ಭಗೀರಥ

ಭಗೀರಥನು ಗಂಗೆಯನ್ನು ಭೂಮಿಗೆ ತಂದು ಬರಿದಾದ ಸಾಗರಗಳನ್ನು ತುಂಬಿಸಿದ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ತೀರ್ಥಯಾತ್ರಾ ಪರ್ವ (ಅಧ್ಯಾಯ ೧೦೪-೧೦೮) ದಲ್ಲಿ ಬರುತ್ತದೆ. ಯುಧಿಷ್ಠಿರನ ತೀರ್ಥಯಾತ್ರಾ ಸಮಯದಲ್ಲಿ ಈ ಕಥೆಯನ್ನು ಋಷಿ ಲೋಮಶನು ಯುಧಿಷ್ಠಿರನಿಗೆ ಹೇಳಿದನು.

ಇಕ್ಷ್ವಾಕುಗಳ ಕುಲದಲ್ಲಿ ಸಗರ ಎಂಬ ಹೆಸರಿನ ರೂಪ, ಸಂಪತ್ತು ಮತ್ತು ಬಲಾನ್ವಿತ ರಾಜನು ಜನಿಸಿದನು. ಆ ಪ್ರತಾಪವಂತನಿಗೆ ಪುತ್ರರಿರಲಿಲ್ಲ. ಅವನು ಹೈಹಯರನ್ನು ಹೊರಹೊಟ್ಟು, ತಾಲಜಂಘರನ್ನು ಮತ್ತು ಇತರ ರಾಜರನ್ನು ವಶೀಕರಿಸಿ ತನ್ನ ರಾಜ್ಯವನ್ನು ಆಳಿದನು. ಅವನಿಗೆ ರೂಪಯೌವನದರ್ಪಿತರಾದ ಇಬ್ಬರು ಪತ್ನಿಯರಿದ್ದರು - ವಿದರ್ಭರಾಜಕುಮಾರಿ ಮತ್ತು ಶಿಬಿಯ ಮಗಳು. ಪುತ್ರರನ್ನು ಬಯಸಿದ ಆ ನೃಪತಿಯು ತನ್ನ ಇಬ್ಬರೂ ಪತ್ನಿಯರೊಂದಿಗೆ ಕೈಲಾಸ ಗಿರಿಯನ್ನು ಸೇರಿ ಮಹಾ ತಪಸ್ಸನ್ನು ಆಚರಿಸಿದನು. ಯೋಗಸಮನ್ವಿತನಾಗಿ ಮಹಾತಪಸ್ಸನ್ನು ಅವನು ತಪಿಸುತ್ತಿರಲು ಅಲ್ಲಿಗೆ ಮಹಾತ್ಮ, ಮುಕ್ಕಣ್ಣ, ತ್ರಿಪುರಮರ್ದನ, ಶಂಕರ, ಭವ, ಈಶ, ಶೂಲಪಾಣಿ, ಪಿನಾಕಿ, ತ್ರ್ಯಂಬಕ, ಉಗ್ರೇಶ, ಬಹುರೂಪಿ, ಉಮಾಪತಿ ಶಿವನು ಬಂದನು. ಆ ವರದನನ್ನು ಕಂಡ ತಕ್ಷಣ ಪತ್ನಿಯರ ಸಹಿತ ಆ ಮಹಾಬಾಹು ನೃಪನು ಸಾಷ್ಟಾಂಗ ನಮಸ್ಕರಿಸಿ ಪುತ್ರನನ್ನು ಬೇಡಿದನು. ಅವನಿಂದ ಸಂತೋಷಗೊಂಡ ಹರನು ಭಾರ್ಯೆಯರೊಂದಿಗಿದ್ದ ನೃಪಸತ್ತಮನಿಗೆ ಹೇಳಿದನು: “ನೃಪತೇ! ನೀನು ಯಾವ ಮುಹೂರ್ತದಲ್ಲಿ ನನ್ನಲ್ಲಿ ವರವನ್ನು ಕೇಳಿಕೊಂಡಿದ್ದೀಯೋ ಅದರಂತೆ ನಿನಗೆ ಅರವತ್ತು ಸಾವಿರ ಶೂರರಾದ, ಸಮರದರ್ಪಿತ ಪುತ್ರರು ನಿನ್ನ ಪತ್ನಿಯೊಬ್ಬಳಲ್ಲಿ ಹುಟ್ಟುತ್ತಾರೆ. ಆದರೆ ಅವರೆಲ್ಲರೂ ಒಟ್ಟಿಗೇ ಕ್ಷಯವನ್ನು ಹೊಂದುವರು. ಇನ್ನೊಬ್ಬ ಪತ್ನಿಯಲ್ಲಿ ವಂಶವನ್ನು ನಡೆಸಿಕೊಂಡು ಹೋಗುವ ಒಬ್ಬನೇ ಶೂರನು ಹುಟ್ಟುತ್ತಾನೆ.” ಹೀಗೆ ಹೇಳಿದ ರುದ್ರ ಶಂಕರನು ಅಲ್ಲಿಯೇ ಅಂತರ್ಧಾನನಾದನು.

ಅನಂತರ ರಾಜ ಸಗರನು ತನ್ನ ಈರ್ವರು ಪತ್ನಿಯರೊಂದಿಗೆ ಅತೀವ ಸಂತೋಷಗೊಂಡು ಅರಮನೆಗೆ ಮರಳಿದನು. ಆಗ ಅವರೀರ್ವರು ಕಮಲೇಕ್ಷಣೆ ಭಾರ್ಯೆಯರು - ವೈದರ್ಭಿ ಮತ್ತು ಶೈಭ್ಯೆ - ಗರ್ಭಿಣಿಯರಾದರು. ಕಾಲಾಂತರದಲ್ಲಿ ವೈದರ್ಭಿಯ ಗರ್ಭದಿಂದ ಚೀನೀಕಾಯಿಯಂತಹ ಪಿಂಡವು ಹುಟ್ಟಿತು ಮತ್ತು ಶೈಭ್ಯೆಯಲ್ಲಿ ದೇವರೂಪಿ, ಕುಮಾರ ಪುತ್ರನು ಹುಟ್ಟಿದನು. ರಾಜನು ಆ ಚೀನೀಕಾಯಿಯನ್ನು (ಗರ್ಭಪಿಂಡವನ್ನು) ಬಿಸಾಡಲು ಮನಸ್ಸುಮಾಡಿದಾಗ ಅಂತರಿಕ್ಷದಿಂದ ಗಂಭೀರ ಧ್ವನಿಯಲ್ಲಿ ವಾಣಿಯೊಂದು ಕೇಳಿಸಿತು: “ರಾಜನ್! ದುಡಕಬೇಡ! ನಿನ್ನ ಪುತ್ರರನ್ನು ತ್ಯಜಿಸಬೇಡ! ಈ ಚೀನೀಕಾಯಿಯಿಂದ ಬೀಜಗಳನ್ನು ತೆಗೆದು, ಒಂದೊಂದನ್ನೂ ಪ್ರತ್ಯೇಕ ತುಪ್ಪ ತುಂಬಿದ ಕೊಡಗಳಲ್ಲಿ ಇಟ್ಟು ಜಾಗರೂಕತೆಯಿಂದ ಕಾದಿರಿಸು. ಅನಂತರ ಅರವತ್ತು ಸಾವಿರ ಪುತ್ರರನ್ನು ಪಡೆಯುತ್ತೀಯೆ. ಹೀಗೆಯೇ ನಿನ್ನ ಪುತ್ರರು ಜನಿಸಬೇಕೆಂದು ಮಹಾದೇವನು ನಿರ್ಧರಿಸಿದ್ದಾನೆ. ಬೇರೆ ಯಾವ ಕೆಲಸ-ಯೋಚನೆಗಳನ್ನೂ ನೀನು ಮಾಡಬಾರದು.”

ಈ ಆಕಾಶವಾಣಿಯನ್ನು ಕೇಳಿ ಆ ರಾಜನು ಹೇಳಿದಂತೆಯೇ ಶ್ರದ್ಧೆಯಿಂದ ಮಾಡಿದನು. ಹೀಗೆ ಆ ರಾಜರ್ಷಿಗೆ ರುದ್ರನ ಪ್ರಸಾದದಿಂದ ಅರವತ್ತು ಸಾವಿರ ಅಪ್ರತಿಮ ತೇಜಸ್ವಿ ಮಕ್ಕಳು ಜನಿಸಿದರು. ಅವರು ಘೋರರೂ, ಕ್ರೂರಕರ್ಮಿಗಳೂ, ಆಕಾಶದಲ್ಲಿ ಸರ್ಪಗಳಂತೆ ಹರಿದಾಡುವವರೂ ಆಗಿದ್ದರು. ಬಹುಸಂಖ್ಯೆಯಲ್ಲಿದ್ದ ಅವರು ಅಮರರನ್ನೂ ಸೇರಿ ಸರ್ವಲೋಕಗಳನ್ನೂ ಅಣಕಿಸಿದರು. ಆ ಶೂರ ಸಮರಶಾಲಿಗಳು ದೇವತೆಗಳನ್ನೂ, ಗಂಧರ್ವ-ರಾಕ್ಷಸರನ್ನೂ ಮತ್ತು ಸರ್ವ ಜೀವಿಗಳನ್ನೂ ಬಾಧಿಸುತ್ತಿದ್ದರು. ಈ ಮಂದಬುದ್ದಿ ಸಾಗರರಿಂದ ಲೋಕಗಳು ಧ್ವಂಸಗೊಳಿಸಲ್ಪಟ್ಟಾಗ ದೇವತೆಗಳೊಂದಿಗೆ ಎಲ್ಲರೂ ಬ್ರಹ್ಮನ ಶರಣು ಹೊಕ್ಕರು. ಸರ್ವಲೋಕಪಿತಾಮಹ ಮಹಾಭಾಗನು ಅವರಿಗೆ ಹೇಳಿದನು: “ದೇವತೆಗಳೇ! ಎಲ್ಲರೂ ಲೋಕಗಳೊಂದಿಗೆ ಎಲ್ಲಿಂದ ಬಂದಿದ್ದೀರೋ ಅಲ್ಲಿಗೆ ಮರಳಿ! ಸ್ವಲ್ಪವೇ ಸಮಯದಲ್ಲಿ ಮಹಾ ಸಾಗರರ ಮಹಾಘೋರ ಕ್ಷಯವು ಅವರೇ ಮಾಡುವ ಕರ್ಮದಿಂದ ನಡೆಯುತ್ತದೆ.” ಇದನ್ನು ಕೇಳಿ ದೇವತೆಗಳೂ ಪ್ರಜೆಗಳೂ ಪಿತಾಮಹನ ಅಪ್ಪಣೆಪಡೆದು ಎಲ್ಲಿಂದ ಬಂದಿದ್ದರೋ ಅಲ್ಲಿಗೆ ತೆರಳಿದರು.

ಬಹಳಷ್ಟು ದಿನಗಳ򠈱ಕಳೆದ ನಂತರ ವೀರ್ಯವಾನ್ ರಾಜ󱭐ಸಗರನು ಅಶ್ವಮೇಧಯಾಗದ ದೀಕ್ಷೆಯನ್ನು ತೆಗೆದುಕೊಂಡನು. ಆ ಅಶ್ವವು ಪುತ್ರರ ರಕ್ಷಣೆಯಲ್ಲಿ ಭೂಮಿಯನ್ನೆಲ್ಲಾ ತಿರುಗಾಡಿತು. ಅದು ನೀರೇ ಇಲ್ಲದೆ ಭಯಂಕರವಾಗಿ ಕಾಣುತ್ತಿದ್ದ ಸಮುದ್ರವನ್ನು ಪ್ರವೇಶಿಸಿತು. ಪ್ರಯತ್ನದಿಂದ ರಕ್ಷಣೆಗೊಳಗೊಂಡಿದ್ದರೂ ಅದು ಅಲ್ಲಿಯೇ ಅಂತರ್ಧಾನವಾಯಿತು. ಆಗ ಸಾಗರರು ಆ ಉತ್ತಮ ಕುದುರೆಯನ್ನು ಯಾರೋ ಅಪಹರಿಸಿದ್ದಾರೆಂದು ಯೋಚಿಸಿ ತಂದೆಯಲ್ಲಿಗೆ ಬಂದು ಕುದುರೆಯು ಕಾಣದಂತೆ ಯಾರಿಂದಲೋ ಅಪಹರಿಸಲ್ಪಟ್ಟಿದೆ ಎಂದು ತಿಳಿಸಿದರು. ದೀಕ್ಷೆಯಲ್ಲಿದ್ದ ಅವನು “ಎಲ್ಲರೂ ಸೇರಿ ಎಲ್ಲ ದಿಕ್ಕುಗಳಲ್ಲಿಯೂ ಕುದುರೆಯನ್ನು ಹುಡುಕಿ!” ಎಂದು ಆಜ್ಞಾಪಿಸಿದನು. ಅನಂತರ ತಂದೆಯ ಆಜ್ಞೆಯಂತೆ ಅವರು ಭೂಮಿಯ ಮೇಲೆಲ್ಲಾ, ಎಲ್ಲ ದಿಕ್ಕುಗಳಲ್ಲಿಯೂ ಆ ಕುದುರೆಯನ್ನು ಹುಡುಕಿದರು. ಆ ಸಾಗರರೆಲ್ಲರೂ ಪರಸ್ಪರರನ್ನು ಸೇರಿದರು. ಆದರೆ ಅವರು ಕುದುರೆಯನ್ನಾಗಲೀ ಕುದುರೆಯನ್ನು ಕದ್ದವರನ್ನಾಗಲೀ ಹುಡುಕಲಿಕ್ಕಾಗಲಿಲ್ಲ. ತಂದೆಯ ಬಳಿ ಮರಳಿಬಂದು ಕೈಜೋಡಿಸಿ ಹೇಳಿದರು: “ನೃಪ! ನಿನ್ನ ಶಾಸನದಂತೆ ನಾವು ಸಮುದ್ರ, ವನ, ದ್ವೀಪಗಳನ್ನೂ, ನದೀಕಂದರಗಳನ್ನೂ, ಪರ್ವತ ವನಪ್ರದೇಶಗಳನ್ನೂ ಸೇರಿ ಇಡೀ ಭೂಮಿಯನ್ನು ಹುಡುಕಿದೆವು. ಆದರೆ ಕುದುರೆಯಾಗಲೀ ಕುದುರೆಯನ್ನು ಅಪಹರಿಸಿದವರಾಗಲೀ ದೊರೆಯಲಿಲ್ಲ.”  ಅವರ ಆ ಮಾತುಗಳನ್ನು ಕೇಳಿ ಕ್ರೋಧಮೂರ್ಛಿತನಾದ ರಾಜನು ದೈವವಶನಾಗಿ ಅವರೆಲ್ಲರಿಗೆ ಈ ಮಾತನ್ನಾಡಿದನು: “ಬರಬೇಡಿ! ಹೋಗಿ! ಮಕ್ಕಳೇ! ಇನ್ನೊಮ್ಮೆ ಕುದುರೆಯನ್ನು ಹುಡುಕಿ! ಯಜ್ಞದ ಕುದುರೆಯಿಲ್ಲದೇ ಹಿಂದಿರುಗಿ ಬರಬೇಡಿ!” ಆಗ ಆ ಸಗರಾತ್ಮಜರು ಅವನ ಸಂದೇಶವನ್ನು ಸ್ವೀಕರಿಸಿ, ಪುನಃ ಇಡೀ ಭೂಮಿಯಲ್ಲಿ ಅಲೆದಾಡಿ ಹುಡುಕಿದರು. ಅಲ್ಲಿ ಒಂದು ಬಿಲವನ್ನು ಕಂಡು ಸಗರಾತ್ಮಜರು ಆ ಸಮುದ್ರದ ತಳವನ್ನು ಹಾರೆ ಗುದ್ದಲಿಗಳಿಂದ ಅಗೆಯತೊಡಗಿದರು. ಹಾಗೆ ಸಾಗರರು ಒಟ್ಟಿಗೇ ಅಗೆಯುತ್ತಿರಲು ಸಮುದ್ರವು ಎಲ್ಲ ಕಡೆಯಿಂದಲೂ ನೋವನ್ನು ಅನುಭವಿಸಿ ಪರಮ ದುಃಖವನ್ನು ಅನುಭವಿಸಿತು. ಅಸುರರು, ಉರಗಗಳು, ರಾಕ್ಷಸರು ಮತ್ತು ಇತರ ವಿವಿಧ ಜೀವಿಗಳು ಸಾಗರರಿಂದ ವಧಿಸಲ್ಪಡುವಾಗ ಆರ್ತನಾದಗೈದರು. ನೂರಾರು ಸಹಸ್ರಾರು ಪ್ರಾಣಿಗಳು ತಲೆಗಳನ್ನು ಕಡಿದು, ದೇಹತುಂಡಾಗಿ, ಎಲುಬು ಮತ್ತು ಬುರುಡೆಗಳು ಪುಡಿಯಾಗಿ ಬಿದ್ದಿರುವುದು ಕಂಡುಬಂದಿತು. ಈ ರೀತಿ ಅವರು ಮಕರಾಲಯದವರೆಗೂ ಸಮುದ್ರವನ್ನು ಅಗೆದು ತುಂಬಾ ಸಮಯವು ಕಳೆದರೂ ಕುದುರೆಯು ಕಾಣಲಿಲ್ಲ. ಸಮುದ್ರದ ಪೂರ್ವೋತ್ತರ ಪ್ರದೇಶದಲ್ಲಿ ಸಿಟ್ಟಿಗೆದ್ದ ಸಗರನ ಮಕ್ಕಳು ಪಾತಾಳದವರೆಗೂ ಅಗೆದರು. ಅಲ್ಲಿ ಮೇಯುತ್ತಿದ್ದ ಕುದುರೆಯನ್ನು ಕಂಡರು. ಅಲ್ಲಿಯೇ ತೇಜೋರಾಶಿಯ ಮಹಾತ್ಮ ಅನುತ್ತಮ ತಪಸ್ಸಿನಿಂದ ಉರಿಯುತ್ತಿರುವ ಅಗ್ನಿಯ ಜ್ವಾಲೆಯಂತೆ ಬೆಳಗುತ್ತಿರುವ ಕಪಿಲನನ್ನೂ ನೋಡಿದರು.

ಆ ಕುದುರೆಯನ್ನು ಕಂಡ ಅವರ ದೇಹವು ಸಂತೋಷದಿಂದ ಪುಳಕಿತಗೊಂಡಿತು. ಕಾಲಚೋದಿತರಾಗಿ, ಅಲ್ಲಿದ್ದ ಮಹಾತ್ಮ ಕಪಿಲನನ್ನು ಅನಾದರಿಸಿ, ಸಂಕೃದ್ಧರಾಗಿ ಅಶ್ವವನ್ನು ಹಿಡಿಯಲು ಬಯಸಿ ಓಡಿ ಬಂದರು. ಆಗ ಯಾವ ಮುನಿಸತ್ತಮ ಕಪಿಲನನ್ನು ವಾಸುದೇವನೆಂದು ಹೇಳುತ್ತಾರೋ ಆ ಮುನಿಸತ್ತಮ ಕಪಿಲನು ಕೃದ್ಧನಾದನು. ಅವನು ಕಣ್ಣನ್ನು ತೆರೆದು ತನ್ನ ತೇಜಸ್ಸನ್ನು ಅವರ ಮೇಲೆ ಎಸೆದನು. ಆ ಸುಮಹಾತೇಜಸ್ವಿಯು ಮಂದಬುದ್ಧಿ ಸಾಗರರನ್ನು ಸುಟ್ಟುಹಾಕಿದನು. ಅವರು ಭಸ್ಮೀಭೂತರಾದುದನ್ನು ನೋಡಿದ ಸುಮಹಾತಪ ನಾರದನು ಸಗರನಲ್ಲಿಗೆ ಬಂದು ಅವನಿಗೆ ಅಲ್ಲಿ ನಡೆದುದನ್ನು ನಿವೇದಿಸಿದನು. ಮುನಿಯ ಬಾಯಿಂದ ಆ ಘೋರ ವಚನವನ್ನು ಕೇಳಿದ ರಾಜನು ಒಂದು ಮುಹೂರ್ತಕಾಲ ಮನಸ್ಸನ್ನೇ ಕಳೆದುಕೊಂಡು ಸ್ಥಾಣುವಿನ ವಾಕ್ಯವನ್ನು ನೆನಪಿಸಿಕೊಂಡನು. ತನಗೆ ತಾನೇ ಆಶ್ವಾಸನೆಯನ್ನಿತ್ತು, ಕುದುರೆಯ ಕುರಿತು ಚಿಂತಿಸಿದನು. ಆಗ ಅಸಮಂಜಸನ ಮಗ, ತನ್ನ ಮೊಮ್ಮಗ ಅಂಶುಮಂತನನ್ನು ಕರೆದು ಹೇಳಿದನು: “ಆ ಅರವತ್ತು ಸಾವಿರ ಅಮಿತೌಜಸ ಪುತ್ರರು ನನಗಾಗಿ ತೇಜಸ್ವಿ ಕಪಿಲನ ತೇಜಸ್ಸಿಗೆ ಸಿಲುಕಿ ನಿಧನಹೊಂದಿದ್ದಾರೆ. ನಿನ್ನ ತಂದೆಯನ್ನು ನಾನು ಧರ್ಮಸಂರಕ್ಷಣೆ ಮಾಡಲೋಸುಗ ಪೌರರ ಹಿತವನ್ನು ಬಯಸಿ ಪರಿತ್ಯಜಿಸಿದ್ದೇನೆ.”

ಅಸಮಂಜಸನೆಂದು ಖ್ಯಾತ ಸಗರನ ಮಗನಿದ್ದನು. ಅವನು ಶೈಭ್ಯೆಯಲ್ಲಿ ಜನಿಸಿದ್ದನು. ಅವನು ದುರ್ಬಲ ಪೌರರ ಮಕ್ಕಳನ್ನು ಕಾಲುಗಳಲ್ಲಿ ಹಿಡಿದು ನದಿಯಲ್ಲಿ ಎಸೆಯತ್ತಿದ್ದನು. ಆಗ ಭಯ-ಶೋಕ ಪೀಡಿತ ಪೌರರು ಒಂದಾಗಿ ಸಗರನಲ್ಲಿಗೆ ಹೋಗಿ ಎಲ್ಲರೂ ಕೈಜೋಡಿಸಿ ನಿಂತು ಬೇಡಿಕೊಂಡರು. “ಮಹಾರಾಜ! ಶತ್ರು ರಥಚಕ್ರಗಳ ಭಯದಿಂದ ನಮ್ಮನ್ನು ರಕ್ಷಿಸುವ ನೀನು ಈ ಅಸಮಂಜಸನ ಭಯದಿಂದ ನಮ್ಮನ್ನು ರಕ್ಷಿಸಬೇಕು.” ಪೌರರ ಘೋರ ವಚನವನ್ನು ಕೇಳಿದ ನೃಪತಿಸತ್ತಮನು ಒಂದು ಮುಹೂರ್ತ ಮನಸ್ಸನ್ನು ಕಳೆದುಕೊಂಡು ಸಚಿವರಿಗೆ ಹೇಳಿದನು: “ಇಂದೇ ನನ್ನ ಮಗ ಅಸಮಂಜಸನನ್ನು ಪುರದಿಂದ ಹೊರಗೆ ಕಳುಹಿಸಿ. ನನಗೆ ಪ್ರಿಯವಾದುದನ್ನು ಮಾಡಬೇಕೆಂದರೆ ಇದನ್ನು ಶೀಘ್ರದಲ್ಲಿಯೇ ಮಾಡಬೇಕು.” ನರೇಂದ್ರನು ಹೀಗೆ ಹೇಳಲು ಅವನ ಸಚಿವರು ತಕ್ಷಣವೇ ನೃಪನು ಹೇಳಿದಂತೆ, ಅವನ ಆಜ್ಞೆಯನ್ನು ನೆರವೇರಿಸಿದರು. ಹೀಗೆ ಮಹಾತ್ಮ ಸಗರನು ಪೌರರ ಹಿತವನ್ನು ಬಯಸಿ ತನ್ನ ಪುತ್ರನನ್ನು ಹೊರಗಟ್ಟಿದನು.

ಸಗರನು ತನ್ನ ಮೊಮ್ಮಗ ಅಂಶುಮಂತನಿಗೆ ಮುಂದುವರೆದು ಹೇಳಿದನು: “ಮಗೂ! ನಿನ್ನ ತಂದೆಯನ್ನು ತ್ಯಜಿಸಿದುದರಿಂದ, ನನ್ನ ಮಕ್ಕಳ ಸಾವಿನಿಂದ ಮತ್ತು ಕುದುರೆಯು ದೊರೆಯದೇ ಇದ್ದುದರಿಂದ ಪರಿತಪಿಸುತ್ತಿದ್ದೇನೆ. ಮೊಮ್ಮಗನೇ! ಆ ದುಃಖದಿಂದ ಪರಿತಪಿಸುತ್ತಿರುವ, ಯಜ್ಞದ ವಿಘ್ನವಾಗುವುದೆಂದು ಮೂರ್ಛೆಗೊಂಡಿರುವ ನನ್ನನ್ನು ಆ ಕುದುರೆಯನ್ನು ತರುವುದರ ಮೂಲಕ ಈ ನರಕದಿಂದ ಮೇಲೆತ್ತು.”

ಮಹಾತ್ಮ ಸಗರನ ಈ ಮಾತುಗಳಂತೆ ಅಂಶುಮಂತನು ದುಃಖದಿಂದ ಭೂಮಿಯನ್ನು ಅಗೆದ ಪ್ರದೇಶಕ್ಕೆ ಹೋದನು. ಅದೇ ಮಾರ್ಗದಲ್ಲಿ ಸಮುದ್ರವನ್ನು ಪ್ರವೇಶಿಸಿ ಮುಂದುವರೆದು ಮಹಾತ್ಮ ಕಪಿಲನನ್ನೂ ಕುದುರೆಯನ್ನೂ ಕಂಡನು. ಆ ತೇಜಸ್ಸಿನ ರಾಶಿ ಪುರಾಣ ಋಷಿಸತ್ತಮನನಿಗೆ ಶಿರಬಾಗಿ ನಮಸ್ಕರಿಸಿ ತಾನು ಬಂದ ಕಾರ್ಯದ ಕುರಿತು ನಿವೇದಿಸಿದನು. ಆಗ ಮಹಾತೇಜಸ್ವಿ ಧರ್ಮಾತ್ಮ ಕಪಿಲನು ಅಂಶುಮತನಿಂದ ಪ್ರೀತನಾಗಿ ಅವನಿಗೆ “ವರವನ್ನು ಕೇಳು!” ಎಂದನು. ಅವನು ಯಜ್ಞಕಾಗಿ ಕುದುರೆಯನ್ನು ಮೊದಲನೆಯ ವರವಾಗಿ ಕೇಳಿದನು. ಪಿತೃಗಳನ್ನು ಪಾವನಗೊಳಿಸಲು ಇಚ್ಛಿಸಿ ನೀರನ್ನು ಎರಡನೆಯ ವರವಾಗಿ ಕೇಳಿದನು. ಮಹಾತೇಜಸ್ವಿ ಮುನಿಪುಂಗವ ಕಪಿಲನು ಅವನಿಗೆ ಹೇಳಿದನು: “ನಿನಗೆ ಮಂಗಳವಾಗಲಿ! ನಿನ್ನ ಮೊದಲನೆಯ ವರವನ್ನು ಕೊಡುತ್ತೇನೆ. ನಿನ್ನಲ್ಲಿ ಕ್ಷಮೆ, ಧರ್ಮ ಮತ್ತು ಸತ್ಯವೂ ನೆಲೆಸಿವೆ. ನಿನ್ನಿಂದ ಸಗರನು ಕೃತಾರ್ಥನಾಗುತ್ತಾನೆ ಮತ್ತು ನಿನ್ನ ತಂದೆಯು ಪುತ್ರರನ್ನು ಪಡೆಯುತ್ತಾನೆ. ನಿನ್ನ ಪ್ರಭಾವದಿಂದಲೇ ಸಾಗರರು ಸ್ವರ್ಗವನ್ನು ಸೇರುತ್ತಾರೆ. ನಿನ್ನ ಮೊಮ್ಮಗನು, ಸಾಗರರನ್ನು ಪಾವನಗೊಳಿಸಲು ಮಹೇಶ್ವರನನ್ನು ತೃಪ್ತಿಪಡಿಸಿ ತ್ರಿದಿವದಿಂದ ತ್ರಿಪಥಗೆಯನ್ನು ಬರಿಸುತ್ತಾನೆ. ನಿನಗೆ ಮಂಗಳವಾಗಲಿ! ಈ ಯಜ್ಞಕುದುರೆಯನ್ನು ಕೊಂಡೊಯ್ಯಿ! ಮಗೂ! ಮಹಾತ್ಮ ಸಗರನ ಯಜ್ಞವನ್ನು ಸಮಾಪ್ತಿಗೊಳಿಸು!”

ಮಹಾತ್ಮ ಕಪಿಲನ ಆ ಮಾತುಗಳನ್ನು ಕೇಳಿ ಅಂಶುಮಂತನು ಕುದುರೆಯನ್ನು ಹಿಡಿದು ಮಹಾತ್ಮನ ಯಜ್ಞಶಾಲೆಗೆ ಬಂದನು. ಆಗ ಅವನು ಮಹಾತ್ಮ ಸಗರನಿಗೆ ನಮಸ್ಕರಿಸಿದನು. ಅವನು ಅವನ ನೆತ್ತಿಯನ್ನು ಆಘ್ರಾಣಿಸಲು, ಎಲ್ಲವನ್ನೂ ನಿವೇದಿಸಿದನು. ಸಾಗರರ ನಾಶದ񎉎ಕುರಿತು ತಾನು ಕಂಡು-ಕೇಳಿದ್ದುದನ್ನು ಮತ್ತು ಯಜ್ಞಶಾಲೆಗೆ ಕುದುರೆಯು ಆಗಮಿಸಿದುದನ್ನು ಹೇಳಿದನು. ಅದನ್ನು ಕೇಳಿದ ರಾಜ ಸಗರನು ತನ್ನ ಪುತ್ರರಿಂದಾದ ದುಃಖವನ್ನು ತೊರೆದು, ಅಂಶುಮಂತನನ್ನು ಸತ್ಕರಿಸಿ, ಯಜ್ಞವನ್ನು ಪೂರೈಸಿದನು. ಯಜ್ಞವನ್ನು ಸಮಾಪ್ತಿಗೊಳಿಸಿ ಸಗರನು ಎಲ್ಲ ದೇವತೆಗಳೊಂದಿಗೆ ಸಹಭೋಜನ ಮಾಡಿದನು. ವರುಣಾಲಯ ಸಮುದ್ರವನ್ನು ತನ್ನ ಪುತ್ರನಾಗಿ ಮಾಡಿಕೊಂಡನು.

ಬಹುಕಾಲದ ವರೆಗೆ ರಾಜ್ಯವನ್ನಾಳಿ ಆ ರಾಜೀವಲೋಚನನು ಮೊಮ್ಮಗನಿಗೆ ಪಟ್ಟವನ್ನು ಕಟ್ಟಿ ಸ್ವರ್ಗವನ್ನು ಸೇರಿದನು. ಧರ್ಮಾತ್ಮ ಅಂಶುಮತನಾದರೋ ಸಾಗರ ಮೇಖಲ ಭೂಮಿಯನ್ನು ತನ್ನ ಪಿತಾಮಹನಂತೆ ರಾಜ್ಯವನಾಳಿದನು. ಅವನಿಗೆ ದಿಲೀಪ ಎಂಬ ಹೆಸರಿನ ಧರ್ಮವಂತ ಮಗನು ಜನಿಸಿದನು. ಅವನಿಗೆ ರಾಜ್ಯವನ್ನು ಕೊಟ್ಟು ಅಂಶುಮಂತನು ನಿವೃತ್ತನಾದನು. ಆಗ ಪಿತೃಗಳ ಮಹಾನಾಶದ ಕುರಿತು ಕೇಳಿದ ದಿಲೀಪನು ಅವರ ಗತಿಯನ್ನು ಚಿಂತಿಸಿ ದುಃಖದಿಂದ ಪರಿತಪಿಸಿದನು. ಆ ನೃಪನು ಗಂಗಾವತರಣಕ್ಕೆ ಬಹಳಷ್ಟು ಪ್ರಯತ್ನಮಾಡಿದನು. ಶಕ್ತಿಯಿದ್ದಷ್ಟು ಪ್ರಯತ್ನಿಸಿದರೂ ಅವನಿಗೆ ಅವಳನ್ನು ಕೆಳತರಲು ಸಾಧ್ಯವಾಗಲಿಲ್ಲ. ಅವನ ಮಗ ಶ್ರೀಮಾನ್ ಧರ್ಮಪರಾಯಣ, ಸತ್ಯವಾದಿ, ಅನಸೂಯಕನು ಭಗೀರಥನೆಂದು ಖ್ಯಾತನಾದನು. ಅವನಿಗೆ ರಾಜ್ಯಾಭಿಷೇಕವನ್ನು ಮಾಡಿ ದಿಲೀಪನು ವನವನ್ನು ಸೇರಿದನು. ತಪಸ್ಸು ಮತ್ತು ಸಿದ್ಧಿಗಳ ಸಮಾಯೋಗದಿಂದ ಆ ರಾಜನು ಸ್ವರ್ಗದ ಕಾಲಯೋಗದಿಂದ ವನಕ್ಕೆ ಹೋದನು.

ಆ ಮಹೇಷ್ವಾಸ, ಚಕ್ರವರ್ತೀ ಮಹಾರಥೀ ರಾಜನಾದರೋ ಸರ್ವಲೋಕದ ಮನೋನಯನ ನಂದನನಾದನು. ಆ ಮಹಾಬಾಹುವು ತನ್ನ ಪಿತೃಗಳು ಮಹಾತ್ಮ ಕಪಿಲನಿಂದ ಘೋರಮರಣವನ್ನು ಅನುಭವಿಸಿ ಸ್ವರ್ಗವನ್ನು ಪಡೆಯಲಿಲ್ಲ ಎನ್ನುವುದನ್ನು ಕೇಳಿದನು. ಆ ರಾಜ್ಯವನ್ನು ಸಚಿವನಲ್ಲಿಟ್ಟು ನರೇಶ್ವರನು ದುಃಖಿತ ಹೃದಯದೊಂದಿಗೆ ತಪಸ್ಸನ್ನು ತಪಿಸಿ, ಕಿಲ್ಬಿಷಗಳನ್ನು ತಪಸ್ಸಿನಿಂದ ಸುಟ್ಟು ಗಂಗೆಯನ್ನು ಆರಾಧಿಸಲು ಹಿಮವತ್ ಪರ್ವತದ ಇಳಿಜಾರಿಗೆ ಹೋದನು. ಆ ನರಶ್ರೇಷ್ಠನು ನಗೋತ್ತಮ, ಖನಿಜಗಳಿಂದ ಅಲಂಕೃತಗೊಂಡ ಬಹುವಿಧದ ಆಕಾರಗಳುಳ್ಳ ಶಿಖರಗಳನ್ನು ಹೊಂದಿದ, ಎಲ್ಲೆಡೆಗಳಲ್ಲಿ ಗಾಳಿಯಿಂದ ತೇಲಿ ಬರುತ್ತಿರುವ ಮೋಡಗಳಿಂದ ಅಪ್ಪಿಹಿಡಿಯಲ್ಪಟ್ಟ; ಸದಾ ನೀರಿರುವ ನದೀ, ಕೊಳ, ಬಾವಿಗಳಿಂದ ಕಂಗೊಳಿಸುವ; ಗುಹೆ ಕಂದರಗಳಲ್ಲಿ ವಾಸಿಸುವ ಸಿಂಹ ವ್ಯಾಘ್ರಗಳಿಗೆ ಮನೆಯಾದ; ವಿಚಿತ್ರ ಅಂಗಾಂಗಳ ವಿಚಿತ್ರ ಆಕಾರಗಳ, ವಿಚಿತ್ರ ಧ್ವನಿಗಳ, ಕಪ್ಪು ಕಣ್ಣಿನ, ಪುತ್ರಪ್ರಿಯರಾದ ದುಂಬಿ, ಹಂಸ, ಕಾಡುಕೋಳಿ, ನವಿಲು, ಶತಪತ್ರಿ, ಕೋಕಿಲ, ಮರಕುಟುಕ, ಚಕೋರವೇ ಮೊದಲಾದ, ಪಕ್ಷಿಗಳಿಂದ, ಮಧುರವಾಗಿ ಅರಳುತ್ತಿರುವ ಕಮಲದ ರಾಶಿಗಳಿಂದ ಅಲಂಕೃತವಾದ ರಮ್ಯ ಸರೋವರಗಳೇ ಮೊದಲಾದ ಜಲಸ್ಥಾನಗಳಿಂದ ಕೂಡಿದ್ದ; ಕಿನ್ನರ ಅಪ್ಸರೆಯರು ಆಗಾಗ್ಗೆ ಬರುತ್ತಿದ್ದ ಶಿಲಾತಲಗಳು ಆನೆಗಳ ಕೋರೆದಾಡೆಗಳ ತುದಿಗೆ ಸಿಲುಕಿ ಗಾಯಗೊಂಡ ಮರಗಳುಳ್ಳ; ವಿಧ್ಯಾಧರರು ಸಂಚರಿಸುತ್ತಿರುವ, ನಾನಾರತ್ನಸಮಾಕುಲ, ಉರಿನಾಲಿಗೆಯ ತೀವ್ರ ವಿಷದ ಹಾವುಗಳುಳ್ಳ ಹಿಮವಂತನನ್ನು ಕಂಡನು. ಒಮ್ಮೆ ಬಂಗಾರದಂತೆ ತೋರುವ, ಒಮ್ಮೆ ಬೆಳ್ಳಿಯಂತೆ ತೋರುವ, ಒಮ್ಮೊಮ್ಮೆ ಕಪ್ಪಾಗಿ ಕಾಣುವ ಹಿಮಾಲಯಕ್ಕೆ ಆಗಮಿಸಿದನು. ಅಲ್ಲಿಯೇ ಆ ನರಶ್ರೇಷ್ಠನು ಫಲಮೂಲ ಮತ್ತು ನೀರನ್ನು ಸೇವಿಸುತ್ತಾ ಒಂದು ಸಾವಿರ ವರ್ಷಗಳ ಘೋರ ತಪಸ್ಸನ್ನಾಚರಿಸಿದನು. ಒಂದು ಸಾವಿರ ವರ್ಷಗಳು ಕಳೆದ ನಂತರ ದಿವ್ಯ ಮಹಾನದಿ ಗಂಗೆಯು ಸ್ವಯಂ ಮೂರ್ತಿಮತ್ತಾಗಿ ಕಾಣಿಸಿಕೊಂಡಳು.

ಗಂಗೆಯು ಹೇಳಿದಳು: “ಮಹಾರಾಜ! ಏನನ್ನು ಇಚ್ಛಿಸಿದ್ದೀಯೆ? ನಾನು ನಿನಗೆ ಏನನ್ನು ನೀಡಲಿ? ಹೇಳು! ನಿನ್ನ ಮಾತನ್ನು ನಡೆಸಿಕೊಡುತ್ತೇನೆ.”

ಈ ಮಾತಿಗೆ ರಾಜನು ಹೈಮವತಿಗೆ ಉತ್ತರಿಸಿದನು: “ವರದೇ! ಮಹಾನದೀ! ಯಜ್ಞಾಶ್ವವನ್ನು ಹುಡುಕುತ್ತಿದ್ದ ನನ್ನ ಪಿತಾಮಹರನ್ನು ಕಪಿಲನು ಯಮನಾಲಯಕ್ಕೆ ಕಳುಹಿಸಿದನು. ಅರವತ್ತು ಸಾವಿರ ಮಹಾತ್ಮ ಸಾಗರರು ಕಪಿಲನ ತೇಜಸ್ಸಿನ ಬಳಿಬಂದು ಕ್ಷಣದಲ್ಲಿಯೇ ನಿಧನಹೊಂದಿದರು. ವಿನಷ್ಟರಾದ ಅವರ ಶರೀರಗಳನ್ನು ನೀನು ನೀರಿನಿಂದ ತೊಳೆಯದೇ ಆ ನನ್ನವರಿಗೆ ಸ್ವರ್ಗದಲ್ಲಿ ಸ್ಥಾನ ದೊರೆಯುವುದಿಲ್ಲ ಎಂದು ತಿಳಿದಿದೆ. ಸಗರನ ಮಕ್ಕಳು ನನ್ನ ಪಿತೃಗಳನ್ನು ಸ್ವರ್ಗಕ್ಕೆ ಕರೆದೊಯ್ಯಿ! ಇದನ್ನೇ ನಾನು ನಿನ್ನಲ್ಲಿ ಬೇಡ ಬಯಸುತ್ತೇನೆ.”

ರಾಜನ ಈ ಮಾತುಗಳನ್ನು ಕೇಳಿ, ಲೋಕನಮಸ್ಕೃತೆ ಗಂಗೆಯು ಸುಪ್ರೀತಳಾಗಿ ಭಗೀರಥನಿಗೆ ಈ ಮಾತುಗಳಲ್ಲಿ ಉತ್ತರಿಸಿದಳು: “ಮಹಾರಾಜ! ನಿನ್ನ ಹೇಳಿಕೆಯಂತೆ ಮಾಡುತ್ತೇನೆ. ಅದರಲ್ಲಿ ಸಂಶಯವಿಲ್ಲ. ಆದರೆ ನಾನು ಗಗನದಿಂದ ಕಳಚಿ ಬೀಳುವ ವೇಗವನ್ನು ಸಹಿಸಲು ಅಸಾಧ್ಯವಾಗುತ್ತದೆ. ವಿಬುಧಶ್ರೇಷ್ಠ ನೀಲಕಂಠ ಮಹೇಶ್ವರನ ಹೊರತು ಈ ಮೂರು ಲೋಕಗಳಲ್ಲಿ ಬೇರೆ ಯಾರೂ ಅದನ್ನು ತಡೆದುಕೊಳ್ಳಲು ಶಕ್ತರಿಲ್ಲ. ತಪಸ್ಸಿನಿಂದ ಆ ವರದ ಹರನನ್ನು ಮೆಚ್ಚಿಸು. ನಾನು ಕೆಳಗೆ ಬೀಳುವಾಗ ಆ ದೇವನು ನನ್ನನ್ನು ಶಿರದಲ್ಲಿ ಧರಿಸುತ್ತಾನೆ ಮತ್ತು ನಿನ್ನ ಪಿತೃಗಳಿಗಾಗಿ ನೀನು ಬಯಸಿದುದನ್ನು ನೆರವೇರಿಸಿಕೊಡುತ್ತಾನೆ.”

ಈ ಮಾತುಗಳನ್ನು ಕೇಳಿದ ಮಹಾರಾಜ ಭಗೀರಥನು ಕೈಲಾಸ ಪರ್ವತಕ್ಕೆ ಹೋಗಿ ಶಂಕರನನ್ನು ಮೆಚ್ಚಿಸಿದನು. ಕೆಲವು ಕಾಲಾಂತರದಲ್ಲಿ ಆ ನರೋತ್ತಮ ನೃಪನು ಅವನನ್ನು ಕಂಡು ಗಂಗೆಯನ್ನು ಧರಿಸಿ ತನ್ನ ಪಿತೃಗಳಿಗೆ ಸ್ವರ್ಗವಾಸವು ದೊರಕಿಸುವ ವರವನ್ನು ಅವನಿಂದ ಕೇಳಿದನು.

ಭಗೀರಥನ ಮಾತನ್ನು ಕೇಳಿ ಮತ್ತು ದೇವತೆಗಳ ಹಿತಕ್ಕಾಗಿ ಭಗವಂತನು ರಾಜನಿಗೆ ಈ ರೀತಿ ಉತ್ತರಿಸಿದನು. “ಮಹಾಬಾಹೋ! ಗಗನದಿಂದ ಕೆಳಬೀಳುವ ಶಿವೆ, ಪುಣ್ಯೆ, ದಿವ್ಯ ದೇವನದಿಯನ್ನು ನಿನಗೋಸ್ಕರ ಧರಿಸುತ್ತೇನೆ.” ಹೀಗೆ ಹೇಳಿ ಅವನು ನಾನಾ ತರಹದ ಘೋರ ಆಯುಧಗಳನ್ನು ಹಿಡಿದ ಗಣಗಳಿಂದ ಸುತ್ತುವರೆಯಲ್ಪಟ್ಟು ಹಿಮಾಲಯಕ್ಕೆ ಹೋದನು. ಅಲ್ಲಿ ನಿಂತು ನರಶ್ರೇಷ್ಠ ಭಗೀರಥನಿಗೆ ಹೇಳಿದನು: “ಮಹಾಬಾಹೋ! ಈಗ ಶೈಲರಾಜಸುತೆ ನದಿಯಲ್ಲಿ ಪ್ರಾರ್ಥನೆಮಾಡು. ಸ್ವರ್ಗದಿಂದ ಬೀಳುತ್ತಿರುವ ಆ ನದಿಶ್ರೇಷ್ಠೆಯನ್ನು ಧರಿಸುತ್ತೇನೆ.” ಶರ್ವನ ಈ ಮಾತನ್ನು ಕೇಳಿ ರಾಜನು ಸಂತೋಷದಿಂದ ವಿನೀತನಾಗಿ, ತಲೆಬಾಗಿ ನಮಸ್ಕರಿಸಿ ತನ್ನ ಮನಸ್ಸಿನೊಂದಿಗೆ ಗಂಗೆಯನ್ನು ನೆನೆದನು. ಆಗ ತನ್ನನ್ನೇ ಚಿಂತಿಸುತ್ತಿರುವ ರಾಜ ಮತ್ತು ಅಲ್ಲೇ ನಿಂತಿರುವ ಈಶಾನನನ್ನು ನೋಡಿ ರಮ್ಯ ಪುಣ್ಯಜಲೆಯು ಒಮ್ಮೆಗೇ ಜೋರಾಗಿ ಗಗನದಿಂದ ಕಳಚಿ ಧುಮುಕಿದಳು. ಧುಮುಕಿ ಬರುತ್ತಿದ್ದ ಅವಳನ್ನು ನೋಡಿ ದೇವತೆಗಳೊಂದಿಗೆ ಮಹರ್ಷಿಗಳೂ, ಗಂಧರ್ವ-ಉರಗ-ರಾಕ್ಷಸರೂ ಕೂಡ ನೋಡಲು ಬಂದು ಸೇರಿದರು. ಆಗ ಮೀನು-ಮೊಸಳೆಗಳ򘴁ಮಹಾ ಸಂಕುಲಗಳನ್ನು ಎಲ್ಲವನ್ನೂ ತನ್ನಲ್ಲಿಟ್ಟುಕೊಂಡ ಹಿಮವಂತನ ಮಗಳು ಗಂಗೆಯು ಗಗನದಿಂದ ಧುಮುಕಿ ಬಿದ್ದಳು. ಆಗ ಹರನು ತನ್ನ ಲಲಾಟದ ಮೇಲೆ ಬೀಳುತ್ತಿದ್ದ ಗಗನಮೇಖಲೆ ಗಂಗೆಯನ್ನು ಮುತ್ತುಗಳನ್ನು ಹಾರದಲ್ಲಿ ಪೋಣಿಸುವಂತೆ ಧರಿಸಿದನು. ಪ್ರವಾಹವನ್ನು ಕಟ್ಟಿಹಿಡಿದುದರಿಂದುಂಟಾದ ನೊರೆಯಿಂದ ಅಲ್ಲಿ ಆ ಸಮುದ್ರಗೆಯು ಹಂಸಗಳ ಸಾಲಿನಂತೆ ಕಂಡಳು. ಅವಳು ಹೊರಬರಲು ಪ್ರಯತ್ನಿಸುತ್ತಾ ಮೂರು ಧಾರೆಗಳಾಗಿ ಚಿಮ್ಮಿದಳು. ಅವಳು ಒಮ್ಮೆಮ್ಮೆ ಸಿಟ್ಟಿನಿಂದ ಭುಸುಗುಟ್ಟಿ ರೋಷದಲ್ಲಿ ಮುನ್ನುಗ್ಗುವವಳಂತೆ ಮತ್ತು ಇನ್ನೊಮ್ಮೆ ತನ್ನದೇ ನೊರೆಯ ಸೀರೆಯನ್ನುಟ್ಟು, ಅಮಲಿನಲ್ಲಿ ಜೋಲಾಡಿಬರುವ ಸ್ತ್ರೀಯಂತೆ ತೋರುತ್ತಿದ್ದಳು. ಇನ್ನೊಮ್ಮೆ ಅವಳ ಪ್ರವಾಹದಲ್ಲಿ ಇಂಪಾದ ನಾದವನ್ನು ಮಾಡುತ್ತಾ ಬರುವವಳಂತೆ ಕಂಡು ಬರುತ್ತಿದ್ದಳು. ಈ ರೀತಿ ಹಲವು ಪ್ರಕಾರಗಳಲ್ಲಿ ಹಲವನ್ನು ಮಾಡುತ್ತಾ ಗಗನವನ್ನು ಬಿಟ್ಟು ಭೂಮಿಯ ತಲವನ್ನು ತಲುಪಿದ ಅವಳು ಭಗೀರಥನಿಗೆ ಹೇಳಿದಳು: “ಮಹಾರಾಜ! ನಾನು ಯಾವ ಮಾರ್ಗದಲ್ಲಿ ಹೋಗಬೇಕೆನ್ನುವುದನ್ನು ನೀನೇ ತೋರಿಸು. ನಿನಗೋಸ್ಕರವೇ ನಾನು ಭೂಮಿಗೆ ಇಳಿದು ಬಂದಿದ್ದೇನೆ.”

ಈ ಮಾತುಗಳನ್ನು ಕೇಳಿದ ರಾಜ ಭಗೀರಥನು ಆ ಪುಣ್ಯ ಜಲದಿಂದ ಪಾವನಗೊಳಿಸಲು ಮಹಾತ್ಮ ಸಾಗರರ ಶರೀರಗಳಿರುವಲ್ಲಿ ಹೋದನು. ಗಂಗೆಯನ್ನು ಧರಿಸಿ ಲೋಕನಮಸ್ಕೃತ ಹರನು ದೇವತೆಗಳೊಂದಿಗೆ ಪರ್ವತಶ್ರೇಷ್ಠ ಕೈಲಾಸಕ್ಕೆ ಹೋದನು. ಗಂಗೆಯೊಡನೆ ನೃಪನು ಸಮುದ್ರವನ್ನು ತಲುಪಿದೊಡನೆಯೇ ವರುಣಾಲಯ ಸಮುದ್ರವು ತುಂಬಿಕೊಂಡಿತು. ನೃಪತಿಯಾದರೋ ಅಲ್ಲಿ ಗಂಗೆಯನ್ನು ತನ್ನ ಮಗಳಾಗಿ ಮಾಡಿಕೊಂಡನು ಮತ್ತು ಪಿತೃಗಳಿಗೆ ನೀರನ್ನಿತ್ತು ಪೂರ್ಣಮನೋರಥನಾದನು.

Image result for flowers against white background 

 

 

The other stories:

  1. ಆರುಣಿ ಉದ್ದಾಲಕ
  2. ಉಪಮನ್ಯು
  3. ಸಮುದ್ರಮಥನ
  4. ಗರುಡೋತ್ಪತ್ತಿ; ಅಮೃತಹರಣ
  5. ಶೇಷ
  6. ಶಕುಂತಲೋಪಾಽಖ್ಯಾನ
  7. ಯಯಾತಿ
  8. ಸಂವರಣ-ತಪತಿ
  9. ವಸಿಷ್ಠೋಪಾಽಖ್ಯಾನ
  10. ಔರ್ವೋಪಾಽಖ್ಯಾನ
  11. ಸುಂದೋಪಸುಂದೋಪಾಽಖ್ಯಾನ
  12. ಸಾರಂಗಗಳು
  13. ಸೌಭವಧೋಪಾಽಖ್ಯಾನ
  14. ನಲೋಪಾಽಖ್ಯಾನ
  15. ಅಗಸ್ತ್ಯೋಪಾಽಖ್ಯಾನ
  16. ಭಗೀರಥ
  17. ಋಷ್ಯಶೃಂಗ
  18. ಪರಶುರಾಮ
  19. ಚ್ಯವನ
  20. ಮಾಂಧಾತ
  21. ಸೋಮಕ-ಜಂತು
  22. ಗಿಡುಗ-ಪಾರಿವಾಳ
  23. ಅಷ್ಟಾವಕ್ರ
  24. ರೈಭ್ಯ-ಯವಕ್ರೀತ
  25. ತಾರ್ಕ್ಷ್ಯ ಅರಿಷ್ಠನೇಮಿ
  26. ಅತ್ರಿ
  27. ವೈವಸ್ವತ ಮನು
  28. ಮಂಡೂಕ-ವಾಮದೇವ
  29. ಧುಂಧುಮಾರ
  30. ಮಧು-ಕೈಟಭ ವಧೆ
  31. ಕಾರ್ತಿಕೇಯನ ಜನ್ಮ
  32. ಮುದ್ಗಲ
  33. ರಾಮೋಪಾಽಖ್ಯಾನ: ರಾಮಕಥೆ
  34. ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
  35. ಇಂದ್ರವಿಜಯೋಪಾಽಖ್ಯಾನ
  36. ದಂಬೋದ್ಭವ
  37. ಮಾತಲಿವರಾನ್ವೇಷಣೆ
  38. ಗಾಲವ ಚರಿತೆ
  39. ವಿದುಲೋಪಾಽಖ್ಯಾನ
  40. ತ್ರಿಪುರವಧೋಪಾಽಖ್ಯಾನ
  41. ಪರಶುರಾಮನು ಅಸ್ತ್ರಗಳನ್ನು ಪಡೆದುದು
  42. ಪ್ರಭಾಸಕ್ಷೇತ್ರ ಮಹಾತ್ಮೆ
  43. ತ್ರಿತಾಖ್ಯಾನ
  44. ಸಾರಸ್ವತೋಪಾಽಖ್ಯಾನ
  45. ವಿಶ್ವಾಮಿತ್ರ
  46. ವಸಿಷ್ಠಾಪವಾಹ ಚರಿತ್ರೆ
  47. ಬಕ ದಾಲ್ಭ್ಯನ ಚರಿತ್ರೆ
  48. ಕಪಾಲಮೋಚನತೀರ್ಥ ಮಹಾತ್ಮೆ
  49. ಮಂಕಣಕ
  50. ವೃದ್ಧಕನ್ಯೆ
  51. ಬದರಿಪಾಚನ ತೀರ್ಥ
  52. ಕುಮಾರನ ಪ್ರಭಾವ-ಅಭಿಷೇಕ
  53. ಅಸಿತದೇವಲ-ಜೇಗೀಷವ್ಯರ ಕಥೆ
  54. ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
  55. ಕುರುಕ್ಷೇತ್ರ ಮಹಾತ್ಮೆ
  56. ಶಂಖಲಿಖಿತೋಪಾಽಖ್ಯಾನ
  57. ಜಾಮದಗ್ನೇಯೋಪಾಽಖ್ಯಾನ
  58. ಷೋಡಶರಾಜಕೀಯೋಪಾಽಖ್ಯಾನ

Leave a Reply

Your email address will not be published. Required fields are marked *