ಗಿಡುಗ-ಪಾರಿವಾಳ

ಇಂದ್ರ ಮತ್ತು ಅಗ್ನಿಯರು ಗಿಡುಗ-ಪಾರಿವಾಳಗಳಾಗಿ ರಾಜಾ ಉಶೀನರನನ್ನು ಪರೀಕ್ಷಿಸಿದ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ತೀರ್ಥಯಾತ್ರಾ ಪರ್ವ (ಅಧ್ಯಾಯ ೧೩೦-೧೩೧) ದಲ್ಲಿ ಬರುತ್ತದೆ. ಯುಧಿಷ್ಠಿರನ ತೀರ್ಯಯಾತ್ರಾ ಸಮಯದಲ್ಲಿ ಈ ಕಥೆಯನ್ನು ಋಷಿ ಲೋಮಶನು ಯುಧಿಷ್ಠಿರನಿಗೆ ಹೇಳಿದನು.

ಉಶೀನರನು ದೇವತೆಗಳಿಗೆ ಸಮಾನನೋ ಎಂದು ಪರೀಕ್ಷಿಸಲು ಒಮ್ಮೆ ಇಂದ್ರ ಮತ್ತು ಅಗ್ನಿಯರು ಆ ರಾಜನಲ್ಲಿಗೆ ಬಂದರು. ಮಹಾತ್ಮ ಉಶೀನರನನ್ನು ಪರೀಕ್ಷಿಸಲು ಮತ್ತು ವರಗಳನ್ನು ನೀಡಲು ಇಂದ್ರನು ಒಂದು ಗಿಡುಗವಾಗಿ ಮತ್ತು ಅಗ್ನಿಯು ಒಂದು ಪಾರಿವಾಳವಾಗಿ ಅವನ ಯಜ್ಞಶಾಲೆಗೆ ಆಗಮಿಸಿದರು. ಗಿಡುಗದ ಭಯದಿಂದ ಪಾರಿವಾಳವು ರಾಜನ ತೊಡೆಯಮೇಲೆ ಕುಳಿತುಕೊಂಡು ಭಯಪೀಡಿತನಾಗಿ ರಕ್ಷಣೆಯನ್ನು ಕೇಳಿತು.

ಗಿಡುಗವು ಹೇಳಿತು: “ರಾಜನ್! ಮಹೀಕ್ಷಿತರೆಲ್ಲರೂ ನೀನೊಬ್ಬ ಧರ್ಮಾತ್ಮನೆಂದು ಕರೆಯುತ್ತಾರೆ. ಹಾಗಿರುವಾಗ ಯಾಕೆ ಈ ಧರ್ಮವಿರುದ್ಧವಾದ ಕಾರ್ಯವನ್ನು ಮಾಡಲು ಬಯಸುತ್ತಿದ್ದೀಯೆ? ಹಸಿವೆಯಿಂದ ತಳಮಳಿಸುತ್ತಿರುವ ನನಗೆ ಆಹಾರವನ್ನು ತಡೆಯಬೇಡ. ಧರ್ಮದಿಂದ ನನಗಾಗಿರುವ ಆಹಾರವನ್ನು ಕೊಡದೇ ನೀನು ಧರ್ಮವನ್ನೇ ಬಿಸಾಡುತ್ತಿದ್ದೀಯೆ.”

ರಾಜನು ಹೇಳಿದನು: “ಮಹಾಪಕ್ಷಿಯೇ! ನಿನ್ನ ಭಯದಿಂದ ನಡುಗುತ್ತಾ ರಕ್ಷಣೆಯನ್ನರಸಿಕೊಂಡು ನನ್ನ ಬಳಿ ಸೇರಿ ಈ ಪಕ್ಷಿಯು ಪ್ರಾಣವನ್ನು ಬೇಡಿಕೊಂಡಿದೆ. ಈ ರೀತಿ ಇಲ್ಲಿಗೆ ಬಂದು ಅಭಯವನ್ನು ಯಾಚಿಸುವ ಪಾರಿವಾಳಕ್ಕೆ ಅಭಯವನ್ನು ಕೊಡದೇ ಇದ್ದರೆ ಅದು ಪರಮ ಅಧರ್ಮವಾಗುತ್ತದೆ ಎಂದು ನಿನಗೆ ಕಾಣುತ್ತಿಲ್ಲವೇ? ಈ ಪಾರಿವಾಳವು ಭ್ರಾಂತಗೊಂಡು ನಡುಗುತ್ತಿರುವಂತೆ ಕಾಣುತ್ತದೆ. ಜೀವವನ್ನು ಬೇಡಿಕೊಂಡು ನನ್ನ ಬಳಿಬಂದಿರುವ ಇದನ್ನು ತ್ಯಜಿಸುವುದು ನಿಂದನೀಯ.”

ಗಿಡುಗವು ಹೇಳಿತು: “ಮಹೀಪತೇ! ಸರ್ವಭೂತಗಳೂ (ಇರುವ ಎಲ್ಲವೂ) ಆಹಾರದಿಂದಲೇ ಜೀವಿಸುತ್ತವೆ. ಆಹಾರದಿಂದಲೇ ಬೆಳೆಯುತ್ತವೆ ಮತ್ತು ಅದರಿಂದಲೇ ಜಂತುಗಳು ಜೀವಿಸುತ್ತವೆ. ತ್ಯಜಿಸಲು ಕಷ್ಟವಾದ ವಸ್ತುಗಳಿಲ್ಲದೆಯೂ ಮನುಷ್ಯನು ಬಹಳಷ್ಟು ಕಾಲ ಜೀವಿಸಬಹುದು. ಆದರೆ ಆಹಾರವಿಲ್ಲದೇ ಅವನು ಬಹಳಷ್ಟು ಕಾಲ ಜೀವಿಸಿರಲು ಸಾಧ್ಯವಿಲ್ಲ. ಇಂದು ನನ್ನ ಆಹಾರದಿಂದ ವಂಚಿತನಾದರೆ ನನ್ನ ಪ್ರಾಣವು ದೇಹವನ್ನು ತೊರೆದು ಹಿಂದಿರುಗಿ ಬರಲಿಕ್ಕಾಗದೇ ಇರುವ ದಾರಿಯನ್ನು ಹಿಡಿಯುತ್ತದೆ. ನಾನು ಮೊದಲೇ ತೀರಿಕೊಂಡರೆ ನನ್ನ ಹೆಂಡತಿ ಮತ್ತು ಮಗು ನಾಶಹೊಂದುತ್ತಾರೆ. ಈ ಪಾರಿವಾಳವನ್ನು ನೀನು ರಕ್ಷಿಸಿದರೆ ಬಹಳಷ್ಟು ಪ್ರಾಣಗಳು ನಾಶಹೊಂದುತ್ತವೆ. ಧರ್ಮವನ್ನು ಬಾಧಿಸುವ ಧರ್ಮವು ಧರ್ಮವಲ್ಲ. ಅದು ಕುಧರ್ಮ. ಧರ್ಮಕ್ಕೆ ಅವಿರೋಧಿಯಾಗಿರುವುದೇ ಧರ್ಮ. ಎರಡು ವಿಷಯಗಳು ಒಂದಕ್ಕೊಂದು ವಿರೋಧವಾಗಿರುವಾಗ ಯಾವುದು ಹೆಚ್ಚು ಮತ್ತು ಯಾವುದು ಕೀಳು ಎನ್ನುವುದನ್ನು ನಿಶ್ಚಯಿಸು. ಏನನ್ನೂ ಬಾಧಿಸದೇ ಇರುವಂಥ ಧರ್ಮವನ್ನು ಎಲ್ಲರೂ ಆಚರಿಸಬೇಕು. ಯಾವುದು ಹೆಚ್ಚಿನದು ಮತ್ತು ಯಾವುದು ಕೀಳಾಗಿದ್ದುದು ಎಂದು ತಿಳಿದು ಧರ್ಮಾಧರ್ಮಗಳನ್ನು ನಿಶ್ಚಯಿಸಿ ಯಾವುದು ಹೆಚ್ಚು ಒಳ್ಳೆಯದನ್ನು ಮಾಡುತ್ತದೆಯೋ ಅದನ್ನೇ ಧರ್ಮವೆಂದು ನಿಶ್ಚಯಿಸಿ ಮಾಡು.”

ರಾಜನು ಹೇಳಿದನು: “ವಿಹಗೋತ್ತಮ! ನೀನು ತುಂಬಾ ಚೆನ್ನಾಗಿ ಮಾತನಾಡುತ್ತೀಯೆ. ಸುಂದರ ರೆಕ್ಕೆಗಳನ್ನುಳ್ಳ ನೀನು ಧರ್ಮವನ್ನು ತಿಳಿದಿದ್ದೀಯೆ ಎನ್ನುವುದರಲ್ಲಿ ಸಂಶಯವಾದರೂ ಏಕೆ? ಧರ್ಮಸಂಯುಕ್ತವಾದ ದೀರ್ಘವಾದ ವಿಚಿತ್ರ ಮಾತುಗಳನ್ನಾಡಿದ್ದೀಯೆ. ನೀನು ಹೇಳಿದುದರಲ್ಲಿ ಅಸತ್ಯವೇನೂ ನನಗೆ ಕಾಣುವುದಿಲ್ಲ. ಶರಣಾರ್ಥಿಯನ್ನು ತ್ಯಜಿಸುವುದು ಒಳ್ಳೆಯದು ಎಂದು ಹೇಗೆ ಹೇಳುತ್ತೀಯೆ? ಇದೆಲ್ಲವೂ ನೀನು ಆಹಾರವನ್ನು ಹುಡುಕುವುದರಿಂದ ಪ್ರಾರಂಭವಾಯಿತು. ಆದರೆ ನೀನು ಬೇರೆ ರೀತಿಯಲ್ಲಿ ಇನ್ನೂ ಒಳ್ಳೆಯ ಆಹಾರವನ್ನು ಪಡೆಯಲು ಶಕ್ಯನಾಗಿದ್ದೀಯೆ. ಹಸು, ಹೋರಿ, ಅಥವಾ ಹಂದಿ, ಅಥವಾ ಜಿಂಕೆ ಅಥವಾ ಎಮ್ಮೆಯನ್ನಾದರೂ ಅಥವಾ ನೀನು ಏನನ್ನು ಬಯಸುತ್ತೀಯೋ ಅದನ್ನು ನಿನಗೋಸ್ಕರ ಬಡಿಸುತ್ತೇನೆ.”

ಗಿಡುಗವು ಹೇಳಿತು: “ಮಹಾರಾಜ! ನಾನು ಹಂದಿಯಾಗಲೀ, ಎತ್ತುಗಳನ್ನಾಗಲೀ ಅಥವಾ ವಿವಿಧ ರೀತಿಯ ಜಿಂಕೆಗಳನ್ನಾಗಲೀ ತಿನ್ನುವುದಿಲ್ಲ. ಅವುಗಳ ಮಾಂಸವು ನನಗೇತಕ್ಕೆ? ದೈವವಿಹಿತವಾದ ಆಹಾರವೇ ನನಗಿರಲಿ. ಈ ಪಾರಿವಾಳವನ್ನೇ ನನಗಾಗಿ ಬಿಟ್ಟುಕೊಡು. ಗಿಡುಗಗಳು ಪಾರಿವಾಳಗಳನ್ನು ತಿನ್ನುತ್ತವೆ ಎನ್ನುವುದು ಸನಾತನ ಸ್ಥಿತಿ. ದಾರಿಯನ್ನು ತಿಳಿಯದೇ ಬಾಳೆಯ ಮರವನ್ನು ಹತ್ತಬೇಡ!”

ರಾಜನು ಹೇಳಿದನು: “ಪಕ್ಷಿಗಣಗಳಿಂದ ಗೌರವಿಸಲ್ಪಟ್ಟ ನೀನು ಈ ಸಮೃದ್ಧವಾದ ಶಿಬಿರಾಜ್ಯವನ್ನು ಆಳು. ಅಥವಾ ಶರಣಾರ್ಥಿಯಾಗಿ ಬಂದಿರುವ ಈ ಪಕ್ಷಿಯನ್ನು ಬಿಟ್ಟು ನೀನು ಬಯಸುವ ಎಲ್ಲವನ್ನೂ ನಾನು ನಿನಗೆ ಕೊಡುತ್ತೇನೆ. ನಾನು ಏನು ಮಾಡಿದರೆ ನೀನು ಇದನ್ನು ಬಿಟ್ಟುಬಿಡುತ್ತೀಯೆ ಎನ್ನುವುದನ್ನು ಹೇಳು. ನೀನು ಹೇಳಿದಂತೆ ನಾನು ಮಾಡುತ್ತೇನೆ. ಆದರೆ ಈ ಪಾರಿವಾಳವನ್ನು ಮಾತ್ರ ನಾನು ನಿನಗೆ ಕೊಡುವುದಿಲ್ಲ.”

ಗಿಡುಗವು ಹೇಳಿತು: “ಉಶೀನರ! ನೀನು ಈ ಪಾರಿವಾಳವನ್ನು ಪ್ರೀತಿಸುತ್ತೀಯಾದರೆ ನಿನ್ನದೇ ಮಾಂಸವನ್ನು ಕಿತ್ತು ಈ ಪಾರಿವಾಳದ ಸರಿಸಮನಾಗಿ ತೂಕಮಾಡು. ನಿನ್ನ ಮಾಂಸವು ಈ ಪಾರಿವಾಳದ ತೂಕಕ್ಕೆ ಸರಿಸಮವಾದಾಗ ಅದನ್ನು ನೀನು ನನಗೆ ಕೊಡು. ಅದರಿಂದ ನಾನು ಸಂತೃಪ್ತನಾಗುತ್ತೇನೆ.”

ರಾಜನು ಹೇಳಿದನು: “ಗಿಡುಗವೇ! ನೀನು ಕೇಳುತ್ತಿರುವುದು ನನ್ನ ಅನುಗ್ರಹವೆಂದು ತಿಳಿಯುತ್ತೇನೆ. ಇಂದು ನಾನು ನಿನಗೆ ಇದರ ಸರಿಸಮನಾದ ತೂಕದ ನನ್ನ ಮಾಂಸವನ್ನು ಕೊಡುತ್ತೇನೆ.”

ಆ ಪರಮಧರ್ಮವಿದು ರಾಜನು ತನ್ನ ಮಾಂಸವನ್ನು ಕಿತ್ತು ಪಾರಿವಾಳದ ವಿರುದ್ಧ ತುಲನೆ ಮಾಡಿದನು. ಆದರೆ ತಕ್ಕಡಿಯಲ್ಲಿ ಪಾರಿವಾಳವು ಭಾರವಾಗಿತ್ತು. ಆಗ ರಾಜಾ ಉಶೀನರನು ಪುನಃ ತನ್ನ ಮಾಂಸವನ್ನು ಕಿತ್ತು ಕೊಟ್ಟನು. ಆದರೂ ಅವನ ಮಾಂಸವು ಪಾರಿವಾಳದ ತೂಕಕ್ಕೆ ಸಮನಾಗಲಿಲ್ಲ. ಇನ್ನೂ ತುಂಡುಮಾಡಲು ಮಾಂಸವೇ ಇಲ್ಲದಾಗಲು, ಸ್ವಯಂ ತಾನೇ ತಕ್ಕಡಿಯನ್ನೇರಿದನು.

ಗಿಡುಗವು ಹೇಳಿತು: “ಧರ್ಮಜ್ಞ! ನಾನು ಇಂದ್ರ ಮತ್ತು ಪಾರಿವಾಳವು ಅಗ್ನಿಯು. ಧರ್ಮದಲ್ಲಿ ನಿನ್ನನ್ನು ಪರೀಕ್ಷಿಸಲು ನಾವೀರ್ವರು ನಿನ್ನ ಯಜ್ಞವಾಟಿಗೆಗೆ ಬಂದಿದ್ದೇವೆ. ನಿನ್ನ ದೇಹದಿಂದಲೇ ಮಾಂಸವನ್ನು ಕಿತ್ತು ಕೊಟ್ಟಿರುವುದು ನಿನ್ನನ್ನು ಲೋಕದಲ್ಲಿ ಬೆಳಗಿಸಿ ಕೀರ್ತಿವಂತನಾಗಿಸುತ್ತದೆ. ಎಂದಿನವರೆಗೆ ಲೋಕದಲ್ಲಿ ಮನುಷ್ಯರು ನಿನ್ನ ಕುರಿತು ಹೇಳುತ್ತಿರುತ್ತಾರೋ ಅಲ್ಲಿಯ ವರೆಗೆ ನಿನ್ನ ಕೀರ್ತಿಯು ಲೋಕದಲ್ಲಿ ಶಾಶ್ವತವಾಗಿ ನೆಲೆಗೊಳ್ಳುತ್ತದೆ.”

Image result for indian motifs

The other stories:

  1. ಆರುಣಿ ಉದ್ದಾಲಕ
  2. ಉಪಮನ್ಯು
  3. ಸಮುದ್ರಮಥನ
  4. ಗರುಡೋತ್ಪತ್ತಿ; ಅಮೃತಹರಣ
  5. ಶೇಷ
  6. ಶಕುಂತಲೋಪಾಽಖ್ಯಾನ
  7. ಯಯಾತಿ
  8. ಸಂವರಣ-ತಪತಿ
  9. ವಸಿಷ್ಠೋಪಾಽಖ್ಯಾನ
  10. ಔರ್ವೋಪಾಽಖ್ಯಾನ
  11. ಸುಂದೋಪಸುಂದೋಪಾಽಖ್ಯಾನ
  12. ಸಾರಂಗಗಳು
  13. ಸೌಭವಧೋಪಾಽಖ್ಯಾನ
  14. ನಲೋಪಾಽಖ್ಯಾನ
  15. ಅಗಸ್ತ್ಯೋಪಾಽಖ್ಯಾನ
  16. ಭಗೀರಥ
  17. ಋಷ್ಯಶೃಂಗ
  18. ಪರಶುರಾಮ
  19. ಚ್ಯವನ
  20. ಮಾಂಧಾತ
  21. ಸೋಮಕ-ಜಂತು
  22. ಗಿಡುಗ-ಪಾರಿವಾಳ
  23. ಅಷ್ಟಾವಕ್ರ
  24. ರೈಭ್ಯ-ಯವಕ್ರೀತ
  25. ತಾರ್ಕ್ಷ್ಯ ಅರಿಷ್ಠನೇಮಿ
  26. ಅತ್ರಿ
  27. ವೈವಸ್ವತ ಮನು
  28. ಮಂಡೂಕ-ವಾಮದೇವ
  29. ಧುಂಧುಮಾರ
  30. ಮಧು-ಕೈಟಭ ವಧೆ
  31. ಕಾರ್ತಿಕೇಯನ ಜನ್ಮ
  32. ಮುದ್ಗಲ
  33. ರಾಮೋಪಾಽಖ್ಯಾನ: ರಾಮಕಥೆ
  34. ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
  35. ಇಂದ್ರವಿಜಯೋಪಾಽಖ್ಯಾನ
  36. ದಂಬೋದ್ಭವ
  37. ಮಾತಲಿವರಾನ್ವೇಷಣೆ
  38. ಗಾಲವ ಚರಿತೆ
  39. ವಿದುಲೋಪಾಽಖ್ಯಾನ
  40. ತ್ರಿಪುರವಧೋಪಾಽಖ್ಯಾನ
  41. ಪರಶುರಾಮನು ಅಸ್ತ್ರಗಳನ್ನು ಪಡೆದುದು
  42. ಪ್ರಭಾಸಕ್ಷೇತ್ರ ಮಹಾತ್ಮೆ
  43. ತ್ರಿತಾಖ್ಯಾನ
  44. ಸಾರಸ್ವತೋಪಾಽಖ್ಯಾನ
  45. ವಿಶ್ವಾಮಿತ್ರ
  46. ವಸಿಷ್ಠಾಪವಾಹ ಚರಿತ್ರೆ
  47. ಬಕ ದಾಲ್ಭ್ಯನ ಚರಿತ್ರೆ
  48. ಕಪಾಲಮೋಚನತೀರ್ಥ ಮಹಾತ್ಮೆ
  49. ಮಂಕಣಕ
  50. ವೃದ್ಧಕನ್ಯೆ
  51. ಬದರಿಪಾಚನ ತೀರ್ಥ
  52. ಕುಮಾರನ ಪ್ರಭಾವ-ಅಭಿಷೇಕ
  53. ಅಸಿತದೇವಲ-ಜೇಗೀಷವ್ಯರ ಕಥೆ
  54. ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
  55. ಕುರುಕ್ಷೇತ್ರ ಮಹಾತ್ಮೆ
  56. ಶಂಖಲಿಖಿತೋಪಾಽಖ್ಯಾನ
  57. ಜಾಮದಗ್ನೇಯೋಪಾಽಖ್ಯಾನ
  58. ಷೋಡಶರಾಜಕೀಯೋಪಾಽಖ್ಯಾನ

Leave a Reply

Your email address will not be published. Required fields are marked *