ವಸಿಷ್ಠೋಪಾಽಖ್ಯಾನ

ವಸಿಷ್ಠ-ವಿಶ್ವಾಮಿತ್ರರ ಈ ಕಥೆಯು ವ್ಯಾಸ ಮಹಾಭಾರತದ ಆದಿಪರ್ವದ ಚೈತ್ರರಥ ಪರ್ವ (ಅಧ್ಯಾಯ ೧೬೪-೧೬೮) ದಲ್ಲಿ ಬರುತ್ತದೆ. ಈ ಕಥೆಯನ್ನು ಗಂಧರ್ವ ಅಂಗಾರಪರ್ಣನು ಅರ್ಜುನನಿಗೆ ಪಾಂಡವರು ದ್ರೌಪದಿಯ ಸ್ವಯಂವರಕ್ಕೆ ಪ್ರಯಾಣಿಸುತ್ತಿರುವಾಗ ಮಾರ್ಗದಲ್ಲಿ ಹೇಳಿದನು.

ಕನ್ಯಕುಬ್ಜದಲ್ಲಿ ಮಹಾ ಪಾರ್ಥಿವನಿರುತ್ತಿದ್ದನು. ಸತ್ಯಧರ್ಮಪರಾಯಣನಾದ ಅವನು ಲೋಕಗಳಲ್ಲಿ ಗಾಧೀ ಎಂದು ವಿಶ್ರುತನಾಗಿದ್ದನು. ಈ ಧರ್ಮಾತ್ಮನಿಗೆ ಸಮೃದ್ಧಬಲವಾಹನ ರಿಪುಮರ್ದನ ವಿಶ್ವಾಮಿತ್ರ ಎಂಬ ಖ್ಯಾತ ಮಗನೊಬ್ಬನಿದ್ದನು. ಅವನು ಅಮಾತ್ಯರೊಂದಿಗೆ ಬೇಟೆಯಾಡುತ್ತಾ ರಮ್ಯ ಮರುಭೂಮಿ ಮತ್ತು ಹುಲ್ಲುಗಾವಲುಗಳಲ್ಲಿ ಜಿಂಕೆ ವರಾಹಗಳನ್ನು ಕೊಲ್ಲುತ್ತಾ ಗಹನ ವನಕ್ಕೆ ಹೋದನು. ಒಮ್ಮೆ ಜಿಂಕೆಯೊಂದನ್ನು ಅರಸುತ್ತಾ ಬರುತ್ತಿರುವಾಗ ಬಾಯಾರಿಕೆಯಿಂದ ಬಳಲಿದ ಆ ನರಶ್ರೇಷ್ಠನು ವಸಿಷ್ಠನ ಆಶ್ರಮದ ಬಳಿ ಬಂದನು. ಅವನ ಆಗಮನವನ್ನು ಕಂಡ ಶ್ರೇಷ್ಠ ಮಹಾಋಷಿ ವಸಿಷ್ಠನು ನರಶ್ರೇಷ್ಠ ವಿಶ್ವಾಮಿತ್ರನನ್ನು ಆದರದಿಂದ ಸ್ವಾಗತಿಸಿದನು. ಅವನನ್ನು ಪಾದ್ಯಾರ್ಘ್ಯ, ಆಚಮನೀಯಗಳಿಂದ ಸ್ವಾಗತಿಸಿ, ವನಗಳಲ್ಲಿ ದೊರೆಯುವ ಸಂಗ್ರಹಗಳನ್ನು ಅರ್ಪಿಸಿದನು. ಮಹಾತ್ಮ ವಸಿಷ್ಠನಲ್ಲಿ ಕಾಮಧುಗ್ಧೇನುವೊಂದಿತ್ತು. ಅದು ಅವನು ಇಷ್ಟಪಟ್ಟು ಕೊಡಲು ಹೇಳಿದ ಯಾವುದನ್ನೂ ಕೊಡುತ್ತಿತ್ತು. ಗ್ರಾಮ ಮತ್ತು ಅರಣ್ಯಗಳ ಔಷಧಿಗಳು, ಹಾಲು, ಷಡ್ರಸ, ಅಮೃತರಸ, ಉತ್ತಮ ರಸಾಯನ, ಭೋಜನ, ಪಾನೀಯಗಳು, ವಿವಿಧ ಭಕ್ಷ್ಯಗಳು, ಲೇಹ, ಮತ್ತು ಇತರ ಅಮೃತಕಲ್ಪಗಳನ್ನು, ರುಚಿಯಾಗಿ ಅವಳು ನೀಡುತ್ತಿದ್ದಳು. ಮಹೀಪತಿಯು ಬಯಸಿದ ಎಲ್ಲವುಗಳನ್ನು ಸಂಪೂರ್ಣವಾಗಿ ಪಡೆದನು. ಸೇನೆ ಮತ್ತು ಅಮಾತ್ಯರ ಸಹಿತ ನೃಪನು ಅತ್ಯಂತ ತೃಪ್ತಿಹೊಂದಿದನು. ಆರು ಅಳತೆ ಉದ್ದ, ಮೂರು ಅಳತೆ ಅಗಲ, ಮತ್ತು ಐದು ಅಳತೆ ಸುತ್ತಳತೆಯನ್ನು ಹೊಂದಿದ್ದ, ಸುಂದರ ಕಾಲು ತೊಡೆಗಳ, ಕಪ್ಪೆಯಂಥ ಕಣ್ಣುಗಳ, ಒಳ್ಳೆಯ ನಡಿಗೆಯ, ತುಂಬಿದ ಮೊಲೆಗಳ, ಸುಂದರ ಬಾಲವನ್ನುಳ್ಳ, ಶಂಖದಂತಹ ಕಿವಿಗಳನ್ನು ಹೊಂದಿದ್ದ, ಸುಂದರ ಕೊಂಬಿನ, ಉದ್ದ ಮತ್ತು ದಪ್ಪನಾಗಿರುವ ತಲೆ ಮತ್ತು ಕುತ್ತಿಗೆಯನ್ನು ಹೊಂದಿದ್ದ ಆ ಮನೋರಮೆ ಹಸುವನ್ನು ವಿಸ್ಮಿತನಾಗಿ ನೋಡಿದನು. ವಸಿಷ್ಠನ ಆ ಪಯಸ್ವಿನೀ ನಂದಿನಿಯನ್ನು ಅಭಿನಂದಿಸಿ ಅತೀವ ತೃಪ್ತನಾದ ವಿಶ್ವಾಮಿತ್ರನು ಮುನಿಯನ್ನುದ್ದೇಶಿಸಿ ಹೇಳಿದನು: “ಬ್ರಹ್ಮನ್! ಮಹಾಮುನಿ! ಲೆಕ್ಕವಿಲ್ಲದಷ್ಟು ಗೋವುಗಳು ಅಥವಾ ನನ್ನ ರಾಜ್ಯಕ್ಕೆ ಬದಲಾಗಿ ಈ ನಂದಿನಿಯನ್ನು ನನಗಿತ್ತು ನನ್ನ ರಾಜ್ಯವನ್ನು ಆಳು.”

ವಸಿಷ್ಠನು ಹೇಳಿದನು: “ದೇವತೆ, ಅತಿಥಿ, ಮತ್ತು ಪಿತೃಗಳಿಗೆ ಊಟಕ್ಕೆ ನೀಡಲು ಮತ್ತು ತುಪ್ಪಕ್ಕಾಗಿ ಈ ಯಶಸ್ವಿನಿ ನಂದಿನಿಯು ನನ್ನಲ್ಲಿದ್ದಾಳೆ. ಅನಘ! ರಾಜ್ಯವನ್ನಿತ್ತರೂ ಇದನ್ನು ನಿನಗೆ ಕೊಡಲಾರೆ.”

ವಿಶ್ವಾಮಿತ್ರನು ಹೇಳಿದನು: “ನಾನು ಕ್ಷತ್ರಿಯ ಮತ್ತು ನೀನು ತಪಸ್ಸು, ಅಧ್ಯಾಯ, ಸಾಧನೆಗಳಲ್ಲಿರುವ ವಿಪ್ರ. ಅತ್ಮವನ್ನು ಗೆದ್ದ ಪ್ರಶಾಂತ ಬ್ರಾಹ್ಮಣರಲ್ಲಿ ಇಂಥಹ ಪ್ರತಿಭಟನೆ ಎಲ್ಲಿಂದ ಬರುತ್ತದೆ? ನನಗೆ ಬೇಕಾದ ಗೋವನ್ನು ಅರ್ಬುದ ಗೋವುಗಳಿಗೂ ನೀನು ಕೊಡದೇ ಇದ್ದರೆ ಸ್ವಧರ್ಮವನ್ನು ನಾನು ಬಿಡುವುದಿಲ್ಲ. ಗೋವನ್ನು ನಾನು ಬಲವಂತವಾಗಿ ನಿನ್ನಿಂದ ಹಿಡಿದೊಯ್ಯುತ್ತೇನೆ.”

ವಸಿಷ್ಠನು ಹೇಳಿದನು: “ರಾಜ! ನಿನ್ನಲ್ಲಿ ಸೇನೆಯಿದೆ ಮತ್ತು ಕ್ಷತ್ರಿಯನ ಬಾಹುವೀರ್ಯವಿದೆ. ತಡಮಾಡದೇ, ಏನನ್ನೂ ವಿಚಾರಮಾಡದೇ ನಿನಗಿಷ್ಟಬಂದಂತೆ ಮಾಡು.”

ಈ ಮಾತುಗಳನ್ನು ಕೇಳಿದ ವಿಶ್ವಾಮಿತ್ರನು ಬಲವಂತವಾಗಿ ಹಂಸ ಅಥವ ಚಂದ್ರನಂತಿರುವ ನಂದಿನಿಯನ್ನು ಎಳೆದುಕೊಂಡು ಹೊರಟನು. ಕಾಶ ಮತ್ತು ದಂಡಗಳಿಂದ ಹೊಡೆತ ತಿನ್ನುತ್ತಾ ಎಳೆದುಕೊಂಡು ಕರೆದೊಯ್ಯಲ್ಪಟ್ಟ ವಸಿಷ್ಠನ ಕಲ್ಯಾಣಿ ನಂದಿನಿಯು ಕೂಗತೊಡಗಿದಳು. ಅವಳು ಹಿಂದಿರುಗಿ ಬಂದು ಭಗವಾನ್ ಋಷಿಯ ಎದುರಿಗೆ ನಿಂತುಕೊಂಡಳು ಮತ್ತು ಎಷ್ಟೇ ಜೋರಾಗಿ ಹೊಡೆದರೂ ಆಶ್ರಮದಿಂದ ಹೊರಹೋಗಲಿಲ್ಲ.

ವಸಿಷ್ಠನು ಹೇಳಿದನು: “ಭದ್ರೇ! ನೋವಿನಿಂದ ನರಳುತ್ತಿರುವ ನಿನ್ನ ಕೂಗನ್ನು ಪುನಃ ಪುನಃ ಕೇಳುತ್ತಿದ್ದೇನೆ. ನಾನೋರ್ವ ಕ್ಷಮಾವಂತ ಬ್ರಾಹ್ಮಣನಾದುದರಿಂದ ನಿನ್ನನ್ನು ನನ್ನಿಂದ ಬಲಾತ್ಕಾರವಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ.”

ಆ ಸೈನಿಕರ ಬಲ ಮತ್ತು ವಿಶ್ವಾಮಿತ್ರರಿಂದ ಭಯೋದ್ವಿಗ್ನಳಾಗ ಆ ನಂದಿನಿಯು ವಸಿಷ್ಠನ ಇನ್ನೂ ಹತ್ತಿರ ಬಂದಳು. ಗೋವು ಹೇಳಿತು: “ಭಗವನ್! ವಿಶ್ವಾಮಿತ್ರನ ಬಲದಿಂದ ಘೋರವಾಗಿ ಪಾಷಾಣ ದಂಡಗಳಿಂದ ಹೊಡೆತತಿಂದು ಅನಾಥಳಂತೆ ಕೂಗುತ್ತಿರುವ ನನ್ನನ್ನು ಏಕೆ ಉಪೇಕ್ಷಿಸುತ್ತಿರುವೆ?”

ಈ ರೀತಿ ಗೋವು ಆಕ್ರಮಣಕ್ಕೊಳಗಾದಾಗ ಆ ಮಹಾಮುನಿ ಧೃತವ್ರತನು ಯಾವುದೇ ರೀತಿಯ ಆತಂಕವನ್ನಾಗಲೀ ಕೋಪವನ್ನಾಗಲೀ ಹೊಂದದೇ ವಿಚಲಿತನಾಗಲಿಲ್ಲ. ವಸಿಷ್ಠನು ಹೇಳಿದನು: “ಕ್ಷತ್ರಿಯರಿಗೆ ತೇಜಸ್ಸು ಬಲ ಮತ್ತು ಬ್ರಾಹ್ಮಣರಿಗೆ ಕ್ಷಮೆಯೇ ಬಲ. ಕ್ಷಮೆಯೇ ನನ್ನನ್ನು ಆವರಿಸಿದೆ. ಆದುದರಿಂದ ನಿನಗಿಷ್ಟವಾದರೆ ನೀನು ಹೋಗಬಹುದು.”

ಗೋವು ಹೇಳಿತು: “ಭಗವನ್! ನೀನು ಈ ರೀತಿ ಮಾತನಾಡುತ್ತಿದ್ದೀಯಲ್ಲ! ನನ್ನನ್ನು ತ್ಯಜಿಸಿಬಿಟ್ಟಿದ್ದೀಯಾ ಹೇಗೆ? ನೀನು ನನ್ನನ್ನು ತೊರೆದಿಲ್ಲವೆಂದಾದರೆ ಅವರು ನನ್ನನ್ನು ಬಲಾತ್ಕಾರವಾಗಿ ಕೊಂಡೊಯ್ಯಲು ಶಕ್ಯರಾಗುವುದಿಲ್ಲ.”

ವಸಿಷ್ಠನು ಹೇಳಿದನು: “ನಾನು ನಿನ್ನನ್ನು ತ್ಯಜಿಸಿಲ್ಲ ಕಲ್ಯಾಣಿ! ಶಕ್ಯವಾದರೆ ಇಲ್ಲಿಯೇ ನಿಲ್ಲು. ಅವರು ನಿನ್ನ ಕರುವನ್ನು ಗಟ್ಟಿಯಾಗಿ ಕಟ್ಟಿಹಾಕಿ ಬಲಾತ್ಕಾರವಾಗಿ ಕೊಂಡೊಯ್ಯುತ್ತಿದ್ದಾರೆ.”

“ನಿಲ್ಲು!” ಎಂಬ ವಶಿಷ್ಠನ ಮಾತನ್ನು ಕೇಳಿದ ಆ ಯಶಸ್ವಿನಿಯು ತನ್ನ ತಲೆ ಮತ್ತು ಕುತ್ತಿಗೆಯನ್ನು ಮೇಲೆತ್ತಲು ಅವಳು ಘೋರರೂಪಿಣಿಯಾಗಿ ಕಂಡಳು. ಕ್ರೋಧದಿಂದ ಅವಳ ಕಣ್ಣುಗಳು ಕೆಂಪಾದವು. ಗುಡುಗಿನಂತೆ “ಅಂಬಾ!” ಎಂದು ಕೂಗುತ್ತಾ ಅವಳು ವಿಶ್ವಾಮಿತ್ರನ ಸೇನೆಯನ್ನು ಎಲ್ಲಕಡೆ ಓಡಿಸಿದಳು. ಕಟ್ಟಿಗೆ ದಂಡಗಳಿಂದ ಪೆಟ್ಟುತಿಂದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡುತ್ತಿರುವಾಗ ಅವಳ ಕಣ್ಣುಗಳು ಕ್ರೋಧದಿಂದ ಉರಿದೆದ್ದವು ಮತ್ತು ಕ್ರೋಧವು ಹೆಚ್ಚಾಗುತ್ತಲೇ ಹೋಯಿತು. ಮಧ್ಯಾಹ್ನದ ಆದಿತ್ಯನಂತೆ ಅವಳ ದೇಹವು ಕ್ರೋಧದಿಂದ ಉರಿದೆದ್ದಿತು ಮತ್ತು ಅವಳ ಬಾಯಿ-ಬಾಲಗಳಿಂದ ಮಹಾ ಕೆಂಡಗಳ ಸುರಿಮಳೆಯೇ ಹೊರಹೊಮ್ಮಿತು. ಕ್ರೋಧಮೂರ್ಛಿತಳಾದ ಅವಳು ಹಿಂಬಾಗದಿಂದ ಪಹ್ಲವರನ್ನು ಸೃಷ್ಟಿಸಿದಳು, ಶಬರ-ಶಕರನ್ನು ಸಗಣಿಯಿಂದ, ಮತ್ತು ಮೂತ್ರದಿಂದ ಯವನರನ್ನು ಸೃಷ್ಟಿಸಿದಳು. ಹಾಲಿನ ನೊರೆಯಿಂದ ಪುಂಡ್ರ, ಕಿರಾತ, ದ್ರಮಿಡ, ಸಿಂಹಲ, ಬರ್ಬರ, ದರದ, ಮತ್ತು ಮ್ಲೇಚ್ಛರನ್ನು ಸೃಷ್ಟಿಸಿದಳು. ಈ ರೀತಿ ಅವಳು ಸೃಷ್ಟಿಸಿದ ಮ್ಲೇಚ್ಛರ ನಾನಾ ಗುಂಪಿನ ಮಹಾ ಸೇನೆಯು ನಾನಾ ರೀತಿಯ ಕವಚಗಳನ್ನು ಮತ್ತು ನಾನಾ ರೀತಿಯ ಆಯುಧಗಳನ್ನು ಧರಿಸಿದವರಾಗಿ, ವಿಶ್ವಾಮಿತ್ರನು ನೋಡುತ್ತಿದ್ದಂತೆಯೇ ಅವನ ಸೇನೆಯನ್ನು ಚದುರಿಸಿ ಓಡಿಸಿತು. ಪ್ರತಿಯೊಬ್ಬ ಯೋಧನೂ ಇನ್ನೂ ಐದು ಯೋಧರಿಂದ ಸುತ್ತುವರೆಯಲ್ಪಟ್ಟಿದ್ದನು. ವಿಶ್ವಾಮಿತ್ರನು ನೋಡುತ್ತಿದ್ದಂತೆಯೇ ಅವನ ಬಲವು ಎಲ್ಲಾ ಕಡೆಯಿಂದಲೂ ಮಹಾ ಅಸ್ತ್ರವರ್ಷಗಳಿಗೆ ಸಿಲುಕಿ ಎಲ್ಲಕಡೆಯಿಂದಲೂ ನಾಶಹೊಂದಿತು. ಆದರೂ ವಿಶ್ವಾಮಿತ್ರನ ಯಾರೊಬ್ಬ ಸೈನಿಕನೂ ವಸಿಷ್ಠನ ಸಂಕೃದ್ಧ ಸೈನಿಕರಿಂದ ಪ್ರಾಣವನ್ನು ಕಳೆದುಕೊಳ್ಳಲಿಲ್ಲ. ಭಯೋದ್ವಿಗ್ನವಾಗಿ ಕೂಗುತ್ತಿದ್ದರೂ ಯಾವ ತ್ರಾತಾರನನ್ನೂ ಕಾಣದ ವಿಶ್ವಾಮಿತ್ರನ ಸೈನ್ಯವು ಮೂರು ಯೋಜನೆಗಳವರೆಗೆ ಓಡಿಹೋಯಿತು. ಬ್ರಹ್ಮತೇಜಸ್ಸಿನಿಂದ ಹುಟ್ಟಿದ ಆ ಮಹದಾಶ್ಚರ್ಯವನ್ನು ಕಂಡ ವಿಶ್ವಾಮಿತ್ರನು ತನ್ನ ಕ್ಷಾತ್ರಭಾವದಿಂದ ನಿರ್ವಿಣ್ಣನಾಗಿ ಈ ಮಾತುಗಳನ್ನಾಡಿದನು: “ಕ್ಷತ್ರಿಯ ಬಲವೆಂದೆನಿಸಿಕೊಂಡ ಬಲಕ್ಕೆ ಧಿಕ್ಕಾರ! ಬ್ರಹ್ಮತೇಜೋಬಲವೇ ಬಲವು. ಬಲಾಬಲವನ್ನು ನೋಡಿದರೆ ತಪಸ್ಸಿನ ಬಲವೇ ಪರಮ ಬಲವೆಂದು ನಿಶ್ಚಿತವಾಗುತ್ತದೆ.”

ಅವನು ತನ್ನ ಶ್ರೀಮಂತ ರಾಜ್ಯ ಮತ್ತು ಬೆಳಗುತ್ತಿರುವ ನೃಪಶ್ರೀಯನ್ನು ತಿರಸ್ಕರಿಸಿ ಎಲ್ಲ ಭೋಗಗಳನ್ನು ಹಿಂದಕ್ಕೆ ತಳ್ಳಿ ತಪಸ್ಸಿನಲ್ಲಿಯೇ ತನ್ನ ಮನಸ್ಸನ್ನು ತೊಡಗಿಸಿದನು. ಅವನು ತಪಸ್ಸಿನಲ್ಲಿ ಸಿದ್ಧಿಯನ್ನು ಪಡೆದು ತನ್ನ ತೇಜಸ್ಸಿನಿಂದ ಲೋಕಗಳನ್ನೆಲ್ಲಾ ತುಂಬಿಸಿ ತನ್ನ ಓಜಸ್ಸಿನ ದೀಪದಿಂದ ಎಲ್ಲವನ್ನು ಬೆಳಗಿಸಿ ಬ್ರಾಹ್ಮಣತ್ವವನ್ನು ಪಡೆದನು. ಇಂದ್ರನ ಸಹಿತ ಕೌಶಿಕನು ಸೋಮವನ್ನು ಸೇವಿಸಿದನು.

ಈ ಲೋಕದಲ್ಲಿ ಕಲ್ಮಾಷಪಾದನೆಂಬ ರಾಜನಿದ್ದನು. ಇಕ್ಷ್ವಾಕು ವಂಶಜನಾದ ಅವನ ತೇಜಸ್ಸಿಗೆ ಸದೃಶರಾದವರು ಭುವಿಯಲ್ಲಿಯೇ ಯಾರೂ ಇರಲಿಲ್ಲ. ಒಮ್ಮೆ ಆ ರಾಜನು ಬೇಟೆಯಾಡಲು ಪುರದಿಂದ ಹೊರಗೆ ಹೋಗಿದ್ದನು. ಆ ರಿಪುಮರ್ದನನು ಜಿಂಕೆ ಮತ್ತು ಹಂದಿಗಳನ್ನು ಹೊಡೆಯುತ್ತಾ ತಿರುಗುತ್ತಿದ್ದನು. ತೃಷಾರ್ತನೂ ಕ್ಷುಧಾರ್ತನೂ ಆದ ಆ ರಾಜನು ಒಂದು ಚಿಕ್ಕ ದಾರಿಯಲ್ಲಿ ಮಹಾತ್ಮ ಮುನಿಸತ್ತಮ ವಾಸಿಷ್ಠನನ್ನು ಎದುರಾದನು. ಆ ಮಹಾಭಾಗ, ವಸಿಷ್ಠಕುಲನಂದನನ ಹೆಸರು ಶಕ್ತಿ ಎಂದಿತ್ತು. ಅವನು ಮಹಾತ್ಮ ವಸಿಷ್ಠನ ನೂರು ಪುತ್ರರಲ್ಲಿ ಜ್ಯೇಷ್ಠ ಪುತ್ರನಾಗಿದ್ದನು. “ಇದು ನಮ್ಮ ದಾರಿ. ಇದನ್ನು ಬಿಟ್ಟು ಹೋಗು!” ಎಂದು ಪಾರ್ಥಿವನು ಹೇಳಿದನು. ಆಗ ಋಷಿಯು ಶ್ಲಾಘನೀಯ ಸಾಂತ್ವನದ ಮಾತುಗಳನ್ನಾಡಿದನು. ತನ್ನ ಧರ್ಮಪಥದಲ್ಲಿ ನಿಂತಿದ್ದ ಋಷಿಯು ದಾರಿಯನ್ನು ಬಿಡಲಿಲ್ಲ. ಮುನಿಯ ಮೇಲಿನ ಕೋಪದಿಂದ ಮತ್ತು ತನ್ನ ಮಾನದಿಂದ ರಾಜನೂ ಕೂಡ ದಾರಿಯನ್ನು ಬಿಡಲಿಲ್ಲ. ದಾರಿಯನ್ನು ಕೊಡದೇ ಇದ್ದ ಆ ಋಷಿಗೆ ನೃಪಸತ್ತಮನು ತನ್ನ ಬಾರಿಕೋಲಿನಿಂದ ಮೋಹಿತ ರಾಕ್ಷಸನಂತೆ ಆ ಮುನಿಗೆ ಹೊಡೆದನು. ಬಾರಿಕೋಲಿನ ಹೊಡೆತತಿಂದ ಮುನಿಸತ್ತಮ ವಾಸಿಷ್ಠನು ಕ್ರೋಧ ಮೂರ್ಛಿತನಾಗಿ ಆ ನೃಪಸತ್ತಮನಿಗೆ ಶಪಿಸಿದನು. “ತಾಪಸಿಯನ್ನು ಓರ್ವ ರಾಕ್ಷಸನಂತೆ ಹೊಡೆಯುತ್ತಿರುವ ರಾಜನೇ! ಇಂದಿನಿಂದ ನೀನು ನರಭಕ್ಷಕನಾಗುವೆ. ಮನುಷ್ಯರ ಮಾಂಸವನ್ನು ತಿನ್ನುತ್ತಾ ನೀನು ಈ ಭೂಮಿಯನ್ನೆಲ್ಲಾ ತಿರುಗಾಡುವೆ. ರಾಜಾಧಮ! ಹೋಗು!” ಎಂದು ವೀರ್ಯಶಕ್ತಿವಂತ ಶಕ್ತಿಯು ನುಡಿದನು.

ಯಾವುದೋ ಯಜ್ಞದ ನಿಮಿತ್ತವಾಗಿ ವಿಶ್ವಾಮಿತ್ರ ಮತ್ತು ವಸಿಷ್ಠರ ನಡುವೆ ವೈರತ್ವವಿದ್ದಿತ್ತು. ಅದರ ಕಾರಣದಿಂದ ವಿಶ್ವಾಮಿತ್ರನು ರಾಜನನ್ನು ಹಿಂಬಾಲಿಸಿ ಬರುತ್ತಿದ್ದನು. ಅವರೀರ್ವರೂ ವಿವಾದದಲ್ಲಿರುವಾಗ ಉಗ್ರತಪಸ್ವಿ ಪ್ರತಾಪಿ ಋಷಿ ವಿಶ್ವಾಮಿತ್ರನು ಸಮೀಪ ಬಂದನು. ಹಿಂದಿನಿಂದಲೇ ನೃಪಸತ್ತಮ ಆ ಋಷಿಯು ವಸಿಷ್ಠನ ತೇಜಸ್ಸನ್ನೇ ಹೊಂದಿದ್ದ ಋಷಿ ವಸಿಷ್ಠನ ಪುತ್ರನನ್ನು ಗುರುತಿಸಿದನು. ವಿಶ್ವಾಮಿತ್ರನು ತನ್ನನ್ನು ಅಡಗಿಸಿಕೊಂಡು ತನಗೆ ಒಳ್ಳೆಯದಾಗುವ ಕಾರ್ಯವನ್ನೆಸಗಲು ಯೋಚಿಸಿದನು. ಶಕ್ತಿಯಿಂದ ಶಪಿತ ಆ ನೃಪೋತ್ತಮನು ಶಕ್ತಿಯ ಶರಣುಹೋಗಿ ಅವನನ್ನು ಶಾಂತಗೊಳಿಸಲು ಪ್ರಯತ್ನಿಸಿದನು. ಆ ನೃಪತಿಯ ಉದ್ದೇಶವನ್ನು ತಿಳಿದ ವಿಶ್ವಾಮಿತ್ರನು ರಾಕ್ಷಸನೋರ್ವನಿಗೆ ರಾಜನನ್ನು ಪ್ರವೇಶಿಸಲು ಆಜ್ಞೆಯಿತ್ತನು. ವಿಪ್ರರ್ಷಿಯ ಶಾಪದಿಂದಾಗಿ ಮತ್ತು ವಿಶ್ವಾಮಿತ್ರನ ಆಜ್ಞೆಯಿಂದ ಕಿಂಕರ ಎಂಬ ಹೆಸರಿನ ಆ ರಾಕ್ಷಸನು ನೃಪತಿಯನ್ನು ಪ್ರವೇಶಿಸಿದನು. ರಾಕ್ಷಸನು ಅವನನ್ನು ಹಿಡಿದ ಎಂದು ತಿಳಿದ ಮುನಿ ವಿಶ್ವಾಮಿತ್ರನು ಅಲ್ಲಿಂದ ಹೊರಟುಹೋದನು.

ಆಗ ಆ ವಿದ್ವಾನ್ ನೃಪತಿಯು ತನ್ನೊಳಗಿರುವ ರಾಕ್ಷಸನು ಬಹಳಷ್ಟು ಪೀಡಿಸುತ್ತಿದ್ದರೂ ತನ್ನನ್ನು ತಾನು ರಕ್ಷಿಸಿಕೊಂಡನು. ಹಿಂದಿರುಗಿದ ರಾಜನನ್ನು ಯಾರೋ ಒಬ್ಬ ಹಸಿವೆಯಿಂದಿದ್ದ ದ್ವಿಜನು ನೋಡಿ ಅವನಲ್ಲಿ ಮಾಂಸದ ಭೋಜನವನ್ನು ಯಾಚಿಸಿದನು. ಆಗ ರಾಜರ್ಷಿ ಮಿತ್ರಸಹನು ಅವನನ್ನು ಸಂತವಿಸುತ್ತಾ “ಬ್ರಾಹ್ಮಣ! ಒಂದು ಕ್ಷಣ ಇಲ್ಲಿಯೇ ಕಾಯುತ್ತಿರು!” ಎಂದು ಹೇಳಿದನು. “ನಾನು ಮನೆಗೆ ಮರಳಿದನಂತರ ನಿನಗಿಷ್ಟವಾದ ಭೋಜನವನ್ನು ಕಳುಹಿಸುತ್ತೇನೆ!” ಎಂದು ಹೇಳಿದ ರಾಜನು ಆ ದ್ವಿಜಸತ್ತಮನನ್ನು ಅಲ್ಲಿಯೇ ನಿಲ್ಲಿಸಿ ಹಿಂದಿರುಗಿದನು. ಆದರೆ ರಾಜನು ಬ್ರಾಹ್ಮಣನ ಮಾತುಗಳನ್ನು ಮರೆತುಬಿಟ್ಟನು ಮತ್ತು ಆ ನರಾಧಿಪನು ಅಂತಃಪುರವನ್ನು ಪ್ರವೇಶಿಸಿ ನಿದ್ರಿಸಿದನು. ಅರ್ಧರಾತ್ರಿಯಲ್ಲಿ ಎಚ್ಚೆತ್ತ ರಾಜನು ಬ್ರಾಹ್ಮಣನಿಗೆ ಇತ್ತಿದ್ದ ಮಾತನ್ನು ನೆನಪಿಸಿಕೊಂಡು ತ್ವರೆಮಾಡಿ ಅಡುಗೆಯವನನ್ನು ಕರೆಯಿಸಿ ಹೇಳಿದನು: “ಬೇಗನೆ ಹೋಗು! ಇಂಥಹ ಪ್ರದೇಶದಲ್ಲಿ ಅನ್ನಾರ್ಥಿಯಾದ ಬ್ರಾಹ್ಮಣನೋರ್ವನು ನನ್ನ ದಾರಿಕಾಯುತ್ತಿದ್ದಾನೆ. ಅವನಿಗೆ ಮಾಂಸದ ಊಟವನ್ನು ತೆಗೆದುಕೊಂಡು ಹೋಗಿ ಕೊಡು.”

ಆ ಅಡುಗೆಯವನು ಎಲ್ಲಿಯೂ ಮಾಂಸವು ದೊರೆಯದಿರಲು ವಿಷಯವನ್ನು ರಾಜನಲ್ಲಿಗೆ ವ್ಯಥಾನ್ವಿತನಾಗಿ ವರದಿಮಾಡಿದನು. ಆದರೆ ರಾಕ್ಷಸನಿಂದ ಆವಿಷ್ಟನಾಗಿದ್ದ ರಾಜನು ಹೆಚ್ಚು ಚಿಂತೆಮಾಡದೇ “ಹಾಗಾದರೆ ಅವನಿಗೆ ನರಮಾಂಸವನ್ನು ತಿನ್ನಿಸು!” ಎಂದು ಪುನಃ ಪುನಃ ಹೇಳಿದನು. “ಹಾಗೆಯೇ ಆಗಲಿ!” ಎಂದು ಹೇಳಿ ಅಡುಗೆಯವನು ವದ್ಯಘಾತಿಗಳಿದ್ದ ಸ್ಥಳಕ್ಕೆ ಹೋಗಿ ಅಲ್ಲಿಂದ ನರಮಾಂಸವನ್ನು ಸ್ವಲ್ಪವೂ ಭಯವಿಲ್ಲದೇ ತೆಗೆದುಕೊಂಡು ಬಂದನು. ಅದಕ್ಕೆ ಅನ್ನವನ್ನು ಸೇರಿಸಿ ವಿಧಿವತ್ತಾಗಿ ಬೇಯಿಸಿ ಹಸಿದಿದ್ದ ತಾಪಸಿ ಬ್ರಾಹ್ಮಣನಿಗೆ ಕೊಟ್ಟನು. ತನ್ನ ಸಿದ್ಧ ಚಕ್ಷುಷುಗಳಿಂದ ಆ ಅನ್ನವನ್ನು ನೋಡಿದ ದ್ವಿಜಸತ್ತಮನು “ಇದು ಅಭೋಜ್ಯವಾದದ್ದು!” ಎಂದು ಕ್ರೋಧದಿಂದ ಕಣ್ಣುಗಳನ್ನು ತಿರುಗಿಸುತ್ತಾ ಹೇಳಿದನು. “ನನಗೆ ಯಾವ ಅನ್ನವನ್ನು ಭೋಜನಕ್ಕೆಂದು ನೀಡಿದ್ದಾನೋ ಆ ಮೂಢ ನರಾಧಿಪನು ಇನ್ನುಮುಂದೆ ಅಂಥಹದೇ ಅನ್ನದ ಲೋಲುಪನಾಗುತ್ತಾನೆ. ಹಿಂದೆ ಶಕ್ತಿಯು ಹೇಳಿದ ಹಾಗೆಯೇ ಮನುಷ್ಯ ಮಾಂಸದಲ್ಲಿ ಆಸಕ್ತಿಯನ್ನಿಟ್ಟುಕೊಂಡು ಈ ಭೂಮಿಯನ್ನು ತಿರುಗುತ್ತಿರುತ್ತಾನೆ.”

ಎರಡು ಬಾರಿ ಹೇಳಲ್ಪಟ್ಟ ರಾಜನ ಆ ಶಾಪವು ಹೆಚ್ಚು ಪರಿಣಾಮಕಾರಿಯಾಗಲು ಅವನನ್ನು ಆವಿಷ್ಕರಿಸಿದ ರಾಕ್ಷಸನು ಹೆಚ್ಚಿನ ಶಕ್ತಿಯನ್ನು ಪಡೆದು ತನ್ನ ಬುದ್ಧಿಯನ್ನೇ ಕಳೆದುಕೊಂಡನು. ತಕ್ಷಣವೇ ರಾಕ್ಷಸನಿಂದ ತನ್ನ ಇಂದ್ರಿಯಗಳನ್ನೆಲ್ಲ ಕಳೆದುಕೊಂಡ ಆ ನೃಪತಿಶ್ರೇಷ್ಠನು ಶಕ್ತಿಯನ್ನು ಕಂಡು ಹೇಳಿದನು: “ನೀನು ನನಗೆ ಇಂಥಹ ಅಸದೃಶ ಶಾಪವನ್ನು ಕೊಟ್ಟಿದ್ದುದರಿಂದ ನರಮಾಂಸವನ್ನು ತಿನ್ನುವ ಈ ಪ್ರವೃತ್ತಿಯನ್ನು ನಿನ್ನಿಂದ ಪ್ರಾರಂಭಿಸುತ್ತೇನೆ.” ಹೀಗೆ ಹೇಳಿ ತಕ್ಷಣವೇ ಶಕ್ತಿಯ ಪ್ರಾಣವನ್ನು ತೆಗೆದು ವ್ಯಾಘ್ರವು ಪಶುವನ್ನು ಹೇಗೋ ಹಾಗೆ ತಿಂದುಬಿಟ್ಟನು.

ಮಹಾತ್ಮ ವಾಸಿಷ್ಠ ಶಕ್ತಿಯಿಂದ ಕಲ್ಮಾಶಪಾದನು ಶಪಿತನಾದ ನಂತರ ಶಾಪವಶ ಆ ಪರಂತಪ ರಾಜನು ಕ್ರೋಧದಿಂದ ತನ್ನ ಕಣ್ಣುಗಳನ್ನು ತಿರುಗಿಸುತ್ತಾ ಪತ್ನಿಯೊಡಗೂಡಿ ಪುರವನ್ನು ತೊರೆದು ಹೊರಟನು. ಅವಳೊಂದಿಗೆ ಅವನು ನಿರ್ಜನ ಅರಣ್ಯವನ್ನು ಸೇರಿ ನಾನಾಮೃಗಗಣ ಸಂಕೀರ್ಣಗಳನ್ನೂ ನಾನಾ ಸತ್ವಸಮಾಕುಲವನ್ನು ಅರಸುತ್ತಾ ತಿರುಗುತ್ತಿದ್ದನು. ನಾನಾ ತರಹದ ಹೂ ಬಳ್ಳಿಗಳಿಂದ ಮುಚ್ಚಲ್ಪಟ್ಟ, ನಾನಾ ತರಹದ ಮರಗಳಿಂದ ಕೂಡಿದ, ಘೋರ ಕೂಗುಗಳು ಕೇಳಿಬರುತ್ತಿರುವ ಅರಣ್ಯದಲ್ಲಿ ಶಾಪಗ್ರಸ್ತನು ಪರಿಭ್ರಮಿಸುತ್ತಿದ್ದನು. ಒಮ್ಮೆ ಹಸಿವೆಯಿಂದ ಬಳಲಿ ತನಗೆ ಆಹಾರಕ್ಕಾಗಿ ಬೇಟೆಯಾಡುತ್ತಿರುವಾಗ ಒಂದು ದಟ್ಟ ವನದಲ್ಲಿ ಬ್ರಾಹ್ಮಣ ಮತ್ತು ಬ್ರಾಹ್ಮಣಿಯರು ಸಂಭೋಗದಲ್ಲಿ ನಿರತರಾಗಿರುದ್ದುದನ್ನು ಕಂಡನು. ಇನ್ನೂ ತೃಪ್ತಿಹೊಂದದೇ ಇದ್ದ ಅವರು ಅವನನ್ನು ನೋಡಿ ಭಯಭೀತರಾಗಿ ಓಡಲು ತೊಡಗಿದರು. ಆಗ ಆ ನೃಪತಿಯು ಬ್ರಾಹ್ಮಣನನ್ನು ಬಲವಂತವಾಗಿ ಹಿಡಿದನು. ತನ್ನ ಪತಿಯು ಸಿಕ್ಕಿಕೊಂಡಿದ್ದನ್ನು ನೋಡಿದ ಬ್ರಾಹ್ಮಣಿಯು ಹೇಳಿದಳು: “ಸುವ್ರತ ರಾಜನ್! ನಾನು ಈಗ ಹೇಳುವ ಮಾತುಗಳನ್ನು ಕೇಳು. ಆದಿತ್ಯವಂಶಜನಾದ ನೀನು ಲೋಕಪರಿಶೃತನಾಗಿದ್ದೀಯೆ. ನೀನು ಅಪ್ರಮತ್ತನಾಗಿದ್ದು, ಧರ್ಮನಿರತನಾಗಿದ್ದು ಗುರುಶುಶ್ರೂಷಣೆಯಲ್ಲೇ ನಿರತನಾಗಿದ್ದೀ. ದುರ್ದರ್ಶ ಶಾಪವನ್ನು ಹೊಂದಿದ್ದೀಯೆ. ಪಾಪಕರ್ಮವನ್ನು ಮಾಡಬೇಡ. ನನ್ನ ಋತುಕಾಲವು ಬಂದೊದಗಿದ್ದುದರಿಂದ ಇಂದು ನನ್ನ ಪತಿಯನ್ನು ಸೇರುತ್ತಿದ್ದೆ. ನಾವು ಇನ್ನೂ ಅಕೃತಾರ್ಥರಾಗಿದ್ದೇವೆ. ನನಗೆ ಮಗುವಿನ ಮಹಾ ಅವಶ್ಯಕತೆಯಿದೆ. ಕರುಣೆತೋರು. ನನ್ನ ಪತಿಯನ್ನು ಬಿಟ್ಟುಬಿಡು.”

ಈ ರೀತಿ ಅವಳು ರೋದಿಸುತ್ತಿರಲು ಅವಳು ನೋಡುತ್ತಿದ್ದಂತೆಯೇ ವ್ಯಾಘ್ರವು ತನಗಿಷ್ಟ ಪ್ರಾಣಿಯನ್ನು ತಿನ್ನುವಂತೆ ಅವಳ ಗಂಡನನ್ನು ಭಕ್ಷಿಸಿದನು. ಕ್ರೋಧಾಭಿಭೂತಳಾದ ಅವಳಿಂದ ನೆಲದ ಮೇಲೆ ಬಿದ್ದ ಕಣ್ಣೀರು ಬೆಂಕಿಯಾಗಿ ಉರಿದು ಆ ಪ್ರದೇಶವನ್ನು ಸುಡತೊಡಗಿತು. ತನ್ನ ಪತಿಯನ್ನು ಕಳೆದುಕೊಂಡು ದುಃಖಿತಳಾದ ಶೋಕಸಂತಪ್ತ ಬ್ರಾಹ್ಮಣಿಯು ರೋಷದಿಂದ ರಾಜರ್ಷಿ ಕಲ್ಮಾಶಪಾದನಿಗೆ ಶಾಪವನ್ನಿತ್ತಳು: “ಇಂದು ಅಕೃತಾರ್ಥ ಮಹಾಯಶಸ್ವಿ ನನ್ನ ಪತಿ ಪ್ರಭುವನ್ನು ಕ್ಷುದ್ರನಾಗಿ ನನ್ನ ಮುಂದೆಯೇ ಭಕ್ಷಿಸಿದುದಕ್ಕಾಗಿ ದುರ್ಬುದ್ಧಿಯೇ! ನೀನೂ ಕೂಡ ನನ್ನ ಶಾಪದಿಂದಾಗಿ ನಿನ್ನ ಪತ್ನಿಯನ್ನು ಕೂಡಿದಾಗ ನಿನ್ನ ಜೀವವನ್ನು ತೊರೆಯುತ್ತೀಯೆ! ಯಾರ ನೂರು ಪುತ್ರರನ್ನೂ ನೀನು ನಾಶಮಾಡಿದೆಯೋ ಆ ವಸಿಷ್ಠನು ನಿನ್ನ ಭಾರ್ಯೆಯನ್ನು ಸೇರಿ ತನಯನನ್ನು ಹುಟ್ಟಿಸುತ್ತಾನೆ. ಆ ಪುತ್ರನೇ ನಿನ್ನ ವಂಶಕರನಾಗುತ್ತಾನೆ.” ರಾಜನನ್ನು ಈ ರೀತಿ ಶಪಿಸಿ ಆ ಶುಭೆ ಆಂಗಿರಸಿಯು ಹತ್ತಿರದಲ್ಲಿಯೇ ಉರಿಯುತ್ತಿದ್ದ ಹುತಾಶನನನ್ನು ಪ್ರವೇಶಿಸಿದಳು.

ಶಕ್ತಿಯು ಹತನಾದುದನ್ನು ನೋಡಿದ ವಿಶ್ವಾಮಿತ್ರನು ಪುನಃ ಆ ರಾಕ್ಷಸನನ್ನು ವಸಿಷ್ಠನ ಇತರ ಪುತ್ರರೆಡೆಗೆ ಕಳುಹಿಸಿದನು. ಸಂಕೃದ್ಧ ಸಿಂಹವು ಕ್ಷುದ್ರ ಮೃಗಗಳನ್ನು ಹೇಗೋ ಹಾಗೆ ಅವನು ಮಹಾತ್ಮ ವಸಿಷ್ಠನ ಇತರ ಮಕ್ಕಳನ್ನೂ ಭಕ್ಷಿಸಿದನು. ತನ್ನ ಮಕ್ಕಳ ಸಾವನ್ನು ವಿಶ್ವಾಮಿತ್ರನೇ ಆಯೋಜಿಸಿದ್ದ ಎಂದು ಕೇಳಿದ ವಸಿಷ್ಠನು ತನ್ನ ಆ ಶೋಕವನ್ನು ಮಹಾದ್ರಿಯು ಮೇದಿನಿಯನ್ನು ಹೇಗೋ ಹಾಗೆ ಹಿಡಿದಿಟ್ಟುಕೊಂಡನು. ಮತಿವಂತರಲ್ಲೇ ಶ್ರೇಷ್ಠ ಆ ಮುನಿಸತ್ತಮನು ಕೌಶಿಕರ ಕುಲವನ್ನೇ ನಾಶಮಾಡುವುದರ ಹೊರತಾಗಿ ಆತ್ಮಹತ್ಯೆಯನ್ನು ಮಾಡಿಕೊಳ್ಳಲು ನಿಶ್ಚಯಿಸಿದನು.

ಆ ಭಗವಾನ್ ಋಷಿಯು ಮೇರು ಪರ್ವತದ ಶಿಖರದಿಂದ ಹಾರಿದನು. ಆದರೆ ಅವನ ಶಿರವು ಶಿಲದ ಮೇಲೆ ಬಿದ್ದಾಗ ಶಿಲೆಯು ಹತ್ತಿಯ ರಾಶಿಯಾಗಿತ್ತು. ಬೀಳುವುದರಿಂದ ತಾನು ಸಾಯದೇ ಇದ್ದಾಗ ಆ ಭಗವಾನನು ಮಹಾವನದಲ್ಲಿ ಒಂದು ಅಗ್ನಿಯನ್ನು ನಿರ್ಮಿಸಿ ಅದರಲ್ಲಿ ಪ್ರವೇಶಿಸಿದನು. ಬಹಳ ಎತ್ತರದ ವರೆಗೆ ಉರಿಯುತ್ತಿದ್ದರೂ ಹುತಾಶನನು ಅವನನ್ನು ಸುಡಲಿಲ್ಲ. ಉರಿಯುತ್ತಿರುವ ಜ್ವಾಲೆಗಳು ಶೀತಾಗ್ನಿಗಳಾದವು. ಶೋಕಾವಿಷ್ಟ ಮಹಾಮುನಿಯು ಸಮುದ್ರವನ್ನು ಸೇರಿ, ಕಂಠಕ್ಕೆ ಒಂದು ಭಾರ ಶಿಲೆಯನ್ನು ಕಟ್ಟಿ, ಅದರ ನೀರಿನಲ್ಲಿ ಬಿದ್ದನು. ಸಮುದ್ರದ ಅಲೆಗಳು ಆ ಮಹಾಮುನಿಯನ್ನು ತೀರಕ್ಕೆ ತಂದು ಬಿಟ್ಟವು. ಖಿನ್ನನಾದ ಅವನು ಪುನಃ ಅಶ್ರಮಕ್ಕೆ ತೆರಳಿದನು. ಮಕ್ಕಳಿಲ್ಲದ ಆಶ್ರಮಪದವನ್ನು ನೋಡಿದ ಮುನಿಯು ಅತೀವ ದುಃಖಾರ್ತನಾಗಿ ಪುನಃ ಆಶ್ರಮದಿಂದ ಹೊರ ಹೊರಟನು. ಮಳೆಗಾಲದ ಹೊಸನೀರಿನಿಂದ ಹರಿಯುತ್ತಿರುವ ನದಿಯೊಂದನ್ನು ಕಂಡನು. ಅದರಲ್ಲಿ ದಡದಲ್ಲಿ ಹುಟ್ಟಿದ ಬಹುವಿಧ ವೃಕ್ಷಗಳು ತೇಲುತ್ತಿದ್ದವು. ಆಗ ಆ ದುಃಖಸಮನ್ವಿತನು ಮತ್ತೊಮ್ಮೆ ಈ ನೀರಿನಲ್ಲಿ ಬಿದ್ದು ಮುಳುಗಿಹೋಗುತ್ತೇನೆ ಎಂದು ಯೋಚಿಸಿದನು. ಸುದುಃಖಿತನಾದ ಮಹಾಮುನಿಯು ಹಗ್ಗಗಳಿಂದ ತನ್ನನ್ನು ತಾನೇ ಬಿಗಿಯಾಗಿ ಕಟ್ಟಿ ಮಹಾನದಿಯ ನೀರಿನಲ್ಲಿ ಧುಮುಕಿದನು. ಆದರೆ ನದಿಯು ಅವನ ಪಾಶಗಳನ್ನು ಕತ್ತರಿಸಿ, ಅವನನ್ನು ವಿಪಾಶನನ್ನಾಗಿ ಮಾಡಿ ಸಮಸ್ಥ ಋಷಿಯನ್ನು ತನ್ನ ತೀರಕ್ಕೆ ತಂದು ಬಿಟ್ಟಿತು. ಪಾಶಗಳಿಂದ ವಿಮುಕ್ತನಾದ ಮಹಾನೃಷಿಯು ನದಿಯಿಂದ ಮೇಲಕ್ಕೆದ್ದನು. ಮಹಾನೃಷಿಯು ಆ ನದಿಗೆ ವಿಪಾಶ ಎಂಬ ಹೆಸರನ್ನಿತ್ತನು. ತನ್ನ ಬುದ್ಧಿಯನ್ನು ಶೋಕದಲ್ಲಿಯೇ ನಿರತವಾಗಿರಿಸಿ ಒಂದೇ ಸ್ಥಳದಲ್ಲಿ ನಿಲ್ಲದೇ ಪರ್ವತ, ಸರಿತ ಮತ್ತು ಸಾರಸಗಳ ಕಡೆ ಹೋದನು. ಕ್ರೂರ ಮೊಸಳೆಗಳಿಂದ ತುಂಬಿದ ಹಿಮಾಲಯದಿಂದ ಹರಿದು ಬರುತ್ತಿರುವ ನದಿಯೊಂದನ್ನು ನೋಡಿದ ಋಷಿಯು ಪುನಃ ಅದರಲ್ಲಿ ಧುಮುಕಿದನು. ಆದರೆ ಆ ಸರಿದ್ವರೆಯು ಅವನು ಅಗ್ನಿಸಮ ವಿಪ್ರನೆಂದು ಭಾವಿಸಿ ನೂರಾರು ದಿಕ್ಕುಗಳಲ್ಲಿ ಹರಿಯ ತೊಡಗಿತು. ಆದುದರಿಂದಲೇ ಅದು ಶತಾದ್ರು ಎಂದು ವಿಶ್ರುತವಾಗಿದೆ. ತಾನು ದಡದ ಮೇಲೆಯೇ ಇದ್ದುದನ್ನು ಕಂಡ ಅವನು ನನಗೆ ಸಾಯಲು ಶಕ್ಯವಿಲ್ಲ ಎಂದು ಪುನಃ ತನ್ನ ಆಶ್ರಮಕ್ಕೆ ಬಂದನು.

ಆಶ್ರಮಾಭಿಮುಖನಾಗಿ ಬರುತ್ತಿರುವಾಗ ಅವನ ಸೊಸೆ ಅದೃಶ್ಯಂತಿಯು ಹಿಂಬಾಲಿಸುತ್ತಿದ್ದಳು. ಆಗ ಹತ್ತಿರದಲ್ಲಿಯೇ ಷಡಂಗಗಳಿಂದ ಅಲಂಕೃತ ಪರಿಪೂರ್ಣಾರ್ಥಗಳಿಂದ ಕೂಡಿದ ವೇದಾಧ್ಯಯನದ ಸ್ವರವನ್ನು ಕೇಳಿದನು. “ನನ್ನನ್ನು ಈ ರೀತಿ ಅನುಸರಿಸುತ್ತಿರುವವರು ಯಾರು?” ಎಂದು ಅವನು ಕೇಳಿದನು. ಅವಳು “ನಾನು ಅದೃಶ್ಯತೀ ಎಂಬ ಹೆಸರಿನ ನಿನ್ನ ಸೊಸೆ. ಮಹಾಭಾಗ! ಶಕ್ತಿಯ ಪತ್ನಿ, ತಪೋನಿರತೆ ತಪಸ್ವಿನೀ!” ಎಂದಳು. ವಸಿಷ್ಠನು ಹೇಳಿದನು: “ಪುತ್ರಿ! ಹಿಂದೆ ಶಕ್ತಿಯಿಂದ ನನಗೆ ಕೇಳಿಬರುತ್ತಿದ್ದಂತೆ ಈಗಲೂ ಹತ್ತಿರದಿಂದ ಕೇಳಿಬರುತ್ತಿರುವ ಈ ವೇದಾಧ್ಯಯನದ ಸ್ವರವು ಯಾರಿಂದ ಕೇಳಿಬರುತ್ತಿದೆ?” ಅದೃಶ್ಯಂತಿಯು ಹೇಳಿದಳು: “ಕಳೆದ ಹನ್ನೆರಡು ವರ್ಷಗಳಿಂದ ನಿನ್ನ ಸುತ ಶಕ್ತಿಯ ಗರ್ಭವು ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿದೆ. ಮುನಿ! ಇದು ವೇದಾಭ್ಯಾಸ ಮಾಡುತ್ತಿರುವ ಅವನ ಸ್ವರ.” ಇದನ್ನು ಕೇಳಿದ ಶ್ರೇಷ್ಠಭಾಗ ಋಷಿ ವಸಿಷ್ಠನು ಹೃಷ್ಟನಾಗಿ “ಸಂತಾನವಿದೆ!” ಎಂದು ಹೇಳಿ ಮೃತ್ಯುವಿನ ದಾರಿಯಿಂದ ಹಿಂದುರಿಗಿದನು.

ತನ್ನ ಸೊಸೆಯೊಂದಿಗೆ ಹಿಂದಿರುಗಿ ಬರುತ್ತಿರುವಾಗ ನಿರ್ಜನ ವನದಲ್ಲಿ ಕುಳಿತಿದ್ದ ಕಲ್ಪಾಷಪಾದನನ್ನು ಕಂಡನು. ಅವನನ್ನು ನೋಡಿದ ಕೂಡಲೇ ಉಗ್ರ ರಾಕ್ಷಸನಿಂದ ಆವಿಷ್ಟಗೊಂಡಿದ್ದ ಆ ರಾಜನು ಕೃದ್ಧನಾಗಿ ಮೇಲೆದ್ದು ಅವನನ್ನೇ ಕಬಳಿಸಲು ಮುಂದಾದನು. ಅದೃಶ್ಯಂತಿಯು ಕ್ರೂರಕರ್ಮಕ್ಕೆ ಮುಂದಾಗುತ್ತಿದ್ದ ಅವನನ್ನು ನೋಡಿ ಭಯಸಂವಿಗ್ನಳಾಗಿ ವಸಿಷ್ಠನಲ್ಲಿ ಹೇಳಿದಳು: “ಇದೋ! ಉಗ್ರ ದಂಡವನ್ನು ಹಿಡಿದ ಮೃತ್ಯುವಿನಂತೆ ಕಾಷ್ಟವನ್ನು ಹಿಡಿದು ಭೀಷಣ ರಾಕ್ಷಸನು ಬರುತ್ತಿದ್ದಾನೆ. ನಿನ್ನನ್ನು ಬಿಟ್ಟು ಭೂಮಿಯಲ್ಲಿ ಯಾರಿಗೂ ಅವನನ್ನು ತಡೆಯಲು ಸಾಧ್ಯವಿಲ್ಲ. ಇಂಥಹ ದಾರುಣದೃಷ್ಯದ ಪಾಪದಿಂದ ನನ್ನನ್ನು ರಕ್ಷಿಸು. ನಿಜವಾಗಿಯೂ ಅವನು ನಮ್ಮನ್ನು ತಿನ್ನಲು ಬರುತ್ತಿದ್ದಾನೆ.”

ವಸಿಷ್ಠನು ಹೇಳಿದನು: “ಪುತ್ರಿ! ಭಯಪಡಬೇಡ! ರಾಕ್ಷಸನಿಂದ ನಿನಗೆ ಯಾವುದೇ ರೀತಿಯ ಭಯವೂ ಇಲ್ಲ. ನೀನು ನೋಡುತ್ತಿರುವ ಭಯವನ್ನುಂಟುಮಾಡುವ ಇವನು ರಾಕ್ಷಸನಲ್ಲ. ಅವನು ಭುವಿಯಲ್ಲಿಯೇ ಪ್ರಥಿತ ವೀರ್ಯವಾನ್ ರಾಜ ಕಲ್ಮಾಷಪಾದ. ಅವನು ಈ ವನ ಪ್ರದೇಶದಲ್ಲಿ ಭೀಷಣನಾಗಿ ವಾಸಿಸುತ್ತಿದ್ದಾನೆ.” ತನ್ನ ಮೇಲೆ ಬೀಳುತ್ತಿರುವ ಅವನನ್ನು ನೋಡಿದ ಭಗವಾನೃಷಿ ತೇಜಸ್ವಿ ವಸಿಷ್ಠನು ಹುಂಕಾರ ಮಾತ್ರದಿಂದಲೇ ಅವನನ್ನು ತಡೆಹಿಡಿದನು. ಮಂತ್ರಗಳಿಂದ ಪುನೀತಗೊಂಡಿದ್ದ ನೀರನ್ನು ಅವನ ಮೇಲೆ ಚಿಮುಕಿಸಿ ಆ ರಾಜಸತ್ತಮನನ್ನು ಘೋರ ರಾಕ್ಷಸನಿಂದ ಬಿಡುಗಡೆಮಾಡಿದನು. ಹನ್ನೆರಡು ವರ್ಷಗಳ ನಂತರ ಅವನು ಪರ್ವಕಾಲದಲ್ಲಿ ದಿವಾಕರನು ಗ್ರಹಣದಿಂದ ಹೇಗೋ ಹಾಗೆ ವಸಿಷ್ಠನ ತೇಜಸ್ಸಿನಿಂದ ಬಿಡುಗಡೆ ಹೊಂದಿದನು.

ರಾಕ್ಷಸನಿಂದ ವಿಮುಕ್ತ ಆ ನೃಪತಿಯು ತನ್ನ ತೇಜಸ್ಸಿನಿಂದ ಆ ಮಹಾ ವನವನ್ನು ಭಾಸ್ಕರನು ತನ್ನ ಸಂಧ್ಯಾಕಿರಣಗಳಿಂದ ಹೇಗೋ ಹಾಗೆ ಕೆಂಪಾಗಿಸಿದನು. ಜ್ಞಾನವನ್ನು ಪುನಃ ಗಳಿಸಿದ ನೃಪತಿಯು ಅಂಜಲೀ ಬದ್ಧನಾಗಿ ಅಭಿವಂದಿಸಿ ಋಷಿಸತ್ತಮ ವಸಿಷ್ಠನಲ್ಲಿ ಹೇಳಿದನು: “ದ್ವಿಜಸತ್ತಮ! ನಾನು ಸೌದಾಸ. ನಿನ್ನ ಯಾಜಿ. ಈಗ ನಿಮಗಿಷ್ಟವಾದದನ್ನು ಹೇಳಿ. ನಾನು ಏನು ಮಾಡಬೇಕು ಎನ್ನುವುದನ್ನು ಹೇಳು.” ವಸಿಷ್ಠನು ಹೇಳಿದನು: “ಕಾಲವು ನಿಶ್ಚಯಿಸಿದ ಹಾಗೆ ನಡೆದು ಹೋಯಿತು. ಹೋಗು. ರಾಜ್ಯವನ್ನು ಆಳು. ಮನುಷ್ಯೇಂದ್ರ! ಎಂದೂ ಬ್ರಾಹ್ಮಣರನ್ನು ಅವಮಾನಗೊಳಿಸಬೇಡ.” ರಾಜನು ಹೇಳಿದನು: “ಬ್ರಾಹ್ಮಣ! ಬ್ರಾಹ್ಮಣರ್ಷಭರನ್ನು ಎಂದೂ ನಾನು ಅವಮಾನಿಸುವುದಿಲ್ಲ. ನಿನ್ನ ನಿದೇಶದಂತೆ ನಾನು ದ್ವಿಜರನ್ನು ಎಂದೂ ಪೂಜಿಸುತ್ತೇನೆ. ನಾನು ಇಕ್ಷ್ವಾಕು ಕುಲದ ಋಣವನ್ನು ತೀರಿಸಬಲ್ಲಂಥಹ ಒಂದು ವರವನ್ನು ನಿನ್ನಿಂದ ಪಡೆಯಲು ಬಯಸುತ್ತೇನೆ. ಇಕ್ಷ್ವಾಕುಕುಲದ ವೃದ್ಧಿಗೋಸ್ಕರ ಶೀಲರೂಪಗುಣೋಪೇತಳಾದ ನನ್ನ ಮಹಿಷಿಯಲ್ಲಿ ನೀನು ಮಕ್ಕಳನ್ನು ಪಡೆಯಬೇಕು.” ಆಗ ಪರಮೇಷ್ವಾಸ ಸತ್ಯಸಂಧ ದ್ವಿಜೋತ್ತಮ ವಸಿಷ್ಠನು “ನಾನು ನಿನಗೆ ಕೊಡುತ್ತೇನೆ!” ಎಂದು ರಾಜನಿಗೆ ಹೇಳಿದನು. ನಂತರ ಆ ಮನುಜೇಶ್ವರನು ವಸಿಷ್ಠನ ಸಹಿತ ಲೋಕಗಳಲ್ಲಿಯೇ ಶ್ರೇಷ್ಠ ನಗರಿಯೆಂದು ಖ್ಯಾತ ಅಯೋಧ್ಯೆಗೆ ಹಿಂದಿರುಗಿದನು. ದಿವೌಕಸರು ತಮ್ಮ ಈಶ್ವರನನ್ನು ಸ್ವಾಗತಿಸುವಂತೆ ಪ್ರಜೆಗಳೆಲ್ಲರೂ ಸಂತೋಷದಿಂದ ವಿಪತ್ತಿನಿಂದ ಮುಕ್ತ ಮಹಾತ್ಮನನ್ನು ಸ್ವಾಗತಿಸಿದರು. ತಕ್ಷಣವೇ ಆ ಮುನುಷ್ಯೇಂದ್ರನು ಪುಣ್ಯಕರ್ಮಿಗಳ ನಗರಿಯನ್ನು ಮಹಾತ್ಮ ವಸಿಷ್ಠನ ಸಹಿತ ಪ್ರವೇಶಿಸಿದನು. ಅಯೋಧ್ಯಾವಾಸಿ ಜನರು ಪುಷ್ಯದ ಸಹಿತವಿರುವ ದಿವಾಕಸನನ್ನು ನೋಡುವಂತೆ ನೋಡಿ ಸಂತಸಗೊಂಡರು. ಲಕ್ಷ್ಮೀವಂತರಲ್ಲಿಯೇ ಶ್ರೇಷ್ಠ ಶ್ರೀಮಂತನು ಶರತ್ಕಾಲದ ಶೀತಾಂಶುವು ದಿಗಂತದಲ್ಲಿ ಉದಯವಾಗುತ್ತಿರುವಂತೆ ಅಯೋಧ್ಯೆಯಲ್ಲಿ ಕಾಣಿಸಿಕೊಂಡನು. ತೊಳೆದು ತಯಾರುಮಾಡಿದ್ದ ರಸ್ತೆಗಳು ಮತ್ತು ಪತಾಕೆಗಳಿಂದ ಭೂಷಿತ ಮೇಲ್ಮಹಡಿಗಳು ಮತ್ತು ಆ ಅನುತ್ತಮ ಪುರವನ್ನು ನೋಡಿ ರಾಜನ ಮನಸ್ಸೂ ಆಹ್ಲಾದಗೊಂಡಿತು. ತುಷ್ಟ ಪುಷ್ಟ ಜನರಿಂದ ತುಂಬಿದ್ದ ಆ ಪುರವು ಶಕ್ರನೊಂದಿಗೆ ಹೊಳೆಯುತ್ತಿರುವ ಅಮರಾವತಿಯಂತೆ ತೋರಿತು. ರಾಜೇಂದ್ರ ರಾಜನು ಆ ಪುರಿಯನ್ನು ಪ್ರವೇಶಿಸಿದ ನಂತರ ಅವನ ಆಜ್ಞೆಯಂತೆ ರಾಣಿ ದೇವಿಯು ವಸಿಷ್ಠನ ಬಳಿಸಾರಿದಳು. ಋತುಕಾಲ ಬಂದಾಗ ಶ್ರೇಷ್ಠಭಾಗಿ ಋಷಿ ಮಹರ್ಷಿ ಮಸಿಷ್ಠನು ದೇವಿಯೊಡನೆ ದಿವ್ಯ ವಿಧಿಯಲ್ಲಿ ಕೂಡಿದನು. ಅವಳಲ್ಲಿ ಮುನಿಸತ್ತಮನ ಗರ್ಭವು ತಾಳಿದ ನಂತರ ರಾಜನಿಂದ ಬೀಳ್ಕೊಂಡು ಅವನು ಪುನಃ ಆಶ್ರಮಕ್ಕೆ ತೆರಳಿದನು. ಅವಳು ಆ ಗರ್ಭವನ್ನು ದೀರ್ಘಕಾಲದವರೆಗೆ ಹೊತ್ತಳು. ನಂತರ ಅವಳು ಗರ್ಭವನ್ನು ಒಂದು ಕಲ್ಲಿನಿಂದ ಹೊಡೆದು ಸೀಳಿದಳು. ಅದು ಹನ್ನೆರಡನೆಯ ವರ್ಷವಾಗಿತ್ತು. ಆಗ ಪೋತನದಲ್ಲಿ ವಾಸಿಸುತ್ತಿದ್ದ ಅಶ್ಮಕ ಎಂಬ ರಾಜರ್ಷಿಯು ಹುಟ್ಟಿದನು.

ಆಶ್ರಮದಲ್ಲಿಯೇ ಉಳಿದಿದ್ದ ಅದೃಶ್ಯಂತಿಯು ಶಕ್ತಿಯ ಕುಲಕರ, ಎರಡನೆಯ ಶಕ್ತಿಯೋ ಎನ್ನುವಂತಿರುವ ಪುತ್ರನಿಗೆ ಜನ್ಮವಿತ್ತಳು. ತನ್ನ ಮೊಮ್ಮಗನ ಜಾತಕರ್ಮಾದಿ ಕ್ರಿಯೆಗಳನ್ನು ಸ್ವಯಂ ಭಗವಾನ್ ಮುನಿಪುಂಗವನೇ ನೆರವೇರಿಸಿದನು.   ಗರ್ಭದಲ್ಲಿರುವಾಗಲೇ ಸಾಯಲು ತಯಾರಿರುವ ವಸಿಷ್ಠನನ್ನು ತಡೆಹಿಡಿದುದಕ್ಕಾಗಿ ಅವನು ಪರಾಶರನೆಂದು ಲೋಕದಲ್ಲಿ ಹೇಳಿಸಿಕೊಂಡನು. ಹುಟ್ಟಿದಾಗಿನಿಂದ ಧರ್ಮಾತ್ಮನಾದ ಅವನು ವಸಿಷ್ಠನೇ ತನ್ನ ತಂದೆಯೆಂದು ತಿಳಿದು ಅವನೊಡನೆ ತಂದೆಯೊಡನೆ ಹೇಗೋ ಹಾಗೆಯೇ ವರ್ತಿಸುತ್ತಿದ್ದನು. ಒಮ್ಮೆ ಅವನು ತಾಯಿಯ ಸಮಕ್ಷಮದಲ್ಲಿ ವಿಪ್ರರ್ಷಿ ವಸಿಷ್ಠನನ್ನು “ತಂದೆ” ಎಂದು ಕರೆದಾಗ ಅದೃಶ್ಯವಂತಿಯು ಕಣ್ಣುಗಳನ್ನು ಕಣ್ಣೀರಿನಿಂದ ತುಂಬಿಸಿಕೊಂಡು ಅವನಿಗೆ ಕೇಳುವಂತೆ ಹೇಳಿದಳು: “ಅವನನ್ನು ಅಪ್ಪಾ ಅಪ್ಪಾ ಎಂದು ಕರೆಯಬೇಡ. ಮಹಾಮುನಿಯು ನಿನ್ನ ತಂದೆಯಲ್ಲ. ನಿನ್ನ ತಂದೆಯನ್ನು ವನದಲ್ಲಿ ರಾಕ್ಷಸರು ಭಕ್ಷಿಸಿದರು. ತಂದೆಯೆಂದು ನೀನು ತಿಳಿದಿರುವವನು ನಿನ್ನ ತಂದೆಯಲ್ಲ! ಈ ಮಹಾತ್ಮನು ನಿನ್ನ ತಂದೆಯ ತಂದೆ.”

ಇದನ್ನು ಕೇಳಿದ ಸತ್ಯವಾಗ್ಮಿ ಮಹಾಮನಸ್ವಿ ಮುನಿಸತ್ತಮನು ದುಃಖಾರ್ತನಾಗಿ ಸರ್ವಲೋಕವಿನಾಶದ ಕುರಿತು ಯೋಚಿಸತೊಡಗಿದನು. ಈಗ ಮಹಾತ್ಮ ಮಹಾತಪಸ್ವಿ ವಸಿಷ್ಠನು ಔರ್ವೋಪಾಽಖ್ಯಾನವನ್ನು ಹೇಳಿ ಕಾರಣಗಳನ್ನಿತ್ತು ಆ ನಿಶ್ಚಿತಾತ್ಮನನ್ನು ತಡೆದು ಹೇಳಿದನು: “ಪರಮ ಧರ್ಮವನ್ನು ಅರಿತಿರುವ ನೀನೂ ಕೂಡ ಲೋಕವನ್ನು ನಾಶಪಡಿಸುವುದು ಸರಿಯಲ್ಲ. ನಿನಗೆ ಮಂಗಳವಾಗಲಿ.”

ಮಹಾತ್ಮ ವಸಿಷ್ಠನಿಂದ ಇದನ್ನು ಕೇಳಿದ ಆ ವಿಪ್ರರ್ಷಿಯು ಸರ್ವಲೋಕವನ್ನೂ ಪರಾಭವಗೊಳಿಸುವ ತನ್ನ ಕೋಪವನ್ನು ತಡೆಹಿಡಿದಿಟ್ಟುಕೊಂಡನು. ಆ ಮಹಾತೇಜಸ್ವಿ, ಸರ್ವವೇದವಿದರಲ್ಲಿ ಶ್ರೇಷ್ಠ ಶಾಕ್ತೇಯ ಪರಾಶರ ಋಷಿಯು ರಾಕ್ಷಸಸತ್ರವನ್ನು ನಡೆಸಿದನು. ಶಕ್ತಿಯ ವಧೆಯ ನೆನಪಿನಲ್ಲಿ ಮಹಾಮುನಿಯು ಆ ಯಜ್ಞದಲ್ಲಿ ವೃದ್ಧ, ಬಾಲಕ ರಾಕ್ಷಸರನ್ನು ಸುಟ್ಟುಹಾಕಿದನು. ಅವನ ಎರಡನೆಯ ಪ್ರತಿಜ್ಞೆಯನ್ನು ಭಂಗಗೊಳಿಸಬಾರದೆಂದು ನಿಶ್ಚಯಿಸಿ ವಸಿಷ್ಠನೂ ಕೂಡ ಆ ರಾಕ್ಷಸರ ವಧೆಯನ್ನು ನಿಲ್ಲಿಸಲಿಲ್ಲ. ಆ ಸತ್ರದಲ್ಲಿ ಮೂರು ಪಾವಕಗಳ ಜೊತೆ ಕುಳಿತಿದ್ದ ಆ ಮಹಾಮುನಿಯು ನಾಲ್ಕನೆಯ ಪಾವಕನೋ ಎನ್ನುವಂತೆ ಬೆಳಗುತ್ತಿದ್ದನು. ಆ ಶುಭ್ರ ಯಜ್ಞದಲ್ಲಿ ಶಾಸ್ತ್ರೋಕ್ತವಾಗಿ ಹಾಕಿದ ಹವಿಸ್ಸುಗಳಿಂದ ಬೆಂಕಿಯು ಮಳೆಗಾಲದ ಅಂತ್ಯದಲ್ಲಿ ಆಕಾಶದಲ್ಲಿ ಸೂರ್ಯನು ಹೇಗೋ ಹಾಗೆ ಪ್ರಜ್ವಲಿಸುತ್ತಿತ್ತು. ವಸಿಷ್ಠರೇ ಮೊದಲಾದ ಎಲ್ಲ ಮುನಿಗಳೂ ಅವನು ತೇಜಸ್ಸಿನಿಂದ ದಿವಿಯಲ್ಲಿ ದೇದೀಪ್ಯಮಾನನಾದ ಎರಡನೆಯ ಭಾಸ್ಕರನೆಂದು ಅಭಿಪ್ರಾಯಪಟ್ಟರು. ಅನ್ಯರಿಂದ ಪರಮ ದುರ್ಲಭ ಆ ಸತ್ರದ ಬಳಿಗೆ ಉದಾರ ಮನಸ್ಕ ಅತ್ರಿಯು ಬಂದು ಅದನ್ನು ನಿಲ್ಲಿಸಲು ಪ್ರಯತ್ನಿಸಿದನು. ಅದೇ ರೀತಿ ರಾಕ್ಷಸರು ಜೀವಂತವಿರಬೇಕೆಂದು ಬಯಸಿದ ಪುಲಸ್ತ್ಯ, ಪುಲಹ ಮತ್ತು ಕ್ರತು ಆ ಮಹಾಕ್ರತುವಿಗೆ ಬಂದರು. ಆ ರಾಕ್ಷಸರ ವಧೆಯನ್ನು ಕುರಿತು ಅರಿಂದಮ ಪರಾಶರನಲ್ಲಿ ಪುಲಸ್ತ್ಯನು ಈ ಮಾತುಗಳನ್ನಾಡಿದನು: “ಪುತ್ರಕ! ನಿನ್ನನ್ನು ಯಾವುದೂ ತಡೆಹಿಡಿಯುವುದಿಲ್ಲವೇ? ಅಜಾನತ ಅದೋಷಣ ಸರ್ವ ರಾಕ್ಷಸರ ವಧೆಗೈಯುವುದರಲ್ಲಿ ನಿನಗೆ ಯಾವರೀತಿಯ ಆನಂದವು ದೊರೆಯುತ್ತದೆ? ಪರಾಶರ! ನನ್ನ ಕುಲದ ಸರ್ವರನ್ನೂ ಕೊಲ್ಲುವುದರಿಂದ ನೀನು ಅತಿ ದೊಡ್ಡ ಅಧರ್ಮವನ್ನು ಎಸಗುತ್ತಿರುವೆ. ರಾಜ ಕಲ್ಮಾಷಪಾದನು ಸ್ವರ್ಗವನ್ನು ಸೇರುತ್ತಾನೆ. ಮಹಾಮುನಿ ವಸಿಷ್ಠನ ಪುತ್ರರು ಶಕ್ತಿ ಮತ್ತು ಇತರ ಸರ್ವರೂ ಸಂತೋಷದಿಂದ ಸುರರ ಸಹಿತ ವಿನೋದದಿಂದಿದ್ದಾರೆ. ಇದೆಲ್ಲವೂ ಮತ್ತು ಕಾಡಿಸುವ ರಾಕ್ಷಸರ ಸಮುಚ್ಛೇದವೂ ವಸಿಷ್ಠನಿಗೆ ತಿಳಿದಿದ್ದುದೇ ಆಗಿದೆ. ನೀನು ಈ ಕ್ರತುವಿನ ನಿಮಿತ್ತನಾಗಿದ್ದೀಯೆ. ಈ ಸತ್ರವನ್ನು ಮುಗಿಸು. ನಿನಗೆ ಮಂಗಳವಾಗಲಿ. ನಿನ್ನಿಂದಲೇ ಇದು ಸಮಾಪ್ತಿಯಾಗಲಿ.”

ಪುಲಸ್ತ್ಯ ಮತ್ತು ವಸಿಷ್ಠರಿಂದ ಇದನ್ನು ಕೇಳಿದ ಧೀಮಂತ ಶಾಕ್ತಿ ಪರಾಶರನು ಆ ಸತ್ರವನ್ನು ಅಲ್ಲಿಯೇ ನಿಲ್ಲಿಸಿದನು. ಸರ್ವ ರಾಕ್ಷಸಸತ್ರಕ್ಕಾಗಿ ಸಂಭೃತಗೊಂಡ ಪಾವಕನನ್ನು ಮುನಿಯು ಹಿಮವತ್ ಪರ್ವತದ ಉತ್ತರ ಭಾಗದಲ್ಲಿರುವ ಮಹಾವನದಲ್ಲಿ ವಿಸರ್ಜಿಸಿದನು. ರಾಕ್ಷಸರನ್ನು, ವೃಕ್ಷಗಳನ್ನು ಮತ್ತು ಶಿಲೆಬಂಡೆಗಳನ್ನು ಭಕ್ಷಿಸುತ್ತಿರುವ ಆ ವಹ್ನಿಯು ಈಗಲೂ ಕೂಡ ಪರ್ವ ಪರ್ವಗಳಲ್ಲಿ ಕಾಣಿಸಿಕೊಳ್ಳುತ್ತದೆ.

Related image

Click on the link below for a talk on the origins of Gayatri Mantra, which was discovered by Vishwamitra:

The other stories:

  1. ಆರುಣಿ ಉದ್ದಾಲಕ
  2. ಉಪಮನ್ಯು
  3. ಸಮುದ್ರಮಥನ
  4. ಗರುಡೋತ್ಪತ್ತಿ; ಅಮೃತಹರಣ
  5. ಶೇಷ
  6. ಶಕುಂತಲೋಪಾಽಖ್ಯಾನ
  7. ಯಯಾತಿ
  8. ಸಂವರಣ-ತಪತಿ
  9. ಔರ್ವೋಪಾಽಖ್ಯಾನ
  10. ಸುಂದೋಪಸುಂದೋಪಾಽಖ್ಯಾನ
  11. ಸಾರಂಗಗಳು
  12. ಸೌಭವಧೋಪಾಽಖ್ಯಾನ
  13. ನಲೋಪಾಽಖ್ಯಾನ
  14. ಅಗಸ್ತ್ಯೋಪಾಽಖ್ಯಾನ
  15. ಭಗೀರಥ
  16. ಋಷ್ಯಶೃಂಗ
  17. ಪರಶುರಾಮ
  18. ಚ್ಯವನ
  19. ಮಾಂಧಾತ
  20. ಸೋಮಕ-ಜಂತು
  21. ಗಿಡುಗ-ಪಾರಿವಾಳ
  22. ಅಷ್ಟಾವಕ್ರ
  23. ರೈಭ್ಯ-ಯವಕ್ರೀತ
  24. ತಾರ್ಕ್ಷ್ಯ ಅರಿಷ್ಠನೇಮಿ
  25. ಅತ್ರಿ
  26. ವೈವಸ್ವತ ಮನು
  27. ಮಂಡೂಕ-ವಾಮದೇವ
  28. ಧುಂಧುಮಾರ
  29. ಮಧು-ಕೈಟಭ ವಧೆ
  30. ಕಾರ್ತಿಕೇಯನ ಜನ್ಮ
  31. ಮುದ್ಗಲ
  32. ರಾಮೋಪಾಽಖ್ಯಾನ: ರಾಮಕಥೆ
  33. ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
  34. ಇಂದ್ರವಿಜಯೋಪಾಽಖ್ಯಾನ
  35. ದಂಬೋದ್ಭವ
  36. ಮಾತಲಿವರಾನ್ವೇಷಣೆ
  37. ಗಾಲವ ಚರಿತೆ
  38. ವಿದುಲೋಪಾಽಖ್ಯಾನ
  39. ತ್ರಿಪುರವಧೋಪಾಽಖ್ಯಾನ
  40. ಪರಶುರಾಮನು ಅಸ್ತ್ರಗಳನ್ನು ಪಡೆದುದು
  41. ಪ್ರಭಾಸಕ್ಷೇತ್ರ ಮಹಾತ್ಮೆ
  42. ತ್ರಿತಾಖ್ಯಾನ
  43. ಸಾರಸ್ವತೋಪಾಽಖ್ಯಾನ
  44. ವಿಶ್ವಾಮಿತ್ರ
  45. ವಸಿಷ್ಠಾಪವಾಹ ಚರಿತ್ರೆ
  46. ಬಕ ದಾಲ್ಭ್ಯನ ಚರಿತ್ರೆ
  47. ಕಪಾಲಮೋಚನತೀರ್ಥ ಮಹಾತ್ಮೆ
  48. ಮಂಕಣಕ
  49. ವೃದ್ಧಕನ್ಯೆ
  50. ಬದರಿಪಾಚನ ತೀರ್ಥ
  51. ಕುಮಾರನ ಪ್ರಭಾವ-ಅಭಿಷೇಕ
  52. ಅಸಿತದೇವಲ-ಜೇಗೀಷವ್ಯರ ಕಥೆ
  53. ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
  54. ಕುರುಕ್ಷೇತ್ರ ಮಹಾತ್ಮೆ
  55. ಶಂಖಲಿಖಿತೋಪಾಽಖ್ಯಾನ
  56. ಜಾಮದಗ್ನೇಯೋಪಾಽಖ್ಯಾನ
  57. ಷೋಡಶರಾಜಕೀಯೋಪಾಽಖ್ಯಾನ

Leave a Reply

Your email address will not be published. Required fields are marked *