ಸಮುದ್ರಮಥನ

ಸಮುದ್ರ ಮಥನದ ಈ ಕಥೆಯು ವ್ಯಾಸ ಮಹಾಭಾರತದ ಆದಿ ಪರ್ವದ ಆಸ್ತೀಕ ಪರ್ವ (ಅಧ್ಯಾಯ ೧೫-೧೭) ದಲ್ಲಿ ಬರುತ್ತದೆ. ಈ ಕಥೆಯನ್ನು ನೈಮಿಷಾರಣ್ಯದಲ್ಲಿ ಸೂತ ಪೌರಾಣಿಕ ಉಗ್ರಶ್ರವನು ಶೌನಕಾದಿ ಮುನಿಗಳಿಗೆ ಹೇಳಿದನು.

Image result for samudra manthanಅನುತ್ತಮ ತೇಜೋರಾಶಿಯಾಗಿ ಪ್ರಜ್ವಲಿಸುತ್ತಿರುವ ಮೇರು ಎಂಬ ಪರ್ವತವಿದೆ. ಅದರ ಶೃಂಗದ ಮೇಲೆ ಬಿದ್ದ ಸೂರ್ಯ ಕಿರಣಗಳು ಕಾಂಚನ-ಜ್ವಾಲೆಗಳಂತೆ ಹೊರಸೂಸುತ್ತಿದ್ದವು. ಆ ಗಂಧರ್ವಸೇವಿತ ಅಪ್ರಮೇಯ ಚಿತ್ರವರ್ಣದ ಕಾಂಚನಾಭರಣದಂತಿದ್ದ ಆ ಪರ್ವತವು ಅಧರ್ಮಿ ಬಹುಜನರಿಗೆ ಕಾಣದೇ ಇರುವಂಥಹುದು. ದಿವ್ಯೌಷಧಿಗಳಿಂದ ಬೆಳಗುತ್ತಿರುವ ಆ ಮಹಾಗಿರಿಯ ಉತ್ತುಂಗ ಶಿಖರದಲ್ಲಿ ಘೋರಪ್ರಾಣಿಗಳು ಸಂಚರಿಸುತ್ತಿರುತ್ತವೆ. ಮನಸ್ಸಿಗೂ ಅಗಮ್ಯವಾದ ಅದು ಅನೇಕ ನದೀ-ವೃಕ್ಷಗಳಿಂದ ಕೂಡಿ ನಾನಾ ಪಕ್ಷಿಗಳ ಸುಮನೋಹರ ನಾದಗಳಿಂದ ತುಂಬಿದೆ. ಅನಂತ ಕಲ್ಪಗಳಿಂದಲೂ ಅನೇಕ ರತ್ನಗಳಿಂದ ಶೋಭಿಸುತ್ತಾ ಎತ್ತರವಾಗಿ ನಿಂತಿರುವ ಅದರ ಶುಭ ಶಿಖರದ ಮೇಲೆ ಮಹೌಜಸ ಸುರರೆಲ್ಲರೂ ಸಭೆಯನ್ನು ರಚಿಸಿದ್ದರು. ಆ ತಪೋನಿಯಮ ಸಂಸ್ಥಿತ ದಿವೌಕಸರು ಅಲ್ಲಿ ಕುಳಿತು ಅಮೃತವನ್ನು ಹೇಗೆ ಪಡೆಯಬಹುದು ಎಂದು ಪರಸ್ಪರರಲ್ಲಿ ವಿಚಾರಿಸುತ್ತಿದ್ದರು. ಮಂತ್ರಾಲೋಚನೆಯಲ್ಲಿ ತೊಡಗಿದ್ದ ಬ್ರಹ್ಮ ಮತ್ತು ಸುರರೆಲ್ಲರನ್ನೂ ಉದ್ದೇಶಿಸಿ ದೇವ ನಾರಾಯಣನು ಇಂತೆಂದನು: “ದೇವತೆಗಳೂ ಅಸುರರೂ ಒಂದಾಗಿ ಕಲಶೋದಧಿಯನ್ನು ಮಥಿಸಲಿ. ಮಹೌದಧಿಯನ್ನು ಕಡೆಯುವಾಗ ಅಲ್ಲಿ ಅಮೃತವು ಹುಟ್ಟುವುದು. ದೇವತೆಗಳೇ! ಕ್ಷೀರಸಾಗರವನ್ನು ಮಥಿಸುವಾಗ ಅಮೃತದ ಜೊತೆ ಸರ್ವ ಔಷಧಿ-ರತ್ನಗಳನ್ನೂ ಪಡೆಯುತ್ತೀರಿ!”

ಮೋಡಗಳೇ ಶಿಖರಾಕಾರವಾಗಿರುವ, ಗಿರಿಶೃಂಗಗಳಿಂದ ಅಲಂಕೃತ, ಲತಾಜಾಲ ಸಮಾವೃತ ಪರ್ವತಶ್ರೇಷ್ಠವೇ ಮಂದರ. ಅಲ್ಲಿ ನಾನಾ ಪಕ್ಷಿಸಂಕುಲಗಳು ನಿನಾದಗೈಯುತ್ತಿರುತ್ತವೆ ಮತ್ತು ನಾನಾ ಮೃಗಸಂಕುಲಗಳಿವೆ. ಅಲ್ಲಿ ಕಿನ್ನರ-ಅಪ್ಸರ-ದೇವತೆಗಳು ವಿಹರಿಸುತ್ತಿರುತ್ತಾರೆ. ಅದು ಭೂಮಿಯ ಮೇಲೆ ಹನ್ನೊಂದು ಸಾವಿರ ಯೋಜನ ಮತ್ತು ಕೆಳಗೆ ಹನ್ನೊಂದು ಸಾವಿರ ಯೋಜನ ಆಳದಲ್ಲಿದೆ. ಅದನ್ನು ಕೀಳಲು ಅಶಕ್ತರಾದ ಸರ್ವ ದೇವಗಣಗಳೂ ಬ್ರಹ್ಮನೊಂದಿಗೆ ಆಸೀನನಾಗಿದ್ದ ವಿಷ್ಣುವಿನ ಬಳಿಬಂದು ಹೇಳಿದರು: “ಮಂದರವನ್ನು ಎತ್ತುವುದರ ಕುರಿತು ಏನಾದರೂ ಉಪಾಯವನ್ನು ಯೋಚಿಸಿರಿ. “ಹಾಗೆಯೇ ಆಗಲಿ!” ಎಂದು ಹೇಳಿ ವಿಷ್ಣು-ಬ್ರಹ್ಮರು ಕರ್ಮವೀರ್ಯವಾನ್ ಆದಿಶೇಷನಿಗೆ ಪ್ರಚೋದಿಸಲು ಅವನು ಅದನ್ನು ಎತ್ತಿ ಹಿಡಿದನು. ಆ ಮಹಾಬಲ ಅನಂತನು ಬಲವನ್ನುಪಯೋಗಿಸಿ ವನ-ವೃಕ್ಷಗಳ ಸಹಿತ ಆ ಪರ್ವತರಾಜನನ್ನು ಎಳೆದು ಕಿತ್ತನು.

ನಂತರ ಸುರರೆಲ್ಲರೂ ಸಮುದ್ರತಟವನ್ನು ಸೇರಿ “ಸಮುದ್ರ! ಅಮೃತಕ್ಕಾಗಿ ನಿನ್ನನ್ನು ಮಥಿಸಲು ನಾವೆಲ್ಲ ಇಲ್ಲಿ ಸೇರಿದ್ದೇವೆ” ಎಂದು ಹೇಳಿದರು. ಆಗ ಅಪಾಂಪತಿಯು “ಅದರಲ್ಲಿ ಒಂದು ಭಾಗವನ್ನು ನನಗೂ ಕೊಡಿ. ಮಂದರವು ಕಡೆಯುವುದರಿಂದ ಉಂಟಾಗುವ ವಿಪುಲ ಅಲ್ಲೋಲ-ಕಲ್ಲೋಲವನ್ನು ನಾನು ತಡೆಯಬಲ್ಲೆ!” ಎಂದನು.

ಸುರಾಸುರರೆಲ್ಲರೂ ಕೂರ್ಮರಾಜ ಅಕೂಪಾರನಲ್ಲಿಗೆ ಹೋಗಿ “ನಿನ್ನ ಬೆನ್ನ ಮೇಲೆ ಈ ಪರ್ವತವನ್ನು ಎತ್ತಿ ಹಿಡಿದುಕೊಳ್ಳಬೇಕು” ಎಂದು ಕೇಳಿಕೊಂಡರು. “ಹಾಗೆಯೇ ಆಗಲಿ!” ಎಂದು ಕೂರ್ಮವು ಹೇಳಲು ಅದರ ಬೆನ್ನ ಮೇಲೆ ಇಂದ್ರನು ಒಂದು ಯಂತ್ರದ ಸಹಾಯದಿಂದ ಮಂದರ ಪರ್ವತವನ್ನು ಎತ್ತಿ ನಿಲ್ಲಿಸಿದನು.

ಮಂದರವನ್ನು ಕಡೆಗೋಲನ್ನಾಗಿ ಮತ್ತು ವಾಸುಕಿಯನ್ನು ಹಗ್ಗವನ್ನಾಗಿ ಮಾಡಿಕೊಂಡು ದೇವತೆಗಳು ದೈತ್ಯ-ದಾನವರೊಂದಿಗೆ ನಿಧಿಮಾಂಭಸ ಸಮುದ್ರವನ್ನು ಅಮೃತಕ್ಕೋಸ್ಕರ ಕಡೆಯತೊಡಗಿದರು. ಒಂದು ಕಡೆ ನಾಗರಾಜನ ಹೆಡೆಯನ್ನು ಮಹಾ ಅಸುರರು ಹಿಡಿದಿದ್ದರೆ ಇನ್ನೊಂದೆಡೆ ಅದರ ಬಾಲವನ್ನು ಹಿಡಿದು ಸರ್ವದೇವತೆಗಳೂ ನಿಂತಿದ್ದರು. ಭಗವಾನ್ ನಾರಾಯಣ ಸ್ವರೂಪೀ ನಾಗ ಅನಂತನು ಶಿರವನ್ನು ಪುನಃ ಪುನಃ ಮೇಲೆತ್ತಿ ಕೆಳಗಿಳಿಸುತ್ತಿದ್ದನು. ಸುರರಿಂದ ಜೋರಾಗಿ ಎಳೆದಾಡಲ್ಪಟ್ಟ ನಾಗ ವಾಸುಕಿಯ ಬಾಯಿಯಿಂದ ಆಗ ಧೂಮ-ಜ್ವಾಲೆಗಳಿಂದೊಡಗೂಡಿದ ಹವೆಯು ಹೊರಹೊಮ್ಮಿತು. ಆ ಹವೆಯು ಮಿಂಚಿನಿಂದೊಡಗೂಡಿದ ಮೇಘಗಳಾಗಿ ಶ್ರಮಸಂತಾಪದಿಂದ ಬಳಲಿದ ಸುರಗಣಗಳ ಮೇಲೆ ಮಳೆಸುರಿಸಿತು. ಆ ಗಿರಿಕೂಟದ ಕಣಿವೆಗಳಲ್ಲಿದ್ದ ಮರಗಳಿಂದ ಉದುರುತ್ತಿದ್ದ ಪುಷ್ಪಮಾಲೆಗಳು ಸುರಾಸುರಗಣಗಳೆಲ್ಲರ ಆಯಾಸವನ್ನು ಪರಿಹರಿಸಿದವು. ಸುರಾಸುರರು ಮಂದರದಿಂದ ಕಡೆಯುತ್ತಿದ್ದ ಸಮುದ್ರದಿಂದ ಮಹಾಮೇಘಗರ್ಜನೆಯಂಥಹ ಮಹಾ ಘೋಷವು ಕೇಳಿಬರುತ್ತಿತ್ತು. ಅಲ್ಲಿದ್ದ ನಾನಾ ಜಲಚರಗಳು ಮಹಾದ್ರಿಯಿಂದ ಪುಡಿಪುಡಿಯಾಗಿ ನೂರಾರು ಸಂಖ್ಯೆಗಳಲ್ಲಿ ಆ ಲವಣಾಂಭಸಿಯಲ್ಲಿ ಲಯವಾದವು. ವರುಣ ಲೋಕದ ವಿವಿಧ ಜೀವಿಗಳು ಮತ್ತು ಪಾತಾಲತಲ ವಾಸಿಗಳು ಈ ಘರ್ಷಣೆಯಲ್ಲಿ ಲಯಹೊಂದಿದವು. ತಿರುಗುತ್ತಿದ್ದ ಮಂದರ ಪರ್ವತದ ಮೇಲಿದ್ದ ಮಹಾದ್ರುಮಗಳು ಪರಸ್ಪರ ಸಂಘರ್ಷಿಸಿ ಗೂಡುಕಟ್ಟಿದ್ದ ಪಕ್ಷಿಗಳೊಡನೆ ಸಾಗರಕ್ಕೆ ಉರುಳಿದವು. ಅವುಗಳ ಸಂಘರ್ಷದಿಂದ ಹಲವಾರು ಬಾರಿ ಬೆಂಕಿಯು ಭುಗಿಲೆದ್ದು ಆ ಮಂದರ ಗಿರಿಯು ಮಿಂಚಿನಿಂದೊಡಗೂಡಿದ ಕಪ್ಪು ಮೋಡಗಳಿಂದ ಆವರಿಸಿರುವಂತೆ ಕಂಡುಬರುತ್ತಿತ್ತು. ಅಲ್ಲಿ ವಾಸಿಸುತ್ತಿದ್ದ ವಿವಿಧ ಪಕ್ಷಿ-ಪ್ರಾಣಿಗಳು, ಆನೆ-ಸಿಂಹಗಳು ಎಲ್ಲವೂ ಅದರಲ್ಲಿ ಸುಟ್ಟುಹೋದವು. ಆಗ ಅಮರಶ್ರೇಷ್ಠ ಇಂದ್ರನು ಭಾರೀ ಮಳೆಯನ್ನು ಸುರಿಸಿ ಉರಿಯುತ್ತಿರುವ ಅಗ್ನಿಯನ್ನು ಶಮನಗೊಳಿಸಿದನು. ಆ ಮಹಾದ್ರುಮಗಳಲ್ಲಿದ್ದ ಅಂಟು-ಸ್ರಾವ-ಔಷಧಿ ರಸಗಳು ಸಾಗರದ ನೀರಿನೊಂದಿಗೆ ಸೇರಿ ಕರಗಿದವು. ಆ ರಸ-ಹಾಲು-ಅಂಟುಗಳಲ್ಲಿದ್ದ ಅಮೃತವೀರ್ಯಗಳಿಂದಲೇ ಸುರರು ಅಮರತ್ವವನ್ನು ಪಡೆದರು. ಸಮುದ್ರದ ನೀರಿನಿಂದ ಉತ್ತಮ ರಸಮಿಶ್ರಿತ ಹಾಲು-ತುಪ್ಪಗಳು ಉತ್ಪನ್ನವಾದವು.

ಆಗ ದೇವತೆಗಳೆಲ್ಲರೂ ವರದ ಬ್ರಹ್ಮನು ಉಪಸ್ಥಿತನಿದ್ದಲ್ಲಿಗೆ ಹೋಗಿ “ಬ್ರಹ್ಮ! ನಾವು ಆಯಾಸದಿಂದ ಬಳಲಿದ್ದೇವೆ. ಇನ್ನೂ ಅಮೃತವು ದೊರಕಲಿಲ್ಲ! ದೇವ ನಾರಾಯಣನನ್ನು ಬಿಟ್ಟು ಬೇರೆ ಯಾವ ದೈತ್ಯ-ನಾಗೋತ್ತಮರಿಂದಲೂ ಈ ಸಾಗರ ಮಂಥನವನ್ನು ಮುಂದುವರೆಸಲು ಸಾಧ್ಯವಾಗುತ್ತಿಲ್ಲ” ಎಂದರು. ಆಗ ಬ್ರಹ್ಮನು ದೇವ ನಾರಾಯಣನಲ್ಲಿ “ವಿಷ್ಣು! ನಿನ್ನ ಪರಾಯಣರಾದ ಇವರಿಗೆ ಬಲವನ್ನು ಕರುಣಿಸು!” ಎಂದನು. ಆಗ ವಿಷ್ಣುವು “ಈ ಕರ್ಮದಲ್ಲಿ ತೊಡಗಿರುವ ಸರ್ವರಿಗೂ ಬಲವನ್ನು ಕೊಡುತ್ತಿದ್ದೇನೆ. ಮಂದರವನ್ನು ಮುಳುಗಿಸಿ ಸರ್ವರೂ ಕಡೆಯಲು ಪ್ರಾರಂಭಿಸಿ!” ಎಂದನು. ನಾರಾಯಣನ ಮಾತುಗಳನ್ನು ಕೇಳಿ ಹೊಸಶಕ್ತಿಯನ್ನು ಪಡೆದ ಅವರು ಪರ್ವತವನ್ನು ಬಳಸಿ ಪುನಃ ಕಡೆಯಲು ಪ್ರಾರಂಭಿಸಿದರು. ನಂತರ ಶತಸಹಸ್ರಾಂಶು ಸಮಾನ, ಪ್ರಸನ್ನ ಪ್ರಖರವನ್ನು ಹೊಂದಿ ಬೆಳಗುತ್ತಿದ್ದ ಶೀತಾಂಶು ಸೋಮನು ಸಾಗರದಿಂದ ಉತ್ಪನ್ನನಾದನು. ನಂತರ ತುಪ್ಪದಿಂದ ಪಾಂಡುರವಾಸಿನೀ ಶ್ರೀಯು ಉತ್ಪನ್ನಳಾದಳು. ನಂತರ ಸುರಾದೇವಿ ಮತ್ತು ಶ್ವೇತ ತುರಗಗಳು ಉತ್ಪನ್ನರಾದರು. ಶ್ರೀಮಾನ್ನಾರಾಯಣನು ತನ್ನ ಎದೆಯ ಮೇಲೆ ಧರಿಸಿರುವ ದಿವ್ಯ ವಿಕಸಿತ ಕೌಸ್ತುಭಮಣಿಯೂ ಕೂಡ ರೋಗರಹಿತ ಅಮೃತದೊಂದಿಗೆ ಉತ್ಪನ್ನವಾಯಿತು. ಆದಿತ್ಯಮಾರ್ಗವನ್ನಾಶ್ರಯಿಸಿ ಸೋಮ ಮತ್ತು ತುರಗಗಳು ಮನೋವೇಗದಲ್ಲಿ ಬಂದು ದೇವತೆಗಳನ್ನು ಸೇರಿದರು. ಅನಂತರ ದೇವ ಧನ್ವಂತರಿಯು ಅಮೃತದಿಂದ ತುಂಬಿದ ಶ್ವೇತ ಕಮಂಡಲುವನ್ನು ಹಿಡಿದು ಸಾಗರದಿಂದ ಎದ್ದು ಬಂದನು. ಆ ಅತ್ಯದ್ಭುತವನ್ನು ನೋಡಿ ದಾನವರು ಅಮೃತಕ್ಕಾಗಿ “ಇದು ನಮ್ಮದು!” ಎಂದು ಮಹಾನಾದಗೈದರು. ಆಗ ಪ್ರಭು ನಾರಾಯಣನು ಮಾಯೆಯಿಂದ ಅದ್ಭುತ ಮೋಹಿನೀ ಸ್ತ್ರೀರೂಪವನ್ನು ಧರಿಸಿ ದಾನವರನ್ನು ಮರುಳುಮಾಡಿದನು. ಮೂಢಚೇತಸ ದಾನವ ದೈತ್ಯರೆಲ್ಲರೂ ಅವಳಲ್ಲಿಯೇ ಮನಸ್ಸನ್ನಿಟ್ಟುಕೊಂಡು ಅಮೃತವನ್ನು ಆ ಸ್ತ್ರೀಯ ಕೈಗಳಲ್ಲಿಟ್ಟರು.

ಆಗ ದೇವಗಣಗಳೆಲ್ಲವೂ ವಿಷ್ಣುವಿನಿಂದ ಅಮೃತವನ್ನು ಪಡೆದು ಸಂಭ್ರಮ-ತುಮುಲಗಳೊಂದಿಗೆ ಕುಡಿದರು. ದೇವತೆಗಳು ಬಹಳ ಆಸೆಯಿಂದ ಅಮೃತವನ್ನು ಕುಡಿಯುತ್ತಿರುವಾಗ ದೇವತೆಗಳ ರೂಪದಲ್ಲಿದ್ದ ದಾನವ ರಾಹುವೂ ಅದನ್ನು ಕುಡಿದನು. ಅಮೃತವು ಆ ದಾನವನ ಕಂಠವನ್ನು ಸೇರುವ ಸಮಯದಲ್ಲಿಯೇ ಸುರರ ಹಿತಕಾಮೀ ಚಂದ್ರ-ಸೂರ್ಯರು ಅದರ ಕುರಿತು ಹೇಳಿದರು. ತಕ್ಷಣವೇ ಭಗವಂತನು ತನ್ನ ಚಕ್ರಾಯುಧದಿಂದ ಅಮೃತವನ್ನು ಕುಡಿಯುತ್ತಿದ್ದ ಅವನ ಅಲಂಕೃತ ಶಿರಸ್ಸನ್ನು ತುಂಡರಿಸಿದನು. ಆ ದಾನವನ ಶೈಲಶೃಂಗ ಸಮಾನ ಮಹಾ ಶಿರವು ಚಕ್ರದಿಂದ ಕತ್ತರಿಸಲ್ಪಟ್ಟು ಆಕಾಶವನ್ನೇರಿತು ಮತ್ತು ಶಿರರಹಿತ ದೇಹವು ಭೂತಲದಲ್ಲಿ ಬಿದ್ದಿತು. ಅಂದಿನಿಂದ ರಾಹುವಿನ ಮುಖ ಮತ್ತು ಚಂದ್ರ-ಸೂರ್ಯರ ನಡುವೆ ಶಾಶ್ವತ ವೈರತ್ವವು ಬೆಳೆಯಿತು ಮತ್ತು ಅವರೀರ್ವರ ಗ್ರಹಣಗಳು ನಿರಂತರವಾಗಿ ನಡೆಯುತ್ತಿವೆ. ಈ ಮಧ್ಯದಲ್ಲಿ ವೀರ್ಯವಾನ್ ಪ್ರಭು ವಿಷ್ಣುದೇವನು ನರನ ಜೊತೆಗೂಡಿ ದಾನವೇಂದ್ರರಿಂದ ಅಮೃತವನ್ನು ಕೊಂಡೊಯ್ದನು.

ಆಗ ಪ್ರಮುಖ ದೈತ್ಯ-ದಾನವರು ಕವಚಧಾರಿಗಳಾಗಿ ನಾನಾ ಆಯುಧಗಳನ್ನು ಹಿಡಿದು ದೇವತೆಗಳನ್ನು ಬೆನ್ನಟ್ಟಿದರು. ನಂತರ ಭಗವಾನ್ ಹರಿಯು ಸರಿಸಾಟಿಯಿಲ್ಲದ ಸ್ತ್ರೀರೂಪವನ್ನು ತೊರೆದು ನಾನಾ ತರಹದ ಭೀಷಣ ಆಯುಧಗಳನ್ನು ಎಸೆಯುತ್ತಾ ದಾನವರು ತತ್ತರಿಸುವಂತೆ ಮಾಡಿದನು. ಆಗ ಲವಣಾಂಭಸದ ತೀರದಲ್ಲಿ ಸುರಾಸುರರ ಸರ್ವ ಘೋರತರ ಮಹಾ ಸಂಗ್ರಾಮವು ಪ್ರಾರಂಭವಾಯಿತು. ಸಹಸ್ರಾರು ಪ್ರಾಸಗಳು, ತೀಕ್ಷ್ಣವಾದ ವಿಪುಲ ಈಟಿಗಳು, ಮೊನಚಾದಿ ತುದಿಗಳ ತೋಮರಗಳು ಮತ್ತು ವಿವಿಧ ಶಸ್ತ್ರಗಳನ್ನು ಎಲ್ಲೆಡೆಯಿಂದ ಎಸೆಯಲಾಯಿತು. ಚಕ್ರದಿಂದ ತುಂಡಾದ ಅಸುರರು ರಕ್ತವನ್ನು ಕಾರಿದರು ಮತ್ತು ಬಹಳಷ್ಟು ಮಂದಿ ಖಡ್ಗ-ಈಟಿ-ಗದಾ ಪ್ರಹಾರಗಳಿಂದ ಭೂಮಿಯ ಮೇಲೆ ಉರುಳಿ ಬಿದ್ದರು. ಆ ದಾರುಣ ಯುದ್ಧದಲ್ಲಿ ಬಂಗಾರದ ಕಿರೀಟಗಳಿಂದ ಅಲಂಕೃತ ಕಾಂತಿಯಿಂದ ಹೊಳೆಯುತ್ತಿದ್ದ ಶಿರಗಳು ಚಕ್ರದಿಂದ ಕತ್ತರಿಸಲ್ಪಟ್ಟು ಬೀಳುತ್ತಲೇ ಇದ್ದವು. ರಕ್ತಲಿಪ್ತಾಂಗರಾಗಿ ಎಲ್ಲೆಲ್ಲಿಯೂ ಸತ್ತು ಬಿದ್ದಿದ್ದ ಮಹಾ ಅಸುರರು ರಕ್ತದಿಂದ ಬಳಿಯಲ್ಪಟ್ಟ ಪರ್ವತ ಶಿಖರಗಳಂತೆ ಕಾಣುತ್ತಿದ್ದರು. ಸೂರ್ಯಾಸ್ತವಾಗುತ್ತಿದ್ದಂತೆ ಅನ್ಯೋನ್ಯರ ಶಸ್ತ್ರಗಳ ಗಾಯದಿಂದ ಸಾಯುತ್ತಿರುವ ಸಾವಿರಾರು ಅಸುರರ ಹಾಹಾಕಾರವು ಎಲ್ಲ ಕಡೆಗಳಿಂದಲೂ ಕೇಳಿಬರುತ್ತಿತ್ತು. ಸಮರದಲ್ಲಿ ಒಬ್ಬರನ್ನೊಬ್ಬರು ಪರಿಘಗಳಿಂದ ತುಂಡರಿಸುವ ಮತ್ತು ಮುಷ್ಟಿಗಳಿಂದ ಹೊಡೆದಾಡುವ ಶಬ್ಧವು ಆಕಾಶವನ್ನೇರಿತು. “ಕತ್ತರಿಸು! ಚುಚ್ಚು! ಬೆನ್ನಟ್ಟು! ಮುನ್ನುಗ್ಗು! ಬೀಳಿಸು!” ಮೊದಲಾದ ಮಹಾಘೋರ ಕದನ ಕೂಗುಗಳು ಅಲ್ಲಿ ಕೇಳಿಬರುತ್ತಿದ್ದವು.

ಈ ರೀತಿ ಭಯಾನಕ ಯುದ್ಧವು ನಡೆಯುತ್ತಿರುವಾಗ ದೇವ ನರ ಮತ್ತು ನಾರಾಯಣರು ಸಮರವನ್ನು ಪ್ರವೇಶಿಸಿದರು. ನರನಲ್ಲಿದ್ದ ದಿವ್ಯ ಧನುಸ್ಸನ್ನು ನೋಡಿ ದಾನವಸೂದನ ಭಗವಾನ್ ವಿಷ್ಣುವು ಚಕ್ರವನ್ನು ಸ್ಮರಿಸಿದನು. ಅವನು ಸ್ಮರಿಸುತ್ತಿದ್ದಂತೆಯೇ ಆಕಾಶದಿಂದ ತೇಜಸ್ಸಿನಲ್ಲಿ ವಿಭಾವಸುವಿನಂತಿದ್ದ, ಶತ್ರುತಾಪನ, ಯುದ್ಧಭಯಂಕರ, ಮಹಾಪ್ರಭೆಯ ಉತ್ತಮ ಸುದರ್ಶನ ಚಕ್ರವು ಆಗಮಿಸಿತು. ಅದು ಬಂದಕೂಡಲೇ ಪ್ರಜ್ವಲಿಸುತ್ತಿರುವ ಅಗ್ನಿಪ್ರಭೆಯ ಭಯಂಕರ ಅಚ್ಯುತನು ಆನೆಯ ಸೊಂಡಲಿನಂತಿದ್ದ ತನ್ನ ಬಾಹುಗಳಿಂದ ಅತಿ ವೇಗದಲ್ಲಿ ಶತ್ರುಗಳ ನಗರವನ್ನಿಡೀ ನಾಶಪಡಿಸಬಲ್ಲ ಆ ಮಹಪ್ರಭೆಯ ಚಕ್ರವನ್ನು ಎಸೆದನು. ಪುರುಷಶ್ರೇಷ್ಠನು ಪ್ರಯೋಗಿಸಿದ ಪ್ರಳಯಾಗ್ನಿಯ ಜ್ವಾಲೆಯಂತೆ ಉರಿಯುತ್ತಿದ್ದ ಆ ಚಕ್ರವು ಸಹಸ್ರಾರು ದೈತ್ಯರನ್ನು ನಾಶಪಡಿಸಿತು. ಅದು ಕೆಲವೊಮ್ಮೆ ಅಗ್ನಿಯಂತೆ ಉರಿದು ಅವರನ್ನೆಲ್ಲಾ ಭಸ್ಮಮಾಡುತ್ತಿತ್ತು. ಕೆಲವೊಮ್ಮೆ ಕ್ಷಿಪಣಿಯಂತೆ ಅವರ ಮೇಲೆ ಬಿದ್ದು ಹೊಡೆಯುತ್ತಿತ್ತು. ಕೆಲವೊಮ್ಮೆ ಪಿಶಾಚಿಯಂತೆ ಭೂಮ್ಯಾಕಾಶಗಳಲ್ಲಿ ತಿರುಗುತ್ತಾ ಕೆಳಗೆ ಬಿದ್ದಿದ್ದ ಅಸುರರ ರಕ್ತವನ್ನು ಕುಡಿಯುತ್ತಿತ್ತು. ಆಗ ನೀರಿಲ್ಲದ ಮೇಘಗಳಂತೆ ತೋರುತ್ತಿದ್ದ ಮಹಾಬಲಶಾಲೀ ಅಸುರರು ಗಗನವನ್ನೇರಿ ಸಹಸ್ರಾರು ಪರ್ವತಗಳನ್ನು ದೇವಗಣಗಳ ಬೀಳಿಸಿ ಹಿಂಸಿಸತೊಡಗಿದರು. ಕಾಡು-ಕಣಿವೆಗಳಿದ್ದ ಆ ಮಹಾಪರ್ವತಗಳು ಆಕಾಶದಿಂದ ಕೆಳಗೆ ಬೀಳುವಾಗ ಪರಸ್ಪರ ತಾಗಿ ಮೇಘಗಳಂತೆ ಮಹಾಗರ್ಜನೆಯನ್ನುಂಟುಮಾಡುತ್ತಿದ್ದವು. ರಣಭೂಮಿಯಲ್ಲಿ ಕಾಡುಗಳಿದ್ದ ಪರ್ವತಗಳು ಬೀಳುವಾಗ ಮತ್ತು ಸಹಾಸ್ರಾರು ಯೋಧರು ಗರ್ಜಿಸುವಾಗ ಭೂಮಿಯು ತತ್ತರಿಸಿತು. ಆಗ ನರನು ಸುರಾಸುರರ ಮಧ್ಯೆ ನಡೆಯುತ್ತಿದ್ದ ಆ ಮಹಾಭಯಂಕರ ಯುದ್ಧವನ್ನು ಪ್ರವೇಶಿಸಿ ಶ್ರೇಷ್ಠ ಕನಕಾಗ್ರದಿಂದ ಅಲಂಕೃತ ಶರಗಳಿಂದ ಆ ಪರ್ವತಗಳನ್ನು ಪುಡಿಮಾಡಿ ಅಂತರಿಕ್ಷವನ್ನು ಧೂಳಿನಿಂದ ತುಂಬಿಸಿದನು. ಪ್ರಜ್ವಲಿಸುತ್ತಿರುವ ಬೆಂಕಿಯಂತೆ ಭೂಮಿಯಲ್ಲಿ ತಿರುಗುತ್ತಾ ಉರಿಯುತ್ತಿದ್ದ ಪರಿಕುಪಿತ ಸುದರ್ಶನವನ್ನು ನೋಡಿ ಸುರರಿಂದ ಪರಾಭವಗೊಂಡ ಮಹಾ ಅಸುರರು ಭೂಮಿಯ ಕೆಳಗೆ ಮತ್ತು ಉಪ್ಪುನೀರಿನ ಸಮುದ್ರವನ್ನು ಸೇರಿದರು. ವಿಜಯಿ ಸುರರು ಮಂದರವನ್ನು ಅದರ ಸ್ಥಳದಲ್ಲಿಯೇ ಕೊಂಡೊಯ್ದಿಟ್ಟು ಪೂಜಿಸಿ, ಸಂತಸಭರಿಸ ಘೋಷಗಳಿಂದ ಆಕಾಶ-ಸ್ವರ್ಗಗಳನ್ನು ತುಂಬಿಸುತ್ತಾ ತಮ್ಮ ತಮ್ಮ ಸ್ಥಾನಗಳನ್ನು ಸೇರಿದರು. ಸ್ವರ್ಗವನ್ನು ಸೇರಿದ ಸುರರು ಪುಷ್ಕಳ ಸಂತೋಷಗೊಂಡು ಆ ಅಮೃತನಿಧಿಯನ್ನು ಜಾಗ್ರತೆಯಿಂದ ಕಾದುಕೊಂಡರು. ಇಂದ್ರ ಮತ್ತು ಇತರ ಅಮರರು ಅದನ್ನು ಒಂದು ಪಾತ್ರೆಯಲ್ಲಿಟ್ಟು ರಕ್ಷಣೆಗೆಂದು ನರನಿಗೆ ಕೊಟ್ಟರು.

Kannada Yakshagana Talamaddale Samudra Mathana:

 

The other stories:

  1. ಆರುಣಿ ಉದ್ದಾಲಕ
  2. ಉಪಮನ್ಯು
  3. ಗರುಡೋತ್ಪತ್ತಿ; ಅಮೃತಹರಣ
  4. ಶೇಷ
  5. ಶಕುಂತಲೋಪಾಽಖ್ಯಾನ
  6. ಯಯಾತಿ
  7. ಸಂವರಣ-ತಪತಿ
  8. ವಸಿಷ್ಠೋಪಾಽಖ್ಯಾನ
  9. ಔರ್ವೋಪಾಽಖ್ಯಾನ
  10. ಸುಂದೋಪಸುಂದೋಪಾಽಖ್ಯಾನ
  11. ಸಾರಂಗಗಳು
  12. ಸೌಭವಧೋಪಾಽಖ್ಯಾನ
  13. ನಲೋಪಾಽಖ್ಯಾನ
  14. ಅಗಸ್ತ್ಯೋಪಾಽಖ್ಯಾನ
  15. ಭಗೀರಥ
  16. ಋಷ್ಯಶೃಂಗ
  17. ಪರಶುರಾಮ
  18. ಚ್ಯವನ
  19. ಮಾಂಧಾತ
  20. ಸೋಮಕ-ಜಂತು
  21. ಗಿಡುಗ-ಪಾರಿವಾಳ
  22. ಅಷ್ಟಾವಕ್ರ
  23. ರೈಭ್ಯ-ಯವಕ್ರೀತ
  24. ತಾರ್ಕ್ಷ್ಯ ಅರಿಷ್ಠನೇಮಿ
  25. ಅತ್ರಿ
  26. ವೈವಸ್ವತ ಮನು
  27. ಮಂಡೂಕ-ವಾಮದೇವ
  28. ಧುಂಧುಮಾರ
  29. ಮಧು-ಕೈಟಭ ವಧೆ
  30. ಕಾರ್ತಿಕೇಯನ ಜನ್ಮ
  31. ಮುದ್ಗಲ
  32. ರಾಮೋಪಾಽಖ್ಯಾನ: ರಾಮಕಥೆ
  33. ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
  34. ಇಂದ್ರವಿಜಯೋಪಾಽಖ್ಯಾನ
  35. ದಂಬೋದ್ಭವ
  36. ಮಾತಲಿವರಾನ್ವೇಷಣೆ
  37. ಗಾಲವ ಚರಿತೆ
  38. ವಿದುಲೋಪಾಽಖ್ಯಾನ
  39. ತ್ರಿಪುರವಧೋಪಾಽಖ್ಯಾನ
  40. ಪರಶುರಾಮನು ಅಸ್ತ್ರಗಳನ್ನು ಪಡೆದುದು
  41. ಪ್ರಭಾಸಕ್ಷೇತ್ರ ಮಹಾತ್ಮೆ
  42. ತ್ರಿತಾಖ್ಯಾನ
  43. ಸಾರಸ್ವತೋಪಾಽಖ್ಯಾನ
  44. ವಿಶ್ವಾಮಿತ್ರ
  45. ವಸಿಷ್ಠಾಪವಾಹ ಚರಿತ್ರೆ
  46. ಬಕ ದಾಲ್ಭ್ಯನ ಚರಿತ್ರೆ
  47. ಕಪಾಲಮೋಚನತೀರ್ಥ ಮಹಾತ್ಮೆ
  48. ಮಂಕಣಕ
  49. ವೃದ್ಧಕನ್ಯೆ
  50. ಬದರಿಪಾಚನ ತೀರ್ಥ
  51. ಕುಮಾರನ ಪ್ರಭಾವ-ಅಭಿಷೇಕ
  52. ಅಸಿತದೇವಲ-ಜೇಗೀಷವ್ಯರ ಕಥೆ
  53. ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
  54. ಕುರುಕ್ಷೇತ್ರ ಮಹಾತ್ಮೆ
  55. ಶಂಖಲಿಖಿತೋಪಾಽಖ್ಯಾನ
  56. ಜಾಮದಗ್ನೇಯೋಪಾಽಖ್ಯಾನ
  57. ಷೋಡಶರಾಜಕೀಯೋಪಾಽಖ್ಯಾನ

Leave a Reply

Your email address will not be published. Required fields are marked *