Karna Parva: Chapter 52

ಕರ್ಣ ಪರ್ವ

೫೨

ಕೃಷ್ಣನ ಮಾತುಗಳಿಂದ ಉತ್ಸಾಹಿತನಾದ ಅರ್ಜುನನು ಕರ್ಣ ವಧೆಯ ಸಂಕಲ್ಪವನ್ನು ದೃಢೀಕರಿಸುವುದು (೧-೩೩).

08052001 ಸಂಜಯ ಉವಾಚ|

08052001a ಸ ಕೇಶವಸ್ಯ ಬೀಭತ್ಸುಃ ಶ್ರುತ್ವಾ ಭಾರತ ಭಾಷಿತಂ|

08052001c ವಿಶೋಕಃ ಸಂಪ್ರಹೃಷ್ಟಶ್ಚ ಕ್ಷಣೇನ ಸಮಪದ್ಯತ||

ಸಂಜಯನು ಹೇಳಿದನು: “ಭಾರತ! ಕೇಶವನಾಡಿದ ಆ ಮಾತನ್ನು ಕೇಳಿ ಕ್ಷಣದಲ್ಲಿಯೇ ಬೀಭತ್ಸುವು ಶೋಕರಹಿತನೂ, ಸಂಪ್ರಹೃಷ್ಟನೂ, ಉತ್ಸಾಹಿತನೂ ಆದನು.

08052002a ತತೋ ಜ್ಯಾಮನುಮೃಜ್ಯಾಶು ವ್ಯಾಕ್ಷಿಪದ್ಗಾಂಡಿವಂ ಧನುಃ|

08052002c ದಧ್ರೇ ಕರ್ಣವಿನಾಶಾಯ ಕೇಶವಂ ಚಾಭ್ಯಭಾಷತ||

ಆಗ ಅವನು ಗಾಂಡೀವ ಧನುಸ್ಸನ್ನು ಸೆಳೆದು, ಮೌರ್ವಿಯನ್ನು ತೀಡಿ ಠೇಂಕರಿಸಿ ಕರ್ಣನ ವಿನಾಶಕ್ಕಾಗಿ ನಿಶ್ಚಯಿಸಿ ಕೇಶವನಿಗೆ ಹೇಳಿದನು:

08052003a ತ್ವಯಾ ನಾಥೇನ ಗೋವಿಂದ ಧ್ರುವ ಏಷ ಜಯೋ ಮಮ|

08052003c ಪ್ರಸನ್ನೋ ಯಸ್ಯ ಮೇಽದ್ಯ ತ್ವಂ ಭೂತಭವ್ಯಭವತ್ಪ್ರಭುಃ||

“ಗೋವಿಂದ! ನೀನು ನಾಥನಾಗಿರುವಾಗ ನನ್ನ ಜಯವು ನಿಶ್ಚಯಿಸಿದ್ದೇ ಆಗಿದೆ. ನನ್ನ ಮೇಲೆ ಇಂದು ಪ್ರಸನ್ನನಾಗಿರುವ ನೀನು ಭೂತ-ಭವ್ಯ-ಭವಗಳ ಪ್ರಭುವು!

08052004a ತ್ವತ್ಸಹಾಯೋ ಹ್ಯಹಂ ಕೃಷ್ಣ ತ್ರೀಽಲ್ಲೋಕಾನ್ವೈ ಸಮಾಗತಾನ್|

08052004c ಪ್ರಾಪಯೇಯಂ ಪರಂ ಲೋಕಂ ಕಿಮು ಕರ್ಣಂ ಮಹಾರಣೇ||

ಕೃಷ್ಣ! ನಿನ್ನ ಸಹಾಯದಿಂದ ನಾನು ಮೂರು ಲೋಕಗಳನ್ನೂ ಎದುರಿಸಬಲ್ಲೆ. ಪರಮ ಲೋಕವನ್ನೂ ಸೇರಬಲ್ಲೆ. ಇನ್ನು ಮಹಾರಣದಲ್ಲಿ ಕರ್ಣನು ಯಾವ ಲೆಖ್ಕಕ್ಕೆ?

08052005a ಪಶ್ಯಾಮಿ ದ್ರವತೀಂ ಸೇನಾಂ ಪಾಂಚಾಲಾನಾಂ ಜನಾರ್ದನ|

08052005c ಪಶ್ಯಾಮಿ ಕರ್ಣಂ ಸಮರೇ ವಿಚರಂತಮಭೀತವತ್||

ಜನಾರ್ದನ! ಓಡಿಹೋಗುತ್ತಿರುವ ಪಾಂಚಾಲರ ಸೇನೆಯನ್ನು ನೋಡುತ್ತಿದ್ದೇನೆ. ಸಮರದಲ್ಲಿ ನಿರ್ಭೀತನಾಗಿ ಸಂಚರಿಸುತ್ತಿರುವ ಕರ್ಣನನ್ನೂ ನೋಡುತ್ತಿದ್ದೇನೆ.

08052006a ಭಾರ್ಗವಾಸ್ತ್ರಂ ಚ ಪಶ್ಯಾಮಿ ವಿಚರಂತಂ ಸಮಂತತಃ|

08052006c ಸೃಷ್ಟಂ ಕರ್ಣೇನ ವಾರ್ಷ್ಣೇಯ ಶಕ್ರೇಣೇವ ಮಹಾಶನಿಂ||

ವಾರ್ಷ್ಣೇಯ! ಕರ್ಣನಿಂದ ಸೃಷ್ಟಿಸಲ್ಪಟ್ಟ, ಸುತ್ತಲೂ ಹರಡುತ್ತಿರುವ, ಶಕ್ರನ ಮಹಾವಜ್ರದಂತಿರುವ ಭಾರ್ಗವಾಸ್ತ್ರವನ್ನೂ ನಾನು ನೋಡುತ್ತಿದ್ದೇನೆ.

08052007a ಅಯಂ ಖಲು ಸ ಸಂಗ್ರಾಮೋ ಯತ್ರ ಕೃಷ್ಣ ಮಯಾ ಕೃತಂ|

08052007c ಕಥಯಿಷ್ಯಂತಿ ಭೂತಾನಿ ಯಾವದ್ಭೂಮಿರ್ಧರಿಷ್ಯತಿ||

ಕೃಷ್ಣ! ನಾನು ಇಲ್ಲಿ ಏನು ಸಂಗ್ರಾಮವನ್ನು ನಡೆಸುತ್ತೇನೋ ಅದರ ಕುರಿತು ಭೂತಗಳು ಭೂಮಿಯು ಧರಿಸಿರುವವರೆಗೆ ಮಾತನಾಡಿಕೊಳ್ಳುತ್ತಿರುತ್ತವೆ.

08052008a ಅದ್ಯ ಕೃಷ್ಣ ವಿಕರ್ಣಾ ಮೇ ಕರ್ಣಂ ನೇಷ್ಯಂತಿ ಮೃತ್ಯವೇ|

08052008c ಗಾಂಡೀವಮುಕ್ತಾಃ ಕ್ಷಿಣ್ವಂತೋ ಮಮ ಹಸ್ತಪ್ರಚೋದಿತಾಃ||

ಕೃಷ್ಣ! ಇಂದು ನನ್ನ ಕೈಯಿಂದ ಪ್ರಜೋದಿತಗೊಂಡು ಗಾಂಡೀವದಿಂದ ಹೊರಡುವ ವಿಕರ್ಣ ಬಾಣಗಳು ಕರ್ಣನನ್ನು ಗಾಯಗೊಳಿಸಿ ಮೃತ್ಯುವಿಗೆ ಒಯ್ಯುವವು!

08052009a ಅದ್ಯ ರಾಜಾ ಧೃತರಾಷ್ಟ್ರಃ ಸ್ವಾಂ ಬುದ್ಧಿಮವಮಂಸ್ಯತೇ|

08052009c ದುರ್ಯೋಧನಮರಾಜ್ಯಾರ್ಹಂ ಯಯಾ ರಾಜ್ಯೇಽಭ್ಯಷೇಚಯತ್||

ಇಂದು ರಾಜಾ ಧೃತರಾಷ್ಟ್ರನು ರಾಜ್ಯಕ್ಕೆ ಅರ್ಹನಾಗಿರದ ದುರ್ಯೋಧನನನ್ನು ರಾಜ್ಯಾಭೀಷೇಕಮಾಡಿದುದಕ್ಕೆ ತನ್ನದೇ ಬುದ್ಧಿಯನ್ನು ಹಳಿದುಕೊಳ್ಳುತ್ತಾನೆ!

08052010a ಅದ್ಯ ರಾಜ್ಯಾತ್ಸುಖಾಚ್ಚೈವ ಶ್ರಿಯೋ ರಾಷ್ಟ್ರಾತ್ತಥಾ ಪುರಾತ್|

08052010c ಪುತ್ರೇಭ್ಯಶ್ಚ ಮಹಾಬಾಹೋ ಧೃತರಾಷ್ಟ್ರೋ ವಿಯೋಕ್ಷ್ಯತೇ||

ಮಹಾಬಾಹೋ! ಇಂದು ಧೃತರಾಷ್ಟ್ರನು ರಾಜ್ಯ, ಸುಖ, ಸಂಪತ್ತು, ರಾಷ್ಟ್ರ, ಮತ್ತು ನಂತರ ಪುತ್ರರಿಂದಲೂ ವಿಯೋಗಹೊಂದುತ್ತಾನೆ!

08052011a ಅದ್ಯ ದುರ್ಯೋಧನೋ ರಾಜಾ ಜೀವಿತಾಚ್ಚ ನಿರಾಶಕಃ|

08052011c ಭವಿಷ್ಯತಿ ಹತೇ ಕರ್ಣೇ ಕೃಷ್ಣ ಸತ್ಯಂ ಬ್ರವೀಮಿ ತೇ||

ಕೃಷ್ಣ! ಕರ್ಣನು ಹತನಾಗಲು ಇಂದು ರಾಜಾ ದುರ್ಯೋಧನನು ಜೀವದಲ್ಲಿಯೇ ನಿರಾಶನಾಗುತ್ತಾನೆ. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ!

08052012a ಅದ್ಯ ದೃಷ್ಟ್ವಾ ಮಯಾ ಕರ್ಣಂ ಶರೈರ್ವಿಶಕಲೀಕೃತಂ|

08052012c ಸ್ಮರತಾಂ ತವ ವಾಕ್ಯಾನಿ ಶಮಂ ಪ್ರತಿ ಜನೇಶ್ವರಃ||

ಇಂದು ನನ್ನ ಶರಗಳಿಂದ ಚೂರು ಚೂರುಗಳಾಗಿ ತುಂಡಾದನಂತರ ಜನೇಶ್ವರನು ಸಂಧಿಯಕುರಿತು ನೀನು ಹೇಳಿದ ಮಾತುಗಳನ್ನು ಸ್ಮರಿಸಿಕೊಳ್ಳುತ್ತಾನೆ!

08052013a ಅದ್ಯಾಸೌ ಸೌಬಲಃ ಕೃಷ್ಣ ಗ್ಲಹಂ ಜಾನಾತು ವೈ ಶರಾನ್|

08052013c ದುರೋದರಂ ಚ ಗಾಂಡೀವಂ ಮಂಡಲಂ ಚ ರಥಂ ಮಮ||

ಕೃಷ್ಣ! ಇಂದು ಸೌಬಲನು ನನ್ನ ಶರಗಳನ್ನೇ ದಾಳಗಳೆಂದೂ, ಗಾಂಡೀವವೇ ಜೂಜುಗಾರ ಮತ್ತು ರಥವೇ ಜೂಜಾಡುವ ಕಟ್ಟೆ ಎಂದು ತಿಳಿದುಕೊಳ್ಳುತ್ತಾನೆ!

08052014a ಯೋಽಸೌ ರಣೇ ನರಂ ನಾನ್ಯಂ ಪೃಥಿವ್ಯಾಂ ಅಭಿಮನ್ಯತೇ|

08052014c ತಸ್ಯಾದ್ಯ ಸೂತಪುತ್ರಸ್ಯ ಭೂಮಿಃ ಪಾಸ್ಯತಿ ಶೋಣಿತಂ|

08052014e ಗಾಂಡೀವಸೃಷ್ಟಾ ದಾಸ್ಯಂತಿ ಕರ್ಣಸ್ಯ ಪರಮಾಂ ಗತಿಂ||

ರಣದಲ್ಲಿ ಪೃಥ್ವಿಯ ಬೇರೆ ಯಾವ ನರನನ್ನೂ ಮನ್ನಿಸದಿದ್ದ ಸೂತಪುತ್ರನ ರಕ್ತವನ್ನು ಭೂಮಿಯು ಕುಡಿಯಲಿದೆ! ಗಾಂಡೀವದಿಂದ ಸೃಷ್ಟಿಸಲ್ಪಟ್ಟ ಶರಗಳು ಕರ್ಣನಿಗೆ ಪರಮಗತಿಯನ್ನು ನೀಡುತ್ತವೆ!

08052015a ಅದ್ಯ ತಪ್ಸ್ಯತಿ ರಾಧೇಯಃ ಪಾಂಚಾಲೀಂ ಯತ್ತದಾಬ್ರವೀತ್|

08052015c ಸಭಾಮಧ್ಯೇ ವಚಃ ಕ್ರೂರಂ ಕುತ್ಸಯನ್ಪಾಂಡವಾನ್ಪ್ರತಿ||

ಅಂದು ಸಭಾಮಧ್ಯದಲ್ಲಿ ಪಾಂಡವರ ಕುರಿತು ತಿರಸ್ಕಾರಪೂರ್ವಕವಾಗಿ ಮಾತನಾಡುತ್ತ ಪಾಂಚಾಲಿಗೆ ಯಾವ ಕ್ರೂರ ಮಾತುಗಳನ್ನಾಡಿದ್ದನೋ ಅದಕ್ಕೆ ಇಂದು ರಾಧೇಯನು ಪಶ್ಚಾತ್ತಾಪಪಡುತ್ತಾನೆ.

08052016a ಯೇ ವೈ ಷಂಢತಿಲಾಸ್ತತ್ರ ಭವಿತಾರೋಽದ್ಯ ತೇ ತಿಲಾಃ|

08052016c ಹತೇ ವೈಕರ್ತನೇ ಕರ್ಣೇ ಸೂತಪುತ್ರೇ ದುರಾತ್ಮನಿ||

ಅಂದು ಎಣ್ಣೆಯನ್ನು ತೆಗೆದ ಪೊಳ್ಳು ಎಳ್ಳಿನಂತಿರುವರೆಂದು ಕರೆಯಲ್ಪಟ್ಟವರು ಇಂದು ದುರಾತ್ಮ ಸೂತಪುತ್ರ ವೈಕರ್ತನ ಕರ್ಣನು ಹತನಾದನಂತರ ಎಣ್ಣೆಯಿಂದ ಕೂಡಿದ ಎಳ್ಳಿನಂತೆಯೇ ಆಗುತ್ತಾರೆ!

08052017a ಅಹಂ ವಃ ಪಾಂಡುಪುತ್ರೇಭ್ಯಸ್ತ್ರಾಸ್ಯಾಮೀತಿ ಯದಬ್ರವೀತ್|

08052017c ಅನೃತಂ ತತ್ಕರಿಷ್ಯಂತಿ ಮಾಮಕಾ ನಿಶಿತಾಃ ಶರಾಃ||

“ನಾನು ನಿಮ್ಮನ್ನು ಪಾಂಡುಪುತ್ರರಿಂದ ಸಂರಕ್ಷಿಸುತ್ತೇನೆ!” ಎಂದು ಹೇಳಿದ ಅವನ ಮಾತುಗಳನ್ನು ನನ್ನ ನಿಶಿತ ಶರಗಳು ಸುಳ್ಳಾಗಿಸುತ್ತವೆ!

08052018a ಹಂತಾಹಂ ಪಾಂಡವಾನ್ಸರ್ವಾನ್ಸಪುತ್ರಾನಿತಿ ಯೋಽಬ್ರವೀತ್|

08052018c ತಮದ್ಯ ಕರ್ಣಂ ಹಂತಾಸ್ಮಿ ಮಿಷತಾಂ ಸರ್ವಧನ್ವಿನಾಂ||

“ಪುತ್ರರೊಂದಿಗೆ ಸರ್ವ ಪಾಂಡವರನ್ನೂ ನಾನು ಸಂಹರಿಸುತ್ತೇನೆ!” ಎಂದು ಯಾರು ಹೇಳಿದ್ದನೋ ಆ ಕರ್ಣನನ್ನು ನಾನು ಇಂದು ಸರ್ವಧನ್ವಿಗಳೂ ನೋಡುತ್ತಿದ್ದಂತೆ ಸಂಹರಿಸುತ್ತೇನೆ!

08052019a ಯಸ್ಯ ವೀರ್ಯೇ ಸಮಾಶ್ವಸ್ಯ ಧಾರ್ತರಾಷ್ಟ್ರೋ ಬೃಹನ್ಮನಾಃ|

08052019c ಅವಾಮನ್ಯತ ದುರ್ಬುದ್ಧಿರ್ನಿತ್ಯಮಸ್ಮಾನ್ದುರಾತ್ಮವಾನ್|

08052019e ತಮದ್ಯ ಕರ್ಣಂ ರಾಧೇಯಂ ಹಂತಾಸ್ಮಿ ಮಧುಸೂದನ||

ಮಧುಸೂದನ! ಯಾರ ವೀರ್ಯದಮೇಲೆ ವಿಶ್ವಾಸವನ್ನಿಟ್ಟು ದೊಡ್ಡಮನಸ್ಸಿನ ದುರ್ಬುದ್ಧಿ ದುರಾತ್ಮವಾನ್ ಧಾರ್ತರಾಷ್ಟ್ರನು ನಿತ್ಯವೂ ನಮ್ಮನ್ನು ಅಪಮಾನಿಸುತ್ತಾ ಬಂದನೋ ಆ ರಾಧೇಯ ಕರ್ಣನನ್ನು ನಾನು ಇಂದು ಸಂಹರಿಸುತ್ತೇನೆ.

08052020a ಅದ್ಯ ಕರ್ಣೇ ಹತೇ ಕೃಷ್ಣ ಧಾರ್ತರಾಷ್ಟ್ರಾಃ ಸರಾಜಕಾಃ|

08052020c ವಿದ್ರವಂತು ದಿಶೋ ಭೀತಾಃ ಸಿಂಹತ್ರಸ್ತಾ ಮೃಗಾ ಇವ||

ಕೃಷ್ಣ! ಇಂದು ಕರ್ಣನು ಹತರಾಗಲು ರಾಜರೊಂದಿಗೆ ಧಾರ್ತರಾಷ್ಟ್ರರು ಸಿಂಹಕ್ಕೆ ಹೆದರಿದ ಮೃಗಗಳಂತೆ ದಿಕ್ಕಾಪಾಲಾಗಿ ಓಡಿ ಹೋಗುವರು!

08052021a ಅದ್ಯ ದುರ್ಯೋಧನೋ ರಾಜಾ ಪೃಥಿವೀಮನ್ವವೇಕ್ಷತಾಂ|

08052021c ಹತೇ ಕರ್ಣೇ ಮಯಾ ಸಂಖ್ಯೇ ಸಪುತ್ರೇ ಸಸುಹೃಜ್ಜನೇ||

ಮಕ್ಕಳು ಮತ್ತು ಸುಹೃಜ್ಜನರೊಂದಿಗೆ ಕರ್ಣನು ರಣದಲ್ಲಿ ಇಂದು ನನ್ನಿಂದ ಹತನಾದಾಗ ರಾಜಾ ದುರ್ಯೋಧನನು ಭೂಮಿಯಲ್ಲಿಯೇ ನಿರಾಶೆಹೊಂದುತ್ತಾನೆ!

08052022a ಅದ್ಯ ಕರ್ಣಂ ಹತಂ ದೃಷ್ಟ್ವಾ ಧಾರ್ತರಾಷ್ಟ್ರೋಽತ್ಯಮರ್ಷಣಃ|

08052022c ಜಾನಾತು ಮಾಂ ರಣೇ ಕೃಷ್ಣ ಪ್ರವರಂ ಸರ್ವಧನ್ವಿನಾಂ||

ಕೃಷ್ಣ! ಇಂದು ಕರ್ಣನು ಹತನಾದುದನ್ನು ನೋಡಿ ಅಮರ್ಷಣ ಧಾರ್ತರಾಷ್ಟನು ರಣದಲ್ಲಿ ನಾನೇ ಸರ್ವಧನ್ವಿಗಳಲ್ಲಿ ಶ್ರೇಷ್ಠ ಎನ್ನುವುದನ್ನು ತಿಳಿದುಕೊಳ್ಳುತ್ತಾನೆ!

08052023a ಅದ್ಯಾಹಮನೃಣಃ ಕೃಷ್ಣ ಭವಿಷ್ಯಾಮಿ ಧನುರ್ಭೃತಾಂ|

08052023c ಕ್ರೋಧಸ್ಯ ಚ ಕುರೂಣಾಂ ಚ ಶರಾಣಾಂ ಗಾಂಡಿವಸ್ಯ ಚ||

ಕೃಷ್ಣ! ಇಂದು ನಾನು ಧನುರ್ಧಾರಿಗಳ, ಕುರುಗಳ ಕ್ರೋಧದ ಮತ್ತು ಗಾಂಡಿವದ ಶರಗಳ ಅನೃಣನಾಗುತ್ತೇನೆ!

08052024a ಅದ್ಯ ದುಃಖಮಹಂ ಮೋಕ್ಷ್ಯೇ ತ್ರಯೋದಶಸಮಾರ್ಜಿತಂ|

08052024c ಹತ್ವಾ ಕರ್ಣಂ ರಣೇ ಕೃಷ್ಣ ಶಂಬರಂ ಮಘವಾನಿವ||

ಮಘವಾನನು ಶಂಬರನನ್ನು ಹೇಗೋ ಹಾಗೆ ಇಂದು ರಣದಲ್ಲಿ ಕರ್ಣನನ್ನು ಸಂಹರಿಸಿ ನಾನು ಹದಿಮೂರುವರ್ಷಗಳಿಂದ ಬೆಳೆಯುತ್ತಿರುವ ಈ ದುಃಖದಿಂದ ಮುಕ್ತಿಹೊಂದುತ್ತೇನೆ!

08052025a ಅದ್ಯ ಕರ್ಣೇ ಹತೇ ಯುದ್ಧೇ ಸೋಮಕಾನಾಂ ಮಹಾರಥಾಃ|

08052025c ಕೃತಂ ಕಾರ್ಯಂ ಚ ಮನ್ಯಂತಾಂ ಮಿತ್ರಕಾರ್ಯೇಪ್ಸವೋ ಯುಧಿ||

ಇಂದು ಯುದ್ಧದಲ್ಲಿ ಕರ್ಣನು ಹತನಾಗಲು ಯುದ್ಧದಲ್ಲಿ ಮಿತ್ರಕಾರ್ಯವನ್ನೇ ಬಯಸಿ ಮಾಡುತ್ತಿದ್ದ ಸೋಮಕ ಮಹಾರಥರು ಕಾರ್ಯವು ಮುಗಿಯಿತೆಂದು ಅಭಿಪ್ರಾಯಪಡುತ್ತಾರೆ.

08052026a ನ ಜಾನೇ ಚ ಕಥಂ ಪ್ರೀತಿಃ ಶೈನೇಯಸ್ಯಾದ್ಯ ಮಾಧವ|

08052026c ಭವಿಷ್ಯತಿ ಹತೇ ಕರ್ಣೇ ಮಯಿ ಚಾಪಿ ಜಯಾಧಿಕೇ||

ಮಾಧವ! ಇಂದು ನನ್ನಿಂದ ಕರ್ಣನು ಹತನಾಗಿ ಜಯವು ಅಧಿಕವಾಗಲು ಶೈನೇಯನು ಎಷ್ಟು ಸಂತೋಷಪಡುತ್ತಾನೋ ಅದನ್ನು ತಿಳಿಯಲು ಅಸಾಧ್ಯ!

08052027a ಅಹಂ ಹತ್ವಾ ರಣೇ ಕರ್ಣಂ ಪುತ್ರಂ ಚಾಸ್ಯ ಮಹಾರಥಂ|

08052027c ಪ್ರೀತಿಂ ದಾಸ್ಯಾಮಿ ಭೀಮಸ್ಯ ಯಮಯೋಃ ಸಾತ್ಯಕೇರಪಿ||

ಇಂದು ನಾನು ರಣದಲ್ಲಿ ಮಹಾರಥ ಕರ್ಣ ಮತ್ತು ಅವನ ಮಗನನ್ನು ಕೊಂದು ಭೀಮ, ಯಮಳರು ಮತ್ತು ಸಾತ್ಯಕಿಯರ ಪ್ರೀತಿಪಾತ್ರನಾಗುತ್ತೇನೆ.

08052028a ಧೃಷ್ಟದ್ಯುಮ್ನಶಿಖಂಡಿಭ್ಯಾಂ ಪಾಂಚಾಲಾನಾಂ ಚ ಮಾಧವ|

08052028c ಅಧ್ಯಾನೃಣ್ಯಂ ಗಮಿಷ್ಯಾಮಿ ಹತ್ವಾ ಕರ್ಣಂ ಮಹಾರಣೇ||

ಮಾಧವ! ಇಂದು ಮಹಾರಣದಲ್ಲಿ ಕರ್ಣನನ್ನು ಕೊಂದು ನಾನು ಧೃಷ್ಟದ್ಯುಮ್ನ ಮತ್ತು ಶಿಖಂಡಿ ಈ ಇಬ್ಬರೂ ಪಾಂಚಾಲರ ಋಣಮುಕ್ತನಾಗುತ್ತೇನೆ!

08052029a ಅದ್ಯ ಪಶ್ಯಂತು ಸಂಗ್ರಾಮೇ ಧನಂಜಯಮಮರ್ಷಣಂ|

08052029c ಯುಧ್ಯಂತಂ ಕೌರವಾನ್ಸಂಖ್ಯೇ ಪಾತಯಂತಂ ಚ ಸೂತಜಂ|

08052029e ಭವತ್ಸಕಾಶೇ ವಕ್ಷ್ಯೇ ಚ ಪುನರೇವಾತ್ಮಸಂಸ್ತವಂ||

ಇಂದಿನ ಸಂಗ್ರಾಮದಲ್ಲಿ ಕುಪಿತನಾದ ಧನಂಜಯನು ಕೌರವರೊಡನೆ ಯುದ್ಧಮಾಡಿ ಸೂತಜನನ್ನು ರಣದಲ್ಲಿ ಬೀಳಿಸುವುದನ್ನು ನೋಡಲಿದ್ದಾರೆ! ಕೃಷ್ಣ! ನಿನ್ನ ಸಮ್ಮುಖದಲ್ಲಿ ಮಾತ್ರ ನಾನು ಈ ಆತ್ಮಸಂಸ್ತುತಿಯನ್ನು ಮಾಡಿಕೊಳ್ಳುತ್ತಿದ್ದೇನೆ!

08052030a ಧನುರ್ವೇದೇ ಮತ್ಸಮೋ ನಾಸ್ತಿ ಲೋಕೇ

         ಪರಾಕ್ರಮೇ ವಾ ಮಮ ಕೋಽಸ್ತಿ ತುಲ್ಯಃ|

08052030c ಕೋ ವಾಪ್ಯನ್ಯೋ ಮತ್ಸಮೋಽಸ್ತಿ ಕ್ಷಮಾಯಾಂ

         ತಥಾ ಕ್ರೋಧೇ ಸದೃಶೋಽನ್ಯೋ ನ ಮೇಽಸ್ತಿ||

ಧನುರ್ವೇದದಲ್ಲಿ ನನ್ನ ಸಮನಾದವನು ಲೋಕದಲ್ಲಿ ಇಲ್ಲ. ಪರಾಕ್ರಮದಲ್ಲಿ ನನ್ನ ತುಲ್ಯನಾದವನು ಯಾರೂ ಇಲ್ಲ. ಕ್ಷಮೆಯಲ್ಲಿಯೂ ನನ್ನಂತಹ ಬೇರೊಬ್ಬನು ಇಲ್ಲ. ಹಾಗೆಯೇ ಕ್ರೋಧದಲ್ಲಿಯೂ ನನ್ನ ಸದೃಶನಾದ ಇನ್ನೊಬ್ಬನಿಲ್ಲ!

08052031a ಅಹಂ ಧನುಷ್ಮಾನಸುರಾನ್ಸುರಾಂಶ್ಚ

         ಸರ್ವಾಣಿ ಭೂತಾನಿ ಚ ಸಂಗತಾನಿ|

08052031c ಸ್ವಬಾಹುವೀರ್ಯಾದ್ಗಮಯೇ ಪರಾಭವಂ

         ಮತ್ಪೌರುಷಂ ವಿದ್ಧಿ ಪರಃ ಪರೇಭ್ಯಃ||

ಧನುಷ್ಮಂತನಾದ ನಾನು ಒಟ್ಟಾಗಿ ಬಂದ ಅಸುರರನ್ನೂ, ಸುರರನ್ನೂ ಮತ್ತು ಸರ್ವ ಭೂತಗಳನ್ನೂ ಸ್ವಬಾಹುವೀರ್ಯದಿಂದ ಪರಾಭವಗೊಳಿಸಬಲ್ಲೆನು. ಎಲ್ಲರ ಪೌರುಷಕ್ಕಿಂತ ನನ್ನ ಪೌರುಷವು ಹೆಚ್ಚಿನದೆಂದು ತಿಳಿ.

08052032a ಶರಾರ್ಚಿಷಾ ಗಾಂಡಿವೇನಾಹಂ ಏಕಃ

         ಸರ್ವಾನ್ಕುರೂನಬಾಹ್ಲಿಕಾಂಶ್ಚಾಭಿಪತ್ಯ|

08052032c ಹಿಮಾತ್ಯಯೇ ಕಕ್ಷಗತೋ ಯಥಾಗ್ನಿಸ್

         ತಹಾ ದಹೇಯಂ ಸಗಣಾನ್ಪ್ರಸಹ್ಯ||

ಬಾಣಗಳೇ ಜ್ವಾಲೆಗಳಾಗಿರುವ ಈ ಗಾಂಡೀವದಿಂದ ನಾನೊಬ್ಬನೇ ಸರ್ವ ಕುರುಗಳನ್ನೂ, ಬಾಹ್ಲೀಕರನ್ನೂ ಸಂಹರಿಸಿ ಗ್ರೀಷ್ಮ‌ಋತುವಿನಲ್ಲಿ ಒಣಪೊದೆಗಳನ್ನು ಅಗ್ನಿಯು ದಹಿಸಿಬಿಡುವಂತೆ ಬಲಪೂರ್ವಕವಾಗಿ ದಹಿಸಿಬಿಡುತ್ತೇನೆ!

08052033a ಪಾಣೌ ಪೃಷತ್ಕಾ ಲಿಖಿತಾ ಮಮೈತೇ

         ಧನುಶ್ಚ ಸವ್ಯೇ ನಿಹಿತಂ ಸಬಾಣಂ|

08052033c ಪಾದೌ ಚ ಮೇ ಸರಥೌ ಸಧ್ವಜೌ ಚ

         ನ ಮಾದೃಶಂ ಯುದ್ಧಗತಂ ಜಯಂತಿ||

ನನ್ನ ಒಂದು ಕೈಯಲ್ಲಿ ಬಾಣಗಳ ಚಿಹ್ನೆಗಳಿವೆ. ಮತ್ತೊಂದರಲ್ಲಿ ಬಾಣವನ್ನು ಹೂಡಿರುವ ಧನುಸ್ಸಿನ ಚಿಹ್ನೆಯಿದೆ. ನನ್ನ ಎರಡೂ ಪಾದಗಳಲ್ಲಿ ರಥ-ಧ್ವಜಗಳ ಚಿಹ್ನೆಗಳಿವೆ. ಯುದ್ಧಗತನಾಗಿರುವ ನನ್ನಂತಹವನನ್ನು ಯಾರೂ ಜಯಿಸಲಾರರು!””

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಅರ್ಜುನವಾಕ್ಯೇ ದ್ವಿಪಂಚಾಶತ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಅರ್ಜುನವಾಕ್ಯ ಎನ್ನುವ ಐವತ್ತೆರಡನೇ ಅಧ್ಯಾಯವು.

Related image

Comments are closed.