ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ

ಸತ್ಯವಾನ-ಸಾವಿತ್ರಿಯರ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ದ್ರೌಪದೀಹರಣ ಪರ್ವ (ಅಧ್ಯಾಯ ೨೭೭-೨೮೩) ದಲ್ಲಿ ಬರುತ್ತದೆ. ಈ ಕಥೆಯನ್ನು ಋಷಿ ಮಾರ್ಕಂಡೇಯನು ಯುಧಿಷ್ಠಿರನಿಗೆ ಹೇಳಿದನು.

ಜಯದ್ರಥನನ್ನು ಸೋಲಿಸಿ, ದ್ರೌಪದಿಯನ್ನು ಹಿಂದೆ ಪಡೆದ ಯುಧಿಷ್ಠಿರನು ದ್ರೌಪದೀಹರಣದ ಪ್ರಕರಣದಿಂದ ಅತ್ಯಂತ ದುಃಖಿತನಾಗಿ ಮಾರ್ಕಂಡೇಯನನ್ನು ಪ್ರಶ್ನಿಸಿದನು: “ಮಹಾಮುನೇ! ದ್ರುಪದಾತ್ಮಜೆಯ ಕುರಿತು ನಾನು ಎಷ್ಟು ಶೋಕಿಸುತ್ತಿದ್ದೇನೋ ಅಷ್ಟು ನನ್ನ ಕುರಿತಾಗಲೀ, ನನ್ನ ಈ ಭ್ರಾತೃಗಳ ಕುರಿತಾಗಲೀ ಅಥವಾ ಕಳೆದು ಹೋದ ರಾಜ್ಯದ ಕುರಿತಾಗಲೀ ಶೋಕಿಸುತ್ತಿಲ್ಲ. ದ್ಯೂತದಲ್ಲಿ ದುರಾತ್ಮರಿಂದ ಕಷ್ಟಕ್ಕೊಳಗಾಗಿದ್ದ ನಮ್ಮನ್ನು ಪಾರುಮಾಡಿದ ಕೃಷ್ಣೆಯನ್ನು ಪುನಃ ಜಯದ್ರಥನು ಬಲಾತ್ಕಾರವಾಗಿ ಅಪಹರಿಸಿದನು. ಪತಿವ್ರತೆ ದ್ರುಪದಾತ್ಮಜೆಯ ಹಾಗಿದ್ದ ಇದಕ್ಕೂ ಮೊದಲು ನೀನು ನೋಡಿದ ಅಥವಾ ಕೇಳಿದ ಸೀಮಂತಿನಿ ಯಾರಾದರೂ ಇದ್ದಾರೆಯೇ?” ಈ ಪ್ರಶ್ನೆಗೆ ಉತ್ತರವಾಗಿ ಮಾರ್ಕಂಡೇಯನು ಯುಧಿಷ್ಠಿರನಿಗೆ ಕುಲಸ್ತ್ರೀಯರ ಮಹಾಭಾಗ್ಯವೆಲ್ಲವನ್ನೂ ಹೊಂದಿದ್ದ ರಾಜಕನ್ಯೆ ಸಾವಿತ್ರಿಯ ಕುರಿತು ಹೇಳಿದನು.

ರಾಜಾ ಅಶ್ವಪತಿಯು ಸಾವಿತ್ರಿಯ ವರದಿಂದ ಮಗಳನ್ನು ಪಡೆದುದು, ಮಗಳು ಸಾವಿತ್ರಿಯು ವರಾನ್ವೇಷಣೆಗೆ ಹೋದುದು

ಮದ್ರದಲ್ಲಿ ಬ್ರಾಹ್ಮಣರ ಮತ್ತು ಶರಣರ ಸಾನ್ನಿಧ್ಯದಲ್ಲಿ ಧರ್ಮಾತ್ಮ ಸತ್ಯಸಂಧ ಜಿತೇಂದ್ರಿಯ ಅಶ್ವಪತಿ ಎನ್ನುವ ರಾಜನೋರ್ವನಿದ್ದನು. ಅವನು ಯಜ್ಞಗಳನ್ನು ಮಾಡುತ್ತಿದ್ದನು; ಮುಂದೆನಿಂತು ದಾನಗಳನ್ನು ನೀಡುತ್ತಿದ್ದನು; ಪೌರ-ಜಾನಪದರ ಪ್ರಿಯನಾಗಿದ್ದನು; ಮತ್ತು ಸರ್ವಭೂತಗಳ ಹಿತದಲ್ಲಿ ನಿರತನಾಗಿದ್ದನು. ಕ್ಷಮಾವಂತನೂ, ಸತ್ಯವನ್ನೇ ಮಾತನಾಡುವವನೂ, ಇಂದ್ರಿಯಗಳನ್ನು ಗೆದ್ದವನೂ ಆದ ಅವನಿಗೆ ಮಕ್ಕಳಿರಲಿಲ್ಲ. ವಯಸ್ಸನ್ನು ದಾಟಿದ್ದ ಅವನಿಗೆ ಇದೊಂದು ಸಂತಾಪದ ವಿಷಯವೇ ಆಗಿತ್ತು. ತನಗೆ ಮಕ್ಕಳಾಗಬೇಕೆಂದು ಅವನು ನಿರ್ಧಿಷ್ಟ ವೇಳೆಗಳಲ್ಲಿ ಅಲ್ಪವೇ ಆಹಾರವನ್ನು ಸೇವಿಸುತ್ತಾ ಬ್ರಹ್ಮಚರ್ಯದಲ್ಲಿ ಜಿತೇಂದ್ರಿಯನಾಗಿದ್ದು ತೀವ್ರ ನಿಯಮಗಳಲ್ಲಿ ತೊಡಗಿದನು. ಅವನು ಪ್ರತಿದಿನವೂ ಸಾವಿತ್ರಿಗೆ ನೂರುಸಾವಿರ ಆಹುತಿಗಳನ್ನು ನೀಡುತ್ತಿದ್ದನು ಮತ್ತು ದಿನದ ಆರನೆಯ ಒಂದು ಭಾಗದಲ್ಲಿ ಮಾತ್ರ ಅಲ್ಪ ಆಹಾರವನ್ನು ತೆಗೆದುಕೊಳ್ಳುತ್ತಿದ್ದನು. ಈ ರೀತಿ ನಿಯಮದಲ್ಲಿದ್ದುಕೊಂಡು ಹದಿನೆಂಟು ವರ್ಷಗಳು ಕಳೆದ ನಂತರ ಸಾವಿತ್ರಿಯು ಅವನ ಮೇಲೆ ಸಂತುಷ್ಟಳಾಗಿ ಕಾಣಿಸಿಕೊಂಡಳು. ಅಗ್ನಿಹೋತ್ರದಿಂದ ಎದ್ದುಬಂದ ಆ ಮಹತಾನ್ವಿತೆ ವರದೆಯು ಹರ್ಷದಿಂದ ರಾಜನಿಗೆ ಹೇಳಿದಳು: “ರಾಜನ್! ನಿನ್ನ ಬ್ರಹ್ಮಚರ್ಯ, ಪರಿಶುದ್ಧತೆ, ದಮ, ನಿಯಮ, ಮತ್ತು ನನ್ನ ಮೇಲಿರಿಸಿರುವ ಸರ್ವಾತ್ಮ ಭಕ್ತಿಗೆ ಸಂತುಷ್ಟಳಾಗಿದ್ದೇನೆ. ವರವನ್ನು ಕೇಳು!”

ಅಶ್ವಪತಿಯು ಹೇಳಿದನು: “ದೇವೀ! ಮಕ್ಕಳು ಬೇಕೆಂಬ ಆಸೆಯಿಂದ ನಾನು ಈ ಧರ್ಮಸಮಾರಂಭದಲ್ಲಿ ತೊಡಗಿದ್ದೇನೆ. ನನ್ನಿಂದ ಸಂತೃಪ್ತಳಾಗಿದ್ದರೆ ನನ್ನ ಕುಲವನ್ನು ವೃದ್ಧಿಸುವ ಹಲವು ಪುತ್ರರನ್ನು ನನಗೆ ನೀಡು! ದ್ವಿಜರಿಗೆ ಸಂತಾನವೇ ಪರಮ ಧರ್ಮವೆಂದು ಹೇಳುತ್ತಾರೆ.”

ಸಾವಿತ್ರಿಯು ಹೇಳಿದಳು: “ರಾಜನ್! ನಿನ್ನ ಈ ಅಭಿಪ್ರಾಯವನ್ನು ತಿಳಿದು ಹಿಂದೆಯೇ ನಿನಗೆ ಪುತ್ರರನ್ನು ನೀಡುವುದರ ಕುರಿತು ಪಿತಾಮಹನಲ್ಲಿ ಕೇಳಿಕೊಂಡಿದ್ದೆ. ಸ್ವಯಂಭುವು ವಿಹಿಸಿದಂತೆ ಅವನ ಪ್ರಸಾದದಿಂದ ನಿನಗೆ ಶೀಘ್ರದಲ್ಲಿಯೇ ಸೌಮ್ಯ ತೇಜಸ್ವಿನೀ ಕನ್ಯೆಯು ಜನಿಸುವಳು. ಇದರ ಕುರಿತು ಮರುಪ್ರಶ್ನೆಯನ್ನು ಕೇಳಬೇಡ ಅಥವಾ ವಾದಿಸಬೇಡ. ನಿನ್ನ ಮೇಲೆ ಸಂತುಷ್ಟಳಾಗಿ ಪಿತಾಮಹನು ವಿಧಿಸಿದುದನ್ನು ನಿನಗೆ ಹೇಳುತ್ತಿದ್ದೇನೆ.”

ಸಾವಿತ್ರಿಯ ವಚನಕ್ಕೆ ಹಾಗೆಯೇ ಆಗಲೆಂದು ಅವನು ಒಪ್ಪಿಕೊಳ್ಳಲು “ಇದು ಶ್ರೀಘ್ರದಲ್ಲಿಯೇ ಆಗುತ್ತದೆ” ಎಂದು ಅನುಗ್ರಹಿಸಿ ಸಾವಿತ್ರಿಯು ಅಂತರ್ಧಾನಳಾದಳು. ರಾಜನು ತನ್ನ ಅರಮನೆಗೆ ಹಿಂದಿರುಗಿ, ಸ್ವರಾಜ್ಯದಲ್ಲಿ ಪ್ರಜೆಗಳನ್ನು ಪ್ರೀತಿ-ಧರ್ಮಗಳಿಂದ ಪಾಲಿಸಿದನು.

ಕೆಲವು ಸಮಯ ಕಳೆಯಲು, ನಿಯತವ್ರತ ರಾಜನು ಧರ್ಮಚಾರಿಣಿ ಹಿರಿಯ ರಾಣಿಗೆ ಗರ್ಭವನ್ನಿತ್ತನು. ರಾಜಪುತ್ರಿ ಮಾಲವಿಯಲ್ಲಿ ಗರ್ಭವು ಅಂಬರದಲ್ಲಿ ಶುಕ್ಲಪಕ್ಷದ ತಾರಾಪತಿ ಚಂದ್ರನಂತೆ ವರ್ಧಿಸಿತು. ಕಾಲ ಪ್ರಾಪ್ತವಾಗಲು ಅವಳು ರಾಜೀವಲೋಚನೆ ಕನ್ಯೆಗೆ ಜನ್ಮವಿತ್ತಳು. ನೃಪತಿಯು ಸಂತೋಷದಿಂದ ಅವಳ ಎಲ್ಲ ಕ್ರಿಯೆಗಳನ್ನೂ ನೆರವೇರಿಸಿದನು. ಆಹುತಿಗಳಿಂದ ತೃಪ್ತಳಾದ ಸಾವಿತ್ರಿಯಿಂದ ಪಡೆದ ಅವಳಿಗೆ ತಂದೆ ಮತ್ತು ವಿಪ್ರರು “ಸಾವಿತ್ರಿ” ಎಂದೇ ನಾಮಕರಣ ಮಾಡಿದರು. ಆ ನೃಪತಾತ್ಮಜೆಯು ಸಾಕ್ಷಾತ್ ಶ್ರೀಯೇ ಅವತರಿಸಿರುವಳೋ ಎನ್ನುವಂತೆ ಅತೀವ ಸುಂದರಿಯಾಗಿ ಬೆಳೆದಳು. ಸಮಯವು ಕಳೆದಂತೆ ಆ ಕನ್ಯೆಯು ಯೌವನಾವಸ್ಥೆಗೆ ಬಂದಳು. ಆ ಸುಮಧ್ಯಮೆ, ಪೃಥುಶ್ರೋಣೀ, ಚಿನ್ನದ ಪುತ್ಥಳಿಯಂತಿದ್ದ ಅವಳನ್ನು ನೋಡಿ ಜನರು ದೇವಕನ್ಯೆಯೇ ತಮ್ಮ ನಡುವೆ ಬಂದಿದ್ದಾಳೋ ಎಂದು ಅಚ್ಚರಿ ಪಡುತ್ತಿದ್ದರು. ಆ ಪದ್ಮಪಲಾಶಾಕ್ಷಿಯಾದರೋ ತೇಜಸ್ಸಿನಿಂದ ಪ್ರಜ್ವಲಿಸುತ್ತಿರಲು ಅವಳ ತೇಜಸ್ಸಿನಿಂದ ಹಿಂಜರಿದ ಯಾವ ಪುರುಷನೂ ಅವಳನ್ನು ವರಿಸಲಿಲ್ಲ.

ಒಮ್ಮೆ ಉತ್ತಮ ದಿನದಂದು ಉಪವಾಸದಿಂದಿದ್ದು, ತಲೆಗೆ ಸ್ನಾನಮಾಡಿ ದೇವತೆಗಳನ್ನು ಪೂಜಿಸಿ ಸಾವಿತ್ರಿಯು ವಿಧಿವತ್ತಾಗಿ ಬ್ರಾಹ್ಮಣರು ವಾಚಿಸುತ್ತಿರಲು ಅಗ್ನಿಯಲ್ಲಿ ಆಹುತಿಗಳನ್ನಿತ್ತಳು. ಅನಂತರ ಸುಮನಸ್ಕಳಾಗಿ ಉಳಿದ ಪ್ರಸಾದವನ್ನು ಹಿಡಿದು ಶ್ರೀಯಂತೆ ರೂಪವತಿಯಾಗಿದ್ದ ಆ ದೇವಿಯು ತಂದೆಯ ಬಳಿ ಹೋದಳು. ಮೊದಲು ಪ್ರಸಾದವನ್ನು ಅವನಿಗಿತ್ತು ತಂದೆಯ ಪಾದೆಗಳಿಗೆರಗಿ, ಅಂಜಲೀಬದ್ಧಲಾಗಿ ಆ ವರಾರೋಹೆಯು ರಾಜನ ಬಳಿಯಲ್ಲಿ ನಿಂತುಕೊಂಡಳು. ಯೌವನಾವಸ್ಥೆಯಲ್ಲಿರುವ ತನ್ನ ದೇವರೂಪಿಣೀ ಮಗಳನ್ನು ನೋಡಿ ನೃಪತಿಯು ಅವಳನ್ನು ಕೇಳಿಕೊಂಡು ಇದೂವರೆಗೆ ಯಾವ ವರರೂ ಬರಲಿಲ್ಲವಲ್ಲಾ ಎಂದು ದುಃಖಿಸಿ ಹೇಳಿದನು: “ಪುತ್ರಿ! ನಿನ್ನನ್ನು ಕೊಡುವ ಕಾಲವು ಬಂದಿದೆ. ಆದರೆ ಇದೂವರೆಗೆ ಯಾರೂ ನಿನ್ನನ್ನು ಕೇಳಿಕೊಂಡು ಬಂದಿಲ್ಲ. ಗುಣದಲ್ಲಿ ನಿನ್ನಂತೆಯೇ ಇರುವ ಪತಿಯನ್ನು ನೀನೇ ಇಷ್ಟಪಟ್ಟು ಆರಿಸಿಕೋ! ನೀನು ಬಯಸಿದ ಪುರುಷನ ಕುರಿತು ಹೇಳು. ವಿಮರ್ಶಿಸಿ ನಾನು ನಿನಗಿಷ್ಟನಾದ ವರನಿಗೇ ನಿನ್ನನ್ನು ಕೊಡುತ್ತೇನೆ. ಧರ್ಮಶಾಸ್ತ್ರಗಳನ್ನು ಓದಿ ತಿಳಿದ ದ್ವಿಜರಿಂದ ಕೇಳಿದುದನ್ನೇ ನಾನು ನಿನಗೆ ಹೇಳುತ್ತಿದ್ದೇನೆ. ನೀನೂ ಕೂಡ ನಾನು ಹೇಳುತ್ತಿರುವ ಈ ಮಾತನ್ನು ಕೇಳು. ವಯಸ್ಸಿಗೆ ಬಂದ ಮಗಳನ್ನು ಕೊಡದೇ ಇರುವ ತಂದೆಯನ್ನು ನಿಂದಿಸಬೇಕು, ಮಕ್ಕಳನ್ನು ಪಡೆಯದ ಪತಿಯನ್ನು ನಿಂದಿಸಬೇಕು, ವಿಧವೆ ತಾಯಿಯನ್ನು ನೋಡಿಕೊಳ್ಳದ ಪುತ್ರನನ್ನು ನಿಂದಿಸಬೇಕು. ನನ್ನ ಈ ಮಾತನ್ನು ಕೇಳಿ ಬೇಗನೇ ಪತಿಯನ್ನು ಹುಡುಕಿಕೋ. ನಾನು ದೇವತೆಗಳ ನಿಂದನೆಗೊಳಾಗಾಗದಂತೆ ಮಾಡು!”

ಮಗಳಿಗೆ ಈ ರೀತಿ ಹೇಳಿ ಅವನು ಪ್ರಯಾಣಕ್ಕೆ ಸಿದ್ಧತೆಯನ್ನು ಮಾಡಿಕೊಂಡು ಅವಳೊಂದಿಗೆ ಹೊರಡಲು ವೃದ್ಧಮಂತ್ರಿಗಳಿಗೆ ಆಜ್ಞಾಪಿಸಿದನು. ನಾಚಿಕೊಂಡ ಆ ಮನಸ್ವಿನಿಯು ತಂದೆಯ ಪಾದಗಳಿಗೆ ವಂದಿಸಿ ಪಿತೃವಚನವನ್ನು ಆಜ್ಞೆಯೆಂದು ಸ್ವೀಕರಿಸಿ ತಕ್ಷಣವೇ ಹೊರಟಳು. ಬಂಗಾರದ ರಥದಲ್ಲಿ ಕುಳಿತು ಸಚಿವರಿಂದ ಸುತ್ತುವರೆದು ರಮ್ಯ ವನಗಳಲ್ಲಿ ರಾಜರ್ಷಿ ತಪೋವನಗಳಲ್ಲಿ ಸುತ್ತಿದಳು. ಅಲ್ಲಿ ವೃದ್ಧರನ್ನು ಗೌರವಿಸಿ ಅವರ ಪಾದಗಳಿಗೆರಗಿ ಕ್ರಮವಾಗಿ ಎಲ್ಲ ವನಗಳಿಗೂ ಹೋದಳು. ಹೀಗೆ ಸರ್ವತೀರ್ಥಗಳಲ್ಲಿ ಧನವನ್ನು ದಾನಮಾಡುತ್ತಾ ಆ ನೃಪತಾತ್ಮಜೆಯು ದ್ವಿಜಮುಖ್ಯರಿರುವ ಬೇರೆ ಬೇರೆ ದೇಶಗಳಿಗೆ ಪ್ರಯಾಣಮಾಡಿದಳು.

ಸಾವಿತ್ರಿಯು ಸತ್ಯವಾನನನ್ನು ವಿವಾಹವಾಗಲು ನಿಶ್ಚಯಿಸಿದುದು

ಆಗ ಒಮ್ಮೆ ಮದ್ರಾಧಿಪನು ನಾರದನೊಡನೆ ಸಭಾಮಧ್ಯದಲ್ಲಿ ಕುಳಿತು ಮಾತಿನಲ್ಲಿ ತೊಡಗಿರಲು ಮಂತ್ರಿಗಳ ಸಹಿತ ಸಾವಿತ್ರಿಯು ಸರ್ವ ತೀರ್ಥ-ಆಶ್ರಮಗಳಿಗೆ ತಿರುಗಾಡಿ ತಂದೆಯ ಮನೆಗೆ ಹಿಂದಿರುಗಿದಳು. ನಾರದನೊಂದಿಗೆ ಕುಳಿತಿದ್ದ ತಂದೆಯನ್ನು ನೋಡಿ ಆ ಶುಭೆಯು ಇಬ್ಬರ ಪಾದಗಳಿಗೂ ಶಿರಬಾಗಿ ನಮಸ್ಕರಿಸಿದಳು. ಆಗ ನಾರದನು ಕೇಳಿದನು: “ನೃಪ! ನಿನ್ನ ಮಗಳು ಎಲ್ಲಿಗೆ ಹೋಗಿದ್ದಳು ಮತ್ತು ಎಲ್ಲಿಂದ ಬರುತ್ತಿದ್ದಾಳೆ? ನೀನು ಏಕೆ ಈ ಯುವತಿಯನ್ನು ಇದೂವರೆಗೂ ಯೋಗ್ಯ ವರನಿಗೆ ಕೊಟ್ಟಿಲ್ಲ?”

ಅಶ್ವಪತಿಯು ಹೇಳಿದನು: “ದೇವರ್ಷೇ! ಇದೇ ಕಾರ್ಯದ ಸಲುವಾಗಿ ನಾನು ಅವಳನ್ನು ಕಳುಹಿಸಿದ್ದೆ ಮತ್ತು ಅಲ್ಲಿಂದಲೇ ಅವಳು ಬರುತ್ತಿದ್ದಾಳೆ. ಅವಳು ಯಾರನ್ನು ಪತಿಯನ್ನಾಗಿ ವರಿಸಿದ್ದಾಳೆ ಎನ್ನುವುದನ್ನು ಅವಳಿಂದಲೇ ಕೇಳೋಣ.” ವಿಸ್ತಾರವಾಗಿ ಹೇಳು ಎಂದು ತಂದೆಯು ಆಜ್ಞಾಪಿಸಲು ಸಾವಿತ್ರಿಯು ಅವನ ಮಾತನ್ನು ದೇವನದೆಂದೇ ಸ್ವೀಕರಿಸಿ ಹೇಳಿದಳು: “ಶಾಲ್ವದಲ್ಲಿ ಧರ್ಮಾತ್ಮ ದ್ಯುಮತ್ಸೇನ ಎಂಬ ರಾಜನಿದ್ದನು. ಆದರೆ ಅವನು ಅಂಧನಾದನು. ಕಣ್ಣುಗಳನ್ನು ಕಳೆದುಕೊಂಡ ಮತ್ತು ಮಗನು ಇನ್ನೂ ಬಾಲಕನಾಗಿದ್ದ ಆ ಧೀಮಂತನ ಮೇಲೆ ಹಿಂದಿನಿಂದ ವೈರತ್ವವನ್ನು ಹೊಂದಿದ್ದ ನೆರೆಯ ರಾಜನು ಆಕ್ರಮಣ ಮಾಡಿ ರಾಜ್ಯವನ್ನು ಅಪಹರಿಸಿದನು. ಅವನು ತನ್ನ ಬಾಲಕ ಮಗ ಮತ್ತು ಪತ್ನಿಯೊಡನೆ ವನವನ್ನು ಸೇರಿದನು. ಮಹಾರಣ್ಯಕ್ಕೆ ಹೋಗಿ ಆ ಮಹಾವ್ರತನು ತಪಸ್ಸನ್ನು ತಪಿಸಿದನು. ರಾಜಧಾನಿಯಲ್ಲಿ ಹುಟ್ಟಿದ್ದ ಅವನ ಮಗನು ತಪೋವನದಲ್ಲಿ ಬೆಳೆದನು. ಆ ಸತ್ಯವಾನನು ನನಗೆ ಅನುರೂಪ ಪತಿಯೆಂದು ಮನಸಾ ಆರಿಸಿಕೊಂಡಿದ್ದೇನೆ.”

ಅದನ್ನು ಕೇಳಿದ ನಾರದನು ಹೇಳಿದನು: “ಅಹೋ! ನೃಪತೇ! ಸಾವಿತ್ರಿಯಿಂದ ಮಹಾ ಪಾಪವೇ ನಡೆದುಹೋಯಿತು! ತಿಳಿಯದೇ ಗುಣವಂತನೆಂದು ಇವಳು ಸತ್ಯವಾನನನ್ನು ವರಿಸಿದ್ದಾಳೆ. ಅವನ ತಂದೆಯು ಸದಾ ಸತ್ಯವನ್ನೇ ನುಡಿಯುತ್ತಾನೆ. ತಾಯಿಯೂ ಸತ್ಯವನ್ನೇ ನುಡಿಯುತ್ತಾಳೆ. ಆದುದರಿಂದಲೇ ಅವನಿಗೆ ಸತ್ಯವಾನನೆಂದು ಬ್ರಾಹ್ಮಣರು ಹೆಸರಿಟ್ಟಿದ್ದಾರೆ. ಬಾಲ್ಯದಲ್ಲಿ ಅವನಿಗೆ ಕುದುರೆಗಳು ಅತಿ ಪ್ರಿಯವಾಗಿದ್ದವು ಮತ್ತು ಅವನು ಕುದುರೆಗಳ ಚಿತ್ರವನ್ನೂ ಬರೆಯುತ್ತಿದ್ದನು. ಅಶ್ವಗಳ ಚಿತ್ರವನ್ನು ಬರೆಯುತ್ತಿದ್ದುದರಿಂದ ಅವನನ್ನು ಚಿತ್ರಾಶ್ವ ಎಂದೂ ಕರೆಯುತ್ತಾರೆ.”

ಆಗ ರಾಜನು ಕೇಳಿದನು: “ಆ ನೃಪಾತ್ಮನು ತೇಜಸ್ವಿಯೂ ಬುದ್ಧಿವಂತನೂ ಆಗಿದ್ದಾನೆಯೇ? ಸತ್ಯವಾನನು ಕ್ಷಮಾವಂತನೂ ಶೂರನೂ ಆಗಿದ್ದಾನೆಯೇ?”

ನಾರದನು ಹೇಳಿದನು: “ಸತ್ಯವಾನನು ವಿವಸ್ವತನಂತೆ ತೇಜಸ್ವಿಯೂ ಮತಿಯಲ್ಲಿ ಬೃಹಸ್ಪತಿಯ ಸಮನೂ ಆಗಿದ್ದಾನೆ. ಮಹೇಂದ್ರನಂತೆ ಶೂರನೂ ವಸುಧೆಯಂತೆ ಕ್ಷಮಾನ್ವಿತನೂ ಹೌದು.”

ಅಶ್ವಪತಿಯು ಹೇಳಿದನು: “ಆ ರಾಜಾತ್ಮಜ ಸತ್ಯವಾನನು ದಾನಿಯೂ ಬ್ರಾಹ್ಮಣರನ್ನು ಗೌರವಿಸುವವನೂ ಆಗಿದ್ದಾನೆಯೇ? ಉದಾರನೂ, ರೂಪವಂತನೂ, ನೋಡಲು ಸುಂದರನೂ ಆಗಿದ್ದಾನೆಯೇ?”

ನಾರದನು ಹೇಳಿದನು: “ಸಾಂಕೃತಿ ರಂತಿದೇವನಂತೆ ಅವನು ತನ್ನ ಶಕ್ತಿಗೆ ತಕ್ಕಂತೆ ದಾನಗಳನ್ನು ನೀಡುತ್ತಾನೆ. ಶಿಬಿ ಔಶೀನರನಂತೆ ಬ್ರಾಹ್ಮಣರನ್ನು ಪೂಜಿಸುತ್ತಾನೆ ಮತ್ತು ಸತ್ಯವಾದಿಯಾಗಿದ್ದಾನೆ. ಯಯಾತಿಯಂತೆ ಉದಾರನೂ ಚಂದ್ರನಂತೆ ಸುಂದರನೂ ಆಗಿದ್ದಾನೆ. ದ್ಯುಮತ್ಸೇನನ ಬಲಶಾಲೀ ಮಗನು ರೂಪದಲ್ಲಿ ಇಬ್ಬರು ಅಶ್ವಿನಿಯರಂತಿದ್ದಾನೆ. ಅವನು ತನ್ನ ಆಸೆಗಳನ್ನು ಹಿಡಿತಲ್ಲಿಟ್ಟುಕೊಂಡವನು. ಮೃದು. ಶೂರ. ಸತ್ಯವಂತ ಮತ್ತು ಜಿತೇಂದ್ರಿಯ. ಅವನು ಸ್ನೇಹಸ್ವಭಾವದವನು, ಅಸೂಯೆಯಿಲ್ಲದವನು. ಸ್ವಲ್ಪ ನಾಚಿಕೆ ಸ್ವಭಾವದವನು ಮತ್ತು ಧೃತಿವಂತನು. ಅವನು ನಿತ್ಯವೂ ನೇರವಾಗಿಯೇ ನಡೆದುಕೊಳ್ಳುತ್ತಾನೆ ಮತ್ತು ಧೃವನಂತೆ ಸ್ಥಿರನಾಗಿದ್ದಾನೆ ಎಂದು ತಪೋವೃದ್ಧರೂ ಶೀಲವೃದ್ಧರೂ ಹೇಳುತ್ತಾರೆ.”

ಅಶ್ವಪತಿಯು ಹೇಳಿದನು: “ಭಗವನ್! ಅವನಲ್ಲಿರುವ ಎಲ್ಲ ಒಳ್ಳೆಯ ಗುಣಗಳ ಕುರಿತೇ ನೀವು ಹೇಳುತ್ತಿದ್ದೀರಿ. ಅವನಲ್ಲಿ ಏನಾದರೂ ದೋಷವಿದ್ದರೆ ಅದರ ಕುರಿತೂ ಹೇಳಿ.”

ನಾರದನು ಹೇಳಿದನು: “ಅವನಲ್ಲಿ ಒಂದೇ ಒಂದು ದೋಷವಿದೆ. ಬೇರೆ ಏನೂ ಇಲ್ಲ. ಕ್ಷೀಣಾಯು ಸತ್ಯವಾನನು ಇಂದಿನಿಂದ ಒಂದು ವರ್ಷದಲ್ಲಿ ದೇಹತ್ಯಾಗಮಾಡುತ್ತಾನೆ.”

ಆಗ ರಾಜನು ಸಾವಿತ್ರಿಗೆ ಹೇಳಿದನು: “ಮಗೂ ಸಾವಿತ್ರಿ! ಇಲ್ಲಿ ಬಾ! ಹೋಗಿ ಬೇರೆ ಯಾರನ್ನಾದರೂ ವರಿಸು! ಅವನಲ್ಲಿರುವ ಈ ಮಹಾ ದೋಷವೊಂದೇ ಅವನ ಎಲ್ಲ ಗುಣಗಳನ್ನೂ ಮೀರಿ ನಿಂತಿದೆ. ಭಗವಾನ್ ನಾರದರು ಹೇಳಿದಂತೆ ಒಂದು ವರ್ಷದಲ್ಲಿ ಆ ಅಲ್ಪಾಯುವು ದೇಹತ್ಯಾಗ ಮಾಡುತ್ತಾನೆ!”

ಸಾವಿತ್ರಿಯು ಹೇಳಿದಳು: “ಆಸ್ತಿಯನ್ನು ಒಂದೇ ಬಾರಿ ವಿಂಗಡಿಸುತ್ತಾರೆ. ಕನ್ಯೆಯನ್ನು ಒಂದೇ ಬಾರಿ ಕೊಡುತ್ತಾರೆ. ದಾನವನ್ನು ಒಂದೇ ಬಾರಿ ನೀಡಲಾಗುತ್ತದೆ. ಈ ಮೂರನ್ನೂ ಒಂದೊಂದು ಬಾರಿಯೇ ಮಾಡಲಾಗುತ್ತದೆ. ದೀರ್ಘಾಯುವಾಗಿರಲಿ ಅಥವಾ ಅಲ್ಪಾಯುವಾಗಿರಲಿ, ಸುಗುಣನಾಗಿರಲಿ ಅಥವಾ ನಿರ್ಗುಣನಾಗಿರಲಿ, ನಾನು ಅವನನ್ನು ನನ್ನ ಪತಿಯನ್ನಾಗಿ ವರಿಸಿದ್ದೇನೆ. ಎರಡನೇ ಬಾರಿ ನಾನು ವರಿಸುವುದಿಲ್ಲ! ಮನಸ್ಸಿನಲ್ಲಿ ನಿರ್ಧಾರಮಾಡಿ ನಂತರ ಅದು ಮಾತಿನಲ್ಲಿ ಹೊರಬರುತ್ತದೆ ಮತ್ತು ನಂತರವೇ ಅದನ್ನು ಕ್ರಿಯಾರೂಪದಲ್ಲಿ ಮಾಡಲಾಗುತ್ತದೆ. ಆ ಮನಸ್ಸಿಗೆ ನಾನೇ ಪ್ರಮಾಣ!”

ನಾರದನು ಹೇಳಿದನು: “ನರಶ್ರೇಷ್ಠ! ನಿನ್ನ ಮಗಳ ಬುದ್ಧಿಯು ಸ್ಥಿರವಾಗಿದೆ. ಧರ್ಮದಲ್ಲಿ ನೆಲೆಗೊಂಡಿರುವ ಇವಳನ್ನು ಯಾರು ಏನು ಮಾಡಿದರೂ ಬದಲಾಯಿಸಲಾಗುವುದಿಲ್ಲ. ಸತ್ಯವಾನನ ಗುಣಗಳನ್ನು ಪಡೆದ ಅನ್ಯ ಪುರುಷರು ಯಾರೂ ಇಲ್ಲ. ಅದುದರಿಂದ ನಿನ್ನ ಮಗಳನ್ನು ಅವನಿಗೇ ಕೊಡುವುದು ಸರಿಯೆಂದು ನನಗನ್ನಿಸುತ್ತದೆ.”

ರಾಜನು ಹೇಳಿದನು: “ಭಗವನ್! ನೀವು ಹೇಳುತ್ತಿರುವುದು ಸತ್ಯ ಮತ್ತು ಮಾಡಲೇಬೇಕಾದುದು. ಆದುದರಿಂದ ನೀವು ಹೇಳಿದಂತೆಯೇ ಮಾಡುತ್ತೇನೆ. ನೀವೇ ನನ್ನ ಗುರು!”

ನಾರದನು ಹೇಳಿದನು: “ನಿನ್ನ ಮಗಳು ಸಾವಿತ್ರಿಯ ವಿವಾಹವು ನಿರ್ವಿಘ್ನವಾಗಿ ನಡೆಯಲಿ. ನಾನು ಈಗ ಹೊರಡುತ್ತೇನೆ. ಸರ್ವರಿಗೂ ಮಂಗಳವಾಗಲಿ!” ಹೀಗೆ ಹೇಳಿ ನಾರದನು ಗಗನವನ್ನೇರಿ ತ್ರಿದಿವಕ್ಕೆ ತೆರಳಿದನು. ರಾಜನಾದರೋ ಮಗಳ ವೈವಾಹಿಕ ಕಾರ್ಯಗಳೆಲ್ಲವನ್ನೂ ನಡೆಸಿದನು.

ಸತ್ಯವಾನ್-ಸಾವಿತ್ರಿಯರ ವಿವಾಹ

ಅನಂತರ ರಾಜನು ಕನ್ಯಾದಾನದ ಕುರಿತು ಯೋಚಿಸಿ ವಿವಾಹಕ್ಕೆ ಬೇಕಾಗುವ ಎಲ್ಲ ಸಲಕರಣೆಗಳನ್ನೂ ಒಟ್ಟುಗೂಡಿಸಿದನು. ವೃದ್ಧರನ್ನೂ, ದ್ವಿಜರನ್ನೂ, ಪುರೋಹಿತರೊಂದಿಗೆ ಸರ್ವ ಋತ್ವಿಜರನ್ನೂ ಕರೆಯಿಸಿ ಕನ್ಯೆಯೊಡಗೂಡಿ ಪುಣ್ಯತಿಥಿಯಲ್ಲಿ ಹೊರಟನು. ದಟ್ಟ ಅರಣ್ಯಕ್ಕೆ ಹೋಗಿ ನೃಪನು ಕಾಲ್ನಡುಗೆಯಲ್ಲಿಯೇ ದ್ವಿಜರೊಡಗೂಡಿ ರಾಜರ್ಷಿ ದ್ಯುಮತ್ಸೇನನ ಆಶ್ರಮಕ್ಕೆ ಬಂದನು. ಅಲ್ಲಿ ಶಾಲವೃಕ್ಷದಡಿಯಲ್ಲಿ ಕುಶದ ಚಾಪೆಯ ಮೇಲೆ ಕುಳಿತಿದ್ದ ಕುರುಡ ನೃಪನನ್ನು ನೋಡಿದನು. ರಾಜನು ಆ ರಾಜರ್ಷಿಯನ್ನು ಯಥಾರ್ಹವಾಗಿ ಪೂಜಿಸಿ ಸುನಿಯತ ಮಾತುಗಳಿಂದ ತನ್ನ ಪರಿಚಯವನ್ನು ಹೇಳಿಕೊಂಡನು. ದ್ಯುಮತ್ಸೇನನು ರಾಜನಿಗೆ ಅರ್ಘ್ಯ, ಆಸನ ಮತ್ತು ಗೋವುಗಳನ್ನು ಧರ್ಮದಂತೆ ನೀಡಿ ಬಂದಿರುವ ಕಾರಣವನ್ನು ಕೇಳಿದನು. ಆಗ ಅಶ್ವಪತಿಯು ತನ್ನ ಮತ್ತು ಎಲ್ಲರ ಅಭಿಪ್ರಾಯವನ್ನೂ, ಯಾವಕಾರ್ಯಕ್ಕಾಗಿ ತಾನು ಬಂದಿದ್ದೇನೆನ್ನುವುದನ್ನೂ, ಸತ್ಯವಾನನ ಕುರಿತು ಎಲ್ಲವನ್ನೂ ಅವನಿಗೆ ನಿವೇದಿಸಿದನು. ಅಶ್ವಪತಿಯು ಹೇಳಿದನು: “ರಾಜರ್ಷೇ! ಸಾವಿತ್ರಿ ಎಂಬ ಹೆಸರಿನ ನನ್ನ ಈ ಶೋಭನೆ ಕನ್ಯೆಯನ್ನು ಧರ್ಮಜ್ಞನಾದ ನೀನು ಸ್ವಧರ್ಮದಂತೆ ಸೊಸೆಯನ್ನಾಗಿ ಸ್ವೀಕರಿಸಿಸಬೇಕು.”

ಅದಕ್ಕೆ ದ್ಯುಮತ್ಸೇನನು ಹೇಳಿದನು: “ರಾಜ್ಯವನ್ನು ಕಳೆದುಕೊಂಡು ನಾವು ವನವಾಸದಲ್ಲಿದ್ದೇವೆ. ಧರ್ಮದಲ್ಲಿದ್ದುಕೊಂಡು ತಪಸ್ವಿಗಳಂತೆ ಇದ್ದೇವೆ. ನಿನ್ನ ಮಗಳಾದರೋ ಹೇಗೆ ತಾನೇ ಈ ವನವಾಸ ಮತ್ತು ಆಶ್ರಮದ ಕಷ್ಟಗಳನ್ನು ಸಹಿಸಿಕೊಂಡಾಳು ಮತ್ತು ಅರ್ಹಳಾಗಿದ್ದಾಳೆ?”

ಅಶ್ವಪತಿಯು ಹೇಳಿದನು: “ಸುಖ-ದುಃಖಗಳು ಬರುತ್ತವೆ ಮತ್ತು ಹೋಗುತ್ತವೆ. ಇವೆರಡನ್ನೂ ನಾನು ಮತ್ತು ನನ್ನ ಮಗಳೂ ತಿಳಿದಿದ್ದೇವೆ. ಆದುದರಿಂದ ಅಂಥಹ ಮಾತುಗಳನ್ನು ನನ್ನಂಥವನಲ್ಲಿ ಹೇಳಬೇಡ. ನೃಪ! ಎಲ್ಲವನ್ನೂ ತಿಳಿದು ನಿಶ್ಚಯಿಸಿಯೇ ನಾವು ಇಲ್ಲಿಗೆ ಬಂದಿದ್ದೇವೆ. ಸೌಹಾರ್ದತೆ-ಗೆಳೆತನದಿಂದ ಇದರ ಕುರಿತು ಆಸೆಯನ್ನಿಟ್ಟುಕೊಂಡು ಕೇಳಿಕೊಳ್ಳುತ್ತಿದ್ದೇನೆ. ನನ್ನನ್ನು ನಿರಾಶೆಗೊಳಿಸದಿರು. ಪ್ರೇಮದಿಂದ ನಿನ್ನ ಬಳಿ ಬಂದಿರುವ ನಮ್ಮನ್ನು ಹಿಂದೆ ಕಳುಹಿಸದಿರು! ಎಲ್ಲ ವಿಷಯಗಳಲ್ಲಿಯೂ ನೀನು ನನ್ನ ಹಾಗೆಯೇ ಇದ್ದೀಯೆ ಮತ್ತು ನಾನೂ ನಿನ್ನ ಹಾಗೆಯೇ ಇದ್ದೇನೆ. ಆದುದರಿಂದ ನನ್ನ ಮಗಳನ್ನು ನಿನ್ನ ಸೊಸೆಯಾಗಿ ಮತ್ತು ಸತ್ಯವಾನನಿಗೆ ಭಾರ್ಯೆಯಾಗಿ ಸ್ವೀಕರಿಸು.”

ದ್ಯುಮತ್ಸೇನನು ಹೇಳಿದನು: “ಹಿಂದೆಯೇ ನಾನು ನಿನ್ನೊಂದಿಗೆ ಸಂಬಂಧವನ್ನು ಮಾಡಿಕೊಳ್ಳಲು ಬಯಸಿದ್ದೆ. ರಾಜ್ಯವನ್ನು ಕಳೆದುಕೊಂಡ ನಂತರ ಅದರ ಭರವಸೆಯನ್ನೇ ಕಳೆದುಕೊಂಡಿದ್ದೆ. ನನ್ನ ಆ ಹಳೆಯ ಬಯಕೆಯು ನಿನ್ನ ಈ ಅಭಿಪ್ರಾಯದಿಂದ ಪೂರೈಸಿದೆಯೆಂದರೆ ಅದನ್ನು ನಾನು ನಿಲ್ಲಿಸುವುದಿಲ್ಲ. ನಿನಗೆ ಆದರದ ಸ್ವಾಗತ ಮತ್ತು ನನ್ನ ಗೌರವಾನ್ವಿತ ಅತಿಥಿಯಾಗಿರು!”

ಅನಂತರ ಆಶ್ರಮವಾಸಿ ಎಲ್ಲ ದ್ವಿಜರನ್ನೂ ಕರೆಯಿಸಿ ಯಥಾವಿಧಿಯಾಗಿ ಆ ನೃಪರೀರ್ವರೂ ವಿವಾಹಕಾರ್ಯವನ್ನು ನೆರವೇರಿಸಿದರು. ಅಶ್ವಪತಿಯು ಅರ್ಹ ಉಡುಗೆಗಳೊಂದಿಗೆ ಕನ್ಯೆಯನ್ನು ಕೊಟ್ಟು ಪರಮ ಸಂತೋಷಗೊಂಡು ಅರಮನೆಗೆ ತೆರಳಿದನು. ಸತ್ಯವಾನನಾದರೋ ಸರ್ವಗುಣಾನ್ವಿತೆ ಪತ್ನಿಯನ್ನು ಪಡೆದು ಸಂತೋಷಪಟ್ಟನು ಮತ್ತು ಅವಳೂ ಕೂಡ ತನಗಿಷ್ಟನಾದ ಪತಿಯನ್ನು ಪಡೆದು ಸಂತೋಷಗೊಂಡಳು.

ತಂದೆಯು ಹೊರಟುಹೋದ ನಂತರ ಸಾವಿತ್ರಿಯು ತನ್ನ ಎಲ್ಲ ಆಭರಣಗಳನ್ನೂ ಎತ್ತಿಟ್ಟು, ವಲ್ಕಲ-ಕಾಷಾಯ ವಸ್ತ್ರಗಳನ್ನು ಧರಿಸಿದಳು. ಸದ್ಗುಣ, ಪರಿಶ್ರಮ ಮತ್ತು ತಾಳ್ಮೆಗಳಿಂದ ಎಲ್ಲರ ಇಷ್ಟಗಳನ್ನು ನೆರವೇರಿಸುತ್ತಾ ಸರ್ವರನ್ನೂ ಸಂತೃಪ್ತಗೊಳಿಸಿದಳು. ಅತ್ತೆಯ ದೇಹಸತ್ಕಾರಗಳನ್ನು ಮಾಡಿದಳು ಮತ್ತು ಎಲ್ಲರ ಬಟ್ಟೆಗಳನ್ನು ನೋಡಿಕೊಳ್ಳುತ್ತಿದ್ದಳು. ಮಾವನ ದೇವಕಾರ್ಯಗಳಲ್ಲಿ ಸಹಾಯ ಮಾಡುತ್ತಿದ್ದಳು ಮತ್ತು ಸಂಯಮದಿಂದ ಮಾತನಾಡಿಕೊಂಡಿದ್ದಳು. ಪ್ರಿಯಯುಕ್ತ ಮಾತುಗಳು, ನೈಪುಣ್ಯತೆ, ಶಮ ಮತ್ತು ಏಕಾಂತದ ಉಪಚಾರಗಳಿಂದ ಪತಿಯನ್ನೂ ಸಂತೋಷಪಡಿಸಿದಳು. ಹೀಗೆ ಆಶ್ರಮದಲ್ಲಿ ಅವಳು ಸತ್ಯ ಮತ್ತು ತಪಸ್ಸಿನಿಂದ ವಾಸಿಸಿದಳು. ಹೀಗೆಯೇ ಬಹಳ ಸಮಯವು ಕಳೆದುಹೋಯಿತು. ಸಾವಿತ್ರಿಯಾದರೋ ಮಲಗಿರುವಾಗ ಮತ್ತು ಎದ್ದಿರುವಾಗ, ಹಗಲು ಮತ್ತು ರಾತ್ರಿ ಪ್ರತಿಕ್ಷಣದಲ್ಲಿಯೂ ನಾರದನು ಹೇಳಿದ ಮಾತನ್ನೇ ಮನಸ್ಸಿನಲ್ಲಿ ಚಿಂತಿಸುತ್ತಿದ್ದಳು.

ಸಾವಿತ್ರಿಯ ವ್ರತ

ಹಾಗೆಯೇ ಬಹಳ ದಿನಗಳು ಕಳೆದಂತೆ ಸತ್ಯವಾನನು ಸಾಯುವ ಕಾಲವು ಪ್ರಾಪ್ತವಾಯಿತು. ಸಾವಿತ್ರಿಯು ನಾರದನು ಹೇಳಿದ ಆ ವಾಕ್ಯವನ್ನು ನಿತ್ಯವೂ ಹೃದಯದಲ್ಲಿಟ್ಟುಕೊಂಡು ಕಳೆದುಹೋದ ಪ್ರತಿದಿನವನ್ನೂ ಲೆಕ್ಕಮಾಡಿಕೊಂಡಿದ್ದಳು. ನಾಲ್ಕನೆಯ ದಿನದಲ್ಲಿ ಸಾಯುತ್ತಾನೆಂದು ಯೋಚಿಸಿದ ಸಾವಿತ್ರಿಯು ಮೂರುರಾತ್ರಿಗಳ ವ್ರತವನ್ನು ಆಚರಿಸಲು ಹಗಲು ರಾತ್ರಿ ಒಂದೇ ಸ್ಥಳದಲ್ಲಿ ನಿಶ್ಚಲವಾಗಿ ನಿಂತಳು. ತನ್ನ ಸೊಸೆಯು ಈ ರೀತಿಯ ಕಠಿಣ ವ್ರತವನ್ನು ಕೈಗೊಂಡಿದ್ದಾಳೆಂದು ಕೇಳಿದ ನೃಪ ದ್ಯುಮತ್ಸೇನನು ದುಃಖಾನ್ವಿತನಾಗಿ ಮೇಲೆದ್ದು ಸಾವಿತ್ರಿಯನ್ನು ಸಂತವಿಸುತ್ತಾ ಹೀಗೆಂದನು: “ರಾಜಕುಮಾರಿ! ನೀನು ಕೈಗೊಂಡಿರುವ ಈ ವ್ರತವು ಅತಿ ತೀವ್ರರೂ ಕಠಿಣವೂ ಆದದ್ದು. ಈ ರೀತಿ ಒಂದೇ ಸ್ಥಾನದಲ್ಲಿ ನಿಂತುಕೊಂಡಿರುವುದು ಪರಮ ದುಷ್ಕರ!” ಅದಕ್ಕೆ ಸಾವಿತ್ರಿಯು ಹೇಳಿದಳು: “ತಂದೇ! ಈ ಕಾರ್ಯದಿಂದಾಗಿ ಸಂತಾಪಹೊಂದದಿರಿ. ನಾನು ಈ ವ್ರತವನ್ನು ನೆರವೇರಿಸಬಲ್ಲೆ. ಗಟ್ಟಿಮನಸ್ಸೇ ಇದನ್ನು ಯಶಸ್ವಿಗೊಳಿಸಬಲ್ಲದು ಮತ್ತು ನಾನು ಆ ಗಟ್ಟಿಮನಸ್ಸಿನಿಂದಲೇ ಇದನ್ನು ಪ್ರಾರಂಭಿಸಿದ್ದೇನೆ.” ಆಗ ದ್ಯುಮತ್ಸೇನನು ಪುನಃ ಹೇಳಿದನು: “ವ್ರತವನ್ನು ಮುರಿ ಎಂದು ನಾನು ನಿನಗೆ ಹೇಳುವುದು ಹೇಗೆ ತಾನೇ ಸರಿಯಾಗುತ್ತದೆ? ನನ್ನ ಪರಿಸ್ಥಿತಿಯಲ್ಲಿರುವವನು ನೀನು ಇದನ್ನು ಪೂರೈಸಬಲ್ಲೆ ಎಂದು ಮಾತ್ರ ಬಯಸಬಲ್ಲ!”

ಹೀಗೆ ಹೇಳಿ ದ್ಯುಮತ್ಸೇನನು ನಿವೃತ್ತನಾದನು. ನಿಂತಿದ್ದ ಸಾವಿತ್ರಿಯಾದರೋ ಮರದ ಕೋಲಿನಂತೆ ಕಾಣುತ್ತಿದ್ದಳು. ನಾಳೆ ಗಂಡನು ಸಾಯುತ್ತಾನೆ ಎಂದು ದುಃಖಿಸುತ್ತಾ ಸಾವಿತ್ರಿಯು ರಾತ್ರಿಗಳು ಕಳೆದಂತೆ ಕೊನೆಯ ರಾತ್ರಿಯೂ ಮುಗಿವುವವರೆಗೆ ನಿಂತುಕೊಂಡೇ ಇದ್ದಳು. ಆ ದಿವಸವಾದ ಇಂದೂ ಸೂರ್ಯೋದಯದೊಂದಿಗೆ ಪೂರ್ವಾಹ್ಣಿಕ ಕ್ರಿಯೆಗಳನ್ನು ಪೂರೈಸಿ ಅಗ್ನಿಯನ್ನು ಉರಿಸಿ ಆಹುತಿಗಳನ್ನಿತ್ತಳು. ಅನಂತರ ಎಲ್ಲ ದ್ವಿಜರಿಗೂ, ವೃದ್ಧ ಅತ್ತೆ-ಮಾವಂದಿರಿಗೂ ನಮಸ್ಕರಿಸಿ ಅಂಜಲೀಬದ್ಧಳಾಗಿ, ಅವರ ಎದಿರು ನಿಯತಳಾಗಿ ನಿಂತುಕೊಂಡಳು. ತಪೋವನದಲ್ಲಿ ವಾಸಿಸುತ್ತಿದ್ದ ಎಲ್ಲ ತಪಸ್ವಿಗಳೂ ಶುಭೆ ಸಾವಿತ್ರಿಗೆ ಅವೈಧವ್ಯತ್ವವನ್ನು ಆಶೀರ್ವಾದವಾಗಿ ಹೇಳಿದರು. ಧ್ಯಾನಯೋಗಪರಾಯಣಳಾಗಿ ಸಾವಿತ್ರಿಯು ಹಾಗೆಯೇ ಆಗಲೆಂದು ಹೇಳಿ ಆ ತಪಸ್ವಿಗಳೆಲ್ಲರ ಮಾತುಗಳನ್ನೂ ಮನಸ್ಸಿನಲ್ಲಿಯೇ ಪುನರುಶ್ಚರಿಸಿದಳು. ನಾರದನ ವಚನಗಳ ಕುರಿತು ಚಿಂತಿಸುತ್ತಾ ಅವಳು ಅವನು ಹೇಳಿದ್ದ ಕಾಲ-ಮುಹೂರ್ತಗಳಿಗೆ ಕಾಯುತ್ತಿದ್ದಳು. ಹೀಗೆ ಏಕಾಂತದಲ್ಲಿ ಕುಳಿತಿದ್ದ ಸಾವಿತ್ರಿಗೆ ಅತ್ತೆ-ಮಾವಂದಿರು ಪ್ರೀತಿಯಿಂದ ಹೇಳಿದರು: “ವ್ರತದ ಕಠಿಣ ನಿಯಮಗಳನ್ನು ಯಥಾವತ್ತಾಗಿ ಪಾಲಿಸಿ ಅದನ್ನು ಸಮಾಪ್ತಿಗೊಳಿಸಿದ್ದೀಯೆ. ಈಗ ನೀನು ಆಹಾರವನ್ನು ಸೇವಿಸುವ ಸಮಯವು ಬಂದಿದೆ. ಊಟಮಾಡು!” ಅದಕ್ಕೆ ಸಾವಿತ್ರಿಯು ಉತ್ತರಿಸಿದಳು: “ಸೂರ್ಯಾಸ್ತ ಮತ್ತು ನನ್ನ ಆಸೆಯು ಪೂರೈಸಿದ ನಂತರವೇ ನಾನು ಆಹಾರಸೇವಿಸುತ್ತೇನೆ ಎಂದು ನನ್ನ ಹೃದಯದಲ್ಲಿ ಸಂಕಲ್ಪಿಸಿಕೊಂಡಿದ್ದೇನೆ. ಅದರಂತೆಯೇ ನಡೆದುಕೊಳ್ಳುತ್ತೇನೆ.”

ಭೋಜನದ ಕುರಿತು ಸಾವಿತ್ರಿಯು ಹೀಗೆ ಹೇಳುತ್ತಿರಲು ಸತ್ಯವಾನನು ಹೆಗಲಮೇಲೆ ಕೊಡಲಿಯನ್ನಿಟ್ಟು ಕಾಡಿಗೆ ಹೊರಟನು. ಸಾವಿತ್ರಿಯು ಗಂಡನನ್ನು ತಡೆದು “ನೀನೊಬ್ಬನೇ ಹೋಗಕೂಡದು. ನಾನೂ ನಿನ್ನೊಡನೆ ಬರುತ್ತೇನೆ. ನೀನೊಬ್ಬನನ್ನೇ ಬಿಡಬಾರದು!” ಎಂದಳು. ಆಗ ಸತ್ಯವಾನನು ಹೇಳಿದನು: “ಭಾಮಿನೀ! ಈ ಮೊದಲು ನೀನು ಕಾಡಿಗೆ ಹೋಗಿಲ್ಲ ಮತ್ತು ಅಲ್ಲಿಯ ದಾರಿಯು ದುಃಖತರವಾದುದು. ಮೇಲಾಗಿ ವ್ರತೋಪವಾಸಗಳಿಂದ ನೀನು ಬಳಲಿದ್ದೀಯೆ. ಕಾಲ್ನಡುಗೆಯಲ್ಲಿಯೇ ಹೇಗೆ ಹೋಗಬಲ್ಲೆ?”

ಸಾವಿತ್ರಿಯು ಹೇಳಿದಳು: “ಈ ಉಪವಾಸದಿಂದ ಬಳಲಿಲ್ಲ ಮತ್ತು ಬಲಹೀನಳೂ ಆಗಿಲ್ಲ. ನಿನ್ನೊಡನೆ ಬರುತ್ತಿದ್ದೇನಲ್ಲಾ ಎಂದು ಉತ್ಸಾಹವಿದೆ. ನನ್ನ ಈ ಬಯಕೆಯನ್ನು ನಿರಾಕರಿಸದಿರು.”

ಸತ್ಯವಾನನು ಹೇಳಿದನು: “ಬರಲು ಅಷ್ಟೊಂದು ಉತ್ಸಾಹವಿದ್ದರೆ ನಿನಗಿಷ್ಟವಾದಂತೆ ಮಾಡುತ್ತೇನೆ. ನಾನು ನಿನ್ನನ್ನು ಬರಲು ಹೇಳಿಲ್ಲ. ಆದುದರಿಂದ ಹಿರಿಯರ ಅಪ್ಪಣೆಯನ್ನು ಪಡೆದು ಬಾ.”

ಆಗ ಆ ಮಹಾವ್ರತೆಯು ತನ್ನ ಅತ್ತೆ-ಮಾವಂದಿರ ಬಳಿ ಹೋಗಿ “ನನ್ನ ಪತಿಯು ಹಣ್ಣುಗಳನ್ನು ಮತ್ತು ಅಗ್ನಿಹೋತ್ರಕ್ಕಾಗಿ ಸಮಿತ್ತುಗಳನ್ನು ತರಲು ಕಾಡಿಗೆ ಹೋಗುತ್ತಿದ್ದಾನೆ. ನೀವು ನನಗೆ ಅನುಜ್ಞೆಯನ್ನಿತ್ತರೆ ನಾನೂ ಕೂಡ ಅವನೊಂದಿಗೆ ಹೋಗಲು ಬಯಸುತ್ತೇನೆ. ಒಂದು ಕ್ಷಣವೂ ಅವನ ವಿರಹವನ್ನು ಸಹಿಸಲಾರೆ. ಅಲ್ಲದೇ ಸುಮಾರು ಒಂದು ವರ್ಷಗಳಾಗುತ್ತಾ ಬಂದಿದೆ ನಾನು ಈ ಆಶ್ರಮದ ಹೊರಗೇ ಹೋಗಿಲ್ಲ. ವನಗಳಲ್ಲಿನ ಹೂಗಳನ್ನು ನೋಡುವ ಪರಮ ಕುತೂಹಲವು ನನಗುಂಟಾಗಿದೆ.”

ದ್ಯುಮತ್ಸೇನನು ಹೇಳಿದನು: “ಸಾವಿತ್ರೀ! ನಿನ್ನ ತಂದೆಯು ನಿನ್ನನ್ನು ನನಗೆ ಸೊಸೆಯಾಗಿ ಕೊಟ್ಟಾಗಿನಿಂದ ಇದೂವರೆಗೆ ನೀನು ನನ್ನಲ್ಲಿ ಏನನ್ನಾದರೂ ಕೇಳಿದ್ದುದಿಲ್ಲ. ಆದುದರಿಂದ ನೀನು ಬಯಸಿದುದನ್ನು ಪಡೆ. ಪುತ್ರಿ! ಸತ್ಯವಾನನೊಂದಿಗೆ ದಾರಿಯಲ್ಲಿ ಎಚ್ಚರಿಕೆಯಿಂದ ಹೋಗು!”

ಅವರಿಬ್ಬರಿಂದಲೂ ಅಪ್ಪಣೆಪಡೆದು ಸಾವಿತ್ರಿಯು ಗಂಡನೊಂದಿಗೆ ಹೊರಟಳು. ನೋಡಲು ಸಂತೋಷದಿಂದ ನಗುತ್ತಿರುವಂತೆ ಕಂಡುಬಂದರೂ ಹೃದಯದಲ್ಲಿ ಅವಳು ಬಹುದುಃಖಿತಳಾಗಿದ್ದಳು. ಆ ವಿಪುಲೇಕ್ಷಣೆಯು ಸಂತೋಷದಿಂದ ನಲಿಯುತ್ತಿದ್ದ ನವಿಲುಗಳಿಂದ ತುಂಬಿದ್ದ ಆ ವಿಚಿತ್ರ ರಮಣೀಯ ವನವನ್ನು ನೋಡಿದಳು. ಹರಿಯುತ್ತಿದ್ದ ಪುಣ್ಯನದಿಗಳನ್ನೂ ಎತ್ತರ ಗಿರಿಗಳನ್ನೂ ನೋಡು ನೋಡು ಎಂದು ಸತ್ಯವಾನನು ಸಾವಿತ್ರಿಗೆ ಮಧುರಾಕ್ಷರಗಳಿಂದ ಹೇಳುತ್ತಿದ್ದನು. ಆ ಅನಿಂದಿತೆಯು ಮುನಿಯ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ಮೃತ್ಯುವು ಬಂದಾಗ ತನಗೆ ತಿಳಿಯಬೇಕೆಂದು ಗಂಡನ ಸರ್ವಾವಸ್ಥೆಗಳನ್ನೂ ನಿರೀಕ್ಷಿಸುತ್ತಿದ್ದಳು. ಹೃದಯವನ್ನು ಎರಡು ಮಾಡಿಕೊಂಡು – ಒಂದನ್ನು ಅವನ ಮೇಲಿರಿಸಿ ಇನ್ನೊಂದರಿಂದ ಕಾಲವನ್ನು ಕಾಯುತ್ತಾ – ಮೆಲ್ಲನೆ ಗಂಡನನ್ನು ಅನುಸರಿಸಿ ನಡೆದಳು.

ಯಮ-ಸಾವಿತ್ರೀ ಸಂವಾದ

ನಂತರ ಸತ್ಯವಾನನು ಪತ್ನಿಯ ಸಹಾಯದಿಂದ ಹಣ್ಣುಗಳನ್ನು ಕಿತ್ತು ಬುಟ್ಟಿಯಲ್ಲಿ ತುಂಬಿಸಿ ಕಟ್ಟಿಗೆ ಕಡಿಯಲು ಪ್ರಾರಂಭಿಸಿದನು. ಅವನು ಕಟ್ಟಿಗೆ ಕಡಿಯುತ್ತಿರಲು ಶ್ರಮದಿಂದ ಬೆವರಿಳಿದು ಅವನಿಗೆ ತಲೆ ನೋಯತೊಡಗಿತು. ಆಯಾಸಗೊಂಡ ಅವನು ಪ್ರಿಯ ಪತ್ನಿಯ ಬಳಿಬಂದು “ಈ ಶ್ರಮದಿಂದ ನನ್ನ ತಲೆನೋಯುತ್ತಿದೆ. ಅಂಗಾಂಗಗಳೂ ಹೃದಯವೂ ನೋಯುತ್ತಿವೆ. ನಾನು ಅಸ್ವಸ್ಥನಾಗಿದ್ದೇನೆಂದು ತೋರುತ್ತಿದೆ. ಶೂಲಗಳು ನನ್ನ ತಲೆಯನ್ನು ತಿವಿಯುತ್ತಿರುವಂತೆ ಅನಿಸುತ್ತಿದೆ. ಮಲಗಲು ಬಯಸುತ್ತೇನೆ. ನಿಂತುಕೊಂಡಿರಲು ನನ್ನಲ್ಲಿ ಶಕ್ತಿಯಿಲ್ಲ” ಎಂದನು. ತಕ್ಷಣವೇ ಸಾವಿತ್ರಿಯು ನೆಲದ ಮೇಲೆ ಕುಳಿತುಕೊಂಡು ಅವನ ತಲೆಯನ್ನು ತನ್ನ ತೊಡೆಯ ಮೇಲಿರಿಸಿಕೊಂಡಳು. ನಾರದನ ಮಾತುಗಳನ್ನು ನೆನಪಿಸಿಕೊಂಡ ಆ ತಪಸ್ವಿನಿಯು ಆ ಮುಹೂರ್ತ, ಕ್ಷಣ, ಕಾಲ, ದಿವಸವು ಕೂಡಿಬಂದಿದೆಯೆಂದು ಅರ್ಥಮಾಡಿಕೊಂಡಳು. ಮುಹೂರ್ತದಲ್ಲಿಯೇ ಅವಳು ಹಳದಿಬಣ್ಣದ ವಸ್ತ್ರವನ್ನುಟ್ಟು ತೇಜಸ್ಸಿನಲ್ಲಿ ಆದಿತ್ಯನಂತೆ ಹೊಳಿಯುತ್ತಿದ್ದ ಕಿರೀಟಧಾರೀ ಪುರುಷನೋರ್ವನನ್ನು ಕಂಡಳು. ಅವನ ಕಪ್ಪು ದೇಹವು ಹೊಳೆಯುತ್ತಿತ್ತು, ಕಣ್ಣುಗಳು ರಕ್ತದಂತೆ ಕೆಂಪಾಗಿದ್ದವು. ಕೈಯಲ್ಲಿ ಪಾಶವನ್ನು ಹಿಡಿದಿದ್ದ ಅವನ ಮುಖವು ಭಯವನ್ನುಂಟುಮಾಡುವಂತಿತ್ತು. ಪಕ್ಕದಲ್ಲಿ ನಿಂತು ಅವನು ಸತ್ಯವಾನನನ್ನೇ ನೋಡುತ್ತಿದ್ದನು. ಆ ಪುರುಷನನ್ನು ನೋಡಿದಾಕ್ಷಣವೇ ಸಾವಿತ್ರಿಯು ಪತಿಯ ತಲೆಯನ್ನು ನಿಧಾನವಾಗಿ ನೆಲದ ಮೇಲಿರಿಸಿ ಎದ್ದು ಅಂಜಲೀಬದ್ಧಳಾಗಿ ಹೃದಯದಲ್ಲಿ ಕಂಪಿಸುತ್ತಾ ಆರ್ತಳಾಗಿ ನುಡಿದಳು: “ಅಮಾನುಷ ದೇಹಧಾರಿಯಾದ ನೀನು ದೇವತೆಯೆಂದು ತಿಳಿಯುತ್ತೇನೆ. ದೇವ! ನಿನಗೆ ಇಷ್ಟವಾದರೆ ಹೇಳು. ನೀನು ಯಾರು ಮತ್ತು ಏನು ಮಾಡಲು ಬಯಸುತ್ತಿರುವೆ?”

ಯಮನು ಹೇಳಿದನು: “ಸಾವಿತ್ರಿ! ನೀನು ಪತಿವ್ರತೆ ಮತ್ತು ತಪೋನ್ವಿತೆಯಾಗಿರುವುದರಿಂದಲೇ ನಾನು ನಿನ್ನೊಡನೆ ಮಾತನಾಡಬಲ್ಲೆ. ಶುಭೇ! ನಾನು ಯಮನೆಂದು ತಿಳಿ. ಈ ನಿನ್ನ ಪತಿ ರಾಜಕುಮಾರ ಸತ್ಯವಾನನು ಕ್ಷೀಣಾಯುವು. ಇವನನ್ನು ಬಂಧಿಸಿ ನನ್ನೊಡನೆ ಕರೆದುಕೊಂಡು ಹೋಗಲು ಬಯಸಿ ಬಂದಿದ್ದೇನೆ.” ಹೀಗೆ ಹೇಳಿ ಭಗವಾನ್ ಪಿತೃರಾಜನು ಅವಳನ್ನು ಸಂತೋಷಗೊಳಿಸಲು ತನ್ನ ಮಾತನ್ನು ಮುಂದುವರೆಸಿ “ಇವನು ಧರ್ಮಸಂಯುಕ್ತನೂ, ರೂಪವಂತನೂ, ಗುಣಸಾಗರನು ಆಗಿದ್ದಾನಾದುದರಿಂದ ನನ್ನ ಪುರುಷರು ಇವನನ್ನು ಎಳೆದುಕೊಂಡು ಹೋಗಲು ಅರ್ಹರಲ್ಲವೆಂದು ನಾನೇ ಇಲ್ಲಿಗೆ ಬಂದಿದ್ದೇನೆ.” ಎಂದನು. ಹೀಗೆ ಹೇಳಿ ಯಮನು ಬಲವನ್ನುಪಯೋಗಿಸಿ ಸತ್ಯವಾನನ ದೇಹದಿಂದ ಅಂಗುಷ್ಟಗಾತ್ರದ ಪುರುಷನನ್ನು ಪಾಶಕ್ಕೆ ಕಟ್ಟಿ ಎಳೆದು ಹೊರತೆಗೆದನು. ಪ್ರಾಣವು ಹೊರಟುಹೋಗಲು ಸತ್ಯವಾನನ ಶ್ವಾಸವು ನಿಂತಿತು, ಕಳೆಯು ಕುಂದಿತು ಮತ್ತು ನಿರ್ವಿಚೇಷ್ಟವಾದ ಆ ಶರೀರವು ನೋಡಲು ಅಪ್ರಿಯವಾಗಿ ತೋರಿತು. ಅವನನ್ನು ಬಂಧಿಸಿ ಯಮನು ದಕ್ಷಿಣಾಭಿಮುಖವಾಗಿ ಹೊರಟನು. ನಿಯಮ-ವ್ರತಗಳಿಂದ ಸಂಸಿದ್ಧಳಾಗಿದ್ದ ಆ ಪತಿವ್ರತೆ ಸಾವಿತ್ರಿಯೂ ಕೂಡ ದುಃಖಾರ್ತಳಾಗಿ ಯಮನನ್ನು ಹಿಂಬಾಲಿಸಿದಳು. ಆಗ ಯಮನು ಹೇಳಿದನು: “ಸಾವಿತ್ರಿ! ಹಿಂದಿರುಗಿ ಹೋಗು ಮತ್ತು ಅವನ ಔರ್ಧ್ವದೇಹಿಕ ಕ್ರಿಯೆಗಳನ್ನು ನಡೆಸು. ನೀನು ನಿನ್ನ ಪತಿಯ ಋಣವನ್ನು ತೀರಿಸಿದ್ದೀಯೆ. ಎಲ್ಲಿಯವರೆಗೆ ಅವನೊಂದಿಗೆ ಹೋಗಬಹುದಾಗಿತ್ತೋ ಅಲ್ಲಿಯವರೆಗೆ ನೀನು ಬಂದಿದ್ದೀಯೆ.”

ಸಾವಿತ್ರಿಯು ಹೇಳಿದಳು: “ನನ್ನ ಪತಿಯನ್ನು ಎಲ್ಲಿಗೆ ಕರೆದೊಯ್ಯಲಾಗುತ್ತದೆಯೋ ಅಥವಾ ಸ್ವಯಂ ಅವನೇ ಎಲ್ಲಿಗೆ ಹೋಗುತ್ತಾನೋ ಅಲ್ಲಿಗೆ ನಾನೂ ಹೋಗಬೇಕೆನ್ನುವುದು ಸನಾತನ ಧರ್ಮ. ತಪಸ್ಸು, ಗುರುಭಕ್ತಿ, ಪತಿಯ ಮೇಲಿನ ಪ್ರೀತಿ ಮತ್ತು ನಿನ್ನ ಪ್ರಸಾದದಿಂದ ನನ್ನ ಈ ಪ್ರಯಾಣವನ್ನು ಯಾವುದೂ ತಡೆಯಲಾರದು. ಒಟ್ಟಿಗೇ ಏಳು ಹೆಜ್ಜೆ ನಡೆದರೆ ಮಿತ್ರರಾಗುತ್ತಾರೆ ಎಂದು ತಿಳಿದ ತತ್ತ್ವದರ್ಶಿಗಳು ಹೇಳುತ್ತಾರೆ. ಆ ಮಿತ್ರತ್ವವನ್ನು ಗೌರವಿಸಿ ನಿನ್ನಲ್ಲಿ ಎನೋ ಒಂದನ್ನು ಹೇಳಲು ಬಯಸುತ್ತೇನೆ. ಅದನ್ನು ಕೇಳು. ಆತ್ಮವಿಲ್ಲದವನು ವನದಲ್ಲಿ ಧರ್ಮಚಾರಿಯಾಗಿದ್ದು ಪರಿಶ್ರಮಪಟ್ಟು ವಾಸಿಸಲು ಸಾಧ್ಯವಿಲ್ಲ. ವಿಜ್ಞಾನಿಗಳು ಧರ್ಮದಲ್ಲಿಯೇ ಸುಖವಿದೆಯೆಂದು ಹೇಳುತ್ತಾರೆ. ಆದುದರಿಂದ ಸಂತರು ಧರ್ಮವೇ ಪ್ರಧಾನವೆಂದು ಹೇಳುತ್ತಾರೆ. ಸಾತ್ವಿಕರ ಮತದಂತೆ ಎಲ್ಲಕ್ಕಿಂತಲೂ ಹೆಚ್ಚಾಗಿ ಪುರುಷನ ಧರ್ಮವೇ ಅವನನ್ನು ಸರಿಯಾದ ಮಾರ್ಗದಲ್ಲಿರುಸುತ್ತದೆ. ಎರಡನೆಯದನ್ನು ಅಥವಾ ಮೂರನೆಯದನ್ನು ಇಚ್ಛಿಸಬಾರದು. ಆದುದರಿಂದ ಸಂತರು ಧರ್ಮವೇ ಪ್ರಧಾನವೆಂದು ಹೇಳುತ್ತಾರೆ.”

ಯಮನು ಹೇಳಿದನು: “ಅನಿಂದಿತೇ! ಹಿಂದಿರುಗು! ಸ್ವರಾಕ್ಷರ ವ್ಯಂಜನಗಳನ್ನು ಸರಿಯಾಗಿ ಜೋಡಿಸಿ ಹೇಳಿದ ನಿನ್ನ ಈ ಮಾತಿನಿಂದ ನಾನು ತೃಪ್ತನಾಗಿದ್ದೇನೆ. ಇವನ ಜೀವವನ್ನು ಬಿಟ್ಟು ಬೇರೆ ಏನಾದರೂ ವರವನ್ನು ಕೇಳು. ನಿನ್ನ ವರವೆಲ್ಲವನ್ನೂ ಕೊಡುತ್ತೇನೆ.”

ಸಾವಿತ್ರಿಯು ಹೇಳಿದಳು: “ನನ್ನ ಮಾವನು ಕಣ್ಣು-ಸ್ವರಾಜ್ಯಗಳನ್ನು ಕಳೆದುಕೊಂಡು ವನವಾಸದ ಆಶ್ರಮದಲ್ಲಿದ್ದಾನೆ. ನಿನ್ನ ಪ್ರಸಾದದಿಂದ ಆ ನೃಪತಿಯು ಕಣ್ಣುಗಳನ್ನು ಪಡೆದು ಅಗ್ನಿ-ಸೂರ್ಯಸನ್ನಿಭನಾಗಿ ಬಲವಂತನಾಗಲಿ!”

ಯಮನು ಹೇಳಿದನು: “ಅನಿಂದಿತೇ! ನಿನಗೆ ಈ ವರವೆಲ್ಲವನ್ನೂ ಕೊಟ್ಟಿದ್ದೇನೆ. ನೀನು ಹೇಳಿದಂತೆಯೇ ಆಗುತ್ತದೆ. ಬಹುದೂರ ನಡೆದು ಬಂದು ಬಳಲಿದ್ದೀಯೆಂದು ತೋರುತ್ತಿದೆ. ಹಿಂದಿರುಗಿ ಹೋಗು. ಇನ್ನೂ ಆಯಾಸಗೊಳ್ಳಬೇಡ!”

ಸಾವಿತ್ರಿಯು ಹೇಳಿದಳು: “ಪತಿಯು ಸಮೀಪದಲ್ಲಿರುವಾಗ ನನಗೆ ಎಲ್ಲಿಯ ಆಯಾಸ? ನನ್ನ ಪತಿಯೆಲ್ಲಿದ್ದಾನೋ ಅದೇ ನನ್ನ ಗತಿ. ಎಲ್ಲಿಗೆ ನನ್ನ ಪತಿಯನ್ನು ಕರೆದುಕೊಂಡು ಹೋಗುತ್ತಿದ್ದೀಯೋ ಅಲ್ಲಿಗೆ ನಾನೂ ಕೂಡ ಹೋಗಬೇಕು. ಸುರೇಶ! ಇನ್ನೊಮ್ಮೆ ನನ್ನ ಈ ಮಾತುಗಳನ್ನು ಕೇಳು. ಸತ್ಯವಂತರ ಸಂಗವು ಅಲ್ಪಸಮಯದ್ದಾದರೂ ಪರಮ ಪ್ರಿಯಕರವಾದುದು. ಅದಕ್ಕಿಂತಲೂ ಶ್ರೇಷ್ಠವಾದುದು ಅವರನ್ನು ಮಿತ್ರರನ್ನಾಗಿಸಿಕೊಳ್ಳುವುದು ಎಂದು ಹೇಳುತ್ತಾರೆ. ಸತ್ಪುರುಷರ ಸಂಗವು ಎಂದೂ ಫಲನೀಡದೇ ಇರುವುದಿಲ್ಲ. ಆದುದರಿಂದ ಸತ್ಯವಂತರ ಸಮಾಗಮದಲ್ಲಿ ,ಅವರ ಹತ್ತಿರದಲ್ಲಿ ಇರಬೇಕು.”

ಯಮನು ಹೇಳಿದನು: “ಭಾಮಿನೀ! ಮನಸ್ಸಿಗೆ ಅನುಕೂಲವಾದ, ಬುದ್ಧಿವಂತರ ಬುದ್ಧಿಯನ್ನು ಹೆಚ್ಚಿಸುವ, ಹಿತಾಶ್ರಯ ಮಾತನ್ನು ಆಡಿದ್ದೀಯೆ. ಪುನಃ ಸತ್ಯವಾನನ ಜೀವವನ್ನು ಬಿಟ್ಟು ಎರಡನೆಯ ವರವನ್ನು ಕೇಳಿಕೋ.”

ಸಾವಿತ್ರಿಯು ಹೇಳಿದಳು: “ನನ್ನ ಮಾವ ಧೀಮಂತ ಪಾರ್ಥಿವನು ಹಿಂದೆ ಕಳೆದುಕೊಂಡಿದ್ದ ತನ್ನ ರಾಜ್ಯವನ್ನು ಪಡೆಯಲಿ. ಗುರುವಿನಂತಿರುವ ಅವನು ಸ್ವಧರ್ಮವನ್ನು ಎಂದೂ ತ್ಯಜಿಸದಿರಲಿ. ಇದನ್ನೇ ನಿನ್ನಿಂದ ಎರಡನೆಯ ವರವಾಗಿ ಕೇಳುತ್ತೇನೆ.”

ಯಮನು ಹೇಳಿದನು: “ಬೇಗನೇ ಸುಲಭವಾಗಿ ನೃಪನು ತನ್ನ ರಾಜ್ಯವನ್ನು ಪಡೆಯುತ್ತಾನೆ ಮತ್ತು ಸ್ವಧರ್ಮದಿಂದ ಅವನು ಎಂದೂ ಚ್ಯುತನಾಗುವುದಿಲ್ಲ. ನೃಪತಾತ್ಮಜೇ! ನೀನು ಬಯಸಿದುದನ್ನು ನಾನು ಮಾಡಿದ್ದೇನೆ. ಹಿಂದಿರುಗಿ ಹೋಗು! ನಿನಗೆ ಶ್ರಮವಾಗದಿರಲಿ!”

ಸಾವಿತ್ರಿಯು ಹೇಳಿದಳು: “ನೀನು ಈ ಪ್ರಜೆಗಳನ್ನು ನಿಯಮಮಾತ್ರದಿಂದ ನಿಯಂತ್ರಿಸುತ್ತೀಯೆ. ನಿಯಮದಿಂದಲೇ ಅವರನ್ನು ನೀನು ಕೊಂಡೊಯ್ಯುತ್ತೀಯೆ. ನಿನಗೆ ಬೇಕೆಂದಲ್ಲ. ಆದುದರಿಂದಲೇ ನೀನು ಯಮನೆಂದು ವಿಶ್ರುತನಾಗಿದ್ದೀಯೆ. ದೇವ! ನಾನು ಹೇಳುವ ಈ ಮಾತುಗಳನ್ನು ಕೇಳು. ಸರ್ವಭೂತಗಳಿಗೂ ಕರ್ಮ-ಮನಸ್ಸು-ಮಾತುಗಳಿಂದ ದ್ರೋಹವೆಸಗದೇ ಇರುವುದು, ಅನುಗ್ರಹ ಮತ್ತು ದಾನ ಇವು ಸಾತ್ವಿಕರ ಸನಾತನ ಧರ್ಮ, ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಮಾತ್ರ ಕರುಣೆ ತೋರುವುದು ಮನುಷ್ಯಲೋಕದಲ್ಲಿ ಸಾಧಾರಣವಾಗಿ ನಡೆಯುತ್ತದೆ. ಆದರೆ ಸಾತ್ವಿಕರು ಅವರ ಶತ್ರುಗಳು ಬಂದರೂ ಅವರಿಗೆ ದಯೆಯನ್ನು ತೋರುತ್ತಾರೆ.”

ಯಮನು ಹೇಳಿದನು: “ನಿನ್ನ ಈ ಮಾತುಗಳು ಬಾಯಾರಿಕೆಯಿಂದ ಬಳಲಿದವನಿಗೆ ನೀರಿತ್ತಂತೆ ತೃಪ್ತಿಕರವಾಗಿವೆ.  ಶುಭೇ! ಈ ಸತ್ಯವಾನನ ಜೀವವನ್ನು ಬಿಟ್ಟು ನಿನಗಿಷ್ಟವಾದ ವರವನ್ನು ಕೇಳು.”

ಸಾವಿತ್ರಿಯು ಹೇಳಿದಳು: “ನನ್ನ ತಂದೆ ರಾಜನಿಗೆ ಗಂಡು ಮಕ್ಕಳಿಲ್ಲ. ಅವನಿಗೆ ಕುಲವನ್ನು ಮುಂದುವರೆಸಿಕೊಂಡುಹೋಗುವ ನೂರು ಔರಸಪುತ್ರರಾಗಲಿ. ನಿನ್ನಿಂದ ಈ ಮೂರನೆಯ ವರವನ್ನು ಕೇಳುತ್ತೇನೆ.”

ಯಮನು ಹೇಳಿದನು: “ಶುಭೇ! ಕುಲವನ್ನು ಮುಂದುವರೆಸಿಕೊಂಡು ಹೋಗುವ ನೂರು ಸುವರ್ಚಸ ಮಕ್ಕಳು ನಿನ್ನ ತಂದೆಗಾಗುವರು. ನಿನ್ನ ಬಯಕೆಯು ನೆರವೇರಿತು. ಹಿಂದಿರುಗು. ಬಹಳ ದೂರ ಬಂದುಬಿಟ್ಟಿದ್ದೀಯೆ.”

ಸಾವಿತ್ರಿಯು ಹೇಳಿದಳು: “ನನ್ನ ಪತಿಯ ಸನ್ನಿಧಿಯಲ್ಲಿರುವಾಗ ಇದೇನೂ ದೂರವಲ್ಲ. ಇದಕ್ಕಿಂತಲೂ ದೂರ ನನ್ನ ಮನಸ್ಸು ಓಡುತ್ತಿದೆ. ನಿನ್ನ ಜೊತೆಯಲ್ಲಿಯೇ ಹೋಗುತ್ತಿರುವಾಗ ನಾನು ನಿನಗೆ ಹೇಳುವ ಇನ್ನೊಂದು ಮಾತನ್ನು ಕೇಳು. ನೀನು ವಿವಸ್ವತನ ಪ್ರತಾಪವಂತ ಮಗ. ಆದುದರಿಂದಲೇ ತಿಳಿದವರು ನಿನ್ನನ್ನು ವೈವಸ್ವತನೆಂದು ಕರೆಯುತ್ತಾರೆ. ಶಮ-ಧರ್ಮಗಳಿಂದ ಪ್ರಜೆಗಳು ನಿನ್ನನ್ನು ರಂಜಿಸುತ್ತಾರೆ. ಆದುದರಿಂದಲೇ ನಿನ್ನನ್ನು ಧರ್ಮರಾಜನೆಂದು ಕರೆಯುತ್ತಾರೆ. ಸಾತ್ವಿಕನ ಮೇಲಿದ್ದ ವಿಶ್ವಾಸವು ಸ್ವಯಂ ಆತ್ಮನ ಮೇಲೂ ಇರುವುದಿಲ್ಲ. ಆದುದರಿಂದ ವಿಶೇಷವಾಗಿ ಎಲ್ಲರೂ ಸಾತ್ವಿಕರನ್ನು ಪ್ರೀತಿಸಲು ಬಯಸುತ್ತಾರೆ. ಸರ್ವಭೂತಗಳ ಮೇಲಿರುವ ಸೌಹಾರ್ದತೆಯಿಂದ ವಿಶ್ವಾಸವು ಹುಟ್ಟುತ್ತದೆ. ಆದುದರಿಂದ ಜನರು ವಿಶೇಷವಾಗಿ ಸಾತ್ವಿಕರನ್ನು ಪ್ರೀತಿಸುತ್ತಾರೆ.”

ಯಮನು ಹೇಳಿದನು: “ಸುಂದರಿ! ನೀನು ಈಗ ಹೇಳಿದ ಶುಭ ಮಾತನ್ನು ಬೇರೆ ಯಾರಿಂದಲೂ ನಾನು ಕೇಳಲಿಲ್ಲ. ಇದರಿಂದ ನಾನು ತುಷ್ಟನಾಗಿದ್ದೇನೆ.ಇವನ ಜೀವವನ್ನು ಬಿಟ್ಟು ನಾಲ್ಕನೆಯ ವರವನ್ನು ಕೇಳಿ ಹೊರಟು ಹೋಗು.”

ಸಾವಿತ್ರಿಯು ಹೇಳಿದಳು: “ಸತ್ಯವಾನ್ ಮತ್ತು ನನ್ನಲ್ಲಿ ನಮ್ಮಿಬ್ಬರ ಕುಲವನ್ನು ಮುಂದುವರೆಸಿಕೊಂಡು ಹೋಗುವ ನೂರು ಬಲಶಾಲೀ ವೀರ್ಯಶಾಲೀ ಔರಸ ಮಕ್ಕಳಾಗಲಿ. ಇದು ನಾನು ನಿನ್ನಲ್ಲಿ ಕೇಳುವ ನಾಲ್ಕನೆಯ ವರ.”

ಯಮನು ಹೇಳಿದನು: “ಅಬಲೇ! ಬಲವೀರ್ಯಶಾಲಿಗಳಾದ ಪ್ರೀತಿಕರ ನೂರು ಪುತ್ರರು ನಿನಗಾಗುತ್ತಾರೆ. ಪರಿಶ್ರಮಪಡಬೇಡ. ಹಿಂದಿರುಗು. ಈ ಮಾರ್ಗದಲ್ಲಿ ಬಹಳಷ್ಟು ದೂರ ಬಂದಿದ್ದೀಯೆ.”

ಸಾವಿತ್ರಿಯು ಹೇಳಿದಳು: “ಸಾತ್ವಿಕರು ಸದಾ ಶಾಶ್ವತೀ ಧರ್ಮದಲ್ಲಿ ನಡೆದುಕೊಳ್ಳುತ್ತಾರೆ. ಸಾತ್ವಿಕರು ಭಯದಿಂದ ನಡುಗುವುದಿಲ್ಲ ಮತ್ತು ವ್ಯಥಿಸುವುದಿಲ್ಲ. ಸಾತ್ವಿಕರೊಂದಿಗೆ ಸಾತ್ವಿಕರ ಸಂಗವು ಫಲವಿಲ್ಲದೇ ಇರುವುದಿಲ್ಲ. ಸಾತ್ವಿಕರಿಗೆ ಸಾತ್ವಿಕರಿಂದ ಯಾವುದೇ ರೀತಿಯ ಭಯವೂ ಇರುವುದಿಲ್ಲ. ಸಂತರು ಸತ್ಯದಿಂದಲೇ ಸೂರ್ಯನನ್ನು ನಡೆಸುತ್ತಾರೆ. ಸಂತರು ತಪಸ್ಸಿನಿಂದ ಭೂಮಿಯನ್ನು ಎತ್ತಿ ಹಿಡಿಯುತ್ತಾರೆ. ಸಂತರು ಭೂತ ಮತ್ತು ಭವಿಷ್ಯಗಳ ಗತಿ. ಸಂತರು ಸಂತರ ಮಧ್ಯೆ ಅಳಿಸಿಹೋಗುವುದಿಲ್ಲ. ಪ್ರತಿಕ್ರಿಯೆಗಳನ್ನೇನನ್ನೂ ಬಯಸದೇ ಆರ್ಯ ಸಂತರು ಇದೇ ತಮ್ಮ ಶಾಶ್ವತ ನಡತೆ ಎಂದು ತಿಳಿದು ಪರರಿಗಾಗಿ ಮಾಡುತ್ತಾರೆ. ಸತ್ಪುರುಷರ ಯಾವ ಪ್ರಸಾದವೂ ಬಂಜಾಗುವುದಿಲ್ಲ. ಅವರಿಂದಾದ ಲಾಭವಾಗಲೀ ಮಾನವಾಗಲೀ ಎಂದೂ ನಶಿಸಿಹೋಗುವುದಿಲ್ಲ. ಸಾತ್ವಿಕರು ನಿತ್ಯವೂ ಅಳವಡಿಸಿಕೊಂಡ ನಿಯಮವಾದುದರಿಂದ ಇದರ ರಕ್ಷಣೆಯನ್ನೂ ಅವರೇ ಮಾಡುತ್ತಾರೆ.”

ಯಮನು ಹೇಳಿದನು: “ನೀನು ಮಾತನಾಡಿದಾಗಲೆಲ್ಲ ನನ್ನ ಮನಸ್ಸಿಗೆ ಅನುಕೂಲವಾಗುತ್ತದೆ. ಮಹಾ ಅರ್ಥವುಳ್ಳ ಉತ್ತಮ ಪದಗಳನ್ನು ಬಳಸಿ ಧರ್ಮಸಂಹಿತವಾದುದನ್ನೇ ಹೇಳುತ್ತಿದ್ದೀಯೆ. ಯತವ್ರತೇ! ಅಪ್ರತಿಮ ವರವನ್ನು ಕೇಳು.”

ಸಾವಿತ್ರಿಯು ಹೇಳಿದಳು: “ಇತರ ವರಗಳಂತೆ ಈ ವರವೂ ಕೂಡ ಫಲವನ್ನೀಯಬೇಕು. ಸತ್ಯವಾನನ ಜೀವವನ್ನು ವರವಾಗಿ ಕೇಳುತ್ತೇನೆ. ಪತಿಯಿಲ್ಲದೇ ನಾನು ಮೃತಳಾದ ಹಾಗೆಯೇ. ಪತಿಯಿಲ್ಲದೇ ನಾನು ಸುಖವನ್ನು ಬಯಸುವುದಿಲ್ಲ. ಪತಿಯಿಲ್ಲದೇ ನಾನು ಸ್ವರ್ಗವನ್ನು ಬಯಸುವುದಿಲ್ಲ. ಪತಿಯಿಲ್ಲದೇ ನಾನು ಸಂಪತ್ತನ್ನು ಬಯಸುವುದಿಲ್ಲ. ಪತಿಯಿಲ್ಲದೇ ನಾನು ಜೀವಂತವಾಗಿರುವುದನ್ನೂ ಬಯಸುವುದಿಲ್ಲ. ನನಗೆ ನೂರು ಪುತ್ರರಾಗುತ್ತಾರೆಂದು ನೀನೇ ವರವನ್ನು ಕೊಟ್ಟಿದ್ಧೀಯೆ. ಆದರೂ ನನ್ನ ಪತಿಯನ್ನು ಕೊಂಡೊಯ್ಯುತ್ತಿದ್ದೀಯೆ. ಸತ್ಯವಾನನು ಬದುಕಲಿ ಎಂದು ವರವನ್ನು ಕೇಳುತ್ತೇನೆ. ನಿನ್ನ ಮಾತು ಸತ್ಯವೇ ಆಗುತ್ತದೆ.”

“ಹಾಗೆಯೇ ಆಗಲಿ” ಎಂದು ಹೇಳಿ ವೈವಸ್ವತ ಯಮನು ಆ ಪಾಶಗಳನ್ನು ಬಿಡಿಸಿದನು. ಸಂತೋಷಗೊಂಡ ಧರ್ಮರಾಜನು ಸಾವಿತ್ರಿಗೆ ಹೇಳಿದನು: “ಭದ್ರೇ! ಕುಲನಂದಿನೀ! ಇಗೋ ನಿನ್ನ ಪತಿಯನ್ನು ನಾನು ಬಿಡಿಸಿದ್ದೇನೆ. ನಿನ್ನೊಂದಿಗೆ ಕರೆದುಕೊಂಡು ಹೋಗು. ಇವನು ಅರೋಗಿಯಾಗಿ, ಬಯಸಿದುದನ್ನು ಸಾಧಿಸುತ್ತಾ ನಿನ್ನೊಡನೆ ನಾಲ್ನೂರು ವರ್ಷಗಳವರೆಗೆ  ಜೀವಿಸುತ್ತಾನೆ. ಧರ್ಮದಿಂದ ಇಷ್ಟಿ-ಯಾಗಗಳನ್ನು ಮಾಡಿ ಲೋಕದಲ್ಲಿ ಖ್ಯಾತಿಯನ್ನು ಪಡೆಯುತ್ತಾನೆ. ಸತ್ಯವಾನನು ನಿನ್ನಲ್ಲಿ ನೂರು ಪುತ್ರರನ್ನು ಪಡೆಯುತ್ತಾನೆ. ಅವರೆಲ್ಲರೂ ರಾಜರಾಗಿ ಕ್ಷತ್ರಿಯ ಮಕ್ಕಳು-ಮೊಮ್ಮಕ್ಕಳನ್ನು ಪಡೆಯುತ್ತಾರೆ. ನಿಮ್ಮ ಹೆಸರುಗಳು ಕೂಡ ಖ್ಯಾತವಾಗಿ ಇಲ್ಲಿ ಶಾಶ್ವತವಾಗಿರುತ್ತವೆ. ನಿನ್ನ ತಂದೆಯೂ ಕೂಡ ನಿನ್ನ ತಾಯಿ ಮಾಲವಿಯಲ್ಲಿ ನೂರು ಪುತ್ರರನ್ನು ಪಡೆಯುತ್ತಾನೆ ಮತ್ತು ಮಾಲವದ ಹೆಸರನ್ನು ಅವನ ಮಕ್ಕಳು-ಮೊಮ್ಮಕ್ಕಳು ಶಾಶ್ವತವಾಗಿರಿಸುತ್ತಾರೆ. ನಿನ್ನ ಕ್ಷತ್ರಿಯ ಸಹೋದರರು ದೇವತೆಗಳಂತಿರುತ್ತಾರೆ.” ಹೀಗೆ ಅವಳಿಗೆ ವರಗಳನ್ನಿತ್ತು ಪ್ರತಾಪಿ ಧರ್ಮರಾಜನು ಸಾವಿತ್ರಿಯನ್ನು ಹಿಂದಿರುಗಿಸಿ ತನ್ನ ಭವನಕ್ಕೆ ತೆರಳಿದನು.

ಸಾವಿತ್ರಿ-ಸತ್ಯವಾನರು ಆಶ್ರಮಕ್ಕೆ ಹಿಂದಿರಿಗಿದುದು

ಯಮನು ಹೋದನಂತರ ಪತಿಯನ್ನು ಹಿಂದೆ ಪಡೆದ ಸಾವಿತ್ರಿಯು ಅವನ ಶವವು ಮಲಗಿದ್ದಲ್ಲಿಗೆ ಬಂದಳು. ಅಲ್ಲಿ ನೆಲದ ಮೇಲೆ ಮಲಗಿದ್ದ ಪತಿಯನ್ನು ನೋಡಿ ಬಳಿಸಾರಿ ಆಲಂಗಿಸಿ ಅವನ ತಲೆಯನ್ನು ತನ್ನ ತೊಡೆಯ ಮೇಲಿರಿಸಿಕೊಂಡು ಕುಳಿತುಕೊಂಡಳು. ಸತ್ಯವಾನನು ಎಚ್ಚೆತ್ತು ಪ್ರಯಾಣದಿಂದ ಹಿಂದಿರುಗಿದವನಂತೆ ಪುನಃ ಪುನಃ ಅವಳನ್ನು ಪ್ರೀತಿಯಿಂದ ನೋಡುತ್ತಾ ಹೇಳಿದನು: “ನಾನು ಬಹಳ ಸಮಯ ಮಲಗಿಬಿಟ್ಟಿದ್ದೆ. ಏಕೆ ನನ್ನನ್ನು ಎಬ್ಬಿಸಲಿಲ್ಲ? ಇಲ್ಲಿಂದ ನನ್ನನ್ನು ಎಳೆದುಕೊಂಡು ಹೋಗುತ್ತಿದ್ದ ಆ ಕಪ್ಪು ಪುರುಷನು ಎಲ್ಲಿದ್ದಾನೆ?”

ಸಾವಿತ್ರಿಯು ಹೇಳಿದಳು: “ಪುರುಷರ್ಷಭ! ನನ್ನ ತೊಡೆಯ ಮೇಲೆ ನೀನು ಬಹಳ ಹೊತ್ತು ಮಲಗಿಕೊಂಡಿದ್ದೆ. ಪ್ರಜೆಗಳನ್ನು ಸಂಯಮದಲ್ಲಿರಿಸುವ ಆ ಭಗವಾನ್ ಯಮದೇವನು ಹೊರಟು ಹೋದ! ನೀನು ವಿಶ್ರಾಂತಿಯನ್ನು ಪಡೆದಾಯಿತು. ನಿದ್ದೆಯೂ ಮುಗಿಯಿತು. ಸಾಧ್ಯವಾದರೆ ಎದ್ದೇಳು. ನೋಡು. ರಾತ್ರಿಯಾಗಿದೆ!” ಸಂಜ್ಞೆಯನ್ನು ಮರಳಿ ಪಡೆದ ಸತ್ಯವಾನನು ಸುಖವಾದ ನಿದ್ರೆಯಿಂದಲೋ ಎಂಬಂತೆ ಮೇಲೆದ್ದು ವನದ ಸುತ್ತಲೂ ಎಲ್ಲ ದಿಕ್ಕುಗಳಿಗೂ ತಿರುಗಿ ನೋಡಿ ಹೇಳಿದನು: “ಸಾವಿತ್ರಿ! ಫಲಗಳನ್ನು ತರಲೆಂದು ನಿನ್ನೊಡನೆ ಹೊರಟಿದ್ದೆ. ಆಗ ಕಟ್ಟಿಗೆಯನ್ನು ಕಡಿಯುತ್ತಿದ್ದಾಗ ನನ್ನ ತಲೆಯಲ್ಲಿ ನೋವುಂಟಾಯಿತು. ತಲೆನೋವಿನಿಂದ ಬಳಲುತ್ತಿದ್ದ ನಾನು ನಿಲ್ಲಲು ಅಶಕ್ತನಾಗಿ ನಿನ್ನ ತೊಡೆಯ ಮೇಲೆ ಮಲಗಿದೆ. ಅವೆಲ್ಲವು ನನಗೆ ನೆನಪಿದೆ. ನಿನ್ನ ಆಲಿಂಗನದಲ್ಲಿ ಮಲಗಿದ್ದ ನನ್ನನ್ನು ಗಾಢ ನಿದ್ರೆಯು ಆವರಿಸಿತು. ಆಗ ಘೋರ ಕತ್ತಲೆಯಲ್ಲಿ ಆ ಮಹೌಜಸ ಪುರುಷನನ್ನು ನೋಡಿದೆ. ಅವನು ಯಾರೆಂದು ನಿನಗೆ ತಿಳಿದಿದ್ದರೆ ಹೇಳು. ನಾನು ನೋಡಿದ್ದುದು ಕೇವಲ ಸ್ವಪ್ನವೋ ಅಥವಾ ಸತ್ಯವೋ ಹೇಳು.”

ಸಾವಿತ್ರಿಯು ಅವನಿಗೆ ಹೇಳಿದಳು: “ರಾತ್ರಿಯು ಕವಿಯುತ್ತಿದೆ. ರಾಜಕುಮಾರ! ನಡೆದುದೆಲ್ಲವನ್ನೂ ನಿನಗೆ ನಾಳೆ ಹೇಳುತ್ತೇನೆ. ನಿನ್ನ ತಂದೆ-ತಾಯಿಯರ ಕುರಿತು ಯೋಚಿಸು. ಸೂರ್ಯನು ಮುಳುಗಿದ್ದಾನೆ ಮತ್ತು ಕತ್ತಲೆಯು ಪಸರಿಸುತ್ತಿದೆ. ರಾತ್ರಿಯಲ್ಲಿ ತಿರುಗಾಡುವ ಪ್ರಾಣಿಗಳು ಕ್ರೂರವಾಗಿ ಕೂಗುತ್ತಾ ಸ್ವಚ್ಛಂದವಾಗಿ ತಿರುಗಾಡುತ್ತಿವೆ. ವನದಲ್ಲಿ ತಿರುಗಾಡುತ್ತಿರುವ ಮೃಗಗಳಿಂದ ಅಲ್ಲಾಡುವ ಎಲೆಗಳ ಶಬ್ಧವು ಕೇಳಿಬರುತ್ತಿದೆ. ನರಿಗಳ ಘೋರನಾದವು ದಕ್ಷಿಣ-ಪಶ್ಚಿಮ ದಿಕ್ಕಿನಿಂದ ಕೇಳಿ ಬರುತ್ತಿದೆ. ಅವುಗಳ ಉಗ್ರಕೂಗನ್ನು ಕೇಳಿ ನನ್ನ ಮನಸ್ಸು ನಡುಗುತ್ತಿದೆ.”

ಸತ್ಯವಾನನು ಹೇಳಿದನು: “ದಟ್ಟ ಕತ್ತಲೆಯಿಂದ ಆವೃತವಾದ ಈ ವನವು ಭಯವನ್ನುಂಟುಮಾಡುತ್ತಿದೆ. ನಿನಗೆ ದಾರಿಯು ಗೊತ್ತಾಗುವುದಿಲ್ಲ ಮತ್ತು ನಿನಗೆ ನಡೆಯಲೂ ಸಾಧ್ಯವಾಗುವುದಿಲ್ಲ.”

ಸಾವಿತ್ರಿಯು ಹೇಳಿದಳು: “ಈ ವನದ ಸುಟ್ಟ ಒಣ ಮರದಲ್ಲಿ ಉರಿಯುತ್ತಿರುವ ಬೆಂಕಿಯು ಇನ್ನೂ ಇದೆ. ಗಾಳಿಯಿಂದ ಉರಿಯುತ್ತಿರುವ ಈ ಬೆಂಕೆಯ ಜ್ವಾಲೆಯು ಅತ್ತಿತ್ತ ಓಲಾಡುತ್ತಿದೆ. ಇಲ್ಲಿರುವ ಕಟ್ಟಿಗೆಗಳಿಂದ ಆ ಅಗ್ನಿಯನ್ನು ಬೆಳಗಿಸುತ್ತೇನೆ. ಸಂತಾಪಪಡಬೇಡ. ಒಂದು ವೇಳೆ ನಿನಗೆ ನಡೆಯಲು ಸಾಧ್ಯವಾಗದಿದ್ದರೆ, ನಿನ್ನ ತಲೆ ನೋವು ಇನ್ನೂ ಇದ್ದರೆ, ಕತ್ತಲೆ ಕವಿದ ಈ ವನದಲ್ಲಿ ದಾರಿಯು ತಿಳಿಯದೇ ಇದ್ದರೆ, ಮತ್ತು ನಿನ್ನ ಅನುಮತಿಯಿದ್ದರೆ ನಾಳೆ ಬೆಳಿಗ್ಗೆ ವನವು ಸರಿಯಾಗಿ ಕಾಣುವಾಗ ಹೋಗೋಣ. ನಿನಗೆ ಇಷ್ಟವಾದರೆ ಈ ರಾತ್ರಿಯನ್ನು ವನದಲ್ಲಿಯೇ ಕಳೆಯೋಣ.”

ಸತ್ಯವಾನನು ಹೇಳಿದನು: “ನನ್ನ ತಲೆನೋವು ನಿಂತಿದೆ ಮತ್ತು ನನ್ನ ಅಂಗಾಂಗಗಳು ಸ್ವಸ್ಥವಾಗಿವೆ. ನಿನಗೆ ಸರಿಯೆನಿಸಿದರೆ ನನ್ನ ತಂದೆತಾಯಿಗಳನ್ನು ಕಾಣಲು ಬಯಸುತ್ತೇನೆ. ಈ ಮೊದಲು ಎಂದೂ ನಾನು ಆಶ್ರಮಕ್ಕೆ ತಡವಾಗಿ ಹೋಗಿರಲಿಲ್ಲ. ಸಂಜೆಯ ನಂತರ ನನ್ನ ಬರವನ್ನು ತಾಯಿಯು ಒಪ್ಪಿಕೊಳ್ಳುವುದಿಲ್ಲ. ಬೆಳಕಿರುವಾಗ ನಾನು ಹೊರಗೆ ಹೋದರೂ ನನ್ನ ಹಿರಿಯರು ಸಂತಪಿಸುತ್ತಾರೆ ಮತ್ತು ನನ್ನ ತಂದೆಯು ಆಶ್ರಮವಾಸಿಗಳೊಂದಿಗೆ ನನ್ನನ್ನು ಹುಡುಕಲು ಹೊರಡುತ್ತಾನೆ. ಹಿಂದೆಯೂ ಕೂಡ ನನ್ನ ತಂದೆ-ತಾಯಿಯರು ಬಹುಬಾರಿ ನಾನು ತಡವಾಗಿ ಬರುತ್ತೇನೆಂದು ದುಃಖಿತರಾಗಿದ್ದರು. ನನಗಾಗಿ ಕಾಯುತ್ತಿರುವ ಅವರು ಇಂದು ಯಾವ ಅವಸ್ಥೆಯಲ್ಲಿರಬಹುದು? ನನ್ನನ್ನು ಕಾಣದೇ ಅವರಿಗೆ ಮಹಾದುಃಖವಾಗಿರಬಹುದು. ಈ ವೃದ್ಧರು ನನ್ನನ್ನು ತುಂಬಾ ಪ್ರೀತಿಸುತ್ತಾರೆ. ಒಂದು ರಾತ್ರಿ ನನ್ನ ಬಗ್ಗೆ ತುಂಬಾ ಚಿಂತೆಗೊಳಗಾಗಿದ್ದ ಅವರು ಕಣ್ಣೀರಿಡುತ್ತಾ “ಪುತ್ರಕ! ನೀನಿಲ್ಲದೇ ಒಂದು ಮುಹೂರ್ತವೂ ನಾವು ಜೀವಿತರಾಗಿರುವುದಿಲ್ಲ. ನೀನು ಇರುವವರೆಗೆ ನಾವು ಬದುಕಿರುವೆವು. ನೀನೇ ಈ ಕುರುಡು ಮುದುಕರ ಊರುಗೋಲು. ನಮ್ಮ ವಂಶವು ನಿನ್ನ ಮೇಲೆಯೇ ನಿಂತಿದೆ. ನಮ್ಮ ಪಿಂಡ, ಕೀರ್ತಿ ಮತ್ತು ಸಂತಾನಗಳು ನಿನ್ನ ಮೇಲೆಯೇ ನಿಂತಿವೆ!” ಎಂದು ಹೇಳಿದ್ದರು. ಇಂದು ರಾತ್ರಿ ನನ್ನನ್ನು ನೋಡದೇ ಇದ್ದರೆ ನಾನೇ ಅವರ ಊರುಗೋಲು ಎಂದು ಹೇಳುವ ಆ ನನ್ನ ವೃದ್ಧ ಮಾತಾಪಿತರು ಯಾವ ಅವಸ್ಥೆಯಲ್ಲಿರಬಹುದು? ನನ್ನ ತಂದೆ-ತಾಯಿಯರಲ್ಲಿ ನನ್ನ ಕುರಿತು ಚಿಂತೆಯನ್ನುಂಟುಮಾಡಿದ ಈ ನಿದ್ರೆಯನ್ನು ನಾನು ನಿಂದಿಸುತ್ತೇನೆ. ಇಂದು ನನ್ನ ಕಾರಣದಿಂದ ಅವರು ಪರಮ ಸಂತಾಪವನ್ನು ಹೊಂದಿದ್ದಾರೆ. ಅವರು ಬದುಕಿದ್ದರೆ ನಾನೂ ಬದುಕಿರುತ್ತೇನೆ. ನಾನೇ ಅವರನ್ನು ನೋಡಿಕೊಳ್ಳಬೇಕು. ಅವರಿಗೆ ಪ್ರಿಯವಾದುದನ್ನು ಮಾಡಬೇಕು. ಅದಕ್ಕಾಗಿಯೇ ನಾನು ಜೀವಿಸಿದ್ದೇನೆ.”

ಹೀಗೆ ಹೇಳಿ ಆ ಹಿರಿಯರನ್ನೇ ಅನುಸರಿಸಿ ಪ್ರೀತಿಸುವ ಧರ್ಮಾತ್ಮನು ದುಃಖಾರ್ತನಾಗಿ ಜೋರಾಗಿ ಅಳತೊಡಗಿದನು. ಶೋಕಕರ್ಷಿತನಾದ ಪತಿಯನ್ನು ಕಂಡು ಧರ್ಮಚಾರಿಣೀ ಸಾವಿತ್ರಿಯು ಅವನ ಎರಡೂ ಕಣ್ಣುಗಳಿಂದ ಸುರಿಯುತ್ತಿದ್ದ ಕಣ್ಣೀರನ್ನು ಒರೆಸಿ ಹೇಳಿದಳು: “ನಾನು ತಪಸ್ಸನ್ನು ತಪಿಸಿದ್ದರೆ, ದಾನವನ್ನಿತ್ತಿದ್ದಿದ್ದರೆ, ಮತ್ತು ಆಹುತಿಯನ್ನಿತ್ತಿದ್ದಿದ್ದರೆ ನನ್ನ ಅತ್ತೆ-ಮಾವಂದಿರಿಗೆ ಮತ್ತು ಪತಿಗೆ ಈ ರಾತ್ರಿಯು ಪುಣ್ಯಕರವಾಗಲಿ. ಈ ಹಿಂದೆ ನಾನು ಸುಳ್ಳನ್ನು ಹೇಳಿದ್ದುದು ನನಗೆ ನೆನಪಿಲ್ಲ. ಇದು ಸತ್ಯವೇ ಆಗಿದ್ದರೆ ನನ್ನ ಅತ್ತೆ-ಮಾವಂದಿರು ಇಂದು ಬದುಕಿ ಉಳಿಯಲಿ!”

ಸತ್ಯವಾನನು ಹೇಳಿದನು: “ಅವರನ್ನು ನೋಡಲು ಬಯಸುತ್ತೇನೆ. ತಡಮಾಡುವುದು ಬೇಡ. ಅವರಿಗೆ ಅಪ್ರಿಯವಾದುದು ಏನಾದರೂ ಆಗುವ ಮೊದಲೇ ಅವರ ಬಳಿ ಹೋಗೋಣ. ತಕ್ಷಣವೇ ಆಶ್ರಮಕ್ಕೆ ಹೋಗೋಣ.”

ಆಗ ಸಾವಿತ್ರಿಯು ಮೇಲೆದ್ದು ಕೂದಲನ್ನು ಕಟ್ಟಿಕೊಂಡು ಪತಿಯ ಬಾಹುಗಳನ್ನು ಹಿಡಿದು ಮೇಲಕ್ಕೆತ್ತಿದಳು. ಸತ್ಯವಾನನನು ಮೇಲೆದ್ದು ಕೈಗಳಿಂದ ತನ್ನ ದೇಹವನ್ನು ಉಜ್ಜಿಕೊಂಡು, ಸುತ್ತಲೂ ಕಣ್ಣುಹಾಯಿಸಿ ಬುಟ್ಟಿಯಿಂದ ನೋಡಿದನು. ಆಗ ಸಾವಿತ್ರಿಯು “ನಾಳೆ ಬಂದು ಫಲವನ್ನು ಒಯ್ಯಿ. ಆದರೆ ನಮ್ಮ ರಕ್ಷಣೆಗಾಗಿ ನಿನ್ನ ಈ ಕೊಡಲಿಯನ್ನು ತೆಗೆದುಕೊಳ್ಳುತ್ತೇನೆ.” ಎಂದು ತುಂಬಿದ ಬುಟ್ಟಿಯನ್ನು ಮರದ ರೆಂಬೆಗೆ ಕಟ್ಟಿ, ಕೊಡಲಿಯನ್ನು ಹಿಡಿದು ಪತಿಯ ಬಳಿ ಬಂದಳು. ಪತಿಯ ತೋಳನ್ನು ತನ್ನ ಎಡ ಭುಜದ ಮೇಲಿರಿಸಿ ತನ್ನ ಬಲಗೈಯಿಂದ ಅವನ ಸೊಂಟವನ್ನು ಬಳಸಿ ಸಾವಿತ್ರಿಯು ಮೆಲ್ಲನೆ ನಡೆದಳು. ಸತ್ಯವಾನನು ಹೇಳಿದನು: “ನನಗೆ ಇಲ್ಲಿಗೆ ಬರುವುದು ಅಭ್ಯಾಸವಾಗಿದುದರಿಂದ ನನಗೆ ದಾರಿಯು ಗೊತ್ತು. ಮರಗಳ ಮಧ್ಯದಿಂದ ಬರುವ ಬೆಳದಿಂಗಳ ಬೆಳಕಿನಲ್ಲಿ ನನಗೆ ದಾರಿಯು ಕಾಣುತ್ತಿದೆ. ಈ ಪಲಾಶವೃಕ್ಷದ ಬಳಿ ದಾರಿಯು ಕವಲೊಡೆಯುತ್ತದೆ. ಅದರ ಬಲದಾರಿಯಲ್ಲಿ ಹೋಗೋಣ. ನಾನು ಈಗ ಸರಿಯಾಗಿದ್ದೇನೆ. ಶಕ್ತಿಯು ಬಂದಿದೆ.” ಹೀಗೆ ಮಾತನಾಡುತ್ತಾ ಅವರು ಆಶ್ರಮದ ಕಡೆ ತ್ವರೆಮಾಡಿ ನಡೆದರು.

ಇದೇ ಸಮಯದಲ್ಲಿ ದ್ಯುಮತ್ಸೇನನು ತನ್ನ ಕಣ್ಣುಗಳನ್ನು ಪಡೆದು ಹರ್ಷಿತನಾಗಿ ಎಲ್ಲವನ್ನೂ ನೋಡತೊಡಗಿದನು. ಮಗನ ಕಾರಣದಿಂದ ಪರಮ ಆರ್ತನಾಗಿದ್ದ ಅವನು ತನ್ನ ಪತ್ನಿ ಶೈಭ್ಯೆಯೊಡನೆ ನೆರೆಹೊರೆಯ ಎಲ್ಲರ ಆಶ್ರಮಗಳಿಗೂ ಹೋದನು. ಆ ದಂಪತಿಗಳು ಆಶ್ರಮ, ನದಿ, ವನ ಮತ್ತು ಸರೋವರಗಳಲ್ಲಿ ತಿರುಗಾಡಿ ಸತ್ಯವಾನನನ್ನು ಹುಡುಕಿದರು. ಯಾವ ಶಬ್ಧವನ್ನು ಕೇಳಿದರೂ ಸಾವಿತ್ರಿಯೊಡನೆ ಸತ್ಯವಾನನು ಬರುತ್ತಿದ್ದಾನೆಂದು ತಿಳಿದು ಅಲ್ಲಿಗೆ ಓಡುತ್ತಿದ್ದರು. ಹುಚ್ಚರಂತೆ ಸುತ್ತಾಡುತ್ತಿದ್ದ ಅವರ ಶರೀರಗಳಲ್ಲಿ ದರ್ಬೆಹುಲ್ಲು ಮತ್ತು ಮುಳ್ಳುಗಳು ತಾಗಿ ಗೀರುಬಿದ್ದಿದ್ದವು. ಕಾಲುಗಳು ಒಡೆದು ಒರಟಾಗಿ ಗಾಯಗೊಂಡು ರಕ್ತಸುರಿಸುತ್ತಿದ್ದವು. ಆಶ್ರಮಗಳಲ್ಲಿ ವಾಸಿಸುತ್ತಿದ್ದ ಎಲ್ಲ ವಿಪ್ರರೂ ಅಲ್ಲಿಗೆ ಬಂದು ಅವರೊಡನೆ ಕುಳಿತು ಸಮಾಧಾನಪಡೆಸಿದರು. ಆಗ ಸುವರ್ಚಸನು “ತಪಸ್ಸು, ದಮ, ಆಚರಗಳಲ್ಲಿ ಸಂಯುಕ್ತಳಾಗಿರುವ ಸಾವಿತ್ರಿಯು ಯಾರ ಪತ್ನಿಯೋ ಆ ಸತ್ಯವಾನನು ಜೀವಂತನಾಗಿದ್ದಾನೆ” ಎಂದನು. ಗೌತಮನು “ನನ್ನ ಕಠೋರ ತಪಸ್ಸಿನಿಂದ ಏನಾಗಬೇಕೆಂದಿದೆಯೋ ಎಲ್ಲವನ್ನೂ ನಾನು ತಿಳಿದುಕೊಂಡಿದ್ದೇನೆ. ನನ್ನ ಮಾತನ್ನು ಕೇಳಿ: ಸತ್ಯವಾನನು ಬದುಕಿದ್ದಾನೆ ಎನ್ನುವುದು ಸತ್ಯ!” ಎಂದು ಹೇಳಿದನು. ಗೌತಮನ ಶಿಷ್ಯನೂ ಕೂಡ “ನನ್ನ ಉಪಾಧ್ಯಾಯನ ಬಾಯಿಯಿಂದ ಹೊರಟ ಮಾತು ಎಂದೂ ಸುಳ್ಳಾಗಿಲ್ಲ. ಆದುದರಿಂದ ಸತ್ಯವಾನನು ಜೀವಿತನಾಗಿರಲೇ ಬೇಕು.” ಎಂದು ತನ್ನ ಉಪಾಧ್ಯಾಯನ ಮಾತನ್ನು ಅನುಮೋದಿಸಿದನು. ಅಲ್ಲಿದ್ದ ಇತರ ಋಷಿಗಳೂ ಕೂಡ “ಸತ್ಯವಾನನ ಪತ್ನಿ ಸಾವಿತ್ರಿಯು ಅವೈಧವ್ಯವನ್ನು ಸೂಚಿಸುವ ಎಲ್ಲ ಲಕ್ಷಣಗಳನ್ನು ಹೊಂದಿರುವುದರಿಂದ ಅವನು ಬದುಕಿದ್ದಾನೆ” ಎಂದು ಹೇಳಿದರು. ಆಗ ದಾಲ್ಭ್ಯನು ಹೇಳಿದನು: “ನಿನ್ನ ದೃಷ್ಟಿಯು ಹೇಗೆ ಹಿಂದಿರುಗಿತೋ ಮತ್ತು ಹೇಗೆ ಸಾವಿತ್ರಿಯು ಉಪವಾಸವಿದ್ದುಕೊಂಡು ಆ ವ್ರತವನ್ನು ಸಂಪೂರ್ಣಗೊಳಿಸಿದಳೋ ಹಾಗೆ ಸತ್ಯವಾನನೂ ಜೀವಿತನಾಗಿದ್ದಾನೆ.” ಈ ರೀತಿ ಸತ್ಯವಾದೀ ತಪಸ್ವಿಗಳು ದ್ಯುಮತ್ಸೇನನಿಗೆ ಆಶ್ವಾಸನೆ ನೀಡಲು ಅವನು ಅವರ ಮಾತಿನ ಅರ್ಥಗಳನ್ನು ಗಣನೆಗೆ ತೆಗೆದುಕೊಂಡು ಸುಮ್ಮನಾದನು. ಆಗ ಸ್ವಲ್ಪ ಕ್ಷಣದಲ್ಲಿಯೇ ಸಾವಿತ್ರಿಯು ಪತಿ ಸತ್ಯವಾನನೊಂದಿಗೆ ಬಂದು ಸಂತೋಷದಿಂದ ಆಶ್ರಮವನ್ನು ಪ್ರವೇಶಿಸಿದಳು.

ಅವರನ್ನು ನೋಡಿ ಅಲ್ಲಿದ್ದ ಬ್ರಾಹ್ಮಣರು ದ್ಯುಮತ್ಸೇನನನ್ನು ಉದ್ದೇಶಿಸಿ ಹೇಳಿದರು: “ಪೃಥ್ವೀಪತೇ! ಇಂದು ನೀನು ದೃಷ್ಟಿಯನ್ನು ಪಡೆದು ಪುತ್ರನನ್ನೂ ಸೇರಿದುದನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಪುತ್ರನ ಮಿಲನ, ಸಾವಿತ್ರಿಯ ದರ್ಶನ ಮತ್ತು ನಿನ್ನ ದೃಷ್ಟಿಯು ಹಿಂದಿರುಗಿದುದು ಈ ರೀತಿಯ ಮೂರು ವಿಧಗಳಲ್ಲಿ ಅದೃಷ್ಟವಂತನಾಗಿ ನೀನು ಲಾಭದಿಂದ ವರ್ಧಿಸುತ್ತಿರುವೆ. ನಾವೆಲ್ಲ ಹೇಳಿದ ಹಾಗೆಯೇ ನಡೆಯಿತು ಎನ್ನುವುದರಲ್ಲಿ ಸಂಶಯವಿಲ್ಲ. ನಿನ್ನ ಬೆಳವಣಿಗೆಯು ಹೀಗೆಯೇ ಇನ್ನೂ ಆಗುತ್ತಿರಲಿ ಎಂದು ನಾವು ಪುನಃ ಪುನಃ ನಿನ್ನನ್ನು ಹರಸುತ್ತೇವೆ.”

ಅನಂತರ ಅಲ್ಲಿ ಅಗ್ನಿಯನ್ನು ಉರಿಸಿ ಆ ಎಲ್ಲ ದ್ವಿಜರೂ ಮಹೀಪತಿ ದ್ಯುಮತ್ಸೇನನನ್ನು ಸುತ್ತುವರೆದು ಕುಳಿತುಕೊಂಡರು. ಅಲ್ಲಿಯೇ ನಿಂತುಕೊಂಡಿದ್ದ ಶೈಬ್ಯೆ, ಸತ್ಯವಾನ ಮತ್ತು ಸಾವಿತ್ರಿಯರಿಗೆ ಎಲ್ಲರೂ ಕುಳಿತುಕೊಳ್ಳಲು ಅನುಮತಿಯನ್ನು ನೀಡಲು ಸಂತೋಷದಿಂದ ಅವರು ಕುಳಿತುಕೊಂಡರು. ರಾಜನ ಜೊತೆಗೆ ಕುಳಿತಿದ್ದ ಆ ಎಲ್ಲ ವನವಾಸಿಗರೂ ಕುತೂಹಲದಿಂದ ರಾಜಕುಮಾರ ಸತ್ಯವಾನನನ್ನು ಕೇಳಿದರು: “ಪತ್ನಿಯೊಂದಿಗೆ ನೀನು ಇದಕ್ಕೂ ಮೊದಲು ಏಕೆ ಬರಲಿಲ್ಲ? ಈ ವಿರಾತ್ರಿಯಲ್ಲಿ ಏಕೆ ಬಂದಿರಿ? ನಿಮಗೆ ಏಕೆ ತಡವಾಯಿತು? ರಾಜಕುಮಾರ! ನಿನ್ನ ತಂದೆ-ತಾಯಂದಿರು ಮತ್ತು ನಾವು ಚಿಂತಿತರಾಗಿದ್ದೆವು. ಇದು ಅಕಸ್ಮಾತ್ತಾಗಿ ಆಗಿರುವುದು ಎಂದು ನಮ್ಮ ಯೋಚನೆ. ಎಲ್ಲವನ್ನೂ ಹೇಳಬೇಕು.”

ಸತ್ಯವಾನನು ಹೇಳಿದನು: “ನಾನು ತಂದೆ-ತಾಯಿಯರ ಅನುಮತಿಯನ್ನು ಪಡೆದು ಸಾವಿತ್ರಿಯೊಡನೆ ಹೋಗಿದ್ದೆ. ಅಲ್ಲಿ ಕಟ್ಟಿಗೆಯನ್ನು ಕಡಿಯುತ್ತಿದ್ದಾಗ ತಲೆನೋವುಂಟಾಯಿತು. ವೇದನೆಯಿಂದ ತುಂಬಾ ಹೊತ್ತು ನಾನು ಮಲಗಿದ್ದೆ ಎಂದಿಷ್ಟೇ ನನಗೆ ತಿಳಿದಿದೆ. ಆಗ ಎಷ್ಟುಸಮಯದ ವರೆಗೆ ಮಲಗಿದ್ದೆನೋ ಅಷ್ಟು ಸಮಯ ನಾನು ಹಿಂದೆ ಎಂದೂ ಮಲಗಿರಲಿಲ್ಲ. ನೀವೆಲ್ಲರೂ ಇಲ್ಲಿ ಸಂತಾಪಪಡಬಾರದು ಎಂದು ವಿರಾತ್ರಿಯಾದರೂ ಬಂದಿದ್ದೇನೆ. ಇದಕ್ಕೆ ಬೇರೆ ಯಾವ ಕಾರಣವೂ ಇಲ್ಲ.”

ಗೌತಮನು ಹೇಳಿದನು: “ಅಕಸ್ಮಾತ್ತಾಗಿ ನಿನ್ನ ತಂದೆಯ ದೃಷ್ಟಿಯು ಮರಳಿ ಬಂದಿತು. ಇದರ ಕಾರಣವು ನಿನಗೆ ತಿಳಿಯದಿದ್ದರೆ ಸಾವಿತ್ರಿಯು ಹೇಳಬೇಕು. ಸಾವಿತ್ರಿ! ನೀನು ಸಾವಿತ್ರಿಯ ತೇಜಸ್ಸುಳ್ಳವಳು. ಇವುಗಳ ಕಾರಣಗಳನ್ನು ನೀನು ತಿಳಿದಿರುವೆ. ಇದರಲ್ಲಿ ರಹಸ್ಯವೇನೂ ಇಲ್ಲದಿದ್ದರೆ ಹೇಳು.”

ಸಾವಿತ್ರಿಯು ಹೇಳಿದನು: “ನಡೆದ ಎಲ್ಲವನ್ನೂ ನೀವು ಈಗ ತಿಳಿದಿದ್ದೀರಿ. ಇದರಲ್ಲಿ ಯಾವ ರಹಸ್ಯವೂ ಇಲ್ಲ. ನಡೆದುದನ್ನು ಕೇಳಿ. ಮಹಾತ್ಮ ನಾರದನು ನನ್ನ ಪತಿಯು ಇಂದೇ ಸಾಯುತ್ತಾನೆಂದು ಹೇಳಿದ್ದನು. ಆದುದರಿಂದ ಇಂದು ನಾನು ಅವನನ್ನು ಬಿಟ್ಟಿರಲಿಲ್ಲ. ವನದಲ್ಲಿ ಆಯಾಸದಿಂದ ಅವನು ಮಲಗಿಕೊಂಡಾಗ ಸಾಕ್ಷಾತ್ ಯಮನೇ ಅಲ್ಲಿಗೆ ಬಂದು ಇವನನ್ನು ಬಂಧಿಸಿ ಪಿತೃಗಳು ವಾಸಿಸುವ ದಿಕ್ಕಿಗೆ ಕರೆದೊಯ್ದನು. ಆಗ ನಾನು ಆ ದೇವನಿಗೆ ಸತ್ಯವಚನಗಳಿಂದ ತೃಪ್ತಿಗೊಳಿಸಿದೆ ಮತ್ತು ಅವನು ನನಗೆ ಐದು ವರಗಳನ್ನು ಕೊಟ್ಟನು. ನನಗಿತ್ತ ವರಗಳನ್ನು ಕೇಳಿ. ಕಣ್ಣುಗಳು ಮತ್ತು ಸ್ವರಾಜ್ಯ ಈ ಎರಡು ವರಗಳು ನನ್ನ ಮಾವನಿಗೆ. ನೂರು ಮಕ್ಕಳಾಗಬೇಕೆಂದು ನನ್ನ ತಂದೆಗೆ ಮತ್ತು ನೂರು ಮಕ್ಕಳಾಗಬೇಕೆಂದು ನನಗೆ ವರ. ನನ್ನ ಪತಿ ಸತ್ಯವಾನನಿಗೆ ನಾಲ್ನೂರು ವರ್ಷಗಳ ಆಯಸ್ಸು ಕೊನೆಯ ವರ. ಪತಿಯ ಜೀವಕ್ಕಾಗಿಯೇ ನಾನು ಆ ಚೀರ್ಣಸ್ಥಿರ ವ್ರತವನ್ನು ಕೈಗೊಂಡಿದ್ದೆನು. ನಾನು ಅನುಭವಿಸುತ್ತಿದ್ದ ಆ ಮಹಾದುಃಖವು ಇಂದು ಸಂತೋಷವಾಗಿ ಪರಿಣಮಿಸಿತು.”

ಋಷಿಗಳು ಹೇಳಿದರು: “ಈ ನರೇಂದ್ರನ ಕುಲವು ವ್ಯಸನಗಳಿಂದ ಘಾತಿಗೊಂಡು ಹೆಚ್ಚು ಹೆಚ್ಚು ಕತ್ತಲಿನಲ್ಲಿ ಮುಳುಗುತ್ತಿತ್ತು. ಸುಶೀಲೆಯೂ, ಧರ್ಮಪುಣ್ಯಧೃತಳೂ ಆಗಿರುವ ಸಾಧ್ವಿ, ಕುಲೀನೆ ನಿನ್ನಿಂದ ಅದು ಮೇಲಕ್ಕೆತ್ತಲ್ಪಟ್ಟಿತು!” ಈ ರೀತಿ ಆ ವರಸ್ತ್ರೀಯನ್ನು ಪ್ರಶಂಸಿಸಿ, ಗೌರವಿಸಿ ಅಲ್ಲಿ ಸೇರಿದ್ದ ಋಷಿಗಳು ದ್ಯುಮತ್ಸೇನ ಮತ್ತು ಸತ್ಯವಾನರ ಅನುಮತಿಯನ್ನು ಪಡೆದು ತಮ್ಮ ತಮ್ಮ ಆಶ್ರಮಗಳಿಗೆ ಸಂತೋಷದಿಂದ ಹೊರಟು ಹೋದರು.

ರಾತ್ರಿಯು ಕಳೆದು ಸೂರ್ಯನು ಮಂಡಲದಲ್ಲಿ ಉದಯಿಸಲು ಎಲ್ಲ ತಪೋಧನರೂ ಪೂರ್ವಾಹ್ನೀಕಗಳನ್ನು ಪೂರೈಸಿ ಪುನಃ ಸೇರಿದರು. ಸಾವಿತ್ರಿಯ ಮಹಾಭಾಗ್ಯದ ಕುರಿತು ಎಷ್ಟು ಹೇಳಿದರೂ ಆ ಮಹರ್ಷಿಗಳಿಗೆ ತೃಪ್ತಿಯೆನಿಸಲಿಲ್ಲ. ಆಗ ಶಾಲ್ವದ ಪ್ರಜೆಗಳೆಲ್ಲರೂ ದ್ಯುಮತ್ಸೇನನ ಬಳಿ ಬಂದು ಅಲ್ಲಿದ್ದ ರಾಜನು ದ್ಯುಮತ್ಸೇನನ ಅಮಾತ್ಯನಿಂದ ಹತನಾದನೆಂದೂ, ಸೇನೆಯೂ ಪಲಾಯನಮಾಡಿದೆಯೆಂದೂ ತಿಳಿಸಿದರು. “ಜನರೆಲ್ಲರೂ ಒಂದೇ ಮತದಿಂದ ಹಿಂದಿನ ರಾಜನನ್ನೇ ಬಯಸಿದ್ದಾರೆ. ಕಣ್ಣಿರಲಿ ಅಥವಾ ಕುರುಡನಾಗಿರಲಿ, ಅವನೇ ನಮ್ಮ ರಾಜನಾಗಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ. ಇದೇ ನಿಶ್ಚಯ ಮಾಡಿಕೊಂಡು ನಿನ್ನ ಚತುರಂಗ ಬಲವನ್ನು ರಥಗಳನ್ನು ತೆಗೆದುಕೊಂಡು ನಿನ್ನನ್ನು ಕರೆದೊಯ್ಯಲು ಇಲ್ಲಿಗೆ ಬಂದಿದ್ದೇವೆ. ರಾಜನ್! ಹೊರಡುವವನಾಗು. ನಿನಗೆ ಮಂಗಳವಾಗಲಿ, ನಿನ್ನ ನಗರದಲ್ಲಿ ಜಯಘೋಷವಾಗುತ್ತಿದೆ. ಇಂದಿನಿಂದ ನೀನು ನಿನ್ನ ಪಿತೃ-ಪಿತಾಮಹರ ಪದವನ್ನು ಚಿರವಾಗಿ ಆಳು” ಎಂದು ಪೌರಜನರು ಬಿನ್ನವಿಸಿದರು. ಅವನಿಗೆ ದೃಷ್ಟಿಬಂದಿರುವುದನ್ನು ಮತ್ತು ಅವನು ಆರೋಗ್ಯದಿಂದಿರುವುದನ್ನು ನೋಡಿ ವಿಸ್ಮಿತರಾಗಿ ಎಲ್ಲರೂ ರಾಜನಿಗೆ ಬಿದ್ದು ನಮಸ್ಕರಿಸಿದರು. ಆಗ ರಾಜನು ವೃದ್ಧರನ್ನೂ ವನಾಶ್ರಮವಾಸೀ ದ್ವಿಜರನ್ನೂ ಅಭಿವಂದಿಸಿ ಪೂಜಿಸಿ ತನ್ನ ನಗರದ ಕಡೆ ಹೊರಟನು. ಶೈಬ್ಯೆಯೂ ಕೂಡ ಸಾವಿತ್ರಿಯನ್ನೊಡಗೂಡಿ ಸುಂದರವಾಗಿ ಅಲಂಕೃತವಾಗಿದ್ದ ಹಲವಾರು ಜನರು ಎತ್ತಿಕೊಂಡು ಹೋಗುತ್ತಿದ್ದ ಪಲ್ಲಕ್ಕಿಯಲ್ಲಿ ಕುಳಿತು ಸೇನೆಯಿಂದ ಸುತ್ತುವರೆದು ಹೊರಟಳು. ನಗರದಲ್ಲಿ ಪುರೋಹಿತರು ಸಂತೋಷದಿಂದ ದ್ಯುಮತ್ಸೇನನನ್ನು ರಾಜನನ್ನಾಗಿಯೂ ಅವನ ಪುತ್ರ ಸತ್ಯವಾನನನ್ನು ಯುವರಾಜನನ್ನಾಗಿ ಅಭಿಷೇಕಿಸಿದರು. ಬಹಳ ಸಮಯದ ನಂತರ ಸಾವಿತ್ರಿಯು ನೂರು ಕೀರ್ತಿವರ್ಧಕ, ರಣದಳ್ಲಿ ಹಿಂಜರಿಯದ, ಶೂರ ಮಕ್ಕಳಿಗೆ ಜನ್ಮವನ್ನಿತ್ತಳು. ಹಾಗೆಯೇ ಮದ್ರಾಧಿಪ ಅಶ್ವಪತಿಯೂ ಮಾಲವಿಯಲ್ಲಿ ಅವಳ ತಕ್ಕಂತೆಯೇ ಇದ್ದ ಮಹಾಬಲಶಾಲೀ ಮಕ್ಕಳನ್ನು ಪಡೆದನು. ಹೀಗೆ ಸಾವಿತ್ರಿಯು ತನ್ನ ತಂದೆ-ತಾಯಿಯರನ್ನೂ, ಅತ್ತೆ-ಮಾವರನ್ನೂ, ಪತಿಯ ಕುಲ ಎಲ್ಲರನ್ನೂ ಕಷ್ಟಗಳಿಂದ ಉದ್ಧರಿಸಿದಳು.

Related image

Click on the link below for a Kannada Harikathe - Sathi Savitri - by Santa Shri Bhadragiri Achuta Dasaru - based on the Pativratopakhayana of Draupadiharana Parva of Mahabharata:

 

The other stories:

  1. ಆರುಣಿ ಉದ್ದಾಲಕ
  2. ಉಪಮನ್ಯು
  3. ಸಮುದ್ರಮಥನ
  4. ಗರುಡೋತ್ಪತ್ತಿ; ಅಮೃತಹರಣ
  5. ಶೇಷ
  6. ಶಕುಂತಲೋಪಾಽಖ್ಯಾನ
  7. ಯಯಾತಿ
  8. ಸಂವರಣ-ತಪತಿ
  9. ವಸಿಷ್ಠೋಪಾಽಖ್ಯಾನ
  10. ಔರ್ವೋಪಾಽಖ್ಯಾನ
  11. ಸುಂದೋಪಸುಂದೋಪಾಽಖ್ಯಾನ
  12. ಸಾರಂಗಗಳು
  13. ಸೌಭವಧೋಪಾಽಖ್ಯಾನ
  14. ನಲೋಪಾಽಖ್ಯಾನ
  15. ಅಗಸ್ತ್ಯೋಪಾಽಖ್ಯಾನ
  16. ಭಗೀರಥ
  17. ಋಷ್ಯಶೃಂಗ
  18. ಪರಶುರಾಮ
  19. ಚ್ಯವನ
  20. ಮಾಂಧಾತ
  21. ಸೋಮಕ-ಜಂತು
  22. ಗಿಡುಗ-ಪಾರಿವಾಳ
  23. ಅಷ್ಟಾವಕ್ರ
  24. ರೈಭ್ಯ-ಯವಕ್ರೀತ
  25. ತಾರ್ಕ್ಷ್ಯ ಅರಿಷ್ಠನೇಮಿ
  26. ಅತ್ರಿ
  27. ವೈವಸ್ವತ ಮನು
  28. ಮಂಡೂಕ-ವಾಮದೇವ
  29. ಧುಂಧುಮಾರ
  30. ಮಧು-ಕೈಟಭ ವಧೆ
  31. ಕಾರ್ತಿಕೇಯನ ಜನ್ಮ
  32. ಮುದ್ಗಲ
  33. ರಾಮೋಪಾಽಖ್ಯಾನ: ರಾಮಕಥೆ
  34. ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
  35. ಇಂದ್ರವಿಜಯೋಪಾಽಖ್ಯಾನ
  36. ದಂಬೋದ್ಭವ
  37. ಮಾತಲಿವರಾನ್ವೇಷಣೆ
  38. ಗಾಲವ ಚರಿತೆ
  39. ವಿದುಲೋಪಾಽಖ್ಯಾನ
  40. ತ್ರಿಪುರವಧೋಪಾಽಖ್ಯಾನ
  41. ಪರಶುರಾಮನು ಅಸ್ತ್ರಗಳನ್ನು ಪಡೆದುದು
  42. ಪ್ರಭಾಸಕ್ಷೇತ್ರ ಮಹಾತ್ಮೆ
  43. ತ್ರಿತಾಖ್ಯಾನ
  44. ಸಾರಸ್ವತೋಪಾಽಖ್ಯಾನ
  45. ವಿಶ್ವಾಮಿತ್ರ
  46. ವಸಿಷ್ಠಾಪವಾಹ ಚರಿತ್ರೆ
  47. ಬಕ ದಾಲ್ಭ್ಯನ ಚರಿತ್ರೆ
  48. ಕಪಾಲಮೋಚನತೀರ್ಥ ಮಹಾತ್ಮೆ
  49. ಮಂಕಣಕ
  50. ವೃದ್ಧಕನ್ಯೆ
  51. ಬದರಿಪಾಚನ ತೀರ್ಥ
  52. ಕುಮಾರನ ಪ್ರಭಾವ-ಅಭಿಷೇಕ
  53. ಅಸಿತದೇವಲ-ಜೇಗೀಷವ್ಯರ ಕಥೆ
  54. ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
  55. ಕುರುಕ್ಷೇತ್ರ ಮಹಾತ್ಮೆ
  56. ಶಂಖಲಿಖಿತೋಪಾಽಖ್ಯಾನ
  57. ಜಾಮದಗ್ನೇಯೋಪಾಽಖ್ಯಾನ
  58. ಷೋಡಶರಾಜಕೀಯೋಪಾಽಖ್ಯಾನ

Leave a Reply

Your email address will not be published. Required fields are marked *