Karna Parva: Chapter 44

ಕರ್ಣ ಪರ್ವ

೪೪

ಯುದ್ಧವು ಮುಂದುವರೆದುದು (೧-೧೬). ಕರ್ಣ-ಶಿಖಂಡಿಯರ ಯುದ್ಧ; ಶಿಖಂಡಿಯ ಪರಾಜಯ (೧೭-೨೪). ದುಃಶಾಸನ-ಧೃಷ್ಟದ್ಯುಮ್ನರ ಯುದ್ಧ (೨೫-೩೩). ವೃಷಸೇನ-ನಕುಲರ ಯುದ್ಧ (೩೪-೩೯). ನಕುಲನು ಉಲೂಕನನ್ನು ಪರಾಜಯಗೊಳಿಸಿದುದು (೪೦-೪೧). ಸಾತ್ಯಕಿ-ಶಕುನಿಯರ ಯುದ್ಧ; ಶಕುನಿಯ ಪರಾಜಯ (೪೨-೪೭). ಭೀಮಸೇನನು ದುರ್ಯೋಧನನನ್ನು ಪರಾಜಯಗೊಳಿಸಿದುದು (೪೮-೪೯). ಕೃಪ-ಯುಧಾಮನ್ಯು ಮತ್ತು ಕೃತವರ್ಮ-ಉತ್ತಮೌಜಸರ ಯುದ್ಧ (೫೦-೫೫).

08044001 ಧೃತರಾಷ್ಟ್ರ ಉವಾಚ|

08044001a ನಿವೃತ್ತೇ ಭೀಮಸೇನೇ ಚ ಪಾಂಡವೇ ಚ ಯುಧಿಷ್ಠಿರೇ|

08044001c ವಧ್ಯಮಾನೇ ಬಲೇ ಚಾಪಿ ಮಾಮಕೇ ಪಾಂಡುಸೃಂಜಯೈಃ||

08044002a ದ್ರವಮಾಣೇ ಬಲೌಘೇ ಚ ನಿರಾಕ್ರಂದೇ ಮುಹುರ್ಮುಹುಃ|

08044002c ಕಿಮಕುರ್ವಂತ ಕುರವಸ್ತನ್ಮಮಾಚಕ್ಷ್ವ ಸಂಜಯ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಪಾಂಡವ ಯುಧಿಷ್ಠಿರ ಮತ್ತು ಭೀಮಸೇನರು ಹಿಂದಿರುಗಲು, ಪಾಂಡು-ಸೃಂಜಯರು ನಮ್ಮ ಸೇನೆಯನ್ನು ವಧಿಸುತ್ತಿರಲು, ನಮ್ಮ ಸೇನೆಯು ಪುನಃ ಪುನಃ ನಿರಾಕ್ರಂದರಾಗಿ ಓಡಿಹೋಗುತ್ತಿರಲು ಕುರುಗಳು ಏನು ಮಾಡಿದರು ಎನ್ನುವುದನ್ನು ನನಗೆ ಹೇಳು!”

8044003 ಸಂಜಯ ಉವಾಚ|

08044003a ದೃಷ್ಟ್ವಾ ಭೀಮಂ ಮಹಾಬಾಹುಂ ಸೂತಪುತ್ರಃ ಪ್ರತಾಪವಾನ್|

08044003c ಕ್ರೋಧರಕ್ತೇಕ್ಷಣೋ ರಾಜನ್ಭೀಮಸೇನಮುಪಾದ್ರವತ್||

ಸಂಜಯನು ಹೇಳಿದನು: “ರಾಜನ್! ಮಹಾಬಾಹು ಭೀಮಸೇನನನ್ನು ನೋಡಿ ಪ್ರತಾಪವಾನ್ ಸೂತಪುತ್ರನು ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ಭೀಮಸೇನನನ್ನು ಆಕ್ರಮಣಿಸಿದನು.

08044004a ತಾವಕಂ ಚ ಬಲಂ ದೃಷ್ಟ್ವಾ ಭೀಮಸೇನಾತ್ಪರಾಙ್ಮುಖಂ|

08044004c ಯತ್ನೇನ ಮಹತಾ ರಾಜನ್ಪರ್ಯವಸ್ಥಾಪಯದ್ಬಲೀ||

ರಾಜನ್! ನಿನ್ನ ಸೇನೆಯು ಭೀಮಸೇನನಿಂದ ಪರಾಙ್ಮುಖವಾಗುತ್ತಿದ್ದುದನ್ನು ನೋಡಿ ಬಲಶಾಲೀ ಕರ್ಣನು ಮಹಾಪ್ರಯತ್ನದಿಂದ ಅವರನ್ನು ಪುನಃ ಯುದ್ಧಕ್ಕೆ ನಿಲ್ಲಿಸಿದನು.

08044005a ವ್ಯವಸ್ಥಾಪ್ಯ ಮಹಾಬಾಹುಸ್ತವ ಪುತ್ರಸ್ಯ ವಾಹಿನೀಂ|

08044005c ಪ್ರತ್ಯುದ್ಯಯೌ ತದಾ ಕರ್ಣಃ ಪಾಂಡವಾನ್ಯುದ್ಧದುರ್ಮದಾನ್||

ನಿನ್ನ ಮಗನ ಸೇನೆಯನ್ನು ವ್ಯವಸ್ಥೆಗೊಳಿಸಿ ಮಹಾಬಾಹು ಕರ್ಣನು ಯುದ್ಧದುರ್ಮದ ಪಾಂಡವರೊಡನೆ ಯುದ್ಧಮಾಡಿದನು.

08044006a ಪ್ರತ್ಯುದ್ಯಯುಸ್ತು ರಾಧೇಯಂ ಪಾಂಡವಾನಾಂ ಮಹಾರಥಾಃ|

08044006c ಧುನ್ವಾನಾಃ ಕಾರ್ಮುಕಾಣ್ಯಾಜೌ ವಿಕ್ಷಿಪಂತಶ್ಚ ಸಾಯಕಾನ್||

ಪಾಂಡವರ ಮಹಾರಥರು ಕಾರ್ಮುಕಗಳನ್ನು ಸೆಳೆಯುತ್ತಾ ಸಾಯಕಗಳನ್ನು ಎರಚುತ್ತಾ ರಾಧೇಯನನ್ನು ಎದುರಿಸಿ ಯುದ್ಧಮಾಡಿದರು.

08044007a ಭೀಮಸೇನಃ ಶಿನೇರ್ನಪ್ತಾ ಶಿಖಂಡೀ ಜನಮೇಜಯ|

08044007c ಧೃಷ್ಟದ್ಯುಮ್ನಶ್ಚ ಬಲವಾನ್ಸರ್ವೇ ಚಾಪಿ ಪ್ರಭದ್ರಕಾಃ||

08044008a ಪಾಂಚಾಲಾಶ್ಚ ನರವ್ಯಾಘ್ರಾಃ ಸಮಂತಾತ್ತವ ವಾಹಿನೀಂ|

08044008c ಅಭ್ಯದ್ರವಂತ ಸಂಕ್ರುದ್ಧಾಃ ಸಮರೇ ಜಿತಕಾಶಿನಃ||

ಸಮರದಲ್ಲಿ ವಿಜಯೇಚ್ಛಿಗಳಾದ ಭೀಮಸೇನ, ಸಾತ್ಯಕಿ, ಶಿಖಂಡೀ, ಜನಮೇಜಯ, ಬಲವಾನ್ ಧೃಷ್ಟದ್ಯುಮ್ನ, ಎಲ್ಲ ಪ್ರಭದ್ರಕರೂ, ಪಾಂಚಾಲ ನರವ್ಯಾಘ್ರರೂ ಕ್ರುದ್ಧರಾಗಿ ಎಲ್ಲಕಡೆಗಳಿಂದ ನಿನ್ನ ವಾಹಿನಿಯನ್ನು ಆಕ್ರಮಣಿಸಿದರು.

08044009a ತಥೈವ ತಾವಕಾ ರಾಜನ್ಪಾಂಡವಾನಾಮನೀಕಿನೀಂ|

08044009c ಅಭ್ಯದ್ರವಂತ ತ್ವರಿತಾ ಜಿಘಾಂಸಂತೋ ಮಹಾರಥಾಃ||

ರಾಜನ್! ಹಾಗೆಯೇ ನಿನ್ನಕಡೆಯ ಮಹಾರಥರೂ ತ್ವರೆಮಾಡಿ ಪಾಂಡವರ ಸೇನೆಗಳನ್ನು ವಧಿಸಲು ಬಯಸಿ ಅವರನ್ನು ಆಕ್ರಮಣಿಸಿದರು.

08044010a ರಥನಾಗಾಶ್ವಕಲಿಲಂ ಪತ್ತಿಧ್ವಜಸಮಾಕುಲಂ|

08044010c ಬಭೂವ ಪುರುಷವ್ಯಾಘ್ರ ಸೈನ್ಯಮದ್ಭುತದರ್ಶನಂ||

ಪುರುಷವ್ಯಾಘ್ರ! ರಥ-ಆನೆ-ಕುದುರೆಗಳಿಂದ ಮಿಶ್ರಿತವಾಗಿ ಪದಾತಿ-ಧ್ವಜ ಸಮಾಕುಲಗಳ ಸೇನೆಗಳು ಅದ್ಭುತವಾಗಿ ಕಾಣುತ್ತಿದ್ದವು.

08044011a ಶಿಖಂಡೀ ಚ ಯಯೌ ಕರ್ಣಂ ಧೃಷ್ಟದ್ಯುಮ್ನಃ ಸುತಂ ತವ|

08044011c ದುಃಶಾಸನಂ ಮಹಾರಾಜ ಮಹತ್ಯಾ ಸೇನಯಾ ವೃತಂ||

ಮಹಾರಾಜ! ಶಿಖಂಡಿಯು ಕರ್ಣನನ್ನೂ, ಧೃಷ್ತದ್ಯುಮ್ನನು ನಿನ್ನ ಮಗ ದುಃಶಾಸನನನ್ನೂ ಮಹಾ ಸೇನೆಯಿಂದ ಸುತ್ತುವರೆದು ಯುದ್ಧಮಾಡಿದರು.

08044012a ನಕುಲೋ ವೃಷಸೇನಂ ಚ ಚಿತ್ರಸೇನಂ ಯುಧಿಷ್ಠಿರಃ|

08044012c ಉಲೂಕಂ ಸಮರೇ ರಾಜನ್ಸಹದೇವಃ ಸಮಭ್ಯಯಾತ್||

ರಾಜನ್! ಸಮರದಲ್ಲಿ ನಕುಲನು ವೃಷಸೇನನನ್ನೂ, ಯುಧಿಷ್ಠಿರನು ಚಿತ್ರಸೇನನನ್ನೂ, ಸಹದೇವನು ಉಲೂಕನನ್ನೂ ಎದುರಿಸಿ ಯುದ್ಧಮಾಡಿದರು.

08044013a ಸಾತ್ಯಕಿಃ ಶಕುನಿಂ ಚಾಪಿ ಭೀಮಸೇನಶ್ಚ ಕೌರವಾನ್|

08044013c ಅರ್ಜುನಂ ಚ ರಣೇ ಯತ್ತಂ ದ್ರೋಣಪುತ್ರೋ ಮಹಾರಥಃ||

ಸಾತ್ಯಕಿಯು ಶಕುನಿಯನ್ನೂ, ಭೀಮಸೇನು ಕೌರವರನ್ನೂ ಮತ್ತು ರಣದಲ್ಲಿ ಅರ್ಜುನನು ಮಹಾರಥ ದ್ರೋಣಪುತ್ರನನ್ನೂ ಆಕ್ರಮಣಿಸಿದರು.

08044014a ಯುಧಾಮನ್ಯುಂ ಮಹೇಷ್ವಾಸಂ ಗೌತಮೋಽಭ್ಯಪತದ್ರಣೇ|

08044014c ಕೃತವರ್ಮಾ ಚ ಬಲವಾನುತ್ತಮೌಜಸಮಾದ್ರವತ್||

ರಣದಲ್ಲಿ ಮಹೇಷ್ವಾಸ ಯುಧಾಮನ್ಯುವನ್ನು ಗೌತಮನೂ ಉತ್ತಮೌಜಸನನ್ನು ಬಲವಾನ್ ಕೃತವರ್ಮನೂ ಆಕ್ರಮಣಿಸಿದರು.

08044015a ಭೀಮಸೇನಃ ಕುರೂನ್ಸರ್ವಾನ್ಪುತ್ರಾಂಶ್ಚ ತವ ಮಾರಿಷ|

08044015c ಸಹಾನೀಕಾನ್ಮಹಾಬಾಹುರೇಕ ಏವಾಭ್ಯವಾರಯತ್||

ಮಾರಿಷ! ಮಹಾಬಾಹು ಭೀಮಸೇನನು ಒಬ್ಬನೇ ಕುರುಗಳನ್ನೂ, ನಿನ್ನ ಪುತ್ರರೆಲ್ಲರನ್ನೂ ಅವರ ಸೇನೆಗಳೊಂದಿಗೆ ಆಕ್ರಮಣಿಸಿ ಯುದ್ಧಮಾಡಿದನು.

08044016a ಶಿಖಂಡೀ ಚ ತತಃ ಕರ್ಣಂ ವಿಚರಂತಮಭೀತವತ್|

08044016c ಭೀಷ್ಮಹಂತಾ ಮಹಾರಾಜ ವಾರಯಾಮಾಸ ಪತ್ರಿಭಿಃ||

ಮಹಾರಾಜ! ಆಗ ಭೀಷ್ಮಹಂತಕ ಶಿಖಂಡಿಯು ನಿರ್ಭೀತನಾಗಿ ಸಂಚರಿಸುತ್ತಾ ಕರ್ಣನನ್ನು ಪತ್ರಿಗಳಿಂದ ತಡೆದನು.

08044017a ಪ್ರತಿರಬ್ಧಸ್ತತಃ ಕರ್ಣೋ ರೋಷಾತ್ಪ್ರಸ್ಫುರಿತಾಧರಃ|

08044017c ಶಿಖಂಡಿನಂ ತ್ರಿಭಿರ್ಬಾಣೈರ್ಭ್ರುವೋರ್ಮಧ್ಯೇ ವ್ಯತಾಡಯತ್||

ಆಗ ರೋಷದಿಂದ ಕರ್ಣನು ತುಟಿಗಳನ್ನು ಅದುರಿಸುತ್ತಾ ಶಿಖಂಡಿಯನ್ನು ಮೂರು ಬಾಣಗಳಿಂದ ಅವನ ಹುಬ್ಬುಗಳ ಮಧ್ಯದಲ್ಲಿ ಪ್ರಹರಿಸಿದನು.

08044018a ಧಾರಯಂಸ್ತು ಸ ತಾನ್ಬಾಣಾಂ ಶಿಖಂಡೀ ಬಹ್ವಶೋಭತ|

08044018c ರಾಜತಃ ಪರ್ವತೋ ಯದ್ವತ್ತ್ರಿಭಿಃ ಶೃಂಗೈಃ ಸಮನ್ವಿತಃ||

ಆ ಬಾಣಗಳನ್ನು ಧರಿಸಿದ ಶಿಖಂಡಿಯು ಮೂರು ಶೃಂಗಗಳಿಂದ ಸಮನ್ವಿತವಾದ ರಜತ ಪರ್ವತದಂತೆಯೇ ಬಹಳವಾಗಿ ಶೋಭಿಸಿದನು.

08044019a ಸೋಽತಿವಿದ್ಧೋ ಮಹೇಷ್ವಾಸಃ ಸೂತಪುತ್ರೇಣ ಸಂಯುಗೇ|

08044019c ಕರ್ಣಂ ವಿವ್ಯಾಧ ಸಮರೇ ನವತ್ಯಾ ನಿಶಿತೈಃ ಶರೈಃ||

ಸಮರದಲ್ಲಿ ಸೂತಪುತ್ರನಿಂದ ಅತಿಯಾಗಿ ಗಾಯಗೊಂಡ ಮಹೇಷ್ವಾಸ ಶಿಖಂಡಿಯು ಕರ್ಣನನ್ನು ಸಮರದಲ್ಲಿ ತೊಂಭತ್ತು ನಿಶಿತ ಬಾಣಗಳಿಂದ ಪ್ರಹರಿಸಿದನು.

08044020a ತಸ್ಯ ಕರ್ಣೋ ಹಯಾನ್ ಹತ್ವಾ ಸಾರಥಿಂ ಚ ತ್ರಿಭಿಃ ಶರೈಃ|

08044020c ಉನ್ಮಮಾಥ ಧ್ವಜಂ ಚಾಸ್ಯ ಕ್ಷುರಪ್ರೇಣ ಮಹಾರಥಃ||

ಮಹಾರಥ ಕರ್ಣನು ಮೂರು ಶರಗಳಿಂದ ಅವನ ಸಾರಥಿಯನ್ನು ಸಂಹರಿಸಿ ಕ್ಷುರಪ್ರದಿಂದ ಅವನ ಧ್ವಜವನ್ನೂ ಕಿತ್ತು ಹಾಕಿದನು.

08044021a ಹತಾಶ್ವಾತ್ತು ತತೋ ಯಾನಾದವಪ್ಲುತ್ಯ ಮಹಾರಥಃ|

08044021c ಶಕ್ತಿಂ ಚಿಕ್ಷೇಪ ಕರ್ಣಾಯ ಸಂಕ್ರುದ್ಧಃ ಶತ್ರುತಾಪನಃ||

ಕುದುರೆಗಳು ಹತಗೊಳ್ಳಲು ಶತ್ರುತಾಪನ ಮಹಾರಥ ಶಿಖಂಡಿಯು ರಥದಿಂದ ಕೆಳಕ್ಕೆ ಹಾರಿ ಸಂಕ್ರುದ್ಧನಾಗಿ ಕರ್ಣನ ಮೇಲೆ ಶಕ್ತಿಯನ್ನು ಎಸೆದನು.

08044022a ತಾಂ ಚಿತ್ತ್ವಾ ಸಮರೇ ಕರ್ಣಸ್ತ್ರಿಭಿರ್ಭಾರತ ಸಾಯಕೈಃ|

08044022c ಶಿಖಂಡಿನಮಥಾವಿಧ್ಯನ್ನವಭಿರ್ನಿಶಿತೈಃ ಶರೈಃ||

ಭಾರತ! ಸಮರದಲ್ಲಿ ಕರ್ಣನು ಸಾಯಕಗಳಿಂದ ಆ ಶಕ್ತಿಯನ್ನು ಮೂರು ಭಾಗಗಳನ್ನಾಗಿಸಿ ಒಂಭತ್ತು ನಿಶಿತ ಶರಗಳಿಂದ ಶಿಖಂಡಿಯನ್ನು ಹೊಡೆದನು.

08044023a ಕರ್ಣಚಾಪಚ್ಯುತಾನ್ಬಾಣಾನ್ವರ್ಜಯಂಸ್ತು ನರೋತ್ತಮಃ|

08044023c ಅಪಯಾತಸ್ತತಸ್ತೂರ್ಣಂ ಶಿಖಂಡೀ ಜಯತಾಂ ವರಃ||

ವಿಜಯಿಗಳಲ್ಲಿ ಶ್ರೇಷ್ಠ ನರೋತ್ತಮ ಶಿಖಂಡಿಯು ಕರ್ಣನ ಬಾಣಗಳಿಂದ ತಪ್ಪಿಸಿಕೊಳ್ಳಲು ಕೂಡಲೇ ಯುದ್ಧವನ್ನು ಬಿಟ್ಟು ಹೊರಟುಹೋದನು.

08044024a ತತಃ ಕರ್ಣೋ ಮಹಾರಾಜ ಪಾಂಡುಸೈನ್ಯಾನ್ಯಶಾತಯತ್|

08044024c ತೂಲರಾಶಿಂ ಸಮಾಸಾದ್ಯ ಯಥಾ ವಾಯುರ್ಮಹಾಜವಃ||

ಮಹಾರಾಜ! ಆಗ ಕರ್ಣನು ಮಹಾವೇಗದ ಭಿರುಗಾಳಿಯು ಹತ್ತಿಯ ರಾಶಿಯನ್ನು ಹೇಗೋ ಹಾಗೆ ಪಾಂಡುಸೇನೆಯನ್ನು ನಾಶಗೊಳಿಸತೊಡಗಿದನು.

08044025a ಧೃಷ್ಟದ್ಯುಮ್ನೋ ಮಹಾರಾಜ ತವ ಪುತ್ರೇಣ ಪೀಡಿತಃ|

08044025c ದುಃಶಾಸನಂ ತ್ರಿಭಿರ್ಬಾಣೈರಭ್ಯವಿಧ್ಯತ್ಸ್ತನಾಂತರೇ||

ಮಹಾರಾಜ! ನಿನ್ನ ಪುತ್ರನಿಂದ ಪೀಡಿತನಾದ ಧೃಷ್ಟದ್ಯುಮ್ನನು ದುಃಶಾಸನನನ್ನು ಮೂರು ಬಾಣಗಳಿಂದ ವಕ್ಷಸ್ಥಳಕ್ಕೆ ಹೊಡೆದನು.

08044026a ತಸ್ಯ ದುಃಶಾಸನೋ ಬಾಹುಂ ಸವ್ಯಂ ವಿವ್ಯಾಧ ಮಾರಿಷ|

08044026c ಶಿತೇನ ರುಕ್ಮಪುಂಖೇನ ಭಲ್ಲೇನ ನತಪರ್ವಣಾ||

ಮಾರಿಷ! ಆಗ ದುಃಶಾಸನನು ರುಕ್ಮಪುಂಖಗಳುಳ್ಳ ನಿಶಿತ ನತಪರ್ವಣ ಭಲ್ಲದಿಂದ ಧೃಷ್ಟದ್ಯುಮ್ನನ ಎಡತೋಲನ್ನು ಪ್ರಹರಿಸಿದನು.

08044027a ಧೃಷ್ಟದ್ಯುಮ್ನಸ್ತು ನಿರ್ವಿದ್ಧಃ ಶರಂ ಘೋರಮಮರ್ಷಣಃ|

08044027c ದುಃಶಾಸನಾಯ ಸಂಕ್ರುದ್ಧಃ ಪ್ರೇಷಯಾಮಾಸ ಭಾರತ||

ಭಾರತ! ಶರದಿಂದ ಗಾಯಗೊಂಡ ಅಮರ್ಷಣ ಧೃಷ್ಟದ್ಯುಮ್ನನಾದರೋ ಕ್ರುದ್ಧನಾಗಿ ದುಃಶಾಸನನ ಮೇಲೆ ಘೋರ ಶರವನ್ನು ಪ್ರಯೋಗಿಸಿದನು.

08044028a ಆಪತಂತಂ ಮಹಾವೇಗಂ ಧೃಷ್ಟದ್ಯುಮ್ನಸಮೀರಿತಂ|

08044028c ಶರೈಶ್ಚಿಚ್ಚೇದ ಪುತ್ರಸ್ತೇ ತ್ರಿಭಿರೇವ ವಿಶಾಂ ಪತೇ||

ವಿಶಾಂಪತೇ! ಮಹಾವೇಗದಲ್ಲಿ ಬಂದು ಬೀಳುತ್ತಿದ್ದ ಧೃಷ್ಟದ್ಯುಮ್ನನು ಪ್ರಯೋಗಿಸಿದ್ದ ಆ ಶರವನ್ನು ನಿನ್ನ ಪುತ್ರನು ಮೂರು ಭಾಗಗಳನ್ನಾಗಿ ತುಂಡರಿಸಿದನು.

08044029a ಅಥಾಪರೈಃ ಸಪ್ತದಶೈರ್ಭಲ್ಲೈಃ ಕನಕಭೂಷಣೈಃ|

08044029c ಧೃಷ್ಟದ್ಯುಮ್ನಂ ಸಮಾಸಾದ್ಯ ಬಾಹ್ವೋರುರಸಿ ಚಾರ್ದಯತ್||

ಆಗ ಅನ್ಯ ಕನಕಬೂಷಣ ಹದಿನೇಳು ಭಲ್ಲಗಳಿಂದ ದುಃಶಾಸನನು ಧೃಷ್ಟದ್ಯುಮ್ನನನ್ನು ಸಮೀಪಿಸಿ ಅವನ ಬಾಹುಗಳು ಮತ್ತು ಎದೆಗೆ ಗುರಿಯಿಟ್ಟು ಹೊಡೆದನು.

08044030a ತತಃ ಸ ಪಾರ್ಷತಃ ಕ್ರುದ್ಧೋ ಧನುಶ್ಚಿಚ್ಚೇದ ಮಾರಿಷ|

08044030c ಕ್ಷುರಪ್ರೇಣ ಸುತೀಕ್ಷ್ಣೇನ ತತ ಉಚ್ಚುಕ್ರುಶುರ್ಜನಾಃ||

ಮಾರಿಷ! ಆಗ ಕ್ರುದ್ಧನಾದ ಪಾರ್ಷತನು ತೀಕ್ಷ್ಣ ಕ್ಷುರಪ್ರದಿಂದ ಅವನ ಧನುಸ್ಸನ್ನು ತುಂಡರಿಸಿದನು. ಆಗ ಜನರು ಜೋರಾಗಿ ಕೂಗಿಕೊಂಡರು.

08044031a ಅಥಾನ್ಯದ್ಧನುರಾದಾಯ ಪುತ್ರಸ್ತೇ ಭರತರ್ಷಭ|

08044031c ಧೃಷ್ಟದ್ಯುಮ್ನಂ ಶರವ್ರಾತೈಃ ಸಮಂತಾತ್ಪರ್ಯವಾರಯತ್||

ಭರತರ್ಷಭ! ಆಗ ನಿನ್ನ ಮಗನು ಅನ್ಯ ಧನುಸ್ಸನ್ನು ಎತ್ತಿಕೊಂಡು ಶರವ್ರಾತಗಳಿಂದ ಧೃಷ್ಟದ್ಯುಮ್ನನನ್ನು ಎಲ್ಲಕಡೆಗಳಿಂದ ಸುತ್ತುವರೆದನು.

08044032a ತವ ಪುತ್ರಸ್ಯ ತೇ ದೃಷ್ಟ್ವಾ ವಿಕ್ರಮಂ ತಂ ಮಹಾತ್ಮನಃ|

08044032c ವ್ಯಹಸಂತ ರಣೇ ಯೋಧಾಃ ಸಿದ್ಧಾಶ್ಚಾಪ್ಸರಸಾಂ ಗಣಾಃ||

ನಿನ್ನ ಪುತ್ರ ಮಹಾತ್ಮನ ಆ ವಿಕ್ರಮವನ್ನು ನೋಡಿ ರಣದಲ್ಲಿದ್ದ ಯೋಧರೂ, ಸಿದ್ಧ-ಅಪ್ಸರ ಗಣಗಳೂ ವಿಸ್ಮಿತರಾದರು.

08044033a ತತಃ ಪ್ರವವೃತೇ ಯುದ್ಧಂ ತಾವಕಾನಾಂ ಪರೈಃ ಸಹ|

08044033c ಘೋರಂ ಪ್ರಾಣಭೃತಾಂ ಕಾಲೇ ಘೋರರೂಪಂ ಪರಂತಪ||

ಪರಂತಪ! ಆಗ ನಿನ್ನವರ ಮತ್ತು ಶತ್ರುಗಳ ನಡುವೆ ಘೋರವಾದ, ಸಮಸ್ತಪ್ರಾಣಿಗಳಿಗೂ ಘೋರರೂಪೀ ಯುದ್ಧವು ನಡೆಯಿತು.

08044034a ನಕುಲಂ ವೃಷಸೇನಸ್ತು ವಿದ್ಧ್ವಾ ಪಂಚಭಿರಾಯಸೈಃ|

08044034c ಪಿತುಃ ಸಮೀಪೇ ತಿಷ್ಠಂತಂ ತ್ರಿಭಿರನ್ಯೈರವಿಧ್ಯತ||

ವೃಷಸೇನನಾದರೋ ತಂದೆಯ ಸಮೀಪದಲ್ಲಿ ನಿಂತಿದ್ದ ನಕುಲನನ್ನು ಐದು ಆಯಸಗಳಿಂದ ಹೊಡೆದು ಅನ್ಯ ಮೂರು ಶರಗಳಿಂದ ಹೊಡೆದನು.

08044035a ನಕುಲಸ್ತು ತತಃ ಕ್ರುದ್ಧೋ ವೃಷಸೇನಂ ಸ್ಮಯನ್ನಿವ|

08044035c ನಾರಾಚೇನ ಸುತೀಕ್ಷ್ಣೇನ ವಿವ್ಯಾಧ ಹೃದಯೇ ದೃಢಂ||

ಆಗ ನಕುಲನಾದರೋ ಕ್ರುದ್ಧನಾಗಿ ನಗುತ್ತಿರುವನೋ ಎನ್ನುವಂತೆ ತೀಕ್ಷ್ಣ ನಾರಾಚದಿಂದ ವೃಷಸೇನನ ಹೃದಯಕ್ಕೆ ದೃಢವಾಗಿ ಹೊಡೆದನು.

08044036a ಸೋಽತಿವಿದ್ಧೋ ಬಲವತಾ ಶತ್ರುಣಾ ಶತ್ರುಕರ್ಶನಃ|

08044036c ಶತ್ರುಂ ವಿವ್ಯಾಧ ವಿಂಶತ್ಯಾ ಸ ಚ ತಂ ಪಂಚಭಿಃ ಶರೈಃ||

ಶತ್ರುವಿನಿಂದ ಅತಿ ಬಲವತ್ತಾಗಿ ಪ್ರಹರಿಸಲ್ಪಟ್ಟ ಶತ್ರುಕರ್ಶನ ವೃಷಸೇನನು ಶತ್ರು ನಕುಲನನ್ನು ಇಪ್ಪತ್ತು ಬಾಣಗಳಿಂದ ಪ್ರಹರಿಸಲು ನಕುಲನೂ ಅವನನ್ನು ಐದು ಶರಗಳಿಂದ ಪ್ರಹರಿಸಿದನು.

08044037a ತತಃ ಶರಸಹಸ್ರೇಣ ತಾವುಭೌ ಪುರುಷರ್ಷಭೌ|

08044037c ಅನ್ಯೋನ್ಯಮಾಚ್ಚಾದಯತಾಮಥಾಭಜ್ಯತ ವಾಹಿನೀ||

ಆಗ ಆ ಇಬ್ಬರು ಪುರುಷರ್ಷಭರೂ ಅನ್ಯೋನ್ಯರನ್ನು ಸಹಸ್ರ ಶರಗಳಿಂದ ಮುಚ್ಚಿಬಿಟ್ಟರು. ಆಗ ಕುರುಸೇನೆಯು ಭಗ್ನವಾಗಿ ಹೋಯಿತು.

08044038a ದೃಷ್ಟ್ವಾ ತು ಪ್ರದ್ರುತಾಂ ಸೇನಾಂ ಧಾರ್ತರಾಷ್ಟ್ರಸ್ಯ ಸೂತಜಃ|

08044038c ನಿವಾರಯಾಮಾಸ ಬಲಾದನುಪತ್ಯ ವಿಶಾಂ ಪತೇ|

08044038e ನಿವೃತ್ತೇ ತು ತತಃ ಕರ್ಣೇ ನಕುಲಃ ಕೌರವಾನ್ ಯಯೌ||

ವಿಶಾಂಪತೇ! ಧಾರ್ತರಾಷ್ಟ್ರರ ಸೇನೆಯು ಓಡಿಹೋಗುತ್ತಿರುವುದನ್ನು ನೋಡಿ ಸೂತಜನು ಬಲವನ್ನುಪಯೋಗಿಸಿ ತಡೆದನು. ಕರ್ಣನು ಹೊರಟುಹೋಗಲು ನಕುಲನು ಕೌರವಸೇನೆಯೆಡೆಗೆ ನುಗ್ಗಿದನು.

08044039a ಕರ್ಣಪುತ್ರಸ್ತು ಸಮರೇ ಹಿತ್ವಾ ನಕುಲಮೇವ ತು|

08044039c ಜುಗೋಪ ಚಕ್ರಂ ತ್ವರಿತಂ ರಾಧೇಯಸ್ಯೈವ ಮಾರಿಷ||

ಮಾರಿಷ! ಕರ್ಣಪುತ್ರನಾದರೋ ನಕುಲನನ್ನು ಸಮರದಲ್ಲಿ ಬಿಟ್ಟುಬಿಟ್ಟು ತ್ವರೆಮಾಡಿ ರಾಧೇಯನನ್ನು ಹಿಂಬಾಲಿಸಿ ಹೋಗಿ ಅವನ ಚಕ್ರರಕ್ಷಣೆಯಲ್ಲಿ ತೊಡಗಿದನು.

08044040a ಉಲೂಕಸ್ತು ರಣೇ ಕ್ರುದ್ಧಃ ಸಹದೇವೇನ ವಾರಿತಃ|

08044040c ತಸ್ಯಾಶ್ವಾಂಶ್ಚತುರೋ ಹತ್ವಾ ಸಹದೇವಃ ಪ್ರತಾಪವಾನ್|

08044040e ಸಾರಥಿಂ ಪ್ರೇಷಯಾಮಾಸ ಯಮಸ್ಯ ಸದನಂ ಪ್ರತಿ||

ಉಲೂಕನಾದರೋ ರಣದಲ್ಲಿ ಸಹದೇವನಿಂದ ತಡೆಯಲ್ಪಟ್ಟು ಕ್ರುದ್ಧನಾದನು. ಪ್ರತಾಪವಾನ್ ಸಹದೇವನು ಅವನ ನಾಲ್ಕು ಕುದುರೆಗಳನ್ನು ಸಂಹರಿಸಿ ಸಾರಥಿಯನ್ನು ಯಮನ ಸದನದ ಕಡೆ ಕಳುಹಿಸಿದನು.

08044041a ಉಲೂಕಸ್ತು ತತೋ ಯಾನಾದವಪ್ಲುತ್ಯ ವಿಶಾಂ ಪತೇ|

08044041c ತ್ರಿಗರ್ತಾನಾಂ ಬಲಂ ಪೂರ್ಣಂ ಜಗಾಮ ಪಿತೃನಂದನಃ||

ವಿಶಾಂಪತೇ! ಆಗ ಪಿತೃನಂದನ ಉಲೂಕನಾದರೋ ರಥದಿಂದ ಕೆಳಕ್ಕೆ ಹಾರಿ ತ್ರಿಗರ್ತರ ಮಹಾಸೇನೆಯೊಳಗೆ ನುಸುಳಿಕೊಂಡನು.

08044042a ಸಾತ್ಯಕಿಃ ಶಕುನಿಂ ವಿದ್ಧ್ವಾ ವಿಂಶತ್ಯಾ ನಿಶಿತೈಃ ಶರೈಃ|

08044042c ಧ್ವಜಂ ಚಿಚ್ಚೇದ ಭಲ್ಲೇನ ಸೌಬಲಸ್ಯ ಹಸನ್ನಿವ||

ಸಾತ್ಯಕಿಯು ಶಕುನಿಯನ್ನು ಇಪ್ಪತ್ತು ನಿಶಿತ ಶರಗಳಿಂದ ಹೊಡೆದು ನಗುತ್ತಿರುವನ್ನೋ ಎನ್ನುವಂತೆ ಭಲ್ಲದಿಂದ ಸೌಬಲನ ಧ್ವಜವನ್ನು ತುಂಡರಿಸಿದನು.

08044043a ಸೌಬಲಸ್ತಸ್ಯ ಸಮರೇ ಕ್ರುದ್ಧೋ ರಾಜನ್ಪ್ರತಾಪವಾನ್|

08044043c ವಿದಾರ್ಯ ಕವಚಂ ಭೂಯೋ ಧ್ವಜಂ ಚಿಚ್ಚೇದ ಕಾಂಚನಂ||

ರಾಜನ್! ಸಮರದಲ್ಲಿ ಕ್ರುದ್ಧನಾದ ಪ್ರತಾಪವಾನ್ ಸೌಬಲನು ಅವನ ಕವಚವನ್ನು ಸೀಳಿ ಪುನಃ ಅವನ ಕಾಂಚನ ಧ್ವಜವನ್ನು ತುಂಡರಿಸಿದನು.

08044044a ಅಥೈನಂ ನಿಶಿತೈರ್ಬಾಣೈಃ ಸಾತ್ಯಕಿಃ ಪ್ರತ್ಯವಿಧ್ಯತ|

08044044c ಸಾರಥಿಂ ಚ ಮಹಾರಾಜ ತ್ರಿಭಿರೇವ ಸಮಾರ್ದಯತ್|

08044044e ಅಥಾಸ್ಯ ವಾಹಾಂಸ್ತ್ವರಿತಃ ಶರೈರ್ನಿನ್ಯೇ ಯಮಕ್ಷಯಂ||

ಮಹಾರಾಜ! ಕೂಡಲೇ ಸಾತ್ಯಕಿಯು ನಿಶಿತ ಬಾಣಗಳಿಂದ ಅವನನ್ನು ಹೊಡೆದು ಮೂರು ಬಾಣಗಳಿಂದ ಅವನ ಸಾರಥಿಯನ್ನು ಹೊಡೆದನು. ಕೂಡಲೇ ತ್ವರೆಮಾಡಿ ಶರಗಳಿಂದ ಅವನ ಕುದುರೆಗಳನ್ನು ಸಂಹರಿಸಿದನು.

08044045a ತತೋಽವಪ್ಲುತ್ಯ ಸಹಸಾ ಶಕುನಿರ್ಭರತರ್ಷಭ|

08044045c ಆರುರೋಹ ರಥಂ ತೂರ್ಣಮುಲೂಕಸ್ಯ ಮಹಾರಥಃ|

08044045e ಅಪೋವಾಹಾಥ ಶೀಘ್ರಂ ಸ ಶೈನೇಯಾದ್ಯುದ್ಧಶಾಲಿನಃ||

ಭರತರ್ಷಭ! ಅನಂತರ ಬೇಗನೇ ಕೆಳಕ್ಕೆ ಹಾರಿ ಮಹಾರಥ ಶಕುನಿಯು ಉಲೂಕನ ರಥವನ್ನೇರಿದನು. ಆ ಯುದ್ಧಶಾಲಿನಿಯು ಶೈನೇಯನಿಂದ ಬಹುದೂರ ಹೊರಟುಹೋದನು.

08044046a ಸಾತ್ಯಕಿಸ್ತು ರಣೇ ರಾಜಂಸ್ತಾವಕಾನಾಮನೀಕಿನೀಂ|

08044046c ಅಭಿದುದ್ರಾವ ವೇಗೇನ ತತೋಽನೀಕಂ ಅಭಿದ್ಯತ||

ರಾಜನ್! ಸಾತ್ಯಕಿಯಾದರೋ ರಣದಲ್ಲಿ ನಿನ್ನ ಸೇನೆಯನ್ನು ವೇಗದಿಂದ ಆಕ್ರಮಣಿಸಿದನು. ಆಗ ನಿನ್ನ ಸೇನೆಯು ಭಗ್ನವಾಯಿತು.

08044047a ಶೈನೇಯಶರನುನ್ನಂ ತು ತತಃ ಸೈನ್ಯಂ ವಿಶಾಂ ಪತೇ|

08044047c ಭೇಜೇ ದಶ ದಿಶಸ್ತೂರ್ಣಂ ನ್ಯಪತಚ್ಚ ಗತಾಸುವತ್||

ವಿಶಾಂಪತೇ! ಶೈನೇಯನ ಶರದಿಂದ ಗಾಯಗೊಂಡ ಸೈನ್ಯವು ಬೇಗನೇ ಹತ್ತುದಿಕ್ಕುಗಳಲ್ಲಿಯೂ ಓಡಿಹೋಯಿತು ಮತ್ತು ಪ್ರಾಣಗಳನ್ನು ಕಳೆದುಕೊಂಡವರಂತೆ ಮುಗ್ಗರಿಸಿ ಬೀಳುತ್ತಿತ್ತು.

08044048a ಭೀಮಸೇನಂ ತವ ಸುತೋ ವಾರಯಾಮಾಸ ಸಂಯುಗೇ|

08044048c ತಂ ತು ಭೀಮೋ ಮುಹೂರ್ತೇನ ವ್ಯಶ್ವಸೂತರಥಧ್ವಜಂ|

08044048e ಚಕ್ರೇ ಲೋಕೇಶ್ವರಂ ತತ್ರ ತೇನಾತುಷ್ಯಂತ ಚಾರಣಾಃ||

ನಿನ್ನ ಮಗನು ಸಂಯುಗದಲ್ಲಿ ಭೀಮಸೇನನನ್ನು ತಡೆಯುತ್ತಿದ್ದನು. ಮುಹೂರ್ತಮಾತ್ರದಲ್ಲಿ ಭೀಮನು ಲೋಕೇಶ್ವರ ದುರ್ಯೋಧನನನ್ನು ಅಶ್ವ-ಸೂತ-ರಥಗಳಿಂದ ವಿಹೀನನನ್ನಾಗಿ ಮಾಡಿದನು. ಅದರಿಂದ ಚಾರಣರು ಸಂತುಷ್ಟರಾದರು.

08044049a ತತೋಽಪಾಯಾನ್ನೃಪಸ್ತತ್ರ ಭೀಮಸೇನಸ್ಯ ಗೋಚರಾತ್|

08044049c ಕುರುಸೈನ್ಯಂ ತತಃ ಸರ್ವಂ ಭೀಮಸೇನಮುಪಾದ್ರವತ್|

08044049e ತತ್ರ ರಾವೋ ಮಹಾನಾಸೀದ್ಭೀಮಮೇಕಂ ಜಿಘಾಂಸತಾಂ||

ಆಗ ನೃಪನು ಭೀಮಸೇನನ ದೃಷ್ಟಿಯಿಂದ ಪಲಾಯನಗೈದನು. ಆಗ ಭೀಮಸೇನನು ಕುರುಸೈನ್ಯ ಸರ್ವವನ್ನೂ ಆಕ್ರಮಣಿಸಿದನು. ಭೀಮನೊಬ್ಬನಿಂದಲೇ ವಧಿಸಲ್ಪಡುತ್ತಿದ್ದ ಅಲ್ಲಿ ಮಹಾ ಕೂಗು ಕೇಳಿಬಂದಿತು.

08044050a ಯುಧಾಮನ್ಯುಃ ಕೃಪಂ ವಿದ್ಧ್ವಾ ಧನುರಸ್ಯಾಶು ಚಿಚ್ಚಿದೇ|

08044050c ಅಥಾನ್ಯದ್ಧನುರಾದಾಯ ಕೃಪಃ ಶಸ್ತ್ರಭೃತಾಂ ವರಃ||

ಯುಧಾಮನ್ಯುವು ಕೃಪನನ್ನು ಪ್ರಹರಿಸಿ ಅವನ ಧನುಸ್ಸನ್ನೂ ಕತ್ತರಿಸಿದನು. ಕೂಡಲೇ ಶಸ್ತ್ರಭೃತರಲ್ಲಿ ಶ್ರೇಷ್ಠ ಕೃಪನು ಅನ್ಯ ಧನುಸ್ಸನ್ನು ಎತ್ತಿಕೊಂಡನು.

08044051a ಯುಧಾಮನ್ಯೋರ್ಧ್ವಜಂ ಸೂತಂ ಚತ್ರಂ ಚಾಪಾತಯತ್ ಕ್ಷಿತೌ|

08044051c ತತೋಽಪಾಯಾದ್ರಥೇನೈವ ಯುಧಾಮನ್ಯುರ್ಮಹಾರಥಃ||

ಕೃಪನು ಯುಧಾಮನ್ಯುವಿನ ಧ್ವಜವನ್ನೂ ಸೂತನನ್ನೂ ಚತ್ರವನ್ನೂ ಭೂಮಿಯ ಮೇಲೆ ಉರುಳಿಸಿದನು. ಆಗ ಮಹಾರಥ ಯುಧಾಮನ್ಯುವು ಅದೇ ರಥದಲ್ಲಿಯೇ ಪಲಾಯನಗೈದನು.

08044052a ಉತ್ತಮೌಜಾಸ್ತು ಹಾರ್ದಿಕ್ಯಂ ಶರೈರ್ಭೀಮಪರಾಕ್ರಮಂ|

08044052c ಚಾದಯಾಮಾಸ ಸಹಸಾ ಮೇಘೋ ವೃಷ್ಟ್ಯಾ ಯಥಾಚಲಂ||

ಉತ್ತಮೌಜಸನಾದರೋ ಕೂಡಲೇ ಭೀಮಪರಾಕ್ರಮಿ ಹಾರ್ದಿಕ್ಯನನ್ನು ಶರಗಳಿಂದ ಮೇಘಗಳು ಪರ್ವತವನ್ನು ಮಳೆಯಿಂದ ಮುಚ್ಚುವಂತೆ ಮುಚ್ಚಿಬಿಟ್ಟನು.

08044053a ತದ್ಯುದ್ಧಂ ಸುಮಹಚ್ಚಾಸೀದ್ಘೋರರೂಪಂ ಪರಂತಪ|

08044053c ಯಾದೃಶಂ ನ ಮಯಾ ಯುದ್ಧಂ ದೃಷ್ಟಪೂರ್ವಂ ವಿಶಾಂ ಪತೇ||

ಪರಂತಪ! ವಿಶಾಂಪತೇ! ಆ ಮಹಾಯುದ್ಧವು ಘೋರರೂಪದ್ದಾಗಿತ್ತು. ಅಂತಹ ಯುದ್ಧವನ್ನು ನಾನು ಇದರ ಮೊದಲು ನೋಡಿರಲಿಲ್ಲ.

08044054a ಕೃತವರ್ಮಾ ತತೋ ರಾಜನ್ನುತ್ತಮೌಜಸಮಾಹವೇ|

08044054c ಹೃದಿ ವಿವ್ಯಾಧ ಸ ತದಾ ರಥೋಪಸ್ಥ ಉಪಾವಿಶತ್||

ರಾಜನ್! ಆಗ ಯುದ್ಧದಲ್ಲಿ ಕೃತವರ್ಮನು ಉತ್ತಮೌಜಸನ ಹೃದಯಕ್ಕೆ ಹೊಡೆಯಲು ಅವನು ರಥದಲ್ಲಿಯೇ ಕುಳಿತುಕೊಂಡನು.

08044055a ಸಾರಥಿಸ್ತಮಪೋವಾಹ ರಥೇನ ರಥಿನಾಂ ವರಂ|

08044055c ತತಸ್ತು ಸತ್ವರಂ ರಾಜನ್ಪಾಂಡುಸೈನ್ಯಮುಪಾದ್ರವತ್||

ರಾಜನ್! ಅವನ ಸಾರಥಿಯು ಆ ರಥಿಗಳಲ್ಲಿ ಶ್ರೇಷ್ಠನನ್ನು ಅಲ್ಲಿಂದ ಒಯ್ದುಬಿಟ್ಟನು. ಆಗ ಕೃತವರ್ಮನು ಬಲಶಾಲೀ ಪಾಂಡುಸೇನೆಯನ್ನು ಆಕ್ರಮಣಿಸಿದನು.”

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ಚತುಶ್ಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ನಲ್ವತ್ನಾಲ್ಕನೇ ಅಧ್ಯಾಯವು.

Image result for indian motifs

Comments are closed.