ಮುದ್ಗಲ

ಕುರುಕ್ಷೇತ್ರದಲ್ಲಿ ಅಕ್ಕಿಕುಟ್ಟುವ ವೃತ್ತಿಯಲ್ಲಿ ನಿರತನಾದ ಮುದ್ಗಲನೆನ್ನುವ ಧರ್ಮಾತ್ಮ, ಸಂಶಿತವ್ರತನಿದ್ದನು. ಪಾರಿವಾಳದಂತೆ ಜೀವಿಸುತ್ತಿದ್ದ ಅವನು ಅತಿಥಿಗಳನ್ನು ಸತ್ಕರಿಸುತ್ತಿದ್ದನು. ಆ ಮಹಾತಪಸ್ವಿಯು ಇಷ್ಟೀಕೃತ ಎಂಬ ಹೆಸರಿನ ಸತ್ರವನ್ನು ಕೈಗೊಂಡನು. ಅವನು ಪತ್ನಿ ಪುತ್ರರೊಂದಿಗೆ ಒಂದು ಪಕ್ಷ ತಿನ್ನುತ್ತಿದ್ದನು. ಮತ್ತು ಇನ್ನೊಂದು ಪಕ್ಷದಲ್ಲಿ ಪಾರಿವಾಳದಂತೆ ಒಂದು ಅಳತೆ ಭತ್ತವನ್ನು ಸುಲಿದು ತಿನ್ನುತ್ತಿದ್ದನು. ದರ್ಶ ಮತ್ತು ಪೌರ್ಣಮಾಸಗಳನ್ನು ಆಚರಿಸುವ ಆ ವಿಗತಮತ್ಸರನು ದೇವತೆಗಳು ಮತ್ತು ಅತಿಥಿಗಳು ತಿಂದು ಉಳಿದುದರಿಂದ ದೇಹಧರ್ಮವನ್ನು ಪಾಲಿಸುತ್ತಿದ್ದನು. ಸಾಕ್ಷಾತ್ ತ್ರಿಭುವನೇಶ್ವರ ಇಂದ್ರನು ದೇವತೆಗಳ ಸಹಿತ ಪರ್ವ ಪರ್ವಗಳಲ್ಲಿ ಯಜ್ಞದ ಭಾಗವನ್ನು ಸ್ವೀಕರಿಸುತ್ತಿದ್ದನು. ಪರ್ವಕಾಲದಲ್ಲಿ ಅವನು ಮುನಿವೃತ್ತಿಯನ್ನು ಅನುಸರಿಸಿ ಅಂತರಾತ್ಮದಲ್ಲಿ ಪ್ರಹೃಷ್ಟನಾಗಿ ಅತಿಥಿಗಳಿಗೆ ಅನ್ನವನ್ನು ನೀಡುತ್ತಿದ್ದನು. ಆ ಮಹಾತ್ಮನು ಅನ್ನವನ್ನು ನೀಡುತ್ತಿದ್ದಂತಲೆಲ್ಲ ಆ ಮಾತ್ಸರ್ಯಹೀನನ ಪಾತ್ರೆಯಲ್ಲಿನ ಉಳಿದ ಅನ್ನವು ಅತಿಥಿಗಳ ದರ್ಶನದಿಂದ ಹಿಗ್ಗಿ ಹೆಚ್ಚಾಗುತ್ತಿತ್ತು. ವಿಶುದ್ಧನಾಗಿ ತ್ಯಾಗಭಾವದಿಂದ ಆ ಅನ್ನವನ್ನು ನೀಡಿದಾಗಲೆಲ್ಲ ಅದು ನೂರಾರು ಪಟ್ಟು ವೃದ್ಧಿಯಾಗಿ ನೂರಾರು ಪಾರಂಗತ ಬ್ರಾಹ್ಮಣರು ಊಟಮಾಡುತ್ತಿದ್ದರು. ಧರ್ಮಿಷ್ಟ ಸಂಶಿತವ್ರತ ಮುದ್ಗಲನ ಕುರಿತು ದಿಕ್ಕನ್ನೇ ಬಟ್ಟೆಯನ್ನಾಗಿ ಧರಿಸಿದ ದುರ್ವಾಸನು ಕೇಳಿದನು. ಆಗ ಉನ್ಮತ್ತನಂತೆ ಧರಿಸಿದ, ತಲೆಬೋಳಿಸಿಕೊಂಡ ಆ ಮುನಿಯು ವಿವಿಧ ಬೈಗಳಗಳನ್ನು ಉಚ್ಛರಿಸುತ್ತಾ ಅಲ್ಲಿಗೆ ಬಂದನು. ಆಗಮಿಸಿದ ಆ ಮುನಿಸತ್ತಮನು ವಿಪ್ರನಿಗೆ ಹೇಳಿದನು: “ಮುನಿಸತ್ತಮ! ನಾನು ಅನ್ನಾರ್ಥಿಯಾಗಿ ಬಂದಿದ್ದೇನೆ ಎಂದು ತಿಳಿ.” “ನಿನಗೆ ಇದೋ ಸ್ವಾಗತ!” ಎಂದು ಮುದ್ಗಲನು ಮುನಿಗೆ ಉತ್ತರಿಸಿದನು. ಪಾದ್ಯ ಆಚಮನೀಯಗಳೊಂದಿಗೆ ಉತ್ತಮ ಅನ್ನವನ್ನು ಬಡಿಸಿದನು. ಆ ಧೃತವ್ರತ ಅತಿಥಿವ್ರತಿಯು ಹಸಿವೆಯಿಂದ ಬಳಲಿದ್ದ ಹುಚ್ಚನಂತಿದ್ದ ಆ ತಪಸ್ವಿಗೆ ಪರಮ ಶ್ರದ್ಧೆಯಿಂದ ಕುಳ್ಳಿರಿಸಿ ನೀಡಿದನು. ತುಂಬಾ ಹಸಿದಿದ್ದ ಆ ಹುಚ್ಚನು ರಸವತ್ತಾಗಿದ್ದ ಆ ಅನ್ನವೆಲ್ಲವನ್ನೂ ತಿನ್ನಲು ಮುದ್ಗಲನು ಇನ್ನೂ ಹೆಚ್ಚು ನೀಡಿದನು. ಆ ಅನ್ನವನ್ನೂ ತಿಂದು ಎಂಜಲೆಲ್ಲವನ್ನೂ ತನ್ನ ದೇಹಕ್ಕೆ ಬಳಿದುಕೊಂಡು ಎಲ್ಲಿಂದ ಬಂದಿದ್ದನೋ ಅಲ್ಲಿಗೆ ತೆರಳಿದನು.

ಹೀಗೆ ಎರಡನೇ ಪರ್ವಕಾಲವು ಬಂದಾಗಲೂ ದುರ್ವಾಸನು ಭತ್ತವನ್ನು ಕುಟ್ಟಿ ಜೀವಿಸುತ್ತಿದ್ದ ಆ ಮನೀಷಣನ ಬಳಿ ಬಂದು ಅನ್ನವೆಲ್ಲವನ್ನೂ ತಿಂದನು. ಆಗ ನಿರಾಹಾರನಾಗಿ ಆ ಮುನಿಯು ಪುನಃ ಭತ್ತವನ್ನು ಕುಟ್ಟಿದನು. ಹಸಿವೆಯು ಮುದ್ಗಲನ ಸಮಭಾವನೆಯನ್ನು ಕೆಡಿಸಲಿಲ್ಲ. ಮಕ್ಕಳು ಪತ್ನಿಯೊಂದಿಗೆ ಭತ್ತ ಕುಟ್ಟುತ್ತಿದ್ದ ಆ ದ್ವಿಜೋತ್ತಮನನ್ನು ಕ್ರೋಧವಾಗಲೀ, ಮಾತ್ಸರ್ಯವಾಗಲೀ, ಅಪಮಾನವಾಗಲೀ, ಸಂಭ್ರಮವಾಗಲೀ, ಹೊಗಲಿಲ್ಲ. ದುರ್ವಾಸನು ನಿಶ್ಚಯಿಸಿ ಕಾಲಕ್ಕೆ ತಕ್ಕಂತೆ ಆರು ಋತುಗಳಲ್ಲಿ ಭತ್ತಕುಟ್ಟುವ ಧರ್ಮದಲ್ಲಿ ನಿರತನಾದ ಮುನಿಸತ್ತಮನಲ್ಲಿಗೆ ಬಂದನು. ಆದರೆ ಮುನಿಯು ಅವನ ಮನಸ್ಸಿನಲ್ಲಿ ಸ್ವಲ್ಪವೂ ವಿಕಾರಗಳನ್ನು ಕಾಣಲಿಲ್ಲ. ಆ ಶುದ್ಧಸತ್ವನ ನಿರ್ಮಲ ಮನಸ್ಸು ಶುದ್ಧವಾಗಿರುವುದನ್ನೇ ನೋಡಿದನು. ಆಗ ಆ ಮುನಿಯು ಸಂತೋಷಗೊಂಡು ಮುದ್ಗಲನಿಗೆ ಹೇಳಿದನು: “ನಿನ್ನ ಸಮನಾದ ಮಾತ್ಸರ್ಯವರ್ಜಿತ ದಾನಿಯು ಈ ಲೋಕದಲ್ಲಿ ಇಲ್ಲ. ಹಸಿವೆಯು ಧರ್ಮಸಂಜ್ಞೆಯನ್ನು ಮತ್ತು ಧೈರ್ಯವನ್ನು ಬಹುದೂರ ಬಿಸಾಡುತ್ತದೆ. ವಿಷಯಾನುಸರಿಣೀ ನಾಲಿಗೆಯು ರುಚಿಯಿಂದ ಆಕರ್ಶಿತಗೊಳ್ಳುತ್ತದೆ. ಪ್ರಾಣವು ಆಹಾರವನ್ನು ಅವಲಂಬಿಸಿದೆ. ಮನಸ್ಸು ಚಂಚಲ ಮತ್ತು ಅದನ್ನು ನಿಗ್ರಹಿಸುವುದು ಕಷ್ಟ. ಮನಸ್ಸು ಮತ್ತು ಇಂದ್ರಿಯಗಳನ್ನು ಏಕಾಗ್ರವಾಗಿ ಇಟ್ಟುಕೊಳ್ಳುವುದೇ ತಪಸ್ಸೆಂದು ನಿರ್ಧರಿಸಲ್ಪಟ್ಟಿದೆ. ಶ್ರಮದಿಂದ ಸಂಪಾದಿಸಿದುದನ್ನು ಶುದ್ಧಮನಸ್ಸಿನಿಂದ ತ್ಯಜಿಸುವುದು ಕಷ್ಟ. ಆದರೂ ಸಾಧೋ! ಇವೆಲ್ಲವನ್ನೂ ನೀನು ಸಾಧಿಸಿದ್ದೀಯೆ. ನಿನ್ನ ಜೊತೆಯಲ್ಲಿರುವಾಗ ನಾವು ಸಂತೋಷಪಡುತ್ತೇವೆ ಮತ್ತು ಅನುಗೃಹೀತರಾಗಿದ್ದೇವೆ ಎಂದೆನಿಸುತ್ತದೆ. ಇಂದ್ರಿಯಗಳ ಮೇಲಿನ ಜಯ, ಧೈರ್ಯ, ಹಂಚಿಕೊಳ್ಳುವಿಕೆ, ದಮ, ಶಮ, ದಯೆ, ಸತ್ಯ, ಮತ್ತು ಧರ್ಮ ಎಲ್ಲವೂ ನಿನ್ನಲ್ಲಿ ನೆಲಸಿವೆ. ನೀನು ಕರ್ಮಗಳಿಂದ ಲೋಕಗಳನ್ನು ಗೆದ್ದಿದ್ದೀಯೆ ಮತ್ತು ಪರಮ ಗತಿಯನ್ನು ಪಡೆದಿದ್ದೀಯೆ. ಸ್ವರ್ಗವಾಸಿಗಳೂ ಕೂಡ ನಿನ್ನ ದಾನವನ್ನು ತುಂಬಾ ಹೊಗಳುತ್ತಿದ್ದಾರೆ. ಸುಚರಿತವ್ರತ! ಸಶರೀರನಾಗಿಯೇ ನೀನು ಸ್ವರ್ಗಕ್ಕ್ಕೆ ಹೋಗುತ್ತೀಯೆ.”

ಮುನಿ ದುರ್ವಾಸನು ಹೀಗೆ ಹೇಳುತ್ತಿದ್ದಂತೆಯೇ ಹಂಸ ಸಾರಸಗಳಿಂದ ಕೂಡಿದ, ಕಿಂಕಿಣೀಜಾಲಮಾಲೆಗಳಿಂದ ಕೂಡಿದ, ಬಣ್ಣಬಣ್ಣದ, ದಿವ್ಯ ಸುಗಂಧವನ್ನು ಸೂಸುವ, ಬೇಕಾದಲ್ಲಿ ಹೋಗಬಲ್ಲ ವಿಮಾನದಲ್ಲಿ ಕುಳಿತಿದ್ದ ದೇವದೂತನು ಮುದ್ಗಲನ ಬಳಿ ಬಂದನು. ಅವನು ಆ ವಿಪ್ರರ್ಷಿಗೆ ಹೇಳಿದನು: “ನಿನ್ನ ಕರ್ಮಗಳಿಂದ ಗಳಿಸಿರುವ ಈ ವಿಮಾನವನ್ನೇರು. ಮುನೇ! ಪರಮ ಸಂಸಿದ್ಧಿಯನ್ನು ಪಡೆದಿದ್ದೀಯೆ.”

ಹೀಗೆ ಹೇಳಿದ ದೇವದೂತನಿಗೆ ಋಷಿಯು ಕೇಳಿದನು: “ನಿನ್ನಿಂದ ಸ್ವರ್ಗನಿವಾಸಿಗಳ ಗುಣಗಳನ್ನು ಕೇಳಲು ಬಯಸುತ್ತೇನೆ. ದೇವದೂತಕ! ಅಲ್ಲಿ ವಾಸಿಸುವವರ ಗುಣಗಳೇನು? ಅವರ ತಪಸ್ಸೇನು? ಅವರ ಗುರಿಗಳೇನು? ಸ್ವರ್ಗದಲ್ಲಿ ಸ್ವರ್ಗಸುಖವೆಂದರೇನು? ದೋಷಗಳೇನು? ಒಳ್ಳೆಯವರೊಂದಿಗೆ ಏಳೇ ಹೆಜ್ಜೆಗಳನ್ನು ಜೊತೆಯಲ್ಲಿ ನಡೆಯುವುದರಿಂದ ಮಿತ್ರರಾಗುತ್ತಾರೆ ಎಂದು ಕುಲೋಚಿತ ಸಂತರು ಹೇಳುತ್ತಾರೆ. ಮಿತ್ರತ್ವವನ್ನು ಗೌರವಿಸಿ ನಾನು ನಿನ್ನಲ್ಲಿ ಕೇಳುತ್ತಿದ್ದೇನೆ. ಏನೂ ವಿಚಾರಮಾಡದೇ ಅಲ್ಲಿ ಇದ್ದುದನ್ನು ಇದ್ದಹಾಗೆ ನನಗೆ ಯಾವುದು ಒಳ್ಳೆಯದು ಎನ್ನುವುದನ್ನು ಹೇಳು. ನಿನ್ನ ಮಾತನ್ನು ಕೇಳಿದ ನಂತರ ಏನುಮಾಡಬೇಕೋ ಅದನ್ನು ಮಾಡುತ್ತೇನೆ.”

ದೇವದೂತನು ಹೇಳಿದನು: “ಮಹರ್ಷೇ! ನಿನ್ನ ಬುದ್ಧಿಯು ಕೆಲಸಕ್ಕೆ ಬಾರದೇ ಇರುವಂಥಹುದು! ಉತ್ತಮವಾದ, ಗೌರವಾನ್ವಿತವಾದ ಸ್ವರ್ಗಸುಖವನ್ನು ಪಡೆದು ತಿಳಿಯದೇ ಇರುವವನಂತೆ ವಿಮರ್ಶಿಸುತ್ತಿದ್ದೀಯೆ. ಸ್ವರ್ಗವೆಂದು ಕರೆಯಲ್ಪಟ್ಟಿರುವ ಲೋಕವು ನಮ್ಮ ಮೇಲೆ ಇದೆ. ಮೇಲೆ ಹೋಗಲು ದೇವಯಾನಗಳು ಓಡಾಡುವ ಉತ್ತಮ ಮಾರ್ಗವಿದೆ. ತಪಸ್ಸನು ತಪಿಸದ ತಪಸ್ವಿ, ಮಹಾಯಜ್ಞಗಳನ್ನು ಯಾಜಿಸದ ಪುರುಷ, ಸುಳ್ಳುಹೇಳುವವ, ಮತ್ತು ನಾಸ್ತಿಕ ಇವರುಗಳು ಅಲ್ಲಿಗೆ ಹೋಗಲಾರರು. ಧರ್ಮಾತ್ಮರು, ಜಿತಾತ್ಮರು, ಶಾಂತರು, ದಾಂತರು, ಮಾತ್ಸರ್ಯವಿಲ್ಲದವರು, ದಾನ-ಧರ್ಮಗಳಲ್ಲಿ ನಿರತರಾದವರು, ಶೂರರು, ಯುದ್ಧದಲ್ಲಿ ಗಾಯದ ಗುರುತನ್ನು ಪಡೆದ ಪುರುಷರು, ಶಮದಮಗಳಿಂದ ಆತ್ಮವನ್ನು ನಿಯಂತ್ರಣದಲ್ಲಿಟ್ಟುಕೊಂಡವರು, ಒಳ್ಳೆಯವರು ಪುಣ್ಯಕೃತರು ವಾಸಿಸುವ ಆ ಲೋಕಗಳಿಗೆ ಹೋಗುತ್ತಾರೆ. ಅಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ದೇವತೆಗಳು, ಸಾಧ್ಯರು, ವಿಶ್ವೇದೇವರು, ಮರುತರು, ಮಹರ್ಷಿಗಳು, ಯಮ, ಧರ್ಮ, ಗಂಧರ್ವರು, ಹಾಗೆಯೇ ಅಪ್ಸರೆಯರು ವಾಸಿಸುವ, ಬೇಕಾದುದನ್ನು ನೀಡಬಲ್ಲ, ಪ್ರಕಾಶ-ತೇಜೋಮಯ ಶುಭ ಲೋಕಗಳು ಅನೇಕವಿವೆ. ಅಲ್ಲಿ ಮೂವತ್ಮೂರು ಸಾವಿರ ಯೋಜನೆಯ ವಿಸ್ತೀರ್ಣದಲ್ಲಿ ಹಿರಣ್ಮಯ ಪರ್ವತರಾಜ ಮೇರುವಿದೆ. ಅಲ್ಲಿ ಪುಣ್ಯಕರ್ಮಿಗಳು ವಿಹರಿಸುವ ನಂದನ ಮೊದಲಾದ ದೇವ ಉದ್ಯಾನಗಳಿವೆ. ಅಲ್ಲಿ ಹಸಿವು, ಬಾಯಾರಿಕೆ, ದುಃಖ, ಶೀತ, ಉಷ್ಣಗಳ ಭಯ, ಬೀಭತ್ಸ, ಅಶುಭ ಅಥವಾ ರೋಗವಾಗಲೀ ಏನೂ ಇಲ್ಲ. ಅಲ್ಲಿ ಎಲ್ಲಡೆಯಲ್ಲಿಯೂ ಮನೋಜ್ಞವಾದ ಸುಗಂಧ, ಎಲ್ಲೆಡೆಯಲ್ಲಿಯೂ ಸುಖಸ್ಪರ್ಶ, ಮತ್ತು ಎಲ್ಲೆಡೆಯಿಂದಲೂ ಮನಸ್ಸಿಗೆ ಹಿಡಿಯುವ ಶಬ್ಧಗಳು ಕೇಳಿಬರುತ್ತವೆ. ಅಲ್ಲಿ ಶೋಕವಿಲ್ಲ, ವೃದ್ಧಾಪ್ಯವಿಲ್ಲ, ಆಯಾಸ ಪರಿದೇವನೆಗಳಿಲ್ಲ. ಸ್ವಕರ್ಮಫಲಕಾರಣವಾದ ಆ ಲೋಕವು ಈ ರೀತಿಯಿದೆ. ಪುರುಷರು ತಮ್ಮ ಸುಕೃತಗಳಿಂದ ಅಲ್ಲಿರುತ್ತಾರೆ. ಅಲ್ಲಿರುವವರ ಶರೀರಗಳು ಹೊಳೆಯುತ್ತಿರುತ್ತವೆ. ಇದು ಅವರ ಸ್ವಂತ ಕರ್ಮಗಳಿಂದ ಹುಟ್ಟಿರುವುದು. ತಂದೆತಾಯಿಯರ ಕರ್ಮಗಳಿಂದಲ್ಲ. ಅಲ್ಲಿ ಬೆವರಿಲ್ಲ, ದುರ್ಗಂಧವಿಲ್ಲ, ಮಲವಿಲ್ಲ, ಮೂತ್ರವಿಲ್ಲ. ಅಲ್ಲಿ ಧೂಳು ಅವರ ವಸ್ತ್ರವನ್ನು ಹೊಲಸುಮಾಡುವುದಿಲ್ಲ. ಅವರ ದಿವ್ಯಸುಗಂಧದ ಮನೋರಮ ಮಾಲೆಗಳು ಮಾಸುವುದಿಲ್ಲ. ಈ ತರಹದ ವಿಮಾನಗಳಲ್ಲಿ ಸಂಚರಿಸುತ್ತಾರೆ. ಈರ್ಷ್ಯೆ, ಶೋಕ, ಆಯಾಸ, ಮೋಹ, ಮಾತ್ಸ್ಯರ್ಯಗಳನ್ನು ತೊರೆದು ಸ್ವರ್ಗವನ್ನು ಗೆದ್ದವರು ಅಲ್ಲಿ ಸುಖವಾಗಿರುತ್ತಾರೆ. ಇವುಗಳ ಮೇಲೆ ಇನ್ನೂ ಅನೇಕ ದಿವ್ಯ ಗುಣಾನ್ವಿತವಾದ ಲೋಕಗಳಿವೆ. ಮೇಲೆ ಶಕ್ರನ ಲೋಕವಿದೆ. ಅದರ ಮೇಲೆ ತೇಜೋಮಯವಾದ ಶುಭ ಬ್ರಹ್ಮಲೋಕವಿದೆ. ಅಲ್ಲಿ ತಮ್ಮ ಶುಭಕರ್ಮಗಳಿಂದ ಪೂತರಾದ ಋಷಿಗಳು ಹೋಗುತ್ತಾರೆ. ಅಲ್ಲಿ ದೇವತೆಗಳಿಗೂ ದೇವತೆಗಳಾದ ಋಭವ ಎನ್ನುವವರು ವಾಸಿಸುತ್ತಾರೆ. ಅವರ ಲೋಕಗಳು ಪರತರವಾಗಿವೆ ಮತ್ತು ದೇವತೆಗಳೂ ಅಲ್ಲಿ ಯಾಜಿಸುತ್ತಾರೆ. ಅವರು ತಮ್ಮದೇ ಪ್ರಭೆಯಿಂದ ಬೆಳಗುತ್ತಾರೆ ಮತ್ತು ಜನರು ಬಯಸಿದುದನ್ನು ಕೊಡುತ್ತಾರೆ. ಅವರಿಗೆ ಸ್ತ್ರೀಯರಿಂದುಂಟಾಗುವ ತಾಪವಿರುವುದಿಲ್ಲ. ಐಶ್ವರ್ಯವನ್ನು ಹೊಂದಿರುವುದಿಲ್ಲ; ಮಾತ್ಸರ್ಯವಿರುವುದಿಲ್ಲ. ಅವರು ಆಹುತಿಗಳನ್ನು ಸ್ವೀಕರಿಸಿ ವೃದ್ಧಿಯಾಗುವುದಿಲ್ಲ. ಅಮೃತಭೋಜನವನ್ನೂ ಮಾಡಿದವರಲ್ಲ. ಅವರು ದಿವ್ಯಶರೀರವನ್ನು ಹೊಂದಿರುತ್ತಾರೆ. ವಿಗ್ರಹ ಮೂರ್ತಿಗಳಲ್ಲ. ಈ ಸನಾತನ ದೇವರ ದೇವತೆಗಳು ಸುಖವನ್ನು ಬಯಸಿ ಸುಖದಿಂದಿರುವುದಿಲ್ಲ. ಅವರು ಕಲ್ಪಗಳು ಬದಲಾಗುವಾಗ ಬದಲಾಗುವುದಿಲ್ಲ. ಅವರಿಗೆ ವೃದ್ಧಾಪ್ಯ, ಮೃತ್ಯುವು ಎಲ್ಲಿದೆ? ಪ್ರೀತಿ ಸುಖಗಳೂ ಇಲ್ಲ. ದುಃಖ ಸುಖಗಳಿಲ್ಲದ ಅವರಿಗೆ ರಾಗದ್ವೇಷಗಳು ಎಲ್ಲಿಂದ? ಅವರ ಪರಮ ಗತಿಯನ್ನು ದೇವತೆಗಳು ಕೂಡ ಬಯಸುತ್ತಾರೆ. ಆ ಪರಮಸಿದ್ಧಿಯನ್ನು ಪಡೆಯುವುದು ಕಷ್ಟ ಮತ್ತು ಕಾಮಗೋಚರರಿಗೆ ಅಗಮ್ಯ. ಅಂಥಹವರ ಸಂಖ್ಯೆ ಮೂವತ್ತುಮೂರು. ಅವರ ಲೋಕಕ್ಕೆ ವಿಧಿಪೂರ್ವಕವಾಗಿ ನಿಯಮಗಳಿಂದ ಶ್ರೇಷ್ಠ ದಾನಮಾಡಿದವರು ಹೋಗುತ್ತಾರೆ. ನೀನು ಮಾಡಿದ ದಾನಗಳ ಮೂಲಕ ನೀನೂ ಕೂಡ ಪ್ರಭೆಯಿಂದ ದ್ಯೋತಿಸಲ್ಪಟ್ಟ ಈ ಸುಖವನ್ನು ಪಡೆದಿದ್ದೀಯೆ. ತಪಸ್ಸಿನಿಂದ ಸುಕೃತಗಳಿಂದ ಪಡೆದ ಅದನ್ನು ಅನುಭೋಗಿಸು. ಇದು ಸ್ವರ್ಗಲೋಕದ ನಾನಾವಿಧದ ಸುಖದ ಗುಣಗಳು. ಈಗ ನಿನಗೆ ಹೇಳುವ ದೋಷಗಳ ಕುರಿತೂ ಕೇಳು. ದಿವಿಯಲ್ಲಿ ಮೊದಲೇ ಮಾಡಿದ ಕರ್ಮಗಳ ಫಲವನ್ನು ಅನುಭವಿಸಬಹುದೇ ಹೊರತು ಇತರ ಕರ್ಮಗಳನ್ನು ಮಾಡಲಿಕ್ಕಾಗುವುದಿಲ್ಲ. ಹಿಂದಿನ ಕರ್ಮಗಳ ಫಲಗಳನ್ನು ಸಂಪೂರ್ಣವಾಗಿ ಅನುಭವಿಸಬೇಕು ಮತ್ತು ಅದು ಮುಗಿದ ನಂತರ ಅಲ್ಲಿಂದ ಪತನವನ್ನು ಹೊಂದುತ್ತಾನೆ ಎನ್ನುವುದು ನನ್ನ ಪ್ರಕಾರ ಅಲ್ಲಿಯ ದೋಷ. ಆ ಶ್ರೇಷ್ಠ ಸ್ಥಾನದಲ್ಲಿದ್ದುಕೊಂಡು, ದೀಪ್ತ ಶ್ರೀಯನ್ನು ಹೊಂದಿದ್ದು ನಂತರ ಪರಿತಪಿಸುವುದು ಮತ್ತು ದುಃಖಪಡುವುದನ್ನು ನೋಡುವುದು ದುಷ್ಕರ. ಕೆಳಗೆ ಬೀಳುವವರ ಸಂಜ್ಞೆಗಳು ಮೋಹದಿಂದ ಕೂಡಿದ್ದು ರಜಸ್ಸಿನಿಂದ ತುಂಬಿರುತ್ತವೆ. ಬಾಡಿಹೋಗುತ್ತಿರುವ ಮಾಲೆಗಳಂತೆ ಬೀಳುತ್ತಿರುವವರನ್ನು ಭಯವು ಕವಿಯುತ್ತದೆ. ಈ ದಾರುಣ ದೋಷಗಳು ಬ್ರಹ್ಮಭವನದವರೆಗೂ ಇದೆ. ಸುಕೃತ ಮಾನವರು ನಾಕಲೋಕದಲ್ಲಿ ಅಗಣಿತ ಗುಣಗಳನ್ನು ಅನುಭವಿಸುತ್ತಾರೆ. ಸ್ವರ್ಗದಿಂದ ಚ್ಯುತರಾದ ಶ್ರೇಷ್ಠರು ಶುಭಾನುಶಯ ಯೋಗದಿಂದ ಮನುಷ್ಯರಲ್ಲಿ ಹುಟ್ಟುತ್ತಾರೆ. ಇದು ಇದರ ಇನ್ನೊಂದು ಗುಣ. ಅಲ್ಲಿಯೂ ಕೂಡ ಆ ಸುಮಹಾಭಾಗರು ತಿಳಿದವರಾಗಿದ್ದರೆ ಸುಖಗಳಿಗೆ ಭಾಗಿಯಾಗುತ್ತಾರೆ. ಇಲ್ಲದಿದ್ದರೆ ಕೆಳಗೆ ಹೋಗುತ್ತಾರೆ. ಇಲ್ಲಿ ಮಾಡಿದ ಕರ್ಮಗಳನ್ನು ಮುಂದಿನದರಲ್ಲಿ ಅನುಭವಿಸುತ್ತಾನೆ. ಇದು ಕರ್ಮಭೂಮಿಯಾಗಿದ್ದರೆ ಅದನ್ನು ಫಲಭೂಮಿಯೆಂದು ತಿಳಿಯುತ್ತಾರೆ. ಮುದ್ಗಲ! ನನಗೆ ಕೇಳಿದ ಎಲ್ಲವನ್ನೂ ನಿನಗೆ ಹೇಳಿದ್ದೇನೆ. ನಿನಗೆ ಒಳ್ಳೆಯ ಅನುಕಂಪವಿದ್ದರೆ ತಡಮಾಡದೇ ಹೋಗೋಣ.”

ಇದನ್ನು ಕೇಳಿದ ಮೌದ್ಗಲ್ಯನು ಮನಸ್ಸಿನಲ್ಲಿಯೇ ವಿಮರ್ಶಿಸಿದನು. ವಿಮರ್ಶಿಸಿ ಆ ಮುನಿಶ್ರೇಷ್ಠನು ದೇವದೂತನಿಗೆ ಹೇಳಿದನು. “ಗೆಳೆಯ! ದೇವದೂತ! ನಿನಗೆ ನಮಸ್ಕಾರಗಳು. ಯಥಾಸುಖವಾಗಿ ಹೋಗು. ಮಹಾದೋಷ ಅಥವಾ ಗುಣಗಳಿಂದ ಕೂಡಿದ ಸ್ವರ್ಗದಿಂದ ನನಗೇನೂ ಕೆಲಸವಿಲ್ಲ. ಸ್ವರ್ಗವನ್ನು ಭೋಗಿಸಿದ ನಂತರ ಆ ಮಹಾದುಃಖ ಮತ್ತು ಸುದಾರುಣ ಪರಿತಾಪದ ಪತನವಿದೆ. ಆದುದರಿಂದ ನನಗೆ ಸ್ವರ್ಗವು ಬೇಕಾಗಿಲ್ಲ. ಎಲ್ಲಿ ಶೋಕವಿಲ್ಲವೋ, ವ್ಯಥೆಯಿಲ್ಲವೋ, ಚಲನೆಯಿಲ್ಲವೋ ಕೇವಲ ಆ ಅತ್ಯಂತವಾದ ಸ್ಥಾನದ ಮಾರ್ಗವಾಗಿ ಹೋಗಲು ಬಯಸುತ್ತೇನೆ.”

ಈ ಮಾತುಗಳನ್ನಾಡಿ ಆ ಮುನಿಯು ದೇವದೂತನನ್ನು ಕಳುಹಿಸಿದನು. ಭತ್ತಕುಟ್ಟುವ ವೃತ್ತಿಯನ್ನು ಬಿಟ್ಟು ಉತ್ತಮ ಶಾಂತಿಯನ್ನು ಹೊಂದಿದನು. ನಿಂದನೆ ಸ್ತುತಿಗಳನ್ನು ಸಮನಾಗಿ ಕಾಣುತ್ತಾ, ಕಲ್ಲು ಕಾಂಚನಗಳನ್ನು ಸಮನಾಗಿ ಕಾಣುತ್ತಾ ಜ್ಞಾನಯೋಗದಿಂದ ಶುದ್ಧನಾಗಿ ಧ್ಯಾನನಿತ್ಯನಾದನು. ಧ್ಯಾನಯೋಗದಿಂದ ಬಲವನ್ನು ಪಡೆದು ಅನುತ್ತಮ ಬುದ್ಧಿಯನ್ನು ಪಡೆದು ನಿರ್ವಾಣಲಕ್ಷಣದ ಶಾಶ್ವತವಾದ ಪರಮ ಸಿದ್ಧಿಯನ್ನು ಪಡೆದನು.

Image result for flowers against white background

The other stories:

  1. ಆರುಣಿ ಉದ್ದಾಲಕ
  2. ಉಪಮನ್ಯು
  3. ಸಮುದ್ರಮಥನ
  4. ಗರುಡೋತ್ಪತ್ತಿ; ಅಮೃತಹರಣ
  5. ಶೇಷ
  6. ಶಕುಂತಲೋಪಾಽಖ್ಯಾನ
  7. ಯಯಾತಿ
  8. ಸಂವರಣ-ತಪತಿ
  9. ವಸಿಷ್ಠೋಪಾಽಖ್ಯಾನ
  10. ಔರ್ವೋಪಾಽಖ್ಯಾನ
  11. ಸುಂದೋಪಸುಂದೋಪಾಽಖ್ಯಾನ
  12. ಸಾರಂಗಗಳು
  13. ಸೌಭವಧೋಪಾಽಖ್ಯಾನ
  14. ನಲೋಪಾಽಖ್ಯಾನ
  15. ಅಗಸ್ತ್ಯೋಪಾಽಖ್ಯಾನ
  16. ಭಗೀರಥ
  17. ಋಷ್ಯಶೃಂಗ
  18. ಪರಶುರಾಮ
  19. ಚ್ಯವನ
  20. ಮಾಂಧಾತ
  21. ಸೋಮಕ-ಜಂತು
  22. ಗಿಡುಗ-ಪಾರಿವಾಳ
  23. ಅಷ್ಟಾವಕ್ರ
  24. ರೈಭ್ಯ-ಯವಕ್ರೀತ
  25. ತಾರ್ಕ್ಷ್ಯ ಅರಿಷ್ಠನೇಮಿ
  26. ಅತ್ರಿ
  27. ವೈವಸ್ವತ ಮನು
  28. ಮಂಡೂಕ-ವಾಮದೇವ
  29. ಧುಂಧುಮಾರ
  30. ಮಧು-ಕೈಟಭ ವಧೆ
  31. ಕಾರ್ತಿಕೇಯನ ಜನ್ಮ
  32. ಮುದ್ಗಲ
  33. ರಾಮೋಪಾಽಖ್ಯಾನ: ರಾಮಕಥೆ
  34. ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
  35. ಇಂದ್ರವಿಜಯೋಪಾಽಖ್ಯಾನ
  36. ದಂಬೋದ್ಭವ
  37. ಮಾತಲಿವರಾನ್ವೇಷಣೆ
  38. ಗಾಲವ ಚರಿತೆ
  39. ವಿದುಲೋಪಾಽಖ್ಯಾನ
  40. ತ್ರಿಪುರವಧೋಪಾಽಖ್ಯಾನ
  41. ಪರಶುರಾಮನು ಅಸ್ತ್ರಗಳನ್ನು ಪಡೆದುದು
  42. ಪ್ರಭಾಸಕ್ಷೇತ್ರ ಮಹಾತ್ಮೆ
  43. ತ್ರಿತಾಖ್ಯಾನ
  44. ಸಾರಸ್ವತೋಪಾಽಖ್ಯಾನ
  45. ವಿಶ್ವಾಮಿತ್ರ
  46. ವಸಿಷ್ಠಾಪವಾಹ ಚರಿತ್ರೆ
  47. ಬಕ ದಾಲ್ಭ್ಯನ ಚರಿತ್ರೆ
  48. ಕಪಾಲಮೋಚನತೀರ್ಥ ಮಹಾತ್ಮೆ
  49. ಮಂಕಣಕ
  50. ವೃದ್ಧಕನ್ಯೆ
  51. ಬದರಿಪಾಚನ ತೀರ್ಥ
  52. ಕುಮಾರನ ಪ್ರಭಾವ-ಅಭಿಷೇಕ
  53. ಅಸಿತದೇವಲ-ಜೇಗೀಷವ್ಯರ ಕಥೆ
  54. ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
  55. ಕುರುಕ್ಷೇತ್ರ ಮಹಾತ್ಮೆ
  56. ಶಂಖಲಿಖಿತೋಪಾಽಖ್ಯಾನ
  57. ಜಾಮದಗ್ನೇಯೋಪಾಽಖ್ಯಾನ
  58. ಷೋಡಶರಾಜಕೀಯೋಪಾಽಖ್ಯಾನ

Leave a Reply

Your email address will not be published. Required fields are marked *