ಪರಶುರಾಮ

ಪರಶುರಾಮನ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ತೀರ್ಥಯಾತ್ರಾ ಪರ್ವ (ಅಧ್ಯಾಯ ೧೧೫-೧೧೭) ದಲ್ಲಿ ಬರುತ್ತದೆ. ಯುಧಿಷ್ಠಿರನ ತೀರ್ಥಯಾತ್ರಾ ಸಮಯದಲ್ಲಿ ಈ ಕಥೆಯನ್ನು ರಾಜರ್ಷಿ ಅಕೃತವ್ರಣನು ಯುಧಿಷ್ಠಿರನಿಗೆ ಹೇಳಿದನು.

ಕನ್ಯಕುಬ್ಜದಲ್ಲಿ ಗಾಧಿ ಎಂದು ಲೋಕದಲ್ಲಿ ವಿಶ್ರುತನಾದ ಮಹಾಬಲಿ ಮಹಾ ರಾಜನಿದ್ದನು. ಅವನು ವನವಾಸಕ್ಕೆ ಹೋದನು. ವನದಲ್ಲಿ ವಾಸಿಸುತ್ತಿರುವಾಗ ಅವನಿಗೆ ಅಪ್ಸರೆಯಂತಿರುವ ಕನ್ಯೆಯು ಜನಿಸಿದಳು. ಭಾರ್ಗವ ಋಚೀಕನು ಅವಳನ್ನು ವರಿಸಿದನು. ಆಗ ರಾಜನು ಆ ಸಂಶಿತವ್ರತ ಬ್ರಾಹ್ಮಣನಿಗೆ ಹೇಳಿದನು: “ಹಿಂದಿನಿಂದಲೂ ನಡೆದುಕೊಂಡು ಬಂದಂತ ಒಂದು ಒಳ್ಳೆಯ ಸಂಪ್ರದಾಯವು ನಮ್ಮ ಕುಲದಲ್ಲಿದೆ. ದ್ವಿಜೋತ್ತಮ! ಒಂದೇ ಕಿವಿಯು ಕಪ್ಪಾಗಿರುವ ವೇಗವಾಗಿ ಹೋಗಬಲ್ಲ ಒಂದು ಸಾವಿರ ಬಿಳಿಯ ಕುದುರೆಗಳು ಕನ್ಯಾಶುಲ್ಕ ಎಂದು ತಿಳಿ. ಆದರೂ ಈ ಮಾತನ್ನು ನಿನ್ನಲ್ಲಿ ಹೇಳಬಾರದು. ಏಕೆಂದರೆ ನನ್ನ ಮಗಳನ್ನು ನಿನ್ನಂತಹ ಮಹಾತ್ಮನಿಗೆ ಕೊಡಬೇಕು.”

ಋಚೀಕನು ಹೇಳಿದನು: “ಒಂದೇ ಕಿವಿಯು ಕಪ್ಪಾಗಿರುವ ವೇಗದಲ್ಲಿ ಓಡುವ ಒಂದು ಸಾವಿರ ಬಿಳೀ ಕುದುರೆಗಳನ್ನು ಕೊಡುತ್ತೇನೆ, ಮತ್ತು ನಿನ್ನ ಮಗಳು ನನ್ನ ಪತ್ನಿಯಾಗುವಳು.” ಹೀಗೆ ಪ್ರತಿಜ್ಞೆಮಾಡಿದ ಅವನು ವರುಣನಿಗೆ ಹೇಳಿದನು: “ಒಂದೇ ಕಿವಿಯು ಕಪ್ಪಾಗಿರುವ ವೇಗದಲ್ಲಿ ಓಡುವ ಒಂದು ಸಾವಿರ ಬಿಳೀ ಕುದುರೆಗಳನ್ನು ಶುಲ್ಕವಾಗಿ ನನಗೆ ಕೊಡಬೇಕು.” ಆಗ ವರುಣನು ಅವನಿಗೆ ಒಂದು ಸಹಸ್ರ ಕುದುರೆಗಳನ್ನು ಕೊಟ್ಟನು. ಆ ಕುದುರೆಗಳು ಹೊರಬಂದ ಸ್ಥಳವು ಅಶ್ವತೀರ್ಥವೆಂದು ವಿಖ್ಯಾತವಾಗಿದೆ. ಅನಂತರ ಗಾಧಿಯು ತನ್ನ ಮಗಳು ಸತ್ಯವತಿಯನ್ನು ಗಂಗಾತೀರದ ಕನ್ಯಕುಬ್ಜದಲ್ಲಿ ಅವನಿಗೆ ಕೊಟ್ಟನು. ಆಗ ದೇವತೆಗಳೂ ವರನ ದಿಬ್ಬಣದಲ್ಲಿ ಇದ್ದರು. ಸಾವಿರ ಕುದುರೆಗಳನ್ನು ಪಡೆದು, ದೇವತೆಗಳನ್ನೂ ಕಂಡು, ಮತ್ತು ಧರ್ಮದಿಂದ ಪತ್ನಿಯನ್ನು ಪಡೆದ ದ್ವಿಜಸತ್ತಮ ಋಚೀಕನು ಬಯಸಿದ ಹಾಗೆ ಬೇಕಾದಷ್ಟು ಆ ಸುಮಧ್ಯಮೆಯೊಡನೆ ರಮಿಸಿದನು.

ವಿವಾಹದ ನಂತರ ಪತ್ನಿಯೊಂದಿಗೆ ಮಗನನ್ನು ನೋಡಲು ಭೃಗುಶ್ರೇಷ್ಠನು ಬಂದನು ಮತ್ತ ಅವರನ್ನು ನೋಡಿ ಸಂತೋಷಗೊಂಡನು. ಪತಿಪತ್ನಿಯರು ಆ ಸುರಗಣಾರ್ಚಿತ ಗುರುವನ್ನು ಕುಳ್ಳಿರಿಸಿ ಅರ್ಚಿಸಿ ಕೈಜೋಡಿಸಿ ಅವನ ಹತ್ತಿರ ನಿಂತುಕೊಂಡರು. ಆಗ ಸೊಸೆಯನ್ನು ನೋಡಿ ಸಂತೋಷಗೊಂಡ ಭೃಗುವು ಹೇಳಿದನು: “ಸುಭಗೇ! ವರವನ್ನು ಕೇಳು. ನಿನಗೆ ಬೇಕಾದುದನ್ನು ಕೊಡುತ್ತೇನೆ.” ಅವಳು ಆ ಗುರುವಲ್ಲಿ ತನಗೆ ಮತ್ತು ತನ್ನ ತಾಯಿಗೆ ಪುತ್ರರನ್ನು ಕೇಳಿಕೊಂಡಾಗ ಅವನು ಆ ಪ್ರಸಾದವನ್ನು ನೀಡಿ ಹೇಳಿದನು: “ಋತುವಾದ ನಂತರ ನೀನು ಮತ್ತು ನಿನ್ನ ತಾಯಿಯು ಪುಂಸವನ ಸ್ನಾನಮಾಡಿ ಅವಳು ಅಶ್ವತ್ಥ ವೃಕ್ಷವನ್ನೂ ನೀನು ಔದುಂಬರ ವೃಕ್ಷವನ್ನೂ ಆಲಂಗಿಸಬೇಕು.”

ಆದರೆ ಅವರು ಆಲಿಂಗನ ಮಾಡುವಾಗ ಅದಲು ಬದಲು ಮಾಡಿಕೊಂಡರು. ಈ ವಿಪರ್ಯಾಸವನ್ನು ತಿಳಿದ ಭೃಗುವು ಮತ್ತೊಂದು ದಿನ ಬಂದನು. ಆಗ ಮಹಾತೇಜಸ್ವಿ ಭೃಗುವು ಸೊಸೆ ಸತ್ಯವತಿಗೆ ಹೇಳಿದನು: “ಬ್ರಾಹ್ಮಣನಾಗಿದ್ದರೂ ಕ್ಷತ್ರಿಯನಾಗಿ ವರ್ತಿಸುವ ಮಗನು ನಿನಗೆ ಹುಟ್ಟುತ್ತಾನೆ. ಕ್ಷತ್ರಿಯನಾದರೂ ಮಹಾ ಬ್ರಾಹ್ಮಣನಾಗಿ ನಡೆದುಕೊಳ್ಳುವ, ಮಹಾವೀರನಾಗಿದ್ದರೂ ಸಾಧುಗಳ ಮಾರ್ಗದಲ್ಲಿ ನಡೆಯುವ ಮಗನು ನಿನ್ನ ತಾಯಿಗೆ ಹುಟ್ಟುತ್ತಾನೆ.”

ಆಗ ಅವಳು ತನ್ನ ಮಾವನನ್ನು ಪುನಃ ಪುನಃ ಕೇಳಿಕೊಂಡಳು: “ಹೀಗೆ ನನ್ನ ಮಗನು ಆಗುವುದು ಬೇಡ. ನನ್ನ ಮೊಮ್ಮಗನು ಹಾಗೆ ಆಗಲಿ.”

“ಹಾಗೆಯೇ ಆಗಲಿ!” ಎಂದು ಅವನು ಅವಳಿಗೆ ಸಂತೋಷವನ್ನು ತಂದನು. ಕಾಲ ಬಂದಾಗ ಅವಳಿಗೆ ತೇಜಸ್ಸು ಮತ್ತು ವರ್ಚಸ್ಸಿನಿಂದ ಕೂಡಿದ ಭಾರ್ಗವನಂದನ ಜಮದಗ್ನಿಯು ಪುತ್ರನಾಗಿ ಜನಿಸಿದನು. ಆ ತೇಜಸ್ವಿಯು ವೇದಾಧ್ಯಯನದಲ್ಲಿ ಮಹಾತೇಜಸ್ವಿಗಳಾದ ಬಹಳ ಋಷಿಗಳನ್ನೂ ಮೀರಿ ಬೆಳೆದನು. ವರ್ಚಸ್ಸಿನಲ್ಲಿ ಭಾಸ್ಕರನಂತಿರುವ ಅವನಿಗೆ ಸಂಪೂರ್ಣ ಧನುರ್ವೇದ ಮತ್ತು ನಾಲ್ಕು ವಿಧದ ಶಾಸ್ತ್ರಗಳು ತಾವಾಗಿಯೇ ಬಂದವು. ಆ ಮಹಾತಪಸ್ವಿ ಜಮದಗ್ನಿಯು ವೇದಾಧ್ಯಯನದಲ್ಲಿ ನಿರತನಾಗಿ ತಪಸ್ಸನ್ನು ತಪಿಸಿ ತನ್ನ ನಿಯಮದಿಂದ ದೇವತೆಗಳನ್ನೂ ವಶಪಡಿಸಿಕೊಂಡನು. ಅವನು ನರಾಧಿಪ ಪ್ರಸೇನಜಿತನಲ್ಲಿಗೆ ಹೋಗಿ ರೇಣುಕೆಯನ್ನು ವರಿಸಿದನು. ರಾಜನು ಅವಳನ್ನು ಅವನಿಗೆ ಕೊಟ್ಟನು. ರೇಣುಕೆಯನ್ನು ಪತ್ನಿಯಾಗಿ ಪಡೆದ ಭಾರ್ಗವನಂದನನು ಆ ಅನುಕೂಲೆಯೊಂದಿಗೆ ತನ್ನ ಆಶ್ರಮದಲ್ಲಿ ಇನ್ನೂ ಹೆಚ್ಚು ತಪಸ್ಸನ್ನು ತಪಿಸಿದನು. ಅವಳಲ್ಲಿ ನಾಲ್ಕು ಕುಮಾರರು ಜನಿಸಿದರು. ರಾಮನು ಐದನೆಯವನು. ಎಲ್ಲರಿಗಿಂತ ಕಡೆಯವನಾಗಿದ್ದರೂ ರಾಮನು ಎಲ್ಲದರಲ್ಲಿಯೂ ಎಲ್ಲರಿಗಿಂತ ಮೊದಲನೆಯವನಾಗಿದ್ದನು.

ಒಮ್ಮೆ ಮಕ್ಕಳೆಲ್ಲರೂ ಹಣ್ಣು ಹುಡುಕಿ ತರಲು ಹೋಗಿದ್ದಾಗ ನಿಯತವ್ರತೆ ರೇಣುಕೆಯು ಸ್ನಾನಕ್ಕೆಂದು ಹೋದಳು. ಆ ರೇಣುಕೆಯಾದರೋ ಬರುತ್ತಿರುವಾಗ ಚಿತ್ರರಥನೆಂಬ ಹೆಸರಿನ ಮಾರ್ತ್ತಿಕಾವತಕದ ರಾಜನನ್ನು ನೋಡಿದಳು. ಸರೋವರದಲ್ಲಿ ಭಾರ್ಯೆಯರೊಂದಿಗೆ ಆಡುತ್ತಿದ್ದ ಆ ಶ್ರೀಮಂತ ಪದ್ಮಮಾಲಿನಿಯನ್ನು ನೋಡಿ ರೇಣುಕೆಯು ಅವನ ಸಾಮೀಪ್ಯವನ್ನು ಬಯಸಿದಳು. ಆ ವ್ಯಭಿಚಾರದಿಂದ ಬುದ್ಧಿಕಳೆದುಕೊಂಡ ಅವಳು ನೀರಿನಲ್ಲಿ ಒದ್ದೆಯಾಗಿ ನಡುಗುತ್ತಾ ಆಶ್ರಮವನ್ನು ಪ್ರವೇಶಿಸಿದಳು. ಅವಳ ಗಂಡನು ಎಲ್ಲವನ್ನೂ ತಿಳಿದುಕೊಂಡನು. ಅವಳು ತನ್ನ ಧೈರ್ಯದಿಂದ ಚ್ಯುತಳಾಗಿದ್ದಾಳೆ ಮತ್ತು ತನ್ನ ಬ್ರಹ್ಮಲಕ್ಷ್ಮಿಯನ್ನು ತೊರೆದಿದ್ದಾಳೆ ಎಂದು ತಿಳಿದ ಆ ವೀರ್ಯವಂತ ಮಹಾತೇಜಸ್ವಿಯು ಅವಳನ್ನು ಧಿಕ್ಕರಿಸುವ ಮಾತುಗಳಿಂದ ಜರೆದನು. ಆಗ ರುಮಣ್ವಂತ ಎಂಬ ಹೆಸರಿನ ಜಮದಗ್ನಿಯ ಜ್ಯೇಷ್ಟ ಪುತ್ರನೂ, ಹಾಗೆಯೇ ಸುಷೇಣನೂ, ವಸುವೂ ಮತ್ತು ವಿಶ್ವಾವಸುವೂ ಬಂದರು. ಆ ಭಗವಾನನು ಅವರಲ್ಲಿ ಅನುಕ್ರಮವಾಗಿ ಒಬ್ಬಬ್ಬರಲ್ಲಿಯೂ ತಾಯಿಯನ್ನು ವಧಿಸಲು ಅಜ್ಞಾಪಿಸಿದನು. ಆದರೆ ತಾಯಿಯ ಮೇಲಿನ ಮೋಹದಿಂದ ಬುದ್ಧಿಕಳೆದುಕೊಂಡ ಅವರು ಯಾರೂ ಉತ್ತರಿಸಲಿಲ್ಲ. ಆಗ ಕೋಪದಿಂದ ಅವರನ್ನು ಶಪಿಸಿದನು. ಅವರು ಶಾಪದಿಂದ ತಮ್ಮ ಚೇತನಗಳನ್ನು ಕಳೆದುಕೊಂಡು ತಕ್ಷಣವೇ ಮೃಗಪಕ್ಷಿಗಳಂತೆ ಮತ್ತು ಜಡವಸ್ತುಗಳಂತೆ ವರ್ತಿಸತೊಡಗಿದರು. ಅನಂತರ ಅಲ್ಲಿಗೆ ಪರವೀರಹ ರಾಮನು ಆಶ್ರಮಕ್ಕೆ ಬಂದನು. ಮಹಾತಪಸ್ವಿ ಜಮದಗ್ನಿಯು ಮಹಾಕೋಪದಿಂದ ಅವನಿಗೆ ಹೇಳಿದನು: “ಮಗಾ! ಈ ಪಾಪಿ ತಾಯಿಯನ್ನು ಕೊಲ್ಲು. ವ್ಯಥೆಮಾಡಬೇಡ!” ಆಗ ರಾಮನು ಕೊಡಲಿಯನ್ನು ಹಿಡಿದು ತಾಯಿಯ ತಲೆಯನ್ನು ಕಡಿದನು. ಮಹಾತ್ಮ ಜಮದಗ್ನಿಯ ಕೋಪವು ತಕ್ಷಣವೇ ಕಡಿಮೆಯಾಯಿತು ಮತ್ತು ಪ್ರಸನ್ನನಾಗಿ ಅವನು ಹೇಳಿದನು: “ಮಗೂ! ನನ್ನ ಈ ಮಾತಿನಂತೆ ನೀನು ಈ ದುಷ್ಕರ ಕೆಲಸವನ್ನು ಮಾಡಿದ್ದೀಯೆ! ಧರ್ಮಜ್ಞ! ನಿನ್ನ ಹೃದಯದಲ್ಲಿ ಎಷ್ಟನ್ನು ಬಯಸುತ್ತೀಯೋ ಅಷ್ಟು ವರಗಳನ್ನು ಕೇಳು!” ಅವನು ತಾಯಿಯು ಎದ್ದೇಳಲೆಂದೂ, ವಧೆಯನ್ನು ಮರೆಯುವಂತೆಯೂ, ಪಾಪವು ತನಗೆ ತಾಗದಿರಲೆಂದೂ, ಮತ್ತು ತನ್ನ ಸಹೋದರರು ತಮ್ಮ ಹಿಂದಿನ ಸ್ವಭಾವಕ್ಕೆ ಹಿಂದಿರುಗಲೆಂದೂ ಕೇಳಿಕೊಂಡನು. ಮಹಾತಪಸ್ವಿ ಜಮದಗ್ನಿಯು ದ್ವಂದ್ವಯುದ್ಧದಲ್ಲಿ ಅಜೇಯತ್ವವನ್ನೂ, ದೀರ್ಘಾಯುಸ್ಸನ್ನೂ ಮತ್ತು ಅವನು ಬಯಸಿದುದೆಲ್ಲವನ್ನೂ ನೀಡಿದನು.

ಅನಂತರ ಒಂದು ದಿನ ಅವನ ಮಕ್ಕಳೆಲ್ಲರೂ ಹೊರಗೆ ಹೋಗಿದ್ದಾಗ ಕರಾವಳಿಯ ರಾಜ ಕಾರ್ತವೀರ್ಯನು ಅಲ್ಲಿಗೆ ಆಗಮಿಸಿದನು. ಅವನು ಆಶ್ರಮಕ್ಕೆ ಬಂದಾಗ ಋಷಿಪತ್ನಿಯು ಅವನನ್ನು ಅರ್ಚಿಸಿದಳು. ಆದರೆ ಆ ಯುದ್ಧಮದಸಮ್ಮತ್ತನು ಅವಳ ಆತಿಥ್ಯವನ್ನು ಸ್ವೀಕರಿಸಲಿಲ್ಲ. ಅವನು ಆಶ್ರಮವನ್ನು ಧ್ವಂಸಮಾಡಿ, ಕೂಗುತ್ತಿರುವ ಹೋಮಧೇನುವಿನ ಕರುವನ್ನು ಭಲಾತ್ಕಾರವಾಗಿ ತೆಗೆದುಕೊಂಡು ಹೋಗುತ್ತಾ ಮಹಾವೃಕ್ಷಗಳನ್ನು ಕಡಿದುರುಳಿಸಿದನು. ರಾಮನು ಮರಳಿ ಬಂದಾಗ ಸ್ವಯಂ ತಂದೆಯು ಎಲ್ಲವನ್ನೂ ಹೇಳಿದನು ಮತ್ತು ಕೂಗುತ್ತಿರುವ ಗೋವನ್ನು ನೋಡಿ ರಾಮನು ಕೋಪದಿಂದ ಆವೇಶಗೊಂಡನು. ಕೋಪಾವಿಷ್ಟನಾದ ಪರವೀರಹ ಭಾರ್ಗವನು ಕಾರ್ತವೀರ್ಯನನ್ನು ಆಕ್ರಮಣಮಾಡಿ ಅವನೊಂದಿಗೆ ಯುದ್ಧದಲ್ಲಿ ತೊಡಗಿದನು. ತನ್ನ ಉತ್ತಮ ಧನುಸ್ಸನ್ನು ಹಿಡಿದು ಹರಿತವಾದ ಬಾಣಗಳಿಂದ ಪರಿಘಗಳಂತಿದ್ದ ಅವನ ಸಹಸ್ರ ಬಾಹುಗಳನ್ನು ಕತ್ತರಿಸಿದನು.

ರಾಮನ ಮೇಲೆ ಕುಪಿತರಾಗಿ ಅರ್ಜುನನ ದಾಯಾದಿಗಳು ರಾಮನಿಲ್ಲದಿದ್ದಾಗ ಆಶ್ರಮದಲ್ಲಿದ್ದ ಜಮದಗ್ನಿಯ ಮೇಲೆ ದಾಳಿಮಾಡಿದರು. ಅವರು ಯುದ್ಧಮಾಡಲು ನಿರಾಕರಿಸಿದ ಆ ತಪಸ್ವಿಯನ್ನು, “ರಾಮಾ ರಾಮಾ” ಎಂದು ಕೂಗುತ್ತಿರುವಾಗಲೇ, ಯಾರ ರಕ್ಷಣೆಯಲ್ಲಿಯೂ ಇಲ್ಲದಿರುವಾಗ ಸಂಹರಿಸಿದರು. ಕಾರ್ತವೀರ್ಯನ ಆ ಅರಿಂದಮ ಪುತ್ರರು ಜಮದಗ್ನಿಯನ್ನು ಬಾಣಗಳಿಂದ ಕೊಂದು ಅವರು ಎಲ್ಲಿಂದ ಬಂದಿದ್ದರೋ ಅಲ್ಲಿಗೆ ತೆರಳಿದರು. ಜಮದಗ್ನಿಯನ್ನು ಹಾಗೆಯೇ ಬಿಟ್ಟು ಅವರು ಹೊರಟುಹೋದನಂತರ ಸಮಿತ್ತುಗಳನ್ನು ಹಿಡಿದು ಭೃಗುನಂದನನು ಆಶ್ರಮಕ್ಕೆ ಮರಳಿದನು. ಮೃತ್ಯುವಶನಾಗಿದ್ದ ತನ್ನ ತಂದೆಯನ್ನು ನೋಡಿ ಆ ವೀರನು ಅನರ್ಹನಾದವನಿಗೆ ಹೀಗಾಗಿದ್ದುದನ್ನು ಕಂಡು ಬಹಳ ದುಃಖಿತನಾಗಿ ವಿಲಪಿಸಿದನು: “ಅಪ್ಪಾ! ನನ್ನ ಅಪರಾಧದಿಂದಲೇ ಈ ಕ್ಷುದ್ರ ಬಾಲಿಶ ಕಾರ್ತವೀರ್ಯನ ದಾಯದಿಗಳು ವನದಲ್ಲಿ ಮೃಗವನ್ನು ಬಾಣಗಳಿಂದ ಕೊಲ್ಲುವಂತೆ ನಿನ್ನನ್ನು ಕೊಂದಿದ್ದಾರೆ. ಸತ್ಯಪಥದಲ್ಲಿ ನಡೆದುಕೊಂಡು ಹೋಗುತ್ತಿರುವ, ಎಲ್ಲ ಭೂತಗಳಿಗೂ ಅನಾಗಸನಾಗಿರುವ ಧರ್ಮಜ್ಞನಾದ ನಿನಗೆ ಈ ರೀತಿಯ ಮೃತ್ಯುವು ಹೇಗೆ ಸರಿಯಾಗುತ್ತದೆ? ತಪಸ್ಥನಾಗಿದ್ದ ಯುದ್ಧಮಾಡದೇ ಇರುವ ವೃದ್ಧನಾದ ನಿನ್ನನ್ನು ನೂರಾರು ಹರಿತ ಬಾಣಗಳಿಂದ ಕೊಂದು ಅವರು ಎಷ್ಟು ಪಾಪಗಳನ್ನು ಸಂಗ್ರಹಿಸಿರಲಿಕ್ಕಿಲ್ಲ? ಹೋರಾಡದೇ ಇದ್ದ ಏಕಾಂಗಿಯಾಗಿದ್ದ ಧರ್ಮಜ್ಞನನ್ನು ನಾಚಿಕೆಯಿಲ್ಲದೇ ಕೊಂದ ಅವರು ತಮ್ಮ ಸಚಿವರಿಗೆ ಮತ್ತು ಸ್ನೇಹಿತರಿಗೆ ಏನೆಂದು ಹೇಳುವುದಿಲ್ಲ?”

ಈ ರೀತಿ ಆ ಕರುಣಿಯು ನಾನಾವಿಧವಾಗಿ ವಿಲಪಿಸಿದನು ಮತ್ತು ಆ ಮಹಾತಪಸ್ವಿಯು ತಂದೆಯ ಪ್ರೇತಕರ್ಮಗಳೆಲ್ಲವನ್ನೂ ನಡೆಸಿದನು. ಪರಪುರಂಜಯ ರಾಮನು ತಂದೆಯನ್ನು ಅಗ್ನಿಯಲ್ಲಿ ದಹಿಸಿದನು ಮತ್ತು ಕ್ಷತ್ರಿಯರೆಲ್ಲರನ್ನೂ ವಧಿಸುವ ಪ್ರತಿಜ್ಞೆ ಮಾಡಿದನು. ಅಂತಕನಂತಿದ್ದ ಆ ಅತಿಬಲ ಶೂರ ವೀರ್ಯವಂತನು ಕೋಪದಿಂದ ಶಸ್ತ್ರವನ್ನು ಹಿಡಿದು ಒಬ್ಬನೇ ಕಾರ್ತವೀರ್ಯನ ಮಕ್ಕಳನ್ನು ಸಂಹರಿಸಿದನು. ಪ್ರಹರಿಗಳಲ್ಲಿ ಶ್ರೇಷ್ಠ ರಾಮನು ಅವರ ಅನುಯಾಯಿ ಕ್ಷತ್ರಿಯರೆಲ್ಲರನ್ನೂ ಸದೆಬಡಿದನು. ಇಪ್ಪತ್ತೊಂದು ಬಾರಿ ಭೂಮಿಯಮೇಲೆ ಕ್ಷತ್ರಿಯರಿಲ್ಲದಂತೆ ಮಾಡಿ ಪ್ರಭುವು ಸಮಂತಪಂಚಕದಲ್ಲಿ ರಕ್ತದ ಐದು ಸರೋವರಗಳನ್ನು ನಿರ್ಮಿಸಿದನು. ಆ ಭೃಗುಕುಲೋದ್ಧಹನು ಅವುಗಳಿಂದ ಪಿತೃಗಳಿಗೆ ತರ್ಪಣೆಯನ್ನಿತ್ತನು. ಆಗ ಸಾಕ್ಷಾತ್ ಋಚೀಕನು ಅಲ್ಲಿಗೆ ಬಂದು ರಾಮನನ್ನು ತಡೆದನು. ಅನಂತರ ಮಹಾತ್ಮ ಪ್ರತಾಪಿ ಜಾಮದಗ್ನಿಯು ಮಹಾ ಯಜ್ಞದಿಂದ ದೇವೇಂದ್ರನನ್ನು ತೃಪ್ತಿಪಡಿಸಿ ಭೂಮಿಯನ್ನು ಬ್ರಾಹ್ಮಣರಿಗೆ ದಾನವಾಗಿತ್ತನು. ಹತ್ತು ಅಳತೆ ಉದ್ದದ ಮತ್ತು ಒಂಭತ್ತು ಅಳತೆ ಎತ್ತರದ ಬಂಗಾರದ ವೇದಿಯನ್ನು ನಿರ್ಮಿಸಿ ಮಹಾತ್ಮ ಕಶ್ಯಪನಿಗೆ ದಾನವಾಗಿತ್ತನು. ಕಶ್ಯಪನ ಅನುಮತಿಯನ್ನು ಪಡೆದು ಬ್ರಾಹ್ಮಣರು ಅದನ್ನು ತುಂಡುತುಂಡುಗಳನ್ನಾಗಿ ಮಾಡಿ ಹಂಚಿಕೊಂಡರು ಮತ್ತು ಆದುದರಿಂದ ಅವರು ಖಾಂಡವಾಯನರೆಂದು ಪ್ರಖ್ಯಾತರಾದರು. ಭೂಮಿಯನ್ನು ಮಹಾತ್ಮ ಕಶ್ಯಪನಿಗಿತ್ತು ಆ ಅಮಿತವಿಕ್ರಮನು ಮಹೇಂದ್ರ ಗಿರಿಯಲ್ಲಿ ವಾಸಮಾಡಿದನು. ಈ ಪ್ರಕಾರವಾಗಿ ಲೋಕದಲ್ಲಿ ವಾಸಿಸುತ್ತಿದ್ದ ಕ್ಷತ್ರಿಯರೊಂದಿಗೆ ಅವನ ವೈರವಿತ್ತು ಮತ್ತು ಹೀಗೆ ಅಮಿತತೇಜಸ್ವಿ ರಾಮನು ಈ ಭೂಮಿಯನ್ನು ಗೆದ್ದನು.

Related image

The other stories:

  1. ಆರುಣಿ ಉದ್ದಾಲಕ
  2. ಉಪಮನ್ಯು
  3. ಸಮುದ್ರಮಥನ
  4. ಗರುಡೋತ್ಪತ್ತಿ; ಅಮೃತಹರಣ
  5. ಶೇಷ
  6. ಶಕುಂತಲೋಪಾಽಖ್ಯಾನ
  7. ಯಯಾತಿ
  8. ಸಂವರಣ-ತಪತಿ
  9. ವಸಿಷ್ಠೋಪಾಽಖ್ಯಾನ
  10. ಔರ್ವೋಪಾಽಖ್ಯಾನ
  11. ಸುಂದೋಪಸುಂದೋಪಾಽಖ್ಯಾನ
  12. ಸಾರಂಗಗಳು
  13. ಸೌಭವಧೋಪಾಽಖ್ಯಾನ
  14. ನಲೋಪಾಽಖ್ಯಾನ
  15. ಅಗಸ್ತ್ಯೋಪಾಽಖ್ಯಾನ
  16. ಭಗೀರಥ
  17. ಋಷ್ಯಶೃಂಗ
  18. ಪರಶುರಾಮ
  19. ಚ್ಯವನ
  20. ಮಾಂಧಾತ
  21. ಸೋಮಕ-ಜಂತು
  22. ಗಿಡುಗ-ಪಾರಿವಾಳ
  23. ಅಷ್ಟಾವಕ್ರ
  24. ರೈಭ್ಯ-ಯವಕ್ರೀತ
  25. ತಾರ್ಕ್ಷ್ಯ ಅರಿಷ್ಠನೇಮಿ
  26. ಅತ್ರಿ
  27. ವೈವಸ್ವತ ಮನು
  28. ಮಂಡೂಕ-ವಾಮದೇವ
  29. ಧುಂಧುಮಾರ
  30. ಮಧು-ಕೈಟಭ ವಧೆ
  31. ಕಾರ್ತಿಕೇಯನ ಜನ್ಮ
  32. ಮುದ್ಗಲ
  33. ರಾಮೋಪಾಽಖ್ಯಾನ: ರಾಮಕಥೆ
  34. ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
  35. ಇಂದ್ರವಿಜಯೋಪಾಽಖ್ಯಾನ
  36. ದಂಬೋದ್ಭವ
  37. ಮಾತಲಿವರಾನ್ವೇಷಣೆ
  38. ಗಾಲವ ಚರಿತೆ
  39. ವಿದುಲೋಪಾಽಖ್ಯಾನ
  40. ತ್ರಿಪುರವಧೋಪಾಽಖ್ಯಾನ
  41. ಪರಶುರಾಮನು ಅಸ್ತ್ರಗಳನ್ನು ಪಡೆದುದು
  42. ಪ್ರಭಾಸಕ್ಷೇತ್ರ ಮಹಾತ್ಮೆ
  43. ತ್ರಿತಾಖ್ಯಾನ
  44. ಸಾರಸ್ವತೋಪಾಽಖ್ಯಾನ
  45. ವಿಶ್ವಾಮಿತ್ರ
  46. ವಸಿಷ್ಠಾಪವಾಹ ಚರಿತ್ರೆ
  47. ಬಕ ದಾಲ್ಭ್ಯನ ಚರಿತ್ರೆ
  48. ಕಪಾಲಮೋಚನತೀರ್ಥ ಮಹಾತ್ಮೆ
  49. ಮಂಕಣಕ
  50. ವೃದ್ಧಕನ್ಯೆ
  51. ಬದರಿಪಾಚನ ತೀರ್ಥ
  52. ಕುಮಾರನ ಪ್ರಭಾವ-ಅಭಿಷೇಕ
  53. ಅಸಿತದೇವಲ-ಜೇಗೀಷವ್ಯರ ಕಥೆ
  54. ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
  55. ಕುರುಕ್ಷೇತ್ರ ಮಹಾತ್ಮೆ
  56. ಶಂಖಲಿಖಿತೋಪಾಽಖ್ಯಾನ
  57. ಜಾಮದಗ್ನೇಯೋಪಾಽಖ್ಯಾನ
  58. ಷೋಡಶರಾಜಕೀಯೋಪಾಽಖ್ಯಾನ

One Comment

  1. ದ್ರೋಣರ ಗುರು ಪರಶುರಾಮ ರ ಜೀವನ ಚರಿತ್ರೆಯನ್ನು ಹಾಕಿ

Leave a Reply

Your email address will not be published. Required fields are marked *