ವನವಾಸದ ಹನ್ನೊಂದು ವರ್ಷಗಳು ಕಳೆದಾಗ, ಕಾಮ್ಯಕದಲ್ಲಿ ವ್ಯಾಸ-ಯುಧಿಷ್ಠಿರರ ಸಂವಾದ

ಮಹಾತ್ಮ ಪಾಂಡವರು ವನದಲ್ಲಿ ವಾಸಿಸುತ್ತಿರಲು ಕಷ್ಟದಿಂದ ಹನ್ನೊಂದು ವರ್ಷಗಳು ಕಳೆದವು. ಆ ಉತ್ತಮ ಪುರುಷರು ಸುಖಾರ್ಹರಾಗಿದ್ದರೂ ಫಲಮೂಲಗಳನ್ನು ತಿನ್ನುತ್ತಾ, ಸಮಯವೊದಗುವುದನ್ನೇ ಕಾಯುತ್ತಾ ಮಹಾದುಃಖವನ್ನು ಸಹಿಸಿಕೊಂಡಿದ್ದರು. ರಾಜರ್ಷಿ ಯುಧಿಷ್ಠಿರನಾದರೋ ತನ್ನ ಅಪರಾಧದಿಂದಾಗಿ ಸಹೋದರರಿಗುಂಟಾದ ಮಹಾ ದುಃಖದ ಕುರಿತು ಚಿಂತಿಸುತ್ತಿದ್ದನು. ಹೃದಯವನ್ನು ಮುಳ್ಳಿನಂತೆ ಈ ಚಿಂತೆಯು ಚುಚ್ಚುತ್ತಿರಲು ರಾಜನು ಸುಖವಾಗಿ ನಿದ್ರಿಸಲಾರದೇ ದ್ಯೂತದ ಸಮಯದಲ್ಲಿ ನಡೆದ ದೌರಾತ್ಮದ ಕುರಿತು ಚಿಂತಿಸಿದನು. ಸೂತಪುತ್ರನ ಕಠೋರ ಮಾತುಗಳನ್ನು ನೆನಪಿಸಿಕೊಂಡು ಅವನು ಪರಮದೀನನಾಗಿ ನಿಟ್ಟುಸಿರು ಬಿಡುತ್ತಾ ಕೋಪದ ಮಹಾವಿಷವನ್ನು ಕಾರುತ್ತಿದ್ದನು. ಯುಧಿಷ್ಠಿರನ ಆ ಪರಿಸ್ಥಿತಿಯನ್ನು ಗಮನಿಸಿದ ಅರ್ಜುನ, ಯಮಳರು, ದ್ರೌಪದೀ ಮತ್ತು ಭೀಮಸೇನರು ಮಹಾದುಃಖವನ್ನು ಅನುಭವಿಸಿದರು. ಸ್ವಲ್ಪವೇ ಸಮಯವು ಉಳಿದಿದೆ ಎಂದು ತಿಳಿದಿದ್ದ ಆ ಪುರುಷರ್ಷಭರು ಎಷ್ಟು ಸಿಟ್ಟು-ಉತ್ಸಾಹಗಳನ್ನು ತಳೆದಿದ್ದರೆಂದರೆ ಅವರ ಮುಖಗಳೇ ಬದಲಾದಂತೆ ತೋರುತ್ತಿದ್ದವು.

ಕೆಲವು ಸಮಯದ ನಂತರ ಸತ್ಯವತೀಸುತ ಮಹಾಯೋಗಿ ವ್ಯಾಸನು ಪಾಂಡವರನ್ನು ಕಾಣಲು ಅಲ್ಲಿಗೆ ಆಗಮಿಸಿದನು. ಮಹಾತ್ಮನ ಬರವನ್ನು ಕಂಡ ಯುಧಿಷ್ಠಿರನು ಎದ್ದು ಅವನನ್ನು ಯಥಾವಿಧಿಯಾಗಿ ಬರಮಾಡಿಕೊಂಡನು. ವ್ಯಾಸನ ಆಸನದ ಕೆಳಗಿನ ಆಸನದಲ್ಲಿ ಕುಳಿತು ಶುಶ್ರೂಷೆಮಾಡಿ, ಸಾಷ್ಟಾಂಗ ನಮಸ್ಕಾರಮಾಡಿದನು. ವನದಲ್ಲಿ ವನ್ಯಗಳಿಂದ ಜೀವಿಸಿ ಕೃಶರಾಗಿದ್ದ ಮೊಮ್ಮಕ್ಕಳನ್ನು ನೋಡಿದ ವ್ಯಾಸನು ಅನುಕಂಪದಿಂದ ಬಾಷ್ಪಗದ್ಗಿತನಾಗಿ ಹೇಳಿದನು:

“ಪುತ್ರ ಯುಧಿಷ್ಠಿರ! ಕೇಳು! ತಪಸ್ಸನ್ನು ತಪಿಸದೆಯೇ ಮಹಾಸುಖವು ದೊರಕುವುದಿಲ್ಲ. ಪುರುಷನು ಸುಖ-ದುಃಖಗಳನ್ನು ಒಂದಾದನಂತರ ಮತ್ತೊಂದನ್ನು ಅನುಭವಿಸುತ್ತಿರುತ್ತಾನೆ. ಯಾರಿಗೂ ಅತ್ಯಂತವಾದ ಅಸುಖವು ಇರುವುದಿಲ್ಲ. ಆಧ್ಯಾತ್ಮಿಕ ಬುದ್ಧಿಯಿಂದ ಕೂಡಿದ ಪ್ರಜ್ಞಾವಂತ ಪುರುಷನು ಅದೃಷ್ಟವು ಉದಯವಾಗುತ್ತದೆ ಮತ್ತು ಅಸ್ತವಾಗುತ್ತದೆ ಎನ್ನುವುದನ್ನು ತಿಳಿದು ಶೋಕಿಸುವುದಿಲ್ಲ ಮತ್ತು ಹರ್ಷಿಸುವುದೂ ಇಲ್ಲ. ಸುಖವು ಬಂದು ಬಿದ್ದಾಗ ಅನುಭವಿಸು. ದುಃಖವು ಬಂದು ಬಿದ್ದಾಗ ಸಹಿಸಿಕೋ! ಕೃಷಿಕನು ತನ್ನ ಸಸ್ಯಗಳ ಕುರಿತು ಮಾಡುವಂತೆ ಕಾಲಪ್ರಾಪ್ತವಾಗುವುದನ್ನು ಕಾಯಿ.

“ತಪಸ್ಸಿಗಿಂತ ಶ್ರೇಷ್ಠವಾದುದು ಇನ್ನೊಂದಿಲ್ಲ. ತಪಸ್ಸಿನಿಂದ ಮಹತ್ತರವಾದುದನ್ನೂ ಪಡೆಯುತ್ತಾರೆ. ತಪಸ್ಸಿಗೆ ಅಸಾಧ್ಯವಾದುದು ಯಾವುದೂ ಇಲ್ಲವೆಂದು ತಿಳಿ. ಸತ್ಯ, ಪ್ರಾಮಾಣಿಕತೆ, ಅಕ್ರೋಧ, ಸಂವಿಭಾಗ, ದಮ, ಶಮ, ಅನಸೂಯೆ, ಅಹಿಂಸ, ಶೌಚ, ಮತ್ತು ಇಂದ್ರಿಯಸಂಯಮಗಳು ಪುಣ್ಯಕರ್ಮಿ ನರರ ಸಾಧನೆಗಳು. ಅಧರ್ಮದಲ್ಲಿ ರುಚಿಯನ್ನಿಡುವ ಮೂಢರು ಮತ್ತು ಪಶುಗಳ ದಾರಿಯನ್ನು ಹಿಡಿಯುವ ಜನರು ಕೃಚ್ಛ್ರಯೋನಿಗಳನ್ನು ಸೇರಿ ಸುಖವನ್ನು ಪಡೆಯುವುದಿಲ್ಲ.

“ಇಲ್ಲಿ ಯಾವ ಕರ್ಮವನ್ನು ಮಾಡಲ್ಪಡುತ್ತದೆಯೋ ಅದನ್ನು ಇನ್ನೊಂದರಲ್ಲಿ ಅನುಭವಿಸಲಾಗುತ್ತದೆ. ಆದುದರಿಂದ ಶರೀರವನ್ನು ತಪಸ್ಸು-ನಿಯಮಗಳಲ್ಲಿ ತೊಡಗಿಸಬೇಕು. ಮತ್ಸರವನ್ನು ತೊರೆದು ಸರಿಯಾದ ಕಾಲದಲ್ಲಿ ಪಾತ್ರನಾದವನಿಗೆ ಹೃಷ್ಟಾತ್ಮನಾಗಿ ಯಥಾಶಕ್ತಿಯಾಗಿ ಸಂಪೂಜಿಸಿ ನಮಸ್ಕರಿಸಿ ದಾನಮಾಡಬೇಕು. ಸತ್ಯವಾದೀ ಪ್ರಾಮಾಣಿಕನು ಅನಾಯಾಸ ಜೀವನವನ್ನು ಪಡೆಯುತ್ತಾನೆ. ಅಕ್ರೋಧಿ-ಅನಸೂಯನು ಶ್ರೇಷ್ಠ ಶಾಂತಿಯನ್ನು ಹೊಂದುತ್ತಾನೆ. ದಾಂತ-ಶಮಪರನು ಶಾಶ್ವತವಾಗಿ ಪರಿಕ್ಲೇಶಗಳನ್ನು ಪಡೆಯುವುದಿಲ್ಲ. ದಾಂತಾತ್ಮನು ಸಂಪತ್ತು ಇತರರಿಗೆ ಹೋಗುವುದನ್ನು ನೋಡಿ ಪರಿತಪಿಸುವುದಿಲ್ಲ. ಹಂಚಿಕೊಳ್ಳುವವನು ಮತ್ತು ದಾನಿ ನರನು ಸುಖವನ್ನು ಭೋಗಿಸುತ್ತಾನೆ ಮತ್ತು ಅಹಿಂಸಕನು ಪರಮ ಆರೋಗ್ಯವನ್ನು ಪಡೆಯುತ್ತಾನೆ. ಮಾನ್ಯವಂತರನ್ನು ಮನ್ನಿಸುವವರು ಮಹಾಕುಲದಲ್ಲಿ ಜನ್ಮಪಡೆಯುತ್ತಾರೆ. ಜಿತೇಂದ್ರಿಯನು ವ್ಯಸನವನ್ನೇ ಪಡೆಯುವುದಿಲ್ಲ. ಶುಭಕರ್ಮಗಳ ಮೇಲೆಯೇ ಬುದ್ಧಿಯಿಟ್ಟಿರುವವನು ಕಾಲಧರ್ಮವು ಒದಗಿ ಬಂದಾಗ ಆ ಯೋಗದಿಂದ ಕಲ್ಯಾಣವನ್ನೇ ಹೊಂದುತ್ತಾನೆ.”

ಯುಧಿಷ್ಠಿರನು ಕೇಳಿದನು: “ಭಗವನ್! ಪರದಲ್ಲಿ ಯಾವುದು ಬಹುಗುಣವಾದದ್ದು – ದಾನಧರ್ಮಗಳದ್ದೋ ಅಥವಾ ತಪಸ್ಸಿನದ್ದೋ? ಮತ್ತು ಇವುಗಳಲ್ಲಿ ದುಷ್ಕರವಾದುದು ಯಾವುದೆಂದು ಹೇಳುತ್ತಾರೆ?”

ವ್ಯಾಸನು ಉತ್ತರಿಸಿದನು: “ದಾನಕ್ಕಿಂತಲೂ ದುಷ್ಕರವಾದುದು ಪೃಥ್ವಿಯಲ್ಲಿ ಬೇರೆ ಯಾವುದೂ ಇಲ್ಲ. ಯಾಕೆಂದರೆ ಅರ್ಥದ ತೃಷ್ಣೆಯು ಹೆಚ್ಚಿನದು ಮತ್ತು ಅದು ಬಹುದುಃಖದಿಂದ ದೊರೆಯುತ್ತದೆ. ವೀರ ನರರು ಧನಕ್ಕಾಗಿ ತಮ್ಮ ಪ್ರಿಯ ಪ್ರಾಣವನ್ನೇ ತ್ಯಜಿಸಿ ಮಹಾರಣವನ್ನು ಅಥವಾ ಸಮುದ್ರವನ್ನು ಅಥವಾ ಕಾಡನ್ನು ಪ್ರವೇಶಿಸುವರು. ಧನಾರ್ಥಿ ಮಾನವರು ಕೆಲವರು ಕೃಷಿ ಅಥವಾ ಗೋರಕ್ಷಣೆಯನ್ನು ಮಾಡುತ್ತಾರೆ. ಇನ್ನು ಕೆಲವರು ಸೇವಾಕೆಲಸಗಳಲ್ಲಿ ತೊಡಗುತ್ತಾರೆ. ಕಷ್ಟಪಟ್ಟು ಸಂಪಾದಿಸಿದುದನ್ನು ಪರಿತ್ಯಾಗಮಾಡುವುದು ತುಂಬಾ ಕಷ್ಟವಾದುದು. ದಾನಕ್ಕಿಂತ ದುಷ್ಕರವಾದುದು ಇನ್ನೊಂದಿಲ್ಲ. ಆದುದರಿಂದ ದಾನವೇ ಮೇಲೆಂದು ನನ್ನ ಮತ. ಆದರೆ ಇದರಲ್ಲಿ ವಿಶೇಷವೇನೆಂದರೆ ನ್ಯಾಯದಿಂದ ಗಳಿಸಿದ ಧನವನ್ನು ಪಾತ್ರನಾದವನಿಗೆ ಒಳ್ಳೆಯ ದೇಶ-ಕಾಲಗಳಲ್ಲಿ ನೀಡಬೇಕು. ಆದರೆ ಅನ್ಯಾಯವಾಗಿ ಗಳಿಸಿದ ಧನವನ್ನು ದಾನಧರ್ಮ ಮಾಡುವುದರಿಂದ ಕರ್ತಾರನ ಮಹಾ ಭಯವು ಹೋಗುವುದಿಲ್ಲ. ದಾನವು ಸ್ವಲ್ಪವೇ ಆದರೂ ಸಪಾತ್ರನಿಗೆ ಸಕಾಲದಲ್ಲಿ ಶುದ್ಧಮನಸ್ಸಿನಿಂದ ನೀಡಿದುದೇ ಆದರೆ ಸಾವಿನ ನಂತರ ಅನಂತ ಫಲವನ್ನು ಅನುಭವಿಸುತ್ತಾನೆ.”

ವ್ಯಾಸನು ಇದಕ್ಕೆ ಸಂಬಂಧಿಸಿದ ಮುದ್ಗಲನು ಹೇಗೆ ಒಂದು ಅಳತೆ ಅನ್ನವನ್ನು ಪರಿತ್ಯಜಿಸಿ ಫಲವನ್ನು ಪಡೆದ ಎಂಬ ಒಂದು ಪುರಾತನ ಇತಿಹಾಸವನ್ನು ಯುಧಿಷ್ಠಿರನಿಗೆ ಹೇಳಿದನು. ಅನಂತರ ಮುಂದುವರೆದು ಹೇಳಿದನು: “ಕೌಂತೇಯ! ನೀನು ಶೋಕಿಸಬಾರದು. ವೃದ್ಧಿಯಾಗುತ್ತಿದ್ದ ರಾಜ್ಯದಿಂದ ಪರಿಭ್ರಷ್ಟನಾಗಿದ್ದೀಯೆ. ಆದರೆ ತಪಸ್ಸಿನಿಂದ ಅದನ್ನು ಪುನಃ ಪಡೆಯುತ್ತೀಯೆ. ಸುಖದ ನಂತರ ದುಃಖ ಮತ್ತು ದುಃಖದ ನಂತರ ಸುಖ ಇವು ಒಂದರ ನಂತರ ಇನ್ನೊಂದರಂತೆ, ಗಾಲಿಯ ಚಕ್ರದಂತೆ ತಿರುಗಿ ಬರುತ್ತಿರುತ್ತವೆ. ಹದಿಮೂರು ವರ್ಷಗಳು ಕಳೆದ ನಂತರ ನಿನ್ನ ಪಿತೃಪಿತಾಮಹರ ರಾಜ್ಯವನ್ನು ಪಡೆಯುತ್ತೀಯೆ. ಆದುದರಿಂದ ನಿನ್ನ ಈ ಮಾನಸಿಕ ಜ್ವರವನ್ನು ಕಳೆದುಕೋ!”

ಯುಧಿಷ್ಠಿರನಿಗೆ ಹೀಗೆ ಹೇಳಿ ಭಗವಾನ್ ವ್ಯಾಸನು ತಪಸ್ಸಿಗೆ ಪುನಃ ಆಶ್ರಮದ ಕಡೆ ನಡೆದನು.

Leave a Reply

Your email address will not be published. Required fields are marked *