ಅಸಿತದೇವಲ-ಜೈಗೀಷವ್ಯರ ಕಥೆ

Related image

ಈ ಕಥೆಯನ್ನು ವೈಶಂಪಾಯನನು ಜನಮೇಜಯನಿಗೆ ಶಲ್ಯ ಪರ್ವದ ಸಾರಸ್ವತಪರ್ವದ ಅಧ್ಯಾಯ 49ರಲ್ಲಿ ಹೇಳುತ್ತಾನೆ.

ಆದಿತ್ಯತೀರ್ಥದಲ್ಲಿ ಹಿಂದೆ ಧರ್ಮಾತ್ಮ ತಪೋಧನ ಅಸಿತದೇವಲನು ಗೃಹಸ್ಥಾಶ್ರಮ ಧರ್ಮವನ್ನು ಆಶ್ರಯಿಸಿ ವಾಸಿಸುತ್ತಿದ್ದನು. ಆ ಧರ್ಮನಿತ್ಯ-ಶುಚಿ-ದಾಂತ-ಮಹಾತಪಸ್ವಿಯು ಯಾರನ್ನೂ ಹಿಂಸಿಸದೇ ಕರ್ಮ-ಮನಸ್ಸು-ಮಾತುಗಳಲ್ಲಿ ಸರ್ವ ಜೀವಿಗಳೊಂದಿಗೆ ಸಮನಾಗಿ ನಡೆದುಕೊಂಡಿದ್ದನು. ಅಕ್ರೋಧನನಾದ ಆ ಮಹಾತಪಸ್ವಿಯು ಪ್ರಿಯ-ಅಪ್ರಿಯ ನಿಂದನೆಗಳನ್ನು ಮತ್ತು ಕಾಂಚನ-ಕಲ್ಲುಗಳನ್ನು ಒಂದೇ ಸಮನಾಗಿ ಕಾಣುತ್ತಿದ್ದನು. ದ್ವಿಜರೊಂದಿಗೆ ನಿತ್ಯವೂ ದೇವತೆ-ಅತಿಥಿಗಳನ್ನು ಪೂಜಿಸುತ್ತಿದ್ದನು ಮತ್ತು ಆ ಧರ್ಮಪರಾಯಣನು ನಿತ್ಯವೂ ಬ್ರಹ್ಮಚರ್ಯದಲ್ಲಿ ನಿರತನಾಗಿದ್ದನು. ಆಗ ಒಮ್ಮೆ ಧೀಮಾನ್ ಮುನಿ ಜೈಗೀಷವ್ಯನು ಯೋಗವನ್ನಾಶ್ರಯಿಸಿ ಭಿಕ್ಷುಕನಾಗಿ ಆ ತೀರ್ಥಕ್ಕೆ ಆಗಮಿಸಿದನು. ಆ ಮಹಾದ್ಯುತಿ ಮಹಾತಪಸ್ವಿಯು ದೇವಲನ ಆಶ್ರಮದಲ್ಲಿ ವಾಸಮಾಡಿದ್ದುಕೊಂಡು ಯೋಗನಿತ್ಯನಾಗಿ ಸಿದ್ಧಿಯನ್ನು ಪಡೆದನು. ಅವನು ಅಲ್ಲಿ ವಾಸಿಸುತ್ತಿರಲು ಮಹಾಮುನಿ ಜೈಗೀಷವ್ಯನನ್ನು ದೇವಲನು ನೋಡುತ್ತಲೇ ಇದ್ದನು. ಆದರೆ ಗೃಹಸ್ಥಾಶ್ರಮ ಧರ್ಮವನ್ನು ಪಾಲಿಸುತ್ತಿದ್ದ ಅವನು ಯೋಗಸಾಧನೆಗೆ ತೊಡಗುತ್ತಿರಲಿಲ್ಲ. ಹೀಗೆ ಅವರಿಬ್ಬರೂ ಇರುತ್ತಾ ಬಹಳಕಾಲ ಕಳೆಯಿತು. ಕೆಲವು ಸಮಯಗಳು ದೇವಲನು ಜೈಗೀಷವ್ಯ ಮುನಿಯನ್ನು ಕಾಣುತ್ತಲೇ ಇರಲಿಲ್ಲ. ಆಹಾರಕಾಲದಲ್ಲಿ ಪರಿವ್ರಾಜಕ ಮತಿಮಾನ್ ಧರ್ಮಜ್ಞ ಜೈಗೀಷವ್ಯನು ಭಿಕ್ಷೆಬೇಡುತ್ತಾ ದೇವಲನ ಬಳಿ ಬರುತ್ತಿದ್ದನು. ಭಿಕ್ಷುರೂಪದಲ್ಲಿದ್ದ ಆ ಮಹಾಮುನಿಯು ಬಂದುದನ್ನು ನೋಡಿ ದೇವಲನು ಪರಮ ಗೌರವವನ್ನಿತ್ತು ಬಹಳ ಸಂತೋಷಪಟ್ಟುಗೊಳ್ಳುತ್ತಿದ್ದನು. ದೇವಲನಾದರೋ ಯಥಾಶಕ್ತಿಯಾಗಿ ಋಷಿಗಳಿಗೆ ಅನುಗುಣವಾದ ವಿಧಿಗಳಿಂದ ಸಮಾಹಿತನಾಗಿ ಪೂಜಿಸುತ್ತಿದ್ದನು.

ಒಮ್ಮೆ ಮಹಾದ್ಯುತಿ ಮುನಿ ಜೈಗೀಷವ್ಯನನ್ನು ನೋಡಿ ಮಹಾತ್ಮ ದೇವಲನಲ್ಲಿ ಮಹಾ ಚಿಂತೆಯು ಮೂಡಿತು. “ಅನೇಕ ವರ್ಷಗಳು ನಾನು ವಿಧಿವತ್ತಾಗಿ ಇವನನ್ನು ಪೂಜಿಸುತ್ತಲೇ ಬಂದಿದ್ದೇನೆ. ಆದರೆ ಈ ಆಲಸಿ ಭಿಕ್ಷುವು ನನ್ನೊಡನೆ ಏನೊಂದು ಮಾತನ್ನೂ ಆಡಲೇ ಇಲ್ಲವಲ್ಲ!” ಹೀಗೆ ಆಲೋಚಿಸುತ್ತಾ ಶ್ರೀಮಾನ್ ದೇವಲನು ಕಲಶವನ್ನೆತ್ತಿಕೊಂಡು ಆಕಾಶಮಾರ್ಗವಾಗಿ ಸಮುದ್ರಕ್ಕೆ ಹೋದನು. ಸರಿತ್ತುಗಳ ಒಡೆಯ ಸಮುದ್ರವನ್ನು ತಲುಪುತ್ತಲೇ ಆ ಧರ್ಮಾತ್ಮನು ತನಗಿಂದ ಮೊದಲೇ ಅಲ್ಲಿಗೆ ಬಂದಿದ್ದ ಜೈಗೀಷವ್ಯನನ್ನು ಕಂಡನು. ಆಗ ಪ್ರಭುವು ವಿಸ್ಮಿತನಾಗಿ ಈ ರೀತಿ ಚಿಂತಿಸತೊಡಗಿದನು: “ಈ ಭಿಕ್ಷುವು ಹೇಗೆ ತಾನೇ ಸಮುದ್ರವನ್ನು ತಲುಪಿ ಸ್ನಾನವನ್ನೂ ಮುಗಿಸಿದ್ದಾನೆ?” ಮಹರ್ಷಿ ಅಸಿತನು ಹೀಗೆ ಚಿಂತಿಸುತ್ತಿದ್ದನು. ಸಮುದ್ರದಲ್ಲಿ ವಿಧಿವತ್ತಾಗಿ ಸ್ನಾನಮಾಡಿ ಜಪವನ್ನೂ ಜಪಿಸಿದನು. ಆಹ್ನಿಕವನ್ನೂ ಪೂರೈಸಿ, ನೀರಿನಿಂದ ತುಂಬಿದ ಕಲಶವನ್ನು ಹಿಡಿದುಕೊಂಡು ಶ್ರೀಮಾನ್ ದೇವಲನು ಆಶ್ರಮಕ್ಕೆ ಹಿಂದಿರುಗಿದನು. ತನ್ನ ಆಶ್ರಮವನ್ನು ಪ್ರವೇಶಿಸುತ್ತಲೇ ಆ ಮುನಿಯು ಆಶ್ರಮದಲ್ಲಿ ಕುಳಿತಿದ್ದ ಜೈಗೀಷವ್ಯನನ್ನು ನೋಡಿದನು. ಆದರೆ ಜೈಗೀಷ್ಯವ್ಯನು ದೇವಲನೊಂದಿಗೆ ಯಾವುದೇ ರೀತಿಯಲ್ಲಿಯೂ ವ್ಯವಹರಿಸಲಿಲ್ಲ. ಆಶ್ರಮಪದದಲ್ಲಿ ಆ ಮಹಾತಪಸ್ವಿಯು ಕಟ್ಟಿಗೆಯಂತೆ ಮೌನಿಯಾಗಿದ್ದನು. ಸಾಗರದ ಗಾಂಭೀರ್ಯದಿಂದ ಅವನು ಸಾಗರದ ನೀರಿನಲ್ಲಿ ತನಗಿಂತಲೇ ಮೊದಲು ಸ್ನಾನಮಾಡಿದುದನ್ನೂ ಮತ್ತು ತನಗಿಂತ ಮೊದಲೇ ಆಶ್ರಮವನ್ನು ಪ್ರವೇಶಿಸಿದುದನ್ನು ನೋಡಿ ಬುದ್ಧಿಮಾನ್ ಅಸಿತ ದೇವಲನು ಚಿಂತಿಸತೊಡಗಿದನು. ತಪಸ್ಸು-ಯೋಗಗಳಿಂದುಂಟಾದ ಜೈಗೀಷವ್ಯನ ಪ್ರಭಾವವನ್ನು ನೋಡಿ ಮುನಿಸತ್ತಮನು “ಇವನನ್ನು ನಾನು ಸಮುದ್ರ ಮತ್ತು ಆಶ್ರಮಗಳಲ್ಲಿ ಹೇಗೆ ನೋಡುತ್ತಿರುವೆ?” ಎಂದು ಆಲೋಚಿಸತೊಡಗಿದನು. ಹೀಗೆ ಲೆಖ್ಕ ಹಾಕುತ್ತಲೇ ಮಂತ್ರಪಾರಗ ಮುನಿ ದೇವಲನು ಭಿಕ್ಷು ಜೈಗೀಷವ್ಯನ ಕುರಿತು ಚರ್ಚಿಸಲು ಅಲ್ಲಿಂದ ಅಂತರಿಕ್ಷಕ್ಕೇರಿದನು. ಅಂತರಿಕ್ಷದಲ್ಲಿ ಹೋಗುತ್ತಿರುವಾಗ ಅವನು ಸಮಾಹಿತ ಸಿದ್ಧರನ್ನೂ, ಆ ಸಿದ್ಧರು ಜೈಗೀಷವ್ಯನನ್ನು ಪೂಜಿಸುತ್ತಿರುವುದನ್ನೂ ಕಂಡನು. ಆಗ ವ್ಯವಸಾಯೀ ದೃಢವ್ರತ ಅಸಿತನು ತುಂಬಾ ಕುಪಿತನಾದನು. ದೇವಲನು ಜೈಗೀಷವ್ಯನು ದಿವಕ್ಕೆ ಹೋಗುತ್ತಿರುವುದನ್ನೂ ನೋಡಿದನು. ಅವನು ಪಿತೃಲೋಕಕ್ಕೆ ಹೋಗುತ್ತಿರುವುದನ್ನೂ ನೋಡಿದನು. ಮತ್ತು ಪಿತೃಲೋಕದಿಂದ ಯಮಲೋಕಕ್ಕೆ ಹೋಗುತ್ತಿರುವುದನ್ನೂ ನೋಡಿದನು. ಮಹಾಮುನಿ ಜೈಗೀಷವ್ಯನು ಅಲ್ಲಿಂದಲೂ ಮೇಲೆ ಹಾರಿ ಸೋಮಲೋಕಕ್ಕೆ ಹೋಗುತ್ತಿರುವುದನ್ನೂ ದೇವಲನು ನೋಡಿದನು.

ಅಲ್ಲಿಂದ ಅವನು ಏಕಾಂತಯಾಜಿಗಳ ಶುಭ ಲೋಕಗಳಿಗೆ ಹಾರಿದುದನ್ನೂ, ಅಲ್ಲಿಂದ ಅಗ್ನಿಹೋತ್ರಿಗಳ ಲೋಕಗಳಿಗೆ ಹಾರಿದುದನ್ನೂ ನೋಡಿದನು. ಜೈಗೀಷವ್ಯನನ್ನು ದರ್ಶ-ಪೌರ್ಣಮಾಸ ಯಜ್ಞಗಳನ್ನು ಮಾಡಿದ ತಪೋಧನ ಧೀಮಂತರಿಗೆ ದೊರಕುವ ಲೋಕಗಳಲ್ಲಿಯೂ ನೋಡಿದನು. ಅಲ್ಲಿಂದ ಅವನು ಪಶುಯಾಜಿಗಳಿಗೆ ಲಭ್ಯವಾಗುವ ಅಮಲ ದೇವಪೂಜಿತ ಲೋಕಗಳಿಗೆ ಹೋಗುವುದನ್ನೂ ನೋಡಿದನು. ಅನಂತರ ಜೈಗೀಷವ್ಯನು ಬಹುವಿಧದ ಚಾತುರ್ಮಾಸ್ಯಗಳನ್ನು ಮಾಡುವ ತಪೋಧನರ ಸ್ಥಾನಗಳಿಗೆ ಹೋಗುತ್ತಿರುವುದನ್ನೂ, ಹಾಗೆಯೇ ಅಗ್ನಿಷ್ಟೋಮ ಮತ್ತು ಅಗ್ನಿಷ್ಟುತ ಯಾಗಗಳನ್ನು ಮಾಡುವ ತಪೋಧನರ ಸ್ಥಾನಗಳಿಗೆ ತಲುಪಿದುದನ್ನೂ ದೇವಲನು ನೋಡಿದನು. ಬಹುಸುವರ್ಣಗಳ ದಕ್ಷಿಣೆಗಳನ್ನಿತ್ತು ಕ್ರತುಶ್ರೇಷ್ಠ ವಾಜಪೇಯವನ್ನು ಮಾಡಿದ್ದ ಮಹಾಪ್ರಾಜ್ಞರ ಲೋಕಗಳಲ್ಲಿಯೂ ದೇವಲನು ಜೈಗೀಷವ್ಯನನ್ನು ಕಂಡನು. ಪುಂಡರೀಕ ಮತ್ತು ರಾಜಸೂಯಯಾಗಗಳನ್ನು ಮಾಡಿದವರ ಲೋಕಗಳಲ್ಲಿಯೂ ಜೈಗೀಷವ್ಯನನ್ನು ದೇವಲನು ನೋಡಿದನು. ಕ್ರತುಶ್ರೇಷ್ಠ ಅಶ್ವಮೇಧ ಮತ್ತು ಹಾಗೆಯೇ ನರಮೇಧ ಯಜ್ಞಗಳನ್ನು ಪೂರೈಸಿದ ನರಶ್ರೇಷ್ಠರಿಗೆ ದೊರಕುವ ಲೋಕಗಳಲ್ಲಿಯೂ ಅವನನ್ನು ನೋಡಿದನು. ಸರ್ವಮೇಧ ಮತ್ತು ಮಾಡಲು ಕಷ್ಟಕರವಾದ ಸೌತ್ರಾಮಣಿ ಯಜ್ಞಮಾಡಿದವರ ಲೋಕಗಳಲ್ಲಿಯೂ ದೇವಲನು ಜೈಗೀಷವ್ಯನನ್ನು ನೋಡಿದನು. ವಿವಿಧ ದ್ವಾದಶಾಹ ಸತ್ರಗಳಿಂದ ಯಜಿಸುವವರಿಗೆ ದೊರೆಯುವ ಲೋಕಗಳಲ್ಲಿಯೂ ದೇವಲನು ಜೈಗೀಷವ್ಯನನ್ನು ನೋಡಿದನು. ಹಾಗೆಯೇ ಅಸಿತನು ವಿತ್ರಾವರುಣರ ಲೋಕ, ಆದಿತ್ಯರ ಲೋಕಗಳಿಗೆ ಹೋದಾಗ ಅಲ್ಲಿಯೂ ಜೈಗೀಷವ್ಯನನ್ನು ನೋಡಿದನು. ರುದ್ರರ, ವಸುಗಳ ಮತ್ತು ಬೃಹಸ್ಪತಿಯ ಸ್ಥಾನಗಳಲ್ಲಿ ಎಲ್ಲ ಕಡೆ ಅಸಿತನು ಅವನನ್ನು ನೋಡಿದನು. ಜೈಗೀಷವ್ಯನು ಗೋಲೋಕಕ್ಕೆ ಹಾರಿ ಅಲ್ಲಿಂದ ಬ್ರಹ್ಮಸತ್ರಿಗಳಿಗೆ ದೊರಕುವ ಲೋಕಗಳಿಗೆ ಹೋಗುತ್ತಿರುವುದನ್ನೂ ಅಸಿತನು ನೋಡಿದನು. ಆ ವಿಪ್ರನು ತನ್ನ ತೇಜಸ್ಸಿನಿಂದ ಮೂರು ಲೋಕಗಳನ್ನೂ ದಾಟಿ ಪತಿವ್ರತೆಯರ ಲೋಕಗಳಿಗೆ ಹೋಗುತ್ತಿರುವುದನ್ನೂ ನೋಡಿದನು. ಅನಂತರ ಅಸಿತನು ಯೋಗಸ್ಥನಾಗಿ ಅಂತರ್ಧಾನನಾಗಿದ್ದ ಜೈಗೀಷ ಮುನಿವರನನ್ನು ಕಾಣಲಿಲ್ಲ. ಆಗ ಮಹಾಭಾಗ ದೇವಲನು ಜೈಗೀಷವ್ಯನ ವ್ರತತ್ವ, ಪ್ರಭಾವ, ಮತ್ತು ಯೋಗದ ಅತುಲ ಸಿದ್ಧಿಯ ಕುರಿತೂ ಚಿಂತಿಸಿದನು.

ಆಗ ಧೀರ ಅಸಿತನು ಅಂಜಲೀಬದ್ಧನಾಗಿ ಪ್ರಯಾಣಿಸುತ್ತಿದ್ದ ಬ್ರಹ್ಮಸತ್ರಿ ಲೋಕಸತ್ತಮ ಸಿದ್ಧರನ್ನು ಪ್ರಶ್ನಿಸಿದನು: “ಮಹೌಜಸ ಜೈಗೀಷವ್ಯನು ಕಾಣುತ್ತಿಲ್ಲವಲ್ಲ! ಇದರ ಕುರಿತು ಕೇಳಲು ಬಯಸುತ್ತೇನೆ. ನನಗೆ ಪರಮ ಕುತೂಹಲವಾಗಿದೆ!”

ಸಿದ್ಧರು ಹೇಳಿದರು: “ದೇವಲ! ದೃಢವ್ರತ! ನಾವು ಹೇಳುವುದರ ಅರ್ಥವನ್ನು ಕೇಳು! ಜೈಗೀಷವ್ಯನು ಅವ್ಯಯವೂ ಶಾಶ್ವತವೂ ಆದ ಬ್ರಹ್ಮಲೋಕಕ್ಕೆ ಹೋಗಿದ್ದಾನೆ.”

ಬ್ರಹ್ಮಸತ್ರಿ ಸಿದ್ಧರ ಆ ಮಾತನ್ನು ಕೇಳಿ ತಕ್ಷಣವೇ ಅಸಿತ ದೇವಲನು ಮೇಲಕ್ಕೆ ಹಾರಿ, ಬಿದ್ದನು. ಆಗ ಸಿದ್ಧರು ದೇವಲನಿಗೆ ಪುನಃ ಹೇಳಿದರು: “ದೇವಲ! ತಪೋಧನ! ವಿಪ್ರ! ಬ್ರಹ್ಮಸದನಕ್ಕೆ ಜೈಗೀಷವ್ಯನು ಪಡೆದುಕೊಂಡಿರುವ ಮಾರ್ಗದಲ್ಲಿ ನೀನು ಹೋಗಲಿಕ್ಕಾಗುವುದಿಲ್ಲ.”

ಸಿದ್ಧರ ಆ ಮಾತನ್ನು ಕೇಳಿ ದೇವಲನು ಪುನಃ ಅನುಕ್ರಮವಾಗಿ ಆ ಎಲ್ಲ ಲೋಕಗಳಿಂದಲೂ ಕೆಳಗಿಳಿದನು. ಪತಂಗದಂತೆ ತನ್ನ ಪುಣ್ಯ ಆಶ್ರಮಪದಕ್ಕೆ ತಲುಪಿದ ದೇವಲನು ಪ್ರವೇಶಿಸುತ್ತಿದ್ದಂತೆಯೇ ಅಲ್ಲಿ ಕೂಡ ಜೈಗೀಷವ್ಯನನ್ನು ನೋಡಿದನು. ಆಗ ದೇವಲನು ಧರ್ಮಯುಕ್ತ ಬುದ್ಧಿಯಿಂದ ಆಲೋಚಿಸಿ ತಪಸ್ವಿ ಜೈಗೀಷವ್ಯನ ಯೋಗದಿಂದುಂಟಾದ ಪ್ರಭಾವವನ್ನು ಕಂಡನು. ಆಗ ದೇವಲನು ವಿನಯಾವನತನಾಗಿ ಮಹಾಮುನಿ ಜೈಗೀಷವ್ಯನ ಬಳಿಸಾರಿ ಆ ಮಹಾತ್ಮನಿಗೆ “ಭಗವನ್! ಮೋಕ್ಷಧರ್ಮವನ್ನು ಆಶ್ರಯಿಸುವ ಇಚ್ಛೆಯುಂಟಾಗಿದೆ” ಎಂದು ಹೇಳಿದನು. ಅವನ ಆ ಮಾತನ್ನು ಕೇಳಿ ಜೈಗೀಷವ್ಯನು ಅವನಿಗೆ ಯೋಗದ ಪರಮ ವಿಧಿಯನ್ನೂ, ಕಾರ್ಯಾಕಾರ್ಯಗಳನ್ನು ಶಾಸ್ತ್ರತಃ ಉಪದೇಶಿಸಿದನು. ಸಂನ್ಯಾಸವನ್ನು ತೆಗೆದುಕೊಳ್ಳಲು ನಿಶ್ಚಯಿಸಿದ್ದ ಅವನನ್ನು ನೋಡಿ ಮಹಾತಪಸ್ವಿ ಜೈಗೀಷವ್ಯನು ಅವನಿಗೆ ವಿಧಿದೃಷ್ಠ ಕರ್ಮಗಳಿಂದ ಎಲ್ಲ ಕ್ರಿಯೆಗಳನ್ನೂ ನಡೆಸಿದನು. ಅವನ ಸನ್ಯಾಸ ನಿಶ್ಚಯವನ್ನು ನೋಡಿ ಪಿತೃಗಳೊಂದಿಗೆ ಎಲ್ಲ ಪ್ರಾಣಿಗಳೂ “ಇನ್ನು ನಮಗೆ ಯಾರು ಅನ್ನವನ್ನು ವಿಭಜಿಸಿ ಕೊಡುತ್ತಾರೆ?” ಎಂದು ರೋದಿಸಿದರು. ಹತ್ತು ದಿಕ್ಕುಗಳಿಂದಲೂ ಕೇಳಿಬರುತ್ತಿರುವ ಭೂತಗಳ ಕರುಣ ಮಾತುಗಳನ್ನು ಕೇಳಿ ದೇವಲನು ಸನ್ಯಾಸವನ್ನು ತ್ಯಜಿಸುವ ಮನಸ್ಸು ಮಾಡಿದನು. ಆಗ ಸಹಸ್ರಾರು ಪುಣ್ಯ ಫಲಮೂಲಗಳು ಪುಷ್ಪ-ಔಷಧಿಗಳು ರೋದಿಸತೊಡಗಿದವು. “ಕ್ಷುದ್ರ ದುರ್ಮತಿ ದೇವಲನು ಪುನಃ ಗೃಹಸ್ಥಾಶ್ರಮದಲ್ಲಿದ್ದುಕೊಂಡು ನಮ್ಮನ್ನು ಕತ್ತರಿಸುತ್ತಾನೆ. ಸನ್ಯಾಸಾಶ್ರಮದ ಪೂರ್ವಾಂಗ ಕರ್ಮದಲ್ಲಿ ಎಲ್ಲ ಭೂತಗಳಿಗೂ ಅಭಯವನ್ನಿತ್ತುದನ್ನು ಇವನು ಗಮನಕ್ಕೆ ತೆಗೆದುಕೊಂಡಿಲ್ಲ!”

ನಂತರ ಇನ್ನೊಮ್ಮೆ ಸ್ವಬುದ್ಧಿಯಿಂದ ಮೋಕ್ಷ ಮತ್ತು ಗೃಹಸ್ಥಧರ್ಮಗಳಲ್ಲಿ ಯಾವುದು ಶ್ರೇಯಸ್ಕರವೆನ್ನುವುದನ್ನು ಅಲೋಚಿಸಿದನು. ಹೀಗೆ ಮನಸಾರೆ ನಿಶ್ಚಯಿಸಿ ದೇವಲನು ಗ್ರಹಸ್ಥಧರ್ಮವನ್ನು ತೊರೆದು ಮೋಕ್ಷಧರ್ಮವನ್ನು ಆರಿಸಿಕೊಂಡನು. ಇದನ್ನು ಮೊದಲೇ ಯೋಚಿಸಿ ನಿಶ್ಚಯಿಸಿ ದೇವಲನು ಪರಮ ಸಿದ್ಧಿಯನ್ನೂ ಪರಮ ಯೋಗವನ್ನೂ ಪಡೆದನು. ಆಗ ಬೃಹಸ್ಪತಿಯನ್ನು ಮುಂದಿಟ್ಟುಕೊಂಡು ದೇವತೆ-ತಪಸ್ವಿಗಳು ಒಂದುಗೂಡಿ ಜೈಗೀಷವ್ಯನ ತಪಸ್ಸನ್ನು ಪ್ರಶಂಸಿಸಿದರು. ಆಗ ಋಷಿವರ ನಾರದನು ದೇವತೆಗಳಿಗೆ “ಜೈಗೀಷವ್ಯನಲ್ಲಿ ತಪಸ್ಸಿಲ್ಲ; ಅಸಿತನನ್ನು ವಿಸ್ಮಯಗೊಳಿಸಿದ್ದಾನೆ ಅಷ್ಟೆ!” ಎಂದನು. ಅವರೊಂದಿಗೆ ವಾದಿಸುತ್ತಿದ್ದ ಆ ಧೀರ ನಾರದನಿಗೆ ಹಾಗೆ ಹೇಳಬೇಡವೆಂದು ಹೇಳಿ ದಿವೌಕಸರು ಮಹಾಮುನಿ ಜೈಗೀಷವ್ಯನನ್ನು ಪ್ರಶಂಸಿಸಿದರು.

Related image

The other stories:

  1. ಆರುಣಿ ಉದ್ದಾಲಕ
  2. ಉಪಮನ್ಯು
  3. ಸಮುದ್ರಮಥನ
  4. ಗರುಡೋತ್ಪತ್ತಿ; ಅಮೃತಹರಣ
  5. ಶೇಷ
  6. ಶಕುಂತಲೋಪಾಽಖ್ಯಾನ
  7. ಯಯಾತಿ
  8. ಸಂವರಣ-ತಪತಿ
  9. ವಸಿಷ್ಠೋಪಾಽಖ್ಯಾನ
  10. ಔರ್ವೋಪಾಽಖ್ಯಾನ
  11. ಸುಂದೋಪಸುಂದೋಪಾಽಖ್ಯಾನ
  12. ಸಾರಂಗಗಳು
  13. ಸೌಭವಧೋಪಾಽಖ್ಯಾನ
  14. ನಲೋಪಾಽಖ್ಯಾನ
  15. ಅಗಸ್ತ್ಯೋಪಾಽಖ್ಯಾನ
  16. ಭಗೀರಥ
  17. ಋಷ್ಯಶೃಂಗ
  18. ಪರಶುರಾಮ
  19. ಚ್ಯವನ
  20. ಮಾಂಧಾತ
  21. ಸೋಮಕ-ಜಂತು
  22. ಗಿಡುಗ-ಪಾರಿವಾಳ
  23. ಅಷ್ಟಾವಕ್ರ
  24. ರೈಭ್ಯ-ಯವಕ್ರೀತ
  25. ತಾರ್ಕ್ಷ್ಯ ಅರಿಷ್ಠನೇಮಿ
  26. ಅತ್ರಿ
  27. ವೈವಸ್ವತ ಮನು
  28. ಮಂಡೂಕ-ವಾಮದೇವ
  29. ಧುಂಧುಮಾರ
  30. ಮಧು-ಕೈಟಭ ವಧೆ
  31. ಕಾರ್ತಿಕೇಯನ ಜನ್ಮ
  32. ಮುದ್ಗಲ
  33. ರಾಮೋಪಾಽಖ್ಯಾನ: ರಾಮಕಥೆ
  34. ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
  35. ಇಂದ್ರವಿಜಯೋಪಾಽಖ್ಯಾನ
  36. ದಂಬೋದ್ಭವ
  37. ಮಾತಲಿವರಾನ್ವೇಷಣೆ
  38. ಗಾಲವ ಚರಿತೆ
  39. ವಿದುಲೋಪಾಽಖ್ಯಾನ
  40. ತ್ರಿಪುರವಧೋಪಾಽಖ್ಯಾನ
  41. ಪರಶುರಾಮನು ಅಸ್ತ್ರಗಳನ್ನು ಪಡೆದುದು
  42. ಪ್ರಭಾಸಕ್ಷೇತ್ರ ಮಹಾತ್ಮೆ
  43. ತ್ರಿತಾಖ್ಯಾನ
  44. ಸಾರಸ್ವತೋಪಾಽಖ್ಯಾನ
  45. ವಿಶ್ವಾಮಿತ್ರ
  46. ವಸಿಷ್ಠಾಪವಾಹ ಚರಿತ್ರೆ
  47. ಬಕ ದಾಲ್ಭ್ಯನ ಚರಿತ್ರೆ
  48. ಕಪಾಲಮೋಚನತೀರ್ಥ ಮಹಾತ್ಮೆ
  49. ಮಂಕಣಕ
  50. ವೃದ್ಧಕನ್ಯೆ
  51. ಬದರಿಪಾಚನ ತೀರ್ಥ
  52. ಕುಮಾರನ ಪ್ರಭಾವ-ಅಭಿಷೇಕ
  53. ಅಸಿತದೇವಲ-ಜೇಗೀಷವ್ಯರ ಕಥೆ
  54. ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
  55. ಕುರುಕ್ಷೇತ್ರ ಮಹಾತ್ಮೆ
  56. ಶಂಖಲಿಖಿತೋಪಾಽಖ್ಯಾನ
  57. ಜಾಮದಗ್ನೇಯೋಪಾಽಖ್ಯಾನ
  58. ಷೋಡಶರಾಜಕೀಯೋಪಾಽಖ್ಯಾನ

Leave a Reply

Your email address will not be published. Required fields are marked *