Karna Parva: Chapter 29

ಕರ್ಣ ಪರ್ವ

೨೯

ಕರ್ಣನು ಪರಶುರಾಮನು ತನಗಾಡಿದ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ತಾನು ಅರ್ಜುನನನ್ನು ಇಂದಿನ ಯುದ್ಧದಲ್ಲಿ ಪರಾಯಜಗೊಳಿಸುತ್ತೇನೆ ಎಂದು ಶಲ್ಯನಿಗೆ ಹೇಳಿದುದು (೧-೩೦). ಹಿಂದೆ ಬ್ರಾಹ್ಮಣನು ತನಗಿತ್ತ ಶಾಪದ ಕುರಿತು ಕರ್ಣನು ಶಲ್ಯನಿಗೆ ಹೇಳಿದುದು (೩೧-೪೦).

08029001 ಸಂಜಯ ಉವಾಚ|

08029001a ಮದ್ರಾಧಿಪಸ್ಯಾಧಿರಥಿಸ್ತದೈವಂ

         ವಚೋ ನಿಶಮ್ಯಾಪ್ರಿಯಮಪ್ರತೀತಃ|

08029001c ಉವಾಚ ಶಲ್ಯಂ ವಿದಿತಂ ಮಮೈತದ್

         ಯಥಾವಿಧಾವರ್ಜುನವಾಸುದೇವೌ||

ಸಂಜಯನು ಹೇಳಿದನು: “ಮದ್ರಾಧಿಪತಿಯ ಅಪ್ರಿಯಮಾತುಗಳನ್ನು ಕೇಳಿದ ಯುದ್ಧದಲ್ಲಿ ಹಿಮ್ಮೆಟ್ಟದಿರುವ ಆಧಿರಥಿಯು ಶಲ್ಯನಿಗೆ ಈ ಮಾತುಗಳನ್ನಾಡಿದನು: “ಅರ್ಜುನ-ವಾಸುದೇವರು ಎಂಥವರೆನ್ನುವುದು ನನಗೂ ತಿಳಿದಿದೆ.

08029002a ಶೌರೇ ರಥಂ ವಾಹಯತೋಽರ್ಜುನಸ್ಯ

         ಬಲಂ ಮಹಾಸ್ತ್ರಾಣಿ ಚ ಪಾಂಡವಸ್ಯ|

08029002c ಅಹಂ ವಿಜಾನಾಮಿ ಯಥಾವದದ್ಯ

         ಪರೋಕ್ಷಭೂತಂ ತವ ತತ್ತು ಶಲ್ಯ||

ಶಲ್ಯ! ಅರ್ಜುನನ ರಥದ ಕುದುರೆಗಳನ್ನು ಓಡಿಸುವ ಶೌರಿಯ ಬಲವನ್ನೂ ಪಾಂಡವನಲ್ಲಿರುವ ಮಹಾಸ್ತ್ರಗಳನ್ನೂ ನಾನು ಯಥಾವತ್ತಾಗಿ ತಿಳಿದಿರುತ್ತೇನೆ. ಆದರೆ ಅವುಗಳನ್ನು ನೀನು ಪರೋಕ್ಷವಾಗಿ ಮಾತ್ರ ತಿಳಿದುಕೊಂಡು ನನಗಿಂದು ಹೇಳುತ್ತಿದ್ದೀಯೆ!

08029003a ತೌ ಚಾಪ್ರಧೃಷ್ಯೌ ಶಸ್ತ್ರಭೃತಾಂ ವರಿಷ್ಠೌ

         ವ್ಯಪೇತಭೀರ್ಯೋಧಯಿಷ್ಯಾಮಿ ಕೃಷ್ಣೌ|

08029003c ಸಂತಾಪಯತ್ಯಭ್ಯಧಿಕಂ ತು ರಾಮಾಚ್

         ಚಾಪೋಽದ್ಯ ಮಾಂ ಬ್ರಾಹ್ಮಣಸತ್ತಮಾಚ್ಚ||

ಅವರಿಬ್ಬರನ್ನೂ ಪ್ರತ್ಯಕ್ಷವಾಗಿ ತಿಳಿದಿಕೊಂಡಿರುವ ನಾನು ಶಸ್ತ್ರಭೃತರಲ್ಲಿ ವರಿಷ್ಠರಾದ ಅವರೊಂದಿಗೆ ಸ್ವಲ್ಪವೂ ಭೀತಿಯಿಲ್ಲದೇ ಹೋರಾಡುತ್ತೇನೆ. ಆದರೆ ಬ್ರಾಹ್ಮಣಸತ್ತಮ ರಾಮನು ಹೇಳಿದ ಮಾತುಗಳು ನನ್ನನ್ನು ಇಂದು ಅತ್ಯಂತ ಅಧಿಕವಾಗಿ ಪರಿತಾಪಗೊಳಿಸುತ್ತಿವೆ.

08029004a ಅವಾತ್ಸಂ ವೈ ಬ್ರಾಹ್ಮಣಚ್ಚದ್ಮನಾಹಂ

         ರಾಮೇ ಪುರಾ ದಿವ್ಯಮಸ್ತ್ರಂ ಚಿಕೀರ್ಷುಃ|

08029004c ತತ್ರಾಪಿ ಮೇ ದೇವರಾಜೇನ ವಿಘ್ನೋ

         ಹಿತಾರ್ಥಿನಾ ಫಲ್ಗುನಸ್ಯೈವ ಶಲ್ಯ||

ಹಿಂದೆ ನಾನು ದಿವ್ಯಾಸ್ತ್ರಗಳನ್ನು ಬಯಸಿ ಬ್ರಾಹ್ಮಣನ ವೇಷದಲ್ಲಿ ರಾಮನೊಂದಿಗೆ ವಾಸಿಸುತ್ತಿದ್ದೆನು. ಶಲ್ಯ! ಅಲ್ಲಿಯೂ ಸಹ ಅರ್ಜುನನ ಹಿತಾರ್ಥಿ ದೇವರಾಜನಿಂದ ನನಗೆ ವಿಘ್ನವುಂಟಾಯಿತು.

08029005a ಕೃತೋಽವಭೇದೇನ ಮಮೋರುಮೇತ್ಯ

         ಪ್ರವಿಶ್ಯ ಕೀಟಸ್ಯ ತನುಂ ವಿರೂಪಾಂ|

08029005c ಗುರೋರ್ಭಯಾಚ್ಚಾಪಿ ನ ಚೇಲಿವಾನಹಂ

         ತಚ್ಚಾವಬುದ್ಧೋ ದದೃಶೇ ಸ ವಿಪ್ರಃ||

ಅವನು ವಿರೂಪ ಕೀಟವಾಗಿ ನನ್ನ ತೊಡೆಯನ್ನೇರಿ ಕೊರೆದು ದೇಹವನ್ನು ಪ್ರವೇಶಿಸಿದ್ದನು. ಗುರುವಿನ ಭಯದಿಂದಾಗಿ ನಾನು ಆಗ ಸ್ವಲ್ಪವಾದರೂ ಕದಲಲೇ ಇಲ್ಲ. ಅನಂತರ ಎಚ್ಚರಗೊಂಡ ವಿಪ್ರ ರಾಮನು ಆ ದೃಶ್ಯವನ್ನು ಕಂಡನು.

08029006a ಪೃಷ್ಟಶ್ಚಾಹಂ ತಮವೋಚಂ ಮಹರ್ಷಿಂ

         ಸೂತೋಽಹಮಸ್ಮೀತಿ ಸ ಮಾಂ ಶಶಾಪ|

08029006c ಸೂತೋಪಧಾವಾಪ್ತಮಿದಂ ತ್ವಯಾಸ್ತ್ರಂ

         ನ ಕರ್ಮಕಾಲೇ ಪ್ರತಿಭಾಸ್ಯತಿ ತ್ವಾಂ||

ನಾನು ಯಾರೆಂದು ಅವನು ಕೇಳಲು, ಸೂತನೆಂದು ನಾನು ಅವನಿಗೆ ಹೇಳಿದೆನು. ಆಗ ಆ ಮಹರ್ಷಿಯು ನನ್ನನ್ನು ಶಪಿಸಿದನು: “ಸೂತ! ವಂಚನೆಯಿಂದ ಪಡೆದುಕೊಂಡಿರುವ ಈ ಅಸ್ತ್ರವು ಕರ್ಮಕಾಲದಲ್ಲಿ ನಿನಗೆ ಹೊಳೆಯುವುದಿಲ್ಲ!

08029007a ಅನ್ಯತ್ರ ಯಸ್ಮಾತ್ತವ ಮೃತ್ಯುಕಾಲಾದ್

         ಅಬ್ರಾಹ್ಮಣೇ ಬ್ರಹ್ಮ ನ ಹಿ ಧ್ರುವಂ ಸ್ಯಾತ್|

08029007c ತದದ್ಯ ಪರ್ಯಾಪ್ತಮತೀವ ಶಸ್ತ್ರಂ

         ಅಸ್ಮಿನ್ಸಂಗ್ರಾಮೇ ತುಮುಲೇ ತಾತ ಭೀಮೇ||

ನಿನ್ನ ಮೃತ್ಯುಕಾಲದಲ್ಲಿಯೂ ನಿನಗಿದು ಸ್ಮರಣೆಗೆ ಬರುವುದಿಲ್ಲ. ಏಕೆಂದರೆ ಅಬ್ರಾಹ್ಮಣರಲ್ಲಿ ಈ ಬ್ರಹ್ಮಾಸ್ತ್ರವು ಶಾಶ್ವತವಾಗಿ ಇರುವುದಿಲ್ಲ.” ಅಯ್ಯಾ! ಇಂದಿನ ಈ ಭಯಂಕರ ತುಮುಲ ಸಂಗ್ರಾಮದಲ್ಲಿ ನನಗೆ ಆ ಶಸ್ತ್ರವು ದೊರಕದೆಯೂ ಇರಬಹುದು.

08029008a ಅಪಾಂ ಪತಿರ್ವೇಗವಾನಪ್ರಮೇಯೋ

         ನಿಮಜ್ಜಯಿಷ್ಯನ್ನಿವಹಾನ್ಪ್ರಜಾನಾಂ|

08029008c ಮಹಾನಗಂ ಯಃ ಕುರುತೇ ಸಮುದ್ರಂ

         ವೇಲೈವ ತಂ ವಾರಯತ್ಯಪ್ರಮೇಯಂ||

ವೇಗವಾನ್ ಅಪ್ರಮೇಯ ವರುಣನು ಪ್ರಜೆಗಳನ್ನು ಮುಳುಗಿಸಲು ತನ್ನ ಅಲೆಗಳನ್ನೇ ಪ್ರಕಟಿಸುತ್ತಾನೆ. ಆದರೆ ಆ ಅಪ್ರಮೇಯ ಸಮುದ್ರದ ಅಲೆಗಳನ್ನು ಕೂಡ ತೀರವು ತಡೆಯುತ್ತದೆ.

08029009a ಪ್ರಮುಂಚಂತಂ ಬಾಣಸಂಘಾನಮೋಘಾನ್

         ಮರ್ಮಚ್ಚಿದೋ ವೀರಹಣಃ ಸಪತ್ರಾನ್|

08029009c ಕುಂತೀಪುತ್ರಂ ಪ್ರತಿಯೋತ್ಸ್ಯಾಮಿ ಯುದ್ಧೇ

         ಜ್ಯಾಕರ್ಷಿಣಾಮುತ್ತಮಮದ್ಯ ಲೋಕೇ||

ವೀರರನ್ನು ಸಂಹರಿಸಬಲ್ಲ, ಮರ್ಮವನ್ನು ಭೇದಿಸಬಲ್ಲ, ರೆಕ್ಕೆಗಳುಳ್ಳ ಅಮೋಘ ಬಾಣಸಂಘಗಳನ್ನು ಆಕರ್ಣಾಂತವಾಗಿ ಬಿಲ್ಲನ್ನು ಸೆಳೆದು ಬಿಡುವ ಲೋಕದಲ್ಲಿಯೇ ಉತ್ತಮನೆನಿಸಿಕೊಂಡಿರುವ ಕುಂತೀಪುತ್ರನನ್ನು ಇಂದು ನಾನು ಯುದ್ಧದಲ್ಲಿ ಎದುರಿಸುತ್ತೇನೆ.

08029010a ಏವಂ ಬಲೇನಾತಿಬಲಂ ಮಹಾಸ್ತ್ರಂ

         ಸಮುದ್ರಕಲ್ಪಂ ಸುದುರಾಪಮುಗ್ರಂ|

08029010c ಶರೌಘಿಣಂ ಪಾರ್ಥಿವಾನ್ಮಜ್ಜಯಂತಂ

         ವೇಲೇವ ಪಾರ್ಥಮಿಷುಭಿಃ ಸಂಸಹಿಷ್ಯೇ||

ಈ ರೀತಿ ಅತಿಬಲಶಾಲಿ ಮಹಾಸ್ತ್ರಗಳನ್ನು ತಿಳಿದ, ಸಮುದ್ರದಂತೆ ದುರ್ಲಂಘನೀಯ, ಶರೌಘಗಳಿಂದ ಪಾರ್ಥಿವರನ್ನು ಮಥಿಸುತ್ತಿರುವ ಪಾರ್ಥನೆಂಬ ಅಲೆಯನ್ನು ಬಾಣಗಳೆಂಬ ತೀರದಿಂದ ತಡೆಯುತ್ತೇನೆ.

08029011a ಅದ್ಯಾಹವೇ ಯಸ್ಯ ನ ತುಲ್ಯಮನ್ಯಂ

         ಮನ್ಯೇ ಮನುಷ್ಯಂ ಧನುರಾದದಾನಂ|

08029011c ಸುರಾಸುರಾನ್ವೈ ಯುಧಿ ಯೋ ಜಯೇತ

         ತೇನಾದ್ಯ ಮೇ ಪಶ್ಯ ಯುದ್ಧಂ ಸುಘೋರಂ||

ಇಂದು ಯುದ್ಧದಲ್ಲಿ ಯಾರಸಮನಿಲ್ಲನೆಂದು ತಿಳಿದಿದ್ದಾರೋ, ಯಾರಂತೆ ಧನುಸ್ಸನ್ನು ಹಿಡಿಯುವ ಅನ್ಯ ಮನುಷ್ಯನೆಂದು ತಿಳಿದಿದ್ದಾರೋ, ಯಾರು ಯುದ್ಧದಲ್ಲಿ ಸುರಾಸುರರನ್ನೂ ಜಯಿಸಿದನೋ ಆ ಅರ್ಜುನನನ್ನು ನಾನು ಇಂದಿನ ಸುಘೋರ ಯುದ್ಧದಲ್ಲಿ ಎದುರಿಸಿಸುತ್ತೇನೆ. ನೋಡು!

08029012a ಅತಿಮಾನೀ ಪಾಂಡವೋ ಯುದ್ಧಕಾಮೋ

         ಅಮಾನುಷೈರೇಷ್ಯತಿ ಮೇ ಮಹಾಸ್ತ್ರೈಃ|

08029012c ತಸ್ಯಾಸ್ತ್ರಮಸ್ತ್ರೈರಭಿಹತ್ಯ ಸಂಖ್ಯೇ

         ಶರೋತ್ತಮೈಃ ಪಾತಯಿಷ್ಯಾಮಿ ಪಾರ್ಥಂ||

ಅತಿಮಾನಿನಿ ಪಾಂಡವನು ಯುದ್ಧಕಾಮುಕನು. ನನ್ನ ಮೇಲೆ ಅಮಾನುಷ ಮಹಾಸ್ತ್ರಗಳನ್ನು ಪ್ರಯೋಗಿಸುತ್ತಾನೆ. ಯುದ್ಧದಲ್ಲಿ ಅವನ ಅಸ್ತ್ರಗಳನ್ನು ‌ಅಸ್ತ್ರಗಳಿಂದ ನಿರಸನಗೊಳಿಸಿ ಉತ್ತಮ ಶರಗಳಿಂದ ಪಾರ್ಥನನ್ನು ಕೆಡವುತ್ತೇನೆ.

08029013a ದಿವಾಕರೇಣಾಪಿ ಸಮಂ ತಪಂತಂ

         ಸಮಾಪ್ತರಶ್ಮಿಂ ಯಶಸಾ ಜ್ವಲಂತಂ|

08029013c ತಮೋನುದಂ ಮೇಘ ಇವಾತಿಮಾತ್ರೋ

         ಧನಂಜಯಂ ಚಾದಯಿಷ್ಯಾಮಿ ಬಾಣೈಃ||

ದಿವಾಕರನಂತೆ ಎಲ್ಲ ದಿಕ್ಕುಗಳನ್ನೂ ಬಾಣಗಳೆಂಬ ಕಿರಣಗಳಿಂದ ಪರಿತಾಪಗೊಳಿಸುವ ಉಗ್ರ ಧನಂಜಯನನ್ನು ಉದಯನನ್ನು ಮೇಘಗಳು ಮುಚ್ಚಿಬಿಡುವಂತೆ ಬಾಣಗಳಿಂದ ಮುಚ್ಚಿಬಿಡುತ್ತೇನೆ!

08029014a ವೈಶ್ವಾನರಂ ಧೂಮಶಿಖಂ ಜ್ವಲಂತಂ

         ತೇಜಸ್ವಿನಂ ಲೋಕಮಿಮಂ ದಹಂತಂ|

08029014c ಮೇಘೋ ಭೂತ್ವಾ ಶರವರ್ಷೈರ್ಯಥಾಗ್ನಿಂ

         ತಥಾ ಪಾರ್ಥಂ ಶಮಯಿಷ್ಯಾಮಿ ಯುದ್ಧೇ||

ಪ್ರಜ್ವಲಿಸುವ ಧೂಮಶಿಖ ವೈಶ್ವಾನರನಂತೆ ತೇಜಸ್ಸಿನಿಂದ ಈ ಲೋಕವನ್ನು ಸುಡುತ್ತಿರುವ ಪಾರ್ಥನನ್ನು ಯುದ್ಧದಲ್ಲಿ ಶರವರ್ಷಗಳಿಂದ ಮೇಘವು ಅಗ್ನಿಯನ್ನು ಹೇಗೋ ಹಾಗೆ ಶಾಂತಗೊಳಿಸುತ್ತೇನೆ.

08029015a ಪ್ರಮಾಥಿನಂ ಬಲವಂತಂ ಪ್ರಹಾರಿಣಂ

         ಪ್ರಭಂಜನಂ ಮಾತರಿಶ್ವಾನಮುಗ್ರಂ|

08029015c ಯುದ್ಧೇ ಸಹಿಷ್ಯೇ ಹಿಮವಾನಿವಾಚಲೋ

         ಧನಂಜಯಂ ಕ್ರುದ್ಧಮಮೃಷ್ಯಮಾಣಂ||

ವೃಕ್ಷಗಳನ್ನೇ ಬುಡದೊಂದಿಗೆ ಕಿತ್ತು ಬಿಸಾಡುವ ವೇಗ ಉಗ್ರ ಚಂಡಮಾರುತವನ್ನು ಹಿಮವತ್ಪರ್ವತವು ಹೇಗೆ ಸಹಿಸಿಕೊಳ್ಳುವುದೋ ಹಾಗೆ ಕ್ರುದ್ಧನಾದ, ಶತ್ರುಸೈನ್ಯಗಳನ್ನು ಮಥಿಸುವ, ಬಲವಂತ ಪ್ರಹಾರಿ, ಮತ್ತು ಅಸಹನಶಾಲಿ ಧನಂಜಯನನ್ನು ನಾನು ಯುದ್ಧದಲ್ಲಿ ಎದುರಿಸುತ್ತೇನೆ.

08029016a ವಿಶಾರದಂ ರಥಮಾರ್ಗೇಷ್ವಸಕ್ತಂ

         ಧುರ್ಯಂ ನಿತ್ಯಂ ಸಮರೇಷು ಪ್ರವೀರಂ|

08029016c ಲೋಕೇ ವರಂ ಸರ್ವಧನುರ್ಧರಾಣಾಂ

         ಧನಂಜಯಂ ಸಂಯುಗೇ ಸಂಸಹಿಷ್ಯೇ||

ರಥಮಾರ್ಗಗಳಲ್ಲಿ ವಿಶಾರದನಾಗಿರುವ, ನಿತ್ಯವೂ ಸಮರಗಳಲ್ಲಿ ಹೊಣೆಯನ್ನು ಹೊರುವ, ಲೋಕದ ಸರ್ವ ಧನುರ್ಧರರಲ್ಲಿ ಶ್ರೇಷ್ಠನಾದ ಶಕ್ತಿಶಾಲಿ ಧನಂಜಯನನ್ನು ಇಂದು ಯುದ್ಧದಲ್ಲಿ ಸಂಧಿಸುತ್ತೇನೆ.

08029017a ಅದ್ಯಾಹವೇ ಯಸ್ಯ ನ ತುಲ್ಯಮನ್ಯಂ

         ಮಧ್ಯೇಮನುಷ್ಯಂ ಧನುರಾದದಾನಂ|

08029017c ಸರ್ವಾಮಿಮಾಂ ಯಃ ಪೃಥಿವೀಂ ಸಹೇತ

         ತಥಾ ವಿದ್ವಾನ್ಯೋತ್ಸ್ಯಮಾನೋಽಸ್ಮಿ ತೇನ||

ಧನುಸ್ಸನ್ನು ಹಿಡಿಯುವುದರಲ್ಲಿ ಯಾರ ಸಮನು ಮನುಷ್ಯರ ಮಧ್ಯದಲ್ಲಿ ಇಲ್ಲವೋ ಅಂತಹ ಅರ್ಜುನನನ್ನು ಮತ್ತು ಈ ಸರ್ವ ಪೃಥ್ವಿಯನ್ನು ಯಾರು ಗೆದ್ದಿರುವನೋ ಆ ವಿದ್ವಾನ್ ಅರ್ಜುನನನ್ನು ಇಂದು ಯುದ್ಧದಲ್ಲಿ ಹೋರಾಡುತ್ತೇನೆ.

08029018a ಯಃ ಸರ್ವಭೂತಾನಿ ಸದೇವಕಾನಿ

         ಪ್ರಸ್ಥೇಽಜಯತ್ಖಾಂಡವೇ ಸವ್ಯಸಾಚೀ|

08029018c ಕೋ ಜೀವಿತಂ ರಕ್ಷಮಾಣೋ ಹಿ ತೇನ

         ಯುಯುತ್ಸತೇ ಮಾಂ ಋತೇ ಮಾನುಷೋಽನ್ಯಃ||

ಖಾಂಡವಪ್ರಸ್ಥದಲ್ಲಿ ದೇವತೆಗಳೂ ಸೇರಿ ಎಲ್ಲ ಪ್ರಾಣಿಗಳನ್ನೂ ಜಯಿಸಿದ ಸವ್ಯಸಾಚಿಯೊಡನೆ ನನ್ನೊಬ್ಬನನ್ನು ಬಿಟ್ಟು ಜೀವವನ್ನು ರಕ್ಷಿಸಿಕೊಳ್ಳುವ ಯಾವ ಮನುಷ್ಯನು ತಾನೇ ಯುದ್ಧಮಾಡಬಲ್ಲನು?

08029019a ಅಹಂ ತಸ್ಯ ಪೌರುಷಂ ಪಾಂಡವಸ್ಯ

         ಬ್ರೂಯಾಂ ಹೃಷ್ಟಃ ಸಮಿತೌ ಕ್ಷತ್ರಿಯಾಣಾಂ|

08029019c ಕಿಂ ತ್ವಂ ಮೂರ್ಖಃ ಪ್ರಭಷನ್ಮೂಢಚೇತಾ

         ಮಾಮವೋಚಃ ಪೌರುಷಮರ್ಜುನಸ್ಯ||

ಆ ಪಾಂಡವನ ಪುರುಷವನ್ನು ನಾನೇ ಕ್ಷತ್ರಿಯರ ಸಮಿತಿಗಳಲ್ಲಿ ಹೃಷ್ಟನಾಗಿ ವರ್ಣಿಸಬಲ್ಲೆ[1]. ಮೂರ್ಖ ಮೂಢಚೇತನನಾದ ನೀನು ನನಗೇಕೆ ಅರ್ಜುನನ ಪೌರುಷದ ಕುರಿತು ಹೇಳುತ್ತಿರುವೆ[2]?

08029020a ಅಪ್ರಿಯೋ ಯಃ ಪರುಷೋ ನಿಷ್ಠುರೋ ಹಿ

         ಕ್ಷುದ್ರಃ ಕ್ಷೇಪ್ತಾ ಕ್ಷಮಿಣಶ್ಚಾಕ್ಷಮಾವಾನ್|

08029020c ಹನ್ಯಾಮಹಂ ತಾದೃಶಾನಾಂ ಶತಾನಿ

         ಕ್ಷಮಾಮಿ ತ್ವಾಂ ಕ್ಷಮಯಾ ಕಾಲಯೋಗಾತ್||

ಅಪ್ರಿಯನೂ, ನಿಷ್ಠುರನೂ, ಕ್ಷುದ್ರನೂ, ಕ್ಷಮಾಶೂನ್ಯನೂ, ಕ್ಷಮಾವಂತರನ್ನು ನಿಂದಿಸುವನೂ ಆದ ಪುರುಷನನ್ನು ಮತ್ತು ಅವನಂತಿರುವ ನೂರಾರು ಜನರನ್ನು ನಾನು ಸಂಹರಿಸಿಬಿಡುತ್ತೇನೆ. ಆದರೆ ಕಾಲವಶದಿಂದ ನಿನ್ನನ್ನು ನಾನು ಕ್ಷಮಿಸುತ್ತಿದ್ದೇನೆ.

08029021a ಅವೋಚಸ್ತ್ವಂ ಪಾಂಡವಾರ್ಥೇಽಪ್ರಿಯಾಣಿ

         ಪ್ರಧರ್ಷಯನ್ಮಾಂ ಮೂಢವತ್ಪಾಪಕರ್ಮನ್|

08029021c ಮಯ್ಯಾರ್ಜವೇ ಜಿಹ್ಮಗತಿರ್ಹತಸ್ತ್ವಂ

         ಮಿತ್ರದ್ರೋಹೀ ಸಪ್ತಪದಂ ಹಿ ಮಿತ್ರಂ||

ಪಾಪಕರ್ಮಿಯೇ! ಪಾಂಡವನಿಗೋಸ್ಕರವಾಗಿಯೇ ನೀನು ನನ್ನೊಡನೆ ಈ ರೀತಿ ಮಾತನಾಡಿ ನಿನ್ನ ಮೂಢತನವನ್ನು ಪ್ರದರ್ಶಿಸುತ್ತಿರುವೆ! ನನ್ನೊಡನೆ ಸರಳತೆಯಿಂದ ವರ್ತಿಸಬೇಕಾಗಿರುವ ನೀನು ಕುಟಿಲತನದಿಂದ ವರ್ತಿಸುತ್ತಿರುವೆ. ಏಳು ಹೆಜ್ಜೆಗಳು ಜೊತೆಯಲ್ಲಿ ನಡೆದರೆ ಪರಸ್ಪರ ಮೈತ್ರಿಯು ಬೆಳೆಯುವುದೆಂಬುದನ್ನು ಮಿತ್ರದ್ರೋಹಿಯಾದ ನೀನು ಇಂದು ಸುಳ್ಳನ್ನಾಗಿಸಿರುವೆ!

08029022a ಕಾಲಸ್ತ್ವಯಂ ಮೃತ್ಯುಮಯೋಽತಿದಾರುಣೋ

         ದುರ್ಯೋಧನೋ ಯುದ್ಧಮುಪಾಗಮದ್ಯತ್|

08029022c ತಸ್ಯಾರ್ಥಸಿದ್ಧಿಮಭಿಕಾಂಕ್ಷಮಾಣಸ್

         ತಮಭ್ಯೇಷ್ಯೇ ಯತ್ರ ನೈಕಾಂತ್ಯಮಸ್ತಿ||

ಅತಿದಾರುಣ ಮೃತ್ಯುಮಯ ಕಾಲವು ಬಂದೊದಗಿದೆ. ದುರ್ಯೋಧನನೂ ಯುದ್ಧಭೂಮಿಗೆ ಆಗಮಿಸಿದ್ದಾನೆ. ಅವನ ಅರ್ಥಸಿದ್ಧಿಯಾಗಲೆಂದು ನನ್ನ ಮನೋಕಾಂಕ್ಷೆಯಾದರೆ, ನಿನ್ನ ಮನಸ್ಸು ಬೇರೆ ಯಾವುದರಲ್ಲಿಯೋ ತೊಡಗಿರುವುದಂತೆ ಮಾತನಾಡುತ್ತಿದ್ದೀಯೆ!

08029023a ಮಿತ್ರಂ ಮಿದೇರ್ನಂದತೇಃ ಪ್ರೀಯತೇರ್ವಾ

         ಸಂತ್ರಾಯತೇರ್ಮಾನದ ಮೋದತೇರ್ವಾ|

08029023c ಬ್ರವೀತಿ ತಚ್ಚಾಮುತ ವಿಪ್ರಪೂರ್ವಾತ್

         ತಚ್ಚಾಪಿ ಸರ್ವಂ ಮಮ ದುರ್ಯೋಧನೇಽಸ್ತಿ||

ಮಾನದ! ಮಿದ, ನಂದ, ಪ್ರೀ, ತ್ರಾ, ಮಿ[3] ಅಥವಾ ಮುದ್ ಧಾತುಗಳಿಂದ ನಿಪಾತನದ ಮೂಲಕ ಮಿತ್ರ ಶಬ್ಧದ ಸಿದ್ಧಿಯಾಗುತ್ತದೆ ಎಂದು ಹಿಂದೆ ವಿಪ್ರರು ಹೇಳಿರುತ್ತಾರೆ. ಈ ಶಬ್ಧದ ಸಂಪೂರ್ಣ ಅರ್ಥವು ನನಗೆ ಮತ್ತು ದುರ್ಯೋಧನನಿಗೆ ತಿಳಿದಿವೆ.

08029024a ಶತ್ರುಃ ಶದೇಃ ಶಾಸತೇಃ ಶಾಯತೇರ್ವಾ

         ಶೃಣಾತೇರ್ವಾ ಶ್ವಯತೇರ್ವಾಪಿ ಸರ್ಗೇ|

08029024c ಉಪಸರ್ಗಾದ್ಬಹುಧಾ ಸೂದತೇಶ್ಚ

         ಪ್ರಾಯೇಣ ಸರ್ವಂ ತ್ವಯಿ ತಚ್ಚ ಮಹ್ಯಂ||

ಶದ್, ಶಾಸ್, ಶೋ, ಶೃ, ಶ್ರಸ್ ಅಥವ್ವಾ ಷದ್ ಮತ್ತು ನಾನಾಪ್ರಕಾರದ ಉಪಸರ್ಗಗಳಿಂದ ಯುಕ್ತವಾದ ಸೂದ್ ಧಾತುಗಳಿಂದ ಶತ್ರು ಶಬ್ಧದ ಸಿದ್ಧಿಯಾಗುತ್ತದೆ. ನನ್ನ ವಿಷಯದಲ್ಲಿ ಈ ಎಲ್ಲ ಧಾತುಗಳ ತಾತ್ಪರ್ಯವನ್ನೂ ನೀನು ಪ್ರಾಯಶಃ ಉಪಯೋಗಿಸುತ್ತಿರುವೆ.

08029025a ದುರ್ಯೋಧನಾರ್ಥಂ ತವ ಚಾಪ್ರಿಯಾರ್ಥಂ

         ಯಶೋರ್ಥಮಾತ್ಮಾರ್ಥಮಪೀಶ್ವರಾರ್ಥಂ|

08029025c ತಸ್ಮಾದಹಂ ಪಾಂಡವವಾಸುದೇವೌ

         ಯೋತ್ಸ್ಯೇ ಯತ್ನಾತ್ಕರ್ಮ ತತ್ಪಶ್ಯ ಮೇಽದ್ಯ||

ದುರ್ಯೋಧನನಿಗೆ ಪ್ರಿಯವನ್ನುಂಟುಮಾಡಲು ಮತ್ತು ನಿನಗೆ ಅಪ್ರಿಯವಾದುದನ್ನು ಮಾಡಲು, ನನ್ನ ಯಶಕ್ಕಾಗಿ ಮತ್ತು ಈಶ್ವರನಿಗಾಗಿ ನಾನು ಪಾಂಡವ-ವಾಸುದೇವರನ್ನು ಹೋರಾಡುತ್ತೇನೆ. ನನ್ನ ಯುದ್ಧಕರ್ಮವನ್ನು ಇಂದು ನೀನು ನೋಡು!

08029026a ಅಸ್ತ್ರಾಣಿ ಪಶ್ಯಾದ್ಯ ಮಮೋತ್ತಮಾನಿ

         ಬ್ರಾಹ್ಮಾಣಿ ದಿವ್ಯಾನ್ಯಥ ಮಾನುಷಾಣಿ|

08029026c ಆಸಾದಯಿಷ್ಯಾಮ್ಯಹಮುಗ್ರವೀರ್ಯಂ

         ದ್ವಿಪೋತ್ತಮಂ ಮತ್ತಮಿವಾಭಿಮತ್ತಃ||

ಇಂದು ನನ್ನ ಉತ್ತಮ ಬ್ರಹ್ಮಾಸ್ತ್ರಗಳನ್ನೂ, ದಿವ್ಯಾಸ್ತ್ರ ಮಾನುಷ್ಯಾಸ್ತ್ರಗಳನ್ನೂ ನೋಡು! ಮದಿಸಿದ ಆನೆಯು ಇನ್ನೂ ಹೆಚ್ಚು ಮದದಿಂದ ಕೂಡಿದ ಆನೆಯೊಂದಿಗೆ ಸೆಣಸಾಡುವಂತೆ ಉಗ್ರವೀರ್ಯ ಅರ್ಜುನನನೊಡನೆ ಯುದ್ಧಮಾಡುತ್ತೇನೆ.

08029027a ಅಸ್ತ್ರಂ ಬ್ರಾಹ್ಮಂ ಮನಸಾ ತದ್ಧ್ಯಜಯ್ಯಂ

         ಕ್ಷೇಪ್ಸ್ಯೇ ಪಾರ್ಥಾಯಾಪ್ರತಿಮಂ ಜಯಾಯ|

08029027c ತೇನಾಪಿ ಮೇ ನೈವ ಮುಚ್ಯೇತ ಯುದ್ಧೇ

         ನ ಚೇತ್ಪತೇದ್ವಿಷಮೇ ಮೇಽದ್ಯ ಚಕ್ರಂ||

ಅಜೇಯವೂ ಅಪ್ರತಿಮವೂ ಆದ ಬ್ರಹ್ಮಾಸ್ತ್ರವನ್ನು ಮನಸ್ಸಿನಲ್ಲಿಯೇ ಸ್ಮರಿಸಿ ಜಯಕ್ಕಾಗಿ ಪಾರ್ಥನ ಮೇಲೆ ಪ್ರಯೋಗಿಸುತ್ತೇನೆ. ಇಂದು ಯುದ್ಧದಲ್ಲಿ ನನ್ನ ರಥದ ಚಕ್ರವು ಹಳ್ಳದಲ್ಲಿ ಬೀಳದೆಯೇ ಹೋದರೆ ಅರ್ಜುನನು ಅದರಿಂದ ತಪ್ಪಿಸಿಕೊಳ್ಳಲಾರನು.

08029028a ವೈವಸ್ವತಾದ್ದಂಡಹಸ್ತಾದ್ವರುಣಾದ್ವಾಪಿ ಪಾಶಿನಃ|

08029028c ಸಗದಾದ್ವಾ ಧನಪತೇಃ ಸವಜ್ರಾದ್ವಾಪಿ ವಾಸವಾತ್||

08029029a ನಾನ್ಯಸ್ಮಾದಪಿ ಕಸ್ಮಾಚ್ಚಿದ್ಬಿಭಿಮೋ ಹ್ಯಾತತಾಯಿನಃ|

08029029c ಇತಿ ಶಲ್ಯ ವಿಜಾನೀಹಿ ಯಥಾ ನಾಹಂ ಬಿಭೇಮ್ಯಭೀಃ||

ದಂಡಪಾಣಿ ವೈವಸ್ವತ ಯಮನಿಗಾಗಲೀ, ಪಾಶವನ್ನು ಹಿಡಿದ ವರುಣನಿಗಾಗಲೇ, ಗದಾಧರ ಧನಪತಿ ಕುಬೇರನಿಗಾಗಲೀ, ವಜ್ರದೊಂದಿಗೆ ವಾಸವನಿಗಾಗಲೀ ಮತ್ತು ಇತರ ಅನ್ಯ ಶತ್ರುಗಳಿಗಾಗಲೀ ನಾನು ಭಯಪಡುವವನಲ್ಲ. ಶಲ್ಯ! ಇದನ್ನು ಚೆನ್ನಾಗಿ ತಿಳಿದುಕೋ! ಅವರಿಬ್ಬರಲ್ಲಿಯೂ ನನಗೆ ಭಯವಿಲ್ಲ!

08029030a ತಸ್ಮಾದ್ಭಯಂ ನ ಮೇ ಪಾರ್ಥಾನ್ನಾಪಿ ಚೈವ ಜನಾರ್ದನಾತ್|

08029030c ಅದ್ಯ ಯುದ್ಧಂ ಹಿ ತಾಭ್ಯಾಂ ಮೇ ಸಂಪರಾಯೇ ಭವಿಷ್ಯತಿ||

ಪಾರ್ಥನಿಗಾಗಲೀ ಜನಾರ್ದನಿಗಾಗಲೀ ನಾನು ಹೆದರುವುದಿಲ್ಲ. ಅವರಿಬ್ಬರೊಡನೆ ನನ್ನ ಯುದ್ಧವು ಇಂದು ನಡೆದೇ ನಡೆಯುತ್ತದೆ.

08029031a ಶ್ವಭ್ರೇ ತೇ ಪತತಾಂ ಚಕ್ರಮಿತಿ ಮೇ ಬ್ರಾಹ್ಮಣೋಽವದತ್|

08029031c ಯುಧ್ಯಮಾನಸ್ಯ ಸಂಗ್ರಾಮೇ ಪ್ರಾಪ್ತಸ್ಯೈಕಾಯನೇ ಭಯಂ||

“ಸಂಗ್ರಾಮದಲ್ಲಿ ಯುದ್ಧಮಾಡುತ್ತಿರುವಾಗ ಭಯಂಕರ ಪರಿಸ್ಥಿತಿಯು ಬಂದೊದಗಿದಾಗ ನಿನ್ನ ರಥಚಕ್ರವು ಹಳ್ಳದಲ್ಲಿ ಬೀಳಲಿ!” ಎಂದು ನನಗೆ ಓರ್ವ ಬ್ರಾಹ್ಮಣನು ಹೇಳಿದ್ದನು.

08029032a ತಸ್ಮಾದ್ಬಿಭೇಮಿ ಬಲವದ್ಬ್ರಾಹ್ಮಣವ್ಯಾಹೃತಾದಹಂ|

08029032c ಏತೇ ಹಿ ಸೋಮರಾಜಾನ ಈಶ್ವರಾಃ ಸುಖದುಃಖಯೋಃ||

ಬ್ರಾಹ್ಮಣನ ಆ ಬಲಶಾಲಿ ಪ್ರಹರಕ್ಕೆ ನಾನು ಭಯಪಟ್ಟಿದ್ದೇನೆ. ಚಂದ್ರನನ್ನೇ ರಾಜನನ್ನಾಗಿ ಪಡೆದಿರುವ ಬ್ರಾಹ್ಮಣರು ಶಾಪಾನುಗ್ರಹಗಳಿಂದ ಇತರರ ಸುಖದುಃಖಗಳಿಗೆ ಈಶ್ವರಪ್ರಾಯರಾಗಿರುತ್ತಾರೆ.

08029033a ಹೋಮಧೇನ್ವಾ ವತ್ಸಮಸ್ಯ ಪ್ರಮತ್ತ ಇಷುಣಾಹನಂ|

08029033c ಚರಂತಮಜನೇ ಶಲ್ಯ ಬ್ರಾಹ್ಮಣಾತ್ತಪಸೋ ನಿಧೇಃ||

ಶಲ್ಯ! ನಿರ್ಜನ ವನದಲ್ಲಿ ತಿರುಗಾಡುತ್ತಿರುವಾಗ ಪ್ರಮತ್ತನಾಗಿ ತಪಸ್ಸೇ ನಿಧಿಯಾಗಿದ್ದ ಆ ಬ್ರಾಹ್ಮಣನ ಹೋಮಧೇನುವಿನ ಕರುವನ್ನು ಬಾಣದಿಂದ ನಾನು ಸಂಹರಿಸಿದ್ದೆ.

08029034a ಈಷಾದಂತಾನ್ಸಪ್ತಶತಾನ್ದಾಸೀದಾಸಶತಾನಿ ಚ|

08029034c ದದತೋ ದ್ವಿಜಮುಖ್ಯಾಯ ಪ್ರಸಾದಂ ನ ಚಕಾರ ಮೇ||

ಏಳುನೂರು ಆನೆಗಳನ್ನೂ ನೂರಾರು ದಾಸಿ-ದಾಸರನ್ನೂ ಆ ದ್ವಿಜಮುಖ್ಯನಿಗೆ ಕೊಟ್ಟರೂ ಅವನು ನನ್ನ ಮೇಲೆ ಪ್ರಸನ್ನನಾಗಲಿಲ್ಲ.

08029035a ಕೃಷ್ಣಾನಾಂ ಶ್ವೇತವತ್ಸಾನಾಂ ಸಹಸ್ರಾಣಿ ಚತುರ್ದಶ|

08029035c ಆಹರನ್ನ ಲಭೇ ತಸ್ಮಾತ್ಪ್ರಸಾದಂ ದ್ವಿಜಸತ್ತಮಾತ್||

ಬಿಳಿಯ ಕರುಗಳಿದ್ದ ಹದಿನಾಲ್ಕು ಸಾವಿರ ಕಪ್ಪು ಬಣ್ಣದ ಹಸುಗಳನ್ನು ಕೊಟ್ಟರೂ ಆ ದ್ವಿಜಸತ್ತಮನ ಅನುಗ್ರಹವು ದೊರಕಲಿಲ್ಲ.

08029036a ಋದ್ಧಂ ಗೇಹಂ ಸರ್ವಕಾಮೈರ್ಯಚ್ಚ ಮೇ ವಸು ಕಿಂ ಚನ|

08029036c ತತ್ಸರ್ವಮಸ್ಮೈ ಸತ್ಕೃತ್ಯ ಪ್ರಯಚ್ಚಾಮಿ ನ ಚೇಚ್ಚತಿ||

ಸತ್ಕರಿಸಿ ಸರ್ವಕಾಮಗಳಿಂದ ಸಂಪನ್ನವಾಗಿದ್ದ ಮನೆಯನ್ನೂ ನನ್ನಲ್ಲಿದ್ದ ಎಲ್ಲ ಸಂಪತ್ತನ್ನೂ ಕೊಟ್ಟರೂ ಅವನು ಅವುಗಳನ್ನು ಬಯಸಲಿಲ್ಲ.

08029037a ತತೋಽಬ್ರವೀನ್ಮಾಂ ಯಾಚಂತಮಪರಾದ್ಧಂ ಪ್ರಯತ್ನತಃ|

08029037c ವ್ಯಾಹೃತಂ ಯನ್ಮಯಾ ಸೂತ ತತ್ತಥಾ ನ ತದನ್ಯಥಾ||

ಪ್ರಯತ್ನಪಟ್ಟು ನನ್ನ ಅಪರಾಧಕ್ಕೆ ಕ್ಷಮೆಯನ್ನು ಬೇಡುತ್ತಿದ್ದ ನನಗೆ “ಸೂತ! ನಾನು ಹೇಳಿದಂತೆಯೇ ನಡೆಯುತ್ತದೆ. ಬೇರೆ ರೀತಿಯಲ್ಲಿ ನಡೆಯುವುದು ಸಾಧ್ಯವೇ ಇಲ್ಲ!” ಎಂದು ಹೇಳಿ ಬಿಟ್ಟನು.

08029038a ಅನೃತೋಕ್ತಂ ಪ್ರಜಾ ಹನ್ಯಾತ್ತತಃ ಪಾಪಮವಾಪ್ನುಯಾತ್|

08029038c ತಸ್ಮಾದ್ಧರ್ಮಾಭಿರಕ್ಷಾರ್ಥಂ ನಾನೃತಂ ವಕ್ತುಮುತ್ಸಹೇ||

“ಅಸತ್ಯವನ್ನಾಡುವುದು ಪ್ರಜೆಗಳನ್ನು ನಾಶಗೊಳಿಸುತ್ತದೆ ಮತ್ತು ಪಾಪವನ್ನೂ ಕೊಡುತ್ತದೆ. ಆದುದರಿಂದ ಧರ್ಮರಕ್ಷಣಾರ್ಥವಾಗಿ ಸುಳ್ಳನ್ನು ಹೇಳಬಾರದು.

08029039a ಮಾ ತ್ವಂ ಬ್ರಹ್ಮಗತಿಂ ಹಿಂಸ್ಯಾಃ ಪ್ರಾಯಶ್ಚಿತ್ತಂ ಕೃತಂ ತ್ವಯಾ|

08029039c ಮದ್ವಾಕ್ಯಂ ನಾನೃತಂ ಲೋಕೇ ಕಶ್ಚಿತ್ಕುರ್ಯಾತ್ಸಮಾಪ್ನುಹಿ||

ಬ್ರಾಹ್ಮಣರಿಗೆ ಪ್ರಾಪ್ತವಾಗಬಲ್ಲ ಉತ್ತಮ ಗತಿಯನ್ನು ಲೋಭಗೊಳಿಸಿ ನಾಶಗೊಳಿಸಬೇಡ. ನೀನು ಪ್ರಾಯಶ್ಚಿತ್ತವನ್ನು ಮಾಡಿಕೊಂಡಾಗಿದೆ. ನನ್ನ ಮಾತನ್ನು ಸುಳ್ಳನ್ನಾಗಿಸಲು ಲೋಕದಲ್ಲಿ ಸಾಧ್ಯವಿಲ್ಲ. ನಾನು ಹೇಳಿದುದನ್ನು ನೀನು ಪಡೆದೇ ಪಡೆಯುತ್ತೀಯೆ.”

08029040a ಇತ್ಯೇತತ್ತೇ ಮಯಾ ಪ್ರೋಕ್ತಂ ಕ್ಷಿಪ್ತೇನಾಪಿ ಸುಹೃತ್ತಯಾ|

08029040c ಜಾನಾಮಿ ತ್ವಾಧಿಕ್ಷಿಪಂತಂ ಜೋಷಮಾಸ್ಸ್ವೋತ್ತರಂ ಶೃಣು||

ನೀನು ನನ್ನನ್ನು ನಿಂದಿಸುತ್ತಿರುವೆಯಾದರೂ ನಿನ್ನ ಮೇಲಿನ ಸುಹೃದ್ಭಾವದಿಂದ ನಾನು ನಿನಗೆ ಇದನ್ನು ಹೇಳಿರುವೆನು. ಆದರೂ ನೀನು ನನ್ನನ್ನು ನಿಂದಿಸುತ್ತಲೇ ಇರುವೆ ಎನ್ನುವುದನ್ನೂ ತಿಳಿದುಕೊಂಡಿದ್ದೇನೆ. ನೀನಾಡಿದುದಕ್ಕೆ ಉತ್ತರವನ್ನೂ ಕೊಡುತ್ತೇನೆ. ಕೇಳು.””

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಕರ್ಣಶಲ್ಯಸಂವಾದೇ ಏಕೋನತ್ರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಕರ್ಣಶಲ್ಯಸಂವಾದ ಎನ್ನುವ ಇಪ್ಪತ್ತೊಂಭತ್ತನೇ ಅಧ್ಯಾಯವು.

[1] ನಾನು ಸಂಕುಚಿತಸ್ವಭಾವದವನಲ್ಲ. ಗುಣಪಕ್ಷಪಾತಿ.

[2] ನನಗೆ ತಿಳಿದಿರುವುದಕ್ಕಿಂತಲೂ ಹೆಚ್ಚಾಗಿ ನಿನಗೇನೂ ತಿಳಿಯದು. ನೀನು ಅವನ ಗುಣಗಳನ್ನು ನನ್ನ ಮುಂದೆ ವರ್ಣಿಸುವ ಕಾರಣವೂ ಇಲ್ಲ.

[3] ಸಂಸ್ಕೃತಭಾಷೆಯನ್ನು ದೇವಭಾಷೆಯೆನ್ನುತ್ತಾರೆ. ಇದರ ವ್ಯಾಕರಣಗಳು ಮತ್ತು ಶಬ್ಧೋತ್ಪತ್ತಿಗಳು ಬ್ರಹ್ಮನ ಭಾಷೆಯನ್ನು ತಿಳಿಯುವ ಸಾಧಕಗಳಾಗಿವೆ. ವೇದಗಳು ಬ್ರಹ್ಮನಿಂದಲೇ ಬಂದುದು. ಆ ವೇದವನ್ನು ಅರ್ಥಮಾಡಿಕೊಳ್ಳಲು ಮನುಷ್ಯರಿಗೆ ದೊರಕಿದುದು ಸಂಸ್ಕೃತ ಭಾಷೆ. ಸಂಸ್ಕೃತವು ದೇವಭಾಷೆ. ಬ್ರಹ್ಮಭಾಷೆಯನ್ನು ಅರ್ಥಮಾಡಿಕೊಳ್ಳಬೇಕಾದುದು ಏಕೆ? ಯಾವ  ಭಾಷೆಯಲ್ಲಿ ಬ್ರಹ್ಮನಿಗೆ ಸೃಷ್ಟಿಸಬೇಕೆಂಬ ಆದೇಶಬಂದಿತೋ ಮತ್ತು ಯಾವ ಭಾಷೆಯಲ್ಲಿ ಬ್ರಹ್ಮನಿಗೆ ತಾನು ಪಾಲಿಸಬೇಕಾದ ಸೃಷ್ಟಿಯ ನಿಯಮಗಳನ್ನು ಅರಿವುಂಟಾಯಿತೋ ಆ ಭಾಷೆಯೇ ಬ್ರಹ್ಮಭಾಷೆ. (ಶಬ್ಧವನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದರ ಅರ್ಥವನ್ನು ಇನ್ನೊಬ್ಬರಿಗೆ ತಿಳಿಯುವಂತೆ ಹೇಳುವುದೇ ಭಾಷೆ.) ಶಬ್ಧಗಳ ಉತ್ಪತ್ತಿ ಧಾತುವಿನಿಂದ.

Comments are closed.