Karna Parva: Chapter 21

ಕರ್ಣ ಪರ್ವ

೨೧

ಹದಿನಾರನೇ ದಿನದ ಯುದ್ಧ ಸಮಾಪ್ತಿ

ರಣಭೂಮಿಯ ವರ್ಣನೆ (೧-೬). ಕರ್ಣ-ಸಾತ್ಯಕಿಯರ ಯುದ್ಧ (೭-೧೨). ಅರ್ಜುನನು ಕೌರವ ಸೇನೆಯನ್ನು ನಾಶಪಡಿಸಿದುದು (೧೩-೧೭). ದುರ್ಯೋಧನನು ಅರ್ಜುನನನ್ನು ಎದುರಿಸಿಸಲು ಅಶ್ವತ್ಥಾಮ-ಕೃತವರ್ಮ-ಕರ್ಣರು ದುರ್ಯೋಧನನ ಸಹಾಯಕ್ಕೆ ಬಂದುದು (೧೮-೨೩). ಕರ್ಣನು ಪಾಂಡವ ಸೇನೆಯನ್ನು ಧ್ವಂಸಗೊಳಿಸಿದುದು (೨೪-೩೪). ಹದಿನಾರನೆಯ ದಿನದ ಯುದ್ಧ ಸಮಾಪ್ತಿ (೩೫-೪೨).

08021001 ಸಂಜಯ ಉವಾಚ|

08021001a ತತಃ ಕರ್ಣಂ ಪುರಸ್ಕೃತ್ಯ ತ್ವದೀಯಾ ಯುದ್ಧದುರ್ಮದಾಃ|

08021001c ಪುನರಾವೃತ್ಯ ಸಂಗ್ರಾಮಂ ಚಕ್ರುರ್ದೇವಾಸುರೋಪಮಂ||

ಸಂಜಯನು ಹೇಳಿದನು: “ಆಗ ನಿನ್ನಕಡೆಯ ಯುದ್ಧದುರ್ಮದರು ಕರ್ಣನನ್ನು ಮುಂದೆಮಾಡಿಕೊಂಡು ಪುನಃ ಹಿಂದಿರುಗಿ ದೇವಾಸುರಸಮಾನ ಸಂಗ್ರಾಮವನ್ನು ನಡೆಸಿದರು.

08021002a ದ್ವಿರದರಥನರಾಶ್ವಶಂಖಶಬ್ದೈಃ

         ಪರಿಹೃಷಿತಾ ವಿವಿಧೈಶ್ಚ ಶಸ್ತ್ರಪಾತೈಃ|

08021002c ದ್ವಿರದರಥಪದಾತಿಸಾರ್ಥವಾಹಾಃ

         ಪರಿಪತಿತಾಭಿಮುಖಾಃ ಪ್ರಜಃರಿರೇ ತೇ||

ಆನೆ-ರಥ-ಸೈನಿಕ-ಅಶ್ವ-ಶಂಖಗಳ ಶಬ್ಧಗಳಿಂದ ಹರ್ಷಿತರಾದ ಅವರು ರಥ-ಗಜ-ಅಶ್ವ-ಪದಾತಿ ಸೈನಿಕರು ಶತ್ರುಗಳನ್ನು ಎದುರಿಸಿ ವಿವಿಧ ಶಸ್ತ್ರಗಳನ್ನು ಪ್ರಯೋಗಿಸಿ ಪ್ರಹರಿಸಿದರು.

08021003a ಶರಪರಶುವರಾಸಿಪಟ್ಟಿಶೈರ್

         ಇಷುಭಿರನೇಕವಿಧೈಶ್ಚ ಸಾದಿತಾಃ|

08021003c ದ್ವಿರದರಥಹಯಾ ಮಹಾಹವೇ

         ವರಪುರುಷೈಃ ಪುರುಷಾಶ್ಚ ವಾಹನೈಃ||

ಆ ಮಹಾಯುದ್ಧದಲ್ಲಿ ಆನೆ-ರಥ-ಕುದುರೆಗಳನ್ನೇರಿದ ಶ್ರೇಷ್ಠ ಪುರುಷರು ಬಾಣ-ಪರಶು-ಖಡ್ಗ-ಪಟ್ಟಿಶಗಳಿಂದಲೂ ಅನೇಕ ವಿಧದ ಬಾಣಗಳಿಂದಲೂ ಪುರುಷರನ್ನು ಸಂಹರಿಸುತ್ತಿದ್ದರು.

08021004a ಕಮಲದಿನಕರೇಂದುಸಂನಿಭೈಃ

         ಸಿತದಶನೈಃ ಸುಮುಖಾಕ್ಷಿನಾಸಿಕೈಃ|

08021004c ರುಚಿರಮುಕುಟಕುಂಡಲೈರ್ಮಹೀ

         ಪುರುಷಶಿರೋಭಿರವಸ್ತೃತಾ ಬಭೌ||

ಕಮಲ-ಸೂರ್ಯ-ಚಂದ್ರರ ಕಾಂತಿಗೆ ಸಮಾನ ಕಾಂತಿಯುಳ್ಳ ಬಿಳಿಯ ಹಲ್ಲುಗಳ ಸಾಲುಗಳಿಂದ, ಮೂಗು ಮತ್ತು ಕಣ್ಣುಗಳಿಂದ ಶೋಭಿಸುತ್ತಿದ್ದ ಸುಂದರ ಮುಖಗಳಿಂದ, ಸುಂದರ ಮುಕುಟ-ಕುಂಡಲಗಳಿಂದ ಕೂಡಿದ ಪುರುಷರ ಶಿರಗಳಿಂದ ರಣಭೂಮಿಯು ಶೋಭಿಸುತ್ತಿತ್ತು.

08021005a ಪರಿಘಮುಸಲಶಕ್ತಿತೋಮರೈರ್

         ನಖರಭುಶುಂಡಿಗದಾಶತೈರ್ದ್ರುತಾಃ|

08021005c ದ್ವಿರದನರಹಯಾಃ ಸಹಸ್ರಶೋ

         ರುಧಿರನದೀಪ್ರವಹಾಸ್ತದಾಭವನ್||

ನೂರಾರು ಪರಿಘ, ಮುಸುಲ, ಶಕ್ತಿ, ತೋಮರ, ನಖರ, ಭುಶಂಡಿ ಮತ್ತು ಗದೆಗಳಿಂದ ಗಾಯಗೊಂಡ ಮನುಷ್ಯರು, ಆನೆಗಳು ಮತ್ತು ಕುದುರೆಗಳಿಂದಾಗಿ ರಣಭೂಮಿಯಲ್ಲಿ ರಕ್ತದ ಪ್ರವಾಹವೇ ಹರಿಯಿತು.

08021006a ಪ್ರಹತನರರಥಾಶ್ವಕುಂಜರಂ

         ಪ್ರತಿಭಯದರ್ಶನಮುಲ್ಬಣಂ ತದಾ|

08021006c ತದಹಿತನಿಹತಂ ಬಭೌ ಬಲಂ

         ಪಿತೃಪತಿರಾಷ್ಟ್ರಮಿವ ಪ್ರಜಾಕ್ಷಯೇ||

ಜಜ್ಜಲ್ಪಟ್ಟಿದ್ದ ಮನುಷ್ಯರು, ರಥಗಳು, ಆನೆಗಳು ಮತ್ತು ಕುದುರೆಗಳು ನೋಡಲು ಅತಿ ಭಯಂಕರವಾಗಿ ಕಾಣುತ್ತಿದ್ದವು. ಶತ್ರುಗಳಿಂದ ಹತವಾಗಿದ್ದ ಆ ಸೇನೆಗಳಿಂದ ರಣಭೂಮಿಯು ಪ್ರಳಯಕಾಲದಲ್ಲಿನ ಯಮರಾಜ್ಯದಂತೆ ಕಾಣುತ್ತಿತ್ತು.

08021007a ಅಥ ತವ ನರದೇವ ಸೈನಿಕಾಸ್

         ತವ ಚ ಸುತಾಃ ಸುರಸೂನುಸಂನಿಭಾಃ|

08021007c ಅಮಿತಬಲಪುರಹ್ಸರಾ ರಣೇ

         ಕುರುವೃಷಭಾಃ ಶಿನಿಪುತ್ರಮಭ್ಯಯುಃ||

ನರದೇವ! ಅನಂತರ ನಿನ್ನ ಸೈನಿಕರು ಮತ್ತು ಸುರಪುತ್ರರಂತಿದ್ದ ಕುರುವೃಷಭ ನಿನ್ನ ಮಕ್ಕಳು ರಣದಲ್ಲಿ ಅಮಿತಬಲವನ್ನು ಮುಂದಿರಿಸಿಕೊಂಡು ಶಿನಿಯ ಮೊಮ್ಮಗನನ್ನು ಆಕ್ರಮಣಿಸಿದರು.

08021008a ತದತಿರುಚಿರಭೀಮಮಾಬಭೌ

         ಪುರುಷವರಾಶ್ವರಥದ್ವಿಪಾಕುಲಂ|

08021008c ಲವಣಜಲಸಮುದ್ಧತಸ್ವನಂ

         ಬಲಮಮರಾಸುರಸೈನ್ಯಸಂನಿಭಂ||

ಅಮರಾಸುರ ಸೇನೆಗಳಂತಿದ್ದ, ಸಮುದ್ರದ ಭೋರ್ಗರೆಯಂತೆ ಗರ್ಜಿಸುತ್ತಿದ್ದ, ಶ್ರೇಷ್ಠ ನರ-ಅಶ್ವ-ರಥ-ಆನೆಗಳಿಂದ ಕೂಡಿದ ನಿನ್ನ ಸೇನೆಯು ರಕ್ತರಂಜಿತವಾಗಿಯೂ ಭಯಂಕರವಾಗಿಯೂ ಪ್ರಕಾಶಿಸುತ್ತಿತ್ತು.

08021009a ಸುರಪತಿಸಮವಿಕ್ರಮಸ್ತತಸ್

         ತ್ರಿದಶವರಾವರಜೋಪಮಂ ಯುಧಿ|

08021009c ದಿನಕರಕಿರಣಪ್ರಭೈಃ ಪೃಷತ್ಕೈ

         ರವಿತನಯೋಽಭ್ಯಹನಚ್ಚಿನಿಪ್ರವೀರಂ||

ಸುರಪತಿಸಮ ವಿಕ್ರಮಿ ರವಿತನಯನು ಯುದ್ಧದಲ್ಲಿ ದಿನಕರಕಿರಣಗಳ ಪ್ರಭೆಯುಳ್ಳ ಪೃಷತಗಳಿಂದ ಸುರರಾಜನ ಅನುಜ ವಿಷ್ಣುವಿನ ಸಮನಾಗಿದ್ದ ಶಿನಿಪ್ರವೀರನನ್ನು ಪ್ರಹರಿಸಿದನು.

08021010a ತಂ ಅಪಿ ಸರಥವಾಜಿಸಾರಥಿಂ

         ಶಿನಿವೃಷಭೋ ವಿವಿಧೈಃ ಶರೈಸ್ತ್ವರನ್|

08021010c ಭುಜಗವಿಷಸಮಪ್ರಭೈ ರಣೇ

         ಪುರುಷವರಂ ಸಮವಾಸ್ತೃಣೋತ್ತದಾ||

ಶಿನಿವೃಷಭನೂ ಕೂಡ ರಣದಲ್ಲಿ ಸರ್ಪವಿಷಸಮಪ್ರಭೆಯುಳ್ಳ ವಿವಿಧ ಶರಗಳಿಂದ ತ್ವರೆಮಾಡಿ ಪುರುಷಶ್ರೇಷ್ಠ ಕರ್ಣನನ್ನು ಅವನ ರಥ-ಕುದುರೆಗಳು ಮತ್ತು ಸಾರಥಿಯರನ್ನೂ ಸೇರಿಸಿ, ಪ್ರಹರಿಸಿದನು.

08021011a ಶಿನಿವೃಷಭಶರಪ್ರಪೀಡಿತಂ

         ತವ ಸುಹೃದೋ ವಸುಷೇಣಂ ಅಭ್ಯಯುಃ|

08021011c ತ್ವರಿತಮತಿರಥಾ ರಥರ್ಷಭಂ

         ದ್ವಿರದರಥಾಶ್ವಪದಾತಿಭಿಃ ಸಹ||

ಶಿನಿವೃಷಭನ ಶರಪೀಡಿತ ರಥರ್ಷಭ ವಸುಷೇಣನ ಬಳಿಗೆ ನಿನ್ನ ಸುಹೃದಯ ಅತಿರಥರು ಆನೆ-ರಥ-ಅಶ್ವ-ಪದಾತಿಗಳೊಂದಿಗೆ ಧಾವಿಸಿಬಂದರು.

08021012a ತಮುದಧಿನಿಭಮಾದ್ರವದ್ಬಲೀ

         ತ್ವರಿತತರೈಃ ಸಮಭಿದ್ರುತಂ ಪರೈಃ|

08021012c ದ್ರುಪದಸುತಸಖಸ್ತದಾಕರೋತ್

         ಪುರುಷರಥಾಶ್ವಗಜಕ್ಷಯಂ ಮಹತ್||

ಆಗ ಅತಿವೇಗಶಾಲಿಗಳಾದ ದ್ರುಪದಸುತ ಮತ್ತು ಅವನ ಸಖರು ಸಮುದ್ರದಂತಿದ್ದ ಶತ್ರು ಸೇನೆಯನ್ನು ಆಕ್ರಮಣಿಸಿ, ಮಹಾ ಪುರುಷ-ರಥ-ಅಶ್ವ-ಗಜಕ್ಷಯವನ್ನು ನಡೆಸಿದರು.

08021013a ಅಥ ಪುರುಷವರೌ ಕೃತಾಹ್ನಿಕೌ

         ಭವಮಭಿಪೂಜ್ಯ ಯಥಾವಿಧಿ ಪ್ರಭುಂ|

08021013c ಅರಿವಧಕೃತನಿಶ್ಚಯೌ ದ್ರುತಂ

         ತವ ಬಲಮರ್ಜುನಕೇಶವೌ ಸೃತೌ||

ಅನಂತರ ಪುರುಷಶ್ರೇಷ್ಠ ಅರ್ಜುನ-ಕೇಶವರು ಆಹ್ನಿಕವನ್ನು ಪೂರೈಸಿ ಯಥಾವಿಧಿಯಾಗಿ ಪ್ರಭು ಭವನನ್ನು ಪೂಜಿಸಿ ಶತ್ರುವಧೆಗೈಯುವ ನಿಶ್ಚಯಮಾಡಿಕೊಂಡು ನಿನ್ನ ಸೇನೆಯ ಕಡೆ ಧಾವಿಸಿ ಬಂದರು.

08021014a ಜಲದನಿನದನಿಸ್ವನಂ ರಥಂ

         ಪವನವಿಧೂತಪತಾಕಕೇತನಂ|

08021014c ಸಿತಹಯಮುಪಯಾಂತಮಂತಿಕಂ

         ಹೃತಮನಸೋ ದದೃಶುಸ್ತದಾರಯಃ||

ಗುಡುಗಿನಂತೆ ಶಬ್ಧಮಾಡುತ್ತಿದ್ದ, ಗಾಳಿಯಿಂದ ಬೀಸುತ್ತಿದ್ದ ಪಾತಕೆಗಳಿಂದ ಯುಕ್ತವಾದ, ಬಿಳಿಯ ಕುದುರೆಗಳು ಎಳೆದು ತರುತ್ತಿದ್ದ ಅವರ ರಥವು ಹತ್ತಿರಬರುತ್ತಿರುವುದನ್ನು ಶತ್ರುಗಳು ಉತ್ಸಾಹಶೂನ್ಯರಾಗಿ ನೋಡಿದರು.

08021015a ಅಥ ವಿಸ್ಫಾರ್ಯ ಗಾಂಡೀವಂ ರಣೇ ನೃತ್ಯನ್ನಿವಾರ್ಜುನಃ|

08021015c ಶರಸಂಬಾಧಮಕರೋತ್ಖಂ ದಿಶಃ ಪ್ರದಿಶಸ್ತಥಾ||

ಅನಂತರ ಅರ್ಜುನನು ರಣದಲ್ಲಿ ನರ್ತಿಸುತ್ತಿರುವನೋ ಎನ್ನುವಂತೆ ಗಾಂಡೀವವನ್ನು ಟೇಂಕರಿಸಿ ಶರಸಾಲುಗಳಿಂದ ಆಕಾಶವನ್ನೂ, ದಿಕ್ಕು-ಉಪದಿಕ್ಕುಗಳನ್ನೂ ತುಂಬಿಸಿದನು.

08021016a ರಥಾನ್ವಿಮಾನಪ್ರತಿಮಾನ್ಸಜ್ಜಯಂತ್ರಾಯುಧಧ್ವಜಾನ್|

08021016c ಸಸಾರಥೀಂಸ್ತದಾ ಬಾಣೈರಭ್ರಾಣೀವಾನಿಲೋಽವಧೀತ್||

ಬಿರುಗಾಳಿಯು ಮೇಘಮಂಡಲವನ್ನು ಚದುರಿಸಿಬಿಡುವಂತೆ ಅವನು ಬಾಣಗಳಿಂದ ವಿಮಾನದಂತಿರುವ ರಥಗಳನ್ನು, ಅವುಗಳ ಯಂತ್ರ, ಆಯುಧ, ಧ್ವಜಗಳೊಂದಿಗೆ ಮತ್ತು ಸಾರಥಿಗಳೊಂದಿಗೆ ದಿಕ್ಕಾಪಾಲಾಗಿ ಮಾಡಿದನು.

08021017a ಗಜಾನ್ಗಜಪ್ರಯಂತ್ರ್ಯಂಚ ವೈಜಯಂತ್ಯಾಯುಧಧ್ವಜಾನ್|

08021017c ಸಾದಿನೋಽಶ್ವಾಂಶ್ಚ ಪತ್ತೀಂಶ್ಚ ಶರೈರ್ನಿನ್ಯೇ ಯಮಕ್ಷಯಂ||

ಅರ್ಜುನನು ಪತಾಕೆ-ಆಯುಧ-ಧ್ವಜ ಸಹಿತ ಆನೆಗಳನ್ನು, ಮಾವುತರನ್ನು, ಕುದುರೆಗಳನ್ನೂ, ಕುದುರೆಸವಾರರನ್ನೂ ಬಾಣಗಳಿಂದ ಯಮಕ್ಷಯಕ್ಕೆ ಕಳುಹಿಸಿದನು.

08021018a ತಂ ಅಂತಕಮಿವ ಕ್ರುದ್ಧಮನಿವಾರ್ಯಂ ಮಹಾರಥಂ|

08021018c ದುರ್ಯೋಧನೋಽಭ್ಯಯಾದೇಕೋ ನಿಘ್ನನ್ಬಾಣೈಃ ಪೃಥಗ್ವಿಧೈಃ||

ಅಂತಕನಂತೆ ಕ್ರುದ್ಧ ತಡೆಯಲಸಾಧ್ಯ ಆ ಮಹಾರಥನನ್ನು ದುರ್ಯೋಧನನು ಓರ್ವನೇ ವಿವಿಧ ಬಾಣಗಳಿಂದ ಪ್ರಹರಿಸಿ ಆಕ್ರಮಣಿಸಿದನು.

08021019a ತಸ್ಯಾರ್ಜುನೋ ಧನುಃ ಸೂತಂ ಕೇತುಂ ಅಶ್ವಾಂಶ್ಚ ಸಾಯಕೈಃ|

08021019c ಹತ್ವಾ ಸಪ್ತಭಿರೇಕೈಕಂ ಚತ್ರಂ ಚಿಚ್ಚೇದ ಪತ್ರಿಣಾ||

ಅರ್ಜುನನು ಅವನ ಧನುಸ್ಸನ್ನೂ, ಸೂತನನ್ನೂ, ಕೇತುವನ್ನೂ, ಕುದುರೆಗಳನ್ನೂ ಏಳು ಸಾಯಕಗಳಿಂದ ನಾಶಗೊಳಿಸಿ ಒಂದೇ ಒಂದು ಪತ್ರಿಯಿಂದ ಅವನ ಚತ್ರವನ್ನೂ ತುಂಡರಿಸಿದನು.

08021020a ನವಮಂ ಚ ಸಮಾಸಾದ್ಯ ವ್ಯಸೃಜತ್ಪ್ರತಿಘಾತಿನಂ|

08021020c ದುರ್ಯೋಧನಾಯೇಷುವರಂ ತಂ ದ್ರೌಣಿಃ ಸಪ್ತಧಾಚ್ಚಿನತ್||

ದುರ್ಯೋಧನನನ್ನು ಸಂಹರಿಸಲು ಅವನು ಒಂಭತ್ತನೆಯ ಶ್ರೇಷ್ಠ ಬಾಣವೊಂದನ್ನು ತೆಗೆದು ಪ್ರಹರಿಸಲು ದ್ರೌಣಿಯು ಅದನ್ನು ಏಳು ಭಾಗಗಳನ್ನಾಗಿ ತುಂಡರಿಸಿದನು.

08021021a ತತೋ ದ್ರೌಣೇರ್ಧನುಶ್ಚಿತ್ತ್ವಾ ಹತ್ವಾ ಚಾಶ್ವವರಾಂ ಶರೈಃ|

08021021c ಕೃಪಸ್ಯಾಪಿ ತಥಾತ್ಯುಗ್ರಂ ಧನುಶ್ಚಿಚ್ಚೇದ ಪಾಂಡವಃ||

ಆಗ ಪಾಂಡವ ಅರ್ಜುನನು ದ್ರೌಣಿಯ ಧನುಸ್ಸನ್ನು ತುಂಡರಿಸಿ ಮತ್ತು ಶ್ರೇಷ್ಠ ಕುದುರೆಗಳನ್ನು ಬಾಣಗಳಿಂದ ಸಂಹರಿಸಿ ಕೃಪನ ಉಗ್ರ ಧನುಸ್ಸನ್ನೂ ತುಂಡರಿಸಿದನು.

08021022a ಹಾರ್ದಿಕ್ಯಸ್ಯ ಧನುಶ್ಚಿತ್ತ್ವಾ ಧ್ವಜಂ ಚಾಶ್ವಂ ತಥಾವಧೀತ್|

08021022c ದುಃಶಾಸನಸ್ಯೇಷುವರಂ ಚಿತ್ತ್ವಾ ರಾಧೇಯಮಭ್ಯಯಾತ್||

ಹಾರ್ದಿಕ್ಯನ ಧನುಸ್ಸು ಧ್ವಜಗಳನ್ನು ತುಂಡರಿಸಿ, ಅಶ್ವಗಳನ್ನು ಸಂಹರಿಸಿ, ದುಃಶಾಸನನ ಬಿಲ್ಲನ್ನು ಕತ್ತರಿಸಿಸಿ ಅರ್ಜುನನು ರಾಧೇಯನನ್ನು ಆಕ್ರಮಣಿಸಿದನು.

08021023a ಅಥ ಸಾತ್ಯಕಿಮುತ್ಸೃಜ್ಯ ತ್ವರನ್ಕರ್ಣೋಽರ್ಜುನಂ ತ್ರಿಭಿಃ|

08021023c ವಿದ್ಧ್ವಾ ವಿವ್ಯಾಧ ವಿಂಶತ್ಯಾ ಕೃಷ್ಣಂ ಪಾರ್ಥಂ ಪುನಸ್ತ್ರಿಭಿಃ||

ಕೂಡಲೇ ಕರ್ಣನು ತ್ವರೆಮಾಡಿ ಸಾತ್ಯಕಿಯನ್ನು ಬಿಟ್ಟು ಮೂರು ಶರಗಳಿಂದ ಅರ್ಜುನನನ್ನು ಹೊಡೆದು, ಇಪ್ಪತ್ತರಿಂದ ಮತ್ತು ಪುನಃ ಮೂರು ಶರಗಳಿಂದ ಕೃಷ್ಣ-ಪಾರ್ಥರನ್ನು ಹೊಡೆದನು.

08021024a ಅಥ ಸಾತ್ಯಕಿರಾಗತ್ಯ ಕರ್ಣಂ ವಿದ್ಧ್ವಾ ಶಿತೈಃ ಶರೈಃ|

08021024c ನವತ್ಯಾ ನವಭಿಶ್ಚೋಗ್ರೈಃ ಶತೇನ ಪುನರಾರ್ದಯತ್||

ಕೂಡಲೇ ಸಾತ್ಯಕಿಯು ಬಂದು ಕರ್ಣನನ್ನು ನಿಶಿತ ಶರಗಳಿಂದ ಹೊಡೆದು ಪುನಃ ಅವನನ್ನು ನೂರಾ ತೊಂಭತ್ತೊಂಭತ್ತು ಉಗ್ರ ಶರಗಳಿಂದ ಪ್ರಹರಿಸಿದನು.

08021025a ತತಃ ಪ್ರವೀರಾಃ ಪಾಂಡೂನಾಂ ಸರ್ವೇ ಕರ್ಣಮಪೀಡಯನ್|

08021025c ಯುಧಾಮನ್ಯುಃ ಶಿಖಂಡೀ ಚ ದ್ರೌಪದೇಯಾಃ ಪ್ರಭದ್ರಕಾಃ||

08021026a ಉತ್ತಮೌಜಾ ಯುಯುತ್ಸುಶ್ಚ ಯಮೌ ಪಾರ್ಷತ ಏವ ಚ|

08021026c ಚೇದಿಕಾರೂಷಮತ್ಸ್ಯಾನಾಂ ಕೇಕಯಾನಾಂ ಚ ಯದ್ಬಲಂ|

08021026e ಚೇಕಿತಾನಶ್ಚ ಬಲವಾನ್ಧರ್ಮರಾಜಶ್ಚ ಸುವ್ರತಃ||

ಆಗ ಪಾಂಡವ ಪ್ರವೀರರೆಲ್ಲರೂ ಕರ್ಣನನ್ನು ಪೀಡಿಸತೊಡಗಿದರು: ಯುಧಾಮನ್ಯು, ಶಿಖಂಡೀ, ದ್ರೌಪದೇಯರು, ಪ್ರಭದ್ರಕರು, ಉತ್ತಮೌಜ, ಯುಯುತ್ಸು, ಯಮಳರು, ಪಾರ್ಷತ, ಚೇದಿ-ಕರೂಷ-ಮತ್ಯ್ಸರು, ಕೇಕಯರು, ಬಲವಾನ್ ಚೇಕಿತಾನರು, ಮತ್ತು ಸುವ್ರತ ಧರ್ಮರಾಜ.

08021027a ಏತೇ ರಥಾಶ್ವದ್ವಿರದೈಃ ಪತ್ತಿಭಿಶ್ಚೋಗ್ರವಿಕ್ರಮೈಃ|

08021027c ಪರಿವಾರ್ಯ ರಣೇ ಕರ್ಣಂ ನಾನಾಶಸ್ತ್ರೈರವಾಕಿರನ್|

08021027e ಭಾಷಂತೋ ವಾಗ್ಭಿರುಗ್ರಾಭಿಃ ಸರ್ವೇ ಕರ್ಣವಧೇ ವೃತಾಃ||

ಉಗ್ರವಿಕ್ರಮ ರಥ-ಅಶ್ವ-ಗಜ-ಪದಾತಿಸೇನೆಗಳೊಡನೆ ಇವರುಗಳು ರಣದಲ್ಲಿ ಕರ್ಣನನ್ನು ಸುತ್ತುವರೆದು ನಾನಾ ಶಸ್ತ್ರಗಳಿಂದ ಮುಚ್ಚಿಬಿಟ್ಟರು. ಎಲ್ಲರೂ ಕರ್ಣನ ವಧೆಯನ್ನೇ ಉದ್ದೇಶವನ್ನಾಗಿಟ್ಟುಕೊಂಡು ಉಗ್ರ ಮಾತುಗಳನ್ನಾಡುತ್ತಾ ಸುತ್ತುವರೆದರು.

08021028a ತಾಂ ಶಸ್ತ್ರವೃಷ್ಟಿಂ ಬಹುಧಾ ಚಿತ್ತ್ವಾ ಕರ್ಣಃ ಶಿತೈಃ ಶರೈಃ|

08021028c ಅಪೋವಾಹ ಸ್ಮ ತಾನ್ಸರ್ವಾನ್ದ್ರುಮಾನ್ಭಂಕ್ತ್ವೇವ ಮಾರುತಃ||

ಅವರ ಆ ಶಸ್ತ್ರವೃಷ್ಟಿಯನ್ನು ನಿಶಿತ ಶರಗಳಿಂದ ಚೂರು ಚೂರಾಗಿ ಮಾಡಿ ಕರ್ಣನು ಭಿರುಗಾಳಿಯು ಮರಗಳನ್ನು ಬುಡಮೇಲಾಗಿ ಕಿತ್ತೆಸೆಯುವಂತೆ ಅವರೆಲ್ಲರನ್ನೂ ಬೀಳಿಸಿದನು.

08021029a ರಥಿನಃ ಸಮಹಾಮಾತ್ರಾನ್ಗಜಾನಶ್ವಾನ್ಸಸಾದಿನಃ|

08021029c ಶರವ್ರಾತಾಂಶ್ಚ ಸಂಕ್ರುದ್ಧೋ ನಿಘ್ನನ್ಕರ್ಣೋ ವ್ಯದೃಶ್ಯತ||

ಸಂಕ್ರುದ್ಧನಾದ ಕರ್ಣನು ರಥಿಗಳನ್ನೂ, ಮಹಾಗಾತ್ರದ ಆನೆಗಳನ್ನೂ, ಸವಾರರೊಂದಿಗೆ ಕುದುರೆಗಳನ್ನೂ, ಶರವ್ರಾತಗಳನ್ನೂ ನಾಶಗೊಳಿಸುತ್ತಿರುವುದು ಕಾಣುತ್ತಿತ್ತು.

08021030a ತದ್ವಧ್ಯಮಾನಂ ಪಾಂಡೂನಾಂ ಬಲಂ ಕರ್ಣಾಸ್ತ್ರತೇಜಸಾ|

08021030c ವಿಶಸ್ತ್ರಕ್ಷತದೇಹಂ ಚ ಪ್ರಾಯ ಆಸೀತ್ಪರಾಙ್ಮುಖಂ||

ಕರ್ಣನ ಅಸ್ತ್ರತೇಜಸ್ಸಿನಿಂದ ವಧಿಸಲ್ಪಡುತ್ತಿರುವ ಪಾಂಡವರ ಸೇನೆಯ ದೇಹಗಳು ತುಂಡಾಗಿ ನಾಶಗೊಂಡಿದವು. ಪ್ರಾಯಶಃ ಪರಾಙ್ಮುಖರಾದರು.

08021031a ಅಥ ಕರ್ಣಾಸ್ತ್ರಮಸ್ತ್ರೇಣ ಪ್ರತಿಹತ್ಯಾರ್ಜುನಃ ಸ್ವಯಂ|

08021031c ದಿಶಃ ಖಂ ಚೈವ ಭೂಮಿಂ ಚ ಪ್ರಾವೃಣೋಚ್ಚರವೃಷ್ಟಿಭಿಃ||

ಕೂಡಲೆ ಸ್ವಯಂ ಅರ್ಜುನನು ಕರ್ಣನ ಅಸ್ತ್ರಗಳನ್ನು ಅಸ್ತ್ರಗಳಿಂದ ನಾಶಗೊಳಿಸಿದನು ಮತ್ತು ಶರವೃಷ್ಟಿಯಿಂದ ಆಕಾಶ, ದಿಕ್ಕುಗಳು ಮತ್ತು ಭೂಮಿಯನ್ನು ತುಂಬಿಸಿಬಿಟ್ಟನು.

08021032a ಮುಸಲಾನೀವ ನಿಷ್ಪೇತುಃ ಪರಿಘಾ ಇವ ಚೇಷವಃ|

08021032c ಶತಘ್ನ್ಯ ಇವ ಚಾಪ್ಯನ್ಯೇ ವಜ್ರಾಣ್ಯುಗ್ರಾಣಿ ವಾಪರೇ||

ಅವನ ಬಾಣಗಳು ಮುಸಲಗಳಂತೆ, ಶತ್ರಘ್ನಗಳಂತೆ ಮತ್ತು ಇನ್ನು ಉಳಿದವು ಉಗ್ರ ವಜ್ರಗಳಂತೆ ಬೀಳುತ್ತಿದ್ದವು.

08021033a ತೈರ್ವಧ್ಯಮಾನಂ ತತ್ಸೈನ್ಯಂ ಸಪತ್ತ್ಯಶ್ವರಥದ್ವಿಪಂ|

08021033c ನಿಮೀಲಿತಾಕ್ಷಮತ್ಯರ್ಥಮುದಭ್ರಾಮ್ಯತ್ಸಮಂತತಃ||

ಅವುಗಳಿಂದ ವಧಿಸಲ್ಪಡುತ್ತಿರುವ ಪದಾತಿ-ಅಶ್ವ-ರಥ-ಗಜಗಳಿಂದೊಡಗೂಡಿದ ಆ ಸೈನ್ಯವು ಕಣ್ಣುಮುಚ್ಚಿ ಗಟ್ಟಿಯಾಗಿ ಕೂಗುತ್ತಾ ಚಡಪಡಿಸತೊಡಗಿತು.

08021034a ನಿಷ್ಕೈವಲ್ಯಂ ತದಾ ಯುದ್ಧಂ ಪ್ರಾಪುರಶ್ವನರದ್ವಿಪಾಃ|

08021034c ವಧ್ಯಮಾನಾಃ ಶರೈರನ್ಯೇ ತದಾ ಭೀತಾಃ ಪ್ರದುದ್ರುವುಃ||

ಶರಗಳಿಂದ ವಧಿಸಲ್ಪಡುತ್ತಿರುವ ಅಶ್ವ-ನರ-ಗಜಗಳು ಯುದ್ಧದಲ್ಲಿ ನಿಶ್ಚಿತ ಕೈವಲ್ಯವನ್ನು ಪಡೆದರು. ಅನ್ಯರು ಭೀತರಾಗಿ ಪಲಾಯನಗೈದರು.

08021035a ಏವಂ ತೇಷಾಂ ತದಾ ಯುದ್ಧೇ ಸಂಸಕ್ತಾನಾಂ ಜಯೈಷಿಣಾಂ|

08021035c ಗಿರಿಮಸ್ತಂ ಸಮಾಸಾದ್ಯ ಪ್ರತ್ಯಪದ್ಯತ ಭಾನುಮಾನ್||

ಈ ರೀತಿ ಜಯೈಷಿಗಳು ಯುದ್ಧದಲ್ಲಿ ತೊಡಗಿರಲು ಭಾನುಮತನು ಅಸ್ತಾಚಲವನ್ನು ಸೇರಿ ಕಾಣದಂತಾದನು.

08021036a ತಮಸಾ ಚ ಮಹಾರಾಜ ರಜಸಾ ಚ ವಿಶೇಷತಃ|

08021036c ನ ಕಿಂ ಚಿತ್ಪ್ರತ್ಯಪಶ್ಯಾಮ ಶುಭಂ ವಾ ಯದಿ ವಾಶುಭಂ||

ಮಹಾರಾಜ! ಕತ್ತಲೆಯಿಂದ ಮತ್ತು ವಿಶೇಷವಾದ ಧೂಳಿನಿಂದಾಗಿ ಅಲ್ಲಿ ಶುಭಾಶುಭವಾದ ಏನೂ ಕಾಣದಂತಾಯಿತು.

08021037a ತೇ ತ್ರಸಂತೋ ಮಹೇಷ್ವಾಸಾ ರಾತ್ರಿಯುದ್ಧಸ್ಯ ಭಾರತ|

08021037c ಅಪಯಾನಂ ತತಶ್ಚಕ್ರುಃ ಸಹಿತಾಃ ಸರ್ವವಾಜಿಭಿಃ||

ಭಾರತ! ರಾತ್ರಿಯುದ್ಧಕ್ಕೆ ಹೆದರಿದ್ದ ಆ ಮಹೇಷ್ವಾಸರು ಸರ್ವವಾಹನಗಳೊಂದಿಗೆ ಹಿಂದೆಸರಿಯಲು ಪ್ರಾರಂಭಿಸಿದರು.

08021038a ಕೌರವೇಷು ಚ ಯಾತೇಷು ತದಾ ರಾಜನ್ದಿನಕ್ಷಯೇ|

08021038c ಜಯಂ ಸುಮನಸಃ ಪ್ರಾಪ್ಯ ಪಾರ್ಥಾಃ ಸ್ವಶಿಬಿರಂ ಯಯುಃ||

08021039a ವಾದಿತ್ರಶಬ್ದೈರ್ವಿವಿಧೈಃ ಸಿಂಹನಾದೈಶ್ಚ ನರ್ತಿತೈಃ|

08021039c ಪರಾನವಹಸಂತಶ್ಚ ಸ್ತುವಂತಶ್ಚಾಚ್ಯುತಾರ್ಜುನೌ||

ರಾಜನ್! ಆ ದಿನಕ್ಷಯದಲ್ಲಿ ಕೌರವರು ಹೊರಟುಹೋಗಲು ಜಯವನ್ನು ಗಳಿಸಿ ಸುಮನಸ್ಕರಾದ ಪಾರ್ಥರು ವಿವಿಧ ಮಂಗಳವಾದ್ಯಗಳನ್ನು ನುಡಿಸುತ್ತಾ, ಸಿಂಹನಾದಗಳಿಂದ ನರ್ತಿಸುತ್ತಾ, ಶತ್ರುಗಳನ್ನು ಹಾಸ್ಯಮಾಡುತ್ತಾ, ಕೃಷ್ಣಾರ್ಜುನರನ್ನು ಸ್ತುತಿಸುತ್ತಾ ತಮ್ಮ ಶಿಬಿರಕ್ಕೆ ತೆರಳಿದರು.

08021040a ಕೃತೇಽವಹಾರೇ ತೈರ್ವೀರೈಃ ಸೈನಿಕಾಃ ಸರ್ವ ಏವ ತೇ|

08021040c ಆಶಿಷಃ ಪಾಂಡವೇಯೇಷು ಪ್ರಾಯುಜ್ಯಂತ ನರೇಶ್ವರಾಃ||

ಆ ವೀರರಿಂದ ಹಿಂದೆಕರೆಸಲ್ಪಟ್ಟ ಸೈನಿಕರು ಮತ್ತು ನರೇಶ್ವರರೆಲ್ಲರೂ ಪಾಂಡವೇಯರನ್ನು ಆಶೀರ್ವದಿಸಿ ವಿಶ್ರಮಿಸಿದರು.

08021041a ತತಃ ಕೃತೇಽವಹಾರೇ ಚ ಪ್ರಹೃಷ್ಟಾಃ ಕುರುಪಾಂಡವಾಃ|

08021041c ನಿಶಾಯಾಂ ಶಿಬಿರಂ ಗತ್ವಾ ನ್ಯವಿಶಂತ ನರೇಶ್ವರಾಃ||

ಹಿಂದೆಸರಿದ ಕುರುಪಾಂಡವ ನರೇಶ್ವರರು ಪ್ರಹೃಷ್ಟರಾಗಿ ಶಿಬಿರಗಳಿಗೆ ತೆರಳಿ ರಾತ್ರಿಯನ್ನು ಕಳೆದರು.

08021042a ಯಕ್ಷರಕ್ಷಹ್ಪಿಶಾಚಾಶ್ಚ ಶ್ವಾಪದಾನಿ ಚ ಸಂಘಶಃ|

08021042c ಜಗ್ಮುರಾಯೋಧನಂ ಘೋರಂ ರುದ್ರಸ್ಯಾನರ್ತನೋಪಮಂ||

ರುದ್ರನ ಕ್ರೀಡಾಸ್ಥಳದಂತಿರುವ ಘೋರ ರಣಭೂಮಿಗೆ ಯಕ್ಷ-ರಾಕ್ಷಸ-ಪಿಶಾಚಿ ಗಣಗಳು ಹೋಗಿ ಸೇರಿಕೊಂಡವು.”

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಪ್ರಥಮಯುದ್ಧದಿವಸಾವಹಾರೇ ಏಕವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಪ್ರಥಮಯುದ್ಧದಿವಸಾವಹಾರ ಎನ್ನುವ ಇಪ್ಪತ್ತೊಂದನೇ ಅಧ್ಯಾಯವು.

Comments are closed.