ರಾಮೋಪಾಽಖ್ಯಾನ: ರಾಮಕಥೆ

ರಾಮಾಯಣದ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ದ್ರೌಪದೀಹರಣ ಪರ್ವ (ಅಧ್ಯಾಯ ೨೫೭-೨೭೫) ದಲ್ಲಿ ಬರುತ್ತದೆ. ಈ ಕಥೆಯನ್ನು ಋಷಿ ಮಾರ್ಕಂಡೇಯನು ಯುಧಿಷ್ಠಿರನಿಗೆ ಹೇಳಿದನು.

ಜಯದ್ರಥನನ್ನು ಸೋಲಿಸಿ ಕೃಷ್ಣೆಯನ್ನು ಬಿಡುಗಡೆಗೊಳಿಸಿದ ಧರ್ಮರಾಜ ಯುಧಿಷ್ಠಿರನು ಮುನಿಗಳ ಮಧ್ಯದಲ್ಲಿ ಕುಳಿತುಕೊಂಡಿದ್ದನು. ಅದರ ಕುರಿತು ಕೇಳಿ ದುಃಖಿತರಾದ ಆ ಮಹರ್ಷಿಗಳ ಮಧ್ಯದಲ್ಲಿದ್ದ ಮಾರ್ಕಂಡೇಯನಿಗೆ ಪಾಂಡುನಂದನನು ಈ ಮಾತುಗಳನ್ನಾಡಿದನು: “ಬಲವಾನ್ ಕಾಲ ಮತ್ತು ಆಗಬೇಕಾಗಿದ್ದ ವಿಧಿನಿರ್ಮಿತ ದೈವವನ್ನು ಇರುವ ಯಾರೂ ಅತಿಕ್ರಮಿಸಲು ಸಾಧ್ಯವಿಲ್ಲ ಎನ್ನುವುದನ್ನು ಮನ್ನಿಸೋಣ. ಆದರೂ ಧರ್ಮಜ್ಞೆ ಮತ್ತು ಧರ್ಮಚಾರಿಣಿ ನಮ್ಮ ಪತ್ನಿಗೆ ಹೀಗೇಕಾಯಿತು? ಶುಚಿಯಾದವನಿಗೆ ಸುಳ್ಳಿನ ಅಪವಾದವು ಏಕೆ ಬರುತ್ತದೆ? ದ್ರೌಪದಿಯು ಯಾವುದೇ ಪಾಪಕರ್ಮವನ್ನು ಮಾಡಿಲ್ಲ ಮತ್ತು ಯಾರನ್ನೂ ನಿಂದಿಸಿಲ್ಲ. ಬ್ರಾಹ್ಮಣರೊಡನೆ ಅವಳು ಮಹಾಧರ್ಮವನ್ನೇ ಆಚರಿಸುತ್ತಿದ್ದಾಳೆ. ಮೂಢಬುದ್ಧಿಯ ರಾಜಾ ಜಯದ್ರಥನು ಬಲಾತ್ಕಾರದಿಂದ ಅವಳನ್ನು ಅಪಹರಿಸಿದ. ಅವನ ಅನುಯಾಯಿಗಳೊಂದಿಗೆ ಸಂಗ್ರಾಮದಲ್ಲಿ ಪರಾಜಯವನ್ನು ಹೊಂದಿ ತಲೆಯ ಕೂದಲನ್ನು ಬೋಳಿಸಿಕೊಂಡ. ಮೃಗಗಳನ್ನು ಅವಲಂಬಿಸಿ ಜೀವಿಸುವ ಈ ವನವಾಸವು ದುಃಖತರವಾದುದು. ವನದಲ್ಲಿ ವಾಸಿಸುವವರು ವನದಲ್ಲಿರುವ ಮೃಗಜಾತಿಗಳನ್ನು ಬೇಟೆಯಾಡಿ ಹಿಂಸಿಸಬೇಕಾಗುತ್ತದೆ. ಮೋಸಗಾರರಾದ ನಮ್ಮ ಬಾಂಧವರೇ ನಮಗೆ ಈ ವನವಾಸವನ್ನಿತ್ತಿದ್ದಾರೆ. ನನಗಿಂತಲೂ ದುರಾದೃಷ್ಟರು ಇನ್ನು ಯಾರಾದರೂ ಇದ್ದಾರೆಯೇ ಅಥವಾ ಹಿಂದೆ ಯಾರಾದರೂ ಇದ್ದರೇ? ಅಂಥವರನ್ನು ನೀನು ಇದಕ್ಕೂ ಹಿಂದೆ ನೋಡಿದ್ದೆಯಾ ಅಥವಾ ಕೇಳಿದ್ದೆಯಾ?”

ಮಾರ್ಕಂಡೇಯನು ಹೇಳಿದನು: “ಭರತರ್ಷಭ! ತನ್ನ ಪತ್ನಿ ಜಾನಕಿಯನ್ನು ರಾಕ್ಷಸನು ಬಲಾತ್ಕಾರವಾಗಿ ಅಪಹರಿಸಿಕೊಂಡು ಹೋದಾಗ ರಾಮನು ಅಪ್ರತಿಮ ದುಃಖವನ್ನು ಅನುಭವಿಸಿದನು. ರಾಕ್ಷಸೇಂದ್ರ ರಾವಣನು ಮಾಯೆಯಿಂದ ಅವಳನ್ನು ಆಶ್ರಮದಿಂದ ಕದ್ದು ಜಟಾಯುವನ್ನು ಸಂಹರಿಸಿ ಕ್ಷಣಮಾತ್ರದಲ್ಲಿ ಆಕಾಶಮಾರ್ಗದಲ್ಲಿ ಹೋದನು. ರಾಮನು ಸುಗ್ರೀವನ ಸೇನೆಯ ಸಹಾಯದಿಂದ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿ ತೀಕ್ಷ್ಣ ಶರಗಳಿಂದ ಲಂಕೆಯನ್ನು ಸುಟ್ಟು ಅವಳನ್ನು ಪುನಃ ಪಡೆದನು.”

ಯುಧಿಷ್ಠಿರನು ಹೇಳಿದನು: “ರಾಮನು ಯಾವ ಕುಲದಲ್ಲಿ ಜನಿಸಿದನು ಮತ್ತು ಅವನು ಎಷ್ಟು ವೀರನೂ ಪರಾಕ್ರಮಿಯೂ ಆಗಿದ್ದನು? ರಾವಣನು ಯಾರ ಮಗ ಮತ್ತು ರಾಮನೊಂದಿಗೆ ಅವನ ದ್ವೇಷವಾದರೂ ಏನಿತ್ತು? ಭಗವನ್! ಇವೆಲ್ಲವನ್ನೂ ನೀನು ನನಗೆ ಹೇಳಬೇಕು. ಅಕ್ಲಿಷ್ಟಕರ್ಮಿ ರಾಮನ ಕಥೆಯನ್ನು ಕೇಳ ಬಯಸುತ್ತೇನೆ.”

ಆಗ ಮುನಿ ಮಾರ್ಕಂಡೇಯನು ಯುಧಿಷ್ಠಿರನಿಗೆ ರಾಮೋಪಾಖ್ಯಾನವನ್ನು ಹೇಳಿದನು.

***

ರಾಮ-ರಾವಣಾದಿಗಳ ಜನನ

ಮಹಾನ್ ಇಕ್ಷ್ವಾಕು ವಂಶದಲ್ಲಿ ಹುಟ್ಟಿದ ಅಜ ಎಂಬ ಹೆಸರಿನ ರಾಜನಿದ್ದನು. ಅವನ ಪುತ್ರ ದಶರಥನು ಯಾವಾಗಲೂ ಸ್ವಾಧ್ಯಾಯದಲ್ಲಿ ತೊಡಗಿದ್ದು ಶುಚಿಯಾಗಿದ್ದನು. ಅವನಿಗೆ ಧರ್ಮಾರ್ಥಕೋವಿದರಾದ ಮಹಾಬಲಶಾಲಿಗಳಾದ ರಾಮ, ಲಕ್ಷ್ಮಣ, ಶತ್ರುಘ್ನ ಮತ್ತು ಭರತರೆಂಬ ನಾಲ್ವರು ಪುತ್ರರಾದರು, ರಾಮನ ತಾಯಿ ಕೌಸಲ್ಯೆ. ಭರತನ ತಾಯಿ ಕೈಕೇಯೀ ಮತ್ತು ಲಕ್ಷ್ಮಣ-ಶತ್ರುಘ್ನರು ಸುಮಿತ್ರೆಯ ಮಕ್ಕಳು. ವಿದೇಹರಾಜ ಜನಕ ಮತ್ತು ಅವನ ಮಗಳು ಸೀತೆ. ಸ್ವಯಂ ಬ್ರಹ್ಮನೇ ಅವಳನ್ನು ರಾಮನ ಪ್ರಿಯ ಮಹಿಷಿಯನ್ನಾಗಿ ಮಾಡಿದ್ದನು. ಇದು ರಾಮ ಮತ್ತು ಸೀತೆಯರ ಜನ್ಮಕಥೆ.

ಸಾಕ್ಷಾತ್ ಪ್ರಜಾಪತಿ ಸೃಷ್ಟಿಕರ್ತ ಬ್ರಹ್ಮನೇ ರಾವಣನ ಪಿತಾಮಹ. ಬ್ರಹ್ಮನಿಗೆ ಪುಲಸ್ತ್ಯ ಎಂಬ ಹೆಸರಿನ ಮಾನಸಪುತ್ರನಿದ್ದನು. ಪುಲಸ್ತ್ಯನಿಗೆ ಗೋವಿನಲ್ಲಿ ವೈಶ್ರವಣ ಎಂಬ ಹೆಸರಿನ ಪುತ್ರನಾದನು. ಅವನು ತಂದೆಯನ್ನು ತೊರೆದು ಪಿತಾಮಹನಲ್ಲಿ ವಾಸಿಸಿದನು. ಇದರಿಂದ ಕೋಪಗೊಂಡ ಪುಲಸ್ತ್ಯನು ತನ್ನ ಅರ್ಧದಿಂದ ವಿಶ್ರವಾ ಎಂಬ ಹೆಸರಿನನವನ್ನು ಹುಟ್ಟಿಸಿದನು. ಪಿತಾಮಹ ಬ್ರಹ್ಮನಾದರೋ ಆ ವೈಶ್ರವ ಕುಬೇರನ ಮೇಲೆ ಸಂತೋಷಗೊಂಡು ಅವನಿಗೆ ಅಮರತ್ವವನ್ನೂ, ಧನೇಶತ್ವವನ್ನೂ, ಲೋಕಪಾಲತ್ವವನ್ನೂ, ಈಶಾನನ ಸಖ್ಯವನ್ನೂ, ನಲಕೂಬರನೆನ್ನುವ ಪುತ್ರನನ್ನೂ, ರಾಕ್ಷಸಗಣಗಳಿಂದೊಡಗೂಡಿದ ಲಂಕೆಯನ್ನು ರಾಜಧಾನಿಯನ್ನಾಗಿಯೂ ನಿವಾಸಸ್ಥಾನವನ್ನಾಗಿಯೂ ನೀಡಿದನು.

ರಾಕ್ಷಸೇಶ್ವರ ಕುಬೇರನಾದರೋ ತನ್ನ ತಂದೆಯು ಕುಪಿತನಾಗಿದ್ದಾನೆಂದು ತಿಳಿದಿದ್ದನು ಮತ್ತು ಅವನನ್ನು ಪ್ರಸೀದಗೊಳಿಸಲು ಸದಾ ಪ್ರಯತ್ನಿಸುತ್ತಿದ್ದನು. ಆ ರಾಜರಾಜ ನರವಾಹನನು ಲಂಕೆಯಲ್ಲಿ ವಾಸಿಸುವಾಗ ತನ್ನ ತಂದೆಗೆ ಮೂರು ರಾಕ್ಷಸಿಯರನ್ನು ದಾಸಿಯರನ್ನಾಗಿ ಕೊಟ್ಟನು. ಆ ನೃತ್ಯಗೀತವಿಶಾರದರು ಮಹಾತ್ಮ ಋಷಿಯನ್ನು ಸಂತೋಷಪಡಿಸಲು ಉತ್ಸುಕರಾಗಿದ್ದರು. ಪುಷ್ಪೋತ್ಕಟಾ, ರಾಕಾ ಮತ್ತು ಮಾಲಿನೀ ಎಂಬ ಆ ಮೂವರು ಸುಮಧ್ಯಮೆಯರು ಶ್ರೇಯಸ್ಸನ್ನು ಬಯಸಿ ಅನ್ಯೋನ್ಯರೊಡನೆ ಸ್ಪರ್ಧಿಸುತ್ತಿದ್ದರು. ಸಂತುಷ್ಟನಾದ ವಿಶ್ರವನು ಅವರಲ್ಲಿ ಪ್ರತಿಯೊಬ್ಬರಿಗೂ ಅವರು ಬಯಸಿದ ಲೋಕಪಾಲಸಮ ಪುತ್ರರನ್ನು ವರವಾಗಿ ನೀಡಿದನು. ಪುಷ್ಪೋತ್ಕಟೆಯಲ್ಲಿ ಬಲದಲ್ಲಿ ಅಪ್ರತಿಮರಾದ ಕುಂಭಕರ್ಣ-ದಶಗ್ರೀವರೆಂಬ ಇಬ್ಬರು ರಾಕ್ಷಸೇಶ್ವರರು ಹುಟ್ಟಿದರು. ಮಾಲಿನಿಯಲ್ಲಿ ವಿಭೀಷಣನೆಂಬ ಓರ್ವ ಪುತ್ರನು ಜನಿಸಿದನು. ರಾಕಾಳಲ್ಲಿ ಇಬ್ಬರು ಅವಳಿಗಳು – ಖರ ಮತ್ತು ಶೂರ್ಪಣಖಿ – ಹುಟ್ಟಿದರು. ವಿಭೀಷಣನಾದರೋ ರೂಪದಲ್ಲಿ ಅವರೆಲ್ಲರ ಅಧಿಕನಾಗಿದ್ದನು ಮತ್ತು ಆ ಮಹಾಭಾಗನು ಧರ್ಮಗೋಪ್ತನೂ ಕ್ರಿಯಾರತಿಯೂ ಆಗಿದ್ದನು. ಅವರೆಲ್ಲರ ಜ್ಯೇಷ್ಠ ರಾಕ್ಷಸಪುಂಗವ ದಶಗ್ರೀವನು ಮಹೋತ್ಸಾಹನೂ, ಮಹಾವೀರ್ಯವಂತನೂ, ಮಹಾ ಸತ್ತ್ವಪರಾಕ್ರಮಿಯೂ ಆಗಿದ್ದನು. ಕುಂಭಕರ್ಣನು ಬಲದಲ್ಲಿ ಎಲ್ಲರಿಗಿಂತಲೂ ಅಧಿಕನಾಗಿದ್ದನು. ಆ ರಜನೀಚರನು ಮಾಯಾವಿಯೂ ರಣಶೌಂಡನೂ ರೌದ್ರನೂ ಆಗಿದ್ದನು. ಖರನು ಧನುಸ್ಸಿನಲ್ಲಿ ವಿಕ್ರಾಂತನಾಗಿದ್ದನು ಮತ್ತು ಬ್ರಾಹ್ಮಣರ ಮಾಂಸವನ್ನು ಭಕ್ಷಿಸುತ್ತಿದ್ದನು. ಶೂರ್ಪಣಖಿಯು ರೌದ್ರಳಾಗಿದ್ದು ಸಿದ್ಧರಿಗೆ ವಿಘ್ನಗಳನ್ನುಂಟುಮಾಡುತ್ತಿದ್ದಳು. ಅವರೆಲ್ಲರೂ ವೇದವಿದರೂ ಶೂರರೂ ಸುಚರಿತವ್ರತರೂ ಆಗಿದ್ದು ತಂದೆಯೊಂದಿಗೆ ಗಂಧಮಾದನ ಪರ್ವತದಲ್ಲಿ ಸಂತೋಷದಿಂದಿದ್ದರು.ರಾವಣಾದಿಗಳಿಗೆ ವರದಾನ

ಒಮ್ಮೆ ಅಲ್ಲಿ ತಂದೆಯ ಬಳಿಗೆ ನರವಾಹನ ವೈಶ್ರವಣ ಕುಬೇರನು ಪರಮ ವೈಭವದಿಂದ ಕುಳಿತಿದುದನ್ನು ಅವರು ನೋಡಿದರು. ಆಗ ಅವರಲ್ಲಿ ಸ್ಪರ್ಧಾಭಾವನೆಯು ಹುಟ್ಟಲು ಆ ಧೃತನಿಶ್ಚಯಿಗಳು ಘೋರ ತಪಸ್ಸಿನಿಂದ ಬ್ರಹ್ಮನನ್ನು ತೃಪ್ತಿಪಡೆಸಿದರು. ದಶಗ್ರೀವನು ಸುಸಮಾಹಿತನಾಗಿ ಪಂಚಾಗ್ನಿಗಳ ಮಧ್ಯೆ ಒಂದೇ ಕಾಲಿನ ಮೇಲೆ ನಿಂತು ಸಹಸ್ರ ವರ್ಷಗಳ ಪರ್ಯಂತ ವಾಯುಭಕ್ಷಕನಾಗಿ ತಪಿಸಿದನು. ಕುಂಭಕರ್ಣನು ಯತಾಹಾರನೂ ಯತವ್ರತನೂ ಆಗಿ ನೆಲದ ಮೇಲೆ ಮಲಗಿಕೊಂಡನು ಮತ್ತು ಧೀಮಾನ್ ವಿಭೀಷಣನು ಒಂದೇ ಒಂದು ಒಣಗಿದ ಎಲೆಯನ್ನು ಆಹಾರವನ್ನಾಗಿಸಿಕೊಂಡು ಬಹುಕಾಲದವರೆಗೆ ಅತೀವ ತೀವ್ರ ತಪಸ್ಸನ್ನಾಚರಿಸಿದನು. ಖರ ಮತ್ತು ಶೂರ್ಪಣಖಿಯರು ಸಂತೋಷದಿಂದ ತಪಸ್ಸನ್ನು ತಪಿಸುತ್ತಿದ್ದವರ ಪರಿಚಾರಕರಾಗಿ ಅವರನ್ನು ರಕ್ಷಣೆಮಾಡುತ್ತಿದ್ದರು. ಸಹಸ್ರವರ್ಷಗಳು ಸಂಪೂರ್ಣವಾದ ನಂತರ ದಶಾನನನು ಶಿರವನ್ನು ಕತ್ತರಿಸಿ ಅಗ್ನಿಯಲ್ಲಿ ಆಹುತಿಯನ್ನಾಗಿತ್ತನು. ಅವನ ಈ ದುರಾಧರ್ಷಕೃತ್ಯದಿಂದ ಜಗತ್ಪ್ರಭುವು ಸಂತುಷ್ಟನಾದನು. ಆಗ ಸ್ವಯಂ ಬ್ರಹ್ಮನು ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ವರದಾನದ ಲೋಭವನ್ನಿತ್ತು ಅವರ ತಪಸ್ಸನ್ನು ತಡೆದನು.

ಬ್ರಹ್ಮನು ಹೇಳಿದನು: “ಮಕ್ಕಳೇ! ಪ್ರೀತನಾಗಿದ್ದೇನೆ. ನಿಮ್ಮ ಈ ತಪಸ್ಸನ್ನು ನಿಲ್ಲಿಸಿ ವರವನ್ನು ಕೇಳಿ. ಅಮರತ್ವವನ್ನು ಬಿಟ್ಟು ಬಯಸಿದುದು ಬೇರೆ ಏನೇ ಇರಲಿ, ಹಾಗೆಯೇ ಆಗುತ್ತದೆ. ಮಹಾ ಆಸೆಗಳನ್ನಿಟ್ಟುಕೊಂಡು ಅಗ್ನಿಯಲ್ಲಿ ಆಹುತಿಯನ್ನಾಗಿತ್ತ ನಿನ್ನ ಶಿರಗಳೆಲ್ಲವೂ ಮೊದಲಿನ ಹಾಗೆಯೇ ನಿನ್ನ ದೇಹವನ್ನು ಸೇರುತ್ತವೆ. ನಿನ್ನ ದೇಹಕ್ಕೆ ವೈರೂಪವೆನ್ನುವುದೇ ಇಲ್ಲದಿರಲಿ ಮತ್ತು ನೀನು ಬೇಕಾದ ರೂಪವನ್ನು ಧರಿಸಬಲ್ಲವನಾಗುವೆ. ರಣದಲ್ಲಿ ಅರಿಗಳಿಂದ ವಿಜಯಿಯಾಗುವೆ ಎನ್ನುವುದರಲ್ಲಿ ಸಂಶಯವೇ ಇಲ್ಲ.”

ರಾವಣನು ಹೇಳಿದನು: “ಗಂಧರ್ವ, ದೇವತೆ, ಅಸುರ, ಯಕ್ಷ, ರಾಕ್ಷಸ, ಸರ್ಪ, ಕಿನ್ನರ ಭೂತಗಳಿಂದ ನನಗೆ ಪರಾಭವವಾಗದಿರಲಿ.”

ಬ್ರಹ್ಮನು ಹೇಳಿದನು: “ಮನುಷ್ಯನನ್ನು ಬಿಟ್ಟು ನೀನು ಕೇಳಿಕೊಂಡ ಈ ಎಲ್ಲರಿಂದ ನಿನಗೆ ಭಯವಿರುವುದಿಲ್ಲ. ಇದು ನನ್ನ ಆದೇಶ. ನಿನಗೆ ಮಂಗಳವಾಗಲಿ.”

ಈ ಮಾತುಗಳಿಂದ ದಶಗ್ರೀವನು ಸಂತುಷ್ಟನಾದನು. ಏಕೆಂದರೆ ಆ ಪುರುಷಾದಕ ದುರ್ಬುದ್ಧಿಯು ಮನುಷ್ಯರನ್ನು ಕೀಳುಭಾವದಿಂದ ನೋಡುತ್ತಿದ್ದನು. ಹಾಗೆಯೇ ಪಿತಾಮಹನು ಕುಂಭಕರ್ಣನನ್ನು ಕೇಳಲು ಅವನ ಚೇತನವು ತಾಮಸದ ಹಿಡಿತದಲ್ಲಿದ್ದು, ಅವನು ಮಹತ್ತರ ನಿದ್ದೆಯನ್ನು ವರವನ್ನಾಗಿ ಕೇಳಿದನು. ಹಾಗೆಯೇ ಆಗುತ್ತದೆಯೆಂದು ಹೇಳಿ ಅವನು ವಿಭೀಷಣನಿಗೆ “ಪುತ್ರ! ಪ್ರೀತನಾಗಿದ್ದೇನೆ. ವರವನ್ನು ಕೇಳಿಕೋ!” ಎಂದು ಪುನಃ ಪುನಃ ಹೇಳಿದನು.

ವಿಭೀಷಣನು ಹೇಳಿದನು: “ಪರಮ ಆಪತ್ತನ್ನು ಪಡೆದರೂ ನನ್ನ ಬುದ್ಧಿಯು ಅಧರ್ಮದಲ್ಲಿ ನಿಲ್ಲದಿರಲಿ. ಕಲಿಯದೇ ಇದ್ದರೂ ನನಗೆ ಬ್ರಹ್ಮಾಸ್ತ್ರವು ಹೊಳೆಯಲಿ.”

ಬ್ರಹ್ಮನು ಹೇಳಿದನು: “ರಾಕ್ಷಸ ಯೋನಿಯಲ್ಲಿ ಜನಿಸಿದ್ದರೂ ಕೂಡ ಎಲ್ಲಿಯವರೆಗೆ ನಿನ್ನ ಬುದ್ಧಿಯು ಅಧರ್ಮದಲ್ಲಿ ಆನಂದಿಸುವುದಿಲ್ಲವೋ ಅಲ್ಲಿಯವರೆಗೆ ನಿನಗೆ ಅಮರತ್ವವನ್ನು ನೀಡುತ್ತೇನೆ.”

ವರವನ್ನು ಪಡೆದು ರಾಕ್ಷಸ ದಶಗ್ರೀವನಾದರೋ ಯುದ್ಧದಲ್ಲಿ ಧನೇಶ್ವರ ಕುಬೇರನನ್ನು ಜಯಿಸಿ ಅವನನ್ನು ಲಂಕೆಯಿಂದ ಹೊರಗೋಡಿಸಿದನು. ಆ ಭಗವಾನನು ಲಂಕೆಯನ್ನು ತೊರೆದು ಹಿಂಬಾಲಿಸಿದ ಗಂಧರ್ವ, ಯಕ್ಷ, ರಾಕ್ಷಸ ಕಿಂಕರರೊಡನೆ ಗಂಧಮಾದನವನ್ನು ಪ್ರವೇಶಿಸಿದನು. ಅಕ್ರಮವಾಗಿ ರಾವಣನು ಅವನ ಪುಷ್ಪಕ ವಿಮಾನವನ್ನು ಅಪಹರಿಸಿದನು ಮತ್ತು ಅದಕ್ಕೆ ವೈಶ್ರವಣ ಕುಬೇರನು ಅವನಿಗೆ ಶಪಿಸಿದನು: “ಇದನ್ನು ನೀನು ಏರಲಾರೆ! ಸಮರದಲ್ಲಿ ಯಾರು ನಿನ್ನನ್ನು ಕೊಲ್ಲುತ್ತಾನೋ ಅವನು ಮಾತ್ರ ಇದನ್ನು ಏರಬಲ್ಲನು. ಹಿರಿಯವನಾಗಿದ್ದ ನನ್ನನ್ನು ಅಪಮಾನಿಸಿದಂತೆ ಕ್ಷಿಪ್ರವಾಗಿ ನಿನಗೂ ಹಾಗೆಯೇ ಆಗುತ್ತದೆ.”

ಧರ್ಮಾತ್ಮ ವಿಭೀಷಣನಾದರೋ ಪರಮ ತೇಜಸ್ಸಿನಿಂದೊಡಗೂಡಿ ಸತ್ಯವಂತರ ಧರ್ಮವನ್ನು ಮನಸ್ಸಿನಲ್ಲಿಟ್ಟುಕೊಂಡು ಅನುಸರಿಸಿದನು. ಅಣ್ಣ ಭಗವಾನ್ ಧನೇಶ್ವರನು ಆ ಧೀಮಂತ ತಮ್ಮನಿಂದ ತುಷ್ಟನಾಗಿ ಅವನಿಗೆ ಯಕ್ಷ-ರಾಕ್ಷಸ ಸೇನೆಗಳ ಸೇನಾಪತ್ಯವನ್ನು ಕೊಟ್ಟನು. ನರಭಕ್ಷಕ ರಾಕ್ಷಸರು ಮತ್ತು ಮಹಾಬಲಶಾಲಿ ಪಿಶಾಚಿಗಳು ಎಲ್ಲರೂ ಸೇರಿ ದಶಾನನನನ್ನು ರಾಜನನ್ನಾಗಿ ಅಭಿಷೇಕಿಸಿದರು. ಬಲೋತ್ಕಟನದ ಆ ಕಾಮರೂಪೀ ವಿಹಂಗಮ ದಶಗ್ರೀವನು ದೈತ್ಯ ಮತ್ತು ದೇವರಿಂದ ಅಕ್ರಮವಾಗಿ ರತ್ನಗಳನ್ನು ಅಪಹರಿಸಿದನು. ಲೋಕಗಳನ್ನು ರೋದಿಸುವಂತೆ ಮಾಡಿದುದರಿಂದ ಅವನನ್ನು ರಾವಣನೆಂದು ಕರೆಯುತ್ತಾರೆ. ಕಾಮಬಲ ದಶಗ್ರೀವನು ದೇವತೆಗಳಿಗೆ ಭಯವನ್ನುಂಟುಮಾಡಿದನು.

ರಾವಣನ ಸಂಹಾರಕ್ಕೆ ವಿಷ್ಣು ಮತ್ತು ಅನ್ಯ ದೇವತೆಗಳ ಅವತಾರ

ಆಗ ಬ್ರಹ್ಮರ್ಷಿಗಳು, ಸಿದ್ಧರು, ಮತ್ತು ದೇವ-ರಾಜರ್ಷಿಗಳು ಹವ್ಯವಾಹನನ್ನು ಮುಂದಿಟ್ಟುಕೊಂಡು ಬ್ರಹ್ಮನ ಶರಣು ಹೋದರು. ಅಗ್ನಿಯು ಹೇಳಿದನು: “ವಿಶ್ರವಸನ ಮಗ ಮಹಾಬಲಶಾಲೀ ದಶಗ್ರೀವನನ್ನು ನೀನು ಹಿಂದೆ ವರದಾನದಿಂದ ಅವಧ್ಯನನ್ನಾಗಿ ಮಾಡಿದ್ದೀಯೆ. ಈಗ ಆ ಮಹಾಬಲನು ಸರ್ವ ಪ್ರಜೆಗಳನ್ನೂ ದ್ವೇಷಕಾರ್ಯಗಳಿಂದ ಬಾಧಿಸುತ್ತಿದ್ದಾನೆ. ಭಗವನ್! ಅವನಿಂದ ನಮ್ಮನ್ನು ರಕ್ಷಿಸು! ಬೇರೆ ಯಾವ ರಕ್ಷಕನನ್ನೂ ನಾವು ತಿಳಿಯೆವು!”

ಬ್ರಹ್ಮನು ಹೇಳಿದನು: “ವಿಭಾವಸೋ! ಯುದ್ಧದಲ್ಲಿ ಅವನನ್ನು ಗೆಲ್ಲಲು ದೇವಾಸುರರಿಗೂ ಸಾಧ್ಯವಿಲ್ಲ. ಆದರೂ ಇವನ ನಿಗ್ರಹಕ್ಕೆಂದು ಕಾರ್ಯವು ವಿಹಿತವಾಗಿದೆ. ಅದಕ್ಕಾಗಿಯೇ ನನ್ನ ನಿಯೋಗದಂತೆ ಅವತರಿಸಿರುವ ಪ್ರಹರಿಗಳಲ್ಲಿ ಶ್ರೇಷ್ಠ ಚತುರ್ಭುಜ ವಿಷ್ಣುವು ಇದೇ ಕಾರ್ಯವನ್ನು ಮಾಡುತ್ತಾನೆ. ಸರ್ವ ದೇವಗಣಗಳೊಂದಿಗೆ ಮಹೀತಲದಲ್ಲಿ ಅವತರಿಸಿ. ವಿಷ್ಣುವಿನ ಸಹಾಯಕ್ಕಾಗಿ ಕರಡಿಗಳಲ್ಲಿ ಮತ್ತು ವಾನರರಲ್ಲಿ ಎಲ್ಲರೂ ವೀರರೂ ಕಾಮರೂಪಿಗಳೂ ಮತ್ತು ಬಲಾನ್ವಿತರೂ ಆದ ಮಕ್ಕಳನ್ನು ಹುಟ್ಟಿಸಿರಿ!”

ಆಗ ದೇವ-ಗಂಧರ್ವ-ದಾನವರು ಎಲ್ಲರೂ ಸಂತೋಷದಿಂದ ಅಂಶಗಳಿಂದ ಭೂಮಿಯಲ್ಲಿ ಅವತರಿಸಿದರು. ಅವರ ಸಮಕ್ಷಮದಲ್ಲಿಯೇ ಬ್ರಹ್ಮನು ದೇವಕಾರ್ಯಸಿದ್ಧಿಗಾಗಿ ದುಂದುಭೀ ಎಂಬ ಹೆಸರಿನ ಗಂಧರ್ವಿಗೆ ಆದೇಶವನ್ನಿತ್ತನು. ಪಿತಾಮಹನ ವಚನವನ್ನು ಕೇಳಿ ಆ ಗಂಧರ್ವಿಯು ಮನುಷ್ಯಲೋಕದಲ್ಲಿ ಮಂಥರಾ ಎಂಬ ಹೆಸರಿನ ಕುಬ್ಜೆಯಾಗಿ ಜನಿಸಿದಳು. ಶಕ್ರನೇ ಮೊದಲಾದ ಎಲ್ಲ ಸುರಸತ್ತಮರೂ ವಾನರ ಮತ್ತು ಕರಡಿಗಳ ಶ್ರೇಷ್ಠ ಸ್ತ್ರೀಯರಲ್ಲಿ ತಮ್ಮಿಂದಲೇ ಮಕ್ಕಳನ್ನು ಹುಟ್ಟಿಸಿದರು. ಅವರೆಲ್ಲರೂ ಯಶಸ್ಸು ಮತ್ತು ಬಲದಲ್ಲಿ ತಮ್ಮ ತಂದೆಯರನ್ನು ಅನುಸರಿಸಿದರು ಮತ್ತು ಗಿರಿಶೃಂಗಗಳಲ್ಲಿ ಶಾಲ, ತಾಲ ಮತ್ತು ಶಿಲಾಯುಧಗಳನ್ನು ಹಿಡಿದು ವಾಸಿಸಿದರು. ವಜ್ರದಂತೆ ಕಠಿಣರಾಗಿದ್ದ ಅವರೆಲ್ಲರೂ ಪ್ರವಾಹದಲ್ಲಿದ್ದ ನದಿಯಂತೆ ಬಲಶಾಲಿಗಳಾಗಿದ್ದರು. ಎಲ್ಲರೂ ಬಯಸಿದಷ್ಟು ವೀರ್ಯವಂತರಾಗಿದ್ದರು ಮತ್ತು ಎಲ್ಲರೂ ಯುದ್ಧ ವಿಶಾರದರಾಗಿದ್ದರು. ಶಕ್ತಿಯಲ್ಲಿ ಆನೆಗಳ ಹಿಂಡಿಗೆ ಸಮನಾಗಿದ್ದರು ಮತ್ತು ವೇಗದಲ್ಲಿ ವಾಯುವಿಗೆ ಸಮನಾಗಿದ್ದರು. ಕೆಲವರು ತಮಗೆ ಇಷ್ಟವಾದಲ್ಲಿ ವಾಸಿಸಿದರು ಮತ್ತು ಕೆಲವರು ವನಗಳಲ್ಲಿ ವಾಸಿಸಿದರು. ಈ ರೀತಿ ಎಲ್ಲವೂ ನಡೆಯುವಂತೆ ಮಾಡಿ ಭಗವಾನ್ ಬ್ರಹ್ಮನು ಯಾವ ಕಾರ್ಯವನ್ನು ಹೇಗೆ ಮಾಡಬೇಕೆಂದು ಮಂಥರೆಗೆ ಬೋಧಿಸಿದನು. ಅವಳು ಆ ಮಾತನ್ನು ಅರ್ಥಮಾಡಿಕೊಂಡು ಮನೋವೇಗದಲ್ಲಿ ವೈರತ್ವವನ್ನು ಹುಟ್ಟಿಸಲು ತೊಡಗಿದಳು.

ರಾಮ-ಸೀತಾ-ಲಕ್ಷ್ಮಣರ ವನವಾಸ

ಕ್ರಿಯಾರತಿ, ಧರ್ಮಪರ ಮತ್ತು ಸತತವೂ ವೃದ್ಧರ ಸೇವೆಯಲ್ಲಿ ನಿರತನಾಗಿದ್ದ ನೃಪ ದಶರಥನು ಪುತ್ರರು ಹುಟ್ಟಿದರೆಂದು ಸಂತೋಷಗೊಂಡನು. ಆ ಮಹೌಜಸ ಪುತ್ರರು ಕ್ರಮೇಣವಾಗಿ ಬೆಳೆದರು ಮತ್ತು ರಹಸ್ಯಗಳೊಂದಿಗೆ ವೇದ-ಧನುರ್ವೇದಗಳಲ್ಲಿ ಅವರು ಪಾರಂಗತರಾದರು. ಬ್ರಹ್ಮಚರ್ಯೆಯನ್ನು ಆಚರಿಸಿದ ಅವರು ವಿವಾಹಿತರಾದರು. ಇದರಿಂದ ದಶರಥನು ಪ್ರೀತಿವಂತನೂ ಸುಖಿಯೂ ಆದನು.

ಹಿರಿಯವನು ರಾಮ; ಪ್ರಜೆಗಳನ್ನು ರಂಜಿಸುವವನಾದುದರಿಂದ ರಾಮನೆಂದಾದನು. ಆ ಧೀಮಂತನು ತನ್ನ ಮನೋಹರತ್ವದಿಂದ ತಂದೆಯ ಹೃದಯವನ್ನು ತೃಪ್ತಿಪಡಿಸಿದನು. ಆ ಲೋಹಿತಾಕ್ಷ, ಮಹಾಬಾಹು ರಾಮನಾದರೋ ಮತ್ತಿನಲ್ಲಿದ್ದ ಆನೆಯ ನಡುಗೆಯನ್ನು ನಡೆಯುತ್ತಿದ್ದನು. ಆ ವಿಶಾಲ ಎದೆಯ ದೀರ್ಘಬಾಹುವು ಕಪ್ಪು ಗುಂಗುರುಕೂದಲಿನಲ್ಲಿ ಶ್ರೀಯಿಂದ ಬೆಳಗುತ್ತಿದ್ದನು. ಆ ವೀರನು ಬಲದಲ್ಲಿ ಶಕ್ರನ ಸಮನಾಗಿದ್ದನು, ಮತಿಯಲ್ಲಿ ಬೃಹಸ್ಪತಿಯ ಸಮನಾಗಿದ್ದನು ಮತ್ತು ಸರ್ವಧರ್ಮಗಳ ಪಾರಂಗತನಾಗಿದ್ದನು. ಎಲ್ಲ ಪ್ರಜೆಗಳೂ ಸರ್ವ ವಿದ್ಯಾವಿಶಾರದ ರಾಮನಲ್ಲಿ ಅನುರಕ್ತರಾಗಿದ್ದರು. ಜಿತೇಂದ್ರಿಯನಾದ ಅವನು ಶತ್ರುಗಳಿಗೂ ನೋಡಲು ಮನೋಹರನಾಗಿದ್ದನು. ಕೆಟ್ಟವರನ್ನು ನಿಯಂತ್ರಿಸುತ್ತಿದ್ದನು ಮತ್ತು ಧರ್ಮಚಾರಿಗಳನ್ನು ರಕ್ಷಿಸುತ್ತಿದ್ದನು. ಧೃತಿವಂತನೂ ಅನಾದೃಷನೂ ಆಗಿದ್ದನು. ಎಂದೂ ಸೋಲಿಲ್ಲದ ವಿಜಯಿಯಾಗಿದ್ದನು. ಕೌಸಲ್ಯೆಯ ಆನಂದವನ್ನು ಹೆಚ್ಚಿಸುತ್ತಿದ್ದ ಅಂಥಹ ಆ ಪುತ್ರನನ್ನು ನೋಡಿ ರಾಜಾ ದಶರಥನು ಅತ್ಯಂತ ಸಂತೋಷಪಡುತ್ತಿದ್ದನು. ತನಗೆ ವಯಸ್ಸಾಗಿದೆಯೆಂದು ತಿಳಿದ ಮತಿವಂತ ದಶರಥನು ಸಚಿವರು, ಧರ್ಮಜ್ಞರು ಮತ್ತು ಪುರೋಹಿತರೊಡನೆ ಮಂತ್ರಾಲೋಚನೆ ಮಾಡಿದನು. ಆ ಎಲ್ಲ ಮಂತ್ರಿಸತ್ತಮರೂ ರಾಮನ ಅಭಿಷೇಕದ ಕಾಲವು ಪ್ರಾಪ್ತವಾಗಿದೆಯೆಂದು ಅಭಿಪ್ರಾಯಪಟ್ಟರು. ರಾಮನ ಗುಣಗಳ ಕುರಿತು ಯೋಚಿಸಿ ಆನಂದಿಸುತ್ತಾ ಅವನು ಪುರೋಹಿತರಿಗೆ ಹೇಳಿದನು: “ನಿಮಗೆ ಮಂಗಳವಾಗಲಿ! ಈ ರಾತ್ರಿ ಪುಷ್ಯವು ಪುಣ್ಯಯೋಗದಲ್ಲಿದೆ. ಸಂಗ್ರಹಗಳನ್ನು ಒಂದುಗೂಡಿಸಿ ಮತ್ತು ರಾಮನನ್ನು ಆಮಂತ್ರಿಸಿ!”

ರಾಜನ ಈ ಮಾತನ್ನು ಕೇಳಿದ ಮಂಥರೆಯು ಅದೇ ಸಮಯದಲ್ಲಿ ಕೈಕೇಯಿಯ ಬಳಿಸಾರಿ ಹೀಗೆಂದಳು: “ಕೈಕೇಯೀ! ಇಂದು ರಾಜನು ನಿನಗೊಂದು ಮಹಾ ದೌರ್ಭಾಗ್ಯವನ್ನು ಘೋಷಿಸಿದ್ದಾನೆ. ದುರ್ಭಗೇ! ಅತೀ ಘೋರ ವಿಷಸರ್ಪವೊಂದು ಸಿಟ್ಟಿನಿಂದ ನಿನ್ನನ್ನು ಕಚ್ಚುತ್ತಿದೆ. ಯಾರ ಮಗನ ಪಟ್ಟಾಭಿಷೇಕವಾಗಲಿದೆಯೋ ಆ ಕೌಸಲ್ಯೆಯೇ ಸುಭಗೆ! ಯಾರ ಮಗನಿಗೆ ರಾಜ್ಯದಲ್ಲಿ ಯಾವ ಭಾಗವೂ ಇಲ್ಲವೋ ಅಂತಹ ನೀನು ಹೇಗೆ ತಾನೆ ಸೌಭಾಗ್ಯೆಯಾಗಿರುವೆ?”

ಆ ಮಾತುಗಳನ್ನು ಅರ್ಥಮಾಡಿಕೊಂಡ ಕೈಕೇಯಿಯು ಸರ್ವಾಭರಣಭೂಷಿತೆಯಾಗಿ ಉತ್ತಮ ರೂಪದಿಂದ ಬೆಳಗುತ್ತಾ ಏಕಾಂತದಲ್ಲಿ ಪತಿಯ ಬಳಿಸಾರಿ ನಗೆಯಿಂದ ಪ್ರಣಯವನ್ನು ನಟಿಸುತ್ತಾ ಈ ಮಧುರವಾಕ್ಯಗಳನ್ನಾಡಿದಳು: “ಸತ್ಯಪ್ರತಿಜ್ಞನಾದ ನೀನು ಒಮ್ಮೆ ನಾನು ಬಯಸಿದುದನ್ನು ಕೊಡುತ್ತೇನೆಂದು ಮಾತುಕೊಟ್ಟಿದ್ದೆ. ರಾಜನ್! ಈಗ ಅದನ್ನು ಮಾಡಿಕೊಟ್ಟು ಆ ಸಂಕಟದಿಂದ ಮುಕ್ತನಾಗು!”

ದಶರಥನು ಹೇಳಿದನು: “ಹೇಳು! ನಿನಗೆ ವರವನ್ನು ನೀಡುತ್ತೇನೆ. ನೀನು ಬಯಸಿದುದನ್ನು ಪಡೆಯುತ್ತೀಯೆ. ಯಾವ ಅವಧ್ಯನನ್ನು ವಧಿಸಬೇಕು? ಇಂದು ಯಾವ ವಧಿಸಲರ್ಹನಾದವನನ್ನು ಬಿಡುಗಡೆ ಮಾಡಬೇಕು? ಇಂದು ಯಾರಿಗೆ ಧನವನ್ನು ಕೊಡಬೇಕು? ಅಥವಾ ಯಾರಿಂದ ಧನವನ್ನು ಕಸಿದುಕೊಳ್ಳಬೇಕು? ಬ್ರಾಹ್ಮಣರದ್ದನ್ನು ಬಿಟ್ಟು ಭೂಮಿಯಲ್ಲಿರುವ ಎಲ್ಲವೂ ನನ್ನದೇ ಸಂಪತ್ತು!”

ಅವನ ಮಾತುಗಳನ್ನು ಕೇಳಿ ಕೈಕೇಯಿಯು ನರಾಧಿಪನನ್ನು ಅಪ್ಪಿಕೊಂಡು ತನ್ನ ಬಲವನ್ನು ಅರ್ಥಮಾಡಿಕೊಂಡು ಅವನಿಗೆ ಹೇಳಿದಳು: “ರಾಮನಿಗೆಂದು ಕಲ್ಪಿಸಿರುವ ಪಟ್ಟಾಭಿಷೇಕವು ಭರತನಿಗೆ ದೊರೆಯುವಂತಾಗಲಿ. ರಾಘವನು ವನಕ್ಕೆ ಹೋಗಲಿ!”

ಆ ವಿಪ್ರಿಯ ದಾರುಣ ಮಾತನ್ನು ಕೇಳಿ ರಾಜನು ದುಃಖಾರ್ತನಾಗಿ ಏನನ್ನೂ ಉತ್ತರಿಸಲಿಲ್ಲ. ತನ್ನ ತಂದೆಯು ಮಾತುಕೊಟ್ಟಿದುದನ್ನು ತಿಳಿದ ವೀರ್ಯವಾನ್ ರಾಮನು ರಾಜನು ಸತ್ಯವಂತನಾಗಿರಬೇಕೆಂದು ವನಕ್ಕೆ ತೆರಳಿದನು. ಧನುಷ್ಮಾನ್ ಲಕ್ಷ್ಮಣ ಮತ್ತು ಹಾಗೆಯೇ ಪತ್ನಿ ವೈದೇಹಿ ಸೀತೆಯೂ ಕೂಡ ಅವನನ್ನು ಅನುಸರಿಸಿದರು.

ರಾಮನು ವನಕ್ಕೆ ಹೋದನಂತರ ರಾಜಾ ದಶರಥನು ದೇಹದ ಕಾಲಪರ್ಯಾಯ ಧರ್ಮವನ್ನು ಅನುಸರಿಸಿದನು. ರಾಮನು ಹೋದುದನ್ನು ಮತ್ತು ರಾಜನೂ ಕೂಡ ತೀರಿಕೊಂಡಿದುದನ್ನು ತಿಳಿಸಿ ಭರತನನ್ನು ಕರೆಯಿಸಿ ಕೈಕೇಯಿಯು: “ದಶರಥನು ಸ್ವರ್ಗಸ್ಥನಾಗಿದ್ದಾನೆ ಮತ್ತು ರಾಮ-ಲಕ್ಷ್ಮಣರು ವನದಲ್ಲಿದ್ದಾರೆ. ಸ್ಪರ್ಧಿಗಳಿಲ್ಲದೇ ಕ್ಷೇಮವಾಗಿರುವ ಈ ವಿಪುಲ ರಾಜ್ಯವನ್ನು ಸ್ವೀಕರಿಸು!” ಎಂದು ಹೇಳಿದಳು. ಆ ಧರ್ಮಾತ್ಮ ಭರತನು ಅವಳಿಗೆ “ನಿನಗೆ ಧಿಕ್ಕಾರ! ಧನದ ಆಸೆಯಿಂದ ನೀನು ಪತಿಯನ್ನು ಕೊಂದು ಕುಲವನ್ನೇ ಕಿತ್ತೊಗೆದು ಕ್ರೂರ ಕಾರ್ಯವನ್ನು ಮಾಡಿದ್ದೀಯೆ. ಕುಲಪಾಂಸನೀ! ನನ್ನ ತಲೆಯಮೇಲೆ ಅಪಕೀರ್ತಿಯನ್ನು ತಂದು ನಿನ್ನ ಆಸೆಯನ್ನು ತೀರಿಸಿಕೊಂಡೆ!” ಎಂದು ಹೇಳಿ ಬಹಳವಾಗಿ ರೋದಿಸಿದನು. ಎಲ್ಲ ಪುರಜನರ ಸಾನ್ನಿಧ್ಯದಲ್ಲಿ ತನ್ನ ಚಾರಿತ್ರ್ಯವು ಶುದ್ಧವಾದುದೆಂದು ಪ್ರಕಟಿಸಿ ರಾಮನನ್ನು ಹಿಂದೆ ತರುವ ಆಸೆಯಿಂದ ಅಣ್ಣನಿದ್ದಲ್ಲಿಗೆ ಹೊರಟನು. ಕೌಸಲ್ಯೆ, ಸುಮಿತ್ರಾ ಮತ್ತು ಕೈಕೇಯಿಯರನ್ನು ಯಾನಗಳಲ್ಲಿರಿಸಿಕೊಂಡು ಶತ್ರುಘ್ನನ ಸಹಿತ ವಸಿಷ್ಠ-ವಾಮದೇವರು ಮತ್ತು ಸಹಸ್ರಾರು ವಿಪ್ರ-ಪೌರಜನರೊಂದಿಗೆ ಭರತನು ಸುದುಃಖಿತನಾಗಿ ಹೊರಟನು. ಚಿತ್ರಕೂಟದಲ್ಲಿ ಲಕ್ಷ್ಮಣನೊಡನೆ ತಾಪಸರ ಅಲಂಕಾರವನ್ನು ಧರಿಸಿದ್ದ ಧನುರ್ಧರ ರಾಮನನ್ನು ಭರತನು ಕಂಡನು. ತಂದೆಯ ಮಾತನ್ನು ಕಾರಣವಾಗಿಟ್ಟುಕೊಂಡ ರಾಮನಿಂದ ವಿಸರ್ಜಿಸಲ್ಪಟ್ಟ ಭರತನು ರಾಮನ ಪಾದುಕೆಗಳನ್ನು ಮುಂದಿಟ್ಟುಕೊಂಡು ನಂದಿಗ್ರಾಮದಲ್ಲಿ ರಾಜ್ಯಭಾರವನ್ನು ಮಾಡಿದನು.

ಪೌರ-ಜಾನಪದರು ಪುನಃ ಬರಬಹುದೆಂದು ಶಂಕಿಸಿ ರಾಮನು ಶರಭಂಗಾಶ್ರಮದ ಬಳಿಯಿರುವ ಮಹಾರಣ್ಯವನ್ನು ಪ್ರವೇಶಿಸಿದನು. ಶರಭಂಗನನ್ನು ಸತ್ಕರಿಸಿ ಅವನು ದಂಡಕಾರಣ್ಯವನ್ನು ಸೇರಿ ಅಲ್ಲಿ ರಮ್ಯ ಗೋದಾವರೀ ತೀರದಲ್ಲಿ ನೆಲೆಮಾಡಿದನು. ರಾಮನು ಅಲ್ಲಿ ವಾಸಿಸುತ್ತಿರುವಾಗ ಶೂರ್ಪಣಖಿಯ ಮೂಲಕ ಜನಸ್ಥಾನದಲ್ಲಿ ವಾಸಿಸುತ್ತಿದ್ದ ಖರನೊಂದಿಗೆ ಮಹಾ ವೈರವುಂಟಾಯಿತು. ತಾಪಸರನ್ನು ರಕ್ಷಿಸಲು ಧರ್ಮವತ್ಸರ ರಾಘವನು ದಂಡಕಾರಣ್ಯದಲ್ಲಿದ್ದ ಹದಿನಾಲ್ಕು ಸಾವಿರ ರಾಕ್ಷಸರನ್ನು ಸಂಹರಿಸಿದನು. ಮಹಾಬಲಶಾಲಿಗಳಾಗಿದ್ದ ದೂಷಣ ಮತ್ತು ಖರರನ್ನು ಸಂಹರಿಸಿ ಅವನು ಆ ಧರ್ಮಾರಣ್ಯಕ್ಕೆ ಕ್ಷೇಮವನ್ನು ಮರಳಿ ತಂದಿತ್ತನು.

ಆ ರಾಕ್ಷಸರು ಹತರಾಗಲು, ತುಂಡರಿಸಿದ ಮೂಗು-ತುಟಿಗಳ ಶೂರ್ಪಣಖಿಯು ತನ್ನ ಅಣ್ಣ ರಾವಣನ ನಿವಾಸಸ್ಥಾನ ಲಂಕೆಗೆ ಹೋದಳು. ಮುಖದ ಮೇಲೆಲ್ಲಾ ಒಣಗಿದ ರಕ್ತವಿದ್ದ ಆ ರಾಕ್ಷಸಿಯು ದುಃಖಮೂರ್ಛಿತಳಾಗಿ ರಾವಣನ ಬಳಿಸಾರಿ ಅಣ್ಣನ ಪಾದಗಳ ಮೇಲೆ ಬಿದ್ದಳು. ಅವಳು ಹಾಗೆ ವಿಕೃತಳಾಗಿದ್ದುದನ್ನು ನೋಡಿದ ರಾವಣನು ಕ್ರೋಧಮೂರ್ಛಿತನಾಗಿ ಹಲ್ಲುಗಳನ್ನು ಕಡೆಯುತ್ತಾ ಆಸನದಿಂದ ಮೇಲೆ ಹಾರಿ ಎದ್ದನು. ಆಸ್ಥಾನದಿಂದ ಅಮಾತ್ಯರನ್ನು ವಿಸರ್ಜಿಸಿ ಏಕಾಂತದಲ್ಲಿ ಅವಳಿಗೆ ಹೇಳಿದನು: “ಭದ್ರೇ! ನನ್ನ ಕುರಿತು ಯೋಚಿಸದೇ ಇದ್ದ ನನ್ನನ್ನು ಅವಮಾನಿಸುವ ಯಾರಿಂದ ನಿನಗೆ ಹೀಗಾಯಿತು? ಯಾರು ತಾನೇ ತೀಕ್ಷ್ಣ ಶೂಲವನ್ನು ಹಿಡಿದು ದೇಹದ ಎಲ್ಲ ಭಾಗಗಳಲ್ಲಿ ಚುಚ್ಚಿಕೊಂಡಿದ್ದಾನೆ? ಯಾರು ತಾನೇ ತನ್ನ ತಲೆಯ ಹತ್ತಿರ ಬೆಂಕಿಯನ್ನು ಹೊತ್ತಿಸಿ ವಿಶ್ವಾಸದಿಂದ ಸುಖನಿದ್ರೆಯನ್ನು ಮಾಡುತ್ತಿದ್ದಾನೆ? ಯಾರುತಾನೇ ಅತೀವ ಘೋರ ವಿಷದ ಹಾವನ್ನು ಕಾಲಿನಿಂದ ಮುಟ್ಟಿದ್ದಾನೆ? ಯಾರುತಾನೇ ಕೇಸರಿ ಸಿಂಹದ ಕೋರೆದಾಡೆಗಳನ್ನು ಹಿಡಿದು ನಿಂತಿದ್ದಾನೆ?”ಅವನು ಹೀಗೆ ಹೇಳುತ್ತಿರುವಾಗ ರಾತ್ರಿಯಲ್ಲಿ ಸುಡುತ್ತಿರುವ ಪೊಳ್ಳುಮರದ ಒಳಗಿನಿಂದ ಬರುವಂತೆ ಅವನ ದೇಹದ ಎಲ್ಲ ರಂಧ್ರಗಳಿಂದ ಬೆಂಕಿಯ ಜ್ವಾಲೆಗಳು ಹೊರಹೊಮ್ಮಿದವು. ಆಗ ಶೂರ್ಪಣಖಿಯು ಅವನಿಗೆ – ರಾಮನ ಪರಾಕ್ರಮ, ಖರ-ದೂಷಣರ ಪರಾಭವ – ಎಲ್ಲವನ್ನೂ ಹೇಳಿದಳು. ಏನು ಮಾಡಬೇಕೆಂದು ನಿರ್ಧರಿಸಿ ರಾವಣನು ತಂಗಿಯನ್ನು ಸಮಾಧಾನಪಡಿಸಿದನು. ನಗರದಲ್ಲಿ ವ್ಯವಸ್ಥೆಯನ್ನು ಮಾಡಿ ರಾಜನು ಆಕಾಶದಲ್ಲಿ ನಡೆದನು. ತ್ರಿಕೂಟವನ್ನೂ ಕಾಲಪರ್ವತವನ್ನೂ ದಾಟಿ ಅವನು ಮಕರಗಳು ವಾಸಿಸುತ್ತಿದ್ದ ಗಂಭೀರ ಮಹಾಸಾಗರವನ್ನು ನೋಡಿದನು. ದಶಾನನನು ಅದನ್ನು ದಾಟಿ ಮಹಾತ್ಮ ಶೂಲಪಾಣಿಗೆ ಪ್ರಿಯವಾದ ಗೋಕರ್ಣಸ್ಥಾನಕ್ಕೆ ಬಂದನು. ಹಿಂದೆ ತನ್ನ ಅಮಾತ್ಯನಾಗಿದ್ದ, ರಾಮನ ಭಯದಿಂದಲೇ ತಾಪಸಿಯಾಗಿ ಅಲ್ಲಿ ವಾಸಿಸುತ್ತಿದ್ದ ಮಾರೀಚನ ಬಳಿ ರಾವಣನು ಬಂದನು.

ಸೀತಾಪಹರಣ

ರಾವಣನ ಆಗಮನವನ್ನು ಕಂಡು ಮಾರೀಚನು ಅವನನ್ನು ಫಲ-ಮೂಲಗಳಿಂದ ಸತ್ಕರಿಸಿ ಪೂಜಿಸಿದನು. ಕುಳಿತು ವಿಶ್ರಾಂತಿ ಪಡೆದ ಅತಿಥಿಯ ಬಳಿಯೇ ಕುಳಿತಿದ್ದ ರಾಕ್ಷಸ ಮಾರೀಚನು ಮಾತುಗಳನ್ನರಿತವನು ಇನ್ನೊಬ್ಬ ವಾಕ್ಯಕೋವಿದನಿಗೆ ಹೇಗೋ ಹಾಗೆ ಸಂಸಾರಯುಕ್ತವಾದ ಈ ಮಾತುಗಳನ್ನಾಡಿದನು: “ನಿನ್ನ ಸ್ವಾಭಾವಿಕ ಬಣ್ಣವು ಕಾಣುತ್ತಿಲ್ಲ. ನಿನ್ನ ಪುರದಲ್ಲಿ ಎಲ್ಲವೂ ಕ್ಷೇಮ ತಾನೇ? ನಿನ್ನ ಪ್ರಜೆಗಳೆಲ್ಲರೂ ಮೊದಲಿನಂತಯೇ ನಿನ್ನನ್ನು ಪ್ರೀತಿಸುತ್ತಿದ್ದಾರೆಯೇ? ಯಾವ ಕೆಲಸವು ನಿನ್ನನ್ನು ಇಲ್ಲಿಗೆ ಕರೆತಂದಿದೆ? ಎಷ್ಟೇ ದುಷ್ಕರವಾಗಿದ್ದರೂ ಆ ಕಾರ್ಯವು ಪೂರ್ಣವಾದಂತೆ ಎಂದು ತಿಳಿ.” ಆಗ ರಾವಣನು ಅವನಿಗೆ ರಾಮನು ಮಾಡಿದ ಎಲ್ಲವನ್ನೂ ವಿವರಿಸಿದನು. ಅದನ್ನು ಕೇಳಿ ಮಾರೀಚನು ಸಂಕ್ಷಿಪ್ತವಾಗಿ ರಾವಣನಿಗೆ ಹೇಳಿದನು: “ರಾಮನನ್ನು ಕಾಡುವುದನ್ನು ಬಿಟ್ಟುಬಿಡು! ಯಾಕೆಂದರೆ ಅವನ ವೀರ್ಯವೇನೆಂದು ನನಗೆ ಗೊತ್ತು. ಆ ಮಹಾತ್ಮನ ಬಾಣಗಳ ವೇಗವನ್ನು ಯಾರುತಾನೇ ಸಹಿಸಲು ಸಾಧ್ಯ? ನಾನು ಈ ರೀತಿ ತಾಪಸಿಯಾಗಿರಲು ಆ ಪುರುಷರ್ಷಭನೇ ಕಾರಣ. ಯಾವ ದುರಾತ್ಮನು ತಾನೇ ನಿನಗೆ ಈ ವಿನಾಶದ ಮಾರ್ಗವನ್ನು ಹೇಳಿಕೊಟ್ಟರು?” ಅದನ್ನು ಕೇಳಿದ ರಾವಣನು ಸಂಕ್ರುದ್ಧನಾಗಿ ಕೂಗಿದನು: “ನನ್ನ ಮಾತುಗಳನ್ನು ನಡೆಸಿಕೊಡದಿದ್ದರೆ ನೀನು ಸಾಯುವುದು ಖಂಡಿತ!” ಆಗ ಮಾರೀಚನು “ಮರಣವು ಅವಶ್ಯವಾಗಿರುವಾಗ ಶ್ರೇಷ್ಠವಾದವನಿಂದ ಮರಣಹೊಂದುವುದೇ ಲೇಸು. ಇವನು ಹೇಳಿದಂತೆಯೇ ಮಾಡುತ್ತೇನೆ” ಎಂದು ಯೋಚಿಸಿ, ರಾಕ್ಷಸೇಶ್ವರನಿಗೆ “ನಾನು ನಿನಗೆ ಯಾವ ರೀತಿಯ ಸಹಾಯವನ್ನು ಮಾಡಲಿ? ನಾನು ಅದನ್ನು ಅವಶ್ಯವಾಗಿ ಮಾಡುತ್ತೇನೆ.” ಎಂದು ಉತ್ತರಿಸಿದನು. ದಶಗ್ರೀವನು ಅವನಿಗೆ ಹೇಳಿದನು: “ಹೋಗು! ರತ್ನಚಿತ್ರಗಳ ದೇಹವುಳ್ಳ ರತ್ನದ ಕೋಡುಗಳುಳ್ಳ ಜಿಂಕೆಯಾಗಿ ಸೀತೆಯನ್ನು ಪ್ರಲೋಭಿಸು. ನಿನ್ನನ್ನು ನೋಡಿದ ಸೀತೆಯು ಖಂಡಿತವಾಗಿಯೂ ರಾಮನನ್ನು ಕಳುಹಿಸುತ್ತಾಳೆ. ಕಾಕುತ್ಸ್ಥನು ಹೋದನಂತರ ಸೀತೆಯು ನನ್ನ ವಶಳಾಗುತ್ತಾಳೆ. ಅವಳನ್ನು ಎತ್ತಿಕೊಂಡು ಹೋಗುತ್ತೇನೆ. ಆಗ ಆ ದುರ್ಬುದ್ಧಿಯು ಭಾರ್ಯಾವಿಯೋಗದಿಂದ ಇಲ್ಲವಾಗುತ್ತಾನೆ. ನನಗೆ ಈ ಸಹಾಯವನ್ನು ಮಾಡು!”

ಇದನ್ನು ಕೇಳಿದ ಮಾರೀಚನು ತನ್ನ ಉದಕ ಕ್ರಿಯೆಗಳನ್ನು ಮಾಡಿಕೊಂಡು ಸುದುಃಖಿತನಾಗಿ ಮುಂದೆ ಸಾಗುತ್ತಿದ್ದ ರಾವಣನನ್ನು ಅನುಸರಿಸಿದನು. ಅವರೀರ್ವರೂ ರಾಮನ ಆಶ್ರಮಕ್ಕೆ ಹೋಗಿ ಎಲ್ಲವನ್ನೂ ಮೊದಲೇ ಹಾಕಿಕೊಂಡ ಉಪಾಯದಂತೆ ಮಾಡಿದರು. ರಾವಣನು ತಲೆಬೋಳಿಸಿಕೊಂಡ ಭಿಕ್ಷಾಪಾತ್ರೆ ಮತ್ತು ತ್ರಿಶೂಲಗಳನ್ನು ಹಿಡಿದ ಯತಿಯಾದನು. ಮಾರೀಚನು ಜಿಂಕೆಯಾಗಿ ಆ ಪ್ರದೇಶಕ್ಕೆ ಬಂದನು.

ಜಿಂಕೆಯ ರೂಪವನ್ನು ಧರಿಸಿ ಕಾಣಿಸಿಕೊಂಡ ಮಾರೀಚನನ್ನು ನೋಡಿದ ವೈದೇಹಿಯು ವಿಧಿಯಿಂದ ಪ್ರಚೋದಿತಳಾಗಿ ರಾಮನನ್ನು ಅದರ ಹಿಂದೆ ಕಳುಹಿಸಿದಳು. ಅವಳಿಗೆ ಪ್ರಿಯವಾದುದನ್ನು ಮಾಡಲು ರಾಮನು ತಕ್ಷಣವೇ ಧನುಸ್ಸನ್ನು ಹಿಡಿದು, ರಕ್ಷಣೆಗೆ ಲಕ್ಷ್ಮಣನನ್ನಿರಿಸಿ ಆ ಜಿಂಕೆಯನ್ನು ಹಿಡಿದು ತರಲು ಹೊರಟನು. ಆ ಧನ್ವಿ ರಾಮನು ತೂಣೀರ, ಖಡ್ಗ-ಗೋಧಾಂಗುಲಿಗಳನ್ನು ಕಟ್ಟಿಕೊಂಡು ರುದ್ರನು ತಾರಾಮೃಗವನ್ನು ಅರಸಿದಂತೆ ಮೃಗವನ್ನು ಅಟ್ಟಿಕೊಂಡು ಹೋದನು. ಆ ರಾಕ್ಷಸನು ಒಮ್ಮೆ ಕಾಣಿಸಿಕೊಳ್ಳುತ್ತಿದ್ದನು. ಪುನಃ ಅದೃಶ್ಯನಾಗುತ್ತಿದ್ದನು. ಹೀಗೆ ಅವನು ರಾಮನನ್ನು ಬಹಳ ದೂರದವರೆಗೆ ಕೊಂಡೊಯ್ದನು. ಪ್ರತಿಭಾನ್ವಿತ ರಾಮನು ಅವನು ನಿಶಾಚರನೆಂದು ತಿಳಿದು ಅಮೋಘ ಶರವನ್ನು ಪ್ರಯೋಗಿಸಿ ಆ ಮೃಗರೂಪಿಯನ್ನು ಕೊಂದನು. ರಾಮನ ಬಾಣದ ಹೊಡೆತವನ್ನು ತಿಂದ ಮಾರೀಚನು ರಾಮನ ಸ್ವರವನ್ನೇ ಮಾಡಿಕೊಂದು “ಹಾ ಸೀತೇ! ಹಾ ಲಕ್ಷ್ಮಣಾ!” ಎಂದು ಆರ್ತಸ್ವರದಲ್ಲಿ ಕೂಗಿದನು. ಅವನ ಆ ಕರುಣಾಜನಕ ಸ್ವರವನ್ನು ಕೇಳಿದ ವೈದೇಹಿಯು ಶಬ್ಧವು ಬರುತ್ತಿರುವಲ್ಲಿಗೆ ಓಡಲು ಪ್ರಯತ್ನಿಸಿದಳು. ಆಗ ಲಕ್ಷ್ಮಣನು ಅವಳನ್ನು ತಡೆದು “ಈ ಭಯವನ್ನು ತೊರೆ! ಯಾರು ತಾನೇ ರಾಮನನ್ನು ಎದುರಿಸಿಯಾರು? ಸ್ವಲ್ಪ ಕಾಲ ಸೈರಿಸಿಕೋ! ರಾಮನು ಹಿಂದಿರುಗುವುದನ್ನು ಈಗಲೇ ನೋಡುತ್ತೀಯೆ!” ಎಂದನು. ಅವನು ಆ ಮಾತುಗಳಿಗೆ ಸೀತೆಯು ಸ್ತ್ರೀಸ್ವಭಾವದಿಂದ ಹತಳಾಗಿ ಶುದ್ಧ ಚಾರಿತ್ರ ಭೂಷಣನಾಗಿದ್ದ ತನ್ನ ಮೈದುನನನ್ನು ಶಂಕಿಸಿದಳು. ಆ ಸಾಧ್ವೀ ಪತಿವ್ರತೆಯು ಈ ಕ್ರೂರ ಮಾತುಗಳನ್ನಾಡಲು ಪ್ರಾರಂಭಿಸಿದಳು: “ಮೂಢ! ನಿನ್ನ ಹೃದಯದಲ್ಲಿ ಯಾವಾಗಲೂ ಬಯಸುತ್ತಿರುವ ಕಾಲವು ಇದಲ್ಲ! ಇಂದು ನಾನು ಶಸ್ತ್ರವನ್ನು ತೆಗೆದುಕೊಂಡು ನನ್ನನ್ನು ನಾನೇ ಸಾಯಿಸಿಕೊಂಡೇನು ಅಥವಾ ಈ ಗಿರಿಶೃಂಗದ ಕೆಳಗೆ ಧುಮುಕಿಯೇನು ಅಥವಾ ಬೆಂಕಿಯನ್ನು ಪ್ರವೇಶಿಸಿಯೇನು. ಆದರೆ ಪತಿ ರಾಮನನ್ನು ಬಿಟ್ಟು ಶಾರ್ದೂಲಿಯು ನರಿಯನ್ನು ಹೇಗೋ ಹಾಗೆ ನಿನ್ನನ್ನು ಸೇರುವುದಿಲ್ಲ!” ಈ ಘೋರ ಮಾತುಗಳನ್ನು ಕೇಳಿ, ರಾಘವನನ್ನು ಪ್ರೀತಿಸುತ್ತಿದ್ದ ಸುವ್ರತ ಲಕ್ಷ್ಮಣನು ಕಿವಿಗಳನ್ನು ಮುಚ್ಚಿಕೊಂಡು ಧನುಸ್ಸನ್ನು ಹಿಡಿದು ರಾಮನ ಮಾರ್ಗವನ್ನೇ ಹಿಡಿದು ರಾಘವನಿದ್ದಲ್ಲಿಗೆ ಹೊರಟನು.

ಈ ಮಧ್ಯೆ ರಾಕ್ಷಸ ರಾವಣನು ಭಸ್ಮದಿಂದ ಮುಚ್ಚಲ್ಪಟ್ಟ ಅಗ್ನಿಯಂತೆ ಸೌಮ್ಯರೂಪದಲ್ಲಿದ್ದರೂ ಸೌಮ್ಯನಾಗಿರದೇ, ಯತಿವೇಷದಲ್ಲಿ ಮರೆಮಾಡಿಕೊಂಡು, ಆ ಅನಿಂದಿತೆಯನ್ನು ಅಪಹರಿಸುವ ಇಚ್ಛೆಯಿಂದ ಅಲ್ಲಿ ಕಾಣಿಸಿಕೊಂಡನು. ಅವನ ಆಗಮನವನ್ನು ಕಂಡ ಧರ್ಮಜ್ಞೆ ಜನಕಾತ್ಮಜೆಯು ಫಲಮೂಲಾಹಾರಗಳಿಂದ ಅವನನ್ನು ಸ್ವಾಗತಿಸಿದಳು. ಅವೆಲ್ಲವನ್ನೂ ಕಡೆಗಾಣಿಸಿ ತನ್ನ ಸ್ವರೂಪವನ್ನು ತಳೆದು ಆ ರಾಕ್ಷಸಪುಂಗವನು ವೈದೇಹಿಯನ್ನು ಮರುಳುಗೊಳಿಸುತ್ತಾ ಹೇಳಿದನು: “ಸೀತೆ! ನಾವು ರಾವಣನೆಂದು ವಿಶ್ರುತನಾಗಿರುವ ರಾಕ್ಷಸರಾಜ. ಸಾಗರದ ಆ ಕಡೆಯಲ್ಲಿ ಲಂಕಾ ಎಂಬ ಹೆಸರಿನ ನನ್ನ ನಗರವಿದೆ. ಅಲ್ಲಿ ನನ್ನ ವರನಾರಿಯರೊಂದಿಗೆ ನೀನು ನನ್ನೊಡನೆ ಶೋಭಿಸುತ್ತೀಯೆ. ಸುಶ್ರೋಣಿ! ನನ್ನ ಭಾರ್ಯೆಯಾಗು. ತಾಪಸ ರಾಘವನನ್ನು ತೊರೆ!”

ಇವೇ ಮೊದಲಾದ ಮಾತುಗಳನ್ನು ಕೇಳಿ ಜಾನಕಿಯು ಕಿವಿಗಳನ್ನು ಮುಚ್ಚಿಕೊಂಡು ಹೇಳಿದಳು: “ಸುಮ್ಮನಾಗು! ನಾನು ರಾಘವನನ್ನು ತೊರೆಯುವುದರೊಳಗೆ ನಕ್ಷತ್ರಗಳೊಂದಿಗೆ ಆಕಾಶವೇ ಕಳಚಿ ಬಿದ್ದೀತು! ಭೂಮಿಯು ಚೂರಾದೀತು! ಅಗ್ನಿಯು ತಣ್ಣಗಾದೀತು! ಹೇಗೆ ತಾನೇ ಹೆಣ್ಣಾನೆಯೊಂದು ಕಪೋಲಗಳೊಡೆದು ಮದ ಸುರಿಸುತ್ತಾ ವನದಲ್ಲಿ ಸಂಚರಿಸುವ ಪದ್ಮಿ ಮಹಾಗಜವನ್ನು ಬಿಟ್ಟು ಹಂದಿಯನ್ನು ಮುಟ್ಟಿಯಾಳು? ಮಧುಮಾಧವೀ ಮದ್ಯವನ್ನು ಕುಡಿದ ನಾರಿಯು ಹೇಗೆ ತಾನೇ ಸೌಮೀರಕ್ಕೆ ಆಸೆಪಟ್ಟಾಳು?” ಹೀಗೆ ಹೇಳಿ ಅವಳು ಪುನಃ ಆಶ್ರಮವನ್ನು ಪ್ರವೇಶಿಸಿದಳು. ರಾವಣನು ಅವಳನ್ನು ಹಿಂಬಾಲಿಸಿ ತಡೆದನು. ಕಠಿಣ ಸ್ವರದಲ್ಲಿ ಗರ್ಜಿಸುತ್ತಾ ಚೇತನವನ್ನೇ ಕಳೆದುಕೊಂಡ ಅವಳ ಕೂದಲನ್ನು ಹಿಡಿದು ಎಳೆದು ಆಕಾಶವನ್ನೇರಿದನು. ಆಗ ಗಿರಿಗೋಚರದಲ್ಲಿದ್ದ ಹದ್ದು ಜಟಾಯುವು “ರಾಮ! ರಾಮ!” ಎಂದು ಕೂಗುತ್ತಾ ರೋದಿಸುತ್ತಿದ್ದ ಆ ತಪಸ್ವಿನಿಯನ್ನು ನೋಡಿದನು.

ಜಟಾಯು ಮರಣ, ಕಬಂಧ ವಧೆ

ಆ ಅರುಣನ ಮಗ, ಸಂಪಾತಿಯ ಸೋದರ, ಹದ್ದುಗಳ ರಾಜ, ಮಹಾವೀರ್ಯ ಜಟಾಯುವು ದಶರಥನ ಸಖನಾಗಿದ್ದನು. ರಾವಣನ ಹೆಗಲಿನ ಹಿಡಿತದಲ್ಲಿದ್ದ ದಶರಥನ ಸೊಸೆ ಸೀತೆಯನ್ನು ನೋಡಿದ ಆ ಪಕ್ಷಿರಾಜನು ರಾಕ್ಷಸೇಶ್ವರ ರಾವಣನ ಮೇಲೆ ಸಿಟ್ಟಾಗಿ ಹೇಳಿದನು: “ಮೈಥಿಲಿಯನ್ನು ಬಿಟ್ಟುಬಿಡು! ನಾನು ಬದುಕಿರುವಾಗ ನೀನು ಅವಳನ್ನು ಹೇಗೆ ಅಪಹರಿಸಿಕೊಂಡು ಹೋಗುತ್ತಿದ್ದೀಯೆ? ಈ ವಧುವನ್ನು ಬಿಟ್ಟುಬಿಡದಿದ್ದರೆ ನನ್ನಿಂದ ನೀನು ಬಿಡುಗಡೆ ಹೊಂದುವುದಿಲ್ಲ!” ಹೀಗೆ ಹೇಳಿ ಜಟಾಯುವು ರಾವಣನನ್ನು ತನ್ನ ಉಗುರುಗಳಿಂದ ಪರಚಿದನು ಮತ್ತು ತನ್ನ ಕೊಕ್ಕೆ-ರೆಕ್ಕೆಗಳಿಂದ ಚೆನ್ನಾಗಿ ಹೊಡೆದು ಗಾಯಗೊಳಿಸಿ, ಗಿರಿಯ ಮೇಳೆ ಧಾತುವಿನ ಕೆಂಪು ನದಿಯು ಹೇಗೋ ಹಾಗೆ ಅವನ ದೇಹದಿಂದ ರಕ್ತವು ಹರಿಯುವಂತೆ ಮಾಡಿದನು. ರಾಮನ ಪ್ರಿಯಹಿತೈಷಿ ಹದ್ದಿನಿಂದ ಹೀಗೆ ಹೊಡೆತತಿಂದ ರಾವಣನು ಖಡ್ಗದಿಂದ ಅವನ ರೆಕ್ಕೆಗಳನ್ನು ಕತ್ತರಿಸಿದನು. ಆ ಗೃಧ್ರರಾಜನನ್ನು ಹೊಡೆದುರಿಳಿಸಿ ರಾಕ್ಷಸನು ಸೀತೆಯನ್ನು ತೋಳಿನಿಂದ ಹಿಡಿದು ಮೇಲಕ್ಕೇರಿದನು. ಎಲ್ಲೆಲ್ಲಿ ಆಶ್ರಮ ಮಂಡಲಗಳು, ಸರೋವರಗಳು ಮತ್ತು ನದಿಗಳನ್ನು ನೋಡಿದಳೋ ಅಲ್ಲಲ್ಲಿ ವೈದೇಹಿಯು ತನ್ನ ಆಭರಣಗಳನ್ನು ಬಿಚ್ಚಿ ಎಸೆದಳು. ಗಿರಿಪ್ರಸ್ಥದಲ್ಲಿ ಐದು ವಾನರಪುಂಗವರನ್ನು ನೋಡಿ ಅಲ್ಲಿ ಆ ಮನಸ್ವಿನಿಯು ತನ್ನ ಮಹಾದಿವ್ಯ ವಸ್ತ್ರವನ್ನು ಎಸೆದಳು. ಆಗ ಆ ವಾನರೇಂದ್ರರು ಮೇಘಗಳ ಮಧ್ಯೆ ಕಾಣುವ ಮಿಂಚಿನಂತೆ ಗಾಳಿಯಲ್ಲಿ ಬಂದು ಮಧ್ಯೆ ಬಿದ್ದ ಆ ಅರಿಶಿಣ ಬಣ್ಣದ ಬಟ್ಟೆಯನ್ನು ನೋಡಿದರು.

ಹೀಗೆ ವೈದೇಹಿಯು ಅಪಹೃತಳಾಗಲು ರಾಮನು ಮಹಾಮೃಗವನ್ನು ಕೊಂದು ಹಿಂದಿರುಗುತ್ತಿದ್ದಾಗ ತಮ್ಮ ಲಕ್ಷ್ಮಣನನ್ನು ನೋಡಿದನು. “ರಾಕ್ಷಸರಿರುವ ಈ ವನದಲ್ಲಿ ವೈದೇಹಿಯನ್ನು ಬಿಟ್ಟು ಏಕೆ ಇಲ್ಲಿಗೆ ಬಂದೆ?” ಎಂದು ತಮ್ಮನನ್ನು ನಿಂದಿಸಿದನು. ತನ್ನನ್ನು ಎಳೆದುಕೊಂಡು ಹೋದ ಮೃಗರೂಪದ ರಾಕ್ಷಸ ಮತ್ತು ತಮ್ಮನು ಆಶ್ರಮವನ್ನು ಬಿಟ್ಟು ಬಂದಿದುದರ ಕುರಿತು ಚಿಂತಿಸಿ ಪರಿತಪಿಸುತ್ತಾ ರಾಮನು ಬೇಗನೇ ಲಕ್ಷ್ಮಣನ ಬಳಿಬಂದು “ಲಕ್ಷ್ಮಣ! ಸೀತೆಯು ಬದುಕಿರುವಳೇ? ಅವಳನ್ನು ಇಲ್ಲಿ ನಾನು ಕಾಣುತ್ತಿಲ್ಲ!” ಎಂದು ಕೇಳಿದನು. ಆಗ ಲಕ್ಷ್ಮಣನು ಅವನಿಗೆ ಸೀತೆಯು ಹೇಳಿದ ಎಲ್ಲ ಅಪಚಾರದ ಮಾತುಗಳನ್ನೂ ಪುನರಾವರ್ತಿಸಿ ಹೇಳಿದನು. ಹೃದಯವು ಸುಡುತ್ತಿರಲು ರಾಮನು ಆಶ್ರಮದ ಕಡೆ ಓಡಿದನು. ಮಾರ್ಗದಲ್ಲಿ ಅವನು ಹೊಡೆತತಿಂದು ಉರುಳಿ ಬಿದ್ದಿದ್ದ ಪರ್ವತದಂಥಹ ಹದ್ದನ್ನು ನೋಡಿದನು. ರಾಕ್ಷಸನೆಂದು ಶಂಕಿಸಿ ರಾಮನು ಧನುಸ್ಸನ್ನು ಎಳೆದು ಅವನ ಬಳಿ ಓಡಿ ಬಂದನು. ಆ ತೇಜಸ್ವೀ ಜಟಾಯುವು ರಾಮ-ಲಕ್ಷ್ಮಣರಿಬ್ಬರಿಗೂ “ನಾನು ಹದ್ದುಗಳ ರಾಜ ಮತ್ತು ದಶರಥನ ಸಖ. ನಿಮಗೆ ಮಂಗಳವಾಗಲಿ” ಎಂದನು. ಅವನ ಆ ಮಾತುಗಳನ್ನು ಕೇಳಿದ ಅವರಿಬ್ಬರೂ ಧನುಸ್ಸುಗಳನ್ನು ಸಡಿಲಗೊಳಿಸಿ “ನಮ್ಮ ತಂದೆಯ ಹೆಸರನ್ನು ಹೇಳುವ ನೀನು ಯಾರು?” ಎಂದು ಕೇಳಿದರು. ಆಗ ಜಟಾಯುವು ಕತ್ತರಿಸಲ್ಪಟ್ಟ ತನ್ನ ರೆಕ್ಕೆಗಳೆರಡನ್ನೂ ತೋರಿಸಿ ಸೀತೆಗಾಗಿ ರಾವಣನಿಂದ ತಾನು ಹೊಡೆತತಿಂದುದರ ಕುರಿತು ವರದಿಮಾಡಿದನು. ರಾವಣನು ಯಾವ ದಿಕ್ಕಿನಲ್ಲಿ ಹೋದ ಎಂದು ತನ್ನ ತಲೆಯನ್ನು ತಿರುಗಿಸಿ ತೋರಿಸಿಕೊಟ್ಟು ಜಟಾಯುವು ಮೃತನಾದನು. ಅವನ ಇಂಗಿತವು ದಕ್ಷಿಣ ಎಂದು ತಿಳಿದ ಕಾಕುತ್ಸ್ಥನು ತನ್ನ ತಂದೆಯ ಸಖನಿಗೆ ಪೂಜಿಸಿ ಸಂಸ್ಕಾರವನ್ನು ನೆರವೇರಿಸಿದನು.

ಆಶ್ರಮವನ್ನು ತಲುಪಿ ಅದು ಶೂನ್ಯವಾಗಿರುವುದನ್ನು ನೋಡಿದನು. ತಲೆದಿಂಬು-ಪಾತ್ರೆಗಳು ಅಸ್ತವ್ಯಸ್ತವಾಗಿದ್ದವು. ಕಲಶಗಳು ಉರುಳಿ ಬಿದ್ದಿದ್ದವು ಮತ್ತು ನರಿಗಳ ಗುಂಪುಗಳು ಬಂದು ಸೇರಿದ್ದವು. ವೈದೇಹೀ ಹರಣದಿಂದ ಆರ್ದಿತರಾಗಿ ದುಃಖಶೋಕಾಸಮಾವಿಷ್ಟರಾದ ಆ ಪರಂತಪರೀರ್ವರೂ ದಕ್ಷಿಣದಲ್ಲಿದ್ದ ದಂಡಕಾರಣ್ಯಕ್ಕೆ ಹೋದರು. ಆ ಮಹಾವನದಲ್ಲಿ ರಾಮ-ಸೌಮಿತ್ರಿಯರು ಎಲ್ಲಕಡೆ ಓಡುತ್ತಿದ್ದ ಜಿಂಕೆಯ ಹಿಂಡುಗಳನ್ನು ನೋಡಿದರು ಮತ್ತು ಪ್ರಾಣಿಗಳ ದಾವಾಗ್ನಿಯಂತಿರುವ ಕೂಗುಗಳನ್ನು ಕೇಳಿದರು. ಅಷ್ಟರಲ್ಲಿಯೇ ಅವರು ಮೋಡದ ಪರ್ವತದಂತೆ ತೋರುತ್ತಿದ್ದ, ಶಾಲವೃಕ್ಷದಂಥಹ ತೋಳುಗಳಿದ್ದ, ಮಹಾಭುಜ, ಎದೆಯಲ್ಲಿ ವಿಶಾಲವಾದ ಒಂದೇ ಕಣ್ಣಿದ್ದ, ದೊಡ್ಡ ಹೊಟ್ಟೆಯ, ಮಹಾಮುಖಿ, ಘೋರ ಕಬಂಧನನ್ನು ನೋಡಿದರು. ಆ ರಾಕ್ಷಸನು ಲಕ್ಷ್ಮಣನನ್ನು ಕೈಗಳಿಂದ ಹಿಡಿದು ತನ್ನ ಬಾಯಿಯಡೆಗೆ ಒಯ್ದನು. ಆಗ ಶೋಕಕ್ಕೊಳಗಾದ ಸೌಮಿತ್ರಿಯು ವಿಷಣ್ಣನಾಗಿ “ರಾಮ! ನನ್ನ ಈ ಅವಸ್ಥೆಯನ್ನು ನೋಡು! ವೈದೇಹಿಯ ಅಪಹರಣ, ನೀನು ರಾಜ್ಯಭ್ರಷ್ಟನಾದುದು, ತಂದೆಯ ಮರಣ ಮೊದಲಾದ ನನ್ನ ಈ ಕಷ್ಟಗಳನ್ನು ನೋಡು! ನೀನು ವೈದೇಹಿಯೊಡನೆ ಕೋಸಲಕ್ಕೆ ಹೋಗುವುದನ್ನು ಮತ್ತು ಪಿತೃ-ಪಿತಾಮಹರ ನೆಲದಲ್ಲಿ ರಾಜನಾಗಿರುವುದನ್ನು ನಾನು ನೋಡಲಾರೆ! ಮೋಡಕವಿದ ಚಂದ್ರನಂತೆ ಕುಶ-ಲಾಜ-ಶಮಿಗಳಿಂದ ಅಭಿಷೇಕಿಸಿದ ನಿನ್ನ ವದನವನ್ನು ನೋಡುವ ಆ ಆರ್ಯರೇ ಅದೃಷ್ಟವಂತರು!” ಹೀಗೆ ಲಕ್ಷ್ಮಣನು ಬಹುವಿಧದಲ್ಲಿ ವಿಲಪಿಸುತ್ತಿರಲು ಗೊಂದಲದಲ್ಲಿಯೂ ಗೊಂದಲಗೊಳ್ಳದೇ, ಕಾಕುತ್ಸ್ಥನು ಅವನಿಗೆ “ನಾನಿರುವಾಗ ಇವನು ಏನೂ ಅಲ್ಲ. ಅವನ ಬಲಬಾಹುವನ್ನು ಕತ್ತರಿಸು. ನಾನು ಎಡಭುಜವನ್ನು ತುಂಡರಿಸುತ್ತೇನೆ” ಎಂದು ಹೇಳಿ ಕಬಂಧನ ಭುಜವನ್ನು ತೀಕ್ಷ್ಣ ಖಡ್ಗದಿಂದ ಎಳ್ಳನ್ನು ಕಾಂಡದಿಂದ ಕೀಳುವಂತೆ ಕತ್ತರಿಸಿ ಕೆಳಗುರುಳಿಸಿದನು. ಅಣ್ಣ ರಾಘವನು ಗಟ್ಟಿಯಾಗಿ ನಿಂತಿರುವುದನ್ನು ನೋಡಿ ಬಲಶಾಲಿ ಸೌಮಿತ್ರಿಯೂ ಕೂಡ ತನ್ನ ಖಡ್ಗದಿಂದ ಕಬಂಧನ ಬಲಬಾಹುವಿಗೆ ಹೊಡೆಯಲು ಆ ಮಹಾ ರಾಕ್ಷಸನು ಜೀವವನ್ನು ಕಳೆದುಕೊಂಡು ನೆಲದ ಮೇಲೆ ಬಿದ್ದನು.

ಅವನ ದೇಹದಿಂದ ದಿವ್ಯದರ್ಶನ ಪುರುಷನು ಬಿಡುಗಡೆ ಹೊಂದಿ ದಿವವನ್ನೇರಿ ಅಲ್ಲಿ ಸೂರ್ಯನಂತೆ ಪ್ರಜ್ವಲಿಸುತ್ತಾ ಕಾಣಿಸಿಕೊಂಡನು. ರಾಮನು ಅವನಿಗೆ “ ನೀನು ಯಾರು? ನಿನಗಿಷ್ಟವಿದ್ದರೆ ನನ್ನ ಈ ಪ್ರಶ್ನೆಗೆ ಉತ್ತರಿಸು. ನಾವು ಕಾಣುವ ಈ ವಿಚಿತ್ರ ಆಶ್ಚರ್ಯವೇನು?” ಎಂದು ಕೇಳಿದನು. ಆಗ ಆ ಮಹಾಪ್ರಭೆಯ ದಿವ್ಯ ಪುರುಷನು “ನಾನು ಗಂಧರ್ವ ವಿಶ್ವಾವಸು. ಬ್ರಹ್ಮನ ಶಾಪದಿಂದ ರಾಕ್ಷಸಯೋನಿಯಲ್ಲಿ ಜನ್ಮಪಡೆದನು. ಲಂಕಾನಿವಾಸಿಗಳ ರಾಜ ರಾವಣನು ಸೀತೆಯನ್ನು ಅಪಹರಿಸಿದ್ದಾನೆ. ಸುಗ್ರೀವನಲ್ಲಿಗೆ ಹೋಗು. ಅವನು ನಿನಗೆ ಸಹಾಯಮಾಡುತ್ತಾನೆ. ಋಷ್ಯಮೂಕ ಪರ್ವತದ ಹತ್ತಿರವೇ ಹಂಸ-ಕಾರಂಡಗಳಿಂದ ಕೂಡಿರುವ ಶುದ್ಧನೀರಿನ ಪಂಪಾ ಸರೋವರವಿದೆ. ಅಲ್ಲಿ ವಾನರರಾಜ ಹೇಮಮಾಲಿನಿ ವಾಲಿಯ ತಮ್ಮ ಸುಗ್ರೀವನು ತನ್ನ ನಾಲ್ವರು ಸಚಿವರೊಂದಿಗೆ ನೆಲೆಸಿದ್ದಾನೆ. ಇಷ್ಟುಮಾತ್ರ ನಾನು ಹೇಳಬಲ್ಲೆ. ನೀನು ಜಾನಕಿಯನ್ನು ಕಾಣುತ್ತೀಯೆ. ವಾನರರಾಜನಿಗೆ ರಾವಣಾಲಯವು ನಿಶ್ಚಯವಾಗಿಯೂ ತಿಳಿದಿದೆ.” ಎಂದು ಹೇಳಿ, ಆ ವೀರ ರಾಮ-ಲಕ್ಷ್ಮಣರನ್ನು ವಿಸ್ಮಯಗೊಳಿಸಿ ಅಂತರ್ಧಾನನಾದನು.

ಸುಗ್ರೀವ ಸಖ್ಯ, ವಾಲಿವಧೆ

ಸೀತಾಪಹರಣದಿಂದ ದುಃಖಾರ್ತನಾದ ರಾಮನು ರಾತ್ರಿ-ಪ್ರಭಾತಕಾಲಗಳಲ್ಲಿ ಅರಳುತ್ತಿದ್ದ ಕಮಲಗಳಿಂದ ತುಂಬಿದ್ದ ಪಂಪಾಸರೋವರವನ್ನು ಸೇರಿದನು. ಮನಸ್ಸನ್ನು ತನ್ನ ಪ್ರಿಯೆಯ ಮೇಲೆಯೇ ಇರಿಸಿದ್ದ ರಾಮನು ಸುಖ ಶೀತಲ ಮಾರುತವು ಅಮೃತ ಪರಿಮಳವನ್ನು ಹೊತ್ತು ಬೀಸುತ್ತಿದ್ದ ಆ ವನಕ್ಕೆ ಹೋದನು. ಅಲ್ಲಿ ತನ್ನ ಕಾಂತೆಯನ್ನು ನೆನಪಿಸಿಕೊಂಡು ಕಾಮಬಾಣದಿಂದ ಸಂತಪ್ತನಾಗಿ ವಿಲಪಿಸಿದನು. ಅವನನ್ನು ನೋಡಿದ ಸೌಮಿತ್ರಿಯು ಹೇಳಿದನು: “ಮಾನದ! ಈ ವಿಧದ ಬಾವನೆಯು ಆತ್ಮವಂತ ವೃದ್ಧಶೀಲ ಪುರುಷನನ್ನು ವ್ಯಾಧಿಯು ಹೇಗೋ ಹಾಗೆ ನಿನ್ನನ್ನು ಮುಟ್ಟಬಾರದು. ನಿನಗೆ ಈಗ ವೈದೇಹಿ ಮತ್ತು ರಾವಣರ ಕುರುಹು ತಿಳಿದಿದೆ. ನಿನ್ನ ಪುರುಷತ್ವ ಮತ್ತು ಬುದ್ಧಿಗಳಿಂದ ಅವಳನ್ನು ಮರಳಿ ಪಡೆದುಕೋ! ಪರ್ವತದಲ್ಲಿ ವಾಸಿಸುತ್ತಿರುವ ಹರಿಪುಂಗವ ಸುಗ್ರೀವನಲ್ಲಿಗೆ ಹೋಗೋಣ. ನಾನು ನಿನ್ನ ಶಿಷ್ಯ, ಸೇವಕ ಮತ್ತು ಸಹಾಯಕನಾಗಿರುವವರೆಗೆ ಧೈರ್ಯದಿಂದಿರು.” ಲಕ್ಷ್ಮಣನ ಈ ಬಹುವಿಧದ ಮಾತುಗಳಿಂದ ರಾಘವನು ಸ್ವಭಾವವನ್ನು ಮರಳಿ ಪಡೆದು ಮಾಡಬೇಕಾದ ಕಾರ್ಯದಲ್ಲಿ ಮನಸ್ಸನ್ನು ತೊಡಗಿಸಿದನು. ಪಂಪಾಸರೋವರದ ನೀರನ್ನು ಬಳಸಿ ಪಿತೃಗಳಿಗೆ ತರ್ಪಣಗಳನ್ನಿತ್ತು ಆ ಇಬ್ಬರು ವೀರ ಸಹೋದರರು ಮುಂದುವರೆದರು.

ಅನೇಕ ಫಲಮೂಲಗಳಿದ್ದ ಋಶ್ಯಮೂಕ ಗಿರಿಯನ್ನು ಸೇರಿ ಆ ವೀರರಿಬ್ಬರೂ ಗಿರಿಯಾಗ್ರದಲ್ಲಿ ಐವರು ವಾನರರನ್ನು ಕಂಡರು. ಸುಗ್ರೀವನು ತನ್ನ ಸಚಿವ ಬುದ್ಧಿವಂತ, ಹಿಮವತ್ಪರ್ವತದಂತಿದ್ದ ಹನೂಮಂತನನ್ನು ಅವರ ಬಳಿ ಕಳುಹಿಸಿದನು. ಮೊದಲು ಹನುಮಂತನೊಂದಿಗೆ ಮಾತನಾಡಿ ನಂತರ ರಾಮ-ಲಕ್ಷ್ಮಣರಿಬ್ಬರೂ ಸುಗ್ರೀವನಲ್ಲಿಗೆ ಹೋದರು. ಅಲ್ಲಿ ರಾಮನು ವಾನರರಾಜನೊಡನೆ ಸಖ್ಯವನ್ನು ಮಾಡಿಕೊಂಡನು. ರಾಮನು ತನ್ನ ಕಾರ್ಯವೇನೆಂದು ಹೇಳಿಕೊಳ್ಳಲು ಆ ವಾನರರು ಅಪಹರಿಸಿಕೊಂಡು ಹೋಗುತ್ತಿರುವಾಗ ಸೀತೆಯು ತಮ್ಮ ಮಧ್ಯೆ ಎಸೆದಿದ್ದ ವಸ್ತ್ರವನ್ನು ಅವನಿಗೆ ತೋರಿಸಿದರು. ವಾನರರಾಜ ಸುಗ್ರೀವನು ತನ್ನ ವಿಶ್ವಾಸಕ್ಕೆ ಅರ್ಹನಾದವನೆಂದು ತಿಳಿದು ರಾಮನು ಅವನನ್ನು ಪೃಥ್ವಿಯ ವಾನರೇಶ್ವರನೆಂದು ಅಭಿಷೇಕಿಸಿದನು, ರಾಮನು ಸಮರದಲ್ಲಿ ವಾಲಿಯನ್ನು ವಧಿಸುವೆನೆಂದೂ ಸುಗ್ರೀವನು ವೈದೇಹಿಯನ್ನು ಪುನಃ ತರುವೆನೆಂದೂ ಪ್ರತಿಜ್ಞೆಗಳನ್ನು ಮಾಡಿ ಪರಸ್ಪರ ವಿಶ್ವಾಸದಿಂದ ಒಪ್ಪಂದವನ್ನು ಮಾಡಿಕೊಂಡು ಅವರೆಲ್ಲರೂ ಯುದ್ಧಾಕಾಂಕ್ಷಿಗಳಾಗಿ ಕಿಷ್ಕಿಂಧೆಗೆ ಬಂದರು.

ಕಿಷ್ಕಿಂಧೆಗೆ ಬಂದು ಸುಗ್ರೀವನು ಕೂಗಿ ಕರೆಯಲು ವಾಲಿಗೆ ಅದನ್ನು ಸಹಿಸಲಾಗಲಿಲ್ಲ. ಆಗ ತಾರೆಯು “ಸುಗ್ರೀವನು ಕೂಗುವ ರೀತಿಯನ್ನು ನೋಡಿದರೆ ಅವನಿಗೆ ಆಶ್ರಯವನ್ನು ನೀಡುವವನು ದೊರಕಿದ್ದಾನೆ ಎಂದೆನಿಸುತ್ತದೆ. ನೀನು ಹೊರಹೋಗಬಾರದು” ಎಂದು ಅವನನ್ನು ತಡೆದಳು. ಆಗ ವಾನರಪತಿ ವಾಲಿಯು “ನೀನು ಎಲ್ಲ ಭೂತಗಳ ಕೂಗುಗಳನ್ನೂ ಗುರುತಿಸಬಲ್ಲೆ! ನಿನಗೆ ಬುದ್ಧಿಯಿಂದ ನೋಡುವ ಶಕ್ತಿಯೂ ಇದೆ. ನನ್ನ ಈ ಸುಳ್ಳು ತಮ್ಮನು ಯಾರ ಆಶ್ರಯವನ್ನು ಪಡೆದಿದ್ದಾನೆ ಹೇಳು” ಎಂದು ತಾರೆಯನ್ನು ಕೇಳಿದನು. ಸ್ವಲ್ಪಹೊತ್ತು ಆಲೋಚಿಸಿ ತಾರೆಯು ಪತಿಗೆ ಉತ್ತರಿಸಿದಳು: “ಕಪೀಶ್ವರ! ಎಲ್ಲವನ್ನೂ ಕೇಳು. ಪತ್ನಿಯನ್ನು ಕಳೆದುಕೊಂಡ ಮಹಾಸತ್ತ್ವಯುತ ಧನುರ್ಧಾರಿ ದಶರಥಾತ್ಮಜ ರಾಮನು ತನ್ನ ಸರಿಸಮ ಹಗೆಯನ್ನು ಇಟ್ಟುಕೊಂಡಿರುವ ಸುಗ್ರೀವನನ್ನು ಸೇರಿದ್ದಾನೆ. ಅವನ ತಮ್ಮ ಮಹಾಬಾಹು ಸೌಮಿತ್ರಿ ಅಪರಾಜಿತ ಲಕ್ಷ್ಮಣನೆಂಬ ಮೇಧಾವಿಯೂ ಅವನ ಕಾರ್ಯಾರ್ಥಸಿದ್ಧಿಗೆ ನಿಂತಿದ್ದಾನೆ. ಮೈಂದ, ದ್ವಿವಿದ, ಅನಿಲಾತ್ಮಜ ಹನೂಮಂತ ಮತ್ತು ಕರಡಿಗಳ ರಾಜ ಜಾಂಬವಾನ ಇವರು ಸುಗ್ರೀವನ ಸಚಿವರಾಗಿ ನಿಂತಿದ್ದಾರೆ. ಈ ಎಲ್ಲ ಮಹಾತ್ಮರೂ ಬುದ್ಧಿವಂತರು, ಮಹಾಬಲರು ಮತ್ತು ನಿನ್ನ ವಿನಾಶಕ್ಕಾಗಿಯೇ ರಾಮನ ವೀರ್ಯವನ್ನು ಆಶ್ರಯಿಸಿದ್ದಾರೆ.”

ಅವಳು ಗುಟ್ಟಾಗಿ ಸುಗ್ರೀವನನ್ನು ಪ್ರೀತಿಸುತ್ತಿದ್ದಾಳೆಂದು ಅಸೂಯೆಪಟ್ಟು ತನ್ನ ಹಿತಕ್ಕಾಗಿಯೇ ಹೇಳಿದ ತಾರೆಯ ಆ ಮಾತುಗಳನ್ನು ವಾಲಿಯು ಕಡೆಗಣಿಸಿದನು. ತಾರೆಗೆ ಖಾರವಾಗಿ ಮಾತನಾಡಿ ಅವನು ಗುಹೆಯ ಹೊರಗೆ ಬಂದು ಮಾಲ್ಯವತದ ಬಳಿನಿಂತಿದ್ದ ಸುಗ್ರೀವನಿಗೆ “ಮೂಢ! ನನಗೆ ಜೀವದಷ್ಟೇ ಪ್ರಿಯನಾಗಿದ್ದ ನಿನ್ನನ್ನು ನಾನು ಬಹಳಷ್ಟು ಬಾರಿ ಸೋಲಿಸಿದ್ದೇನೆ. ಅಣ್ಣನು ಬಿಡುಗಡೆ ಮಾಡುತ್ತಾನೆಂದು ತಿಳಿದು ಪುನಃ ಮರಣದ ಮಾರ್ಗದಲ್ಲಿ ಏಕೆ ತ್ವರೆಮಾಡುತ್ತಿರುವೆ?” ಎಂದನು. ಇದನ್ನು ಕೇಳಿದ ಸುಗ್ರೀವನು ಕಾಲವು ಪ್ರಾಪ್ತವಾಗಿದೆಯೆಂದು ತಿಳಿದು ರಾಮನಿಗೆ ಹೇಳುತ್ತಿರುವನೋ ಎಂಬಂತೆ, ಅಣ್ಣನಿಗೆ ಈ ಬುದ್ಧಿಮಾತನ್ನಾಡಿದನು: “ರಾಜನ್! ನಿನ್ನಿಂದ ನನ್ನ ಪತ್ನಿಯನ್ನೂ ರಾಜ್ಯವನ್ನೂ ಕಳೆದುಕೊಂಡು ಜೀವಿತದ ಸಾಮರ್ಥ್ಯವೇನು ಎಂದು ತಿಳಿದು ಇಂದು ಬಂದಿದ್ದೇನೆ.” ಈ ರೀತಿ ಬಹುವಿಧಗಳಲ್ಲಿ ಮಾತನಾಡಿ ವಾಲಿ-ಸುಗ್ರೀವರು ಶಾಲವೃಕ್ಷ-ತಾಳೆಯ ಮರ ಮತ್ತು ಕಲ್ಲುಗಳನ್ನೇ ಆಯುಧಗಳನ್ನಾಗಿಸಿ ಸೆಣಸಾಡಿದರು. ಉಗುರು-ಹಲ್ಲುಗಳಿಂದ ಗಾಯಗೊಂಡು ರಕ್ತದಲ್ಲಿ ತೋಯ್ದ ಆ ವೀರರಿಬ್ಬರೂ ಹೂಬಿಟ್ಟ ಕಿಂಶುಕ ವೃಕ್ಷಗಳಂತೆ ಶೋಭಿಸುತ್ತಿದ್ದರು. ಯುದ್ಧದಲ್ಲಿ ಅವರಿಬ್ಬರಲ್ಲಿ ಯಾವ ವ್ಯತ್ಯಾಸವೂ ಕಾಣುತ್ತಿರಲಿಲ್ಲ. ಆಗ ಹನುಮಂತನು ಸುಗ್ರೀವನ ಕಂಠಕ್ಕೆ ಮಾಲೆಯನ್ನು ಹಾಕಿದನು. ಆ ಮಾಲೆಯಿಂದ ಸುಗ್ರೀವನು ಮೇಘಮುಸುಕಿದ ಮಹಾಶೈಲ ಮಲಯದಂತೆ ಶೋಭಿಸಿದನು. ಸುಗ್ರೀವನು ಸೂಚನೆಯಿತ್ತಿದುದನ್ನು ನೋಡಿ ರಾಮನು ಮಹಾಧನುಸ್ಸನ್ನು ಸೆಳೆದು ವಾಲಿಗೆ ಗುರಿಯಿಟ್ಟನು. ಆ ಧನುಸ್ಸಿನ ಶಬ್ಧವು ಯಂತ್ರದಿಂದ ಹೊರಟಿತೋ ಎನ್ನುವಂತೆ ಕೇಳಿಬಂದಿತು. ಹೃದಯಕ್ಕೆ ಬಾಣವು ತಾಗಲು ವಾಲಿಯು ಕೆಳಗುರುಳಿದನು.

ಮರ್ಮಸ್ಥಾನಕ್ಕೆ ಪೆಟ್ಟಾಗಿ ತುಂಡಾಗಲು ಬಾಯಿಯಿಂದ ರಕ್ತವನ್ನು ಕಾರುತ್ತಾ ಅವನು ಮರೆಯಲ್ಲಿ ಜೊತೆಯಲ್ಲಿ ನಿಂತಿದ್ದ ರಾಮ-ಸೌಮಿತ್ರಿಯರನ್ನು ನೋಡಿದನು. ರಾಮನನ್ನು ನಿಂದಿಸುತ್ತಾ ಮೂರ್ಛಿತನಾಗಿ ಬಿದ್ದ ಅವನು ಭೂಮಿಗೆ ಬಿದ್ದ ತರಾಪತಿಯಂತೆ ಕಂಡನು. ವಾಲಿಯು ಹತನಾಗಲು ಸುಗ್ರೀವನು ಕಿಷ್ಕಿಂಧೆ-ತಾರೆಯನ್ನು ಮರಳಿ ಪಡೆದನು. ರಾಮನಾದರೋ ಸುಗ್ರೀವನ ಸೇವೆಯನ್ನು ಸ್ವೀಕರಿಸಿ ಚಾತುರ್ಮಾಸವನ್ನು ಶುಭ ಮಾಲ್ಯವತದ ಹಿಂದೆ ಕಳೆದನು.

ಅಶೋಕವನದಲ್ಲಿ ಸೀತಾ

ರಾವಣನು ಕಾಮಬಲದಿಂದ ಸೀತೆಯನ್ನು ಎಳೆದುಕೊಂಡು ಲಂಕಾಪುರಿಗೆ ಹೋಗಿ ಅಲ್ಲಿ ತಾಪಸರ ಆಶ್ರಮ ಮತ್ತು ನಂದನವನದಂತಿದ್ದ ಅಶೋಕವನದಲ್ಲಿ ಇರಿಸಿದನು. ಪತಿಯ ಕುರಿತು ಚಿಂತಿಸುತ್ತಾ ದೇಹದಲ್ಲಿ ಸೊರಗಿದ್ದ ತಾಪಸಿಯ ವೇಷಧರಿಸಿದ್ದ ಆ ವಿಶಾಲಾಕ್ಷಿಯು ಉಪವಾಸ ಮತ್ತು ತಪಸ್ಸಿನಲ್ಲಿಯೇ ತನ್ನನ್ನು ತೊಡಗಿಸಿಕೊಂಡಳು. ಫಲಮೂಲಗಳನ್ನು ತಿನ್ನುತ್ತಾ ಅವಳು ದುಃಖದಲ್ಲಿ ರಾತ್ರಿಗಳನ್ನು ಕಳೆದಳು. ರಾಕ್ಷಸಾಧಿಪನು ಅಲ್ಲಿ ಅವಳ ಕಾವಲಿಗೆ ಪ್ರಾಸ-ಖಡ್ಗ-ಶೂಲ-ಪರಶು-ಮುದ್ಗರ-ದೀವಟಿಗೆಗಳನ್ನು ಹಿಡಿದ ಎರಡು-ಮೂರು ಕಣ್ಣುಗಳಿದ್ದ, ಹಣೆಯಲ್ಲಿ ಕಣ್ಣಿದ್ದ, ಉದ್ದ ನಾಲಗೆಯ, ನಾಲಗೆಯೇ ಇಲ್ಲದಿದ್ದ, ಮೂರು ಮೊಲೆಗಳ, ಒಂದೇ ಕಾಲಿನ, ಮೂರು ಜಟೆಗಳ ಮತ್ತು ಒಂದೇ ಕಣ್ಣುಳ್ಳ ರಾಕ್ಷಸಿಯರನ್ನು ಇರಿಸಿದನು. ಬೆಂಕಿಕಾರುವ ಕಣ್ಣುಗಳ ಮತ್ತು ಆನೆಯ ಕೂದಲಿನಂತೆ ಹೊಳೆಯುತ್ತಿದ್ದ ಅನೇಕ ರಾಕ್ಷಸಿಯರು ಹಗಲು-ರಾತ್ರಿ ಸೀತೆಯನ್ನು ಸುತ್ತುವರೆದು ಎಡೆಬಿಡದೇ ಅವಳನ್ನು ಕಾಡುತ್ತಿದ್ದರು. ದಾರುಣಸ್ವರದ ಪಿಶಾಚಿಯರು ಅವಳನ್ನು ರೌದ್ರ ಕಠೋರ ಮಾತುಗಳಿಂದ “ನಮ್ಮ ಒಡೆಯನನ್ನು ಅಪಮಾನಿಸಿ ಜೀವಿಸುತ್ತಿರುವ ಇವಳನ್ನು ತಿನ್ನೋಣ! ಕತ್ತರಿಸಿ ಎಳ್ಳಿನಹಾಗೆ ಸಣ್ಣ ಸಣ್ಣ ತುಂಡುಮಾಡೋಣ!” ಎಂದು ಹೆದರಿಸುತ್ತಿದ್ದರು. ಅವರು ಹೀಗೆ ಅವಳನ್ನು ಪುನಃ ಪುನಃ ಬೆದರಿಸಿ ಕಾಡುತ್ತಿರಲು ಪತಿಯ ಶೋಕದಿಂದ ಆವಿಷ್ಟಳಾದ ಸೀತೆಯು ಅವರಿಗೆ ಹೆದರಿ ಹೇಳಿದಳು: “ಬಹುಬೇಗ ನನ್ನನ್ನು ತಿನ್ನಿರಿ! ಆ ಕಪ್ಪುಗೂದಲಿನ ಪುಂಡರೀಕಾಕ್ಷನ ವಿನಾ ನನಗೆ ಜೀವದ ಮೇಲೆ ಆಸೆಯಿಲ್ಲ. ಪ್ರಿಯನಿಂದ ವರ್ಜಿತಳಾದ ನಾನು ನೀರು-ಆಹಾರಗಳನ್ನು ತೊರೆದು ತಾಳೆಯ ಮರದ ಮೇಲಿರುವ ಹಾವಿನಂತೆ ನನ್ನ ದೇಹವನ್ನು ಶೋಷಿಸುತ್ತೇನೆ. ಆದರೆ ನಾನು ರಾಘವನ ಹೊರತು ಬೇರೆ ಯಾವುದೇ ಪುರುಷನ ಬಳಿಸಾರುವುದಿಲ್ಲ. ಇದು ಸತ್ಯವೆಂದು ತಿಳಿಯಿರಿ.” ಅವಳ ಈ ಮಾತನ್ನು ಕೇಳಿ ಆ ಖರಸ್ವನ ರಾಕ್ಷಸಿಯರು ರಾಕ್ಷಸೇಂದ್ರನಲ್ಲಿಗೆ ಹೋಗಿ ನಡೆದುದೆಲ್ಲವನ್ನೂ ವರದಿ ಮಾಡಿದರು.

ಅವರೆಲ್ಲರೂ ಹೊರಟುಹೋದ ನಂತರ ತ್ರಿಜಟಾ ಎಂಬ ಹೆಸರಿನ ಧರ್ಮಜ್ಞೆ ಪ್ರಿಯವಾದಿನಿ ರಾಕ್ಷಸಿಯು ವೈದೇಹಿಯನ್ನು ಸಂತವಿಸಿದಳು: “ಸೀತೇ! ಸಖಿ! ನಿನಗೆ ಏನೋ ಸ್ವಲ್ಪ ಹೇಳುತ್ತೇನೆ. ನನ್ನ ಮೇಲೆ ವಿಶ್ವಾಸವಿಟ್ಟು, ನಿನ್ನ ಭಯವನ್ನು ನಾಶಗೊಳಿಸುವ ನನ್ನ ಈ ಮಾತನ್ನು ಕೇಳು. ರಾಮನ ಹಿತಾನ್ವೇಷಿಯಾಗಿರುವ ಅವಿಂಧ್ಯ ಎಂಬ ಮೇಧಾವೀ ವೃದ್ಧ ರಾಕ್ಷಸಪುಂಗವನು ನಿನ್ನ ಕುರಿತು ನನ್ನಲ್ಲಿ ಈ ಮಾತುಗಳನ್ನಾಡಿದ್ದನು: ’ಸೀತೆಯನ್ನು ಸಮಾಧಾನ ಪಡೆಸಿ ವಿಶ್ವಾಸಮೂಡಿಸಿದ ನಂತರ ನನ್ನ ಈ ಮಾತುಗಳನ್ನು ಅವಳಿಗೆ ತಿಳಿಸು. ನಿನ್ನ ಪತಿ ರಾಮ ಮತ್ತು ಅವನ ಬಲಶಾಲಿ ತಮ್ಮ ಲಕ್ಷ್ಮಣರು ಕುಶಲರಾಗಿದ್ದಾರೆ. ನಿನ್ನ ಸಲುವಾಗಿ ರಾಘವನು ವಾನರರಾಜನೊಂದಿಗೆ ಸಖ್ಯಮಾಡಿಕೊಂಡು ಸಿದ್ಧನಾಗಿದ್ದಾನೆ. ಲೋಕಗಳೇ ನಿಂದಿಸುತ್ತಿರುವ ರಾವಣನ ಕುರಿತು ನಿನಗೆ ಭಯವಿಲ್ಲದಿರಲಿ. ನಲಕೂಬರನು ರಾವಣನಿಗಿತ್ತಿದ್ದ ಶಾಪವು ನಿನ್ನನ್ನು ರಕ್ಷಿಸುತ್ತಿದೆ. ರಾವಣನು ಹಿಂದೆ ರಂಭೆಯನ್ನು ತನ್ನ ಪತ್ನಿಯನ್ನಾಗಿ ಪಡೆಯಲು ಪ್ರಯತ್ನಿಸಿದುದಕ್ಕೆ ವಿವಶ ನಾರಿಯನ್ನು ಹೊಂದಲು ಅವನು ಅಶಕ್ತನಾಗುತ್ತಾನೆಂಬ ಶಾಪಕ್ಕೊಳಗಾಗಿದ್ದನು. ಸುಗ್ರೀವನಿಂದ ರಕ್ಷಿತನಾಗಿ ನಿನ್ನ ಪತಿಯು ಸೌಮಿತ್ರಿಯ ಸಹಿತ ಕ್ಷಿಪ್ರವಾಗಿ ಬರುತ್ತಾನೆ ಮತ್ತು ನಿನ್ನನ್ನು ಇಲ್ಲಿಂದ ಬಿಡುಗಡೆ ಮಾಡುತ್ತಾನೆ. ರಾವಣನ ವಿನಾಶವನ್ನು ತೋರಿಸುವ ಮಹಾಘೋರ ಅನಿಷ್ಟ ಸ್ವಪ್ನವನ್ನೂ ನಾನು ಕಂಡಿದ್ದೇನೆ. ಆ ದಾರುಣ ದುಷ್ಟಾತ್ಮ ನಿಶಾಚರನು ತನಗೆ ಸ್ವಾಭಾವಿಕವಾಗಿರುವ ಶೀಲದೋಷದಿಂದ ಎಲ್ಲರ ಭಯವನ್ನೂ ಹೆಚ್ಚಿಸುತ್ತಾನೆ. ಸರ್ವದೇವತೆಗಳೊಂದಿಗೆ ಸ್ಪರ್ಧಿಸುವ ಆ ಕಾಲೋಪಹತಚೇತನನ ವಿನಾಶದ ಸೂಚನೆಗಳನ್ನು ನಾನು ಸ್ವಪ್ನದಲ್ಲಿ ಕಂಡಿದ್ದೇನೆ. ದಶಾನನನು ತೈಲದಲ್ಲಿ ಸ್ನಾನಮಾಡಿ ಹೊಳೆಯುತ್ತಾ ಕೆಸರಿನಲ್ಲಿ ಮುಳುಗುತ್ತಿರುವುದನ್ನು ಮತ್ತು ಕತ್ತೆಗಳು ಎಳೆದುಕೊಂಡು ಹೋಗುತ್ತಿದ್ದ ರಥದ ಮೇಲೆ ನಿಂತು ಕುಣಿಯುತ್ತಿರುವುದನ್ನು ನಾನು ಕಂಡೆನು. ಕುಂಭಕರ್ಣ ಮತ್ತು ಇತರರು ನಗ್ನರಾಗಿ ತಲೆಕೂದಲನ್ನು ಕೆದರಿಕೊಂಡು ಕೆಂಪು ಬಣ್ಣವನ್ನು ಬಳಿದುಕೊಂಡು ಕೆಂಪುಮಾಲೆಯನ್ನು ಧರಿಸಿ ದಕ್ಷಿಣದ ಕಡೆ ಎಳೆದೊಯ್ಯಲ್ಪಡುತ್ತಿದ್ದುದನ್ನು ಕನಸಿನಲ್ಲೆ ಕಂಡೆ. ಉಳಿದ ವಿಭೀಷಣನೊಬ್ಬನೇ ಬಿಳಿಗೊಡೆಯಡಿಯಲ್ಲಿ ಬಿಳಿಯ ಮಾಲೆ-ವಸ್ತ್ರಗಳನ್ನು ಧರಿಸಿ ಶ್ವೇತಪರ್ವತವನ್ನೇರಿದುದನ್ನು ನೋಡಿದೆ. ಅವನ ನಾಲ್ವರು ಸಚಿವರು ಬಿಳಿಯ ಮಾಲೆ ಅನುಲೇಪನಗಳನ್ನು ಧರಿಸಿ ಶ್ವೇತಪರ್ವತವನ್ನೇರಿ ನಮ್ಮನ್ನು ಮಹಾಭಯದಿಂದ ಬಿಡುಗಡೆಮಾಡಿದುದನ್ನು ನೋಡಿದೆ. ನಿನ್ನ ಪತಿ ರಾಮನು ಸಾಗರದಿಂದ ಸುತ್ತುವರೆಯಲ್ಪಟ್ಟಿರುವ ಇಡೀ ಪೃಥ್ವಿಯನ್ನೇ ಶರಗಳಿಂದ ಮುಚ್ಚಿ ಯಶಸ್ಸಿನಿಂದ ತುಂಬಿಸುತ್ತಾನೆ. ಲಕ್ಷ್ಮಣನಾದರೋ ಎಲಬುಗಳ ರಾಶಿಯ ಮೇಲೇರಿ ಮಧುಪಾಯಸವನ್ನು ಸೇವಿಸುತ್ತಾ ಸುತ್ತಲೂ ನಿರೀಕ್ಷಿಸುತ್ತಿರುವುದನ್ನು ನಾನು ಕಂಡೆ. ರಕ್ತದಿಂದ ತೋಯ್ದು ಅಳುತ್ತಿದ್ದ ನೀನು ಹುಲಿಯಿಂದ ರಕ್ಷಿತಳಾಗಿ ಉತ್ತರ ದಿಕ್ಕಿನಲ್ಲಿ ಹೋಗುತ್ತಿರುವುದನ್ನೂ ಕಂಡೆ. ಪತಿಯನ್ನು ಸೇರಿ ನೀನು ಶೀಘ್ರದಲ್ಲಿಯೇ ಹರ್ಷವನ್ನು ಹೊಂದುತ್ತೀಯೆ. ಸ್ವಲ್ಪವೇ ಸಮಯದಲ್ಲಿ ನೀನು ರಾಘವ ಮತ್ತು ಜೊತೆಗೆ ಅವನ ತಮ್ಮನನ್ನು ಸೇರುವೆ!’” ಈ ರೀತಿ ತ್ರಿಜಟೆಯ ಮಾತುಗಳನ್ನು ಕೇಳಿ ಸೀತೆಯು ಪತಿಯ ಪುನರ್ಮಿಲನದ ಕುರಿತಾದ ಆಸೆಯನ್ನು ಪುನಃ ಪಡೆದುಕೊಂಡಳು.

ಆಗ ಕಾಮಬಾಣಾರ್ತನಾದ ರಾವಣನು ಪತಿವ್ರತೆ ಸೀತೆಯನ್ನು ನೋಡಲು ಹೊರಟನು. ದೇವ-ದಾನವ-ಯಕ್ಷ-ಕಿಂಪುರುಷರಿಂದ ಯುದ್ಧದಲ್ಲಿ ಅಜೇಯನಾಗಿದ್ದ ಆ ಕಂದರ್ಪಮೋಹಿತನು ಅಶೋಕವನಕ್ಕೆ ಬಂದನು. ದಿವ್ಯಾಂಬರಗಳನ್ನೂ, ಹೊಳೆಯುತ್ತಿರುವ ಮಣಿಕುಂಡಲಗಳನ್ನೂ, ಬಣ್ಣಬಣ್ಣದ ಮಾಲೆ-ಮುಕುಟಗಳನ್ನೂ ಧರಿಸಿದ್ದ ರಾವಣನು ವಸಂತನೇ ಮೂರ್ತಿಮತ್ತಾಗಿ ಬಂದಂತೆ ತೋರುತ್ತಿದ್ದನು, ಜಾಗೃತೆಯಿಂದ ಅಲಂಕರಿಸಿಕೊಂಡಿದ್ದ ಅವನು ಕಲ್ಪವೃಕ್ಷದಂತೆ ಸುಂದರನಾಗಿ ಶೋಭಿಸುತ್ತಿದ್ದರೂ ಸ್ಮಶಾನದಲ್ಲಿರುವ ಅಶ್ವತ್ಥವೃಕ್ಷದಂತೆ ಭಯಂಕರನಾಗಿ ಕಾಣುತ್ತಿದ್ದನು. ತನುಮಧ್ಯಮೆ ಸೀತೆಯ ಸಮೀಪದಲ್ಲಿದ್ದ ಆ ರಜನೀಚರನು ರೋಹಿಣಿಯ ಸಮೀಪದಲ್ಲಿದ್ದ ಶನೈಶ್ಚರ ಗ್ರಹದಂತೆ ಕಂಡನು. ಪುಷ್ಟಕೇತು ಮನ್ಮಥನ ಶರಗಳಿಂದ ಘಾತಿಗೊಂಡಿದ್ದ ಅವನು ಹೆದರಿದ ಪಾರಿವಾಳದಂತೆ ನಡುಗುತ್ತಿದ್ದ ಬಾಲೆ ಸೀತೆಯನ್ನು ಕರೆದು ಹೇಳಿದನು: “ಸೀತೆ! ನೀನು ನಿನ್ನ ಪತಿಯ ಮೇಲೆ ಸಾಕಷ್ಟು ಅನುಗ್ರಹವನ್ನು ಮಾಡಿಯಾಯಿತು. ಈಗ ನನ್ನ ಮೇಲೆ ಕರುಣೆತೋರು! ನಿನ್ನನ್ನು ಸಿಂಗರಿಸುತ್ತೇನೆ. ಮಹಾರ್ಹ ಆಭರಣ-ವಸ್ತ್ರಗಳನ್ನು ಧರಿಸಿ ನನ್ನನ್ನು ಪ್ರೀತಿಸು. ನನ್ನ ಎಲ್ಲ ನಾರಿಗಳಲ್ಲಿ ಉತ್ತಮಳಾಗು. ನನ್ನಲ್ಲಿ ದೇವಕನ್ಯೆಯರಿದ್ದಾರೆ ಮತ್ತು ರಾಜರ್ಷಿಗಳ ಅಂಗನೆಯರಿದ್ದಾರೆ. ದಾನವ ಕನ್ಯೆಯರೂ ದೈತ್ಯಸುತೆಯರೂ ಇದ್ದಾರೆ. ಹದಿನಾಲ್ಕು ಕೋಟಿ ಪಿಶಾಚಿಗಳು ಮತ್ತು ಅದಕ್ಕೂ ಎರಡು ಪಟ್ಟು ಮನುಷ್ಯರನ್ನು ತಿನ್ನುವ ಭೀಮಕರ್ಮಿ ರಾಕ್ಷಸರು ನನ್ನ ಆಜ್ಞೆಗಾಗಿ ಕಾಯುತ್ತಾ ನಿಂತಿದ್ದಾರೆ. ಅದಕ್ಕೂ ಮೂರು ಪಟ್ಟು ಯಕ್ಷರು ನನ್ನ ಮಾತಿನಂತೆ ಮಾಡುವವರಿದ್ದಾರೆ. ಅವರಲ್ಲಿ ಕೆಲವರು ನನ್ನ ಅಣ್ಣ ಕುಬೇರನೊಡನಿದ್ದಾರೆ. ನಾನು ಪಾನೀಯಕ್ಕೆಂದು ಹೋದಾಗ ಗಂಧರ್ವರೂ ಅಪ್ಸರೆಯರೂ, ನನ್ನ ಅಣ್ಣ ಕುಬೇರನಿಗೆ ಹೇಗೋ ಹಾಗೆ, ನನ್ನ ಸೇವೆಗೈಯುತ್ತಾರೆ. ವಿಪ್ರರ್ಷಿ ವಿಶ್ರವಸುವಿನ ಮಗನಾದ ನಾನು ಐದನೆಯ ಲೋಕಪಾಲನೆಂದು ಪ್ರತಿಥನಾಗಿ ಯಶಸ್ವಿಯಾಗಿದ್ದೇನೆ. ಭಾಮಿನಿ! ತ್ರಿದಶೇಶನಲ್ಲಿ ಇದ್ದಂತೆ ನನ್ನಲ್ಲಿಯೂ ಬಗೆಬಗೆಯ ದಿವ್ಯ ಭಕ್ಷ್ಯ-ಭೋಜ್ಯ-ಪಾನೀಯಗಳಿವೆ. ವನವಾಸದಲ್ಲಿನ ನಿನ್ನ ಈ ದುಷ್ಕೃತ ಕರ್ಮಗಳು ಕೊನೆಗೊಳ್ಳಲಿ. ಸುಶ್ರೋಣಿ! ಮಂಡೋದರಿಯಂತೆ ನನ್ನ ಭಾರ್ಯೆಯಾಗು!”

ರಾವಣನು ಹೀಗೆ ಹೇಳಲು ಪತಿಯೇ ದೇವತೆಯೆಂದು ತಿಳಿದಿದ್ದ ಆ ಶುಭಾನನೆ ಸೀತೆಯು ಒಂದು ಹುಲ್ಲುಕಡ್ಡಿಯನ್ನು ಮಧ್ಯಮಾಡಿಕೊಂಡು ಆ ಕ್ಷುದ್ರ ನಿಶಾಚರನಿಗೆ ಹೇಳಿದಳು: “ರಾಕ್ಷಸೇಶ್ವರ! ಅಭಾಗ್ಯೆಯಾದ ನಾನು ಈ ತರಹದ ವಿಶಾದ ಮತ್ತು ನಿರಾಶಾಯುಕ್ತವಾದ ಮಾತುಗಳನ್ನು ಕೇಳುತ್ತಿದ್ದೇನೆ. ಇಷ್ಟೊಂದು ಸುಖದಲ್ಲಿರುವ ನಿನಗೆ ಮಂಗಳವಾಗಲಿ! ಈ ಆಸೆಯನ್ನು ನಿನ್ನ ಮನಸ್ಸಿನಿಂದ ತೆಗೆದು ಹಾಕು. ಪತಿವ್ರತೆಯಾದ ನಾನು ಇನ್ನೊಬ್ಬನ ಪತ್ನಿ. ನಿನಗೆ ದೊರೆಯದವಳು. ಕೃಪಣ ಮನುಷ್ಯಳಾದ ನಾನು ನಿನ್ನ ಪತ್ನಿಯಾಗಲು ಅರ್ಹಳಿಲ್ಲ. ವಿವಶಳಾಗಿರುವವಳನ್ನು ಬಲಾತ್ಕರಿಸಿ ನೀನು ಯಾವ ಪ್ರೀತಿಯನ್ನು ಪಡೆಯಬಲ್ಲೆ? ನಿನ್ನ ತಂದೆಯು ಬ್ರಹ್ಮಯೋನಿಯಲ್ಲಿ ಜನಿಸಿ ಪ್ರಜಾಪತಿ ಸಮ ವಿಪ್ರನು. ಲೋಕಪಾಲನಂತಿರುವ ನೀನೇ ಏಕೆ ಧರ್ಮವನ್ನು ಪಾಲಿಸುತ್ತಿಲ್ಲ? ನಿನ್ನ ಅಣ್ಣ ಧನೇಶ್ವರನ ಹೆಸರು ತೆಗೆದುಕೊಳ್ಳಲು ನಿನಗೆ ನಾಚಿಕೆಯಾಗುವುದಿಲ್ಲವೇ?” ಹೀಗೆ ಅವಳು ತಲೆತಗ್ಗಿಸಿ ಮುಖವನ್ನು ಸೆರಗಿನಿಂದ ಮುಚ್ಚಿಕೊಂಡು ಅಳತೊಡಗಿದಳು.

ಸೀತೆಯು ಈ ಅತಿ ನಿಷ್ಟುರ ಮಾತುಗಳಿಂದ ತಿರಸ್ಕರಿಸಿದರೂ ದುರ್ಬುದ್ಧಿ ರಾವಣನು ಪುನಃ ಹೇಳಿದನು: “ಸೀತೆ! ಮಕರಧ್ವಜನು ಕಾಮದಿಂದ ನನ್ನ ಅಂಗಾಂಗಗಳನ್ನು ಸುಡುತ್ತಿದ್ದರೂ ಬಯಸದಿರುವ ನಿನ್ನನ್ನು ನಾನು ಕೂಡುವುದಿಲ್ಲ, ಇನ್ನೂ ನೀನು ನಮಗೆ ಆಹಾರವಾದ ಮನುಷ್ಯ ರಾಮನನ್ನೇ ಬಯಸುತ್ತೀಯಾದರೆ ನಾನು ಏನು ತಾನೇ ಮಾಡಬಲ್ಲೆ?” ಹೀಗೆ ಹೇಳಿ ಆ ರಾಕ್ಷಸಗಣೇಶ್ವರನು ಅಲ್ಲಿಯೇ ಅಂತರ್ಧಾನನಾಗಿ ಹೊರಟು ಹೋದನು. ಶೋಕಕರ್ಶಿತಳಾದ ವೈದೇಹಿಯು ರಾಕ್ಷಸಿಯರಿಂದ ಪರಿವೃತಳಾಗಿ, ತ್ರಿಜಟೆಯಿಂದ ಸೇವಿಸಲ್ಪಟ್ಟು ಅಲ್ಲಿಯೇ ಇದ್ದಳು.

ಸೀತಾನ್ವೇಷಣೆ

ಸುಗ್ರೀವನ ರಕ್ಷಣೆಯಲ್ಲಿ ಸೌಮಿತ್ರಿಯೊಡನೆ ಮಾಲ್ಯವತ ಶಿಖರದಲ್ಲಿ ಚಾತುರ್ಮಾಸಗಳನ್ನು ಕಳೆದ ರಾಘವನು ಮೋಡವಿಲ್ಲದ ಆಗಸವನ್ನು ನೋಡಿದನು. ಆ ಅಮಿತ್ರಹನು ವಿಮಲ ವ್ಯೋಮಿಯಲ್ಲಿ ಗ್ರಹ-ನಕ್ಷತ್ರ-ತಾರೆಗಳು ಹಿಂಬಾಲಿಸಿಕೊಂಡು ಹೋಗುತ್ತಿದ್ದ ನಿರ್ಮಲ ಶಶಿಯನ್ನು ಕಂಡನು. ಆ ಪರ್ವತದ ಮೇಲೆ ಗಾಳಿಯು ಹೊತ್ತುತಂದ ವಿಕಸಿತ ಕುಮುದ-ಕಮಲಗಳ ಸುವಾಸನೆಯನ್ನು ಆಘ್ರಾಣಿಸಿದ ಅವನು ತಕ್ಷಣವೇ ಎಚ್ಚರಗೊಂಡವನಂತಾದನು. ರಾಕ್ಷಸನ ಮನೆಯಲ್ಲಿ ಬಂಧಿಯಾಗಿರುವ ಸೀತೆಯನ್ನು ನೆನಪಿಸಿಕೊಂಡು ಮನಸ್ಸು ಕೆಟ್ಟವನಂತಾಗಿ ಅವನು ಬೆಳಗಾಗುತ್ತಲೇ ವೀರ ಲಕ್ಷ್ಮಣನಿಗೆ ಈ ಮಾತುಗಳನ್ನಾಡಿದನು: “ಲಕ್ಷ್ಮಣ! ಕಿಷ್ಕಿಂಧೆಗೆ ಹೋಗಿ ಸ್ವಾರ್ಥದ ಕುರಿತೇ ಯೋಚಿಸುತ್ತಾ ಗ್ರಾಮ್ಯಧರ್ಮದಲ್ಲಿ ಪ್ರಮತ್ತನಾಗಿರುವ ಆ ಕೃತಘ್ನ ಕಪೀಶ್ವರನ ಮತವೇನೆಂದು ತಿಳಿದು ಬಾ! ಯಾರನ್ನು ನಾನು ಸರ್ವವಾನರ-ಕರಡಿಗಳ ರಾಜನನ್ನಾಗಿ ಅಭಿಷೇಕಿಸಿದೆನೋ ಮತ್ತು ಯಾರಿಗೋಸ್ಕರ ಅಂದು ನಾನು ನಿನ್ನೊಡನೆ ಕಿಷ್ಕಿಂಧೆಯ ಉಪವನದಲ್ಲಿ ವಾಲಿಯನ್ನು ಸಂಹರಿಸಿದೆನೋ ಆ ಸುಗ್ರೀವನು ಕುಲಾಧಮ ಮತ್ತು ಮೂಢ! ನನ್ನ ಪರಿಸ್ಥಿತಿಯ ಕುರಿತು ಸ್ವಲ್ಪವೂ ಯೋಚಿಸುತ್ತಿರದ ಆ ಮೂಢ ಕೃತಘ್ನನು ಭುವಿಯಲ್ಲಿಯೇ ಅತಿ ಕೆಟ್ಟ ವಾನರನೆಂದು ತಿಳಿಯುತ್ತೇನೆ. ಅವನಿಗೆ ಒಪ್ಪಂದವನ್ನು ಮನ್ನಿಸಿ ಅದರಂತೆ ನಡೆದುಕೊಳ್ಳಲು ಗೊತ್ತಿಲ್ಲವೆಂದು ನನಗನ್ನಿಸುತ್ತಿದೆ. ಅವನ ಅಲ್ಪ ಬುದ್ಧಿಯು ಉಪಕಾರಮಾಡಿದ ನನ್ನನ್ನು ಕೀಳಾಗಿ ಪರಿಗಣಿಸುತ್ತಿದೆ. ಅವನು ಅಲ್ಲಿ ಕಾಮಸುಖದಲ್ಲಿ ಮುಳುಗಿ ಸೋಮಾರಿಯಾಗಿ ಮಲಗಿದ್ದರೆ ಅವನನ್ನು ನೀನು ಎಲ್ಲರೂ ಹೋಗುವ ವಾಲಿಯ ಮಾರ್ಗಕ್ಕೆ ಕಳುಹಿಸು! ಈಗಲಾದರೂ ಆ ವಾನರಪುಂಗವನು ನಮ್ಮ ಕಾರ್ಯದಲ್ಲಿ ನಿರತನಾಗಿದ್ದರೆ ಅವನನ್ನು ಇಲ್ಲಿಗೆ ಕರೆದುಕೊಂಡು ಬಾ! ತ್ವರೆಮಾಡು! ತಡಮಾಡಬೇಡ!”

ಅಣ್ಣನು ಹೀಗೆ ಹೇಳಲು ಹಿರಿಯರ ವಾಕ್ಯಹಿತರತ ಲಕ್ಷ್ಮಣನು ಸುಂದರ ಗುಣಯುಕ್ತ ಮಾರ್ಗಣಗಳಿಂದ ಕೂಡಿದ ಧನುಸ್ಸನ್ನು ಹಿಡಿದು ದ್ವಾರದಲ್ಲಿ ಯಾರಿಂದಲೂ ತಡೆಯಲ್ಪಡದೇ ಕಿಷ್ಕೆಂಧೆಯನ್ನು ಪ್ರವೇಶಿಸಿದನು. ಲಕ್ಷ್ಮಣನು ಕುಪಿತನಾಗಿದ್ದಾನೆಂದು ಪರಿಗಣಿಸಿದ ಕಪಿರಾಜ ಸುಗ್ರೀವನು ತನ್ನ ಸತಿಯೊಡನೆ ಹೊರಬಂದು ಅವನನ್ನು ಸಂಧಿಸಿ, ವಿನೀತನಾಗಿ ಪೂಜಿಸಿ, ಪ್ರೀತಿಯಿಂದ ಬರಮಾಡಿಕೊಂಡನು. ಸೌಮಿತ್ರಿಯು ನಿರ್ಭಯನಾಗಿ ಅವನಿಗೆ ರಾಮನ ಮಾತುಗಳನ್ನು ಹೇಳಿದನು. ಸತಿ-ಸೇವಕರೊಂದಿಗೆ ಅದನ್ನು ಸಂಪೂರ್ಣವಾಗಿ ಕೇಳಿದ ವಾನರಾಧಿಪ ಸುಗ್ರೀವನು ನರಕುಂಜರ ಲಕ್ಷ್ಮಣನಿಗೆ ಕೈಮುಗಿದು ಪ್ರೀತಿಯ ಈ ಮಾತುಗಳನ್ನಾಡಿದನು: “ಲಕ್ಷ್ಮಣ! ನಾನು ದುರ್ಬುದ್ಧಿಯೂ, ಕೃತಘ್ನನೂ, ಅಥವಾ ನಿಷ್ಕರುಣಿಯೂ ಅಲ್ಲ. ನಾನು ಸೀತೆಯನ್ನು ಹುಡುಕಲು ಏನೇನು ಪ್ರಯತ್ನಗಳನ್ನು ಮಾಡಿದ್ದೇನೆ ಎನ್ನುವುದನ್ನು ಕೇಳು. ಪರಿಣಿತ ಕಪಿಗಳನ್ನು ಎಲ್ಲ ದಿಕ್ಕುಗಳಿಗೂ ಕಳುಹಿಸಿದ್ದೇನೆ. ಒಂದು ತಿಂಗಳಿನಲ್ಲಿ, ಮೊದಲೇ ನಿಗದಿ ಮಾಡಿದ ದಿನದಂದು, ಅವರೆಲ್ಲರೂ ಮರಳಿ ಬರುತ್ತಾರೆ. ಅವರೆಲ್ಲರೂ ಕಾಡು-ಪರ್ವತ-ನಗರ-ಗ್ರಾಮ-ಪಟ್ಟಣ-ಗಣಿಗಳನ್ನು ಸೇರಿಸಿ ಈ ಸಾಗರಾಂಬರೆ ಭೂಮಿಯಲ್ಲಿ ಎಲ್ಲಕಡೆ ಹುಡುಕುತ್ತಿದ್ದಾರೆ. ಇನ್ನು ಐದು ರಾತ್ರಿಗಳಿಗೆ ಒಂದು ತಿಂಗಳು ತುಂಬುತ್ತದೆ. ನಾನು ಮಾಡಿದ ಈ ಪ್ರಿಯ ಕಾರ್ಯದ ಕುರಿತು ನೀನು ರಾಮನಿಗೆ ಹೇಳಬೇಕು.”

ಧೀಮತ ವಾನರೇಂದ್ರನು ಹೀಗೆ ಹೇಳಲು ಲಕ್ಷ್ಮಣನು ರೋಷವನ್ನು ತ್ಯಜಿಸಿ ಸುಗ್ರೀವನನ್ನು ಪ್ರತಿಪೂಜಿಸಿದನು. ಅವನು ಸುಗ್ರೀವನನ್ನು ಜೊತೆಯಲ್ಲಿ ಕರೆದುಕೊಂಡು ಮಾಲ್ಯಪರ್ವತದ ಮೇಲಿದ್ದ ರಾಮನಲ್ಲಿಗೆ ಹೋಗಿ ಸುಗ್ರೀವನು ನಡೆಸಿದ್ದ ಕಾರ್ಯದ ಕುರಿತು ವರದಿಮಾಡಿದನು. ಮಾತುಕೊಟ್ಟಿದ್ದಂತೆ ಮೂರು ದಿಕ್ಕುಗಳಿಂದ ಸಹಸ್ರಾರು ವಾನರೇಂದ್ರರು ಬಂದು ಸೇರಿದರು. ಆದರೆ ದಕ್ಷಿಣಕ್ಕೆ ಹೋದವರು ಬರಲಿಲ್ಲ. ಬಂದವರು ಇಡೀ ಭೂಮಿಯನ್ನು ಹುಡುಕಿದರೂ ವೈದೇಹಿಯ ಅಥವಾ ರಾವಣನ ದರ್ಶನವಾಗಲಿಲ್ಲವೆಂದು ಹೇಳಿದರು. ದಕ್ಷಿಣಕ್ಕೆ ಹೋಗಿದ್ದ ವಾನರಪುಂಗವರ ಮೇಲೆ ಆಸೆಯನ್ನಿಟ್ಟು ಕಾಕುತ್ಸ್ಥನು ತನ್ನ ಆರ್ತ ಪ್ರಾಣವನ್ನು ಸಹಿಸಿಕೊಂಡಿದ್ದನು. ಎರಡು ತಿಂಗಳ ನಂತರ ಕೆಲವು ಕಪಿಗಳು ತ್ವರೆಯಿಂದ ಸುಗ್ರೀವನ ಬಳಿಬಂದು “ರಾಜನ್! ಹಿಂದೆ ವಾಲಿ ಮತ್ತು ಈಗ ನೀನು ಪ್ರಯತ್ನದಿಂದ ರಕ್ಷಿಸುತ್ತಿರುವ ಮಧುವನದಲ್ಲಿ ನೀನು ದಕ್ಷಿಣದಿಕ್ಕಿಗೆ ಕಳುಹಿಸಿದ ಪವನಾತ್ಮಜ ಹನೂಮಂತ, ವಾಲಿಪುತ್ರ ಅಂಗದ ಮತ್ತು ಇತರ ಕಪಿವೀರರು ಆನಂದಿಸುತ್ತಿದ್ದಾರೆ“ ಎಂದು ವರದಿ ಮಾಡಿದರು. ಅವರ ಈ ಆಟ-ಚೇಷ್ಟೆಗಳ ಕುರಿತು ಕೇಳಿದ ಸುಗ್ರೀವನು ಕೃತಾರ್ಥ ಸೇವಕರೇ ಈ ರೀತಿ ಮಾಡುತ್ತಾರೆಂದು ತಿಳಿದು ಹನೂಮಂತ-ಅಂಗದಾದಿಗಳು ಯಶಸ್ವಿಗಳಾಗಿದ್ದಾರೆಂದು ಅರ್ಥಮಾಡಿಕೊಂಡನು. ಅದನ್ನು ಕೇಳಿದ ರಾಮನೂ ಕೂಡ ಅವರು ಮೈಥಿಲಿಯನ್ನು ಕಂಡಿದ್ದಾರೆಂದು ಅನುಮಾನಿಸಿದನು.

ಹನೂಮಂತ ಮತ್ತು ಇತರ ಕಪಿಪ್ರಮುಖರು ವಿಶ್ರಾಂತಿಪಡೆದಾದ ನಂತರ ರಾಮ-ಲಕ್ಷ್ಮಣರ ಸನ್ನಿಧಿಯಲ್ಲಿ ಸುಗ್ರೀವನ ಬಳಿಬಂದರು. ಹನೂಮಂತನ ನಡಿಗೆ ಮತ್ತು ಮುಖವರ್ಣವನ್ನು ನೋಡಿ ರಾಮನು ಇವನು ಸೀತೆಯನ್ನು ನೋಡಿಯೇ ಬರುತ್ತಿದ್ದಾನೆ ಎಂದು ತಿಳಿದುಕೊಂಡನು. ಹನೂಮಂತನ ನಾಯಕತ್ವದಲ್ಲಿ ಆ ವಾನರರು ಮನತುಂಬಿದವರಾಗಿ ರಾಮ, ಸುಗ್ರೀವ ಮತ್ತು ಲಕ್ಷ್ಮಣರಿಗೆ ವಿಧಿವತ್ತಾಗಿ ನಮಸ್ಕರಿಸಿದರು. ಶರಗಳೊಂದಿಗೆ ಧನುಸ್ಸನ್ನು ಎತ್ತಿಹಿಡಿದು ರಾಮನು ಬಂದಿದ್ದ ಅವರನ್ನು ಕೇಳಿದನು: “ನನ್ನ ಜೀವವನ್ನು ಮರಳಿ ತಂದಿದ್ದೀರಾ? ನೀವು ಕೃತಕೃತ್ಯರಾಗಿದ್ದೀರಾ? ಈಗ ನಾನು ಸಮರದಲ್ಲಿ ಶತ್ರುಗಳನ್ನು ಸಂಹರಿಸಿ ಜನಕಾತ್ಮಜೆಯನ್ನು ಪುನಃ ಪಡೆದುಕೊಂಡು ಅಯೋಧ್ಯಾರಾಜ್ಯವನ್ನು ಆಳಬಲ್ಲೆನೇ? ರಾಜ್ಯದಿಂದ ಹೊರಗಟ್ಟಲ್ಪಟ್ಟ ಮತ್ತು ಪತ್ನಿಯನ್ನು ಕಳೆದುಕೊಂಡ ನಾನು ರಣದಲ್ಲಿ ರಿಪುಗಳನ್ನು ಸಂಹರಿಸಿ ವೈದೇಹಿಯನ್ನು ಬಿಡಿಸಿಕೊಳ್ಳದೇ ಜೀವಿಸಿರಲಾರೆ!”

ರಾಮನ ಈ ಮಾತುಗಳಿಗೆ ಉತ್ತರವಾಗಿ ಅನಿಲಾತ್ಮಜನು ಹೇಳಿದನು: “ರಾಮ! ನಿನಗೆ ಪ್ರಿಯವಾದುದನ್ನೇ ಹೇಳುತ್ತೇನೆ. ನಾನು ಜಾನಕಿಯನ್ನು ನೋಡಿಬಂದೆ! ಪರ್ವತ-ಕಾನನ-ಗಣಿಗಳ ಸಹಿತ ದಕ್ಷಿಣದಲ್ಲೆಲ್ಲಾ ಹುಡುಕಾಡಿ ಆಯಾಸಗೊಂಡಿದ್ದ ನಾವು ಮಹಾಗುಹೆಯೊಂದನ್ನು ಕಂಡೆವು. ಕತ್ತಲೆ ಕವಿದಿದ್ದ, ಕೀಟಗಳಿಂದ ತುಂಬಿದ್ದ, ದಟ್ಟವೂ-ಗಹನವೂ ಆಗಿದ್ದ ಬಹುಯೋಜನ ವಿಸ್ತೀರ್ಣದ ಆ ಗುಹೆಯನ್ನು ನಾವು ಪ್ರವೇಶಿಸಿ ತುಂಬಾ ದೂರದ ವರೆಗೆ ಹೋದ ನಂತರ ಸೂರ್ಯನ ಬೆಳಕನ್ನೂ ಮತ್ತು ದಿವ್ಯ ಭವನವೊಂದನ್ನೂ ನಾವು ಕಂಡೆವು. ಅದು ದೈತ್ಯ ಮಯನ ಮನೆಯಾಗಿತ್ತು. ಅಲ್ಲಿ ಪ್ರಭಾವತೀ ಎಂಬ ತಾಪಸಿಯು ತಪಸ್ಸನ್ನು ತಪಿಸುತ್ತಿದ್ದಳು. ಅವಳು ನೀಡಿದ ವಿವಿಧ ಭೋಜನ-ಪಾನೀಯಗಳನ್ನು ಸೇವಿಸಿ ಶಕ್ತಿಯನ್ನು ಪಡೆದುಕೊಂಡು, ಅವಳು ಸೂಚಿಸಿದ ದಾರಿಯಲ್ಲಿಯೇ ಹೊರಟು ಮಲಯ ಮಹಾಗಿರಿಗಳ ಸಮೀಪದಲ್ಲಿದ್ದ ದುರ್ಧರ ಲವಣಾಂಭಸವನ್ನು ಕಂಡೆವು. ಮಲಯವನ್ನೇರಿ ವರುಣಾಲಯವನ್ನು ನೋಡಿ ಚಿಂತಿಸುತ್ತಾ ಜೀವನಲ್ಲಿ ತುಂಬಾ ನಿರಾಶೆಯುಳ್ಳವರಾದೆವು. ಅಲ್ಲಿ ನಾವು ಮರಣಪರ್ಯಂತ ಉಪವಾಸವನ್ನು ನಡೆಸಲು ಸಂಕಲ್ಪಿಸಿ ಹಾಗೆಯೇ ಮಾತನಾಡಿಕೊಳ್ಳುತ್ತಿರುವಾಗ ಹದ್ದು ಜಟಾಯುವಿನ ವಿಷಯವು ಬಂದಿತು. ಆಗ ಇನ್ನೊಬ್ಬ ವೈನತೇಯನೋ ಎಂಬಂತೆ ಪರ್ವತಶಿಖರದಷ್ಟು ದೊಡ್ಡದಾಗಿದ್ದ, ಘೋರರೂಪೀ ಪಕ್ಷಿಯೊಂದನ್ನು ಕಂಡೆವು. ನಮ್ಮನ್ನು ಭಕ್ಷಿಸಲು ಯೋಚಿಸುತ್ತಿದ್ದ ಅವನು ನಮ್ಮ ಹತ್ತಿರ ಬಂದು ’ನನ್ನ ಸಹೋದರ ಜಟಾಯುವಿನ ಕುರಿತು ಮಾತನಾಡುತ್ತಿರುವ ನೀವು ಯಾರು? ನಾನು ಅವನ ಹಿರಿಯಣ್ಣ, ಸಂಪಾತಿಯೆಂಬ ಹೆಸರಿದ ಖಗಾಧಿಪ. ಅನ್ಯೋನ್ಯರೊಡನೆಯ ಸ್ಪರ್ಧೆಯಲ್ಲಿ ನಾವು ಆದಿತ್ಯನ ಸಂಸತ್ತಿನವರೆಗೆ ಹೋಗಿದ್ದೆವು. ಆಗ ನನ್ನ ಈ ರೆಕ್ಕೆಗಳು ಸುಟ್ಟುಹೋಗಿ, ಈ ಮಹಾಗಿರಿಯ ಮೇಲೆ ನಾನು ಬಿದ್ದೆ. ರೆಕ್ಕೆಗಳು ಸುಡದಿದ್ದ ಜಟಾಯುವು ಹದ್ದುಗಳ ರಾಜನಾದ. ಆ ನನ್ನ ಪ್ರಿಯತಮ್ಮನನ್ನು ಬಹಳ ಸಮಯದಿಂದ ನಾನು ಕಾಣಲಿಲ್ಲ.’ ಆಗ ಅವನಿಗೆ ಜಟಾಯುವು ಹತನಾದುದನ್ನೂ ವರ್ತಮಾನದ ನಮ್ಮ ವ್ಯಸನವನ್ನೂ ತಿಳಿಸಿದೆವು. ತುಂಬಾ ಅಪ್ರಿಯವಾದುದನ್ನು ಕೇಳಿ ಸಂಪಾತಿಯು ವಿಷಣ್ಣಚೇತಸನಾಗಿ ಪುನಃ ಕೇಳಿದನು: ಈ ರಾಮನಾರು? ಸೀತೆಯು ಹೇಗೆ ಅಪಹರಿಸಲ್ಪಟ್ಟಳು? ಜಟಾಯುವು ಹೇಗೆ ಹತನಾದನು? ಕಪಿಸತ್ತಮರೇ! ಇವೆಲ್ಲವನ್ನೂ ಕೇಳಲು ಬಯಸುತ್ತೇನೆ. ಅವನಿಗೆ ನಾನು ನಿನಗೆ ಬಂದೊದಗಿದ ವ್ಯಸನಗಳೆಲ್ಲವನ್ನೂ, ಮತ್ತು ನಾವು ಪ್ರಾಯೋಪವೇಶ ಕೈಗೊಂಡಿರುವುದಕ್ಕೆ ಕಾರಣಗಳನ್ನು ವಿಸ್ತಾರವಾಗಿ ಹೇಳಿದೆನು. ಆಗ ಆ ಪಕ್ಷಿರಾಜನು ಈ ಮಾತುಗಳಿಂದ ನಾವು ಮೇಲಕ್ಕೇಳುವಂತೆ ಮಾಡಿದನು: ನನಗೆ ರಾವಣ ಮತ್ತು ಅವನ ಮಹಾಪುರಿ ಲಂಕೆಯೂ ಗೊತ್ತು. ಸಮುದ್ರದ ಆಚೆಯ ದಡದಲ್ಲಿ ತ್ರಿಕೂಟಗಿರಿಯ ಕಂದರದಲ್ಲಿ ನೋಡಿದ್ದೇನೆ. ಅಲ್ಲಿ ವೈದೇಹಿಯು ಇರುತ್ತಾಳೆ ಎನ್ನುವುದರಲ್ಲಿ ನನಗೆ ವಿಚಾರಮಾಡುವುದೇನೂ ಇಲ್ಲ.ಅವನ ಈ ಮಾತನ್ನು ಕೇಳಿ ನಾವು ಶೀಘ್ರವೇ ಮೇಲೆದ್ದು ಸಾಗರವನ್ನು ಹಾರುವುದರ ಉಪಾಯದ ಕುರಿತು ಮಂತ್ರಾಲೋಚಿಸಿದೆವು. ಸಾಗರವನ್ನು ಲಂಘಿಸಲು ಯಾರೂ ಸಿದ್ಧರಾಗಲಿಲ್ಲ. ಆಗ ನಾನೇ ನನ್ನ ತಂದೆಯನ್ನು ಪ್ರವೇಶಿಸಿ, ಜಲರಾಕ್ಷಸಿಯನ್ನು ಸಂಹರಿಸಿ, ಶತಯೋಜನ ವಿಸ್ತೀರ್ಣದ ಆ ಮಹಾಸಾಗರವನ್ನು ಹಾರಿ ದಾಟಿದೆನು. ಅಲ್ಲಿ ರಾವಣನ ಅಂತಃಪುರದಲ್ಲಿ ಪತಿಯ ದರ್ಶನಕ್ಕೆ ಕಾತರಿಸಿದ್ದ, ಉಪವಾಸ ಮತ್ತು ತಪಸ್ಸುಗಳನ್ನು ಮಾಡುತ್ತಿದ್ದ, ಕೂದಲನ್ನು ಗಂಟು ಹಾಕಿ, ಕೃಶಳಾಗಿದ್ದ, ಮಲಿನಳಾಗಿದ್ದ, ದೀನಳಾಗಿದ್ದ, ತಪಸ್ವಿನೀ ಸತೀ ಸೀತೆಯನ್ನು ನಾನು ಕಂಡೆ. ಈ ಬೇರೆ ಬೇರೆ ಲಕ್ಷಣಗಳಿಂದ ಸೀತೆಯನ್ನು ಗುರುತಿಸಿದ ನಾನು, ಅವಳ ಬಳಿ ಗುಪ್ತವಾಗಿ ಹೋಗಿ ಈ ಮಾತುಗಳನ್ನಾಡಿದೆನು: ಸೀತೇ! ರಾಮನ ದೂತನು ನಾನು. ಮಾರುತಾತ್ಮಜ ವಾನರ. ನಿನ್ನ ದರ್ಶನವನ್ನು ಬಯಸಿ ಆಕಾಶದಿಂದ ಹಾರಿ ಇಲ್ಲಿಗೆ ಬಂದಿದ್ದೇನೆ. ಕಪಿಗಳ ರಾಜ ಸುಗ್ರೀವನಿಂದ ಪರಿಪಾಲಿತರಾಗಿ ಇಬ್ಬರು ರಾಜಪುತ್ರ ಸಹೋದರರು ರಾಮ ಲಕ್ಷ್ಮಣರು ಕುಶಲರಾಗಿದ್ದಾರೆ. ರಾಮ ಮತ್ತು ಜೊತೆಗೆ ಸೌಮಿತ್ರಿಯು ನಿನ್ನ ಕುಶಲದ ಕುರಿತು ಕೇಳಿದ್ದಾರೆ. ಸ್ನೇಹಭಾವದಿಂದ ಸುಗ್ರೀವನೂ ಕೂಡ ನಿನ್ನ ಕುಶಲವನ್ನು ಕೇಳಿದ್ದಾನೆ. ಎಲ್ಲ ಕಪಿಗಳೊಂದಿಗೆ ನಿನ್ನ ಪತಿಯು ಶೀಘ್ರದಲ್ಲಿಯೇ ಬರುತ್ತಾನೆ. ದೇವಿ! ನನ್ನ ಮೇಲೆ ನಂಬಿಕೆಯನ್ನಿಡು. ನಾನು ವಾನರ. ರಾಕ್ಷಸನಲ್ಲ.ಮುಹೂರ್ತಕಾಲ ಯೋಚಿಸಿ ಸೀತೆಯು ನನಗೆ ಉತ್ತರಿಸಿದಳು: ಅವಿಂಧ್ಯನ ವಚನದಿಂದ ನೀನು ಹನೂಮಂತನನ್ನು ನಾನು ತಿಳಿದಿದ್ದೇನೆ. ಮಹಾಬಾಹು ವೃದ್ಧಸಮ್ಮತ ರಾಕ್ಷಸ ಅವಿಂಧ್ಯನೇ ಸುಗ್ರೀವನು ನಿನ್ನಂಥಹ ಸಚಿವರಿಂದ ಸುತ್ತುವರೆಯಲ್ಪಟ್ಟಿದ್ದಾನೆ ಎಂದು ಹೇಳಿದನು. ಈಗ ಹೋಗು ಎಂದು ಹೇಳಿ ಸೀತೆಯು ನನಗೆ ಈ ಮಣಿಯನ್ನು ಕೊಟ್ಟಳು. ಇದನ್ನು ಆ ಅನಿಂದಿತೆ ವೈದೇಹಿಯು ಇಲ್ಲಿಯವರೆಗೂ ಧರಿಸಿಕೊಂಡಿದ್ದಳು. ಇವೆಲ್ಲವುಗಳನ್ನು ನೀನು ನಂಬಬೇಕೆಂದು ಜಾನಕಿಯು ಮಹಾಗಿರಿ ಚಿತ್ರಕೂಟದಲ್ಲಿ ಹುಲ್ಲನ್ನು ಕಾಗೆಯ ಮೇಲೆ ನೀನು ಪ್ರಯೋಗಿಸಿದುದರ ಕಥೆಯನ್ನು ಹೇಳಿದಳು. ಪುರುಷವ್ಯಾಘ್ರ! ಇದರಿಂದ ನೀನು ಗುರುತಿಸಬಹುದು. ಅದನ್ನು ಕೇಳಿ, ನಂತರ ಆ ಪುರಿಯನ್ನು ಸುಟ್ಟು ಇಲ್ಲಿಗೆ ಬಂದೆ.” ಪ್ರಿಯವಾರ್ತೆಯನ್ನು ತಂದ ಅವನಿಗೆ ರಾಮನು ಸತ್ಕರಿಸಿದನು.

ಕಪಿಸೇನೆ, ಸೇತುಬಂಧ, ವಿಭೀಷಣ ಸಖ್ಯ

ಆಗ ಅಲ್ಲಿ ರಾಮನು ಅವರೊಂದಿಗೆ ಕುಳಿತುಕೊಂಡಿರಲು, ಸುಗ್ರೀವನ ವಚನದಂತೆ ಕಪಿಶ್ರೇಷ್ಠರು ಬಂದು ಸೇರಿದರು. ವಾಲಿಯ ಮಾವ ಶ್ರೀಮಾನ್ ಸುಷೇಣನು ಕೋಟಿಸಹಸ್ರ ತರಸ್ವಿ ವಾನರರನ್ನೊಡಗೂಡಿ ರಾಮನಲ್ಲಿಗೆ ಬಂದನು. ಮಹಾವೀರರಾದ ವಾನರೇಂದ್ರರಿಬ್ಬರು ಗಜ ಮತ್ತು ಗವಯ ಪ್ರತಿಯೊಬ್ಬರೂ ನೂರು ಕೋಟಿ ಕಪಿಗಳೊಂದಿಗೆ ಬಂದರು. ಭೀಮದರ್ಶನ ಗೋಲಾಂಗುಲ ಗವಾಕ್ಷನು ಆರು ಕೋಟಿ ಸಾವಿರ ಕಪಿಗಳನ್ನು ಕರೆದುಕೊಂಡು ಕಾಣಿಸಿಕೊಂಡನು. ಗಂಧಮಾದನದಲ್ಲಿ ವಾಸಿಸುವ ಪ್ರಸಿದ್ಧ ಗಂಧಮಾದನನು ಕೋಟಿಸಹಸ್ರ ಉಗ್ರ ಕಪಿಗಳನ್ನು ಕರೆತಂದನು. ಪನಸ ಎಂಬ ಹೆಸರಿನ ಮೇಧಾವೀ ಸುಮಹಾಬಲ ವಾನರನು ಹತ್ತು, ಹನ್ನೆರಡು ಮತ್ತು ಮೂವತ್ತೈದು ಕೋಟಿ ವಾನರರನ್ನು ಕರೆತಂದನು. ದಧಿಮುಖ ಎಂಬ ಹೆಸರಿನ ಶ್ರೀಮಾನ್, ವೀರ್ಯವಾನ್ ಕಪಿವೃದ್ಧನೂ ಕೂಡ ಭೀಮ ತೇಜಸ್ಸಿನ ಕಪಿಗಳ ಮಹಾಸೇನೆಯನ್ನು ತಂದನು. ಜಾಂಬವಂತನು ನೂರುಕೋಟಿಸಾವಿರ ಭೀಮಕರ್ಮಿಗಳಾದ ಕಪ್ಪು ಮತ್ತು ಬಿಳೀ ಮುಖಗಳ ಕರಡಿಗಳೊಂದಿಗೆ ಕಾಣಿಸಿಕೊಂಡನು. ಇವು ಮತ್ತು ಇನ್ನೂ ಇತರ ಬಹಳ ಕಪಿನಾಯಕರು ಅಸಂಖ್ಯ ಸೇನೆಗಳೊಂದಿಗೆ ರಾಮನ ಕಾರಣಕ್ಕೆ ಸೇರಿದರು. ಶಿರೀಷಕುಸುಮದಂತಿದ್ದ ಅವರು ಸಿಂಹನಾದ ಮಾಡುತ್ತಾ ಅಲ್ಲಿಂದಲ್ಲಿಗೆ ಓಡುತ್ತಿದ್ದಾಗ ತುಮುಲ ಶಬ್ಧವು ಕೇಳಿಬಂದಿತು. ಕೆಲವರು ಗಿರಿಶಿಖರಗಳಂತಿದ್ದರೆ ಕೆಲವರು ಗಾತ್ರದಲ್ಲಿ ಎಮ್ಮೆಗಳಂತಿದ್ದರು, ಮಳೆಗಾಲದ ಮೋಡಗಳಿಂತಿದ್ದರು, ಮತ್ತು ತೇಯ್ದ ಕುಂಕುಮದ ಬಣ್ಣದ ಮುಖವುಳ್ಳವರಾಗಿದ್ದರು. ಕುಪ್ಪಳಿಸುತ್ತಿದ್ದ, ಕೆಳಗೆ ಬೀಳುತ್ತಿದ್ದ, ಹಾರುತ್ತಿದ್ದ ವಾನರರು ಧೂಳೆಬ್ಬಿಸಿ ಎಲ್ಲ ಕಡೆಗಳಿಂದಲೂ ಬಂದು ಸೇರಿದರು. ನೆರೆಬಂದ ಸಾಗರದಂತಿದ್ದ ಆ ವಾನರ ಮಹಾಲೋಕವು ಸುಗ್ರೀವನ ಅನುಮತಿಯಂತೆ ಅಲ್ಲಿಯೇ ಬೀಡುಬಿಟ್ಟರು. ಆಗ ಪ್ರಶಸ್ತ ದಿನ ನಕ್ಷತ್ರದ ಮಂಗಳ ಮುಹೂರ್ತದಲ್ಲಿ ಶ್ರೀಮಾನ್ ರಾಘವನು ಸುಗ್ರೀವನೊಂದಿಗೆ, ಲೋಕಗಳನ್ನೇ ಚಿಂದಿಮಾಡುವಂತೆ ವ್ಯೂಹಗಳಲ್ಲಿ ರಚಿತಗೊಂಡಿರುವ ಅಲ್ಲಿ ಸೇರಿರುವ ಎಲ್ಲ ಕಪೀಂದ್ರರ ಸೇನೆಗಳೊಂದಿಗೆ ಹೊರಟನು. ಆ ಸೇನೆಯ ಮುಂದೆ ಮಾರುತಾತ್ಮಜ ಹನೂಮಂತನಿದ್ದನು; ಸ್ವಲ್ಪವೂ ಭಯವಿಲ್ಲದ ಸೌಮಿತ್ರಿಯು ಅದರ ಹಿಂಬಾಗವನ್ನು ರಕ್ಷಿಸುತ್ತಿದ್ದನು. ಗೋಧಾಂಗುಲಿಗಳನ್ನು ಕಟ್ಟಿದ ಆ ರಾಘವರಿಬ್ಬರೂ ಮಹಾಮಾತ್ರರಾದ ಕಪಿಗಳ ಮಧ್ಯದಲ್ಲಿ ಗ್ರಹಗಳ ಮಧ್ಯೆ ಚಂದ್ರಸೂರ್ಯರಂತೆ ಶೋಭಿಸಿದರು. ಶಾಲ, ತಾಲ, ಶಿಲಾಯುಧಗಳನ್ನು ಹಿಡಿದು ಹೋಗುತ್ತಿರುವ ಆ ಕಪಿಸೇನೆಯು ಸೂರ್ಯೊದಯದಲ್ಲಿ ವಿಸ್ತಾರವಾದ ಭತ್ತದ ಗದ್ದೆಯಂತೆ ತೋರುತ್ತಿತ್ತು. ಅನಲ, ನೀಲ, ಅಂಗದ, ಕ್ರಾಥ, ಮೈಂದ, ದ್ವಿವಿದರಿಂದ ಪಾಲಿತ ಆ ಅತಿದೊಡ್ಡ ಸೇನೆಯು ರಾಘವನ ಕಾರ್ಯಸಿದ್ಧಿಗಾಗಿ ಹೊರಟಿತು. ಬಹುಮೂಲಫಲಗಳನ್ನುಳ್ಳ, ಮಧುಮಾಂಸಗಳು ಹೇರಳವಾಗಿದ್ದ, ಶುದ್ಧ ನೀರಿದ್ದ ಸುಂದರ ಪ್ರದೇಶಗಳನ್ನು ದಾಟಿ, ಅಲ್ಲಲ್ಲಿ ಗಿರಿಕಂದರಗಳಲ್ಲಿ ನಿರಾಬಾಧರಾಗಿ ಬೀಡುಬಿಡುತ್ತಾ, ಆ ಕಪಿಸೇನೆಯು ಉಪಾಯದಂತೆ ಉಪ್ಪಿನನೀರಿನ ಸಾಗರದಂಚಿಗೆ ಬಂದಿತು. ಎರಡನೆಯ ಸಾಗರವೋ ಎಂಬಂತಿದ್ದ ಆ ಬಹುಧ್ವಜಗಳ ಬಲವು ತೀರದಲ್ಲಿದ್ದ ವನದಲ್ಲಿ ಬೀಡುಬಿಟ್ಟಿತು.

ಅನಂತರ ಶ್ರೀಮಾನ್ ದಾಶರಥಿಯು ಮಾನರಮುಖ್ಯರ ಮಧ್ಯದಲ್ಲಿ ಸುಗ್ರೀವನಿಗೆ ಕಾಲಕ್ಕೆ ತಕ್ಕಂತಹ ಈ ಮಾತುಗಳನ್ನಾಡಿದನು: “ಈ ಸಾಗರವನ್ನು ಲಂಘಿಸುವ ಏನಾದರೂ ಉಪಾಯವು ನಿಮ್ಮಲ್ಲಿ ಇದೆಯೇ? ಈ ಸೇನೆಯಾದರೋ ಅತೀ ದೊಡ್ಡದು. ಸಾಗರವೂ ಕೂಡ ದುಸ್ತರವಾಗಿದೆ.” ಅಲ್ಲಿ ತೀವ್ರಬುದ್ಧಿಯ ಕೆಲವು ವಾನರರು ಹೇಳಿದರು: “ವಾನರರು ಈ ಸಾಗರದ ವಿಸ್ತಿರ್ಣವನ್ನು ಲಂಘಿಸಲು ಅಸಮರ್ಥರು.” ಕೆಲವರು ದೋಣಿಗಳ ಕುರಿತು ಯೋಚಿಸಿದರೆ ಕೆಲವರು ವಿವಿಧ ರೀತಿಯ ಹಾರುವಿಕೆಯು ಬಗ್ಗೆ ಸೂಚಿಸಿದರು. ರಾಮನು ಆ ಎಲ್ಲರನ್ನೂ ಸಂತವಿಸಿ “ಅಲ್ಲ” ಎಂದು ಉತ್ತರಿಸಿದನು. “ವೀರರೇ! ಎಲ್ಲ ವಾನರರೂ ನೂರುಯೋಜನ ವಿಸ್ತೀರ್ಣವನ್ನು ದಾಟಲು ಶಕ್ತರಿಲ್ಲ. ಇದು ನಿಮ್ಮ ಅಂತಿಮ ನಿರ್ಧಾರವಲ್ಲ. ಈ ಮಹಾಸೇನೆಯನ್ನು ದಾಟಿಸಲು ಬೇಕಾಗುವಷ್ಟು ದೋಣಿಗಳಿಲ್ಲ. ಅಲ್ಲದೇ ನಮ್ಮಂಥವರು ಏಕೆ ವಣಿಜರಿಗೆ ಉಪಘಾತವೆಸಗಬೇಕು? ವಿಸ್ತೀರ್ಣವಾದ ಈ ಸೇನೆಯು ಭಾಗವಾದರೆ ಶತ್ರುವು ಆಕ್ರಮಣ ಮಾಡಬಲ್ಲನು. ಹಾರಿಹೋಗುವುದರಿಂದಾಗಲೀ ಅಥವಾ ತೆಪ್ಪಗಳ ಮೇಲೆ ಹೋಗಿ ಇದನ್ನು ದಾಟಲಾರೆವು ಎಂದು ನನಗನ್ನಿಸುತ್ತದೆ. ನಾನು ಈ ಜಲನಿಧಿಯನ್ನು ಬಾಣಗಳಿಂದ ಹೊಡೆದು ನೀರನ್ನು ಹಿಂದೆಸರಿಸುತ್ತೇನೆ. ಆಗ ಕೆಳಗೆ ವಾಸಿಸುವವನು ನನಗೆ ಕಾಣಿಸಿಕೊಳ್ಳುತ್ತಾನೆ. ಒಂದುವೇಳೆ ಅವನು ನನಗೆ ಮಾರ್ಗವನ್ನು ತೋರಿಸದೇ ಇದ್ದರೆ, ಅಗ್ನಿ-ವಾಯುಗಳನ್ನು ಕಾರುವ ಮಹಾಸ್ತ್ರಗಳಿಂದ ಇದನ್ನು ಸುಡುತ್ತೇನೆ.”

ಹೀಗೆ ಹೇಳಿ ರಾಘವನು ಸೌಮಿತ್ರಿಯೊಡನೆ ವಿಧಿವತ್ತಾಗಿ ನೀರನ್ನು ಮುಟ್ಟಿ, ಕುಶವನ್ನು ಹರಡಿ, ಜಲನಿಧಿಯನ್ನು ಹಿಂದೆ ಸರಿಸಿದನು. ಆಗ ನದನದಿಗಳ ಪತಿ, ದೇವ, ಶ್ರೀಮಾನ್ ಸಗರನಾದರೋ ನೀರಿನ ಗಣಗಳಿಂದ ಆವೃತನಾಗಿ ರಾಘವನ ಸ್ವಪ್ನದಲ್ಲಿ ಕಾಣಿಸಿಕೊಂಡನು. “ಕೌಸಲ್ಯೆಯ ಮಗನೇ” ಎಂದು ಕರೆದು ಮಧುರ ಮಾತಿನಲ್ಲಿ ನೂರಾರು ರತ್ನಾಕರರೊಂದಿಗೆ ಆವೃತನಾದ ಅವನು ಹೀಗೆ ಹೇಳಿದನು: “ಪುರುಷರ್ಷಭ! ನಿನಗೆ ನಾನು ಹೇಗೆ ಸಹಾಯ ಮಾಡಲಿ ಹೇಳು.” ರಾಮನು ಉತ್ತರಿಸಿದನು: “ನಾನು ಇಕ್ಷ್ವಾಕು, ನಿನ್ನ ಕುಲದವನು. ನದನದೀಪತೇ! ನನ್ನ ಸೈನ್ಯಕ್ಕೆ ಮಾರ್ಗವನ್ನು ಮಾಡಿಕೊಡಬೇಕೆಂದು ಬಯಸುತ್ತೇನೆ. ಹೀಗೆ ಹೋಗಿ ನಾನು ಪೌಲಸ್ತ್ಯರ ಪಾಪಿ ದಶಗ್ರೀವನನ್ನು ಸಂಹರಿಸಬಲ್ಲೆ. ಒಂದುವೇಳೆ ಯಾಚಿಸಿದ ಮಾರ್ಗವನ್ನು ನೀನು ನನಗೆ ನೀಡದಿದ್ದರೆ, ಪ್ರತಿಮಂತ್ರಿಸಿದ ದ್ವಿವ್ಯಾಸ್ತ್ರ ಬಾಣಗಳಿಂದ ನಿನ್ನನ್ನು ಒಣಗಿಸುತ್ತೇನೆ.”

ಹೀಗೆ ಹೇಳುತ್ತಿರುವ ರಾಮನನ್ನು ಕೇಳಿದ ವರುಣಾಲಯನು  ವ್ಯಥಿತನಾಗಿ, ಕೈಮುಗಿದು ನಿಂತು ಈ ಮಾತುಗಳನ್ನಾಡಿದನು: “ನಾನು ನಿನ್ನನ್ನು ತಡೆಯಲು ಬಯಸುವುದಿಲ್ಲ. ನಿನಗೆ ವಿಘ್ನವನ್ನುಂಟುಮಾಡುವುದಿಲ್ಲ. ರಾಮ! ನಾನು ಹೇಳುವ ಈ ಮಾತುಗಳನ್ನು ಕೇಳಿ ಮಾಡಬೇಕಾದುದನ್ನು ಮಾಡು. ಒಂದುವೇಳೆ ಮುಂದೆ ಸಾಗಲು ಕಾದಿರುವ ನಿನ್ನ ಸೇನೆಗೆ ನಿನ್ನ ಆಜ್ಞೆಯಂತೆ ದಾರಿಯನ್ನು ಕೊಟ್ಟರೆ ಅನ್ಯರೂ ಕೂಡ ಧನುಸ್ಸಿನ ಬಲದಿಂದ ನನಗೆ ಆಜ್ಞಾಪಿಸುತ್ತಾರೆ. ನಿನ್ನಲ್ಲಿ ಶಿಲ್ಪಿಗಳಿಂದ ಗೌರವಿಸಲ್ಪಟ್ಟ, ದೇವಶಿಲ್ಪಿ ಬಲವಾನ್ ವಿಶ್ವಕರ್ಮನ ಮಗ ನಲ ಎಂಬ ಹೆಸರಿನ ವಾನರನಿದ್ದಾನೆ. ಅವನು ಕಡ್ಡಿಯನ್ನಾಗಲೀ, ಹುಲ್ಲನ್ನಾಗಲೀ ಅಥವಾ ಕಲ್ಲನ್ನಾಗಲೀ ನನ್ನಲ್ಲಿ ಎಸೆದರೆ ಅವೆಲ್ಲವನ್ನೂ ನಾನು ತೇಲಿಸುತ್ತೇನೆ. ಅದು ನಿನಗೆ ಸೇತುವೆಯಾಗುತ್ತದೆ.” ಹೀಗೆ ಹೇಳಿ ಅವನು ಅಂತರ್ಧಾನನಾಗಲು ರಾಮನು ನಲನಿಗೆ ಹೇಳಿದನು: “ಸಮುದ್ರದಲ್ಲಿ ಸೇತುವೆಯನ್ನು ಕಟ್ಟು. ನೀನು ಇದರಲ್ಲಿ ಶಕ್ತ ಎಂದು ನನ್ನ ಮತ.” ಈ ಉಪಾಯದಿಂದ ಕಾಕುತ್ಸ್ಥನು ಹತ್ತು ಯೋಜನೆ ಅಗಲದ ನೂರು ಯೋಜನೆ ಉದ್ದದ ಸೇತುವೆಯನ್ನು ಕಟ್ಟಿಸಿದನು. ನಲಸೇತುವೆಂದು ಕರೆಯಲ್ಪಡುವ ಅದು ರಾಮನ ಆಜ್ಞೆಯಂತೆ ಗಿರಿಯಂತೆ ಈಗಲೂ ನಿಂತಿದ್ದು, ಭುವಿಯಲ್ಲಿ ಪ್ರಸಿದ್ಧವಾಗಿದೆ.

ಅಲ್ಲಿಯೇ ರಾಕ್ಷಸೇಂದ್ರನ ತಮ್ಮ ಧರ್ಮಾತ್ಮ ವಿಭೀಷಣನು ತನ್ನ ನಾಲ್ವರು ಸಚಿವರೊಂದಿಗೆ ಬಂದು ಸೇರಿದನು. ಮಹಾಮನಸ್ವಿ ರಾಮನು ಅವನನ್ನು ಸ್ವಾಗತಿಸಿ ಸ್ವೀಕರಿಸಿದನು. ಅವನು ಗೂಢಚರನಿರಬಹುದೆಂದು ಸುಗ್ರೀವನು ಶಂಕಿಸಿದನು. ರಾಘವನಾದರೋ ಅವನ ಚೇಷ್ಟೆ, ಚರಿತ ಮತ್ತು ಇಂಗಿತಗಳನ್ನು ಚೆನ್ನಾಗಿ ಪರೀಕ್ಷಿಸಿ ತೃಪ್ತನಾಗಿ ಅವನನ್ನು ಸತ್ಕರಿಸಿದನು. ವಿಭೀಷಣನನ್ನು ಸರ್ವ ರಾಕ್ಷಸರ ರಾಜನನ್ನಾಗಿ ಅಭಿಷೇಕಿಸಿ ಅವನನ್ನು ಲಕ್ಷ್ಮಣನ ಮಂತ್ರಿ, ಅನುಚರ ಮತ್ತು ಸ್ನೇಹಿತನನ್ನಾಗಿ ಮಾಡಿದನು. ವಿಭೀಷಣನ ಸಲಹೆಯಂತಲೂ ಅವನು ಸೇತುವೆಯ ಮೂಲಕ ಒಂದು ತಿಂಗಳ ಅವಧಿಯಲ್ಲಿ ಸೈನ್ಯದೊಂದಿಗೆ ಆ ಮಹಾರ್ಣವವನ್ನು ದಾಟಿದನು.

ಅಲ್ಲಿ ಹೋಗಿ ಒಂದಾಗಿ ಬಹುಸಂಖ್ಯೆಗಳಲ್ಲಿದ್ದ, ವಿಸ್ತಾರವಾಗಿದ್ದ ಲಂಕೆಯ ಅನೇಕ  ಉದ್ಯಾನಗಳನ್ನು ಕಪಿಗಳ ಮೂಲಕ ಧ್ವಂಸಮಾಡಿಸಿದನು. ಅಲ್ಲಿ ವಾನರರೂಪದಲ್ಲಿದ್ದ ರಾವಣನ ಇಬ್ಬರು ಚಾರ ರಾಕ್ಷಸ ಶುಕ ಮತ್ತು ಸಾರಣರನ್ನು ವಿಭೀಷಣನು ಹಿಡಿದನು. ಆ ನಿಶಾಚರರು ತಮ್ಮ ರಾಕ್ಷಸರೂಪವನ್ನು ತಳೆದಾಗ ರಾಮನು ಅವರನ್ನು ತನ್ನ ಸೇನೆಗೆ ತೋರಿಸಿ, ನಂತರ ಬಿಡುಗಡೆಮಾಡಿದನು. ಉಪವನದಲ್ಲಿ ಸೇನೆಯನ್ನು ಬೀಡುಬಿಟ್ಟು ಆ ಶೂರನು ಪ್ರಾಜ್ಞ ವಾನರ ಅಂಗದನನ್ನು ತನ್ನ ದೂತನಾಗಿ ರಾವಣನಲ್ಲಿಗೆ ಕಳುಹಿಸಿದನು.

ಸಾಕಷ್ಟು ಆಹಾರ, ನೀರು, ಮತ್ತು ಬಹಳಷ್ಟು ಫಲಮೂಲಗಳಿರುವ ಆ ವನದಲ್ಲಿ ಸೇನೆಯನ್ನಿರಿಸಿ ಕಾಕುತ್ಸ್ಥನು ಅದನ್ನು ವಿಧಿವತ್ತಾಗಿ ಪರಿರಕ್ಷಿಸಿದನು. ರಾವಣನೂ ಕೂಡ ಶಾಸ್ತ್ರನಿರ್ಮಿತವಾದ ಲಂಕೆಯನ್ನು ವಿಧಿವತ್ತಾಗಿ ಸುರಕ್ಷಿತವಾಗಿಸಿದನು. ಸ್ವಾಭಾವಿಕವಾಗಿಯೇ ಅದು ದೃಢ ಕೋಟೆ ಕೊತ್ತಳಗಳಿಂದ ದುರಾಧರ್ಷವಾಗಿತ್ತು. ಮೀನು ಮೊಸಳೆಗಳಿಂದ ಕೂಡಿದ್ದ ತುಂಬಾ ಆಳವಾಗಿರುವ ನೀರಿನಿಂದ ತುಂಬಿದ್ದ ಕಾಲುವೆಗಳಿದ್ದವು. ಹಾಗೆ ಏಳು ದುರ್ಧರ್ಷ ಕಾಲುವೆಗಳು ಖದಿರಗಳಿಂದ ಮಾಡಿದ ಶೂಲಗಳಿಂದ ರಕ್ಷಿಸಲ್ಪಟ್ಟಿದ್ದವು. ಎಸೆಯುವ ಯಂತ್ರಗಳಿಂದ, ಯೋಧರ ಮೇಲ್ಗಚ್ಚುಗಳಿಂದ, ಕಲ್ಲುಬಂಡೆಗಳಿಂದ, ಮತ್ತು ವಿಷಭರಿತ ಸರ್ಪಗಳು ತುಂಬಿದ ಕೊಡಗಳನ್ನು ಹೊತ್ತು ನಿಂತಿದ್ದ ಸೈನಿಕರಿಂದ, ಮುಸಲ, ಪಂಜು, ಉಕ್ಕಿನ ಈಟಿಗಳು, ತೋಮರಗಳು, ಖಡ್ಗಗಳು, ಕೊಡಲಿಗಳನ್ನು ಹಿಡಿದ ನೂರಾರು ಯೋಧರಿಂದ, ಮತ್ತು ಜೇನಿನ ಅಂಟಿನಲ್ಲಿ ಅದ್ದಿದ್ದ ಮುದ್ಗರಗಳಿಂದ ರಕ್ಷಿಸಲ್ಪಟ್ಟ ಆ ಕಾಲುವೆಗಳನ್ನು ದಾಟಲು ಅಸಾಧ್ಯವಾಗಿದ್ದವು. ಪುರದ್ವಾರದಲ್ಲಿ ಎಲ್ಲೆಡೆಯಲ್ಲಿ ನಿಂತಿರುವ ಮತ್ತು ಚಲಿಸುತ್ತಿರುವ ಸೇನೆಗಳು, ಮತ್ತು ಹಲವಾರು ಪದಾತಿಗಳು, ಹೇರಳ ಗಜ ತುರಗಗಳಿದ್ದವು.

ಅಂಗದ ರಾಯಭಾರ, ಯುದ್ಧಾರಂಭ

ಆಗ ಅಂಗದನು ಲಂಕೆಯ ದ್ವಾರ ಪ್ರದೇಶಕ್ಕೆ ಬರಲು ರಾಕ್ಷಸೇಂದ್ರನಿಗೆ ತಿಳಿಸಿ ಏನೂ ಚಿಂತೆಯಿಲ್ಲದೇ ಪ್ರವೇಶಿಸಿದನು. ಆ ರಾಕ್ಷಸ ಕೋಟಿಯ ಮಧ್ಯೆ ಆ ಸುಮಹಾಬಲನು ಮೇಘಮಾಲೆಗಳಿಂದ ಸುತ್ತುವರೆದ ಆದಿತ್ಯನಂತೆ ಶೋಭಿಸಿದನು. ಅಮಾತ್ಯರಿಂದ ಸುತ್ತುವರೆಯಲ್ಪಟ್ಟಿದ್ದ ಪೌಲಸ್ತ್ಯನ ಬಳಿಹೋಗಿ ಆ ವಾಗ್ಮಿಯು ರಾಮನ ಸಂದೇಶವನ್ನು ಹೇಳಲು ಪ್ರಾರಂಭಿಸಿದನು: “ರಾಜನ್! ಕೋಸಲೇಂದ್ರ ಮಹಾಯಶ ರಾಘವನು ಕಾಲಕ್ಕೆ ತಕ್ಕುದ್ದಾದ ಈ ಮಾತುಗಳನ್ನು ನಿನಗೆ ಕಳುಹಿಸಿದ್ದಾನೆ. ಅದನ್ನು ಆದರಿಸಿ ಅದರಂತೆ ಮಾಡು! ಅಕೃತಾತ್ಮನಾದ, ಅನ್ಯಾಯದಲ್ಲಿ ನಿರತನಾದ ರಾಜನನ್ನು ಪಡೆದು ದೇಶಗಳು ಮತ್ತು ನಗರಗಳು ಅವುಗಳಿಗೆ ಬಲಿಯಾಗಿ ನಾಶಹೊಂದುತ್ತವೆ. ಸೀತೆಯನ್ನು ಬಲಾತ್ಕಾರವಾಗಿ ಅಪಹರಿಸಿದ ಅಪರಾಧವನ್ನು ನೀನೊಬ್ಬನೇ ಮಾಡಿದ್ದೀಯೆ. ಆದರೆ ಇದು ಅನಾಪರಾಧಿಗಳಾಗಿರುವ ಇತರರ ವಧೆಯಲ್ಲಿ ಕೊನೆಗೊಳ್ಳುತ್ತದೆ. ಇದಕ್ಕೂ ಮೊದಲು ಬಲದರ್ಪಿತನಾದ ನೀನು ವನದಲ್ಲಿ ವಾಸಿಸುತ್ತಿರುವ ಋಷಿಗಳನ್ನು ಹಿಂಸಿಸಿದ್ದೀಯೆ ಮತ್ತು ದೇವತೆಗಳನ್ನೂ ಅಪಮಾನಿಸಿದ್ದೀಯೆ. ರಾಜರ್ಷಿಗಳನ್ನು ಕೊಂದು ರೋದಿಸುತ್ತಿರುವ ಸ್ತ್ರೀಯರನ್ನು ಅಪಹರಿಸಿದ್ದೀಯೆ. ಈಗ ನಿನ್ನ ಆ ಅನ್ಯಾಯಗಳ ಫಲವು ಪ್ರಾಪ್ತವಾಗುವ ಸಮಯವು ಬಂದಿದೆ. ಅಮಾತ್ಯರೊಂದಿಗೆ ನಿನ್ನನ್ನು ಕೊಲ್ಲುತ್ತೇನೆ. ಯುದ್ಧಮಾಡಿ ಪುರುಷನಾಗು. ನಿಶಾಚರ! ಮನುಷ್ಯನಾದ ನನ್ನ ಧನುಸ್ಸಿನ ವೀರ್ಯವನ್ನು ನೋಡು. ಜಾನಕಿ ಸೀತೆಯನ್ನು ಬಿಡುಗಡೆ ಮಾಡು. ಒಂದುವೇಳೆ ಬಿಡುಗಡೆ ಮಾಡದಿದ್ದರೆ ನಿಶಿತ ಬಾಣಗಳಿಂದ ನಾನು ಲೋಕದಲ್ಲಿಯೇ ರಾಕ್ಷಸರಿಲ್ಲದಿರುವಂತೆ ಮಾಡುತ್ತೇನೆ.”

ದೂತನು ಹೇಳಿದ ಈ ಪೌರುಷ ಮಾತುಗಳನ್ನು ಕೇಳಿ ರಾಜ ರಾವಣನು ತಡೆಯಲಾರದೇ ಕ್ರೋಧಮೂರ್ಛಿತನಾದನು. ಆಗ ಅವನ ಇಂಗಿತವನ್ನು ತಿಳಿದ ನಾಲ್ವರು ರಾಕ್ಷಸ ಸೇವಕರು ಅಂಗದನ ನಾಲ್ಕು ಅಂಗಗಳನ್ನು ಪಕ್ಷಿಗಳು ಹುಲಿಯನ್ನು ಹಿಡಿಯುವಂತೆ ಹಿಡಿದರು. ಆಗ ಅಂಗದನು ಆ ರಾಕ್ಷಸರು ಅವನ ಅಂಗಗಳಿಗೆ ನೇತಾಡಿಕೊಂಡಿರುವಾಗಲೇ ಪ್ರಾಸಾದದ ಮೇಲೆ ಹಾರಿದನು. ಅವನು ಹಾರಿದ ರಭಸಕ್ಕೆ ರಾಕ್ಷಸರು ನೆಲದ ಮೇಲೆ, ಪೆಟ್ಟನ್ನು ಸಹಿಸಲಾರದೇ ಹೃದಯಗಳು ಒಡೆದು, ಬಿದ್ದರು. ಅರಮನೆಯ ಮೇಲಿಂದ ಪುನಃ ಕೆಳಕ್ಕೆ ಹಾರಿ, ಲಂಕೆಯನ್ನು ದಾಟಿ ತನ್ನ ಸೇನೆಯ ಸಮೀಪಕ್ಕೆ ಬಂದನು. ಕೋಸಲೇಂದ್ರನಲ್ಲಿಗೆ ಹೋಗಿ ಅಂಗದನು ನಡೆದುದೆಲ್ಲವನ್ನೂ ನಿವೇದಿಸಿದನು. ರಾಘವನಿಂದ ಅಭಿನಂದಿತನಾದ ಆ ತೇಜಸ್ವಿಯು ವಿಶ್ರಾಂತಿಯನ್ನು ಪಡೆದನು.

ಆಗ ರಘುನಂದನನು ಎಲ್ಲ ವಾಯುವೇಗದ ಕಪಿಗಳ ಆಕ್ರಮಣದೊಂದಿಗೆ ಲಂಕೆಯ ಪ್ರಾಕಾರಗಳನ್ನು ಒಡೆಸಿದನು. ಲಕ್ಷ್ಮಣನು ವಿಭೀಷಣ ಮತ್ತು ಕರಡಿಗಳ ರಾಜನನ್ನು ಮುಂದಿಟ್ಟುಕೊಂಡು ದುರಾಸದವಾಗಿದ್ದ ದಕ್ಷಿಣನಗರದ್ವಾರವನ್ನು ಕಿತ್ತುರುಳಿಸಿದನು. ಅವನು ನೂರುಸಾವಿರ ಕೋಟಿ ಯುದ್ಧಶಾಲಿಗಳಾಗಿದ್ದ, ಕುಂಕುಮದಷ್ಟು ಕೆಂಪಾಗಿದ್ದ ಕಪಿಗಳೊಡನೆ ಲಂಕೆಯ ಮೇಲೆ ಬಿದ್ದನು. ಮೇಲೆ ಹಾರುತ್ತಿದ್ದ, ಕುಪ್ಪಳಿಸುತ್ತಿದ್ದ, ಕೆಳಗೆ ಬೀಳುತ್ತಿದ್ದ ವಾನರರಿಂದ ಸೂರ್ಯನೇ ಕಾಣುತ್ತಿರಲಿಲ್ಲ ಮತ್ತು ಮೇಲೆದ್ದ ಧೂಳಿನಿಂದಾಗಿ ಬೆಳಕೇ ಇಲ್ಲದಂತಾಯಿತು. ಕೋಟೆಯ ಗೋಡೆಗಳು ಎಲ್ಲಕಡೆಯಿಂದಲೂ ಕಪಿಗಳಿಂದ - ಭತ್ತದ ಎಸಳುಗಳಂತಿದ್ದ, ಶಿರೀಷಕುಸುಮಗಳಂತಿದ್ದ, ಉದಯಕಾಲದ ಆದಿತ್ಯನಂತಿದ್ದ, ಬಿಳಿಯಹುಲ್ಲಿನಂತಿದ್ದ ಕಪಿಗಳಿಂದ ಎಲ್ಲಕಡೆಯಿಂದಲೂ ತುಂಬಿದ್ದ ಕೋಟೆಯು ಹಳದೀಬಣ್ಣವನ್ನು ತಳೆದಿದ್ದುದನ್ನು ನೋಡಿ ಎಲ್ಲೆಡೆಯೂ ಇದ್ದ ರಾಕ್ಷಸರು, ಸ್ತ್ರೀಯರು ಮತ್ತು ವೃದ್ಧರೂ ಸೇರಿ, ವಿಸ್ಮಿತರಾದರು. ಅವರು ಮಣಿಸ್ಥಂಭಗಳನ್ನು, ಕರ್ಣಾಟ್ಟಶಿಖರಗಳನ್ನು ಮುರಿದರು. ಯಂತ್ರಗಳನ್ನು ಮುರಿದು ಅವುಗಳ ವೇಗವನ್ನು ತೆಗೆದು ಧ್ವಂಸಮಾಡಿದರು. ಆ ಮಹಾಬಲರು ನೂರಾರು ಕಟುಕರನ್ನು, ಚಕ್ರಗಳನ್ನು, ಕಾಯುವ ಗೋಪುರಗಳನ್ನು, ಮತ್ತು ಬಂಡೆಗಳನ್ನು ತೆಗೆದು ಲಂಕೆಯ ಮಧ್ಯಕ್ಕೆ ಎಸೆದರು. ಪ್ರಾಕಾರವನ್ನು ಕಾಯುತ್ತಿದ್ದ ನೂರಾರು ನಿಶಾಚರರು ಕಪಿಗಳ ಆಕ್ರಮಣಕ್ಕೊಳಗಾಗಿ ಓಡಿ ಹೋದರು.

ಆಗ ರಾಜನ ವಚನದಂತೆ ಕಾಮರೂಪಿಗಳಾದ, ವಿಕೃತಾಕಾರರಾದ ರಾಕ್ಷಸರು ನೂರುಸಾವಿರದ ಗುಂಪಿನಲ್ಲಿ ಹೊರಟು ಶಸ್ತ್ರಗಳ ಮಳೆಗರೆದು ಆ ಕಪಿಗಳನ್ನು ಓಡಿಸಿ, ಕೋಟೆಯನ್ನು ಬರಿದುಮಾಡುವಲ್ಲಿ ಪರಮ ವಿಕ್ರಮವನ್ನು ತೋರಿಸಿದರು. ಕ್ಷಣಮಾತ್ರದಲ್ಲಿ ಅವರೆಕಾಳುಗಳ ರಾಶಿಯಂತೆ ತೋರುತ್ತಿದ್ದ, ನೋಡಲು ಭಯಂಕರರಾಗಿದ್ದ ಆ ರಾಕ್ಷಸರು ಪ್ರಾಕಾರವನ್ನು ನಿರ್ವಾನರವನ್ನಾಗಿ ಮಾಡಿದರು. ಶೂಲಗಳಿಂದ ಅಂಗಗಳನ್ನು ಕಡಿದುಕೊಂಡು ಹಲವಾರು ವಾನರರ್ಷಭರು ಉರುಳಿದರು. ಹಾಗೆಯೇ ತೋರಣದ ಸ್ಥಂಭಗಳಿಂದ ತುಂಡಾಗಿ ರಾಕ್ಷಸರೂ ಕೆಳಗುರುಳಿದರು. ಆ ರಾಕ್ಷಸ-ವಾನರರೊಡನೆ ಕೇಶಾಕೇಶ ಯುದ್ಧವು ನಡೆಯಿತು. ವೀರರು ಪರಸ್ಪರರನ್ನು ಉಗುರು ಹಲ್ಲುಗಳಿಂದ ಕಿತ್ತು ತಿನ್ನುತ್ತಿದ್ದರು. ಎರಡೂ ಕಡೆಯವರು ಕೊನೆಯವರೆಗೂ ಹೊಡೆದಾಡುತ್ತಿದ್ದರು; ವಾನರ-ರಾಕ್ಷಸರು ನೆಲಕ್ಕೆ ಬಿದ್ದು ಹತರಾದರೂ ಪರಸ್ಪರರ ಹಿಡಿತವನ್ನು ಬಿಟ್ಟಿರಲಿಲ್ಲ. ರಾಮನಾದರೋ ಲಂಕೆಯ ಮೇಲೆ ಮೋಡಗಳಂತೆ ಶರಜಾಲಗಳಿಂದ ಮಳೆಗರೆದನು. ಅದಕ್ಕೆ ಸಿಲುಕಿದ ರಾಕ್ಷಸರು ಮರಣಹೊಂದಿದರು. ಜಿತಕ್ಲಮ ಸೌಮಿತ್ರಿಯೂ ಕೂಡ ತನ್ನ ದೃಢ ಧನುಸ್ಸಿನಿಂದ ಉಕ್ಕಿನ ಬಾಣಗಳನ್ನು ಕೋಟೆಯ ಮೇಲಿದ್ದ ರಾಕ್ಷಸರನ್ನು ಹೊಡೆದು ಕೆಳಗುರುಳಿಸಿದನು. ಆಗ ಗುರಿಯಿಟ್ಟು ಲಂಕೆಯನ್ನು ಮುರಿದು ವಿಜಯವನ್ನು ಗಳಿಸಿದ ನಂತರ ರಾಮನ ಆಜ್ಞೆಯಂತೆ ಸೇನೆಯು ಹಿಂದೆ ಸರಿಯಿತು.

ಆಗ, ಸೈನಿಕರು ಅಲ್ಲಿ ಬೀಡುಬಿಟ್ಟಿರಲು, ಅವರನ್ನು ರಾವಣನ ಕೆಲವು ಪಿಶಾಚ ಮತ್ತು ರಾಕ್ಷಸ ಅನುಚರರು - ಪರ್ವಣ, ಪೂತನ, ಜಂಭ, ಖರ, ಕ್ರೋಧವಶ, ಹರಿ, ಪ್ರರುಜ, ಅರುಜ, ಪ್ರಘಾಸ ಮತ್ತಿತರರು - ಆಕ್ರಮಣಮಾಡಿದರು. ಆ ದುರಾತ್ಮರು ಅದೃಶ್ಯರಾಗಿ ಆಕ್ರಮಣ ಮಾಡಿದರು. ಆದರೆ ವಿಭೀಷಣನು ಅವರ ಅಂತರ್ಧಾನತ್ವವನ್ನು ಕೊನೆಗಾಳಿಸಿದನು. ಅವರು ಕಾಣುವಂತಾದಾಗ ಬಲಶಾಲಿಗಳು ದೂರಹಾರಬಲ್ಲರೂ ಆದ ಕಪಿಗಳು ಅವರೆಲ್ಲರನ್ನೂ ಕೊಂದರು ಮತ್ತು ಅವರು ಸತ್ತು ನೆಲದಮೇಲೆ ಬಿದ್ದರು. ಇದನ್ನು ಸಹಿಸಲಾರದೇ ರಾವಣನು, ಎಲ್ಲಕಪಿಗಳನ್ನೂ ಸಂಹರಿಸುವ ಉದ್ದೇಶದಿಂದ ಉಶಾನಸನ ವ್ಯೂಹವನ್ನು ರಚಿಸಿ ತನ್ನ ಬಲದೊಂದಿಗೆ ಹೊರಬಂದನು. ರಾಘವನಾದರೂ ಬೃಹಸ್ಪತಿಯ ವ್ಯೂಹರಚನೆಯನ್ನು ಮಾಡಿ ನಿಶಾಚರ ದಶಾನನನ ಸೇನೆಯನ್ನು ಎದುರಿಸಿ ಮುಂದೆಬಂದನು. ಅಲ್ಲಿ ರಾಮ-ರಾವಣರು ಯುದ್ಧದಲ್ಲಿ ಸೆಣಸಾಡಿದರು. ಹಾಗೆಯೇ ಲಕ್ಷ್ಮಣನು ಇಂದ್ರಜಿತುವಿನೊಂದಿಗೆ, ಸುಗ್ರೀವನು ವಿರೂಪಾಕ್ಷನೊಂದಿಗೆ, ನಿಖರವ್ರತನು ತಾರನೊಂದಿಗೆ, ನಲನು ತುಂಡನೊಂದಿಗೆ, ಮತ್ತು ಪಟುಷನು ಪನಸನೊಂದಿಗೆ ಯುದ್ಧ ಮಾಡಿದರು. ಯಾರನ್ನು ಯುದ್ಧದಲ್ಲಿ ಸರಿಸಾಟಿಯೆಂದು ಪರಿಗಣಿಸಿದರೋ ಅವರೊಂದಿಗೆ ಯುದ್ಧದ ವೇಳೆಗಳಲ್ಲಿ ಸ್ವಬಾಹುಬಲವನ್ನು ಆಶ್ರಯಿಸಿ ಯುದ್ಧಮಾಡಿದರು. ಆ ಹೊಡೆದಾಟವು ಹೇಡಿಗಳ ಭಯವನ್ನು ಹೆಚ್ಚುಮಾಡಿತು. ಮೈನವಿರೇಳಿಸುವ ಆ ಘೋರ ಯುದ್ಧವು ಹಿಂದೆ ನಡೆದ ದೇವಾಸುರರ ಯುದ್ಧದಂತಿತ್ತು. ರಾವಣನು ರಾಮನ ಮೇಲೆ ಶಕ್ತಿ, ಶೂಲ ಮತ್ತು ಖಡ್ಗಗಳ ಮಳೆಯನ್ನು ಸುರಿಸಲು, ರಾಘವನೂ ಕೂಡ ರಾವಣನನ್ನು ಹರಿತ ತೀಕ್ಷ್ಣ ಉಕ್ಕಿನ ಶರಗಳಿಂದ ಆಕ್ರಮಣಮಾಡಿದನು. ಹಾಗೆಯೇ ಲಕ್ಷ್ಮಣನು ಜಾಗರೂಕನಾಗಿದ್ದ ಇಂದ್ರಜಿತುವನ್ನು ಮರ್ಮಭೇದಿ ಶರಗಳಿಂದ ಘಾತಿಗೊಳಿಸಲು ಇಂದ್ರಜಿತುವೂ ಕೂಡ ಸೌಮಿತ್ರಿಯನ್ನು ಬಹುಶರಗಳಿಂದ ಭೇದಿಸಿದನು. ವಿಭೀಷಣನು ಪ್ರಹಸ್ತನ ಮೇಲೆ ಮತ್ತು ಪ್ರಹಸ್ತನು ವಿಭೀಷಣನ ಮೇಲೆ ಏನೂ ಚಿಂತಿಸದೇ ಪಕ್ಷಿಗಳ ರೆಕ್ಕೆಗಳುಳ್ಳ, ತೀಕ್ಷ್ಣಬಾಣಗಳನ್ನು ಹೊಡೆದರು. ಅಲ್ಲಿ ಬಲವತ್ತಾದ ಮಹಾಸ್ತ್ರಗಳ ಸಮಾಗಮವಾಗುತ್ತಿತ್ತು. ಇದರಿಂದ ಮೂರು ಲೋಕಗಳ ಸಕಲ ಚರಾಚರರೂ ವ್ಯಾಕುಲರಾದರು.

ಆಗ ಪ್ರಹಸ್ತನು ಬೇಗನೆ ವಿಭೀಷಣನನ್ನು ಎದುರಿಸಿ ಕರ್ಕಶವಾದ ರಣನಾದವನ್ನು ಕೂಗಿ ಗದೆಯಿಂದ ಹೊಡೆದನು. ಆದರೆ ಧೀಮಂತ ಮಹಾಬಾಹುವು ಭೀಮವೇಗದಿಂದ ಬಂದ ಗದೆಯ ಹೊಡೆತಕ್ಕೂ ಕಂಪಿಸದೇ ಹಿಮವತ್ಪರ್ವತದಂತೆ ಸ್ಥಿರವಾಗಿದ್ದನು. ವಿಭೀಷಣನು ಶತಘಂಟಾ ಎಂಬ ವಿಪುಲ ಮಹಾಶಕ್ತಿಯನ್ನು ಹಿಡಿದು ಅಭಿಮಂತ್ರಿಸಿ ಅವನ ಶಿರದ ಕಡೆಗೆ ಎಸೆದನು. ಆ ವೇಗವಾಗಿ ಬರುತ್ತಿರುವ ಮಿಂಚಿನಂತಿರುವ ಆಯುಧವು ರಾಕ್ಷಸನ ಶಿರವನ್ನು ಕತ್ತರಿಸಲು, ಭಿರುಗಾಳಿಗೆ ಸಿಲುಕಿದ ಮರವು ಬೀಳುವಂತೆ ಕೆಳಗುರುಳಿದುದು ಕಂಡಿತು. ಯುದ್ಧದಲ್ಲಿ ಪ್ರಹಸ್ತನು ಹತನಾದುದನ್ನು ನೋಡಿದ ಧೂಮ್ರಾಕ್ಷನು ಮಹಾವೇಗದಿಂದ ಬಂದು ಕಪಿಗಳನ್ನು ಆಕ್ರಮಣ ಮಾಡಿದನು. ನೋಡಲು ಭಯಂಕರವಾಗಿದ್ದ ಅವನ ಸೇನೆಯು ಮೋಡಗಳಂತೆ ಸೇನೆಯ ಮೇಲೆ ಬೀಳಲು, ಅದನ್ನು ಕಂಡ ವಾನರಪುಂಗವರು ತಕ್ಷಣವೇ ಚದುರಿಹೋದರು. ಆ ವಾನರಪುಂಗವರು  ಹಾಗೆ ಶೀಘ್ರವಾಗಿ ಚದುರಿಹೋದುದನ್ನು ನೋಡಿ ಕಪಿಶಾರ್ದೂಲ ಹನೂಮಂತನು ಸ್ಥಿರವಾಗಿ ನಿಂತು ಹೋರಾಡಿದನು. ರಣದಲ್ಲಿ ಸ್ಥಿತನಾಗಿದ್ದ ಪವನಾತ್ಮಜನನ್ನು ನೋಡಿ ಕಪಿಗಳು ಎಲ್ಲೆಡೆಯಿಂದ ಮಹಾವೇಗದಲ್ಲಿ ಬಂದು ಒಂದುಗೂಡಿದರು. ಆಗ ಅನ್ಯೋನ್ಯರೊಂದಿಗೆ ಹೋರಾಡುತ್ತಿರುವ ರಾಮ ಮತ್ತು ರಾವಣರ ಸೇನೆಗಳಲ್ಲಿ ಮೈ ನವಿರೇಳಿಸುವ ಮಹಾ ಶಬ್ಧದ ತುಮುಲವುಂಟಾಯಿತು. ರಕ್ತವನ್ನು ಸುರಿಸುವ ಆ ಘೋರ ಸಂಗ್ರಾಮವು ನಡೆಯುತ್ತಿರಲು, ಧೂಮ್ರಾಕ್ಷನು ಬಾಣಗಳಿಂದ ಕಪಿಸೇನೆಯನ್ನು ಪಲಾಯನವಾಗುವಂತೆ ಮಾಡಿದನು. ಶತ್ರುಗಳನ್ನು ಜಯಿಸುವ, ಪವನಾತ್ಮಜ ಹನೂಮಂತನು ಮುಂದುವರೆಯುತ್ತಿದ್ದ ಮಹಾಮಾತ್ರ ರಾಕ್ಷಸನನ್ನು ಬೇಗನೇ ಎದುರಿಸಿ ತಡೆದನು. ಆ ವಾನರ-ರಾಕ್ಷಸರ ನಡುವೆ ಅನ್ಯೋನ್ಯರನ್ನು ಗೆಲ್ಲುವ ಇಂದ್ರ-ಪ್ರಹ್ಲಾದರ ನಡುವಿನಂತಿರುವ ಘೋರವಾದ ಯುದ್ಧವು ನಡೆಯಿತು. ರಾಕ್ಷಸನು ಕಪಿಯನ್ನು ಗದೆ ಮತ್ತು ಪರಿಘಗಳಿಂದ ಹೊಡೆಯಲು ಕಪಿಯು ರಾಕ್ಷಸನನ್ನು ಮರಗಳು, ಕೊಂಬೆಗಳು ಮತ್ತು ಇತರ ಎಲ್ಲವುಗಳಿಂದ ಹೊಡೆದನು. ಆಗ ಅತಿಕಾಯನಾದ ಮಾರುತಾತ್ಮಜ ಧೀಮಾನ್ ಹನೂಮಂತನು ಕುದುರೆಗಳು ಮತ್ತು ರಥಗಳ ಸಹಿತ ಧೂಮ್ರಾಕ್ಷನನ್ನು ವಧಿಸಿದನು. ರಾಕ್ಷಸೋತ್ತಮ ಧೂಮ್ರಾಕ್ಷನು ಹತನಾದುದನ್ನು ನೋಡಿ ವಾನರರ ಉತ್ಸಾಹವು ಮರಳಿ ಅವರು ಸೈನಿಕರನ್ನು ಸಂಹರಿಸಿದರು. ಜಯವನ್ನು ಪಡೆಯುತ್ತಿದ್ದ ಬಲಶಾಲಿ ಕಪಿಗಳಿಂದ ಹತರಾಗುತ್ತಿದ್ದ ಆ ರಾಕ್ಷಸರು ತಮ್ಮ ಸಂಕಲ್ಪಗಳನ್ನು ಕಡಿದುಕೊಂಡು ಭಯದಿಂದ ಲಂಕೆಗೆ ಮರಳಿದರು. ಭಗ್ನರಾದ, ಸಾಯದೇ ಉಳಿದ ನಿಶಾಚರರು ಪುರವನ್ನು ಸೇರಿ ಎಲ್ಲವನ್ನೂ ನಡೆದಹಾಗೆ ರಾಜ ರಾವಣನಿಗೆ ನಿವೇದಿಸಿದರು. ಯುದ್ಧದಲ್ಲಿ ಪ್ರಹಸ್ತ ಮತ್ತು ಮಹೇಷ್ವಾಸ ಧೂಮ್ರಾಕ್ಷರು ಸೇನೆಯೊಂದಿಗೆ ವಾನರರಿಂದ ಹತರಾಗಿದ್ದುದನ್ನು ಕೇಳಿ ರಾವಣನು ಸುದೀರ್ಘ ನಿಟ್ಟುಸಿರನ್ನು ಬಿಟ್ಟು ವರಾಸನದಿಂದ ಎದ್ದು ಹೇಳಿದನು: “ಕುಂಭಕರ್ಣನು ಕಾರ್ಯವೆಸಗುವ ಕಾಲವು ಬಂದಿದೆ.”

ಹೀಗೆ ಹೇಳಿ ಜೋರಾಗಿ ಶಬ್ಧಮಾಡುವ ವಿವಿಧ ಸಂಗೀತ ಸಲಕರಣೆಗಳಿಂದ ಮಲಗಿದ್ದ ನಿದ್ರಾಲು ಕುಂಭಕರ್ಣನನ್ನು ಎಬ್ಬಿಸಿದನು. ಮಹಾಯತ್ನದಿಂದ ಅವನನ್ನು ಎಚ್ಚರಿಸಲು, ನಿದ್ರೆಯನ್ನು ಕಳೆದ ಆಯಾಸವನ್ನು ಕಳೆದುಕೊಂಡ ರಾಕ್ಷಸಾಧಿಪನು ಆರಾಮವಾಗಿ ಕುಳಿತುಕೊಳ್ಳಲು ದಶಗ್ರೀವನು ಮಹಾಬಲಿ ಕುಂಭಕರ್ಣನಿಗೆ ಹೇಳಿದನು: “ಕುಂಭಕರ್ಣ! ಈ ರೀತಿ ನಿದ್ರೆಮಾಡಬಲ್ಲ ನೀನು ಧನ್ಯ! ಈ ದಾರುಣ ಕಾಲದ ಮಹಾಭಯವು ನಿನಗೆ ತಿಳಿದಿಲ್ಲ. ಈ ರಾಮನು ಕಪಿಗಳೊಂದಿಗೆ ಸೇತುವೆಯ ಮೂಲಕ ಸಾಗರವನ್ನು ದಾಟಿ ಬಂದು ನಮ್ಮೆಲ್ಲರನ್ನೂ ಅವಹೇಳಿಸಿ ಮಹಾ ಕದನವನ್ನು ಮಾಡುತ್ತಿದ್ದಾನೆ. ನಾನು ಸೀತಾ ಎಂಬ ಹೆಸರಿನ ಅವನ ಭಾರ್ಯೆ ಮತ್ತು ಜನಕನ ಮಗಳನ್ನು ಅಪಹರಿಸಲು, ಅವಳನ್ನು ಬಿಡಿಸಲು ಅವನು ಸಾಗರಕ್ಕೆ ಸೇತುವೆಯನ್ನು ಕಟ್ಟಿದನು. ಅವನಿಂದ ಪ್ರಸ್ಥನೇ ಮೊದಲಾದ ಮಹಾ ಸ್ವಜನರು ಹತರಾಗಿದ್ದಾರೆ. ನೀನಲ್ಲದೇ ಬೇರೆ ಯಾರೂ ಅವನನ್ನು ಕೊಲ್ಲಲಾರರು! ಅವನು ಕವಚವನು ಧರಿಸಿದ್ದಾನೆ. ಇಂದೇ ಹೊರಡು! ರಾಮನೇ ಮೊದಲಾದ ಶತ್ರುಗಳೆಲ್ಲರನ್ನೂ ಸಮರದಲ್ಲಿ ಜಯಿಸು! ಈ ಇಬ್ಬರು ದೂಷಣನ ತಮ್ಮಂದಿರು - ವಜ್ರವೇಗ ಮತ್ತು ಪ್ರಮಥಿ – ತಮ್ಮ ಮಹಾಸೇನೆಗಳೊಂದಿಗೆ ನಿನ್ನನ್ನು ಅನುಸರಿಸುತ್ತಾರೆ.”

ತರಸ್ವಿ ಕುಂಭಕರ್ಣನಿಗೆ ಹೀಗೆ ಹೇಳಿ ರಾಕ್ಷಸಪತಿಯು ವಜ್ರವೇಗ ಮತ್ತು ಪ್ರಮಥಿಗಳಿಗೆ ಮಾಡಬೇಕಾದುದರ ಕುರಿತು ಆಜ್ಞೆಯನ್ನಿತ್ತನು. ಆ ವೀರ ದೂಷಣಾನುಜರಿಬ್ಬರೂ ಹಾಗೇ ಆಗಲೆಂದು ರಾವಣನಿಗೆ ಹೇಳಿ ಕುಂಭಕರ್ಣನನ್ನು ಮುಂದಿಟ್ಟು ಸೇನೆಯೊಂದಿಗೆ ಪುರದಿಂದ ಹೊರಟರು.

ಕುಂಭಕರ್ಣನ ವಧೆ

ಆಗ ಅನುಯಾಯಿಗಳೊಂದಿಗೆ ಪುರದಿಂದ ಹೊರಟ ಕುಂಭಕರ್ಣನು ವಿಜಯದಿಂದ ಸೊಕ್ಕು ನಿಂತಿದ್ದ ಕಪಿಸೇನೆಯನ್ನು ಕಂಡನು. ಕಪಿಗಳು ಅವನೆಡೆಗೆ ಓಡಿ ಬಂದು, ಎಲ್ಲಕಡೆಯಿಂದಲೂ ಸುತ್ತುವರೆದು, ಆ ಮಹಾಕಾಯನನ್ನು ಹಲವಾರು ದೊಡ್ಡ ಮರಗಳಿಂದ ಹೊಡೆದರು ಮತ್ತು ಉತ್ತಮ ಭಯವನ್ನು ತೊರೆದು ಕೈಬೆರಳಿನ ಉಗುರುಗಳಿಂದ ಕೆರೆದು ಗಾಯಗೊಳಿಸಿದರು. ಯುದ್ಧಮಾರ್ಗದಲ್ಲಿ ಬಹುರೀತಿಯಲ್ಲಿ ಯುದ್ಧಮಾಡುತ್ತಿದ್ದ ವಾನರರು ಆ ಭಯಂಕರ ರಾಕ್ಷಸನನ್ನು ನಾನಾ ಆಯುಧಗಳಿಂದ ಹೊಡೆದರು. ಹೀಗೆ ಹೊಡೆಯುತ್ತಿರಲು ಅವನು ಜೋರಾಗಿ ನಗುತ್ತಾ ಪನಸ, ಗವಾಕ್ಷ, ವಜ್ರಬಾಹುವೇ ಮೊದಲಾದ ವಾನರರನ್ನು ಭಕ್ಷಿಸತೊಡಗಿದನು. ರಾಕ್ಷಸ ಕುಂಭಕರ್ಣನ ಆ ದುಃಖಕರ ಕೃತ್ಯವನ್ನು ನೋಡಿ ತಾರನೇ ಮೊದಲಾದವರು ಕಷ್ಟದಲ್ಲಿ ಕಿರುಚಿಕೊಂಡರು. ಜೋರಾಗಿ ಕಿರುಚಿಕೊಳ್ಳುತ್ತಿರುವ ತಾರ ಮತ್ತು ಇತರ ಕಪಿಗುಂಪುಗಳ ಬಳಿಗೆ ಸುಗ್ರೀವನು ಕುಂಭಕರ್ಣನನ್ನು ಎದುರಿಸುವ ಭಯವಿಲ್ಲದೇ ಓಡಿ ಬಂದನು. ಆ ಮಹಾಮನಸ್ವಿ ಕಪಿಕುಂಜರನು ವೇಗದಿಂದ ಶಾಲವೃಕ್ಷವನ್ನು ಕುಂಭಕರ್ಣನ ತಲೆಗೆ ಬಲವತ್ತಾಗಿ ಬಡಿದನು. ಆ ಮಹಾತ್ಮ ಮಹಾವೇಗ ಸುಗ್ರೀವನು ಕುಂಭಕರ್ಣನ ನೆತ್ತಿಯಮೇಲೆ ಹೊಡೆದ ಶಾಲವೃಕ್ಷವು ಪುಡಿಪುಡಿಯಾಯಿತೇ ವಿನಃ ಅವನನ್ನು ಹಂದಾಡಿಸಲೂ ಆಗಲಿಲ್ಲ. ಆಗ ಶಾಲವು ತಾಗಿದುದರಿಂದ ಸಂಪೂರ್ಣವಾಗಿ ಎಚ್ಚೆತ್ತ ಕುಂಭಕರ್ಣನು ಸುಗ್ರೀವನ ತೋಳುಗಳನ್ನು ಬಿಡಿದು ಬಲವಾಗಿ ಎಳೆದನು. ರಾಕ್ಷಸ ಕುಂಭಕರ್ಣನಿಂದ ಎತ್ತಿಕೊಂಡು ಹೋಗಲ್ಪಟ್ಟ ಸುಗ್ರೀವನನ್ನು ನೋಡಿ ಮಿತ್ರನಂದನ, ವೀರ ಸೌಮಿತ್ರಿಯು ಅವನಲ್ಲಿಗೆ ಧಾವಿಸಿ ಬಂದನು. ಪರವೀರಹ ಲಕ್ಷ್ಮಣನು ಉದ್ದವಾದ ಮಹಾವೇಗದ ಬಂಗಾರದ ರೆಕ್ಕೆಗಳನ್ನುಳ್ಳ ಮಹಾಶರವನ್ನು ಕುಂಭಕರ್ಣನ ಮೇಲೆ ಪ್ರಯೋಗಿಸಿದನು. ಅದು ಅವನ ದೇಹಾವರಣವನ್ನು ಬಿರಿದು, ದೇಹವನ್ನು ಹೊಕ್ಕು, ರಕ್ತದಿಂದ ತೋಯ್ದು ಹಿಂದಿನಿಂದ ಬಂದು ನೆಲವನ್ನು ಹೊಕ್ಕಿತು. ಅವನ ಹೃದಯವು ಸೀಳಿಹೋಗಲು ಮಹೇಷ್ವಾಸ ಕುಂಭಕರ್ಣನು ಕಪೀಶ್ವರನನ್ನು ಬಿಸುಟು, ಶಿಲಾಯುಧವನ್ನು ಹಿಡಿದು ಆ ಮಹಾಶಿಲವನ್ನು ಎತ್ತಿ ಸೌಮಿತ್ರಿಯ ಮೇಲೆ ಎರಗಿದನು. ತನ್ನ ಕಡೆ ಧಾವಿಸಿ ಬರುತ್ತಿದ್ದ ಅವನ ಎತ್ತಿದ ತೋಳುಗಳನ್ನು ಎರಡು ಕೋಡುಗಳಿರುವ ಹರಿತ ಬಾಣಗಳಿಂದ ಕತ್ತರಿಸಿದನು. ಆಗ ಅವನು ಚತುರ್ಭುಜನಾದನು. ಶಿಲಾಯುಧಗಳನ್ನು ಹಿಡಿದಿರುವ ಎಲ್ಲ ಭುಜಗಳನ್ನೂ ಹರಿತ ಬಾಣಗಳಿಂದ ಕತ್ತರಿಸಿ ಸೌಮಿತ್ರಿಯು ತನ್ನ ಅಸ್ತ್ರ ಲಘುತ್ವವನ್ನು ಪ್ರದರ್ಶಿಸಿದನು. ಆಗ ಅವನು ಬಹುಪಾದಶಿರೋಭುಜಗಳ ಅತಿಕಾಯನಾಗಿ ಬೆಳೆಯಲು, ಪರ್ವತಗಳ ರಾಶಿಯಂತಿದ್ದ ಅವನನ್ನು ಸೌಮಿತ್ರಿಯು ಬ್ರಹ್ಮಾಸ್ತ್ರದಿಂದ ಸುಟ್ಟುಹಾಕಿದನು. ದಿವ್ಯಾಸ್ತ್ರದಿಂದ ಹೊಡೆಯಲ್ಪಟ್ಟ ಆ ಮಹಾವೀರನು ರಣದಲ್ಲಿ ಚಿಗುರಿದ ಮರವು ಮಹಾಮಿಂಚಿನ ಹೊಡೆತಕ್ಕೆ ಸಿಕ್ಕಿ ಸುಟ್ಟು ಬೀಳುವಂತೆ ಬಿದ್ದನು. ಆ ವೃತ್ರಸಂಕಾಶ ತರಸ್ವಿ ಕುಂಭಕರ್ಣನು ನೆಲದ ಮೇಲೆ ಬಿದ್ದು ಅಸುನೀಗಿದುದನ್ನು ಕಂಡು ರಾಕ್ಷಸರು ಹೆದರಿ ಓಡಿ ಹೋದರು. ಹಾಗೆ ಓಡಿ ಹೋಗುತ್ತಿರುವ ಯೋಧರನ್ನು ನೋಡಿ ದೂಷಣನ ತಮ್ಮಂದಿರೀರ್ವರು ಸಂಕೃದ್ಧರಾಗಿ ಓಡಿಬಂದು ಸೌಮಿತ್ರಿಯನ್ನು ಎದುರಿಸಿದರು. ಸೌಮಿತ್ರಿಯು ಸಂಕೃದ್ಧರಾಗಿದ್ದ ವಜ್ರವೇಗ ಮತ್ತು ಪ್ರಮಥಿಯರೀರ್ವರನ್ನೂ ರೆಕ್ಕೆಗಳುಳ್ಳ ಬಾಣಗಳಿಂದ ಬರಮಾಡಿಕೊಂಡನು. ಆಗ ದೂಷಣನ ತಮ್ಮಂದಿರ ಮತ್ತು ದೀಮತ ಲಕ್ಷ್ಮಣನ ನಡುವೆ ಲೋಮಹರ್ಷಣ ತುಮುಲ ಯುದ್ಧವು ನಡೆಯಿತು. ಅವನು ರಾಕ್ಷಸರ ಮೇಲೆ ಮಹಾಶರಗಳ ಮಳೆಯನ್ನು ಸುರಿಸಿದನು. ಸಂಕೃದ್ದರಾದ ಆ ವೀರರಿಬ್ಬರೂ ಕೂಡ ಅವನ ಮೇಲೆ ಶರಗಳ ಮಳೆಯನ್ನು ಸುರಿಸಿದರು. ವಜ್ರವೇಗ ಪ್ರಮಥಿಯರ ಮತ್ತು ಸಂಪ್ರಹಾರ ಮಹಾಬಾಹು ಸೌಮಿತ್ರಿಯ ನಡುವಿನ ಈ ದಾರುಣ ಯುದ್ಧವು ಸ್ವಲ್ಪ ಕಾಲ ನಡೆಯಿತು.

ಆಗ ಮಾರುತಾತ್ಮಜ ಹನೂಮಂತನು ಗಿರಿಯ ಶಿಖರವನ್ನು ಹಿಡಿದು, ಅಕ್ರಮಣ ಮಾಡಿ ರಾಕ್ಷಸ ವಜ್ರವೇಗನ ಪ್ರಾಣವನ್ನು ತೆಗೆದುಕೊಂಡನು. ಮಹಾಬಲಿ ಕಪಿ ನೀಲನು ದೊಡ್ಡ ಬಂಡೆಯೊಂದಿಗೆ ದೂಷಣನ ತಮ್ಮ ಪ್ರಮಥಿಯನ್ನು ಆಕ್ರಮಣ ಮಾಡಿ ಜಜ್ಜಿದನು. ಆಗ ರಾಮ-ರಾವಣರ ಸೇನೆಗಳ ನಡುವೆ ಅನ್ಯೋನ್ಯರನ್ನು ಕೊಲ್ಲುವ ಕಟುಕ ಸಂಗ್ರಾಮವು ಪುನಃ ಪ್ರಾರಂಭವಾಯಿತು. ಆ ವನವಾಸಿಗಳು ನೂರಾರು ಸಂಖ್ಯೆಗಳಲ್ಲಿ ರಾಕ್ಷಸರನ್ನು ಕೊಂದರು, ರಾಕ್ಷಸರೂ ವನವಾಸಿಗಳನ್ನು ಕೊಂದರು. ಆದರೆ ಅಲ್ಲಿ ಸತ್ತ ರಾಕ್ಷಸರ ಸಂಖ್ಯೆ ವಾನರರಕ್ಕಿಂತಲೂ ಪ್ರಾಯಶಃ ಅಧಿಕವಾಗಿತ್ತು.

ಇಂದ್ರಜಿತು ಕಾಳಗ

ಆಗ ಅನುಯಾಯಿಗಳಾದ ಮಹೇಷ್ವಾಸ ಪ್ರಹಸ್ತ ಮತ್ತು ಅತಿತೇಜಸ ಧೂಮ್ರಾಕ್ಷರೊಂದಿಗೆ ಕುಂಭಕರ್ಣನು ರಣದಲ್ಲಿ ಹತನಾದುದನ್ನು ಕೇಳಿ ರಾವಣನು ಶೂರ, ಪುತ್ರ ಇಂದ್ರಜಿತುವಿಗೆ ಹೇಳಿದನು: “ಅಮಿತ್ರಘ್ನ! ಸುಗ್ರೀವ-ಸೌಮಿತ್ರಿಯರೊಂದಿಗೆ ರಾಮನನ್ನು ಕೊಲ್ಲು! ಶಚೀಪತಿ ಸಹಸ್ರಾಕ್ಷ ವಜ್ರಧರನನ್ನು ರಣದಲ್ಲಿ ಗೆದ್ದು ಬೆಳಗುವ ಯಶಸ್ಸನ್ನು ಗಳಿಸಿರುವ ನೀನೇ ನನ್ನ ಸತ್ಪುತ್ರ! ಅದೃಶ್ಯನಾಗಿ ಅಥವಾ ದೃಶ್ಯನಾಗಿ ಪಡೆದಿರುವ ದಿವ್ಯವಾದ ಶ್ರೇಷ್ಠ ಶರಗಳಿಂದ ನನ್ನ ಶತ್ರುಗಳನ್ನು ಕೊಲ್ಲು. ರಾಮ, ಲಕ್ಷ್ಮಣ, ಸುಗ್ರೀವರು ನಿನ್ನ ಬಾಣಗಳ ಸ್ಪರ್ಷವನ್ನು ಸಹಿಸಲು ಅಸಮರ್ಥರು. ಇನ್ನು ಅವರ ಅನುಯಾಯಿಗಳನ್ನು ಬಿಡು! ಪ್ರಹಸ್ತ,-ಕುಂಭಕರ್ಣರು ಮಾಡಲಿಕ್ಕಾಗದೇ ಇದ್ದ ಖರನ ಪ್ರತೀಕಾರವನ್ನು ರಣದಲ್ಲಿ ನೀನೇ ಪೂರೈಸಬೇಕು. ಹೋಗು! ಹಿಂದೆ ವಾಸವನನ್ನು ಸೆರೆಹಿಡಿದಂತೆ ಇಂದು ನೀನು ಹರಿತ ಬಾಣಗಳಿಂದ ಸೈನಿಕರೊಂದಿಗೆ ಶತ್ರುಗಳನ್ನು ಕೊಂದು ನನ್ನನ್ನು ಸಂತೋಷಗೊಳಿಸು.”

ಈ ಮಾತುಗಳಿಗೆ ಹಾಗೆಯೇ ಆಗಲೆಂದು ಹೇಳಿ ಇಂದ್ರಜಿತುವು ಸಂಪೂರ್ಣಕವಚಗಳನ್ನು ಧರಿಸಿ, ರಥವನ್ನೇರಿ, ರಣರಂಗದೆಡೆಗೆ ಹೊರಟನು. ಅಲ್ಲಿ ಆ ರಾಕ್ಷಸ ಪುಂಗವನು ತನ್ನ ಹೆಸರನ್ನು ಜೋರಾಗಿ ಗರ್ಜಿಸಿ ಸಮರದಲ್ಲಿ ಶುಭಲಕ್ಷಣ ಲಕ್ಷ್ಮಣನನ್ನು ಆಹ್ವಾನಿಸಿದನು. ಲಕ್ಷ್ಮಣನು ಶರದೊಂದಿಗೆ ಧನುವನ್ನು ಹಿಡಿದು ಚಪ್ಪಾಳೆಯ ಘೋಷದೊಂದಿಗೆ ಕ್ಷುದ್ರಮೃಗವನ್ನು ಸಿಂಹವು ಬೆದರಿಸುವಂತೆ ಓಡಿಬಂದನು. ವಿಜಯಾಕಾಂಕ್ಷಿಗಳಾಗಿದ್ದ, ದಿವ್ಯಾಸ್ತ್ರಕೋವಿದರಾಗಿದ್ದ, ಅನ್ಯೋನ್ಯರೊಂದಿಗೆ ಸ್ಪರ್ಧಿಸುತ್ತಿದ್ದ ಅವರಿಬ್ಬರ ನಡುವೆ ಮಹಾ ಯುದ್ಧವು ನಡೆಯಿತು. ತನ್ನ ಬಾಣಗಳ ಯುದ್ಧವು ಏನೂ ವಿಶೇಷವಾಗಿಲ್ಲವೆಂದಾಗ ಬಲಿಗಳಲ್ಲಿ ಶ್ರೇಷ್ಠ ರಾವಣಿಯು ಇನ್ನೂ ಗುರುತರ ಪ್ರಯತ್ನವನ್ನು ಮಾಡಿದನು. ಅವನು ಮಹಾವೇಗದ ತೋಮರಗಳಿಂದ ಅವನನ್ನು ಹೊಡೆದನು. ಆದರೆ ಸೌಮಿತ್ರಿಯು ಬರತ್ತಿರುವವುಗಳನ್ನು ನಿಶಿತ ಶರಗಳಿಂದ ಕತ್ತರಿಸಿದನು. ಹರಿತ ಶರಗಳಿಂದ ತುಂಡರಿಸಲ್ಪಟ್ಟು ಅವು ಭೂಮಿಯ ಮೇಲೆ ಬಿದ್ದವು. ಆಗ ವಾಲಿಸುತ ಶ್ರೀಮಾನ್ ಅಂಗದನು ವೃಕ್ಷವನ್ನು ಕಿತ್ತು ಹಿಡಿದು ಓಡಿ ಬಂದು ಮಹಾವೇಗದಲ್ಲಿ ಅವನ ನೆತ್ತಿಯಮೇಲೆ ಹೊಡೆದನು. ಸಂಭ್ರಾಂತನಾಗದೇ ವೀರ್ಯವಂತ ಇಂದ್ರಜಿತುವು ಪ್ರಾಸವೊಂದನ್ನು ಅವನ ಎದೆಗೆ ಎಸೆಯಲು, ಲಕ್ಷ್ಮಣನು ಆ ಪ್ರಾಸವನ್ನೂ ಕೂಡ ತುಂಡರಿಸಿದನು. ಸಮೀಪಕ್ಕೆ ಬಂದಿದ್ದ ವೀರ ವಾನರಪುಂಗವ ಅಂಗದನ ಎಡಕ್ಕೆ ರಾವಣಾತ್ಮಜನು ಗದೆಯಿಂದ ಹೊಡೆದನು. ಆದರೆ ಬಲವಾನ್ ವಾಲಿಸುತನು ಆ ಪ್ರಹಾರಕ್ಕೆ ಮನಗೊಡಲಿಲ್ಲ. ಆ ಅಮಿತ್ರಜಿತುವು ಕ್ರೋಧದಿಂದ ಶಾಲವೃಕ್ಷದ ಕಾಂಡವನ್ನು ಇಂದ್ರಜಿತುವಿನೆಡೆಗೆ ಎಸೆದನು. ಇಂದ್ರಜಿತುವನ್ನು ಕೊಲ್ಲಲು ಕ್ರೋಧದಿಂದ ಅಂಗದನು ಬಿಸುಟ ಆ ವೃಕ್ಷವು ಕುದುರೆಗಳು ಮತ್ತು ಸಾರಥಿಗಳೊಂದಿಗೆ ಇಂದ್ರಜಿತುವಿನ ರಥವನ್ನು ಧ್ವಂಸಮಾಡಿತು. ಅಶ್ವ-ಸಾರಥಿಗಳು ಹತರಾಗಲು ರಾವಣಾತ್ಮಜನು ಮಾಯೆಯಿಂದ ಆ ರಥದಿಂದ ಅಲ್ಲಿಯೇ ಅಂತರ್ಧಾನನಾದನು. ಆ ಬಹುಮಾಯಿ ರಾಕ್ಷಸನು ಅಂತರ್ಧಾನನಾದುದನ್ನು ತಿಳಿದ ರಾಮನು ಅಲ್ಲಿಗೆ ಬಂದು ಆ ಸೇನೆಯನ್ನು ರಕ್ಷಿಸಿದನು. ಆಗ ವರದಿಂದ ಪಡೆದ ಶರಗಳಿಂದ ಅವನು ರಾಮ ಮತ್ತು ಮಹಾರಥಿ ಲಕ್ಷ್ಮಣರ ಅಂಗಾಂಗಗಳಿಗೆ ಗುರಿಯಿಟ್ಟು ಹೊಡೆದನು. ಅದೃಶ್ಯನಾಗಿರುವ ಮಾಯೆಯಿಂದ ಅಂತರ್ಧಾನನಾಗಿ ಹೋರಾಡುತ್ತಿರುವ ಆ ರಾವಣಿಯನ್ನು ಶೂರ ರಾಮ-ಲಕ್ಷ್ಮಣರು ಶರಗಳಿಂದ ಹೋರಾಡಿದರು. ಅವನು ರೋಷದಿಂದ ಆ ಪುರುಷಸಿಂಹರ ಎಲ್ಲ ಅಂಗಾಂಗಗಳ ಮೇಲೂ ನೂರಾರು ಸಹಸ್ರಾರು ಬಾಣಗಳಿಂದ ಹೊಡೆದನು. ಬಿಡುವಿಲ್ಲದೇ ಬಾಣಗಳನ್ನು ಬಿಡುತ್ತಿದ್ದ ಅದೃಶ್ಯನಾದ ಅವನನ್ನು ಹುಡುಕುತ್ತಾ ಕಪಿಗಳು ಮಹಾಶಿಲೆಗಳನ್ನು ಹಿಡಿದು ಆಕಾಶವನ್ನೇರಿದರು. ಆದರೆ ಅದೃಶ್ಯನಾಗಿದ್ದ ಆ ವೀರ ರಾವಣಿ ರಾಕ್ಷಸನು ಮಾಯೆಯಿಂದ ಅವರನ್ನು ಆವರಿಸಿ ಬಾಣಗಳಿಂದ ಹೊಡೆದುರುಳಿಸಿದನು. ಆ ಶರಗಳಿಂದ ಮುಚ್ಚಲ್ಪಟ್ಟ ವೀರ ಸಹೋದರ ರಾಮ-ಲಕ್ಷ್ಮಣರು ಸೂರ್ಯ ಚಂದ್ರರಂತೆ ಗಗನದಿಂದ ಭೂಮಿಯ ಮೇಲೆ ಬಿದ್ದರು.

ಇಂದ್ರಜಿತು ಸಂಹಾರ

ಆ ಅಮಿತತೇಜಸ್ವಿ ಸಹೋದರರಿಬ್ಬರೂ ಕೆಳಗೆ ಬಿದ್ದುದನ್ನು ನೋಡಿ ರಾವಣಿಯು ವರಗಳಿಂದ ಪಡೆದ ಶರಗಳಿಂದ ಅವರನ್ನು ಬಂಧಿಸಿದನು. ರಣದಲ್ಲಿ ಇಂದ್ರಜಿತುವಿನಿಂದ ಶರಜಾಲದಲ್ಲಿ ಬದ್ಧರಾಗಿದ್ದ ಆ ಪುರುಷವ್ಯಾಘ್ರರು ಪಂಜರದಲ್ಲಿದ್ದ ಎರಡು ಪಕ್ಷಿಗಳಂತೆ ಕಂಡುಬಂದರು. ಅವರಿಬ್ಬರೂ ನೂರಾರು ಬಾಣಗಳಿಂದ ಚುಚ್ಚಲ್ಪಟ್ಟು ನೆಲದ ಮೇಲೆ ಬಿದ್ದಿರುವುದನ್ನು ನೋಡಿ ಸುಗ್ರೀವನು ಸುಷೇಣ, ಮೈಂದ, ದ್ವಿವಿದ, ಕುಮುದ, ಅಂಗದ, ಹನೂಮಾನ್, ನೀಲ, ತಾರ ಮತ್ತು ಕಪೀಶ್ವರ ನಲ ಮೊದಲಾದ ಕಪಿಗಳೊಂದಿಗೆ ಅವರನ್ನು ಸುತ್ತುವರೆದು ನಿಂತುಕೊಂಡನು. ಆಗ ಕೃತಕರ್ಮಿ ವಿಭೀಷಣನು ಆ ಪ್ರದೇಶಕ್ಕೆ ಬಂದನು ಮತ್ತು ಆ ವೀರರಿಬ್ಬರನ್ನೂ ಪ್ರಜ್ಞಾಸ್ತ್ರವನ್ನು ಪ್ರಯೋಗಿಸಿ ಎಬ್ಬಿಸಿದನು. ಸುಗ್ರೀವನು ಕ್ಷಣದಲ್ಲಿಯೇ ಅವರಿಂದ ಬಾಣಗಳನ್ನು ಕಿತ್ತೊಗೆದು ಮುಳ್ಳುಗಳಿಂದ ಮುಕ್ತಿನೀಡುವ ದಿವ್ಯಮಂತ್ರದ ಮಹಾ ಔಷಧಿಯನ್ನು ಲೇಪಿಸಿದನು. ಎಚ್ಚೆತ್ತ ಆ ನರವರರು ಬಾಣಗಳ ರಹಿತರಾಗಿ ಮೇಲೆದ್ದರು. ಆ ಮಹಾರಥಿಗಳು ಕ್ಷಣದಲ್ಲಿಯೇ ಯುದ್ಧದ ಆಯಾಸವನ್ನು ಕಳೆದುಕೊಂಡರು. ಆಗ ವಿಭೀಷಣನು ಇಕ್ಷ್ವಾಕುನಂದನ ರಾಮನು ವಿಜ್ವರನಾದುದನ್ನು ನೋಡಿ ಕೈಮುಗಿದು ಈ ಮಾತುಗಳನ್ನಾಡಿದನು: “ಅರಿಂದಮ! ಈ ಗುಹ್ಯಕನು ರಾಜರಾಜನ ಶಾಸನದಂತೆ ಶ್ವೇತಾದ್ರಿಯಿಂದ ಈ ನೀರನ್ನು ಹಿಡಿದು ಬಂದಿದ್ದಾನೆ. ಪರಂತಪ! ಮಹಾರಾಜ ಕುಬೇರನು ಈ ನೀರನ್ನು ಅಂತರ್ಧಾನರಾದವರ ದರ್ಶನಕ್ಕಾಗಿ ಕಳುಹಿಸಿಕೊಟ್ಟಿದ್ದಾನೆ. ಇದನ್ನು ಕಣ್ಣಿಗೆ ಮುಟ್ಟಿಸಿಕೊಂಡರೆ ಅಂತರ್ಹಿತಭೂತಗಳು ನಿನಗೆ ಮತ್ತು ಇದನ್ನು ನೀನು ಕೊಟ್ಟವರಿಗೆ ಕಾಣಿಸಿಕೊಳ್ಳುತ್ತವೆ.”

ಹಾಗೆಯೇ ಆಗಲೆಂದು ರಾಮನು ಆ ಸತ್ಕೃತ ನೀರನ್ನು ಸ್ವೀಕರಿಸಿ ಕಣ್ಣುಗಳನ್ನು ತೊಳೆದುಕೊಳ್ಳಲು ಹಾಗೆಯೇ ಮಹಾಮನಸ್ವಿ ಲಕ್ಷ್ಮಣನೂ, ಸುಗ್ರೀವ-ಜಾಂಬವಂತರೂ, ಹನೂಮಂತ-ಅಂಗದರೂ, ಮೈಂದ, ದ್ವಿವಿದ, ನೀಲರೂ ಮತ್ತು ಹೆಚ್ಚಾಗಿ ಎಲ್ಲ ವಾನರಸತ್ತಮರೂ ಮಾಡಿದರು. ಆಗ ವಿಭೀಷಣನು ಹೇಳಿದಂತೆಯೇ ನಡೆಯಿತು. ಕ್ಷಣದಲ್ಲಿಯೇ ಅವರ ಕಣ್ಣುಗಳು ಅತೀಂದ್ರಿಯಗಳಾದವು. ಕೃತಕರ್ಮಿ ಇಂದ್ರಜಿತುವು ಮಾಡಿಮುಗಿಸಿದ ತನ್ನ ಕೆಲಸವನ್ನು ತಂದೆಗೆ ತಿಳಿಸಿ ತ್ವರೆಯಿಂದ ರಣರಂಗದ ಕಡೆ ಪುನಃ ಧಾವಿಸಿದನು. ಯುದ್ಧಮಾಡಲು ಪುನಃ ಬಂದಿದ್ದ ಸಂಕೃದ್ಧನಾಗಿದ್ದ ಆ ಶತ್ರುವನ್ನು ವಿಭೀಷಣನ ಸಲಹೆಯಂತೆ ಸೌಮಿತ್ರಿಯು ಎದುರಿಸಿದನು. ಈಗ ಎಚ್ಚರಗೊಂಡ ಲಕ್ಷ್ಮಣನು ಜಯದಿಂದ ಸೊಕ್ಕಿದ್ದ ಶತ್ರುವನ್ನು ಅವನು ಆಹ್ನೀಕವನ್ನು ಮಾಡುವುದರೊಳಗೇ ಕೊಲ್ಲಲು ಬಯಸಿ ಕುಪಿತನಾಗಿ ಶರಗಳಿಂದ ಹೊಡೆದನು. ಆಗ ಅನ್ಯೋನ್ಯರನ್ನು ಜಯಿಸಲು ಬಯಸಿದ ಅವರೀರ್ವರ ನಡುವೆ, ಶಕ್ರ-ಪ್ರಹ್ಲಾದರ ನಡುವೆ ನಡೆದಂತಹ ಅತೀವವಾದ, ವಿಚಿತ್ರವೂ ಆಶ್ಚರ್ಯವೂ ಆದ ಯುದ್ಧವು ನಡೆಯಿತು. ಇಂದ್ರಜಿತುವು ಸೌಮಿತ್ರಿಯನ್ನು ತೀಕ್ಷ್ಣವಾದ ಮರ್ಮಭೇದಿ ಶರಗಳಿಂದ ಚುಚ್ಚಲು ಸೌಮಿತ್ರಿಯು ಮುಟ್ಟಲು ಬೆಂಕಿಯಂತಿರುವ ಶರಗಳಿಂದ ರಾವಣಿಯನ್ನು ಹೊಡೆದನು. ಸೌಮಿತ್ರಿಯ ಬಾಣಗಳು ತಾಗಿ ಕ್ರೋಧಮೂರ್ಛಿತನಾದ ರಾವಣಿಯು ಲಕ್ಷ್ಮಣನ ಮೇಲೆ ವಿಷಪೂರಿತ ಸರ್ಪಗಳಂತಿರುವ ಬಾಣಗಳನ್ನು ಪ್ರಯೋಗಿಸಿದನು. ಲಕ್ಷ್ಮಣನು ಒಂದರಿಂದ ಧನುಸ್ಸನ್ನು ಹಿಡಿದಿದ್ದ ಇಂದ್ರಜಿತುವಿನ ಬಾಹುವನ್ನು ದೇಹದಿಂದ ಬೀಳಿಸಿದನು. ಎರಡನೆಯದರಿಂದ ಉಕ್ಕಿನ ಬಾಣಗಳನ್ನು ಹಿಡಿದಿದ್ದ ಭುಜವನ್ನು ಧರೆಗೆ ಬೀಳಿಸಿದನು. ಹೊಳೆಯುತ್ತಿರುವ, ಅಗಲ ಮೊನೆಯಿರುವ ಮೂರನೆಯ ಬಾಣದಿಂದ ಅವನ ಸುಂದರಮೂಗಿನ, ಸುಂದರವಾಗಿದ್ದ ಕುಂಡಲಗಳಿಂದ ಹೊಳೆಯುತ್ತಿದ್ದ ಶಿರವನ್ನು ಕತ್ತರಿಸಿದನು. ಭುಜ ಮತ್ತು ತೋಳುಗಳನ್ನು ಕತ್ತರಿಸಲ್ಪಟ್ಟ ಅವನ ದೇಹವು ಭೀಕರವಾಗಿ ಕಂಡಿತು. ಅವನನ್ನು ಕೊಂದನಂತರ ಆ ಬಲಿಗಳಲ್ಲಿ ಶ್ರೇಷ್ಠನು ಅವನ ಸಾರಥಿಯನ್ನೂ ಕೊಂದನು.

ಕುದುರೆಗಳು ರಥವನ್ನು ಲಂಕೆಗೆ ಕೊಂಡೊಯ್ಯಲು ರಾವಣನು ಪುತ್ರನಿಂದ ಬರಿದಾಗಿದ್ದ ಆ ರಥವನ್ನು ನೋಡಿದನು. ಆ ಪುತ್ರನು ಹತನಾದುದನ್ನು ನೋಡಿದಾಗ ಅವನ ಕಣ್ಣುಗಳು ಭಯದಿಂದ ಓಲಾಡಿದವು. ಶೋಕಮೋಹಾರ್ತನಾದ ರಾವಣನು ವೈದೇಹಿಯನ್ನು ಕೊಲ್ಲಲು ಮುಂದುವರೆದನು. ಅಶೋಕವನದಲ್ಲಿ ರಾಮನ ದರ್ಶನಕ್ಕಾಗಿ ಕಾತರಿಸಿ ನಿಂತಿದ್ದ ಅವಳ ಬಳಿಗೆ ದುಷ್ಟಾತ್ಮನು ಖಡ್ಗವನ್ನು ಹಿಡಿದು ಓಡಿಬಂದನು. ಆ ದುರ್ಬುದ್ಧಿಯ ಪಾಪನಿಶ್ಚಯವನ್ನು ಕಂಡ ಅವಿಂಧ್ಯನು ಆ ಸಂಕೃದ್ಧನನ್ನು ಕಾರಣವನ್ನು ಹೇಳಿ ತಣ್ಣಗಾಗಿಸಿದನು: “ಮಹಾರಾಜನಾಗಿ ಬೆಳಗುವ ಸ್ಥಿತಿಯಲ್ಲಿರುವವನು ಸ್ತ್ರೀಯನ್ನು ಕೊಲ್ಲಬಾರದು. ನಿನ್ನ ಗೃಹದಲ್ಲಿ ಬಂಧಳಾಗಿರುವ ಸ್ತ್ರೀಯು ಹತಳಾದಂತೆ. ದೇಹದಿಂದ ಬೇರೆಯಾಗಿರದಿದ್ದರೂ ಹತಳಾದಂತೆ ಎಂದು ನನ್ನ ಮತ. ಇವಳ ಗಂಡನನ್ನು ಕೊಲ್ಲು. ಅದರಿಂದ ಇವಳು ಹತಳಾಗುತ್ತಾಳೆ. ಸಾಕ್ಷಾತ್ ಶತಕ್ರತುವೂ ಕೂಡ ವಿಕ್ರಮದಲ್ಲಿ ನಿನ್ನ ಸಮನಲ್ಲ. ನೀನು ಯುದ್ಧದಲ್ಲಿ ಅನೇಕ ಬಾರಿ ಇಂದ್ರನನ್ನೂ ತ್ರಿದಶರನ್ನೂ ಭಯಪಡಿಸಿದ್ದೀಯೆ.” ಈ ರೀತಿ ಬಹುವಿಧದ ವಾಕ್ಯಗಳಿಂದ ಅವಿಂಧ್ಯನು ಕೃದ್ಧನಾದ ರಾವಣನನ್ನು ಸಂತಯಿಸಲು ಅವನ ವಚನವನ್ನು ಸ್ವೀಕರಿಸಿದನು. ಆ ನಿಶಾಚರನು ತಾನೇ ಹೊರಡಲು ನಿಶ್ಚಯಿಸಿದನು. ಖಡ್ಗವನ್ನು ಹಿಡಿದು ನನ್ನ ರಥವನ್ನು ಸಿದ್ಧಪಡೆಸಿ ಎಂದು ಅಜ್ಞಾಪಿಸಿದನು.

ರಾವಣ ವಧೆ

ಪ್ರಿಯ ಪುತ್ರನು ಸಂಹರಿಸಲ್ಪಟ್ಟಾಗ ಕೃದ್ಧನಾದ ದಶಗ್ರೀವನು ಹೇಮರತ್ನ ವಿಭೂಷಿತ ರಥದಲ್ಲಿ  ನಿಂತು ಹೊರಟನು. ವಿವಿಧ ಆಯುಧಗಳನ್ನು ಹಿಡಿದ ಘೋರ ರಾಕ್ಷಸರಿಂದ ಸಂವೃತನಾಗಿ ಕಪಿಸೇನೆಯ ಮುಖಂಡರನ್ನು ಪುಡಿಮಾಡುತ್ತಾ ರಾಮನ ಮೇಲೆ ಎರಗಿದನು. ಸಂಕೃದ್ಧನಾಗಿ ವೇಗವಾಗಿ ಮುಂದುವರೆಯುತ್ತಿದ್ದ ಅವನನ್ನು ಮೈಂದ, ನೀಲ, ಅಂಗದ, ಹನೂಮಾನ್, ಮತ್ತು ಜಾಂಬವನು ತಮ್ಮ ಸೇನೆಗಳೊಂದಿಗೆ ತಡೆದರು. ಕರಡಿ-ವಾನರರ ಸೇನೆಗಳ ಮುಖಂಡರು ಆ ದಶಗ್ರೀವನ ಸೈನ್ಯವನ್ನು ದಶಗ್ರೀವನು ನೋಡುತ್ತಿದ್ದಂತೆಯೇ ವೃಕ್ಷಗಳಿಂದ ಧ್ವಂಸಮಾಡಿದರು. ತನ್ನ ಸೇನೆಯನ್ನು ಶತ್ರುಗಳು ವಧಿಸುತ್ತಿರುವುದನ್ನು ನೋಡಿ ಮಾಯಾವೀ ರಾಕ್ಷಸೇಶ್ವರ ರಾವಣನು ಮಾಯಾ ಯುದ್ಧವನ್ನು ಪ್ರದರ್ಶಿಸಿದನು. ಅವನ ದೇಹದಿಂದ ನೂರಾರು ಸಹಸ್ರಾರು ರಾಕ್ಷಸರು ಶರ, ಶಕ್ತಿ ಮತ್ತು ಈಟಿಗಳನ್ನು ಹಿಡಿದು ಹೊರಬರುವುದು ಕಂಡುಬಂದಿತು. ಆ ರಾಕ್ಷಸರೆಲ್ಲರನ್ನೂ ರಾಮನು ದಿವ್ಯಾಸ್ತ್ರಗಳಿಂದ ಸಾಯಿಸಿದನು. ರಾಕ್ಷಸನು ಮತ್ತೊಮ್ಮೆ ಮಾಯಾಯುದ್ಧವನ್ನು ಮಾಡಿದನು. ರಾಮನ ಮತ್ತು ಲಕ್ಷ್ಮಣನ ರೂಪಗಳನ್ನು ರಚಿಸಿ ದಶಾನನನು ರಾಮ-ಲಕ್ಷ್ಮಣರ ಮೇಲೆ ಎರಗಿದನು. ಆಗ ರಾಮ-ಲಕ್ಷ್ಮಣರ ಬಳಿಸಾರಿ ನಿಶಾಚರರು ಎತ್ತರವಾಗಿದ್ದ ಧನುಸ್ಸುಗಳನ್ನು ಹಿಡಿದು ಆಕ್ರಮಣ ಮಾಡಿದರು. ರಾಕ್ಷಸೇಂದ್ರನ ಆ ಮಾಯೆಯನ್ನು ನೋಡಿ ಇಕ್ಷ್ವಾಕುನಂದನ ಸೌಮಿತ್ರಿಯು ಸಂಭ್ರಾಂತನಾಗದೇ ರಾಮನಿಗೆ ಈ ಮಹಾಮಾತನ್ನಾಡಿದನು: “ನಿನ್ನ ಪ್ರತಿರೂಪರಾದ ಪಾಪಿ ರಾಕ್ಷಸರನ್ನು ಕೊಲ್ಲು!” ಆಗ ರಾಮನು ತನ್ನ ಪ್ರತಿರೂಪರಾದ ರಾಕ್ಷಸರನ್ನು ಕೊಂದನು. ಆಗ ಹರ್ಯಶ್ವಗಳನ್ನು ಕಟ್ಟಿದ ಆದಿತ್ಯವರ್ಚಸ ರಥದೊಂದಿಗೆ ಶಕ್ರಸಾರಥಿ ಮಾತಲಿಯು ರಣದಲ್ಲಿರುವ ರಾಮನಲ್ಲಿಗೆ ಆಗಮಿಸಿದನು.

ಮಾತಲಿಯು ಹೇಳಿದನು: “ಕಾಕುತ್ಸ್ಥ! ಇದು ಹರ್ಯಶ್ವಗಳನ್ನು ಕಟ್ಟಿದ ಜೈತ್ರ ಎನ್ನುವ ಮಘೋನನ ಉತ್ತಮ ರಥ. ಈ ರಥದಲ್ಲಿ ಶಕ್ರನು ಸಮರದಲ್ಲಿ ನೂರಾರು ದೈತ್ಯ ದಾನವರನ್ನು ಸಂಹರಿಸಿದ್ದಾನೆ. ಕ್ಷಿಪ್ರವಾಗಿ ನಾನು ಸಹಾಯಕನಾಗಿರುವ ಈ ರಥವನ್ನೇರಿ ರಾವಣನನ್ನು ಕೊಲ್ಲು. ತಡಮಾಡಬೇಡ!” ಇದನ್ನು ಕೇಳಿದ ರಾಘವನು ಮಾತಲಿಯ ಮಾತುಗಳನ್ನು ಸುಳ್ಳೆಂದು ಇದು ರಾಕ್ಷಸನ ಮಾಯೆಯೆಂದು ತಿಳಿಯಲು ವಿಭೀಷಣನು ಅವನಿಗೆ ಹೇಳಿದನು: “ನರವ್ಯಾಘ್ರ! ಇದು ದುರಾತ್ಮ ರಾವಣನ ಮಾಯೆಯಲ್ಲ. ಶೀಘ್ರವಾಗಿ ಇಂದ್ರನ ಈ ರಥವನ್ನು ಏರು.” ಆಗ ಕಾಕುತ್ಸ್ಥನು ಸಂತೋಷದಿಂದ ಹಾಗೆಯೇ ಮಾಡುತ್ತೇನೆ ಎಂದು ವಿಭೀಷಣನಿಗೆ ಹೇಳಿ ರೋಷದಿಂದ ರಥದಲ್ಲಿ ದಶಗ್ರೀವನ ಕಡೆ ಬೇಗನೇ ಮುಂದುವರೆದನು. ರಾವಣನಿಂದ ಸದೆಬಡಿಯಲ್ಪಟ್ಟ ಭೂತಗಳು ಹಾಹಾಕಾರ ಮಾಡುತ್ತಿರಲು ದಿವಿಯಲ್ಲಿ ನಗಾರಿಯ ಹೊಡೆತದೊಂದಿಗೆ ಸಿಂಹನಾದಗಳು ಕೇಳಿಬಂದವು. ಆ ನಿಶಾಚರನು ರಾಮನ ಮೇಲೆ ಮಹಾಘೋರವಾದ, ಮೇಲೆತ್ತಿ ಹಿಡಿದ ಬ್ರಹ್ಮದಂಡದಂತಿರುವ, ಮೊನೆಗಳುಳ್ಳ ಇಂದ್ರನ ವಜ್ರವನ್ನು ಬಿಟ್ಟನು. ಆ ಶೂಲವನ್ನು ಮಧ್ಯದಲ್ಲಿಯೇ ರಾಮನು ಹರಿತ ಬಾಣಗಳಿಂದ ತುಂಡರಿಸಿದನು. ಆ ದುಷ್ಕರ ಕರ್ಮವನ್ನು ನೋಡಿದ ರಾವಣನಲ್ಲಿ ಭಯವು ಆವೇಶಗೊಂಡಿತು. ಆಗ ಕೃದ್ಧನಾದ ದಶಗ್ರೀವನು ರಾಮನ ಮೇಲೆ ಹರಿತ ಬಾಣಗಳನ್ನು ಸಹಸ್ರಾರು ಸಂಖ್ಯೆಗಳಲ್ಲಿ ಮತ್ತು ವಿವಿಧ ಶಸ್ತ್ರಗಳನ್ನು – ಭುಶುಂಡಿ, ಶೂಲ, ಮುಸಲ, ಪರಶು, ವಿವಿಧಾಕರದ ಶಕ್ತಿಗಳನ್ನು, ಮತ್ತು ನೂರಾರು ಹರಿತ ಖಡ್ಗಗಳನ್ನು - ಬಿಸುಟನು. ರಾಕ್ಷಸ ದಶಗ್ರೀವನ ಆ ವಿಕೃತ ಮಾಯೆಯನ್ನು ನೋಡಿ ಭಯದಿಂದ ಸರ್ವ ವಾನರರೂ ಎಲ್ಲದಿಕ್ಕುಗಳಿಗೂ ಓಡಿಹೋದರು. ಆಗ ಕಾಕುತ್ಸ್ಥನು ಉತ್ತಮ ಪಂಖಗಳನ್ನುಳ್ಳ, ಉತ್ತಮ ಮುಖವುಳ್ಳ, ಬಂಗಾರದ ರೆಕ್ಕೆಗಳನ್ನುಳ್ಳ ಉತ್ತಮ ಶರವನ್ನು ಬತ್ತಳಿಕೆಯಿಂದ ತೆಗೆದು ಅದನ್ನು ಬ್ರಹ್ಮಾಸ್ತ್ರದಿಂದ ಮಂತ್ರಿಸಿದನು. ಆ ಶ್ರೇಷ್ಠ ಬಾಣವನ್ನು ರಾಮನು ಬ್ರಹ್ಮಾಸ್ತ್ರದಿಂದ ಅಭಿಮಂತ್ರಿಸಿದುದನ್ನು ನೋಡಿ, ಶಕ್ರನ ನೇತೃತ್ವದಲ್ಲಿ ದೇವ-ಗಂಧರ್ವರು ಹರ್ಷಿತರಾದರು. ಬ್ರಹ್ಮಾಸ್ತ್ರವನ್ನು ಬಳಸಿದುದರಿಂದ ಆ ರಾಕ್ಷಸ ಶತ್ರುವಿನ ಆಯುಸ್ಸು ಸ್ವಲ್ಪಮಾತ್ರವೇ ಇದೆ ಎಂದು ದೇವ-ಗಂಧರ್ವ-ಕಿನ್ನರರು ಅಂದುಕೊಂಡರು. ಎತ್ತಿಹಿಡಿದ ಬ್ರಹದಂಡದಂತಿರುವ ಆ ಅಪ್ರತಿಮ ಓಜಸ್ಸಿನ ಘೋರವಾದ ರಾವಣನನ್ನು ಮುಗಿಸುವ ಶರವನ್ನು ರಾಮನು ಬಿಟ್ಟನು. ಅಗ್ನಿಯ ಮಹಾಜ್ವಾಲೆಯಂತೆ ಉರಿಯುತ್ತಿದ್ದ ಅದು ರಾಕ್ಷಸಶ್ರೇಷ್ಠನನ್ನು, ರಥ ಮತ್ತು ಸಾರಥಿಗಳೊಂದಿಗೆ ಸುಟ್ಟುಹಾಕಿತು. ಅಕ್ಲಿಷ್ಟಕರ್ಮಿ ರಾಮನಿಂದ ರಾವಣನು ಹತನಾದುದನ್ನು ನೋಡಿ ಗಂಧರ್ವರು ಮತ್ತು ಚಾರಣರೊಂದಿಗೆ ತ್ರಿದಶರು ಹರ್ಷಿತರಾದರು. ಬ್ರಹ್ಮಾಸ್ತ್ರದ ತೇಜಸ್ಸಿನಿಂದ ಸರ್ವಲೋಕಗಳಿಂದಲೂ ಭ್ರಂಶಿತನಾದ ಆ ಮಹಾಭಾಗ ರಾವಣನಿಂದ ಪಂಚಭೂತಗಳು ಹೊರಬಿದ್ದವು. ಅವನ ಶರೀರದ ಧಾತುಗಳು, ಮಾಂಸ, ರುಧಿರಗಳು ಬ್ರಹ್ಮಾಸ್ತ್ರದಿಂದ ಸುಟ್ಟು, ಭಸ್ವವೂ ಉಳಿಯದಂತೆ ಮಾಯವಾದವು.

ಆ ಸುರದ್ವಿಷ, ರಾಕ್ಷಸೇಂದ್ರ ಕ್ಷುದ್ರ ರಾವಣನನ್ನು ಕೊಂದು ಸೌಮಿತ್ರಿಯ ಸಹಿತ ರಾಮನು ತುಂಬಾ ಸಂತೋಷಗೊಂಡನು. ದಶಗ್ರೀವನು ಹತನಾಗಲು, ಋಷಿಗಳನ್ನು ಮುಂದಿಟ್ಟುಕೊಂಡು ದೇವತೆಗಳು ಆ ಮಹಾಭುಜನಿಗೆ ಆಶೀರ್ವಚನಗಳಿಂದ, ಜಯಯುಕ್ತಿಗಳಿಂದ ಅರ್ಚಿಸಿದರು. ಕಮಲಪತ್ರಾಕ್ಷ ರಾಮನನ್ನು ಎಲ್ಲ ದೇವತೆಗಳೂ ಹೊಗಳಿದರು. ಹಾಗೆಯೇ ಗಂಧರ್ವರು ಮತ್ತು ತ್ರಿದಶಾಲಯದವರು ಪುಷ್ಪವೃಷ್ಟಿಗಳಿಂದ ಮತ್ತು ವಾಚನಗಳಿಂದ ಹೊಗಳಿದರು. ಹೀಗೆ ರಾಮನನ್ನು ಪೂಜಿಸಿ ಅವರು ಬಂದಂತೆ ಹೊರಟುಹೋದರು. ಆ ಆಕಾಶವು ಒಂದು ಮಹಾ ಉತ್ಸವದಂತೆ ತೋರುತ್ತಿತ್ತು. ದಶಗ್ರೀವನನ್ನು ಕೊಂದು ಮಹಾಯಶ ಪ್ರಭು ರಾಮನು ಲಂಕೆಯನ್ನು ವಿಭೀಷಣನಿಗಿತ್ತನು. ಆಗ ಸೀತೆಯನ್ನು ಮುಂದಿರಿಸಿಕೊಂಡು, ವಿಭೀಷಣನನ್ನೂ ಮುಂದಿರಿಸಿಕೊಂಡು, ಅವಿಂಧ್ಯ ಎಂಬ ಹೆಸರಿನ ಸುಪ್ರಜ್ಞ, ವೃದ್ಧ ಅಮಾತ್ಯನು ಆಗಮಿಸಿ ದೀನನಾಗಿ ನಿಂತಿದ್ದ ಮಹಾತ್ಮ ಕಾಕುತ್ಸ್ಥನಿಗೆ “ಮಹಾತ್ಮ! ಸದಾಚಾರಿಯಾದ ಈ ದೇವಿ ಜಾನಕಿಯನ್ನು ಸ್ವೀಕರಿಸು” ಎಂದು ಹೇಳಿದನು.

ಈ ಮಾತುಗಳನ್ನು ಕೇಳಿ ಇಕ್ಷ್ವಾಕುನಂದನನು ಉತ್ತಮ ರಥದಿಂದಿಳಿದು, ಕಣ್ಣೀರಿನಲ್ಲಿ ಅಡಗಿದ್ದ ಸೀತೆಯನ್ನು ನೋಡಿದನು. ಆ ಚಾರುಸರ್ವಾಂಗೀ, ಶೋಕಕರ್ಶಿತಳಾಗಿ ನಿಂತಿದ್ದ, ಸರ್ವಾಂಗಗಳಲ್ಲಿಯೂ ಕೊಳೆಯಿಂದ ಕೂಡಿದ್ದ, ಜಡೆ ಗಂಟುಕಟ್ಟಿ, ಕಪ್ಪುಬಣ್ಣದ ವಸ್ತ್ರವನ್ನುಟ್ಟಿದ್ದ ಅವಳನ್ನು ನೋಡಿ ರಾಮನು ವೈದೇಹಿಯು ಪರರಿಂದ ಸ್ಪರ್ಶಿತಳಾಗಿದ್ದಾಳೆಂದು ಶಂಕಿಸಿ ಹೇಳಿದನು: “ವೈದೇಹೀ! ಹೋಗು! ನೀನು ಮುಕ್ತಳಾಗಿದ್ದೀಯೆ! ನಾನು ಏನು ಮಾಡಬೇಕಾಗಿತ್ತೋ ಅದನ್ನು ಮಾಡಿದ್ದೇನೆ. ನನ್ನನ್ನು ಪತಿಯನ್ನಾಗಿ ಪಡೆದ ನೀನು ರಾಕ್ಷಸನ ಮನೆಯಲ್ಲಿ ಮುದುಕಿಯಾಗಬಾರದು ಎಂದು ನಾನು ಆ ನಿಶಾಚರನನ್ನು ಕೊಂದೆ. ಧರ್ಮವಿನಿಶ್ಚಯವನ್ನು ತಿಳಿದಿರುವ ನನ್ನಂಥವನು ಹೇಗೆ ತಾನೇ, ಇನ್ನೊಬ್ಬನ ಕೈಗೆ ಹೋದ ನಾರಿಯನ್ನು ಮುಹೂರ್ತ ಸಮಯಕ್ಕಾದರೂ ಸ್ವೀಕರಿಸಿಯಾನು? ನೀನು ಸುವೃತ್ತಳಾಗಿದ್ದೀಯೋ ಅಸುವೃತ್ತಳಾಗಿದ್ದೀಯೋ ನಾನು ಇಂದು ನಾಯಿನೆಕ್ಕಿದ ಹವಿಸ್ಸಿನಂತಿರುವ ನಿನ್ನನ್ನು ಭೋಗಿಸಲಾರೆ.”

ಆಗ ಆ ದಾರುಣ ಮಾತನ್ನು ಕೇಳಿ ಆ ದೇವಿ ಬಾಲೆಯು ವ್ಯಥಿತಳಾಗಿ ತಕ್ಷಣವೇ ಕತ್ತರಿಸಿದ ಬಾಳೆಯಮರದಂತೆ ಕೆಳಗುರುಳಿ ಬಿದ್ದಳು. ಹರ್ಷದಿಂದ ಹುಟ್ಟಿದ್ದ ಮುಖದಲ್ಲಿನ ಕೆಂಪು ಒಂದೇ ಕ್ಷಣದಲ್ಲಿ ಕನ್ನಡಿಯ ಮೇಲೆ ಊದಿದಾಗ ಆಗುವಂತೆ ಮುಸುಕಿ ನಷ್ಟವಾಯಿತು. ರಾಮನಾಡಿದುದನ್ನು ಕೇಳಿದ ಎಲ್ಲ ಕಪಿಗಳೂ, ಲಕ್ಷ್ಮಣನೂ ಸೇರಿ ಸ್ಥಬ್ಧರಾಗಿ ನಿಂತುಬಿಟ್ಟರು. ಸತ್ತವರಂತಾದರು. ಆಗ ದೇವ, ವಿಶುದ್ಧಾತ್ಮ, ಚತುರ್ಮುಖ, ಜಗತ್ವಷ್ಟಾ ಬ್ರಹ್ಮನು, ಹಾಗೆಯೇ, ಶಕ್ರ, ಅಗ್ನಿ, ವಾಯು, ಯಮ, ವರುಣ, ಭಗವಾನ್ ಯಕ್ಷಾಧಿಪತಿ, ಮತ್ತು ಅಮಲ ಸಪ್ತರ್ಷಿಗಳೂ ವಿಮಾನದಲ್ಲಿ ರಾಘವನಿಗೆ ಕಾಣಿಸಿಕೊಂಡರು. ದಿವ್ಯವಾದ ಮೂರ್ತಿಯಂತೆ ಹೊಳೆಯುತ್ತಿದ್ದ ರಾಜಾ ಧಶರಥನೂ ಕೂಡ ಹಂಸಗಳನ್ನು ಕಟ್ಟಿದ್ದ, ಮಹಾಬೆಲೆಯ, ಹೊಳೆಯುತ್ತಿದ್ದ, ವಿಮಾನದಲ್ಲಿ ಕಾಣಿಸಿಕೊಂಡನು. ಆಗ ಅಂತರಿಕ್ಷವು ಆ ಎಲ್ಲ ದೇವ-ಗಂಧರ್ವಸಂಕುಲಗಳಿಂದ ಕೂಡಿ ಶರದೃತುವಿನಲ್ಲಿ ತಾರೆಗಳಿಂದ ಕೂಡಿದ ನಭಸ್ಥಲದಂತೆ ಶೋಭಿಸಿತು. ಆಗ ಅವರ ಮಧ್ಯೆ ಯಶಸ್ವಿನೀ ಕಲ್ಯಾಣೀ ವೈದೇಹಿಯು ಎದ್ದು ವಿಶಾಲ ವಕ್ಷಸ ರಾಮನಿಗೆ ಈ ಮಾತುಗಳನ್ನಾಡಿದಳು: “ರಾಜಪುತ್ರ! ನಾನು ನಿನ್ನ ಮೇಲೆ ಕೋಪಮಾಡುತ್ತಿಲ್ಲ! ಸ್ತ್ರೀ ಮತ್ತು ಪುರುಷರ ಗತಿಯು ನನಗೆ ತಿಳಿದೇಇದೆ. ನನ್ನ ಈ ಮಾತುಗಳನ್ನು ಕೇಳು. ನಾನೇದರೂ ಪಾಪವನ್ನು ಮಾಡಿದ್ದರೆ ಇರುವವುಗಳ ಒಳಗೆ ಚರಿಸುತ್ತಿರುವ, ಸದಾ ಚಂಚಲವಾಗಿ ಚಲಿಸುತ್ತಲೇ ಇರುವ ಪ್ರಾಣವು ನನ್ನನ್ನು ಈಗಲೇ ತೊರೆಯಲಿ! ನಾನೇದರೂ ಪಾಪವನ್ನು ಮಾಡಿದ್ದರೆ, ಅಗ್ನಿ, ಆಪ, ಆಕಾಶ, ಪೃಥ್ವಿ ಮತ್ತು ವಾಯುವೂ ಕೂಡ ನನ್ನ ಪ್ರಾಣವನ್ನು ತೊರೆಯಲಿ!”

ಆಗ ಅಂತರಿಕ್ಷದಲ್ಲಿ ಎಲ್ಲ ದಿಕ್ಕುಗಳಲ್ಲಿಯೂ ಮೊಳಗುತ್ತಾ, ಪುಣ್ಯವೂ ಆ ಮಹಾತ್ಮ ವಾನರರಿಗೆ ಸಂಹರ್ಷವನ್ನುತರುವ ಒಂದು ವಾಣಿಯಾಯಿತು. ವಾಯುವು ಹೇಳಿದನು: “ಭೋ ಭೋ ರಾಘವ! ಇದು ಸತ್ಯ! ನಾನು ಸದಾಗತಿಯಲ್ಲಿರುವ ವಾಯು! ಮೈಥಿಲಿಯು ಅಪಾಪೀ! ಭಾರ್ಯೆಯೊಂದಿಗೆ ಕೂಡು.” ಅಗ್ನಿಯು ಹೇಳಿದನು: “ರಘುನಂದನ! ಇರುವವುಗಳ ಶರೀರದೊಳಗಿರುವವನು ನಾನು! ಮೈಥಿಲಿಯು ಅತಿ ಸೂಕ್ಷವಾದ ಅಪರಾಧವನ್ನೂ ಎಸಗಿಲ್ಲ!” ವರುಣನು ಹೇಳಿದನು: “ರಾಘವ! ಇರುವವುಗಳ ದೇಹಗಳಲ್ಲಿರುವ ರಸವು ನನ್ನಿಂದಲೇ ಬಂದಿರುವುದು. ನಾನು ನಿನಗೆ ಹೇಳುತ್ತಿದ್ದೇನೆ. ಮೈಥಿಲಿಯನ್ನು ಹಿಂದೆ ತೆಗೆದುಕೋ!” ಬ್ರಹ್ಮನು ಹೇಳಿದನು: “ಪುತ್ರ! ರಾಜರ್ಷಿಯೂ ಧರ್ಮಿಣಿಯೂ, ಒಳ್ಳೆಯ ಮಾರ್ಗದಲ್ಲಿ ನಡೆಯುವವನೂ ಆದ ನಿನ್ನಿಂದ ಇದು ಆಶ್ಚರ್ಯವೇನಲ್ಲ! ಆದರೂ ನನ್ನ ಈ ಮಾತುಗಳನ್ನು ಕೇಳು. ನೀನು ದೇವ, ಗಂಧರ್ವ, ನಾಗ, ಯಕ್ಷ, ದಾನವ ಮತ್ತು ಮಹರ್ಷಿಗಳ ಶತ್ರುವನ್ನು ಕೆಳಗುರುಳಿಸಿದ್ದೀಯೆ. ಹಿಂದೆ ನನ್ನ ಪ್ರಸಾದದಿಂದ ಸರ್ವಭೂತಗಳಿಗೂ ಅವಧ್ಯನಾಗಿರುವ ಈ ಪಾಪಕರ್ಮಿಯನ್ನು ಯಾವುದೋ ಕಾರಣದಿಂದ ಕೆಲ ಕಾಲ ಉಪೇಕ್ಷಿಸಿಯಾಗಿತ್ತು. ಅನಂತರ ಆ ದುರಾತ್ಮನು ತನ್ನದೇ ವಧೆಗೆ ಕಾರಣಳಾದ ಸೀತೆಯನ್ನು ಅಪಹರಿಸಿದನು. ಅವಳನ್ನು ನಾನು ನಲಕೂಬರನ ಶಾಪದಿಂದ ರಕ್ಷಿಸಿದೆನು. ಹಿಂದೆ ಅವನಿಗೆ ಹೇಳಲಾಗಿತ್ತು – ತನ್ನನ್ನು ಬಯಸದೇ ಇದ್ದ ಯಾವ ಸ್ತ್ರೀಯನ್ನು ಕಾಮಿಸಿದರೂ ಅವನ ದೇಹವು ನೂರು ತುಂಡಾಗುತ್ತದೆ. ಇದರಲ್ಲಿ ಶಂಕೆಪಡಬೇಡ! ಇವಳನ್ನು ಸ್ವೀಕರಿಸುವ ಕಾರ್ಯಮಾಡು. ಅಮರಪ್ರಭನಾದ ನೀನು ದೇವತೆಗಳ ಮಹಾಕಾರ್ಯವನ್ನು ಎಸಗಿದ್ದೀಯೆ.” ದಶರಥನು ಹೇಳಿದನು: “ಸಂತೋಷಗೊಂಡಿದ್ದೇನೆ. ವತ್ಸ! ನಿನಗೆ ಮಂಗಳವಾಗಲಿ! ನಾನು ನಿನ್ನ ತಂದೆ ದಶರಥ! ಅನುಮತಿಯನ್ನು ನೀಡುತ್ತಿದ್ದೇನೆ. ರಾಜ್ಯವನ್ನಾಳು!” ರಾಮನು ಹೇಳಿದನು: “ರಾಜೇಂದ್ರ! ನನ್ನ ಜನಕನಾಗಿದ್ದರೆ ನಿನಗೆ ಅಭಿವಾದನೆಗಳು. ನಿನ್ನ ಶಾಸನದಂತೆ ನಾನು ರಮ್ಯವಾದ ಅಯೋಧ್ಯಾಪುರಿಗೆ ಹೋಗುತ್ತೇನೆ.”

ಸಂತೋಷಗೊಂಡ ತಂದೆಯು ಅವನಿಗೆ ಹೇಳಿದನು: “ರಕ್ತಾಂತಲೋಚನ ರಾಮ! ಹೋಗಿ ಅಯೋಧ್ಯೆಯನ್ನು ಆಳು!” ಆಗ ದೇವತೆಗಳಿಗೆ ನಮಸ್ಕರಿಸಿ, ಸುಹೃದಯರಿಂದ ಅಭಿನಂದಿತನಾಗಿ ರಾಮನು ಪೌಲೋಮೆಯೊಂದಿಗೆ ಇಂದ್ರನಂತೆ ಭಾರ್ಯೆಯನ್ನು ಕೂಡಿದನು. ಅನಂತರ ಪರಂತಪನು ಅವಿಂಧ್ಯನಿಗೆ ವರವನ್ನಿತ್ತನು ಮತ್ತು ರಾಕ್ಷಸೀ ತ್ರಿಜಟೆಗೆ ಸಂಪತ್ತು ಗೌರವಗಳನ್ನಿತ್ತನು. ಶಕ್ರಪ್ರಮುಖ ದೇವತೆಗಳಿಂದ ಆವೃತನಾದ ಬ್ರಹ್ಮನು ಹೇಳಿದನು: “ಕೌಸಲ್ಯೆಯ ಮಗನೇ! ನೀನು ಬಯಸುವ ಯಾವ ವರವನ್ನು ಇಂದು ನಾನು ನಿನಗೆ ಕೊಡಲಿ?” ರಾಮನು ಧರ್ಮದಲ್ಲಿ ನೆಲೆಯಾಗಿರುವಂತೆ, ಶತ್ರುಗಳ ಮೇಲೆ ಜಯ, ಮತ್ತು ರಾಕ್ಷಸರಿಂದ ಹತರಾದ ವಾನರರ ಪುನರ್ಜೀವವನ್ನು ವರಗಳಾಗಿ ವರಿಸಿದನು. ಹಾಗೆಯೇ ಆಗಲೆಂದು ಬ್ರಹ್ಮನು ಹೇಳಲು, ವಾನರರು ಚೇತನವನ್ನು ಪಡೆದು ಮೇಲೆದ್ದರು. ಮಹಾಭಾಗೆ ಸೀತೆಯೂ ಕೂಡ ಹನುಮತನಿಗೆ ವರವನ್ನಿತ್ತಳು: “ಮಗನೇ! ರಾಮನ ಕೀರ್ತಿಯಿರುವವರೆಗೆ ನೀನು ಜೀವಿಸಿರುತ್ತೀಯೆ! ನನ್ನ ಪ್ರಸಾದದಿಂದ ಸದಾ ದಿವ್ಯ ಉಪಭೋಗಗಳು ನಿನಗೆ ಕಾಯುತ್ತಿರುತ್ತವೆ!” ಆಗ ಅವರು ಆ ಅಕ್ಲಿಷ್ಟಕರ್ಮಿಗಳನ್ನು ನೋಡುತ್ತಿರಲು ಶಕ್ರನನ್ನು ಮುಂದಿಟ್ಟುಕೊಂಡು ಎಲ್ಲ ದೇವತೆಗಳೂ ಅಂತರ್ಧಾನರಾದರು. ಸುಹೃದಯರ ಮಧ್ಯೆ ಜಾನಕಿಯ ಜೊತೆಗಿದ್ದ ರಾಮನನ್ನು ನೋಡಿ ಪರಮಪ್ರೀತನಾದ ಶಕ್ರಸಾರಥಿಯು ಹೀಗೆ ಹೇಳಿದನು: “ಸತ್ಯಪರಾಕ್ರಮಿ! ದೇವತೆಗಳ, ಗಂಧರ್ವರ, ಯಕ್ಷರ, ಮನುಷ್ಯರ, ಅಸುರರ ಮತ್ತು ನಾಗಗಳ ದುಃಖವನ್ನು ಇಂದು ನೀನು ಕಳೆದಿದ್ದೀಯೆ! ದೇವ, ಅಸುರ, ಗಂಧರ್ವ, ಯಕ್ಷ, ರಾಕ್ಷಸ, ಪನ್ನಗಳೊಂದಿಗೆ ಲೋಕಗಳು ಭೂಮಿಯಿರುವವರೆಗೆ ನಿನ್ನ ಕಥೆಯನ್ನು ಹೇಳುತ್ತಿರುತ್ತಾರೆ.” ಹೀಗೆ ಹೇಳಿ ಶಸ್ತ್ರಭೃತರಲ್ಲಿ ಶ್ರೇಷ್ಠ ರಾಮನಿಂದ ಆಜ್ಞೆಪಡೆದು ಸಂಪೂಜಿಸಿ ಆದಿತ್ಯವರ್ಚಸ ರಥದಲ್ಲಿ ಹೊರಟುಹೋದನು.

ಆಗ ರಾಮನು ಸೀತೆಯನ್ನು ಮುಂದಿರಿಸಿಕೊಂಡು ಸೌಮಿತ್ರಿಯೊಡನೆ ಸುಗ್ರೀವಪ್ರಮುಖರಿಂದೊಡಗೂಡಿದ ಸರ್ವ ವಾನರರೊಂದಿಗೆ ಲಂಕೆಯ ರಕ್ಷಣೆಯನ್ನು ಏರ್ಪಡಿಸಿ, ವಿಭೀಷಣನನ್ನು ಮುಂದಿಟ್ಟುಕೊಂಡು, ಸೇತುವಿನ ಮೂಲಕ, ಆಕಾಶದಲ್ಲಿ ಹೋಗುವ, ಬೇಕಾದರಲ್ಲಿ ಹೋಗಬಲ್ಲ ವಿರಾಜಮಾನ ಪುಷ್ಪಕ ವಿಮಾನದಲ್ಲಿ, ಅಮಾತ್ಯರಿಂದ ಸಂವೃತನಾದ ಮುಖ್ಯನಂತೆ, ಪುನಃ ಆ ಮಕರಾಲಯವನ್ನು ದಾಟಿದನು. ಎಲ್ಲಿ ಪಾರ್ಥಿವನು ಉಳಿದಿದ್ದನೋ ಅದೇ ಸಮುದ್ರತೀರದಲ್ಲಿ ಧರ್ಮಾತ್ಮನು ಸರ್ವ ವಾನರರ ಸಹಿತ ಉಳಿದುಕೊಂಡನು. ಸರಿಯಾದ ಸಮಯದಲ್ಲಿ ರಾಘವನು ಅವರನ್ನು ಒಟ್ಟುಗೂಡಿಸಿ, ಗೌರವಿಸಿ ರತ್ನಗಳಿಂದ ಎಲ್ಲರನ್ನೂ ಸಂತೋಷಗೊಳಿಸಿ ಕಳುಹಿಸಿಕೊಟ್ಟನು. ಆ ವಾನರೇಂದ್ರರು, ಗೋಪುಚ್ಛರು ಮತ್ತು ಕರಡಿಗಳು ಹೋದನಂತರ, ರಾಮನು ಸುಗ್ರೀವನ ಸಹಿತ ಕಿಷ್ಕಿಂಧೆಗೆ ಮರಳಿ ಆಗಮಿಸಿದನು. ಸುಗ್ರೀವನ ಸಹಿತ ವಿಭೀಷಣನು ಅನುಸರಿಸಿ ಬರುತ್ತಿರಲು ಪುಷ್ಪಕ  ವಿಮಾನದಿಂದ ವೈದೇಹಿಗೆ ವನವನ್ನು ತೋರಿಸಿದನು. ಪ್ರಹರಿಗಳಲ್ಲಿ ಶ್ರೇಷ್ಠ ರಾಮನು ಕಿಷ್ಕಿಂಧೆಯನ್ನು ತಲುಪಿ ಕೃತಕರ್ಮಿಣಿ ಅಂಗದನನ್ನು ಯುವರಾಜನನ್ನಾಗಿ ಅಭಿಷೇಕಿಸಿದನು. ಅವರ ಸಹಿತ ಮತ್ತು ಸೌಮಿತ್ರಿಯನ್ನು ಕೂಡಿಕೊಂಡು ರಾಮನು ಹೋದಮಾರ್ಗದಿಂದಲೇ ತನ್ನ ಪುರದ ಕಡೆ ಪ್ರಯಾಣಿಸಿದನು.

ಅಯೋಧ್ಯಾಪುರಿಯನ್ನು ತಲುಪಿ ರಾಷ್ಟ್ರಪತಿಯು ಭರತನಿಗೆ ದೂತನಾಗಿ ಹನೂಮಂತನನ್ನು ಕಳುಹಿಸಿದನು. ಎಲ್ಲ ಇಂಗಿತಗಳನ್ನೂ ಲಕ್ಷಿಸಿ ಅವನಿಗೆ ಪ್ರಿಯವಿಷಯವನ್ನು ತಿಳಿಸಿ ವಾಯುಪುತ್ರನು ಪುನಃ ಬರಲು ನಂದೀಗ್ರಾಮಕ್ಕೆ ಬಂದನು. ಅವನು ಅಲ್ಲಿ ಮಲಿನಾಂಗನಾದ ಚೀರವಸ್ತ್ರಗಳನ್ನು ಧರಿಸಿ ಅಗ್ರಜನ ಪಾದುಕೆಗಳ ಎದುರು ಆಸನದಲ್ಲಿ ಕುಳಿತಿದ್ದ ಭರತನನ್ನು ಕಂಡನು. ಆಗ ಭರತ ಮತ್ತು ವೀರ್ಯವಾನ್ ಶತ್ರುಘ್ರನನ್ನು ಸೇರಿ ಸೌಮಿತ್ರಿಯೊಡನೆ ರಾಘವನು ಸಂತೋಷಗೊಂಡನು. ಹಾಗೆಯೇ ಭರತ-ಶತ್ರುಘ್ನರೂ ಅವರಿಬ್ಬರನ್ನೂ ಗುರುಗಳ ಸಹಿತ ವೈದೇಹಿಯನ್ನೂ ಕಂಡು ಹರ್ಷಿತರಾದರು. ಆಗ ಭರತನು ಸತ್ಕೃತವಾದ ನ್ಯಾಸವಾಗಿಟ್ಟುಕೊಂಡಿದ್ದ ರಾಜ್ಯವನ್ನು ಪರಮ ಮುದದಿಂದ ಅವನಿಗೆ ಹಿಂದಿರುಗಿಸಿದನು. ಅನಂತರ ವೈಷ್ಣವ ನಕ್ಷತ್ರದ ಮಂಗಳ ಮುಹೂರ್ತದಲ್ಲಿ ವಸಿಷ್ಠ-ವಾಮದೇವರು ಜೊತೆಗೂಡಿ ಆ ಶೂರನನ್ನು ಅಭಿಷೇಕಿಸಿದರು. ಅಭಿಷಿಕ್ತನಾದ ಅವನು ಸುಹೃಜ್ಜನರೊಂದಿಗೆ ಕಪಿಶ್ರೇಷ್ಠ ಸುಗ್ರೀವನನ್ನೂ ಪೌಲಸ್ತ್ಯ ವಿಭೀಷಣನನ್ನೂ ಅನ್ಯರನ್ನೂ ಮನೆಗಳ ಕಡೆ, ವಿವಿಧರತ್ನಗಳಿಂದ ಅಭ್ಯರ್ಚಿಸಿ, ಸಂತೋಷಗೊಳಿಸಿ, ತನ್ನ ಕರ್ತವ್ಯದ  ಕುರಿತು ಯೋಚಿಸಿ ದುಃಖದಿಂದ ಕಳುಹಿಸಿಕೊಟ್ಟನು. ಪುಷ್ಪಕ ವಿಮಾನವನ್ನೂ ಕೂಡ ಪೂಜಿಸಿ ಪ್ರೀತಿಯಿಂದ ರಾಘವ ರಘುನಂದನನು ವೈಶ್ರವಣನಿಗೆ ನೀಡಿದನು. ಅನಂತರ ದೇವರ್ಷಿಗಳ ಸಹಿತ ಗೋಮತೀ ನದಿಯ ತೀರದಲ್ಲಿ ನಿರರ್ಗಲ ಮೂರುರೀತಿಯ ದಕ್ಷಿಣೆಗಳನ್ನಿತ್ತು ಹತ್ತು ಅಶ್ವಮೇಧಯಾಗಗಳನ್ನು ನಡೆಸಿದನು.

***

ಮಾರ್ಕಂಡೇಯನು ಯುಧಿಷ್ಠಿರನಿಗೆ ಹೇಳಿದನು: “ಹೀಗೆ ಹಿಂದೆ ಅಮಿತತೇಜಸ ರಾಮನು ಅತ್ಯುಗ್ರವಾದ ವ್ಯಸನವನ್ನು ಹೊಂದಿ ವನವಾಸವನ್ನು ಮಾಡಿದನು. ಶೋಕಿಸಬೇಡ! ಕ್ಷತ್ರಿಯನಾಗಿದ್ದೀಯೆ! ಬಾಹುವೀರ್ಯವನ್ನು ಆಶ್ರಯಿಸಿ ಉರಿಯುತ್ತಿರುವ ನಿರ್ಣಾಯಕ ಮಾರ್ಗದಲ್ಲಿ ನಡೆಯುತ್ತಿರುವೆ. ನಿನ್ನಲ್ಲಿ ಏನೂ, ಪರಮಾಣುವಿನ ಮಾತ್ರದಷ್ಟೂ, ದೋಷವಿಲ್ಲ. ಸುರಾಸುರರೊಂದಿಗೆ ಇಂದ್ರನೂ ಕೂಡ ಈ ಮಾರ್ಗದಲ್ಲಿ ಹಿಂಜರಿಯುತ್ತಾನೆ. ವಜ್ರಪಾಣಿಯು ಮರುತ್ತರೊಂದೊಡಗೂಡಿ ವೃತ್ರನನ್ನು, ದುರ್ಧರ್ಷ ನಮುಚಿಯನ್ನೂ, ರಾಕ್ಷಸಿ ದೀರ್ಘಜಿಹ್ವೆಯನ್ನೂ ಸಂಹರಿಸಿದನು. ಸಹಾಯವಿದ್ದವನಿಗೆ ಒಳ್ಳೆಯದೆಲ್ಲವೂ ಆಗುತ್ತದೆ. ಧನಂಜಯನನ್ನು ಸಹೋದರನನ್ನಾಗಿ ಪಡೆದಿರುವವನಿಗೆ ಯುದ್ಧದಲ್ಲಿ ಜಯಿಸದೇ ಇರುವುದಾದರೂ ಏನಿದೆ? ಪರಂತಪ! ಈ ಭೀಮಪರಾಕ್ರಮಿ ಭೀಮನು ಬಲಿಗಳಲ್ಲಿಯೇ ಶ್ರೇಷ್ಠನು. ಮಾದ್ರವತೀ ಸುತರೀರ್ವ ಯಮಳರು ಯುವಕರು ಮತ್ತು ಮಹೇಷ್ವಾಸರು. ಇವರ ಸಹಾಯವಿರುವಾಗ ನೀನು ಏಕೆ ವಿಷಾದಿಸುತ್ತಿರುವೆ? ಮರುದ್ಗಣಗಳೊಂದಿಗೆ ಇಂದ್ರನ ಸೇನೆಯನ್ನೂ ಜಯಿಸಬಲ್ಲ ಈ ಮಹೇಷ್ವಾಸ ದೇವರೂಪಿಗಳನ್ನು ಸಹಾಯಕರನ್ನಾಗಿ ಪಡೆದ ನೀನು ರಣದಲ್ಲಿ ಅಮಿತ್ರರೆಲ್ಲರನ್ನೂ ಜಯಿಸುತ್ತೀಯೆ. ಬಲಶಾಲಿಯಾದ, ವೀರ್ಯದಿಂದ ಮತ್ತನಾಗಿದ್ದ ದುರಾತ್ಮ ಸೈಂಧವನಿಂದ ಅಪಹೃತಳಾಗಿದ್ದ ಈ ದ್ರಪದಿ ಕೃಷ್ಣೆಯನ್ನಾದರೂ ನೀನು ನೋಡು. ಆದರೆ ಮಹಾತ್ಮರು ಸುದುಷ್ಕರ ಕಾರ್ಯವನ್ನೆಸಗಿ ರಾಜ ಜಯದ್ರಥನನ್ನು ಸೋಲಿಸಿ ವಶಪಡಿಸಿಕೊಂಡರು. ಅಸಹಾಯಕನಾದ ರಾಮನು ಭೀಮವಿಕ್ರಮ ರಾಕ್ಷಸ ದಶಗ್ರೀವನನ್ನು ಯುದ್ಧದಲ್ಲಿ ಕೊಂದೇ ವೈದೇಹಿಯನ್ನು ಪುನಃ ಪಡೆದನು. ಅವನಿಗೆ ಬೇರೆಯೇ ಜಾತಿಯ ಕಪಿಗಳು, ಕಪ್ಪು ಮುಖದ ಕರಡಿಗಳು ಮಿತ್ರರಾಗಿದ್ದರು. ಇದರ ಕುರಿತಾದರೂ ಬುದ್ಧಿಯಿಂದ ಚಿಂತಿಸು. ಆದುದರಿಂದ ನೀನು ಶೋಕಿಸಬಾರದು. ನಿನ್ನಂಥಹ ಮಹಾತ್ಮರು ಶೋಕಿಸುವುದಿಲ್ಲ.”

ಧೀಮತ ಮಾರ್ಕಂಡೇಯನಿಂದ ಹೀಗೆ ಆಶ್ವಾಸನೆಯನ್ನು ಪಡೆದ ರಾಜನು ದುಃಖವನ್ನು ತೊರೆದನು.

Related image

The other stories:

  1. ಆರುಣಿ ಉದ್ದಾಲಕ
  2. ಉಪಮನ್ಯು
  3. ಸಮುದ್ರಮಥನ
  4. ಗರುಡೋತ್ಪತ್ತಿ; ಅಮೃತಹರಣ
  5. ಶೇಷ
  6. ಶಕುಂತಲೋಪಾಽಖ್ಯಾನ
  7. ಯಯಾತಿ
  8. ಸಂವರಣ-ತಪತಿ
  9. ವಸಿಷ್ಠೋಪಾಽಖ್ಯಾನ
  10. ಔರ್ವೋಪಾಽಖ್ಯಾನ
  11. ಸುಂದೋಪಸುಂದೋಪಾಽಖ್ಯಾನ
  12. ಸಾರಂಗಗಳು
  13. ಸೌಭವಧೋಪಾಽಖ್ಯಾನ
  14. ನಲೋಪಾಽಖ್ಯಾನ
  15. ಅಗಸ್ತ್ಯೋಪಾಽಖ್ಯಾನ
  16. ಭಗೀರಥ
  17. ಋಷ್ಯಶೃಂಗ
  18. ಪರಶುರಾಮ
  19. ಚ್ಯವನ
  20. ಮಾಂಧಾತ
  21. ಸೋಮಕ-ಜಂತು
  22. ಗಿಡುಗ-ಪಾರಿವಾಳ
  23. ಅಷ್ಟಾವಕ್ರ
  24. ರೈಭ್ಯ-ಯವಕ್ರೀತ
  25. ತಾರ್ಕ್ಷ್ಯ ಅರಿಷ್ಠನೇಮಿ
  26. ಅತ್ರಿ
  27. ವೈವಸ್ವತ ಮನು
  28. ಮಂಡೂಕ-ವಾಮದೇವ
  29. ಧುಂಧುಮಾರ
  30. ಮಧು-ಕೈಟಭ ವಧೆ
  31. ಕಾರ್ತಿಕೇಯನ ಜನ್ಮ
  32. ಮುದ್ಗಲ
  33. ರಾಮೋಪಾಽಖ್ಯಾನ: ರಾಮಕಥೆ
  34. ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
  35. ಇಂದ್ರವಿಜಯೋಪಾಽಖ್ಯಾನ
  36. ದಂಬೋದ್ಭವ
  37. ಮಾತಲಿವರಾನ್ವೇಷಣೆ
  38. ಗಾಲವ ಚರಿತೆ
  39. ವಿದುಲೋಪಾಽಖ್ಯಾನ
  40. ತ್ರಿಪುರವಧೋಪಾಽಖ್ಯಾನ
  41. ಪರಶುರಾಮನು ಅಸ್ತ್ರಗಳನ್ನು ಪಡೆದುದು
  42. ಪ್ರಭಾಸಕ್ಷೇತ್ರ ಮಹಾತ್ಮೆ
  43. ತ್ರಿತಾಖ್ಯಾನ
  44. ಸಾರಸ್ವತೋಪಾಽಖ್ಯಾನ
  45. ವಿಶ್ವಾಮಿತ್ರ
  46. ವಸಿಷ್ಠಾಪವಾಹ ಚರಿತ್ರೆ
  47. ಬಕ ದಾಲ್ಭ್ಯನ ಚರಿತ್ರೆ
  48. ಕಪಾಲಮೋಚನತೀರ್ಥ ಮಹಾತ್ಮೆ
  49. ಮಂಕಣಕ
  50. ವೃದ್ಧಕನ್ಯೆ
  51. ಬದರಿಪಾಚನ ತೀರ್ಥ
  52. ಕುಮಾರನ ಪ್ರಭಾವ-ಅಭಿಷೇಕ
  53. ಅಸಿತದೇವಲ-ಜೇಗೀಷವ್ಯರ ಕಥೆ
  54. ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
  55. ಕುರುಕ್ಷೇತ್ರ ಮಹಾತ್ಮೆ
  56. ಶಂಖಲಿಖಿತೋಪಾಽಖ್ಯಾನ
  57. ಜಾಮದಗ್ನೇಯೋಪಾಽಖ್ಯಾನ
  58. ಷೋಡಶರಾಜಕೀಯೋಪಾಽಖ್ಯಾನ

Leave a Reply

Your email address will not be published. Required fields are marked *