ಅಗಸ್ತ್ಯೋಪಾಽಖ್ಯಾನ

ಅಗಸ್ತ್ಯನ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ತೀರ್ಥಯಾತ್ರಾ ಪರ್ವ (ಅಧ್ಯಾಯ ೯೪-೧೦೩) ದಲ್ಲಿ ಬರುತ್ತದೆ. ಯುಧಿಷ್ಠಿರನ ತೀರ್ಥಯಾತ್ರಾ ಸಮಯದಲ್ಲಿ ಈ ಕಥೆಯನ್ನು ಋಷಿ ಲೋಮಶನು ಯುಧಿಷ್ಠಿರನಿಗೆ ಹೇಳಿದನು.

ಅಗಸ್ತ್ಯನಿಂದ ಇಲ್ವಲನ ಸಂಹಾರ

ಹಿಂದೆ ಮಣಿಮತಿ ಪುರದಲ್ಲಿ ಇಲ್ವಲ ಎಂಬ ಹೆಸರಿನ ದೈತ್ಯನಿದ್ದನು. ವಾತಾಪಿಯು ಅವನ ಅನುಜ. ಆ ದಿತಿನಂದನನು ಒಮ್ಮೆ ತಪೋಯುಕ್ತನಾದ ಓರ್ವ ಬ್ರಾಹ್ಮಣನಲ್ಲಿ ಕೇಳಿಕೊಂಡನು: “ಭಗವನ್! ನನಗೆ ಇಂದ್ರನಿಗೆ ಸಮಾನ ಪುತ್ರನೋರ್ವನನ್ನು ಪರಿಪಾಲಿಸು.” ವಾಸವನ ಸಮನಾದ ಪುತ್ರನನ್ನು ಅವನಿಗೆ ಆ ಬ್ರಾಹ್ಮಣನು ಕೊಡದೇ ಇರಲು ಆ ಅಸುರನು ಬ್ರಾಹ್ಮಣನ ಮೇಲೆ ಅತ್ಯಂತ ಕೋಪಗೊಂಡನು. ಅವನು ವೈವಸ್ವತಕ್ಷಯಕ್ಕೆ ಹೋಗಿದ್ದ ಯಾರನ್ನು ಕರೆದರೂ ಅವನು ಪುನಃ ದೇಹವನ್ನು ಧರಿಸಿ ಜೀವಂತನಾಗಿ ಬಂದು ಕಾಣಿಸಿಕೊಳ್ಳುತ್ತಿದ್ದನು. ಅವನು ಅಸುರ ವಾತಾಪಿಯನ್ನು ಆಡನ್ನಾಗಿ ಮಾಡಿ, ಅದನ್ನೇ ರುಚಿಯಾಗಿ ಬೇಯಿಸಿ ಆ ಬ್ರಾಹ್ಮಣನಿಗೆ ತಿನ್ನಿಸಿ ಪುನಃ ಅವನನ್ನು ಕೂಗಿ ಕರೆದನು. ಆಗ ಆ ಮಹಾಸುರ ವಾತಾಪಿಯು ಬ್ರಾಹ್ಮಣನ ಪಾರ್ಶ್ವವನ್ನು ಸೀಳಿ ನಗುತ್ತಾ ಹೊರಬಂದನು. ಈ ರೀತಿಯಲ್ಲಿ ಆ ದುಷ್ಟಚೇತನ ದೈತ್ಯ ಇಲ್ವಲನು ಬ್ರಾಹ್ಮಣರಿಗೆ ಪುನಃ ಪುನಃ ಭೋಜನವನ್ನಿತ್ತು ಹಿಂಸಿಸತೊಡಗಿದನು.

ಇದೇ ಸಮಯದಲ್ಲಿ ಭಗವಾನ್ ಅಗಸ್ತ್ಯನು ಒಂದು ಬಾವಿಯಲ್ಲಿ ತಲೆಕೆಳಗಾಗಿ ನೇತಾಡುತ್ತಿರುವ ತನ್ನ ಪಿತೃಗಳನ್ನು ಕಂಡನು. ಆ ರೀತಿಯಾಗಿ ನೇತಾಡುತ್ತಿರುವ ಅವರನ್ನು ಕೇಳಿದನು: “ನಿಮ್ಮ ತೊಂದರೆಯೇನು?” ಆಗ ಆ ಬ್ರಹ್ಮವಾದಿಗಳು “ಸಂತಾನ!” ಎಂದು ಹೇಳಿದರು. ಅವನಿಗೆ ಹೇಳಿದರು:

“ನಾವು ನಿನ್ನ ಸ್ವಂತ ಪಿತೃಗಳು. ಪ್ರಸವಾರ್ಥಿಗಳಾದ ನಾವು ಈ ಕೂಪದಲ್ಲಿ ನೇತಾಡುವ ಪರಿಸ್ಥಿತಿಗೆ ಬಂದಿಳಿದಿದ್ದೇವೆ. ಅಗಸ್ತ್ಯ! ನೀನು ಉತ್ತಮ ಮಕ್ಕಳನ್ನೇನಾದರೂ ಪಡೆದರೆ ನಾವು ಈ ನರಕದಿಂದ ಮೋಕ್ಷಹೊಂದುತ್ತೇವೆ ಮತ್ತು ಪುತ್ರರಿಂದ ನೀನೂ ಕೂಡ ಗತಿಯನ್ನು ಹೊಂದುತ್ತೀಯೆ.”

ಆ ತೇಜಸ್ವೀ ಸತ್ಯಧರ್ಮಪರಾಯಣನು ಅವರಿಗೆ ಹೇಳಿದನು:

“ಪಿತೃಗಳೇ! ನಿಮ್ಮ ಇಚ್ಛೆಯಂತೆಯೇ ಮಾಡುತ್ತೇನೆ. ನಿಮ್ಮ ಮನಸ್ಸಿನ ಜ್ವರವನ್ನು ತೊರೆಯಿರಿ.”

ಪ್ರಸವ ಸಂತಾನದ ಕುರಿತು ಚಿಂತಿಸುತ್ತಾ ಆ ಭಗವಾನ್ ಋಷಿಯು ತನ್ನ ಮಗುವನ್ನು ಹಡೆಯಬಲ್ಲಂಥ ಯಾವ ಸ್ತ್ರೀಯನ್ನೂ ಕಾಣಲಿಲ್ಲ. ಆಗ ಅವನು ಬೇರೆ ಬೇರೆ ಪ್ರಾಣಿಗಳಿಂದ ಅನುತ್ತಮವಾದ ಬೇರೆ ಬೇರೆ ಅಂಗಗಳನ್ನು ಒಟ್ಟುಹಾಕಿ, ಆ ಅಂಗಗಳಿಂದ ಒಂದು ಉತ್ತಮ ಸ್ತ್ರೀಯನ್ನು ನಿರ್ಮಿಸಿದನು. ಆ ಮಹಾತಪಸ್ವಿ ಮುನಿಯು ಅವಳನ್ನು ತನಗಾಗಿ ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ಪುತ್ರರನ್ನು ಬಯಸುತ್ತಿದ್ದ ವಿದರ್ಭರಾಜನಿಗೆ ಕೊಟ್ಟನು. ಅಲ್ಲಿ ಆ ಸುಭಗೆ ವಿದ್ಯುತ್ತಿನ ಮಾಲೆಯು ಜನಿಸಿದಳು ಮತ್ತು ಆ ಶುಭಾನನೆಯು ವಿಭ್ರಾಜಿಸುವ ಸೌಂದರ್ಯದಿಂದ ವೃದ್ಧಿಸಿದಳು. ಅವಳು ಹುಟ್ಟಿದೊಡನೆಯೇ ಆ ಪೃಥ್ವೀಪತಿ ವೈದರ್ಭನು ಸಂತೋಷದಿಂದ ದ್ವಿಜರಿಗೆ ಅವಳನ್ನು ನಿವೇದಿಸಿದನು. ಸರ್ವ ಬ್ರಾಹ್ಮಣರೂ ಅವಳನ್ನು ಸ್ವಾಗತಿಸಿದರು ಮತ್ತು ಆ ದ್ವಿಜರು ಅವಳಿಗೆ ಲೋಪಾಮುದ್ರ ಎನ್ನುವ ಹೆಸರನ್ನು ಇಟ್ಟರು. ಅವಳು ಅನುತ್ತಮ ರೂಪವಂತಳಾಗಿ ಕಾಂತಿಯುಕ್ತಳಾಗಿ, ನೀರಿನಲ್ಲಿ ತಾವರೆಯಂತೆ ಅಥವಾ ಶುಭ ಅಗ್ನಿಯ ಶಿಖೆಯಂತೆ ಬೇಗನೆ ಬೆಳೆದಳು. ಅವಳಿಗೆ ಯೌವನಪ್ರಾಪ್ತಿಯಾದಾಗ ಸ್ವಲಂಕೃತರಾದ ನೂರು ಕನ್ಯೆಯರು ಮತ್ತು ನೂರು ದಾಸಿಯರು ಆ ಕಲ್ಯಾಣಿಯ ಬೇಕುಬೇಡಗಳನ್ನು ನೋಡಿಕೊಳ್ಳುತ್ತಾ ಸೇವಿಸುತ್ತಿದ್ದರು. ಸುತ್ತುವರೆದ ನೂರು ದಾಸಿಯರ ಮತ್ತು ನೂರು ಕನ್ಯೆಯರ ಮಧ್ಯೆ ಆ ಕನ್ಯೆಯು ಆಕಾಶದಲ್ಲಿ ರೋಹಿಣಿಯಂತೆ ಬೆಳಗುತ್ತಿದ್ದಳು. ಯೌವನಸ್ಥೆಯಾಗಿದ್ದರೂ, ಶೀಲಾಚಾರ ಸಮನ್ವಿತಳಾಗಿದ್ದರೂ ಕೂಡ ಮಹಾತ್ಮ ಅಗಸ್ತ್ಯನ ಭಯದಿಂದ ಯಾವ ಪುರುಷನೂ ಅವಳನ್ನು ವರಿಸಲಿಲ್ಲ. ಆದರೂ ರೂಪದಲ್ಲಿ ಅಪ್ಸರೆಯರನ್ನೂ ಮೀರಿಸಿದ್ದ ಆ ಸತ್ಯವತಿ ಕನ್ಯೆಯು ತನ್ನ ಶೀಲದಿಂದ ತಂದೆ ಮತ್ತು ಸ್ವಜನರಿಗೆ ಸಂತೋಷವನ್ನು ತಂದಳು. ಆ ವೈದರ್ಭಿಯು ಹೀಗೆ ಯುವತಿಯಾಗಿದ್ದುದನ್ನು ನೊಡಿದ ಅವಳ ತಂದೆಯು ಈ ನನ್ನ ಮಗಳನ್ನು ಯಾರಿಗೆ ಕೊಡಲಿ? ಎಂದು ಮನಸ್ಸಿನಲ್ಲಿಯೇ ಚಿಂತಿಸಿದನು.

ಅವಳು ಗೃಹಿಣಿಯಾಗಲು ತಯಾರಾಗಿದ್ದಾಳೆ ಎಂದು ಯೋಚಿಸಿದ ಅಗಸ್ತ್ಯನು ಪೃಥ್ವೀಪತಿ ವಿದರ್ಭರಾಜನಲ್ಲಿಗೆ ಹೋಗಿ ಹೇಳಿದನು:

“ರಾಜನ್! ಪುತ್ರನು ಬೇಕೆಂಬ ಕಾರಣದಿಂದ ನಾನು ಮದುವೆಯಾಗಲು ಮನಸ್ಸುಮಾಡಿದ್ದೇನೆ. ನಿನ್ನಲ್ಲಿ ನಾನು ಕೇಳಿಕೊಳ್ಳುತ್ತಿದ್ದೇನೆ - ಲೋಪಾಮುದ್ರೆಯನ್ನು ನನಗೆ ಕೊಡು.”

ಮುನಿಯು ಹೀಗೆ ಹೇಳಲು ಮಹೀಪಾಲನು ನಿರಾಕರಿಸಲು ಅಶಕ್ತನಾಗಿ, ಕೊಡಲು ಮನಸ್ಸಿಲ್ಲದವನಾಗಿ ದ್ವಂದ್ವದಲ್ಲಿ ಸಿಲುಕಿದನು. ಆಗ ಆ ರಾಜನು ತನ್ನ ಹೆಂಡತಿಯಲ್ಲಿಗೆ ಹೋಗಿ ಹೇಳಿದನು:

“ಈ ಮಹರ್ಷಿಯು ಮಹಾವೀರ್ಯವಂತ! ಸಿಟ್ಟಾದರೆ ತನ್ನ ಶಾಪಾಗ್ನಿಯಿಂದ ಸುಟ್ಟುಬಿಡುತ್ತಾನೆ.”

ಈ ರೀತಿ ತನ್ನ ಪತ್ನಿಯೊಂದಿಗೆ ದುಃಖಿತನಾಗಿದ್ದ ರಾಜನನ್ನು ನೋಡಿದ ಲೋಪಾಮುದ್ರೆಯು ಅವರಲ್ಲಿಗೆ ಹೋಗಿ ಸಮಯಕ್ಕೆ ಸರಿಯಾಗಿ ಈ ಮಾತುಗಳನ್ನಾಡಿದಳು:

“ಅಪ್ಪಾ! ನನ್ನಿಂದಾಗಿ ಈ ರೀತಿಯ ಪೀಡೆಯನ್ನು ಅನುಭವಿಸುವುದು ಸರಿಯಲ್ಲ. ನನ್ನನ್ನು ಅಗಸ್ತ್ಯನಿಗೆ ಕೊಡು. ಈ ರೀತಿ ನನ್ನಿಂದ ನಿನ್ನನ್ನು ಉಳಿಸಿಕೊಳ್ಳಬಹುದು.”

ತನ್ನ ಮಗಳ ಮಾತಿನಂತೆ ಆ ರಾಜನು ಮಹಾತ್ಮ ಅಗಸ್ತ್ಯನಿಗೆ ಲೋಪಾಮುದ್ರೆಯನ್ನು ವಿಧಿವತ್ತಾಗಿ ಕೊಟ್ಟನು.

ಹೆಂಡತಿಯನ್ನು ಪಡೆದ ಅಗಸ್ತ್ಯನು ಲೋಪಾಮುದ್ರೆಗೆ ಹೇಳಿದನು:

“ಈ ಬೆಲೆಬಾಳುವ ಉಡುಗೆಯನ್ನೂ ಆಭರಣಗಳನ್ನು ತೆಗೆದು ಬಿಸಾಡು!”

ಅವುಗಳು ಅತೀವ ಸುಂದರವಾಗಿದ್ದರೂ ಬೆಲೆಬಾಳುವವುಗಳಾಗಿದ್ದರೂ ಆ ರಂಭೋರು, ಉದ್ದ ಕಣ್ಣಿನವಳು ತನ್ನ ಉಡುಗೆತೊಡುಗೆಗಳನ್ನು ಬಿಸುಟಳು. ಅನಂತರ ಆ ಆಯತಲೋಚನೆಯು ಚೀರಾಣಿಯನ್ನು ತೆಗೆದುಕೊಂಡು ವಲ್ಕಲ ಮತ್ತು ಇತರ ಅಜಿನ ವಸ್ತ್ರಗಳನ್ನು ಉಟ್ಟು ತನ್ನ ಪತಿಯೊಂದಿಗೆ ಸಮಾನ ವ್ರತವನ್ನು ಕೈಗೊಂಡಳು. ಭಗವಾನ್ ಋಷಿಸತ್ತಮನು ಗಂಗಾದ್ವಾರಕ್ಕೆ ಬಂದು ತನ್ನ ಅನುಕೂಲಗಳನ್ನು ನಡೆಸಿಕೊಡುತ್ತಿದ್ದ ಪತ್ನಿಯೊಂದಿಗೆ ಉಗ್ರತಮ ತಪಸ್ಸನ್ನು ಕೈಗೊಂಡನು. ಅವಳು ಪ್ರೀತಿ ಮತ್ತು ಗೌರವಗಳಿಂದ ತನ್ನ ಪತಿಯ ಪರಿಚರಿಯನ್ನು ಮಾಡಿದಳು, ಮತ್ತು ಪ್ರಭು ಅಗಸ್ತ್ಯನು ತನ್ನ ಪತ್ನಿಯಿಂದ ಪರಮ ಪ್ರೀತಿಯನ್ನು ಪಡೆದನು. ಬಹಳ ದಿನಗಳ ನಂತರ ಭಗವಾನ್ ಋಷಿಯು ಸ್ನಾನಮಾಡಿದ, ತಪಸ್ಸಿನಿಂದ ಕಾಂತಿಯುಕ್ತಳಾಗಿದ್ದ ಲೋಪಾಮುದ್ರೆಯನ್ನು ನೋಡಿದನು. ಅವಳ ಶೌಚ, ದಮ, ಪರಿಚಾರಿಕೆ, ರೂಪ ಮತ್ತು ಗುಣಗಳಿಂದ ಪ್ರೀತನಾಗಿ ಅವಳನ್ನು ಸಂಭೋಗಕ್ಕೆ ಕರೆದನು. ಆಗ ಆ ಭಾಮಿನಿಯು ಅಂಜಲೀ ಬದ್ಧಳಾಗಿ, ನಾಚಿಕೊಂಡು, ಆ ಭಗವಂತನಲ್ಲಿ ಈ ಸಪ್ರಣಯ ಮಾತುಗಳನ್ನಾಡಿದಳು:

“ಮಕ್ಕಳಿಗೋಸ್ಕರ ಪತಿಯು ಪತ್ನಿಯನ್ನು ಮಾಡಿಕೊಳ್ಳುತಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಋಷೇ! ನನ್ನಿಂದ ನಿನಗೆ ದೊರೆಯುವ ಸುಖವನ್ನು ನನಗೂ ನೀನು ನೀಡಬೇಕು. ನನ್ನ ತಂದೆಯ ಮನೆಯಲ್ಲಿ ಅಂತಃಪುರದಲ್ಲಿ ಯಾವರೀತಿಯ ಹಾಸಿಗೆಯಿತ್ತೋ ಅದೇ ರೀತಿಯ ಹಾಸಿಗೆಯ ಮೇಲೆ ನನ್ನೊಡನೆ ಮಲಗಬೇಕು. ನನಗಿಷ್ಟವಾದ ದಿವ್ಯಾಭರಣಗಳಿಂದ ನಾನು ಅಲಂಕರಿಸಿಕೊಳ್ಳುವ ಹಾಗೆ ನೀನೂ ಕೂಡ ಮಾಲೆ ಮತ್ತು ಭೂಷಣಗಳಿಂದ ವಿಭೂಷಿತನಾಗಿ ಬರಬೇಕೆಂದು ಬಯಸುತ್ತೇನೆ.”

ಅಗಸ್ತ್ಯನು ಹೇಳಿದನು:

“ಲೋಪಾಮುದ್ರಾ! ಆದರೆ ನಿನ್ನ ತಂದೆಯಲ್ಲಿ ಇರುವ ಹಾಗಿನ ಧನವು ನನ್ನಲ್ಲಿ ಇಲ್ಲವಲ್ಲ!”

ಲೋಪಾಮುದ್ರೆಯು ಹೇಳಿದಳು:

“ಮಹೇಶ್ರರ! ನಿನ್ನ ತಪಸ್ಸಿನ ಶಕ್ತಿಯಿಂದ ಈ ಜೀವಲೋಕದಲ್ಲಿರುವ ಯಾವುದನ್ನಾಗಲೀ ನೀನು ಒಂದೇ ಕ್ಷಣದಲ್ಲಿ ಪಡೆದುಕೊಳ್ಳಬಹುದು.”

ಅಗಸ್ತ್ಯನು ಹೇಳಿದನು:

“ನೀನು ಹೇಳಿದಂತೆ ಮಾಡಿದರೆ ನನ್ನ ತಪೋಶಕ್ತಿಯ ವ್ಯಯವಾಗುತ್ತದೆ. ನನ್ನ ತಪೋಶಕ್ತಿಯು ನಾಶವಾಗದಂತೆ ನನ್ನಲ್ಲಿ ಕೇಳಿಕೋ.”

ಲೋಪಾಮುದ್ರೆಯು ಹೇಳಿದಳು:

“ತಪೋಧನ! ನನ್ನ ಋತುವಿನ ಸ್ವಲ್ಪವೇ ಸಮಯ ಉಳಿದಿದೆ. ಅನ್ಯಥಾ ನಾನು ನಿನ್ನೊಡನೆ ಸಂಭೋಗ ಮಾಡಲು ಬಯಸುವುದಿಲ್ಲ. ನಾನು ನಿನ್ನನ್ನು ಧರ್ಮಭ್ರಷ್ಟನನ್ನಾಗಿ ಮಾಡಲೂ ಬಯಸುವುದಿಲ್ಲ. ನಾನು ಬಯಸಿದಂತೆ ಇವುಗಳನ್ನು ನೀನು ಸಂಪಾದಿಸಬೇಕು.”

ಅಗಸ್ತ್ಯನು ಹೇಳಿದನು:

“ಸುಭಗೇ! ನಿನ್ನ ಬುದ್ಧಿಯು ನಿಶ್ಚಯಿಸಿದಂತೆಯೇ ನೀನು ಬಯಸಿದ್ದೀಯೆ. ಆಗಲಿ. ನಾನು ಹೋಗುತ್ತೇನೆ. ನೀನು ಇಲ್ಲಿ ನಿನಗಿಷ್ಟವಾದ ಹಾಗೆ ಇರು.”

ಅನಂತರ ಅಗಸ್ತ್ಯನು ಸಂಪತ್ತನ್ನು ಕೇಳಿಕೊಂಡು ಇವನಲ್ಲಿ ಇತರ ರಾಜರುಗಳಿಗಿಂತ ಹೆಚ್ಚು ಧನವಿದೆ ಎಂದು ತಿಳಿದು, ಮಹೀಪಾಲ ಶ್ರುತರ್ವಾಣನಲ್ಲಿಗೆ ಹೋದನು. ಕುಂಭಯೋನಿಯಲ್ಲಿ ಹುಟ್ಟಿದ್ದ ಅವನು ಬಂದಿದ್ದಾನೆಂದು ತಿಳಿದ ನೃಪತಿಯು ತನ್ನ ದೇಶದ ಗಡಿಗೆ ಅಮಾತ್ಯರೊಂದಿಗೆ ಬಂದು ಅವನನ್ನು ಚೆನ್ನಾಗಿ ಸತ್ಕರಿಸಿ ಬರಮಾಡಿಕೊಂಡನು. ಅವನಿಗೆ ಯಥಾವಿಧಿಯಾಗಿ ಅರ್ಘ್ಯವನ್ನಿತ್ತ ನಂತರ ಪೃಥಿವೀಪತಿಯು ಅಂಜಲೀ ಬದ್ಧನಾಗಿ, ತಲೆಬಾಗಿ, ಅವನ ಆಗಮನದ ಕಾರಣವನ್ನು ಕೇಳಿದನು. ಅಗಸ್ತ್ಯನು ಹೇಳಿದನು:

“ಪೃಥಿವೀಪತೇ! ವಿತ್ತವನ್ನು ಪಡೆಯಲೋಸುಗ ನಾನು ಬಂದಿದ್ದೇನೆ ಎಂದು ತಿಳಿ. ಇನ್ನೊಬ್ಬರಿಗೆ ಕಡಿಮೆಯಾಗದಂತೆ, ಅದರಲ್ಲಿಯ ಭಾಗವನ್ನು ನನಗೆ ಕೊಡು.”

ಆಗ ರಾಜನು ಅವನಿಗೆ ತನ್ನ ಆದಾಯ ವೆಚ್ಚಗಳ ಕುರಿತು ಸಂಪೂರ್ಣವಾಗಿ ವಿವರಿಸಿ, ನಿವೇದಿಸಿದನು:

“ಈಗ ನಿನಗೆ ತಿಳಿದಿದೆ. ಇದರಲ್ಲಿ ನಿನಗೆ ಎಷ್ಟು ಬೇಕೋ ಅಷ್ಟನ್ನು ತೆಗೆದುಕೋ!”

ಅವನ ಆದಾಯ ವೆಚ್ಛಗಳು ಸರಿಸಮನಾಗಿವೆ ಎಂದು ನೋಡಿದ ಸಮಮತಿ ದ್ವಿಜನು ಏನನ್ನೂ ತೆಗೆದೊಕೊಂಡರೂ ಅದು ಪ್ರಜೆಗಳಿಗೆ ಕಷ್ಟವನ್ನೊಡ್ಡಿದ ಹಾಗೆ ಎಂದು ಯೋಚಿಸಿದನು.

ಅವನು ಶ್ರುತರ್ವಾಣನನ್ನೂ ಕರೆದುಕೊಂಡು ವಧ್ಧ್ರಶ್ವನಲ್ಲಿಗೆ ಹೋದನು. ಅವರೀರ್ವರನ್ನೂ ಅವನು ತನ್ನ ದೇಶದ ಗಡಿಯಲ್ಲಿ ಯಥಾವಿಧಿಯಾಗಿ ಸ್ವಾಗತಿಸಿದನು. ವದ್ಧ್ರಶ್ವನು ಅವನಿಗೆ ಅರ್ಘ್ಯ ಪಾದ್ಯಗಳನ್ನು ನೀಡಿದ ನಂತರ ಅವನು

“ಬಂದ ಕಾರಣದ ಕುರಿತು ಅಪ್ಪಣೆಯಾಗಬೇಕು!”

ಎಂದು ಕೇಳಿಕೊಂಡನು. ಅಗಸ್ತ್ಯನು ಹೇಳಿದನು:

“ಪೃಥಿವೀಪತೇ! ವಿತ್ತವನ್ನು ಬಯಸಿ ನಾವಿಬ್ಬರೂ ಇಲ್ಲಿಗೆ ಬಂದಿದ್ದೇವೆ ಎಂದು ತಿಳಿ. ಇನ್ನೊಬ್ಬರಿಗೆ ಕಷ್ಟವಾಗದ ರೀತಿಯಲ್ಲಿ ನಿನ್ನ ಸಂಪತ್ತಿನ ಭಾಗವನ್ನು ನಮಗೆ ನೀಡು.”

ಆಗ ರಾಜನು ಇಬ್ಬರಿಗೂ ತನ್ನ ಆದಾಯ ವೆಚ್ಚಗಳ ಕುರಿತು ಹೇಳಿ,

“ಇದನ್ನು ತಿಳಿದ ನೀವು ಉಳಿದಿದ್ದನ್ನು ತೆಗೆದುಕೊಂಡು ಹೋಗಿ”

ಎಂದನು. ಆಯವ್ಯಯಗಳು ಸಮನಾಗಿವೆ ಎಂದು ನೋಡಿದ ಆ ಸಮಮತಿ ದ್ವಿಜನು ಏನನ್ನು ತೆಗೆದುಕೊಂಡರೂ ಅದು ಪ್ರಜೆಗಳಿಗೆ ಕಷ್ಟವನ್ನು ಕೊಟ್ಟಹಾಗೆ ಎಂದು ಯೋಚಿಸಿದನು.

ಅನಂತರ ಅಗಸ್ತ್ಯ, ಶ್ರುತರ್ವ ಮತ್ತು ವಧ್ರ್ಯಶ್ವ ಮೂವರೂ ಮಹಾಧನಿ ಮಹೀಪತಿ ಪೌರುಕುತ್ಸ ತ್ರಸದಸ್ಯನಲ್ಲಿಗೆ ಹೋದರು. ಮಹಾರಾಜ ತ್ರಸದಸ್ಯುವು ವಾಹನವನ್ನೇರಿ ತನ್ನ ರಾಜ್ಯದ ಗಡಿಯವರೆಗೂ ಬಂದು ಅವರೆಲ್ಲರನ್ನೂ ಯಥಾವಿಧಿಯಾಗಿ ಬರಮಾಡಿಕೊಂಡನು. ಆ ಇಕ್ಷ್ವಾಕು ರಾಜಸತ್ತಮನು ಯಥಾನ್ಯಾಯವಾಗಿ ಪೂಜಿಸಿದನು. ಅವರೆಲ್ಲರೂ ವಿಶ್ರಾಂತಿಯನ್ನು ತೆಗೆದುಕೊಂಡ ಬಳಿಕ ಅವರ ಬರವಿನ ಕಾರಣವನ್ನು ಕೇಳಿದನು. ಅಗಸ್ತ್ಯನು ಹೇಳಿದನು:

“ಪೃಥಿವೀಪತೇ! ನಾವು ಇಲ್ಲಿಗೆ ಸಂಪತ್ತನ್ನು ಅರಸಿ ಬಂದಿದ್ದೇವೆ ಎಂದು ತಿಳಿ. ಇತರರಿಗೆ ಹಿಂಸೆಯಾಗದ ರೀತಿಯಲ್ಲಿ ನಮಗೆ ನಿನ್ನ ಸಂಪತ್ತಿನ ಭಾಗವನ್ನು ನೀಡು.”

ಅನಂತರ ರಾಜನು ಅವರಿಗೆ ತನ್ನ ಆದಾಯ ವೆಚ್ಚಗಳ ಕುರಿತು ಸಂಪೂರ್ಣವಾಗಿ ವಿವರಿಸಿ,

“ಇದನ್ನು ತಿಳಿದ ನೀವು ಉಳಿದಿದ್ದುದನ್ನು ತೆಗೆದುಕೊಂಡು ಹೋಗಿ”

ಎಂದು ನಿವೇದಿಸಿದನು. ಆದಾಯ-ವೆಚ್ಚಗಳು ಸರಿಸಮವಾಗಿರುವುದನ್ನು ನೋಡಿದ ಆ ಸಮಮತಿ ದ್ವಿಜನು ಏನನ್ನೂ ತೆಗೆದುಕೊಂಡರೂ ಅದು ಇತರರಿಗೆ ಕಷ್ವವನ್ನು ತರುತ್ತದೆ ಎಂದು ತಿಳಿದನು.

ಆಗ ಎಲ್ಲ ರಾಜರೂ ಪರಸ್ಪರರನ್ನು ನೋಡಿ, ಆ ಮಹಾಮುನಿಗೆ ಹೇಳಿದರು:

“ಬ್ರಹ್ಮನ್! ಈ ಭುವಿಯಲ್ಲಿ ಮಹಾ ಧನವನ್ನು ಹೊಂದಿದ ಇಲ್ವಲ ಎನ್ನುವ ದಾನವನಿದ್ದಾನೆ. ನಾವೆಲ್ಲರೂ ಅವನಲ್ಲಿಗೆ ಹೋಗಿ ಹಣವನ್ನು ಕೇಳೋಣ!”

ಅವರೆಲ್ಲರೂ ಇಲ್ವಲನಲ್ಲಿಗೆ ಹೋಗಿ ಧನವನ್ನು ಕೇಳುವುದು ಸರಿಯೆಂದು ಯೋಚಿಸಿ, ಒಟ್ಟಿಗೇ ಇಲ್ವಲನಲ್ಲಿಗೆ ಪ್ರಯಾಣ ಬೆಳೆಸಿದರು. ನೃಪರೊಂದಿಗೆ ಮಹರ್ಷಿಯು ಬಂದಿದ್ದಾನೆ ಎಂದು ತಿಳಿದ ಇಲ್ವಲನು ಅಮಾತ್ಯರೊಂದಿಗೆ ತನ್ನ ರಾಜ್ಯದ ಗಡಿಯವರೆಗೂ ಬಂದು ಅವರನ್ನು ಪೂಜಿಸಿ ಬರಮಾಡಿಕೊಂಡನು. ಆ ಅಸುರಶ್ರೇಷ್ಠನು ಅವರಿಗೆ ಆತಿಥ್ಯವನ್ನು ನೀಡಿದನು ಮತ್ತು ತನ್ನ ತಮ್ಮ ವಾತಾಪಿಯನ್ನೇ ಅಡುಗೆ ಮಾಡಿ ಅವರಿಗೆ ಬಡಿಸಿದನು. ಆಗ ಎಲ್ಲ ರಾಜರ್ಷಿಗಳೂ ಮಹಾಸುರ ವಾತಾಪಿಯನ್ನು ಕುರಿಯ ಮಾಂಸದಂತೆ ಅಡುಗೆಮಾಡಿದ್ದುದನ್ನು ನೋಡಿ ವಿಷಣ್ಣರಾಗಿ ಮೂರ್ಛಿತರಾದರು. ಋಷಿಸತ್ತಮ ಅಗಸ್ತ್ಯನು ಆ ರಾಜರ್ಷಿಗಳಿಗೆ ಹೇಳಿದನು:

“ವಿಷಾದಿಸ ಬೇಡಿ. ಈ ಮಹಾಸುರನನ್ನು ನಾನು ತಿನ್ನುತ್ತೇನೆ!”

ಮಹಾಮುನಿಯು ಉತ್ತಮ ಆಸನವನ್ನು ಹಿಡಿದು ಕುಳಿತುಕೊಂಡನಂತರ ದೈತ್ಯೇಂದ್ರ ಇಲ್ವಲನು ನಸುನಗುತ್ತಾ ಬಡಿಸಿದನು. ಅಗಸ್ತ್ಯನು ವಾತಾಪಿಯನ್ನು ಸಂಪೂರ್ಣವಾಗಿ ಭುಂಜಿಸಿದನು. ಅವನು ಊಟವನ್ನು ಮುಗಿಸಿದ ನಂತರ ಅಸುರ ಇಲ್ವಲನು ತನ್ನ ತಮ್ಮನನ್ನು ಕೂಗಿ ಕರೆದನು. ಆಗ ಮಹಾತ್ಮ ಅಗಸ್ತ್ಯನು ತೇಗು ಬಿಟ್ಟನು. ಆ ಮಹಾಸುರನನ್ನು ಜೀರ್ಣಗೊಳಿಸಿಕೊಂಡಿದುದನ್ನು ಕಂಡು ಇಲ್ವಲನು ವಿಷಣ್ಣನಾದನು. ಅವನು ಅಮಾತ್ಯರೊಂದಿಗೆ ಕೈಜೋಡಿಸಿ ಹೀಗೆ ಹೇಳಿದನು:

“ನೀವು ಇಲ್ಲಿಗೆ ಯಾವ ಕಾರಣದಿಂದ ಬಂದಿದ್ದೀರಿ? ನಾನು ನಿಮಗೆ ಏನು ಮಾಡಬೇಕು?”

ಆಗ ಅಗಸ್ತ್ಯನು ನಸುನಗುತ್ತಾ ಉತ್ತರಿಸಿದನು:

“ಅಸುರ! ನೀನು ತುಂಬಾ ಧನೇಶ್ವರನೆಂದು ನಾವೆಲ್ಲರೂ ತಿಳಿದಿದ್ದೇವೆ. ನನಗೆ ಧನದ ತುಂಬಾ ಅವಶ್ಯಕತೆಯಿದೆ. ಇನ್ನೊಬ್ಬರಿಗೆ ಹಿಂಸೆಯಾಗದ ರೀತಿಯಲ್ಲಿ ನಿನ್ನ ಧನದ ಭಾಗವೊಂದನ್ನು ಯಥಾಶಕ್ತಿಯಾಗಿ ನೀಡು.”

ಆಗ ಆ ಋಷಿಗೆ ನಮಸ್ಕರಿಸಿ ಇಲ್ವಲನು ಹೇಳಿದನು:

“ನಾನು ಏನನ್ನು ಕೊಡಬೇಕೆಂದಿರುವೆನೋ ಅದು ನಿನಗೆ ತಿಳಿದಿದ್ದರೆ ಆ ಸಂಪತ್ತನ್ನು ನಿನಗೆ ನೀಡುತ್ತೇನೆ.”

ಅಗಸ್ತ್ಯನು ಹೇಳಿದನು:

“ಅಸುರ! ಪ್ರತಿಯೊಬ್ಬ ರಾಜನಿಗೂ ನೀನು ಹತ್ತು ಸಹಸ್ರ ಗೋವುಗಳನ್ನು ಮತ್ತು ಅಷ್ಟೇ ಸುವರ್ಣಗಳನ್ನು ನೀಡಬೇಕೆಂದು ನೀನು ಬಯಸಿರುವೆ. ನನಗೆ ಇದರ ಎರಡು ಪಟ್ಟು ಮತ್ತು ಬಂಗಾರದ ರಥವನ್ನೂ, ಮನೋವೇಗದಲ್ಲಿ ಹೋಗುವ ಎರಡು ಕುದುರೆಗಳನ್ನೂ ನೀಡಲು ಬಯಸುತ್ತೀಯೆ. ತಕ್ಷಣವೇ ರಥವನ್ನು ಪರೀಕ್ಷಿಸು - ಅದು ಸಂಪೂರ್ಣವಾಗಿ ಬಂಗಾರದಿಂದ ಮಾಡಿರಬೇಕು.”

ಆ ರಥವು ಸಂಪೂರ್ಣವಾಗಿ ಬಂಗಾರದಿಂದ ಮಾಡಿದುದೆಂದು ಪರೀಕ್ಷಿಸಲಾಯಿತು. ಅನಂತರ ಆ ದೈತ್ಯನು ಬಹಳ ವ್ಯಥೆಯಿಂದ ಆ ಅಧಿಕ ಸಂಪತ್ತನ್ನು ನೀಡಿದನು. ವಿವಾಜ ಮತ್ತು ಸುವಾಜ ಎಂಬ ಕುದುರೆಗಳನ್ನು ರಥಕ್ಕೆ ಕಟ್ಟಲಾಯಿತು. ಕಣ್ಣು ಮುಚ್ಚಿ ಬಿಡುವುದರೊಳಗೆ ಆ ಸಂಪತ್ತನ್ನು ಅಗಸ್ತ್ಯನ ಆಶ್ರಮಕ್ಕೆ ತರಲಾಯಿತು. ಆಗ ಅಗಸ್ತ್ಯನು ಎಲ್ಲ ರಾಜರನ್ನೂ ಬೀಳ್ಕೊಂಡನು. ಅಗಸ್ತ್ಯನಿಂದ ಬೀಳ್ಕೊಂಡ ರಾಜರ್ಷಿಗಳು ತೆರಳಿದರು. ಮತ್ತು ಆ ಮುನಿಯು ಲೋಪಾಮುದ್ರೆಯು ಬಯಸಿದಂತೆ ಎಲ್ಲವನ್ನೂ ಮಾಡಿದನು.

ಲೋಪಾಮುದ್ರೆಯು ಹೇಳಿದಳು:

“ಭಗವನ್! ನನ್ನ ಎಲ್ಲ ಬಯಕೆಗಳನ್ನೂ ಪೂರೈಸಿದ್ದೀಯೆ. ಈಗ ಮಹಾ ವೀರ್ಯಶಾಲಿಯಾದ ಮಗನನ್ನು ನನ್ನಲ್ಲಿ ಹುಟ್ಟಿಸು.”

ಅಗಸ್ತ್ಯನು ಹೇಳಿದನು:

“ಕಲ್ಯಾಣಿ! ನಿನ್ನ ನಡವಳಿಕೆಯಿಂದ ನಾನು ಸಂತುಷ್ಟನಾಗಿದ್ದೇನೆ. ನಿನ್ನ ಸಂತಾನದ ಕುರಿತು ನಾನು ಏನನ್ನು ಯೋಚಿಸುತ್ತಿದ್ದೇನೆ ಎನ್ನುವುದನ್ನು ಹೇಳುತ್ತೇನೆ. ಕೇಳು. ನೀನು ಒಂದು ಸಾವಿರ ಪುತ್ರರನ್ನು ಬಯಸುತ್ತೀಯಾ ಅಥವಾ ಪ್ರತಿಯೊಬ್ಬರೂ ಹತ್ತು ಮಕ್ಕಳಿಗೆ ಸಮರಾದ ನೂರು ಮಕ್ಕಳನ್ನು ಬಯಸುತ್ತೀಯಾ ಅಥವಾ ಪ್ರತಿಯೊಬ್ಬರೂ ನೂರು ಮಕ್ಕಳಿಗೆ ಸಮನಾದ ಹತ್ತು ಮಕ್ಕಳನ್ನು ಬಯಸುತ್ತೀಯಾ ಅಥವಾ ಸಾವಿರ ಮಕ್ಕಳಿಗೆ ಸಮನಾದ ಓರ್ವನೇ ಮಗನನ್ನು ಬಯಸುತ್ತೀಯಾ?”

ಲೋಪಾಮುದ್ರೆಯು ಹೇಳಿದಳು:

“ತಪೋಧನ! ಸಾವಿರ ಮಕ್ಕಳಿಗೆ ಸಮನಾದ ಓರ್ವನೇ ಪುತ್ರನು ಬೇಕು. ಒಳ್ಳೆಯತನವಿರುವ ಸಹಸ್ರಾರು ಮಕ್ಕಳಿಗಿಂತ ವಿದ್ವಾಂಸನೂ ಸಾಧುವೂ ಆದ ಒಬ್ಬನೇ ಮಗನು ಶ್ರೇಯಸ್ಕರ.”

ಹಾಗೆಯೇ ಆಗಲಿ ಎಂದು ಮಾತುಕೊಟ್ಟ ಮುನಿಯು ಸರಿಯಾದ ಸಮಯದಲ್ಲಿ ಶ್ರದ್ಧಾವಂತನಾಗಿ ಶ್ರದ್ಧಾವಂತ ಸಮಶೀಲೆಯೊಡನೆ ಕೂಡಿದನು. ಗರ್ಭವನ್ನು ನೀಡಿ ಅವನು ವನವನ್ನು ಸೇರಿದನು. ಅವನು ವನಕ್ಕೆ ಹೋಗಲು, ಗರ್ಭವು ಏಳು ವರ್ಷಗಳ ಪರ್ಯಂತ ಬೆಳೆಯಿತು. ಏಳು ವರ್ಷಗಳು ಕಳೆದ ನಂತರ ಧೃಡಸ್ಯು ಎಂಬ ಹೆಸರಿನ ಶಕ್ತಿಯಿಂದ ಉರಿಯುತ್ತಿರುವ ಮಹಾಕವಿಯು, ಉಪನಿಷತ್ತುಗಳ ಜೊತೆ ಮಹಾಯಶ ವೇದಗಳನ್ನು ಜಪಿಸುತ್ತಾ ಜನಿಸಿದನು. ಆ ತೇಜಸ್ವಿ ಮಹಾನೃಷಿಯು ಅಗಸ್ತ್ಯನ ಮಗನಾದನು. ಬಾಲಕನಾಗಿದ್ದಾಗಲೇ ಆ ತೇಜಸ್ವಿಯು ತನ್ನ ತಂದೆಯ ಮನೆಯಲ್ಲಿ ಭಾರವಾದ ಇಂಧನಗಳನ್ನು ಹೊತ್ತು ತರುತ್ತಿರುವುದರಿಂದ ಅವನು ಇಧ್ಮವಾಹನೆಂದು ಕರೆಯಲ್ಪಟ್ಟನು. ಈ ರೀತಿ ಸಮರ್ಥನಾಗಿರುವ ಮಗನನ್ನು ನೋಡಿ ಮುನಿಯು ಸಂತೋಷಗೊಂಡನು. ಹೀಗೆ ಅವನ ಪಿತೃಗಳು ಅವರು ಬಯಸಿದ ಲೋಕಗಳನ್ನು ಪಡೆದರು.

ಅಗಸ್ತ್ಯನು ಸಮುದ್ರವನ್ನು ಕುಡಿದು ಬರಿದುಮಾಡಿದುದು

ಕೃತಯುಗದಲ್ಲಿ ಕಾಲೇಯರೆಂದು ವಿಖ್ಯಾತ ಯುದ್ಧ ದುರ್ಮದ ಘೋರ, ಪರಮ ದಾರುಣ ದಾನವರ ಗಣವಿತ್ತು. ಅವರೆಲ್ಲರೂ ಒಂದಾಗಿ ವೃತ್ರನ ಆಶ್ರಯದಲ್ಲಿ ನಾನಾ ಆಯುಧಗಳೊಂದಿಗೆ ದಂಗೆಯೆದ್ದು ಮಹೇಂದ್ರನ ನೇತೃತ್ವದಲ್ಲಿದ್ದ ಸುರರ ಮೇಲೆ ಧಾಳಿಮಾಡಿದರು. ಆಗ ವೃತ್ರನನ್ನು ಕೊಲ್ಲಲ್ಲು ಮೊದಲೇ ಪ್ರಯತ್ನಮಾಡಿದ್ದ ಮೂವತ್ತು ದೇವತೆಗಳು ಪುರಂದರನನ್ನು ಮುಂದಿಟ್ಟುಕೊಂಡು ಬ್ರಹ್ಮನ ಉಪಸ್ಥಿತಿಗೆ ಬಂದರು. ಕೈಜೋಡಿಸಿದ ಅವರೆಲ್ಲರಿಗೆ ಪರಮೇಷ್ಠಿಯು ಹೇಳಿದನು:

“ಸುರರೇ! ನೀವು ಏನು ಮಾಡಬೇಕೆಂದಿರುವಿರೆಂದು ನನಗೆ ತಿಳಿದಿದೆ. ವೃತ್ರನನ್ನು ಕೊಲ್ಲುವ ಉಪಾಯವನ್ನು ಹೇಳುತ್ತೇನೆ. ದಧೀಚ ಎಂದು ವಿಖ್ಯಾತನಾದ ಉದಾರಬುದ್ಧಿಯ ಮಹಾ ಋಷಿಯಿದ್ದಾನೆ. ನಿವೆಲ್ಲರೂ ಅವನಲ್ಲಿಗೆ ಹೋಗಿ ವರವೊಂದನ್ನು ಕೇಳಿಕೊಳ್ಳಿ. ಆ ಧರ್ಮಾತ್ಮನು ಅಂತರಾತ್ಮದಲ್ಲಿಯ ಸಂತೋಷದಿಂದ ನಿಮಗೆ ಅದನ್ನು ನೀಡುತ್ತಾನೆ. ನೀವು ಎಲ್ಲರೂ ಒಟ್ಟಿಗೇ ವಿಜಯಾಕಾಂಕ್ಷಿಗಳಾಗಿ ತ್ರಿಲೋಕಗಳ ಹಿತಕ್ಕಾಗಿ ನಿನ್ನ ಅಸ್ಥಿಯನ್ನು ಕೊಡು ಎಂದು ಕೇಳಿಕೊಂಡರೆ ಅವನು ತನ್ನ ಶರೀರವನ್ನು ತೊರೆದು ನಿಮಗೆ ಅವನ ಅಸ್ತಿಯನ್ನು ನೀಡುತ್ತಾನೆ. ಅವನ ಅಸ್ತಿಯಿಂದ ಮಹಾಘೋರ, ಧೃಢವಾದ, ತೀಕ್ಷ್ಣವಾದ, ಆರು ಅರಗಳುಳ್ಳ, ಭಯಂಕರ ಶಬ್ಧವನ್ನುಳ್ಳ ಮಹಾಶತ್ರುವನ್ನು ಸಂಹರಿಸಬಲ್ಲ ವಜ್ರಾಯುಧವನ್ನು ತಯಾರಿಸಿರಿ. ಈ ವಜ್ರದಿಂದ ಶತಕ್ರತು ಆ ವೃತ್ರನನ್ನು ವಧಿಸುತ್ತಾನೆ. ನಿಮಗೆ ಎಲ್ಲವನ್ನೂ ಹೇಳಿ ತಿಳಿಸಿದ್ದೇನೆ. ಶೀಘ್ರದಲ್ಲಿಯೇ ಇದನ್ನು ಕಾರ್ಯಗತಗೊಳಿಸಿ.”

ಈ ರೀತಿ ಹೇಳಲು ದೇವತೆಗಳು ಪಿತಾಮಹನಿಂದ ಬೀಳ್ಕೊಂಡು ನಾರಾಯಣನನ್ನು ಮುಂದಿಟ್ಟುಕೊಂಡು ಸರಸ್ವತೀ ನದಿಯ ಆಚೆಯ ದಡದಲ್ಲಿರುವ ನಾನಾ ಮರ ಬಳ್ಳಿಗಳಿಂದ ಆವೃತವಾದ ದಧೀಚಿಯ ಆಶ್ರಮಕ್ಕೆ ಬಂದರು. ಆ ಆಶ್ರಮವು ಸಾಮಗಾನದಂತಿರುವ ದುಂಬಿಗಳ ಗೀತನಾದದಿಂದ ತುಂಬಿತ್ತು. ಗಂಡು ಕೋಕಿಲಗಳ ಕಲರವದಿಂದ ಮಿಶ್ರಿತವಾಗಿತ್ತು ಮತ್ತು ಕೀಟಗಳ ಝೀಂಕಾರದಿಂದ ತುಂಬಿತ್ತು. ಅಲ್ಲಿ ಎಮ್ಮೆ, ಹಂದಿ, ಜಿಂಕೆ, ಶಾರ್ದೂಲಗಳು ಭಯವನ್ನು ತೊರೆದು ಅಲ್ಲಲ್ಲಿ ಸಂಚರಿಸುತ್ತಿದ್ದವು. ಕೆನ್ನೆಗಳು ಒಡೆದು ಮದವನ್ನು ಸುರಿಸುತ್ತಿರುವ ಗಂಡು ಆನೆಗಳು ಹೆಣ್ಣು ಆನೆಗಳೊಂದಿಗೆ ಕೆರೆಗಳಲ್ಲಿ ಧುಮುಕಿ ಆಡುತ್ತಾ ಒಟ್ಟಿಗೇ ನಿನಾದಿಸುತ್ತಿದ್ದವು. ಸಿಂಹ, ಹುಲಿ ಮತ್ತು ಗುಹೆಗಳಲ್ಲಿ ವಾಸಿಸುವ ಇತರ ಪ್ರಾಣಿಗಳ ಮಹಾನಾದದಿಂದ ಆ ಆಶ್ರಮವು ಭೋರ್ಗರೆಯುತ್ತಿತ್ತು. ಈ ರೀತಿ ಸುಮನೋಹರವಾಗಿ ಶೋಭಿಸುತ್ತಿದ್ದ ದಧೀಚಿಯ ಆಶ್ರಮಕ್ಕೆ ತ್ರಿವಿಷ್ಠರು ಆಗಮಿಸಿದರು. ಅಲ್ಲಿ ದಿವಾಕರನಂತೆ ಬೆಳಗುತ್ತಿದ್ದ, ಲಕ್ಷ್ಮಿಯೊಂದಿಗೆ ಪಿತಾಮಹನಂತೆ ಜಾಜ್ವಲ್ಯಮಾನನಾದ ದಧೀಚಿಯನ್ನು ನೋಡಿದರು. ಸುರರು ಅವನ ಪಾದಗಳಿಂದ ತಲೆಬಾಗಿ ವಂದಿಸಿದರು ಮತ್ತು ಅವರೆಲ್ಲರೂ ಪರಮೇಷ್ಠಿಯು ಹೇಳಿದಂತೆ ಅವನಲ್ಲಿ ವರವನ್ನು ಬೇಡಿದರು. ಆಗ ಪರಮಪ್ರೀತನಾದ ದಧೀಚಿಯು ಆ ಸುರೋತ್ತಮರಿಗೆ ಹೇಳಿದನು:

“ನಿಮಗೆ ಹಿತವಾದುದನ್ನು ನಾನು ಇಂದು ಮಾಡುತ್ತೇನೆ. ನಿಮಗೋಸ್ಕರ ನನ್ನ ದೇಹವನ್ನೂ ತ್ಯಜಿಸುತ್ತೇನೆ.”

ಹೀಗೆ ಹೇಳಿದ ಆ ಮನುಷ್ಯರಲ್ಲಿಯೇ ಶ್ರೇಷ್ಠ ನಿಯಂತ್ರಕನು ತನ್ನ ಪ್ರಾಣವನ್ನು ತಕ್ಷಣವೇ ತ್ಯಜಿಸಿದನು. ಅನಂತರ ಸುರರು ಸಂತೋಷ ಮತ್ತು ಭರವಸೆಗಳೊಂದಿಗೆ ಅವನ ಅಸ್ತಿಯನ್ನು ಬ್ರಹ್ಮನ ಉಪದೇಶದಂತೆ ತೆಗೆದರು. ಜಯವು ದೊರೆಯುವುದೆಂಬ ಸಂತೋಷದಿಂದ ದೇವತೆಗಳು ತ್ವಷ್ಟಾರನಲ್ಲಿಗೆ ಹೋಗಿ ಅವನಿಗೆ ವಿವರಿಸಿ ಹೇಳಿದರು. ಅವರ ವಚನವನ್ನು ಕೇಳಿದ ತ್ವಷ್ಟನು ಸಂತೋಷದಿಂದ, ಪ್ರಯತ್ನದಿಂದ ಕೆಲಸದಲ್ಲಿ ತೊಡಗಿದನು. ಹರಿತವಾದ ಉಗ್ರರೂಪದ ಹರಿತ ವಜ್ರವನ್ನು ತಯಾರಿಸಿ ಸಂತೋಷದಿಂದ ಇಂದ್ರನಿಗೆ ಹೇಳಿದನು:

“ದೇವ! ಈ ಶ್ರೇಷ್ಠ ವಜ್ರದಿಂದ ಉಗ್ರ ಸುರಾರಿಗಳನ್ನು ಇಂದು ಭಸ್ಮಮಾಡು! ಅವರನ್ನು ಸಂಹರಿಸಿ ನೀನು ನಿನ್ನ ಗಣಗಳೊಂದಿಗೆ ತ್ರಿದಿವದಲ್ಲಿ ಸುಖವಾಗಿ ವಿರಾಜಿಸು.”

ತ್ವಷ್ಟನು ಹೀಗೆ ಹೇಳಲು ಪುರಂದರನು ಸಂತೋಷದಿಂದ ವಿನೀತನಾಗಿ ವಜ್ರವನ್ನು ಹಿಡಿದನು.

ಅನಂತರ ಆ ವಜ್ರಿಯು ಬಲಶಾಲಿ ದೇವತೆಗಳ ರಕ್ಷಣೆಯಲ್ಲಿ ಪರ್ವತ ಶೃಂಗಗಳಂತೆ ಮಹಾಕಾಯರಾದ, ಆಯುಧಗಳನ್ನು ಎತ್ತಿಹಿಡಿದ ಕಾಲಕೇಯರ ಒಗ್ಗಟ್ಟಿನ ರಕ್ಷಣೆಯಲ್ಲಿ ಭೂಮಿ ಮತ್ತು ಸ್ವರ್ಗಗಳನ್ನು ಆವರಿಸಿ ಬರುತ್ತಿರುವ ವೃತ್ರನನ್ನು ಎದುರಿಸಿದನು. ತಕ್ಷಣವೇ ದೇವತೆಗಳೊಂದಿಗೆ ದಾನವರ ಲೋಕಕ್ಕೇ ಮಹಾ ಸಂಕಟವನ್ನು ತಂದ ಯುದ್ಧವು ಪ್ರಾರಂಭವಾಯಿತು. ತಮ್ಮ ವೀರಬಾಹುಗಳಿಂದ ಖಡ್ಗಗಳನ್ನು ಮೇಲೆತ್ತಿ, ಗುಂಪಾಗಿ ಯುದ್ಧಕ್ಕೆ ಬಂದು ಎರಗುವಾಗ ಪರಸ್ಪರರ ಶರೀರಗಳು ಒಂದಕ್ಕೊಂದು ತಾಗಿ ಶಬ್ಧದ ತುಮುಲವುಂಟಾಯಿತು. ಅಂತರಿಕ್ಷದಿಂದ ಭೂಮಿಯ ಮೇಲೆ ಉರುಳುತ್ತಿದ್ದ ಶಿರಗಳು ತಾಲವೃಕ್ಷದಿಂದ ಉದುರಿ ಕೆಳಗೆ ಬೀಳುತ್ತಿದ್ದ ತಾಳೆಕಾಯಿಗಳಂತೆ ಕಂಡವು. ಬಂಗಾರದ ಕವಚಗಳನ್ನು ಧರಿಸಿದ್ದ ಕಾಲಕೇಯರು ಪರಿಘಾಯುಧಗಳನ್ನು ಹಿಡಿದು ಬೆಟ್ಟಕ್ಕೆ ತಗುಲಿದ ಕಾಡ್ಗಿಚ್ಚಿನಂತೆ ದೇವತೆಗಳಮೇಲೆ ಎರಗಿದರು. ವೇಗದಿಂದ ಓಡಿ ಬರುತ್ತಿರುವ ಅವರ ವೇಗವನ್ನು ಸಹಿಸಲಾರದೇ, ಅವರ ಸೇನೆಯನ್ನು ಒಡೆದು ಮುನ್ನುಗ್ಗಲಾರದೇ ದೇವತೆಗಳ ಸೇನೆಯು ಒಡೆದು ಭಯದಿಂದ ಪಲಾಯನಗೈಯಿತು. ಭಯಭೀತರಾಗಿ ಈ ರೀತಿ ಅವರು ಪಲಾಯನಮಾಡುತ್ತಿರುವುದನ್ನು ಮತ್ತು ವೃತ್ರನು ಇನ್ನೂ ಅಧಿಕವಾಗಿ ಬೆಳೆಯುತ್ತಿರುವುದನ್ನು ಕಂಡ ಸಹಸ್ರಾಕ್ಷ ಪುರಂದರನು ಅತೀವ ದುಃಖಪರನಾದನು. ಕುಗ್ಗುತ್ತಿರುವ ಶಕ್ರನನ್ನು ನೋಡಿದ ಸನಾತನ ವಿಷ್ಣುವು ತನ್ನದೇ ತೇಜಸ್ಸನ್ನಿತ್ತು ಶಕ್ರನ ಬಲವನ್ನು ಹೆಚ್ಚಿಸಿದನು. ವಿಷ್ಣುವಿನಿಂದ ವೃದ್ಧಿಹೊಂದಿದ ಶಕ್ರನನ್ನು ನೋಡಿ ದೇವಗಣಗಳು ಮತ್ತು ಅಮಲ ಬ್ರಹ್ಮರ್ಷಿಗಳು ತಮ್ಮ ತಮ್ಮ ತೇಜಸ್ಸನ್ನು ಅವನಿಗೆ ನೀಡಿದರು. ವಿಷ್ಣು, ದೇವತೆಗಳು ಮತ್ತು ಮಹಾಭಾಗ ಋಷಿಗಳ ಸಹಾಯದಿಂದ ಶಕ್ರನ ಬಲವು ವೃದ್ಧಿಸಿತು. ತ್ರಿದಶಾಧಿಪನು ಬಲಶಾಲಿಯಾದುದನ್ನು ತಿಳಿದ ವೃತ್ರನು ಮಹಾ ಗರ್ಜನೆಯನ್ನು ಗೈದನು. ಅವನ ನಿನಾದದಿಂದ ಭೂಮಿ, ದಿಕ್ಕುಗಳು, ಆಕಾಶ, ಸ್ವರ್ಗ ಮತ್ತು ಪರ್ವತಗಳು ಎಲ್ಲವೂ ತತ್ತರಿಸಿ ನಡುಗಿದವು. ಆ ಘೋರರೂಪೀ ಮಹಾಕಾಯನ ರವವನ್ನು ಕೇಳಿದ ಪರಮಭೀತಪ್ತ ಮಹೇಂದ್ರನು ಭಯದಿಂದ ಅವಸರದಲ್ಲಿ ಅವನ ವಧೆಗೆಂದು ಮಹಾ ವಜ್ರವನ್ನು ಬಿಟ್ಟನು. ಆ ಕಾಂಚನಮಾಲಧಾರಿ ಮಹಾಸುರನು ಶಕ್ರನ ವಜ್ರದಿಂದ ಹೊಡೆಯಲ್ಪಟ್ಟು, ಹಿಂದೆ ಪರ್ವತಗಳಲ್ಲಿ ಶ್ರೇಷ್ಠ ಮಹಾ ಪರ್ವತ ಮಂದರವು ವಿಷ್ಣುವಿನ ಕೈಯಿಂದ ಕಳಚಿ ಬಿದ್ದಂತೆ ಕೆಳಗುರುಳಿದನು. ಆ ದೈತ್ರಶ್ರೇಷ್ಠನು ಹತನಾದರೂ ಭಯಾರ್ತನಾದ ಶಕ್ರನು ಸರೋವರಕ್ಕೆ ಧುಮುಕಿ ಮುಳುಗಿದನು. ತನ್ನ ಕೈಯಿಂದಲೇ ಪ್ರಯೋಗಿಸಿದ್ದ ವಜ್ರವು ವೃತ್ರನನ್ನು ಕೊಲ್ಲುತ್ತದೆ ಎನ್ನುವುದರಲ್ಲಿ ನಂಬಿಕೆ ಇಲ್ಲದೆ ಭಯದಲ್ಲಿ ಹಾಗೆ ಮಾಡಿದನು.

ದೇವತೆಗಳೆಲ್ಲರೂ ಸಂತೋಷದಿಂದ ನಲಿದಾಡಿದರು. ಮಹರ್ಷಿಗಳು ಇಂದ್ರನನ್ನು ಕೊಂಡಾಡಿದರು. ಬೇಗನೇ ಎಲ್ಲ ಸುರರೂ ಸೇರಿ ವೃತ್ರನ ವಧೆಯಿಂದ ಪರಿತಪಿಸುತ್ತಿದ್ದ ದೈತ್ಯರನ್ನು ಸಂಹರಿಸಿದರು. ದೇವತೆಗಳಿಂದ ಹತರಾಗುತ್ತಿದ್ದ ಅವರು ಭಯಾರ್ತರಾಗಿ ಸಮುದ್ರವನ್ನು ಪ್ರವೇಶಿಸಿದರು. ರತ್ನದಿಂದೊಡಗೂಡಿದ, ತಿಮಿಂಗಿಲ ಸಂಕುಲಗಳಿಂದೊಡಗೂಡಿದ ಅಳತೆಯೇ ಇಲ್ಲದ ಆಳವನ್ನು ಪ್ರವೇಶಿಸಿದರು. ಅಲ್ಲಿ ಎಲ್ಲರೂ ಒಟ್ಟಿಗೆ ನಸುನಗುತ್ತಾ ಮೂರೂ ಲೋಕಗಳ ವಿನಾಶಾರ್ಥವಾಗಿ ಮಂತ್ರಾಲೋಚನೆ ಮಾಡಿದರು. ಅಲ್ಲಿ ಕೆಲವರು ಯೋಚಿಸಿ ನಿರ್ಧರಿಸುವವರಿದ್ದರೆ ಇತರರು ಆ ಉಪಾಯಗಳನ್ನು ಅನುಸರಿಸಿ ಕಾರ್ಯಗತಗೊಳಿಸುವವರಿದ್ದರು. ಅಲ್ಲಿ ಚಿಂತಿಸಿದ ವಿಚಾರಗಳು ಕ್ರಮೇಣ ಕಾಲಯೋಗದಂತೆ ಘೋರವಾಯಿತು. ವಿದ್ಯೆ ತಪಸ್ಸಿನಲ್ಲಿ ನಿರತರಾದರ ವಿನಾಶವು ಮೊಟ್ಟ ಮೊದಲ  ಕಾರ್ಯವಾಗಬೇಕೆಂದು ನಿಶ್ಚಯಿಸಿದರು.

“ತಪಸ್ಸೇ ಈ ಸರ್ವ ಲೋಕಗಳನ್ನು ನಡೆಸುತ್ತಿದೆ. ಆದುದರಿಂದ ತಪಸ್ಸನ್ನು ನಾಶಪಡಿಸಲು ಅವಸರ ಮಾಡಬೇಕು. ಈ ಭೂಮಿಯಲ್ಲಿ ಎಷ್ಟು ಮಂದಿ ಯಾರ್ಯಾರು ಧರ್ಮವಿದುಗಳು, ತಪಸ್ವಿಗಳು, ತಿಳಿದಿರುವವರು ಇದ್ದಾರೋ ಅವರೆಲ್ಲರನ್ನೂ ಕ್ಷಿಪ್ರವಾಗಿ ವಧಿಸಬೇಕು. ಅವರು ನಾಶವಾದರೆ ಜಗತ್ತೇ ನಾಶವಾಗುತ್ತದೆ.”

ಈ ರೀತಿ ಸಂತೋಷದಿಂದ ಜಗತ್ತಿನ ವಿನಾಶವನ್ನು ನಿರ್ಧರಿಸಿದ ಅವರೆಲ್ಲರೂ ರತ್ನಾಕರ ವರುಣಾಲಯವನ್ನು ತಮ್ಮ ಮಹಾ ಕೋಟೆಯನ್ನಾಗಿಸಿ ಆಶ್ರಯ ಹೊಂದಿದರು. ವಾರುಣ ನಿಧಿಮಾಂಬುಸ ಸಮುದ್ರವನ್ನು ಆಶ್ರಯಿಸಿದ ಕಾಲೇಯರು ತ್ರೈಲೋಕ್ಯದ ವಿನಾಶನಕ್ಕೆ ತಯಾರಿ ನಡೆಸಿದರು. ಪ್ರತಿ ರಾತ್ರಿಯೂ ಆ ಕೃದ್ಧ ಅಸುರರು ಆಶ್ರಮಗಳಲ್ಲಿ ಮತ್ತು ಪುಣ್ಯಕ್ಷೇತ್ರಗಳಲ್ಲಿದ್ದ ಮುನಿಗಳನ್ನು ಭಕ್ಷಿಸಿದರು. ವಸಿಷ್ಠನ ಆಶ್ರಮದಲ್ಲಿ ಆ ದುರಾತ್ಮರು ನೂರಾಎಂಟು ವಿಪ್ರರನ್ನೂ ಮತ್ತು ಇನ್ನೂ ಇತರ ಒಂಭತ್ತು ತಪಸ್ವಿಗಳನ್ನು ಭಕ್ಷಿಸಿದರು. ಪುಣ್ಯ ದ್ವಿಜನಿಷೇವಿತ ಚ್ಯವನಾಶ್ರಮಕ್ಕೆ ಹೋಗಿ ಫಲಮೂಲಗಳನ್ನೇ ಆಹಾರವಾಗಿಸಿಕೊಂಡಿದ್ದ ಒಂದು ನೂರು ಮುನಿಗಳನ್ನು ಭಕ್ಷಿಸಿದರು. ರಾತ್ರಿಯಸಮದಲ್ಲಿ ಹೀಗೆ ಮಾಡಿ ಹಗಲಿನಲ್ಲಿ ಸಮುದ್ರದಲ್ಲಿ ಅಡಗಿರುತ್ತಿದ್ದರು. ಭರದ್ವಾಜನ ಆಶ್ರಮದಲ್ಲಿ ನಿಯತರಾಗಿದ್ದ, ಕೇವಲ ಗಾಳಿ ಮತ್ತು ನೀರನ್ನು ಸೇವಿಸುತ್ತಿದ್ದ ಇಪ್ಪತ್ತು ಬ್ರಹ್ಮಚಾರಿಗಳನ್ನು ಕೊಂದು ಉರುಳಿಸಿದರು. ಈ ರೀತಿ ಕ್ರಮೇಣವಾಗಿ ಕಾಲವೇ ಅವರನ್ನು ಸುತ್ತುವರೆಯುವವರೆಗೆ ಕಾಲೇಯ ದಾನವರು ತಮ್ಮ ಭುಜಬಲವನ್ನು ಆಶ್ರಯಿಸಿ ಮತ್ತರಾಗಿ ರಾತ್ರಿ ಎಲ್ಲ ಆಶ್ರಮಗಳನ್ನು ಆಕ್ರಮಣಿಸಿ ಬಹಳಷ್ಟು ದ್ವಿಜಗಣಗಳನ್ನು ಸಂಹರಿಸಿದರು. ಈ ರೀತಿ ತಾಪಸರನ್ನು ಪೀಡಿಸುತ್ತಿರುವವರು ದೈತ್ಯರು ಎಂದು ಮನುಷ್ಯರ್ಯಾರಿಗೂ ತಿಳಿದಿರಲಿಲ್ಲ. ಬೆಳಿಗ್ಗೆ ಸಮಯದಲ್ಲಿ ನಿಯತಾಹಾರಗಳಿಂದ ಕೃಶರಾಗಿದ್ದ ಮುನಿಗಳ ನಿರ್ಜೀವ ಶರೀರಗಳು ಭೂಮಿಯ ಮೇಲೆ ಬಿದ್ದಿರುವುದನ್ನು ನೋಡುತ್ತಿದ್ದರು. ಕೃಶರಾದ, ಮಾಂಸ-ರಕ್ತ-ಮಜ್ಜಗಳಿಲ್ಲದ, ಕೈಕಾಲುಗಳನ್ನು ತುಂಡರಿಸಿದ, ಅಕೀರ್ಣ ಶಂಖಗಳ ರಾಶಿಯಂತಿದ್ದ ಹೆಣಗಳ ರಾಶಿಗಳಿಂದ ಭೂಮಿಯು ತುಂಬಿ ಕೊಂಡಿತು. ವಿಪ್ರವಿದರ ಒಡೆದ ಕಲಶಗಳ ಚೂರುಗಳಿಂದ ಮತ್ತು ಅಗ್ನಿಹೋತ್ರಗಳ ತುಂಡುಗಳಿಂದ ಭೂಮಿಯು ತುಂಬಿಕೊಂಡಿತು. ಸ್ವಾಧ್ಯಾಯ, ವಷಟ್ಕಾರಗಳು ನಿಂತು, ಯಜ್ಞವೇ ಮೊದಲಾದ ಉತ್ಸವ ಕ್ರಿಯೆಗಳು ನಿಂತು ಕಾಲೇಯರ ಭಯಪೀಡಿತವಾದ ಜಗತ್ತು ಉತ್ಸಾಹವನ್ನೇ ಕಳೆದುಕೊಂಡಿತು. ಈ ರೀತಿ ಮಾನವರು ಕುಂದುತ್ತಿರಲು ತಮ್ಮನ್ನು ರಕ್ಷಿಸಿಕೊಳ್ಳಲು ಭಯಭೀತರಾಗಿ ದಿಕ್ಕುದಿಕ್ಕುಗಳಿಗೆ ಓಡಿದರು. ಕೆಲವರು ಗುಹೆಗಳಲ್ಲಿ ಅಡಗಿಕೊಂಡರೆ, ಇತರರು ಜಲಪಾತಗಳ ಹಿಂದೆ ಅಡಗಿಕೊಂಡರು. ಇನ್ನು ಕೆಲವರು ಸಾವಿಗೆ ಎಷ್ಟು ಹೆದರಿದರೆಂದರೆ ಭಯವೇ ಅವರನ್ನು ಸಾಯಿಸಿತು. ಅಲ್ಲಿದ್ದ ಕೆಲವು ಮಹಾದರ್ಪಿತ ಮಹೇಷ್ವಾಸ ಶೂರರು ದಾನವರನ್ನು ಬೇಟೆಯಾಡಲು ಪರಮ ಯತ್ನವನ್ನು ಮಾಡಿದರು. ಆದರೆ ಆ ದಾನವರು ಸಮದ್ರದಲ್ಲಿ󡚴ಅಡಗಿ ಕೊಂಡಿದ್ದುದರಿಂದ ಅವರನ್ನು ಕಾಣದೇ ಅವರ ಪ್ರಯತ್ನದಲ್ಲಿಯೇ ಸೋತು ಮರಣ ಹೊಂದಿದರು. ಯಜ್ಞೋತ್ಸವಗಳು ನಿಂತು ಜಗತ್ತೇ ನಾಶದ ಅಂಚಿನಲ್ಲಿರಲು ದೇವತೆಗಳು ಅತೀವ ಚಿಂತೆಗೊಳಗಾದರು. ಭಯದಿಂದ ಇಂದ್ರನೊಡನೆ ಸೇರಿ ಮಂತ್ರಾಲೋಚನೆ ಮಾಡಿ, ಅಪರಾಜಿತ ವೈಕುಂಠ ನಾರಾಯಣನಲ್ಲಿಗೆ ಬಂದರು.

ಅಲ್ಲಿ ಸೇರಿದ್ದ ದೇವತೆಗಳು ಮಧುಸೂದನನಿಗೆ ಹೇಳಿದರು:

“ನೀನೇ ನಮ್ಮ ಸೃಷ್ಟ, ನಮ್ಮ ಪಾಲಕ, ನಮ್ಮ ಒಡೆಯ, ಮತ್ತು ಜಗತ್ತಿನ ಪ್ರಭು! ಹಂದಾಡುವ ಮತ್ತು ಹಂದಾಡದೇ ಇರುವ ಎಲ್ಲವನ್ನೂ ನೀನೇ ಸೃಷ್ಟಿಸಿದೆ. ಪುಷ್ಕರೇಕ್ಷಣ! ಹಿಂದೆ ಭೂಮಿಯು ಸಮುದ್ರದಲ್ಲಿ ನಷ್ಟವಾದಾಗ ಜಗತ್ತಿಗಾಗಿ ನೀನು ವರಾಹದ ರೂಪವನ್ನು ತಾಳಿ ಸಮದ್ರದಿಂದ ಮೇಲ್ತಂದೆ! ಪುರುಷೋತ್ತಮ! ಮಹಾವೀರ್ಯ! ಆದಿದೈತ್ಯ ಹಿರಣ್ಯಕಶಿಪುವನ್ನು ನಾರಸಿಂಹನ ದೇಹತಾಳಿ ಸಂಹರಿಸಿದೆ. ಸರ್ವಭೂತಗಳಿಂದಲೂ ಅವಧ್ಯನಾಗಿದ್ದ ಮಹಾಸುರ ಬಲಿಯನ್ನೂ ಕೂಡ ನೀನು ವಾಮನನ ರೂಪಧರಿಸಿ ಮೂರೂ ಲೋಕಗಳಿಂದ ಹೊರಹಾಕಿದೆ. ಯಜ್ಞಗಳನ್ನು ಧ್ವಂಸಮಾಡುತ್ತಿದ್ದ ಜಂಭ ಎನ್ನುವ ಮಹೇಷ್ವಾಸ ಕ್ರೂರ ಅಸುರನು ನಿನ್ನಿಂದಲೇ ಕೆಳಗುರಿಳಿದನು. ಮಧುಸೂದನ! ಭಯಭೀತರಾದ ನಮಗೆ ಗತಿಯಾದ ನೀನು ಇವೇ ಮೊದಲಾಗಿ ಸಂಖ್ಯೆಯೇ ಸಿಗದಷ್ಟು ಕಾರ್ಯಗಳನ್ನು ಮಾಡಿದ್ದೀಯೆ! ದೇವದೇವೇಶ! ಆದುದರಿಂದಲೇ ಲೋಕಾರ್ಥವಾಗಿ ನಾವು ನಿನ್ನಲ್ಲಿ ಬೇಡಿಕೊಳ್ಳುತ್ತಿದ್ದೇವೆ. ಲೋಕಗಳನ್ನೂ, ದೇವತೆಗಳನ್ನು ಮತ್ತು ಇಂದ್ರನನ್ನು ಈ ಮಹಾಭಯದಿಂದ ರಕ್ಷಿಸು! ಚತುರ್ವಿಧ ಪ್ರಜೆಗಳೆಲ್ಲರೂ ಇಲ್ಲಿಂದ ಬರುವ ಅನುಗ್ರಹದಿಂದಲೇ ಜೀವಿಸುತ್ತವೆ. ಹೀಗೆ ಅಭಿವೃದ್ಧಿಹೊಂದಿದ ಅವರು ಹವ್ಯಕವ್ಯಗಳ ಮೂಲಕ ದೇವತೆಗಳ ಅಭಿವೃದ್ಧಿಗೆ ಕಾರಣರಾಗುತ್ತಾರೆ. ಹೀಗೆ ಲೋಕಗಳು ಅನ್ಯೋನ್ಯರನ್ನು ಅವಲಂಬಿಸಿ ನಡೆಯುತ್ತವೆ. ನಿನ್ನ ಪ್ರಸಾದದಿಂದ ಪರಿರಕ್ಷಿತರಾಗಿ ಲೋಕಗಳು ವಿಘ್ನಗಳಿಲ್ಲದೇ ಹೀಗೆಯೇ ನಡೆಯುತ್ತಿವೆ. ಈಗ ಈ ಅತೀವ ಭಯವು ಲೋಕಗಳಿಗೆ ಬಂದೊದಗಿದೆ. ರಾತ್ರಿಯಲ್ಲಿ ಬ್ರಾಹ್ಮಣರನ್ನು ಯಾರು ಕೊಲ್ಲುತ್ತಿದ್ದಾರೆ ಎಂದು ತಿಳಿಯಲಾರೆವು. ಬ್ರಾಹ್ಮಣರು ನಾಶವಾದರೆ ಭೂಮಿಯೂ ವಿನಾಶ ಹೊಂದುತ್ತದೆ. ಮತ್ತು ಭೂಮಿಯು ಕ್ಷೀಣವಾದರೆ, ದೇವಲೋಕವೂ ನಾಶಗೊಳ್ಳುತ್ತದೆ. ಮಹಾಬಾಹೋ! ಜಗತ್ಪತೇ! ನಿನ್ನ ಕರುಣೆಯಿಂದ ಲೋಕಗಳೆಲ್ಲವೂ ನಾಶವಾಗದಿರಲಿ. ಅವೆಲ್ಲವನ್ನೂ ಪರಿರಕ್ಷಿಸು.”

ವಿಷ್ಣುವು ಹೇಳಿದನು:

“ಸುರರೇ! ಪ್ರಜೆಗಳೆಲ್ಲರೂ ನಾಶಗೊಳ್ಳುತ್ತಿರುವುದರ ಕಾರಣವನ್ನು ನಾನು ತಿಳಿದಿದ್ದೇನೆ. ನಾನು ಹೇಳುತ್ತೇನೆ - ಭಯವನ್ನು ತೊರೆದು ಕೇಳಿ. ಕಾಲೇಯರೆಂದು ವಿಖ್ಯಾತರಾದ ಒಂದು ಪರಮದಾರುಣ ಗುಂಪಿದೆ. ಅವರು ವೃತ್ರನನ್ನು ಆಶ್ರಯಿಸಿ ಜಗತ್ತುಗಳನ್ನೆಲ್ಲವನ್ನೂ ಬಾಧಿಸುತ್ತಿದ್ದರು. ಧೀಮಂತ ಸಹಸ್ರಾಕ್ಷನು ವೃತ್ರನನ್ನು ಸಂಹರಿಸಿದುದನ್ನು ಕಂಡು ಅವರು ವರುಣಾಲಯವನ್ನು ಹೊಕ್ಕಿ ತಮ್ಮ ಜೀವಗಳನ್ನು ರಕ್ಷಿಸಿಕೊಂಡರು. ಈಗ ಅವರು ಘೋರ ಮೊಸಳೆ ತಿಮಿಂಗಿಲಗಳು ತುಂಬಿರುವ ಸಮುದ್ರವನ್ನು ಸೇರಿದ್ದಾರೆ. ಲೋಕಗಳ ವಿನಾಶಕ್ಕಾಗಿ ಅವರು ರಾತ್ರಿಯಲ್ಲಿ ಇಲ್ಲಿರುವ ಮುನಿಗಳನ್ನು ಕೊಲ್ಲುತ್ತಿದ್ದಾರೆ. ಸಮುದ್ರದಲ್ಲಿ ಆಶ್ರಯ ಪಡೆದಿರುವ ಅವರನ್ನು ಕೊಲ್ಲಲು ಶಕ್ಯವಿಲ್ಲ. ಸಮುದ್ರವನ್ನೇ ನಾಶಗೊಳಿಸುವುದರ ಕುರಿತು ನಿಮ್ಮ ಬುದ್ಧಿಯನ್ನು ಓಡಿಸಬೇಕು. ಅಗಸ್ತ್ಯನನ್ನು ಬಿಟ್ಟು ಬೇರೆ ಯಾರು ತಾನೇ ಸಮುದ್ರವನ್ನು ಬತ್ತಿಸಲು ಶಕ್ಯರಿದ್ದಾರೆ?”

ವಿಷ್ಣುವಿನ ಈ ಮಾತುಗಳನ್ನು ಕೇಳಿ ಸಂತೋಷಗೊಂಡ ದೇವತೆಗಳು ಪರಮೇಷ್ಠಿಯಿಂದ ಬೀಳ್ಕೊಂಡು ಅಗಸ್ತ್ಯನ ಆಶ್ರಮಕ್ಕೆ ಬಂದರು. ಅಲ್ಲಿ ಅವರು ದೇವತೆಗಳ ಮಧ್ಯೆ ಪಿತಾಮಹನಂತೆ ಋಷಿಗಳ ಮಧ್ಯೆ ಕುಳಿತಿದ್ದ ದೀಪ್ತತೇಜಸ್ವಿ ಮಹಾತ್ಮ ವಾರುಣಿಯನ್ನು ಕಂಡರು. ಆಶ್ರಮದಲ್ಲಿದ್ದ ಆ ಮಹಾತ್ಮ, ಮೈತ್ರಾವರುಣಿ, ಅಚ್ಯುತ, ತಪೋರಾಶಿಯನ್ನು ಅವನ ಕರ್ಮಗಳನ್ನು ಪ್ರಶಿಂಸಿಸುತ್ತಾ ಭೇಟಿಯಾಗಿ ಹೇಳಿದರು:

“ಹಿಂದೆ ನಹುಷನಡಿಯಲ್ಲಿ ಪರಿತಪ್ತ ಲೋಕಗಳಿಗೆ ನೀನೇ ಗತಿಯಾಗಿದ್ದೆ. ಲೋಕಗಳ ಮೇಲೆ ಸುರರ ಅಧಿಪತ್ಯಕ್ಕಾಗಿ ಆ ಲೋಕಕಂಟಕನನ್ನು ಹೊರಹಾಕಿದ್ದೆ. ಭಾಸ್ಕರನ ಮೇಲಿನ ಕೋಪದಿಂದ ಪರ್ವತೋತ್ತಮ ವಿಂಧ್ಯವು ಒಂದೇಸಮನ ಬೆಳೆಯತೊಡಗಿದಾಗ ನಿನ್ನ ಮಾತನ್ನು ಮೀರಲಾಗದೇ ಆ ಶೈಲವು ಬೆಳೆಯುವುದನ್ನು ನಿಲ್ಲಿಸಿತು. ಲೋಕವು ಕತ್ತಲೆಯಲ್ಲಿ ಮುಳುಗಿದಾಗ ಮತ್ತು ಪ್ರಜೆಗಳು ಮೃತ್ಯುವಿನ ಹಿಂಸೆಗೊಳಗಾಗಿದ್ದಾಗ ನೀನೇ ನಾಥನಾಗಿ ಅವರಿಗೆ ಬಿಡುಗಡೆ ನೀಡಿ ಪರಮ ಗತಿಯನ್ನು ಒದಗಿಸಿದೆ. ಭಗವನ್! ಭಯಭೀತರಾದ ನಮಗೆ ನಿತ್ಯವೂ ನೀನು ಗತಿಯಾಗಿದ್ದೀಯೆ. ಆದುದರಿಂದ, ಆರ್ತರಾದ ನಾವು ನಿನ್ನಲ್ಲಿ ವರವೊಂದನ್ನು ಕೇಳುತ್ತಿದ್ದೇವೆ.”

ಮೂವತ್ತು ದೇವತೆಗಳ ಮಾತುಗಳನ್ನು ಕೇಳಿದ ಆ ಮೈತ್ರಾವರುಣಿಯು ಹೇಳಿದನು:

“ನೀವು ಇಲ್ಲಿಗೆ ಏಕೆ ಬಂದಿದ್ದೀರಿ? ನನ್ನಿಂದ ಏನು ವರವನ್ನು ಕೇಳುತ್ತಿದ್ದೀರಿ?”

ಅವನು ಹೀಗೆ ಹೇಳಲು ದೇವತೆಗಳು ಮುನಿಗೆ ಹೇಳಿದರು:

“ಮಹರ್ಷೇ! ನೀನು ಸಮುದ್ರವನ್ನು ಕುಡಿಯಬೇಕು ಎಂದು ಬಯಸುತ್ತೇವೆ. ಅನಂತರ ನಾವು ಆ ಸುರದ್ವೇಷಿ ಕಾಲೇಯರನ್ನು ಅವರ ಬಾಂಧವರೊಂದಿಗೆ ವಧಿಸುತ್ತೇವೆ.”

ದೇವತೆಗಳ ಮಾತನ್ನು ಕೇಳಿ ಮುನಿಯು

“ಹಾಗೆಯೇ ಆಗಲಿ! ಲೋಕಗಳ ಮಹಾ ಹಿತಕ್ಕಾಗಿ ನಿಮ್ಮ ಆಸೆಯನ್ನು ನೆರವೇರಿಸುತ್ತೇನೆ”

ಎಂದು ಹೇಳಿದನು. ಹೀಗೆ ಹೇಳಿದ ನಂತರ ಅವನು ಋಷಿ, ತಪಃಸಿದ್ಧ, ಸುವ್ರತರು ಮತ್ತು ದೇವತೆಗಳೊಡಗೂಡಿ ಸರಿತಾಪತಿ ಸಮುದ್ರನ ಬಳಿ ಹೋದನು. ಮನಷ್ಯ-ಉರಗ-ಗಂಧರ್ವ-ಯಕ್ಷ-ಕಿಂಪುರುಷರು ಆ ಮಹಾತ್ಮನ ಅದ್ಭುತ ಕಾರ್ಯವನ್ನು ನೋಡಲು ಅಲ್ಲಿಗೆ ಬಂದು ಸೇರಿದರು. ಅವರೆಲ್ಲರೂ ಒಟ್ಟಿಗೇ ಭಯಂಕರವಾಗಿ ಭೋರ್ಗರೆಯುತ್ತಿರುವ, ಗಾಳಿಯಿಂದ ಅಲ್ಲೋಲಕಲ್ಲೋಲಗೊಂಡ ಅಲೆಗಳು ನಾಟ್ಯಮಾಡುವಂತೆ ತೋರುತ್ತಿರುವ, ನಗುತ್ತಿರುವಂತಿರುವ ನೊರೆಯ, ಒಡೆದ ಕಂದರಗಳುಳ್ಳ, ನಾನಾ ತರಹದ ಮೀನುಗಳಿಂದ ಮತ್ತು ನಾನಾ ವಿಧದ ಪಕ್ಷಿಗಣಗಳಿಂದ ಕೂಡಿದ ಸಮುದ್ರದ ಬಳಿ ಬಂದರು. ಅಗಸ್ತ್ಯನೊಂದಿಗೆ ದೇವತೆಗಳು, ಜೊತೆಗೆ ಗಂಧರ್ವರೂ, ಮಹಾಉರುಗಗಳೂ, ಮಹಾಭಾಗ ಋಷಿಗಳೂ ಸುಮುದ್ರತೀರದಲ್ಲಿ ಬಂದು ಸೇರಿದರು.

ಭಗವಾನ್ ಋಷಿ ವಾರುಣಿಯು ಸಮುದ್ರವನ್ನು ಸೇರಿ ಅಲ್ಲಿ ಕೂಡಿದ್ದ ದೇವತೆಗಳಿಗೆ ಮತ್ತು ಋಷಿಗಳಿಗೆ ಹೇಳಿದನು:

“ಈಗ ಲೋಕಹಿತಕ್ಕಾಗಿ ನಾನು ಈ ವರುಣಾಲಯವನ್ನು ಕುಡಿಯುತ್ತೇನೆ. ನೀವು ಏನು ಮಾಡಬೇಕೆಂದಿರುವಿರೋ ಅದನ್ನು ಶೀಘ್ರದಲ್ಲಿಯೇ ಮಾಡಿ.”

ಈ ಮಾತನ್ನು ಹೇಳಿ ಅಚ್ಯುತ ಮೈತ್ರಾವರುಣಿಯು ಕೃದ್ಧನಾಗಿ ಸರ್ವ ಲೋಕವೂ ನೋಡುತ್ತಿದ್ದಂತೆ ಸಮುದ್ರವನ್ನು ಸಂಪೂರ್ಣವಾಗಿ ಕುಡಿದು ಬರಿದುಮಾಡಿದನು. ಅವನು ಸಮುದ್ರವನ್ನು ಕುಡಿದಿದ್ದುದನ್ನು ನೋಡಿ ಇಂದ್ರನೂ ಸೇರಿ ದೇವತೆಗಳು ಪರಮ ವಿಸ್ಮಿತರಾದರು ಮತ್ತು ಅವನನ್ನು ಸ್ತುತಿಸಿ ಪೂಜಿಸಿದರು.

“ಲೋಕಭಾವನ! ನೀನೇ ನಮ್ಮ ಮತ್ತು ಲೋಕಗಳ ತ್ರಾತ, ವಿಧಾತ. ನಿನ್ನ ಪ್ರಸಾದದಿಂದ ಅಮರರು ಮತ್ತು ಜಗತ್ತು ಈ ಕಷ್ಟದಿಂದ ಪಾರುಗೊಂಡಿವೆ.”

ಆ ಮಹಾತ್ಮನು ಮಹಾಸಾಗರವನ್ನು ನೀರಿಲ್ಲದೇ ಮಾಡಿದ ನಂತರ ದೇವತೆಗಳಿಂದ ಪೂಜಿಸಲ್ಪಡಲು ಗಂಧರ್ವರು ಎಲ್ಲೆಡೆಯೂ ನಾದವನ್ನು ತುಂಬಿಸಿದರು. ಅವನ ಮೇಲೆ ದಿವ್ಯ ಪುಷ್ಪಗಳನ್ನು ಸುರಿಸಲಾಯಿತು. ಆ ಮಹಾಸಾಗರವು ನೀರಿಲ್ಲದೇ ಬತ್ತಿಹೋದದನ್ನು ಕಂಡು ಸುರರೆಲ್ಲರೂ ಪರಮ ಹೃಷ್ಟರಾದರು. ದಿವ್ಯ ಶ್ರೇಷ್ಠ ಆಯುಧಗಳನ್ನು ಹಿಡಿದು ಸಂತೋಷದಿಂದ ಆ ದಾನವರನ್ನು ಸಂಹರಿಸಿದರು. ಮಹಾತ್ಮ ದೇವತೆಗಳಿಂದ ಮಹಾವೀರ, ಮಹಾ ವೇಗದಲ್ಲಿ ಹೋಗಬಲ್ಲ ಆ ದಾನವರು ನಿರ್ನಾಮಗೊಂಡರು. ವೇಗಶಾಲಿ ಮಹಾತ್ಮ ದಿವೌಕಸರ ವೇಗದ ಧಾಳಿಯನ್ನು ಅವರು ಸಹಿಸಲಾರದಾದರು. ಭಯಂಕರ ಘರ್ಜನೆಯೊಂದಿಗೆ ನಡೆದ ಆ ಮಹಾ ಯುದ್ದದಲ್ಲಿ ಒಂದೇ ಕ್ಷಣದಲ್ಲಿ ದೇವತೆಗಳು ದಾನವರನ್ನು ವಧಿಸಿದರು. ಭಾವಿತಾತ್ಮರಾದ ಮುನಿಗಳ ತಪಸ್ಸಿನಿಂದ ಮೊದಲೇ ದಗ್ಧರಾಗಿದ್ದ ಪರಮ ಶಕ್ತಿಯನ್ನುಪಯೋಗಿಸಿ ಹೋರಾಡಿದರೂ ದೇವತೆಗಳಿಂದ ನಾಶಹೊಂದಿದರು. ಬಂಗಾರದ ಕವಚಾಭರಣಗಳು, ಕುಂಡಲ ಮತ್ತು ಅಂಗಗಳನ್ನು ಧರಿಸಿದ್ದ ಅವರು ವಧಿಸಲ್ಪಟ್ಟು ಹೂಬಿಟ್ಟ ಕಿಂಶುಕಗಳಂತೆ ಶೋಭಿಸಿದರು. ಸಾಯದೇ ಉಳಿದ ಕೆಲವು ಕಾಲೇಯರು ದೇವಿ ವಸುಧೆಯನ್ನು ಬಗೆದು ಪಾತಾಲತಳವನ್ನು ಆಶ್ರಯಿಸಿದರು. ದಾನವರು ಹತರಾದುದನ್ನು ನೋಡಿದ ದೇವತೆಗಳು ಮುನಿಪುಂಗವನನ್ನು ವಿವಿಧ ವಾಕ್ಯಗಳಿಂದ ಪ್ರಶಂಸಿಸಿ ಹೇಳಿದರು:

“ಮಹಾಭಾಗ! ನಿನ್ನ ಪ್ರಸಾದದಿಂದ ಲೋಕಗಳಿಗೆ ಮಹಾ ಸುಖವು ಪ್ರಾಪ್ತವಾಯಿತು. ಮತ್ತು ನಿನ್ನ ತೇಜಸ್ಸಿನಿಂದ ಈ ಕ್ರೂರವಿಕ್ರಮಿ ಕಾಲೇಯರು ಹತರಾದರು. ಈಗ ಈ ಸಮುದ್ರವನ್ನು ತುಂಬಿಸು. ನೀನು ಕುಡಿದ ನೀರನ್ನು ಪುನಃ ಇದರಲ್ಲಿ ಬಿಡು.”

ಇದನ್ನು ಕೇಳಿದ ಭಗವಾನ್ ಮುನಿಪುಂಗವನು ಉತ್ತರಿಸಿದನು:

“ನಾನು ಕುಡಿದ ನೀರನ್ನು ಈಗಾಗಲೇ ನಾನು ಜೀರ್ಣಿಸಿಕೊಂಡಿದ್ದೇನೆ. ಸಮುದ್ರವನ್ನು ತುಂಬಿಸಲು ಬೇರೆ ಯಾವುದಾದರೂ ಉಪಾಯವನ್ನು ಯೋಚಿಸಬೇಕು. ನೀವೇ ಪ್ರಯತ್ನ ಮಾಡಬೇಕು.”

ಭಾವಿತಾತ್ಮ ಮಹರ್ಷಿಯ ಈ ಮಾತುಗಳನ್ನು ಕೇಳಿದ ಸುರರು ಒಟ್ಟಿಗೇ ವಿಸ್ಮಿತರೂ ವಿಷಣ್ಣರೂ ಆದರು. ಮುನಿಪುಂಗವನಿಗೆ ನಮಸ್ಕರಿಸಿ, ಪರಸ್ಪರರನ್ನು ಬೀಳ್ಕೊಂಡು ಎಲ್ಲರೂ ಎಲ್ಲಿಂದ ಬಂದಿದ್ದರೋ ಅಲ್ಲಿಗೆ ತೆರಳಿದರು. ಸಮುದ್ರವನ್ನು ಪುನಃ ತುಂಬಿಸುವುದರ ಕುರಿತು ಮತ್ತೆ ಮತ್ತೆ ಮಂತ್ರಾಲೋಚನೆ ಮಾಡಿ ದೇವತೆಗಳು ವಿಷ್ಣುವಿನೊಂದಿಗೆ ಪಿತಾಮಹನಲ್ಲಿಗೆ ಹೋದರು. ಅವರೆಲ್ಲರೂ ಕೈಜೋಡಿಸಿ ಸಾಗರವನ್ನು ತುಂಬಿಸುವುದರ ಕುರಿತು ಹೇಳಿದರು. ಲೋಕಪಿತಾಮಹ ಬ್ರಹ್ಮನು ಅಲ್ಲಿ ಸೇರಿದ್ದ ದೇವತೆಗಳಿಗೆ ಹೇಳಿದನು:

“ವಿಬುಧರೇ! ನೀವೆಲ್ಲರೂ ನಿಮಗಿಷ್ಟವಾದಲ್ಲಿಗೆ ಹೋಗಿ. ಮಹಾ ಕಾಲದ ನಂತರ ಮಹಾರಾಜ ಭಗೀರಥನು ತನ್ನ ಬಾಂಧವರ ಕಾರಣದಿಂದ ಸಮುದ್ರವು ತನ್ನ ಪ್ರಾಕೃತಿಕ ಸ್ವರೂಪವನ್ನು ಪಡೆಯುವಂತೆ ಮಾಡುತ್ತಾನೆ.”

ಅಗಸ್ತ್ಯನು ವಿಂಧ್ಯಪರ್ವತವು ಬೆಳೆಯದಂತೆ ತಡೆದುದು

ಭಾನುವು ಉದಯವಾಗುವ ಮತ್ತು ಅಸ್ತನಾಗುವ ಸಮಯಗಳಲ್ಲಿ ಅದ್ರಿರಾಜ, ಮಹಾಶೈಲ ಕನಕಪರ್ವತ ಮೇರುವನ್ನು ಪ್ರದಕ್ಷಿಣೆ ಮಾಡುತ್ತಿದ್ದನು. ಅದನ್ನು ಕಂಡ ವಿಂಧ್ಯ ಪರ್ವತನು ಸೂರ್ಯನಿಗೆ ಹೇಳಿದನು:

“ಭಾಸ್ಕರ! ಹೇಗೆ ಮೇರುವನ್ನು ಪ್ರತಿದಿನ ಸುತ್ತುವರೆಯುತ್ತೀಯೋ ಹಾಗೆ ನನ್ನನ್ನೂ ಕೂಡ ಪ್ರದಕ್ಷಿಣೆ ಮಾಡು.”

ಸೂರ್ಯನು ಶೈಲೇಂದ್ರನ ಈ ಮಾತಿಗೆ ಉತ್ತರಿಸಿದನು:

“ಶೈಲ! ನನ್ನ ಇಚ್ಛೆಯಿಂದ ನಾನು ಅವನಿಗೆ ಪ್ರದಕ್ಷಿಣೆ ಮಾಡುತ್ತಿಲ್ಲ. ಈ ಜಗತ್ತನ್ನು ಯಾರು ಸೃಷ್ಟಿಸಿದನೋ ಅವನೇ ನನಗೆ ಈ ಮಾರ್ಗವನ್ನು ಹಾಕಿ ಕೊಟ್ಟಿದ್ದಾನೆ.”

ಇದನ್ನು ಕೇಳಿ ಕೋಪಗೊಂಡ ಆ ಪರ್ವತನು ತಕ್ಷಣವೇ ಬೆಳೆದು ಸೂರ್ಯ ಮತ್ತು ಚಂದ್ರರ ಮಾರ್ಗವನ್ನು ತಡೆಗಟ್ಟಿದನು. ಆಗ ಇಂದ್ರನೂ ಸೇರಿ ಸರ್ವ ದೇವತೆಗಳೂ ಆ ಮಹಾ ಪರ್ವತರಾಜನಲ್ಲಿಗೆ ಹೋಗಿ ಅವನನ್ನು ತಡೆಯಲು ಪ್ರಯತ್ನಿಸಿದರು. ಆದರೆ ಅವರು ಹೇಳಿದಂತೆ ಮಾಡಲು ಅವನು ನಿರಾಕರಿಸಿದನು. ಅನಂತರ ಆ ಸುರರು ಒಟ್ಟಿಗೇ ಆಶ್ರಮದಲ್ಲಿದ್ದ ತಪಸ್ವಿ, ಧಾರ್ಮಿಕರಲ್ಲಿಯೇ ವರಿಷ್ಠ ಮುನಿ, ಅದ್ಭುತ ವೀರ್ಯದೀಪ್ತ ಅಗಸ್ತ್ಯನಲ್ಲಿಗೆ ಹೋಗಿ ವಿಷಯವನ್ನು ತಿಳಿಸಿ ಹೇಳಿದರು:

“ಕ್ರೋಧವಶನಾದ ಶೈಲರಾಜ ವಿಂಧ್ಯನು ಸೂರ್ಯ-ಚಂದ್ರರ ಮತ್ತು ನಕ್ಷತ್ರಗಳ ಗತಿಯನ್ನು ನಿಲ್ಲಿಸಿದ್ದಾನೆ. ನಿನ್ನ ಹೊರತಾಗಿ ಬೇರೆ ಯಾರೂ ಅವನನ್ನು ನಿಲ್ಲಿಸಲು ಶಕ್ಯರಿಲ್ಲ. ಆದುದರಿಂದ ಇದನ್ನು ನಿಲ್ಲಿಸು.”

ಸುರರ ಆ ಮಾತುಗಳನ್ನು ಕೇಳಿದ ವಿಪ್ರನು ತನ್ನ ಪತ್ನಿಯೊಡನೆ ವಿಂಧ್ಯಪರ್ವತನಲ್ಲಿಗೆ ಹೋಗಿ ಅವನಿಗೆ ಹೇಳಿದನು:

“ಪರ್ವತೋತ್ತಮ! ನಿನ್ನಿಂದ ನಾನು ದಾರಿಯನ್ನು ಕೇಳುತ್ತಿದ್ದೇನೆ. ನೀಡು. ಯಾವುದೋ ಕಾರ್ಯಕ್ಕಾಗಿ ದಕ್ಷಿಣದಿಕ್ಕಿಗೆ ಹೋಗುತ್ತಿದ್ದೇನೆ. ನಾನು ಹಿಂದಿರುಗಿ ಬರುವವರೆಗೆ ನಿನ್ನ ಎತ್ತರವನ್ನೂ ಹೀಗೆಯೇ ಇಟ್ಟಿರು. ನಾನು ಹಿಂದಿರುಗಿದ ನಂತರ ನಿನಗಿಷ್ಟವಾದಷ್ಟು ಬೆಳೆಯಬಹುದು!”

ಹೀಗೆ ಆ ಅಮಿತ್ರಕರ್ಷಣನು ವಿಂಧ್ಯನೊಂದಿಗೆ ಒಪ್ಪಂದವನ್ನು ಮಾಡಿಕೊಂಡನು. ಇದೂವರೆಗೂ ವಾರುಣಿಯು ದಕ್ಷಿಣದೇಶದಿಂದ ಹಿಂದಿರುಗಲಿಲ್ಲ!

The other stories:

  1. ಆರುಣಿ ಉದ್ದಾಲಕ
  2. ಉಪಮನ್ಯು
  3. ಸಮುದ್ರಮಥನ
  4. ಗರುಡೋತ್ಪತ್ತಿ; ಅಮೃತಹರಣ
  5. ಶೇಷ
  6. ಶಕುಂತಲೋಪಾಽಖ್ಯಾನ
  7. ಯಯಾತಿ
  8. ಸಂವರಣ-ತಪತಿ
  9. ವಸಿಷ್ಠೋಪಾಽಖ್ಯಾನ
  10. ಔರ್ವೋಪಾಽಖ್ಯಾನ
  11. ಸುಂದೋಪಸುಂದೋಪಾಽಖ್ಯಾನ
  12. ಸಾರಂಗಗಳು
  13. ಸೌಭವಧೋಪಾಽಖ್ಯಾನ
  14. ನಲೋಪಾಽಖ್ಯಾನ
  15. ಅಗಸ್ತ್ಯೋಪಾಽಖ್ಯಾನ
  16. ಭಗೀರಥ
  17. ಋಷ್ಯಶೃಂಗ
  18. ಪರಶುರಾಮ
  19. ಚ್ಯವನ
  20. ಮಾಂಧಾತ
  21. ಸೋಮಕ-ಜಂತು
  22. ಗಿಡುಗ-ಪಾರಿವಾಳ
  23. ಅಷ್ಟಾವಕ್ರ
  24. ರೈಭ್ಯ-ಯವಕ್ರೀತ
  25. ತಾರ್ಕ್ಷ್ಯ ಅರಿಷ್ಠನೇಮಿ
  26. ಅತ್ರಿ
  27. ವೈವಸ್ವತ ಮನು
  28. ಮಂಡೂಕ-ವಾಮದೇವ
  29. ಧುಂಧುಮಾರ
  30. ಮಧು-ಕೈಟಭ ವಧೆ
  31. ಕಾರ್ತಿಕೇಯನ ಜನ್ಮ
  32. ಮುದ್ಗಲ
  33. ರಾಮೋಪಾಽಖ್ಯಾನ: ರಾಮಕಥೆ
  34. ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
  35. ಇಂದ್ರವಿಜಯೋಪಾಽಖ್ಯಾನ
  36. ದಂಬೋದ್ಭವ
  37. ಮಾತಲಿವರಾನ್ವೇಷಣೆ
  38. ಗಾಲವ ಚರಿತೆ
  39. ವಿದುಲೋಪಾಽಖ್ಯಾನ
  40. ತ್ರಿಪುರವಧೋಪಾಽಖ್ಯಾನ
  41. ಪರಶುರಾಮನು ಅಸ್ತ್ರಗಳನ್ನು ಪಡೆದುದು
  42. ಪ್ರಭಾಸಕ್ಷೇತ್ರ ಮಹಾತ್ಮೆ
  43. ತ್ರಿತಾಖ್ಯಾನ
  44. ಸಾರಸ್ವತೋಪಾಽಖ್ಯಾನ
  45. ವಿಶ್ವಾಮಿತ್ರ
  46. ವಸಿಷ್ಠಾಪವಾಹ ಚರಿತ್ರೆ
  47. ಬಕ ದಾಲ್ಭ್ಯನ ಚರಿತ್ರೆ
  48. ಕಪಾಲಮೋಚನತೀರ್ಥ ಮಹಾತ್ಮೆ
  49. ಮಂಕಣಕ
  50. ವೃದ್ಧಕನ್ಯೆ
  51. ಬದರಿಪಾಚನ ತೀರ್ಥ
  52. ಕುಮಾರನ ಪ್ರಭಾವ-ಅಭಿಷೇಕ
  53. ಅಸಿತದೇವಲ-ಜೇಗೀಷವ್ಯರ ಕಥೆ
  54. ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
  55. ಕುರುಕ್ಷೇತ್ರ ಮಹಾತ್ಮೆ
  56. ಶಂಖಲಿಖಿತೋಪಾಽಖ್ಯಾನ
  57. ಜಾಮದಗ್ನೇಯೋಪಾಽಖ್ಯಾನ
  58. ಷೋಡಶರಾಜಕೀಯೋಪಾಽಖ್ಯಾನ

Leave a Reply

Your email address will not be published. Required fields are marked *