Karna Parva: Chapter 8

ಕರ್ಣ ಪರ್ವ

ಕ್ಷೇಮಧೂರ್ತಿವಧೆ

ಯುದ್ಧವರ್ಣನೆ (೧-೨೪). ಕುಲೂತಾಧಿಪತಿ ಕ್ಷೇಮಧೂರ್ತಿ-ಭೀಮಸೇನರ ಯುದ್ಧ; ಕ್ಷೇಮಧೂರ್ತಿಯು ಭೀಮಸೇನನಿಂದ ಹತನಾದುದು (೨೫-೪೫).

08008001 ಸಂಜಯ ಉವಾಚ|

08008001a ತೇ ಸೇನೇಽನ್ಯೋನ್ಯಮಾಸಾದ್ಯ ಪ್ರಹೃಷ್ಟಾಶ್ವನರದ್ವಿಪೇ|

08008001c ಬೃಹತ್ಯೌ ಸಂಪ್ರಜಹ್ರಾತೇ ದೇವಾಸುರಚಮೂಪಮೇ||

ಸಂಜಯನು ಹೇಳಿದನು: “ಅನ್ಯೋನ್ಯರನ್ನು ಎದುರಿಸಿದ ಆ ಸೇನೆಗಳ ಆನೆ-ಕುದುರೆ-ಪದಾತಿಗಳು ಪ್ರಹೃಷ್ಟರಾಗಿದ್ದರು. ದೇವಾಸುರರ ಸೇನೆಗಳಂತೆ ಬೆಳಗುತ್ತಿದ್ದ ಆ ಸೇನೆಗಳು ಅತಿ ವಿಶಾಲವಾಗಿದ್ದವು.

08008002a ತತೋ ಗಜಾ ರಥಾಶ್ಚಾಶ್ವಾಃ ಪತ್ತಯಶ್ಚ ಮಹಾಹವೇ|

08008002c ಸಂಪ್ರಹಾರಂ ಪರಂ ಚಕ್ರುರ್ದೇಹಪಾಪ್ಮಪ್ರಣಾಶನಂ||

ಅನಂತರ ಆನೆಗಳು, ರಥಗಳು, ಕುದುರೆಗಳು ಮತ್ತು ಪದಾತಿಗಳು ಮಹಾಯುದ್ಧದಲ್ಲಿ ದೇಹ-ಪಾಪಗಳನ್ನು ನಾಶಗೊಳಿಸುವ ಪ್ರಹಾರಗಳನ್ನು ಶತ್ರುಗಳ ಮೇಲೆ ಪ್ರಹರಿಸಿದರು.

08008003a ಪೂರ್ಣಚಂದ್ರಾರ್ಕಪದ್ಮಾನಾಂ ಕಾಂತಿತ್ವಿಡ್ಗಂದತಃ ಸಮೈಃ|

08008003c ಉತ್ತಮಾಂಗೈರ್ನೃಸಿಂಹಾನಾಂ ನೃಸಿಂಹಾಸ್ತಸ್ತರುರ್ಮಹೀಂ||

ಪೂರ್ಣಚಂದ್ರ, ಸೂರ್ಯ ಮತ್ತು ಪದ್ಮಗಳ ಕಾಂತಿಯಿಂದ ಸಮನಾಗಿ ಬೆಳಗುತ್ತಿದ್ದ ಎರಡೂ ಕಡೆಯ ನರಸಿಂಹರ ಶಿರಸ್ಸುಗಳು ರಣಭೂಮಿಯನ್ನು ತುಂಬಿಬಿಟ್ಟಿದ್ದವು.

08008004a ಅರ್ಧಚಂದ್ರೈಸ್ತಥಾ ಭಲ್ಲೈಃ ಕ್ಷುರಪ್ರೈರಸಿಪಟ್ಟಿಶೈಃ|

08008004c ಪರಶ್ವಧೈಶ್ಚಾಪ್ಯಕೃಂತನ್ನುತ್ತಮಾಂಗಾನಿ ಯುಧ್ಯತಾಂ||

ಯುದ್ಧಮಾಡುತ್ತಿದ್ದ ಅವರು ಅರ್ಧಚಂದ್ರ, ಭಲ್ಲ, ಕ್ಷುರಪ್ರ, ಖಡ್ಗ, ಪಟ್ಟಿಷ ಮತ್ತು ಪರಶುಗಳಿಂದ ಇತರರ ಶಿರಗಳನ್ನು ಕತ್ತರಿಸುತ್ತಿದ್ದರು.

08008005a ವ್ಯಾಯತಾಯತಬಾಹೂನಾಂ ವ್ಯಾಯತಾಯತಬಾಹುಭಿಃ|

08008005c ವ್ಯಾಯತಾ ಬಾಹವಃ ಪೇತುಶ್ಚಿನ್ನಮುಷ್ಟ್ಯಾಯುಧಾಂಗದಾಃ||

ದಪ್ಪ ಸುದೀರ್ಘ ಬಾಹುಗಳಿಂದ ಕತ್ತರಿಸಲ್ಪಟ್ಟ ದಷ್ಟಪುಷ್ಟ ನೀಳ ಬಾಹುಗಳು ಅಂಗದ-ಆಯುಧಗಳ ಸಮೇತ ರಣಾಂಗಣದಲ್ಲಿ ಬಿದ್ದಿದ್ದವು.

08008006a ತೈಃ ಸ್ಫುರದ್ಭಿರ್ಮಹೀ ಭಾತಿ ರಕ್ತಾಂಗುಲಿತಲೈಸ್ತದಾ|

08008006c ಗರುಡಪ್ರಹತೈರುಗ್ರೈಃ ಪಂಚಾಸ್ಯೈರಿವ ಪನ್ನಗೈಃ||

ರಕ್ತಲೇಪಿತ ಅಂಗೈಗಳಿಂದಲೂ ಉಗುರುಗಳಿಂದಲೂ ಕೂಡಿದ್ದ ಆ ಬಾಹುಗಳು ಗರುಡನಿಂದ ಪ್ರಹರಿಸಲ್ಪಟ್ಟು ಭೂಮಿಯ ಮೇಲೆ ಬಿದ್ದಿದ್ದ ಐದು ಹೆಡೆಗಳ ಸರ್ಪಗಳಂತೆ ಕಾಣುತ್ತಿದ್ದವು.

08008007a ಹಯಸ್ಯಂದನನಾಗೇಭ್ಯಃ ಪೇತುರ್ವೀರಾ ದ್ವಿಷದ್ಧತಾಃ|

08008007c ವಿಮಾನೇಭ್ಯೋ ಯಥಾ ಕ್ಷೀಣೇ ಪುಣ್ಯೇ ಸ್ವರ್ಗಸದಸ್ತಥಾ||

ಶತ್ರುಗಳಿಂದ ಹೊಡೆಯಲ್ಪಟ್ಟ ವೀರರು ಪುಣ್ಯಗಳು ಕ್ಷೀಣವಾಗಲು ವಿಮಾನಗಳಿಂದ ಬೀಳುವ ಸ್ವರ್ಗಸದಸ್ಯರಂತೆ ಆನೆ-ಕುದುರೆಗಳ ಭುಜಗಳ ಮೇಲಿಂದ ಕೆಳಕ್ಕೆ ಬೀಳುತ್ತಿದ್ದರು.

08008008a ಗದಾಭಿರನ್ಯೈರ್ಗುರ್ವೀಭಿಃ ಪರಿಘೈರ್ಮುಸಲೈರಪಿ|

08008008c ಪೋಥಿತಾಃ ಶತಶಃ ಪೇತುರ್ವೀರಾ ವೀರತರೈ ರಣೇ||

ರಣದಲ್ಲಿ ವೀರ ಯೋಧರನ್ನು ಅವರಿಗಿಂತಲೂ ವೀರರಾದವರು ಭಾರ ಗದೆಗಳಿಂದಲೂ, ಮತ್ತು ಅನ್ಯ ಪರಿಘ-ಮುಸಲಗಳಿಂದಲೂ ಹೊಡೆದು ಕೆಳಕ್ಕೆ ಕೆಡವುತ್ತಿದ್ದರು.

08008009a ರಥಾ ರಥೈರ್ವಿನಿಹತಾ ಮತ್ತಾ ಮತ್ತೈರ್ದ್ವಿಪೈರ್ದ್ವಿಪಾಃ|

08008009c ಸಾದಿನಃ ಸಾದಿಭಿಶ್ಚೈವ ತಸ್ಮಿನ್ಪರಮಸಂಕುಲೇ||

ಆ ಪರಮಸಂಕುಲದಲ್ಲಿ ರಥಗಳನ್ನು ರಥಗಳು ಧ್ವಂಸಮಾಡಿದವು. ಮದಿಸಿದ ಆನೆಗಳು ಮದಿಸಿದ ಆನೆಗಳನ್ನು ಮತ್ತು ಹಾಗೆಯೇ ಅಶ್ವಾರೋಹಿಗಳು ಅಶ್ವಾರೋಹಿಗಳನ್ನು ನಾಶಪಡಿಸಿದವು.

08008010a ರಥಾ ವರರಥೈರ್ನಾಗೈರಶ್ವಾರೋಹಾಶ್ಚ ಪತ್ತಿಭಿಃ|

08008010c ಅಶ್ವಾರೋಹೈಃ ಪದಾತಾಶ್ಚ ನಿಹತಾ ಯುಧಿ ಶೇರತೇ||

ರಥಗಳು ಶ್ರೇಷ್ಠರಥಗಳಿಂದ, ಅಶ್ವಾರೋಹಿಗಳು ಮತ್ತು ಪದಾತಿಗಳು ಆನೆಗಳಿಂದ, ಪದಾತಿಗಳು ಅಶ್ವಾರೋಹಿಗಳಿಂದ ಸಂಹರಿಸಲ್ಪಟ್ಟು ಮಲಗಿದವು.

08008011a ರಥಾಶ್ವಪತ್ತಯೋ ನಾಗೈ ರಥೈರ್ನಾಗಾಶ್ಚ ಪತ್ತಯಃ|

08008011c ರಥಪತ್ತಿದ್ವಿಪಾಶ್ಚಾಶ್ವೈರ್ನೃಭಿಶ್ಚಾಶ್ವರಥದ್ವಿಪಾಃ||

ಆನೆಗಳಿಂದ ರಥ-ಕುದುರೆ-ಪದಾತಿಗಳೂ, ರಥಗಳಿಂದ ಆನೆ-ಕುದುರೆ-ಪದಾತಿಗಳೂ, ರಥ-ಪದಾತಿ-ಆನೆ-ಕುದುರೆಗಳಿಂದ ಪದಾತಿ-ರಥ-ಆನೆ-ಕುದುರೆಗಳೂ ಹತವಾದವು.

08008012a ರಥಾಶ್ವೇಭನರಾಣಾಂ ಚ ನರಾಶ್ವೇಭರಥೈಃ ಕೃತಂ|

08008012c ಪಾಣಿಪಾದೈಶ್ಚ ಶಸ್ತ್ರೈಶ್ಚ ರಥೈಶ್ಚ ಕದನಂ ಮಹತ್||

ರಥ ಮತ್ತು ಕುದುರೆಗಳನ್ನೇರಿದ್ದ ಯೋಧರು ರಥ ಮತ್ತು ಕುದುರೆಗಳ ಮೇಲೆ ಏರಿದ್ದ ಯೋಧರನ್ನು ಕೈಗಳಿಂದಲೂ, ಶಸ್ತ್ರಗಳಿಂದಲೂ, ರಥಗಳಿಂದಲೂ ಹೊಡೆದು ಜೋರಾಗಿ ಕದನವಾಡುತ್ತಿದ್ದರು.

08008013a ತಥಾ ತಸ್ಮಿನ್ಬಲೇ ಶೂರೈರ್ವಧ್ಯಮಾನೇ ಹತೇಽಪಿ ಚ|

08008013c ಅಸ್ಮಾನಭ್ಯಾಗಮನ್ಪಾರ್ಥಾ ವೃಕೋದರಪುರೋಗಮಾಃ||

ಹೀಗೆ ಶೂರರಿಂದ ವಧಿಸಲ್ಪಟ್ಟು ಹತರಾಗುತ್ತಿರಲು, ವೃಕೋದರನ ಮುಂದಾಳುತ್ವದಲ್ಲಿ ಪಾರ್ಥರು ನಮ್ಮ ಮೇಲೆ ಎರಗಿದರು.

08008014a ಧೃಷ್ಟದ್ಯುಮ್ನಃ ಶಿಖಂಡೀ ಚ ದ್ರೌಪದೇಯಾಃ ಪ್ರಭದ್ರಕಾಃ|

08008014c ಸಾತ್ಯಕಿಶ್ಚೇಕಿತಾನಶ್ಚ ದ್ರವಿಡೈಃ ಸೈನಿಕೈಃ ಸಹ||

08008015a ಭೃತಾ ವಿತ್ತೇನ ಮಹತಾ ಪಾಂಡ್ಯಾಶ್ಚೌಡ್ರಾಃ ಸಕೇರಲಾಃ|

08008015c ವ್ಯೂಢೋರಸ್ಕಾ ದೀರ್ಘಭುಜಾಃ ಪ್ರಾಂಶವಃ ಪ್ರಿಯದರ್ಶನಾಃ||

ಧೃಷ್ಟದ್ಯುಮ್ನ, ಶಿಖಂಡೀ, ದ್ರೌಪದೇಯರು, ಪ್ರಭದ್ರಕರು, ಸಾತ್ಯಕಿ, ಚೇಕಿತಾನರು ಮತ್ತು ವಿಶಾಲ‌ಎದೆಗಳ ದೀರ್ಘಬಾಹುಗಳ ವಿಶಾಲಕಣ್ಣುಗಳ ಸುಂದರ ದ್ರವಿಡ ಸೈನಿಕರೊಂದಿಗೆ, ಮಹಾ ವ್ಯೂಹದಲ್ಲಿದ್ದ ಪಾಂಡ್ಯರು, ಔಡ್ರರು, ಮತ್ತು ಕೇರಳರು ಭೀಮನನ್ನು ಹಿಂಬಾಲಿಸಿದ್ದರು.

08008016a ಆಪೀಡಿನೋ ರಕ್ತದಂತಾ ಮತ್ತಮಾತಂಗವಿಕ್ರಮಾಃ|

08008016c ನಾನಾವಿರಾಗವಸನಾ ಗಂದಚೂರ್ಣಾವಚೂರ್ಣಿತಾಃ||

ಮತ್ತಮಾತಂಗದ ವಿಕ್ರಮಗಳುಳ್ಳ ಅವರು ಶಿರೋಭೂಷಣಗಳನ್ನೂ ಆಭರಣಗಳನ್ನೂ ತೊಟ್ಟಿದ್ದರು. ಅವರ ಹಲ್ಲುಗಳು ಕೆಂಪಾಗಿದ್ದವು, ಬಣ್ಣಬಣ್ಣದ ವಸ್ತ್ರಗಳನ್ನು ತೊಟ್ಟಿದ್ದರು. ಸುಗಂಧದ್ರವ್ಯಗಳನ್ನು ಶರೀರಗಳಿಗೆ ಲೇಪಿಸಿಕೊಂಡಿದ್ದರು.

08008017a ಬದ್ಧಾಸಯಃ ಪಾಶಹಸ್ತಾ ವಾರಣಪ್ರತಿವಾರಣಾಃ|

08008017c ಸಮಾನಮೃತ್ಯವೋ ರಾಜನ್ನನೀಕಸ್ಥಾಃ ಪರಸ್ಪರಂ||

ರಾಜನ್! ಖಡ್ಗಗಳನ್ನು ಸೊಂಟಕ್ಕೆ ಬಿಗಿದು ಕೊಂಡಿದ್ದರು. ಕೈಗಳಲ್ಲಿ ಪಾಶಗಳನ್ನು ಹಿಡಿದಿದ್ದರು. ಆನೆಗಳನ್ನೂ ತಡೆದು ನಿಲ್ಲಿಸಬಲ್ಲ ಅವರು ಸಮಾನಮೃತ್ಯುವನ್ನು ಬಯಸಿ ಪರಸ್ಪರರಿಂದ ಅಗಲದೇ ಒಟ್ಟಾಗಿಯೇ ಇರುತ್ತಿದ್ದರು.

08008018a ಕಲಾಪಿನಶ್ಚಾಪಹಸ್ತಾ ದೀರ್ಘಕೇಶಾಃ ಪ್ರಿಯಾಹವಾಃ|

08008018c ಪತ್ತಯಃ ಸಾತ್ಯಕೇರಂದ್ರಾ ಘೋರರೂಪಪರಾಕ್ರಮಾಃ||

ನವಿಲುಗರಿಗಳಿಂದ ತಲೆಗಳನ್ನು ಅಲಂಕರಸಿಕೊಂಡಿದ್ದರು. ಚಾಪಗಳನ್ನು ಹಿಡಿದಿದ್ದರು. ನೀಳಕೂದಲಿನ, ಪ್ರಿಯವಾಗಿ ಮಾತನಾಡುತ್ತಿದ್ದ ಆ ಪದಾತಿ-ಕುದುರೆ ಸವಾರರು ಪರಾಕ್ರಮದಲ್ಲಿ ಘೋರರೂಪಿಗಳಾಗಿದ್ದರು.

08008019a ಅಥಾಪರೇ ಪುನಃ ಶೂರಾಶ್ಚೇದಿಪಾಂಚಾಲಕೇಕಯಾಃ|

08008019c ಕರೂಷಾಃ ಕೋಸಲಾಃ ಕಾಶ್ಯಾ ಮಾಗಧಾಶ್ಚಾಪಿ ದುದ್ರುವುಃ||

ಇವರಲ್ಲದೇ ಶೂರರಾದ ಚೇದಿ, ಪಾಂಚಾಲ, ಕೇಕಯ, ಕರೂಷ, ಕೋಸಲ, ಕಾಶಿ, ಮಾಗಧ ಸೇನೆಗಳೂ ನಮ್ಮ ಮೇಲೆ ಆಕ್ರಮಣಮಾಡಿದವು.

08008020a ತೇಷಾಂ ರಥಾಶ್ಚ ನಾಗಾಶ್ಚ ಪ್ರವರಾಶ್ಚಾಪಿ ಪತ್ತಯಃ|

08008020c ನಾನಾವಿಧರವೈರ್ಹೃಷ್ಟಾ ನೃತ್ಯಂತಿ ಚ ಹಸಂತಿ ಚ||

ಅವರ ರಥಗಳು, ಆನೆಗಳು, ಕುದುರೆಗಳು ಮತ್ತು ಪದಾತಿಗಳು ಹರ್ಷದಿಂದ ನಾನವಿಧವಾಗಿ ಕೂಗಿ ನಗುತ್ತಾ ಕುಣಿಯುತ್ತಿದ್ದವು.

08008021a ತಸ್ಯ ಸೈನ್ಯಸ್ಯ ಮಹತೋ ಮಹಾಮಾತ್ರವರೈರ್ವೃತಃ|

08008021c ಮಧ್ಯಂ ವೃಕೋದರೋಽಭ್ಯಾಗಾತ್ತ್ವದೀಯಂ ನಾಗಧೂರ್ಗತಃ||

ಅಂತಹ ವಿಶಾಲ ಸೈನ್ಯದ ಮಧ್ಯದಲ್ಲಿ ವೃಕೋದರನು ಆನೆಯ ಮೇಲೆ ಕುಳಿತು ಅನೇಕ ಮಹಾಗಾತ್ರದ ಶ್ರೇಷ್ಠ ಆನೆಗಳಿಂದ ಪರಿವೃತನಾಗಿ ನಿನ್ನ ಸೈನ್ಯದಕಡೆ ಧಾವಿಸುತ್ತಿದ್ದನು.

08008022a ಸ ನಾಗಪ್ರವರೋಽತ್ಯುಗ್ರೋ ವಿಧಿವತ್ಕಲ್ಪಿತೋ ಬಭೌ|

08008022c ಉದಯಾದ್ರ್ಯಗ್ರ್ಯಭವನಂ ಯಥಾಭ್ಯುದಿತಭಾಸ್ಕರಂ||

ವಿಧಿವತ್ತಾಗಿ ಸಜ್ಜಾಗಿದ್ದ ಆ ಉಗ್ರ ಶ್ರೇಷ್ಠ ಆನೆಯು ಸೂರ್ಯನಿಂದ ಕೂಡಿದ ಉದಯಾಚಲದ ಉಚ್ಛ ಶಿಖರದಂತೆ ಪ್ರಕಾಶಿಸುತ್ತಿತ್ತು.

08008023a ತಸ್ಯಾಯಸಂ ವರ್ಮವರಂ ವರರತ್ನವಿಭೂಷಿತಂ|

08008023c ತಾರೋದ್ಭಾಸಸ್ಯ ನಭಸಃ ಶಾರದಸ್ಯ ಸಮತ್ವಿಷಂ||

ಶ್ರೇಷ್ಠ ರತ್ನಗಳಿಂದ ವಿಭೂಷಿತಗೊಂಡಿದ್ದ ಆ ಮಹಾಗಜದ ಲೋಹಮಯ ಕವಚವು ನಕ್ಷತ್ರಗಳಿಂದ ಕೂಡಿದ ಶರತ್ಕಾಲದ ಅಕಾಶದಂತೆ ಹೊಳೆಯುತ್ತಿತ್ತು.

08008024a ಸ ತೋಮರಪ್ರಾಸಕರಶ್ಚಾರುಮೌಲಿಃ ಸ್ವಲಂಕೃತಃ|

08008024c ಚರನ್ಮಧ್ಯಂದಿನಾರ್ಕಾಭಸ್ತೇಜಸಾ ವ್ಯದಹದ್ರಿಪೂನ್||

ಸುಂದರ ಮುಕುಟದಿಂದಲೂ ಆಭರಣಗಳಿಂದಲೂ ಸಮಲಂಕೃತ ಭೀಮಸೇನನು ಕೈಯಲ್ಲಿ ತೋಮರ ಪ್ರಾಸಗಳನ್ನು ಹಿಡಿದು ಮಧ್ಯಾಹ್ನದ ಸೂರ್ಯನಂತೆ ಶತ್ರುಗಳನ್ನು ದಹಿಸುತ್ತಾ ಚಲಿಸುತ್ತಿದ್ದನು.

08008025a ತಂ ದೃಷ್ಟ್ವಾ ದ್ವಿರದಂ ದೂರಾತ್ ಕ್ಷೇಮಧೂರ್ತಿರ್ದ್ವಿಪಸ್ಥಿತಃ|

08008025c ಆಹ್ವಯಾನೋಽಭಿದುದ್ರಾವ ಪ್ರಮನಾಃ ಪ್ರಮನಸ್ತರಂ||

ದೂರದಿಂದಲೇ ಆ ಆನೆಯನ್ನು ನೋಡಿ ಆನೆಯ ಮೇಲಿದ್ದ ಕ್ಷೇಮಧೂರ್ತಿಯು ಉತ್ಸಾಹದಿಂದ ಕೂಗುತ್ತಾ ಭೀಮನನ್ನು ಯುದ್ಧಕ್ಕೆ ಆಹ್ವಾನಿಸುತ್ತಾ ಆಕ್ರಮಣಿಸಿದನು.

08008026a ತಯೋಃ ಸಮಭವದ್ಯುದ್ಧಂ ದ್ವಿಪಯೋರುಗ್ರರೂಪಯೋಃ|

08008026c ಯದೃಚ್ಚಯಾ ದ್ರುಮವತೋರ್ಮಹಾಪರ್ವತಯೋರಿವ||

ವೃಕ್ಷಗಳಿಂದ ತುಂಬಿದ್ದ ಎರಡು ಪರ್ವತಗಳ ಮಧ್ಯೆ ದೈವೀ ಸಂಘಟನೆಯಿಂದ ಸಂಘರ್ಷವಾಗುವ ರೀತಿಯಲ್ಲಿ ಅವರಿಬ್ಬರ ಆ ಎರಡು ಉಗ್ರರೂಪೀ ಆನೆಗಳ ಮಧ್ಯೆ ಯುದ್ಧವು ನಡೆಯಿತು.

08008027a ಸಂಸಕ್ತನಾಗೌ ತೌ ವೀರೌ ತೋಮರೈರಿತರೇತರಂ|

08008027c ಬಲವತ್ಸೂರ್ಯರಶ್ಮ್ಯಾಭೈರ್ಭಿತ್ತ್ವಾ ಭಿತ್ತ್ವಾ ವಿನೇದತುಃ||

ಎರಡು ಆನೆಗಳೂ ಸೆಣಸಾಡುತ್ತಿರಲು ಅವರಿಬ್ಬರು ವೀರರು ಸೂರ್ಯರಶ್ಮಿಗೆ ಸಮಾನ ಕಾಂತಿಗಳುಳ್ಳ ತೋಮರಗಳಿಂದ ಅನ್ಯೋನ್ಯರನ್ನು ಬಲವನ್ನುಪಯೋಗಿಸಿ ಹೊಡೆದು ಸಿಂಹನಾದಗೈದರು.

08008028a ವ್ಯಪಸೃತ್ಯ ತು ನಾಗಾಭ್ಯಾಂ ಮಂಡಲಾನಿ ವಿಚೇರತುಃ|

08008028c ಪ್ರಗೃಹ್ಯ ಚೈವ ಧನುಷೀ ಜಘ್ನತುರ್ವೈ ಪರಸ್ಪರಂ||

ಆನೆಗಳನ್ನು ಹಿಂದೆ ಸರಿಸಿಕೊಂಡು ಇಬ್ಬರೂ ಮಂಡಲಾಕಾರವಾಗಿ ತಿರುಗತೊಡಗಿದರು. ಇಬ್ಬರೂ ಧನುಸ್ಸುಗಳನ್ನು ಹಿಡಿದು ಪರಸ್ಪರರನ್ನು ಪ್ರಹರಿಸತೊಡಗಿದರು.

08008029a ಕ್ಷ್ವೇಡಿತಾಸ್ಫೋಟಿತರವೈರ್ಬಾಣಶಬ್ದೈಶ್ಚ ಸರ್ವಶಃ|

08008029c ತೌ ಜನಾನ್ ಹರ್ಷಯಿತ್ವಾ ಚ ಸಿಂಹನಾದಾನ್ಪ್ರಚಕ್ರತುಃ||

ಅವರಿಬ್ಬರೂ ಚಪ್ಪಾಳೆಗಳಿಂದಲೂ, ಟೇಂಕಾರಗಳಿಂದಲೂ, ಬಾಣಗಳ ಶಬ್ಧಗಳಿಂದಲೂ ಸುತ್ತಲಿದ್ದ ಜನರನ್ನು ಹರ್ಷಗೊಳಿಸುತ್ತಾ ಸಿಂಹನಾದಗೈದರು.

08008030a ಸಮುದ್ಯತಕರಾಭ್ಯಾಂ ತೌ ದ್ವಿಪಾಭ್ಯಾಂ ಕೃತಿನಾವುಭೌ|

08008030c ವಾತೋದ್ಧೂತಪತಾಕಾಭ್ಯಾಂ ಯುಯುಧಾತೇ ಮಹಾಬಲೌ||

ಗಾಳಿಯಿಂದ ಪರಪರನೆ ಹಾರಾಡುತ್ತಿದ್ದ ಪತಾಕೆಗಳಿಂದ ಕೂಡಿದ ಮತ್ತು ಸೊಂಡಿಲುಗಳನ್ನು ಮೇಲಕ್ಕೆತ್ತಿದ್ದ ಮಹಾ ಗಜಗಳನ್ನು ಬಳಸಿ ಆ ಇಬ್ಬರು ಮಹಾಬಲರೂ ಯುದ್ಧಮಾಡುತ್ತಿದ್ದರು.

08008031a ತಾವನ್ಯೋನ್ಯಸ್ಯ ಧನುಷೀ ಚಿತ್ತ್ವಾನ್ಯೋನ್ಯಂ ವಿನೇದತುಃ|

08008031c ಶಕ್ತಿತೋಮರವರ್ಷೇಣ ಪ್ರಾವೃಣ್ಮೇಘಾವಿವಾಂಬುಭಿಃ||

ವರ್ಷಾಕಾಲದ ಮೇಘಗಳು ಮಳೆಗರೆಯುವಂತೆ ಅವರು ಶಕ್ತಿ-ತೋಮರವರ್ಷಗಳಿಂದ ಪರಸ್ಪರರ ಧನುಸ್ಸುಗಳನ್ನು ತುಂಡರಿಸಿ ಗರ್ಜಿಸಿದರು.

08008032a ಕ್ಷೇಮಧೂರ್ತಿಸ್ತದಾ ಭೀಮಂ ತೋಮರೇಣ ಸ್ತನಾಂತರೇ|

08008032c ನಿರ್ಬಿಭೇದ ತು ವೇಗೇನ ಷಡ್ಭಿಶ್ಚಾಪ್ಯಪರೈರ್ನದನ್||

ಆಗ ಕ್ಷೇಮಧೂರ್ತಿಯು ತೋಮರದಿಂದ ಭೀಮನ ವಕ್ಷಸ್ಥಳಕ್ಕೆ ಹೊಡೆದು ನಂತರ ವೇಗದಿಂದ ಇನ್ನೂ ಆರು ತೋಮರಗಳಿಂದ ಹೊಡೆದು ಗರ್ಜಿಸಿದನು.

08008033a ಸ ಭೀಮಸೇನಃ ಶುಶುಭೇ ತೋಮರೈರಂಗಮಾಶ್ರಿತೈಃ|

08008033c ಕ್ರೋಧದೀಪ್ತವಪುರ್ಮೇಘೈಃ ಸಪ್ತಸಪ್ತಿರಿವಾಂಶುಮಾನ್||

ಅಂಗಗಳಲ್ಲಿ ತೋಮರಗಳು ಅಂಟಿಕೊಂಡಿರಲು ಕ್ರೋಧದೀಪ್ತನಾದ ಭೀಮಸೇನನು ಮೇಘಗಳಿಂದ ಮುಚ್ಚಲ್ಪಟ್ಟ ಏಳು ಕುದುರೆಗಳ ರಥದ ಮೇಲೆ ಕುಳಿತಿದ್ದ ಸೂರ್ಯನಂತೆ ಶೋಭಿಸಿದನು.

08008034a ತತೋ ಭಾಸ್ಕರವರ್ಣಾಭಂ ಅಂಜೋಗತಿಮಯಸ್ಮಯಂ|

08008034c ಸಸರ್ಜ ತೋಮರಂ ಭೀಮಃ ಪ್ರತ್ಯಮಿತ್ರಾಯ ಯತ್ನವಾನ್||

ಆಗ ಭೀಮನು ಭಾಸ್ಕರನ ವರ್ಣದಂತೆ ಹೊಳೆಯುತ್ತಿದ್ದ, ಶೀಘ್ರಗತಿಯ ಲೋಹಮಯ ತೋಮರವನ್ನು ಶತ್ರುವಿನ ಮೇಲೆ ಪ್ರತಿಯಾಗಿ ಪ್ರಯತ್ನಪಟ್ಟು ಪ್ರಯೋಗಿಸಿದನು.

08008035a ತತಃ ಕುಲೂತಾಧಿಪತಿಶ್ಚಾಪಮಾಯಮ್ಯ ಸಾಯಕೈಃ|

08008035c ದಶಭಿಸ್ತೋಮರಂ ಚಿತ್ತ್ವಾ ಶಕ್ತ್ಯಾ ವಿವ್ಯಾಧ ಪಾಂಡವಂ||

ಆಗ ಕುಲೂತಾಧಿಪತಿ ಕ್ಷೇಮಧೂರ್ತಿಯು ಚಾಪವನ್ನು ಬಗ್ಗಿಸಿ ಹೆದೆಯೇರಿಸಿ ಸಾಯಕಗಳಿಂದ ಆ ತೋಮರವನ್ನು ಹತ್ತು ಭಾಗಗಳನ್ನಾಗಿ ತುಂಡರಿಸಿ ಪಾಂಡವ ಭೀಮನನ್ನು ಶಕ್ತಿಯಿಂದ ಪ್ರಹರಿಸಿದನು.

08008036a ಅಥ ಕಾರ್ಮುಕಮಾದಾಯ ಮಹಾಜಲದನಿಸ್ವನಂ|

08008036c ರಿಪೋರಭ್ಯರ್ದಯನ್ನಾಗಮುನ್ಮದಃ ಪಾಂಡವಃ ಶರೈಃ||

ಕೂಡಲೇ ಪಾಂಡವನು ಮಹಾಮೇಘದ ಗರ್ಜನೆಯುಳ್ಳ ಕಾರ್ಮುಕವನ್ನು ಎತ್ತಿಕೊಂಡು ಶರಗಳಿಂದ ಶತ್ರುವಿನ ಆನೆಯನ್ನು ಪ್ರಹರಿಸಿದನು.

08008037a ಸ ಶರೌಘಾರ್ದಿತೋ ನಾಗೋ ಭೀಮಸೇನೇನ ಸಂಯುಗೇ|

08008037c ನಿಗೃಹ್ಯಮಾಣೋ ನಾತಿಷ್ಠದ್ವಾತಧ್ವಸ್ತ ಇವಾಂಬುದಃ||

ಸಂಯುಗದಲ್ಲಿ ಭೀಮಸೇನನ ಶರಗಳಿಂದ ಪೀಡಿತ ಆ ಆನೆಯು ನಿಯಂತ್ರಿಸಲ್ಪಟ್ಟರೂ ಭಿರುಗಾಳಿಯಿಂದ ತೂರಲ್ಪಟ್ಟ ಮೇಘದಂತೆ ಓಡಿಹೋಯಿತು.

08008038a ತಾಮಭ್ಯಧಾವದ್ದ್ವಿರದಂ ಭೀಮಸೇನಸ್ಯ ನಾಗರಾಟ್|

08008038c ಮಹಾವಾತೇರಿತಂ ಮೇಘಂ ವಾತೋದ್ಧೂತ ಇವಾಂಬುದಃ||

ಭಿರುಗಾಳಿಯಿಂದ ಒಯ್ಯಲ್ಪಡುವ ಮೇಘವನ್ನು ಭಿರುಗಾಳಿಯಿಂದ ಎಬ್ಬಿಸಲ್ಪಟ್ಟ ಮತ್ತೊಂದು ಮೇಘವು ಅನುಸರಿಸಿ ಹೋಗುವಂತೆ ಓಡಿಹೋಗುತ್ತಿದ್ದ ಆ ಆನೆಯನ್ನು ಭೀಮಸೇನನ ಆನೆಯು ಹಿಂಬಾಲಿಸಿತು.

08008039a ಸಂನಿವರ್ತ್ಯಾತ್ಮನೋ ನಾಗಂ ಕ್ಷೇಮಧೂರ್ತಿಃ ಪ್ರಯತ್ನತಃ|

08008039c ವಿವ್ಯಾಧಾಭಿದ್ರುತಂ ಬಾಣೈರ್ಭೀಮಸೇನಂ ಸಕುಂಜರಂ||

ತನ್ನ ಆನೆಯನ್ನು ಪ್ರಯತ್ನತಃ ನಿಲ್ಲಿಸಿ ಕ್ಷೇಮಧೂರ್ತಿಯು ಬಾಣಗಳಿಂದ ಬೆನ್ನಟ್ಟಿ ಬರುತ್ತಿದ್ದ ಭೀಮಸೇನನನ್ನು ಅವನ ಆನೆಯೊಂದಿಗೆ ಹೊಡೆದನು.

08008040a ತತಃ ಸಾಧುವಿಸೃಷ್ಟೇನ ಕ್ಷುರೇಣ ಪುರುಷರ್ಷಭಃ|

08008040c ಚಿತ್ತ್ವಾ ಶರಾಸನಂ ಶತ್ರೋರ್ನಾಗಮಾಮಿತ್ರಮಾರ್ದಯತ್||

ಆಗ ಪುರುಷರ್ಷಭ ಭೀಮನು ಚೆನ್ನಾಗಿ ಪ್ರಹರಿಸಿದ ಕ್ಷುರದಿಂದ ಶತ್ರುವಿನ ಧನುಸ್ಸನ್ನು ತುಂಡರಿಸಿ ಅವನ ಆನೆಯನ್ನೂ ಗಾಯಗೊಳಿಸಿದನು.

08008041a ತತಃ ಖಜಾಕಯಾ ಭೀಮಂ ಕ್ಷೇಮಧೂರ್ತಿಃ ಪರಾಭಿನತ್|

08008041c ಜಘಾನ ಚಾಸ್ಯ ದ್ವಿರದಂ ನಾರಾಚೈಃ ಸರ್ವಮರ್ಮಸು||

ಆಗ ಕ್ಷೇಮಧೂರಿಯು ಪರಮ ಕ್ರುದ್ಧನಾಗಿ ನಾರಾಚಗಳಿಂದ ಶತ್ರುವಿನ ಸರ್ವ ಮರ್ಮಗಳನ್ನೂ ಆನೆಯನ್ನೂ ಪ್ರಹರಿಸಿದನು.

08008042a ಪುರಾ ನಾಗಸ್ಯ ಪತನಾದವಪ್ಲುತ್ಯ ಸ್ಥಿತೋ ಮಹೀಂ|

08008042c ಭೀಮಸೇನೋ ರಿಪೋರ್ನಾಗಂ ಗದಯಾ ಸಮಪೋಥಯತ್||

ತನ್ನ ಆನೆಯು ಕೆಳಕ್ಕೆ ಬೀಳುವುದರೊಳಗೇ ಭೀಮಸೇನನು ಕೆಳಕ್ಕೆ ಧುಮುಕಿ ನೆಲದಮೇಲೆ ಸ್ಥಿರನಾಗಿ ನಿಂತು, ಶತ್ರುವಿನ ಆನೆಯನ್ನು ಗದೆಯಿಂದ ಅಪ್ಪಳಿಸಿ ಸಂಹರಿಸಿದನು.

08008043a ತಸ್ಮಾತ್ಪ್ರಮಥಿತಾನ್ನಾಗಾತ್ ಕ್ಷೇಮಧೂರ್ತಿಮವದ್ರುತಂ|

08008043c ಉದ್ಯತಾಸಿಮುಪಾಯಾಂತಂ ಗದಯಾಹನ್ವೃಕೋದರಃ||

ಆ ಆನೆಯಿಂದ ಕೆಳಕ್ಕೆ ಹಾರಿ ಖಡ್ಗವನ್ನೆತ್ತಿ ಓಡಿ ಬರುತ್ತಿದ್ದ ಕ್ಷೇಮಧೂರ್ತಿಯನ್ನು ವೃಕೋದರನು ಅದೇ ಗದೆಯಿಂದ ಸಂಹರಿಸಿದನು.

08008044a ಸ ಪಪಾತ ಹತಃ ಸಾಸಿರ್ವ್ಯಸುಃ ಸ್ವಮಭಿತೋ ದ್ವಿಪಂ|

08008044c ವಜ್ರಪ್ರರುಗ್ಣಂ ಅಚಲಂ ಸಿಂಹೋ ವಜ್ರಹತೋ ಯಥಾ||

ಖಡ್ಗದ ಸಮೇತವಾಗಿಯೇ ತನ್ನ ಆನೆಯ ಬಳಿಯೇ ಬಿದ್ದು, ವಜ್ರದಿಂದ ಪ್ರಹರಿಸಲ್ಪಟ್ಟ ಗಿರಿಯ ಮೇಲಿದ್ದ ಮತ್ತು ವಜ್ರದಿಂದ ಹತವಾದ ಸಿಂಹದಂತೆ ಅವನು ಅಸುನೀಗಿದನು.

08008045a ನಿಹತಂ ನೃಪತಿಂ ದೃಷ್ಟ್ವಾ ಕುಲೂತಾನಾಂ ಯಶಸ್ಕರಂ|

08008045c ಪ್ರಾದ್ರವದ್ವ್ಯಥಿತಾ ಸೇನಾ ತ್ವದೀಯಾ ಭರತರ್ಷಭ||

ಭರತರ್ಷಭ! ಯಶಸ್ಕರ ಕುಲೂತರ ನೃಪತಿಯು ಹತನಾದುದನ್ನುನೋಡಿ ನಿನ್ನ ಸೇನೆಯು ವ್ಯಥಿತಗೊಂಡು ಓಡಿಹೋಯಿತು.”

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಕ್ಷೇಮಧೂರ್ತಿವಧೇ ಅಷ್ಠಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಕ್ಷೇಮಧೂರ್ತಿವಧ ಎನ್ನುವ ಎಂಟನೇ ಅಧ್ಯಾಯವು.

 

Comments are closed.