ಪರಶುರಾಮನು ಅಸ್ತ್ರಗಳನ್ನು ಪಡೆದುದು

ಪರಶುರಾಮನು ಅಸ್ತ್ರಗಳನ್ನು ಪಡೆದ ಈ ಕಥೆಯು ವ್ಯಾಸ ಮಹಾಭಾರತದ ಕರ್ಣಪರ್ವ (ಅಧ್ಯಾಯ ೨೪) ದಲ್ಲಿ ಬರುತ್ತದೆ. ಪರಶುರಾಮನ ಶಿಷ್ಯನಾದ ಕರ್ಣನ ಮಹತ್ತನ್ನು ಹೇಳುತ್ತಾ ಈ ಕಥೆಯನ್ನು ದುರ್ಯೋಧನನು ಶಲ್ಯನಿಗೆ ಹೇಳಿದನು.

Related imageಭಾರ್ಗವರ ಕುಲದಲ್ಲಿ ಮಹಾತಪಸ್ವಿ ಜಮದಗ್ನಿಯು ಜನಿಸಿದನು. ಅವನ ತೇಜೋಗುಣಾನ್ವಿತ ಮಗನು ರಾಮನೆಂದು ವಿಖ್ಯಾತನಾದನು. ಅಸ್ತ್ರಗಳಿಗೋಸ್ಕರವಾಗಿ ಅವನು ಪ್ರಸನ್ನಾತ್ಮನಾಗಿ, ನಿಯತಾತ್ಮನಾಗಿ ಮತ್ತು ಇಂದ್ರಿಯಗಳನ್ನು ಸಂಯಮದಲ್ಲಿರಿಸಿಕೊಂಡು ತೀವ್ರ ತಪಸ್ಸನ್ನಾಚರಿಸಿ ಅವನು ಭವನನ್ನು ತೃಪ್ತಿಗೊಳಿಸಿದನು. ಅವನ ಭಕ್ತಿ ಮತ್ತು ಸಂಯಮಗಳಿಗೆ ಮೆಚ್ಚಿದ ಮಹಾದೇವ ಶಂಕರನು ಅವನ ಹೃದಯದಲ್ಲಿರುವುದನ್ನು ತಿಳಿದು ಪ್ರತ್ಯಕ್ಷನಾದನು.

ಈಶ್ವರನು ಹೇಳಿದನು: “ರಾಮ! ಸಂತುಷ್ಟನಾಗಿದ್ದೇನೆ. ನಿನಗೆ ಮಂಗಳವಾಗಲಿ! ನೀನು ಬಯಸಿರುವುದು ನನಗೆ ತಿಳಿದಿದೆ. ನಿನ್ನನ್ನು ಪರಿಶುದ್ಧಗೊಳಿಸಿಕೋ! ಬಯಸಿದುದೆಲ್ಲವನ್ನೂ ಪಡೆದುಕೊಳ್ಳುವೆ! ನೀನು ಪವಿತ್ರನಾದಾಗ ನಾನು ನಿನಗೆ ಆ ಅಸ್ತ್ರಗಳನ್ನು ನೀಡುತ್ತೇನೆ. ಅಸ್ತ್ರಗಳು ಅಪಾತ್ರನನ್ನು ಮತ್ತು ಅಸಮರ್ಥನನ್ನು ಸುಟ್ಟುಬಿಡುತ್ತವೆ.”

ದೇವದೇವ ಶೂಲಿಯು ಹೀಗೆ ಹೇಳಲು ಜಾಮದಗ್ನಿ ರಾಮನು ಮಹಾತ್ಮ ಪ್ರಭುವಿಗೆ ಶಿರಸಾವಹಿಸಿ ಪ್ರತ್ಯುತ್ತರಿಸಿದನು: “ದೇವೇಶ! ನಾನು ಅಸ್ತ್ರಧಾರಣೆಗೆ ಪಾತ್ರನೆಂದು ನಿನಗೆ ಎಂದು ಅನಿಸುತ್ತದೆಯೋ ಆಗಲೇ ನೀನು ನಿನ್ನ ಶುಶ್ರೂಷಣೆಯಲ್ಲಿ ನಿರತನಾದ ನನಗೆ ದಯಪಾಲಿಸಬೇಕು!”

ಆಗ ಅವನು ತಪಸ್ಸು, ದಮ, ನಿಯಮ, ಪೂಜನ, ಉಪಾಹಾರ, ಬಲಿ, ಹೋಮ, ಮತ್ತು ಮಂತ್ರಾದಿಗಳಿಂದ ಶರ್ವನನ್ನು ಅನೇಕ ವರ್ಷಗಳವರೆಗೆ ಆರಾಧಿಸಿದನು. ಮಹಾತ್ಮ ಭಾರ್ಗವನ ಮೇಲೆ ಮಹಾದೇವನು ಪ್ರಸನ್ನನಾದನು. ಶಂಕರನು ದೇವಿಯ ಸಮೀಪದಲ್ಲಿಯೇ ದೃಢವ್ರತನಾದ ಈ ರಾಮನಿಗೆ ನನ್ನಲ್ಲಿ ಸತತ ಭಕ್ತಿಯಿದೆ!” ಎಂದು ರಾಮನ ಅನೇಕ ಗುಣಗಳನ್ನು ವರ್ಣಿಸಿದನು. ಈ ರೀತಿಯ ಅವನ ಗುಣಗಳನ್ನು ಸಂತೋಷಗೊಂಡ ಅರಿಸೂದನ ಪ್ರಭುವು ಅನೇಕ ಬಾರಿ ದೇವತೆಗಳು ಮತ್ತು ಪಿತೃಗಳ ಸಮಕ್ಷಮದಲ್ಲಿ ಹೇಳಿದನು.

ಇದೇ ಸಮಯದಲ್ಲಿ ದೈತ್ಯರು ಮಹಾಬಲಶಾಲಿಗಳಾದರು. ಅವರು ದರ್ಪಮೋಹಗಳಿಂದ ದಿವೌಕಸರನ್ನು ಬಾಧಿಸುತ್ತಿದ್ದರು. ಆಗ ದೇವತೆಗಳೆಲ್ಲರೂ ಒಟ್ಟಾಗಿ ಅವರನ್ನು ಸಂಹರಿಸಲು ನಿಶ್ಚಯಿಸಿ ಶತ್ರುವಧೆಗಾಗಿ ಬಹಳ ಪ್ರಯತ್ನನಡೆಸಿದರು. ಆದರೆ ಅವರನ್ನು ಗೆಲ್ಲರು ಸಾಧ್ಯವಾಗಲಿಲ್ಲ. ಆಗ ದೇವತೆಗಳು ಮಹೇಶ್ವರನಲ್ಲಿಗೆ ಹೋಗಿ ಅವನನ್ನು ಭಕ್ತಿಯಿಂದ ಪ್ರಸನ್ನಗೊಳಿಸಿ ಶತ್ರುಗಣಗಳನ್ನು ಸಂಹರಿಸೆಂದು ಕೇಳಿಕೊಂಡರು. ಶತ್ರುಗಳ ಕ್ಷಯವಾಗುವುದೆಂದು ದೇವತೆಗಳಿಗೆ ಪ್ರತಿಜ್ಞೆಮಾಡಿ ದೇವ ಶಂಕರನು ಭಾರ್ಗವ ರಾಮನನ್ನು ಕರೆದು ಹೀಗೆ ಹೇಳಿದನು: “ಭಾರ್ಗವ! ಒಂದಾಗಿರುವ ದೇವತೆಗಳ ರಿಪುಗಳೆಲ್ಲರನ್ನೂ ಸಂಹರಿಸು! ಲೋಕಗಳ ಕಾಮಾರ್ಥಹಿತಕ್ಕಾಗಿ ಮತ್ತು ನನ್ನ ಪ್ರೀತಿಗಾಗಿ ಈ ಕೆಲಸವನ್ನು ಮಾಡು!”

ರಾಮನು ಹೇಳಿದನು: “ದೇವೇಶ! ಅಸ್ತ್ರವಿದೆಯನ್ನೇ ತಿಳಿಯದಿರುವ ನನಗೆ ಕೃತಾಸ್ತ್ರರೂ ಯುದ್ಧದುರ್ಮದರೂ ಆದ ದಾನವರೆಲ್ಲರನ್ನೂ ಸಂಹರಿಸಲು ಹೇಗೆ ಸಾಧ್ಯ?”

ಈಶ್ವರನು ಹೇಳಿದನು: “ಹೋಗು! ನನ್ನ ಅನುಧ್ಯಾನದಿಂದ ನೀನು ದಾನವರನ್ನು ಸಂಹರಿಸುತ್ತೀಯೆ. ಆ ರಿಪುಗಳೆಲ್ಲರನ್ನೂ ಜಯಿಸಿ ಪುಷ್ಕಲ ಗುಣಗಳನ್ನೂ ಪಡೆಯುವೆ!”

ಅವನ ಈ ಮಾತನ್ನು ಕೇಳಿ ಎಲ್ಲವನ್ನೂ ಸ್ವೀಕರಿಸಿ ರಾಮನು ಸ್ವಸ್ತಿವಾಚನಗಳನ್ನು ಮಾಡಿಸಿಕೊಂಡು ದಾನವರಿದ್ದಲ್ಲಿಗೆ ಹೋದನು. ಭಾರ್ಗವನು ಮದದರ್ಪಬಲಾನ್ವಿತ ದೇವಶತ್ರುಗಳನ್ನು ವಜ್ರಾಯುಧ ಸ್ಪರ್ಷಕ್ಕೆ ಸಮಾನ ಪ್ರಹಾರಗಳಿಂದಲೇ ವಧಿಸಿದನು. ದ್ವಿಜೋತ್ತಮ ಜಾಮದಗ್ನನ ದೇಹವನ್ನು ದಾನವರು ಗಾಯಗೊಳಿಸಿದ್ದರು. ಸ್ಥಾಣುವು ಅವನನ್ನು ಸ್ಪರ್ಶಿಸಿದ ಮಾತ್ರದಿಂದ ಅವನು ಗಾಯಗಳಿಲ್ಲದವನಾದನು. ಅವನ ಕರ್ಮಗಳಿಂದ ಪ್ರೀತನಾದ ಭಗವಾನನು ಆ ಮಹಾತ್ಮ ಬ್ರಹ್ಮವಿದು ಭಾರ್ಗವನಿಗೆ ವರಗಳನ್ನಿತ್ತನು. ಪ್ರೀತಿಯುಕ್ತ ದೇವದೇವ ಶೂಲಿಯು ಹೇಳಿದನು: “ಭೃಗುನಂದನ! ಶಸ್ತ್ರಗಳ ನಿಪಾತಗಳಿಂದ ನಿನ್ನ ಶರೀರದಲ್ಲಿ ಆಗಿರುವ ಗಾಯಗಳಿಂದ ಮನುಷ್ಯಸಂಬಧವಾದ ನಿನ್ನ ಕರ್ಮಗಳೆಲ್ಲವೂ ಕಳೆದುಹೋದವು (ನೀನೀಗ ಪೂತನಾಗಿ ದೇವಸದೃಶನಾಗಿರುವೆ!). ನಿನ್ನ ಇಚ್ಛೆಯಂತೆಯೇ ನನ್ನಿಂದ ದಿವ್ಯಾಸ್ತ್ರಗಳನ್ನು ಸ್ವೀಕರಿಸು!”

ಆಗ ಮನಸ್ಸಿನಲ್ಲಿ ಬಯಸಿದ ಬಹುವಿಧದ ಅಸ್ತ್ರಗಳನ್ನೂ ವರಗಳನ್ನೂ ಪಡೆದ ರಾಮನು ಶಿವನಿಗೆ ಶಿರಸಾ ಪ್ರಣಾಮಮಾಡಿ ದೇವೇಶನ ಅನುಜ್ಞೆಯನ್ನು ಪಡೆದು ಹೊರಟುಹೋದನು.

Related image

The other stories:

  1. ಆರುಣಿ ಉದ್ದಾಲಕ
  2. ಉಪಮನ್ಯು
  3. ಸಮುದ್ರಮಥನ
  4. ಗರುಡೋತ್ಪತ್ತಿ; ಅಮೃತಹರಣ
  5. ಶೇಷ
  6. ಶಕುಂತಲೋಪಾಽಖ್ಯಾನ
  7. ಯಯಾತಿ
  8. ಸಂವರಣ-ತಪತಿ
  9. ವಸಿಷ್ಠೋಪಾಽಖ್ಯಾನ
  10. ಔರ್ವೋಪಾಽಖ್ಯಾನ
  11. ಸುಂದೋಪಸುಂದೋಪಾಽಖ್ಯಾನ
  12. ಸಾರಂಗಗಳು
  13. ಸೌಭವಧೋಪಾಽಖ್ಯಾನ
  14. ನಲೋಪಾಽಖ್ಯಾನ
  15. ಅಗಸ್ತ್ಯೋಪಾಽಖ್ಯಾನ
  16. ಭಗೀರಥ
  17. ಋಷ್ಯಶೃಂಗ
  18. ಪರಶುರಾಮ
  19. ಚ್ಯವನ
  20. ಮಾಂಧಾತ
  21. ಸೋಮಕ-ಜಂತು
  22. ಗಿಡುಗ-ಪಾರಿವಾಳ
  23. ಅಷ್ಟಾವಕ್ರ
  24. ರೈಭ್ಯ-ಯವಕ್ರೀತ
  25. ತಾರ್ಕ್ಷ್ಯ ಅರಿಷ್ಠನೇಮಿ
  26. ಅತ್ರಿ
  27. ವೈವಸ್ವತ ಮನು
  28. ಮಂಡೂಕ-ವಾಮದೇವ
  29. ಧುಂಧುಮಾರ
  30. ಮಧು-ಕೈಟಭ ವಧೆ
  31. ಕಾರ್ತಿಕೇಯನ ಜನ್ಮ
  32. ಮುದ್ಗಲ
  33. ರಾಮೋಪಾಽಖ್ಯಾನ: ರಾಮಕಥೆ
  34. ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
  35. ಇಂದ್ರವಿಜಯೋಪಾಽಖ್ಯಾನ
  36. ದಂಬೋದ್ಭವ
  37. ಮಾತಲಿವರಾನ್ವೇಷಣೆ
  38. ಗಾಲವ ಚರಿತೆ
  39. ವಿದುಲೋಪಾಽಖ್ಯಾನ
  40. ತ್ರಿಪುರವಧೋಪಾಽಖ್ಯಾನ
  41. ಪರಶುರಾಮನು ಅಸ್ತ್ರಗಳನ್ನು ಪಡೆದುದು
  42. ಪ್ರಭಾಸಕ್ಷೇತ್ರ ಮಹಾತ್ಮೆ
  43. ತ್ರಿತಾಖ್ಯಾನ
  44. ಸಾರಸ್ವತೋಪಾಽಖ್ಯಾನ
  45. ವಿಶ್ವಾಮಿತ್ರ
  46. ವಸಿಷ್ಠಾಪವಾಹ ಚರಿತ್ರೆ
  47. ಬಕ ದಾಲ್ಭ್ಯನ ಚರಿತ್ರೆ
  48. ಕಪಾಲಮೋಚನತೀರ್ಥ ಮಹಾತ್ಮೆ
  49. ಮಂಕಣಕ
  50. ವೃದ್ಧಕನ್ಯೆ
  51. ಬದರಿಪಾಚನ ತೀರ್ಥ
  52. ಕುಮಾರನ ಪ್ರಭಾವ-ಅಭಿಷೇಕ
  53. ಅಸಿತದೇವಲ-ಜೇಗೀಷವ್ಯರ ಕಥೆ
  54. ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
  55. ಕುರುಕ್ಷೇತ್ರ ಮಹಾತ್ಮೆ
  56. ಶಂಖಲಿಖಿತೋಪಾಽಖ್ಯಾನ
  57. ಜಾಮದಗ್ನೇಯೋಪಾಽಖ್ಯಾನ
  58. ಷೋಡಶರಾಜಕೀಯೋಪಾಽಖ್ಯಾನ

Leave a Reply

Your email address will not be published. Required fields are marked *