನ್ನು ಕುಡಿದು ವಸೆಯನ್ನು ತಿಂದು, ಮೇದ-ಮಜ್ಜೆ-ವಸೆ-ಮಾಂಸಗಳಿಂದ ತ್ರುಪ್ತರಾಗಿದ್ದ ಮದಿಸಿದ ಕಾಗೆ ಹದ್ದುಗಳೂ ಸುತ್ತಲೂ ಹಾರಾಡುತ್ತಿರುವುದು ಕಾಣುತ್ತಿತ್ತು.

08036036a ಶೂರಾಸ್ತು ಸಮರೇ ರಾಜನ್ಭಯಂ ತ್ಯಕ್ತ್ವಾ ಸುದುಸ್ತ್ಯಜಂ|

08036036c ಯೋಧವ್ರತಸಮಾಖ್ಯಾತಾಶ್ಚಕ್ರುಃ ಕರ್ಮಾಣ್ಯಭೀತವತ್||

ರಾಜನ್! ಸಮರದಲ್ಲಿ ಶೂರರು ತೊರೆಯಲು ಅಸಾಧ್ಯ ಭಯವನ್ನು ಬಿಟ್ಟು ಯೋಧವ್ರತನಿರತರಾಗಿ ಯುದ್ಧಕರ್ಮವನ್ನು ಭಯವಿಲ್ಲದೇ ನಿರ್ವಹಿಸುತ್ತಿದ್ದರು.

08036037a ಶರಶಕ್ತಿಸಮಾಕೀರ್ಣೇ ಕ್ರವ್ಯಾದಗಣಸಂಕುಲೇ|

08036037c ವ್ಯಚರಂತ ಗಣೈಃ ಶೂರಾಃ ಖ್ಯಾಪಯಂತಃ ಸ್ವಪೌರುಷಂ||

ಶರ-ಶಕ್ತಿಗಳ ಸಮಾಕೀರ್ಣವಾಗಿದ್ದ, ಮಾಂಸಾಶಿ ಪ್ರಾಣಿಗಳಿಂದ ತುಂಬಿಹೋಗಿದ್ದ ಆ ರಣಭೂಮಿಯಲ್ಲಿ ಶೂರರು ತಮ್ಮ ಪೌರುಷಗಳನ್ನು ವಿಖ್ಯಾತಗೊಳಿಸುತ್ತಾ ಸಂಚರಿಸುತ್ತಿದ್ದರು.

08036038a ಅನ್ಯೋನ್ಯಂ ಶ್ರಾವಯಂತಿ ಸ್ಮ ನಾಮಗೋತ್ರಾಣಿ ಭಾರತ|

08036038c ಪಿತೃನಾಮಾನಿ ಚ ರಣೇ ಗೋತ್ರನಾಮಾನಿ ಚಾಭಿತಃ||

ಭಾರತ! ಅನ್ಯೋನ್ಯರ ನಾಮಗೋತ್ರಗಳನ್ನು ಹೇಳುತ್ತಾ ರಣದಲ್ಲಿ ಪಿತೃಗಳ ಹೆಸರನ್ನೂ ಗೋತ್ರಗಳನ್ನೂ ಹೇಳಿಕೊಳ್ಳುತ್ತಿದ್ದರು.

08036039a ಶ್ರಾವಯಂತೋ ಹಿ ಬಹವಸ್ತತ್ರ ಯೋಧಾ ವಿಶಾಂ ಪತೇ|

08036039c ಅನ್ಯೋನ್ಯಮವಮೃದ್ನಂತಃ ಶಕ್ತಿತೋಮರಪಟ್ಟಿಶೈಃ||

ವಿಶಾಂಪತೇ! ಹೀಗೆ ಹೇಳಿಕೊಳ್ಳುತ್ತಾ ಅಲ್ಲಿ ಅನೇಕ ಯೋಧರು ಶಕ್ತಿ-ತೋಮರ-ಪಟ್ಟಿಶಗಳಿಂದ ಪರಸ್ಪರರನ್ನು ಸಂಹರಿಸುತ್ತಿದ್ದರು.

08036040a ವರ್ತಮಾನೇ ತದಾ ಯುದ್ಧೇ ಘೋರರೂಪೇ ಸುದಾರುಣೇ|

08036040c ವ್ಯಷೀದತ್ಕೌರವೀ ಸೇನಾ ಭಿನ್ನಾ ನೌರಿವ ಸಾಗರೇ||

ಹಾಗೆ ಸುದಾರುಣ ಘೋರರೂಪೀ ಯುದ್ಧವು ನಡೆಯುತ್ತಿರಲು ಕೌರವೀ ಸೇನೆಯು ಸಾಗರದಲ್ಲಿ ಒಡೆದು ಹೋದ ನೌಕೆಯಂತೆ ವ್ಯಾಕುಲಗೊಂಡಿತು.”

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ಷಟ್ತ್ರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ಮೂವತ್ತಾರನೇ ಅಧ್ಯಾಯವು.

Comments are closed.