Karna Parva: Chapter 39

ಕರ್ಣ ಪರ್ವ

೩೯

ಅಶ್ವತ್ಥಾಮ-ಯುಧಿಷ್ಠಿರರ ಯುದ್ಧ; ಯುಧಿಷ್ಠಿರನ ಪರಾಜಯ (೧-೩೮).

08039001 ಸಂಜಯ ಉವಾಚ|

08039001a ದ್ರೌಣಿರ್ಯುಧಿಷ್ಠಿರಂ ದೃಷ್ಟ್ವಾ ಶೈನೇಯೇನಾಭಿರಕ್ಷಿತಂ|

08039001c ದ್ರೌಪದೇಯೈಸ್ತಥಾ ಶೂರೈರಭ್ಯವರ್ತತ ಹೃಷ್ಟವತ್||

ಸಂಜಯನು ಹೇಳಿದನು: “ಶೈನೇಯ ಮತ್ತು ಶೂರ ದ್ರೌಪದೇಯರಿಂದ ಅಭಿರಕ್ಷಿತ ಯುಧಿಷ್ಠಿರನನ್ನು ನೋಡಿ ದ್ರೌಣಿಯು ಪ್ರಹೃಷ್ಟನಾದನು.

08039002a ಕಿರನ್ನಿಷುಗಣಾನ್ ಘೋರಾನ್ಸ್ವರ್ಣಪುಂಖಾಂ ಶಿಲಾಶಿತಾನ್|

08039002c ದರ್ಶಯನ್ವಿವಿಧಾನ್ಮಾರ್ಗಾಂ ಶಿಕ್ಷಾರ್ಥಂ ಲಘುಹಸ್ತವತ್||

08039003a ತತಃ ಖಂ ಪೂರಯಾಮಾಸ ಶರೈರ್ದಿವ್ಯಾಸ್ತ್ರಮಂತ್ರಿತೈಃ|

08039003c ಯುಧಿಷ್ಠಿರಂ ಚ ಸಮರೇ ಪರ್ಯವಾರಯದಸ್ತ್ರವಿತ್||

ಸ್ವರ್ಣಪುಂಖ ಶಿಲಾಶಿತ ಘೋರ ಶರಗಳನ್ನು ಎರಚುತ್ತಾ ಅಸ್ತ್ರಶಿಕ್ಷಣವನ್ನೂ ಹಸ್ತಲಾಘವವನ್ನೂ ವಿವಿಧ ಮಾರ್ಗಗಳನ್ನೂ ಪ್ರದರ್ಶಿಸುತ್ತಾ ದ್ರೌಣಿಯು ದಿವ್ಯಾಸ್ತ್ರಮಂತ್ರಿತ ಶರಗಳಿಂದ ಆಕಾಶವನ್ನೇ ತುಂಬಿಸಿದನು ಮತ್ತು ಆ ಅಸ್ತ್ರವಿದುವು ಸಮರದಲ್ಲಿ ಯುಧಿಷ್ಠಿರನನ್ನು ಸುತ್ತುವರೆದನು.

08039004a ದ್ರೌಣಾಯನಿಶರಚ್ಚನ್ನಂ ನ ಪ್ರಾಜ್ಞಾಯತ ಕಿಂ ಚನ|

08039004c ಬಾಣಭೂತಮಭೂತ್ಸರ್ವಮಾಯೋಧನಶಿರೋ ಹಿ ತತ್||

ದ್ರೌಣಿಯ ಶರಗಳಿಂದ ತುಂಬಿ ಯಾವುದೂ ತಿಳಿಯದಾಯಿತು. ಆ ಯುದ್ಧಭೂಮಿಯು ಎಲ್ಲಕಡೆ ಬಾಣಮಯವಾಯಿತು.

08039005a ಬಾಣಜಾಲಂ ದಿವಿಷ್ಠಂ ತತ್ಸ್ವರ್ಣಜಾಲವಿಭೂಷಿತಂ|

08039005c ಶುಶುಭೇ ಭರತಶ್ರೇಷ್ಠ ವಿತಾನಮಿವ ವಿಷ್ಠಿತಂ||

ಭರತಶ್ರೇಷ್ಠ! ಆ ಬಾಣಜಾಲವು ಆಕಾಶದಲ್ಲಿ ನಿರ್ಮಿಸಿದ ಸ್ವರ್ಣಜಾಲವಿಭೂಷಿತ ಚಪ್ಪರದಂತೆ ಶೋಭಿಸಿತು.

08039006a ತೇನ ಚನ್ನೇ ರಣೇ ರಾಜನ್ಬಾಣಜಾಲೇನ ಭಾಸ್ವತಾ|

08039006c ಅಭ್ರಚ್ಚಾಯೇವ ಸಂಜಜ್ಞೇ ಬಾಣರುದ್ಧೇ ನಭಸ್ತಲೇ||

ರಾಜನ್! ರಣದಲ್ಲಿ ಹೊಳೆಯುತ್ತಿರುವ ಬಾಣಜಾಲಗಳಿಂದ ನೇಯಲ್ಪಟ್ಟ ಅದು ನಭಸ್ತಲದಲ್ಲಿ ಮೇಘಗಳ ಛಾಯೆಯೋ ಎನ್ನುವಂತೆ ಕಾಣುತ್ತಿತ್ತು.

08039007a ತತ್ರಾಶ್ಚರ್ಯಮಪಶ್ಯಾಮ ಬಾಣಭೂತೇ ತಥಾವಿಧೇ|

08039007c ನ ಸ್ಮ ಸಂಪತತೇ ಭೂಮೌ ದೃಷ್ಟ್ವಾ ದ್ರೌಣೇಃ ಪರಾಕ್ರಮಂ||

ಆ ರೀತಿ ಬಾಣಗಳು ತುಂಬಿರಲು ಆಕಾಶದಿಂದ ಭೂಮಿಯ ಮೇಲೆ ಏನೂ ಬೀಳುತ್ತಿರಲಿಲ್ಲ. ದ್ರೌಣಿಯ ಆ ಪರಾಕ್ರಮವನ್ನು ನೋಡಿ ನಮಗೆ ಆಶ್ಚರ್ಯವುಂಟಾಯಿತು.

08039008a ಲಾಘವಂ ದ್ರೋಣಪುತ್ರಸ್ಯ ದೃಷ್ಟ್ವಾ ತತ್ರ ಮಹಾರಥಾಃ|

08039008c ವ್ಯಸ್ಮಯಂತ ಮಹಾರಾಜ ನ ಚೈನಂ ಪ್ರತಿವೀಕ್ಷಿತುಂ|

08039008e ಶೇಕುಸ್ತೇ ಸರ್ವರಾಜಾನಸ್ತಪಂತಮಿವ ಭಾಸ್ಕರಂ||

ಮಹಾರಾಜ! ದ್ರೋಣಪುತ್ರನ ಹಸ್ತಲಾಘವವನ್ನು ನೋಡಿ ಅಲ್ಲಿದ್ದ ಮಹಾರಥರು ವಿಸ್ಮಿತರಾದರು. ಉರಿಯುತ್ತಿರುವ ಭಾಸ್ಕರನಂತಿದ್ದ ಅವನನ್ನು ನೋಡಲು ರಾಜರೆಲ್ಲರಿಗೂ ಸಾಧ್ಯವಾಗುತ್ತಿರಲಿಲ್ಲ.

08039009a ಸಾತ್ಯಕಿರ್ಯತಮಾನಸ್ತು ಧರ್ಮರಾಜಶ್ಚ ಪಾಂಡವಃ|

08039009c ತಥೇತರಾಣಿ ಸೈನ್ಯಾನಿ ನ ಸ್ಮ ಚಕ್ರುಃ ಪರಾಕ್ರಮಂ||

ಆಗ ಪ್ರಯತ್ನಿಸುತ್ತಿದ್ದ ಸಾತ್ಯಕಿಯಾಗಲೀ ಪಾಂಡವ ಧರ್ಮರಾಜನಾಗಲೀ ಇನ್ನೂ ಇತರ ಸೇನೆಗಳಾಗಲೀ ತಮ್ಮ ಪರಾಕ್ರಮವನ್ನು ಅವನ ಮುಂದೆ ತೋರಿಸಲು ಸಾಧ್ಯವಾಗಲಿಲ್ಲ.

08039010a ವಧ್ಯಮಾನೇ ತತಃ ಸೈನ್ಯೇ ದ್ರೌಪದೇಯಾ ಮಹಾರಥಾಃ|

08039010c ಸಾತ್ಯಕಿರ್ಧರ್ಮರಾಜಶ್ಚ ಪಾಂಚಾಲಾಶ್ಚಾಪಿ ಸಂಗತಾಃ|

08039010e ತ್ಯಕ್ತ್ವಾ ಮೃತ್ಯುಭಯಂ ಘೋರಂ ದ್ರೌಣಾಯನಿಮುಪಾದ್ರವನ್||

ಸೇನೆಗಳು ಹಾಗೆ ವಧಿಸಲ್ಪಡುತ್ತಿರುವಾಗ ಮಹಾರಥ ದ್ರೌಪದೇಯರು, ಸಾತ್ಯಕಿ, ಧರ್ಮರಾಜ ಮತ್ತು ಪಾಂಚಾಲರು ಒಟ್ಟಾಗಿ ಮೃತ್ಯುಭಯವನ್ನು ತೊರೆದು ಘೋರ ದ್ರೌಣಿಯನ್ನು ಆಕ್ರಮಣಿಸಿದರು.

08039011a ಸಾತ್ಯಕಿಃ ಪಂಚವಿಂಶತ್ಯಾ ದ್ರೌಣಿಂ ವಿದ್ಧ್ವಾ ಶಿಲಾಮುಖೈಃ|

08039011c ಪುನರ್ವಿವ್ಯಾಧ ನಾರಾಚೈಃ ಸಪ್ತಭಿಃ ಸ್ವರ್ಣಭೂಷಿತೈಃ||

ಸಾತ್ಯಕಿಯು ದ್ರೌಣಿಯನ್ನು ಇಪ್ಪತ್ತೈದು ಶಿಲಾಮುಖಿಗಳಿಂದ ಹೊಡೆದು ಪುನಃ ಏಳು ಸ್ವರ್ಣಭೂಷಿತ ನಾರಾಚಗಳಿಂದ ಹೊಡೆದನು.

08039012a ಯುಧಿಷ್ಠಿರಸ್ತ್ರಿಸಪ್ತತ್ಯಾ ಪ್ರತಿವಿಂದ್ಯಶ್ಚ ಸಪ್ತಭಿಃ|

08039012c ಶ್ರುತಕರ್ಮಾ ತ್ರಿಭಿರ್ಬಾಣೈಃ ಶ್ರುತಕೀರ್ತಿಸ್ತು ಸಪ್ತಭಿಃ||

08039013a ಸುತಸೋಮಶ್ಚ ನವಭಿಃ ಶತಾನೀಕಶ್ಚ ಸಪ್ತಭಿಃ|

08039013c ಅನ್ಯೇ ಚ ಬಹವಃ ಶೂರಾ ವಿವ್ಯಧುಸ್ತಂ ಸಮಂತತಃ||

ಯುಧಿಷ್ಠಿರನು ಎಪ್ಪತ್ಮೂರು ಬಾಣಗಳಿಂದ, ಪ್ರತಿವಿಂದ್ಯನು ಏಳು, ಶ್ರುತಕರ್ಮನು ಮೂರು, ಶ್ರುತಕೀರ್ತಿಯು ಏಳು, ಸುತಸೋಮನು ಒಂಭತ್ತು ಮತ್ತು ಶತಾನೀಕನು ಏಳು ಬಾಣಗಳಿಂದ ಹಾಗೂ ಅನ್ಯ ಅನೇಕ ಶೂರರು ಎಲ್ಲಕಡೆಗಳಿಂದ ಅವನನ್ನು ಹೊಡೆದರು.

08039014a ಸೋಽತಿಕ್ರುದ್ಧಸ್ತತೋ ರಾಜನ್ನಾಶೀವಿಷ ಇವ ಶ್ವಸನ್|

08039014c ಸಾತ್ಯಕಿಂ ಪಂಚವಿಂಶತ್ಯಾ ಪ್ರಾವಿಧ್ಯತ ಶಿಲಾಶಿತೈಃ||

08039015a ಶ್ರುತಕೀರ್ತಿಂ ಚ ನವಭಿಃ ಸುತಸೋಮಂ ಚ ಪಂಚಭಿಃ|

08039015c ಅಷ್ಟಭಿಃ ಶ್ರುತಕರ್ಮಾಣಂ ಪ್ರತಿವಿಂದ್ಯಂ ತ್ರಿಭಿಃ ಶರೈಃ|

08039015e ಶತಾನೀಕಂ ಚ ನವಭಿರ್ಧರ್ಮಪುತ್ರಂ ಚ ಸಪ್ತಭಿಃ||

ರಾಜನ್! ಆಗ ಅತಿಕ್ರುದ್ಧ ಅಶ್ವತ್ಥಾಮನು ವಿಷಭರಿತ ಸರ್ಪದಂತೆ ನಿಟ್ಟುಸಿರು ಬಿಡುತ್ತಾ ಸಾತ್ಯಕಿಯನ್ನು ಇಪ್ಪತ್ತೈದು ಶಿಲಾಶಿತಗಳಿಂದ, ಶ್ರುತಕೀರ್ತಿಯನ್ನು ಒಂಭತ್ತು, ಸುತಸೋಮನನ್ನು ಐದು, ಶ್ರುತಕರ್ಮನನ್ನು ಎಂಟು, ಪ್ರತಿವಿಂದ್ಯನನ್ನು ಮೂರು, ಶತಾನೀಕನನ್ನು ಒಂಭತ್ತು ಮತ್ತು ಧರ್ಮಪುತ್ರನನ್ನು ಏಳು ಶರಗಳಿಂದ ಹೊಡೆದನು.

08039016a ಅಥೇತರಾಂಸ್ತತಃ ಶೂರಾನ್ದ್ವಾಭ್ಯಾಂ ದ್ವಾಭ್ಯಾಮತಾಡಯತ್|

08039016c ಶ್ರುತಕೀರ್ತೇಸ್ತಥಾ ಚಾಪಂ ಚಿಚ್ಚೇದ ನಿಶಿತೈಃ ಶರೈಃ||

ಅನಂತರ ಇತರ ಶೂರರನ್ನು ಎರಡೆರಡು ಬಾಣಗಳಿಂದ ಹೊಡೆದು ನಿಶಿತ ಶರಗಳಿಂದ ಶ್ರುತಕೀರ್ತಿಯ ಧನುಸ್ಸನ್ನು ತುಂಡರಿಸಿದನು.

08039017a ಅಥಾನ್ಯದ್ಧನುರಾದಾಯ ಶ್ರುತಕೀರ್ತಿರ್ಮಹಾರಥಃ|

08039017c ದ್ರೌಣಾಯನಿಂ ತ್ರಿಭಿರ್ವಿದ್ಧ್ವಾ ವಿವ್ಯಾಧಾನ್ಯೈಃ ಶಿತೈಃ ಶರೈಃ||

ಕೂಡಲೇ ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಮಹಾರಥ ಶ್ರುತಕೀರ್ತಿಯು ದ್ರೌಣಾಯನಿಯನ್ನು ಮೂರರಿಂದ ಮತ್ತು ಅನ್ಯ ನಿಶಿತ ಶರಗಳಿಂದ ಗಾಯಗೊಳಿಸಿದನು.

08039018a ತತೋ ದ್ರೌಣಿರ್ಮಹಾರಾಜ ಶರವರ್ಷೇಣ ಭಾರತ|

08039018c ಚಾದಯಾಮಾಸ ತತ್ಸೈನ್ಯಂ ಸಮಂತಾಚ್ಚ ಶರೈರ್ನೃಪಾನ್||

ಮಹಾರಾಜ! ಭಾರತ! ಆಗ ದ್ರೌಣಿಯು ಶರವರ್ಷದಿಂದ ಆ ಸೇನೆಯನ್ನು ಮತ್ತು ಶರಗಳಿಂದ ನೃಪರನ್ನು ಎಲ್ಲಕಡೆಗಳಲ್ಲಿ ಮುಚ್ಚಿಬಿಟ್ಟನು.

08039019a ತತಃ ಪುನರಮೇಯಾತ್ಮಾ ಧರ್ಮರಾಜಸ್ಯ ಕಾರ್ಮುಕಂ|

08039019c ದ್ರೌಣಿಶ್ಚಿಚ್ಚೇದ ವಿಹಸನ್ವಿವ್ಯಾಧ ಚ ಶರೈಸ್ತ್ರಿಭಿಃ||

ಅನಂತರ ಆ ಅಮೇಯಾತ್ಮ ದ್ರೌಣಿಯು ಪುನಃ ಧರ್ಮರಾಜನ ಧನುಸ್ಸನ್ನು ಕತ್ತರಿಸಿ ನಗುತ್ತಾ ಅವನನ್ನು ಮೂರು ಶರಗಳಿಂದ ಹೊಡೆದನು.

08039020a ತತೋ ಧರ್ಮಸುತೋ ರಾಜನ್ ಪ್ರಗೃಹ್ಯಾನ್ಯನ್ಮಹದ್ಧನುಃ|

08039020c ದ್ರೌಣಿಂ ವಿವ್ಯಾಧ ಸಪ್ತತ್ಯಾ ಬಾಹ್ವೋರುರಸಿ ಚಾರ್ದಯತ್||

ಆಗ ರಾಜನ್! ಧರ್ಮಸುತನು ಇನ್ನೊಂದು ಮಹಾಧನುಸ್ಸನ್ನು ಹಿಡಿದು ಏಳು ಬಾಣಗಳಿಂದ ದ್ರೌಣಿಯ ಎದೆ-ಬಾಹುಗಳಿಗೆ ಹೊಡೆದನು.

08039021a ಸಾತ್ಯಕಿಸ್ತು ತತಃ ಕ್ರುದ್ಧೋ ದ್ರೌಣೇಃ ಪ್ರಹರತೋ ರಣೇ|

08039021c ಅರ್ಧಚಂದ್ರೇಣ ತೀಕ್ಷ್ಣೇನ ಧನುಶ್ಚಿತ್ತ್ವಾನದದ್ಭೃಶಂ||

ಆಗ ರಣದಲ್ಲಿ ದ್ರೌಣಿಯ ಪ್ರಹರಗಳಿಂದ ಕ್ರುದ್ಧನಾದ ಸಾತ್ಯಕಿಯು ತೀಕ್ಷ್ಣ ಅರ್ಧಚಂದ್ರದಿಂದ ಅವನ ಧನುಸ್ಸನ್ನು ಕತ್ತರಿಸಿ ತುಂಬಾ ಗಾಯಗೊಳಿಸಿದನು.

08039022a ಛಿನ್ನಧನ್ವಾ ತತೋ ದ್ರೌಣಿಃ ಶಕ್ತ್ಯಾ ಶಕ್ತಿಮತಾಂ ವರಃ|

08039022c ಸಾರಥಿಂ ಪಾತಯಾಮಾಸ ಶೈನೇಯಸ್ಯ ರಥಾದ್ದ್ರುತಂ||

ಧನುಸ್ಸು ತುಂಡಾದ ಶಕ್ತಿಮತರಲ್ಲಿ ಶ್ರೇಷ್ಠ ದ್ರೌಣಿಯು ಕೂಡಲೇ ಶಕ್ತ್ಯಾಯುಧವನ್ನುಪಯೋಗಿಸಿ ಶೈನೇಯನ ಸಾರಥಿಯನ್ನು ಕೆಳಗುರುಳಿಸಿದನು.

08039023a ಅಥಾನ್ಯದ್ಧನುರಾದಾಯ ದ್ರೋಣಪುತ್ರಃ ಪ್ರತಾಪವಾನ್|

08039023c ಶೈನೇಯಂ ಶರವರ್ಷೇಣ ಚಾದಯಾಮಾಸ ಭಾರತ||

ಭಾರತ! ಕೂಡಲೇ ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಪ್ರತಾಪವಾನ್ ದ್ರೋಣಪುತ್ರನು ಶರವರ್ಷದಿಂದ ಶೈನೇಯನನ್ನು ಮುಚ್ಚಿಬಿಟ್ಟನು.

08039024a ತಸ್ಯಾಶ್ವಾಃ ಪ್ರದ್ರುತಾಃ ಸಂಖ್ಯೇ ಪತಿತೇ ರಥಸಾರಥೌ|

08039024c ತತ್ರ ತತ್ರೈವ ಧಾವಂತಃ ಸಮದೃಶ್ಯಂತ ಭಾರತ||

ರಥಸಾರಥಿಯು ಬೀಳಲು ರಣದಲ್ಲಿ ಸಾತ್ಯಕಿಯ ಕುದುರೆಗಳು ದಿಕ್ಕಾಪಾಲಾಗಿ ಓಡಿ ಹೋಗುತ್ತಿರುವುದನ್ನು ನಾವು ನೋಡಿದೆವು.

08039025a ಯುಧಿಷ್ಠಿರಪುರೋಗಾಸ್ತೇ ದ್ರೌಣಿಂ ಶಸ್ತ್ರಭೃತಾಂ ವರಂ|

08039025c ಅಭ್ಯವರ್ಷಂತ ವೇಗೇನ ವಿಸೃಜಂತಃ ಶಿತಾಂ ಶರಾನ್||

ಆಗ ಯುಧಿಷ್ಠಿರನ ನಾಯಕತ್ವದಲ್ಲಿದ್ದ ಅವರ ಸೇನೆಯು ವೇಗವಾಗಿ ನಿಶಿತ ಬಾಣಗಳನ್ನು ಶಸ್ತ್ರಭೃತರಲ್ಲಿ ಶ್ರೇಷ್ಠ ದ್ರೌಣಿಯ ಮೇಲೆ ಸುರಿಸಿತು.

08039026a ಆಗಚ್ಚಮಾನಾಂಸ್ತಾನ್ ದೃಷ್ಟ್ವಾ ರೌದ್ರರೂಪಾನ್ಪರಂತಪಃ|

08039026c ಪ್ರಹಸನ್ ಪ್ರತಿಜಗ್ರಾಹ ದ್ರೋಣಪುತ್ರೋ ಮಹಾರಣೇ||

ಮಹಾರಣದಲ್ಲಿ ರೌದ್ರರೂಪದ ಅವರು ಆಕ್ರಮಣಿಸುತ್ತಿರುವುದನ್ನು ನೋಡಿ ಪರಂತಪ ದ್ರೋಣಪುತ್ರನು ನಗುತ್ತಲೇ ಅವರನ್ನು ಎದುರಿಸಿದನು.

08039027a ತತಃ ಶರಶತಜ್ವಾಲಃ ಸೇನಾಕಕ್ಷಂ ಮಹಾರಥಃ|

08039027c ದ್ರೌಣಿರ್ದದಾಹ ಸಮರೇ ಕಕ್ಷಮಗ್ನಿರ್ಯಥಾ ವನೇ||

ಆಗ ಮಹಾರಥ ದ್ರೌಣಿಯು ಜ್ವಾಲಾರೂಪದ ನೂರಾರು ಬಾಣಗಳಿಂದ ವನದಲ್ಲಿ ಪೊದೆಯನ್ನು ಅಗ್ನಿಯು ಹೇಗೋ ಹಾಗೆ ಯುಧಿಷ್ಠಿರನ ಸೇನೆಯನ್ನು ಸುಟ್ಟುಹಾಕಿದನು.

08039028a ತದ್ಬಲಂ ಪಾಂಡುಪುತ್ರಸ್ಯ ದ್ರೋಣಪುತ್ರಪ್ರತಾಪಿತಂ|

08039028c ಚುಕ್ಷುಭೇ ಭರತಶ್ರೇಷ್ಠ ತಿಮಿನೇವ ನದೀಮುಖಂ||

ಭರತಶ್ರೇಷ್ಠ! ದ್ರೋಣಪುತ್ರನಿಂದ ಸಂತಾಪಕ್ಕೊಳಗಾದ ಪಾಂಡುಪುತ್ರನ ಆ ಸೈನ್ಯವು ಸಾಗರವನ್ನು ಸೇರುವಾಗ ನದಿಯು ತಿಮಿಂಗಿಲದಿಂದ ಹೇಗೋ ಹಾಗೆ ಕ್ಷೋಭೆಗೊಂಡಿತು.

08039029a ದೃಷ್ಟ್ವಾ ತೇ ಚ ಮಹಾರಾಜ ದ್ರೋಣಪುತ್ರಪರಾಕ್ರಮಂ|

08039029c ನಿಹತಾನ್ಮೇನಿರೇ ಸರ್ವಾನ್ಪಾಂಡೂನ್ದ್ರೋಣಸುತೇನ ವೈ||

ಮಹಾರಾಜ! ದ್ರೋಣಪುತ್ರನ ಪರಾಕ್ರಮವನ್ನು ನೋಡಿ ದ್ರೋಣಸುತನಿಂದ ಪಾಂಡವರೆಲ್ಲರೂ ಹತರಾದರೆಂದೇ ಭಾವಿಸಿದರು.

08039030a ಯುಧಿಷ್ಠಿರಸ್ತು ತ್ವರಿತೋ ದ್ರೌಣಿಂ ಶ್ಲಿಷ್ಯ ಮಹಾರಥಂ|

08039030c ಅಬ್ರವೀದ್ದ್ರೋಣಪುತ್ರಂ ತು ರೋಷಾಮರ್ಷಸಮನ್ವಿತಃ||

ರೋಷ-ಕೋಪಸಮನ್ವಿತ ಯುಧಿಷ್ಠಿರನಾದರೋ ತ್ವರೆಮಾಡಿ ಮಹಾರಥ ದ್ರೌಣಿ ದ್ರೋಣಪುತ್ರನಿಗೆ ಹೇಳಿದನು:

08039031a ನೈವ ನಾಮ ತವ ಪ್ರೀತಿರ್ನೈವ ನಾಮ ಕೃತಜ್ಞತಾ|

08039031c ಯತಸ್ತ್ವಂ ಪುರುಷವ್ಯಾಘ್ರ ಮಾಮೇವಾದ್ಯ ಜಿಘಾಂಸಸಿ||

“ಪುರುಷವ್ಯಾಘ್ರ! ಇಂದು ನೀನು ನನ್ನನ್ನು ಸಂಹರಿಸಲು ಇಚ್ಛಿಸಿರುವುದು ನಿನಗೆ ನಮ್ಮ ಮೇಲಿರುವ ಪ್ರೀತಿಯ ದ್ಯೋತಕವೂ ಅಲ್ಲ! ಕೃತಜ್ಞತೆಯ ದ್ಯೋತಕವೂ ಅಲ್ಲ!

08039032a ಬ್ರಾಹ್ಮಣೇನ ತಪಃ ಕಾರ್ಯಂ ದಾನಮಧ್ಯಯನಂ ತಥಾ|

08039032c ಕ್ಷತ್ರಿಯೇಣ ಧನುರ್ನಾಮ್ಯಂ ಸ ಭವಾನ್ಬ್ರಾಹ್ಮಣಬ್ರುವಃ||

ತಪಸ್ಸು, ದಾನ, ಮತ್ತು ಅಧ್ಯಯನಗಳು ಬ್ರಾಹ್ಮಣನು ಮಾಡುವ ಕಾರ್ಯಗಳು. ಧನುಸ್ಸನ್ನು ಬಗ್ಗಿಸುವುದು ಕ್ಷತ್ರಿಯನ ಕಾರ್ಯ. ಆದರೆ ನೀನು ಮಾತ್ರ ಕರೆಯಿಸಿಕೊಳ್ಳುವುದಕ್ಕೆ ಬ್ರಾಹ್ಮಣನಾಗಿರುವೆ!

08039033a ಮಿಷತಸ್ತೇ ಮಹಾಬಾಹೋ ಜೇಷ್ಯಾಮಿ ಯುಧಿ ಕೌರವಾನ್|

08039033c ಕುರುಷ್ವ ಸಮರೇ ಕರ್ಮ ಬ್ರಹ್ಮಬಂಧುರಸಿ ಧ್ರುವಂ||

ಮಹಾಬಾಹೋ! ನೀನು ನಿಶ್ಚಯವಾಗಿಯೂ ಧರ್ಮಭ್ರಷ್ಟ ಬ್ರಾಹ್ಮಣನಾಗಿರುವೆ! ಸಮರದಲ್ಲಿ ನಿನ್ನ ಕರ್ಮವನ್ನು ಮಾಡು! ನೀನು ನೋಡುತ್ತಿರುವಂತೆಯೇ ಯುದ್ಧದಲ್ಲಿ ನಾನು ಕೌರವರನ್ನು ಜಯಿಸುತ್ತೇನೆ!”

08039034a ಏವಮುಕ್ತೋ ಮಹಾರಾಜ ದ್ರೋಣಪುತ್ರಃ ಸ್ಮಯನ್ನಿವ|

08039034c ಯುಕ್ತತ್ವಂ ತಚ್ಚ ಸಂಚಿಂತ್ಯ ನೋತ್ತರಂ ಕಿಂ ಚಿದಬ್ರವೀತ್||

ಮಹಾರಾಜ! ಇದನ್ನು ಕೇಳಿ ದ್ರೋಣಪುತ್ರನು ನಸುನಕ್ಕನು. ಹೇಳಿದುದು ತತ್ವಯುಕ್ತವಾಗಿಯೇ ಇದೆ ಎಂದು ಯೋಚಿಸಿ ಅದಕ್ಕೆ ಯಾವ ಉತ್ತರವನ್ನೂ ಕೊಡಲಿಲ್ಲ.

08039035a ಅನುಕ್ತ್ವಾ ಚ ತತಃ ಕಿಂ ಚಿಚ್ಚರವರ್ಷೇಣ ಪಾಂಡವಂ|

08039035c ಚಾದಯಾಮಾಸ ಸಮರೇ ಕ್ರುದ್ಧೋಽಮ್ತಕ ಇವ ಪ್ರಜಾಃ||

ಏನನ್ನೂ ಹೇಳದೇ ಅವನು ಕ್ರುದ್ಧ ಅಂತಕನು ಪ್ರಜೆಗಳನ್ನು ಹೇಗೋ ಹಾಗೆ ಸಮರದಲ್ಲಿ ಶರವರ್ಷದಿಂದ ಪಾಂಡವ ಯುಧಿಷ್ಠಿರನನ್ನು ಮುಚ್ಚಿಬಿಟ್ಟನು.

08039036a ಸಂಚಾದ್ಯಮಾನಸ್ತು ತದಾ ದ್ರೋಣಪುತ್ರೇಣ ಮಾರಿಷ|

08039036c ಪಾರ್ಥೋಽಪಯಾತಃ ಶೀಘ್ರಂ ವೈ ವಿಹಾಯ ಮಹತೀಂ ಚಮೂಂ||

ಮಾರಿಷ! ದ್ರೋಣಪುತ್ರನಿಂದ ಮುಚ್ಚಲ್ಪಟ್ಟ ಪಾರ್ಥ ಯುಧಿಷ್ಠಿರನು ಮಹಾ ಸೇನೆಯನ್ನು ಬಿಟ್ಟು ಶೀಘ್ರವಾಗಿ ಹೊರಟುಹೋದನು.

08039037a ಅಪಯಾತೇ ತತಸ್ತಸ್ಮಿನ್ಧರ್ಮಪುತ್ರೇ ಯುಧಿಷ್ಠಿರೇ|

08039037c ದ್ರೋಣಪುತ್ರಃ ಸ್ಥಿತೋ ರಾಜನ್ ಪ್ರತ್ಯಾದೇಶಾನ್ಮಹಾತ್ಮನಃ||

ರಾಜನ್! ಧರ್ಮಪುತ್ರ ಯುಧಿಷ್ಠಿರನು ಅಲ್ಲಿಂದ ಪಲಾಯನ ಮಾಡಲು ಮಹಾತ್ಮ ದ್ರೋಣಪುತ್ರನು ಇನ್ನೊಂದು ಮಾರ್ಗವನ್ನು ಹಿಡಿದು ಹೊರಟುಹೋದನು.

08039038a ತತೋ ಯುಧಿಷ್ಠಿರೋ ರಾಜಾ ತ್ಯಕ್ತ್ವಾ ದ್ರೌಣಿಂ ಮಹಾಹವೇ|

08039038c ಪ್ರಯಯೌ ತಾವಕಂ ಸೈನ್ಯಂ ಯುಕ್ತಃ ಕ್ರೂರಾಯ ಕರ್ಮಣೇ||

ಮಹಾಯುದ್ಧದಲ್ಲಿ ದ್ರೌಣಿಯನ್ನು ತೊರೆದು ರಾಜಾ ಯುಧಿಷ್ಠಿರನು ಕ್ರೂರಕರ್ಮದಲ್ಲಿಯೇ ನಿರತನಾಗಿ ನಿನ್ನ ಸೇನೆಯ ಕಡೆ ಧಾವಿಸಿದನು.”

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಪಾರ್ಥಾಪಯಾನೇ ಏಕೋನಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಪಾರ್ಥಾಪಯಾನ ಎನ್ನುವ ಮೂವತ್ತೊಂಭತ್ತನೇ ಅಧ್ಯಾಯವು.

Comments are closed.